ಪೀಠಿಕೆ:
Lets discuss openly with no prejudices as stated by Shailaja that teaching about Draupadi case
ಸಿಗ್ಮಂಡ್ ಫ್ರಾಯ್ಡ್ ಸಿದ್ಧಾಂತದ ಪ್ರಕಾರ "ಜೀವನವು ಒತ್ತಡ ಮತ್ತು ಉಲ್ಲಾಸಗಳಿಂದ ಆವೃತಗೊಂಡಿದೆ. "ಕಾಮಾಸಕ್ತಿ" ಮೂಲ
ಕಾರಣವಾಗಿ ಮಾನವನ ಎಲ್ಲಾ ಒತ್ತಡಗಳು ಬೆಳೆದು "ಕಾಮಾಶಕ್ತಿ"ಯು (sexual energy or libido) ಆಸ್ಫೋಟಿಸುವ ಹಂತಕ್ಕೆ
ಏರುತ್ತದೆ. ಆ ಶಕ್ತಿಯ ಆಸ್ಫೋಟನೆಯೇ ಉಲ್ಲಾಸದ ಚಿಲುಮೆಯಾಗಿ ಹರಿದು ಆನಂದವನ್ನು ತರುತ್ತದೆ". ಇಲ್ಲಿ ಮಾನವ ಸಹಜವಾದ
ಎಲ್ಲಾ ಉಲ್ಲಾಸದಾಯಕ ಕ್ರಿಯೆ ಮತ್ತು ಚಿಂತನೆಗಳನ್ನು ಸಾಮಾನ್ಯಿಕರಿಸಿ ಕಾಮ ಎಂದು ಫ್ರಾಯ್ಡ್ ಕರೆದಿದ್ದಾನೆ. ಈ ಸೂತ್ರವು ಹೆಣ್ಣು
ಮತ್ತು ಗಂಡು ಎಂಬ ಭೇದವಿಲ್ಲದೆ ಮಾನವರೆಲ್ಲರಿಗೂ ಅನ್ವಯಿಸುತ್ತದೆ.
ಈ ಕಾಮವನ್ನು ಅಭಿವ್ಯಕ್ತಿಸುವ ಪರಿ ಗಂಡು ಮತ್ತು ಹೆಣ್ಣುಗಳಲ್ಲಿ ಭಿನ್ನವಾಗಿರುತ್ತದೆ. ಈ ಅಭಿವ್ಯಕ್ತಿಸುವುದನ್ನು ಅವರಿರುವ ಸಮಾಜ
ಮತ್ತು ಸಂಸ್ಕೃತಿಗಳು ಪ್ರಭಾವಿಸಿರುತ್ತವೆ ಕೂಡ. ಇದಕ್ಕೆ ದೈಹಿಕ ಭಿನ್ನತೆ ಕೂಡ ಕಾರಣವೆನ್ನಬಹುದು. ನಿಸರ್ಗದತ್ತವಾಗಿ ಒಂದು ಗಂಡು
ಲೈಂಗಿಕ ಉದ್ರೇಕಕ್ಕೊಳಗಾದರೆ ಅದನ್ನು ಆತ ಎಷ್ಟೇ ಮುಚ್ಚಿಡಲು ಪ್ರಯತ್ನಿಸಿದರೂ ದೈಹಿಕವಾದ ಆ ಬದಲಾವಣೆಯನ್ನು ಇತರರು
ಗಮನಿಸಿಬಿಡಬಹುದು. ಅದೇ ಹೆಣ್ಣಿಗೆ ಅಂತಹ ಸಮಸ್ಯೆ ಇಲ್ಲ. ಆ ದೈಹಿಕ ತೋರ್ಪಡಿಕೆಯ ಕಾರಣವಾಗಿಯೇ ಗಂಡಿನಲ್ಲಿ ಒಂದು
ಧಾರ್ಷ್ಟ್ಯ ಭಾವನೆ ಇರುತ್ತದೆ. ಅದೇ ಹೆಣ್ಣಿಗೆ ಒಂದು ನಿಯಂತ್ರಣ ಯಾ ಸಹನಾ ಗುಣವು ಪ್ರಕೃತಿದತ್ತವಾಗಿ ಬಂದಿರುತ್ತದೆ. ಗಂಡಿನ
ಅಂತಹ ಧಾರ್ಷ್ಟ್ಯತನವೇ ಅವನು ಮಹಿಳೆಯನ್ನು ಚುಡಾಯಿಸುವಂತೆ ಪ್ರಚೋದಿಸುತ್ತಿರುತ್ತದೆ. ಆದರೆ ಎಲ್ಲಿ ಲೈಂಗಿಕ ಸ್ವಚ್ಛಂದತೆ
ಸಾಧ್ಯವೋ ಅಂತಹ ಪರಿಸರದಲ್ಲಿ ಆ ಚುಡಾಯಿಸುವ ಪಿಡುಗು ಇರುವುದಿಲ್ಲ. ಉದಾಹರಣೆಗೆ ಭಾರತದಲ್ಲಿರುವಂತಹ eve teasing
(ಯುವತಿಯರನ್ನು ಚುಡಾಯಿಸುವುದು) ಯುರೋಪಿಯನ್ ರಾಷ್ಟ್ರಗಳಲ್ಲಿ ಇಲ್ಲವಾದರೂ ಇಟಲಿಯಲ್ಲಿ ಇದೆ. ಏಕೆಂದರೆ ಕಡು
ಕ್ಯಾಥೋಲಿಕ್ ಸಂಸ್ಕೃತಿಯ ಇಟಲಿಯಲ್ಲಿ ಯುರೋಪಿನ ಇತರೆಡೆ ಇರುವಷ್ಟು ಲೈಂಗಿಕ ಸ್ವಚ್ಛಂದತೆ ಇಲ್ಲ. ಎಲ್ಲೆಲ್ಲಿ ಮಡಿವಂತಿಕೆ
ಇರುವುದೋ ಅಲ್ಲೆಲ್ಲಾ eve teasing ಪಿಡುಗು ಇದೆ.
ಮಕ್ಕಳಿದ್ದಾಗ ಅನುಭವಿಸಿದ ಲೈಂಗಿಕ ಶೋಷಣೆಯೇ ಮುಂದೆ ಹಿಸ್ಟಿರಿಯ, obsessionನಂತಹ ಮಾನಸಿಕ ಕಾಯಿಲೆಗಳನ್ನು
ತರುತ್ತದೆ ಎಂದು ಫ್ರಾಯ್ಡ್ ತನ್ನ seduction ಥಿಯರಿಯಲ್ಲಿ ಪ್ರತಿಪಾದಿಸಿ ನಂತರ ಇದು ಮಕ್ಕಳ imaginary fantasy ಸಹ
ಕಾರಣವಾಗಿರಬಹುದು ಎಂದು ಬದಲಾಯಿಸಿದ್ದು ಇಂದಿಗೂ ವಿವಾದಗ್ರಸ್ತವಾಗಿದೆ.
ಫ್ರಾಯ್ಡ್ seduction theory ಎಂದಿದ್ದನೇ ಹೊರತು ಅದು ಲೈಂಗಿಕ ಶೋಷಣೆ ಅಥವಾ ಲೈಂಗಿಕ ದೌರ್ಜನ್ಯ ಎಂದು
ಪ್ರಸ್ತುತಗೊಳಿಸಿರಲಿಲ್ಲ. ಅಷ್ಟೇ ಏಕೆ 1970 ರವರೆಗೆ ಲೈಂಗಿಕ ದೌರ್ಜನ್ಯ ಎಂಬ ವಿಷಯವೇ ಇರಲಿಲ್ಲ! ಆದರೂ 1970ರಿಂದ
ಇಲ್ಲಿಯವರೆಗೆ ಲೈಂಗಿಕ ದೌರ್ಜನ್ಯ/ಶೋಷಣೆಯನ್ನು ಗುರುತಿಸಿ ಶಿಕ್ಷಿಸುವುದಲ್ಲದೆ ಮಹತ್ತರವಾಗಿ ಈ ಕುರಿತು ಸಮಾಜದಲ್ಲಿ ಅರಿವು
ಮೂಡಿಸಲಾಗಿದೆ. ಇದು ಕ್ರಾಂತಿಕಾರಕ ಬದಲಾವಣೆಯೇ ಎನ್ನಬಹುದು. ಇಷ್ಟೆಲ್ಲಾ ಪ್ರಗತಿಯನ್ನು ಹೊಂದಿದ್ದರೂ ಮಹಿಳಾ
ಸಮಾನತೆ ಮತ್ತು ದೌರ್ಜನ್ಯವನ್ನು ತಡೆಯುವಲ್ಲಿ ಇನ್ನೂ ಮಹತ್ತರ ಬದಲಾವಣೆಗಳು ಆಗಬೇಕಿವೆ.
ಪ್ರವೇಶಿಕೆ:
ಹೀಗೆ ಹುಟ್ಟಿನಿಂದಲೂ ಸಮಾನ ಲೈಂಗಿಕಾಸಕ್ತಿಯನ್ನು ಹೊಂದಿದ್ದರೂ ಗಂಡು-ಹೆಣ್ಣುಗಳು ಅದನ್ನು ಅಭಿವ್ಯಕ್ತಿಸುವಾಗ ಮಾತ್ರ ಅವರ
ಮೂಲಭೂತ ದೈಹಿಕ ಭಿನ್ನತೆಗಿಂತ ಸಾಮಾಜಿಕ ಸಂಸ್ಕೃತಿಗಳ ಪ್ರಭಾವವೇ ಹೆಚ್ಚು ಪರಿಣಾಮ ಬೀರುತ್ತವೆ. ಇದು ಜಗತ್ತಿನಾದ್ಯಂತ
ಆಯಾಯ ಸ್ಥಳೀಯ ಸಂಸ್ಕೃತಿಗೆ ತಕ್ಕಂತೆ ಒಂದು ಅನುಪಾತದಲ್ಲಿರುತ್ತದೆ.
ಈ ಎಲ್ಲಾ ವ್ಯತ್ಯಯಗಳೇನೇ ಇದ್ದರೂ ಮಹಿಳೆಯ ಲೈಂಗಿಕ ಅಭಿವ್ಯಕ್ತಿತನವನ್ನು ತಪ್ಪಾಗಿ ಗ್ರಹಿಸಿ ಲೈಂಗಿಕ ದೌರ್ಜನ್ಯಗಳು
ನಡೆಯುತ್ತಲೇ ಇವೆ. ಮಹಿಳೆಯ ಉಡುಗೆ ತೊಡುಗೆಗಳಲ್ಲದೆ ಲಿಂಗಬೇಧವಿಲ್ಲದೆ ಆಕೆ ಸಮಾಜದೊಂದಿಗೆ ಬೆರೆಯುವ
ಸಾಮಾಜಿಕತೆಯನ್ನೇ ಅಪಾರ್ಥ ಮಾಡಿಕೊಂಡು ಲೈಂಗಿಕ ದೌರ್ಜನ್ಯವೆಸಗುವ ಸಾಕಷ್ಟು ನಿದರ್ಶನಗಳಿರುವಾಗ ಇನ್ನು ಆಕೆ ನಿರ್ಭಿಡೆಯಿಂದ
ತನ್ನ ಲೈಂಗಿಕಾಸಕ್ತಿಯ ಕುರಿತು ಹೇಳಿಕೊಂಡರೆ ಏನಾಗಬಹುದೆಂದು ಊಹಿಸಿ! ಮಹಿಳೆ ಉದಾರವಾದಿ, ಪ್ರಗತಿಪರ ಎನ್ನುವುದನ್ನು
ಗಂಡಾಳ್ವಿಕೆಯ ಸಮಾಜದಲ್ಲಿ ಉದಾರವಾದಿ, ಪ್ರಗತಿಪರ ಗಂಡುಗಳು ಸಹ ಉದಾರವಾದಿ ಮಹಿಳೆಯನ್ನು ಉದಾರ
ಲೈಂಗಿಕತೆಯವಳೆಂದೂ, ಪ್ರಗತಿಪರಳನ್ನು ಕೈಗೆಟುಕುವವಳೆಂಬ ಒಳನೋಟವಿಟ್ಟುಕೊಂಡೇ ನೋಡುವುದು
ಸರ್ವೇಸಾಮಾನ್ಯವಾಗಿಬಿಟ್ಟಿದೆ.
ಆದರೆ ಹಾಗೆ ದೌರ್ಜನ್ಯಕ್ಕೆಡೆ ಮಾಡಿಕೊಡುವ ಅವಕಾಶಗಳು ಇರುವಂತೆಯೇ ಆಕೆಯು ತನ್ನ ಬಯಕೆ ಈಡೇರಿಸಿಕೊಂಡದ್ದನ್ನು ಸಹ
ಲೈಂಗಿಕ ದೌರ್ಜನ್ಯ ಎಂದು ಹಲವಾರು ಭಾರಿ ಪರಿಗಣಿಸಿದ ಅನಾಹುತಕಾರಿ ಘಟನೆಗಳೂ ಸಾಕಷ್ಟಿವೆ. ಆದರೆ ಅಂತಹ ಅವಘಡಗಳ ಹಿಂದೆ
ಮತ್ತದೇ ಸಮಾಜ, ಸಂಸ್ಕೃತಿಗಳ ಪ್ರಭಾವವೇ ಹೆಚ್ಚು ಗಾಢವಾಗಿರುತ್ತದೆ.
ಈ ಪ್ರಭಾವಗಳು ಕೇವಲ ಆಯಾಯ ಘಟನೆಗಳ ಮೇಲಲ್ಲದೆ ಲೈಂಗಿಕ ದೌರ್ಜನ್ಯ ಅಧ್ಯಯನ ವೈಧಾನಿಕತೆಯ ಮೇಲೂ ಗಾಢ
ಪರಿಣಾಮಗಳನ್ನು ಹೊಂದಿದೆ. ಇಂತಹ ಕೇಸುಗಳ ಕುರಿತಾಗಿ ನಮ್ಮ ಅಧ್ಯಯನಗಳು ಹೆಚ್ಚು ಗಮನ ಹರಿಸಿಲ್ಲ. ಈ ದಿನದ
ಉಪನ್ಯಾಸದಲ್ಲಿ ಲೈಂಗಿಕ ದೌರ್ಜನ್ಯದ ಅಧ್ಯಯನದ ವೈಜ್ಞಾನಿಕ ತೊಡಕುಗಳ ಜೊತೆಗೆ ಇಂತಹ ಕೇಸುಗಳ ಬಗ್ಗೆ ಸಹ ಸ್ವಲ್ಪ ಗಮನ
ಹರಿಸೋಣ.
ಎಲ್ಲಾ ರೀತಿಯ ಲೈಂಗಿಕ ದೌರ್ಜನ್ಯದ ಕೇಸುಗಳು ದಾಖಲಾತಿಗೆ ಸಿಗುವುದಕ್ಕಿಂತ ಎರಡರಷ್ಟು ಪಾಲು ಸಿಗದೆ ಹೋಗುತ್ತಿರುವುದು ಸಹ
ಅಧ್ಯಯನ ವೈಧಾನಿಕತೆಯ ತೊಡಕೇ ಆಗಿದೆ. ಅಮೆರಿಕಾದ ಪ್ರತಿಷ್ಠಿತ ವಿಶ್ವವಿದ್ಯಾಲಯ ಮತ್ತು ಸರ್ಕಾರಿ ಸಂಸ್ಥೆಯೊಂದು ಜಂಟಿಯಾಗಿ
ವಿಶ್ಲೇಷಿಸಿ ಏಳು ಪ್ರಮುಖ ವೈಧಾನಿಕತೆಯ ತೊಡಕುಗಳನ್ನು ದಾಖಲಿಸಿವೆ:
1. ಪ್ರಕರಣ ಸಿಂಧುತ್ವ ಸ್ಥಾಪಿಸುವಲ್ಲಿನ ದಿವ್ಯ ನಿರ್ಲಕ್ಷ್ಯ - ಲೈಂಗಿಕ ದೌರ್ಜನ್ಯ ಪ್ರಕರಣಗಳ ದೂರು ದಾಖಲಾತಿ, ನಿರೂಪಣೆ,
ವಿವಾದಾಂಶಗಳ ದಾಖಲಾತಿಯಲ್ಲಿ ಗಮನಾರ್ಹ ವಿವರಗಳ ಕಡೆ ದಿವ್ಯ ನಿರ್ಲಕ್ಷ್ಯ ಅಥವಾ ಯಾಂತ್ರಿಕೃತ ವರದಿ ನೀಡುವಿಕೆ.
2. ಪ್ರಕರಣದ ದುರ್ಬಲ ಹೇಳ್ಮೆಯ (theoretical development) ದಾಖಲಾತಿ - ಪ್ರಕರಣಗಳನ್ನು ಥಿಯರೆಟಿಕಲ್ ಆಗಿ
ಕಟ್ಟಿಕೊಡದೆ ದುರ್ಬಲಗೊಳಿಸುವುದು. ಅಂದರೆ ಭಾವನಾತ್ಮಕ ನೆಲೆಗೆ ಒತ್ತುಕೊಟ್ಟು ಹೇಳ್ಮೆಯ ಚೌಕಟ್ಟನ್ನು ದೌರ್ಜನ್ಯದ
ಪರಿಧಿಯೊಳಗೆ ಗಟ್ಟಿಯಾಗಿ ಕಟ್ಟಿಕೊಡಲಾಗದಿರುವುದು. ಎಷ್ಟೋ ಬಾರಿ ಮೇಲ್ನೋಟಕ್ಕೆ ಒಪ್ಪಿತ ಕಾಮವೆನಿಸಿದರೂ ಹಿಂದಿನ
ಆಮಿಷಗಳನ್ನು ಗೌಣವಾಗಿಸುವುದು. ಅಂದರೆ ಪ್ರಭಾವಶಾಲಿ ಗಂಡಾಳ್ವಿಕೆಯು ಅಬಲ ಅಸಹಾಯಕ ಹೆಣ್ಣು ಒಪ್ಪಲೇಬೇಕಾದಂತಹ
ಸನ್ನಿವೇಶಗಳನ್ನು ಸೃಷ್ಟಿಸಿ ಆಮಿಷಗಳಿಗೆ ಬಲಿಯಾಗಿಸುವುದು. ಈ ಸನ್ನಿವೇಶಗಳಲ್ಲಿ ಸಮಾಜವು ಸಹ ಹೆಣ್ಣನ್ನೇ ಬೊಟ್ಟು ಮಾಡಿ
ನಿಂದಿಸುವುದೇ ಹೊರತು ಆಕೆ ಅಸಹಾಯಕಳಾಗುವಂತಹ ಸನ್ನಿವೇಶ, ಸಾಮಾಜಿಕ ಪರಿಸ್ಥಿತಿ, ಪರಿಸರ, ಸಂಸ್ಕೃತಿಗಳನ್ನು ಅಲ್ಲ.
3. ಚಲನಶೀಲ (dyanamic) ಸಮಸ್ಯೆಗೆ ಜಡ ಮತ್ತು ಬಹು ಪರಿಚ್ಛೇದಿಕ ಸೂತ್ರ (cross sectional) - ಜ್ವಲಂತ
ಸಮಸ್ಯೆಯಾದರೂ ಹೊಸ ಹೊಸ ಸ್ವರೂಪಗಳನ್ನು ಪಡೆಯುತ್ತಿರುವ ಸಮಸ್ಯೆಗೆ ಅದೇ ಜಡ ಮತ್ತು ವಿವಿಧ ಇಲಾಖೆಗಳಲ್ಲಿ
ಹಂಚಿಹೋಗಿರುವ ಸಂಶೋಧನಾ ಸ್ವರೂಪವನ್ನೇ ಅವಲಂಬಿಸಿರುವುದು. ತಂತ್ರಜ್ಞಾನ, ನವ ಸಾಮಾಜಿಕ ಪಲ್ಲಟಗಳ ಹಿನ್ನೆಲೆಯಲ್ಲಿ
ನಡೆಯುವ ದೌರ್ಜನ್ಯಗಳನ್ನು ದೌರ್ಜನ್ಯವೆಂದು ನೋಡದೆ ಇರುವುದು. ಕ್ಯಾಮೆರಾ ಫೋನುಗಳಿವೆಯೆಂದು ಖಾಸಗಿ ವ್ಯಕ್ತಿಗಳ ವಿಡಿಯೋ
ತೆಗೆದು ಜಾಲತಾಣಗಳಲ್ಲಿ ಹರಿಯಬಿಡುವುದು. ದಂಪತಿಗಳು ಸೆಕೆ ಇರುವುದೆಂದು ಕಿಟಕಿಗಳನ್ನು ತೆರೆದು ಮಲಗಿ ಸರಸದಲ್ಲಿ
ತೊಡಗಿದ್ದಾಗ ಅದನ್ನು ಕ್ಯಾಮೆರಾ ಫೋನುಗಳಲ್ಲಿ ಸೆರೆ ಹಿಡಿದು ಜಾಲತಾಣಗಳಲ್ಲಿ ಹರಿಯಬಿಟ್ಟ ಸಾವಿರಾರು ಪ್ರಕರಣಗಳಿವೆ.
ಇಂತಹ ಪ್ರಕರಣಗಳಲ್ಲಿ ಸಮಾಜವು ಸಹ ಆ ದಂಪತಿಯನ್ನೇ "ಕಿಟಕಿ ಹಾಕಿಕೊಳ್ಳದೆ ಏಕೆ ಸರಸದಲ್ಲಿ ತೊಡಗಿದ್ದರು" ಎಂದು
ನಿಂದಿಸುವುದೇ ಹೊರತು ಅದನ್ನು ಚಿತ್ರೀಕರಿಸಿ ಜಾಲತಾಣದಲ್ಲಿ ಹರಿಯಬಿಟ್ಟ ವ್ಯಕ್ತಿಗಳನ್ನು ಪ್ರಶ್ನಿಸುವುದಿಲ್ಲ. ಇಲ್ಲಿ ವ್ಯಕ್ತಿಗಳ
"ಖಾಸಗೀತನ"ವನ್ನು ಕಾಪಾಡುವುದಕ್ಕಿಂತಲೂ "ಮಡಿವಂತಿಕೆ"ಯನ್ನು ಕಾಪಾಡಲು ಸಮಾಜ ಉತ್ಸುಕವಾಗುವಷ್ಟು ಸಮಾಜವನ್ನು
ಪುರುಷಶಾಹಿ ಮತ್ತು ಪುರೋಹಿತಶಾಹಿಗಳು ಪ್ರಭಾವಿಸಿಬಿಟ್ಟಿವೆ.
4. ಸಂಶೋಧನೆಗೆ ಸಿದ್ಧ ಮತ್ತು ಅನುಕೂಲಸಿಂಧು ಸಮೀಕ್ಷಾ ವಿಧಾನಗಳ ಬಳಕೆ - ನಿತ್ಯನೂತನ ಸ್ವರೂಪ ಪಡೆಯುವ ಈ ಸಮಸ್ಯೆಗೆ
ಶಾಸ್ತ್ರೀಯ ಸಮೀಕ್ಷೆ ಮತ್ತು ವಿಧಾನಗಳನ್ನೇ ಬಳಸುತ್ತಿರುವುದು. ಉದಾಹರಣೆಗೆ ಅತ್ಯಾಚಾರಕ್ಕೊಳಗಾದವರ ಜಾತಿಯನ್ನು
ಪ್ರಮುಖವಾಗಿ ಗುರುತಿಸಿಕೊಂಡು ಅದಕ್ಕೆ ತಕ್ಕಂತಹ ಜಾತಿವಾರು ವಿಶ್ಲೇಷಣೆಗಳನ್ನು ಬಳಸುವುದಲ್ಲದೆ ಅಪ್ರಾಪ್ತೆ, ವಿವಾಹಿತೆ ಹೀಗೆ
ವಿಭಾಗೀಕರಿಸಿದ ಸಿದ್ಧಾಂತಗಳನ್ನು ಅನ್ವಯಿಸಿ ಮೂಲ ಸಮಸ್ಯೆಗೆ ಭಿನ್ನ ರೂಪವನ್ನು ಕೊಡುವುದು.
5. ವಿವರಣೆ ಮತ್ತು ಶ್ವೇತಪತ್ರಗಳ ಮೇಲೆ ಹೆಚ್ಚು ಅವಲಂಬನೆ - ಸಿದ್ಧ ಮಾದರಿಯ ಜನಪ್ರಿಯ ಶ್ವೇತಪತ್ರ ಮತ್ತು ಸೈದ್ಧಾಂತಿಕ
ನಿಲುವುಗಳ ಮೇಲೆಯೇ ಹೆಚ್ಚಾಗಿ ಅವಲಂಬನೆ.
6. ಪ್ರತಿವರ್ತನೆ/ಪ್ರತಿಕ್ರಿಯೆಗಳಾಧರಿತ ಸೂತ್ರಗಳ ಸಂಪೂರ್ಣ ಅವಗಣನೆ - ಪ್ರತಿವರ್ತನೆಗಳ ಆಧಾರವಾಗಿ ವಿಶ್ಲೇಷಣಾತ್ಮಕವಾಗಿ
ರೂಪಿಸಬೇಕಾದ ವಿಧಾನಗಳನ್ನು ರಚಿಸುವಲ್ಲಿ ಸಂಪೂರ್ಣ ವಿಫಲವಾಗಿರುವುದು. ಇದರಿಂದ ಕೇಸ್ construct ಹಾದಿ ತಪ್ಪುತ್ತಿವೆ.
7. ಏಕರೂಪಿ ವಿಧಾನದ ಪೂರ್ವಾಗ್ರಹಿಕೆ - ಎಲ್ಲಾ ಪ್ರಕರಣಗಳನ್ನೂ ಏಕರೂಪವಾಗಿ ಅವಲೋಕಿಸುವ ಮಾನದಂಡಗಳನ್ನು
ಬಳಸುವುದು.
ಇತ್ತೀಚೆಗೆ ಅಮೆರಿಕಾದ ಯುನೈಟೆಡ್ ಏರ್ ಲೈನ್ಸ್ ವಿಮಾನವೊಂದರಲ್ಲಿ ಓರ್ವ ಯುವತಿ ಪ್ರಯಾಣಿಸುತ್ತಿದ್ದಳು. ಆಕೆಯ ಪಕ್ಕದ
ಸೀಟಿನಲ್ಲಿ ಕುಳಿತಿದ್ದ ಒಬ್ಬ ಮಧ್ಯವಯಸ್ಕ ಆಕೆಗೆ 'ಹಾಯ್, you look gorgeous! ಎಂದು ಸೌಜನ್ಯದ compliment
ಹೇಳಿದ. ಆಕೆ ಸಹ ಮುಗುಳ್ನಕ್ಕು ಥ್ಯಾಂಕ್ ಯೂ ಎಂದಳು. ಸ್ವಲ್ಪ ಹೊತ್ತಿನ ನಂತರ ಆಕೆಯನ್ನೇ ದಿಟ್ಟಿಸುತ್ತ ಕುಳಿತ ಅವನು
ಬ್ಲ್ಯಾಂಕೆಟ್ ಒಂದನ್ನು ಸೊಂಟದ ಮೇಲೆ ಹೊದ್ದು ಮುಷ್ಠಿಮೈಥುನದಲ್ಲಿ ತೊಡಗಿದ. ಇದರಿಂದ ಕಸಿವಿಸಿಗೊಂಡು ಮಾನಸಿಕ
ಆಘಾತಕ್ಕೊಳಗಾದ ಯುವತಿ ವಿಮಾನದ ಸಿಬ್ಬಂದಿಗೆ ಸೀಟ್ ಬದಲಾಯಿಸಿಕೊಡಲು ಕೇಳಿದಳು. ಆದರೆ ಯಾವುದೇ ಸೀಟ್ ಲಭ್ಯವಿರದ
ಕಾರಣ ಸೀಟ್ ಬದಲಿಸಿ ಕೊಡಲಾಗಲಿಲ್ಲ. ನಂತರ ಆ ಯುವತಿ ಆ ವ್ಯಕ್ತಿಯ ಮೇಲೆ ಲೈಂಗಿಕ ಶೋಷಣೆ ಕೇಸ್ ದಾಖಲಿಸಿದ್ದಲ್ಲದೆ
ಏರ್ ಲೈನ್ ಸಹಾಯ ಮಾಡಲಿಲ್ಲವೆಂದು ಸಹ ದೂರು ದಾಖಲಿಸಿದಳು. ಈ ಕೇಸಿನಲ್ಲಿ ಅವನಿಗೆ ಶಿಕ್ಷೆಯಾಗಿದ್ದಲ್ಲದೆ ಏರ್ ಲೈನ್ಸ್
ಕಂಪೆನಿಗೆ ಸಹ ದಂಡ ವಿಧಿಸಲಾಯಿತು. ಈ ಪ್ರಕರಣದಲ್ಲಿ ದೈಹಿಕವಾಗಿ ಮುಟ್ಟದೆ, ದೈಹಿಕವಾಗಿ ತನ್ನ ಲಿಂಗವನ್ನು ತೋರದೆ ಆತ
ಮುಷ್ಠಿ ಮೈಥುನ ನಡೆಸಿದ್ದರೂ ಸಹ ಅದು ಆ ಹೆಣ್ಣಿನಲ್ಲಿ ಉಂಟು ಮಾಡಿದ ಮಾನಸಿಕ ಆಘಾತವು ದೈಹಿಕ ಲೈಂಗಿಕ
ದೌರ್ಜನ್ಯದಷ್ಟೇ ಪರಿಣಾಮಕಾರಿ. ಈ ಮಾನಸಿಕ ಆಘಾತದ ಅನುಪಾತವು ಮಹಿಳೆಯಿಂದ ಮಹಿಳೆಗೆ ವ್ಯತ್ಯಯದಲ್ಲಿರಬಹುದು. ಆದರೆ
ಅದು ಆಘಾತವನ್ನಂತೂ ಉಂಟುಮಾಡಿರುತ್ತದಲ್ಲವೇ! ಇಂತಹ ಕೇಸುಗಳನ್ನು ಕೇವಲ ಸಮಾಜದಲ್ಲಿ ಹಿಡಿದು ಬಡಿದು ನ್ಯಾಯ
ತೀರ್ಮಾನಿಸುವುದಕ್ಕಿಂತಲೂ ಕೋರ್ಟಿನ ಮೊಕದ್ದಮೆಗಳಾಗಿ ಆಯಾಯ ವ್ಯಕ್ತಿಗಳನ್ನು sexual predators ಎಂದು ಗುರುತಿಸಿದಾಗ
ಸಮಾಜ ಹೆಚ್ಚು ಎಚ್ಚೆತ್ತುಕೊಳ್ಳುತ್ತದೆ ಮತ್ತು ಅಂತಹ ಅಪರಾಧಿಗಳ ಮೇಲೆ ನಿಗಾ ವಹಿಸುವುದು ಸುಲಭವಾಗುತ್ತದೆ.
ಪ್ರಮುಖವಾಗಿ ಮೇಲಿನ ಎಲ್ಲಾ ಏಳು ವೈಧಾನಿಕ ತೊಡಕುಗಳು ದೂರುವುದು ಜಡರೂಪಿ, ಏಕಮುಖಿ, ಸಿದ್ಧ ಮಾದರಿಯ ತಂತ್ರ ಮತ್ತು
ಸೈದ್ಧಾಂತಿಕರಿಸಿದ ದೌರ್ಜನ್ಯದ ಸ್ವರೂಪಗಳನ್ನೇ. ಹಾಗಾಗಿ ಈ ಜಡ ಸ್ವರೂಪದ ವೈಧಾನಿಕತೆಯಿಂದಲೇ ದಾಖಲಾಗುತ್ತಿರುವ
ದೌರ್ಜನ್ಯದ ಪ್ರಕರಣಗಳಿಗಿಂತ ಎರಡು ಪಟ್ಟು ಪ್ರಕರಣಗಳು ದಾಖಲಾಗದೆ ತಪ್ಪಿ ಹೋಗುತ್ತಿವೆ ಎನ್ನಲಾಗಿದೆ.
ಅದಲ್ಲದೆ ಲೈಂಗಿಕ ದೌರ್ಜನ್ಯದ ಕೇಸುಗಳನ್ನು ಪಕ್ಕಕ್ಕಿಟ್ಟು, ಇದರ ಹೆಸರಿನಲ್ಲಿ ಆಗುವ ದೌರ್ಜನ್ಯಗಳನ್ನು ಬಿಂಬಿಸುವ ಹೆಚ್ಚು ಹೆಚ್ಚು
ಪ್ರಕರಣಗಳು ಇತ್ತೀಚೆಗೆ ಸುದ್ದಿ ಮಾಡುತ್ತಿವೆ. ಈ ಜಡ ಸ್ವರೂಪದ ವೈಧಾನಿಕತೆ ಮತ್ತು ಪೂರ್ವಾಗ್ರಹಗಳ ಕಾರಣ ಈ ರೀತಿಯ ಹುಸಿ
ಕೇಸುಗಳ ಸ್ವರೂಪದ ಬಗ್ಗೆ ತೀವ್ರವಾಗಿ ಯಾರೂ ಗಮನ ಹರಿಸುತ್ತಿಲ್ಲ. ಈ ಮೊದಲೇ ಹೇಳಿದಂತೆ ನಮ್ಮ ಇಂದಿನ ಉಪನ್ಯಾಸದ
ಅಂಶಗಳಾದ ಲೈಂಗಿಕ ಅಭಿವ್ಯಕ್ತಿ ಮತ್ತು ವೈಧಾನಿಕತೆಯ ತೊಡಕುಗಳನ್ನು ಬಿಂಬಿಸುವ ನನ್ನ ಅನುಭವದ ಎರಡು ಘಟನೆಗಳನ್ನಲ್ಲದೆ
ಇನ್ನಷ್ಟು ಉದಾಹರಣೆಗಳನ್ನು ಗಮನಿಸೋಣ.
ಘಟನೆ 1:
ನಾನು ಎಂಬತ್ತರ ದಶಕದಲ್ಲಿ ಗುಮಾಸ್ತನಾಗಿ ಹತ್ತಿ ಗಿರಣಿಗಳಲ್ಲಿ ಹತ್ತಿ ಜಿನ್ನಿಂಗ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದೆ. ಆಲ್ಲಿನ ಕೆಲಸ
ಬಹುಪಾಲು ಮಹಿಳೆಯರೇ ಮಾಡುತ್ತಿದ್ದರು. ಈ ಹೆಣ್ಣಾಳುಗಳ ಮುಖ್ಯಸ್ಥೆಯನ್ನು ’ಮಕದುಮ್ಮಿ’ ಎನ್ನುತ್ತಿದ್ದರು. ಈ ಮಕದುಮ್ಮಿ
ಹೆಣ್ಣಾಳುಗಳ ಎಲ್ಲಾ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಳು. ಯಾವುದೇ ರೀತಿಯ ’ಮಹಿಳಾ ಶೋಷಣೆ’ಯನ್ನು ತಡೆಯುವ
ಮತ್ತು ಪ್ರೊತ್ಸಾಹಿಸುವ ಜವಾಬ್ದಾರಿ ಈ ಮಕದುಮ್ಮಿಗಳದಾಗಿತ್ತು. ಅಂದರೆ ಇಲ್ಲಿ ಯಾವುದೇ ಗಂಡಾಳು ಇರುತ್ತಿರಲಿಲ್ಲ. ಎಲ್ಲರೂ
ಮಹಿಳೆಯರೇ ಆದ್ದರಿಂದ ಮಹಿಳೆಯರೇ ಮಹಿಳೆಯರನ್ನು ಶೋಷಿಸಿದರೆ ಅದನ್ನು ನಿಭಾಯಿಸುವ ಹೊಣೆ ಮಕದುಮ್ಮಿಯದಾಗಿತ್ತು.
ಹಾಗಾಗಿ ಶೋಷಣೆಯನ್ನು ಪುರಸ್ಕರಿಸುವ ಅಥವಾ ತಿರಸ್ಕರಿಸುವ ಜವಾಬ್ದಾರಿ ಈ ಮಕದುಮ್ಮಿ ಎಂಬ ಮಹಿಳೆಯದೇ ಆಗಿತ್ತು.
ಒಮ್ಮೊಮ್ಮೆ ಸಾವ್ಕಾರರು, ಗುಮಾಸ್ತರು ಮತ್ತು ಹಮಾಲರು ತಮ್ಮ ಪೋಲಿ ಮಾತುಗಳಿಂದ ’ಮೇಲ್’ಉಸ್ತುವಾರಿ ಮಾಡುತ್ತಿದ್ದರು.
ಅದಕ್ಕೆ ಈ ಮಹಿಳೆಯರೂ ಸಹ ಮಹಾ ಪೋಲಿ ಮಾತುಗಳಿಂದ ಪ್ರತಿಸ್ಪಂದಿಸಿ ತಮಾಷೆ ಮಾಡುತ್ತಿದ್ದರು. ಆದರೆ ಇದೆಲ್ಲವೂ ಕೆಲಸದ
ಏಕತಾನತೆಯನ್ನು ಮುರಿದು ಮನಸ್ಸನ್ನು ಉಲ್ಲಸಿತಗೊಳಿಸಿ ಮತ್ತೆ ಕೆಲಸದಲ್ಲಿ ತೊಡಗಲು ಪ್ರೊತ್ಸಾಹಿಸುವ ಪರಿಯಾಗಿತ್ತೇ ವಿನಃ
’ಶೋಷಣೆ’ಯಾಗಿಯಲ್ಲ!
ಈ ರೀತಿಯ ಪೋಲಿ ಮಾತುಗಳು, ರಸಿಕ ಆಲಾಪನೆಗಳು ಎಲ್ಲಾ ಶ್ರಮಿಕ ವರ್ಗದಲ್ಲಿ ಹಾಸುಹೊಕ್ಕಾಗಿವೆ. ಏಕೆಂದರೆ ನಮ್ಮ ಜನಪದವೇ
ಸಾಕಷ್ಟು ಇಂತಹ ಲೈಂಗಿಕ ಅಂಗಚೇಷ್ಟೆ, ರಸ ಸಂಭಾಷಣೆ, ಸರಸ ಸಲ್ಲಾಪಗಳಿಂದ ಕೂಡಿರುವಾಗ ಅಂತಹ ಜನಪದ ಸಮೂಹದ ಮಣ್ಣಿನ
ಜನ ಇದನ್ನು ತಮ್ಮ ದೈನಂದಿನ ಜಂಜಾಟದ ಏಕತಾನತೆಯ ಕಾರ್ಯಗಳನ್ನು ಉಲ್ಲಸಿತಗೊಳಿಸಲು ಜನಪದದಂತೆಯೇ
ಮುಂದುವರಿಸಿಕೊಂಡು ಬಂದಿದ್ದಾರೆ. ಹಾಗಾಗಿಯೇ ಇಂತಹ ಚೇಷ್ಟೆಗಳು ನಾನು ಕಂಡ ಹಳ್ಳಿಯ ಕೃಷಿಕರಲ್ಲದೇ ದಾವಣಗೆರೆಯ
ಕೈಗಾರಿಕಾ ವಲಯದ ಶ್ರಮಿಕರು ಸಹ ಕೃಷಿಕರಷ್ಟಲ್ಲದಿದ್ದರೂ ತಮ್ಮ ಪ್ರಾದೇಶಿಕತೆಗೆ ತಕ್ಕಂತೆ ಈ ರೀತಿಯ ರಸ(ತಿ), ಮನ್
ಮಾತು(ಮನ್ಮಥ) ಸಂಭಾಷಣೆಗಳಲ್ಲಿ ತೊಡಗುತ್ತಿದ್ದರು. ಆ ಸಂಭಾಷಣೆಗಳಲ್ಲಿ ಕೆಲವು ಸಾವ್ಕಾರರು, ಗುಮಾಸ್ತರು, ಹಮಾಲರು ಭಲೇ
ಹುರುಪಿನಿಂದ ಭಾಗಿಯಾಗುತ್ತಿದ್ದರು. ಮುಂದೆ ಅವರೊಡನೆ ಕೆಲವು ಹೆಣ್ಣಾಳುಗಳಿಗೆ ಮನಸ್ಸಾಗಿ ಸಂಬಂಧಗಳುಂಟಾಗುತ್ತಿದ್ದವು.
ಹಾಗೆಂದು ಇಂತಹ ಮುಕ್ತ ಮಾನವ-ಸಹಜ ಮಧುರ ಸಂಬಂಧಗಳನ್ನು ಯಾವುದೇ ರೀತಿಯ ಶೋಷಣೆ ಎನ್ನುವುದು ಮುಕ್ತ ಸಮಾಜದ
ಶೋಷಣೆ ಎನಿಸುತ್ತದೆ! ಇದು ನೈತಿಕತೆಯ ಪ್ರಶ್ನೆ(?) ಎನಿಸಬಹುದೇ ಹೊರತು ಖಂಡಿತ ಶೋಷಣೆಯಲ್ಲ!
ಸಾಕಷ್ಟು ಬಾರಿ ಕೆಲವು ಜೋರಿದ್ದ ಹೆಣ್ಣಾಳುಗಳೇ ಹಮಾಲರನ್ನು, ಗುಮಾಸ್ತರನ್ನು, ಸಾವ್ಕಾರರನ್ನು ಕೆಡವಿಕೊಳ್ಳುತ್ತಿದ್ದರು. ಇಲ್ಲಿ
ಇವರೆಲ್ಲಾ ಬೇಕೆಂದೇ ಕೆಡವಿಕೊಳ್ಳುವುದಕ್ಕಿಂತ ನಿತ್ಯ ಒಡನಾಟದಲ್ಲಿ ಸ್ಪಂದಿಸಿ ಆಕರ್ಷಣೆಯುಂಟಾಗಿ ಪರಸ್ಪರ
ಸಂಬಂಧಗಳುಂಟಾಗುತ್ತಿದ್ದವು. ಹೀಗೆ ಹೆಣ್ಣಾಳುಗಳು ಹಮಾಲರಿಂದ ಗುಮಾಸ್ತರು, ಫಿಟ್ಟರುಗಳು, ಮಾಲೀಕರಲ್ಲದೆ ಯಾವ ಗಂಡುಗಳು
ತಮ್ಮ ಕೆಲಸದ ನಡುವೆ ಪರಿಚಯವಾಗುತ್ತಿದ್ದರೋ ಅವರೊಟ್ಟಿಗಿನ ಪ್ರಣಯ ಪ್ರಸಂಗಗಳನ್ನು ನಡೆಸುತ್ತಿದ್ದರು. ಇದು ನಾನು ಕಂಡ
ಹಳ್ಳಿ, ಪಟ್ಟಣ ಮಾರುಕಟ್ಟೆಗಳ ಶ್ರಮಿಕ ವರ್ಗದಲ್ಲೆಲ್ಲಾ ಹಾಸುಹೊಕ್ಕಾಗಿದ್ದಿತು.
ಈ ಶ್ರಮಿಕ ವರ್ಗದ ಮಹಿಳೆಯರಷ್ಟು ಮುಕ್ತವಾಗಿ ಕಾಮವನ್ನು ಮಾತನಾಡುವ, ಪ್ರಯೋಗಿಸುವ, ತಮ್ಮ ಮನಸ್ಸಿಗೆ ಬಂದವರ ಜೊತೆ
ಸಂಬಂಧ ಹೊಂದುವ, ಹಾಗೆಯೇ ಮನಸ್ಸಿಗೆ ಹಿಡಿಸದವನು ಬೆನ್ನು ಬಿದ್ದರೆ ಅವನನ್ನು ಹಿಡಿದು ಜಾಡಿಸುವ ಅತ್ಯಂತ ಸಮಾನ, ಉದಾತ್ತ,
ನಿರ್ಭಿಡೆಯ ಮನೋಭಾವನೆಯನ್ನು ನಾನು ಯಾವುದೇ ಉನ್ನತ ಕಛೇರಿಯ ಸುಶಿಕ್ಷಿತ ಮಹಿಳೆಯರಲ್ಲಿ ಕಂಡಿಲ್ಲ. ಆಗೆಲ್ಲಾ ನಮ್ಮ ಶಿಕ್ಷಣ
ಅಂತಹ ಉದಾತ್ತ ಉದಾರ, ನಿರ್ಭೀತಿಯನ್ನು ಕಳಚಿ ಸಂಕುಚಿತ, ಸಂತುಲಿತ, ಭೀತಿಯ ಗುಣಗಳನ್ನು ನೈತಿಕತೆಯ ಲೇಪನದೊಂದಿಗೆ
ತುಂಬುವುದಾದರೆ ಈ ಶಿಕ್ಷಣವಾದರೂ ಏಕೆ ಎನಿಸುತ್ತಿತ್ತು.
ಇಲ್ಲಿ ನಾನು ಒಬ್ಬ ಸಾಮಾನ್ಯ ಬಾಲ ಗುಮಾಸ್ತನಾಗಿ ಕಂಡಂತೆ ಈ ಶ್ರಮಿಕವರ್ಗದಲ್ಲಿ ಎಲ್ಲಾ ಆರ್ಥಿಕ ಬಂಧಗಳ ನಡುವೆಯೂ
ಇದ್ದದ್ದು ಬಹು ಮುಕ್ತತೆ, ಉದಾರತೆ, ಮತ್ತು ತತ್ ಕ್ಷಣದ ಪ್ರೀತಿ ಕಾಮನೆಗಳು ತಪ್ಪಲ್ಲವೆಂಬ ಪ್ರಜ್ಞೆ! ಯಾವ ಸುಶಿಕ್ಷಿತ ವರ್ಗ ಪಾಪ
ಪ್ರಜ್ಞೆಯೆಂಬಂತೆ ಅದುರಿಬಿದ್ದು ಮುದುರಿಕೊಳ್ಳುವುದೋ ಅಂತಹ ಕಾಮದ ವಸ್ತುವಿನಲ್ಲಿಯೂ ಇವರು ನಿರ್ಭಿಡೆಯಿಂದ ಗಂಡುಗಳ
ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವಷ್ಟು ಮುಕ್ತವಾಗಿ ಸಮಾನತೆಯನ್ನು ಈ ಮಹಿಳೆಯರು ಪಾಲಿಸುತ್ತಿದ್ದರು.
ಇದಕ್ಕೆ ಯಾವುದೇ ಜಾತಿ, ಧರ್ಮದ ಬಂಧವಿರಲಿಲ್ಲ!
ಸಾಕಷ್ಟು ಸಲ ಇಂತಹ ಒಂದು ತಳಮಟ್ಟದ ಅನುಭವವಿಲ್ಲದೆ ನೋಡುಗರು ಊಹಾತ್ಮಕವಾಗಿ ಕಾವ್ಯಮಯ ಭಾಷೆಯಲ್ಲಿ ಮಹಿಳಾ
ಶೋಷಣೆ, ಹಣವಂತರ ದರ್ಪ ಇತ್ಯಾದಿಯಾಗಿ ಶೋಷಣೆಯ ಕಥೆಗಳನ್ನು ಹೆಣೆದು ಇಲೈಟ್ ವರ್ಗದ ’ಶಬ್ಬಾಸಿ’ ಗಳಿಸಿಬಿಡುತ್ತಾರೆ.
ಅಂತಹ ಕತೆಗಳನ್ನು ಓದಿದ್ದ ನಾನೂ ಈ ಅನುಭವಗಳನ್ನು ಪಡೆಯುವ ಮುನ್ನ ಅಂತಹುದೇ ಅಭಿಪ್ರಾಯ ಹೊಂದಿದ್ದೆ ಎಂದು ಈ
ಮೊದಲೇ ಹೇಳಿದೆನಲ್ಲವೇ! ಭಾವನಾತ್ಮಕವಾಗಿ ’ರವಿ ಕಾಣದ್ದನ್ನು ಕವಿ ಕಂಡ’ ಎಂಬುದನ್ನು ವಾಸ್ತವದ ಹಿನ್ನೆಲೆಯಲ್ಲಿ ’ಕವಿ
ಕಾಣದ್ದನ್ನು ರವಿ ಕಂಡ’ ಎಂದೂ ಹೇಳಬಹುದೇನೋ!
ಅಧ್ಯಯನಶೀಲರಿಗೆ ಇಂತಹ ಸಾಕಷ್ಟು ಅನುಭವಗಳಾಗಿದ್ದರೂ ಅವರ ಯಾವ ಅಧ್ಯಯನಗಳು ಇಂತಹ ಅನುಭವವನ್ನು ದಾಖಲಿಸಿ
ಭಾರತದಲ್ಲಿ ಹಾಸುಹೊಕ್ಕಾಗಿರುವ ಇಂತಹ ಮುಕ್ತತೆಯ ಬಗ್ಗೆ ಮಾತನಾಡಿವೆ? ಅದೇ ಅಧ್ಯಯನಶೀಲರು ಈ ಕುರಿತು ಸೃಜನಶೀಲ ಕತೆ
ಬರೆಯುತ್ತಾರೆಯೇ ಹೊರತು ಸೃಜನೇತರ ಅಧ್ಯಯನವನ್ನಲ್ಲ. ಏಕೆಂದರೆ ಅವರನ್ನು ಹೀಗೆ ದಾಖಲಿಸದಂತೆ ಪೂರ್ವಾಗ್ರಹಗಳು
ಹಿಡಿದಿಟ್ಟಿರುತ್ತವೆಯೇನೋ ಅಲ್ಲವೇ!
ಇದಕ್ಕೆ ಪ್ರಮುಖ ಕಾರಣ ಮೇಲಿನ ಎಲ್ಲಾ ಏಳು ವೈಧಾನಿಕ ತೊಡಕುಗಳು ಎನ್ನಬಹುದು. ಏಕೆಂದರೆ ಜಡ, ಸಿದ್ಧ ಮಾದರಿ ತಂತ್ರ, ಬಹು
ಪರಿಚ್ಛೇದಿಕ ಸೂತ್ರ, ಅನುಕೂಲಸಿಂಧು ಸಮೀಕ್ಷೆ, ಪೂರ್ವಾಗ್ರಹಿತ ಸಿದ್ಧಾಂತ, ಪ್ರತಿವರ್ತನೆಗಳ ಅವಗಣನೆಗಳೆಲ್ಲವೂ ಇಲ್ಲಿ
ಅನ್ವಯಗೊಂಡಿವೆ.
ಅದಲ್ಲದೆ ಮುಕ್ತವಾದಿಗಳು, ಪ್ರಗತಿಪರರು, ಬಂಡಾಯ ಸಾಹಿತಿಗಳೆನಿಸಿಕೊಂಡವರು ಈ ಶ್ರಮಿಕವರ್ಗದ ಮುಕ್ತತೆಯ ಅರಿವಿದ್ದರೂ
ಉದ್ದೇಶಪೂರ್ವಕವಾಗಿ ತಮ್ಮ ಸುಪ್ತ ಸಂಕುಚಿತತನವನ್ನು ನೈತಿಕತೆಯನ್ನು(?) ಶೋಷಣೆಯ ಕವಚದಲ್ಲಿ ತುರುಕಿ ಹೇರಿದ
ಹಿನ್ನೆಲೆಯಲ್ಲಿ ಲೈಂಗಿಕ ದೌರ್ಜನ್ಯದ ಆ ಎಲ್ಲಾ ಕತೆ, ಕಾವ್ಯ, ಅಧ್ಯಯನ, ಚಿಂತನೆಗಳನ್ನು ಕೂಲಂಕಷವಾಗಿ ವಿಮರ್ಶಿಸುವ ಅಗತ್ಯವಿದೆ
ಎನಿಸಿ ಅವುಗಳ ಅಸ್ತಿತ್ವವನ್ನೇ ಅಲುಗಾಡಿಸಿಬಿಡುತ್ತದೆ. ಅದಲ್ಲದೆ ಯಾವ ಪುರೋಹಿತಶಾಹಿಯನ್ನು ಬ್ರಾಹ್ಮಣ್ಯ ಎಂದು ಇದೇ
ಅಧ್ಯಯನಕಾರರು ವಿರೋಧಿಸಿಕೊಂಡು ಬಂದಿರುವರೋ ಅದೇ ಅಧ್ಯಯನಕಾರರ ಸಂಶೋಧನೆಗಳು ಪುರೋಹಿತಶಾಹಿಯ ಮಡಿಯನ್ನು
ಮುಡಿದುಬಿಟ್ಟಿವೆ ಎನಿಸಿ ಅವರೊಳಗಿನ ದ್ವಂದ್ವವನ್ನು ಅನಾವರಣಗೊಳಿಸುತ್ತದೆ!
ಆದರೆ ಅದೇ ನಮ್ಮ ಜನಪದ ಇದನ್ನು ಸರಿಯಾಗಿ ಗ್ರಹಿಸಿದೆ ಎನಿಸುತ್ತದೆ.
ಈ ಪರಸ್ಪರ ವೈರುಧ್ಯಗಳ ಜನಪದರ ಮುಕ್ತತೆ ಮತ್ತು ಪ್ರಗತಿಪರರ ಚಿಂತನೆ ಎರಡೂ ನಮ್ಮ ವಿಶ್ವವಿದ್ಯಾಲಯದ ಅಧ್ಯಯನಗಳಲ್ಲಿ
ಸಾಕಷ್ಟು ಕಂಡುಬರುತ್ತವೆ. ಆದರೆ ಅವೆರಡನ್ನು ಸಂಚಯಿಸಿ, ತೂಲಿಸಿ ಸತ್ಯವನ್ನು ಕಂಡುಕೊಳ್ಳುವ ವಿಶ್ಲೇಷಣಾ ದೃಷ್ಟಿಗೆ ಹಾಕಿರುವ
ಕುದುರೆಗಣ್ಣಿನ ಕಣ್ತಡೆಯನ್ನು ನಮ್ಮ ಶಿಕ್ಷಣ ವ್ಯವಸ್ಥೆ ತೆಗೆಯುವುದೆಂದು ಎಂದು ಈ ಮೇಲಿನ ಏಳು ತೊಡಕುಗಳು ನೇರವಾಗಿ
ಪ್ರಶ್ನಿಸುತ್ತವಲ್ಲವೇ? ಇದಕ್ಕೆ ಬಹು ಮುಖ್ಯ ಕಾರಣ ನಮ್ಮ ವಿಶ್ವವಿದ್ಯಾಲಯಗಳ ವಿಭಾಗಗಳ ನಡುವಿನ ಸಮನ್ವಯದ ಕೊರತೆ
ಕಾರಣವಿರಬಹುದೇನೋ ಗೊತ್ತಿಲ್ಲ!
ಇಂತಹ ಪೂರ್ವಾಗ್ರಹಗಳು ಲೈಂಗಿಕ ದೌರ್ಜನ್ಯದ ಅಧ್ಯಯನದ ವೈಧಾನಿಕತೆಯ ಪ್ರಮುಖ ತೊಡಕು.
ಘಟನೆ 2:
ವಿವಾಹ ವಿಚ್ಚೇದಿತನಾದ ಆತ ಒಳ್ಳೆಯ ಉದ್ಯೋಗದಲ್ಲಿದ್ದ ಶ್ರೀಮಂತ. ಸ್ನೇಹಜೀವಿ, ಪ್ರಾಮಾಣಿಕನಾಗಿದ್ದ ಆತ ವೈವಾಹಿಕವಾಗಿ
ಡಾಕ್ಟರ್ ಓರ್ವಳನ್ನು ಮದುವೆಯಾಗಿ ಕಹಿಯುಂಡಿದ್ದವನು ಮುಂದೆಂದೂ ಮದುವೆಯಾಗುವುದಿಲ್ಲ ಎಂದು ತೀರ್ಮಾನಿಸಿದ್ದ.
ಅಕಸ್ಮಾತ್ ಹಾಗೇನಾದರೂ ಮದುವೆಯಾದರೆ ಓರ್ವ ಬಡ ಹುಡುಗಿಯನ್ನು ಮಾತ್ರ ಎಂದು ನಿರ್ಧರಿಸಿದ್ದ. ಸ್ನೇಹಜೀವಿಯ ಸ್ನೇಹಿತರು
ಆತನ ಒಳ್ಳೆಯತನಕ್ಕೆ ಮರುಗಿ, ಅವನ ಕೊರಗನ್ನು ತಾವೇ ಅನುಭವಿಸುತ್ತಿರುವಂತೆ ಕೊರಗಿ ಒಂದು ಬಡ ಹುಡುಗಿಯನ್ನು ಹುಡುಕಿ
ತೋರಿದರು. ಆತ ಹುಡುಗಿಯ ಪ್ರಸ್ತಾಪವನ್ನು ಒಪ್ಪಿ ಮದುವೆಯಾದ. ಒಂದೇ ತಿಂಗಳಲ್ಲಿ ಹುಡುಗಿ ಅವನೊಂದಿಗೆ
ಹೊಂದಾಣಿಕೆಯಾಗದು ಎಂದು ಅಕಾರಣವಾಗಿ ಆತನನ್ನು ಶೋಷಿಸಿ ತೊರೆದು ಓಡಿದಳು. ನಂತರ ಒಂದು "ದೊಡ್ಡ" ಮೊತ್ತದ
ಜೀವನಾಂಶ ಕೋರಿದಾಗ, ಕೋರ್ಟು ಶ್ರೀಮಂತನ ಲೈಫ್ ಸ್ಟೈಲ್ ಆಧಾರದ ಮೇಲೆ "ಬಹುದೊಡ್ಡ" ಮೊತ್ತದ ಜೀವನಾಂಶ ಕೊಡುವಂತೆ
ತೀರ್ಮಾನ ಕೊಟ್ಟಿತು.
ಇದು ಮೇಲ್ನೋಟಕ್ಕೆ ಶ್ರೀಮಂತನ ಬಗ್ಗೆ ಕಕ್ಕುಲಾತಿ ಹುಟ್ಟಿಸುತ್ತದೆ, ಮತ್ತು ಅದೇ ರೀತಿ ಕೋರ್ಟ್ ಸಹ ಏಕಮುಖವಾಗಿ ತೀರ್ಪು
ಕೊಟ್ಟಿದೆಯೆನಿಸುತ್ತದೆ. ಆದರೆ ಇಲ್ಲಿ ಕೋರ್ಟ್ ಮತ್ತು ಆ ಶ್ರೀಮಂತನ ಆಚೆ ಕೇಸಿನ ಆಳಕ್ಕೆ ಇಳಿದಾಗ ಕಾಣುವ ಚಿತ್ರಣವೇ ಬೇರೆ! ಆ
ಮಹಿಳೆಯನ್ನು ಆಕೆಯ ಬಾಯ್ಫ್ರೆಂಡ್ ಓರ್ವ ದಾಳವಾಗಿ ಬಳಸಿಕೊಂಡು ಆ ಶ್ರೀಮಂತನ ಆಸ್ತಿಯನ್ನು ಲಪಟಾಯಿಸಲು ಮಾಡಿದ ಸಂಚಿನ
ಅರಿವಾಗಬಹುದು. ಅಥವಾ ಆ ಮಹಿಳೆಯೇ ಖುದ್ದು ದುರಾಸೆಗೊಳಗಾಗಿ ಹೀಗೆ ಸ್ವಇಚ್ಛೆಯಿಂದ ಮಾಡಿರಬಹುದು. ಮೊದಲೆಲ್ಲಾ
ಇಂತಹ ಪ್ರಕರಣಗಳಲ್ಲಿ ಶ್ರೀಮಂತ ಗಂಡ ಕೊಲೆಯಾಗುತ್ತಿದ್ದರೆ, ಈಗ ವೈವಾಹಿಕ ಕಾನೂನಿನ ಅರಿವಿರುವ ಬಹುತೇಕರು
ವಿಚ್ಛೇದನವನ್ನೇ ಒಂದು tool ಆಗಿ ಬಳಸುತ್ತಿದ್ದಾರೆ. ಆದರೆ ಅಂತಹ ಸಂಚನ್ನು ಬಯಲು ಮಾಡಿ ತಪ್ಪೆಂದು ನಿರ್ಧರಿಸುವುದು ಹೇಗೆ?
ಏಕೆಂದರೆ ಇದೊಂದು ಕೌಟುಂಬಿಕ ಕಲಹವಾಗಿರುವುದಲ್ಲದೆ ಮತ್ತು ಇಂತಹ ಸಂಚು ಯಾವುದೇ ಕಾನೂನಿನ ವ್ಯಾಪ್ತಿಯ ಮಿತಿಗೆ ಬಾರದೆ
ಅಪರಾಧವೆಂದು ಪರಿಗಣಿಸಲಾಗದು. ಹಾಗಾಗಿ ಈ ರೀತಿಯ ಸಾಕಷ್ಟು ಕೇಸುಗಳು ಹೀಗೆಯೇ ನ್ಯಾಯ ತೀರ್ಮಾನವಾಗುತ್ತವೆ. ಆದರೆ
ಸಾಮಾಜಿಕವಾಗಿ ಜನರಿಗೆ ಇದು ತಪ್ಪು ನ್ಯಾಯ ತೀರ್ಮಾನವೆನಿಸಿಬಿಡುತ್ತವೆ!
ಆದರೂ ಒಂದು ವೇಳೆ ಆ ಮಹಿಳೆ ಪ್ರಜ್ಞಾಪೂರ್ವಕವಾಗಿ ಪುರುಷಶಾಹಿ ಸಮಾಜವನ್ನು ಬಳಸಿಕೊಂಡು ಇಂತಹ ಸಂಚನ್ನು ರೂಪಿಸುತ್ತಿದ್ದರೆ
ಆ ಕುರಿತು ಹೇಗೆ ತೀರ್ಮಾನ ಕೈಗೊಳ್ಳುವುದು ಎಂಬುದನ್ನು ಅಮೆರಿಕಾವೂ ಸೇರಿದಂತೆ ಇನ್ನೂ ಯಾವ ಕೋರ್ಟುಗಳೂ ವಿಶೇಷ
ಕಾನೂನನ್ನು ರಚಿಸಿಲ್ಲ, ಅದನ್ನು ರಚಿಸಲು ಸಾಧ್ಯವೂ ಇಲ್ಲ. ಪರಸ್ಪರ ವ್ಯಕ್ತಿತ್ವವನ್ನು ಅರಿತುಕೊಳ್ಳದೆ ಆಗುವ ಇಂತಹ ಅವಗಢಗಳಿಗೆ
ಕಾನೂನಾತ್ಮಕ ಪರಿಹಾರವಿಲ್ಲ. ಅಬ್ಬಬ್ಬಾ ಎಂದರೆ ಇದು ನೈತಿಕವಾಗಿ ತಪ್ಪೆನ್ನಿಸಬಹುದೇ ಹೊರತು ಕಾನೂನಾತ್ಮಕವಾಗಿ ಅಲ್ಲ.
ಆದರೆ ಸಾಮಾಜಿಕವಾಗಿ ಯಾವಾಗ ಕಾನೂನುಗಳಿಗೆ ಒಂದು ನಿಯಂತ್ರಣ ಮತ್ತು ಸಮತೋಲನಗಳ
(Checks and Balanaces) ಪ್ರತಿರೂಪಗಳು (counter clauses) ಇರದಿದ್ದರೆ ಇಂತಹ ದುರುಪಯೋಗ
ಸಾಮಾನ್ಯವಾಗಿಬಿಡುತ್ತದೆ. ಇಲ್ಲಿ ವಿವಾಹಪೂರ್ವ ಒಪ್ಪಂದದ (Preneptial Agreement) ನಿಯಂತ್ರಣ ಮತ್ತು ಸಮತೋಲನ
(Chek and Balance) ಇಲ್ಲದ ಕಾರಣ ವಿಚ್ಛೇದನಗಳು ಹಣದ ಗಣಿಯಂತೆ ಉಪಯೋಗಿಸಲ್ಪಡುತ್ತಿವೆಯಷ್ಟೇ.
ಆದರೆ ವಿದೇಶಗಳಲ್ಲಿ ಇಂತಹ ಅವಘಡಗಳನ್ನು ತಡೆಯಲೆಂದೇ ಮದುವೆಗೆ ಮುಂಚೆ ಮಾಡಿಕೊಂಡ ವಿವಾಹಪೂರ್ವ ಒಪ್ಪಂದಗಳು
(Prenuptial Agreements) ಇರುವವು. ಇಂತಹ ವಿವಾಹಪೂರ್ವ ಒಪ್ಪಂದಗಳು ಭಾರತದಲ್ಲಿ ಅಷ್ಟೊಂದು ಪ್ರಚಲಿತವಿಲ್ಲದ
ಕಾರಣ ಈ ರೀತಿ ನ್ಯಾಯ ತೀರ್ಮಾನಗಳು ಕಾನೂನಿನನ್ವಯ ಆಗುತ್ತವೆ. ಹಾಗಾಗಿ ಇಂತಹ "ಮಹಿಳಾ" ದೌರ್ಜನ್ಯಗಳ ಕುರಿತು ಅರಿವು
ಮೂಡಿಸಿ ವಿವಾಹಪೂರ್ವ ಒಪ್ಪಂದಗಳ (prenuptial agreements) ಅಗತ್ಯತೆಯ ಬಗ್ಗೆ ತಿಳಿಸಿಕೊಡಬಹುದೇ ಹೊರತು ಯಾವುದೇ
ಕಾನೂನು ಕ್ರಮ ಸಾಧ್ಯವಿಲ್ಲ!
ಭಾರತದ ಕಾನೂನುಗಳು ಮದುವೆ ಕುರಿತಂತೆ ಎಲ್ಲಾ ಒಪ್ಪಂದಗಳನ್ನು ಅನೂರ್ಜಿತವೆಂದು ಘೋಷಿಸಿದೆ. ಹಾಗಾಗಿ ವಿಚ್ಛೇದನವನ್ನು
ಒಂದು tool ಆಗಿ ಬಳಸುತ್ತಿರುವುದನ್ನು ತಡೆಯಲು ಸದ್ಯಕ್ಕೆ ಸಾಧ್ಯವಿಲ್ಲ. ಆದರೆ ಈ ಕುರಿತು ಬದಲಾವಣೆಗಳು ತುರ್ತಾಗಿ ಆಗಬೇಕಿವೆ.
ಏಕೆಂದರೆ ಭಾರತದ ಸಾಮಾಜಿಕ ಬದಲಾವಣೆಯ ದಾಪುಗಾಲಿನ ವೇಗಕ್ಕೆ ಹೊಸ ಕಾನೂನುಗಳ ರಚನೆ ಆಮೆಗಾಲಾಗಿದೆ. ಹಾಗಾಗಿ ಇಂತಹ
ವ್ಯತ್ಯಯವುಂಟಾಗಿ ಜನರು ಕಾನೂನಿನ ಮೇಲೆ ವಿಶ್ವಾಸ ಕಳೆದುಕೊಳ್ಳುವಂತಾಗಿದೆ.
ಇನ್ನೊಂದು ನಾನು ಬಲ್ಲ ಕೇಸಿನಲ್ಲಿ, ಹೆಂಡತಿಯ ಅಕ್ರಮ ಸಂಬಂಧದಿಂದ ಬೇಸತ್ತಿದ್ದ ಗಂಡ ತನ್ನ ಹೆಂಡತಿ ಪ್ರಿಯಕರನೊಂದಿಗಿರುವ
ವಿಡಿಯೋ ಸಾಕ್ಷಿಯೊಂದಿಗೆ adultery ಕೇಸ್ ಹಾಕಿ ವಿಚ್ಛೇದನ ಕೇಳಿದ. ಅಲ್ಲಿಯೂ ಆತನಿಗೆ ವ್ಯತಿರಿಕ್ತವಾಗಿ ಆತನ "ಅರ್ಧದಷ್ಟು
ಆಸ್ತಿ"ಯನ್ನು ಕೊಡಿಸಿ ವಿಡಿಯೋ ಮಾಡಿದ್ದಕ್ಕೆ ಆಕೆಯ ಕ್ಷಮಾಪಣೆ ಕೇಳುವಂತೆ ಕೋರ್ಟ್ ಆದೇಶ ನೀಡಿತು. ಇಲ್ಲಿಯೂ ಸಮಾಜವು
ಆಕೆಯ ನೈತಿಕತೆಯನ್ನು ದೂಷಿಸಿ, ನ್ಯಾಯ ತೀರ್ಮಾನವನ್ನು ತಪ್ಪೆಂದಿತೇ ಹೊರತು ವಿಷಯದ ಆಳಕ್ಕಿಳಿಯಲಿಲ್ಲ. ಪುರುಷಶಾಹಿ
ಸಾಮಾಜಿಕ ರಚನೆಯ ಹಿನ್ನೆಲೆಯಲ್ಲಿ ಪುರುಷನಿಗೆ ಅನ್ಯಾಯವಾಗಿದೆ ಎಂಬುದನ್ನು ಸಮಾಜ ಪ್ರತಿಪಾದಿಸುತ್ತದೆಯೇ ಹೊರತು ಆ ಮಹಿಳೆ
ಏಕೆ ವಿವಾಹೇತರ ಸಂಬಂಧವನ್ನು ಹೊಂದಿದ್ದಳು ಎಂದು ವಿಚಾರಿಸುವುದಿಲ್ಲ. ಇಬ್ಬರು ಖಾಸಗಿ ವ್ಯಕ್ತಿಗಳು ಖಾಸಗಿಯಾಗಿರುವುದನ್ನು
ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾರ್ವತ್ರಿಕಗೊಳಿಸಿದ್ದನ್ನು ಪ್ರಶ್ನಿಸದೆ ಸಮಾಜವು ಆಕೆ ವಿವಾಹಿತಳಾಗಿ ಬೇರೆಯ ಸಂಬಂಧವನ್ನು
ಹೊಂದಿರುವುದೇ ತಪ್ಪೆನ್ನುತ್ತದೆ. ಆದರೆ ಈ ಉದಾಹರಣೆಯಲ್ಲಿ ಗಂಡನು adultery ಕಾರಣವೊಡ್ಡಿ ವಿಚ್ಛೇದನ ಬಯಸಿದ್ದನ್ನು
ಕೇವಲ ವಿಚ್ಛೇದನಕ್ಕೆ ಬಳಸಬಹುದೇ ಹೊರತು ಪರಿಹಾರ ಮೊತ್ತದ ನಿರ್ಧಾರಕ್ಕಲ್ಲ. ಹಾಗಾಗಿ ಇಲ್ಲಿ ಪರಸ್ಪರ ನಿಯಂತ್ರಣ ಮತ್ತು
ಸಮತೋಲನದ ಕಾನೂನು ಅಂಶಗಳು ಇರುವುದನ್ನು ಮನಗಾಣಬಹುದು.
ಇನ್ನು ನನ್ನ ಕಾರ್ಪೊರೇಟ್ ವಲಯದಲ್ಲಿ ಕೂಡ ಸಾಕಷ್ಟು ಭಾರತದ ಶಾಖೆಗಳಲ್ಲಿರುವ ಮಹಿಳೆಯರು ಕೆಲಸದ ಒತ್ತಡವನ್ನು
ತಾಳಲಾರದೆ, ಲೈಂಗಿಕ ಶೋಷಣೆಯ ನೆಪವೊಡ್ಡಿ ತಮ್ಮ ತಮ್ಮ ಬಾಸ್ಗಳ ನೌಕರಿಗೆ ಕುತ್ತು ತಂದು ಬೆವರಿಳಿಸಿದ್ದಾರೆ. ಕೆಲಸದ ಒತ್ತಡ
ಹೆಚ್ಚಾದೊಡನೆ ಆರೋಗ್ಯದಿಂದ ಶುರುವಾಗುವ ನೆಪಗಳು ಕ್ರಮೇಣ ಅಜ್ಜಿ, ಅಜ್ಜರ ಸಾವಿಗೆ ಬಂದು ಕಟ್ಟಕಡೆಗೆ ಲೈಂಗಿಕ ಶೋಷಣೆಗೆ
ಬಂದು ನಿಂತಿದ್ದ ಹಲವಾರು ಘಟನೆಗಳನ್ನು ನಾನೇ investigator ಆಗಿ ಪರಿಹರಿಸಿದ್ದೇನೆ. ಇದು ಭಾರತದಲ್ಲಿನ ಐಟಿ ಕಂಪೆನಿಗಳಿಗೆ
ಮಾತ್ರ ಸೀಮಿತವಾದ ಸಂಗತಿ. ಏಕೆಂದರೆ ವಿದೇಶಿ ಕಂಪೆನಿಗಳು ಲೈಂಗಿಕ ಕಿರುಕುಳದ ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತವೆ ಮತ್ತು
ಅಷ್ಟೇ ಪ್ರಾಮುಖ್ಯತೆಯನ್ನು ಕೊಡುತ್ತವೆ. ಹಾಗಾಗಿ ಇದನ್ನು ಕೆಲವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ tool ಆಗಿ ಬಳಸುತ್ತಾರೆ.
ಇದೇ ರೀತಿ ಜನಾಂಗೀಯ ತಾರತಮ್ಯದ ದೂರುಗಳು ಸಹ ತಪ್ಪನ್ನು ಮುಚ್ಚಿಕೊಳ್ಳುವ tool ಆಗಿ ಬಳಸಲ್ಪಡುತ್ತವೆ. ಆದರೆ ಈ ಎರಡು
ನಿಯಮಗಳಿಗೂ ನಿಯಂತ್ರಣ ಮತ್ತು ಸಮತೋಲನದ (checks and balances) ಪ್ರತಿರೂಪಿ ನಿಯಮಗಳಿವೆ. ಇವೆಲ್ಲವೂ
ಕಾರ್ಪೊರೇಟ್ ವಲಯದಲ್ಲಿಯೇ ಇತ್ಯರ್ಥವಾಗುವುದರಿಂದ ಇಲ್ಲಿನ ನ್ಯಾಯ ನಿರ್ಣಯದಲ್ಲಿ ಗೊಂದಲವುಂಟಾಗುವುದಿಲ್ಲ.
ಇರಲಿ, ಮೇಲಿನ ಏಳು ಅಂಶಗಳೊಟ್ಟಿಗೆ ಅಧ್ಯಯನಕಾರರು "Neutral Gender"ಗಳಾಗಬೇಕಿರುವುದು ಮತ್ತೊಂದು ಗಮನಾರ್ಹ
ಅಂಶ!
ಮೊಲೆ, ಮುಡಿ ಬಂದಡೆ ಹೆಣ್ಣೆಂಬರು
ಗಡ್ಡ ಮೀಸೆ ಬಂದಡೆ ಗಂಡೆಂಬರು
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ! ರಾಮನಾಥ
ಎಂಬ ವಚನದ ಆಶಯದಂತೆ ಗಂಡೂ ಅಲ್ಲದ, ಹೆಣ್ಣೂ ಅಲ್ಲದ, ತೃತೀಯವೂ ಅಲ್ಲದ ತಟಸ್ಥ ಆತ್ಮವಾಗಿರುವುದು ಅವಶ್ಯ.
ಅಧ್ಯಯನಕಾರರು ಎಲ್ಲಿಯವರೆಗೆ ಗಂಡು, ಹೆಣ್ಣು, ಗೇ, ಲೆಸ್ಬಿಯನ್ ಎಂದು ತಮ್ಮನ್ನು ತಾವು ಗುರುತಿಸಿಕೊಂಡು ಈ
ಅಧ್ಯಯನಕ್ಕಿಳಿಯುತ್ತಾರೋ ಅಲ್ಲಿಯವರೆಗೆ ಅವರಿಗೆ ಆಯಾಯ ಜೆಂಡರಿನ ಗುಣಗಳು ಅಧ್ಯಯನಕ್ಕಂಟಿದ
ಪೂರ್ವಾಗ್ರಹಗಳಾಗಿಬಿಡುತ್ತವೆ. ಹಾಗಾಗಿ ಉದ್ದೇಶಪೂರ್ವಕವಾಗಿ ಚಿತ್ತಪೂರ್ವಕವಾಗಿ ಅಧ್ಯಯನವನ್ನು ಆರಂಭದಿಂದ ಅಂತ್ಯದವರೆಗೆ
"ತಟಸ್ಥ ಲಿಂಗಿ (neutral gender)"ಗಳಾಗಿ ಪರಿಶೀಲಿಸಬೇಕಾಗುತ್ತದೆ.
ಮೇಲಿನ ಘಟನೆಗಳಲ್ಲದೆ ಇಂತಹ ಸಾಕಷ್ಟು ಕೇಸುಗಳು ರಾಜಕಾರಣಿಗಳನ್ನು, ಸಿನೆಮಾ ನಟರನ್ನು, ಮೀಡಿಯಾ ಪ್ರಮುಖರನ್ನು
ಆವರಿಸಿಕೊಂಡು ದೊಡ್ಡ ಮಟ್ಟದ ಸುದ್ದಿಗಳಾಗಿದ್ದನ್ನು (MeToo, Casting Couch, etc) ನಾವೆಲ್ಲರೂ ಕಂಡಿದ್ದೇವೆ! ಈ
ಸ್ವರೂಪದ dynamic ಪ್ರಕರಣಗಳನ್ನು ಈಗಿರುವ ಯಾವುದೇ ಜಡ ಸ್ವರೂಪಿ ವೈಧಾನಿಕತೆಯಲ್ಲಿ ತೊಡಗಿಸುವುದು ಕಷ್ಟ. ಹಾಗಾಗಿ
ಇಂತಹ ಆಯಾಮಗಳನ್ನು ಸಹ ವೈಧಾನಿಕತೆಯಲ್ಲಿ ಅಳವಡಿಸಿಕೊಳ್ಳುವ ತುರ್ತು ಜರೂರಿಯಿದೆ. ಒಟ್ಟಿನಲ್ಲಿ ಈ ಎಲ್ಲಾ ಕೇಸುಗಳಲ್ಲಿ
ಸಹ "ಪುರುಷಶಾಹಿ ಪುರೋಹಿತಶಾಹಿ ಪ್ರಣೀತ ನೈತಿಕತೆ" ಢಾಳಾಗಿದೆ.
ಇದೀಗ USA ಒಲಿಂಪಿಕ್ಸ್ ಜಿಮ್ನಾಸ್ಟಿಕ್ಸ್ ಟೀಮಿನ ಕ್ರೀಡಾಪಟುಗಳ ಮೇಲೆ ಲೈಂಗಿಕ ಶೋಷಣೆ ನಡೆಸಿದ್ದ ಕೋಚ್ ಆದ ಲ್ಯಾರಿ
ನಸ್ಸಾರ್ ವಿಚಾರಣೆಯಲ್ಲಿಯೂ ಈ ಏಳು ವೈಧಾನಿಕ ತೊಡಕುಗಳು ಢಾಳಾಗಿ ಕಂಡು ಇದೇ ಸೆಪ್ಟೆಂಬರ್ ೧೫ರಂದು ಅಮೇರಿಕದ
ಸಂಸತ್ತಿನಲ್ಲಿ ಶೋಷಣೆಗೊಳಗಾದ ಕ್ರೀಡಾಪಟುಗಳನ್ನು ಕರೆಸಿ ಮಾತನಾಡಿಸಿದ್ದಾರೆ. ಶೋಷಣೆಗೊಳಗಾಗಿದ್ದ ಮಕೇಲಾ ಮರೋನಿ,
ಮತ್ತು ಸಿಮೋನ್ ಬೈಲ್ಸ್ ಸಂಸತ್ತಿನಲ್ಲಿ ಹೇಳಿಕೆ ನೀಡಿ ಹೇಗೆ ಈ ವಿಚಾರಣೆ ಜಡಸ್ಥ ಪದ್ಧತಿಗಳ ದೆಸೆಯಿಂದ ಆರೋಪಿಯು ತನ್ನ
ಶೋಷಣೆಯನ್ನು ಮತ್ತಷ್ಟು ಕಾಲ ನಡೆಸಲು ಸಹಕಾರಿಯಾಯಿತು ಎಂದು ತಿಳಿಸಿದ್ದಾರೆ.
ಜಿಮ್ನಾಸ್ಟಿಕ್ಸ್ ಎಂದರೆ ಸಾಮಾನ್ಯವಾಗಿ ಹದಿಹರೆಯದ ಯುವತಿಯರು ಕನಿಷ್ಠ ಬಟ್ಟೆ ತೊಟ್ಟು ಮಾಡುವ ಕಸರತ್ತುಗಳು. ಇಲ್ಲಿ
ತರಬೇತುದಾರರು ಈ ಸ್ಪರ್ಧಾಳುಗಳನ್ನು ದೈಹಿಕವಾಗಿ ಮುಟ್ಟಿ, ತಟ್ಟಿ, ಎತ್ತಿ, ಇಳಿಸಿಯೇ ಕಲಿಸಬೇಕಾದಂತಹ ವ್ಯವಸ್ಥೆಯಿರುತ್ತದೆ.
ಇದು ಈ ಆಟದ ಮೂಲಭೂತ ಸ್ವರೂಪ. ಈ ದೈಹಿಕ ಮುಟ್ಟುವಿಕೆಯಲ್ಲಿ ಸುರಕ್ಷಿತ ಮತ್ತು ಅಸುರಕ್ಷಿತ ಎಂಬ ಸೂಕ್ಷ್ಮ
ಸ್ಪರ್ಶಗಳಿರುತ್ತವೆ. ಇದನ್ನು ಸ್ಪರ್ಷಣೆಗೊಳಗಾದವರು ತಕ್ಷಣಕ್ಕಲ್ಲವಾದರೂ ಕ್ರಮೇಣವಾಗಿ ಅರಿತುಕೊಳ್ಳುತ್ತಾರೆ. ಈ ಸ್ಪರ್ಶ
ಕ್ರಮೇಣ ಲೈಂಗಿಕಾಸಕ್ತಿಯ ಸಂದೇಶವಾಗಿ ನಂತರ ಹಲವಾರು ಶೋಷಣೆಗಳಿಗೆಡೆ ಮಾಡಿಕೊಡುತ್ತದೆ. ಹೀಗೆ ಆರಂಭಗೊಂಡಿದ್ದ ಕೋಚ್
ನಸ್ಸಾರ್ ಹಲವಾರು ಸ್ಪರ್ಧಾಳುಗಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದನು. ಈ ಕುರಿತು ದೂರು ಬಂದಾಗ ತಕ್ಷಣಕ್ಕೆ ನ್ಯಾಯ
ನಿರ್ಧರಿಸಲಾಗದೆ ಉಂಟಾದ ವಿಳಂಬವು ಆ ಕೋಚ್ ಮತ್ತಷ್ಟು ಯುವತಿಯರನ್ನು ಶೋಷಿಸಲು ಕಾಲಾವಕಾಶ ಮಾಡಿಕೊಟ್ಟಿತ್ತು
ಎಂದು ನಂತರ ಸಾಬೀತಾಯಿತು. ಆ ವಿಳಂಬವನ್ನು ಅರಿತು ಸರಿಯಾದ ಕ್ರಮಗಳನ್ನು ಕಾನೂನಿನಲ್ಲಿ ಅಳವಡಿಸಲು ಅಮೇರಿಕನ್ ಸೆನೆಟ್
ಈ ಯುವತಿಯರನ್ನು ಸೆನೆಟ್ಟಿಗೆ ಕರೆಸಿ ಮಾಹಿತಿ ಮತ್ತು ಸಲಹೆಗಳನ್ನು ಪಡೆದುಕೊಂಡಿತು. ಇಂತಹ ತ್ವರಿತ ಕ್ರಮಗಳು ಅಮೆರಿಕದಲ್ಲಿ
ತಕ್ಕ ಮಟ್ಟಿಗೆ ಈ ಜ್ವಲಂತ ಸಮಸ್ಯೆಗೆ dynamic ಪರಿಹಾರವನ್ನು ಕಂಡುಕೊಳ್ಳಲು ಸಹಕಾರಿಯಾಗಿವೆ.
ಇನ್ನು ಲೈಂಗಿಕ ದೌರ್ಜನ್ಯ ಎಂದರೆ ಅದು ಗಂಡು ಹೆಣ್ಣಿನ ನಡುವೆ ಮಾತ್ರ ಎಂದೇಕೆ ಅಂದುಕೊಳ್ಳಬೇಕು?
ಸಲಿಂಗ ಕಾಮದ ಕುರಿತು ವಾತ್ಸಾಯನ ಸಹ ಬರೆದಿದ್ದಾನೆ. ಅಂದಿನ ಸನಾತನ ಧರ್ಮ ಒಪ್ಪಿಕೊಂಡಿದ್ದ ಸಲಿಂಗ ಕಾಮ, 2021ರ ಸನಾತನ
ಧರ್ಮದ ವ್ಯಾಖ್ಯಾನದಲ್ಲಿ ಏಕೆ ವಿಭಿನ್ನವಾಗಿ ಬಿಂಬಿಸಿ ಅಪರಾಧವೆನಿಸುತ್ತಿದೆ? ಸಲಿಂಗ ಲೈಂಗಿಕ ದೌರ್ಜನ್ಯದ ಆಯಾಮದ ಕುರಿತು ನಮ್ಮ
ವಿಶ್ಲೇಷಣಾ ವಿಧಾನಗಳು ಏನು ಹೇಳುತ್ತವೆ?
ಕೆಲವು ಕಾನೂನುಗಳ ಕಪಿಮುಷ್ಟಿಯಿಂದ ಅತ್ಯಾಚಾರ ಮಾಡದ, ಆದರೆ ಆರೋಪಕ್ಕೊಳಗಾದವ ಕೂಡ ಅತ್ಯಾಚಾರಿಯಾಗಿ ಶಿಕ್ಷೆಗೆ
ಗುರಿಯಾಗುವ ಅವಕಾಶಗಳು ಹೆಚ್ಚಿವೆ. ಉದಾಹರಣೆಗೆ ಸಮಾಜದ ಕಟ್ಟುಪಾಡುಗಳ ಉಲ್ಲಂಘನೆಗೊಳಗಾಗಿ ಪ್ರೇಮಿಗಳು ಸಿಕ್ಕಿಬಿದ್ದಾಗ
ಹುಡುಗಿ ನಿರ್ಭಾವುಕವಾಗಿ ತನ್ನ ಪ್ರಿಯತಮನನ್ನು "ಅಣ್ಣಾ" ಎಂದುಬಿಡುವ ಸಾಕಷ್ಟು ಪ್ರಕರಣಗಳನ್ನು ನೀವೆಲ್ಲರೂ ಕೇಳಿಯೇ
ಇರುತ್ತೀರಿ. ನಂತರ ಉಂಟಾಗುವ ಸಾಮಾಜಿಕ ನ್ಯಾಯದಲ್ಲಿ ಆ ಪ್ರೇಮಿ ಸಮಾಜದ ಕಣ್ಣಿಗೆ ಶಾಶ್ವತ ಲೈಂಗಿಕ ದೌರ್ಜನ್ಯದ ಅಪರಾಧಿ
ಎನಿಸಿಬಿಡುತ್ತಾನಲ್ಲವೇ! ಒಂದು ವೇಳೆ ಅವನು ನನ್ನ ಪ್ರೇಮಿ ಎಂದು ಸತ್ಯವನ್ನು ಹೇಳಿದ್ದರೆ...ಈ ಸಮಾಜ ಅವರ ಮದುವೆ
ಮಾಡಿಸುತ್ತಿತ್ತು ಇಲ್ಲವೇ ಆಕೆಯನ್ನು ಶಾಶ್ವತವಾಗಿ ವೇಶ್ಯೆ ಎಂದುಬಿಡುತ್ತಿತ್ತು.
ಆಕೆ ನಿಜ ಹೇಳುವಂತಹ ಸಾಮಾಜಿಕ ರಚನೆ ನಮ್ಮಲ್ಲಿನ್ನೂ ಸೃಷ್ಟಿಯಾಗಿಲ್ಲದಿರುವುದೇ ಈ ಎಲ್ಲಾ ಅವಘಡಗಳಿಗೆ ಮುಖ್ಯ ಕಾರಣ!
ಇದೆಲ್ಲದನ್ನೂ ಮೀರಿ ಕೆಲವು ಮಹಿಳೆಯರೇ ಖುದ್ದು ಪುರುಷರನ್ನು ಲೈಂಗಿಕವಾಗಿ ಬಳಸಿಕೊಂಡು ಮಹಿಳಾ ದೌರ್ಜನ್ಯದ
ಕಾನೂನುಗಳನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣಗಳನ್ನು ನಾವೆಲ್ಲರೂ ಸಾಕಷ್ಟು ನೋಡಿದ್ದರೂ ಅವು ದೌರ್ಜನ್ಯದ
ಅಧ್ಯಯನಗಳಲ್ಲಿ ಅಷ್ಟಾಗಿ ದಾಖಲಾಗಿಲ್ಲ, ಚರ್ಚೆಯಾಗಿಲ್ಲ! ಅಂತಹ ಪ್ರಕರಣಗಳನ್ನು ಚರ್ಚಿಸಿದರೆ ಮಹಿಳಾ ಸಬಲೀಕರಣದ
ಹೋರಾಟಕ್ಕೆ ಎಲ್ಲಿ ಅಡ್ಡಿಯುಂಟಾಗಿಬಿಡುತ್ತದೆ ಎಂಬ ಪೂರ್ವಾಗ್ರಹದ ದಿಗಿಲು ಹೋರಾಟಗಾರರಲ್ಲಿ ಸಾಕಷ್ಟಿದೆ. ಇದಕ್ಕೆ ಪ್ರಮುಖ
ಕಾರಣವೆಂದರೆ ಎಲ್ಲಿ ಪುರುಷಶಾಹಿ ಸಮಾಜ ಪ್ರತಿಯೊಂದು ದೌರ್ಜನ್ಯದ ಪ್ರಕರಣಗಳನ್ನು ಇಂತಹ ಪೂರ್ವಾಗ್ರಹಕ್ಕೆ
ಒಳಪಡಿಸಿಬಿಡುತ್ತದೋ ಎಂಬ ಆತಂಕ ಕಾರಣವಾಗಿದೆ. ಇದೊಂದು ರೀತಿಯ ದ್ವಂದ್ವಗಳ ಗೊಂದಲ.
ಇನ್ನು ಇದೇ ಕಾನೂನುಗಳ ಇನ್ನೊಂದು ಮುಖವನ್ನು ನೋಡೋಣ:
ವ್ಯಾಟಿಕನ್ ಚರ್ಚಿನ ಮಾಜಿ ಕಾರ್ಡಿನಲ್ ಟೆಡ್ ಮ್ಯಾಕ್ ಕಾರಿಕ್ 50 ವರ್ಷಗಳ ಹಿಂದೆ ಬಾಲಕನೊಬ್ಬನನ್ನು ಶೋಷಿಸಿದ್ದಕ್ಕೆ ಇತ್ತೀಚೆಗೆ
ದೂರು ದಾಖಲಾಗಿ ಶಿಕ್ಷೆಗೊಳಗಾಗಿದ್ದಾರೆ. ಅದೇ ರೀತಿ ಅಮೆರಿಕಾದ ಖ್ಯಾತ ನಟ ಬಿಲ್ ಕಾಸ್ಬಿ ಹಲವು ಕನ್ಯೆಯರನ್ನು ಹಲವಾರು
ದಶಕಗಳ ಹಿಂದೆ ಶೋಷಿಸಿದ್ದು ಇತ್ತೀಚೆಗೆ ಕೇಸ್ ದಾಖಲಾಗಿ, ಅಪರಾಧ ಸಾಬೀತಾಗಿ ಜೈಲು ಪಾಲಾಗಿದ್ದಾನೆ.
ಬಿಲ್ ಕಾಸ್ಬಿ ಒಬ್ಬ ಖ್ಯಾತ ನಟ. ಈತ ಅನೇಕ ಆದರ್ಶ ಮಾದರಿ ವ್ಯಕ್ತಿತ್ವದ ಪಾತ್ರಗಳಲ್ಲಿ ನಟಿಸಿ ಯಶಸ್ವಿಯಾಗಿದ್ದಲ್ಲದೆ, ಸಾಕಷ್ಟು
ಅಮೆರಿಕನ್ನರಿಗೆ ಆದರ್ಶ ಪುರುಷನಾಗಿದ್ದನು. ಒಬ್ಬ ಆದರ್ಶ ಶಿಕ್ಷಕ, ಆದರ್ಶ ತಂದೆ, ಆದರ್ಶ ಪತಿ, ಆದರ್ಶ ನಾಗರಿಕ...ಹೀಗೆಲ್ಲ
ಎಲ್ಲೆಲ್ಲಿ ಆದರ್ಶ ಎನ್ನುವಂತಹ ವ್ಯಕ್ತಿತ್ವ ಬೇಕೆನಿಸುವುದೋ ಅದೆಲ್ಲದಕ್ಕೂ ಬಿಲ್ ಕಾಸ್ಬಿ ಆದರ್ಶವೆನಿಸಿಬಿಟ್ಟಿದ್ದ. ಅಂತಹ ಬಿಲ್
ಕಾಸ್ಬಿ ನಿವೃತ್ತಿ ಹೊಂದಿ ಹಾಯಾಗಿದ್ದಾಗ ಅವನು ನಡೆಸಿದ್ದ ಲೈಂಗಿಕ ಶೋಷಣೆಯ ಒಂದು ಕೇಸ್ ದಾಖಲಾಯಿತು. ಅದು
ದಾಖಲಾಗುತ್ತಿದ್ದಂತೆಯೇ ಒಂದರ ಹಿಂದೆ ಒಂದರಂತೆ ಅನೇಕ ಕೇಸುಗಳು ದಾಖಲಾಗುತ್ತಾ ಸಾಗಿದವು. ಹಲವಾರು ದಶಕಗಳ ಹಿಂದೆ
ನಡೆದಿದ್ದ ಈ ಎಲ್ಲಾ ಪ್ರಕರಣಗಳನ್ನು ಈಗ ದುಡ್ಡಿನ ಆಸೆಗೆ ಅವನನ್ನು ಶೋಷಿಸಲು ದಾಖಲಾಗುತ್ತಿವೆ ಎಂದು ಸಾಕಷ್ಟು ಜನ
ಅವನನ್ನು ಬೆಂಬಲಿಸಿದರು. ಕಡೆಗೆ ಯಾವಾಗ ಒಂದೊಂದೇ ಪ್ರಕರಣಗಳು ಸಾಬೀತಾಗುತ್ತಾ ಸಾಗಿದವೋ ಆಗ ಈ ಆದರ್ಶ ಪುರುಷನ
ಆದರ್ಶ ಸಾಮ್ರಾಜ್ಯ ನಶಿಸಿಹೋಯಿತು.
ಈ ಪ್ರಕರಣದಿಂದ ಸ್ಫೂರ್ತಿಗೊಂಡೇ ವಿಶ್ವಾದ್ಯಂತವಲ್ಲದೆ ಭಾರತದಲ್ಲಿ ಸಹ MeToo ಮತ್ತು Casting Couch ಅಭಿಯಾನಗಳು
ಶುರುವಾದದ್ದು ಎಂಬುದು ಗಮನಿಸಬೇಕಾದ ಅಂಶ.
ಆದರೆ ಇಂತಹ ಪ್ರಕರಣಗಳನ್ನು ನಿಭಾಯಿಸುವ ಕಾನೂನು ಭಾರತದಲ್ಲಿದೆಯೇ?
ಕ್ರಿಮಿನಲ್ ಪ್ರೋಸಿಜರ್ ಕೋಡ್ CrPC ಸೆಕ್ಷನ್ 468 ಪ್ರಕಾರ ಗರಿಷ್ಠ ಮೂರು ವರ್ಷ ಶಿಕ್ಷೆಯಾಗುವಂತಹ ಅಪಾರಾಧದ ಲೈಂಗಿಕ
ಶೋಷಣೆ ದೂರನ್ನು ಮೂರು ವರ್ಷಗಳೊಳಗೆ ದಾಖಲಿಸಬೇಕು. ಅದೇ ದಂಡ ಕಟ್ಟುವಂತಹ ಲೈಂಗಿಕ ಅಪರಾಧವಾಗಿದ್ದರೆ ಅದು ಆರು
ತಿಂಗಳೊಳಗೆ ದಾಖಲಾಗಬೇಕು. ಅದಕ್ಕಿಂತ ಹೆಚ್ಚಿನ ಕಾಲವಾಗಿದ್ದರೆ ಅದು ಪೋಕ್ಸೋ POCSO ಖಾಯ್ದೆ ಅನ್ವಯ
ದಾಖಲಾಗಬೇಕಾಗುತ್ತದೆ. ಹೆಚ್ಚಿನ ಕಾಲಾವಕಾಶ ಬೇಕಾದಂತಹ ಲೈಂಗಿಕ ಶೋಷಣೆಗೆ ಪೋಕ್ಸೋ ಕಾಯ್ದೆಯಲ್ಲಿ ತಿದ್ದುಪಡಿಯನ್ನು
2012ರಲ್ಲಿ ತರಲಾಯಿತು. ಆದರೆ ಈ ಕೇಸುಗಳನ್ನು ಸಾಬೀತು ಮಾಡಲು ಸಾಕ್ಷ್ಯಾಧಾರಗಳನ್ನು ಹೊಂದಿಸುವುದು ಕಷ್ಟ ಸಾಧ್ಯವೇ ಸರಿ.
ಇನ್ನು ಶಿಕ್ಷೆಯಾಗುವುದು ಸಹ ಕಷ್ಟಸಾಧ್ಯ. ಹಾಗಾಗಿಯೇ MeToo ಮತ್ತು Casting Couch ಅಭಿಯಾನಗಳು ಕೇವಲ ಸುದ್ದಿ ಮಾಡಿ
ಹೋದವೇ ಹೊರತು ಕಾನೂನು ಕ್ರಮಗಳು ಜರುಗಿದ್ದು ಅಷ್ಟಕ್ಕಷ್ಟೇ! ಶೈಕ್ಷಣಿಕ ಪ್ರಗತಿ, ಉದ್ಯೋಗಾವಕಾಶ, ಔದ್ಯೋಗಿಕ ಉನ್ನತಿ,
ಜನಪ್ರಿಯ ಪ್ರಭಾವಿ ರಂಗಗಳಲ್ಲಿನ ಅವಕಾಶ, ಕ್ರೀಡೆ, ಸಿನೆಮಾ, ರಾಜಕಾರಣ, ಸಾಹಿತ್ಯ ಇನ್ನಿತರೆ ಅವಕಾಶಗಳಿಗಾಗಿ
ಶೋಷಣೆಗೊಳಗಾಗುವುದು ಯಾ ಒಪ್ಪಿತ ಒಡಂಬಡಿಕೆಗೊಳ್ಳುವುದು ಸಹ ಲೈಂಗಿಕ ದೌರ್ಜನ್ಯಗಳೇ ಆಗಿವೆ. ಆದರೆ ಇವುಗಳನ್ನು
ಯಶಸ್ವಿಯಾಗಿ ದೂರುಗಳಾಗಿಸಿ ವಿಚಾರಣೆಗೊಳಗಾಗಿಸುವ ಸಮರ್ಥ ಕಾನೂನುಗಳು ಎಷ್ಟು ಸಮರ್ಥವಾಗಿವೆ ಎಂಬುದು ಚಿಂತನಾರ್ಹ.
ಹಾಗೆಯೇ ಎಲ್ಲಾ ವೈಧಾನಿಕಗಳ ಮೇಲೆ ಕಾನೂನಿನ ನಿಯಮಗಳೂ ಪ್ರಭಾವಿಸಿವೆ.
ಜಾಗತಿಕ ಲೋಕದ ಈ ವಿದ್ಯಮಾನಗಳನ್ನು ಮತ್ತು ವೈಧಾನಿಕತೆಯ ತೊಡಕುಗಳ ಪ್ರಸ್ತುತಿ ಮತ್ತು ಸ್ವರೂಪಗಳು ಹೇಗೆ ನಮಗೆ
ನಮ್ಮದೇ ಆದ ಪ್ರಾದೇಶಿಕ ವೈಧಾನಿಕತೆಯ ತೊಡಕುಗಳನ್ನು ಗುರುತಿಸುವಲ್ಲಿ ಮತ್ತು ವಿಶ್ಲೇಷಿಸುವಲ್ಲಿ ಸಹಾಯಕಾರಿ ಎಂಬುದನ್ನು
ಮನಗಾಣಬೇಕು. ಇವುಗಳು ಕೇವಲ ತೋರುಗಂಬಗಳೇ ಹೊರತು ಇದೇ ನಿಶ್ಚಿತ ನಿರ್ಧರಿತ ಪರಿಹಾರಗಳಲ್ಲ. ಆಯಾಯ ಪರಿಸರ ಮತ್ತು
ಸಂಸ್ಕೃತಿಗನುಗುಣವಾಗಿ ವೈಧಾನಿಕತೆಯ ತೊಡಕುಗಳಿರುತ್ತವೆ. ಅವುಗಳನ್ನು ಗುರುತಿಸಲು ಈ ಮೇಲಿನ ವೈಧಾನಿಕ ತೊಡಕುಗಳು,
ಘಟನೆಗಳು ಮತ್ತು ಮಹಿಳಾ ಧರ್ಮಸೂಕ್ಷ್ಮಗಳು ಮಾರ್ಗದರ್ಶನ ನೀಡುವಲ್ಲಿ ಖಂಡಿತ ಸಹಾಯಕಾರಿ.
ಒಟ್ಟಾರೆ ಬದಲಾವಣೆ ಜಗದ ನಿಯಮ ಎಂಬ ಸಿದ್ಧಾಂತಕ್ಕನುಗುಣವಾಗಿ ಎಲ್ಲಾ ವೈಧಾನಿಕಗಳ ಜಡತ್ವವನ್ನು ಕೊಡವಿ ತುರ್ತಾಗಿ
ಚಲನಶೀಲಗೊಳಿಸಬೇಕಿದೆ. ಇಲ್ಲದಿದ್ದರೆ ಬದಲಾಗುವ ಜಗತ್ತಿನಲ್ಲಿ ನಮ್ಮ ಪ್ರಸ್ತುತಿ ಮತ್ತು ಅಸ್ತಿತ್ವವನ್ನು ಕಳೆದುಕೊಂಡುಬಿಡುತ್ತೇವೆ.
ರವಿ ಹಂಜ್
ಜೀವ ವಿಜ್ಞಾನ ಆಡಳಿತ ತಜ್ಞ,
ಶಿಕಾಗೋ, ಯು. ಎಸ್.ಎ.
ravihanj@gmail.com
No comments:
Post a Comment