ಎಲ್ಲಾ ತಲೆಮಾರು ದೂರುವುದು ಹಿಂದಿನ ತೇರು!

 ಇದು ಒಂದು ಖ್ಯಾತ ಸಾಫ್ಟ್ ರಾಕ್ ಹಾಡಿನ ಅನುವಾದ. ವಿದೇಶಿ ಸಂಗೀತಗಳಾದ ರಾಕ್ ಎಂದರೆ ಅಬ್ಬರ, ಪಾಪ್ ಎಂದರೆ ಪಾಪಿ ಸಂಗೀತ ಎನ್ನುವ ಸಾಮಾನ್ಯ ಪೂರ್ವಾಗ್ರಹವನ್ನು ಕಳೆಯಲು ಇದು ಸಹಕಾರಿಯಾಗಬಹುದು ಎಂದುಕೊಂಡಿದ್ದೇನೆ.ಮೂಲ ಯಾವುದೆಂದು ಹೇಳಿ ನೋಡೋಣ.


ಎಲ್ಲಾ ತಲೆಮಾರು

ದೂರುವುದು ಹಿಂದಿನಾ ತೇರು.

ಬರುವವು ಅವರೆಲ್ಲಾ ಹತಾಶೆಗಳು

ತಟ್ಟುತ್ತ ನಮ್ಮ ಡೋರು!


ಅಪ್ಪ ಕವುಚಿದ್ದ ಕೌದಿ

ನಾನದರೊಳಗೆ ಬಂಧಿ!

ಹೌದು ನಾನೇ ಅವನೆಲ್ಲ ನಿರೀಕ್ಷೆ, 

ಆತಂಕಗಳ ಖೈದಿ.

ಹೇಳಲಾಗಲಿಲ್ಲ ಹೀಗೆಂದು

ಬದುಕಿದ್ದಾಗ ಅವನಂದು!


ಎಲ್ಲಾ ತಲೆಮಾರು

ದೂರುವುದು ಹಿಂದಿನಾ ತೇರು.

ಬದುಕಿದ್ದ ವರ್ಷಗಳಲ್ಲೆಲ್ಲ

ಹೇಳಲಾಗಲಿಲ್ಲ ಹೇಳಬೇಕಾದುದನೆಲ್ಲ!


ಮುದುಡಿದ ಕಾಗದಗಳು

ಅದರೊಳಗಿನ ಅಸ್ಪಷ್ಟ ಅನಿಸಿಕೆಗಳು

ಮತ್ತು ಅರೆಬರೆ ಸಂಭಾಷಣೆಗಳು...

ಉಳಿದಿರುವುದಿಷ್ಟೇ ಇಂದಿನ ದಿನಗಳು!


ಅವನು ಹೇಳುತಿದ್ದ, ಅರಿಯಲಾರೆ ನೀನೆಂದೂ.

ನಾನು ಹೇಳುತ್ತಿದ್ದೆ, ಕೇಳಿಸಿಕೊಳ್ಳಲಾರೆ ನೀನೆಂದೂ.

ಮೂಡಲಿಲ್ಲ ಒಮ್ಮತ ನಮ್ಮಲ್ಲಿ ಎಂದೆಂದೂ!

ಅರಿಯಲಿಲ್ಲ ನಾವು ಅಭಿಮತ ಬೇರೆಂದೂ,

ತಲೆಮಾರುಗಳ ಭಾಷೆ ಇದೆಂದೂ!


ಎಲ್ಲಾ ತಲೆಮಾರು

ದೂರುವುದು ಹಿಂದಿನಾ ತೇರು.

ಬದುಕಿದ್ದ ವರ್ಷಗಳಲ್ಲೆಲ್ಲ

ಹೇಳಲಾಗಲಿಲ್ಲ ಹೇಳಬೇಕಾದುದನೆಲ್ಲ!


