ಎಸ್.ಎಂ. ಕೃಷ್ಣ ಬೆಂಗಳೂರನ್ನು ಸಿಂಗಾಪುರ ಮಾಡ್ತೀನಿ ಎಂದು ರಿಯಲ್ ಎಸ್ಟೇಟ್ ಬಬಲ್ ಸೃಷ್ಟಿಗೆ ಕಾರಣರಾದರು. ಈ ಬಬಲ್ಲಿನಲ್ಲಿ ಸೋನಿಯಾ ಅಳಿಯನಷ್ಟೇ ಅಲ್ಲ, ಅರ್ಧ ಎಕರೆ ಬೋರೇಗೌಡ ಸಹ ಹೊಲ ಮಾರಿಕೊಂಡು ಲೋಲುಪ್ತನಾಗಿ ತೇಲಿದ.

ಮೋದಿ, ದೇಶದೊಳಗಿನ ಕಪ್ಪುಹಣ ಗುಡಿಸಿ ಹಾಕಬಹುದಾಗಿದ್ದ ನೋಟ್ ಬ್ಯಾನ್ ನಂತರ ಹೆಚ್ಚಿನ ಹಣ ಹಾಕಿದ ಖಾತೆಗಳ ಆಡಿಟ್ ಮಾಡಿಸದೆ ತಿಪ್ಪೆ ಸಾರಿಸಿದರು. ದೇಶವಾಗಲೇ ವಿಶ್ವಗುರು ಆಗಿದೆ ಎಂದು ಬಡ್ಡಿ ದರವನ್ನು ಈಗ ಕ್ರಮವಾಗಿ ಶೂನ್ಯಕ್ಕೆ ತರುತ್ತಿದ್ದಾರೆ.  ಇದರಿಂದ ಬಂಡವಾಳ ಸೃಷ್ಟಿಯಾಗುವುದು ನಿಂತು ಮತ್ತದೇ ರಿಯಲ್ ಎಸ್ಟೇಟ್ ಬಬಲ್ ಜೊತೆಗೆ ಹಣದುಬ್ಬರ, ಬೆಲೆಯೇರಿಕೆಗಳು ಮತ್ತಷ್ಟು ಹಿಗ್ಗುತ್ತಿವೆ. ಒಟ್ಟಾರೆ ನವಕೋಟಿ ನಾರಾಯಣನೂ ಈಗ ದರಿದ್ರ ನಾರಾಯಣನಾಗುತ್ತಿದ್ದಾನೆ.  

ಕೆಲವು ಆಫ್ರಿಕಾ ದೇಶಗಳಲ್ಲಿ ರದ್ದಿ ಪೇಪರ್ ಬಂಡಲ್ಲುಗಳಂತೆ ಹಣವನ್ನು ಹೊತ್ತುಕೊಂಡು ತರಕಾರಿ ತರಲು ಹೋಗುತ್ತಾರೆ.  ದೂರಗಾಮಿಗಳಾದ ಪ್ರಧಾನಿಗಳು ಬಹುಶಃ

ಅದನ್ನು ಮನಗಂಡೇ ಭವಿಷ್ಯದಲ್ಲಿ ತನ್ನ ನಾಗರಿಕರು ಆ ರೀತಿ ರೂಪಾಯಿಯ ಬಂಡಲ್ಲುಗಳನ್ನು ಹೊರದಿರಲಿ ಎಂದು "ಕ್ಯಾಷ್ ಲೆಸ್" ಇಕಾನಮಿಗೆ ಒತ್ತು ಕೊಟ್ಟಿರಬಹುದು.

ಇನ್ನು ಮಾಹಿತಿ ತಂತ್ರಜ್ಞಾನದ ಗುರುವೆಂದು ಬೀಗುವ ದೇಶದ ಆಡಳಿತ, ತನ್ನ ನಾಗರೀಕರ ಆಧಾರ್ ಕಾರ್ಡನ್ನು ಫೇಸ್ಬುಕ್ಕಿನಂತಹ ಸಾಮಾಜಿಕ ಮಾಧ್ಯಮ ತಾಣದ ಖಾತೆಗೂ ಜೋಡಿಸುತ್ತಿದೆ, ಫೇಸ್ಬುಕ್ ಬೇಡವೆಂದಿದ್ದರೂ ಸಹ! ಆಧಾರ್ ಅಂತಹ ಕಾರ್ಡಿನ ಗೋಪ್ಯತೆ, ಭದ್ರತೆಯನ್ನು ಹೀಗೆ ಸಾರಾಸಗಟಾಗಿ ಬೇಡವಾದ ಕಡೆಯಲ್ಲೆಲ್ಲಾ ಜೋಡಿಸುವ ಘನ ಉದ್ದೇಶವೇನು?! ಚೈನಾ ಮಾಡುತ್ತಿರುವುದು ಸಹ ಇದೇ.

ಬಹುಪರಾಕು (ಬಲ), ಬರೀ ಪುಕಾರು (ಎಡ) ಬಿಟ್ಟು ವಾಸ್ತವಿಕವಾಗಿ ಚಿಂತಿಸಿ. Dig deep, my friends. Dig deep!

ನೀರ ಮೇಲಣ ಗುಳ್ಳೆ ಒಡೆಯುವ ಸಮಯ ಹತ್ತಿರವಿದೆಯೋ ಅಥವಾ ಬಂಡಲ್ಲುಗಳನ್ನು ಹೊರಲು ಬೆನ್ನು ಮೂಳೆಯನ್ನು ಹುರಿಗಟ್ಟಿಸಬೇಕೋ ಆ 56 ಇಂಚಿನ ಗುರುವಿನ ಗುರು ವಿಶ್ವಗುರುವೇ ಬಲ್ಲ!

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಶ್ರೀಲಂಕಾ ಆಹಾರ ಅಭಾವಕ್ಕೆ ಸಾವಯವ ಕೃಷಿ ಕಾರಣವೇ!?

 ಶ್ರೀಲಂಕಾ ಆಹಾರ ಅಭಾವಕ್ಕೆ ಸಾವಯವ ಕೃಷಿ ಕಾರಣವೇ!


ಶ್ರೀಲಂಕಾ ಅಧ್ಯಕ್ಷ ಗೊತಬಾಯ ರಾಜಪಕ್ಸ ಈ ವರ್ಷದ ಆರಂಭದಲ್ಲಿ ತಮ್ಮ ದೇಶ ಸಂಪೂರ್ಣವಾಗಿ ಸಾವಯವ ಕೃಷಿಯ ದೇಶವೆಂದು ಘೋಷಿಸಿ ಎಲ್ಲಾ ರಾಸಾಯನಿಕ ಗೊಬ್ಬರಗಳನ್ನು ಬ್ಯಾನ್ ಮಾಡಿದರು. ಈ ರಾಸಾಯನಿಕ ಗೊಬ್ಬರದ ಬಹಿಷ್ಕಾರ ಶ್ರೀಲಂಕಾದಲ್ಲಿ ಆಹಾರ ಅಭಾವವನ್ನುಂಟು ಮಾಡಿದೆ ಎಂದು ಸುದ್ದಿ ಮಾಧ್ಯಮಗಳು ಸುದ್ದಿ ಮಾಡಿ ಸಾವಯವ ಕೃಷಿಯನ್ನು ಇಂದು ಒರೆಗೆ ಹಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾದ ಆಹಾರ ಅಭಾವಕ್ಕೆ ಸಾವಯವ ಕೃಷಿಯೇ ಪ್ರಮುಖ ಕಾರಣವೇ? ನೋಡೋಣ ಬನ್ನಿ.


ಶ್ರೀಲಂಕಾ ಕಳೆದೆರಡು ದಶಕಗಳಿಂದಲೂ ಸಾವಯವ ಕೃಷಿಯಲ್ಲಿ ಸಾಕಷ್ಟು ಪ್ರಗತಿ ಮಾಡಿದೆ. ಶ್ರೀಲಂಕಾದ ಸಾವಯವ ಕೃಷಿ ಪದ್ದತಿಯಲ್ಲಿ ಬೆಳೆದ ಕೆಂಪು ಅಕ್ಕಿ, ಮಸಾಲೆ ಪದಾರ್ಥಗಳಿಂದ ತೆಂಗಿನ ಸೇಂದಿಯವರೆಗೆ ಸಾವಯವ ಕೃಷಿ ಉತ್ಪನ್ನಗಳು ವಿಶ್ವಾದ್ಯಂತ ಮಾರುಕಟ್ಟೆಯನ್ನು ಕಂಡುಕೊಂಡಿದ್ದವು. ಆದರೂ ೨೦೧೯ರಲ್ಲಿ ಸುಮಾರು ಹದಿನೈದು ಲಕ್ಷ ಹೆಕ್ಟೇರ್ ಕೃಷಿ ಭೂಮಿಯನ್ನು ಹೊಂದಿದ್ದ ಶ್ರೀಲಂಕಾದಲ್ಲಿ ಸುಮಾರು ಒಂದು ಲಕ್ಷ ಹೆಕ್ಟೇರ್ ಭೂಮಿ ಸಾವಯವ ಕೃಷಿಗೆ ಒಳಪಟ್ಟಿತ್ತು, ಮಾತ್ರ!  ಹಾಗಾಗಿ ಸಾವಯವ ಕೃಷಿಯಲ್ಲಿ ದಾಪುಗಾಲಿನ ಪ್ರಗತಿಯಾಗುತ್ತಿದ್ದರೂ ಅದನ್ನೇ ನಂಬಿಕೊಳ್ಳುವಷ್ಟು ಪ್ರಗತಿ ಅದಾಗಿರಲಿಲ್ಲ. ಅದಲ್ಲದೇ ಆಹಾರ ಸಾಮಗ್ರಿ ಶ್ರೀಲಂಕಾದ ಪ್ರಮುಖ ಅಮದುಗಳಲ್ಲೊಂದು ಕೂಡ!


ಇದೆಲ್ಲದರ ಅರಿವಿದ್ದೇ ೨೦೧೯ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂದಸೇನ ಗೊಟಬಾಯ ರಾಜಪಕ್ಸ ವಿದೇಶಗಳಿಂದ ಅಮದಾಗುವ ರಾಸಾಯನಿಕ ಗೊಬ್ಬರಗಳ ಮೇಲೆ ಸಬ್ಸಿಡಿ ಕೊಡುವುದಾಗಿ ಘೋಷಿಸಿದ್ದರು. ಹೀಗಿದ್ದಾಗ ದಿಢೀರೆಂದು ೨೦೨೧ರ ಆರಂಭದಲ್ಲಿ ರಾಸಾಯನಿಕ ಗೊಬ್ಬರ ಬಳಸುವುದನ್ನೇ ನಿಷೇಧಿಸಿ ಸಂಪೂರ್ಣ ಸಾವಯವ ಕೃಷಿಗೆ ದೇಶವನ್ನಳವಡಿಸಲು ಈ ಅಧ್ಯಕ್ಷರು ಘೋಷಿಸಿದರೇಕೆ?


ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ೨೦೧೫/೧೬ ರಲ್ಲೇ ಹದಗೆಟ್ಟಿತ್ತು. ಇದನ್ನು ಸರಿಪಡಿಸಲು ಅಂದಿನ ಸಿರಿಸೇನಾ-ವಿಕ್ರಮಸಿಂಘೆ ಆಡಳಿತ ’ದರ ನೀತಿ ಮಾರ್ಗ’ ಯಾನೆ ಪಾಲಿಸಿ ರೇಟ್ ಕಾರಿಡಾರ್ ಅನ್ನು ಜಾರಿಗೆ ತಂದಿತ್ತು. ಆದರೆ ಈ ದರ ನೀತಿ ಮಾರ್ಗವನ್ನು ಸರಿಯಾಗಿ ರಕ್ಷಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳದಿದ್ದರೆ ಆರ್ಥಿಕ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದರು. ಅದಲ್ಲದೆ 2005 ರಿಂದ 2015ರವರೆಗೆ ಬೃಹತ್ ಯೋಜನೆಗಳಿಗಾಗಿ ಶ್ರೀಲಂಕಾ ಚೈನಾದಿಂದ ಬಿಲಿಯನ್ನುಗಟ್ಟಲೆ ಸಾಲ ಪಡೆದಿತ್ತು. ಈ ಸಾಲದ ಒಂದು ಬಾಬ್ತಾದ ಒಂದೂವರೆ ಬಿಲಿಯನ್ ಡಾಲರನ್ನು 2017ರಲ್ಲಿ ಕಟ್ಟಲಾಗದೆ ಚೀನೀ ಕಂಪೆನಿಯೊಂದಕ್ಕೆ ಹಂಬಂಟೋಟ ಬಂದರನ್ನು 99 ವರ್ಷಗಳ ಕಾಲಕ್ಕೆ ಲೀಸಿಗೆ ಕೊಟ್ಟಿದೆ.


ಹೀಗೆ ಆರ್ಥಿಕ ಸಂಕಷ್ಟಗಳನ್ನು ಬೆನ್ನಿಗೆ ಕಟ್ಟಿಕೊಂಡೇ 2019ರಲ್ಲಿ ಅಧಿಕಾರ ವಹಿಸಿಕೊಂಡ ರಾಜಪಕ್ಸ, ಬೀಳುಗತಿಯಲ್ಲಿದ್ದ ವಿದೇಶಿ ವಿನಿಮಯವನ್ನು ತಹಬದಿಗೆ ತಂದು ಸುಸ್ಥಿರಗೊಳಿಸುವುದಾಗಿ ಭರವಸೆಯನ್ನು ಸಹ ನೀಡಿದ್ದರು. 


ಇದೆಲ್ಲದರ ನಡುವೆಯೂ ಒಂದು ತಾತ್ಕಾಲಿಕ ಆರ್ಥಿಕ ಹಿಂಜರಿತದ ನಂತರ ಮಂದ ಏರುಗತಿಯ ಆರ್ಥಿಕ ಪ್ರಗತಿ ಬರಲಿದೆ, ಏಕೆಂದರೆ ಇದು ಸೈಕ್ಲಿಕಲ್ ಎಂದು ವಿಶ್ಲೇಷಕರು ಅರ್ಥೈಸಿದ್ದರು.


ಆದರೆ ಆ ಸೈಕ್ಲಿಕಲ್ ಆರ್ಥಿಕ ಚಕ್ರವನ್ನು ಪಂಚರ್ ಮಾಡಿದ್ದುದು ಕೋವಿಡ್ ೧೯!


ರಾಜಪಕ್ಸೆಯ ಎಲ್ಲಾ ಪ್ಲ್ಯಾನುಗಳನ್ನು ತಲೆಕೆಳಗಾಗಿಸಿದ ಕೋರೋನಾ ದೇಶವನ್ನು ಹಿಂದೆಂದೂ ಕಾಣದಂತಹ ಆರ್ಥಿಕ ಸಂಕಷ್ಟಕ್ಕೆ ತಳ್ಳಿತು. ಕೋರೋನಾ ಉಂಟು ಮಾಡಿದ ಆರ್ಥಿಕ ಸಂಕಷ್ಟಗಳು ಹಲವಾರು! ವಿದೇಶಿ ವಿನಿಮಯ ತರುತ್ತಿದ್ದ ಪ್ರವಾಸೋದ್ಯಮವನ್ನು ಕೋವಿಡ್ 19 ಸ್ಥಗಿತಗೊಳಿಸಿತು.  ಸಾವಯವ ಕೃಷಿ ಉತ್ಪನ್ನಗಳು ಅಂತರಿಕವಾಗಿಯೇ ಉಪಯೋಗಿಸಲ್ಪಟ್ಟು ಅವುಗಳ ಆಮದು ಸ್ಥಗಿತಗೊಂಡಿತು. ಅದಾಗಲೇ ಹಳ್ಳ ಹಿಡಿದಿದ್ದ ವಿದೇಶಿ ವಿನಿಮಯದ ಮೀಸಲು ನಿಧಿ ಸಹ ಬರಿದಾಗಿ ಇದೇ 2021ರ ಏಪ್ರಿಲ್ ತಿಂಗಳಲ್ಲಿ ವಿದೇಶಿ ವಿನಿಮಯ ಮೀಸಲು ನಿಧಿಗಾಗಿಯೇ 500 ಮಿಲಿಯನ್ ಡಾಲರ್ ಸಾಲವನ್ನು ಮತ್ತೆ ಚೈನಾದಿಂದ ಪಡೆಯಲಾಯಿತು. ಆದರೂ ಪರಿಸ್ಥಿತಿ ತಹಬದಿಗೆ ಬರಲಿಲ್ಲ. ೨೦೧೮ರಲ್ಲಿ ಒಂದು ಡಾಲರಿಗೆ ೧೬೦ ರೂಪಾಯಿಯಿದ್ದದ್ದು ೨೦೧೯ಕ್ಕೆ ೧೮೦ ಆಗಿ ಇಂದು ೨೦೦ ರೂಪಾಯಿಯಾಗಿದೆ. ವಿದೇಶಿ ವಿನಿಮಯವನ್ನು ತಹಬದಿಗೆ ತರುತ್ತೇನೆ ಎಂದಿದ್ದ ರಾಜಪಕ್ಸರ ಕೈಗಳನ್ನು ಕೋರೋನಾ ಕಟ್ಟಿಹಾಕಿಬಿಟ್ಟಿತು. ಶ್ರೀಲಂಕಾದ ಕ್ರೆಡಿಟ್ ರೇಟಿಂಗ್ ತಪ್ಪಿ ಬ್ಯಾಂಕಿಂಗ್ ವ್ಯವಸ್ಥೆ ಅಲ್ಲೋಲಕಲ್ಲೋಲವಾಗಿ ಬಡ್ಡಿ ದರ ಮಿತಿ ಮೀರಿತು. ಬಡ್ಡಿದರಕ್ಕೆ ತಕ್ಕಂತೆ ಹಣದುಬ್ಬರವೇರಿ ಶ್ರೀಲಂಕಾದ ರೂಪಾಯಿ ಮತ್ತಷ್ಟು ಪಾತಾಳಕ್ಕಿಳಿಯಿತು. ವಿದೇಶಿ ವಿನಿಮಯ ದುರ್ಲಭವಾಯಿತು!


