"ಹೇ ಬೆಂಗ್ಳುರು, ಬಂದ್ಲು...ಸ್ಮಿತ್ತಾ ಸ್ಮಿತ್ತಾ, ಹೇಲ್ತಾಲೆ, ಹೇಲ್ತಾಲೆ ಸುತ್ತಾ ಮುತ್ತ.. ಬೆಳಿಗ್ಗೆ ಏಳು ಗಂಟೆಗೆ ಸುತ್ತಾ ಮುತ್ತಾ...ರೇಡಿಯೋ ಮಿರ್ಚಿ!" ಎಂದು ಯಾವನೋ ಹಾಡುತ್ತಿದ್ದ. ಆಗ "ಇದು ಸಖತ್ ಹಾಟ್ ಮಗ" ಎಂದು ಮಿರ್ಚಿ ತಿಂದ ಹೆಣ್ಣೊಂದು ಉಲಿಯಿತು.
ಹಾಟ್ ಮಿರ್ಚಿ ತಿಂದವಳು ಮತ್ತೆ ಹೇಲದೆ ಇನ್ನೇನು ಮಾಡಿಯಾಳು ಎಂದುಕೊಂಡು ನಕ್ಕೆ.
ಆದರೆ ಮತ್ತೊಮ್ಮೆ ಗಮನ ಕೊಟ್ಟು ಕೇಳಿದಾಗ ಆ ಡಿಜೆಯ ಬೆಂಗಳೂರು ರ್ಯಾಪ್ ಸ್ಟೈಲ್ ಕನ್ನಡದಲ್ಲಿ "ಹೇಳ್ತಾಳೆ ಹೇಳ್ತಾಳೆ" ಎನ್ನುವುದು "ಹೇಲ್ತಾಲೆ, ಹೇಲ್ತಾಲೆ" ಎಂದು ಕೇಳಿಬರುತ್ತಿತ್ತು! ಆಗ ಆ ಸ್ಮಿತ್ತಾ ಬಂದು ನೀರು ಉಳಿಸಿ ಎಂದು ಆಕಾಶವಾಣಿಯಲ್ಲಿ ಒಂದು ಸಂದೇಶ ಕೊಟ್ಟಳು. ಮತ್ತೆ ನಾನು ನೀರಿಗೂ ಮತ್ತು ಶೌಚಕ್ಕೂ ಇರುವ ಕನೆಕ್ಷನ್ ಯೋಚಿಸಿ ಆ ಡಿಜೆ ಹೇಳಿದ್ದು "ಹೇಳ್ತಾಳೆ ಹೇಳ್ತಾಳೆ"ಯೋ, "ಹೇಲ್ತಾಲೆ, ಹೇಲ್ತಾಲೆ"ಯೋ ಎಂದು ಅನುಮಾನಗೊಂಡೆ.
ಆಗ "ಹೇ ಬಾಸು ನಮ್ ಬಾಸು ರಿಪಿ ರಿಪ್ಪಿ ರಿಫ್ಪೀಟು, ಸಿಕ್ಕಿದ್ದೆಲ್ಲಾ ಬುಟ್ಕೋಬೇಡಿ....ರಾಜ ರಾಣಿ ರೋರರ್ ರಾಕೆಟ್ಟು" ಅಂತ ಇನ್ನೇನೋ ಹಾಡು ಬಂತು. ಆಗ ಕಾಕತಾಳೀಯವೆಂಬಂತೆ ಕನ್ನಡ ಉಚ್ಚಾರದ ಅಥಾರಿಟಿ ರಾಜಕುಮಾರರ ಮನೆ ಮುಂದೇ ಪಾರ್ಕ್ ಮಾಡಿಕೊಂಡು ನಿಂತಿದ್ದೆ. ಸಧ್ಯ, ಅಲ್ಲಿ ಅವರಿರಲಿಲ್ಲ, ಅವರ ಸುಪುತ್ರನನ್ನು ಹಾಡಿ ಹೊಗಳುವ ಈ ರಿಪ್ಪಿ ರಿಪ್ಪಿ ರಿಪ್ಪಿದ ಕನ್ನಡ ಹಾಡು ಕೇಳಲು, ಮತ್ತು ತಮ್ಮ ಸುಪುತ್ರನ ಕನ್ನಡ ಉಚ್ಛಾರ ಕೇಳಲು!
ನನ್ನೊಟ್ಟಿಗಿದ್ದ ನನ್ನ ಆಫೀಸಿನ ಸರ್ವವೂ ಆದ ಸಿಕಂದರನನ್ನು "ಏನಪ್ಪಾ ಹಾಡುಗಳು ಹಿಂಗ್ ಆಗಿದಾವೆ" ಅಂದೆ! ಅದಕ್ಕೆ ಸಿಕಂದರ್ ನಗುತ್ತ "ಸುಮ್ನಿರಣ್ಣಾ, ನಿನಿಗೆ ವಯಸ್ಸಾಯ್ತು" ಎಂದ!
"ಲೇಯ್, ಊರಲಿ ನಡಿಯೋ ವಿಸ್ಯಾ, ತಿಳ್ಕೊ ಸಿಸ್ಯಾ ಸಿಸ್ಯಾ! ನನ್ಗೆ ವಯಸ್ಸಾಯ್ತು ಅಂತಾ ಆ ನಿನ್ ಹೇಲೋ ಫಿಗರ್ ಸ್ಮಿತ್ತಾ ಸ್ಮಿತ್ತಾ ಹೇಳ್ಬೇಕು. ಆಕೆ ಸಖತ್ ಹಾಟ್ ಮಗ ಅಂತಿರೋದು ನಂಗೆ ಕಣಲೇ! ಇರ್ಲಿ, ಈಗ ಈ ಸಿಂಧುಗೆ ಮಿರ್ಚಿ ತಿನ್ನಿಸ್ತಾ ಟೈಮ್ ಪಾಸ್ ಮಾಡ್ಬೇಕು, ನಡಿ" ಎಂದು ಕಣ್ಣು ಹೊಡೆದು "ಅಧ್ಯಕ್ಸ ಅಧ್ಯಕ್ಸ ಅಧ್ಯಕ್ಸ,
ಕೈಗೊಂದು ಮೈಕ್ ಕೊಟ್ರೆ ಅಲ್ಲೆನೆ ಭಾಸಣ, ಸೆಂಟ್ರಲ್ಲಿ ಸೀಟ್ ಕೊಟ್ರೆ ಅದುಕ್ಕೊಂದು ಭೂಸಣ" ಎಂದು ಸಿಕಂದರ್ ಬಾಯಿ ಬಿಡುವಂತೆ ಇನ್ಸ್ಟಂಟ್ ಕನ್ನಡ ಉಚ್ಚಾರದ ಒಂದು ಅಪ್ಡೇಟ್ ದೌನ್ಲೋಡ್ ಮಾಡಿಕೊಂಡು ಮಿಂಡ್ರಿಗುಟ್ಟಿದ್ ಮಿರ್ಚಿ ಕಂ ಬೆಣ್ಣೆದೋಸೆ ಪುರಪ್ರವೇಶಕ್ಕೆ ಸಿದ್ಧನಾದೆ!
ಬೆಂಗಳೂರಿನ ಪ್ರಪ್ರಥಮ ಟೋಲಿನಲ್ಲೇ ಇದ್ದ fast tag ಸೇವಾ ಕೇಂದ್ರದಲ್ಲಿ ರೂ.550 +ರೂ.2000 ಕೊಟ್ಟು tag ತೆಗೆದುಕೊಂಡೆ. ಸೇವಾ ಕೇಂದ್ರದ ವ್ಯಕ್ತಿ ಯಾವ ಮಾಸ್ಕ್ ಇಲ್ಲದೆ ನನ್ನ ಸೆಲ್ ಫೋನ್ ಪಡೆದು ತಿಕ್ಕಿ, ತೀಡಿ, ಹಿಂದೆ ಮುಂದೆ ಆಡಿಸಿ ಆಪ್ ಹಾಕಿಕೊಟ್ಟು ಡಿಪಾಸಿಟ್ ಬಿಟ್ಟು ರೂ. 2150 ನಿಮ್ಮ ಟ್ಯಾಗ್ ಬ್ಯಾಲೆನ್ಸ್ ಇದೆ ಎಂದ.
ಚಿತ್ರದುರ್ಗ ಟೋಲಿಗೆ ಬರುತ್ತಿದ್ದಂತೆಯೇ ಟ್ಯಾಗ್ low balance ಎಂದಿತು. ಟೋಲಿನವನಿಗೆ ICICI ಬ್ಯಾಂಕಿನಿಂದ ಬಂದ ಬ್ಯಾಲೆನ್ಸ್ ಮೆಸೇಜ್ ತೋರಿಸಿದೆ. ಆತ ಇದಕ್ಕೂ ನಮಗೂ ಸಂಬಂಧವಿಲ್ಲ ಟೋಲ್ ಫ್ರೀ ನಂಬರಿಗೆ ಫೋನ್ ಮಾಡಿ ವಿಚಾರಿಸಿಕೊಳ್ಳಿ. ಈಗ ಡಬ್ಬಲ್ ಟೋಲ್ ಕಟ್ಟಿ ಎಂದ. "ಅರೆ, ನಿಮ್ಮದೇ ಟೋಲ್ ಸಿಬ್ಬಂದಿಯ ಬಳಿ ಕಳೆದ ಎರಡು ಗಂಟೆಗಳ ಹಿಂದೆ ಕೊಂಡ ಟ್ಯಾಗ್ ಇದು. ಹಣ ಕಟ್ಟಿದ ಮೆಸೇಜ್ ಇಲ್ಲಿದೆ. ಹೀಗಿದ್ದಾಗ ಸಮಸ್ಯೆ ನಿಮ್ಮದೇ, ನನ್ನದೇ?" ಎಂದೆ.
ಆತ ಟೈಮ್ ವೇಸ್ಟ್ ಮಾಡಬೇಡಿ ಡಬ್ಬಲ್ ಕಟ್ಟಿ ನಡೀತಾ ಇರಿ ಎಂದ. ನಾನು ಆಗಲ್ಲ ಎಂದೆ. ಅಷ್ಟರಲ್ಲಿ ಹಿಂದಿನವನು "ಸರ್, ಇರ್ಲಿ ಟೋಲ್ ಕಟ್ಟಿ ಸೈಡಿಗೆ ಹಾಕಿ ವಿಚಾರಿಸಿಕೊಳ್ಳಿ, ನಾವು ಹೋಗಬೇಕು" ಎಂದ. ಅಷ್ಟರಲ್ಲಿ ಟೋಲಿನವ ತೋಳೇರಿಸಿಕೊಂಡು ಬಂದ. ನಾನೂ ತೊಳೇರಿಸಿದೆ. ಆಗ ನನ್ನ ಅಪ್ಪಟ ಕನ್ನಡ ಉಚ್ಚಾರ ಕೇಳಿ ಬೆದರಿದ ತೋಳಿನವ "ಸರ್ಕಾರ ಕೇಳಿ, ನಮ್ಮನ್ನೇನು ಕೇಳ್ತೀರಾ" ಎಂದ. "ನಿನಗೆ ಇಲ್ಲಿ ಕೂರಿಸಿ ಸಂಬಳ ಕೊಡೋದು ನಾನಾ ಸರ್ಕಾರನ. ನೀನೇ ಕಣಪ್ಪ ಸರ್ಕಾರ" ಎಂದೆ. ಅಷ್ಟರಲ್ಲಿ ಹಿಂದಿನವ "ನಾನು ಟೋಲ್ ಕಟ್ಟುತ್ತೇನೆ ಅವರದು, ಬಿಡು" ಎಂದು ಜೇಬೇರಿಸಿದ! ಎಲಾ ಇವನ ವ್ಯವಸ್ಥೆ ಸರಿಯಿರದೆ, ತಂತ್ರಜ್ಞಾನವನ್ನು ಪರೀಕ್ಷಿಸದೆ ಡಿಜಿಟಲ್ ಡಿಜಿಟಲ್ ಎಂದು ಬೊಮ್ಮಡಿ ಹೊಡೆಯುವ ಗಿಲೀಟು ವ್ಯವಸ್ಥೆಯನ್ನು ವಿರೋಧಿಸುವ ವೀರ್ಯವೇ ಇಲ್ಲದ ಜನ ಎಷ್ಟೊಂದು ನಿರ್ವೀರ್ಯರಾಗಿದ್ದಾರೆನಿಸಿತು. ಆಗ ಆತನಿಗೆ "ನೋಡ್ರೀ, ದುಡ್ಡು ನನ್ನ ಹತ್ರಾನೂ ಸಾಕಷ್ಟಿದೆ. ಅದೆಲ್ಲವೂ ಕ್ಯಾಶ್ ಲೆಸ್ ರೂಪದಲ್ಲಿದೆ. ಪ್ರಧಾನಿ ಹೇಳಿದ ರೂಪದಲ್ಲಿರುವ ನನ್ನ ಹಣಕಾಸನ್ನು ಇವನ ರೀಡರ್ ಇಲ್ಲ ಎಂದೊಡನೆ ಒಪ್ಪಬೇಕೆ? ನೀವು ನನ್ನ ಜೊತೆ ಬಂದು ಹೋರಾಟ ಮಾಡಬೇಕೆ ಹೊರತು ಹೀಗೆ ಜೇಬು ತೋರಿಸುವುದಲ್ಲ" ಎಂದೆ. ಅಷ್ಟರಲ್ಲಾಗಲೇ ಪೊಂಯ್ ಪೊಂಯ್ ಪೀ ಪೀ ಎಂದು ನನ್ನ ಹಿಂದೆ ದೊಡ್ಡ ಕ್ಯೂ ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋದೀತೆಂದು "ತೋಳಿನವ" ಗೇಟ್ ತೆಗೆದು ಹೋಗಿ ಹೋಗಿ ಎಂದ. ಆಗ ನಾನು "ನಿನ್ನ ಭಿಕ್ಷೆ ಯಾವನಿಗೆ ಬೇಕಿದೆ. ಟೋಲ್ ಮುರಿದುಕೊಂಡು ನನ್ನ ಬ್ಯಾಲೆನ್ಸ್ ತೋರಿಸಿ ಕಳಿಸು. ಇಲ್ಲಾ ಅವನ್ಯಾವನು ನಿನ್ನ ಬಾಸು, ಅವನನ್ನು ಇಲ್ಲಿ ಕರೆ" ಎಂದು ಬಗ್ಗಿದವನ ಜುಟ್ಟು ಹಿಡಿದೆ. ಕಡೆಗೆ ನನ್ನ ಕಾರಿನ ಹಿಂದಿದ್ದವರೆಲ್ಲಾ ಇರ್ಲಿ ಬಿಡಿ, ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ ಎಂದು ಗೋಗರೆದಾಗ ಹಾಳಾಗಿ ಹೋಗಿ ಎಂದು ಹೊರಟೆ.
ಇದು ಒಂದು ಧೀರ್ಘಾಲೋಚನೆಯಿಲ್ಲದೆ, ದಿಢೀರ್ ಎಂದು ತರುವ ಬದಲಾವಣೆಗಳ ಎಡವಟ್ಟು!
