ಹೈಡ್ರಾಕ್ಸಿಕ್ಲೋರಿನ್ - ಯಾರದು ಹುಚ್ಚು, ಯಾರದು ಕೆಚ್ಚು?

ಕಳೆದೆರಡು ವಾರಗಳ ಹಿಂದೆ ತಣ್ಣಗಾಗಿದ್ದ ಕೋರೋನಾ ಗುಣಪಡಿಸಲು ಸಹಕಾರಿಯಾಗಬಹುದೆಂಬ ಮಲೇರಿಯಾ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ ಈಗ ಮತ್ತೆ ಸೆಟೆದೆದ್ದು ನಿಂತಿದೆ ಯಾ ನಿಲ್ಲಿಸಲ್ಪಟ್ಟಿದೆ.

ಈ ಔಷಧಿ ಕೊರೊನಾಕ್ಕೆ ಔಷಧಿಯೆಂದು ಯಾವುದೇ ಪ್ರಯೋಗಗಳು ಸಾಬೀತು ಮಾಡಿಲ್ಲದಿದ್ದರೂ ಕೆಲವು ವೈದ್ಯರು ಇದು ಕೆಲವೊಬ್ಬ ರೋಗಿಗಳಿಗೆ ಕೇಸ್ ಬೈ ಕೇಸ್ ಕೆಲಸ ಮಾಡಬಹುದೆಂದಿದ್ದಾರೆ. ಆದರೆ ಇದು ಪ್ರತಿಯೊಬ್ಬ ಕೊರೋನಾ ಸೋಂಕಿತರನ್ನು ಗುಣಪಡಿಸುತ್ತದೆಂದು ಎಲ್ಲಿಯೂ ಹೇಳಿಲ್ಲ. ಕೆಲವು ಕೊರೋನಾ ಸೋಂಕಿತರಿಗೆ ಇರಬಹುದಾದ ಇತರೆ ಸಮಸ್ಯೆಗಳನ್ನು ಇದು ತಗ್ಗಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದೇ ಹೊರತು ಕೊರೋನವನ್ನು ಗುಣಪಡಿಸುತ್ತದೆಂದು ಯಾವುದೇ ತಜ್ಞರು ಹೇಳಿಲ್ಲ.

ಆಫ್ರಿಕಾದ ರಾಷ್ಟ್ರವೊಂದರಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್
ಕೊಟ್ಟ ಕೊರೋನಾ ಸೋಂಕಿತರು ಸತ್ತಿದ್ದಾರೆ. ಹಾಗಾಗಿ ಇದು ಇನ್ನೂ ಪ್ರಯೋಗ ಶಿಶುವೇ ಹೊರತು ಸಿದ್ದೌಷಧಿಯಲ್ಲ.

ಹೀಗಿರುವಾಗ ಈಗ ಮತ್ತೆ ಹೈಡ್ರಾಕ್ಸಿಕ್ಲೋರೋಕ್ವಿನ್ ಸುದ್ದಿ ಮಾಡುತ್ತಿದೆ.

ಪ್ರಧಾನಿ ಮೋದಿಯವರು ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತನ್ನು ತಡೆಹಿಡಿದು ಕೆಚ್ಚು ಪ್ರದರ್ಶಿಸಿದ್ದು, ಟ್ರಂಪ್ ಅದನ್ನು ತಡೆ ಹಿಡಿದರೆ ಅದಕ್ಕೆ ಪ್ರತಿಯಾಗಿ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹುಚ್ಚಾದದ್ದು ಎಂದು ಎಲ್ಲಾ ಮಾಧ್ಯಮಗಳು ಬಿಂಬಿಸುತ್ತಿವೆ. ಈ ಎಲ್ಲ ಹುಚ್ಚು ಕೆಚ್ಚುಗಳ ನಡುವೆ ಬಿಚ್ಚು ಸತ್ಯವೇನಿದೆ?

ಭಾರತಕ್ಕೆ ಐಟಿ ಹೊರಗುತ್ತಿಗೆ ಕಾಲಿಡುವ ಸಾಕಷ್ಟು ದಶಕಗಳ ಮುನ್ನ ಔಷಧಿ ಉತ್ಪಾದನೆಯ ಹೊರಗುತ್ತಿಗೆ ಸಬ್ಸಿಡಿಯರಿ ಕಂಪೆನಿಗಳ ಮೂಲಕ, ನಂತರ ನೇರವಾಗಿ ಮೂರನೇ ಕಂಪೆನಿಗಳಿಗೆ ಹೊರಗುತ್ತಿಗೆ ಕೊಡುವ ಮೂಲಕ ಜಾರಿಯಲ್ಲಿತ್ತು. ಈಗ ಇನ್ನೂ ವ್ಯಾಪಕವಾಗಿದೆ. ಅಮೆರಿಕಾ ತನ್ನ ವಸ್ತುಗಳ ಉತ್ಪಾದನೆಯನ್ನು ಚೈನಾಕ್ಕೆ ಹೊರಗುತ್ತಿಗೆ ನೀಡಿದ್ದರೆ, ಔಷಧಿಗಳ ಉತ್ಪಾದನೆಗೆ ಭಾರತದ ಕಂಪೆನಿಗಳನ್ನು ನೆಚ್ಚಿಕೊಂಡು ಆ ಕಂಪೆನಿಗಳಲ್ಲಿ ಬಂಡವಾಳವನ್ನು ತೊಡಗಿಸಿ ತನ್ನ ಒಡೆತನದ ಸಹಭಾಗಿತ್ವದಲ್ಲಿರಿಸಿಕೊಂಡಿದೆ. ಇದು Eli Lilly, Bayer,  Pfizer, Johnson & Johnson ಎಂಬ ದೈತ್ಯ ಕಂಪೆನಿಗಳಷ್ಟೇ ಅಲ್ಲದೆ ಹೈದರಾಬಾದ್, ಅಹಮದಾಬಾದ್, ಗ್ವಾಲಿಯರ್, ಮತ್ತು ಬೆಂಗಳೂರಿನ ಅನೇಕ ಚಿಕ್ಕ ಪುಟ್ಟ ಫಾರ್ಮ ಕಂಪೆನಿಗಳೂ(100% EOU) ಇವೆ.  ಇವುಗಳಲ್ಲಿ ಸಾಕಷ್ಟು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಉತ್ಪಾದಿಸುತ್ತವೆ. ಕೇವಲ ಅಮೆರಿಕಾ subsidiary ಅಲ್ಲದೆ ಜಪಾನ್, ಇಸ್ರೇಲ್, ಜರ್ಮನಿ ಮತ್ತು ಯುರೋಪಿನ ಹಲವು ಕಂಪೆನಿಗಳ subsidiaryಗಳು,100% EOU (Export Oriented Unit) ಭಾರತದಲ್ಲಿವೆ. ಇದರಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಹೆಚ್ಚಾಗಿ ಉತ್ಪಾದಿಸುವ Actavis ಇಸ್ರೇಲಿನ Teva ಕಂಪೆನಿಯ subsidiary. ಹಾಗೆಯೇ Novartis ಸ್ವಿಟ್ಜರ್ಲೆಂಡ್ ಕಂಪೆನಿ, Bayer ಜರ್ಮನ್ ಕಂಪೆನಿ, Mylan ಯುಕೆ ಕಂಪೆನಿ! ಅಂದ ಹಾಗೆ ಬಾಬಾ ರಾಮದೇವರು ಏನಾದರೂ ಔಷಧಿ ಕಂಡುಹಿಡಿದಿದ್ದರೂ ಅದರ ರಫ್ತನ್ನು ಅಮೆರಿಕಾಕ್ಕೆ ನಿಲ್ಲಿಸಲಾಗುತ್ತಿರಲಿಲ್ಲ. ಏಕೆಂದರೆ ಅವರ ಔಷಧಿಗಳಿಗೆ ಬೇರುನಾರಿನ ಗಿಡಮೂಲಿಕೆಗಳ ಸರಬರಾಜು ಮೂಲ ಕೂಡ ಅಮೆರಿಕ ಮತ್ತು ಕೆನಡಾ! ಅಮೆರಿಕಾದಿಂದ ಸಾಕಷ್ಟು ಗಿಡಮೂಲಿಕೆಗಳು ಬಾಬಾ ರಾಮದೇವ್ ಅವರ ಕಾರ್ಖಾನೆಗಳಿಗೆ ರಫ್ತಾಗುತ್ತಿವೆ. ಔಷಧಿ ಸ್ವದೇಶಿಯಾಗಿದ್ದರೂ, ಕಚ್ಚಾವಸ್ತುಗಳು ಪ್ರಪಂಚದ ಎಲ್ಲಾ ವಿದೇಶಿ ಮೂಲೆಗಳಿಂದ ಬಾಬಾ ರಾಮದೇವರ ಕಾರ್ಖಾನೆಗಳಿಗೆ ಹರಿದು ಬರುತ್ತಿವೆ.

ಇನ್ನು ಅಮೆರಿಕಾ ದಿಢೀರನೆ ಕೊರೋನಾ ಹಿನ್ನೆಲೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಖರೀದಿಯ ಹೊಸ ಆರ್ಡರ್ ಅನ್ನು ಭಾರತದ ಕಂಪೆನಿಗಳಿಗೆ ಕೊಟ್ಟಿಲ್ಲ. ಇದರ ಪೂರೈಕೆ ಕೊರೋನಾ ಪೂರ್ವದಿಂದಲೂ ಅಭಾದಿತವಾಗಿ ಸಾಗಿ ಬರುತ್ತಿದೆ.  ಹಾಗಾಗಿ ಈ ಎಲ್ಲಾ ಮಾಹಿತಿಯನ್ನು ಸಮೀಕರಿಸಿಕೊಳ್ಳದೆ ಪ್ರಧಾನಿಗಳು ಹೈಡ್ರಾಕ್ಸಿಕ್ಲೋರೋಕ್ವಿನ್
ರಫ್ತನ್ನು ದಿಢೀರನೆ ನಿಲ್ಲಿಸಲು ಆಜ್ಞೆ ಹೊರಡಿಸಿದ್ದು ಕೆಚ್ಚೆಂದು ಕರೆಯಲಾಗದು. ಹಾಗೆಯೇ ಟ್ರಂಪ್ ತನ್ನ ಮಾಲನ್ನು ತಡೆಹಿಡಿದಿದ್ದಕ್ಕೆ ಕ್ರಮ ಜರುಗಿಸುತ್ತೇವೆ ಎಂದದ್ದನ್ನು ಹುಚ್ಚೆನ್ನಲಾಗದು.

ಆದರೆ ಇಂತಹ ವ್ಯವಹಾರ ಸೂಕ್ಷ್ಮವನ್ನರಿಯದೆ ಮಾಧ್ಯಮಗಳು, ಜನರು, ಚಿಂತಕರು, ಸುಧಾರಕರು ಈ ಕುರಿತು ಹುಚ್ಚು ಹೊಳೆ ಹರಿಸಿದ್ದು ಮಾತ್ರ ನನ್ನ ಟ್ಯಾಗ್ಲೈನನ್ನು ಧೃಢೀಕರಿಸಿದಂತಾಯಿತು. ಕೊರೋನಾ ಎಂಬುದನ್ನು ಮಾರಮ್ಮನ ಜಾತ್ರೆ ಎಂಬಂತೆ ಸಂಭ್ರಮಿಸಿ, ಜಾತ್ರೆಯ ಜಂಗೀಕುಸ್ತಿಯಲ್ಲಿ ಮೋದಿ-ಟ್ರಂಪ್ ಪರಸ್ಪರ ಪಟ್ಟು ಹಾಕಿದಂತೆ, ಮೊದಲಿಗೆ ಮೋದಿ ಬೆಂಬಲಿಗರಿಗೆ ಖುಷಿಯಾಗುವಂತೆ ನಂತರ ಮೋದಿ ವಿರೋಧಿಗಳಿಗೆ ಭೂರಿ ಭೋಜನ ಒದಗಿಸಿದಂತೆ ರೋಚಕತೆಯನ್ನು ಒಗ್ಗಟ್ಟಾಗಿ ಮೆರೆದರು.

ಆದರೆ ಭಾರತದಲ್ಲಿನ ಔಷಧಿ ಕಂಪೆನಿಗಳ ಮೂಲ, ಬಂಡವಾಳ, ಹೊರಗುತ್ತಿಗೆ ಕಂಟ್ರಾಕ್ಟ್ಗಳು, ಪೇಟೆಂಟುಗಳ ಬಂಧ ಇತ್ಯಾದಿ ಒಳಸುಳಿಗಳ ಆಳ ರಫ್ತನ್ನು ನಿರಾಕರಿಸುವಷ್ಟು ಸುಲಭವಲ್ಲ. ಹಾಗಾಗಿಯೇ ಮೋದಿಯವರು ಈ ವ್ಯವಹಾರ ಸೂಕ್ಷ್ಮವನ್ನರಿತ ಕೂಡಲೇ ಅಮೆರಿಕಾಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್
ರಫ್ತನ್ನು ತಕ್ಷಣ ಮುಕ್ತಗೊಳಿಸಿದ್ದಾರೆ. ಇಲ್ಲಿಗೆ ಹುಚ್ಚು ಯಾರದ್ದು ಮತ್ತು ಕೆಚ್ಚು ಯಾರದ್ದು ಎಂದು ತಣ್ಣನೆಯ ಬುದ್ಧಿಯಿಂದ ರೊಚ್ಚಿಗೇಳದೇ ಯೋಚಿಸಿ. ನನ್ನ ವಾಸ ನಿಮ್ಮ ದಿಕ್ಕೆಡಿಸದೇ ವಿಶ್ವಮಾನವರಾಗಿ ಸತ್ಯವನ್ನು ಮಾತ್ರ ಪರಿಗಣಿಸಿ.

ಕೊರೋನಾ ಸೃಷ್ಟಿಸಿರುವ ಅಂಧಕಾರದಲ್ಲಿ ನಾಯಕತ್ವ ತಪ್ಪು ಹೆಜ್ಜೆಯಿಡುವುದು, ಎಡವುವುದು, ಮತ್ತದನ್ನು ಸರಿಪಡಿಸಿಕೊಂಡು ಮುನ್ನಡೆಯುವುದು ಸಹಜ. ತಾಳ್ಮೆ ಮುಖ್ಯ, ಏಕೆಂದರೆ ತಾಳಿದವನು ಬಾಳಿಯಾನು.

#ಬಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

ತಬ್ಲೀಜ್ ಇಜತೆಮಾ ಜಮಾತೆ ಮರ್ಕೇಜ್

ಒಂದು ಅಂತರರಾಷ್ಟ್ರೀಯ ಕಂಪೆನಿ ತನ್ನ ವಾರ್ಷಿಕ ಅಧಿವೇಶನವನ್ನು ದಿಲ್ಲಿಯಲ್ಲಿ ಒಂದು ವಾರದ ಕಾಲ ಏರ್ಪಡಿಸಿತ್ತು. ಆ ಅಧಿವೇಶನಕ್ಕೆ ಪ್ರಪಂಚದ ಎಲ್ಲಾ ಮೂಲೆಯಿಂದ ಕಂಪೆನಿ ಸದಸ್ಯರು ಬಂದಿದ್ದರು. ಕೆಲವರು ಅದಕ್ಕೆ ಬಿಜಿನೆಸ್ ವೀಸಾ ಪಡೆದಿದ್ದರೆ ಕೆಲವರು ಟೂರಿಸ್ಟ್ ವೀಸಾ ಪಡೆದಿದ್ದರು. ಅಮೇರಿಕೆಯ H1B ವೀಸಾ ಸಿಗದಿದ್ದರೆ B1 ಯಾ L1 ವೀಸಾ ಪಡೆದು ಭಾರತದ ಪ್ರತಿಷ್ಠಿತ ಕಂಪೆನಿಗಳ ನೌಕರರು ಅಮೆರಿಕೆಗೆ ಬರುವಂತೆಯೇ ಈ ಅಧಿವೇಶನಕ್ಕೆ ವಿದೇಶಿಯರು ಸಿಕ್ಕ ಭಾರತೀಯ ವೀಸಾಗಳನ್ನು ಪಡೆದು ಬಂದಿದ್ದರು. ಯಾವುದೇ ಕೊರೋನಾ ಯಾ ಇನ್ನಿತರೆ ಮಹಾಮಾರಿಯ ಕುರಿತಾಗಿ ಯಾವುದೇ ದೇಶದ ಪ್ರವಾಸಿಗರಿಗೆ ಭಾರತ ಕೂಡ ಯಾವುದೇ ನಿರ್ಬಂಧಗಳನ್ನು ಹೇರಿರಲಿಲ್ಲ.  ಮೇಲಾಗಿ ಭಾರತದಲ್ಲಿ ಕೊರೊನವನ್ನು ಪರೀಕ್ಷಿಸುವ ಯಾವುದೇ ಸಾಧನ ಕೂಡ ಇರಲಿಲ್ಲ. ಹಾಗಾಗಿ ಎಲ್ಲಾ ವಿದೇಶಿ ಪ್ರವಾಸಿಗರ ಟೆಂಪರೇಚರ್ ನೋಡಿಯೇ ಸ್ವಾಗತಿಸುತ್ತಿದ್ದರು. ಇದು ಕೇವಲ ಭಾರತದ ಸಂಗತಿಯಷ್ಟೇ ಅಲ್ಲದೆ ಜಗತ್ತಿಗೆ ದೊಡ್ಡಣ್ಣನೆನಿಸಿದ ಅಮೇರಿಕ ಕೂಡ ಯಾವುದೇ ಕೊರೋನಾ ಪರೀಕ್ಷೆಯಿಲ್ಲದೆ ವಿದೇಶಿಯರನ್ನು ಒಳಗೊಳ್ಳುತ್ತಿತ್ತು. ನಾನು ಮಾರ್ಚ್ 3ರಂದು ಭಾರತದಿಂದ ಕತಾರ್ ಮೂಲಕ ಅಮೆರಿಕಕ್ಕೆ ಬಂದಾಗ ಯಾವ ಕೊರೋನಾ ಪರೀಕ್ಷೆಗಳಿರಲಿಲ್ಲ. ಇದು ಯಾವುದೇ ಸರ್ಕಾರಿ ವೈಫಲ್ಯವಲ್ಲ. ಏಕೆಂದರೆ ಕೊರೋನಾ ಪರೀಕ್ಷಾ ಸಾಧನಗಳು ಜಗತ್ತಿನಲ್ಲಿ ಅಷ್ಟಾಗಿ ಈಗಲೂ ಇಲ್ಲ.

ಹಾಗಾಗಿ ಎಲ್ಲಾ ವಿದೇಶೀ ಆಹ್ವಾನಿತ ಸದಸ್ಯರು ಯಾವುದೇ ತೊಂದರೆಯಿಲ್ಲದೆ ಅಧಿವೇಶನದಲ್ಲಿ ಭಾಗವಹಿಸಿದರು. ಕಂಪೆನಿ ಕೂಡ ತನ್ನ ಆರ್ಥಿಕ ಪರಿಸ್ಥಿತಿಗನುಗುಣವಾಗಿ ಊಟ, ವಸತಿಯ ಏರ್ಪಾಡನ್ನು ಸದಸ್ಯರಿಗೆ ಮಾಡಿದ್ದಿತು.  ಅಧಿವೇಶನ ನಡೆದ ವಾರ ಕೂಡ ಕೊರೋನಾ ಕುರಿತು ಭಾರತ ಸರ್ಕಾರ ಯಾವುದೇ ನಿಬಂಧನೆ ಯಾ ನಿರ್ಬಂಧ ಹೇರಿರಲಿಲ್ಲ.

ಈ ಮಧ್ಯೆ ಭಾರತ ತನಗೊದಗಿದ ಸಾಂಕ್ರಾಮಿಕ ಮಹಾಮಾರಿಯ ಕೆಟ್ಟ ಪರಿಣಾಮವನ್ನು ಗ್ರಹಿಸಿ ಲಾಕ್ ಡೌನ್ ಘೋಷಿಸಿತು. ಆಗ ಈ ಕಂಪೆನಿಯ ಅಧಿವೇಶನಕ್ಕೆ ಬಂದಿದ್ದ ಸ್ಥಳೀಯ ಭಾರತೀಯರಲ್ಲಿ ಹಲವರು ಲಭ್ಯ ವ್ಯವಸ್ಥೆಗಳನ್ನು ಬಳಸಿಕೊಂಡು ತಮ್ಮ ತಮ್ಮ ಗೂಡನ್ನು ಸೇರಿಕೊಂಡರೆ, ಗೂಡನ್ನು ಸೇರಿಕೊಳ್ಳಲಾಗದ ಅನ್ಯರಾಜ್ಯ ಮತ್ತು ವಿದೇಶಿ ಸದಸ್ಯರು ತಮ್ಮ ಗೂಡಿಗೆ ಹೋಗಲಾಗದೆ ಕಂಪೆನಿ ಒದಗಿಸಿದ ವಸತಿಯಲ್ಲೇ ಉಳಿದುಕೊಂಡು ಆತಂಕದಿಂದ ಮುಂದೇನಾಗುವುದೋ ಎಂದು ಕಾಯುತ್ತಿದ್ದರು. ಈ ಲಾಕ್ ಡೌನ್ ಘೋಷಿಸಿದಾಗ ಈ ಸ್ಥಳೀಯ ಸದಸ್ಯರಂತೆಯೇ ಭಾರತದ ವಿವಿಧ ಮಹಾನಗರಗಳಲ್ಲಿದ್ದ ಕಾರ್ಮಿಕರು ನಗರಗಳನ್ನು ತೊರೆದು ತಮ್ಮ ತಮ್ಮ ಗೂಡನ್ನು ಸೇರಿಕೊಂಡರು.

ಆಗ ದಿಲ್ಲಿ ಸರ್ಕಾರ ಈ ಕಂಪೆನಿ ವಸತಿಯಲ್ಲಿದ್ದವರ ಸಂಖ್ಯೆಯನ್ನು ಪ್ರಶ್ನಿಸಿ ಸೆಕ್ಷನ್ 144 ಉಲ್ಲಂಘನೆಗಾಗಿ ದೂರು ದಾಖಲಿಸಿಕೊಂಡು ಕಾನೂನು ಚಲಾಯಿಸಲಾರಂಭಿಸಿದರು. ಈ ಮಧ್ಯೆ ಅಲ್ಲಿನ ಅತಿಥಿ ಸದಸ್ಯರಲ್ಲಿ ಹಲವಾರು ಮಂದಿ ಮಹಾಮಾರಿಗೆ ತುತ್ತಾದರು. ಇದನ್ನು ಅನುಕೂಲಸಿಂಧುವಾಗಿ ಮಹಾಮಾರಿಯಿದ್ದ ದೇಶದಿಂದ ಬಂದ ಸದಸ್ಯರ ಮೇಲೆ ದೂರು ಹೇರಿ ಸೋಂಕನ್ನು ಪ್ರಸರಿಸಿದರೆಂದು ದೂಷಿಸಲಾಯಿತು. ಬಿಜಿನೆಸ್ (ಮಿಷನರಿ) ವೀಸಾದಲ್ಲಿ ಬರದೆ ಪ್ರವಾಸಿ ವೀಸಾದಲ್ಲಿ ಬಂದು ತಮ್ಮ ಉದ್ದೇಶವನ್ನು ಉಲ್ಲಂಘಿಸಿದ್ದಾರೆ ಎನ್ನಲಾಯಿತು. ಭಾರತದ ಅನೇಕಾನೇಕ ಕಂಪೆನಿಗಳು ಅಮೆರಿಕಾದ H1B ವೀಸಾ ಸಿಗದೆ ಉದ್ದೇಶಪೂರ್ವಕವಾಗಿ L ಯಾ B ವೀಸಾ ಬಳಸಿದಂತೆ ಈ ಸದಸ್ಯರುಗಳು ಉದ್ದೇಶಪೂರ್ವಕವಾಗಿಯೋ ಯಾ ಅರಿಯದೆಯೋ ವೀಸಾ ತಪ್ಪನ್ನು ಎಸಗಿದ್ದುದು ಸತ್ಯ. ಆದರೆ ಅದು ಗುರುತರವಾದ ಅಪರಾಧವಲ್ಲ. ಅದಕ್ಕೆ ದಂಡ ವಿಧಿಸಬೇಕಾಗುತ್ತದೆ ಯಾ ಗಡೀಪಾರು ಮಾಡಬೇಕಾಗುತ್ತದೆ.

ಇಲ್ಲಿಯವರೆಗೆ ಆದುದೆಲ್ಲದೂ ಒಂದು ಸಾಂದರ್ಭಿಕ ಶಿಶು ಸಂಗತಿ! ಇಂತಹ ಒಂದು ದುರಿತ ಪಲ್ಲಟ ಕಾಲದಲ್ಲಿ ಧರ್ಮ, ಜನಾಂಗ, ಯಾ ಲಿಂಗ ಭೇಧವಿಲ್ಲದೆ ನೋಡಿದಾಗ ಹೀಗೆಯೇ ಆಗಬೇಕಿದ್ದುದು ಸಾಂದರ್ಭಿಕವಾಗಿದೆ.

 ಇಲ್ಲಿಂದ ಈಗ ಈ ಕಂಪೆನಿಯನ್ನು ತಬ್ಲೀಜಿ ಇಜ್ತೇಮ ಜಮಾತೆ ಮರ್ಕೇಜ್ ಎಂದುಕೊಳ್ಳಿ. ಏಕೆಂದರೆ ದಿಲ್ಲಿ ಜಮಾತೆ ಮರ್ಕೇಜ್ ನ ದುರಂತವು ಧರ್ಮಾತೀತವಾಗಿ ಒಂದು ವಾಣಿಜ್ಯ, ಕಲೆ, ರಾಜಕೀಯ ಯಾ ಯಾವುದೇ ರೀತಿಯ ಒಂದು ಅಧಿವೇಶನವಾಗಿದ್ದರೆ ಕೂಡ ಇಂದಿನ ದುರಂತದಂತೆಯೇ ಆಗುತ್ತಿತ್ತು. ಹಾಗಾಗಿ ಇದನ್ನೊಂದು ಧಾರ್ಮಿಕ ಘಟನೆಯಾಗಿ ನೋಡದೆ ಮೇಲಿನ ರೀತಿಯಾಗಿಯೇ ನೋಡೋಣ.

ಪ್ರಸ್ತುತ ಮಹಾಮಾರಿಯೆರಗಿದ ಇಂತಹ ಸಂದರ್ಭದಲ್ಲಿ ಜಮಾತೆ ಮರ್ಕೇಜ್ ಘಟನೆಯನ್ನು ಯಾವುದೇ ಧಾರ್ಮಿಕ ತಾರತಮ್ಯದ ಪೂರ್ವಾಗ್ರಹ ದೃಷ್ಟಿಯಿಂದ ನೋಡದೆ ಸಾಂದರ್ಭಿಕವಾಗಿ ಮಾತ್ರವೇ ನೋಡಬೇಕಾಗುತ್ತದೆ. ಅದನ್ನು ಧರ್ಮಕ್ಕೆ ತಳುಕು ಹಾಕಿ ನೋಡುವುದು ತಪ್ಪು. ಅದೇ ರೀತಿ ಆ ತಪ್ಪನ್ನು ಖಂಡಿಸುವ ಭರದಲ್ಲಿ ತಿರುಪತಿ, ಶಿರಡಿ ದೇವಸ್ಥಾನಗಳಲ್ಲಿ ಇಂತಹ ಘಟನೆ ಆಗಿದ್ದರೆ ಎಂದು ಇನ್ನೊಂದು ಗುಂಪನ್ನು ಉದ್ರೇಕಿಸುವುದು ಮಹಾ ತಪ್ಪು.

ಆದರೆ ಇಲ್ಲಿ ತದನಂತರ ಆಗುತ್ತಿರುವ ಅನುಮಾನಾಸ್ಪದ, ವಿವೇಚನಾರಹಿತ, ಮತ್ತು ದ್ವೇಷಕಾರಕ ಸಂಗತಿಯೆಂದರೆ ಭಾಗವಹಿಸಿದ ಸದಸ್ಯರು ಸಹಾಯ ಮಾಡಲು ಹೋದ ಸಿಬ್ಬಂದಿಯ ಮೇಲೆ ಉಗಿದಿರುವುದು. ಸಾಂಪ್ರದಾಯಿಕ ಯುದ್ದಗಳಲ್ಲಿ ಬಾಂಬ್ ಎಸೆದಂತೆಯೇ ಜೈವಿಕ ಯುದ್ಧಗಳಲ್ಲಿ ರೋಗಾಣು ಹರಡಲೆಂದು ಉಗಿಯುವುದು, ಕೆಮ್ಮುವುದು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇದು ಅಕ್ಷಮ್ಯ ಅಪರಾಧ! ಉಗಿಯುವುದು ಜೈವಿಕ ಆಕ್ರಮಣವೇ ಸರಿ.  ಅಮೆರಿಕಾದ ಪೆನಿಸಿಲ್ವೇನಿಯಾದ ದಿನಸಿ ಸ್ಟೋರಿನಲ್ಲಿ ಓರ್ವ ಮಹಿಳೆ ಕಳೆದೆರಡು ವಾರಗಳ ಹಿಂದೆ ದುರುದ್ದೇಶದಿಂದ ಕೆಮ್ಮಿ ಬಂಧನಕ್ಕೊಳಗಾಗಿ ಭಯೋತ್ಪಾದನೆಯಡಿ ಕೇಸು ಜಡಿಸಿಕೊಂಡಿದ್ದಾಳೆ. 

ಹಾಗಾಗಿ ಯಾವ ಕಾರಣಕ್ಕೆ ಅಲ್ಲಿದ್ದವರು ಉಗಿದು ಆಕ್ರಮಣಗೈದರೋ ಅದು ಅವರ ಮೇಲಿನ ಎಲ್ಲಾ ಅನುಮಾನಗಳನ್ನು ತೀವ್ರಗೊಳಿಸುತ್ತದೆ ಮಾತ್ರವಲ್ಲ ಅದು ಭಯೋತ್ಪಾದನೆಗೆ ಸಮವೆನ್ನಿಸುತ್ತದೆ.

ಇದು ಖಂಡಿತವಾಗಿ ಧರ್ಮ, ಜನಾಂಗ, ಲಿಂಗಾತೀತವಾಗಿ ಭಯೋತ್ಪಾದನೆ ಎನ್ನಿಸುವುದು. ತದನಂತರದ ಘಟನೆಯನ್ನು ಖಂಡಿತವಾಗಿ ಪ್ರತ್ಯೇಕವಾಗಿ ವಿಭಜಿಸಿ ನೋಡಬೇಕಾಗಿದ್ದರೂ ಈ ಉಗಿಯುವಿಕೆಯೇ ಪ್ರಮುಖವಾಗಿ ಸಮಗ್ರ ಜಮಾತೆ ಮರ್ಕೇಜ್ ಅಧಿವೇಶನವನ್ನು ಒಂದು ಪಿತೂರಿಯೇನೊ ಎನಿಸಿ ಶ್ರೀಸಾಮಾನ್ಯನಲ್ಲಿ ಅನುಮಾನದ ಹುತ್ತಗಳನ್ನೇರಿಸಿಬಿಟ್ಟಿದೆ. ಇಂತಹ ದುರಿತ ಕಾಲದಲ್ಲಿ ಪ್ರತಿಯೊಂದು ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ವಿಶ್ಲೇಷಿಸುವ ತಾಳ್ಮೆ ಪ್ರಭುತ್ವ, ಆಡಳಿತ, ಮಾಧ್ಯಮ, ಮತ್ತು ಪ್ರಜೆಗಳಲ್ಲಿ ಖಂಡಿತ ಕಾಣುತ್ತಿಲ್ಲ. ಅದರಲ್ಲೂ ನಿರಾಶಾದಾಯಕ ಸಂಗತಿಯೆಂದರೆ ಪ್ರಜ್ಞಾವಂತರು ಕೂಡ ವಿವೇಚನೆಯನ್ನು ಮರೆತು ತಾವು ನಂಬಿದ ತತ್ವಗಳನ್ನೇ ಮೆರೆಸುತ್ತಿರುವುದು. ಇದು ಅವರೇ ಹೇಳುವಂತಹ ನಿಜದ ದುರಿತ ಕಾಲ, ಆದರೆ ಇದರ ಸೃಷ್ಟಿಗೆ ಇವರ ಕೊಡುಗೆ ಸಾಕಷ್ಟಿದೆ ಎಂಬುದನ್ನು ಅವರು ಇನ್ನೂ ಅರಿತಿಲ್ಲ. ಇದುವರೆಗೆ ತೋಳ ಬಂತು ತೋಳ ಎನ್ನುತ್ತಿದ್ದ ಪ್ರಜ್ಞಾವಂತರು ನಿಜದಿ ತೋಳ ಬಂದಾಗ ಕೂಡ ಅರಿಯದೇ ಮತ್ತದೇ ಟ್ರೋಲಿನಲ್ಲಿ ತೊಡಗಿರುವುದು ಅತ್ಯಂತ ವಿಷಾದಕರ.

ಜೈವಿಕ ಯುದ್ಧಗಳ ಗುರಿ ಕೇವಲ ಸಾಮೂಹಿಕ ಆರೋಗ್ಯದ ಮೇಲಿನ ಆಕ್ರಮಣವಲ್ಲ, ಪರಸ್ಪರರಲ್ಲಿ ಅನುಮಾನ, ದ್ವೇಷ, ಈರ್ಷ್ಯೆಗಳ ಕ್ರಿಮಿಗಳನ್ನು ಬಿತ್ತುವುದು ಕೂಡ.  ಕೊರೋನಾ ಜೈವಿಕ ಯುದ್ಧವಲ್ಲದಿದ್ದರೂ ಖಂಡಿತವಾಗಿ ಒಂದು ಜೈವಿಕ ಯುದ್ಧದ ಅಣಕು ಪ್ರಯೋಗ!

ಈ ಅಣಕು ಯುದ್ಧದಲ್ಲಿ ಭಾಗವಹಿಸಿರುವ ರಾಷ್ಟ್ರಗಳು ತಮ್ಮನ್ನು ತಾವೇ ಕನ್ನಡಿಯ ಮಾನದಂಡದಲ್ಲಿ ನೋಡಿಕೊಂಡು ಬೆನ್ನನ್ನೋ ಅಂಡನ್ನೋ ಅಥವಾ ಮತ್ತಿನ್ನೇನನ್ನೋ ತಟ್ಟಿಕೊಳ್ಳಬೇಕು.

ಸಂದರ್ಭಕ್ಕನುಗುಣವಾಗಿ ಅಣ್ಣನ ವಚನ ನೆನಪಾಗುತ್ತಿದೆ.

ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು. ಏರಿ ನೀರುಂಬಡೆ
ಬೇಲಿ ಕೆಯ್ಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ ಕೂಡಲಸಂಗಮದೇವ!