"ಇತಿಹಾಸವನ್ನು ಅರಿಯದವನು ಇತಿಹಾಸವನ್ನು ಸೃಷ್ಟಿಸಲಾರ" ಎಂಬುದು ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ಅವರ ಖ್ಯಾತ ಉದ್ಘೋಷಗಳಲ್ಲೊಂದು.
ಆದರೆ ಈವರೆಗೆ ನಾವು ಬಲ್ಲ ಇತಿಹಾಸದ ಪುಟಗಳಲ್ಲಿ ಅನೇಕ ಮಹತ್ವದ ಸಂಗತಿಗಳು ಕಳೆದುಹೋಗಿವೆ ಯಾ ನಿರ್ಲಕ್ಷ್ಯಕ್ಕೊಳಗಾಗಿವೆ. ಅವುಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಒಂದೊಮ್ಮೆ ಮಹತ್ವದ ಸ್ಥಾನವನ್ನು ಹೊಂದಿದ್ದು ನಂತರದ ಕಾಲಗರ್ಭದ ಅಯೋಮಯಗಳಲ್ಲಿ ತಿರಸ್ಕಾರಕ್ಕೊಳಗಾಗಿರುವ ದೇವದಾಸಿ ಪರಂಪರೆ ಅಂತಹ ಮಹತ್ವದ ಪರಂಪರೆಗಳಲ್ಲೊಂದು.
ಕ್ರಿ.ಪೂ. ಐದನೇ ಶತಮಾನದ ನಗರವಧು (ದೇವದಾಸಿ ಪರಂಪರೆ) ಅಮ್ರಪಾಲಿ ಭಾರತದ ಸರ್ವಶ್ರೇಷ್ಠ ಅಗ್ರಗಣ್ಯ ನರ್ತಕಿಯಷ್ಟೇ ಅಲ್ಲದೆ ಬೌದ್ಧ ಧರ್ಮದ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ ನಿರ್ವಾಣವನ್ನು ಹೊಂದಿದ ಮಹಿಳೆಯಾಗಿ ಚಿರಸ್ಥಾಯಿಯಾಗಿದ್ದಾಳೆ. ಬಿಂಬಿಸಾರ ಮತ್ತು ಅಮ್ರಪಾಲಿಯ ಪ್ರೇಮಕಥೆಯೂ ಅಷ್ಟೇ ಚಿರಸ್ಥಾಯಿಯಾಗಿದೆ. ಈಕೆಯ ಕುರಿತು ಶತಶತಮಾನಗಳಿಂದ ಸಾಕಷ್ಟು ಸಾಹಿತ್ಯ ಸೃಷ್ಟಿಯಾಗಿರುವುದಲ್ಲದೆ ಈಗಲೂ ಸೃಷ್ಟಿಯಾಗುತ್ತಿದೆ. ಅಮ್ರಪಾಲಿ ಸಿನೆಮಾವನ್ನು ಸಹ ಇಲ್ಲಿ ನೆನಪಿಸಿಕೊಳ್ಳಬಹುದು. ಅದೇ ರೀತಿ ಕ್ರಿ. ಪೂ. ಎರಡನೇ ಶತಮಾನದ ಖ್ಯಾತ ಸಂಸ್ಕೃತ ಕಾವ್ಯ ಮೃಚ್ಛಕಟಿಕಾ ನಾಯಕಿ ವಸಂತಸೇನಾ ಮತ್ತು ಕ್ರಿ.ಶ. ಐದನೇ ಶತಮಾನದ ಇಳಂಗೋ ಅಡಿಗಳ್ ರಚಿಸಿರುವ ತಮಿಳಿನ ಖ್ಯಾತ ಕಾವ್ಯ ಸಿಲಪ್ಪಧಿಕಾರಮ್ ನ ಮಾಧವಿ ಸಹ ಅಮ್ರಪಾಲಿಯಷ್ಟೇ ಖ್ಯಾತ ನಗರವಧುಗಳು.
ದಕ್ಷಿಣ ಭಾರತದ ತಮಿಳುನಾಡಿನ ಕಾಂಚೀಪುರಂ, ಈರೋಡುಗಳಲ್ಲದೆ ಆಂಧ್ರ, ತೆಲಂಗಾಣ, ಕರ್ನಾಟಕದ ರೇಷ್ಮೆ ನೇಯ್ಗೆಯು ಪ್ರವರ್ಧಮಾನಕ್ಕೆ ಬಂದದ್ದೇ ಅಲ್ಲಿನ ದೇವದಾಸಿಯರ ಅಂಗವಸ್ತ್ರ, ಸೀರೆಗಳನ್ನು ನೇಯುವುದರೊಂದಿಗೆ! ಅದೇ ರೀತಿ ಮಧ್ಯಪ್ರದೇಶದ ಚಂದೇರಿ ನೇಕಾರರು ಸಹ ಇದೇ ರೀತಿ ಪ್ರವರ್ಧಮಾನಕ್ಕೆ ಬಂದವೆಂದು ಸಂಶೋಧನೆಗಳು ತಿಳಿಸುತ್ತವೆ. ಹೀಗೆ ದೇವದಾಸಿಯರೆನ್ನುವ ಎಲ್ಲಾ ಜಾತಿಯ ಕಲಾವಿದೆಯರನ್ನೊಳಗೊಂಡ ಪರಂಪರೆಯು ಸಾಂಸ್ಕೃತಿಕವಾಗಿಯಷ್ಟೇ ಅಲ್ಲದೆ ಆರ್ಥಿಕತೆಗೂ ಪರೋಕ್ಷವಾಗಿ ನೆಲೆಯೊದಗಿಸಿದ್ದಿತು. ಈ ಪದ್ಧತಿಯಲ್ಲಿ ಎಲ್ಲಾ ಜನಾಂಗದ ಜಾತಿಯ ಮಹಿಳೆಯರಿದ್ದು ಇದೊಂದು ಜಾತ್ಯಾತೀತ ವ್ಯವಸ್ಥೆಯಾಗಿತ್ತು ಎಂಬುದು ಮತ್ತೊಂದು ಗಮನಾರ್ಹ ಸಂಗತಿ. ಒಟ್ಟಾರೆ ಲಲಿತಕಲೆಗಳಲ್ಲಿ ಪ್ರಾವೀಣ್ಯ ಪಡೆದವರ ಒಡ್ಡೋಲಗವೇ ದೇವದಾಸಿ ವ್ಯವಸ್ಥೆಯಾಗಿತ್ತು.
