ಅದು 1996ರ ಕಾಲ. ಆಗ ನಾನು ಸ್ಯಾನ್ ಫ್ರಾನ್ಸಿಸ್ಕೊ ಬಳಿಯಿದ್ದ ವಾಲ್ನಟ್ ಕ್ರೀಕ್ ಎಂಬ ಊರಿನಲ್ಲಿದ್ದೆ. ಕೆಲಸಕ್ಕೆ ಹೋಗಲು ರೈಲು ಬಸ್ಸು ಇದ್ದಿದ್ದಲ್ಲದೆ ವಾಲ್ನಟ್ ಕ್ರೀಕಿನಲ್ಲಿ ಸಹ ಉತ್ತಮ ಸಾರಿಗೆ ವ್ಯವಸ್ಥೆಯಿದ್ದುದರಿಂದ ಇನ್ನೂ ಕಾರು ಕೊಂಡಿರಲಿಲ್ಲ. ಹೀಗಿದ್ದಾಗ ಸ್ಯಾನ್ ಫ್ರಾನ್ಸಿಸ್ಕೊ ಪ್ರಾಜೆಕ್ಟ್ ಮುಗಿದು ಫ್ರೀಮಾಂಟ್ ಎಂಬಲ್ಲಿ ಪ್ರಾಜೆಕ್ಟ್ ಆರಂಭಿಸಿದ್ದೆ. ವಾಲ್ನಟ್ ಕ್ರೀಕಿನ ಅಪಾರ್ಟ್ಮೆಂಟ್ ಹತ್ತಿರವೇ ಇದ್ದ ಸ್ಟೇಷನ್ನಿನಲ್ಲಿ BART ರೈಲು ಹತ್ತಿ ಫ್ರೀಮಾಂಟಿನಲ್ಲಿಳಿದು ಅಲ್ಲಿಂದ ಬಸ್ ಹತ್ತಿದರೆ ಆಫೀಸ್ ಎದುರೇ ಇಳಿಯುತ್ತಿದ್ದೆ.
ಆ ಬಸ್ಸಿನಲ್ಲಿ ಒಬ್ಬ ನಲವತ್ತರ ಆಸುಪಾಸಿನ ಭಾರತೀಯ ಮೂಲದ ವ್ಯಕ್ತಿ ಸಹ ಬರುತ್ತಿದ್ದ. ಒಮ್ಮೆ ನನ್ನೆಡೆಗೆ ಬಂದು ಅಮೆರಿಕನ್ ಆಕ್ಸೆಂಟಿನಲ್ಲಿ "ಯೌ ಫ್ರಮ್ ಇಂಡಿಯಾ" ಎಂದ. ಹೌದೆಂದು ತಲೆಯಾಡಿಸಿದೆ.
"ಐ ಯಾಮ್ ಯೂಸುಫ್. ಯೂ ನೋ ಡಿಲಿಪ್ ಕುಮಾsರ್?" ಎಂದ.
ನಾನು ಯಾವ ದಿಲೀಪನೋ ಎಂದುಕೊಂಡು "ನೋ" ಎಂದೆ.
"ಯೂ ಡೋಂಟ್ ನೋ ಡಿಲಿಪ್ ಕುಮಾsರ್! ದಿ ಗ್ರೇಟ್ ಶಹೇನ್ ಷಾ, ಸೂಪರ್ ಸ್ಟಾರ್!" ಎಂದ.
"ಓಹ್ ಯೆಸ್, ಐ ನೋ ಹಿಮ್. ಐ ವಾಸ್ ಥಿಂಕಿಂಗ್ ಸಮ್ ಒನ್ ಯೂ ಅಸಕ್ಡ್ ಫ್ರಮ್ ಹಿಯರ್" ಎಂದೆ.
ಅದಕ್ಕೆ ಅವನು "ಹಿ ಇಸ್ ಮೈ ಅಂಕಲ್. ಹಿಮ್ ಅಂಡ್ ಸಾಯಿರಾ ಆಂಟಿ ವಿಸಿಟ್ಸ್ ಅಸ್ ಆ ಲಾಟ್ ಯೂ ನೋ!" ಎಂದ.