ಈಗ ಅನಿವಾರ್ಯವಾಗಿ ರಾಜಪಕ್ಸ ಆಡಳಿತವು ರಾಸಾಯನಿಕ ಗೊಬ್ಬರಗಳಿಗೆ ಸಬ್ಸಿಡಿ ಕೊಡುವುದು ಬಿಡಿ, ಅಮದು ಮಾಡಿಕೊಳ್ಳುವುದೇ ಕಷ್ಟವಾಗಿ ಅಂತಿಮವಾಗಿ ಅಮದನ್ನು ಸ್ಥಗಿತಗೊಳಿಸುವಂತಹ ಆರ್ಥಿಕ ಬಿಕ್ಕಟ್ಟು ಬಂದೆರಗಿದೆ. ಆಹಾರ ಸಾಮಗ್ರಿ ಮತ್ತು ರಾಸಾಯನಿಕ ಗೊಬ್ಬರಗಳೆರಡನ್ನೂ ಆಮದು ಮಾಡಿಕೊಳ್ಳುವುದು ದುಸ್ತರವಾದಾಗ ಅಲ್ಲಿನ ಆಡಳಿತವೇನು ಮಾಡಬಲ್ಲದು?


ಹಾಗಾಗಿಯೇ ರಾಜಪಕ್ಸ ದೇಶವಿನ್ನು ಸಂಪೂರ್ಣ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕು ಎಂದು ತುರ್ತಾಗಿ ಘೋಷಿಸಿದ್ದಾರೆ. ಆದರೆ ನಮ್ಮಲ್ಲಿ ಹಣವಿಲ್ಲ, ಪರಿಸ್ಥಿತಿ ಹದಗೆಟ್ಟಿದೆ ಎಂಬ ತೆರೆದ ಗುಟ್ಟಿನ ಸತ್ಯವನ್ನು ಮನವರಿಕೆ ಮಾಡಿಕೊಡದೆ ಪ್ರಪಂಚದಲ್ಲಿಯೇ ಮೊದಲ "ಸಂಪೂರ್ಣ ಸಾಯವಯ ದೇಶ" ಶ್ರೀಲಂಕಾ ಆಗಬೇಕು ಎಂಬ ಹುಸಿ ಅಭಿಮಾನದ ಅಭಿಯಾನವಾಗಿ ಘೋಷಿಸಿಬಿಟ್ಟಿದ್ದಾರೆ. ಏಕೆಂದರೆ ಶ್ರೀಲಂಕಾದ ಹಿಂದಿನ ಸರ್ಕಾರಗಳು ಯಾವುದೇ ವಿರೋಧಿ ಬಣದ್ದಲ್ಲದೆ ಇವರ ಸೋದರನ ಬಣವೇ ಆಗಿತ್ತು!!! LTTEಯನ್ನು ಮಟ್ಟ ಹಾಕಿದರೆಂಬ ಏಕೈಕ ಕಾರಣಕ್ಕಾಗಿ ಈ ರಾಜಪಕ್ಸ ಕುಟುಂಬಕ್ಕೆ ಸಿಂಹಳೀಯರು 2009ರಿಂದಲೂ ಬೆಂಬಲಿಸಿಕೊಂಡು ಬಂದಿದ್ದಾರೆ.


ಆದರೆ ಈ ಘೋಷಣೆ ಅಲ್ಲಿನ ದುರಾಡಳಿತ, ಊಳಿಗಮಾನ್ಯ ಪ್ರಜಾಪ್ರಭುತ್ವದ ಆರ್ಥಿಕ ತುರ್ತುಪರಿಸ್ಥಿತಿಯ ಭಾಗವಾಗಿಯೇ ಹೊರತು ಇನ್ಯಾವುದೇ ಆರ್ಥಿಕ, ಸಾಂಸ್ಕೃತಿಕ, ಸ್ವಾಭಿಮಾನ, ಘನತೆಯ ಭಾಗವಾಗಿ ಅಲ್ಲವೆಂಬುದು ಎಲ್ಲರೂ ಬಲ್ಲ ಗುಟ್ಟು! ಈ ಅರ್ಥಿಕ ತುರ್ತುಪರಿಸ್ಥಿತಿ ಕೇವಲ ರಾಸಾಯನಿಕ ಗೊಬ್ಬರವಲ್ಲದೆ ಅನೇಕ ಆಹಾರ ಸಾಮಗ್ರಿಗಳು, ಔಷಧಿಗಳು ಮತ್ತಿತರೆ ಮೂಲಭೂತ ಸೌಕರ್ಯಗಳ ವಸ್ತುಗಳ ಅಮದಿಗೂ ಕುತ್ತುಂಟಾಗಿ ಇಂದು ಆಹಾರ ಅಭಾವವಲ್ಲದೇ ಆರೋಗ್ಯ, ಮೂಲಸೌಕರ್ಯಗಳ ಅಭಾವವನ್ನೂ ಉಂಟು ಮಾಡಿವೆ. ಇದೆಲ್ಲದರ ಜೊತೆಗೆ ಕೊರೋನಾ ಸಹ ತಾಂಡವವಾಡುತ್ತಿದೆ.


ಇದನ್ನು ಕೆಲವರು ಭಾರತದಲ್ಲಿನ ಮೋದಿ ಸರ್ಕಾರದೊಂದಿಗೆ ರಾಜಪಕ್ಸ ಆಡಳಿತವನ್ನು ಹೋಲಿಸುತ್ತಾರೆ. ರಾಜಪಕ್ಸ ರಾಷ್ಟ್ರೀಯತೆ, ಮತ್ತು ಸಾವಯವ ಕೃಷಿಯನ್ನು ಘನತೆಯಾಗಿಸಿದ್ದಾರೆನ್ನುತ್ತ ಅದನ್ನು ಮೋದಿಯವರ ರಾಷ್ಟ್ರೀಯತೆ, ಆತ್ಮನಿರ್ಭರ, ಮತ್ತು ಹಿಂದುತ್ವಕ್ಕೆ ತುಲನೆ ಮಾಡುತ್ತ ಅಭಾಸವನ್ನುಂಟು ಮಾಡುತ್ತಿದ್ದಾರೆ. ಸದ್ಯದ ಶ್ರೀಲಂಕಾ ಪರಿಸ್ಥಿತಿ ಇಂದಿನದಲ್ಲ. ಅದು 2005ರಿಂದಲೂ ಬೆಳೆಯುತ್ತಾ ಬಂದಿದೆ! ಹಾಗಾಗಿ ಶ್ರೀಲಂಕಾದ ಆರ್ಥಿಕ ತುರ್ತುಪರಿಸ್ಥಿತಿಯನ್ನು ಭಾರತದೊಂದಿಗೆ ತುಲನೆ ಮಾಡುವುದು ಸರಿಯಲ್ಲ. ಎಡಪಂಥೀಯರು ಹಾಗೆ ತುಲನೆ ಮಾಡಿ ಅನವಶ್ಯಕವಾಗಿ ಬಲಪಂಥೀಯರಿಗೆ ಹಿಂದಿನ ಸರ್ಕಾರಗಳನ್ನು ಅದರಲ್ಲೂ ಮನಮೋಹನ್ ಸಿಂಗರಿಂದ ನೆಹರೂರವರೆಗಲ್ಲದೆ ರಾಹುಲ್ ಗಾಂಧಿವರೆಗೆ ಕುಟುಂಬ ರಾಜಕಾರಣವನ್ನು ಇನ್ನಿಲ್ಲದಂತೆ ಹೀಯಾಳಿಸಲು ಅವಕಾಶ ಮಾಡಿಕೊಡುವುದು ಸಲ್ಲ! ಮೋದಿ ಸರ್ಕಾರದ ವೈಫಲ್ಯಗಳು ಬೇರೆಯದೇ ಆದ ಆಯಾಮದಲ್ಲಿವೆ. ಅವುಗಳನ್ನು ಈವರೆಗೆ ಅವರ ವಿರೋಧಿಗಳು ಸಮರ್ಪಕವಾಗಿ ಮಂಡಿಸಿಲ್ಲ.


ಇರಲಿ, ಒಟ್ಟಿನಲ್ಲಿ ಶ್ರೀಲಂಕಾದಲ್ಲಿ ಮುಂದೆಂದೋ ಸ್ಪೋಟಿಸುತ್ತಿದ್ದ ಅಥವಾ ಠುಸ್ ಎನ್ನುತ್ತಿದ್ದ ಒಂದು ಬಾಂಬ್ ಇಂದೇ ಸ್ಪೋಟಿಸುವಂತೆ ಕೊರೋನಾ ಬತ್ತಿ ಇಟ್ಟುಬಿಟ್ಟಿದೆ. ಇಂತಹ ಊಳಿಗಮಾನ್ಯ ಪ್ರಜಾಪ್ರಭುತ್ವ ಹೊಂದಿರುವ ಚಿಕ್ಕ ಚಿಕ್ಕ ರಾಷ್ಟ್ರಗಳ ಸಂಕಷ್ಟಗಳನ್ನು ಶ್ರೀಲಂಕಾ ಮೊದಲನೆಯದಾಗಿ ತೆರೆದಿಡುತ್ತಿದೆ. ಇದೇ ರೀತಿಯ ಆರ್ಥಿಕ ಸಂಕಷ್ಟಗಳಿಗೀಗಾಗಲೇ ಒಳಗಾಗಿರುವ ಅನೇಕ ಊಳಿಗಮಾನ, ಊಳಿಗಮಾನ್ಯ ಪ್ರಜಾಪ್ರಭುತ್ವದ ಸಣ್ಣ ಸಣ್ಣ ರಾಷ್ಟ್ರಗಳ ಆರ್ಥಿಕ ಸಂಕಷ್ಟಗಳು ಒಂದೊಂದಾಗಿ ಮುಂದೆ ಅನಾವರಣಗೊಳ್ಳಲಿವೆ. ಇವುಗಳ ಚೇತರಿಕೆಗೆ ಕೋರೋನಾ ಮರ್ಮಾಘಾತವನ್ನು ಕೊಡುತ್ತಿದೆ.


ಇದಕ್ಕೆ ಶ್ರೀಲಂಕಾ ಕೇವಲ ಮೊದಲ ಬಲಿಯಾಗಿದೆಯಷ್ಟೆ! ಭಾರತ ಇಂತಹ ಸಂಕಷ್ಟಕ್ಕೆ ಒಳಗಾಗಬಹುದೇ? ಖಂಡಿತ ಆಗಬಹುದು, ಏಕೆಂದರೆ ಭಾರತದ ಪ್ರಜಾಪ್ರಭುತ್ವ ಸಹ ಊಳಿಗಮಾನ ಪ್ರಜಾಪ್ರಭುತ್ವದ ಒಂದು ಟೈಮ್ ಬಾಂಬ್! ಕರ್ನಾಟಕದಲ್ಲಿನ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ರೀತಿಯಲ್ಲಿಯೇ ಭಾರತದ ಎಲ್ಲಾ ರಾಜ್ಯದ ಪಂಚಾಯತಿ ಮಟ್ಟದಲ್ಲಿರುವುದೂ ಇದೇ ಊಳಿಗಮಾನ ಪ್ರಜಾಪ್ರಭುತ್ವವಲ್ಲವೇ!?!

ನಾ ಕಂಡಂತೆ ಸಿದ್ದಲಿಂಗಯ್ಯ!

 ನಾನು ಆಗ ಐದನೇ ತರಗತಿಯಲ್ಲಿದ್ದೆ. ಅದ್ಯಾರೋ ನಮ್ಮಮ್ಮನಿಗೆ ತಮ್ಮ ಮಗ ಯೋಗಾಸನ ಮಾಡುತ್ತಾನೆ. ಇದನ್ನು ಮಾಡುವುದರಿಂದ ಮಕ್ಕಳ ಬುದ್ದಿ ಚುರುಕಾಗುತ್ತದೆ ಎಂದು ತಿಳಿಸಿಬಿಟ್ಟಿದ್ದರು. ಸರಿ, ನಮ್ಮಮ್ಮ ನಮ್ಮಪ್ಪನಿಗೆ ಹೇಳಿ ನಾನು ಬೆಳ್ ಬೆಳಿಗ್ಗೆ ಎದ್ದು ಎದ್ದು ಯೋಗಾಸನ ಮಾಡಲು ನಮ್ಮೂರಾದ ದಾವಣಗೆರೆಯ ಹೈಸ್ಕೂಲ್ ಮೈದಾನಕ್ಕೆ ಹೋಗುವಂತಾಗಿತ್ತು. ಹಾಗೆ ಹೋಗುವಾಗ ಗವ್ ಎನ್ನುವ ಬೆಳಗಿನ ನಿಶ್ಶಬ್ದಕ್ಕೆ ಗಟ್ಟಿಯಾಗಿ ಅಂಗಡಿ ಮುಂಗಟ್ಟುಗಳ ಬೋರ್ಡುಗಳನ್ನು ಹಾಡಿನ ರೂಪದಲ್ಲಿ ಓದುತ್ತ ಸಾಗುತ್ತಿದ್ದೆ.


ಒಂದು ಮುಂಜಾನೆ ಹಾಗೆ ಹೋಗುವಾಗ ಅಂಡರ್ ಬ್ರಿಡ್ಜಿನ ಗೋಡೆಯ ಮೇಲೆ "ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ..." ಎಂಬ ವಿಶೇಷ ಬರಹ ಕಾಣಿಸಿತು. ಅಲ್ಲಿಯವರೆಗೆ ಅಂಗಡಿ ಬೋರ್ಡುಗಳಲ್ಲದೆ ದೇಶದ ಆಗುಹೋಗುಗಳಾದ ಬೆಲೆ ಏರಿಕೆ, ಮುಷ್ಕರ, ಬಂದ್, ಸಿನೆಮಾ, ನಾಟಕಗಳ ಶೀರ್ಷಿಕೆ, ಇತ್ಯಾದಿ ವರ್ತಮಾನದ ಸಂಗತಿಗಳನ್ನು ಓದಿ ಶಿಶುಗೀತೆಗಳಂತೆ ಹಾಡಿಕೊಳ್ಳುತ್ತಿದ್ದ ನನಗೆ ಈ ಬರಹ ಅತ್ಯಂತ ಆಕರ್ಷಣೀಯವೆನಿಸಿತು. ಮೈಯಲ್ಲಿ ಏನೋ ಒಂದು ಆವೇಶ, ಪುಳಕಗಳು ಒಟ್ಟೊಟ್ಟಿಗೆ ಚಿಮ್ಮಿದವು. ತತ್ ಕ್ಷಣಕ್ಕೆ ಆ ಉದ್ಘೋಷ ನಮ್ಮ ಹೊಸ ಶಿಶುಗೀತೆಗೆ ಪ್ರಾಸವಾಯಿತು. ನಂತರ "ಪೊಲೀಸರ ಬೂಟಿಗೆ ಬಂತು, ಟಾಟಾ ಬಿರ್ಲಾ ಜೇಬಿಗೆ ಬಂತು..." ಎಂಬ ಸಾಲುಗಳನ್ನೂ ಕಲಿತ ನನ್ನ ಸಹಪಾಠಿಗಳು ಇದಕ್ಕೆ ನಮ್ಮವೇ ಆದ ಸಾಲುಗಳನ್ನು ಸೇರಿಸಿ ನಿತ್ಯನೂತನವಾಗಿ ಇದನ್ನು ಹಾಡಿಕೊಳ್ಳುತ್ತಿದ್ದೆವು.


