ಉದಯಕಾಲ - ದೀಪಾವಳಿ ವಿಶೇಷಾಂಕ ಬರಹ, ಒಕ್ಕಲಿಂಗ

 ಒಕ್ಕಲಿಂಗ

ಜಾತಿ ರಾಜಕೀಯ ಇತ್ತೀಚೆಗೆ ದೇಶವ್ಯಾಪಿಯಾಗಿದೆ. ಇದು ಕೇವಲ ರಾಜಕೀಯ ಜಿದ್ದಾಜಿದ್ದಿಗೆ ಸೀಮಿತವಾಗಿದ್ದುದು ಇತ್ತೀಚೆಗೆ ದಿನನಿತ್ಯದ ಅಗತ್ಯ ಸಾಮಾನು ಸರಂಜಾಮುಗಳನ್ನು ಯಾ(ರ)ವ ಅಂಗಡಿಯಿಂದ ಕೊಳ್ಳಬೇಕು ಎಂಬ ನಿರ್ಧಾರಕ್ಕೂ ವ್ಯಾಪಿಸಿದೆ. ಹಾಗಾಗಿಯೇ ಅಂಗಡಿಗಳ ಹೆಸರು ಎಷ್ಟೇ ಮಾಡರ್ನ್ ಇದ್ದರೂ ಮೇಲೆ ಸಣ್ಣದಾಗಿ ಬರೆದಿರುವ "ಕಾಲಭೈರವೇಶ್ವರ ಪ್ರಸನ್ನ", "ಶಿವ", "೭೮೬", "ಚನ್ನಕೇಶವ ಪ್ರಸನ್ನ" ಮುಂತಾದವುಗಳು ಸಾಧ್ಯವಾದಷ್ಟೂ ಜಾತಿಸೂಚ್ಯವಾಗಿರುತ್ತವೆ. ಈಗ ಎಲ್ಲಾ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದ ಸಾಮಾಜಿಕ ಪಿಡುಗುಗಳೂ ಸಹ ಅಷ್ಟೇ ತ್ವರಿತವಾಗಿ ವಾಟ್ಸಾಪ್, ಫೇಸ್ಬುಕ್, ಟ್ವಿಟ್ಟರುಗಳ ಮೂಲಕ ಹಬ್ಬುತ್ತಿವೆ. ಇಂತಹ ಒಂದು ಪ್ರಮುಖ ಶಾಶ್ವತ ಜಾತೀಯತೆಯ  ಪ್ಯಾನ್‍ಡೆಮಿಕ್ ಮುಂದೆ ಕೋವಿಡ್ ಖಂಡಿತ ಏನೇನೂ ಅಲ್ಲ!

ದೇಶವ್ಯಾಪಿಯಾಗಿರುವ ಈ ಜಾತೀಯತೆ ಅಮೇರಿಕಾ ಭಾರತೀಯರನ್ನು ಆವರಿಸಿಕೊಂಡಿದೆಯೇ?

ಉತ್ತರ: ಹೌದು ಮತ್ತು ಇಲ್ಲ!

ಭಾರತದಲ್ಲೇ ಹುಟ್ಟಿ ಬೆಳೆದು ಎಲ್ಲಾ ಪೂರ್ವಾಗ್ರಹಗಳೊಡನೆ ಅಮೆರಿಕೆಗೆ ವಲಸೆ ಬಂದಿರುವ ಮೊದಲನೇ ತಲೆಮಾರಿನ ಬಹುಪಾಲು ಅನಿವಾಸಿಗಳಲ್ಲಿ ಈ ಭಾವನೆಗಳಿರುವುದು ನಿಜ. ಹಾಗಾಗಿ ಉತ್ತರ ಹೌದು.

ಆದರೆ ಅದೇ ಎರಡನೇ ತಲೆಮಾರಿನ ಭಾರತೀಯ ಮೂಲದವರಲ್ಲಿ ಈ ಭಾವನೆಗಳು ಇಲ್ಲವೇ ಇಲ್ಲ. ಹಾಗಾಗಿ ಉತ್ತರ ಇಲ್ಲ ಕೂಡ!  ಆದರೂ ಆಗಾಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿ ಮಾಡುವ ಅನಿವಾಸಿ ಜಾತಿ ಸಮಾವೇಶಗಳು ಒಳನಾಡಿನ ಜನರಿಗೆ ಆಸಕ್ತಿಯನ್ನು ಉಂಟು ಮಾಡುತ್ತವೆ. ಹಾಗಾಗಿ ಅನಿವಾಸಿ ಭಾರತೀಯರ ಈ ಜಾತಿ ಚಟುವಟಿಕೆಗಳು ಹೇಗಿರುತ್ತವೆ ಎಂಬುದನ್ನು ಕರ್ನಾಟಕದ ಎರಡು ಪ್ರಮುಖ ಜಾತಿಗಳ ಮತ್ತು ಅವುಗಳ ಸಂಘ ಸಮಾವೇಶಗಳ ಹಿನ್ನೆಲೆಯಲ್ಲಿ ಒಂದು ಗಮನ ಹರಿಸೋಣ.

ಕರ್ನಾಟಕದಲ್ಲಿ ನಿತ್ಯ ರಂಗೇರುವ ಈ ಎರಡು ಜಾತಿ ಜಟಾಪಟಿಗಳು, ಅಮೇರಿಕಾದಲ್ಲಿ ಕೇವಲ ಸ್ವಾತಂತ್ರ್ಯ ದಿನಾಚರಣೆಯ ರಜಾ ದಿನಗಳಲ್ಲಿ ಅಥವಾ ಬೇಸಿಗೆಯ ಒಂದು ಲಾಂಗ್ ವೀಕೆಂಡಿನಲ್ಲಿ ಜರುಗುವ ಜಾತಿಯ ಸಮಾವೇಶಗಳಲ್ಲಿ ಮಾತ್ರ ರಂಗೇರುತ್ತವೆ. ಆ ಸಮಾವೇಶಗಳು ರಜೆಯ ಮಜೆಗೆ ಹೊರಹೋಗುವ ಭಾವನೆ ತರಲೆಂಬಂತೆ ಯಾವುದಾದರೂ ಒಂದು ಪ್ರಮುಖ ನಗರಗಳಲ್ಲಿ ನಡೆಯುತ್ತವೆ. ಹಾಗಾಗಿ ಇದು ಬಹುಪಾಲು ಸಕುಟುಂಬ ಪರಿವಾರ ಸಮೇತ ಹಾಜರಾಗುವ ಒಂದು ರಜೆಯ ಮಜಾ ಗೋಷ್ಠಿ ಸಹ.