ಅವನನ್ನು ಕಿಂಚಿತ್ತೂ ಅನುಮಾನಿಸದೆ ನಾನು ವ್ಹಾಹ್ ನನಗೂ ಒಬ್ಬ ಸೂಪರ್ ಸ್ಟಾರ್ ಸಂಬಂಧಿ ಪರಿಚಿತನಾದ ಎಂದು ನಾನೇ ದಿಲೀಪ್ ಕುಮಾರ್ ಸಾಯಿರಾ ಭಾನು ನೆಂಟನೆಂದುಕೊಂಡು ಬೀಗಿದೆ. ಅದನ್ನೇ ಮನೆಗೆ ಬಂದು ಹೇಳಿಕೊಂಡೆ ಸಹ. ಎಷ್ಟೇ ಆಗಲಿ ಅಮೆರಿಕಾ land of opportunity ಅಲ್ಲವೇ! ಅಂತಹ ಯಾವುದೋ ಅವಕಾಶ ನನಗೂ ಸಿಕ್ಕೀತೆಂದು ಹಿರಿಹಿರಿ ಹಿಗ್ಗಿದೆ.
ಅದಲ್ಲದೆ ಅದೇ ಸ್ಟೇಷನ್ನಿನಲ್ಲಿ ನನಗೆ ಹಾರನಹಳ್ಳಿ ರಾಮಸ್ವಾಮಿಯವರೂ ಕೆಲ ದಿನಗಳ ಹಿಂದಷ್ಟೇ ಸಿಕ್ಕಿದ್ದರು. ಪಂಚೆ ಜುಬ್ಬಾದಲ್ಲಿ ಅವರನ್ನು ನೋಡಿದ್ದ ನನಗೆ ಪ್ಯಾಂಟು ಶರ್ಟಿನ ವೇಷದಲ್ಲಿದ್ದ ಅವರ ಗುರುತು ಸಿಕ್ಕಿರಲಿಲ್ಲ. ಅವರೇ ನನ್ನನ್ನು ಎಲ್ಲೋ ನೋಡಿದ ಹಾಗಿದೆ ಎಂದರು. ನಾನು ಹಾಗೆಯೇ ಎನ್ನುತ್ತಾ "ಓಹ್ ನೀವು ಹಾರನಹಳ್ಳಿ ರಾಮಸ್ವಾಮಿಗಳಲ್ಲವೇ!" ಎಂದು ಗುರುತು ಹಿಡಿದು ಮಾತನಾಡಿಸಿದ್ದೆ. ಅವರೂ ಸಹ "ಓಹ್ ಗಿರಿಜಮ್ಮರ ತಮ್ಮನ ಮಗ ಅಲ್ವೇ" ಎಂದು ಗುರುತಿಸಿದರು. ಅಲ್ಲಿ ಕೇವಲ ಯಾಂತ್ರೀಕೃತ ಟಿಕೆಟ್ ಮಷಿನ್ ಇದ್ದುದರಿಂದ ಸರಿಯಾದ ಚಿಲ್ಲರೆ ಬೇಕಿತ್ತು. ಚಿಲ್ಲರೆ ಇಲ್ಲದ ಗಟ್ಟಿ ಕುಳ ರಾಮಸ್ವಾಮಿಯವರಿಗೆ ಚಿಲ್ಲರೆ ಕುಳವಾದ ನಾನು ನನ್ನ ಬಳಿ ಇದ್ದ ಇನ್ನೊಂದು ಟಿಕೆಟ್ ಕೊಟ್ಟಿದ್ದೆ. ಅದನ್ನು ಅವರು ಭಾರತಕ್ಕೆ ವಾಪಸ್ ಹೋಗಿ ನಮ್ಮತ್ತೆ ಕುಟುಂಬಕ್ಕೆಲ್ಲಾ ಹೆಮ್ಮೆಯಿಂದ ಹೇಳಿಕೊಂಡಿದ್ದರು.
