ಫೇಸ್ಬುಕ್ ಸ್ನೇಹಿತರಾದ ರೂಪಾ ರಾಜೀವ್ ಅವರು ರಾಜೇಂದ್ರ ಪ್ರಸಾದ್ ಎನ್ನುವವರು ಓರ್ವ ದಲಿತರನ್ನು ತಮ್ಮ ಮನೆಗೆ ಕರೆದು ಊಟ ಹಾಕಿ ಸಮಾನತೆಯನ್ನು ಮೆರೆದೆವೆಂದೋ, ತಮ್ಮ ಶೋಷಣೆಗೆ ಪಶ್ಚಾತ್ತಾಪ ಪಟ್ಟೆನೆಂದೋ ಸ್ಟೇಟಸ್ ಹಾಕಿಕೊಂಡಿದ್ದಾರೆ. ಇದು ಮೇಲ್ವರ್ಗದವರಲ್ಲಿ ಮೇಲರಿಮೆಯನ್ನೋ ಶೋಷಿತರಲ್ಲಿ ಕೃತಜ್ಞ ಭಾವನೆಯನ್ನು ಮೂಡಿಸುವುದಲ್ಲದೆ ಸಮಾನತೆಯನ್ನಲ್ಲ. ಜಾತ್ಯಾತೀತ ಎಂದರೆ ಜಾತಿಪ್ರಜ್ಞೆಯೇ
ಇಲ್ಲದಿರುವುದು. ಅದು ಮಕ್ಕಳಿಂದ ಮಾತ್ರ ಸಾಧ್ಯ ಎಂದಿದ್ದಾರೆ.
ಖಂಡಿತ ರೂಪಾ ಅವರ ಅಭಿಪ್ರಾಯ ಒಪ್ಪುವಂತಹದ್ದು!
ಇಂತಹ ಬಾಲಿಶ ಭಾವೋತ್ಕರ್ಷದ ಕ್ರಿಯೆಗಳು ಜಾತಿ ಜಾಗೃತರಿಂದ ಸಮಾನತೆಯನ್ನು ತರುವವೇ? ಇಂತಹ ಭಾವೋತ್ಕರ್ಷಗಳು ಸಾಗರೋಪಾದಿಯಲ್ಲಿ ಬಂದು ಹೋದದ್ದು ಖ್ಯಾತ ಟ್ಯಾಬ್ಲಾಯ್ಡ್ ಪತ್ರಿಕೆಯ ಕತೆ, ಕವನಗಳ ಒಂದು ಅಮಲಿನ ಎಂಬತ್ತರ ಘಟ್ಟದಲ್ಲಿ! ಆ ಅಮಲಿನಲ್ಲಿ ಇದು ಆದರ್ಶದ ಪರಮೋಚ್ಚ ನೀತಿ ಎಂದುಕೊಂಡವರನ್ನು ಕಾಪಿ ಕ್ಯಾಟ್ ಮಾಡುವ ಫ್ಯಾಷನ್ ಆಗಿತ್ತೇ ಹೊರತು ಜೀವಂತಿಕೆ, ವಾಸ್ತವಿಕತೆ, ಸ್ವಂತಿಕೆ ಏನೂ ಅಲ್ಲ. ಅದು ಬರೀ ವಾಸ್ತವವಿಲ್ಲದ, ಜೀವಂ ಇಲ್ಲದ ಸ್ವಂ ಇಲ್ಲದ್ದು ಮಾತ್ರ!
ಖ್ಯಾತ ಕಥೆಗಾರರಾದ ಬೆಸಗರಹಳ್ಳಿ ರಾಮಣ್ಣ ಅವರು ಆಸ್ಪತ್ರೆಯಲ್ಲಿದ್ದಾಗ ಎಲ್. ಹನುಮಂತಯ್ಯನವರು ರಾಮಣ್ಣನವರನ್ನು ನೋಡಲು ಹೋಗಿದ್ದರು. ಆಗ ರಾಮಣ್ಣನವರು ಒಂದು ಲೋಟ ಹಾಲು ತರಿಸಿ "ಅಯ್ಯೋ ದಲಿತರನ್ನು ನಾವು ತುಂಬಾ ಶೋಷಿಸಿದ್ದೇವೆ. ಹಾಗಾಗಿ ನೀನು ಅರ್ಧ ಹಾಲು ಕುಡಿದು ಆ ಕಪ್ ಕೊಡು. ಉಳಿದ ನಿನ್ನ ಎಂಜಲಿನ ಅರ್ಧ ಹಾಲು ನಾನು ಕುಡಿಯುವೆ" ಎಂದು ಎಂಜಲು ಹಾಲು ಕುಡಿದಿದ್ದರಂತೆ. ಇದನ್ನು ಎಲ್. ಹನುಮಂತಯ್ಯನವರು ಸಾಕಷ್ಟು ಸಾರಿ ಭಾಷಣದಲ್ಲಿ, ಲೇಖನಗಳಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ಭಾವೋತ್ಕರ್ಷಗಳು ಕವಿ, ಕತೆಗಾರ, ಸಾಹಿತಿಗಳ ಕೃತಿಗಳಿಗೆ ಸೃಜನಶೀಲ ಆಯಾಮವನ್ನು ತಂದುಕೊಡುವ ನೋವಿನ ವ್ಯಾಕುಲತೆಗಳೆನಿಸುವವೇ ಹೊರತು ಸಮಾಜದಲ್ಲಿ ಏನಾದರೂ ಗಮನಾರ್ಹ ಬದಲಾವಣೆಗಳನ್ನು ವಾಸ್ತವದಲ್ಲಿ ತಂದಿವೆಯೇ? ಆದರೆ ಇಂತಹ ಭಾವೋತ್ಕರ್ಷಗಳು ಭ್ರಾಮಕ ಯುವ ಶಿಷ್ಯರಿಗೆ ಕ್ರಾಂತಿಯೆನಿಸಿ ಅನುಕರಣೆಗೆ ಪ್ರೇರೇಪಿಸುತ್ತವೆ. ಅದರಲ್ಲೂ ಕೆಲ ಜಾತಿ ಜಾಗೃತ ಪ್ರಗತಿಪರ ಘೋಷಿತ ಯುವಜನರಿಗೆ ತಮ್ಮ ಜಾತಿಯ ಆದರ್ಶ ಪುರುಷರ ಕ್ರಿಯೆಗಳು.......ಬೈಬಲ್, ಕುರಾನ್, ಭಗವದ್ಗೀತೆ, ಮಾವೋ ನ ಕೆಂಪು ಪುಸ್ತಕ ಎನಿಸಿಬಿಡುತ್ತವೆ! ಆದರೆ ವಾಸ್ತವವಾಗಿ ಇದು ಕ್ರಾಂತಿಯೇ? ಇದರಿಂದ ಆದ ಅಥವಾ ಸೃಜಿಸಿದ ಸಮಾನತೆ ಏನು?
ಇದೆ ರೀತಿ ಪೇಜಾವರ ಶ್ರೀಗಳು ದಲಿತರ ಮನೆಗೆ ಭೇಟಿ ಕೊಟ್ಟದ್ದು, ಮೈಸೂರಿನ ಬ್ರಾಹ್ಮಣರು ಮಾದಾರ ಚೆನ್ನಯ್ಯ ಶ್ರೀಗಳ ಪಾದಪೂಜೆ ಮಾಡಿದ್ದು. ಕೇವಲ ಕೇವಲ ಭಾವೋತ್ಕರ್ಷಗಳು ಮಾತ್ರ!
ಮಾದಾರ ಚನ್ನಯ್ಯನ ಬಾಯ ತಾಂಬೂಲವ ಮೆಲುವೆ.
ಡೋಹರ ಕಕ್ಕಯ್ಯನ ಒಕ್ಕುಮಿಕ್ಕುದನುಂಬೆ.
ಚೋಳಿಯಕ್ಕನ ಊಳಿಗದವನಾಗುವೆ.
ಶ್ವಪಚಯ್ಯನ ಆಳಾಗಿರುವೆ.
ಇನ್ನುಳಿದ ಸಕಲಗಣಂಗಳ ತೊತ್ತು ಬಂಟ ಲೆಂಕನಾಗಿ
ರಾಜಾಂಗಣ ಬಳಿಯುವೆನಯ್ಯಾ ಅಖಂಡೇಶ್ವರಾ.
- ಷಣ್ಮುಖಸ್ವಾಮಿ
(ಸಮಗ್ರ ವಚನ ಸಂಪುಟ: 14 ವಚನದ ಸಂಖ್ಯೆ: 643)
ಹನ್ನೆರಡನೇ ಶತಮಾನದ ವಚನಕಾರರು ಸಹ ಇಂತಹುದೇ ಭಾವೋತ್ಕರ್ಷದ ಹೋರಾಟ ಮಾಡಿ ದಾರುಣವಾಗಿ ಸೋತಿದ್ದಾರೆ. ಹಾಗಿದ್ದೂ ವಾಸ್ತವಿಕ, ಆಡಳಿತಾತ್ಮಕ ಪರಿಹಾರ ಕಂಡುಹಿಡಿಯದಿದ್ದರೆ ಕತೆಗಳು ಕವನಗಳು ಬಹುಮಾನ ಪಡೆಯುವವಷ್ಟೇ ಏನೋ!
ಮದಿಸದೆ ಮಥಿಸಿದ ಜಾಗೃತ ಮನಸ್ಸುಗಳೇ ಹೇಳಬೇಕು.
ವಿಪರ್ಯಾಸವೆಂಬಂತೆ ಪ್ರಗತಿಪರರೋರ್ವರು
ಭೂತಕಾಲದ ಕೆಡುಕುಗಳನ್ನು ಮರೆತು ಒಳಿತನ್ನು ಮಾತ್ರ ಬೋಧಿಸಬೇಕು, ಪರಿಗಣಿಸಬೇಕು, ಪ್ರಚಾರಕೊಡಬೇಕು ಎಂದು ಲಾಲಾಲ್ಯಾಂಡ್ ಮಾತುಗಳನ್ನು ನೆನ್ನೆಯಷ್ಟೇ ಹೇಳಿದ್ದಾರೆ!!! ಇತಿಹಾಸವನ್ನು ಅರಿಯದೆ ಇತಿಹಾಸವನ್ನು ಸೃಷ್ಟಿಸಲಾಗದು ಎಂಬ ಅಂಬೇಡ್ಕರ್ ಮಾತನ್ನು ಹೇಳುತ್ತಲೇ ಇಂತಹ ದ್ವಂದ್ವವನ್ನು ಈ ಪ್ರಗತಿಪರ ಪ್ರೊಫೆಸರರು ಹೇಳಿರುವುದು.........!
ಇರಲಿ, ಈ ಲಾಲಿಪಾಪ್ ಆನ್ನು ಜನ ಚೀಪುತ್ತಿದ್ದಾರೆ. ಒಂದೆಡೆ ಪ್ರಧಾನಿಯ ಲಾಲಿಪಾಪ್, ಇನ್ನೊಂದೆಡೆ ವಿರೋಧ ಪಕ್ಷದ ಲಾಲಿಪಾಪ್, ಮಗದೊಂದೆಡೆ ಪ್ರಗತಿಪರರ ರಸಸ್ವಾದದ ಲಾಲಿಪಾಪ್.....
ಭಾರತ ವಿಶ್ವದ ಏಕಮಾತ್ರ ಲಾಲಿಪಾಪ್ ಲಾಲಾಲ್ಯಾಂಡ್!
#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