ಹಾಗೆಂದು ಕರ್ನಾಟಕದಂತೆಯೇ ಅಮೇರಿಕಾದಲ್ಲಿ ಕೂಡ ಕಡು ಬೇಸಿಗೆಯಲ್ಲಿ ಕೆಂಪು-ಬಿಳಿ ಪಟ್ಟಾಪಟ್ಟಿ ಮತ್ತು ನಕ್ಷತ್ರಗಳ ಲಂಗೋಟಿ ಹಾಕಿಸಿ ಅಖಾಡ ಸಿದ್ದ ಪಡಿಸಿ ಸವಾಲು ಸ್ಪರ್ಧೆಗಳಿರುತ್ತವೆ ಎಂದೆಲ್ಲಾ ನೀವು ಅಂದುಕೊಂಡಿದ್ದರೆ ತಪ್ಪು. ಅಂತಹ ಜಾತಿಯಾಧರಿತ ಪಕ್ಷದ ಟಿಕೆಟ್ಟು, ಮಂತ್ರಿಗಿರಿ ಚೌಕಾಶಿ ಜಾತಿ ಜಟಾಪಟಿಯೇನಿದ್ದರೂ ಮಾತೃಭೂಮಿಯಲ್ಲಿ ಮಾತ್ರ!

ಅಮೇರಿಕಾದ ನ್ಯೂಯಾರ್ಕ್, ಶಿಕಾಗೋ, ಲಾಸ್ ಏಂಜಲೀಸ್, ಹ್ಯೂಸ್ಟನ್, ಡಲ್ಲಾಸ್, ಮತ್ತಿತರೆ ಪ್ರಮುಖ ನಗರಗಳಲ್ಲಿ ಒಕ್ಕಲಿಗ ಪರಿಷತ್ ಮತ್ತು ವೀರಶೈವ ಸಮಾಜಗಳು ತಮ್ಮ ತಮ್ಮ ಸಮ್ಮೇಳನಗಳನ್ನು ಒಂದೊಂದು ವರ್ಷ ಒಂದೊಂದು ಊರಿನಲ್ಲಿ ಎಂಬಂತೆ ಏರ್ಪಡಿಸಿಕೊಳ್ಳುತ್ತವೆ. ಪ್ರತಿ ಬಾರಿ ರಜೆಗೆ ಒಂದೇ ಊರಿಗೆ ಹೋಗಲಾದೀತೆ?  ಆದರೆ ಇಂತಹ ಸಮಾವೇಶಗಳನ್ನು ಎರಡು ಜಾತಿಗಳ ಶಕ್ತಿ ಪ್ರದರ್ಶನವೆಂಬಂತೆ ಕರ್ನಾಟಕದ ಜಾತಿ ಬೆಂಬಲಿಗರು ಬಣ್ಣಿಸಿಕೊಳ್ಳುತ್ತಿದ್ದರೆ, ಅದು ತಪ್ಪಷ್ಟೇ ಅಲ್ಲದೆ ಅದೆಲ್ಲವೂ ಸುಳ್ಳು ಸಂಗತಿಗಳು!  

ಏಕೆಂದರೆ ಇಲ್ಲಿ ಒಕ್ಕಲಿಗರೂ ಮತ್ತು ವೀರಶೈವರು ಸೇರಿ ಒಕ್ಕಲಿಂಗರಾಗಿದ್ದಾರೆ.  ಈ ಎರಡೂ ಸಂಘಗಳನ್ನು ಪ್ರಮುಖವಾಗಿ ತಮ್ಮ ಮುಂದಿನ ಪೀಳಿಗೆಗೆ ತಮ್ಮ ಮೂಲ ಸಂಸ್ಕೃತಿಯ ಪರಿಚಯವಿರಲಿ ಎಂಬುದೊಂದೇ ಈ ಸಂಘಗಳ ಘನ ಉದ್ದೇಶವಲ್ಲದೇ ಮತ್ತಿನ್ಯಾವ ರಾಜಕೀಯ ಕಾರಣಗಳಲ್ಲ.

ಒಕ್ಕಲಿಗ ಪರಿಷತ್ ಕೃಷ್ಣೇಗೌಡರ ಹಾಸ್ಯ, ನವೀನ್ ಸಜ್ಜು ಅಥವಾ ಶಮಿತಾ ಮಲ್ನಾಡ್ ಅಂತಹ ಕಲಾವಿದರ ಸಂಗೀತವೇರ್ಪಡಿಸಿದರೆ, ವೀರಶೈವ ಸಮಾಜ ಸಿದ್ದೇಶ್ವರ ಸ್ವಾಮೀಜಿ, ಸುತ್ತೂರು ಸ್ವಾಮಿಗಳು, ಸಿರಿಗೆರೆ ಸ್ವಾಮಿಗಳ ಆಶೀರ್ವಚನಗಳೊಂದಿಗೆ ವಚನ ಗಾಯನ ಸಂಗೀತ, ವಚನಾನಂದರಿಂದ ಯೋಗ ಶಿಕ್ಷಣ,

ಅನುಭವ ಗೋಷ್ಠಿಗಳನ್ನು ಏರ್ಪಡಿಸಿರುತ್ತದೆ.

ಒಕ್ಕಲಿಗ ಸಮಾಜದ ಕಾರ್ಯಕ್ರಮಕ್ಕೆ ಕರ್ನಾಟಕದ ಹಲವಾರು ಒಕ್ಕಲಿಗ ಪ್ರಮುಖ ರಾಜಕಾರಣಿಗಳು ಬಂದರೆ, ವೀರಶೈವ ಪರಿಷತ್ತಿನ ಸಮ್ಮೇಳನಕ್ಕೆ ಕೂಡ ವೀರಶೈವ ರಾಜಕಾರಣಿಗಳು ಹಾಜರಿರುತ್ತಾರೆ. ಆದರೆ ಈ ಎರಡೂ ಸಮಾವೇಶಗಳು ರಾಜಕೀಯ ಬಣ್ಣ ಪಡೆಯದಂತೆ ಒಕ್ಕಲಿಗ ಪರಿಷತ್ತು ಮತ್ತು ವೀರಶೈವ ಸಮಾಜಗಳು ಯಾವುದೇ ಪ್ರಚಾರ ಕೊಡುವುದಿಲ್ಲ. ಅಂತಹ ಪ್ರಚಾರಗಳೇನಿದ್ದರೂ ಕರ್ನಾಟಕದಲ್ಲೇ ಆಗುವವೇ ವಿನಃ ಅಮೇರಿಕಾದಲ್ಲಿಯಲ್ಲ. ಸಾಮಾನ್ಯವಾಗಿ ಒಕ್ಕಲಿಗ ಪರಿಷತ್ ಅಮೆರಿಕ, ಸಭ್ಯ ರಾಜಕಾರಣಿ ಎನ್ನುವ ಎಸ್.ಎಮ್. ಕೃಷ್ಣ ಅವರನ್ನು ಇಷ್ಟಪಟ್ಟರೆ, ರಾಣಿ ಸತೀಶ್ ವೀರಶೈವ ಸಮಾವೇಶದ ಖಾಯಂ ಅತಿಥಿಯಾಗಿರುತ್ತಾರೆ. ಅಷ್ಟರ ಮಟ್ಟಿಗೆ ಈ ಸಮಾವೇಶಗಳು ರಾಜಕೀಯ ನೀರಸವಾಗಿ ಆದರೆ ಸಂಸ್ಕೃತಿ ಶ್ರೀಮಂತವಾಗಿರುತ್ತವೆ.

ಸಾಮಾನ್ಯವಾಗಿ ಇಲ್ಲಿನ ಭಾರತೀಯರು ತಮ್ಮ ಅಲ್ಪಸಂಖ್ಯೆಯ ಕಾರಣದಿಂದಲೋ, ವಿಶಿಷ್ಟ ಸಂಸ್ಕೃತಿಯ ದೆಸೆಯಿಂದಲೋ ಅಷ್ಟಾಗಿ ಮುಖ್ಯವಾಹಿನಿಯಲ್ಲಿ ಬೆರೆಯದೇ ತಮ್ಮ ತಮ್ಮ ಭಾರತೀಯ ಮೂಲದ ಸ್ನೇಹಿತರುಗಳನ್ನೇ ಕಂಡುಕೊಂಡು ಸ್ನೇಹಸಂಬಂಧಗಳನ್ನು ಹೊಂದಿರುತ್ತಾರೆ. ಈ ಸ್ನೇಹಕ್ಕೆ ಯಾವುದೇ ಜಾತಿ ಅರ್ಹತೆ ಅಡ್ಡಿ ಬರುವುದಿಲ್ಲ.  ಎಪ್ಪತ್ತರ ದಶಕ ಭಾರತೀಯ ಮೂಲದ ಡಾಕ್ಟರರುಗಳ ವಲಸೆಯ ಅಲೆಯಾದರೆ, ತೊಂಬತ್ತರ ದಶಕ ಐ.ಟಿ. ವಲಸಿಗರ ಅಲೆಯಾಯಿತು.  ಈ ಅಲೆಗಳಲ್ಲಿ ಬಂದು ನೆಲೆಸಿರುವ ಭಾರತೀಯ ಮೂಲದವರು ತಮ್ಮ ತಮ್ಮ ಭಾಷೆಗಳ/ರಾಜ್ಯಗಳ ಹೆಸರಿನಲ್ಲಿ ಸಂಘ, ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ತಮ್ಮ ಸಂಸ್ಕೃತಿಯ ನೆನಹನ್ನು ತಮ್ಮತಮ್ಮಲ್ಲೇ ಹಂಚಿಕೊಳ್ಳುತ್ತಾರೆ. ಅಲ್ಲಿ ರಾಜಕೀಯವೆನಿದ್ದರೂ ಈ ಸಂಘಗಳ ಪದಾಧಿಕಾರಕ್ಕೆ ಮಾತ್ರ ಸೀಮಿತ.

ವೀರಶೈವರೆಲ್ಲಾ ಉತ್ತರ ಅಮೇರಿಕಾ ವೀರಶೈವ ಸಮಾಜವನ್ನು ೧೯೭೮ ಸ್ಥಾಪಿಸಿಕೊಂಡಿದ್ದರೆ, ಅಮೇರಿಕಾ ಒಕ್ಕಲಿಗರ ಪರಿಷತ್ ತೊಂಬತ್ತೊಂದರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಹಾಗೆಯೇ ಹವ್ಯಕರ ಸಂಘ, ಮಾಧ್ವರ ಸಂಘ, ಇತ್ಯಾದಿ, ಇತ್ಯಾದಿಗಳೂ ಇವೆ. ಈ ಎಲ್ಲಾ ಸಂಘಗಳ ಮೂಲ ಉದ್ದೇಶ ತಮ್ಮ ಮಕ್ಕಳಿಗೆ ಆದಷ್ಟೂ ತಮ್ಮ ಜಾತಿ ಬಳಗದಲ್ಲೇ ಪ್ರೇಮವುಂಟಾಗಿ ಮದುವೆಯಾಗುವಂತಾಗಲಿ ಎಂಬುದು. ಅದು ತಕ್ಕ ಮಟ್ಟಿಗೆ ಸಾಧ್ಯವಾಗಿದೆ ಕೂಡ. ಅಂತಹ ವೈವಾಹಿಕ ಸಂಬಂಧಗಳನ್ನು ಕುದುರಿಸಲು ವೇದಿಕೆಯನ್ನೊದಗಿಸುವುದು ಈ ಸಂಘಗಳ ಪ್ರಮುಖ ಉದ್ದೇಶ ಎಂಬುದು ನನ್ನ ವೈಯಕ್ತಿಕ ಅನಿಸಿಕೆ.

ಭಾರತೀಯಮೇರಿಕನ್ನರಲ್ಲಿ ಆದಿ ವಲಸೆಗಾರ ವರ್ಗದ ಕೆಲವರು ಅಮೇರಿಕಾದಲ್ಲಿದ್ದಾಗ ಇಡ್ಲಿ, ದೋಸೆ, ಭಾರತೀಯ ತಿನಿಸು ಬಿಟ್ಟರೆ ಮತ್ತಿನ್ನೊಂದನ್ನು ಮೂಸದ, ಭಾರತಕ್ಕೆ ರಜೆಗೆ ಹೋದಾಗ ಪಿಜ್ಜಾ, ಬರ್ಗರ್, ಪಾಸ್ತಾ ಎಂದೆಲ್ಲಾ ತಮ್ಮ ಸಂಬಂಧಿಗಳನ್ನು ಗೋಳು ಹುಯ್ದುಕೊಳ್ಳುವ; ಅಮೇರಿಕಾದ ಸುಡು ಬೇಸಿಗೆಯಲ್ಲಿ ದುಪ್ಪಟ್ಟಾಗಳನ್ನು ಚಳಿ ಬಂದವರಂತೇ ಹೊದ್ದು ಭಾರತೀಯ ಸಂಸ್ಕೃತಿಯ ರಾಯಭಾರಿಗಳಂತೆ ತಿರುಗುವ, ಬೆಂಗಳೂರಿಗೆ ಬಂದೊಡನೆ ಅಮೇರಿಕಾದ ರಾಯಭಾರಿಗಳಾಗುವ ವರ್ಗವೊಂದಿದೆ. "ವೆನ್ ಯು ಆರ್ ಇನ್ ರೋಮ್, ಬಿ ಲೈಕ್ ರೋಮನ್" ಎಂಬ ನಾಣ್ಣುಡಿಯನ್ನು ಇವರನ್ನು ನೋಡಿಯೇ ಸೃಷ್ಟಿಸಿದರು ಎನಿಸುತ್ತದೆ! ಇಂತಹ ವರ್ಗವೇ ಈ ಸಂಘಗಳ ಪ್ರಮುಖ ಪೋಷಕರು ಮತ್ತು ಸದಸ್ಯರು. ಸಾಮಾನ್ಯವಾಗಿ ಉನ್ನತ ಶಿಕ್ಷಣವನ್ನು ಪಡೆದು, ಉತ್ತಮ ಬುದ್ಧಿಮತ್ತೆಯನ್ನು ಹೊಂದಿ, ಅಮೇರಿಕಾ ಸೇರಿ, ಇಲ್ಲಿನ ಪ್ರಜೆಗಳಾದರೂ ತಮ್ಮ ಸುಪ್ತ ಜಾತೀಯತೆಯನ್ನು ತೊರೆಯಲಾಗದಷ್ಟು ಜಾತಿಗಳು ನಮ್ಮನ್ನು ಆವರಿಸಿಕೊಂಡಿವೆ.  ಭಾರತದಲ್ಲಿಯೂ ಕೂಡ ವಿದ್ಯಾವಂತರಾದಷ್ಟು ಜಾತಿಜಾಗೃತರಾಗುತ್ತಾರೆಯೇ ಹೊರತು ಜಾತಿಪರಿಧಿಯ ಹೊರಕ್ಕೆ ಬರುವವರು ಕಡಿಮೆಯೇ! ಇದು ಸ್ವತಂತ್ರ ಭಾರತದ ಸಾಮಾಜಿಕತೆಯ ವಿಕಾಸವೋ ವಿಕಾರವೋ, ಅಥವಾ ಭಾರತ ಸ್ವಾತಂತ್ರ್ಯಾ ನಂತರದ ಶಿಕ್ಷಣ ಕ್ರಾಂತಿಯ ಪರಿಣಾಮವೋ ಅರಿಯೇ! ಒಟ್ಟಾರೆ ಭಾರತ ಎತ್ತಲೋ ಪ್ರಗತಿಸುತ್ತಿದೆ. ಅಂತಹ ಜಾತಿ ಅಸ್ಮಿತೆಯ ಮೋಹಕ್ಕೆ ಈ ಅನಿವಾಸಿ ವರ್ಗ ಹೊರತಲ್ಲ.


ಹಲವು ಕಾಲ ಹಂಸೆಯ ಸಂಗದಲ್ಲಿದ್ದರೇನು, ಬಕ ಶುಚಿಯಾಗಬಲ್ಲುದೇ? ಗಂಗಾನದಿಯಲ್ಲಿದ್ದರೇನು, ಪಾಷಾಣ ಮೃದುವಾಗಬಲ್ಲುದೇ? ಕಲ್ಪತರುವಿನ ಸನ್ನಿಧಿಯಲ್ಲಿದ್ದರೇನು, ಒಣ ಕೊರಡು ಕೊನರಿ ಫ಼ಲವಾಗಬಲ್ಲುದೇ? ಕಾಶೀಕ್ಷೇತ್ರದಲ್ಲಿ ಒಂದು ಶುನಕವಿದ್ದರೇನು, ಅದರ ಹಾಲು ಪಂಚಾಮೃತಕ್ಕೆ ಸಲುವುದೇ? ತೀರ್ಥದಲೊಂದು ಗಾರ್ದಭನಿದ್ದರೇನು, ಕಾರಣಿಕನಾಗಬಲ್ಲುದೇ? ಖಂಡುಗ ಹಾಲೊಳಗೊಂದು ಇದ್ದಲಿಯಿದ್ದರೇನು, ಬಿಳುಹಾಗಬಲ್ಲುದೇ? ಇದ ಕಾರಣ ಕೂಡಲಸಂಗನ ಶರಣರ ಸನ್ನಿಧಿಯಲ್ಲಿ ಅಸಜ್ಜನನಿದ್ದರೇನು, ಸದ್ಭಕ್ತನಾಗಬಲ್ಲನೇ? 


ಅಮೇರಿಕಾದಲ್ಲಿದ್ದರೇನು ಭಾರತದಲ್ಲಿದ್ದರೇನು, ವಿದ್ಯೆಯಿದ್ದರೇನು ಅವಿದ್ಯೆಯಾದರೇನು, ಭಾರತೀಯ ಜಾತಿಮುಕ್ತನಾಗಬಲ್ಲನೇ?


ಆದರೆ ಈ ಮೊದಲನೇ ಹೊಚ್ಚ ಹೊಸ ಭಾರತೀಯ ವಲಸೆಗಾರರ ವರ್ಗ,ಏನೇ ಸಂಘ, ದತ್ತಿ, ಸಮ್ಮೇಳನಗಳೆಂದು ತಿಪ್ಪರಲಾಗ ಹಾಕಿದರೂ ಇವರ ಮಕ್ಕಳುಗಳ ಎರಡನೇ ಪೀಳಿಗೆ, ಇದನ್ನು ಗಂಭೀರವಾಗಿ ಪರಿಗಣಿಸದೇ "ಸಮ್ ಕಲ್ಚರಲ್ ಫ಼ೆಸ್ಟಿವಲ್ ಅಥವಾ ಫ಼್ಯಾನ್ಸಿ ಡ್ರೆಸ್ಸಿಂಗ್ ಎಂದು ಈ ಸಮಾವೇಶಗಳಲ್ಲಿ ಸಂತೋಷಿಸುತ್ತಾರೆಯೇ ಹೊರತು ಅದಕ್ಕಿಂತ ಹೆಚ್ಚಾಗಿ ಏನನ್ನೂ ಈ ಸಂಘಗಳಿಂದ ಅರ್ಥೈಸಿಕೊಳ್ಳಲಾರರು. ಈ ಮಕ್ಕಳು ಯಾವುದೇ ಜಾತಿಗಳ ಪರಿಚಯವಿಲ್ಲದೆ ಎಲ್ಲಾ ಭಾರತೀಯರನ್ನು ಒಂದೇ ಎಂದು ಪರಿಗಣಿಸುತ್ತಾರೆ. ಅಬ್ಬಬ್ಬಾ ಎಂದರೆ ಹಿಂದೂ/ಮುಸ್ಲಿಂ ಎಂದೋ, ಸಸ್ಯಹಾರೀ/ಮಾಂಸಹಾರೀ ಎಂದೋ, ಹೆಚ್ಚೆಂದರೆ ಉತ್ತರ ಭಾರತೀಯ/ದಕ್ಷಿಣ ಭಾರತೀಯ ಎಂಬಲ್ಲಿಗೆ ತಮ್ಮನ್ನು ಸೀಮಿತಗೊಳಿಸುತ್ತಾರೆಯೇ ವಿನಹಾ ಯಾವುದೇ ಜಾತಿಗಳಿಂದ ಗುರುತಿಸಲಾಗದಷ್ಟರ ಮಟ್ಟಿಗೆ ಮುಗ್ಧರಾಗಿದ್ದಾರೆ.


ಇನ್ನು ಭಾಷೆಯ ವಿಷಯ! ಮೊದಲನೇ ಪೀಳಿಗೆ ತಮ್ಮ ನವ್ಯ ಪೀಳಿಗೆಗೆ ತಮ್ಮ ಭಾಷೆಗಳನ್ನು ಕಲಿಸಲು ಏನೆಲ್ಲಾ ಪ್ರಯತ್ನ ಪಟ್ಟರೂ ಅದು ಅಳಿಸಿಹೋಗುತ್ತಿದೆಯೆಂದೇ ಹೇಳಬೇಕು.  ಇದೇಕೆ ಹೀಗೆ ಎಂದು ನನಗೂ ಅರ್ಥವಾಗಿಲ್ಲ. ಆದರೂ ಭಾರತದಲ್ಲಿ ಅನೇಕರು ಬಹುಭಾಷಾ ಪಂಡಿತರಾಗಿರುತ್ತಾರೆ. ಮನೆಮಾತು ಬೇರೆಯದೇ ಭಾಷೆಯಿದ್ದರೂ ತಾವು ವಾಸಿಸುವ ಆಯಾ ಪ್ರದೇಶದ ಪ್ರಾದೇಶಿಕ ಭಾಷೆಯನ್ನೂ ಮಾತನಾಡಬಲ್ಲವರಾಗಿರುತ್ತಾರೆ. ಬೆಂಗಳೂರು ಸೇರುವವರೆಗೆ ಕೇವಲ ಕನ್ನಡದಲ್ಲಷ್ಟೇ ನಿರರ್ಗಳವಾಗಿ ಮಾತನಾಡಲು ಬರುತ್ತಿದ್ದ ನನಗೆ, ಮೂರೇ ವರ್ಷಗಳ ಬೆಂಗಳೂರು ಕೃಪೆಯಿಂದ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಕನ್ನಡದಷ್ಟೇ ನಿರರ್ಗಳವಾಗಿ ಮಾತನಾಡುವುದು ಸಾಧ್ಯವಾಯಿತು.  ಇಲ್ಲಂತೂ ಕನ್ನಡದವರು, ತೆಲುಗರು, ತಮಿಳರು ನನ್ನ ಸ್ವಲ್ಪ ವಿಚಿತ್ರ ಎನ್ನುವಂತಹ ರವಿ ಹಂಜ್ ಹೆಸರಿನ ದೆಸೆಯಿಂದಾಗಿ ನನ್ನ ಹಿನ್ನೆಲೆಯನ್ನು ಗುರುತಿಸಲಾಗದೆ, ನನ್ನನ್ನು ತಮ್ಮ ತಮ್ಮ ರಾಜ್ಯಗಳಲ್ಲಿ ಸೆಟ್ಲ್ ಆಗಿರುವ "ಬಡ್ಡಿ ಲೇವಾದೇವಿಯ ಮಾರ್ವಾಡಿಯವನಿರಬಹುದು" ಎಂದುಕೊಳ್ಳುತ್ತಾರೆ.  ಇನ್ನು ಉತ್ತರ ಭಾರತೀಯರೋ ನನ್ನನ್ನು ತಮ್ಮವನೆಂದೇ ಪರಿಗಣಿಸುತ್ತಾರೆ.  ಒಟ್ಟಾರೆ ನನ್ನ ಹೆಸರಿನ ದೆಸೆಯಿಂದಂತೂ ನಾನು ಎಲ್ಲರಿಗೂ ಸಲ್ಲುವ ಭಾರತೀಯನಾಗಿದ್ದೇನೆ! ನನ್ನಂತೆಯೇ ಹೆಸರುಗಳನ್ನು ತುಂಡರಿಸಿಕೊಂಡಿರುವ ಎಲ್ಲೆಲ್ಲಿಯೂ ಸಲ್ಲುವ ಅನೇಕ ಭಾರತೀಯರಿದ್ದಾರೆ.  ಕೆಲವರಂತೂ ತಮ್ಮ ಹೆಸರನ್ನು ಆಂಗ್ಲಮಯ ಕೂಡ ಮಾಡಿಕೊಂಡು ಒಂದು ಹೆಜ್ಜೆ ಮುಂದಿದ್ದಾರೆ.


ಇರಲಿ, ಆದರೆ ಇಲ್ಲಿನ ಬಹುತೇಕ ಭಾರತೀಯ ಮೂಲದ ಮಕ್ಕಳಿಗೆ ಮಾತ್ರ ಇಂಗ್ಲಿಷ್ ಬಿಟ್ಟರೆ ತಮ್ಮ ಮನೆಮಾತಾಗಲೀ ಇನ್ಯಾವ ಭಾಷೆಯಾಗಲಿ ಕಲಿತರೂ ಮಾತನಾಡಲಾಗದಷ್ಟು ಪರಿಣಿತಿ ಬರುವುದೇ ಇಲ್ಲ.  ಇದು ಅಮೇರಿಕಾದ ಗಾಳಿ, ನೀರಿನ ಪರಿಣಾಮವೆಂದೇ ನನಗನಿಸುತ್ತದೆ.  ಭಾಷಾ ಪಂಡಿತ ಪೋಷಕರಿದ್ದರೂ ಅಷ್ಟೆ, ಭಾಷಾ ತರಗತಿಗಳಿಗೆ ಕಳುಹಿಸಿದರೂ ಅಷ್ಟೆ. ಈ ಮಕ್ಕಳು ತಮ್ಮ ಮಾತೃಭಾಷೆಯನ್ನಷ್ಟೇ ಮಾತನಾಡುವವರಾಗಿದ್ದರೂ ಶಾಲೆಗೆ ಸೇರಿದೊಡನೆ ತಮ್ಮ ಮಾತೃಭಾಷೆಯನ್ನು ಕೆಲವೇ ತಿಂಗಳುಗಳಲ್ಲಿ ಮರೆತುಬಿಡುತ್ತಾರೆ. ನಂತರ ಅದು ಅಳಿಸಿಯೇ ಹೋಗುತ್ತದೆ. ಇವರು ತಮ್ಮ ಮಾತೃಭಾಷೆಯಲ್ಲಿ ಓದಲು/ಬರೆಯಲು ಕಲಿತರೂ ಅದು ಕೇವಲ ಓದಲು ಮತ್ತು ಬರೆಯುವಲ್ಲಿಗೆ ಸೀಮಿತವಾಗುತ್ತದಲ್ಲದೇ, ಅದರ ಅರ್ಥವೇ ಇವರಿಗೆ ಗೊತ್ತಾಗುವುದಿಲ್ಲ. ಅವರ ಮನೆಗಳಲ್ಲಿ ಇಂಗ್ಲಿಷ್ ಮಾತನಾಡದೇ ಅವರವರ ಮನೆಮಾತಿನಲ್ಲಿಯೇ ಅವರ ಪೋಷಕರು ಮಾತನಾಡುತ್ತಿದ್ದರೂ ಕೂಡ ಅವರುಗಳ ಮಾತೃಭಾಷೆ ಈ ಮಕ್ಕಳಿಗೆ ಅಷ್ಟಕ್ಕಷ್ಟೇ. ಇದು ಏಕೆ ಹೀಗೆಂದು ನನಗೆ ಇದುವರೆಗೂ ಅರ್ಥವಾಗದೇ ಒಂದು ರೀತಿಯ ಚಿದಂಬರ ರಹಸ್ಯವೇ ಆಗಿದೆ.


ಎರಡನೇ ಪೀಳಿಗೆಯ ವಿಷಯ ಹೀಗಿರುವಾಗ, ಮೊದಲ ಪೀಳಿಗೆಯ ಹಲವರು ಕನ್ನಡ ಪೀಠ, ತಮಿಳು ಪೀಠ, ತೆಲುಗು ಪೀಠ....ಇನ್ನಿತರೆ ಭಾಷೆಗಳ ಪೀಠಗಳನ್ನು ಇಲ್ಲಿನ ಯಾವುದಾದರೂ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲು ಪ್ರಯತ್ನಪಡುತ್ತಿರುತ್ತಾರೆ.  ಮನೆಯಲ್ಲೇ ತಮ್ಮ ಮಕ್ಕಳಿಗೆ ತಮ್ಮ ಮನೆಮಾತು ಕಲಿಸಲಾಗದ ಇವರು ಪೀಠಗಳನ್ನು ಸ್ಥಾಪಿಸಿ ಅದ್ಯಾರಿಗೆ ಭಾರತೀಯ ಭಾಷೆಗಳನ್ನು ಕಲಿಸುವರೋ ನಾನರಿಯೆ!  ಬಹುಶಃ ಇದು ತಾಯ್ನಾಡಿನ ಪ್ರಶಸ್ತಿಗಳ ಹಪಹಪಿಯೋ ಅಥವಾ ಪ್ರಚಾರಪ್ರಿಯತೆಯ ತೀಟೆಯೋ ಇರಬಹುದು. ಈ ಭಾಷಾ ಪೀಠ ಸ್ಥಾಪನೆಯ ಹುಚ್ಚು ಈಗ ಜಾತಿ ದೇವಸ್ಥಾನಗಳನ್ನು ಸ್ಥಾಪಿಸುವತ್ತ ಚಿತ್ತ ನೆಟ್ಟಿಸಿದೆ. ಇದಕ್ಕೆ ಇಲ್ಲಿನವರಿಗಿಂತ ಮಾತೃಭೂಮಿ ರಾಜಕಾರಣದ ಕೈವಾಡ ಹೆಚ್ಚಿದೆ. ಇದಕ್ಕೆ ಮಾತೃಭೂಮಿಯಲ್ಲಿ ಏರಿದ ರಿಯಲ್ ಎಸ್ಟೇಟ್ ಸುಗ್ಗಿಯೇ ಪ್ರಮುಖ ಕಾರಣ. "ಬರಬಾರದವನಿಗೆ ಬಂದರೆ ರಾತ್ರಿ ಹೊತ್ತು ಕೊಡೆ ಹಿಡಿದಿದ್ದ" ಎಂಬಂತೆ ಇಲ್ಲಿ ಒಂದು ಸ್ಥಾಪನೆಯನ್ನು ಹಿಡಿದಿದ್ದಾರೆ.


ಇರಲಿ, ಈ ಮಾತೃಭಾಷೆ ಬಾರದು ಎಂಬ ಕೊರತೆಯೊಂದನ್ನು ಬಿಟ್ಟರೆ, ಈ ಮಕ್ಕಳು ಭಾರತೀಯರೆಲ್ಲರೂ ಹೆಮ್ಮೆ ಪಡಬೇಕಾದಂತಹ ಪೀಳಿಗೆ ಎಂದೇ ಹೇಳಬಹುದು. ಇಲ್ಲಿನ ಪರಿಸರ, ಶಿಕ್ಷಣ, ಮೌಲ್ಯಗಳನ್ನು (ಭಾರತದಲ್ಲಿ ಈ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಯ ಅಪಪ್ರಚಾರವೇ ಇದ್ದು, ಇಲ್ಲಿನ ಅಸಲೀ ವಿಷಯಗಳ ನೈಜ ತಿಳುವಳಿಕೆ ಅಷ್ಟಾಗಿ ಇಲ್ಲ) ನೋಡುತ್ತ, ಕೇಳುತ್ತ ಬೆಳೆಯುವ ಈ ಮಕ್ಕಳು ಇದ್ದುದರಲ್ಲಿ ಅತ್ಯಂತ ಬುದ್ಧಿವಂತರೂ, ವಿವೇಚನೆಯಿರುವವರೂ ಮತ್ತು ಪ್ರಾಮಾಣಿಕರೂ ಆಗಿರುತ್ತಾರೆ.  ಇವರ ಪೋಷಕರು ಏನೇ ಸಂಘ/ಸಮ್ಮೇಳನಗಳನ್ನು ಮಾಡಿ,ಸಂಸ್ಕೃತಿಯ ನೆಪವಾಗಿ ತಮ್ಮ ಜಾತಿಯ ಅರಿವು ಮೂಡಿಸುವ ಪ್ರಯತ್ನಗಳು ಎಳ್ಳಷ್ಟೂ ಫಲಪ್ರದವಾಗಿರುವುದನ್ನು ನಾನಂತೂ ನೋಡಿಲ್ಲ.


ನನ್ನ ಕಂಪೆನಿ ಪರವಾಗಿ ಸಾಕಷ್ಟು ಕ್ಯಾಂಪಸ್ ಇಂಟರ್ವ್ಯೂಗಳನ್ನು ಮಾಡಿ, ಈ ರೀತಿಯ ಭಾರತೀಯ ಮೂಲದ ಎರಡನೇ ಪೀಳಿಗೆಯ ಅನೇಕರನ್ನು ನಮ್ಮ ಕಂಪೆನಿಗೆ ಸೇರಿಸಿಕೊಂಡಿದ್ದೇನೆ. ಹಾಗೆಯೇ ಅವರೊಂದಿಗೆ ಕೆಲಸವನ್ನೂ ಮಾಡಿದ್ದೇನೆ. ಆ ಒಂದು ಅನುಭವವಿರುವುದರಿಂದ ಮೇಲಿನ ಮಾತುಗಳನ್ನು ನಾನು ದೃಢವಾಗಿ ಹೇಳಬಲ್ಲೆ. ಅಷ್ಟೇ ಅಲ್ಲ, ಇದೇ ರೀತಿ ಭಾರತದಲ್ಲಿಯೂ ನಮ್ಮ ಯುವಜನತೆಗೆ ಜಾತಿ ಪರಿಧಿಯ ಪರಿಮಿತಿಗೆ ಸಿಗದಂತಹ ಮುಕ್ತ ಪರಿಸರವಿರುವಂತಿದ್ದರೆ? ಎಂದು ಇವರನ್ನು ನೋಡಿದಾಗೆಲ್ಲ ಅಂದುಕೊಳ್ಳುತ್ತೇನೆ.


ಭಾರತದಲ್ಲಿಯೇ ಹದಿಹರೆಯದವರು ಏನೇನೋ ಸಮಸ್ಯೆಗಳಿಗೆ ಸಿಲುಕುತ್ತಿರುವಾಗ ಅಮೇರಿಕಾದ ಸ್ವಚ್ಛಂದ ವಾತಾವರಣದಲ್ಲಿ ಈ ಯುವಕರು ಹದಿಹರೆಯದ ಸಮಸ್ಯೆಗಳಿಗೆ ಸಿಲುಕದೇ ಇರಲು ಹೇಗೆ ಸಾಧ್ಯ? ಇಲ್ಲದ್ದನ್ನೆಲ್ಲಾ ಹೇಳಬೇಡಿ ಎನ್ನುವಿರಾ?  ನಾನು ಗಮನಿಸಿದಂತೆ, ಈ ಸಮಸ್ಯೆ ಭಾರತೀಯ ಮೂಲದವರನ್ನು ಅಷ್ಟಾಗಿ ಕಾಡುತ್ತಿಲ್ಲವೆಂದೇ ಅನಿಸುತ್ತದೆ. ಈ ನವಪೀಳಿಗೆ ತಮ್ಮ ಅಲ್ಪಸಂಖ್ಯಾತತೆಯ ಕಾರಣದಿಂದಲೋ ಏನೋ ಒಂದು ರೀತಿಯಲ್ಲಿ ಸದಾ ಜಾಗೃತರಾಗಿರುತ್ತಾರೆ. ಯಾರಾದರೂ ತಕ್ಷಣಕ್ಕೆ ಭಾರತೀಯರೆಂದು ಗುರುತಿಸಬಹುದಾದ ದೈಹಿಕ ಚಹರೆಯಿಂದಾಗಿ ಈ ರೀತಿಯ ಜಾಗೃತಿ ಬೆಳೆದು ಬಂದಿದೆಯೆಂದೇ ನನಗನಿಸುತ್ತದೆ! ಈ ಜಾಗೃತಿಯ ಪರಿಣಾಮದಿಂದಲೇ ಏನೋ ಅಷ್ಟಾಗಿ ಯುವ ಸಮಸ್ಯೆಗಳಿಗೆ ಸಿಲುಕದೇ ತಮ್ಮ ಹದಿಹರೆಯದ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸುತ್ತ ಬಹುಪಾಲು ಯುವಜನತೆ ಯಶಸ್ವಿಯಾಗಿದ್ದಾರೆ ಮತ್ತು ಆಗುತ್ತಿದ್ದಾರೆ ಎಂದೇ ಅನಿಸುತ್ತದೆ.


ಪ್ರತ್ಯಕ್ಷವಾಗಿ ನೋಡಿದ್ದರೂ ಪರಾಮರ್ಶಿಸಿ ನೋಡು ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ಈ ಮಕ್ಕಳು ಯಾವುದೇ ತತ್ವವನ್ನೋ, ವಿಚಾರವನ್ನೋ ಹೇಳಿದರೆ ಅದಕ್ಕೆ ನೂರೆಂಟು ಪ್ರಶ್ನೆಗಳನ್ನು ಹಾಕಿ, ಅರಿತು ನಂತರವೇ ಒಪ್ಪಿಕೊಳ್ಳುವಂತಹ ಶಾಲಾ ವಾತಾವರಣದಲ್ಲಿ ಬೆಳೆದಿರುವುದರಿಂದಲೂ ಮತ್ತು ಅವರುಗಳ ಪೋಷಕರು ತಮ್ಮ ಜಾತಿ/ಧರ್ಮಗಳ ಆಚರಣೆಗಳ ಬಗ್ಗೆ ತಿಳಿಸಿ, ಅವರುಗಳ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಡುವ ಶಕ್ತಿಯನ್ನು ಹೊಂದಿರದ ಕಾರಣದಿಂದಲೂ, ಮತ್ತು ಪೋಷಕರು ಭಾರತದಲ್ಲಿಯ ಗದರಿಸುವಿಕೆಯ ರೀತಿ "ತಲೆಪ್ರತಿಷ್ಠೆ ಮಾಡಬೇಡ ಹೇಳಿದ್ದಷ್ಟನ್ನು ಮಾಡು" ಎಂದು ಇಲ್ಲಿನ ಪರಿಸರದಲ್ಲಿ ಹೇಳಲಾಗದ ಪರಿಣಾಮವಾಗಿಯೂ, ಈ ಯುವಶಕ್ತಿ ಜಾತಿ, ಅಂಧಶ್ರದ್ಧೆಗಳ ಬಗ್ಗೆ ಅಷ್ಟೊಂದು ಮಾಹಿತಿಯನ್ನು ಪಡೆದಿಲ್ಲ. 


ಒಟ್ಟಾರೆ ಈ ಭಾರತೀಯ ಅಮೇರಿಕನ್ ಯುವ ಪೀಳಿಗೆ, "ಯಾತರ ಹೂವೇನು? ನಾತವಿದ್ದರೆ ಸಾಕು, ಜಾತಿಯಲಿ ಜಾತಿಯೆನಬೇಡ ಶಿವನೊಲಿದಾತನೇ ಜಾತ ಸರ್ವಜ್ಞ" ಎಂಬಂತೆ ಜಾತಿಪರಿಧಿಯ ಪರಿವೆ ಇಲ್ಲದೆ ಒಟ್ಟಿನಲ್ಲಿ ಭಾರತೀಯ ಅಮೇರಿಕನ್ ಆಗಿದ್ದಾರೆ. ಇದೇ ರೀತಿ ಭಾರತದ ನಮ್ಮ ಸಮಾಜದಲ್ಲಿಯೂ "ಎಲುವಿನಾ ಕಾಯಕ್ಕೆ ಸಲೆ ಚರ್ಮದ ಹೊದಿಕೆ ಮಲಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ" ಎಂಬಂತಹ ಸ್ವಚ್ಛ ವಾತಾವರಣವಿದ್ದಿದ್ದರೆ ಭಾರತದಲ್ಲಿಯೂ ಕೂಡ ಇಂದು ಅಮೇರಿಕನ್ ಭಾರತೀಯರಿರುತ್ತಿದ್ದರೋ ಏನೋ!


ಹಾಗಾಗಿಯೇ ಮೊದಲನೇ ಪೀಳಿಗೆಯ ಪೋಷಕರು ಏನೇ ತಿಪ್ಪರಲಾಗ ಹಾಕಿದರೂ, ಅವರ ಮುಂದಿನ ಪೀಳಿಗೆ ಒಕ್ಕಲಿಂಗವಾಗಿ ಒಂದಾಗಿದೆ. ಈ ಪೀಳಿಗೆಯೇ ನಿಜಾರ್ಥದ ವಿಶ್ವಮಾನವ ಪ್ರಭೆಯನ್ನು ಹೊಂದಿದೆ. ಕರ್ನಾಟಕದಲ್ಲಿ ಈ ರೀತಿಯ ಜಾತಿ-ಲಿಂಗೈಕ್ಯ ಸಾಧ್ಯವೇ?


No comments: