ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ "ಆ" ತಾವರೆಕನ್ನಿಗರ ಪಕ್ಷದವರ ಕೊಡುಗೆ ಏನು ಎಂದು ಕೇಳುವ ಸ್ವಾತಂತ್ರ್ಯ ಹೋರಾಟದ "ಈ" ಕೈಕೆಲಸದ ಪಕ್ಷಿಗರೇ ಕೇಳಿ:
ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಚಳುವಳಿ ಎಂದು ಖ್ಯಾತವಾಗಿರುವ "ಸಿಪಾಯಿ ದಂಗೆ"ಯ ಅಜ್ಞಾತ ಕಾರಣೀಪುರುಷನೇ "ಆ" ತಾವರೆಕನ್ನಿಗರ ಪಕ್ಷದ ಅಗೋಚರ ಸಂಸ್ಥಾಪಕ!
ಹೀಗೆಂದರೆ ನಿಮಗೆ ಆಶ್ಚರ್ಯವೇ! ಕೇವಲ ಬುದ್ದಿಜೀವಿಗಳ ಪಡೆಯನ್ನು ನಿಮ್ಮೊಟ್ಟಿಗೆ ಇಟ್ಟುಕೊಂಡರೆ ಏನು ಫಲ, ಮುಂದೆ ಓದಿ.
ಕ್ರಿ.ಶ. 1857ರ ಆರಂಭದ ಅಂದು ಹೊಸ ಮಾದರಿಯ ಎನ್ಫೀಲ್ಡ್ ತುಪಾಕಿಗಳ ತೋಟಾಗಳಿಗೆ ಗ್ರೀಸ್ (ಪ್ರಾಣಿಜನ್ಯ ಕೊಬ್ಬು) ಸವರುವುದು ಆಧುನಿಕ ತಂತ್ರಜ್ಞಾನವಾಗಿತ್ತು. ಅಂದು ಗ್ರೀಸನ್ನು ಹಂದಿ ಮತ್ತು ದನದ ಕೊಬ್ಬನ್ನು ಕಸಾಯಿಖಾನೆಗಳಿಂದ ಒಟ್ಟಾಗಿ ಶೇಖರಿಸಿಯೇ ತಯಾರಿಸುತ್ತಿದ್ದರು. ಅದನ್ನು ಹಂದಿಯದು ಬೇರೆ, ದನದ್ದು ಬೇರೆ ಎಂಬ ವರ್ಗೀಕರಣ ಇರುತ್ತಿರಲಿಲ್ಲ.ಎರಡೂ ಕಲಸಿಕೊಂಡಿರುತ್ತಿತ್ತು. ಆದರೆ ಕೆಲವು ಕುಲೀನ ಅಡುಗೆಗಳಿಗೆ ಹೆಚ್ಚಿನ ಬೆಲೆ ತೆತ್ತು ಬೇರೆ ಬೇರೆ ಕೊಬ್ಬನ್ನು ಬಳಸುತ್ತಿದ್ದರು. ಅಮೆರಿಕಾದ ಖ್ಯಾತ ಮ್ಯಾಕ್ಡೋನಾಲ್ಡ್ ಸಹ ಇಪ್ಪತ್ತೊಂದನೇ ಶತಮಾನದ ಆರಂಭದವರೆಗೆ ತನ್ನ ಫ್ರೆಂಚ್ ಫ್ರೈಸ್ ಕರಿಯಲು ಈ ಸಮ್ಮಿಶ್ರ ಪ್ರಾಣಿಜನ್ಯ ಕೊಬ್ಬನ್ನೇ ಬಳಸುತ್ತಿತ್ತು. ಇರಲಿ, ಅಂದು ಇಂಗ್ಲೆಂಡಿನಿಂದ ಇದನ್ನು ತರಿಸಿಕೊಳ್ಳುವುದು ವೆಚ್ಚದಾಯಕ ಎಂದು ಬ್ರಿಟಿಷರು ಕಲ್ಕತ್ತಾದ ಗಂಗಾಧರ್ ಬ್ಯಾನರ್ಜಿ ಕಂಪೆನಿಗೆ ಸರಬರಾಜು ಮಾಡುವಂತೆ ಗುತ್ತಿಗೆ ಕೊಟ್ಟಿದ್ದರು.
ಈ ವಿಷಯ ಅರಿತ "ಸತ್ಯಶೋಧಕ"ನೊಬ್ಬ ಬ್ರಿಟಿಷರು ಹಿಂದೂಗಳಿಗೆ ದನದ ಗ್ರೀಸನ್ನೂ, ಮುಸ್ಲಿಮರಿಗೆ ಹಂದಿಯ ಗ್ರೀಸನ್ನೂ ಕೊಟ್ಟು ಧರ್ಮ ಭ್ರಷ್ಟರನ್ನಾಗಿ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು "ಸತ್ಯ ಶೋಧಿಸಿ" ಬಿಟ್ಟ. ಈ ಸತ್ಯಸುದ್ದಿಯಿಂದ ಎಚ್ಚೆತ್ತ ಬ್ರಿಟಿಷ್ ಅಧಿಕಾರಿ ಕರ್ನಲ್ ರಿಚರ್ಡ್ ಬರ್ಚ್, ಜನವರಿ ಇಪ್ಪತ್ತೇಳರಂದು 'ಗ್ರೀಸ್ ಇಲ್ಲದ ತೋಟಾಗಳನ್ನು ನೀಡುತ್ತೇವೆ. ನಿಮಗೆ ಯಾವ ಗ್ರೀಸ್ ಬೇಕೋ ಅದು ಅಥವಾ ನಿಮ್ಮ ಆಯ್ಕೆಯ ಪರ್ಯಾಯ ಎಣ್ಣೆ ಉಪಯೋಗಿಸಿ. ಹಾಗೆಯೇ ತೋಟಾಗಳನ್ನು ಹಲ್ಲಿನಿಂದ ಕೀಳದೆ ಕೈಯಿಂದ ಸಹ ಕೀಳಬಹುದು' ಎಂದ. ಆಗ ನಮ್ಮ ಸತ್ಯಶೋಧಕರು ಗ್ರೀಸ್ ಇಲ್ಲದ ತೋಟಾ ಮೇಲಿನ ಪೇಪರ್ ಅನ್ನು ಧರ್ಮಭೃಷ್ಟ ಮಾಡುವ ಗ್ರೀಸ್ ಹಾಕಿಯೇ ತಯಾರು ಮಾಡಲಾಗಿದೆ. ಹಾಗಾಗಿಯೇ ಆ ಪೇಪರ್ ಗಟ್ಟಿಯಾಗಿರುವುದು ಮತ್ತು ಹೊಳೆಯುವುದು ಎಂದು ಆಳದ "ಸತ್ಯ" ತಿಳಿಸಿದರು. ಈ ರೋಚಕ "ಸತ್ಯಶೋಧನೆ"ಯ ಆಧಾರದ ಮೇಲೆ ಕ್ರಿ.ಶ. 1857ರ ಮೇ ಹತ್ತರಂದು ಸಿಪಾಯಿ ದಂಗೆ ಭೀಕರವಾಗಿ ಎದ್ದು ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿತು!
ಇದೀಗ ಸಿಪಾಯಿ ದಂಗೆ ನಡೆದು ನೂರ ಅರವತ್ತೈದು ವರ್ಷಗಳಾಗಿ, ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳಾದರೂ ಈ "ಸತ್ಯಶೋಧನೆ" ಬೆಳಕಿಗೆ ಬಂದಿಲ್ಲ!
ಇಂದಿಗೂ ಅಂದು ಕಿಚ್ಚು ಹಚ್ಚಿದ ಅಂದಿನ ಸನಾತನ ತಾವರೆಕನ್ನಿಗ ಸತ್ಯಶೋಧಕರ ಅನುವಂಶೀಯರೇ ಆದ ಆಧುನಿಕ "ಸತ್ಯಶೋಧನಾ" ದೇಶಭಕ್ತರು ಜನರನ್ನು ತಮ್ಮ "ಸತ್ಯಶೋಧನೆ"ಯ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕ್ಷಿಪ್ರಗತಿಯಲ್ಲಿ ಜಾಗೃತಿಗೊಳಿಸುತ್ತಿದ್ದಾರೆ. ಅವರನ್ನು ಜನ ಹೆಮ್ಮೆಯಿಂದ ಬ್ರಿಗೇಡ್, ನಿಲುಮೆ..... ಇತ್ಯಾದಿ ಇತ್ಯಾದಿಯಾಗಿ ಗುರುತಿಸಿ ಜೈಕಾರ ಹಾಕುತ್ತಾರೆ. ಇಂತಹ ಸಾಂಘಿಕ, ವ್ಯಕ್ತಿಗತ, ನಿಗೂಢ ಇರವುಗಳಂತೆಯೇ ಅಂದೂ "ಆ" "ಸತ್ಯಶೋಧಕ" ತಾವರೆಕನ್ನಿಗರು ನಿಗೂಢವಾಗಿ ಇದ್ದರು. ದೇಶಕ್ಕಾಗಿ ಅವರ ಹೃದಯವೂ ಇಂದಿನವರಂತೆಯೇ ಮಿಡಿಯುತ್ತಿತ್ತು.
ಇಂತಹ ತಾವರೆಕನ್ನಿಗರ ಸತ್ಯವನ್ನು ಅರಿಯದೆ "ಈ" ಪಕ್ಷೀಯರೆ, ಸುಖಾಸುಮ್ಮನೆ ಹುಂಬರಾಗಿ ಕಳಲೆ ತಿಂದು ಬಾಡೇ ಗಾಡು, ನೀನ್ಯಾವನಯ್ಶಾ ಕೇಳಾಕೆ ಎಂದು ಹೇಳಿಕೊಡುವ ಸದ್ಬುದ್ಧಿಜೀವಿ ಪಡ್ಡೆಗಳ ಬಿಟ್ಟು ಅದರಾಚೆಯ ಸತ್ಯವನ್ನು ಅರಿಯಿರಿ. ಇಲ್ಲದಿದ್ದರೆ ಬಾಡು ಬಿಡಿ, ಮೈಲಾರ ಜಾತ್ರೆಯ ಬೆಂಡು ಬತ್ತಾಸು ಸಹ ಸಿಕ್ಕದು.
ವಿ. ಸೂ: ಇಲ್ಲಿ "ಸತ್ಯ" ಇರುವಲ್ಲಿ ವಿರುದ್ಧ ಪದ ಹಾಕಿಕೊಳ್ಳಿ. ಆಗ ನಿಮಗೆ "ಸತ್ಯಮೇವ ಜಯತೆ" ಎಂಬ ಉದ್ಘೋಷದ ಸ್ವತಂತ್ರ ಭಾರತದಲ್ಲಿ ಏಕೆ ರೋಚಕ ಗಾಳಿಸುದ್ದಿಗಳು ಅತ್ಯಂತ ಪ್ರಾಮುಖ್ಯತೆ ಗಳಿಸಿವೆ ಎಂದು ಅರಿವಾಗುತ್ತದೆ. ಹಾಂ, ಸಿಪಾಯಿ ದಂಗೆಯ ಸಂಗತಿಯನ್ನು ತಾವರೆಕನ್ನಿಗರು, ಕೈಕೆಲಸದವರು, ಕುಡುಗೋಲು ತೆನೆ/ಸುತ್ತಿಗೆ, ಸೈಕಲ್ಲು, ಚಕ್ರ, ಭಕ್ರಾ ಪಕ್ಷಗಳೆಲ್ಲ ಇಪ್ಪತ್ತೊಂದನೇ ಶತಮಾನದಲ್ಲಿಯೂ ಸತ್ಯವೆಂದರೆ "ನಮ್ಮ ಇಸ್ವಗುರು ಇಸ್ವಗುರುವೇ" ಎಂದು ಸುವರ್ಣಾಕ್ಷರಗಳಲ್ಲಿ ಬರೆದು ತೂಗಿಸಿಬಿಡಿ.
#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ
No comments:
Post a Comment