ಕೊರೋನಾ ಬರೋಣ

 ಭಾರತದ ವಿಮಾನ ಏರುವ ಎಪ್ಪತ್ತೆರಡು ಗಂಟೆ ಅವಧಿಯೊಳಗೆ ಪಿಸಿಆರ್ ಟೆಸ್ಟ್ ಮಾಡಿಸಿ, ಕೋವಿಡ್-ಶೂನ್ಯ ಫಲಿತಾಂಶ ಗಳಿಸಿ, ನನ್ನಂತೆಯೇ ಫಲಿತಾಂಶ ಗಳಿಸಿದವರೊಂದಿಗೆ ಸುಮಾರು ಹದಿಮೂರೂವರೆ ಗಂಟೆಗಳ ಶಿಕಾಗೋ-ದಿಲ್ಲಿ ಪಯಣ, ಮೂರೂವರೆ ಗಂಟೆಗಳ ದಿಲ್ಲಿ-ಬೆಂಗಳೂರು ಪಯಣ, ಮತ್ತೆ ಮೇಲೊಂದಿಷ್ಟು ಗಂಟೆಗಳ ಬೋನಸ್ ಮಾಸ್ಕ್ ಧರಿಸಿ ಏರ್ಪೋರ್ಟುಗಳಲ್ಲಿ ಕಳೆದು ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆಯಲ್ಲಿಗೆ ಮೊನ್ನೆ ಬಂದಿಳಿದೆನು.


ನಮ್ಮಂತಹ ಪ್ರಮಾಣಿತ ಕೋವಿಡ್-ಶೂನ್ಯ ಅಂತರರಾಷ್ಟ್ರೀಯ ಪ್ರಯಾಣಿಕರೊಂದಿಗೆ ಸ್ಥಳೀಯ ಪ್ರಯಾಣಿಕರನ್ನು ಬೆರೆಸಿ ಬೆಂಗಳೂರು ಫ್ಲೈಟಿನಲ್ಲಿ ಕೂರಿಸಿದರು. ನಮ್ಮಷ್ಟೇ ಕೋವಿಡ್-ಶೂನ್ಯರು ಅವರಾಗಿದ್ದರೋ ಇಲ್ಲವೋ ನಾನರಿಯೆ! ಆಗಿದ್ದಾರೆಂದುಕೊಂಡಿದ್ದೇನೆ. 


ಬೆಂಗಳೂರಿನಲ್ಲಿ ವಿಮಾನದಿಂದ ಹೊರಗೆ ಬಂದೊಡನೆ ಭಾರತದ ಟ್ರೇಡ್ ಮಾರ್ಕುಗಳಾದ ಜನಸಂಖ್ಯೆ, ಭ್ರಷ್ಟಾಚಾರ, ಮತ್ತು ಅವ್ಯವಸ್ಥೆಗಳನ್ನು ಮರೆತಿರಬಹುದೆಂದು ಮೋದಿ ವಿರೋಧಿಗಳು ನಮಗೆ ಕ್ರ್ಯಾಶ್ ಕೋರ್ಸ್ ಏರ್ಪಡಿಸಿದ್ದರು. ಕೋರ್ಸಿನ  ಪ್ರಪ್ರಥಮ ಹಂತವಾಗಿ ಥರ್ಮಲ್ ಸ್ಕ್ಯಾನಿಂಗ್! ಇಲ್ಲಿ ವಿದೇಶೀಯರು ಹೊಸ ಮಿಕಗಳಂತೆ ಸೋಷಿಯಲ್ ಡಿಸ್ಟನ್ಸ್ ಕಾಪಾಡಿಕೊಳ್ಳಲು ಹೆಣಗಿದರೂ ಆಗದಷ್ಟು ಉದ್ದನೆಯ ಕ್ಯೂ, ಮತ್ತು ಮಾಸ್ಕ್ ಅನ್ನು ಗಡ್ಡದಂತೆ ಧರಿಸಿದ್ದ ಬಹುಪಾಲು ಸಿಬ್ಬಂದಿ, "ತೋರಿಕೆ ಮೊದಲು, ಕಳಕಳಿ ನಂತರ" ಎಂಬ ರಾಷ್ಟ್ರೀಯ ನೀತಿಯನ್ನು ಪಾಲಿಸುತ್ತಿದ್ದರು.