ರಾಜನಾದವನ ಪಟ್ಟದರಾಣಿಯಾಗಲು ಕ್ಷತ್ರಿಯಳೇ ಆಗಿರಬೇಕೆಂಬ ನಿಯಮವಿದ್ದರೂ ಅದನ್ನು ಮೀರಿ ಹೊಯ್ಸಳರ ವಿಷ್ಣುವರ್ಧನನ ರಾಣಿಯಾದ ನಾಟ್ಯರಾಣಿ ಶಾಂತಲೆ, ಕರ್ನಾಟಕ ಸಾಮ್ರಾಜ್ಯದ ವಿಜಯನಗರದ ಕೃಷ್ಣದೇವರಾಯನ ಪತ್ನಿ ನೃತ್ಯಗಾತಿ ಚೆನ್ನಾದೇವಿಯರ ಉದಾಹರಣೆಗಳೂ ಇವೆಯೆಂದರೆ ನೃತ್ಯಗಾತಿಯರ ಗೌರವಾದರಗಳು ಹೇಗಿದ್ದವು ಎಂದು ಊಹಿಸಿಕೊಳ್ಳಬಹುದು.
ಕ್ರಿ.ಶ. ಆರನೇ ಶತಮಾನದಿಂದ ಕ್ರಿ. ಶ. ಹದಿಮೂರನೇ ಶತಮಾನದವರೆಗೂ ದೇವದಾಸಿಯರು ಸಮಾಜದಲ್ಲಿ ಅತ್ಯಂತ ಉನ್ನತ ಸ್ಥಾನಮಾನಗಳನ್ನು ಹೊಂದಿ ಘನತೆ ಗೌರವಗಳಿಗೆ ಪಾತ್ರರಾಗಿದ್ದರು. ನೃತ್ಯ, ಸಂಗೀತ, ಅಭಿನಯ ಮುಂತಾದ ಲಲಿತಕಲೆಗಳ ರಕ್ಷಕರೆನಿಸಿ ರಾಜಾಶ್ರಯ ಹೊಂದಿ ದಾನ ದತ್ತಿಗಳನ್ನು ಪಡೆಯುವುದರೊಂದಿಗೆ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಸಹ ಕೈಗೊಂಡಿದ್ದರು. ಈ ಸಮಾಜಮುಖಿ ಕಾರ್ಯಗಳಲ್ಲಿ ನೀರಿಗೆ ಸಂಬಂಧಿಸಿದ ಕಾರ್ಯಗಳು ಇಂದಿಗೂ ಅಲ್ಲಲ್ಲಿ ಸಾಕಷ್ಟು ಕಾಣುತ್ತವೆ. ದಾವಣಗೆರೆ ಸಮೀಪದ "ಸೂಳೆಕೆರೆ"ಯಿರಬಹುದು, ಕರ್ನಾಟಕದಾದ್ಯಂತ ಅಲ್ಲಲ್ಲಿ ಕೇಳಿಬರುವ "ಸೂಳೆಬಾವಿ"ಗಳು, "ಸೂಳೆಹೊಂಡ"ಗಳು... ಹೀಗೆ ಅನೇಕ ದೇವದಾಸಿಯರ ಸಮಾಜಮುಖಿ ಕಾರ್ಯಗಳ ನಿದರ್ಶನಗಳಿವೆ. ಇದೇ ರೀತಿಯ ಐತಿಹ್ಯಗಳು ಭಾರತದಾದ್ಯಂತ ಇವೆ.
ಕಾಲನುಕ್ರಮವಾಗಿ ಭಾರತವು ವಿದೇಶಿ ಆಳ್ವಿಕೆಗೊಳಗಾದಂತೆ ದೇವದಾಸಿ ಪರಂಪರೆ ತನ್ನ ಉಳಿವಿಗಾಗಿ ಅವಶ್ಯವಾಗಿದ್ದ ರಾಜಾಶ್ರಯವನ್ನು ಕಳೆದುಕೊಳ್ಳತೊಡಗಿತು. ಬಹಮನಿ ಸುಲ್ತಾನ ಮತ್ತು ಗೋಲ್ಕೊಂಡವನ್ನು ಗೆದ್ದ ಔರಂಗಜೇಬರ ಆಡಳಿತಗಳು ದಕ್ಷಿಣ ಭಾರತದಲ್ಲಿ ಈ ಕಲೆಗಳನ್ನು ಅಳಿಸಿ ಹಾಕಲು ಸಾಕಷ್ಟು ಕಠಿಣ ನಿರ್ಬಂಧಗಳನ್ನು ಹೇರಿದ್ದವು. ಅದರಲ್ಲೂ ದೇವಸ್ಥಾನಗಳೇ ರಾಜಾಶ್ರಯದ ದತ್ತಿಗಳನ್ನು ಕಳೆದುಕೊಂಡ ಮೇಲೆ ಆ ದೇವಸ್ಥಾನಗಳಲ್ಲಿದ್ದ ದೇವದಾಸಿಯರು ಅಕ್ಷರಶಃ ಬೀದಿಗೆ ಬಿದ್ದರು. ಹಾಗೆಯೇ ಅವರ ಲಲಿತಕಲೆಗಳು ಸಹ ಬೀದಿಗೆ ಬಿದ್ದವು. ಹೀಗೆ ಬೀದಿಗೆ ಬಿದ್ದ ಕಲಾವಿದೆ, ತನ್ನ ಕುಲೀನ ಗೌರವದ ಅಸ್ತಿತ್ವವನ್ನು ಕಳೆದುಕೊಂಡು "ಬೀದಿ ಸೂಳೆ" ಎಂಬ ಮಲಿನದ ಸ್ಥಿತ್ಯಂತರಕ್ಕೆ ಗುರಿಯಾದಳು. ಇದು ಹದಿಮೂರನೇ ಶತಮಾನದಿಂದೀಚೆಗಿನ ಬೆಳವಣಿಗೆ!