ಕೇವಲ ಒಂದು ಏರ್ಪೋರ್ಟಿನಲ್ಲಿಳಿದು, ಇರುವ ಏಕೈಕ ರಸ್ತೆಯಲ್ಲಿ ನನ್ನೂರಿಗೆ ಹೋಗುವಾಗ ಇಷ್ಟೊಂದು ಅವ್ಯವ್ಯಸ್ಥೆಗಳ ಆಗರ ನನ್ನಂತಹ ಪರದೇಸಿ ಬೇವರ್ಸಿಯ ಕಣ್ಣಿಗೆ ಬೀಳುತ್ತಿದ್ದರೆ, ದೇಶೋದ್ಧಾರ ಮಾಡಲೆಂದೇ ರಾಜಕೀಯ, ಸಮಾಜ ಶೇವೆ, ಸಾರ್ವಜನಿಕ ಶೇವೆ, ಮಾಧ್ಯಮ ಶೇವೆ, ಪಂಥ ಶೇವೆ, ನ್ಯಾಯ ಶೇವೆ, ಪಕ್ಷ ಶೇವೆ ಮುಂತಾದ ಶೇವೆಗಳಲ್ಲಿರುವ ಕಾಂಗ್ರೆಸ್, ಕಮ್ಯುನಿಸ್ಟ್, ಎಡಪಂಥ, ಸುಡುಗಾಡು ಟ್ರೋಲಿನಲ್ಲಿ ಕಳೆದು ಹೋಗಿ ದೃಷ್ಟಿಯನ್ನೇ ಕಳೆದುಕೊಂಡಿರುವ ಹೆಡ್ಡರ ಬಿಡಿ, freedom of movement ಎಂಬ ಹಕ್ಕಲ್ಲ, ಮಾನವ ಸಹಜ instinct ಅನ್ನೇ ಕತ್ತರಿಸಿಕೊಂಡಿರುವ ಆದರೆ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದು ತನ್ನ "ಕತ್ತರಿಸಿಕೊಂಡು ಇದೆಯೋ ಇಲ್ಲವೋ ಎಂಬಂತಿರುವುದನ್ನೇ ಬಹುದೊಡ್ಡ" ಎಂದು 56 ಇಂಚು ಅಗಲಿಸಿ ಬೀಗುವ ಪ್ರಜೆಯ ಕಂಡು ಓಡಿ ಹೋಗೋಣವೆನಿಸುತ್ತಿದೆ.
ಒಟ್ಟಿನಲ್ಲಿ ಒಳಗೆ ಹೇಗಿದ್ದರೇನು ಮೇಲೆ ಕೆಂಪು ಕೆಂಪಾಗಿ ಕಾಣಬೇಕು. ಅಂತಹ ನಿರೀಕ್ಷೆ ಇಟ್ಟುಕೊಂಡೇ ಅಲ್ಲವೇ ಪಕ್ಷ ಬದಲಿಸಿ ರಂಗುರಂಗಿನ ಪ್ರಧಾನ ಪಕ್ಷ ಸೇರಿದ ಜಾರಿದ ಹೊಳಿ ನಿರೀಕ್ಷಿಸುತ್ತಿರುವುದು!
ಜಾರಿಕಿ ಒಬ್ಬನೇ ಅಲ್ಲ ಬಣ್ಣ ಹಚ್ಚಿಕೊ ಎನ್ನುತ್ತಿರುವುದು ಪ್ರಧಾನ ಶೇವಕರ ಕಚೇರಿಯಿಂದ ಟೋಲ್ ಗೇಟಿನಲ್ಲಿ ನನ್ನ ಹಿಂದಿದ್ದ ಅಸಂಖ್ಯಾತ ಪ್ರಜಾಪ್ರಭುಗಳವರೆಗೆ ಎಲ್ಲರೂ "ಬಣ್ಣ ಹಚ್ಚಿಕೊ ಬಣ್ಣ ಹಚ್ಚಿಕೊ" ಎನ್ನುತ್ತಿದ್ದಾರೆನಿಸಿತು!
#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ
No comments:
Post a Comment