ನಮ್ಮ ಕೋವಿಡ್-ಶೂನ್ಯ ಸರ್ಟಿಫಿಕೇಟ್, ಪಾಸ್ಪೋರ್ಟ್ ಇತ್ಯಾದಿ ದಾಖಲೆಗಳನ್ನು ಕಾಂಟ್ಯಾಕ್ಟ್-ಫ್ರೀ ಉದ್ದೇಶದ ಘನ ಭಾರತ ಸರ್ಕಾರದ ವೆಬ್ಸೈಟಿಗೆ ಲಗತ್ತಿಸಿ ಲೋಡಿಸಿದ್ದರೂ ಥರ್ಮಲ್ ಸ್ಕ್ಯಾನಿಂಗ್ ಸಿಬ್ಬಂದಿಗೆ ಬೋರ್ಡಿಂಗ್ ಪಾಸ್ ಅಲ್ಲದೆ ನಮ್ಮ ಸೆಲ್ ಫೋನಿನಲ್ಲಿ ಆ ದಾಖಲೆಗಳನ್ನು ಕೈಗವುಸು ಇರದ ಅವರ ಅಮೃತ ಹಸ್ತಕ್ಕೆ ಮುಟ್ಟಿಸಿ ತೋರಿಸಬೇಕಿತ್ತು. ಗಡ್ಡದಂತಹ ಮಾಸ್ಕಿನ ಆತನ ಬೆರಳುಗಳು ಎಲ್ಲೆಲ್ಲಿನ ಕಡಿತವನ್ನು ಶಮನಿಸಿದ್ದವೋ ಗೊತ್ತಿಲ್ಲ!  ಒಟ್ಟಾರೆ ಮುಟ್ಟಿ ಶಂಕಿತ ವೈರಸ್ ತಲುಪಿಸಿದನೋ ಇಲ್ಲವೋ, ಇಳಿದ ಶೂನ್ಯ ಕೊರೋನಿಗರಲ್ಲಿ ಶಂಕೆಯ ವೈರಸ್ ಮೂಡಿಸಿದ.


ನಾನು ಶಿಷ್ಟತೆಯನ್ನು ಮೆರೆಯಲು ಆತನಿಗೆ ಕಾಣದಂತೆ ಸ್ಯಾನಿಟೈಸರಿನಿಂದ ನನ್ನ ಕೈ, ಫೋನನ್ನು ಒರೆಸಿಕೊಂಡು ಸ್ಕ್ಯಾನ್ ಮುಗಿಸಿ ಲೈನ್ ದಾಟಿದೆ. ಮುಂದೆ ಎರಡನೇ ಕ್ಯೂ ಇತ್ತು. 


ಇಲ್ಲಿ ಮಾಸ್ಕ್ ಸರಿಯಾಗಿ ಧರಿಸಿದ ಯುವತಿಗೆ ನನ್ನ ಬೋರ್ಡಿಂಗ್ ಪಾಸ್ ಅಲ್ಲದೆ ಮತ್ತೊಮ್ಮೆ ನನ್ನ ಸೆಲ್ ಫೋನು ಮುಟ್ಟಿಸಿ ದಾಖಲೆಗಳನ್ನು ತೋರಿಸಬೇಕಿತ್ತು. ನಂತರ ಆಕೆ ತೋರಿಸಿದ ಟೆಂಪರೇಚರ್ ರೀಡರ್ ಒಳಗೆ ನನ್ನ ಬೆರಳು ತೂರಿಸಿದೆ. ಅದರಲ್ಲಿ ಅದೆಷ್ಟು ಸಹಸ್ರ ಜನ ಆಗಲೇ ಬೆರಳು ತೂರಿಸಿ ವೈರಾಣುಗಳನ್ನು ಬಿಟ್ಟಿದ್ದರೋ ಗೊತ್ತಿಲ್ಲ. ಅದನ್ನೇನೂ ಆಕೆ ಸ್ಯಾನಿಟೈಸ್ ಮಾಡುತ್ತಿರಲಿಲ್ಲ. ಹಾಗಾಗಿ ನಂತರ ಮತ್ತೆ ನನ್ನ ಬೆರಳನ್ನೂ ಸೆಲ್ ಫೋನನ್ನೂ ಸ್ಯಾನಿಟೈಸ್ ಮಾಡಿಕೊಂಡು ಆ ಕ್ಯೂ ಅನ್ನು ಗೆದ್ದು ಮುನ್ನಡೆದೆ. 


ನಂತರ ಮತ್ತೊಂದು ಕ್ಯೂ! ಇಲ್ಲಿ ಕೇವಲ ನಮ್ಮ ಘನ ಸರ್ಕಾರಕ್ಕೆ ಲೋಡಿಸಿದ್ದ ಪಿಡಿಎಫ್ ರಸೀದಿ, ಕೋವಿಡ್-ಶೂನ್ಯ ಪ್ರಮಾಣಪತ್ರ, ಬೋರ್ಡಿಂಗ್ ಪಾಸ್ ಅನ್ನು ಮತ್ತೊಮ್ಮೆ ಮುಟ್ಟಿಸಿ ತೋರಿಸಬೇಕಿತ್ತು. ಏಕೋ ನಾನರಿಯೆ!  ಅಲ್ಲಿಗೆ ಆನ್ಲೈನ್, ಕಾಂಟ್ಯಾಕ್ಟ್-ಫ್ರೀ, ಏರ್ ಸುವಿಧಾಗಳೆಲ್ಲವೂ ಒಂದು ತೋರಿಕೆಯ ವಿಧವೆಂದು ಪ್ರಾಮಾಣಿತಗೊಂಡಿತ್ತು. 


ಇದೆಲ್ಲವನ್ನು ಒಂದೇ ಕ್ಯೂನಲ್ಲಿ ಬಗೆಹರಿಸಬಹುದಿದ್ದರೂ ಉದ್ಯೋಗಾವಕಾಶಗಳ ಸೃಷ್ಟಿಗೆ, ಬೆಂಬಲಿಗ ಕಾಂಟ್ರ್ಯಾಕ್ಟದಾರರ ಋಣ ಸಂದಾಯ ಮಾಡಲು ಪ್ರಮುಖವಾಗಿ ಇಸ್ವಗುರು ಪ್ರೊಟೊಕಾಲ್ ಇಸಂ ಅನ್ನು ಮೆರೆಸಲು ಇವೆಲ್ಲವೂ ಬೇಕಲ್ಲವೇ! ಹಾಗೆಯೇ ಭಾರತೀಯ ಅಧಿಕಾರಶಾಹಿಯ ಇ-ಗವರ್ನೆನ್ಸ್ ತೋರಲು ಸಹ!


ಅಂದ ಹಾಗೆ ಇವರ್ಯಾರೂ ಕೈಗವುಸು ತೊಟ್ಟಿರಲಿಲ್ಲ.


ನಂತರ ಇಮಿಗ್ರೇಷನ್ ಕ್ಯೂ, ಕಸ್ಟಮ್ಸ್ ಸ್ಕ್ಯಾನಿಂಗ್ ಕ್ಯೂ, ಮತ್ತೊಮ್ಮೆ ಸ್ವಯಂ ಸ್ಯಾನಿಟೈಸ್ ಎಲ್ಲಾ ದಾಟಿ ಹೊರಬಂದರೆ ಬಹುಪಾಲು ಗಡ್ಡದ ಮಾಸ್ಕುಧಾರಿಗಳ ಜೊತೆ ಅಲ್ಲಲ್ಲಿ ಬಾಯಿಗೆ ಮಾತ್ರ ಮಾಸ್ಕು ಹಾಕಿದವರು ಮತ್ತು ನಮ್ಮನ್ನು ಸಮಾಧಾನಿಸುವಂತೆ ಅಲ್ಲಲ್ಲಿ ಪೂರ್ತಿ ಮಾಸ್ಕ್ ಧರಿಸಿದವರು ತುಂಬು ಸ್ವಾಗತ ಕೋರಿದರು.


ಅಲ್ಲಿಯವರೆಗೂ ಡಬಲ್ ಮಾಸ್ಕ್ ಧರಿಸಿದ್ದ ನಾನು ಒಂದು ಮಾಸ್ಕ್ ಕಳಚಿದೆ.


ಏರ್ಪೋರ್ಟಿನಿಂದ ರಾಜಾಜಿ ನಗರದ ಫೇರ್ ಫೀಲ್ಡ್ ಹೋಟೆಲಿಗೆ ಬಂದೆ. ಇಲ್ಲಿ ಮತ್ತೆ ಎಲ್ಲಾ ವಿದೇಶಗಳ ವ್ಯವಸ್ಥೆಯಂತೆ ಬದಲಿ ವ್ಯವಸ್ಥೆಯಿತ್ತು. ಆದರೆ ಅತಿಥಿಗಳು ಮಾತ್ರ ಮಾಸ್ಕಿನಿಂದ ನಿರಾಳರಾಗಿದ್ದರು! ಚಟ ತಡೆಯಲಾರದೆ ಮರುದಿನ ಹೊರಗೆ ಸ್ನೇಹಿತರೊಂದಿಗೆ ಕ್ಲಬ್ಬಿಗೆ ಹೋದೆ. ಅಲ್ಲಿನ ಸಿಬ್ಬಂದಿಗಳೆಲ್ಲರೂ ಗಡ್ಡ ಮಾಸ್ಕುಧಾರಿಗಳಾಗಿದ್ದರು. 


ಅಲ್ಲಿಂದ ವಾಪಸ್ ಫೇರ್ ಫೀಲ್ಡಿಗೆ ಬಂದಾಗ ನಾನು ಟೈಟೇನಿಯಮ್ ಇಲೈಟ್ ಗಿರಾಕಿ ಆಗಿರದೆ ಇತರೆ ಅತಿಥಿಗಳಂತೆ ನಿರಾಳನಾಗಿ, ಇವರನ್ನೆಲ್ಲಾ ಕಾಪಾಡುತ್ತಿರುವ ಕಾಣದ ಆ ಶಕ್ತಿಗೆ ನಮಿಸಿ, ಹರ್ಡ್ ಇಮ್ಯುನಿಟಿ ನನಗೂ ಸಿಕ್ಕಿತೆಂದು ಧನ್ಯನಾಗಿ ಚಪ್ಪಾಳೆ ತಟ್ಟಿ "ನಾನೇ ಹುಚ್ಚ, ನಾನೇ ಕಮಂಗಿ"ಯೆಂದು ನನ್ನ ಮಾಸ್ಕ್ ಕಳಚಿದೆ! "May I sit here!" ಎಂದು ನನ್ನ ಉತ್ತರಕ್ಕೂ ಕಾಯದೇ ನನ್ನೆದುರು ಕುಳಿತ ಸಹ ಅತಿಥಿಯೆಡೆ ಮುಗುಳ್ನಕ್ಕು "ಚಿಯರ್ಸ್" ಎಂದೆ. ಆತ ಸಾಂಬಾರನ್ನು ಸೊರ್ರನೆ ಹೀರಿ ಮಂತ್ರಾಕ್ಷತೆ ಪ್ರೋಕ್ಷಿಸಿದ! ಅಲ್ಲಿಗೆ ನನಗೆ ಹರ್ಡ್ ಇಮ್ಯುನಿಟಿ ಸಿಕ್ಕ ಶುಭ ಶಕುನವಾಯಿತೆಂದುಕೊಂಡು ಧನ್ಯನಾದೆ.


ಸಾಮಾಜಿಕ ಪರಿಸರ ಹೀಗಿದ್ದಾಗ ಈ ಸಾಮಾಜಿಕ ಅಂತರ, ಸರ್ಕಾರಿ ನಿಯಮಗಳು, ಅಂತರರಾಷ್ಟ್ರೀಯ ಪ್ರವಾಸಿಗರಿಗಾಗಿ ಏರ್ ಸುವಿಧಾ, ಥರ್ಮಲ್ ಸ್ಕ್ಯಾನ್, ಮಾಸ್ಕ್ ಇಲ್ಲದವರಿಗೆ ದಂಡ, ವ್ಯಾಕ್ಸಿನ್ನು, ಬ್ಲಾ ಬ್ಲಾ ಬ್ಲಾ...ನನ್ನ ಹಾಸನದ ಮಲೆನಾಡು ತಾಂತ್ರಿಕ ವಿದ್ಯಾಲಯದಲ್ಲಿನ ದಿನಗಳ ಪಡ್ಡೆಗಳ ಏಕೈಕ ಮಂತ್ರವಾಗಿದ್ದ "cover the face, fuck the base" ಕೊರೋನಾ ಕಾಲದಲ್ಲೂ ಅನ್ವಯಗೊಂಡಿರುವ ಏಕೈಕ ಮಂತ್ರವೆಂದು ನೆನಪಾಯಿತು!


ಅಂದ ಹಾಗೆ ಈ ಮಂತ್ರಕ್ಕೆ ಮೂಗು ಮುರಿಯುವ ಸುಸಂಸ್ಕೃತರಿಗೆ ಹೀಗೆ ಹೇಳಬಹುದೇನೋ, "ಭಾಯಿಯೋ ಔರ್ ಬೆಹೆನೋ! ತಾ(ಥಾಲಿ) ಬಜಾವೋ, ಅಪನೇ ನಂಬರ್ ಪೆ ವ್ಯಾಕ್ಸಿನ್ ಲೆಲೋ ಔರ್ ದೇಶ್ ಕೋ ಇಸ್ವ್ ಗುರು ಮಾನೋ! God's own country ಕೇರಲಾ ನಹೀ ಬಲ್ಕಿ ಸಾರಾ ಹಿಂದೂಸ್ತಾನ್ ಹೈ" 


ಸರ್ವೆಜನೌ ಸುಖಿನೌ ಭವಂತು!

No comments: