ಕಳೆದ ವಾರ ನನ್ನ ಕೈರೋಪ್ರಾಕ್ಟರ್ ರೇ ಬಳಿ ಹೋಗಿದ್ದೆ. ಏಕೋ ಗೊತ್ತಿಲ್ಲ ಕೆಲ ದಿನಗಳ ಹಿಂದೆ ಸೊಂಟ ಹಿಡಿದಿತ್ತು. ಏಳಲು, ಕೂರಲು, ನಿಲ್ಲಲು ಆಗದಷ್ಟು ಕೆಳಬೆನ್ನು ನೋಯುತ್ತಿತ್ತು. ಈ ಕೈರೋಪ್ರಾಕ್ಟರರು ಫಿಸಿಕಲ್ ಥೆರಪಿ ಮತ್ತು ಮಸಾಜುಗಳನ್ನು ಬಳಸಿ ಇಂತಹ ಸಮಸ್ಯೆ ಬಗೆಹರಿಸುತ್ತಾರೆ.
ಈ ರೇ ಸುಮಾರು ಎಪ್ಪತ್ತು ವರ್ಷದ ಚಿರಯೌವ್ವನಿಗ. ಚೀನಾದಲ್ಲಿ ಡಾಕ್ಟರ್ ಆಗಿದ್ದವನು ಅವಕಾಶ ಸಿಕ್ಕೊಡನೆ ಅಮೆರಿಕೆಗೆ ತನ್ನ 36ನೇ ವಯಸ್ಸಿನಲ್ಲಿ ಹಾರಿ ಬಂದಿದ್ದ. ಇಲ್ಲಿ ಹೆಚ್ಚುವರಿ ಓದಲು ಆರ್ಥಿಕ ಶಕ್ತಿ ಮತ್ತು ಸಮಯವಿಲ್ಲದ ಕಾರಣ ಡಾಕ್ಟರಿಗಿಂತ ಒಂದು ಮಟ್ಟ ಚಿಕ್ಕದೆನ್ನಬಹುದಾದ ಕೈರೋಪ್ರಾಕ್ಟರ್ ವೃತ್ತಿಗೆ ಸೀಮಿತಗೊಂಡಿದ್ದ. ನನ್ನ ಹೆಗಲು ಹಿಡಿದು ತಿರುವಿ ಲಟಲಟನೆ ಲಟಿಗೆ ತೆಗೆಯುತ್ತ ನನ್ನ ಸಮಸ್ಯೆಗೆ ಅಕ್ಯುಪಂಕ್ಚರ್ ಚಿಕಿತ್ಸೆ ಸರಿಯೆಂದು ನಿರ್ಧರಿಸಿದ.
ಅಕ್ಯುಪಂಕ್ಚರ್ ಸೂಜಿಗಳು ಕುಣಿದಂತೆ ಡಾ.ರೇ ಮಾತು ಸಾಗಿತ್ತು.
"ನಮ್ಮ ಚೈನಾದ ಇಂದಿನ ಅಧ್ಯಕ್ಷ ಶಿ ಭಾರಿ ಕ್ರೂರಿ. ಈಗ ಎರಡನೇ ಮಾವೋ ಆಗಬೇಕೆಂದು ಪಣ ತೊಟ್ಟಿದ್ದಾನೆ. ಜನರ ಜೀವನ ಕಷ್ಟವಾಗುತ್ತಿದೆ. ಏನು ಭಾರತದಲ್ಲಿ ಎಲ್ಲಾ ಬಣ್ಣದ ಫoಗಸ್ ಸುದ್ದಿ ಮಾಡುತ್ತಿದೆ?" ಎಂದು ಪ್ರಶ್ನಿಸುತ್ತ ತನ್ನ ಪ್ರಶ್ನೆಗೆ ತಾನೇ ಉತ್ತರಿಸಿದ.
"ವೈದ್ಯರು ರೋಗಿ ಮತ್ತು ರೋಗಗಳನ್ನು ಸರಿಯಾಗಿ ವಿಶ್ಲೇಷಿಸದೆ ಸ್ಟೆರಾಯ್ಡ್ ಕೊಡುವುದರಿಂದ ಇಂತಹ ಸಾಕಷ್ಟು ಅವಘಡಗಳು ಆಗುತ್ತವೆ. ನಮ್ಮ ಫೀಲ್ಡಿನ ಕೀಲು ಮೂಳೆ ತಜ್ಞರು ಸಹ ಇಂತಹ ಸಾಕಷ್ಟು ಅವಘಡಗಳನ್ನುಂಟು ಮಾಡಿದ್ದಾರೆ. ಇದರಿಂದ ಅನೇಕ ಜನ ಇಲ್ಲಿಯೂ ಆಸ್ಟಿಯೋಪೊರೋಸಿಸ್ ಅಂತಹ ಅಂಗ ಊನತೆಗೊಳಪಟ್ಟಿದ್ದಾರೆ" ಎಂದ.