ಆ ರೂಟಿನಲ್ಲಿ ಒಂದು ಬುದ್ಧಿಮಾಂದ್ಯರ ಶಾಲೆ ಸಹ ಇದ್ದಿತು. ಆ ಶಾಲಾ ವಿದ್ಯಾರ್ಥಿಗಳು ಸಹ ಬಸ್ಸಿನಲ್ಲಿ ಸ್ಟೇಷನ್ನಿನಿಂದ ಶಾಲೆಯವರೆಗೆ ಬಸ್ಸು ಹತ್ತುತ್ತಿದ್ದರು. ಅವರೆಲ್ಲರೂ ಹದಿನಾರು ವರ್ಷಕ್ಕೂ ಮೇಲ್ಪಟ್ಟ ವಯಸ್ಸಿನವರು. ಅದು ಶಾಲೆಯೊ ಅಥವಾ ಪುನರ್ವಸತಿ ಕೇಂದ್ರವೋ ಇರಬೇಕು. ಹಾಗಾಗಿ ಎಲ್ಲಾ ಹದಿನಾರು ವಯಸ್ಸಿನ ಮೇಲಿದ್ದವರೇ ಆಗಿದ್ದರು. ಅವರೆಲ್ಲರೂ ಅವರದೇ ಪರಿಭಾಷೆಯಲ್ಲಿ ಹರಟುತ್ತಿದ್ದರು. ಬಸ್ಸಿಗೆ ಕಾಯುತ್ತ ನಿಂತಿರುವಾಗ ಅವರಲ್ಲಿನ ಪ್ರೇಮಿಗಳು ಪರಸ್ಪರ ಚುಂಬಿಸುವುದು ಸಹ ನಡೆಯುತ್ತಿತ್ತು. ಆಗೆಲ್ಲ ಆ ದಿಲೀಪ್ ಕುಮಾರ್ ಪುತ್ರ ತನ್ನ ಅಮೆರಿಕನ್ ಆಕ್ಸೆಂಟಿನಲ್ಲಿ ನನ್ನೆಡೆ ತಿರುಗಿ "ಪಾಗಲ್ಸ್" ಎನ್ನುತ್ತಿದ್ದ.
ಹಾಗೆಯೇ ಈ ಫ್ರೀಮಾಂಟ್ ಸ್ಟೇಷನ್ನಿನ ರೆಸ್ಟ್ ರೂಮಿನ ಗೋಡೆಯ ಮೇಲೆ ಸಹ ಸಾಕಷ್ಟು ಟಾಯ್ಲೆಟ್ ಸಾಹಿತ್ಯವಿತ್ತು. ಕುತೂಹಲದಿಂದ ಓದಿದರೆ ಅಮೆರಿಕನ್ ಬೈಗುಳಗಳ ನಡುವೆ ಹಿಂಗ್ಲಿಷ್ (ಇಂಗ್ಲೀಷಿನಲ್ಲಿ ಬರೆಯುವ ಹಿಂದಿ) ಪದಗಳು ಸಹ ಇದ್ದವು. ಅದರಲ್ಲೂ ಪಂಜಾಬಿ ಎನಿಸುವಂತಹ ಪದಗಳು. ಎಲಾ ಇವನ! ಇಲ್ಯಾವ ಸರ್ದಾರ್ ಜಿ ಬಂದು ಬರೆದಿದ್ದನಪ್ಪ ಎನಿಸಿ ಆಶ್ಚರ್ಯವಾಗಿತ್ತು.
ಒಮ್ಮೆ ನಾನು ರೆಸ್ಟ್ ರೂಮ್ ಒಳ ಹೋಗುತ್ತಿದ್ದಂತೆಯೇ ಟಾಯ್ಲೆಟ್ಟಿನಿಂದ ಯೂಸುಫ್ ಹಾಡಿಕೊಳ್ಳುತ್ತಿದ್ದಂತೆ ದನಿ ಕೇಳಿಸಿತು. ನನಗೆ ಏನೋ ಒಂದು ರೀತಿಯ ಅನುಮಾನ ಮೂಡಿತು. ಟಾಯ್ಲೆಟ್ಟಿನಿಂದ ಹೊರಬಂದ ಯೂಸುಫ್ ನನ್ನನ್ನು ಕಂಡು ಏಕೋ ವಿಚಲಿತನಾದಂತೆ ಕಂಡ. ನಾನು ಹಾಯ್ ಎನ್ನುತ್ತಾ ಅದೇ ಟಾಯ್ಲೆಟ್ ಹೊಕ್ಕು ಕುಳಿತೆ. ಎದುರಿಗೆ ಆಗಷ್ಟೇ ಬರೆದ ಯೂಸುಫ್ ಎಂಬ ಹೆಸರು ಕಣ್ಣಿಗೆ ಬಿದ್ದಿತು!
ಆ ಎಲ್ಲಾ ಹಿಂಗ್ಲಿಷ್ ಟಾಯ್ಲೆಟ್ ಸಾಹಿತ್ಯ ಯುಸುಫನದೇ ಆಗಿತ್ತು! ಸೆಲೆಬ್ರಿಟಿಗಳಿಗೂ ಟಾಯ್ಲೆಟ್ ಸಾಹಿತ್ಯದ ಗೀಳೇ ಎಂದು ಆಶ್ಚರ್ಯಗೊಂಡು ದಿಲೀಪ್ ಕುಮಾರನ ಬಗ್ಗೆಯೇ ಕನಿಕರ ಮೂಡಿತು. ಆ ಸೆಲೆಬ್ರಿಟಿ ಸಂಬಂಧಿ ಎಲ್ಲಿ ಇಳಿಯುತ್ತಾನೆಂದು ಗಮನಿಸಿರಲಿಲ್ಲ. ಈ ದಿನ ಅವನ ಕುರಿತು ಜಾಸೂಸಿ ಮಾಡಲೇಬೇಕೆಂದು ದಿಲೀಪ್ ಕುಮಾರ್ ಮಾದರಿಯಲ್ಲೇ ಅವನ ಚಲನವಲನ ಗಮನಿಸಲು ಅವನ ಬಳಿಯೇ ಕುಳಿತೆ. ಯೂಸುಫ್ ನಾನು ಅಷ್ಟು ಹತ್ತಿರ ಕುಳಿತದ್ದು ಕಂಡು ಇನ್ನಷ್ಟು ವಿಚಲಿತನಾದ. ಅವನ ಮುಖದಲ್ಲಿ ಏನೋ ಆತಂಕ!
ಕಡೆಗೆ ಬುದ್ಧಿಮಾಂದ್ಯರ ಕೇಂದ್ರದ ನಿಲುಗಡೆ ಬಂದಿತು. ಅಲ್ಲಿನ ವಿದ್ಯಾರ್ಥಿಗಳು ಎಲ್ಲರೂ ಇಳಿಯತೊಡಗಿದರು. ಕಡೆಗೆ ಇಳಿಯುತ್ತಿದ್ದ ವಿದ್ಯಾರ್ಥಿ "hey Yosuf, aren't you going to get down?" ಎಂದ. ಯೂಸುಫ್ ನನ್ನೆಡೆಗೆ "ಸಿಕ್ಕಿಹಾಕಿಕೊಂಡೆ ಪಾಗಲ್" ಎನ್ನುವ ದೃಷ್ಟಿ ಬೀರಿ ಇಳಿದುಹೋದ.
ನನ್ನನ್ನು ಬಕರಾ ಮಾಡಿದ್ದ ಅತಿ ಬುದ್ದಿವಂತ ಯೂಸುಫನನ್ನು ಅವನ ಮನೆಯವರು ಅತಿ ಬುದ್ಧಿವಂತಿಕೆಯಿಂದ ಇವನ ಕಾಟವನ್ನು ತಡೆಯಲಾಗದೆಲೆಯೋ, ವ್ಯವಸ್ಥೆಯ ಸವಲತ್ತು ಪಡೆಯಲೋ ಏನೋ "ಬುದ್ಧಿಮಾಂದ್ಯ" ಶಾಲೆಗೆ ಸೇರಿಸಿ ಕೈ ತೊಳೆದುಕೊಂಡಿದ್ದರು.
ಸೂಪರ್ ಸ್ಟಾರ್ ದಿಲೀಪ್ ಕುಮಾರ್ ಅವರ ನಿರ್ಗಮನ ಇದೆಲ್ಲವನ್ನೂ ನೆನಪಿಸಿತು.
ವಿ.ಸೂ: ಬುದ್ಧಿಮಾಂದ್ಯ ಎಂಬುದನ್ನು ವಿಶೇಷ ಚೇತನ ಎಂದು ಓದಿಕೊಳ್ಳಿ. ನನಗೆ ವಿಶೇಷ ಚೇತನ ಎಂದರೆ ಯುಸುಫನಂತಹ ವಿಶೇಷ ಚೇತನರೇ ನೆನಪಿಗೆ ಬರುತ್ತಾರೆ.
No comments:
Post a Comment