ಹಿಂದಿ ದಿವಸದ ಆಚೀಚೆ!

 

ಘನ ಭಾರತ ಸಂವಿಧಾನವು ತನ್ನ ಆರ್ಟಿಕಲ್ 343 (1)ರಲ್ಲಿ "ಕೇಂದ್ರ ಸರ್ಕಾರದ ಅಧಿಕೃತ ಭಾಷೆ ದೇವನಾಗರಿ ಲಿಪಿಯ ಹಿಂದಿ. ಇಂಗ್ಲಿಷ್ ಭಾಷೆಯ ಬಳಕೆಯನ್ನು ಸಂವಿಧಾನವು ಜಾರಿಗೆ ಬಂದ ಹದಿನೈದು ವರ್ಷಗಳಲ್ಲಿ ಅಂದರೆ ಜನವರಿ 26, 1965ಕ್ಕೆ ನಿಲ್ಲಿಸಬೇಕು. ಅಥವಾ ಸಂಸತ್ತಿನಲ್ಲಿ ಈ ಕುರಿತು ಚರ್ಚಿಸಿ ಇಂಗ್ಲಿಷ್ ಕುರಿತು ನಿರ್ಧರಿಸಬೇಕು" ಎಂದಿದೆ. ಸಂವಿಧಾನ ಕೊಟ್ಟ 1965ರ ಗಡುವು ಬಂದಾಗ ಇಂಗ್ಲಿಷ್ ನಿಲ್ಲಿಸಲು ಭಾರೀ ವಿರೋಧ ವ್ಯಕ್ತವಾಗಿ ಇಂಗ್ಲಿಷ್ ಕೇಂದ್ರ ಸರ್ಕಾರದ ಜಂಟಿ ಅಧಿಕೃತ ಆಡಳಿತ ಭಾಷೆಯಾಗಿ ಮುಂದುವರೆಯಿತು.


ಹಿಂದಿ ಎಷ್ಟೇ ಸ್ವದೇಶಿ ಎನಿಸಿದರೂ ಅದಕ್ಕಿಂತಲೂ ಹೆಚ್ಚಿನ ಇತಿಹಾಸ, ಪರಂಪರೆ, ಸಮರ್ಥವಾಗಿರುವ ಭಾಷೆಗಳು ಭಾರತದಲ್ಲಿವೆ. ದುರದೃಷ್ಟವಶಾತ್ ಹಿಂದಿ ಭಾಷೆಯು ವಿದೇಶಿ ಇಂಗ್ಲಿಷಿಗೆ ಪರ್ಯಾಯವಾದ ಪರಮ ಸ್ವದೇಶಿ ಭಾಷೆಯೆನಿಸಿಬಿಟ್ಟಿದೆ! ಇದಕ್ಕೆ ಮೂಲ ಕಾರಣ ಸಂವಿಧಾನಾತ್ಮಕವಾಗಿ ಹಿಂದಿ ಕೇಂದ್ರ ಸರ್ಕಾರದ ಅಧಿಕೃತ ಆಡಳಿತ ಭಾಷೆಯಾಗಿರುವುದು. 21 ಹಿಂದಿಯೇತರ ಭಾಷೆಗಳು ಭಾರತದ ಅಧಿಕೃತ ಪ್ರಾದೇಶಿಕ ಭಾಷೆಗಳಿದ್ದರೂ ಕೇಂದ್ರ ಸರ್ಕಾರದ ಆಡಳಿತ ಭಾಷೆಯಾಗಿ ಹಿಂದಿ ಮತ್ತು ಇಂಗ್ಲಿಷ್ ಇವೆ. ಕೇಂದ್ರ ಸರ್ಕಾರದ ಈ ದ್ವಿಭಾಷಾ ಆಡಳಿತದ ದ್ವಂದ್ವವನ್ನು ನಿರಾಕರಿಸಿ ಇಂಗ್ಲಿಷ್ ಭಾಷೆಯನ್ನು ಮಾತ್ರ ಆಡಳಿತ ಭಾಷೆಯಾಗಿಸಿದರೆ ಹಿಂದಿಯನ್ನು ಸಮರ್ಪಕವಾಗಿ ಪ್ರಾದೇಶಿಕರಿಸಬಹುದು. ಆದರೆ ಕೇಂದ್ರ ಸರ್ಕಾರ ಹಿಂದಿಯನ್ನು ಹಿಂದಿ ದಿವಸ, ಹಿಂದಿ ಉತ್ಸವ ಮುಂತಾದ ಅಭಿಯಾನಗಳನ್ನು ಹಮ್ಮಿಕೊಂಡು ಹಿಂದಿ ಭಾಷೆಯನ್ನು ಉತ್ತೇಜಿಸಬೇಕೆಂಬುದು ಸಹ ಸಾಂವಿಧಾನಿಕ ಅಂಶ. ಹೀಗೆ ಇಂದಿನ ಅನೇಕ ಹೋರಾಟಗಳಿಗೆ ಕಾರಣವಾದಂತಹ ಅನೇಕ ವಿಷಯಗಳು ಸಂವಿಧಾನದಲ್ಲಿ ಇವೆ. ಭಾವನಾತ್ಮಕವಾಗಿ ಸಂವಿಧಾನವನ್ನು ಪೂಜಿಸುವುದಕ್ಕಿಂತ ಅದನ್ನು ಸಮಗ್ರವಾಗಿ ಪರಿಷ್ಕರಿಸುವ ಅಗತ್ಯವನ್ನು ನಾವೆಲ್ಲರೂ ಮನಗಾಣಬೇಕು.


ಇನ್ನು ಭಾರತವನ್ನು ಪ್ರಮುಖವಾಗಿ ಒಗ್ಗೂಡಿಸಿದ ಬ್ರಿಟಿಷರು ಮತ್ತು ಇಂಗ್ಲಿಷ್ ಎಷ್ಟೇ ವಿದೇಶಿ ಎನಿಸಿದರೂ ಅವು ನಮ್ಮ ಪರಂಪರೆ ಎಂಬುದನ್ನು ಮರೆಯಬಾರದು. ಹಾಗಾಗಿ ಇಂಗ್ಲಿಷ್ ಅನ್ನು ನಮ್ಮ ಕೇಂದ್ರ ಸರ್ಕಾರದ ಏಕೈಕ ಆಡಳಿತ ಭಾಷೆಯನ್ನಾಗಿಸಿದರೆ ಹಿಂದಿ ತಾನೇ ತಾನಾಗಿ ಒಂದು ಪ್ರಾದೇಶಿಕತೆಗೆ ಸೀಮಿತಗೊಳ್ಳುತ್ತದೆ. ಹಿಂದಿಯೇತರರು ಸಾಂವಿಧಾನಿಕವಾಗಿ ಇಂಗ್ಲಿಷ್ ಅನ್ನು ಕೇಂದ್ರದ ಏಕೈಕ ಭಾಷೆಯೆಂದು ತಿದ್ದಲು ಹೋರಾಟ ಮಾಡಿ ಸಮಸ್ಯೆಯ ಮೂಲೋಚ್ಚಾಟನೆ ಮಾಡದಿದ್ದರೆ ಉಳಿದೆಲ್ಲಾ ಹೋರಾಟಗಳು ವರ್ಷಕ್ಕೊಮ್ಮೆ ಮಾಡುವ ಆಚರಣೆಗಳು ಮಾತ್ರ!


ತುರ್ತಾಗಿ ಮಾಡಬೇಕಾದ್ದು ಏನೆಂದರೆ ಹಿಂದಿಯೇತರ ಸಂಸದರು ಸಂಸತ್ತಿನಲ್ಲಿ ಹಿಂದಿಯಲ್ಲಿ ಯಾರು ಪ್ರಶ್ನೆ ಕೇಳಿದರೂ ಉತ್ತರಿಸಿದರೂ ಅದನ್ನು ಇಂಗ್ಲಿಷಿಗೆ ಅನುವಾದಿಸುವ ದುಭಾಷಿಗಳು ಇರಬೇಕು. ಹಾಗೆಯೇ ಭಾರತದ ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಅದನ್ನು ಇಂಗ್ಲಿಷಿಗೆ ದುಭಾಷಿಸುವ ವ್ಯವಸ್ಥೆ ಬೇಕೆಂದು ಹಠ ಹಿಡಿದು, ಹಿಂದಿ ಪ್ರೋತ್ಸಾಹದ ಸಂವಿಧಾನದ ಪರಿಚ್ಛೇದಗಳನ್ನು ಛೇದಿಸುವ ಕೆಲಸ ಮಾಡಬೇಕು. ಅದನ್ನು ಮಾಡದ ಹೊರತು ಉಳಿದದ್ದೆಲ್ಲವೂ ವ್ಯರ್ಥ. ಬನ್ನಿ, ಸಮೋಸ ತಿಂದು, ಬೇಲ್ ಪುರಿ ಮೇದು ಲಸ್ಸಿ ಕುಡಿದು ಇಸ್ಸಿ ಮಾಡೋಣ.

No comments: