೨೦೨೦ ಎನ್ನುವ ಶೂನ್ಯ ಸಂವತ್ಸರ ಕಳೆದು ೨೦೨೧ ಬರುತ್ತಲಿದೆ. ಅಗಾಧ ಅನಿಶ್ಚತತೆ, ಭೀತಿಯನ್ನು ಸೃಷ್ಟಿಸುವುದರೊಂದಿಗೆ ಅಷ್ಟೇ ರೋಚಕತೆಯನ್ನು ತಂದಿಟ್ಟು ೨೦೨೦ನ್ನು ಶೂನ್ಯ ಸಂವತ್ಸರವಾಗಿಸಿದ ಕೋವಿಡ್ ಅನ್ನು ತಹಬದಿಗೆ ತರಬಲ್ಲ(?) ಲಸಿಕೆಯನ್ನು ಫೈಝರ್ ಬಿಡುಗಡೆ ಮಾಡಿದೆ. ಕತ್ತಲಿನ ಸುರಂಗದಾಚೆ ಕಾಣುವ ಕ್ಷಿತಿಜದ ಕಿರಣದಂತಹ ಈ ಲಸಿಕೆ ಸಹಜವಾಗಿ ಬರಲಿರುವ ಹೊಸ ವರ್ಷದಲ್ಲಿ ಅಗಾಧ ನಿರೀಕ್ಷೆಗಳನ್ನು ಹುಟ್ಟಿ ಹಾಕಿದೆ. ಆ ನಿರೀಕ್ಷೆಗಳಿಗೆ ಇಂಬಾಗುವಂತೆ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ರೋಚಕ ಗೆಲುವನ್ನು ಸಾಧಿಸುವುದರೊಂದಿಗೆ ಟ್ರಂಪ್ ಹುಚ್ಚಾಡಳಿತವನ್ನು ಕೊನೆಗೊಳಿಸಿದ್ದಾರೆ.
ಆದರೆ ಜೋ ಬೈಡನ್, ಅಮೇರಿಕನ್ನರಲ್ಲಿ ಮತ್ತು ದೊಡ್ಡಣ್ಣನೆಂದು ಅಮೇರಿಕಾದೆಡೆ ಮುಖ ಮಾಡುವ ವಿಶ್ವದ ಇತರೆಡೆಯಲ್ಲಿ ನಿಜಕ್ಕೂ ಅಂತಹ ಅಗಾಧ ಪ್ರಮಾಣದ ಭರವಸೆಯನ್ನು ಹುಟ್ಟು ಹಾಕಿ ಜಯಶೀಲರಾಗಿದ್ದಾರೆಯೇ? ಏಕೆಂದರೆ ಟ್ರಂಪ್ ಹುಚ್ಚಾಡಳಿತದ ಕೊನೆಯನ್ನು ಬಯಸಿ ಜನ ಬೈಡನ್ನರಿಗೆ ಮತ ಹಾಕಿದರೆ ಹೊರತು ಅವರನ್ನು ಭರವಸೆಯ ನಾಯಕನೆಂದಲ್ಲ ಎಂದು ಸಾಕಷ್ಟು ವಿಶ್ಲೇಷಕರು ಅಭಿಪ್ರಾಯ ಮಂಡಿಸಿದ್ದಾರೆ. ಇದು ತಕ್ಕ ಮಟ್ಟಿಗೆ ಸತ್ಯ ಕೂಡ. ಟ್ರಂಪ್ ಆಡಳಿತವು ಎಂದೂ ಓಟು ಹಾಕದವರನ್ನೂ ಸಹ ಈ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಪ್ರಚೋದಿಸಿದ್ದು ಮಾತ್ರ ಸತ್ಯ.
ಈ ಗೆಲುವನ್ನು ಬೈಡನ್-ಹ್ಯಾರಿಸ್ ಸೇರಿದಂತೆ ಡೆಮಾಕ್ರೆಟಿಕ್ ಪಕ್ಷದ ಗೆಲುವು ಪುರೋಗಾಮಿ ಹೋರಾಟಗಳಿಗೆ ಸಂದ ಜಯವಾಗಿದೆ ಎನ್ನಲಾಗದು. ಏಕೆಂದರೆ ಈ ಜೋಡಿ ಅಂತಹ ನಿಶ್ಚಿತ ಗೆಲುವಿನ ಭಾರೀ ಪ್ರತಿಸ್ಪರ್ಧಿಗಳೆನಿಸಿರಲಿಲ್ಲ. ಅಮೇರಿಕಾದಲ್ಲಿನ ಎಡ-ಬಲ ಪಂಥವನ್ನು ನಾವು ನೇರವಾಗಿ ಭಾರತದ ಎಡ-ಬಲ ಪಂಥಕ್ಕೆ ಹೋಲಿಸಲಾಗದು. ಭಾರತದ ಬಲಪಂಥದ ಮಾದರಿಯ ಒಂದು ಸೀಮಿತ ಅತ್ಯಲ್ಪ ವರ್ಗ ಅಮೇರಿಕಾದ ಬಲಪಂಥೀಯರಲ್ಲಿದ್ದರೂ ಅವರನ್ನು ಜನಾಂಗೀಯ ದ್ವೇಷಿಗಳು ಎಂದು ವರ್ಗೀಕರಿಸಲಾಗುತ್ತದೆ. ಅಂತಹ ಒಂದು ಗುಂಪಿಗೆ ಟ್ರಂಪ್ ಬಲ ತುಂಬಿ ಅವರ ಆರಾಧ್ಯ ದೈವವಾಗಿದ್ದರೇ ಹೊರತು ಇಡೀ ರಿಪಬ್ಲಿಕನ್ ಬೆಂಬಲಿಗರಿಗೆ ಟ್ರಂಪ್ ಕುರಿತು ಅಸಹನೆಯೇ ಇದ್ದಿತು. ಈ ಅಸಹನೆಗೆ ಕಾರಣ ಟ್ರಂಪ್ ಸಹ ಒಂದೂವರೆ ದಶಕದ ಹಿಂದೆ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗನೇ ಆಗಿದ್ದರಲ್ಲದೆ ರಿಪಬ್ಲಿಕನ್ನರ ವಿಶ್ವಾಸಾರ್ಹ ವ್ಯಕ್ತಿ ಎನಿಸಿರಲಿಲ್ಲ. ಆದರೆ ರಿಪಬ್ಲಿಕನ್ನರೆಲ್ಲರೂ ಪಕ್ಷ ನಿಷ್ಠರಾಗಿರುವುದರಿಂದ ಇವರ ಓಟುಗಳು ವ್ಯಕ್ತಿಗಿಂತ ಪಕ್ಷ ನಿಷ್ಠವಾಗಿ ರಿಪಬ್ಲಿಕನ್ ಪಕ್ಷಕ್ಕೆ ಬೀಳುತ್ತವೆ. ಟ್ರಂಪ್ ಮೊದಲ ಗೆಲುವು ಸಹ ಹಿಲರಿ ಓರ್ವ ಮಹಿಳೆ ಎಂದಾಗಿತ್ತೇ ಹೊರತು, ಟ್ರಂಪ್ ಸಮರ್ಥ ನಾಯಕರೆಂದಲ್ಲ. ಏನೇ ಸಮಾನತೆ ಅಮೇರಿಕಾದಲ್ಲಿದ್ದರೂ ಅದು ಇನ್ನೂ ಮಹಿಳಾ ಅಧ್ಯಕ್ಷೆಯನ್ನು ಹೊಂದುವಷ್ಟು ಬದ್ಧವೂ, ಸಿದ್ಧವೂ ಆಗಿಲ್ಲ!
ಈ ನಿಟ್ಟಿನಲ್ಲಿ ಕೊರೋನ ಕುರಿತ ಟ್ರಂಪ್ ರ ಹುಚ್ಚಾಟ ಬೈಡನ್-ಹ್ಯಾರಿಸ್ ಅವರಿಗೆ ಕೈ ಹಿಡಿದಿದೆ. ಓರ್ವ ಮಹಿಳಾ ಉಪಾಧ್ಯಕ್ಷೆಯನ್ನು ಹೊಂದುವ ಅಮೇರಿಕಾದ ನಿಲುವಿನಲ್ಲಿ ಕೊರೋನಾ ಪಾತ್ರವನ್ನು ಮರೆಯುವಂತಿಲ್ಲ. ಕಮಲಾ ಹ್ಯಾರಿಸ್ ಅವರು ಉಪಾಧ್ಯಕ್ಷೆಯಾಗಿ ಅಮೇರಿಕೆಯಲ್ಲಿ ಮಹಿಳಾ ಸಮಾನತೆಯನ್ನು ಸೃಷ್ಟಿಸುವಲ್ಲಿ ಹೊಸ ಮುನ್ನುಡಿಯನ್ನು ಈ ಚುನಾವಣೆ ಬರೆದಿದೆ.
ಹಾಗೆಂದು ಬೈಡನ್ ಸರ್ಕಾರದಿಂದ ಅಸುರನೋರ್ವನ ಸಂಹಾರದ ನಂತರ ಆಕಾಶದಿಂದ ಹೂಮಳೆ ಸುರಿಸುವ, ಎಲ್ಲೆಲ್ಲೂ ಸುಖ-ಸಮೃದ್ಧಿಗಳನ್ನು ಮೆರೆಸುವಂತಹ ತೀವ್ರ ನಿರೀಕ್ಷೆಗಳನ್ನೇನೂ ಅಮೇರಿಕನ್ನರು ಇರಿಸಿಕೊಂಡಿಲ್ಲ. ಅಂತಹ ಆಶ್ವಾಸನೆಗಳು ಮತ್ತು ನಿರೀಕ್ಷೆಗಳೇನಿದ್ದರೂ ಭವ್ಯ ಭಾರತದಲ್ಲಿ ಮಾತ್ರ! ಕೇವಲ ಅತಿರೇಕಿ ನಕಲಿಶ್ಯಾಮನೋರ್ವನ ಬದಲು ಅಧ್ಯಕ್ಷೀಯ ಗಾಂಭೀರ್ಯದ ವ್ಯಕ್ತಿ ಆಯ್ಕೆಯಾದರೆ ಸಾಕು ಎಂಬುದು ಅಮೆರಿಕನ್ನರ ತುರ್ತಿನ ಆಶಯವಾಗಿತ್ತು. ಆದರೂ ಹೊಸ ವರ್ಷದಲ್ಲಿ ಅಧಿಕಾರ ವಹಿಸಿಕೊಳ್ಳುವ ಬೈಡನ್-ಹ್ಯಾರಿಸ್ ನಾಯಕತ್ವದಿಂದ ಅಮೇರಿಕನ್ನರು ಮತ್ತು ವಿಶ್ವದೆಲ್ಲೆಡೆಯ ಇತರೆ ಕನಿಷ್ಠ ನಿರೀಕ್ಷೆಗಳು ಏನು ಎಂಬುದನ್ನು ನೋಡೋಣ:
೧. ಅಮೇರಿಕಾದ ಅಧ್ಯಕ್ಷೀಯ ಗಾಂಭೀರ್ಯ - ಜಾಗತಿಕವಾಗಿ ಮತ್ತು ಅಂತರಿಕವಾಗಿ ಜನಾಂಗೀಯ ಹೋರಾಟ, ಜಾಗತಿಕ ತಾಪಮಾನ, ಅಂತರರಾಷ್ಟ್ರೀಯ ಸಂಬಂಧಗಳಲ್ಲೆಲ್ಲಾ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಕಟ್ಟೆ ಪುರಾಣದಂತೆ ಮಂಡಿಸಿ ನಗೆಪಾಟಲಿಗೀಡಾಗಿದ್ದ ಅಧ್ಯಕ್ಷೀಯ ಗೌರವವನ್ನು ಮರುಸ್ಥಾಪನೆಗೊಳಿಸುವುದು. ಈ ನಿಟ್ಟಿನಲ್ಲಿ ಬೈಡನ್-ಹ್ಯಾರಿಸ್ ಜೋಡಿ ಸಮರ್ಥವಾಗಿ ಅದನ್ನು ಪುನರ್ ಪ್ರತಿಷ್ಠಾಪಿಸುತ್ತಾರೆಂಬ ಸಾಮಾನ್ಯ ನಿರೀಕ್ಷೆಯಿದೆ.
೨. ಜನಾರೋಗ್ಯ ವ್ಯವಸ್ಥೆ - ಒಬಾಮಾ ಕೇರ್ ಯೋಜನೆಯಲ್ಲಿದ್ದ ಕಡ್ಡಾಯ ಆರೋಗ್ಯವಿಮೆಯನ್ನು ರದ್ದುಗೊಳಿಸಿ ಟ್ರಂಪ್ ತರಬೇಕೆಂದುಕೊಂಡಿದ್ದ ಆರೋಗ್ಯ ವ್ಯವಸ್ಥೆ ಕಾನೂನಾಗದ ಕಾರಣ, ತ್ರಿಶಂಕು ಸ್ಥಿತಿಯಲ್ಲಿರುವ ಒಬಾಮಾ ಕೇರ್ ಅನ್ನು ಮತ್ತಷ್ಟು ಸದೃಢಗೊಳಿಸಿ ಬೈಡನ್ ಕೇರ್ ಆಗಿ ತರುವುದಾಗಿ ಬೈಡನ್ ಚುನಾವಣಾ ಆಶ್ವಾಸನೆ ನೀಡಿದ್ದರು. ಆ ಭರವಸೆಯಂತೆ ಒಬಾಮಾ ಕೇರ್ ಯೋಜನೆಯಡಿಯಲ್ಲಿದ್ದ ಕಡ್ಡಾಯ ವಿಮೆಯನ್ನು ಮರುಜಾರಿಗೊಳಿಸುವುದು, ಪ್ರಿಸ್ಕ್ರಿಪ್ಷನ್ ಡ್ರಗ್ ಯೋಜನೆಯನ್ನು ಇನ್ನಷ್ಟು ಬಲಪಡಿಸುವ ಯೋಜನೆಗಳನ್ನು ೨೦೨೧ರ ಆರಂಭದಲ್ಲಿ ಆದ್ಯತೆಯ ಮೇಲೆ ಜಾರಿಗೆ ತರುವುದು, ಮತ್ತು ಅಕ್ರಮ ವಲಸೆಗಾರರಿಗೂ ಒಬಾಮಾ ಕೇರಿನಲ್ಲಿ ಅವಕಾಶ ಮಾಡಿಕೊಡುವುದಾಗಿ ಹೇಳಿರುವ ಬೈಡನ್ ಭರವಸೆ ಈಡೇರಿಸುವುದನ್ನು ಜನ ನಿರೀಕ್ಷಿಸುತ್ತಿದ್ದಾರೆ.
೩. ಆರ್ಥಿಕ ಸುಧಾರಣೆ - ಕೊರೋನಾ ಪರ್ವದಲ್ಲುಂಟಾದ ಉದ್ಯೋಗ ನಷ್ಟ, ಮತ್ತು ಆರ್ಥಿಕ ಮುಗ್ಗಟ್ಟುಗಳನ್ನು ಸರಿಪಡಿಸುವಲ್ಲಿ ಅರ್ಥಿಕ ಪ್ಯಾಕೇಜುಗಳನ್ನು ಟ್ರಂಪ್ ಸರ್ಕಾರ ಘೋಷಿಸಿದ್ದರೂ ಅದು ಮಧ್ಯಮ ವರ್ಗದ ಸಣ್ಣ ವ್ಯಾಪಾರಿಗಳನ್ನು ತಲುಪಿಲ್ಲ. ಆ ನಿಟ್ಟಿನಲ್ಲಿ ಬೈಡನ್ ಮಧ್ಯಮ ವರ್ಗವನ್ನು ಗಮನದಲ್ಲಿರಿಸಿಕೊಂಡು ವಿಶೇಷ ಅರ್ಥಿಕ ಪ್ಯಾಕೇಜುಗಳ ಭರವಸೆ ನೀಡಿದ್ದಾರೆ. ಅವುಗಳ ಅನುಷ್ಟಾನಕ್ಕೆ ಈಗಾಗಲೇ ತಜ್ಞ ಸಮಿತಿಯನ್ನು ಬೈಡನ್ ರಚಿಸಿರುವುದರಿಂದ ಅವರು ಅಧಿಕಾರವನ್ನು ವಹಿಸಿಕೊಂಡ ತಕ್ಷಣಕ್ಕೆ ಆ ಪ್ಯಾಕೇಜುಗಳ ಘೋಷಣೆಯಾಗಬಹುದು ಎಂದು ಅಮೇರಿಕಾದ ಮಧ್ಯಮ ವರ್ಗ ನಿರೀಕ್ಷಿಸುತ್ತಿದೆ. ಇದರಿಂದ ಕೋರೋನದಿಂದ ಉಂಟಾಗಿರುವ ತಾತ್ಕಾಲಿಕ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ ಆರ್ಥಿಕತೆಯನ್ನು ಪುನಃಶ್ಚೇತನಗೊಳಿಸುವಂತಹ ಮತ್ತು ದೀರ್ಘಕಾಲಿಕ ಯೋಜನೆಗಳನ್ನು ತರಬಹುದೆಂಬ ನಿರೀಕ್ಷೆಯಿದ್ದರೂ, ತೆರಿಗೆಯನ್ನು ಹೆಚ್ಚಿಸಬಹುದೆಂಬ ಭೀತಿಯೂ ಹಲವರ ನಿರೀಕ್ಷೆಯಲ್ಲಿದೆ.
೪. ವಲಸೆ ನೀತಿ - ವಲಸೆ ನೀತಿಯಲ್ಲಿ ಕೆಲವು ಉಡಾಫ಼ೆಯ ಉಡಾಳತನವನ್ನು ಟ್ರಂಪ್ ಸರ್ಕಾರ ಮಾಡಿದ್ದರೂ ಅದು ಅಕ್ರಮ ವಲಸೆಗಾರರ ಕುರಿತಾಗಿತ್ತು. ಆದರೆ ಕ್ರಮಬದ್ಧ ವಲಸೆಯಲ್ಲಿ ಟ್ರಂಪ್ ಮಾಡಿದ ಸುಧಾರಣೆಗಳು ಮೆಚ್ಚತಕ್ಕಂತಹವು. ಅಕ್ರಮ ವಲಸೆಗಾರರ ಮೇಲಿನ ಕಟು ಮಾತುಗಳಿಂದ ಅವರ ಸಕಾರಾತ್ಮಕ ಹೆಚ್೧ಬಿ ಮುಂತಾದ ವೀಸಾ ನೀತಿಗಳೂ ತಪ್ಪೆನಿಸಿಬಿಟ್ಟಿದ್ದವು. ಹೆಚ್೧ಬಿ ವೀಸಾ ನೀತಿಗಳಲ್ಲಿನ ಕೆಲವು ಅಂಶಗಳ ದುರುಪಯೋಗ ಪಡಿಸಿಕೊಂಡು ರಂಗೋಲಿ ಕೆಳಗೆ ನುಸುಳುತ್ತಿದ್ದ ಕಂಪೆನಿಗಳು ಅಂತಹ ಅಕ್ರಮಗಳಿಗೆ ಮುಂದಾಗದಂತೆ ಟ್ರಂಪ್ ಸರ್ಕಾರ ಮೂಗುದಾರವನ್ನು ಹಾಕಿತ್ತು. ಟ್ರಂಪ್ ಸರ್ಕಾರದ ಏಕೈಕ ಮೆಚ್ಚುವ ಅಂಶವೆಂದರೆ ಅವರ ವಲಸೆ ನೀತಿಯ ಸುಧಾರಣೆಗಳು! ಹಾಗೆಂದು ಅವರು ಭಾರೀ ಸುಧಾರಣೆಯನ್ನೇನೂ ಮಾಡದೆ ಕೇವಲ ಇದ್ದ ನೀತಿಯ ಲೋಪದೋಷಗಳನ್ನು ತಿದ್ದಿಸಿದ್ದರಷ್ಟೇ. ಆದರೆ ಈ ರೀತಿ ರಂಗೋಲಿ ಕೆಳಗೆ ನುಸುಳುವಲ್ಲಿ ಭಾರತೀಯ ಕಂಪೆನಿಗಳು ಹೆಚ್ಚು ಪರಿಣಿತರಿದ್ದುದರಿಂದ ಅವುಗಳಿಗೆ ತೀವ್ರ ಹೊಡೆತವುಂಟಾಯಿತು. ವಲಸೆ ನೀತಿಯ ಬಗ್ಗೆ ಭಾರೀ ಉದಾರತೆಯನ್ನು ಹೊಂದಿರುವ ಬೈಡನ್ ಟ್ರಂಪ್ ನೀತಿಗಳನ್ನು ಮುಂದುವರಿಸಿಕೊಂಡು ಹೋಗುವುದು ಸೂಕ್ತವೆಂದು ಡೆಮಾಕ್ರಟಿಕ್ ಬೆಂಬಲಿಗರಲ್ಲದೇ ನನ್ನಂತಹ ಭಾರತೀಯ ಅಮೇರಿಕನ್ನರೂ ಸುಪ್ತವಾಗಿ ಬಯಸುತ್ತಾರೆ.
ಹೆಚ್೧ಬಿ ವೃತ್ತಿಪರರ ಹೆಚ್೪ ವೀಸಾ ಮೇಲಿರುವ ಪತಿ/ಪತ್ನಿಯರು ಸಹ ಕೆಲಸ ಮಾಡಬಹುದೆಂದು ಒಬಾಮಾ ತಂದಿದ್ದ "ಉದಾರ" ನೀತಿಯ ಅನುಗ್ರಹದಿಂದ ಭಾರತದಲ್ಲಿ ಗೃಹಿಣಿಯರಾಗಿದ್ದ ಹೆಚ್೧ನ್ನಿಗರ ಪತ್ನಿಯರೂ ಸಹ ಅಮೆರಿಕೆಗೆ ಕಾಲಿಡುತ್ತಿದ್ದಂತೆಯೇ ಉದ್ಯೋಗಸ್ಥರಾಗುತ್ತಿದ್ದರು. ಇವರನ್ನು ಕಡಿಮೆ ಸಂಬಳಕ್ಕೆ ಭಾರತೀಯ ಕಂಪೆನಿಗಳು ನೇಮಿಸಿಕೊಂಡು ವಲಸೆ ವ್ಯವಸ್ಥೆಯನ್ನು ಪರಮಾವಧಿಗೆ ಶೋಷಿಸಿದ್ದರು. ಈ ಸದ್ಗೃಹಿಣಿಯರು ಮಾಡಬೇಕಾದ ಕೆಲಸವನ್ನು ಮಾಡಿಕೊಡಲು ಹೈದರಾಬಾದ್, ಬೆಂಗಳೂರು, ನೋಯ್ಡಾಗಳಲ್ಲಿ ಹಡಬೆ ಕಂಪೆನಿಗಳು ಸೃಷ್ಟಿಯಾಗಿದ್ದವು. ಸದ್ಗೃಹಿಣಿಯರು ತಮಗೆ ವಹಿಸಿದ ಕೆಲಸವನ್ನು ವಾಟ್ಸಾಪ್ ಮೂಲಕ ಈ ಹಡಬೆ ಕಂಪೆನಿಗಳಿಗೆ ಮೆಸೇಜ್, ಆಡಿಯೋ, ವಿಡಿಯೋ ಮೂಲಕ ವಿವರಿಸಿ ಪ್ರೋಗ್ರಾಂ ಬರೆಸಿಕೊಂಡು ತಮ್ಮ ಸಂಬಳದ ಒಂದಷ್ಟು ಚಿಲ್ಲರೆಯನ್ನು ಈ ಕಂಪೆನಿಗಳಿಗೆ ಕೊಡುತ್ತಿದ್ದರು. ಹಾಗಾಗಿಯೇ ಇತ್ತೀಚೆಗೆ ಭಾರತೀಯರೆಂದರೆ ಅಮೆರಿಕನ್ನರಲ್ಲಿ ಒಂದು ಬಗೆಯ ತಿರಸ್ಕಾರವುಂಟಾಗಿ ಜನಾಂಗೀಯ ದ್ವೇಷಕ್ಕೆ ಎಡೆ ಮಾಡಿಕೊಡುತ್ತಿದೆ.
ಒಬಾಮಾರ ಒಂದು ಉದಾತ್ತ, ಉದಾರ ತಿದ್ದುಪಡಿ ಹೀಗೆ ಶೋಷಣೆಗೊಂಡಿದ್ದುದನ್ನು ಟ್ರಂಪ್ ಸರಿಪಡಿಸಿದ್ದರು. ಹಾಗಾಗಿ ಬೈಡನ್ ಯಾವುದೇ ವಲಸೆ ನೀತಿಯನ್ನು ಪರಿಗಣಿಸುವ ಮುನ್ನ ವಲಸಿಗರ ರಾಷ್ಟ್ರೀಯ ಹಿನ್ನೆಲೆ, ಅಲ್ಲಿನ ವ್ಯವಸ್ಥೆ, ಭ್ರಷ್ಟಾಚಾರಗಳನ್ನೆಲ್ಲಾ ಸಮಗ್ರವಾಗಿ ಪರಿಗಣಿಸಬೇಕು ಅಥವಾ ಟ್ರಂಪ್ ವಲಸೆ ನೀತಿಯನ್ನೇ ಮುಂದುವರಿಸಿಕೊಂಡು ಹೋಗಬೇಕು ಎಂಬುದು ಬಹುಪಾಲು ಡೆಮಾಕ್ರಟಿಕ್ ಬೆಂಬಲಿಗರೂ ಸೇರಿದಂತೆ ಅಮೆರಿಕನ್ನರ ಸುಪ್ತ ನಿರೀಕ್ಷೆಯಾಗಿದೆ.
೫. ವಿದೇಶಾಂಗ ನೀತಿ - ರಾಷ್ಟ್ರೀಯ ಸಮಸ್ಯೆಗಳಿಗೆ ಪ್ರಥಮ ಆದ್ಯತೆ ಕೊಡುವುದಾಗಿ ಬೈಡೆನ್ ಹೇಳಿದ್ದರೂ, ಟ್ರಂಪ್ ಅಧಿಕಾರದಲ್ಲಿ ಹಳಸಿದ್ದ NATO ಸಂಬಂಧವನ್ನು ಪುನರುಜ್ಜೀವನಗೊಳಿಸುವುದಾಗಿ ಹೇಳಿದ್ದಾರೆ. NATO ಮತ್ತು ಯುರೋಪಿಯನ್ ಒಕ್ಕೂಟ ರಾಷ್ಟ್ರಗಳೊಡನೆ ಅಮೆರಿಕದ ಸಂಬಂಧವನ್ನು ಬೈಡನ್ ತುರ್ತಾಗಿ ಮತ್ತೆ ಸರಿದಾರಿಗೆ ತರುತ್ತಾರೆಂದು ಈ ಒಕ್ಕೂಟಗಳು ಸಹ ಎದುರು ನೋಡುತ್ತಿವೆ. ಟ್ರಂಪ್ ಅಧಿಕಾರಾವಧಿಯಲ್ಲಿ ಇರುಸುಮುರುಸಾಗಿದ್ದ ವಾಣಿಜ್ಯ, ಡಿಜಿಟಲ್ ಪ್ರೈವಸಿ, ಚೈನಾ, ಇರಾನ್, ಟರ್ಕಿ, ಮತ್ತು NATO ಫಂಡಿಂಗ್ ಮುಂತಾದ ತುರ್ತುಗಳನ್ನು ಬೈಡೆನ್ ೨೦೨೧ರಲ್ಲಿಯೇ ಸರಿಪಡಿಸುತ್ತಾರೆಂದು ವಿಶ್ವವೇ ಎದುರು ನೋಡುತ್ತಿದೆ.
ಟ್ರಂಪ್ ಅಧಿಕಾರಾವಧಿಯಲ್ಲಿ ವೀಸಾ ನೀತಿಯಿಂದ ಭಾರತದೊಂದಿಗಿನ ವಾಣಿಜ್ಯ ಸಂಬಂಧಕ್ಕೆ ಹಿನ್ನೆಡೆಯುಂಟಾಗಿತ್ತು. ಹಾಗಿದ್ದಾಗ್ಯೂ ಭಾರತದ ಪ್ರಧಾನಿಗಳು ’ಅಬ್ ಕಿ ಬಾರ್ ಟ್ರಂಪ್ ಸರ್ಕಾರ್’ ಎಂದು ಏಕೆ ಹೇಳಿದ್ದರೋ ಬಲ್ಲವರ್ಯಾರು?
ಕ್ಲಿಂಟನ್ ಮತ್ತು ಒಬಾಮಾ ಸರ್ಕಾರದಲ್ಲಿ ಭಾರತ-ಅಮೇರಿಕಾ ಸಂಬಂಧ ಹೇಗಿತ್ತೋ ಹಾಗೆಯೇ ಬಲಿಷ್ಠ ಇಂಡೋ-ಅಮೇರಿಕನ್ ಸಂಬಂಧ ಬೈಡನ್ ಕಾಲದಲ್ಲಿಯೂ ಮುಂದುವರಿಯಲಿದೆ ಎಂಬುದು ಸಾಮಾನ್ಯ ನಿರೀಕ್ಷೆ!
೬. ಪರಿಸರ ಸಂರಕ್ಷಣೆ - ಟ್ರಂಪ್ ಆಡಳಿತವು ಮೇ ೨೦೨೦ರೊಳಗೆ ೬೪ ಪರಿಸರ ಸಂಬಂಧೀ ನಿಯಮಗಳನ್ನು ರದ್ದು ಮಾಡಿ, ಇನ್ನೂ ೩೪ ನಿಯಮಗಳನ್ನು ರದ್ದುಗೊಳಿಸಲು ದಾಪುಗಾಲು ಹಾಕಿತ್ತು. ಅದಲ್ಲದೆ ಜಾಗತಿಕ ತಾಪಮಾನದ ಕುರಿತಾದ ವಿಜ್ಞಾನಿಗಳ ಎಲ್ಲಾ ಎಚ್ಚರಿಕೆಗಳನ್ನು ತಿರಸ್ಕರಿಸಿ ಟ್ರಂಪ್ ಸರ್ಕಾರ "ಜಾಗತಿಕ ತಾಪಮಾನ" ಎಂಬುದು ಒಂದು ಬಹು ದೊಡ್ಡ ಹೋಕ್ಸ್ ಎಂದಿತ್ತು. ಈಗ ರದ್ದಾದ ಆ ಎಲ್ಲಾ ನಿಯಮಗಳನ್ನು ಪುನರ್ ಸ್ಥಾಪಿಸುವುದರೊಂದಿಗೆ ಜಾಗತಿಕ ತಾಪಮಾನ, ಪರಿಸರ ಸಂರಕ್ಷಣೆಯ ತುರ್ತಿಗೆ ನಿಯಮಗಳನ್ನೂ ರೂಪಿಸುವ ಜವಾಬ್ದಾರಿ ಬೈಡನ್ ಮೇಲಿದೆ.
ಕ್ಲೀನ್ ಎನರ್ಜಿ ಮತ್ತು ಪರಿಸರ ಸಂರಕ್ಷಣೆಗಾಗಿ ಮತ್ತು ೨೦೫೦ರೊಳಗೆ ಅಮೇರಿಕಾ ಸಂಪೂರ್ಣವಾಗಿ ನೆಟ್ ಝೀರೋ ಎಮಿಷನ್ ಸಾಧಿಸಲು ನಿಯಮಗಳನ್ನು ರೂಪಿಸಿ ಅದರ ಅನುಷ್ಠಾನಕ್ಕೆ ೧.೭ ಟ್ರಿಲಿಯನ್ ಡಾಲರ್ ನಿಧಿಯನ್ನು ತೆಗೆದಿಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಅದಲ್ಲದೆ ಅಧಿಕಾರ ವಹಿಸಿಕೊಂಡ ತಕ್ಷಣ ಪ್ಯಾರಿಸ್ ಒಪ್ಪಂದವನ್ನು ಎತ್ತಿಹಿಡಿಯುವುದಾಗಿಯೂ ಹೇಳಿದ್ದಾರೆ.
ಒಟ್ಟಿನಲ್ಲಿ ಟ್ರಂಪ್ ಮಾಡಿದ ಅವಘಡಗಳನ್ನು ಸರಿಪಡಿಸಿ ಟ್ರಂಪ್ ಅಧಿಕಾರಕ್ಕೂ ಮುಂಚಿನ ಯಥಾಸ್ಥಿತಿಗೆ ಪರಿಸ್ಥಿತಿಯನ್ನು ತಂದರೆ ಸಾಕೆಂಬ ಕನಿಷ್ಠ ನಿರೀಕ್ಷೆ ಬೈಡನ್-ಹ್ಯಾರಿಸ್ ಮೇಲಿದೆ.
No comments:
Post a Comment