ಆದರೂ ಎಲ್ಲೆಲ್ಲಿ ಹಿಂದೂ ರಾಜಾಡಳಿತವಿತ್ತೋ ಅಲ್ಲೆಲ್ಲಾ ಈ ಪರಂಪರೆ ಜೀವಂತವಿದ್ದು ದೇವದಾಸಿಯರು ಇನ್ನೂ ಬೀದಿಗೆ ಬೀಳದೆ ದೇವಸ್ಥಾನಗಳಲ್ಲೇ ಹದಿನೇಳನೇ ಶತಮಾನದವರೆಗೆ ಸ್ಥಾನವನ್ನುಳಿಸಿಕೊಂಡಿದ್ದರು. ಅದಲ್ಲದೆ ತೆಲುಗು ಸುಲ್ತಾನನೆಂದು ಖ್ಯಾತನಾಗಿದ್ದ ಗೋಲ್ಕೊಂಡ ಶಿಯಾ ಪಂಗಡದ ಸುಲ್ತಾನನು ಕೂಚುಪುಡಿ ಕಲೆಗೆ ದತ್ತಿ ಕೊಟ್ಟಂತೆ ಕೆಲವು ಉದಾರವಾದಿ ಮುಸ್ಲಿಮರು ಸಹ ಈ ಕಲೆಗಳ ಏಳಿಗೆಗೆ ದತ್ತಿಗಳನ್ನು ಕೊಟ್ಟಿದ್ದರು. ಅದರೆ ದೇವದಾಸಿಯರ ಮೇಲ್ವರ್ಗದ ಗೌರವ ಮತ್ತು ಕುಲೀನತೆ ಹಂತಹಂತವಾಗಿ ಕೆಳಮಟ್ಟಕ್ಕೆ ಪಲ್ಲಟಗೊಳ್ಳುತ್ತ ಸಾಗುತ್ತಿತ್ತು.
ಇನ್ನು ಮೊಘಲರು ಈ ದೇವದಾಸಿ ಪದ್ದತಿಯಿಂದ ಸ್ಫೂರ್ತಿಗೊಂಡೇ ಇಸ್ಲಾಮೀಕರಿಸಿದ ತವಾಯಿಫ್ ಪರಂಪರೆಯನ್ನು ಪರ್ಯಾಯವಾಗಿ ಆರಂಭಿಸಿ ಗಜಲ್, ಕಥಕ್ ಮುಂತಾದ ಸಂಗೀತ, ನೃತ್ಯ ಪ್ರಕಾರಗಳು ಟಿಸಿಲೊಡೆಯಲು ಕಾರಣರಾದರೆನಿಸುತ್ತದೆ. ಹಾಗಾಗಿ ದೇವದಾಸಿ ಹಿಂದೂ ಪರಂಪರೆಯೆನಿಸಿದರೆ ತವಾಯಿಫ್ ಧಾರ್ಮಿಕ ಕಾರಣದ ಪರ್ಯಾಯ ದೇವದಾಸಿ ಪರಂಪರೆಯೆನಿಸುತ್ತದೆ. ಉಮ್ರಾವ್ ಜಾನ್, ಅನಾರ್ಕಲಿಯರಂತಹ ಐತಿಹಾಸಿಕ ಮಹಿಳೆಯರಲ್ಲದೆ ಬಿನೋದಿನಿ ದಾಸಿ, ಗೌಹಾರ್ ಜಾನ್, ರಸೂಲನ್ ಭಾಯ್, ರೋಷನಾರ ಬೇಗಂ ಈ ಪರಂಪರೆಯ ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದ ಪ್ರಮುಖರು.
ದೇವದಾಸಿಯರ (ತವಾಯಿಫ್ ಸೇರಿ) ಸಮಾಜಮುಖಿ ಪರಂಪರೆಯ ಕಾರ್ಯಗಳು ಐತಿಹಾಸಿಕವಾಗಷ್ಟೇ ಅಲ್ಲದೆ ದೇವದಾಸಿ ಪದ್ಧತಿಯನ್ನು ಸರ್ಕಾರ ಕೊನೆಗೊಳ್ಳಿಸುವವರೆಗೆ ಸಾಗಿಬಂದಿವೆ. ದೇವದಾಸಿ ಮನೆತನದ ಹಿನ್ನೆಲೆಯ ಎಂ. ಎಸ್. ಸುಬ್ಬುಲಕ್ಷ್ಮಿಯವರ ಸಂಗೀತ ಕ್ಷೇತ್ರದ ಕೊಡುಗೆ, ಭರತನಾಟ್ಯ ಕ್ಷೇತ್ರದ ದಿಗ್ಗಜರೆನಿಸಿದ ಬಾಲಸರಸ್ವತಿ, ಪುರಿ ಜಗನ್ನಾಥ ದೇವಾಲಯದ ಕೊನೆಯ ದೇವದಾಸಿ ಶಶಿಮಣಿ ದೇವಿ, ಮತ್ತು ಕ್ಯಾನ್ಸರ್ ಕುರಿತಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಅಡೆಯಾರ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಸ್ಥಾಪಿಸಿದ ಡಾ. ಎಸ್. ಮುತ್ತುಲಕ್ಷ್ಮೀ ರೆಡ್ಡಿ...ಹೀಗೆ ದೇವದಾಸಿಯರ ಸಮಾಜಮುಖಿ ಸೇವೆ ನದಿಯಾಗಿ, ನಾಲೆಯಾಗಿ ಸಮಾಜೋನ್ನತಿಯ ಮಹಾನ್ ಕಡಲಿಗೆ ಹರಿದುಬಂದಿದೆ.
ಅಂತಹ ಒಂದು ಸ್ಥಿತ್ಯಂತರ ಕಾಲಘಟ್ಟದ ಹದಿನಾರನೇ ಶತಮಾನದ ಓರ್ವ ಕುಲೀನ ದೇವದಾಸಿಯು ರಾಜಹತ್ಯೆಯ ಪ್ರಯತ್ನದ ಮಿಥ್ಯಾರೋಪದ ಮಲಿನತೆಗೊಳಗಾಗಿಯೂ ಆತ್ಮಾಹುತಿಗೈದು ತನ್ನ ಪಾವಿತ್ರ್ಯತೆಯನ್ನು ಎತ್ತಿ ಹಿಡಿದು ಜನೋಪಕಾರಿ ನೀರಾವರಿಯ ನಾಲೆಯ ರೂಪವಾಗಿ ಜೀವಂತವಾಗುಳಿದ ಕತೆಯೇ ಶ್ರೀ ಮಲೆಯೂರು ಗುರುಸ್ವಾಮಿಗಳ ಕೃತಿ "ಬಂಗಾರದೊಡ್ಡಿ!"
ರಣಧೀರ ಕಂಠೀರವ ಎಂದೊಡನೆ ಆ ಹೆಸರು ನನ್ನನ್ನಷ್ಟೇ ಅಲ್ಲದೆ ಓದುಗರನ್ನೆಲ್ಲಾ ಅವರ ಬಾಲ್ಯಕ್ಕೆ ಕರೆದೊಯ್ಯುತ್ತದೆ ಎಂದುಕೊಂಡಿದ್ದೇನೆ. ಅಂಗೈಯಗಲದ ಕಥಾ ಪುಸ್ತಕಗಳನ್ನು ನಮಗೆ ಶಾಲೆಯಲ್ಲಿ ಓದಲು ಕೊಡುತ್ತಿದ್ದರು. ಅಂತಹ ಪುಸ್ತಕ ಮಾಲೆಯಲ್ಲಿ ರಣಧೀರ ಕಂಠೀರವ ಕೂಡ ಒಂದು! ರಣಧೀರ ಕಂಠೀರವ ಮಹಾರಾಜರು ತಮ್ಮ ದಿನನಿತ್ಯದ ವ್ಯಾಯಾಮದ ಅಂಗವಾಗಿ ಒಂದು ಧಾರವಾಡಿ ಎಮ್ಮೆಯನ್ನು ಹೊತ್ತು ಚಾಮುಂಡಿ ಬೆಟ್ಟವನ್ನು ಹತ್ತಿ ಇಳಿಯುತ್ತಿದ್ದರೆಂಬ ಪ್ರತೀತಿ ಇತ್ತೆಂದು ಅಂದು ನಮ್ಮ ಮೇಷ್ಟ್ರೊಬ್ಬರು ತಿಳಿಸಿದ್ದರು. ಅಂತಹ ಕುಸ್ತಿಪಟುವಾಗಿದ್ದ ಆ ಮೈಸೂರು ಮಹಾರಾಜರು ವಜ್ರಮುಷ್ಠಿ ಕಾಳಗದಲ್ಲಿ ಸಿದ್ಧಹಸ್ತರಾಗಿದ್ದರು ಎಂದೂ ತಿಳಿಸಿದ್ದರು. ನನಗೆ ದಕ್ಕಿದ್ದ ಆ ಕಥಾ ಪುಸ್ತಿಕೆಯಲ್ಲಿ ರಣಧೀರ ಕಂಠೀರವರು ತಿರುಚಿನಾಪಳ್ಳಿಯ ಪೈಲ್ವಾನನನ್ನು ಕುಸ್ತಿಯಲ್ಲಿ ಸೋಲಿಸಿ ಅವನ ರುಂಡವನ್ನು ಯಾರಿಗೂ ಗೊತ್ತಾಗದ ಹಾಗೆ ಬಳ್ಳಿಕತ್ತಿಯಲ್ಲಿ ನಾಜೂಕಾಗಿ ಕತ್ತರಿಸಿದ್ದರು ಎಂಬ ಕತೆಯನ್ನು ಓದಿ ನಾನು ಸಾಕಷ್ಟು ರೋಮಾಂಚನಗೊಂಡಿದ್ದೆನಲ್ಲದೆ ನಮ್ಮ ಮನೆಯ ಬಳಿಯಿದ್ದ ಗರಡಿಯಲ್ಲಿ ಸಾಮು ತೆಗೆಯಲು ಸಹ ಹೋಗುತ್ತಿದ್ದೆ.
ಇರಲಿ, ಅಂತಹ ರಣಧೀರ ಕಂಠೀರವನ ಸಾಹಸವನ್ನಷ್ಟೇ ಅಲ್ಲದೆ ಆತನ ಪ್ರೇಮದ ಆಂತರ್ಯ, ಮಾನವೀಯ ಅಂತಃಕರಣದ ಮತ್ತೊಂದು ರೂಪವನ್ನು ತೆರೆದಿಡುವುದರೊಂದಿಗೆ ರಾಜ-ರಾಜಾಶ್ರಯ-ರಾಜಕಾರಣ-ಪಿತೂರಿ-ಪ್ರೇಮ-ವೈರಾಗ್ಯ-ತ್ಯಾಗಗಳನ್ನು ಸಮ್ಮಿಳಿತಗೊಳಿಸುತ್ತ ಹದಿನಾರನೇ ಶತಮಾನದ ಒಂದು ದೃಶ್ಯಕಾವ್ಯವನ್ನು "ಬಂಗಾರದೊಡ್ಡಿ" ಕೃತಿಯು ಅನಾವರಣಗೊಳ್ಳುತ್ತದೆ. ಕೃತಿಯ ನಾಯಕಿ ದೊಡ್ಡಮ್ಮಳಾದರೂ ರಣಧೀರ ಕಂಠೀರವನೆಂಬ ವಿಶಾಲ ವೃಕ್ಷಕ್ಕೆ ಹಬ್ಬಿದ ತರುಲತೆ ಆಕೆ! ಹಾಗಾಗಿ ಈ ಕೃತಿಯಲ್ಲಿ ರಣಧೀರ ಕಂಠೀರವನ ಪಾತ್ರ ಸಹ ಅಷ್ಟೇ ಪ್ರಮುಖ ಪಾತ್ರವಾಗಿದೆ.
ಶ್ರೀ ಮಲೆಯೂರು ಗುರುಸ್ವಾಮಿಗಳು ವಿಶೇಷವಾಗಿ ಮೈಸೂರಿನ ಮಣ್ಣಿನಲ್ಲಿ ಕಳೆದುಹೋಗಿರುವ ಅನರ್ಘ್ಯ ರತ್ನಗಳನ್ನು ಹೆಕ್ಕಿ ಅವರುಗಳ ಜೀವನಗಾಥೆಯನ್ನು ಕಟ್ಟಿಕೊಡುವಲ್ಲಿ ಈಗಾಗಲೇ ಸಿದ್ಧಹಸ್ತರೆನಿಸಿದ್ದಾರೆ. ಈ ನಿಟ್ಟಿನಲ್ಲಿ ದೇವದಾಸಿ ಮಹಿಳೆ ಬೆಂಗಳೂರು ನಾಗರತ್ನಮ್ಮನವರ ಜೀವನಗಾಥೆಯ "ಕಪಿಲೆ ಹರಿದಳು ಕಡಲಿಗೆ" ಮಲೆಯೂರರ ಒಂದು ಮಹತ್ವದ ಕೃತಿ. ಅದೇ ಸಾಲಿಗೆ ಈಗ ಸೇರ್ಪಡೆಯಾಗುತ್ತಿರುವುದು "ಬಂಗಾರದೊಡ್ಡಿ!" ತಿರುಚಿನಾಪಳ್ಳಿಯ ಓರ್ವ ದೇವದಾಸಿಯ ಮಗಳಾದ ಮನೋರಮೆ ರಾಜಕಾರಣದ ದಾಳಕ್ಕೆ ಸಿಲುಕಿ ದೊಡ್ಡಮ್ಮನಾಗಿ ರಾಜ ರಣಧೀರ ಕಂಠೀರವನ ಬಂಗಾರದವಳಾಗಿ ಕಡೆಗೆ ಮೈಸೂರಿಗರ "ಬಂಗಾರದೊಡ್ಡಿ" ನಾಲೆಯಾಗುವ ನಡುವಿನ ಕತೆ ದೇವದಾಸಿಯರ ಜೀವನವನ್ನು ಬಹು ಆಪ್ತವಾಗಿ ತೆರೆದಿಡುತ್ತದೆ.
ತೆರಕಣಾಂಬಿಯ ಕುಸ್ತಿ ಅಂಕಣದೊಂದಿಗೆ ಮಲೆಯೂರು ಗುರುಸ್ವಾಮಿಗಳು ಓದುಗರನ್ನು ಹದಿನಾರನೇ ಶತಮಾನಕ್ಕೆ ಮಂತ್ರಸದೃಶರಾಗಿ ಕರೆದೊಯ್ದುಬಿಡುತ್ತಾರೆ. ಕುಸ್ತಿಯ ಪಟ್ಟುಗಳಲ್ಲದೆ ಅಂದಿನ ಜನಜೀವನ, ಜೀವನಶೈಲಿಗೆ ಓದುಗರನ್ನೊಳಗಾಗಿಸುತ್ತ ಬಂಗಾರದೊಡ್ಡಿಯ ಕಥಾನಕವನ್ನು ಓದುಗರೂ ಒಂದು ಪಾತ್ರವಾಗಿ ನೋಡುತ್ತಿರುವಂತೆ ಭಾಸವಾಗುವಂತಹ ಕಥಾಚಿತ್ರವನ್ನು ಬಿಡಿಸುವಲ್ಲಿ ಗುರುಸ್ವಾಮಿಯವರ ಕೌಶಲ್ಯ ಎದ್ದು ಕಾಣುತ್ತದೆ. ಉದಾಹರಣೆಗೆ ರಾಣಿಯರ ಶ್ರೇಣಿಗಳನ್ನು ಮಲೆಯೂರರು ಹೀಗೆ ವರ್ಣಿಸುತ್ತಾರೆ, "ರಾಜನಾದವನು ಶಾಸ್ತ್ರಗಳು ಸಮ್ಮತಿಸಿರುವಂತೆ ಪಟ್ಟದ ರಾಣಿಯನ್ನಾಗಿಸಲು ಕ್ಷತ್ರಿಯ ಕನ್ಯೆಯನ್ನು ಮಾತ್ರ ವಿವಾಹವಾಗಬೇಕು. ಉಳಿದವರು ಧರ್ಮಪತ್ನಿಯೆನಿಸದೆ ಕೇವಲ ಪತ್ನಿಯರು ಅಷ್ಟೇ." ಅದೇ ರೀತಿ ದೇವದಾಸಿ ವ್ಯವಸ್ಥೆಯ ಜಾತ್ಯತೀತ ಸಮಾಜವನ್ನು ಚಿತ್ರಿಸುತ್ತ ಮಲೆಯೂರರು ಹೀಗೆ ಹೇಳುತ್ತಾರೆ, "ದೇವದಾಸಿಯರಾಗಲು ಧರ್ಮಜಾತಿಗಳೇನೂ ಅಡ್ಡಿ ಬರುತ್ತಿರಲಿಲ್ಲ. ಕಲೆ ಮತ್ತು ದೇಹ ಸೌಂದರ್ಯವಷ್ಟೇ ಮುಖ್ಯವಾಗಿರುತ್ತಿದ್ದವು. ಬ್ರಾಹ್ಮಣ ಕನ್ಯೆಯರು ದೇವದಾಸಿಯಾದರೂ ಅವರ ಪ್ರಣಯ ವ್ಯವಹಾರ ಮಾತ್ರ ಬ್ರಾಹ್ಮಣರೊಡನೆಯೇ ಇರಬೇಕೇ ಹೊರತು ಬೇರೆಯವರೊಡನಲ್ಲ ಎನ್ನುವ ನಿಯಮವೂ ಇತ್ತು"
ಹೀಗೆ ಕೃತಿಯಾದ್ಯಂತ ಅಂದಿನ ಕಾಲಘಟ್ಟದ ಸಮಾಜ, ಜಾತಿ ಪದ್ಧತಿ, ನ್ಯೂನತೆ, ವ್ಯವಸ್ಥೆಗಳನ್ನು ಕಟ್ಟಿಕೊಡುವುದಲ್ಲದೆ ಶ್ರೀರಂಗಪಟ್ಟಣದ ಬಡಾವಣೆಗಳನ್ನು, ಬೀದಿಗಳನ್ನು, ದೇವಸ್ಥಾನಗಳನ್ನು, ಮಠಗಳನ್ನು, ಉತ್ಸವಗಳನ್ನು, ಕಟ್ಟಡಗಳನ್ನು, ನಡಾವಳಿಗಳನ್ನು ಸಾಂದರ್ಭಿಕವಾಗಿ ವರ್ಣಿಸುತ್ತ ಓದುಗನನ್ನು ಹದಿನಾರನೇ ಶತಮಾನದ ಶ್ರೀರಂಗಪಟ್ಟಣಕ್ಕೂ ಕರೆದುಕೊಂಡು ಹೋಗುವುದು ಓದನ್ನು ಮತ್ತಷ್ಟು ಭಾವಾವೇಶಕ್ಕೊಳಗಾಗಿಸುತ್ತದೆ. ಈ ಅನುಭೂತಿಯನ್ನು ಮಲೆಯೂರರ "ಕಪಿಲೆ ಹರಿದಳು ಕಡಲಿಗೆ" ಕೃತಿಯಲ್ಲೂ ಕಾಣಬಹುದು.
ಕನ್ನಡ ಸಾಹಿತ್ಯಲೋಕದಲ್ಲಿ ಇತಿಹಾಸದ ಸಾಕಷ್ಟು unsung hero ಗಳ ಕೃತಿಗಳಿವೆ. ಆದರೆ ಇತಿಹಾಸದ ಪಳೆಯುಳಿಕೆಗಳಲ್ಲಿ ದೇದೀಪ್ತಮಾನವಾಗಿದ್ದರೂ ತಮ್ಮ ದೇವದಾಸಿ ಹಿನ್ನೆಲೆಯಿಂದ ಮುನ್ನೆಲೆಗೆ ಬಾರದ ಇಂತಹ unsung heroineಗಳ ಬಗ್ಗೆ ಕೃತಿಗಳು ಬಲು ಅಪರೂಪ. ಕೇವಲ ಮೈಸೂರು ಸೀಮೆಯಲ್ಲಿ ಇಂತಹ ಸಾಕಷ್ಟು ಇತಿಹಾಸ ಕಳೆದುಹೋಗಿರುವಾಗ ಕರ್ನಾಟಕದಾದ್ಯಂತ ಇನ್ನೆಷ್ಟು ಐತಿಹಾಸಿಕ ಮಹಿಳಾಮಣಿಗಳು ಮಣ್ಣಿನಲ್ಲಿ ಹೂತು ಹೋಗಿರುವರೋ! ಅದೃಷ್ಟವಶಾತ್ ಬೆಂಗಳೂರು ನಾಗರತ್ನಮ್ಮ ಮತ್ತು ದೊಡ್ಡಮ್ಮರನ್ನು ಮಲೆಯೂರು ಗುರುಸ್ವಾಮಿಗಳು ನಮಗೆ ಹುಡುಕಿಕೊಟ್ಟಿದ್ದಾರೆ.
ರಣಧೀರ ಕಂಠೀರವ ನರಸರಾಜ ಒಡೆಯರ್ ಮಹಾರಾಜರ ಬಂಗಾರದವಳಾದ ದೊಡ್ಡಮ್ಮನ ಕಲೆ, ಪಾಂಡಿತ್ಯ, ಲೋಕಜ್ಞಾನ, ಆಧ್ಯಾತ್ಮಿಕತೆ, ವೈರಾಗ್ಯಗಳು ದೇವದಾಸಿ ಸಂಸ್ಕೃತಿಯ ಬೌದ್ಧಿಕ ಶ್ರೀಮಂತಿಕೆಯ ಬಗ್ಗೆ ವಿಶೇಷ ಹೊಳಹನ್ನು ನೀಡುವಲ್ಲಿ ಈ ಕೃತಿ ಮಹತ್ವದ್ದಾಗಿದೆ. ಈ ಕೃತಿಯನ್ನು ಓದುತ್ತ ಓದುತ್ತ ಕ್ರಿ.ಪೂ. ಐದನೇ ಶತಮಾನದ ಅಮ್ರಪಾಲಿ ಹದಿನಾರನೇ ಶತಮಾನದ ದೊಡ್ಡಮ್ಮಳಾಗಿ ಜನ್ಮ ತಳೆದಂತೆ ಭಾಸವಾಗುತ್ತದೆ. ವೈಶಾಲಿ ಪಟ್ಟಣದ ಅಮ್ರಪಾಲಿ ತಮ್ಮ ವೈರಿಯಾದ ಮಗಧ ಸಾಮ್ರಾಜ್ಯದ ಬಿಂಬಿಸಾರನನ್ನು ಪ್ರೇಮಿಸುವಂತೆ ಇಲ್ಲಿ ತಿರುಚಿನಾಪಳ್ಳಿಯ ಮನೋರಮೆ ದೊಡ್ಡಮ್ಮಳಾಗಿ ಮೈಸೂರು ಸಿಂಹಾಸನಾಧೀಶ್ವರ ರಣಧೀರ ಕಂಠೀರವನನ್ನು ಪ್ರೇಮಿಸುತ್ತಾಳೆ. ಅಮ್ರಪಾಲಿಯಂತೆಯೇ ದೊಡ್ಡಮ್ಮ ಸಹ ನೃತ್ಯ, ಗಾಯನವಷ್ಟೇ ಅಲ್ಲದೆ ವೈರಾಗ್ಯದ ಅನುಭೂತಿಯನ್ನೂ ಪಡೆದವಳಾಗಿರುತ್ತಾಳೆ. ಅಲ್ಲಿ ಅಮ್ರಪಾಲಿ ನಿರ್ವಾಣವನ್ನು ಹೊಂದಿ ಅಮರತ್ವ ಪಡೆದರೆ, ಇಲ್ಲಿ ದೊಡ್ಡಮ್ಮ ಆತ್ಮಾಹುತಿಗೈದು ಜನೋಪಯೋಗಿ ನೀರಾವರಿ ನಾಲೆಯಾಗಿ ಚಿರಾಯುವಾಗುತ್ತಾಳೆ. ಇದು ಶತಶತಮಾನಗಳ ಅಂತರದಲ್ಲೂ ಸಾಮ್ಯತೆ ಹೊಂದಿದ್ದ ಈರ್ವರು ಅಪೂರ್ವ ದೇವದಾಸಿ ಮಹಿಳೆಯರ ಜೀವನ ಚಿತ್ರಣವಾಗಿರದೇ ಇಂತಹ ಬೆಳಕಿಗೆ ಬಾರದ ಅನೇಕ ದೇವದಾಸಿ ಮಹಿಳೆಯರ ಕತೆಯಾಗಿದೆ.
ಏಕೆಂದರೆ ಅಂತಹ ಗತ ದೇವದಾಸಿಯರ ಇತಿಹಾಸದ ಪರಿಚಯವಿರದ ಇಂದಿನ ಸಮಾಜದಲ್ಲಿ ದೇವದಾಸಿಯರ ಬಗ್ಗೆ ಪೂರ್ವಾಗ್ರಹಗಳು ತುಂಬಿಕೊಂಡಿವೆ. ಇದಕ್ಕೆ ಕಾರಣ ಬ್ರಿಟಿಷರ ಆಡಳಿತದಲ್ಲಿ ದೇವದಾಸಿಯರು ಸಂಪೂರ್ಣ ಅಸ್ತಿತ್ವವನ್ನು ಕಳೆದುಕೊಂಡು ಪೂರ್ಣ ಪ್ರಮಾಣದ ವೇಶ್ಯೆಯರು ಎನ್ನಿಸಿಕೊಂಡುಬಿಟ್ಟಿದ್ದರು. ಕಡೆಗೆ ಈ ಸಾಂಸ್ಕೃತಿಕ ಪರಂಪರೆಯು ಜನಪದದ ಜೋಗತಿಯರಿಗಷ್ಟೇ ಸೀಮಿತವೆನಿಸಿ ಬೇರೆಯದೇ ಆಯಾಮವನ್ನು ಪಡೆದುಕೊಂಡಿತು. ಸ್ವತಂತ್ರ್ಯ ಭಾರತದ ಇಪ್ಪತ್ತನೇ ಶತಮಾನದ ಅಂಚಿನಿಂದ ಸಾಕಷ್ಟು ವಿಶ್ವವಿದ್ಯಾಲಯಗಳ ಮಹಿಳಾ ಅಧ್ಯಯನ ಸಂಸ್ಥೆಗಳು ಈ ಕುರಿತು ಅಧ್ಯಯನಗಳನ್ನು ನಡೆಸಿ ಸಂಶೋಧನೆಗಳ ಮೂಲಕ ದೇವದಾಸಿಯರ ಪರಂಪರೆಗೆ ಮತ್ತೆ ಘನತೆಯನ್ನು ತಂದುಕೊಡುವ ಪ್ರಯತ್ನವನ್ನು ಮಾಡುತ್ತಿವೆ, ನಿಜ. ಆದರೆ ಈ ಸಂಶೋಧನೆಗಳು ಸಹ ಜೋಗತಿ, ಜೋಗಪ್ಪಗಳನ್ನೇ ದೇವದಾಸಿಯರೆಂದು ಬಗೆದು ಸಂಶೋಧನೆಗಳು ಸೀಮಿತಗೊಳ್ಳುತ್ತಿರುವುದಲ್ಲದೆ ದೇವದಾಸಿ ಸಂಸ್ಕೃತಿಯ ವ್ಯಾಖ್ಯಾನವನ್ನೇ ಬದಲಾಯಿಸುತ್ತಿವೆ. ಅಬ್ಬಬ್ಬಾ ಎಂದರೆ ಅಂಗಭೋಗ ರಂಗಭೋಗದ ತನಕ ವ್ಯಾಖ್ಯಾನಿಸುತ್ತವೆ.
ಯಾವ ಸಂಶೋಧನೆಗಳೂ ಕ್ರಿ. ಪೂ. ಐದನೇ ಶತಮಾನದ "ನಗರ ವಧು" ಪರಿಕಲ್ಪನೆಯೇ ಇಂದಿನ "ಮಿಸ್ ಬೆಂಗಳೂರು" "ಮಿಸ್ ಮೈಸೂರು", "ಮಿಸ್ ಇಂಡಿಯಾ", "ಮಿಸ್ ವರ್ಲ್ಡ್", "ಮಿಸ್ ಯೂನಿವರ್ಸ್" ಎಂದು ಸಮೀಕರಿಸುವುದಿಲ್ಲ. ಆರಂಗೇಟ್ರಮ್ ಅನ್ನು ದೇವದಾಸಿ ದೀಕ್ಷೆಯೆಂದು ಗುರುತಿವುದಿಲ್ಲ. ಇಂದಿನ ಲಲಿತಕಲೆ ಸ್ಪರ್ಧೆಗಳೇ ಅಂದಿನ ದೇವದಾಸಿ ಪರಂಪರೆ ಎಂಬ ವ್ಯಾಖ್ಯಾನವನ್ನು ನೀಡುವುದಿಲ್ಲ. ವರ್ತಮಾನದ ಸಿನೆಮಾ ನಟನೆ, ಗಗನಸಖಿ, ನೃತ್ಯ, ಇತ್ಯಾದಿ ಸೇವೆ ಮತ್ತು ಮನರಂಜನೆ ವೃತ್ತಿಗಳು ದೇವದಾಸಿ ಪರಂಪರೆಯ ರೂಪಾಂತರಗಳು ಎಂದು ವಿಶ್ಲೇಷಿಸುವುದಿಲ್ಲ. ಏಕೆಂದರೆ ದೇವದಾಸಿಯರು ಎಂದರೆ ಜೋಗಪ್ಪ ಜೋಗತಿಯರು ಎಂಬ ಕುದುರೆ ಕಣ್ತಡೆ ಪಟ್ಟಿಗಳನ್ನು ಸಂಶೋಧನೆಗಳು ಕಟ್ಟಿಕೊಂಡುಬಿಟ್ಟಿವೆ. ಸಮಗ್ರವಾಗಿ ವಿಷಯಗಳನ್ನು ಪರಿಗಣಿಸಿ ವಿಶ್ಲೇಷಿಸಿ ಅಧ್ಯಯನಗಳನ್ನು ಕೈಗೊಳ್ಳುವ ಪರಿಯನ್ನು ನಮ್ಮ ವಿಶ್ವವಿದ್ಯಾಲಯಗಳು ಯಾವಾಗ ಆರಂಭಿಸುವವೋ! ಅಂತಹ ಸಂಶೋಧನೆಗಳ ಅಗತ್ಯವನ್ನು ಮಲೆಯೂರರ ಕೃತಿ ಪರೋಕ್ಷವಾಗಿ ಬಯಸುತ್ತದೆ.
ಅದಲ್ಲದೆ, ಸಾಮಾಜಿಕವಾಗಿ ಸಂಶೋಧನೆಗಳು ಅಷ್ಟಾಗಿ ಬೆಳಕಿಗೆ ಬಾರದೆ ದೇವದಾಸಿಯ ಪರಂಪರೆಯ ವ್ಯಾಖ್ಯಾನದ ಚರ್ಚೆಗೆ ಅವಕಾಶಗಳೂ ಇಲ್ಲದಂತಾಗಿವೆ. ಇದು ವಿಶ್ವವಿದ್ಯಾಲಯದ ಸಂಶೋಧನೆಗಳಿಗಿರುವ ಮಿತಿ. ಅದಕ್ಕೆ ಪ್ರಮುಖವಾಗಿ ಕಥಾರೂಪಗಳಲ್ಲದ, ಸೃಜನೇತರ ಶೈಲಿಯ ಸಂಶೋಧನೆಯ ಚೌಕಟ್ಟಿನ ಪದಕೋಶಗಳ ಪರಿಭಾಷೆ ಸಾಮಾಜಿಕವಾಗಿ ಇನ್ನೂ ಆಕರ್ಷಕ ಎನಿಸಿಲ್ಲದಿರುವುದೂ ಒಂದು ಕಾರಣ.
ಈ ನಿಟ್ಟಿನಲ್ಲಿ ಐತಿಹಾಸಿಕ ಆಕರಗಳನ್ನು ಸಮರ್ಪಕವಾಗಿ ಕಥನ ರೂಪವಾಗಿಸಿದಾಗ ಅಂತಹ ಕೃತಿಗಳು ಇತಿಹಾಸದ ಹೊಳಹನ್ನು ಮೂಡಿಸುವಲ್ಲಿ ಮತ್ತು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತವೆ. ಆದರೆ ಅಂತಹ ಪ್ರಯತ್ನಗಳಲ್ಲಿ ಸಾಕಷ್ಟು ಸಾಹಿತಿಗಳು "ತೀವ್ರ ಸೃಜನಶೀಲ"ರಾಗಿ ದಾರಿ ತಪ್ಪಿಸಿ ತಮ್ಮದೇ ಆದ ಕಪೋಲಕಲ್ಪಿತ ಇತಿಹಾಸವನ್ನು ಸೃಷ್ಟಿಸಿದ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಈ "ತೀವ್ರ ಸೃಜನಶೀಲ" ಅಯೋಮಯ ಸೃಷ್ಟಿಯಲ್ಲಿ ಇತಿಹಾಸದ ನಿಕೃಷ್ಟರು ಗರಿಷ್ಠರಾಗಿಯೂ, ಗರಿಷ್ಠರು ನಿಕೃಷ್ಠರಾಗಿಯೂ ಪಲ್ಲಟಗೊಂಡಿದ್ದಾರೆ. ಹಾಗಾಗಿ ಇಂತಹ ಪ್ರಯತ್ನಕ್ಕೆ ಸಾಕಷ್ಟು ಅಧ್ಯಯನ ಮತ್ತು ಖಚಿತತೆಯನ್ನಿಟ್ಟುಕೊಂಡು ಲೇಖಕರು ಸ್ಥಿತಪ್ರಜ್ಞರಾಗಿ ಐತಿಹಾಸಿಕ ಕೃತಿಗಳ ರಚನೆಯಲ್ಲಿ ತೊಡಗಬೇಕು. ಅಂತಹ ಅಧ್ಯಯನ, ಖಚಿತತೆ, ಮತ್ತು ಎಲ್ಲಿಯೂ ಭಾವಾವೇಷಕ್ಕೊಳಗಾಗದ ಸ್ಥಿತಪ್ರಜ್ಞತೆಯನ್ನು ಮಲೆಯೂರು ಗುರುಸ್ವಾಮಿಗಳು ಈ ಕೃತಿಯಾದ್ಯಂತ ತೋರಿದ್ದಾರೆ. ಆತ್ಮಾಹುತಿ ಮಾಡಿಕೊಳ್ಳುವ ಮುನ್ನ ದೊಡ್ಡಮ್ಮನು ಬರೆದಿಟ್ಟ ಮರಣಪತ್ರವು ಲೇಖಕರ ಸ್ಥಿತಪ್ರಜ್ಞ ಸೃಜನಶೀಲತೆಗೆ ಕೊಟ್ಟ ಪ್ರಮಾಣಪತ್ರದಂತಿದೆ! ಸಂಶೋಧನಾ ಅಧ್ಯಯನದ ನೆಲೆಯಿಂದಲೂ ಶ್ರೀಯುತರ "ಬಂಗಾರದೊಡ್ಡಿ" ಮತ್ತು "ಕಪಿಲೆ ಹರಿದಳು ಕಡಲಿಗೆ" ಕೃತಿಗಳು ಮಹತ್ವದ್ದೆನಿಸುತ್ತವೆ.
ಒಟ್ಟಾರೆ ಮಲೆಯೂರು ಗುರುಸ್ವಾಮಿಗಳ ಈ ಕೃತಿ ಓದುಗರಲ್ಲಿ ದೇವದಾಸಿಯರ ಬಗೆಗಿನ ಎಲ್ಲಾ ಪೂರ್ವಾಗ್ರಹಗಳನ್ನು ಕಳೆದು ಮತ್ತೊಮ್ಮೆ ಘನತೆ, ಗೌರವಾದರಗಳನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಕೃತಿಯ ಸಾರ್ಥಕತೆಗೆ ಇಷ್ಟು ಸಾಕಲ್ಲವೇ!
ರವಿ ಹಂಜ್,
ಶಿಕಾಗೋ, ಯು. ಎಸ್.ಎ.
ravihanj@gmail.com
No comments:
Post a Comment