ನಾನು "ಇರಲಿ ಡಾಕ್ಟರ್, ಚೈನಾ ಹೇಗೆ ಅಷ್ಟು ಕ್ಷಿಪ್ರವಾಗಿ ಕೋವಿಡ್ ಅನ್ನು ನಿಯಂತ್ರಿಸಿತು? ಚೈನಾ ಏನಾದರೂ ರೋಗಿಗಳ ಮತ್ತು ಸಾವಿನ 'ಸಂಖ್ಯೆ'ಯನ್ನು ನಿಯಂತ್ರಿಸಿತೇ?" ಎಂದು ಕೇಳಿದೆ.
ಅದಕ್ಕೆ ಅವನು "ಚೈನಾದಲ್ಲಿ ಜನರನ್ನು ನಿಯಂತ್ರಿಸುವುದು ಬಲು ಸುಲಭ. ಶಾಂಘಾಯಿನಂತಹ ಪಟ್ಟಣದಲ್ಲಿ 30 ಕೊರೋನಾ ಕೇಸುಗಳು ದಾಖಲಾದಾಗ 31ನೆ ಕೇಸ್ ಬಾರದಂತೆ ಪಟ್ಟಣವನ್ನು ಲಾಕ್ ಮಾಡಲಾಗಿತ್ತು. ಆ ಎಲ್ಲಾ ಕೇಸುಗಳು ಖುಲಾಸೆಯಾಗುವವರೆಗೆ ಶಾಂಘಾಯ್ ಲಾಕ್ ಆಗಿತ್ತು ಎಂದರೆ ಯೋಚಿಸು. ಚೈನಾದಲ್ಲಿ ಏಕೆ ಹೇಗೆ ಕೊರೋನಾ ಕ್ಷಿಪ್ರಗತಿಯಲ್ಲಿ ನಿಯಂತ್ರಣಕ್ಕೆ ಬಂದಿತೆಂದು! ಜನಗಳ ನಿಯಂತ್ರಣ ಚೈನಾಕ್ಕೆ ನೀರು ಕುಡಿದಂತೆ. ಅದು ಒಂದು ಸಮಸ್ಯೆಯೇ ಅಲ್ಲ" ಎಂದನು.
ಚೈನಾದಲ್ಲಿ ನಾನು ಸುತ್ತಿದ ಜಾಗಗಳ ಕುರಿತು ವಿಚಾರಿಸಿಕೊಂಡು ರೇ ತುಂಬಾ ಸಂತೋಷಿಸಿದ. ಅವನಿದ್ದ ಕಾಲದ ಚೈನಾದಲ್ಲಿ ಹೀಗೆ ತಿರುಗುವುದು ಸಾಧ್ಯವಿರಲಿಲ್ಲವೆಂದು ವರ್ಣಿಸುತ್ತ ಮತ್ತೊಮ್ಮೆ ನನ್ನ "ಅಗಣಿತ ಅಲೆಮಾರಿ"ಯಲ್ಲಿ ವರ್ಣಿಸಿದ ಮಾವೋ ಕಾಲದ ಕಥನವನ್ನು ನನಗೆ ಪುನರ್ ಊರ್ಜಿತಗೊಳಿಸಿದ. ನನ್ನ ಕಥನದಲ್ಲಿ ಲೀ ಇದ್ದರೆ, ಇಲ್ಲಿ ರೇ ನನ್ನೆದುರಿಗಿದ್ದ. ಕತೆ ಮಾತ್ರ ಯಥಾವತ್ತಾಗಿತ್ತು.
ಹೀಗೆ ಈ ಐವತ್ತು ಮತ್ತು ಅರವತ್ತರ ದಶಕದಲ್ಲಿ ಹುಟ್ಟಿ ಬೆಳೆದ ಚೀನಿಯರ ಬಾಲ್ಯ ಮತ್ತು ಯೌವ್ವನ ಚೀನಾ ನಿರ್ಮಿತ ಬೊಂಬೆಗಳಂತೆ ರೇ, ಲೀ, ವಾಂಗ್, ಈಲಿ, ಫುನೆಂಗ್, ಹ್ವಾ ಏನೇ ಹೆಸರಿರುವ ಎಲ್ಲರ ಜೀವನ ಏಕರೂಪವಾಗಿ ಏಕತಾನವಾಗಿರುತ್ತದೆ. ಅಷ್ಟರ ಮಟ್ಟಿಗೆ ಕಮ್ಯುನಿಸ್ಟ್ ಆಡಳಿತ ಆ ಕಾಲಘಟ್ಟದ ಜನಜೀವನವನ್ನು ತದ್ರೂಪುಗೊಳಿಸಿ ಸಮಾನತೆಯನ್ನು ಸಾಧಿಸಿತ್ತು! ಇಂತಹ "ಕಮ್ಯುನಿಸ್ಟ್ ಸಮಾನತೆ" ಆರೋಗ್ಯಕರ ಸಮಾಜವನ್ನು ಸೃಷ್ಟಿಸೀತೆ?!
ಆ ಪ್ರಶ್ನೆಗೆ ರೇ, ಲೀ, ವಾಂಗ್, ಈಲಿ, ಫುನೆಂಗ್, ಹ್ವಾ ಅಲ್ಲದೆ ಅವರ ಎಲ್ಲಾ ಸಮಕಾಲೀನರು ಏಕರೂಪವಾಗಿ "ಇಲ್ಲ ಇಲ್ಲ" ಎಂದು ಏಕತಾರಿ "ಟ್ಯೂಯ್ ಟ್ಯೂಯ್"ಗುಡುತ್ತಾರೆ.
ಆದರೆ ಭಾರತದ ಕಮ್ಯುನಿಸ್ಟರು ಮಾತ್ರ ಯಕ್ಷ ಗಂಧರ್ವರಂತೆ ನಾನಾ ವಿಧದ ಸಂಗೀತ ಸ್ವರಗಳನ್ನು ಹೊರಡಿಸುತ್ತಾರೆ!
ಇರಲಿ, ನಾನು "ರೇ, ನಿವೃತ್ತಿಯ ನಂತರ ಎಲ್ಲಿರಬೇಕೆಂದುಕೊಂಡಿರುವೆ?" ಎಂದೆ.
ಅದಕ್ಕೆ ರೇ, "ಮುಂದಿನ ವರ್ಷ ನಿವೃತ್ತಿಯಾಗಿ ಸ್ಯಾನ್ ಡಿಯಾಗೋದಲ್ಲಿ ಸೆಟ್ಲ್ ಆಗುವೆ. ಈಗಾಗಲೇ ಅಲ್ಲೊಂದು ಮನೆಯನ್ನು ಕೊಂಡಿರುವೆ. ನೀನು ನಿರೀಕ್ಷಿಸಿರುವಂತೆ ಚೈನಾದಲ್ಲಂತೂ ಅಲ್ಲ!" ಎಂದ.
ನಾನು "ಹೌದು, ಯಾವ ಚೀನೀ ಅಮೆರಿಕನ್ನನೂ ನಿವೃತ್ತಿಯ ನಂತರ ಚೀನಾಕ್ಕೆ ಹೋಗುತ್ತೇನೆ ಎನ್ನುವುದಿಲ್ಲವಲ್ಲ, ಏಕೆ?" ಎಂದೆನು.
ಆಗ ರೇ "ಚೀನಾದ ಗ್ರೀನ್ ಕಾರ್ಡ್ ಅತ್ಯಂತ ದುರ್ಲಭ. ಪ್ರವಾಸಿಗನಾಗಿ ನಾನು ಹೋಗಬಹುದೇ ಹೊರತು ಅಲ್ಲಿ ಸೆಟ್ಲ್ ಆಗಲು ಈ ಚೀನೀ ಗ್ರೀನ್ ಕಾರ್ಡ್ ಬೇಕು. ಒಂದು ವೇಳೆ ಅದು ನನಗೆ ಸಿಕ್ಕರೂ ಕೆಲವೊಂದು ಮೂಲ ಸೌಕರ್ಯಗಳು ದುಬಾರಿ. ನಾನು ಶಾಂಘಾಯಿನಿಂದ ಬಂದವನು. ಅಲ್ಲಿನ ವಸತಿ ಅತ್ಯಂತ ದುಬಾರಿ. ಅಲ್ಲಿ ಮನೆ ಕೊಳ್ಳುವ ಬೆಲೆಗೆ ನ್ಯೂಯಾರ್ಕ್ನಲ್ಲಿ ಎರಡು ಮನೆ ಬರುತ್ತವೆ. ಇನ್ನು ಹೆಲ್ತ್ ಕೇರ್ ಅತ್ಯಂತ ದುಬಾರಿ. ಇರಲಿ, ನನ್ನಂತಹವರು ಕೊಡುವ ಈ ಕಾರಣಗಳು ಕೇವಲ ನೆಪಗಳು ಮಾತ್ರ. ಅಸಲಿಗೆ ಇಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒಗ್ಗಿರುವ ನಮ್ಮಂತಹವರು ವಾಪಸ್ ಚೈನಾಕ್ಕೆ ಹೋಗಲು ಎಳ್ಳಷ್ಟೂ ಇಷ್ಟ ಪಡುವುದಿಲ್ಲ, ಚೈನಾ ಸರ್ಕಾರ ನಮಗಾಗಿ ಸ್ವರ್ಗವನ್ನೇ ಸೃಷ್ಟಿಸಿಕೊಟ್ಟರೂ ಸಹ!"
ಆಗ ನಾನು "ಹೆಲ್ತ್ ಕೇರ್ ಪುಕ್ಕಟೆಯಲ್ಲವೇ ಚೈನಾದಲ್ಲಿ! ಅದು ಹೇಗೆ ದುಬಾರಿ ಎನ್ನುತ್ತೀಯ" ಎಂದೆ.
ಅದಕ್ಕೆ ರೇ "ರಾವಿ, ಮೈ ಫ್ರೆಂಡ್! ನೆಗಡಿ, ಶೀತ, ಕೆಮ್ಮು, ಜ್ವರ, ನ್ಯುಮೋನಿಯಾ, ಮೂಳೆ ಮುರಿತ ಮುಂತಾದ ಸಾಮಾನ್ಯ ಪೀಡೆಗಳಿಗೆ ಉಚಿತ ಚಿಕಿತ್ಸೆ ಕೊಟ್ಟರೂ ಕ್ಯಾನ್ಸರ್, ಬೈಪಾಸ್ ಸರ್ಜರಿ, ಆರ್ಗನ್ ಟ್ರಾನ್ಸ್ಪ್ಲಾಂಟ್ ಅಂತಹ ಚಿಕಿತ್ಸೆಗಳು ಪುಕ್ಕಟೆಯಲ್ಲ! ಅವು ಅತ್ಯಂತ ದುಬಾರಿ ಚಿಕಿತ್ಸೆಗಳು ಮತ್ತು ಸರ್ಕಾರ ನಿಗದಿಗೊಳಿಸಿದ ಮೊತ್ತವನ್ನು ಕಟ್ಟಲೇಬೇಕು, ಚಿಕಿತ್ಸೆ ಪಡೆದುಕೊಳ್ಳಲು!
ಕೆಲವರು ಈ ಹೊರೆಯನ್ನು ಇಳಿಸಿಕೊಳ್ಳಲು ಭಾರತದಿಂದ ಕಡಿಮೆ ದರದಲ್ಲಿ ಔಷಧಿ ತರಿಸಿಕೊಂಡು ಸಿಕ್ಕಿ ಬಿದ್ದು, "ಸ್ಮಗ್ಲರ್" ಆಗಿ ಜೈಲಿನಲ್ಲಿದ್ದಾರೆ. ಕೆಲವೊಮ್ಮೆ ಹಾಗೆ ಔಷಧಿ ತರಿಸಿಕೊಳ್ಳಲು ಸರ್ಕಾರ ಪರವಾನಗಿ ಕೊಟ್ಟರೂ ಅದು ಒಂದೆರಡು ಡೋಸುಗಳಿಗೆ ಮಾತ್ರ. ಇಪ್ಪತ್ತು ಡೋಸು ಬೇಕಾದವನು ಒಂದೆರೆಡು ಡೋಸ್ ತರಿಸಿಕೊಳ್ಳಬಹುದಷ್ಟೇ! ಒಟ್ಟಿನಲ್ಲಿ ಸರ್ಕಾರ ಕೊಟ್ಟದ್ದನ್ನು ಮಾತ್ರ ಸ್ವೀಕರಿಸಬೇಕು, ಅವರು ಹೇಳಿದ ಬೆಲೆ ತೆತ್ತು!" ಎಂದು ರೇ ಶಿ ಯಾನೆ ಮಾವೋ II ಕಮ್ಯುನಿಸ್ಟ್ ಸರ್ಕಾರದ ಮುಫತ್ತು ಯೋಜನೆಗಳ ಮಫ್ತಿಯನ್ನು ಕಳಚುತ್ತ ನನ್ನ ಬೆನ್ನಿನ ಮೇಲೆ ನರ್ತಿಸುತ್ತಿದ್ದ ಅಕ್ಯುಪಂಚರ್ ಸೂಜಿಗಳನ್ನು ಕಳಚಿದ.
ನಂತರ ನನ್ನ ಬೆನ್ನ ಮೇಲೆ ಬೆಚ್ಚಗೆ ಮಾಡಿದ ನಾಲ್ಕು ಕಪ್ಪಿಂಗ್ ದಬಾ ಹಾಕಿ "ನಿಮ್ಮ ಮೋದಿ ಸಹ ಕೇಸು ದಾಖಲಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದ್ದಾರೆ ಎಂಬ ಸುದ್ದಿಗಳು ಬರುತ್ತಿವೆ, ನಿಜವೇ!" ಎಂದ.
"ಹೌದು, ಅಂತಹ ಪ್ರಕರಣಗಳು ಇವೆ. ಹಾಗೆಂದು ಹತ್ತಿಕ್ಕಲಾಗದು. ಅಬ್ಬಬ್ಬಾ ಎಂದರೆ ನೀನು ಕೇಳಿದಂತೆ ಕೇಸ್ ದಾಖಲಿಸಬಹುದು. ಮುಂದೆ ಅದು ಕೋರ್ಟಿನಲ್ಲಿ ಸಾಬೀತಾಗಿ....ದಬಾ ಹಾಕಿಕೊಳ್ಳಲೂಬಹುದು. ಅಷ್ಟರ ಮಟ್ಟಿಗೆ ಕೋರ್ಟುಗಳು ಸದ್ಯಕ್ಕೆ ಬಲವಾಗಿವೆ. ಮುಂದೇನೋ ಗೊತ್ತಿಲ್ಲ" ಎಂದೆ.
"ವೆಲ್, ವಿ ಆರ್ ಹಿಯರ್ ಇನ್ ಅಮೆರಿಕಾ! ಈ ವೀಕೆಂಡ್ ನಾನು ನನ್ನ ಲೇಕ್ ಹೌಸಿಗೆ ಹೋಗುತ್ತೇನೆ, ಮೀನು ಹಿಡಿಯಲು. ರಿಟೈರ್ ಆದ ಮೇಲೆ ಭರಪೂರ ಫಿಶಿಂಗ್ ಮಾಡಿಕೊಂಡು ಸ್ಯಾನ್ ಡಿಯಾಗೋನಲ್ಲಿ ಹಾಯಾಗಿರುತ್ತೇನೆ" ಎಂದ ರೇ.
"ವೆಲ್, ಐ ರಿಟೈರ್ ಅಂಡ್ ಗ್ರೋ ಕ್ಯಾಶ್ಯೂಸ್ ಅಂಡ್ ಕೋಕೋನಟ್ಸ್ ಇನ್ ಇಂಡಿಯಾ" ಎಂದೆ. "ಹೆಹೆ, ನೀನಿನ್ನು ಹುಡುಗ! ರಿಟೈರ್ಮೆಂಟ್ ಇನ್ನೂ ಬಹುದೂರ ಇದೆ. ನಿನ್ನ ಬೆನ್ನು ನಾಳೆಗೆಲ್ಲಾ ಸರಿಯಾಗುತ್ತದೆ. ಹೋಗು ಸರಿಯಾಗಿ ಹಣ ಮಾಡು, ರಿಟೈರ್ ಆಗಲು" ಎಂದ ರೇ!
ಹೀಗೆ ಒಬ್ಬ ಮಾಜಿ ಕಮ್ಯುನಿಸ್ಟ್ ದೇಸಿಗ ಮತ್ತು ಬಹುದೊಡ್ಡ ಪ್ರಜಾಪ್ರಭುತ್ವದ ಸಾಗರೋತ್ತರ ನಾಗರೀಕನ ಸಂಭಾಷಣೆ ದಬಾ ಹಾಕಿಕೊಂಡಿತು.
No comments:
Post a Comment