ಹೈಡ್ರಾಕ್ಸಿಕ್ಲೋರಿನ್ - ಯಾರದು ಹುಚ್ಚು, ಯಾರದು ಕೆಚ್ಚು?

ಕಳೆದೆರಡು ವಾರಗಳ ಹಿಂದೆ ತಣ್ಣಗಾಗಿದ್ದ ಕೋರೋನಾ ಗುಣಪಡಿಸಲು ಸಹಕಾರಿಯಾಗಬಹುದೆಂಬ ಮಲೇರಿಯಾ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ ಈಗ ಮತ್ತೆ ಸೆಟೆದೆದ್ದು ನಿಂತಿದೆ ಯಾ ನಿಲ್ಲಿಸಲ್ಪಟ್ಟಿದೆ.

ಈ ಔಷಧಿ ಕೊರೊನಾಕ್ಕೆ ಔಷಧಿಯೆಂದು ಯಾವುದೇ ಪ್ರಯೋಗಗಳು ಸಾಬೀತು ಮಾಡಿಲ್ಲದಿದ್ದರೂ ಕೆಲವು ವೈದ್ಯರು ಇದು ಕೆಲವೊಬ್ಬ ರೋಗಿಗಳಿಗೆ ಕೇಸ್ ಬೈ ಕೇಸ್ ಕೆಲಸ ಮಾಡಬಹುದೆಂದಿದ್ದಾರೆ. ಆದರೆ ಇದು ಪ್ರತಿಯೊಬ್ಬ ಕೊರೋನಾ ಸೋಂಕಿತರನ್ನು ಗುಣಪಡಿಸುತ್ತದೆಂದು ಎಲ್ಲಿಯೂ ಹೇಳಿಲ್ಲ. ಕೆಲವು ಕೊರೋನಾ ಸೋಂಕಿತರಿಗೆ ಇರಬಹುದಾದ ಇತರೆ ಸಮಸ್ಯೆಗಳನ್ನು ಇದು ತಗ್ಗಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದೇ ಹೊರತು ಕೊರೋನವನ್ನು ಗುಣಪಡಿಸುತ್ತದೆಂದು ಯಾವುದೇ ತಜ್ಞರು ಹೇಳಿಲ್ಲ.

ಆಫ್ರಿಕಾದ ರಾಷ್ಟ್ರವೊಂದರಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್
ಕೊಟ್ಟ ಕೊರೋನಾ ಸೋಂಕಿತರು ಸತ್ತಿದ್ದಾರೆ. ಹಾಗಾಗಿ ಇದು ಇನ್ನೂ ಪ್ರಯೋಗ ಶಿಶುವೇ ಹೊರತು ಸಿದ್ದೌಷಧಿಯಲ್ಲ.

ಹೀಗಿರುವಾಗ ಈಗ ಮತ್ತೆ ಹೈಡ್ರಾಕ್ಸಿಕ್ಲೋರೋಕ್ವಿನ್ ಸುದ್ದಿ ಮಾಡುತ್ತಿದೆ.

ಪ್ರಧಾನಿ ಮೋದಿಯವರು ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತನ್ನು ತಡೆಹಿಡಿದು ಕೆಚ್ಚು ಪ್ರದರ್ಶಿಸಿದ್ದು, ಟ್ರಂಪ್ ಅದನ್ನು ತಡೆ ಹಿಡಿದರೆ ಅದಕ್ಕೆ ಪ್ರತಿಯಾಗಿ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹುಚ್ಚಾದದ್ದು ಎಂದು ಎಲ್ಲಾ ಮಾಧ್ಯಮಗಳು ಬಿಂಬಿಸುತ್ತಿವೆ. ಈ ಎಲ್ಲ ಹುಚ್ಚು ಕೆಚ್ಚುಗಳ ನಡುವೆ ಬಿಚ್ಚು ಸತ್ಯವೇನಿದೆ?

ಭಾರತಕ್ಕೆ ಐಟಿ ಹೊರಗುತ್ತಿಗೆ ಕಾಲಿಡುವ ಸಾಕಷ್ಟು ದಶಕಗಳ ಮುನ್ನ ಔಷಧಿ ಉತ್ಪಾದನೆಯ ಹೊರಗುತ್ತಿಗೆ ಸಬ್ಸಿಡಿಯರಿ ಕಂಪೆನಿಗಳ ಮೂಲಕ, ನಂತರ ನೇರವಾಗಿ ಮೂರನೇ ಕಂಪೆನಿಗಳಿಗೆ ಹೊರಗುತ್ತಿಗೆ ಕೊಡುವ ಮೂಲಕ ಜಾರಿಯಲ್ಲಿತ್ತು. ಈಗ ಇನ್ನೂ ವ್ಯಾಪಕವಾಗಿದೆ. ಅಮೆರಿಕಾ ತನ್ನ ವಸ್ತುಗಳ ಉತ್ಪಾದನೆಯನ್ನು ಚೈನಾಕ್ಕೆ ಹೊರಗುತ್ತಿಗೆ ನೀಡಿದ್ದರೆ, ಔಷಧಿಗಳ ಉತ್ಪಾದನೆಗೆ ಭಾರತದ ಕಂಪೆನಿಗಳನ್ನು ನೆಚ್ಚಿಕೊಂಡು ಆ ಕಂಪೆನಿಗಳಲ್ಲಿ ಬಂಡವಾಳವನ್ನು ತೊಡಗಿಸಿ ತನ್ನ ಒಡೆತನದ ಸಹಭಾಗಿತ್ವದಲ್ಲಿರಿಸಿಕೊಂಡಿದೆ. ಇದು Eli Lilly, Bayer,  Pfizer, Johnson & Johnson ಎಂಬ ದೈತ್ಯ ಕಂಪೆನಿಗಳಷ್ಟೇ ಅಲ್ಲದೆ ಹೈದರಾಬಾದ್, ಅಹಮದಾಬಾದ್, ಗ್ವಾಲಿಯರ್, ಮತ್ತು ಬೆಂಗಳೂರಿನ ಅನೇಕ ಚಿಕ್ಕ ಪುಟ್ಟ ಫಾರ್ಮ ಕಂಪೆನಿಗಳೂ(100% EOU) ಇವೆ.  ಇವುಗಳಲ್ಲಿ ಸಾಕಷ್ಟು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಉತ್ಪಾದಿಸುತ್ತವೆ. ಕೇವಲ ಅಮೆರಿಕಾ subsidiary ಅಲ್ಲದೆ ಜಪಾನ್, ಇಸ್ರೇಲ್, ಜರ್ಮನಿ ಮತ್ತು ಯುರೋಪಿನ ಹಲವು ಕಂಪೆನಿಗಳ subsidiaryಗಳು,100% EOU (Export Oriented Unit) ಭಾರತದಲ್ಲಿವೆ. ಇದರಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಹೆಚ್ಚಾಗಿ ಉತ್ಪಾದಿಸುವ Actavis ಇಸ್ರೇಲಿನ Teva ಕಂಪೆನಿಯ subsidiary. ಹಾಗೆಯೇ Novartis ಸ್ವಿಟ್ಜರ್ಲೆಂಡ್ ಕಂಪೆನಿ, Bayer ಜರ್ಮನ್ ಕಂಪೆನಿ, Mylan ಯುಕೆ ಕಂಪೆನಿ! ಅಂದ ಹಾಗೆ ಬಾಬಾ ರಾಮದೇವರು ಏನಾದರೂ ಔಷಧಿ ಕಂಡುಹಿಡಿದಿದ್ದರೂ ಅದರ ರಫ್ತನ್ನು ಅಮೆರಿಕಾಕ್ಕೆ ನಿಲ್ಲಿಸಲಾಗುತ್ತಿರಲಿಲ್ಲ. ಏಕೆಂದರೆ ಅವರ ಔಷಧಿಗಳಿಗೆ ಬೇರುನಾರಿನ ಗಿಡಮೂಲಿಕೆಗಳ ಸರಬರಾಜು ಮೂಲ ಕೂಡ ಅಮೆರಿಕ ಮತ್ತು ಕೆನಡಾ! ಅಮೆರಿಕಾದಿಂದ ಸಾಕಷ್ಟು ಗಿಡಮೂಲಿಕೆಗಳು ಬಾಬಾ ರಾಮದೇವ್ ಅವರ ಕಾರ್ಖಾನೆಗಳಿಗೆ ರಫ್ತಾಗುತ್ತಿವೆ. ಔಷಧಿ ಸ್ವದೇಶಿಯಾಗಿದ್ದರೂ, ಕಚ್ಚಾವಸ್ತುಗಳು ಪ್ರಪಂಚದ ಎಲ್ಲಾ ವಿದೇಶಿ ಮೂಲೆಗಳಿಂದ ಬಾಬಾ ರಾಮದೇವರ ಕಾರ್ಖಾನೆಗಳಿಗೆ ಹರಿದು ಬರುತ್ತಿವೆ.

ಇನ್ನು ಅಮೆರಿಕಾ ದಿಢೀರನೆ ಕೊರೋನಾ ಹಿನ್ನೆಲೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಖರೀದಿಯ ಹೊಸ ಆರ್ಡರ್ ಅನ್ನು ಭಾರತದ ಕಂಪೆನಿಗಳಿಗೆ ಕೊಟ್ಟಿಲ್ಲ. ಇದರ ಪೂರೈಕೆ ಕೊರೋನಾ ಪೂರ್ವದಿಂದಲೂ ಅಭಾದಿತವಾಗಿ ಸಾಗಿ ಬರುತ್ತಿದೆ.  ಹಾಗಾಗಿ ಈ ಎಲ್ಲಾ ಮಾಹಿತಿಯನ್ನು ಸಮೀಕರಿಸಿಕೊಳ್ಳದೆ ಪ್ರಧಾನಿಗಳು ಹೈಡ್ರಾಕ್ಸಿಕ್ಲೋರೋಕ್ವಿನ್
ರಫ್ತನ್ನು ದಿಢೀರನೆ ನಿಲ್ಲಿಸಲು ಆಜ್ಞೆ ಹೊರಡಿಸಿದ್ದು ಕೆಚ್ಚೆಂದು ಕರೆಯಲಾಗದು. ಹಾಗೆಯೇ ಟ್ರಂಪ್ ತನ್ನ ಮಾಲನ್ನು ತಡೆಹಿಡಿದಿದ್ದಕ್ಕೆ ಕ್ರಮ ಜರುಗಿಸುತ್ತೇವೆ ಎಂದದ್ದನ್ನು ಹುಚ್ಚೆನ್ನಲಾಗದು.

ಆದರೆ ಇಂತಹ ವ್ಯವಹಾರ ಸೂಕ್ಷ್ಮವನ್ನರಿಯದೆ ಮಾಧ್ಯಮಗಳು, ಜನರು, ಚಿಂತಕರು, ಸುಧಾರಕರು ಈ ಕುರಿತು ಹುಚ್ಚು ಹೊಳೆ ಹರಿಸಿದ್ದು ಮಾತ್ರ ನನ್ನ ಟ್ಯಾಗ್ಲೈನನ್ನು ಧೃಢೀಕರಿಸಿದಂತಾಯಿತು. ಕೊರೋನಾ ಎಂಬುದನ್ನು ಮಾರಮ್ಮನ ಜಾತ್ರೆ ಎಂಬಂತೆ ಸಂಭ್ರಮಿಸಿ, ಜಾತ್ರೆಯ ಜಂಗೀಕುಸ್ತಿಯಲ್ಲಿ ಮೋದಿ-ಟ್ರಂಪ್ ಪರಸ್ಪರ ಪಟ್ಟು ಹಾಕಿದಂತೆ, ಮೊದಲಿಗೆ ಮೋದಿ ಬೆಂಬಲಿಗರಿಗೆ ಖುಷಿಯಾಗುವಂತೆ ನಂತರ ಮೋದಿ ವಿರೋಧಿಗಳಿಗೆ ಭೂರಿ ಭೋಜನ ಒದಗಿಸಿದಂತೆ ರೋಚಕತೆಯನ್ನು ಒಗ್ಗಟ್ಟಾಗಿ ಮೆರೆದರು.

ಆದರೆ ಭಾರತದಲ್ಲಿನ ಔಷಧಿ ಕಂಪೆನಿಗಳ ಮೂಲ, ಬಂಡವಾಳ, ಹೊರಗುತ್ತಿಗೆ ಕಂಟ್ರಾಕ್ಟ್ಗಳು, ಪೇಟೆಂಟುಗಳ ಬಂಧ ಇತ್ಯಾದಿ ಒಳಸುಳಿಗಳ ಆಳ ರಫ್ತನ್ನು ನಿರಾಕರಿಸುವಷ್ಟು ಸುಲಭವಲ್ಲ. ಹಾಗಾಗಿಯೇ ಮೋದಿಯವರು ಈ ವ್ಯವಹಾರ ಸೂಕ್ಷ್ಮವನ್ನರಿತ ಕೂಡಲೇ ಅಮೆರಿಕಾಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್
ರಫ್ತನ್ನು ತಕ್ಷಣ ಮುಕ್ತಗೊಳಿಸಿದ್ದಾರೆ. ಇಲ್ಲಿಗೆ ಹುಚ್ಚು ಯಾರದ್ದು ಮತ್ತು ಕೆಚ್ಚು ಯಾರದ್ದು ಎಂದು ತಣ್ಣನೆಯ ಬುದ್ಧಿಯಿಂದ ರೊಚ್ಚಿಗೇಳದೇ ಯೋಚಿಸಿ. ನನ್ನ ವಾಸ ನಿಮ್ಮ ದಿಕ್ಕೆಡಿಸದೇ ವಿಶ್ವಮಾನವರಾಗಿ ಸತ್ಯವನ್ನು ಮಾತ್ರ ಪರಿಗಣಿಸಿ.

ಕೊರೋನಾ ಸೃಷ್ಟಿಸಿರುವ ಅಂಧಕಾರದಲ್ಲಿ ನಾಯಕತ್ವ ತಪ್ಪು ಹೆಜ್ಜೆಯಿಡುವುದು, ಎಡವುವುದು, ಮತ್ತದನ್ನು ಸರಿಪಡಿಸಿಕೊಂಡು ಮುನ್ನಡೆಯುವುದು ಸಹಜ. ತಾಳ್ಮೆ ಮುಖ್ಯ, ಏಕೆಂದರೆ ತಾಳಿದವನು ಬಾಳಿಯಾನು.

#ಬಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: