ಭಾರತದಲ್ಲಿ ಹುಟ್ಟಿದ ಕಾರಣ, ಮತ್ತಲ್ಲಿ ಹುಟ್ಟಿನಿಂದ ಜಾತಿ ಜಾರಿ ಇರುವ ಕಾರಣ ನನಗೂ ಜನರು ಜಾತಿಯನ್ನು ಅಂಟಿಸಿದ್ದರು. ಅಲ್ಲದೆ ಇಂದು ಯಾರಿಗೆ ಜಾತಿನಿಂದನೆ ಕೇಸು ದಾಖಲಿಸುವ ಹಕ್ಕಿದೆಯೋ ಅವರಿಂದಾದಿಯಾಗಿ ಎಲ್ಲಾ ಜಾತಿಯವರಿಂದಲೂ ಜಾತಿನಿಂದನೆಯನ್ನು ನಾನು ಅನುಭವಿಸಿದ್ದೇನೆ. ಇಂತಹ ಜಾತಿನಿಂದನೆ ಕಾರಣವಾಗಿ ಜಾತಿಯನ್ನು ನಾಶ ಮಾಡಬೇಕೆಂಬ ಚಿಂತಕರ ಚಿಂತನೆಯನ್ನು ನಾನು ಪ್ರೌಢಶಾಲೆಯಲ್ಲಿದ್ದಾಗಲೇ ಗಾಢವಾಗಿ ಅಪ್ಪಿಕೊಂಡು ಕೊರಳಲ್ಲಿದ್ದ ಜಾತಿಸೂಚಕ ಚಿಹ್ನೆಯನ್ನು ಕಿತ್ತು ಗಿರಗಿರನೆ ತಿರುಗಿಸಿ ಎಸೆದಿದ್ದೇನೆ. ಅದಕ್ಕಾಗಿ ನಮ್ಮಪ್ಪನಿಂದ ಸಾಕಷ್ಟು ಚಿತ್ರಹಿಂಸೆ ಅನುಭವಿಸಿದರೂ ಅಂದು ಎಸೆದ ಆ ಚಿಹ್ನೆಯನ್ನು ಈವರೆಗೆ ಧರಿಸಿಲ್ಲ.
"ಓ ನನ್ನ ಚೇತನ ಆಗು ನೀ ಅನಿಕೇತನ" ಎಂಬ ವಿಶ್ವಮಾನವ ಪ್ರಜ್ಞೆಗೆ ಅನುಗುಣವಾಗಿ ಅಮೇರಿಕಾದಲ್ಲಿರುವ ಯಾವುದೇ ಭಾಷೆ, ಜಾತಿ, ಧಾರ್ಮಿಕ ಸಂಘಗಳ ಸದಸ್ಯತ್ವವನ್ನು ತೆಗೆದುಕೊಂಡಿಲ್ಲ. ಸಾಹಿತ್ಯಿಕ ಆಸಕ್ತಿ ಇದ್ದರೂ ಇಲ್ಲಿನ ಕನ್ನಡ ಸಾಹಿತ್ಯ ರಂಗ ಎನ್ನುವ ಸಾಹಿತ್ಯಿಕ(?) ಗುಂಪನ್ನೂ ಸೇರಿಲ್ಲ. ಒಂದೆರಡು ಸಂಘಗಳ ಕಾರ್ಯಕ್ರಮಗಳಿಗೆ ಮನರಂಜನೆಗಾಗಿ ಹೋಗಿದ್ದೇನಷ್ಟೇ.
ಇನ್ನು ಯಾವುದೇ ಮಾಧ್ಯಮದಲ್ಲಿ ಈವರೆಗೆ ನಾನು ಹುಟ್ಟಿದ ಜಾತಿಯ ಕುರಿತಾಗಿ ಯಾವುದೇ ಸಕಾರಾತ್ಮಕ ಭಾವನೆಯ ಬರಹ, ಪೋಸ್ಟ್ ಹಾಕಿಲ್ಲ. ಹಿಂದೆ ಒಬ್ಬರು ನನ್ನ ಹುಟ್ಟಿನ ಜಾತಿಯನ್ನು ಹೆಕ್ಕಿ ನನ್ನ ಪುಸ್ತಕಕ್ಕೆ ಖ್ಯಾತನಾಮರು ಬರೆದ ಮುನ್ನುಡಿ ಅವರು ಬರೆದದ್ದಲ್ಲ ಎಂದು ಹಬ್ಬಿಸಿದಾಗ, ಹೌದು ನಾನೊಬ್ಬ ಕಾಳಾಮುಖ ಜಂಗಮ. ನನ್ನ ಪುಸ್ತಕದ ಮುನ್ನುಡಿಯನ್ನು ಆ ಖ್ಯಾತನಾಮರು ಬರೆದಿಲ್ಲ ಎಂದು ಪುರಾವೆ ಸಮೇತ ಸಾಬೀತು ಮಾಡಿದರೆ ನಾನು ನನ್ನ ಲಿಂಗರೂಪಿ ಅಂಗವನ್ನು ಕತ್ತರಿಸಿಕೊಳ್ಳುವೆ. ತಪ್ಪಿದರೆ ನೀವು ಕತ್ತರಿಸಿಕೊಳ್ಳುವಿರಾ? ಎಂದು ಕಾಳಾಮುಖರಂತೆ ಸವಾಲು ಹಾಕಿದ್ದು ಬಿಟ್ಟರೆ ಮತ್ತೆಂದೂ ಆ ಕುರಿತು ಬರೆದಿಲ್ಲ.
ನಾನು ಬರೆಯಲು ಆರಂಭಿಸಿದ ನಂತರ ಪರಿಚಿತರಾದ
ಭಾರತದ ಅನೇಕ ಉದಾರವಾದಿ, ಪ್ರಗತಿಪರ ಸ್ನೇಹಿತೆ/ತರು ನನ್ನ ಹುಟ್ಟಿನ ಜಾತಿಯ ಹುಡುಕಿ ತೆಗೆದು ನನ್ನನ್ನು ಜಾತಿ ಹಿಡಿದು ನಾಜೂಕಾಗಿ ಆಗಾಗ್ಗೆ ನಿಂದಿಸುತ್ತಲೇ ಇದ್ದಾರೆ. ಮೊನ್ನೆ ಸಹ ಇಂತಹದೇ ಉದಾರಜೀವಿ ಆಲಿಬಾಬಾ ಸ್ನೇಹಿತ ತನ್ನ ೪೦ ಚೋರರನ್ನು ಒಗ್ಗೂಡಿಸಿ ಜಾತಿನಿಂದನೆ ಮಾಡಿದ್ದ.
ಇತ್ತೀಚೆಗೆ ಏನನ್ನಾದರೂ ತಾರ್ಕಿಕವಾಗಿ ಪ್ರಶ್ನಿಸಿದರೆ ಸಾಕು ಪಂಥೋಗ್ರರಂತೆ ಜಾತಿ ಮೂಲದ ವಂಶಾವಾಹಿಯನ್ನು ಜಾಲಾಡುವ ಉಗ್ರವಾದ ಎಲ್ಲೆಡೆ ಸಾಂಕ್ರಾಮಿಕವಾಗಿ ಹರಡುತ್ತಿದೆ.
ಭಾರತದಲ್ಲಿ ನನ್ನ ಹಿತಾಸಕ್ತಿ ವಿಷಯಗಳು (ಸ್ವಯಾರ್ಜಿತ ಮನೆ, ತೋಟ, ಇತ್ಯಾದಿ ಆಸ್ತಿಗಳು) ಇರುವ ಕಾರಣ, ಅಲ್ಲಿನ ಈ ನವವಾತಾವರಣಕ್ಕೆ ತಕ್ಕಂತೆ ನನ್ನ ಹುಟ್ಟಿನ ಜಾತಿಯ ಕುರಿತಾಗಿ ಭಾವನೆಗಳನ್ನು ಬೆಳೆಸಿಕೊಳ್ಳುವುದನ್ನು ಗತ್ಯಂತರವಾಗಿ ಭಾರತೀಯ ಸಾಂವಿಧಾನಿಕ ಸಮಾಜಕ್ಕಾಗಿ ನಾನು ಪಿತ್ರಾರ್ಜಿತವಾಗಿ ಹೇರಿಕೊಳ್ಳಬೇಕಿದೆ.
ಆ ಹೇರಿಕೆಯ ಕಾರಣವಾಗಿ ನನ್ನ ಹುಟ್ಟಿನ ಜಾತಿಯ ಬಗ್ಗೆ ನಾನು ಕಂಡುಕೊಂಡದ್ದು:
೧. ಕರ್ನಾಟಕ ಸಾಮ್ರಾಜ್ಯ ಸ್ಥಾಪನೆಗೆ ಪ್ರಮುಖ ಕೊಡುಗೆ ನೀಡಿದವರು ಕಾಳಾಮುಖ ಜಂಗಮರು ಯಾನೆ ವೀರಶೈವ ಜಂಗಮರು. ಜಂಗಮ ಕ್ರಿಯಾಶಕ್ತಿ ಕರ್ನಾಟಕ ಸಾಮ್ರಾಜ್ಯದ ರಾಜಗುರುವೂ ಆಗಿದ್ದ.
(Ref: Founders of Vijayanagara, S. Srikantaya)
೨. ಶೈವ ಪಂಥ ಪ್ರಸಾರಕ್ಕೆ ದೇಶಾದ್ಯಂತ ಕೇದಾರದಿಂದ ಶ್ರೀಶೈಲದವರೆಗೆ ಮಠಗಳನ್ನು ಕಟ್ಟಿದವರು ಜಂಗಮರು.
೩. ಪಂಥಕ್ಕೊಡ್ಡಿದ ಸವಾಲುಗಳಲ್ಲಿ ಕೈ, ಕಾಲು, ರುಂಡಗಳನ್ನು ಕಡಿದುಕೊಂಡು ಶೈವಪಂಥವನ್ನು ಬೆಳೆಸಿದವರು ಜಂಗಮರು.
೪. ದಕ್ಷಿಣಾಚಾರ ಎಂಬ ಕಲಾಪ್ರಕಾರವನ್ನು ಹುಟ್ಟುಹಾಕಿ ಕರ್ನಾಟಕದ ಶಿಲ್ಪಕಲೆಗೆ ಮಾನ್ಯತೆ ತಂದುಕೊಟ್ಟವರು ಇದೇ ಕಾಳಾಮುಖ ಜಂಗಮರು.
(ದಕ್ಷಿಣಾಚಾರವೇ ಅಪಭ್ರಂಶಗೊಂಡು ಜಕಣಾಚಾರವಾಗಿ ಮುಂದೆ ಜಕಣಾಚಾರಿ ಎಂಬ ಕಾಲ್ಪನಿಕ ವ್ಯಕ್ತಿಯಾಗಿ ಈಗ ಆತನ ಹೆಸರಿನ ಜಯಂತಿ ಸಹ ಆಗಿದೆ).
೫. ಕಾಳಾಮುಖ ಜಂಗಮರ ಪ್ರಭಾವದಿಂದ ಸಾಮ್ರಾಜ್ಯ ವಿಸ್ತರಿಸಿದ ಚೋಳರು ತಮ್ಮ ಪ್ರಮುಖ ಯುದ್ಧದ ಹಡಗಿಗೆ ಕಾಳಾಮುಖ ಎಂದು ಹೆಸರಿಸಿ ಇವರನ್ನು ಆದರಿಸಿದ್ದರು.
೬. ಪಾಲ್ಕುರಿಕೆ ಸೋಮನಾಥ, ಹರಿಹರನ ಕಟ್ಟುಕಥೆಯ ಪುರಾಣ/ರಗಳೆಗಳಾಚೆ ಶಿಲಾಶಾಸನಗಳ ಪ್ರಕಾರ ಬಸವಣ್ಣ, ವೀರ ಮಾಹೇಶ್ವರ ಜಂಗಮ ಪುರುಷ.
(ಅರ್ಜುನವಾಡ ಶಿಲಾಶಾಸನ - ಮಧುರಚೆನ್ನ, ಮುನವಳ್ಳಿ ಶಿಲಾಶಾಸನ - David Lorenzen)
೭. ಅಲ್ಲಮಪ್ರಭು ತನ್ನನ್ನು ತಾನೇ "ನೀವೆನ್ನ ವಂಶೀಭೂತರಾದ ಕಾರಣ_ನಿಮ್ಮ ಹೆಚ್ಚು ಕುಂದು ಎನ್ನದಾಗಿ..." ಎಂದು ಜಂಗಮರ ಕುರಿತಾದ ವಚನದಲ್ಲಿ ತಾನು ಜಂಗಮ ಎಂದು ಹೇಳಿಕೊಂಡಿದ್ದಾನೆ.
೮. ಮುಗಿದೇಹೋಯಿತು ಎನ್ನುವ ಕಾಲಘಟ್ಟದಲ್ಲಿ ಪಂಥವನ್ನು ಪ್ರವರ್ಧಮಾನಕ್ಕೆ ತಂದ ಎಡೆಯೂರು ಸಿದ್ದಲಿಂಗೇಶ್ವರರು ಜಂಗಮರು. ಬರಡು ಪ್ರದೇಶಕ್ಕೆ ತೆಂಗು ಪರಿಚಯಿಸಿ ತೋಂಟದಾರ್ಯ ಎಂದಾದವರು ನನ್ನ ವಂಶೀಭೂತರು.
.
.
.
.
ಪಟ್ಟಿ ಬಹುದೊಡ್ಡದಿದೆ!
ಆದರೆ ನನಗಾಗಲಿ ನನ್ನ ವಂಶೀವರ್ತಮಾನ, ವಂಶೀಭವಿಷ್ಯಕ್ಕಾಗಲಿ ಇದು ನಮ್ಮ ಪರಂಪರೆ ಎಂಬುದನ್ನು ಬಿಟ್ಟರೆ ಇನ್ಯಾವುದೇ "ವಿಶೇಷಣ"ಗಳ ಲಾಭವಿಲ್ಲ.
ಹಾಗಾಗಿ ಇದರಿಂದ ನನ್ನ ಕಾಲರ್ ಮೇಲಕ್ಕೇರುವುದೂ ಇಲ್ಲ, ಪ್ಯಾಂಟು ಉದುರುವುದೂ ಇಲ್ಲ!
ಆದರೆ ಇಂತಿಪ್ಪ ವೀರಮಾಹೇಶ್ವರ ಜಂಗಮರು ಬಲಿದಾನ ನೀಡಿ ಉಳಿಸಿ ಬೆಳೆಸಿದ ಪಂಥದ ಕೆಲವು ಅರಿವುಗೇಡಿ ಫಲಾನುಭವಿಗಳು ಈಗ ವೀರಶೈವ ಬೇರೆ, ಲಿಂಗಾಯತ ಬೇರೆ ಎನ್ನುವ ನಿರಾಧಾರಿ ಪಂಥೋಗ್ರರಾಗಿ, "ಜಂಗಮರು ಪಂಪೀಗಳು. ಅವರನ್ನು ಹೊರಹಾಕಿ. ಅವರಿಗೆ ಉದ್ಯೋಗ ಕೊಡಬೇಡಿ, ಅವರ ಬಳಿ ವ್ಯವಹಾರ ಮಾಡಬೇಡಿ, ಊರಲ್ಲಿ ಯಾವುದಕ್ಕೂ ಸೇರಿಸಬೇಡಿ. ಅವರನ್ನು ಬೆಳಿಗ್ಗೆ ಎದ್ದು ನೋಡಿದರೆ ದರಿದ್ರ ಅಂಟುತ್ತದೆ" ಎಂದೆಲ್ಲಾ ಜನಾಂಗೀಯ ನಿಂದನೆಯ ಪಿಂಪ್ ಪೀಪಿಯನ್ನು ಊದುತ್ತಿದ್ದಾರೆ.
ಊಳಿಗಮಾನ ಪ್ರಜಾಪ್ರಭುತ್ವದ ಭಾರತೀಯ ಸಾಂವಿಧಾನಿಕ ಜಾತಿಸಂಕುಲೆಯಲ್ಲಿ ಸಿಲುಕಿ ಅಲ್ಲಿಯೇ ಒದ್ದಾಡಬೇಕಾದ ಸಾಮಾಜಿಕ, ಆರ್ಥಿಕ, ಸಾಂಖ್ಯಿಕ, ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾದ ಈ ಜನಕ್ಕೆ ಅವರ ಪರಂಪರೆಯನ್ನು ಪರಿಚಯಿಸಿದ್ದೇನೆ. ಹೋಗಿ ನೀವೂ ಕಾಲರ್ ಎತ್ತಿ, ಪ್ಯಾಂಟು ಉದುರಿಸಿ.
ಎತ್ತಿ ಉದುರಿಸುವ ಮುನ್ನ ನನ್ನ ವಂಶೀಭೂತ ಅಲ್ಲಮನ ವಯಾಗ್ರ ವಚನ ಪಂಥೋಗ್ರರಲ್ಲದೆ ಪಂಪೀಗಳೂ ಮರೆಯದೇ ನೆನಪಿಟ್ಟುಕೊಳ್ಳಿ.
ಆರುಹ ಪೂಜಿಸಲೆಂದು ಕುರುಹ ಕೊಟ್ಟೆಡೆ
ಅರುಹ ಮರೆತು ಕುರುಹ ಪೂಜಿಸುವ
ಹೆಡ್ಡರಾ ನೋಡಾ ಗುಹೇಶ್ವರ.
ಜಾತಿನಾಶ ಆಗುವುದಿಲ್ಲ, ಜನನಾಶ ಖಂಡಿತ!
#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ
No comments:
Post a Comment