ಹೀಗೆ ನಮಗೆ ನಮ್ಮದೇ ಆದ ಸಾಲುಗಳನ್ನು ಸೇರಿಸಿ ನಮ್ಮದೆನಿಸಿಕೊಳ್ಳುವ, ಮಾನವನ ಅತ್ಯಂತ ನಿಸರ್ಗದತ್ತವಾಗಿರುವ ಪ್ರತಿಭಟಿಸುವ instinct ಗುಣವನ್ನು ನಮ್ಮರಿವಿಗೆ ಬಾರದಂತೆ ಉದ್ದೀಪಿಸುವ ಒಂದು ಅತ್ಯಂತ ಅವಿಷ್ಕಾರಕವೆಂಬ ಗೀತೆಯನ್ನು ಕೊಟ್ಟು ನಮಗೆ ಸಿದ್ದಲಿಂಗಯ್ಯ ಪರಿಚಿತರಾದರು! ಹೀಗೆ ನಮಗಷ್ಟೇ ಅಲ್ಲದೆ ರಾತ್ರೋರಾತ್ರಿ ಇಡೀ ಕರ್ನಾಟಕಕ್ಕೆ ಪರಿಚಿತರಾದರೆಂದು ನಂತರ ತಿಳಿಯಿತು. 


ಕಾಕತಾಳೀಯವೆಂಬಂತೆ ಸಿದ್ದಲಿಂಗಯ್ಯನವರ ಪ್ರಥಮ ಕೃತಿಯೂ ದಾವಣಗೆರೆಯಲ್ಲೇ ಬಿಡುಗಡೆಯಾಗಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಅಲ್ಲಿಯವರೆಗೆ ಈ ದಲಿತ/ಶೋಷಿತ/ದಮನಿತರ ಜಾಗೃತಿ ಎಂಬ ಸಂಕಥನವನ್ನು ಕೆಲವು ದಲಿತೇತರ ಸಾಹಿತಿಗಳು ಮೈದಡವಿ ಕಕ್ಕುಲಾತಿ ತೋರುವ ಅಬ್ಬಬ್ಬಾ ಎಂದರೆ ನಿಮ್ಮ ಮಕ್ಕಳನ್ನು ಜೀತಕ್ಕೆ ಬಿಡಬೇಡಿ ಎನ್ನುವಂತೆ ಕಟ್ಟಿಕೊಟ್ಟಿದ್ದರು. ಅದೇ ಸಂಕಥನದ ಅಡಿಯಲ್ಲಿ "ಜೀತಕ್ಕಿದ್ದ ಸಿದ್ದನ ಹುರಿಗಟ್ಟಿದ ಮೈಯನ್ನು ನೋಡಿ ಗೌಡನ ಮಗಳು ಭಾರತಿಗೆ ಪ್ರೇಮಾಂಕುರವಾಯಿತು" ಎಂಬಂತಹ ಕಥನಗಳಿಂದ ದಮನಿತರ ಹೋರಾಟವನ್ನು ಪ್ರೇಮಕ್ಕೂ, ಕಾಮಕ್ಕೂ, ಧಿಕ್ಕಾರಕ್ಕೂ ಥಳುಕು ಹಾಕಿ ಇಂತಹ ಸಾವಿರಾರು ಕತೆಗಳಿಗೆ ವೇದಿಕೆಯೊದಗಿಸಿದ್ದರೆ ಹೊರತು ಅಸಲಿಗೆ ಅದು ಹಕ್ಕೊತ್ತಾಯದ ಹೋರಾಟದ ರೂಪವನ್ನು ಅಷ್ಟಾಗಿ ಪಡೆದಿರಲಿಲ್ಲ ಎಂದೇ ನನ್ನರಿವಿಗೆ ಅಂದು ದಕ್ಕಿದ್ದುದು. ಇದರಿಂದ ಸಾಕಷ್ಟು ಪ್ರೇಮಿಗಳ ಕೊಲೆಯಾದವು, ಆತ್ಮಹತ್ಯೆಗಳಾದವು, ಊರು ಬಿಟ್ಟು ಕೆಲವರು ಅತಂತ್ರರೂ ಮತ್ತು ಸ್ವತಂತ್ರರೂ ಆದರು. ಅದನ್ನೇ ಕ್ರಾಂತಿ ಎಂದು ಸಾಕಷ್ಟು ಜನರು ನಂಬಿದ್ದರು ಅಥವಾ ನಂಬಿಸಲಾಗಿತ್ತು. ಈ ಎಲ್ಲಾ ಸಿದ್ಧ ಮಾದರಿಯ ಹೋರಾಟಗಳನ್ನು ರಾತ್ರೋರಾತ್ರಿ ದಮನಿತರ ಹಕ್ಕೊತ್ತಾಯವಾಗಿಸಿದ ಆದಿ ಪುರುಷ ಸಿದ್ದಲಿಂಗಯ್ಯ!


ಇರಲಿ, ಕ್ರಮೇಣ ಈ ಕ್ರಾಂತಿಗೀತೆಯ ಹರಿಕಾರರನ್ನು ನಮ್ಮೂರ ಲೈಬ್ರರಿಯಲ್ಲಿ ಮತ್ತಷ್ಟು ಓದಿಕೊಳ್ಳುತ್ತ ಬೆಳೆದೆ.

ಸಿದ್ಧಲಿಂಗಯ್ಯನವರನ್ನು ಓದಿಕೊಂಡಷ್ಟೂ ಅವರ ಅನುಭವ, ಅನುಭಾವ ನನ್ನದೇ ಎನಿಸಲಾರಂಭಿಸಿತು. ಒಂದೇ ರೀತಿಯ ಮಾನಸಿಕ ತುಮುಲ, ನೋವು, ಅವಮಾನಗಳನ್ನು ಅನುಭವಿಸುತ್ತಿದ್ದ ನನಗೂ ಸಿದ್ದಲಿಂಗಯ್ಯನವರ ನಡುವೆ ಒಂದೇ ಒಂದು ವ್ಯತ್ಯಾಸವಿತ್ತು.  ಅವರು ಸಮಾಜದ ತುಚ್ಛೀಕರಣದ ಕ್ವಾರಂಟೈನಿಗೊಳಗಾಗಿ ಈ ಮಾನಸಿಕ ತುಮುಲಕ್ಕೊಳಗಾಗಿದ್ದರೆ, ನಾನು ಸಮಾಜದ ಪೂಜೀಕರಣದ ಕ್ವಾರಂಟೈನಿಗೊಳಗಾಗಿ ನೋವು, ಸಂಕಟ ಅನುಭವಿಸುತ್ತಿದ್ದೆ.


ಹೀಗೆ ಸಿದ್ಧಲಿಂಗಯ್ಯನವರ ಬರಹಗಳಲ್ಲಿ ವ್ಯಕ್ತವಾಗಿದ್ದ ಸಾಮಾಜಿಕ ಕೀಳರಿಮೆಯ ಮೈಲಿಗೆಯ ಅಸ್ಪೃಶ್ಯತೆ, ಓರ್ವ ಜಂಗಮನ ಮೇಲರಿಮೆಯ ಮಡಿಯ ಅಸ್ಪೃಶ್ಯತೆಗೆ ತಾಳೆ ಹಾಕುತ್ತ ಸಿದ್ದಲಿಂಗಯ್ಯನವರನ್ನು ಓದಿಕೊಳ್ಳುತ್ತಿದ್ದ ನನಗೆ ಸಿದ್ದಲಿಂಗಯ್ಯನವರು ಆದರ್ಶಪ್ರಾಯರೆನಿಸತೊಡಗಿದರು. ಅವರ ಹಾಸ್ಯಪ್ರಜ್ಞೆ, ಬಂಡಾಯ, ನಿರ್ಭಿಡೆ ಮತ್ತು ತೆರೆದ ಮನಸ್ಸಿನಿಂದ ಎಲ್ಲವನ್ನೂ ಗ್ರಹಿಸುವ ವ್ಯಕ್ತಿತ್ವ ನನ್ನಲ್ಲಿ ಘನೀರ್ಭೂತಗೊಳ್ಳತೊಡಗಿದವು. ಆದರೆ ಈ ಕೀಳರಿಮೆ ಮತ್ತು ಮೇಲರಿಮೆಯ ಸಮಾನ ಅಂಶವಾದ ನಿಷೇಧದ ಕುರಿತು ಯಾವ ಮೇಲರಿಮೆ ವರ್ಗದ ವ್ಯಕ್ತಿ ಮಾತನಾಡಿರಲಿಲ್ಲ. ಈ ಮಾನಸಿಕ ತುಮುಲದ ಕುರಿತು ನನ್ನ "ರ ಠ ಈ ಕ"ದಲ್ಲಿ  ಸಿದ್ಧಲಿಂಗಯ್ಯನವರಿಂದ ಘನೀರ್ಭೂತಗೊಂಡ ಆ ಎಲ್ಲಾ ಆದರ್ಶಪ್ರಾಯ ವ್ಯಕ್ತಿತ್ವದ ಅಂಶಗಳ ಕಾರಣವೇ ನಾನು ಆ ಮೇಲರಿಮೆ ನಿಷೇಧದ ಬಗ್ಗೆ ಬರೆಯಲು ಸಾಧ್ಯವಾಯಿತು. ಆ ಬರಹ ಹೀಗಿದೆ:


ಹೇಗೆ ಒಬ್ಬ ದಲಿತನ ನೋವನ್ನು ದಲಿತೇತರರು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲವೆನ್ನುವರೊ ಹಾಗೆಯೇ ಓರ್ವ ಜಂಗಮನ ನೋವನ್ನು ಜಂಗಮೇತರರು ಅರ್ಥ ಮಾಡಿಕೊಳ್ಳುವುದೂ ಸಾಧ್ಯವಿಲ್ಲ. ಹೀಗೆ ಪ್ರತಿಯೊಂದು ಜಾತಿಯನ್ನೂ ಪರಸ್ಪರ ಅವಮಾನಿಸುವುದರಲ್ಲಿ ಭಾರತೀಯರೆಲ್ಲರೂ ಪರಿಣಿತರೇ ಆಗಿರುವುದರಿಂದ ಜಾತಿ ಸಂಚಿತ ಅವಹೇಳನವನ್ನು ಪ್ರತಿಯೊಬ್ಬನೂ ಅನುಭವಿಸಿರುತ್ತಾನೆ. ಒಬ್ಬನದು ಹೆಚ್ಚು ಮತ್ತೊಬ್ಬನದು ಕಡಿಮೆ ಎನ್ನುವುದೇ ಅಸಮಾನತೆ ಎನಿಸಿಬಿಡುತ್ತದೆ.


ದೈಹಿಕ ಸಂಕಷ್ಟದ ತಾರತಮ್ಯವನ್ನು ಅಳೆಯಬಹುದೇ ಹೊರತು ಮಾನಸಿಕ ತುಮುಲ, ಆಘಾತ, ಅವಮಾನಗಳ ಅಳತೆ ಯಾವ ಅಳತೆಗೋಲಿಗೂ ನಿಲುಕದ್ದು! ಪ್ರತಿಯೊಬ್ಬನ ಮಾನಸಿಕ ನೋವು ಒಂದೇ ತೆರನಾದದ್ದು ಎಂದು ಯಾವ ಮಾನಸಿಕ ತಜ್ಞನೂ ಸಾಮಾನ್ಯಗೊಳಿಸಿ ಸಮೀಕರಣವನ್ನು ಮಂಡಿಸುವುದಿಲ್ಲ. ಹಾಗಾಗಿ ಜಾತಿ ಅವಹೇಳನದ ಮಾನಸಿಕ ಆಘಾತವನ್ನು ಒಂದು ಜಾತಿಗೆ ಮಾತ್ರ ಸೀಮಿತಗೊಳಿಸುವುದು ಮೂಲಭೂತವಾಗಿ ತಪ್ಪೆನಿಸುತ್ತದೆ.


ಮೈಲಿಗೆಯೆಂದು ಊರ ಹೊರಗಿಟ್ಟು ಮುಟ್ಟಿಸಿಕೊಳ್ಳಬಾರದ ನಿಕೃಷ್ಟನೆನಿಸಿ ಯಾರ ಗಮನವನ್ನು ಸೆಳೆಯದೆ ಆದರೆ ಬಾಲ್ಯದ ಎಲ್ಲದನ್ನೂ ಅನುಭವಿಸುವ ಸ್ವಾತಂತ್ರ್ಯದ ಮಾನಸಿಕ ಸ್ಥಿತಿಗಿಂತಲೂ ಮಡಿಯೆಂದು ಅದನ್ನು ಮಾಡಬೇಡ ಇದನ್ನು ಮಾಡಬೇಡ, ಅವನ ಜೊತೆ ಹೋಗಬೇಡ, ಹಳ್ಳದಲ್ಲಿನ ಮೀನನ್ನು, ದಾರಿಯಲ್ಲಿನ ನಾಯಿಮರಿಯನ್ನು ಮುಟ್ಟಬೇಡ, ಇತರರ ಕೈಕಾಲು ಮುಟ್ಟಿ ಕುಸ್ತಿ ಆಡಬೇಡ, ಅಲ್ಲಿ ತಿನ್ನಬೇಡ, ಇಲ್ಲಿ ಉಣ್ಣಬೇಡ ಎಂಬ ಬಾಲ್ಯದ ಸಹಸ್ರ ಚಟುವಟಿಕೆಗಳನ್ನು ಕಟ್ಟಿಹಾಕಿಸಿಕೊಂಡು ಬಂಧಿಯಾಗಿ ಊರ ನಡುವಿದ್ದು ಎಲ್ಲರ ವಿಪರೀತ ಆದರದ ಮಾನಸಿಕ ಹಿಂಸೆಯನ್ನು ಅನುಭವಿಸುವವನ ಮನಸ್ಥಿತಿ ಇದೆಯಲ್ಲ ಅದನ್ನು ಅನುಭವಿಸಿಯೇ ತಿಳಿಯಬೇಕು. ಇನ್ನು ಬಡತನದ ಬೇಗೆಯನ್ನು ಸಮಾನವಾಗಿ ಈ ಬಾಲ್ಯಗಳಿಗೆ ತಟ್ಟಿಸಿದರೆ ಅದರ ಆಯಾಮವೂ ಮಡಿಯ ಮುಡಿಗೇ ಹೆಚ್ಚು ಸಂಚಕಾರದ ಆಯಾಮವನ್ನು ತರುವುದು. ಏಕೆಂದರೆ ಮಡಿಯ ಭಾರ ಹೊತ್ತ ಬಡವನಿಗೆ ಸಿಗುವ ಅವಕಾಶಗಳು ಅತ್ಯಂತ ಸೀಮಿತ.


ಇಂತಹ ಮಡಿಯ ಬಂಧನದ ಬಾಲ್ಯಕ್ಕಿಂತ ನನ್ನ ಮೈಲಿಗೆ ಮಿತ್ರರ ನಿರಾಳ ಸರ್ವತಂತ್ರ ಸ್ವಾತಂತ್ರ್ಯದ ಬಾಲ್ಯ ನನಗೆ ಅಚ್ಚುಮೆಚ್ಚೆನಿಸಿತ್ತು. ನನ್ನನ್ನು "ಅಯ್ಯ ಮಠದಯ್ಯ ಕುಂಡೆ ಕಟದಯ್ಯ, ಹೂಸು ಲೋಬಾನ, ಉಚ್ಚೆ ತೀರ್ಥ, ಹೇಲು ಪ್ರಸಾದ" ಎಂದು ಎಲ್ಲರೂ ಗೇಲಿ ಮಾಡುತ್ತಿದ್ದರೆ ನಾನು ಪ್ರತಿಯಾಗಿ ಇತರರನ್ನು ಗೇಲಿ ಮಾಡಲು ’ಅಯ್ಯ ಮಠದಯ್ಯ’ದಷ್ಟು ’ಕ್ರೂರ’ ಅಣಕಗಳೇ ಇರಲಿಲ್ಲ! 


ಹೊಗಳಿ ಹೊಗಳಿ ಎನ್ನ ಹೊನ್ನ ಶೂಲಕ್ಕೇರಿಸಿದಿರಯ್ಯಾ’ ಎನ್ನುವ ವಚನವನ್ನು ಹೊಗಳುವ ಪಂಡಿತ ಪಾಮರರು ನನ್ನ ಈ ರತ್ನಖಚಿತ ಚಿನ್ನದ ಕಂಝರದಿಂದ ಇರಿದು ಮಾನಸಿಕವಾಗಿ ಜರ್ಜರಿತಗೊಳಿಸುವ ಪರಿಯನ್ನು ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲವೆಂದು ಆಶ್ಚರ್ಯವಾಗುತ್ತಿತ್ತು.


ಅದೇ ಸಮಯದಲ್ಲಿ ನನ್ನ ಮಾದರಹಟ್ಟಿಯ ಸ್ನೇಹಿತರು "ಲೇ ಅಯ್ಯಪ್ಪ,  ನೀನು ಇನ್ಮ್ಯಾಲ ಮಾದರಹಟ್ಟಿ ಆನ್ನಂಗಿಲ್ಲ, ಗಾಂಧಿನಗರ ಅನ್ನಬಕು. ಇಲ್ಲಾ ಅಂದ್ರ ಇಂದ್ರಾ ಗಾಂಧಿ ಜೈಲಿಗೆ ಹಾಕುಸ್ತಾಳ" ಎಂದರು. ಆಹಾ! ಇಂತಹ ಒಂದು ರೂಲ್ ಅನ್ನು ’ಅಯ್ಯ ಮಠದಯ್ಯ’ ಎನ್ನುವವರಿಗೂ ತಂದರೆ ಎಂದು ಆಲೋಚಿಸುತ್ತ ರೋಮಾಂಚನಗೊಂಡಿದ್ದೆ. ಆದರೆ ಅಂತಹ ರೂಲ್ ಬರಲೇ ಇಲ್ಲ!  ಅದು ಇಂದಿರಾಗಾಂಧಿಯ ಮೊಮ್ಮಕ್ಕಳು ಪ್ರಧಾನಿಯಾದರೂ ಬರುವುದಿಲ್ಲವೆಂಬುದು ನಿಶ್ಚಿತವೇನೋ!


ನಮ್ಮ ಹಳೆಪೇಟೆಯ ಸುತ್ತಮುತ್ತಲ ಧರ್ಮಬೀರು ಜನ ಯಾವುದೇ ಹಬ್ಬ ತೇರು, ಗುಗ್ಗಳ, ಜಾತ್ರೆಗಳಲ್ಲದೆ ಎಲ್ಲಾ ಕಾರ್ತಿಕ, ಹುಣ್ಣಿಮೆ, ಅಮವಾಸ್ಯೆಗಳನ್ನೂ ಸೇರಿಸಿಕೊಂಡು ಅವುಗಳ ಮೇಲೆ ಹಲವಾರು ಬಾರಿ ಸುಖಾಸುಮ್ಮನೆ ಕೂಡ ಐದು ಜನ ಜಂಗಮರನ್ನು ಬಿನ್ನಹಕ್ಕೆ ಕರೆದು ಊಟ ಮಾಡಿಸಿ ಒಂದೂಕಾಲು ರೂಪಾಯಿಯ ದಕ್ಷಿಣೆ ಕೊಟ್ಟು ಕಳುಹಿಸುತ್ತಿದ್ದರು. ಶತಮಾನಗಳ ಮೊದಲೇ ಸಾಮಾಜಿಕ ಪರಿಸ್ಥಿತಿಗಳು ಸುಧಾರಿಸಿ ಊರಿಂದೂರಿಗೆ ಲೋಕ ಸಂಚಾರದಲ್ಲಿರುತ್ತಿದ್ದ ಜಂಗಮರು ಸ್ಥಾವರಗೊಂಡರೂ ದಾಸೋಹವನ್ನು ನಿಲ್ಲಿಸಲು ಶರಣರು ಸಿದ್ಧರಿಲ್ಲದೆ ಬಿನ್ನಹದ ದಾಸೋಹ ನಡೆದೇ ಬಂದಿತ್ತು! ಹಾಗಾಗಿ ನಮ್ಮಂತಹ ಸ್ಥಾವರ ಜಂಗಮರನ್ನೇ ಪದೇ ಪದೇ ಬಿನ್ನಹಕ್ಕೆ ಬಿನ್ನವಿಸಿ ಖುಷಿ ಪಡುತ್ತಿದ್ದ ಶರಣರ ಸಂತೋಷವನ್ನು ನಿರಾಕರಿಸಲಾದೀತೆ? ಇಲ್ಲ.


ಒಂದೆಡೆ ಅವರ ಈ ಗೌರವದ ಪ್ರೀತಿ ಬಾಯಿ ಕಟ್ಟಿಸಿ ಬಿನ್ನಹದ ಕರೆಗೆ ಹೋಗುವಂತೆ ಮಾಡಿದರೆ, ಅದರ ಹಿಂದೆಯೇ ಓರಗೆಯವರ ಹೀಗಳೆತ ನನ್ನನ್ನು ಮಾನಸಿಕವಾಗಿ ಕಾಡುತ್ತಿತ್ತು. ಆಯಾಯ ಮನೆಯ ಹಿರಿಯರು ಅಪಾರ ಪ್ರೀತಿ ಗೌರವ ತೋರಿ ಭೋಜನದ ಶಿಕ್ಷೆಗೆ ಗುರಿಪಡಿಸಿದರೆ, ನನ್ನ ಸಹಪಾಠಿಯಾಗಿರುತ್ತಿದ್ದ ಅವರ ಮಕ್ಕಳು ಆ ದಿನ ಇಡೀ ಸ್ಕೂಲಿನಲ್ಲಿ ’ಅಯ್ಯಪ್ಪ ನಮ್ಮನಿಗೆ ಬಿನ್ನಕ್ಕ ಬಂದಿದ್ದ’ ಎಂದು ಬಿನ್ನಹದ ಬಿನ್ನಾಣವನ್ನು ಜಗಜ್ಜಾಹೀರುಗೊಳಿಸಿ ಜಾತ್ಯತೀತವಾಗಿ ಎಲ್ಲರಿಂದ ’ಅಯ್ಯ ಮಠದಯ್ಯ’ಕ್ಕೆ ಭಾಜನನಾಗುವ ಶಿಕ್ಷೆಗೆ ಗುರಿಪಡಿಸುತ್ತಿದ್ದರು. ಅದಲ್ಲದೇ ಎಷ್ಟೋ ಬಾರಿ ಇವರೊಟ್ಟಿಗೆ ’ನಿಮ್ಮನಿಗೆ ಬಿನ್ನಕ್ಕ ಬಂದುದ್ದು ಸ್ಕೂಲಿನ್ಯಾಗ ಯಾರಿಗೂ ಹೇಳಬ್ಯಾಡ. ನಿಮ್ಮಪ್ಪ ಕೊಟ್ಟಿರ ದಕ್ಷಿಣಾ ನಿನಿಗೆ ಕೊಡ್ತನಿ’ ಎಂದು ರಾಜೀ ಸೂತ್ರ ಮಾಡಿಕೊಳ್ಳುತ್ತಿದ್ದೆ. ಆದರೆ ಅದು ಅವರ ಮನೆಯಲ್ಲಿ ಗೊತ್ತಾದರೆ ಎಂದು ಅವರೂ ಹೆದರಿ ಅರ್ಧರ್ಧಕ್ಕೆ ಡೀಲ್ ಮಾಡಿಕೊಳ್ಳುತ್ತಿದ್ದರು.


ಈ ಎಲ್ಲಾ ಅವಹೇಳನಗಳಿಗೆ ಮೂಲವಾದ ಬಿನ್ನಹಕ್ಕೆ ಹೋಗುವ ವಿಷಯ ನನಗೆ ಕಡುಕೋಪ ತರಿಸುತ್ತಿತ್ತು. ಈ ವಿಷಯದ ಬಗ್ಗೆ ಸಾಕಷ್ಟು ಆಕ್ರೋಶದಿಂದ ಮನೆಯಲ್ಲಿ ಜಗಳವಾಡಿದರೂ ನಮ್ಮ ಅಪ್ಪಾಜಿಯ ’ಸರ್ವಾಧಿಕಾರ’ದ ಮುಂದೆ ನನ್ನದೇನೂ ಸಾಗದೆ ಉಗ್ರ ಶಿಕ್ಷೆಗೆ ಗುರಿಯಾಗುತ್ತಿದ್ದೆ.


ನನ್ನ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತಿದ್ದ ಬಿನ್ನವಿಸಿಕೊಂಡವರು "ಅಂಗಿ, ಚಣ್ಣ ಇಲ್ಲ ಪ್ಯಾಂಟಿನಾಗೆ ಬಾ. ಯಾರಿಗೂ ಗೊತ್ತಾಗಲ್ಲ ನೀನು ಬಿನ್ನಕ್ಕ ಹೊಂಟಿಯಂತ" ಎಂದು ರಿಯಾಯ್ತಿ ಕೊಟ್ಟರೂ ನಮ್ಮ ಅಪ್ಪಾಜಿ "ನಿನಿಗೇನು ಮಲಿ ಬಂದಾವೇನಲೇ ಬೋಸುಡಿಕೆ" ಎಂದು ಅಂಗಿ ಬನಿಯನ್ನು ಬಿಚ್ಚಿಸಿ ಒಂದು ಪಂಚೆ ಸುತ್ತಿಸಿ, ಕೆಂಪು ವಸ್ತ್ರ ಮೈಮೇಲೆ ಹಾಕಿಕೊಂಡು ಹೋಗುವ ಶಿಕ್ಷೆಗೆ ಗುರಿ ಮಾಡುತ್ತಿತ್ತು. 


ಹೀಗೆ ಅವಹೇಳನಕ್ಕೊಳಗಾದರೂ ಅದು ನನ್ನ ಸುಪ್ತ ಮನಸ್ಸನ್ನು ಬಾಧಿಸಿತ್ತೇ ಹೊರತು ಲುಪ್ತವಾಗಿಯಲ್ಲ. ಸಾಮಾಜಿಕ ರಚನೆಯೇ ಹೀಗೆಂದು ಸ್ವೀಕರಿಸಿ ಮುನ್ನಡೆದಿದ್ದೆ. ಆದರೆ ಇದೇ ಅಯ್ಯ ಮಠದಯ್ಯನ ಅವಹೇಳನ ಸಹಿಸದ ಸೂಕ್ಷ್ಮ ಸಂವೇದಿ ಬಾಲಕನೊಬ್ಬ ಮನೆಯಲ್ಲಿ ನೇಣು ಹಾಕಿಕೊಂಡು ಸತ್ತಿದ್ದ. ಆಗ ಇಂದಿರಾ ಗಾಂಧಿ ಮಾದರಹಟ್ಟಿ ಎಂದರೆ ಜೈಲಿಗೆ ಹಾಕಿಸುವಂತೆ ಅಯ್ಯ ಮಠದಯ್ಯ ಎಂಬುವವರನ್ನೂ ಶೀಘ್ರ ಜೈಲಿಗೆ ಹಾಕಿಸಲಿ ಎಂದು ಆಶಿಸುತ್ತಿದ್ದೆ. ಆದರೆ ಅದು ಹಾಗೆಂದೂ ಆಗಲೇ ಇಲ್ಲ!


ಇತ್ತ ನಾನು ನನ್ನ ಹುಟ್ಟಿನೊಂದಿಗೆ ಅಂಟಿಕೊಂಡು ಬಿಟ್ಟಿದ್ದ ಜಾತಿ ಜಂಗಮತ್ವವನ್ನು ದ್ವೇಷಿಸತೊಡಗಿದೆ. ಯಾವುದೆಲ್ಲಾ ನಿಷಿದ್ಧವೆನಿಸಿತ್ತೊ ಅದನ್ನೆಲ್ಲಾ ದೊಡ್ಡವನಾದ ಮೇಲೆ ಮಾಡಿ ಸಿದ್ಧಿಸಲೇಬೇಕೆಂದು ನಿಶ್ಚಯಿಸಿದೆ. ಅಲ್ಲಿಯವರೆಗೆ ಇದೆಲ್ಲದನ್ನು ಸಹಿಸಿಕೊಂಡಿರುವುದು ನನ್ನ ಹಣೆಬರಹವೆಂದು ’ಅಯ್ಯ ಮಠದಯ್ಯ’ನೊಂದಿಗೆ ಅನುಸಂಧಾನ ಮಾಡಿಕೊಂಡು, ವೆಂಕಟರಾವ್ ಮೇಷ್ಟ್ರ ಸಂಶೋಧನೆಯಂತೆ ನನ್ನ ಮುಕುಳಿಯಲ್ಲಿದ್ದ ಮೂರು ಮಂಗಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಜನ ಮೆಚ್ಚುಗೆ ಪಡೆದು ನನ್ನ ಗುರಿ ಸಾಧಿಸಬೇಕೆಂದುಕೊಂಡೆ.

***

ಇಂತಹ ಅನುಷಂಗಿಕ ನೋವನ್ನು ನೋವೆಂದು ನಮ್ಮ ಪ್ರಗತಿಪರರು ಗುರುತಿಸಲು ತೀವ್ರವಾಗಿ ಹಿಂದೇಟು ಹಾಕುತ್ತಾರೆ. "ಅಸ್ಪೃಶ್ಯರ ನೋವಿಗೆ ತಮ್ಮ ಜಾತಿದೂಷಣೆಯನ್ನು ಸರಿಗಟ್ಟುವ ವ್ಯರ್ಥ ಅಸಮಂಜಸ ಪ್ರಯತ್ನವನ್ನು ಮಾಡಿದ್ದಾರೆ" ಎನ್ನುವುದು ಪ್ರಗತಿಪರರ ಸಿದ್ಧ ಮಾದರಿಯ ವಾದ. ಇದನ್ನು ನೋವೆಂದು ಪರಿಗಣಿಸುವ ಮನಸ್ಥಿತಿಗೆ ಭಾರತ ಇನ್ನೂ ಸಜ್ಜಾಗಿಲ್ಲ. ಇಂತಹ ನೋವನ್ನು ದಲಿತರು ವ್ಯಕ್ತಪಡಿಸಿದಾಗ ಸ್ವೀಕರಿಸುವ ಮನಸ್ಥಿತಿಗೆ ಒಂದೊಮ್ಮೆ ದೇಶವೂ ಸಜ್ಜಾಗಿರದೆ ನಂತರ ಅನುವುಗೊಳ್ಳುತ್ತ ಸಾಗಿ ಬಂದಿತೆಂದು ಸ್ವಾತಂತ್ರೋತ್ತರ ಇತಿಹಾಸವನ್ನು ನೋಡಿ ತಿಳಿದುಕೊಳ್ಳಬಹುದು.


ಇನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ನಾನು ಆದರ್ಶಪ್ರಾಯರೆಂದು ಪರಿಗಣಿಸಿರುವ ಇಬ್ಬರೇ ಇಬ್ಬರು ಸಾಹಿತಿಗಳೆಂದರೆ ಪೂರ್ಣಚಂದ್ರ ತೇಜಸ್ವಿ ಮತ್ತು ಸಿದ್ದಲಿಂಗಯ್ಯನವರು! ಏಕೆಂದರೆ ನಾನು ಅರಿತಂತೆ ಇವರೀರ್ವರೇ ಬರೆದಂತೆ ಬಾಳಿದವರು, ಬಾಳಿದಂತೆ ಬರೆದವರು. ಮತ್ಯಾರನ್ನೂ ನಾನು ಕಂಡಿಲ್ಲ! ಇವರೀರ್ವರ ಹಿನ್ನೆಲೆಯನ್ನು ಗಮನಿಸಿದಾಗ, ಸಿದ್ದಲಿಂಗಯ್ಯನವರ ಹಿನ್ನೆಲೆ ಕಡುಕಷ್ಟದ್ದು.


ಇವರೀರ್ವರ ವ್ಯಕ್ತಿತ್ವದ ಕುರಿತಾಗಿ, ಅವರ ಜೀವನಪ್ರೀತಿಯ ಕುರಿತಾಗಿ, ಅವರುಗಳ ಹಾಸ್ಯಪ್ರಜ್ಞೆ, ಭೋಜನ ಪ್ರೀತಿ, ವಿಡಂಬನೆ ಬಗ್ಗೆ ಸಾಕಷ್ಟು ಜನರು ಬರೆದಿದ್ದಾರೆ. ಆದರೆ ಇವರ ಬರಹಗಳಿಂದ ಪ್ರಭಾವಿತರಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡು ಸಮಾಜವನ್ನು ಪ್ರಭಾವಿಸುವುದು ಆ ಮಹಾನ್ ಚೇತನಗಳಿಗೆ ಗೌರವ ತೋರುವ ಒಂದು ಗೌರವಯುತ ಮಾರ್ಗ. ಕೇವಲ ಓದುಗನಾಗಿದ್ದ ನಾನು ಬರಹದಲ್ಲಿ ತೊಡಗಿಸಿಕೊಳ್ಳಲು ಈ ಈರ್ವರೇ ಪ್ರೇರಣೆ ಎನ್ನಬಹುದು. ಇಂತಹ ಆದರ್ಶಪ್ರಾಯರನ್ನು ಒಮ್ಮೆಯೂ ನಾನು ಭೇಟಿಯಾಗಿಲ್ಲವೆಂಬುದೊಂದು ನನ್ನ ಬಹು ದೊಡ್ಡ ಕೊರಗು.


ಇರಲಿ, ಇಂತಹ ಪ್ರೇರಕ ಶಕ್ತಿಯಾದ ಸಿದ್ಧಲಿಂಗಯ್ಯನವರನ್ನು  ಕನ್ನಡ ಸಾಹಿತಿಗಳನೇಕರು ಇನ್ನಿಲ್ಲದಂತೆ ಬೌದ್ಧಿಕ ಅಸ್ಪೃಶ್ಯತೆಗೊಳಪಡಿಸಿದ್ದು ಕನ್ನಡ ಸಾಹಿತ್ಯಿಕ ಲೋಕದ ಮಹಾನ್ ದುರಂತಗಳಲ್ಲೊಂದು! ಸಿದ್ದಲಿಂಗಯ್ಯನವರಿಗೆ ಸಿಕ್ಕಿದ ಸರ್ಕಾರಿ ಸ್ಥಾನಮಾನಗಳಿಂದಲೋ, ಅವರ ಅಸಾಮಾನ್ಯ ಪ್ರತಿಭೆಯಿಂದಲೋ ಈರ್ಷೆಗೊಳಗಾಗಿ ಲೇವಡಿ ಮಾಡಿದ ಅನೇಕರು ಮೂಲದಲ್ಲಿ ನಿಗಮ, ಮಂಡಳಿ, ಅಕಾಡೆಮಿಗಳ ಸ್ಥಾನಗಳನ್ನು ಗಿಟ್ಟಿಸಿಕೊಂಡವರೇ ಆಗಿದ್ದುದು ಆ ದುರಂತದ ಹಿಂದಿನ ದುರಂತ. 


ಅದಕ್ಕೆ ಕಾರಣ, ಸಿದ್ಧಲಿಂಗಯ್ಯನವರು ಬರುವ ಮುನ್ನ ಒಂದು ಕಾಲದವರೆಗೆ ದಲಿತ ಸಂಘರ್ಷವನ್ನು ಆದರ್ಶವೆಂದುಕೊಂಡು ಕೆಲವು ದಲಿತೇತರ ಕನ್ನಡ ಸಾಹಿತಿಗಳು ಮಾರ್ಗದರ್ಶನ ಮಾಡುತ್ತಿದ್ದರು. ಮೈದಡವಿ, ಕಕ್ಕುಲಾತಿ ತೋರಿ ದಲಿತರನ್ನು ಜಾಗೃತಿಗೊಳಿಸುವುದು ಒಂದು passion ಎಂದು ಕೆಲವರು ನೈತಿಕ ಹೊಣೆ ಹೊತ್ತು ತೊಡಗಿದ್ದರೆ, ಅನೇಕರಿಗೆ ಅದು ಒಂದು fashion ಆಗಿತ್ತು. ಅಂತಹ ಒಂದು ಕಾಲಘಟ್ಟದಲ್ಲಿ ಸಿದ್ಧಲಿಂಗಯ್ಯನವರು ಎಲ್ಲಾ ಸ್ಥಾಪಿತ ಸಿದ್ದ ಮಾದರಿಗಳನ್ನು ಮುರಿದು "ಇಕ್ರಲಾ, ವದೀರ್ಲಾ" ಎನ್ನುತ್ತಾ ಸಂಚಲನ ಮೂಡಿಸಿ ಕನ್ನಡ ಸಾಹಿತ್ಯ ಮತ್ತು ಹೋರಾಟದ ದಿಕ್ಕಿನಲ್ಲಿ ಒಂದು (paradigm shift) ಸ್ಥಿತ್ಯಂತರವನ್ನು ತಂದರು. ಈ  ಬದಲಾದ ಸ್ಥಿತ್ಯಂತರವು ಸಂಘರ್ಷವನ್ನು fashion ಮಾಡಿಕೊಂಡಿದ್ದ  ಹಲವರನ್ನು ಸ್ಥಿತ್ಯಂತರಗೊಳಿಸಿಬಿಟ್ಟಿತು. ಅದು ಆ ಫ್ಯಾಶನ್-ಶೀಲರನ್ನು ಆಗಾಗ್ಗೆ ಬಾಧಿಸುತ್ತಿತ್ತೋ ಏನೋ, ಹಾಗಾಗಿ ಅವರೆಲ್ಲಾ ಅವಕಾಶ ಸಿಕ್ಕಾಗಲೆಲ್ಲಾ ಹೀಗೆ ಸಿದ್ದಲಿಂಗಯ್ಯನವರ ಮೇಲೆ ಮುಗಿಬೀಳುತ್ತಿದ್ದರು!


ಕನ್ನಡ ಸಾಹಿತ್ಯ ಲೋಕದ ಮೊದಲ ಸರ್ವಕಾಲಿಕ ಹತ್ತು ಸ್ಥಾನಗಳನ್ನೂ ಓರ್ವ ಸಾಹಿತಿ ಮತ್ತು ಸಂಚಲನ ಮೂಡಿಸಿ ಕ್ರಮೇಣ ಟ್ಯಾಬ್ಲಾಯ್ಡ್ ಪತ್ರಿಕೆಯಾದ ಪತ್ರಿಕೆಯ ಸಂಸ್ಥಾಪಕರಿಗೇ ಮೀಸಲಿಟ್ಟು ಹನ್ನೊಂದರಿಂದ ಉಳಿದ ಸ್ಥಾನಗಳನ್ನು ಹಂಚುವ "ಫ್ಯಾಷನ್" ಪರಿಪಾಠವನ್ನು ಹಾಕಿಕೊಂಡಿರುವ ಮತ್ತೊಂದು ಫ್ಯಾಶನ್ ವರ್ಗ ಈ ಬೌದ್ಧಿಕ ಅಸ್ಪೃಶ್ಯತೆಯ ಹಿಂದಿದ್ದದ್ದು ಸಹ ಢಾಳಾಗಿಯೇ ಕಾಣಿಸುತ್ತದೆ.  ಏನೆಲ್ಲಾ ಸಾಧನೆ ಮಾಡಿ, ಪ್ರಾಯೋಗಿಕವಾಗಿ ಎಲ್ಲರಿಗೂ ತೆರೆದುಕೊಳ್ಳುವ ನಿಜ ಉದಾರವಾದದ ಸಿದ್ಧಲಿಂಗಯ್ಯನವರನ್ನು ಕ್ಷುಲ್ಲಕ ಕಾರಣಗಳಿಗೆ ಆ ಒಂದು ವರ್ಗ ತೀವ್ರ ಬೌದ್ಧಿಕ ಅಸ್ಪೃಶ್ಯತೆಗೆ ತಳ್ಳುತ್ತಲೇ ಇದ್ದಿತು. ಆ ಪತ್ರಿಕೆಯ ಸರ್ವಾಧಿಕಾರಿ ಒಡ್ಡೋಲಗದಲ್ಲಿ ಬೇರಾವ ಸ್ಥಾನಗಳೂ ಖಾಲಿಯಿಲ್ಲದೆ ಕೇವಲ ವಿದೂಷಕ ಸ್ಥಾನದಲ್ಲಿದ್ದು ಸಾಹಿತಿಗಳೆನಿಸಿಕೊಂಡವರಿಂದ ಬೇರೇನನ್ನು ತಾನೇ ಬಯಸಲು ಸಾಧ್ಯವಿದ್ದೀತು!


ಆ ಬೌದ್ಧಿಕ ಅಸ್ಪೃಶ್ಯತೆಯಿಂದಾಗಿ ಸಿದ್ದಲಿಂಗಯ್ಯನವರಿಗೆ ಸಿಗಬೇಕಾದ ಗೌರವ, ಮನ್ನಣೆ ಸಿಗದೆ ಸಾಕಷ್ಟು ಅನ್ಯಾಯವಾಗಿದೆ.  ಫ್ಯಾಷನ್ನಿಗರ ಆಡಂಬರದ ನಡುವೆ ಪ್ಯಾಷನ್ನಿನ ಸರಳತೆ ಕುಂದಿದೆ.  ಕನ್ನಡ ಸಾಹಿತ್ಯಿಕ ಲೋಕದ ಇಂತಹ ಬೌದ್ಧಿಕ ತಾಲಿಬಾನಿ ಸಂಸ್ಕೃತಿಯ ಅರಿವಿದ್ದರೂ ಸಿದ್ಧಲಿಂಗಯ್ಯನವರು ಅದನ್ನು ಉಪೇಕ್ಷಿಸಿ ಎಲ್ಲರನ್ನೂ ಎಲ್ಲದನ್ನೂ ಒಳಗೊಳ್ಳುವ ನಿಜ ಉದಾರವಾದವನ್ನು ಮೆರೆದದ್ದು ಆ ವಾಮನರೂಪಿಯ ಅಗಾಧತೆಯ ಹೃದಯ ವೈಶಾಲ್ಯವೆನ್ನಬಹುದು.


ಅವರ "ಇಕ್ರಲಾ, ವದೀರ್ಲಾ" ಎಂಬ ಪ್ಯಾಷನ್ನಿನ, ನೈತಿಕತೆಯ, ಸಾತ್ವಿಕ ಆಕ್ರೋಶದ, ನಿಷ್ಠುರತೆಯೇ ಇಂದು ನನ್ನ "ಭಾರತವೆಂಬೋ_ಹುಚ್ಚಾಸ್ಪತ್ರೆಯಲ್ಲಿ, ಕರ್ನಾಟಕವೆಂಬೋ_ಕಮಂಗಿಪುರದಲ್ಲಿ" ಎಂಬ ಹ್ಯಾಷ್ಟ್ಯಾಗ್ ಆಗಿದೆ.


ಆದರೆ ಸಿದ್ಧಲಿಂಗಯ್ಯನವರ ಮರಣಾನಂತರವೂ ಸಾಮಾಜಿಕ ಮಾಧ್ಯಮಗಳಲ್ಲಿ ಆ ಬೌದ್ಧಿಕ ಅಸ್ಪೃಶ್ಯತೆ ಅಷ್ಟೇ ಢಾಳಾಗಿ ಆಸ್ಫೋಟಗೊಂಡು ಅವರಿಗೆ ಸಿಗಬೇಕಾದ ಮಟ್ಟಿಗಿನ ಅಂತಿಮ ಗೌರವ ಸಿಗಲಿಲ್ಲವೆನಿಸಿ ಅತ್ಯಂತ ಖೇದವೆನಿಸಿತು.


ಇದಿಷ್ಟು ನಾನು ದೇಶವಾಸಿಯಾಗಿ ಕಂಡಿದ್ದ ಕನ್ನಡ ಸಾಹಿತ್ಯಲೋಕವನ್ನೇ ಮತ್ತೆ ಸಪ್ತ ಸಾಗರದಾಚೆ ಕುಳಿತು ಓದುತ್ತ, ಅವಲೋಕಿಸುತ್ತ, ವಿಶ್ಲೇಷಿಸುತ್ತ ಗ್ರಹಿಸಿದ್ದುದು. ನಮ್ಮ ನಡುವೆಯೇ ಜೊತೆಜೊತೆಯಾಗಿದ್ದಾಗ ಇಂತಹ ವಿಭಿನ್ನ ಗ್ರಹಿಕೆ ಸಾಧ್ಯವಿಲ್ಲವೆಂದು ನನ್ನ ಅನೇಕ ಸಾಹಿತ್ಯ ಲೋಕದ ಮಿತ್ರರು ಹೇಳುತ್ತಿರುತ್ತಾರೆ. ಅವರು ಹೇಳಿದ್ದು ಸತ್ಯವಿದ್ದರೂ ಇರಬಹುದು, ಏಕೆಂದರೆ From a distance the whole world looks different, you know!


ರವಿ ಹಂಜ್,

ಜೀವ ವಿಜ್ಞಾನ ಆಡಳಿತ ತಜ್ಞ,

ಶಿಕಾಗೋ, ಯು. ಎಸ್.ಎ.

ಮಲೆಯೂರು ಗುರುಸ್ವಾಮಿಗಳ "ಬಂಗಾರದೊಡ್ಡಿ" ಕೃತಿಗೆ ಮುನ್ನುಡಿ

 

"ಇತಿಹಾಸವನ್ನು ಅರಿಯದವನು ಇತಿಹಾಸವನ್ನು ಸೃಷ್ಟಿಸಲಾರ" ಎಂಬುದು ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ಅವರ ಖ್ಯಾತ ಉದ್ಘೋಷಗಳಲ್ಲೊಂದು.

ಆದರೆ ಈವರೆಗೆ ನಾವು ಬಲ್ಲ ಇತಿಹಾಸದ ಪುಟಗಳಲ್ಲಿ ಅನೇಕ ಮಹತ್ವದ ಸಂಗತಿಗಳು ಕಳೆದುಹೋಗಿವೆ ಯಾ ನಿರ್ಲಕ್ಷ್ಯಕ್ಕೊಳಗಾಗಿವೆ. ಅವುಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಒಂದೊಮ್ಮೆ ಮಹತ್ವದ ಸ್ಥಾನವನ್ನು ಹೊಂದಿದ್ದು ನಂತರದ ಕಾಲಗರ್ಭದ ಅಯೋಮಯಗಳಲ್ಲಿ ತಿರಸ್ಕಾರಕ್ಕೊಳಗಾಗಿರುವ ದೇವದಾಸಿ ಪರಂಪರೆ ಅಂತಹ ಮಹತ್ವದ ಪರಂಪರೆಗಳಲ್ಲೊಂದು.

ಕ್ರಿ.ಪೂ. ಐದನೇ ಶತಮಾನದ ನಗರವಧು (ದೇವದಾಸಿ ಪರಂಪರೆ) ಅಮ್ರಪಾಲಿ ಭಾರತದ ಸರ್ವಶ್ರೇಷ್ಠ ಅಗ್ರಗಣ್ಯ ನರ್ತಕಿಯಷ್ಟೇ ಅಲ್ಲದೆ ಬೌದ್ಧ ಧರ್ಮದ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ ನಿರ್ವಾಣವನ್ನು ಹೊಂದಿದ ಮಹಿಳೆಯಾಗಿ ಚಿರಸ್ಥಾಯಿಯಾಗಿದ್ದಾಳೆ. ಬಿಂಬಿಸಾರ ಮತ್ತು ಅಮ್ರಪಾಲಿಯ ಪ್ರೇಮಕಥೆಯೂ ಅಷ್ಟೇ ಚಿರಸ್ಥಾಯಿಯಾಗಿದೆ. ಈಕೆಯ ಕುರಿತು ಶತಶತಮಾನಗಳಿಂದ ಸಾಕಷ್ಟು ಸಾಹಿತ್ಯ ಸೃಷ್ಟಿಯಾಗಿರುವುದಲ್ಲದೆ ಈಗಲೂ ಸೃಷ್ಟಿಯಾಗುತ್ತಿದೆ. ಅಮ್ರಪಾಲಿ ಸಿನೆಮಾವನ್ನು ಸಹ ಇಲ್ಲಿ ನೆನಪಿಸಿಕೊಳ್ಳಬಹುದು. ಅದೇ ರೀತಿ ಕ್ರಿ. ಪೂ. ಎರಡನೇ ಶತಮಾನದ ಖ್ಯಾತ ಸಂಸ್ಕೃತ ಕಾವ್ಯ ಮೃಚ್ಛಕಟಿಕಾ ನಾಯಕಿ ವಸಂತಸೇನಾ ಮತ್ತು ಕ್ರಿ.ಶ. ಐದನೇ ಶತಮಾನದ ಇಳಂಗೋ ಅಡಿಗಳ್ ರಚಿಸಿರುವ ತಮಿಳಿನ ಖ್ಯಾತ ಕಾವ್ಯ ಸಿಲಪ್ಪಧಿಕಾರಮ್ ನ ಮಾಧವಿ ಸಹ ಅಮ್ರಪಾಲಿಯಷ್ಟೇ ಖ್ಯಾತ ನಗರವಧುಗಳು.

ದಕ್ಷಿಣ ಭಾರತದ  ತಮಿಳುನಾಡಿನ ಕಾಂಚೀಪುರಂ, ಈರೋಡುಗಳಲ್ಲದೆ ಆಂಧ್ರ, ತೆಲಂಗಾಣ, ಕರ್ನಾಟಕದ ರೇಷ್ಮೆ ನೇಯ್ಗೆಯು ಪ್ರವರ್ಧಮಾನಕ್ಕೆ ಬಂದದ್ದೇ ಅಲ್ಲಿನ ದೇವದಾಸಿಯರ ಅಂಗವಸ್ತ್ರ, ಸೀರೆಗಳನ್ನು ನೇಯುವುದರೊಂದಿಗೆ! ಅದೇ ರೀತಿ ಮಧ್ಯಪ್ರದೇಶದ ಚಂದೇರಿ ನೇಕಾರರು ಸಹ ಇದೇ ರೀತಿ ಪ್ರವರ್ಧಮಾನಕ್ಕೆ ಬಂದವೆಂದು ಸಂಶೋಧನೆಗಳು ತಿಳಿಸುತ್ತವೆ. ಹೀಗೆ ದೇವದಾಸಿಯರೆನ್ನುವ ಎಲ್ಲಾ ಜಾತಿಯ ಕಲಾವಿದೆಯರನ್ನೊಳಗೊಂಡ ಪರಂಪರೆಯು ಸಾಂಸ್ಕೃತಿಕವಾಗಿಯಷ್ಟೇ ಅಲ್ಲದೆ ಆರ್ಥಿಕತೆಗೂ ಪರೋಕ್ಷವಾಗಿ ನೆಲೆಯೊದಗಿಸಿದ್ದಿತು. ಈ ಪದ್ಧತಿಯಲ್ಲಿ ಎಲ್ಲಾ ಜನಾಂಗದ ಜಾತಿಯ ಮಹಿಳೆಯರಿದ್ದು ಇದೊಂದು ಜಾತ್ಯಾತೀತ ವ್ಯವಸ್ಥೆಯಾಗಿತ್ತು ಎಂಬುದು ಮತ್ತೊಂದು ಗಮನಾರ್ಹ ಸಂಗತಿ. ಒಟ್ಟಾರೆ ಲಲಿತಕಲೆಗಳಲ್ಲಿ ಪ್ರಾವೀಣ್ಯ ಪಡೆದವರ ಒಡ್ಡೋಲಗವೇ ದೇವದಾಸಿ ವ್ಯವಸ್ಥೆಯಾಗಿತ್ತು.

ರಾಜನಾದವನ ಪಟ್ಟದರಾಣಿಯಾಗಲು ಕ್ಷತ್ರಿಯಳೇ ಆಗಿರಬೇಕೆಂಬ ನಿಯಮವಿದ್ದರೂ ಅದನ್ನು ಮೀರಿ ಹೊಯ್ಸಳರ ವಿಷ್ಣುವರ್ಧನನ ರಾಣಿಯಾದ ನಾಟ್ಯರಾಣಿ ಶಾಂತಲೆ, ಕರ್ನಾಟಕ ಸಾಮ್ರಾಜ್ಯದ ವಿಜಯನಗರದ ಕೃಷ್ಣದೇವರಾಯನ ಪತ್ನಿ ನೃತ್ಯಗಾತಿ ಚೆನ್ನಾದೇವಿಯರ ಉದಾಹರಣೆಗಳೂ ಇವೆಯೆಂದರೆ ನೃತ್ಯಗಾತಿಯರ ಗೌರವಾದರಗಳು ಹೇಗಿದ್ದವು ಎಂದು ಊಹಿಸಿಕೊಳ್ಳಬಹುದು.

ಕ್ರಿ.ಶ. ಆರನೇ ಶತಮಾನದಿಂದ ಕ್ರಿ. ಶ. ಹದಿಮೂರನೇ ಶತಮಾನದವರೆಗೂ ದೇವದಾಸಿಯರು ಸಮಾಜದಲ್ಲಿ ಅತ್ಯಂತ ಉನ್ನತ ಸ್ಥಾನಮಾನಗಳನ್ನು ಹೊಂದಿ ಘನತೆ ಗೌರವಗಳಿಗೆ ಪಾತ್ರರಾಗಿದ್ದರು. ನೃತ್ಯ, ಸಂಗೀತ, ಅಭಿನಯ ಮುಂತಾದ ಲಲಿತಕಲೆಗಳ ರಕ್ಷಕರೆನಿಸಿ ರಾಜಾಶ್ರಯ ಹೊಂದಿ ದಾನ ದತ್ತಿಗಳನ್ನು ಪಡೆಯುವುದರೊಂದಿಗೆ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಸಹ ಕೈಗೊಂಡಿದ್ದರು. ಈ ಸಮಾಜಮುಖಿ ಕಾರ್ಯಗಳಲ್ಲಿ ನೀರಿಗೆ ಸಂಬಂಧಿಸಿದ ಕಾರ್ಯಗಳು ಇಂದಿಗೂ ಅಲ್ಲಲ್ಲಿ ಸಾಕಷ್ಟು ಕಾಣುತ್ತವೆ.  ದಾವಣಗೆರೆ ಸಮೀಪದ "ಸೂಳೆಕೆರೆ"ಯಿರಬಹುದು, ಕರ್ನಾಟಕದಾದ್ಯಂತ ಅಲ್ಲಲ್ಲಿ ಕೇಳಿಬರುವ "ಸೂಳೆಬಾವಿ"ಗಳು, "ಸೂಳೆಹೊಂಡ"ಗಳು... ಹೀಗೆ ಅನೇಕ ದೇವದಾಸಿಯರ ಸಮಾಜಮುಖಿ ಕಾರ್ಯಗಳ ನಿದರ್ಶನಗಳಿವೆ. ಇದೇ ರೀತಿಯ ಐತಿಹ್ಯಗಳು ಭಾರತದಾದ್ಯಂತ ಇವೆ.

ಕಾಲನುಕ್ರಮವಾಗಿ ಭಾರತವು ವಿದೇಶಿ ಆಳ್ವಿಕೆಗೊಳಗಾದಂತೆ ದೇವದಾಸಿ ಪರಂಪರೆ ತನ್ನ ಉಳಿವಿಗಾಗಿ ಅವಶ್ಯವಾಗಿದ್ದ ರಾಜಾಶ್ರಯವನ್ನು ಕಳೆದುಕೊಳ್ಳತೊಡಗಿತು. ಬಹಮನಿ ಸುಲ್ತಾನ ಮತ್ತು ಗೋಲ್ಕೊಂಡವನ್ನು ಗೆದ್ದ ಔರಂಗಜೇಬರ ಆಡಳಿತಗಳು ದಕ್ಷಿಣ ಭಾರತದಲ್ಲಿ ಈ ಕಲೆಗಳನ್ನು ಅಳಿಸಿ ಹಾಕಲು ಸಾಕಷ್ಟು ಕಠಿಣ ನಿರ್ಬಂಧಗಳನ್ನು ಹೇರಿದ್ದವು. ಅದರಲ್ಲೂ ದೇವಸ್ಥಾನಗಳೇ ರಾಜಾಶ್ರಯದ ದತ್ತಿಗಳನ್ನು ಕಳೆದುಕೊಂಡ ಮೇಲೆ ಆ ದೇವಸ್ಥಾನಗಳಲ್ಲಿದ್ದ ದೇವದಾಸಿಯರು ಅಕ್ಷರಶಃ ಬೀದಿಗೆ ಬಿದ್ದರು. ಹಾಗೆಯೇ ಅವರ ಲಲಿತಕಲೆಗಳು ಸಹ ಬೀದಿಗೆ ಬಿದ್ದವು. ಹೀಗೆ ಬೀದಿಗೆ ಬಿದ್ದ ಕಲಾವಿದೆ, ತನ್ನ ಕುಲೀನ ಗೌರವದ ಅಸ್ತಿತ್ವವನ್ನು ಕಳೆದುಕೊಂಡು "ಬೀದಿ ಸೂಳೆ" ಎಂಬ ಮಲಿನದ ಸ್ಥಿತ್ಯಂತರಕ್ಕೆ ಗುರಿಯಾದಳು.  ಇದು ಹದಿಮೂರನೇ ಶತಮಾನದಿಂದೀಚೆಗಿನ ಬೆಳವಣಿಗೆ!

ಆದರೂ ಎಲ್ಲೆಲ್ಲಿ ಹಿಂದೂ ರಾಜಾಡಳಿತವಿತ್ತೋ ಅಲ್ಲೆಲ್ಲಾ ಈ ಪರಂಪರೆ ಜೀವಂತವಿದ್ದು ದೇವದಾಸಿಯರು ಇನ್ನೂ ಬೀದಿಗೆ ಬೀಳದೆ ದೇವಸ್ಥಾನಗಳಲ್ಲೇ ಹದಿನೇಳನೇ ಶತಮಾನದವರೆಗೆ ಸ್ಥಾನವನ್ನುಳಿಸಿಕೊಂಡಿದ್ದರು. ಅದಲ್ಲದೆ ತೆಲುಗು ಸುಲ್ತಾನನೆಂದು ಖ್ಯಾತನಾಗಿದ್ದ ಗೋಲ್ಕೊಂಡ ಶಿಯಾ ಪಂಗಡದ ಸುಲ್ತಾನನು ಕೂಚುಪುಡಿ ಕಲೆಗೆ ದತ್ತಿ ಕೊಟ್ಟಂತೆ ಕೆಲವು ಉದಾರವಾದಿ ಮುಸ್ಲಿಮರು ಸಹ ಈ ಕಲೆಗಳ ಏಳಿಗೆಗೆ ದತ್ತಿಗಳನ್ನು ಕೊಟ್ಟಿದ್ದರು. ಅದರೆ ದೇವದಾಸಿಯರ ಮೇಲ್ವರ್ಗದ ಗೌರವ ಮತ್ತು ಕುಲೀನತೆ ಹಂತಹಂತವಾಗಿ ಕೆಳಮಟ್ಟಕ್ಕೆ ಪಲ್ಲಟಗೊಳ್ಳುತ್ತ ಸಾಗುತ್ತಿತ್ತು.

ಇನ್ನು ಮೊಘಲರು ಈ ದೇವದಾಸಿ ಪದ್ದತಿಯಿಂದ ಸ್ಫೂರ್ತಿಗೊಂಡೇ ಇಸ್ಲಾಮೀಕರಿಸಿದ ತವಾಯಿಫ್ ಪರಂಪರೆಯನ್ನು ಪರ್ಯಾಯವಾಗಿ ಆರಂಭಿಸಿ ಗಜಲ್, ಕಥಕ್ ಮುಂತಾದ ಸಂಗೀತ, ನೃತ್ಯ ಪ್ರಕಾರಗಳು ಟಿಸಿಲೊಡೆಯಲು ಕಾರಣರಾದರೆನಿಸುತ್ತದೆ. ಹಾಗಾಗಿ ದೇವದಾಸಿ ಹಿಂದೂ ಪರಂಪರೆಯೆನಿಸಿದರೆ ತವಾಯಿಫ್ ಧಾರ್ಮಿಕ ಕಾರಣದ ಪರ್ಯಾಯ ದೇವದಾಸಿ ಪರಂಪರೆಯೆನಿಸುತ್ತದೆ. ಉಮ್ರಾವ್ ಜಾನ್, ಅನಾರ್ಕಲಿಯರಂತಹ ಐತಿಹಾಸಿಕ ಮಹಿಳೆಯರಲ್ಲದೆ ಬಿನೋದಿನಿ ದಾಸಿ, ಗೌಹಾರ್ ಜಾನ್, ರಸೂಲನ್ ಭಾಯ್, ರೋಷನಾರ ಬೇಗಂ ಈ ಪರಂಪರೆಯ ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದ ಪ್ರಮುಖರು.

ದೇವದಾಸಿಯರ (ತವಾಯಿಫ್ ಸೇರಿ) ಸಮಾಜಮುಖಿ ಪರಂಪರೆಯ ಕಾರ್ಯಗಳು ಐತಿಹಾಸಿಕವಾಗಷ್ಟೇ ಅಲ್ಲದೆ ದೇವದಾಸಿ ಪದ್ಧತಿಯನ್ನು ಸರ್ಕಾರ ಕೊನೆಗೊಳ್ಳಿಸುವವರೆಗೆ ಸಾಗಿಬಂದಿವೆ. ದೇವದಾಸಿ ಮನೆತನದ ಹಿನ್ನೆಲೆಯ ಎಂ. ಎಸ್. ಸುಬ್ಬುಲಕ್ಷ್ಮಿಯವರ ಸಂಗೀತ ಕ್ಷೇತ್ರದ ಕೊಡುಗೆ, ಭರತನಾಟ್ಯ ಕ್ಷೇತ್ರದ ದಿಗ್ಗಜರೆನಿಸಿದ ಬಾಲಸರಸ್ವತಿ, ಪುರಿ ಜಗನ್ನಾಥ ದೇವಾಲಯದ ಕೊನೆಯ ದೇವದಾಸಿ ಶಶಿಮಣಿ ದೇವಿ, ಮತ್ತು ಕ್ಯಾನ್ಸರ್ ಕುರಿತಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಅಡೆಯಾರ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಸ್ಥಾಪಿಸಿದ ಡಾ. ಎಸ್. ಮುತ್ತುಲಕ್ಷ್ಮೀ ರೆಡ್ಡಿ...ಹೀಗೆ ದೇವದಾಸಿಯರ ಸಮಾಜಮುಖಿ ಸೇವೆ ನದಿಯಾಗಿ, ನಾಲೆಯಾಗಿ ಸಮಾಜೋನ್ನತಿಯ ಮಹಾನ್ ಕಡಲಿಗೆ ಹರಿದುಬಂದಿದೆ.

ಅಂತಹ ಒಂದು ಸ್ಥಿತ್ಯಂತರ ಕಾಲಘಟ್ಟದ ಹದಿನಾರನೇ ಶತಮಾನದ ಓರ್ವ ಕುಲೀನ ದೇವದಾಸಿಯು ರಾಜಹತ್ಯೆಯ ಪ್ರಯತ್ನದ ಮಿಥ್ಯಾರೋಪದ ಮಲಿನತೆಗೊಳಗಾಗಿಯೂ ಆತ್ಮಾಹುತಿಗೈದು ತನ್ನ ಪಾವಿತ್ರ್ಯತೆಯನ್ನು ಎತ್ತಿ ಹಿಡಿದು ಜನೋಪಕಾರಿ ನೀರಾವರಿಯ ನಾಲೆಯ ರೂಪವಾಗಿ ಜೀವಂತವಾಗುಳಿದ ಕತೆಯೇ ಶ್ರೀ ಮಲೆಯೂರು ಗುರುಸ್ವಾಮಿಗಳ ಕೃತಿ "ಬಂಗಾರದೊಡ್ಡಿ!"

ರಣಧೀರ ಕಂಠೀರವ ಎಂದೊಡನೆ ಆ ಹೆಸರು ನನ್ನನ್ನಷ್ಟೇ ಅಲ್ಲದೆ ಓದುಗರನ್ನೆಲ್ಲಾ ಅವರ ಬಾಲ್ಯಕ್ಕೆ ಕರೆದೊಯ್ಯುತ್ತದೆ ಎಂದುಕೊಂಡಿದ್ದೇನೆ. ಅಂಗೈಯಗಲದ ಕಥಾ ಪುಸ್ತಕಗಳನ್ನು ನಮಗೆ ಶಾಲೆಯಲ್ಲಿ ಓದಲು ಕೊಡುತ್ತಿದ್ದರು. ಅಂತಹ ಪುಸ್ತಕ ಮಾಲೆಯಲ್ಲಿ ರಣಧೀರ ಕಂಠೀರವ ಕೂಡ ಒಂದು! ರಣಧೀರ ಕಂಠೀರವ ಮಹಾರಾಜರು ತಮ್ಮ ದಿನನಿತ್ಯದ ವ್ಯಾಯಾಮದ ಅಂಗವಾಗಿ ಒಂದು ಧಾರವಾಡಿ ಎಮ್ಮೆಯನ್ನು ಹೊತ್ತು ಚಾಮುಂಡಿ ಬೆಟ್ಟವನ್ನು ಹತ್ತಿ ಇಳಿಯುತ್ತಿದ್ದರೆಂಬ ಪ್ರತೀತಿ ಇತ್ತೆಂದು ಅಂದು ನಮ್ಮ ಮೇಷ್ಟ್ರೊಬ್ಬರು ತಿಳಿಸಿದ್ದರು. ಅಂತಹ ಕುಸ್ತಿಪಟುವಾಗಿದ್ದ ಆ ಮೈಸೂರು ಮಹಾರಾಜರು ವಜ್ರಮುಷ್ಠಿ ಕಾಳಗದಲ್ಲಿ ಸಿದ್ಧಹಸ್ತರಾಗಿದ್ದರು ಎಂದೂ ತಿಳಿಸಿದ್ದರು. ನನಗೆ ದಕ್ಕಿದ್ದ ಆ ಕಥಾ ಪುಸ್ತಿಕೆಯಲ್ಲಿ ರಣಧೀರ ಕಂಠೀರವರು ತಿರುಚಿನಾಪಳ್ಳಿಯ ಪೈಲ್ವಾನನನ್ನು ಕುಸ್ತಿಯಲ್ಲಿ ಸೋಲಿಸಿ ಅವನ ರುಂಡವನ್ನು ಯಾರಿಗೂ ಗೊತ್ತಾಗದ ಹಾಗೆ ಬಳ್ಳಿಕತ್ತಿಯಲ್ಲಿ ನಾಜೂಕಾಗಿ ಕತ್ತರಿಸಿದ್ದರು ಎಂಬ ಕತೆಯನ್ನು ಓದಿ ನಾನು ಸಾಕಷ್ಟು ರೋಮಾಂಚನಗೊಂಡಿದ್ದೆನಲ್ಲದೆ ನಮ್ಮ ಮನೆಯ ಬಳಿಯಿದ್ದ ಗರಡಿಯಲ್ಲಿ ಸಾಮು ತೆಗೆಯಲು ಸಹ ಹೋಗುತ್ತಿದ್ದೆ.

ಇರಲಿ, ಅಂತಹ ರಣಧೀರ ಕಂಠೀರವನ ಸಾಹಸವನ್ನಷ್ಟೇ ಅಲ್ಲದೆ ಆತನ ಪ್ರೇಮದ ಆಂತರ್ಯ, ಮಾನವೀಯ ಅಂತಃಕರಣದ ಮತ್ತೊಂದು ರೂಪವನ್ನು ತೆರೆದಿಡುವುದರೊಂದಿಗೆ ರಾಜ-ರಾಜಾಶ್ರಯ-ರಾಜಕಾರಣ-ಪಿತೂರಿ-ಪ್ರೇಮ-ವೈರಾಗ್ಯ-ತ್ಯಾಗಗಳನ್ನು ಸಮ್ಮಿಳಿತಗೊಳಿಸುತ್ತ ಹದಿನಾರನೇ ಶತಮಾನದ ಒಂದು ದೃಶ್ಯಕಾವ್ಯವನ್ನು "ಬಂಗಾರದೊಡ್ಡಿ" ಕೃತಿಯು ಅನಾವರಣಗೊಳ್ಳುತ್ತದೆ. ಕೃತಿಯ ನಾಯಕಿ ದೊಡ್ಡಮ್ಮಳಾದರೂ ರಣಧೀರ ಕಂಠೀರವನೆಂಬ ವಿಶಾಲ ವೃಕ್ಷಕ್ಕೆ ಹಬ್ಬಿದ ತರುಲತೆ ಆಕೆ! ಹಾಗಾಗಿ ಈ ಕೃತಿಯಲ್ಲಿ ರಣಧೀರ ಕಂಠೀರವನ ಪಾತ್ರ ಸಹ ಅಷ್ಟೇ ಪ್ರಮುಖ ಪಾತ್ರವಾಗಿದೆ.

ಶ್ರೀ ಮಲೆಯೂರು ಗುರುಸ್ವಾಮಿಗಳು ವಿಶೇಷವಾಗಿ ಮೈಸೂರಿನ ಮಣ್ಣಿನಲ್ಲಿ ಕಳೆದುಹೋಗಿರುವ ಅನರ್ಘ್ಯ ರತ್ನಗಳನ್ನು ಹೆಕ್ಕಿ ಅವರುಗಳ ಜೀವನಗಾಥೆಯನ್ನು ಕಟ್ಟಿಕೊಡುವಲ್ಲಿ ಈಗಾಗಲೇ ಸಿದ್ಧಹಸ್ತರೆನಿಸಿದ್ದಾರೆ. ಈ ನಿಟ್ಟಿನಲ್ಲಿ ದೇವದಾಸಿ ಮಹಿಳೆ ಬೆಂಗಳೂರು ನಾಗರತ್ನಮ್ಮನವರ ಜೀವನಗಾಥೆಯ "ಕಪಿಲೆ ಹರಿದಳು ಕಡಲಿಗೆ" ಮಲೆಯೂರರ ಒಂದು ಮಹತ್ವದ ಕೃತಿ. ಅದೇ ಸಾಲಿಗೆ ಈಗ ಸೇರ್ಪಡೆಯಾಗುತ್ತಿರುವುದು "ಬಂಗಾರದೊಡ್ಡಿ!" ತಿರುಚಿನಾಪಳ್ಳಿಯ ಓರ್ವ ದೇವದಾಸಿಯ ಮಗಳಾದ ಮನೋರಮೆ ರಾಜಕಾರಣದ ದಾಳಕ್ಕೆ ಸಿಲುಕಿ ದೊಡ್ಡಮ್ಮನಾಗಿ ರಾಜ ರಣಧೀರ ಕಂಠೀರವನ ಬಂಗಾರದವಳಾಗಿ ಕಡೆಗೆ ಮೈಸೂರಿಗರ "ಬಂಗಾರದೊಡ್ಡಿ" ನಾಲೆಯಾಗುವ ನಡುವಿನ ಕತೆ ದೇವದಾಸಿಯರ ಜೀವನವನ್ನು ಬಹು ಆಪ್ತವಾಗಿ ತೆರೆದಿಡುತ್ತದೆ.

ತೆರಕಣಾಂಬಿಯ ಕುಸ್ತಿ ಅಂಕಣದೊಂದಿಗೆ ಮಲೆಯೂರು ಗುರುಸ್ವಾಮಿಗಳು ಓದುಗರನ್ನು ಹದಿನಾರನೇ ಶತಮಾನಕ್ಕೆ ಮಂತ್ರಸದೃಶರಾಗಿ ಕರೆದೊಯ್ದುಬಿಡುತ್ತಾರೆ.  ಕುಸ್ತಿಯ ಪಟ್ಟುಗಳಲ್ಲದೆ ಅಂದಿನ ಜನಜೀವನ, ಜೀವನಶೈಲಿಗೆ ಓದುಗರನ್ನೊಳಗಾಗಿಸುತ್ತ ಬಂಗಾರದೊಡ್ಡಿಯ ಕಥಾನಕವನ್ನು ಓದುಗರೂ ಒಂದು ಪಾತ್ರವಾಗಿ ನೋಡುತ್ತಿರುವಂತೆ ಭಾಸವಾಗುವಂತಹ ಕಥಾಚಿತ್ರವನ್ನು ಬಿಡಿಸುವಲ್ಲಿ ಗುರುಸ್ವಾಮಿಯವರ ಕೌಶಲ್ಯ ಎದ್ದು ಕಾಣುತ್ತದೆ.  ಉದಾಹರಣೆಗೆ ರಾಣಿಯರ ಶ್ರೇಣಿಗಳನ್ನು ಮಲೆಯೂರರು ಹೀಗೆ ವರ್ಣಿಸುತ್ತಾರೆ, "ರಾಜನಾದವನು ಶಾಸ್ತ್ರಗಳು ಸಮ್ಮತಿಸಿರುವಂತೆ ಪಟ್ಟದ ರಾಣಿಯನ್ನಾಗಿಸಲು ಕ್ಷತ್ರಿಯ ಕನ್ಯೆಯನ್ನು ಮಾತ್ರ ವಿವಾಹವಾಗಬೇಕು. ಉಳಿದವರು ಧರ್ಮಪತ್ನಿಯೆನಿಸದೆ ಕೇವಲ ಪತ್ನಿಯರು ಅಷ್ಟೇ."  ಅದೇ ರೀತಿ ದೇವದಾಸಿ ವ್ಯವಸ್ಥೆಯ ಜಾತ್ಯತೀತ ಸಮಾಜವನ್ನು ಚಿತ್ರಿಸುತ್ತ ಮಲೆಯೂರರು ಹೀಗೆ ಹೇಳುತ್ತಾರೆ, "ದೇವದಾಸಿಯರಾಗಲು ಧರ್ಮಜಾತಿಗಳೇನೂ ಅಡ್ಡಿ ಬರುತ್ತಿರಲಿಲ್ಲ. ಕಲೆ ಮತ್ತು ದೇಹ ಸೌಂದರ್ಯವಷ್ಟೇ ಮುಖ್ಯವಾಗಿರುತ್ತಿದ್ದವು. ಬ್ರಾಹ್ಮಣ ಕನ್ಯೆಯರು ದೇವದಾಸಿಯಾದರೂ ಅವರ ಪ್ರಣಯ ವ್ಯವಹಾರ ಮಾತ್ರ ಬ್ರಾಹ್ಮಣರೊಡನೆಯೇ ಇರಬೇಕೇ ಹೊರತು ಬೇರೆಯವರೊಡನಲ್ಲ ಎನ್ನುವ ನಿಯಮವೂ ಇತ್ತು"

ಹೀಗೆ ಕೃತಿಯಾದ್ಯಂತ ಅಂದಿನ ಕಾಲಘಟ್ಟದ ಸಮಾಜ, ಜಾತಿ ಪದ್ಧತಿ, ನ್ಯೂನತೆ, ವ್ಯವಸ್ಥೆಗಳನ್ನು ಕಟ್ಟಿಕೊಡುವುದಲ್ಲದೆ ಶ್ರೀರಂಗಪಟ್ಟಣದ ಬಡಾವಣೆಗಳನ್ನು, ಬೀದಿಗಳನ್ನು, ದೇವಸ್ಥಾನಗಳನ್ನು, ಮಠಗಳನ್ನು, ಉತ್ಸವಗಳನ್ನು, ಕಟ್ಟಡಗಳನ್ನು, ನಡಾವಳಿಗಳನ್ನು ಸಾಂದರ್ಭಿಕವಾಗಿ ವರ್ಣಿಸುತ್ತ ಓದುಗನನ್ನು ಹದಿನಾರನೇ ಶತಮಾನದ ಶ್ರೀರಂಗಪಟ್ಟಣಕ್ಕೂ ಕರೆದುಕೊಂಡು ಹೋಗುವುದು ಓದನ್ನು ಮತ್ತಷ್ಟು ಭಾವಾವೇಶಕ್ಕೊಳಗಾಗಿಸುತ್ತದೆ. ಈ ಅನುಭೂತಿಯನ್ನು ಮಲೆಯೂರರ "ಕಪಿಲೆ ಹರಿದಳು ಕಡಲಿಗೆ" ಕೃತಿಯಲ್ಲೂ ಕಾಣಬಹುದು.

ಕನ್ನಡ ಸಾಹಿತ್ಯಲೋಕದಲ್ಲಿ ಇತಿಹಾಸದ ಸಾಕಷ್ಟು unsung hero ಗಳ ಕೃತಿಗಳಿವೆ. ಆದರೆ ಇತಿಹಾಸದ ಪಳೆಯುಳಿಕೆಗಳಲ್ಲಿ ದೇದೀಪ್ತಮಾನವಾಗಿದ್ದರೂ ತಮ್ಮ ದೇವದಾಸಿ ಹಿನ್ನೆಲೆಯಿಂದ ಮುನ್ನೆಲೆಗೆ ಬಾರದ ಇಂತಹ unsung heroineಗಳ ಬಗ್ಗೆ ಕೃತಿಗಳು ಬಲು ಅಪರೂಪ. ಕೇವಲ ಮೈಸೂರು ಸೀಮೆಯಲ್ಲಿ ಇಂತಹ ಸಾಕಷ್ಟು ಇತಿಹಾಸ ಕಳೆದುಹೋಗಿರುವಾಗ ಕರ್ನಾಟಕದಾದ್ಯಂತ ಇನ್ನೆಷ್ಟು ಐತಿಹಾಸಿಕ ಮಹಿಳಾಮಣಿಗಳು ಮಣ್ಣಿನಲ್ಲಿ ಹೂತು ಹೋಗಿರುವರೋ! ಅದೃಷ್ಟವಶಾತ್ ಬೆಂಗಳೂರು ನಾಗರತ್ನಮ್ಮ ಮತ್ತು ದೊಡ್ಡಮ್ಮರನ್ನು ಮಲೆಯೂರು ಗುರುಸ್ವಾಮಿಗಳು ನಮಗೆ ಹುಡುಕಿಕೊಟ್ಟಿದ್ದಾರೆ.

ರಣಧೀರ ಕಂಠೀರವ ನರಸರಾಜ ಒಡೆಯರ್ ಮಹಾರಾಜರ ಬಂಗಾರದವಳಾದ ದೊಡ್ಡಮ್ಮನ ಕಲೆ, ಪಾಂಡಿತ್ಯ, ಲೋಕಜ್ಞಾನ, ಆಧ್ಯಾತ್ಮಿಕತೆ, ವೈರಾಗ್ಯಗಳು ದೇವದಾಸಿ ಸಂಸ್ಕೃತಿಯ ಬೌದ್ಧಿಕ ಶ್ರೀಮಂತಿಕೆಯ ಬಗ್ಗೆ ವಿಶೇಷ ಹೊಳಹನ್ನು ನೀಡುವಲ್ಲಿ ಈ ಕೃತಿ ಮಹತ್ವದ್ದಾಗಿದೆ. ಈ ಕೃತಿಯನ್ನು ಓದುತ್ತ ಓದುತ್ತ ಕ್ರಿ.ಪೂ. ಐದನೇ ಶತಮಾನದ ಅಮ್ರಪಾಲಿ ಹದಿನಾರನೇ ಶತಮಾನದ ದೊಡ್ಡಮ್ಮಳಾಗಿ ಜನ್ಮ ತಳೆದಂತೆ ಭಾಸವಾಗುತ್ತದೆ. ವೈಶಾಲಿ ಪಟ್ಟಣದ ಅಮ್ರಪಾಲಿ ತಮ್ಮ ವೈರಿಯಾದ ಮಗಧ ಸಾಮ್ರಾಜ್ಯದ ಬಿಂಬಿಸಾರನನ್ನು ಪ್ರೇಮಿಸುವಂತೆ ಇಲ್ಲಿ ತಿರುಚಿನಾಪಳ್ಳಿಯ ಮನೋರಮೆ ದೊಡ್ಡಮ್ಮಳಾಗಿ ಮೈಸೂರು ಸಿಂಹಾಸನಾಧೀಶ್ವರ ರಣಧೀರ ಕಂಠೀರವನನ್ನು ಪ್ರೇಮಿಸುತ್ತಾಳೆ. ಅಮ್ರಪಾಲಿಯಂತೆಯೇ ದೊಡ್ಡಮ್ಮ ಸಹ ನೃತ್ಯ, ಗಾಯನವಷ್ಟೇ ಅಲ್ಲದೆ ವೈರಾಗ್ಯದ ಅನುಭೂತಿಯನ್ನೂ ಪಡೆದವಳಾಗಿರುತ್ತಾಳೆ. ಅಲ್ಲಿ ಅಮ್ರಪಾಲಿ  ನಿರ್ವಾಣವನ್ನು ಹೊಂದಿ ಅಮರತ್ವ ಪಡೆದರೆ, ಇಲ್ಲಿ ದೊಡ್ಡಮ್ಮ ಆತ್ಮಾಹುತಿಗೈದು ಜನೋಪಯೋಗಿ ನೀರಾವರಿ ನಾಲೆಯಾಗಿ ಚಿರಾಯುವಾಗುತ್ತಾಳೆ. ಇದು ಶತಶತಮಾನಗಳ ಅಂತರದಲ್ಲೂ ಸಾಮ್ಯತೆ ಹೊಂದಿದ್ದ ಈರ್ವರು ಅಪೂರ್ವ ದೇವದಾಸಿ ಮಹಿಳೆಯರ ಜೀವನ ಚಿತ್ರಣವಾಗಿರದೇ ಇಂತಹ ಬೆಳಕಿಗೆ ಬಾರದ ಅನೇಕ ದೇವದಾಸಿ ಮಹಿಳೆಯರ ಕತೆಯಾಗಿದೆ.

ಏಕೆಂದರೆ ಅಂತಹ ಗತ ದೇವದಾಸಿಯರ ಇತಿಹಾಸದ ಪರಿಚಯವಿರದ ಇಂದಿನ ಸಮಾಜದಲ್ಲಿ ದೇವದಾಸಿಯರ ಬಗ್ಗೆ ಪೂರ್ವಾಗ್ರಹಗಳು ತುಂಬಿಕೊಂಡಿವೆ. ಇದಕ್ಕೆ ಕಾರಣ ಬ್ರಿಟಿಷರ ಆಡಳಿತದಲ್ಲಿ ದೇವದಾಸಿಯರು ಸಂಪೂರ್ಣ ಅಸ್ತಿತ್ವವನ್ನು ಕಳೆದುಕೊಂಡು ಪೂರ್ಣ ಪ್ರಮಾಣದ ವೇಶ್ಯೆಯರು ಎನ್ನಿಸಿಕೊಂಡುಬಿಟ್ಟಿದ್ದರು. ಕಡೆಗೆ ಈ ಸಾಂಸ್ಕೃತಿಕ ಪರಂಪರೆಯು ಜನಪದದ ಜೋಗತಿಯರಿಗಷ್ಟೇ ಸೀಮಿತವೆನಿಸಿ ಬೇರೆಯದೇ ಆಯಾಮವನ್ನು ಪಡೆದುಕೊಂಡಿತು. ಸ್ವತಂತ್ರ್ಯ ಭಾರತದ ಇಪ್ಪತ್ತನೇ ಶತಮಾನದ ಅಂಚಿನಿಂದ ಸಾಕಷ್ಟು ವಿಶ್ವವಿದ್ಯಾಲಯಗಳ ಮಹಿಳಾ ಅಧ್ಯಯನ ಸಂಸ್ಥೆಗಳು ಈ ಕುರಿತು ಅಧ್ಯಯನಗಳನ್ನು ನಡೆಸಿ ಸಂಶೋಧನೆಗಳ ಮೂಲಕ ದೇವದಾಸಿಯರ ಪರಂಪರೆಗೆ ಮತ್ತೆ ಘನತೆಯನ್ನು ತಂದುಕೊಡುವ ಪ್ರಯತ್ನವನ್ನು ಮಾಡುತ್ತಿವೆ, ನಿಜ. ಆದರೆ ಈ ಸಂಶೋಧನೆಗಳು ಸಹ ಜೋಗತಿ, ಜೋಗಪ್ಪಗಳನ್ನೇ ದೇವದಾಸಿಯರೆಂದು ಬಗೆದು ಸಂಶೋಧನೆಗಳು ಸೀಮಿತಗೊಳ್ಳುತ್ತಿರುವುದಲ್ಲದೆ ದೇವದಾಸಿ ಸಂಸ್ಕೃತಿಯ ವ್ಯಾಖ್ಯಾನವನ್ನೇ ಬದಲಾಯಿಸುತ್ತಿವೆ. ಅಬ್ಬಬ್ಬಾ ಎಂದರೆ ಅಂಗಭೋಗ ರಂಗಭೋಗದ ತನಕ ವ್ಯಾಖ್ಯಾನಿಸುತ್ತವೆ.

ಯಾವ ಸಂಶೋಧನೆಗಳೂ ಕ್ರಿ. ಪೂ. ಐದನೇ ಶತಮಾನದ "ನಗರ ವಧು" ಪರಿಕಲ್ಪನೆಯೇ ಇಂದಿನ "ಮಿಸ್ ಬೆಂಗಳೂರು" "ಮಿಸ್  ಮೈಸೂರು", "ಮಿಸ್ ಇಂಡಿಯಾ", "ಮಿಸ್ ವರ್ಲ್ಡ್", "ಮಿಸ್ ಯೂನಿವರ್ಸ್" ಎಂದು ಸಮೀಕರಿಸುವುದಿಲ್ಲ. ಆರಂಗೇಟ್ರಮ್ ಅನ್ನು ದೇವದಾಸಿ ದೀಕ್ಷೆಯೆಂದು ಗುರುತಿವುದಿಲ್ಲ. ಇಂದಿನ ಲಲಿತಕಲೆ ಸ್ಪರ್ಧೆಗಳೇ ಅಂದಿನ ದೇವದಾಸಿ ಪರಂಪರೆ ಎಂಬ ವ್ಯಾಖ್ಯಾನವನ್ನು ನೀಡುವುದಿಲ್ಲ. ವರ್ತಮಾನದ ಸಿನೆಮಾ ನಟನೆ, ಗಗನಸಖಿ, ನೃತ್ಯ, ಇತ್ಯಾದಿ ಸೇವೆ ಮತ್ತು ಮನರಂಜನೆ ವೃತ್ತಿಗಳು ದೇವದಾಸಿ ಪರಂಪರೆಯ ರೂಪಾಂತರಗಳು ಎಂದು ವಿಶ್ಲೇಷಿಸುವುದಿಲ್ಲ.  ಏಕೆಂದರೆ ದೇವದಾಸಿಯರು ಎಂದರೆ ಜೋಗಪ್ಪ ಜೋಗತಿಯರು ಎಂಬ ಕುದುರೆ ಕಣ್ತಡೆ ಪಟ್ಟಿಗಳನ್ನು ಸಂಶೋಧನೆಗಳು ಕಟ್ಟಿಕೊಂಡುಬಿಟ್ಟಿವೆ. ಸಮಗ್ರವಾಗಿ ವಿಷಯಗಳನ್ನು ಪರಿಗಣಿಸಿ ವಿಶ್ಲೇಷಿಸಿ ಅಧ್ಯಯನಗಳನ್ನು ಕೈಗೊಳ್ಳುವ ಪರಿಯನ್ನು ನಮ್ಮ ವಿಶ್ವವಿದ್ಯಾಲಯಗಳು ಯಾವಾಗ ಆರಂಭಿಸುವವೋ!  ಅಂತಹ ಸಂಶೋಧನೆಗಳ ಅಗತ್ಯವನ್ನು ಮಲೆಯೂರರ ಕೃತಿ ಪರೋಕ್ಷವಾಗಿ ಬಯಸುತ್ತದೆ.

ಅದಲ್ಲದೆ, ಸಾಮಾಜಿಕವಾಗಿ ಸಂಶೋಧನೆಗಳು ಅಷ್ಟಾಗಿ ಬೆಳಕಿಗೆ ಬಾರದೆ ದೇವದಾಸಿಯ ಪರಂಪರೆಯ ವ್ಯಾಖ್ಯಾನದ ಚರ್ಚೆಗೆ ಅವಕಾಶಗಳೂ ಇಲ್ಲದಂತಾಗಿವೆ. ಇದು ವಿಶ್ವವಿದ್ಯಾಲಯದ ಸಂಶೋಧನೆಗಳಿಗಿರುವ ಮಿತಿ. ಅದಕ್ಕೆ ಪ್ರಮುಖವಾಗಿ ಕಥಾರೂಪಗಳಲ್ಲದ, ಸೃಜನೇತರ ಶೈಲಿಯ ಸಂಶೋಧನೆಯ ಚೌಕಟ್ಟಿನ ಪದಕೋಶಗಳ ಪರಿಭಾಷೆ ಸಾಮಾಜಿಕವಾಗಿ ಇನ್ನೂ ಆಕರ್ಷಕ ಎನಿಸಿಲ್ಲದಿರುವುದೂ ಒಂದು ಕಾರಣ.

ಈ ನಿಟ್ಟಿನಲ್ಲಿ ಐತಿಹಾಸಿಕ ಆಕರಗಳನ್ನು ಸಮರ್ಪಕವಾಗಿ ಕಥನ ರೂಪವಾಗಿಸಿದಾಗ ಅಂತಹ ಕೃತಿಗಳು ಇತಿಹಾಸದ ಹೊಳಹನ್ನು ಮೂಡಿಸುವಲ್ಲಿ ಮತ್ತು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತವೆ. ಆದರೆ ಅಂತಹ ಪ್ರಯತ್ನಗಳಲ್ಲಿ ಸಾಕಷ್ಟು ಸಾಹಿತಿಗಳು "ತೀವ್ರ ಸೃಜನಶೀಲ"ರಾಗಿ ದಾರಿ ತಪ್ಪಿಸಿ ತಮ್ಮದೇ ಆದ ಕಪೋಲಕಲ್ಪಿತ ಇತಿಹಾಸವನ್ನು ಸೃಷ್ಟಿಸಿದ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಈ "ತೀವ್ರ ಸೃಜನಶೀಲ" ಅಯೋಮಯ ಸೃಷ್ಟಿಯಲ್ಲಿ ಇತಿಹಾಸದ ನಿಕೃಷ್ಟರು ಗರಿಷ್ಠರಾಗಿಯೂ, ಗರಿಷ್ಠರು ನಿಕೃಷ್ಠರಾಗಿಯೂ ಪಲ್ಲಟಗೊಂಡಿದ್ದಾರೆ. ಹಾಗಾಗಿ ಇಂತಹ ಪ್ರಯತ್ನಕ್ಕೆ ಸಾಕಷ್ಟು ಅಧ್ಯಯನ ಮತ್ತು ಖಚಿತತೆಯನ್ನಿಟ್ಟುಕೊಂಡು ಲೇಖಕರು ಸ್ಥಿತಪ್ರಜ್ಞರಾಗಿ ಐತಿಹಾಸಿಕ ಕೃತಿಗಳ ರಚನೆಯಲ್ಲಿ ತೊಡಗಬೇಕು. ಅಂತಹ ಅಧ್ಯಯನ, ಖಚಿತತೆ, ಮತ್ತು ಎಲ್ಲಿಯೂ ಭಾವಾವೇಷಕ್ಕೊಳಗಾಗದ ಸ್ಥಿತಪ್ರಜ್ಞತೆಯನ್ನು ಮಲೆಯೂರು ಗುರುಸ್ವಾಮಿಗಳು ಈ ಕೃತಿಯಾದ್ಯಂತ ತೋರಿದ್ದಾರೆ. ಆತ್ಮಾಹುತಿ ಮಾಡಿಕೊಳ್ಳುವ ಮುನ್ನ  ದೊಡ್ಡಮ್ಮನು ಬರೆದಿಟ್ಟ ಮರಣಪತ್ರವು ಲೇಖಕರ ಸ್ಥಿತಪ್ರಜ್ಞ ಸೃಜನಶೀಲತೆಗೆ ಕೊಟ್ಟ ಪ್ರಮಾಣಪತ್ರದಂತಿದೆ! ಸಂಶೋಧನಾ ಅಧ್ಯಯನದ ನೆಲೆಯಿಂದಲೂ ಶ್ರೀಯುತರ "ಬಂಗಾರದೊಡ್ಡಿ" ಮತ್ತು "ಕಪಿಲೆ ಹರಿದಳು ಕಡಲಿಗೆ" ಕೃತಿಗಳು ಮಹತ್ವದ್ದೆನಿಸುತ್ತವೆ.

ಒಟ್ಟಾರೆ ಮಲೆಯೂರು ಗುರುಸ್ವಾಮಿಗಳ ಈ ಕೃತಿ ಓದುಗರಲ್ಲಿ ದೇವದಾಸಿಯರ ಬಗೆಗಿನ ಎಲ್ಲಾ ಪೂರ್ವಾಗ್ರಹಗಳನ್ನು ಕಳೆದು ಮತ್ತೊಮ್ಮೆ ಘನತೆ, ಗೌರವಾದರಗಳನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಕೃತಿಯ ಸಾರ್ಥಕತೆಗೆ ಇಷ್ಟು ಸಾಕಲ್ಲವೇ!

ರವಿ ಹಂಜ್,
ಶಿಕಾಗೋ, ಯು. ಎಸ್.ಎ.
ravihanj@gmail.com

ಹಿಂದಿ ದಿವಸದ ಆಚೀಚೆ!

 

ಘನ ಭಾರತ ಸಂವಿಧಾನವು ತನ್ನ ಆರ್ಟಿಕಲ್ 343 (1)ರಲ್ಲಿ "ಕೇಂದ್ರ ಸರ್ಕಾರದ ಅಧಿಕೃತ ಭಾಷೆ ದೇವನಾಗರಿ ಲಿಪಿಯ ಹಿಂದಿ. ಇಂಗ್ಲಿಷ್ ಭಾಷೆಯ ಬಳಕೆಯನ್ನು ಸಂವಿಧಾನವು ಜಾರಿಗೆ ಬಂದ ಹದಿನೈದು ವರ್ಷಗಳಲ್ಲಿ ಅಂದರೆ ಜನವರಿ 26, 1965ಕ್ಕೆ ನಿಲ್ಲಿಸಬೇಕು. ಅಥವಾ ಸಂಸತ್ತಿನಲ್ಲಿ ಈ ಕುರಿತು ಚರ್ಚಿಸಿ ಇಂಗ್ಲಿಷ್ ಕುರಿತು ನಿರ್ಧರಿಸಬೇಕು" ಎಂದಿದೆ. ಸಂವಿಧಾನ ಕೊಟ್ಟ 1965ರ ಗಡುವು ಬಂದಾಗ ಇಂಗ್ಲಿಷ್ ನಿಲ್ಲಿಸಲು ಭಾರೀ ವಿರೋಧ ವ್ಯಕ್ತವಾಗಿ ಇಂಗ್ಲಿಷ್ ಕೇಂದ್ರ ಸರ್ಕಾರದ ಜಂಟಿ ಅಧಿಕೃತ ಆಡಳಿತ ಭಾಷೆಯಾಗಿ ಮುಂದುವರೆಯಿತು.


ಹಿಂದಿ ಎಷ್ಟೇ ಸ್ವದೇಶಿ ಎನಿಸಿದರೂ ಅದಕ್ಕಿಂತಲೂ ಹೆಚ್ಚಿನ ಇತಿಹಾಸ, ಪರಂಪರೆ, ಸಮರ್ಥವಾಗಿರುವ ಭಾಷೆಗಳು ಭಾರತದಲ್ಲಿವೆ. ದುರದೃಷ್ಟವಶಾತ್ ಹಿಂದಿ ಭಾಷೆಯು ವಿದೇಶಿ ಇಂಗ್ಲಿಷಿಗೆ ಪರ್ಯಾಯವಾದ ಪರಮ ಸ್ವದೇಶಿ ಭಾಷೆಯೆನಿಸಿಬಿಟ್ಟಿದೆ! ಇದಕ್ಕೆ ಮೂಲ ಕಾರಣ ಸಂವಿಧಾನಾತ್ಮಕವಾಗಿ ಹಿಂದಿ ಕೇಂದ್ರ ಸರ್ಕಾರದ ಅಧಿಕೃತ ಆಡಳಿತ ಭಾಷೆಯಾಗಿರುವುದು. 21 ಹಿಂದಿಯೇತರ ಭಾಷೆಗಳು ಭಾರತದ ಅಧಿಕೃತ ಪ್ರಾದೇಶಿಕ ಭಾಷೆಗಳಿದ್ದರೂ ಕೇಂದ್ರ ಸರ್ಕಾರದ ಆಡಳಿತ ಭಾಷೆಯಾಗಿ ಹಿಂದಿ ಮತ್ತು ಇಂಗ್ಲಿಷ್ ಇವೆ. ಕೇಂದ್ರ ಸರ್ಕಾರದ ಈ ದ್ವಿಭಾಷಾ ಆಡಳಿತದ ದ್ವಂದ್ವವನ್ನು ನಿರಾಕರಿಸಿ ಇಂಗ್ಲಿಷ್ ಭಾಷೆಯನ್ನು ಮಾತ್ರ ಆಡಳಿತ ಭಾಷೆಯಾಗಿಸಿದರೆ ಹಿಂದಿಯನ್ನು ಸಮರ್ಪಕವಾಗಿ ಪ್ರಾದೇಶಿಕರಿಸಬಹುದು. ಆದರೆ ಕೇಂದ್ರ ಸರ್ಕಾರ ಹಿಂದಿಯನ್ನು ಹಿಂದಿ ದಿವಸ, ಹಿಂದಿ ಉತ್ಸವ ಮುಂತಾದ ಅಭಿಯಾನಗಳನ್ನು ಹಮ್ಮಿಕೊಂಡು ಹಿಂದಿ ಭಾಷೆಯನ್ನು ಉತ್ತೇಜಿಸಬೇಕೆಂಬುದು ಸಹ ಸಾಂವಿಧಾನಿಕ ಅಂಶ. ಹೀಗೆ ಇಂದಿನ ಅನೇಕ ಹೋರಾಟಗಳಿಗೆ ಕಾರಣವಾದಂತಹ ಅನೇಕ ವಿಷಯಗಳು ಸಂವಿಧಾನದಲ್ಲಿ ಇವೆ. ಭಾವನಾತ್ಮಕವಾಗಿ ಸಂವಿಧಾನವನ್ನು ಪೂಜಿಸುವುದಕ್ಕಿಂತ ಅದನ್ನು ಸಮಗ್ರವಾಗಿ ಪರಿಷ್ಕರಿಸುವ ಅಗತ್ಯವನ್ನು ನಾವೆಲ್ಲರೂ ಮನಗಾಣಬೇಕು.


ಇನ್ನು ಭಾರತವನ್ನು ಪ್ರಮುಖವಾಗಿ ಒಗ್ಗೂಡಿಸಿದ ಬ್ರಿಟಿಷರು ಮತ್ತು ಇಂಗ್ಲಿಷ್ ಎಷ್ಟೇ ವಿದೇಶಿ ಎನಿಸಿದರೂ ಅವು ನಮ್ಮ ಪರಂಪರೆ ಎಂಬುದನ್ನು ಮರೆಯಬಾರದು. ಹಾಗಾಗಿ ಇಂಗ್ಲಿಷ್ ಅನ್ನು ನಮ್ಮ ಕೇಂದ್ರ ಸರ್ಕಾರದ ಏಕೈಕ ಆಡಳಿತ ಭಾಷೆಯನ್ನಾಗಿಸಿದರೆ ಹಿಂದಿ ತಾನೇ ತಾನಾಗಿ ಒಂದು ಪ್ರಾದೇಶಿಕತೆಗೆ ಸೀಮಿತಗೊಳ್ಳುತ್ತದೆ. ಹಿಂದಿಯೇತರರು ಸಾಂವಿಧಾನಿಕವಾಗಿ ಇಂಗ್ಲಿಷ್ ಅನ್ನು ಕೇಂದ್ರದ ಏಕೈಕ ಭಾಷೆಯೆಂದು ತಿದ್ದಲು ಹೋರಾಟ ಮಾಡಿ ಸಮಸ್ಯೆಯ ಮೂಲೋಚ್ಚಾಟನೆ ಮಾಡದಿದ್ದರೆ ಉಳಿದೆಲ್ಲಾ ಹೋರಾಟಗಳು ವರ್ಷಕ್ಕೊಮ್ಮೆ ಮಾಡುವ ಆಚರಣೆಗಳು ಮಾತ್ರ!


ತುರ್ತಾಗಿ ಮಾಡಬೇಕಾದ್ದು ಏನೆಂದರೆ ಹಿಂದಿಯೇತರ ಸಂಸದರು ಸಂಸತ್ತಿನಲ್ಲಿ ಹಿಂದಿಯಲ್ಲಿ ಯಾರು ಪ್ರಶ್ನೆ ಕೇಳಿದರೂ ಉತ್ತರಿಸಿದರೂ ಅದನ್ನು ಇಂಗ್ಲಿಷಿಗೆ ಅನುವಾದಿಸುವ ದುಭಾಷಿಗಳು ಇರಬೇಕು. ಹಾಗೆಯೇ ಭಾರತದ ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಅದನ್ನು ಇಂಗ್ಲಿಷಿಗೆ ದುಭಾಷಿಸುವ ವ್ಯವಸ್ಥೆ ಬೇಕೆಂದು ಹಠ ಹಿಡಿದು, ಹಿಂದಿ ಪ್ರೋತ್ಸಾಹದ ಸಂವಿಧಾನದ ಪರಿಚ್ಛೇದಗಳನ್ನು ಛೇದಿಸುವ ಕೆಲಸ ಮಾಡಬೇಕು. ಅದನ್ನು ಮಾಡದ ಹೊರತು ಉಳಿದದ್ದೆಲ್ಲವೂ ವ್ಯರ್ಥ. ಬನ್ನಿ, ಸಮೋಸ ತಿಂದು, ಬೇಲ್ ಪುರಿ ಮೇದು ಲಸ್ಸಿ ಕುಡಿದು ಇಸ್ಸಿ ಮಾಡೋಣ.