ಈಗ ಕಿವಿಗೊಟ್ಟು ಕೇಳುವೆನೆಂದರೂ

ಹೇಳಲಿಲ್ಲವನ ಪ್ರೇತ.

ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು

ವರ್ತಮಾನವಾಗಿಹುದು ಭೂತ!

ಭೂತ ವರ್ತಮಾನಗಳ ದ್ವಂದ್ವದಲಿ

ಬಲಿಯಾಯಿತು ಭವಿಷ್ಯ

ಆವರಿಸಿಕೊಂಡಿತು ವಿಷ!


ಬದುಕಿದ್ದ ವರ್ಷಗಳಲ್ಲೆಲ್ಲ

ಹೇಳಲಾಗಲಿಲ್ಲ ಹೇಳಬೇಕಾದುದನೆಲ್ಲ!


ಕೂಗಿ ಹೇಳು ಕೇಳಿಸುವುದು ಎಲ್ಲಾ,

ಸ್ಪಟಿಕ ಸದೃಶವಾಗಿ ಕೇಳುವೆನು ನಿನ್ನ ಮಾತೆಲ್ಲಾ!

ಸಮಯ ಮೀರಿಲ್ಲವಿನ್ನೂ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಎಲ್ಲಾ.

ಸಾವಿನ ಮೊದಲು ಮಿತಿಗಳಾ ಅರಿತು ಮಾತನಾಡೋಣವೆಲ್ಲಾ!


ಬದುಕಿದ್ದ ವರ್ಷಗಳಲ್ಲೆಲ್ಲ

ಹೇಳಲಾಗಲಿಲ್ಲ ಹೇಳಬೇಕಾದುದನೆಲ್ಲ!


ಅಂದು ಮುಂಜಾನೆ ಅಲ್ಲಿ ನಾನಿರಲಿಲ್ಲ

ನಮ್ಮಪ್ಪನ ಪ್ರಾಣವೂ ಅಲ್ಲಿರಲಿಲ್ಲ

ಕೊನೆಗೂ ಹೇಳಲಾಗಲಿಲ್ಲ ಹೇಳಬೇಕೆಂದುದೆಲ್ಲ!

ಆದರವನ ಆತ್ಮ ಪ್ರತಿಧ್ವನಿಸಿತು ಮರು ವರ್ಷದೆ

ಆಗಷ್ಟೇ ಹುಟ್ಟಿದ್ದ ಮಗನ ಕಣ್ಣೀರ ಹರ್ಷದೆ.

ಹೇಳಿದ್ದೆನೆಲ್ಲಾ ಹೇಳಬೇಕಾದುದನೆಲ್ಲ

ಆದರೂ ಅನಿಸಿತು ಹೇಳಬೇಕಿತ್ತು

ಅವನಿದ್ದಾಗಲೇ ಎಲ್ಲಾ!


ಹೇಳು ಹೇಳು ಗಟ್ಟಿಯಾಗಿ ಎಲ್ಲಾ

ಕಣ್ಣಲ್ಲಿ ಕಣ್ಣಿಟ್ಟು ಕೂಗಿ ಕೂಗಿ ಎಲ್ಲಾ 

ಹೇಳು ಹೇಳು ಈಗ ಕೇಳಿಸುವುದು ಎಲ್ಲಾ,

ಸಾವು ಕವಿಯುವ ಮುನ್ನ

ಇನ್ನು ಕಾಲ ಮಿಂಚಿಲ್ಲ

ಸ್ಪಟಿಕ ಸದೃಶವಾಗಿ...ನಿನ್ನ ಮಾತೆಲ್ಲ!

ಬದುಕಿದ್ದ ವರ್ಷಗಳಲ್ಲೆಲ್ಲ

ಹೇಳಲಾಗಲಿಲ್ಲ ಹೇಳಬೇಕಾದುದನೆಲ್ಲ!

ಅನುವಾದ: ರವಿ ಹಂಜ್

No comments: