ಅಧೋಗತಿಯ ಹಾದಿ!

ಭಾರತೀಯ ತರ್ಕಶಾಸ್ತ್ರವು ಕ್ರಿ.ಪೂ. ಆರನೇ ಶತಮಾನದ ಗೌತಮ, ಕ್ರಿ.ಪೂ. ಐದನೇ ಶತಮಾನದ ಪಾಣಿನಿಯವರಿಂದ ಆರಂಭಗೊಂಡು ನಂತರದ ವಸುಬಂಧ, ದಿಜ್ಞಾನ, ಚತುಷ್ಕೋಟಿ, ನಾಗಾರ್ಜುನರಿಂದ ವಿಕಸಿಸುತ್ತ, ನಂತರ ನ್ಯಾಯ ತರ್ಕಶಾಲೆಗಳಂತಹ ತರ್ಕಶಾಲೆಗಳ ಮೂಸೆಯಲ್ಲಿ ಹದಗೊಳ್ಳುತ್ತ ಉನ್ನತಿಗೇರುತ್ತ ಅಂದಿನ ಜಗತ್ತಿನಲ್ಲಿ ತನ್ನದೇ ಆದ ಮಹತ್ತರ ಸ್ಥಾನವನ್ನು ಗಳಿಸಿತು. ವ್ಯಾಕರಣದ ಬುನಾದಿಯಿಂದ ಆರಂಭಗೊಂಡು ನ್ಯಾಯದ ಪರಿಧಿಯನ್ನೊಳಗೆಳೆದುಕೊಳ್ಳುತ್ತಾ ಎಲ್ಲೆಡೆ ಮನ್ನಣೆ ಗಳಿಸಿತು. ಕೇವಲ ಸಾಮಾಜಿಕ, ಆಡಳಿತಾತ್ಮಕ, ತಾತ್ವಿಕ ರೂಪದ ವೇದ ಉಪನಿಷತ್ತುಗಳಲ್ಲದೆ ಎಲ್ಲಾ ಶಾಸ್ತ್ರ-ಸೂತ್ರ-ತಂತ್ರಜ್ಞಾನದಂತಹ ಆವಿಷ್ಕಾರಕ ಸಂಗತಿಗಳಿಗೆ ಸಹ ಭದ್ರ ಮೂಲ ಬುನಾದಿಯನ್ನೊದಗಿಸಿತು. ಹಿಂದೂ, ಪಾಶುಪತ, ಜೈನ, ಬೌದ್ಧಧರ್ಮಗಳು ಧರ್ಮಗಳಾಗಿ ವಿಕಾಸಗೊಳ್ಳುವ ಮೊದಲು ತರ್ಕಶಾಸ್ತ್ರದ ತಾತ್ವಿಕಶಾಲೆಗಳಾಗಿದ್ದವು. ತರ್ಕವು ಪಂಥಗಳಾಗಿ ಕವಲೊಡೆಯುವ ಶತಮಾನಗಳಿಗೂ ಮುನ್ನ ತಾರ್ಕಿಕ ವಿಕಾಸವಾದದಲ್ಲಿ ’ನ್ಯಾಯ’ ತರ್ಕಶಾಲೆಯು ಹೆಚ್ಚು ಪ್ರಾಮುಖ್ಯವನ್ನು ಪಡೆಯಿತು. ಇದನ್ನು ಸಂಶೋಧಕರು "ಹಿಂದೂ ಆಸ್ತಿಕ ಹಿನ್ನೆಲೆಯ ಶಾಸ್ತ್ರ"ವೆಂದೂ ಕರೆಯುತ್ತಾರೆ. ನ್ಯಾಯ ಸಿದ್ಧಾಂತದ ಪ್ರಕಾರ ಜ್ಞಾನವು ಪ್ರಮುಖವಾಗಿ ದುಃಖ (ಕ್ಲೇಶ)ಗಳಲ್ಲಿ ಹುದುಗಿರುತ್ತದೆ. ಆ ದುಃಖವನ್ನು ಹೋಗಲಾಡಿಸಿದರೆ ಅಲ್ಲಿ ಉಳಿಯುವುದೇ ತತ್ವ ಯಾ ಜ್ಞಾನ ಯಾ ಪ್ರಗತಿ ಎನ್ನಲಾಗುತ್ತದೆ. ಅಂತಹ ತತ್ವವನ್ನು ಹೆಕ್ಕಲು ನಾಲ್ಕು ಆಯಾಮಗಳನ್ನು ಆಳವಡಿಸಿಕೊಳ್ಳಬೇಕು. ಗ್ರಹಿಕೆ (ಅಂತರ್ದೃಷ್ಟಿ), ತೀರ್ಮಾನ (ಅನುಮಾನ, ಊಹೆ, ಕ್ಲೀಷೆ), ತುಲನೆ (ಹೋಲಿಕೆ), ಮತ್ತು ರುಜುವಾತು (ಪ್ರಮಾಣ). ಒಂದು ವಿಷಯವನ್ನು ಈ ನಾಲ್ಕೂ ಸೂತ್ರಗಳಿಗೊಡ್ಡಿ ಸೋಸಿದಾಗ ದುಃಖವು ಕಳೆದು ಜ್ಞಾನವು ಸಿಗುತ್ತದೆ. ಆದರೆ ಆ ಜ್ಞಾನವು ಸತ್ಯವಾಗಿರಬಹುದು ಅಥವಾ ಅಲ್ಲದಿರಬಹುದು ಕೂಡ. ಹಾಗಾಗಿ ಆ ಕಂಡುಕೊಂಡ ಜ್ಞಾನವನ್ನು ಮತ್ತೆ ಮತ್ತೆ ಈ ನಾಲ್ಕು ಸೂತ್ರಗಳಲ್ಲಿ ಒರೆಗೆ ಹಚ್ಚಿ ಅಂತಿಮ ಪರಿಣಾಮವನ್ನು ಕಂಡುಕೊಳ್ಳಬೇಕು. ಯಾವಾಗ ಮತ್ತೆ ಮತ್ತೆ ಮರು ಒರೆಗೆ ಹಚ್ಚಿದಾಗ ಒಂದೇ ರೂಪದ ಫ಼ಲಿತಾಂಶ ಸಿಗಲಾರಂಭಿಸುವುದೋ ಆಗ ಆ ವಿಷಯವು ತಾರ್ಕಿಕ ಘಟ್ಟವನ್ನು ತಲುಪಿದೆ ಎಂದರ್ಥ. ಇದು ಒಟ್ಟಾರೆ ನ್ಯಾಯ ತರ್ಕಶಾಸ್ತ್ರದ ಸಂಕ್ಷಿಪ್ತ ಸೂತ್ರ. ಇದನ್ನು ಜಗತ್ತಿನ ಪ್ರಪ್ರಥಮ "ವಿಶ್ಲೇಷಣಾ ಸೂತ್ರ" ಎನ್ನಬಹುದು. ಕ್ರಿಸ್ತಶಕ ಹದಿನೆಂಟನೇ ಶತಮಾನದವರೆಗೆ ಪ್ರಪಂಚದಾದ್ಯಂತ ತಟಸ್ಥವಾಗಿದ್ದ ವೈಜ್ಞಾನಿಕ ಮತ್ತು ಗಣಿತಾತ್ಮಕ ಚಿಂತನೆ ಹತ್ತೊಂಬತ್ತನೇ ಶತಮಾನದಲ್ಲಿ ಮಿಂಚಿನಂತೆ ಸಂಚಲಿಸಲಾರಂಭಿಸಿತು. ಆ ಸಂಚಲನದ ಕಾರಣವಾಗಿ ಪಾಶ್ಚಿಮಾತ್ಯ ವಿದ್ವಾಂಸರು ಭಾರತೀಯ ತರ್ಕಶಾಸ್ತ್ರವನ್ನು ಬಹುವಾಗಿ ಪರಿಗಣಿಸಲಾರಂಭಿಸಿದರು. ಅಲ್ಲಿಯವರೆಗೆ ಅರಿಸ್ಟಾಟಲೆನಿಯನ್ ತರ್ಕವನ್ನು ಪರಿಗಣಿಸಿದ್ದ ಪಶ್ಚಿಮವು ಭಾರತೀಯ ತರ್ಕಶಾಸ್ತ್ರದ ಸೂತ್ರಗಳನ್ನು ಗ್ರೀಕ್ ತರ್ಕದೊಂದಿಗೆ ಸಮ್ಮಿಳಿತಗೊಳಿಸಿಕೊಂಡು ಜಾಗತಿಕ ತೌಲನಿಕ ಅಧ್ಯಯನದಲ್ಲಿ ತೊಡಗಿತು.


ಯೂರೋಪಿನ ಪ್ರಪ್ರಥಮ ಸಂಸ್ಕೃತ ವಿದ್ವಾಂಸನೆಂದು ಖ್ಯಾತನಾಗಿದ್ದ ಗಣಿತಜ್ಞನಾದ ಹೆನ್ರಿ ಟಿ. ಕೋಲ್‍ಬ್ರೂಕ್ ಸ್ಥೂಲವಾಗಿಯೂ ತುಲನಾತ್ಮಕವಾಗಿಯೂ ಅರಿಸ್ಟಾಟಲ್ ಯಾ ಗ್ರೀಕ್ ತರ್ಕಶಾಸ್ತ್ರವನ್ನು ಮತ್ತು ಹಿಂದೂ ತರ್ಕಶಾಸ್ತ್ರವನ್ನು ಒರೆಗೆ ಹಚ್ಚಿ "The Philosophy of Hindus: On the Nyaya and Vaisheshika Systems" ಎಂಬ ಗ್ರಂಥವನ್ನು ೧೮೨೪ ರಲ್ಲಿ ತಂದನು. ಅಲ್ಲಿಂದ ನಂತರ ಮ್ಯಾಕ್ಸ್ ಮ್ಯೂಲರ್, ಜಾರ್ಜ್ ಬೂಲೆ, ಅಗಸ್ಟಸ್ ಡಿ ಮೋರ್ಗನ್, ಚಾರ್ಲ್ಸ್ ಬ್ಯಾಬೇಜ್, ಮೇರಿ ಬೂಲೆ ಮುಂತಾದ ಗಣಿತಜ್ಞರು ಭಾರತೀಯ ತರ್ಕಶಾಸ್ತ್ರವನ್ನು ಪ್ರಮುಖವಾಗಿ ಬೆಳಕಿಗೆ ತಂದದ್ದಲ್ಲದೆ ತಮ್ಮ ಸಂಶೋಧನೆಗಳಲ್ಲಿ ಅಳವಡಿಸಿಕೊಂಡರು. ಈ ಪರಿಣಾಮವಾಗಿ ಜಾರ್ಜ್ ಬೂಲೆಯ ’ಬೂಲಿಯನ್ ಆಲ್ಜೀಬ್ರಾ’ ಅಲ್ಲದೆ ಅನೇಕ ಬೀಜಗಣಿತದ ಸೂತ್ರಗಳು ಭಾರತೀಯ ತರ್ಕಶಾಸ್ತ್ರದ ಸೂತ್ರಗಳನ್ನು ಬಳಸಿಕೊಂಡು ರೂಪಿತಗೊಂಡವು. ಇಂದು ಬೂಲಿಯನ್ ಬೀಜಗಣಿತದ ಸಿದ್ಧಾಂತದ ಆಧಾರಿತವಾಗಿ ಕಂಪ್ಯೂಟರ್ ಕ್ರಾಂತಿಯಾಗಿ ಜಗತ್ತು ಕ್ರಾಂತಿಕಾರಕ ಪ್ರಗತಿಯನ್ನು ಕಂಡಿದೆ. 


ಜಾರ್ಜ್ ಬೂಲೆಯವರ ಪತ್ನಿ ಮೇರಿ ಬೂಲೆ ತಮ್ಮ 'Indian Thought and Western Science in the Nineteenth Century' ಪುಸ್ತಕದಲ್ಲಿ "ಜಾರ್ಜ್ ಬೂಲೆ, ಚಾರ್ಲ್ಸ್ ಬ್ಯಾಬೇಜ್, ಮತ್ತು ಅಗಸ್ಟಸ್ ಡಿ ಮೋರ್ಗನ್ ಅವರುಗಳು ಭಾರತೀಯ ತರ್ಕಶಾಸ್ತ್ರದಿಂದ ಸಾಕಷ್ಟು ಪ್ರಭಾವಿತರಾಗಿದ್ದರು. ಇವರುಗಳಿಗೆ ಭಾರತದಲ್ಲಿ ಸಾಕಷ್ಟು ವರ್ಷ ವಾಸವಿದ್ದ ನನ್ನ ಚಿಕ್ಕಪ್ಪನಾದ ಜಾರ್ಜ್ ಎವರೆಸ್ಟ್ ಅವರು ಭಾರತೀಯ ತರ್ಕಶಾಸ್ತ್ರ ಮತ್ತು ಗಣಿತದ ನಡುವೆ ಸೇತುವಾಗಿದ್ದರು. ಈ ನನ್ನ ಚಿಕ್ಕಪ್ಪನಾದ ಜಾರ್ಜ್ ಎವರೆಸ್ಟ್ ಅವರ ಹೆಸರನ್ನೇ ವಿಶ್ವದ ಮೇರು ಶಿಖರಕ್ಕೆ ಹೆಸರಿಸಿದರು" ಎನ್ನುತ್ತಾರೆ. ಹಾಗೆಯೇ 'Mary Everest Collected Works' ಕೃತಿಯ ಪುಟ ೯೪೭-೯೬೭ ರಲ್ಲಿ "೧೮೩೦-೬೫ರ ಕಾಲಘಟ್ಟದಲ್ಲಿ ಬ್ಯಾಬೇಜ್, ಬೂಲೆ, ಮತ್ತು ಡಿ ಮೋರ್ಗನ್ ಅವರುಗಳನ್ನು ಹಿಂದೂಗಳಾಗಿಸಿ ಪರಿವರ್ತಿಸಿ ತರ್ಕಶಾಸ್ತ್ರವನ್ನು ಅರ್ಥಮಾಡಿಸುವ ಸಂಕಷ್ಟ ಹೇಗಿದ್ದಿರಬಹುದೆಂದು ಊಹಿಸಿಕೊಳ್ಳಿ. ಅಂತಹ ಸಂಕಷ್ಟವನ್ನು ನನ್ನ ಚಿಕ್ಕಪ್ಪ ಹೊತ್ತು ಈ ಮೂವರಿಗೆ ಭಾರತೀಯ ತರ್ಕಶಾಸ್ತ್ರವನ್ನು ಅರ್ಥಮಾಡಿಸಿದ್ದರು" ಎಂದು ಹೇಳುತ್ತಾರೆ. ಇದೆಲ್ಲದರ ಪರಿಣಾಮವಾಗಿ ೧೮೬೦ ರಲ್ಲಿ ಅಗಸ್ಟಸ್ ಡಿ ಮೋರ್ಗನ್ "ಸಂಸ್ಕೃತ ಮತ್ತು ಗ್ರೀಕ್ ಭಾಷಾ ಬುನಾದಿಯ ತರ್ಕಶಾಸ್ತ್ರಗಳೇ ಸ್ವತಂತ್ರವಾಗಿ ಜಾಗತಿಕ ಗಣಿತಶಾಸ್ತ್ರವನ್ನು ಸಂಸ್ಥಾಪಿಸಿದವು" ಎನ್ನುತ್ತಾರೆ.


ಹೀಗೆ ಹಿಂದೂ ಸಂಸ್ಕೃತಿಯ ಜ್ಞಾನಸಂಪತ್ತು ಅನಾವರಣಗೊಳ್ಳುತ್ತದಲ್ಲದೆ ಬೌದ್ಧ ಮತ್ತು ಜೈನಪಂಥಗಳು ತಾರ್ಕಿಕವಾಗಿ ಧರ್ಮಗಳು ಎನ್ನುವುದಕ್ಕಿಂತ ಹಿಂದೂ ಸಂಸ್ಕೃತಿಯ ಪ್ರಭೇದದ ತಾರ್ಕಿಕ ತತ್ವ ಸಿದ್ಧಾಂತಗಳಾಗಿದ್ದವಷ್ಟೇ ಎಂದೂ ಸಾಬೀತಾಗುತ್ತದೆ. ಅದೇ ರೀತಿ ಹಿಂದೂ ಪ್ರಭೇದದ ಸಮಗ್ರ ಪಾಶುಪತ, ಕಾಳಾಮುಖ, ಕಾಪಾಲಿಕ, ಶೈವ ಪರಂಪರೆಯ ಇಂದಿನ ರೂಪವಾದ ವೀರಶೈವವೂ ಸಹ. ಅಲ್ಲಮ, ಅಕ್ಕ ಮಹಾದೇವಿ, ಚೆನ್ನಬಸವಣ್ಣ, ಸಿದ್ಧರಾಮೇಶ್ವರ, ಹಡಪದ ಅಪ್ಪಣ್ಣ, ತೋಂಟದ ಸಿದ್ಧಲಿಂಗ ಮುಂತಾದ ಅನೇಕ ವಚನಕಾರರ ವಚನಗಳಲ್ಲಿರುವ ಹಿಂದೂ ಸಂಸ್ಕೃತಿಯ ಯೋಗ, ಅಧ್ಯಾತ್ಮ, ಪಾಣಿನಿ ಸೂತ್ರಗಳ ವಿಕಾಸ ಮತ್ತು ವೀರಶೈವೀಕರಣ, ಪಾಶುಪತ-ಲಕುಲೀಶ ಶೈವ ಸಿದ್ಧಾಂತ, ದರ್ಶನ, ತರ್ಕ, ಆಚರಣೆ, ಮುಂತಾದ ಅಗತ್ಯ ಧಾರ್ಮಿಕವೆನ್ನಿಸುವ ಪರತಂತ್ರ ತತ್ವಾನುಷ್ಠಾನಗಳನ್ನು ಉಪೇಕ್ಷಿಸಿ ಕೇವಲ ಅನುಕೂಲಸಿಂಧು ಸಾಮಾಜಿಕ ಚಳವಳಿಯ ಭಾಗವನ್ನು ಮಾತ್ರ ಎತ್ತಿಕೊಂಡು "ಲಿಂಗಾಯತ ಸ್ವತಂತ್ರ ಧರ್ಮ" ಎನ್ನಲಾಗದು. ಅದೇ ರೀತಿ ವಚನಗಳ ದಾಖಲಾತಿಯ ಒಂದೇ ಒಂದು ಮೂಲ ಓಲೆಗರಿ ಈವರೆಗೆ ಸಿಗದಿದ್ದರೂ ಕೇವಲ ಪೌರಾಣಿಕ, ಸೃಜನಶೀಲ ಸಂಕಥನಗಳ ಆಧಾರದ ಮೇಲೆ ಸೃಷ್ಟಿಸಿರುವುದನ್ನು ಸಂಶೋಧನೆ ಎಂದೂ ಕರೆಯಲಾಗದು. ಬಸವರಾಜದೇವರ ರಗಳೆ ಮತ್ತು ಬಸವಪುರಾಣಗಳಲ್ಲಿ ಸಹ ಈ ವಾಚ್ಯಸೂಚಕಗಳನ್ನು ವಚನಗಳೆಂದು ಕರೆದಿಲ್ಲ. ಎಲ್ಲಾ ಇತಿಹಾಸಜ್ಞಮಾನ್ಯ ದಾಖಲೆಗಳು ಇರುವುದು ಕಾಳಾಮುಖ ವೀರಶೈವ ಸಂಬಂಧಿತ ಮಾತ್ರ! ವಚನಗಳನ್ನು ಸಮಗ್ರವಾಗಿ ಚರ್ಚಾ ದೃಷ್ಟಿಯಿಂದ ನೋಡದೆ ಕೇವಲ ಬಿಡಿಬಿಡಿಯಾಗಿ ಗ್ರಹಿಸಿ ಧರ್ಮ ಕಟ್ಟುತ್ತೇವೆನ್ನುವುದು 'ಜಲದೊಳ್ ಲಿಖಿತ ಲಿಪಿಯಪ್ಪುದು.' ಹೀಗೆ ಈ ವಿಷಯದ ಕುರಿತಾಗಿ ಕರ್ನಾಟಕದ ಸಂಶೋಧನೆಯ ಪಿತಾಮಹ ಎಂದೇ ಪರಿಗಣಿಸಿರುವ ಎಂ.ಎಂ. ಕಲಬುರ್ಗಿಯವರ ಬಾಲಿಶ ಸಂಶೋಧನೆಗಳನ್ನು ಗಮನಿಸಿದ ಮೇಲೆ ನಮ್ಮ ವರ್ತಮಾನದ ವಿಶ್ವವಿದ್ಯಾಲಯಗಳು ಒಂದು ತಾರ್ಕಿಕ ನೆಲೆಗಟ್ಟನ್ನು ಕಟ್ಟಿಕೊಡುವಂತಹ ಸಂಶೋಧನೆಗಳನ್ನಾಗಲಿ, ಐತಿಹಾಸಿಕ ಸತ್ಯವನ್ನಾಗಲಿ, ತಂತ್ರಜ್ಞಾನವನ್ನಾಗಲಿ ಎಷ್ಟರಮಟ್ಟಿಗೆ ಕಟ್ಟಿಕೊಟ್ಟಿವೆಯೋ ಎಂಬ ತೀವ್ರ ಅನುಮಾನಗಳು ಸಹಜವಾಗಿ ಏಳುತ್ತವೆ. ಅದರಲ್ಲೂ ಇವುಗಳು ಕೈಗೊಂಡ ಅಸಂಖ್ಯಾತ ಸಾಮಾಜಿಕ ಹಿನ್ನೆಲೆಯ ಸಂಶೋಧನೆಗಳನ್ನು ಗಮನಿಸಿದ ಮೇಲೆ ಇವು ಕೇವಲ ಪೋಸ್ಟ್-ಡಾಕ್ಟೊರೇಟ್, ಡಾಕ್ಟೊರೇಟ್, ಸ್ನಾತಕೋತ್ತರ ಪದವಿಗಳನ್ನು ಭಾರತದ ಜನಸಂಖ್ಯಾಸ್ಫೋಟಕ್ಕೆ ಪೂರಕವಾಗಿಯೋ ಸ್ಪರ್ಧಾತ್ಮಕವಾಗಿಯೋ ಕಟ್ಟಿಕೊಟ್ಟವೇನೋ ಎನಿಸುತ್ತದೆ. ಏಕೆಂದರೆ 'ಶೋಧ್ ಗಂಗಾ' "https://shodhganga.inflibnet.ac.in/" ಎಂಬ ಅಂತರ್ಜಾಲ ತಾಣದಲ್ಲಿರುವ ಲಕ್ಷಾಂತರ ಪಿಹೆಚ್ಡಿ ಥೀಸೀಸುಗಳ ಕಡೆ ಒಮ್ಮೆ ಕಣ್ಣೋಟ ಹರಿಸಿ ಮತ್ತವುಗಳಲ್ಲಿ ಕೆಲವನ್ನು ಯಾದೃಚ್ಛಿಕವಾಗಿ ಆಯ್ದು ಸ್ಥೂಲವಾಗಿ ಪರಿಗಣಿಸಿದಾಗ ಹೀಗೆನ್ನಿಸುತ್ತದೆ. ಈ ಜಾಲತಾಣದಲ್ಲಿ ೫,೬೦,೭೪೫ ಥೀಸಿಸುಗಳಿದ್ದು ಭಾರತೀಯ ಸಮಾಜದಲ್ಲಿ ಸ್ಥಾಪಿತಗೊಂಡಿರುವ ಸೈದ್ಧಾಂತಿಕ, ಐತಿಹಾಸಿಕ, ಮಾನವಿಕ ಮತ್ತು ಸಾಮಾಜಿಕ ವಿಷಯಗಳಲ್ಲಿ ಕೆಲವೇ ಕೆಲವು ಖ್ಯಾತ ಸಿದ್ಧಾಂತಗಳನ್ನು ಪರಿಶೀಲಿಸಿ ನೋಡಿದಾಗ ಆ ಸಿದ್ಧಾಂತಗಳು ಸಾಮಾನ್ಯ ತಿಳಿವಳಿಕೆಯ ವಿಶ್ಲೇಷಣೆಗೆ, ತರ್ಕಕ್ಕೆ, ಮತ್ತು ಸಾಕ್ಷಿಗಳಿಗೆ ತದ್ವಿರುದ್ಧವಾಗಿವೆ. ವೀರಶೈವ-ಲಿಂಗಾಯತದ ಅಧ್ಯಯನದ ಈ ಅಧ್ವಾನ ಕೇವಲ ಇದೊಂದೇ ಸಾಮಾಜಿಕ ವಿಷಯಕ್ಕೆ ಅನ್ವಯಿಸುವುದಲ್ಲದೆ ದೇಶದ ಅನೇಕ ಸಾಮಾಜಿಕ ಸಂಶೋಧನೆಗಳಿಗೆ ಅನ್ವಯಿಸಿ ರಾಷ್ಟ್ರವ್ಯಾಪಿಯಾಗಿದೆ. ಇದೆಲ್ಲವೂ ಪೂರ್ವಾಗ್ರಹ ಎಂಬ ಸುಪ್ತ ಭಾವನೆಗಳ ಸಂಕೋಲೆಯೊಳಗಿನ ಸೃಷ್ಟಿ! 'ಇತಿಹಾಸವನ್ನು ಅರಿಯದವರು ಭವಿಷ್ಯವನ್ನು ಕಟ್ಟಲಾರರು' ಎಂಬುದು ಅಂಬೇಡ್ಕರ್ ಅವರ ವಿಖ್ಯಾತ ಉದ್ಘೋಷ. ಈ ಉದ್ಘೋಷವನ್ನು ಶೋಷಿಸುತ್ತಲೇ ಸಂಶೋಧಕರು ಪ್ರಾಗೈತಿಹಾಸಿಕ ನೆಲೆಯಿಂದ ಬಹುದೂರ ನಡೆದು ಸಂಕಥನಗಳನ್ನು ಕಟ್ಟಿಬಿಟ್ಟಿದ್ದಾರೆ. ಹೀಗೆ ಸೃಷ್ಟಿಸಿದ ಬೌದ್ಧಿಕ ದಾರಿದ್ರ್ಯದ ಅಗಾಧತೆ ಅಪಾರ. 


ತರ್ಕಶಾಸ್ತ್ರದ ಭವ್ಯ ಇತಿಹಾಸವನ್ನು ಧರ್ಮಾತೀತವಾಗಿ ಕಟ್ಟಿಕೊಟ್ಟಿರುವ ಹಿಂದೂ, ಜೈನ, ಮತ್ತು ಬೌದ್ಧ ತರ್ಕಶಾಸ್ತ್ರಗಳು ಕೇವಲ ಗಣಿತದ ಸೂತ್ರಗಳಾಗಿಯಲ್ಲದೇ ಚಾರ್ಲ್ಸ್ ಬ್ಯಾಬೇಜ್ ನ ಕಂಪ್ಯೂಟರ್ ಆವಿಷ್ಕಾರದಲ್ಲಿ ಸೇರಿ ಇಂದು ನಾವೆಲ್ಲರೂ ಬಳಸುವ ಗಣಕ, ಜಂಗಮವಾಣಿಯ ಹಾರ್ಡ್ವೇರ್ ಮತ್ತು ಸಾಫ಼್ಟ್ವೇರ್ ಪ್ರೋಗ್ರ್ಯಾಮುಗಳ ಸೂತ್ರವಾಗಿ ಜಾಗತಿಕ ಜಗತ್ತಿನ ಪ್ರಗತಿಯಲ್ಲಿ ಬಹುದೊಡ್ಡ ಪಾಲು ಪಡೆದಿವೆ. ಹತ್ತೊಂಬತ್ತನೇ ಶತಮಾನದಿಂದಾದ ಪಾಶ್ಚಿಮಾತ್ಯ ಪ್ರಗತಿಯಲ್ಲಿ ಭಾರತೀಯ ತರ್ಕಶಾಸ್ತ್ರದ ಕೊಡುಗೆ ಅಪಾರ ಮತ್ತು ಬೈನರಿಯಷ್ಟೇ ನಿಖರ. ಭಾರತವನ್ನು "ವಿಶ್ವಗುರು" ಎಂದೆನ್ನಲೇಬೇಕಾದರೆ ಅದು ಶತಶತಮಾನಗಳ ಭೂತಕಾಲದಲ್ಲಿಯೇ ಹೊರತು ಕಳೆದ ಹದಿಮೂರು ಶತಮಾನಗಳಿಂದಂತೂ ಅಲ್ಲ. ಸ್ವತಂತ್ರ ಭಾರತದ ವರ್ತಮಾನದಲ್ಲಂತೂ ಅಲ್ಲವೇ ಅಲ್ಲ!


ಹೀಗೆ ಕ್ರಿಸ್ತಪೂರ್ವದಿಂದಲೇ ನ್ಯಾಯ, ತರ್ಕ, ವೈಶೇಷಿಕ, ವ್ಯಾಕರಣ, ವೈದ್ಯ, ಯೋಗ, ಬಾಹ್ಯಾಕಾಶ, ಗಣಿತ, ಲೋಹ, ಕಾಮ, ಅರ್ಥಶಾಸ್ತ್ರಗಳಲ್ಲದೇ ಯುದ್ಧ, ಶಸ್ತ್ರ, ಆನೆ ಪಳಗಿಸುವುದು, ಕುದುರೆಗಳ ತಳಿವರ್ಧನೆಯಂತಹ ವಿಷಯಗಳನ್ನೊಳಗೊಂಡ ಹದಿನಾಲ್ಕು ವಿದ್ಯೆ, ಅರವತ್ನಾಲ್ಕು ಕಲೆಗಳ ಭಾರತದ ಸಂಶೋಧನಾ ವೈಜ್ಞಾನಿಕ ವ್ಯವಸ್ಥೆಯು ಸ್ವತಂತ್ರ ಭಾರತದಲ್ಲಿ ದಾರುಣವಾಗಿ ಅಧೋಮುಖ ಪೂರ್ವಾಗ್ರಹಪೀಡಿತ ಪಲ್ಲಟಕ್ಕೊಳಗಾಗಲು ಕಾರಣವೇನು?!?


ಮನುಸ್ಮೃತಿ!!!


ಭಾರತದ ಇತಿಹಾಸದುದ್ದಕ್ಕೂ ಮನುಸ್ಮೃತಿ ಕೇವಲ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಒಂದು ಸಾಮಾನ್ಯ ಗ್ರಂಥವಾಗಿತ್ತೇ ಹೊರತು ಯಾವುದೇ ಸಾಮ್ರಾಜ್ಯದ ಅಧಿಕೃತ ಮಾನ್ಯತೆ ಪಡೆದಿರಲಿಲ್ಲ. ಮನುಸ್ಮೃತಿಯನ್ನು ಯಾವುದೇ ಐತಿಹಾಸಿಕ ರಾಜಪ್ರಭುತ್ವ ಯಾ ಸಾಮ್ರಾಜ್ಯಗಳು ಒಂದು ನ್ಯಾಯಾಂಗ ವ್ಯವಸ್ಥೆಯಾಗಿ ಒಪ್ಪಿಕೊಂಡಿರುವ ಕುರುಹಿಲ್ಲ. ಅಷ್ಟರಮಟ್ಟಿಗೆ ಭಾರತೀಯ ಪ್ರಭುತ್ವಗಳು ಧರ್ಮಾತೀತವಾಗಿದ್ದವು! ಭಾರತದ ಮುಸ್ಲಿಂ ಸಾಮ್ರಾಜ್ಯಗಳು ಕೂಡಾ ಮುಸ್ಲಿಮರಿಗೆ ಮಾತ್ರ ಷರಿಯಾ ಕಾನೂನು ಅನ್ವಯಿಸುತ್ತಿದ್ದವೇ ಹೊರತು ಎಲ್ಲಾ ಪ್ರಜೆಗಳಿಗೂ ಅಲ್ಲ. ಮನುಸ್ಮೃತಿಯ ಕಾಲವು ಕ್ರಿ.ಶ. ಎರಡನೇ ಶತಮಾನವೆನ್ನುವ ವಾದದಿಂದ ಕ್ರಿ.ಶ. ಹದಿನೇಳನೇ ಶತಮಾನದವರೆಗೆ ಹೊಯ್ದಾಡುತ್ತದೆ. ಒಟ್ಟಾರೆ ಕಾಲಕಾಲಕ್ಕೆ ಇದು ತಿದ್ದಲ್ಪಟ್ಟು ಪರಿವರ್ತಿತಗೊಂಡಿದೆ ಎಂಬುದು ಮಾತ್ರ ಸತ್ಯ. ಗ್ರೀಕರ ಕುರಿತಾಗಿ, 'ಯವನರು ಬ್ರಾಹ್ಮಣ್ಯವನ್ನು ಒಪ್ಪದೇ ಕ್ಷತ್ರಿಯರಾಗಿ ಕ್ರಮೇಣ ಶೂದ್ರರಾಗುತ್ತ ಕಳೆದುಹೋದರು' ಎನ್ನುವ ಮನುಸ್ಮೃತಿಯ ಸಾಲುಗಳು ಇದು ಐಚ್ಛಿಕ ವೃತ್ತಿಯಾಧಾರಿತ ವರ್ಣವನ್ನು ಎತ್ತಿಹಿಡಿದಿತ್ತೇ ಹೊರತು ಹುಟ್ಟಿನಿಂದಾಧರಿತ ಜಾತಿಯನ್ನಲ್ಲ ಎಂಬುದಕ್ಕೆ ಒಂದು ಸ್ಪಷ್ಟ ಉದಾಹರಣೆ.


ಇನ್ನು ಅಸಲಿಗೆ ತನ್ನಲ್ಲೇ ಸಾಕಷ್ಟು ಗೊಂದಲ, ವ್ಯತಿರಿಕ್ತತೆ, ಅಸಂಬದ್ಧತೆಗಳನ್ನು ಹೊಂದಿದ್ದ ಈ ಗ್ರಂಥಕ್ಕೆ, ಬ್ರಿಟಿಷ್-ಪೂರ್ವ ಭಾರತದ ಇತಿಹಾಸದಲ್ಲಿ ಒಂದು ಸಾಮಾನ್ಯ ಗ್ರಂಥಕ್ಕಿರುವ ಮಹತ್ವ ಕೂಡಾ ಇರದಿದ್ದರೂ ಇದಕ್ಕೆ ಪ್ರಾಮುಖ್ಯತೆ ಕೊಟ್ಟದ್ದು ಬ್ರಿಟಿಷರು! ಬ್ರಿಟಿಷರು ಯಾವಾಗ ಮನುಸ್ಮೃತಿಯನ್ನು ಹಿಂದೂ ಕಾನೂನಾಗಿಸಿ, ತಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ತಮ್ಮದೇ ಆಲೋಚನೆಯ ಶಿಷ್ಟ ಪದ್ಧತಿಯ ಸಂಪ್ರದಾಯ, ಮಡಿವಂತಿಕೆ, ಅಸ್ಪೃಶ್ಯತೆಯನ್ನು ಹೇರಲಾರಂಭಿಸಿದರೋ ಅಂದಿನಿಂದ ಭಾರತೀಯರು ತಮ್ಮದೇ ಆದ ಮಡಿವಂತಿಕೆಯನ್ನು ಮನುಸ್ಮೃತಿಗನುಗುಣವಾಗಿ ಕ್ಷಿಪ್ರವಾಗಿ ರೂಪಿಸಿಕೊಳ್ಳುತ್ತ ಒಂದು ತಲೆಮಾರಿನ ಅಂತರದೊಳಗೆ ಆಸಕ್ತಿಕರ ಕಾಮಸೂತ್ರವನ್ನೂ ಕತ್ತಲುಸೂತ್ರವಾಗಿಸಿ ಅಳಿದುಳಿದ ಶಾಸ್ತ್ರಸೂತ್ರಗಳ ಪಳೆಯುಳಿಕೆಗಳನ್ನು ಮಾಯವಾಗಿಸಿದರು. ಹೀಗೆ ಮಾಯವಾಗಿಸಲು ಕೇವಲ ಒಂದು ತಲೆಮಾರಿನ ಅಂತರದಷ್ಟು ಕಾಲ ಸಾಕು ಎಂಬುದು ಬ್ರಿಟಿಷರ ಅನುಭವವಾಗಿತ್ತು. ಐರ್ಲೆಂಡ್ ಭಾಷೆ, ಆಫ್ರಿಕನ್ ಸಂಸ್ಕೃತಿಗಳು ಹೀಗೆಯೇ ಒಂದು ತಲೆಮಾರಿನ ಅಂತರದಲ್ಲಿ ಬ್ರಿಟಿಷರು ಮಾಯವಾಗಿಸಿದ್ದರು. ಅಂದಹಾಗೆ ಇತಿಹಾಸದುದ್ದಕ್ಕೂ ಪ್ರಾಮುಖ್ಯತೆ ಇರದಿದ್ದ ಈ ಸಾಮಾನ್ಯ ಗ್ರಂಥಕ್ಕೆ ಬ್ರಿಟಿಷರಷ್ಟೇ ಅಲ್ಲದೇ ಆಧುನಿಕ ವಿಚಾರವಂತ ಚಿಂತಕರು ಕೂಡಾ ಏಕೆ ಅಷ್ಟೊಂದು ಪ್ರಾಮುಖ್ಯತೆ ಕೊಟ್ಟಿರುವರು? 


ಭಾರತದ ಆಡಳಿತವನ್ನು ಮೊಗಲರಿಂದ ವಶಪಡಿಸಿಕೊಂಡ ಮೇಲೆ ಹಿಂದಿನ ಕಾನೂನುಗಳ ಪ್ರಕಾರ ಮುಸ್ಲಿಮರಿಗೆ ಷರಿಯಾ ನ್ಯಾಯವಿದ್ದು ಮುಸ್ಲಿಮೇತರರಿಗೆ ಅನ್ವಯಿಸುವ ನ್ಯಾಯವು ಸತ್ಯ, ನೈತಿಕತೆಯ ಆಧಾರದ ಮೇಲೆ ನಿರ್ಣಯವಾಗುತ್ತಿತ್ತೇ ಹೊರತು ಇನ್ಯಾವ ಧರ್ಮಗ್ರಂಥ ಆಧಾರವಾಗಿ ಅಲ್ಲ. ಹಾಗಾಗಿ ಬ್ರಿಟಿಷರಿಗೆ, "ಅಯ್ಯೋ ಪಾಪ, ಮುಸ್ಲಿಮೇತರರಿಗೆ ಸಹ ಅವರ ಧರ್ಮದ ಆಧಾರದ ಒಂದು ನ್ಯಾಯಾಂಗ ವ್ಯವಸ್ಥೆ ಕೊಡುವುದು ನಮ್ಮ ನೈತಿಕ ಜವಾಬ್ದಾರಿ" ಎಂಬ ನೈತಿಕತೆ ಬಾಧಿಸತೊಡಗಿತ್ತು. ಆ ಕಾರಣಕ್ಕಾಗಿ ಅವರಿಗೆ ನ್ಯಾಯ ನಿರ್ಣಯದ ಕೆಲವು ಲಿಖಿತ ಅಂಶಗಳನ್ನು ಹೊಂದಿದ್ದ ಏಕೈಕ ಮುಸ್ಲಿಮೇತರ ಗ್ರಂಥವಾಗಿ ನಿರ್ಲಕ್ಷಿತ ಮನುಸ್ಮೃತಿ ಗೋಚರಿಸಿತು.  


ಭಾರತದಂತಹ ಬೃಹತ್ ರಾಷ್ಟ್ರವನ್ನು ’ವಿಭಜಿಸು, ಆಳು’ ನೀತಿಯಿಂದ ಮಾತ್ರ ಗೆಲ್ಲಲು ಸಾಧ್ಯವೆಂದು ನಿರ್ಧರಿಸಿದ್ದ ಬ್ರಿಟಿಷರು ಪ್ರಾಥಮಿಕ ಹಂತವಾಗಿ ಇಲ್ಲಿನ ಊಳಿಗಮಾನ ರಾಜ, ಸರದಾರ, ಪಾಳೆಗಾರರ ನಡುವಿದ್ದ ಸ್ವಾಭಾವಿಕ ಈರ್ಷ್ಯೆಯನ್ನು ಬಳಸಿಕೊಳ್ಳುತ್ತ ತಳವೂರಿದರು. ಕ್ರಿ.ಶ. ೧೭೬೫ ರ ಹೊತ್ತಿಗೆ ಬಹುಪಾಲು ಭಾರತವನ್ನು ವಶಪಡಿಸಿಕೊಂಡ ನಂತರ ಇಲ್ಲಿನ ಜನಸಾಮಾನ್ಯರನ್ನು ಹೇಗೆ ವಿಭಜಿಸಿ ಆಳ್ವಿಕೆ ನಡೆಸಬೇಕೆಂದು ಯೋಚಿಸುತ್ತಿದ್ದ ಬ್ರಿಟಿಷರಿಗೆ ಇತಿಹಾಸದ ಕಸದಬುಟ್ಟಿಯಲ್ಲಿದ್ದ ನಿಕೃಷ್ಟ ಗ್ರಂಥವಾದ ಮನುಸ್ಮೃತಿ, ಆ ದಿವ್ಯದೃಷ್ಟಿಯ ನಕಾಶೆಯಾಗಿ ಶೋಭಾಯಮಾನವಾಗಿ ಪ್ರಕಾಶಿಸಿತು. 


ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಈ ಗ್ರಂಥವು ಬ್ರಿಟಿಷರ ಅತ್ಯಾಪ್ತ ಗ್ರಂಥವಾಯಿತು. 


ಬ್ರಿಟಿಷ್ ಇತಿಹಾಸಜ್ಞನಾದ ಸರ್ ವಿಲಿಯಂ ಜೋನ್ಸ್ ಸಂಸ್ಕೃತ ಭಾಷೆಯು ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಿಗಿಂತ ಉತ್ಕೃಷ್ಟ ಭಾಷೆಯೆನ್ನುತ್ತಾ ಈಜಿಪ್ಟಿನ ಪುರೋಹಿತರುಗಳು ಸಿಂಧೂ ನಾಗರೀಕತೆಗೂ ಮುಂಚೆಯೇ ಭಾರತಕ್ಕೆ ವಲಸೆ ಬಂದಿದ್ದರೆಂದು ಪ್ರತಿಪಾದಿಸುವುದಲ್ಲದೇ ಚೀನಾ ದೇಶ ಕೂಡಾ ಹಿಂದೂ ರಾಷ್ಟ್ರವಾಗಿದ್ದು ಚೀನೀಯರೆಲ್ಲಾ ಹಿಂದೂ ಕ್ಷತ್ರಿಯರೆಂದು ಪ್ರತಿಪಾದಿಸಿದ್ದಾನೆ. ಅಂದಿನ ಕಾಲದ ಅತ್ಯಂತ ಗೌರವಾನ್ವಿತ ಇತಿಹಾಸಜ್ಞ ಮತ್ತು ಭಾಷಾತಜ್ಞನಾದ ಇವನು ಸಂಸ್ಕೃತ, ಪರ್ಷಿಯನ್ ಭಾಷೆಗಳಲ್ಲಿ ಪ್ರಬುದ್ಧತೆಯನ್ನು ಹೊಂದಿದ್ದನು. ಮೊಟ್ಟಮೊದಲ ಬಾರಿಗೆ ಬ್ರಿಟಿಷ್ ಸರ್ಕಾರಕ್ಕೆ ಭಾರತೀಯರನ್ನು ಆರ್ಯ, ದ್ರಾವಿಡ, ಅರಬ(ಮುಸ್ಲಿಂ)ರೆಂದು ಜನಾಂಗೀಯವಾಗಿ ಗುರುತಿಸ(ವಿಭಜಿಸ)ಬೇಕೆಂಬ ಮಂಡನೆಯನ್ನಿರಿಸಿದವನೇ ಇವನು.


ಮುಂದೆ ಕ್ರಿ. ಶ. ೧೭೯೪ರಲ್ಲಿ ಸರ್ ವಿಲಿಯಂ ಜೋನ್ಸ್, ಬ್ರಿಟಿಷ್ ಸರ್ಕಾರದ ಅಣತಿಯಂತೆ ಹಿಂದೂ ಕಾನೂನಾಗಿಸಲೆಂದೇ ಮನುಸ್ಮೃತಿಯನ್ನು ಇಂಗ್ಲಿಷಿಗೆ ಭಾಷಾಂತರಿಸಿದನು. ಈ ರೀತಿಯಾಗಿ ಮುಸ್ಲಿಮೇತರ ಶೈವ, ಜೈನ, ಬೌದ್ಧ, ವೈಷ್ಣವ, ಸಿಖ್ ಎಲ್ಲಾ ಭಾರತೀಯರಿಗೆ ’ಹಿಂದೂ ಕಾನೂನು’ ಆದ ಮನುಸ್ಮೃತಿ, ಬ್ರಿಟಿಷ್ ಭಾರತದಲ್ಲಿ ಜಾತಿವ್ಯವಸ್ಥೆಯನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯಿತು. ಅಸ್ಪೃಶ್ಯತೆ ಭೀಕರ ಸ್ವರೂಪ ಪಡೆಯಿತು. ಹಿಂದೂ ಕಾನೂನಿಗೆ ತಕ್ಕನಾಗಿ ಇಸ್ಲಾಂನ ಷರಿಯಾ ಅಂಶಗಳು ’ಮುಸ್ಲಿಂ ಕಾನೂನು’ ಆಗಿ ವ್ಯವಸ್ಥೆಯ ಭಾಗವಾಗಿ ಆಗಲೇ ಇದ್ದವು. ಈ ಜಾತೀಯತೆಯ ವರ್ಗೀಕರಣ ಬ್ರಿಟಿಷರ ವಿಭಜಿಸಿ ಆಳುವ ಆಡಳಿತ ನೀತಿಗೆ ಅನುಕೂಲ ಉಂಟುಮಾಡಿದ್ದಲ್ಲದೆ, ಕ್ರಿಶ್ಚಿಯನ್ ಮಿಷನರಿಗಳು ಧರ್ಮಪ್ರಸಾರ ಮಾಡಲು ಕೂಡಾ ಸಹಕಾರಿಯಾಯಿತು. ಅನಕ್ಷರತೆ, ಅಂಧಶ್ರದ್ಧೆ, ಊಳಿಗಮಾನ, ಪುರುಷಪ್ರಧಾನ ವ್ಯವಸ್ಥೆಯಲ್ಲಿ ಮುಳುಗಿಹೋಗಿದ್ದ ಅಂದಿನ ಭಾರತ ಮನುಸ್ಮೃತಿಯ ವಿಸ್ಮೃತಿಯನ್ನು ತಮ್ಮ ಪಿತ್ರಾರ್ಜಿತ ಆಸ್ತಿಯೆಂಬಂತೆ ಗಾಢವಾಗಿ ಅಪ್ಪಿಕೊಂಡು ಜಾತೀಯತೆಯನ್ನು ಕಾಳ್ಗಿಚ್ಚಿನಂತೆ ಪಸರಿಸಿತು. 


ಹಳತನ್ನು ಧಿಕ್ಕರಿಸಿ ಏನನ್ನಾದರೂ ಹೊಸತನವನ್ನು ಸಾಧಿಸಬೇಕೆಂಬ ಬಿಸಿರಕ್ತದ ಭಾರತೀಯ ವಿದ್ಯಾವಂತ ನಾಯಕರಿಗೆ ಸ್ವಾತಂತ್ಯ ಚಳುವಳಿ ಅತ್ಯಂತ ಆಕರ್ಷಕವಾದ ಉನ್ನತ ಆದರ್ಶವೆನಿಸಿತು. ಮನುಸ್ಮೃತಿಯ ಇತಿಹಾಸದ ಸತ್ಯಾಸತ್ಯತೆಯನ್ನು ಕಿಂಚಿತ್ತೂ ಕೆದಕದೆ ಬ್ರಿಟಿಷರಂತೆಯೇ ಈ ಯುವಪಡೆಯ ನಾಯಕತ್ವವು ತಮ್ಮದೇ ಆದ ರಾಜಕೀಯ, ಸಾಮಾಜಿಕ, ಚಿಂತನೆಗಳನ್ನು ಸ್ವತಂತ್ರ ಭಾರತದ ಮೇಲೆ ಯಶಸ್ವಿಯಾಗಿ ಹೇರಲು ಮನುಸ್ಮೃತಿಯ ವಿಸ್ಮೃತಿಗೆ ಹೆಚ್ಚು ಆಸ್ಥೆಯ ಪ್ರಚಾರ ಕೊಟ್ಟು ಬಳಸಿಕೊಂಡಿತು. ಸಾಕಷ್ಟು ವಿದ್ಯಾವಂತರು ಕ್ರಿಸ್ತಪೂರ್ವದಿಂದಲೂ ಜಾರಿಯಿದ್ಧ ಮನುಸ್ಮೃತಿಯೇ ನಮ್ಮ ದೇಶದ ಎಲ್ಲಾ ದಾರಿದ್ರ್ಯಕ್ಕೆ ಕಾರಣ ಎಂದು ಬಲವಾಗಿ ನಂಬಿಬಿಟ್ಟಿದ್ದರು.


ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರರು ಮನುಸ್ಮೃತಿಯ ಕುರಿತು ಹೆಚ್ಚು ಸಂಶೋಧನೆಯನ್ನು ನಡೆಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರೂ, ಭಾರತ ಸ್ವಾತಂತ್ರ್ಯ ಹೋರಾಟದ ಉನ್ಮಾದದಲ್ಲಿ ಅಕ್ಷರಶಃ ಕಳೆದುಹೋಗಿದ್ದ ಎಲ್ಲಾ ವಿದ್ಯಾವಂತರು ಸಂಶೋಧಿಸುವುದಿರಲಿ ಅವರ ಮಾತನ್ನು ಪರಿಗಣಿಸುವ ತಾಳ್ಮೆಯನ್ನೂ ತೋರಲಿಲ್ಲ. 


ಅಂಬೇಡ್ಕರ್ ತಮ್ಮ ''The Untouchables: Who were they and why they Became Untouchables' ಕೃತಿಯಲ್ಲಿ ಅಸ್ಪೃಶ್ಯತೆಯ ಮೂಲವನ್ನು ಮಾನವ ವಿಕಾಸದಿಂದ ಹಿಡಿದು ಹಿಂದೂ (ಭಾರತ) ಅಹಿಂದೂ (ಭಾರತೇತರ) ಎಂದು ವರ್ಗೀಕರಿಸಿ ಗೆದ್ದವರು-ಸೋತವರ ನಡುವಿನ ಗರ್ವ-ದೀನ ಭಾವನೆಗಳು ಹೇಗೆ ಜಾಗತಿಕವಾಗಿ ಅಸ್ಪೃಶ್ಯತೆಗೆ ಬುನಾದಿ ಹಾಕಿದವು ಎನ್ನುತ್ತ ಇದು "ಯುರೋಪಿನಿಂದ ಆರಂಭವಾದದ್ದು" ಎನ್ನುತ್ತಾರೆ. ಭಾರತದ ಮನುಸ್ಮೃತಿಯ ಮನುವಿನ ಕಾಲದಲ್ಲಿ ಅಸ್ಪೃಶ್ಯತೆ ಇರಲಿಲ್ಲ ಎಂದಿದ್ದಾರೆ. (Chapter: When did Broken Men become untouchable? ಪುಟ ೧೪೩ ರಿಂದ ೧೪೭). ತಮ್ಮ ಕೃತಿಯ ಉದ್ದಕ್ಕೂ ಮನುಸ್ಮೃತಿಯಲ್ಲಿ ಎಲ್ಲಿಯೂ ಅಸ್ಪೃಶ್ಯತೆ ಬಗ್ಗೆ ಮಾಹಿತಿ ಇಲ್ಲ ಎಂದೇ ತಿಳಿಸಿದ್ದಾರೆ.


ಮುಂದಿನ ಕಾಲಘಟ್ಟದಲ್ಲಿ ಬೌದ್ಧರ ವಿರುದ್ಧ ಬ್ರಾಹ್ಮಣರಿಗೆ ಶ್ರೇಷ್ಠತೆಯ ಸಂಘರ್ಷ ಉಂಟಾಗಿ ಬ್ರಾಹ್ಮಣ ಮತ್ತು ಅಬ್ರಾಹ್ಮಣರ ಗೋಮಾಂಸಭಕ್ಷ್ಯ ನಿಷೇಧಕ್ಕೆ ಎಡೆ ಮಾಡಿಕೊಟ್ಟಿತು. ಇದರಿಂದ ಉಂಟಾದ ಗೋಮಾಂಸ ಭಕ್ಷಕರೆಡೆಯ ತಿರಸ್ಕಾರ ಮತ್ತು ಬೌದ್ಧ-ಬ್ರಾಹ್ಮಣ ಸಂಘರ್ಷವು ಎಲ್ಲೆ ಮೀರಿ ಅಸ್ಪೃಶ್ಯತೆಗೆ ದಾರಿ ಮಾಡಿಕೊಟ್ಟಿರಬಹುದು ಎಂಬ ಸಂಶಯವನ್ನು ವ್ಯಕ್ತಪಡಿಸುತ್ತಾರೆ. ಅದಕ್ಕೆ ಸಾಕ್ಷಿ ಎನ್ನುವುದಕ್ಕೆ ಮೃಚ್ಚಕಟಿಕಾ ನಾಟಕದ ಎರಡು ದೃಶ್ಯಗಳನ್ನು ಉದಾಹರಿಸುತ್ತಾರೆ. ಉದ್ಯಾನವನದ ಕೊಳವೊಂದಕ್ಕೆ ಬಟ್ಟೆ ತೊಳೆಯಲು ಬಂದ ಬೌದ್ಧ ಭಿಕ್ಷುವನ್ನು ಕೊಳದ ಬಳಿಯಿದ್ದ ರಾಜನ ಮೈದುನನು, "ನಾನು ಸ್ನಾನವನ್ನೂ ಮಾಡದ ಈ ಕೊಳದಲ್ಲಿ ಬಟ್ಟೆ ತೊಳೆಯಲು ಬಂದಿರುವೆಯಾ!" ಎಂದು ಥಳಿಸುತ್ತಾನೆ. ಇನ್ನೊಂದು ದೃಶ್ಯದಲ್ಲಿ ಚಾರುದತ್ತನು ತನ್ನ ಮಿತ್ರ ಮೈತ್ರೇಯನೊಂದಿಗೆ ಉದ್ಯಾನವನದಲ್ಲಿ ತನ್ನ ಪ್ರೇಮಿ ವಸಂತಸೇನೆಯ ಬರುವಿಕೆಗೆ ಕಾಯುತ್ತಿರುತ್ತಾನೆ. ಎಷ್ಟು ಕಾದರೂ ಆಕೆ ಬಾರದಿದ್ದಾಗ ನಿರಾಶನಾಗಿ ಉದ್ಯಾನವನದಿಂದ ಹೊರಹೋಗುತ್ತಿರುವಾಗ ಎದುರಿಗೆ ಬರುತ್ತಿದ್ದ ಬೌದ್ಧ ಭಿಕ್ಷುವನ್ನು ಕಂಡು, "ಇದು ಅಪಶಕುನ! ಬಾ ಬೇರೆ ದಾರಿಯಿಂದ ಹೋಗೋಣ" ಎಂದು ಬೇರೆ ದಾರಿ ಹಿಡಿಯುತ್ತಾನೆ. ಈ ಎರಡು ದೃಶ್ಯಗಳೂ ಹಿಂದೂಗಳಿಗೆ ಬೌದ್ಧರೆಡೆಗೆ ಇದ್ದ ಅಂದಿನ ಸಾಮಾಜಿಕ ದ್ವೇಷದ ನಿಲುವುಗಳೇ ಆಗಿದ್ದು ಇವು ಕ್ರಮೇಣ ಅಸ್ಪೃಶ್ಯತೆಗೆ ದಾರಿ ಮಾಡಿಕೊಟ್ಟಿರಬಹುದು ಎಂದು ಅಂಬೇಡ್ಕರ್ ಊಹಿಸುತ್ತಾರೆಯೇ ಹೊರತು ಅಂದು ಅಸ್ಪೃಶ್ಯತೆ ಇರಲಿಲ್ಲ ಎಂದೇ ನಿರ್ಧಾರ ವ್ಯಕ್ತಪಡಿಸಿದ್ದಾರೆ.


ಅಂದಹಾಗೆ ಲೌಕಿಕ ಜೀವನಾಸಕ್ತಿ ಹೊಂದಿದ ವ್ಯಕ್ತಿಗಳಿಗೆ ಅಲೌಕಿಕ ಆಸಕ್ತಿಯ ಸನ್ಯಾಸಿಗಳು ಎದುರಿಗೆ ಬಂದರೆ ಅಪಶಕುನ ಎಂಬ ಸಾಮಾಜಿಕ ಮೌಢ್ಯ ಕೇವಲ ಬೌದ್ಧ ಭಿಕ್ಷುಗಳೆಡೆಯಲ್ಲದೆ ಅಂದು ಬ್ರಾಹ್ಮಣರ ಕಡೆಗೂ ಇತ್ತು. ಉದ್ಯಾನವನದ ಕೊಳಗಳನ್ನು ಸ್ನಾನ, ಬಟ್ಟೆ ತೊಳೆಯಲು ಬಳಸದಂತೆ ಇಂದಿರುವ ನಿರ್ವಹಣಾ ನಿರ್ಬಂಧನೆಗಳು ಅಂದಿಗೂ ಇದ್ದಿರಬಹುದು ಎಂಬ ವಾಸ್ತವಾಂಶಗಳನ್ನು ಏಕೋ ಅಂಬೇಡ್ಕರರು ಇಲ್ಲಿ ಪರಿಗಣಿಸಿಲ್ಲ ಎಂಬುದು ಗಮನಾರ್ಹ.


ಹಾಗೆಯೇ ಮುಂದುವರಿಯುತ್ತಾ ಕ್ರಿಸ್ತಶಕ ಏಳನೇ ಶತಮಾನದ ಆರಂಭದಲ್ಲಿ ಬರೆದ ಬಾಣನ ಕಾದಂಬರಿಯಲ್ಲಿನ ಚಾಂಡಾಲ ಕನ್ಯೆಯ ಪ್ರಸಂಗವನ್ನು ಉಲ್ಲೇಖಿಸಿ ಅಂದೂ ಸಹ ಚಾಂಡಾಲರ ಕುರಿತಾಗಿ ಯಾವುದೇ ಅಸ್ಪೃಶ್ಯತೆ ಇರಲಿಲ್ಲ ಎನ್ನುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಚೀನೀ ಪ್ರವಾಸಿಗ ಫಾಹಿಯಾನನ ಚಾಂಡಾಲರ ಕುರಿತಾದ ಉಲ್ಲೇಖವನ್ನು ಎತ್ತಿ ಹಿಡಿದು ಅಂದಿಗೂ ಅಸ್ಪೃಶ್ಯತೆ ಇರಲಿಲ್ಲ ಎನ್ನುತ್ತಾರೆ. ಅಂತರವರ್ಣ ವಿವಾಹದ ಸಂಬಂಧದಲ್ಲಿ ಹುಟ್ಟಿದವರು, ಮದುವೆಯಿಲ್ಲದೆ ಹುಟ್ಟಿದವರು, ವಿಧವೆಗೆ ಹುಟ್ಟಿದವರನ್ನು ಚಾಂಡಾಲರೆಂದು ಕರೆಯುತ್ತಾರೆ ಎನ್ನುತ್ತ ಚಾಂಡಾಲರು ಬಗ್ಗೆ ಸಮಾಜದಲ್ಲಿ ಅಸ್ಪೃಶ್ಯತೆ ಇರಲಿಲ್ಲ ಎಂದಿದ್ದಾರೆ. ಆದರೆ ಹುಯೆನ್ ತ್ಸಾಂಗನ, "ಕಟುಕರು, ಮೀನುಗಾರರು, ದೋಮರು, ದೊಂಬರು, ಡೋಹರು ಊರಿನ ಹೊರಗೆ ವಾಸಿಸಬೇಕಿತ್ತು" ಎನ್ನುವ ಸಂಕ್ಷಿಪ್ತ ಮಾಹಿತಿಯನ್ನು ಹಿಡಿದು, "ಅಸ್ಪೃಶ್ಯತೆ ಬಗ್ಗೆ ಯಾವುದೇ ಖಚಿತ ನಿರ್ಣಯವನ್ನು ಕೈಗೊಳ್ಳಲು ಹುಯೆನ್ ತ್ಸಾಂಗನ ಸಂಕ್ಷಿಪ್ತ ಮಾಹಿತಿ ಏನೇನೂ ಸಾಲದಾದರೂ ಕೇವಲ ಚಾಂಡಾಲರಲ್ಲದೆ ಇತರರು ಸಹ ಊರ ಹೊರಗೆ ವಾಸಿಸುತ್ತಿದ್ದರು ಎನ್ನುವುದು ಈ ಕಾಲಘಟ್ಟದಲ್ಲಿ ಅಸ್ಪೃಶ್ಯತೆ ಹುಟ್ಟಿರಬಹುದು ಎನ್ನುವ ಸೂಚನೆಯಾಗಿದೆ" ಎಂದುಬಿಡುತ್ತಾರೆ. ಆದರೆ ತ್ಸಾಂಗನಿಗೂ ಮುಂಚಿನ ಫಾಹಿಯಾನ್ ಸಹ ಇದನ್ನೇ ಹೇಳಿದ್ದರೂ ಅದೇಕೋ ಅಂಬೇಡ್ಕರರಿಗೆ ಅದು ಸರಿ ಎನ್ನಿಸದೇ ತ್ಸಾಂಗನ ಮಾಹಿತಿ ಸರಿಯೆನ್ನಿಸಿರುವುದು ಆಶ್ಚರ್ಯಕರ! 


ತಮ್ಮ ವಾದವನ್ನು ಮುಂದುವರಿಸುತ್ತ ನಾಲ್ಕನೇ ಶತಮಾನದ ಗುಪ್ತರು ಗೋಹತ್ಯೆಯನ್ನು ನಿಷೇಧಿಸಿದ ಕಾರಣ ಅಸ್ಪೃಶ್ಯತೆಯ ಹುಟ್ಟು ನಾಲ್ಕರಿಂದ ಏಳನೇ ಶತಮಾನದ ನಡುವೆ ಬೌದ್ಧ ಮತ್ತು ಬ್ರಾಹ್ಮಣ ಸಂಘರ್ಷದ ಕಾರಣದಿಂದಲೇ ಆರಂಭವಾಗಿರಬಹುದು ಎಂದು ತರಾತುರಿಯ ನಿರ್ಣಯ ಕೊಟ್ಟು ತಮ್ಮ ನಿರ್ಣಾಯಕ ಪುಸ್ತಕವನ್ನು ಅಂತ್ಯಗೊಳಿಸುತ್ತಾರೆ. (Chapter: When did Broken Men become untouchable? ಪುಟ ೧೫೦ ರಿಂದ ೧೫೫).


ಖ್ಯಾತನಾಮರ ಕೃತಿಗಳ ಬಗ್ಗೆ ಎಷ್ಟೇ ವಸ್ತುನಿಷ್ಠವಾಗಿ ಅಭಿಪ್ರಾಯ ಮಂಡಿಸಿದರೂ ಅದು ಭಕ್ತಿ/ವಿಭಕ್ತಿಪೂರ್ವಕ ಪೂರ್ವಾಗ್ರಹ ಗ್ರಹಿಕೆಗೆ ಒಳಗಾಗುವ ದಟ್ಟ ಸಾಧ್ಯತೆಗಳಿರುತ್ತವೆ. ಆ ಕಾರಣ ಅಂಬೇಡ್ಕರ್ ಅವರ ಕೃತಿಯ ನಿರ್ಣಾಯಕ ಅಂತ್ಯವನ್ನು ಯಥಾವತ್ತಾಗಿ ಇಲ್ಲಿ ಕೊಟ್ಟಿದ್ದೇನೆ. ನೀವೇ ಅನುವಾದಿಸಿಕೊಂಡು ನಿರ್ಧರಿಸಿ: The Chinese traveller Yuan Chwang came to India in 629 A.D. He says, “As to their inhabited towns and cities the quadrangular walls of the cities (or according to one text, of the various regions) are broad and high, while the thoroughfares are narrow tortuous passages. The shops are on the highways and booths, or (inns) line the roads. Butchers, fishermen, public performers, executioners, and scavengers have their habitations marked by a distinguishing sign. They are forced to live outside the city and they sneak along on the left when going about in the hamlets.”


The above passage is too short and too brief for founding a definite conclusion thereon. There is. however, one point about it which is worthy of note. Fa-Hian’s description refers to the Chandalas only while the description given by Yuan Chwang applies to communities other than the Chandalas. This is a point of great importance. No such argument can be levelled against the acceptance of a description since it applies to communities other than the Chandalas. It is, therefore, just possible that when Yuan Chwang came to India, Untouchability had emerged.


On the basis of what has been said above we can conclude that while Untouchability did not exist in 200 A.D., it had emerged by 600 A.D.


These are the two limits, upper and lower, for determining tne birth of Untouchability. Can we fix an approximate date for the birth of Untouchability? I think we can, if we take beef-eating, which is the root of Untouchability, as the point to-start from. Taking the ban on beef-eating as a point to reconnoitre from, it follows that the date ot the birth of Untouchability must be intimately connected with the ban on cow-killing and on eating beef. If we can answer when cow-killing became an offence and beef-eating became a sin, we can fix an approximate date for the birth of Untouchability.


When did cow-killing become an offence?


We know that Manu did not prohibit the eating of beef nor did he make cow-killing an offence. When did it become an offence? As has been shown by Dr. D R Bhandarkar, cow killing was made a capital offence by the Gupta kings some time in the 4th Century A.D.


We can, therefore, say with some confidence that Untouchability was born some time about 400 A.D. It is born out of the struggle for supremacy between Buddhism and Brahmanism which has so completely moulded the history of India and the study of which is so woefully neglected by students of Indian history.


ಹೀಗೆ ಯಾವುದೇ ನಿರ್ಣಾಯಕ ಸ್ಪಷ್ಟತೆ ಕೊಡದ ಈ ಕೃತಿಯನ್ನು ಅಂಬೇಡ್ಕರರ ದುರ್ಬಲ ಕೃತಿ ಎನ್ನಬಹುದು. ಇನ್ನು ಅಂಬೇಡ್ಕರರು ಕ್ರಿ.ಶ. ೧೯೫೯ ರ ಜೂನ್ ತಿಂಗಳಲ್ಲಿ ಶ್ರೀಲಂಕಾದ ಕೊಲಂಬೋದಲ್ಲಿ ಯುವ ಬೌದ್ಧರ ಸಮ್ಮೇಳನದಲ್ಲಿ ಪಾಲ್ಗೊಂಡು, "ಬೌದ್ಧಧರ್ಮವನ್ನು ಇಲ್ಲವಾಗಿಸಿದ್ದು ಮುಸಲ್ಮಾನರು! ವಿದೇಶೀ ಆಕ್ರಮಣಕಾರರಾದ ಮುಸಲ್ಮಾನರು ಬೌದ್ಧಧರ್ಮಕ್ಕೆ ಕೊಡಲಿಯನ್ನು ಹಾಕಿದರು. ಮೂರ್ತಿಪೂಜಕರಾಗಿದ್ದ ಬೌದ್ಧರು, ಮತ್ತು ಹಿಂದೂಗಳನ್ನು ಮುಸ್ಲಿಮರು ಕೊಚ್ಚಿ ಹಾಕಿದರು. ಆಗ ಸನ್ಯಾಸಿಗಳಾಗಿದ್ದ ಬೌದ್ಧ ಬಿಕ್ಷುಗಳು ಇಲ್ಲದಂತಾಗಿ ಬೌದ್ಧಧರ್ಮ ಅವನತಿಗೊಂಡಿತು. ಇದನ್ನು ಸರಿಪಡಿಸಲು ಕೆಲ ಬೌದ್ಧಭಿಕ್ಷುಗಳು ಪ್ರಯತ್ನಿಸಿದರೂ ಅದು ಕೈಗೂಡಲಿಲ್ಲ" ಎಂದಿದ್ದಾರೆ. ಅಂದರೆ ಸ್ಪಷ್ಟವಾಗಿ ಇಸ್ಲಾಂ ದಾಳಿಯಿಂದ ಉಂಟಾದ ಧಾರ್ಮಿಕ ನಿರ್ವಾತ ತುಂಬಲು ಹಿಂದೂಗಳು "ಹುಟ್ಟಿನಿಂದ ಜಾತಿ"ಯನ್ನು ಅಳವಡಿಸಿಕೊಂಡು ತಮ್ಮ ಧರ್ಮವನ್ನು ಉಳಿಸಿಕೊಂಡರು ಮತ್ತು ಬೌದ್ಧರ ಕ್ಲಿಷ್ಟ ಭಿಕ್ಷುಸಾಧನೆಯ ಕಾರಣ ಬೌದ್ಧಧರ್ಮ ಅವನತಿಗೊಂಡಿತು ಎನ್ನುವುದು ಈ ಭಾಷಣದಿಂದ ಸಿಗುವ ಸುಳಿವು. ಅಂದರೆ ಹುಟ್ಟಿನಿಂದ ಜಾತಿ ನೀತಿಯು ಸೃಷ್ಟಿಸಿದ ಸಾಮಾಜಿಕ ಪಲ್ಲಟವನ್ನು ದೂರದೆ ಅಸ್ಪೃಶ್ಯತೆಯನ್ನು ಇಸ್ಲಾಂ ದಾಳಿಗೂ ಮುಂಚಿನ ಕಾಲಘಟ್ಟಕ್ಕೆ ನೂಕುವ ಧಾವಂತಕ್ಕೆ ಅಂಬೇಡ್ಕರರು ಒಳಗಾಗಿದ್ದರೆ ಎನ್ನುವುದು ಒಂದು

 ಸಂಶೋಧನಾ ಜಿಜ್ಞಾಸೆಗೆ ಬಿಟ್ಟ ವಿಷಯ. 


- ರವಿ ಹಂಜ್ 


ನಿರಂಜನವಂಶ ರತ್ನಾಕರ!

 ರಾವ್ ಸಾಹೇಬ ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ಶೂನ್ಯಪೀಠವು ಸಾಗಿಬಂದ ಇತಿಹಾಸವನ್ನು ವರ್ಣಿಸುವ "ನಿರಂಜನವಂಶ ರತ್ನಾಕರ" ಎಂಬ ಬಹುಮುಖ್ಯವಾದ ಗ್ರಂಥವನ್ನು ೧೯೩೨ರಲ್ಲಿ ಸಂಪಾದಿಸಿದ್ದಾರೆ. ಹಳೆಯ ಹಸ್ತಪ್ರತಿಯಲ್ಲಿದ್ದ ಇದರ ಮೂಲ ಲೇಖಕ ಯಾರೆಂದು ತಿಳಿದುಬಂದಿಲ್ಲ. ಆದರೆ ಈ ಗ್ರಂಥದಲ್ಲಿ ಯಾವುದೇ ಉತ್ಪ್ರೇಕ್ಷೆಗಳಿಲ್ಲದೆ ಶೂನ್ಯಪೀಠದ ಇಡೀ ವಂಶಾವಳಿಯನ್ನು ಮತ್ತದರ ಶೂನ್ಯಾಪೀಠಾಧಿಪತಿಗಳು ಸಾಗಿಬಂದ ಸಂಶೋಧಿತ ಇತಿಹಾಸವನ್ನು ನೈಜವಾಗಿ ವಾಸ್ತವದ ಹಿನ್ನೆಲೆಯಲ್ಲಿ ಕಟ್ಟಿಕೊಡಲಾಗಿದೆ. ಮೊದಲ ಭಾಗದಲ್ಲಿ ಅಲ್ಲಮಪ್ರಭುಗಳಿಂದ ಮುರುಘರಾಜೇಂದ್ರ ಸ್ವಾಮಿಗಳವರೆಗೆ (ಬಿಚ್ಚುಗತ್ತಿ ಭರಮಣ್ಣ ನಾಯಕನ ಕಾಲ)ಶೂನ್ಯಪೀಠದ ಆಗಿಹೋದ ಪೀಠಾಧಿಪತಿಗಳ ಸಂಕ್ಷಿಪ್ತ ಪರಿಚಯ ಇದ್ದರೆ ಎರಡನೇ ಭಾಗದಲ್ಲಿ ಮುಂದೆ ಶೂನ್ಯಪೀಠವು ಹೇಗೆ "ಸಮಯ"ಭೇದ ಅಂದರೆ ಆಚಾರ/ಅಭಿಪ್ರಾಯ ಭೇದಕ್ಕೊಳಗಾಗಿ ಭಿನ್ನ ಶಾಖೆಗಳಾಗಿ ಹೊಮ್ಮಿತು ಎಂಬ ಮಹತ್ವದ ಐತಿಹಾಸಿಕ ದಾಖಲೆ ಇದೆ.


ಭಾಗ ಒಂದರ ಸಂಕ್ಷಿಪ್ತ ವಿವರಣೆಯಲ್ಲಿ, "ಅಲ್ಲಮಪ್ರಭು, ಚೆನ್ನಬಸವಣ್ಣ ಮತ್ತು ಸಿದ್ಧರಾಮರು ಶೂನ್ಯಪೀಠದ ಮಠಾಧಿಪತಿಗಳಾದ ನಂತರ ಅನಾದಿಗಣನಾಥ, ಆದಿಗಣೇಶ್ವರ, ನಿರ್ಮಾಯಗಣೇಶ್ವರ, ನಿರಂಜನಸ್ವಾಮಿಗಳು, ಜ್ಞಾನಾನಂದಸ್ವಾಮಿಗಳು, ಆತ್ಮಗಣವರರು, ಅಧ್ಯಾತ್ಮಗಣನಾಥ, ರುದ್ರಮುನಿಸ್ವಾಮಿ, ಬಸವಪ್ರಭು ಸ್ವಾಮಿಗಳು, ಆದಿಲಿಂಗ ಸ್ವಾಮಿಗಳು, ಚನ್ನವೀರರಾಜೇಂದ್ರರು, ಗೋಸಲ ಸಿದ್ದೇಶ್ವರ ಸ್ವಾಮಿಗಳು, ಶಂಕರಾಚಾರ್ಯ ಸ್ವಾಮಿಗಳು, ದಿವ್ಯಲಿಂಗ ಸ್ವಾಮಿಗಳು, ಗೋಸಲ ಶ್ರೀ ಚನ್ನಬಸವರಾಜೇಂದ್ರರು, ತೋಂಟದ ಸಿದ್ಧಲಿಂಗ ದೇಶಿಕೇಂದ್ರರು, ನಿರಕ್ಷರ ಬೋಳುಬಸವೇಶ್ವರ ಸ್ವಾಮಿಗಳು, ಗುಮ್ಮಳಾಪುರದ ಗಡ್ಡದ ಸಿದ್ಧವೀರಣ್ಣ ಸ್ವಾಮಿಗಳು, ಗೂಳೂರ ಗುರುಸಿದ್ಧರಾಜೇಂದ್ರರು, ಗಗನದಾರ್ಯಸ್ವಾಮಿಗಳು, ಕಟ್ಟಿಗಿಹಳ್ಳಿ ಸಿದ್ಧವೀರಸ್ವಾಮಿಗಳು ನಂತರ ಮುರುಘರಾಜೇಂದ್ರ ಸ್ವಾಮಿಗಳು (ಬಿಚ್ಚುಗತ್ತಿ ಭರಮಣ್ಣನ ಕಾಲ) ಶೂನ್ಯಪೀಠವನ್ನು ಅಲಂಕರಿಸಿದ್ದರು" ಎನ್ನಲಾಗಿದೆ.


ಭಾಗ ಎರಡರಲ್ಲಿ, "ಕಟ್ಟಿಗಿಹಳ್ಳಿ ಸಿದ್ಧವೀರಸ್ವಾಮಿಗಳ ಕಾಲದಲ್ಲಿದ್ದ ಸಂಪಾದನೆ ಬುಡಕಟ್ಟಿನ ಸಿದ್ಧವೀರಪ್ಪ ಎಂಬ ಚರಮೂರ್ತಿಗಳಿದ್ದರು. ಇವರು ಸರ್ವಜ್ಞನ ತ್ರಿಪದಿಗಳನ್ನು ಸಂಪಾದಿಸಿ ಒಂದು ಪುಸ್ತಕವನ್ನು ಮಾಡಿದ ಕಾರಣ ಇವರಿಗೆ ಸಂಪಾದನೆ ಸಿದ್ಧವೀರಪ್ಪಗಳು ಎಂಬ ಹೆಸರು ಬಂದಿತ್ತು. ಮಹಾಪಂಡಿತರಾದ ಇವರಿಗೆ ಅಷ್ಟಾವರಣದಲ್ಲಿ ದೃಢತೆ ದಕ್ಕದ ಕಾರಣ ಅವರ ಲಿಂಗದ ಕಂಥೆಯು ಬಿರುಕುಬಿಟ್ಟಿತ್ತು. ಸಿದ್ದವೀರಪ್ಪಗಳು ತಮ್ಮ ಇಷ್ಟಲಿಂಗದ ವಿಷಯವನ್ನು ಗುರುಗಳಿಗೆ ತಿಳಿಸಿದಾಗ ಗುರುಗಳು ಅಷ್ಟಾವರಣದಲ್ಲಿ ದೃಢತೆಯನ್ನು ಮೂಡಿಸಿಕೋ ಎಂಬುದನ್ನು ನೇರವಾಗಿ ಹೇಳದೆ ಪರೋಕ್ಷವಾಗಿ ಮರುಕಂಥೆ ಕಟ್ಟಿಸಿಕೋ ಎಂದರು. ಮೂರು ಬಾರಿ ಕಂಥೆ ಕಟ್ಟಿಸಿದರೂ ಇಷ್ಟಲಿಂಗದ ಗೋಲಕ ಸಡಿಲವಾಗುತ್ತಲೇ ಇದ್ದಿತು. ಕಡೆಗೆ ಕಟ್ಟಿಗೆಹಳ್ಳಿ ಗುರುಗಳು ಶೂನ್ಯಪೀಠ ಶಾಸ್ತ್ರದ ಪ್ರಕಾರ ಸಿದ್ಧವೀರಪ್ಪಗಳ ಕೊರಳಿಗೆ ಬಹಿಷ್ಕಾರದ ಸಂಕೇತವಾಗಿ ಒಂದು ವಸ್ತ್ರವನ್ನು ಹಾಕಿ ಸಭೆಯಿಂದ ಹೊರಗೆ ಹಾಕಿದರು. ಇದರಿಂದ ಅವಮಾನಿತರಾದ ಸಿದ್ಧವೀರಪ್ಪಗಳು ಮೈಸೂರು ಸೀಮೆಯಲ್ಲಿದ್ದ ರಾಮಾನುಜ ವೈಷ್ಣವರು, ತಿಗಳರು, ತೆಲುಗು ಹತ್ತಿ ಬಣಜಿಗರು, ಹಂಡೆರಾವುತರನ್ನು ಸೇರಿಸಿಕೊಂಡು ಶಾಸ್ತ್ರವಾದದ ತರ್ಕಕ್ಕೆ ತನ್ನ ಗುರುಗಳಾಗಿದ್ದ ಕಟ್ಟಿಗೆಹಳ್ಳಿ ಸಿದ್ಧವೀರಸ್ವಾಮಿಗಳನ್ನು ಆಹ್ವಾನಿಸಿದರು. ಆದರೆ ತರ್ಕದಲ್ಲಿ ಅವರು ಸೋತುಹೋದರು. ಅದರ ಪರಿಣಾಮವಾಗಿ ಅವರ ಬೆನ್ನಿಗಿದ್ದವರು ತಪ್ಪು ದಂಡ ಕಟ್ಟಿ ದೀಕ್ಷೆ ಪಡೆದು ವೀರಶೈವಿಗರಾದರು. ತಪ್ಪು ದಂಡ ಕಟ್ಟಿಯೂ ದೀಕ್ಷೆ ಪಡೆಯದ ತಿಗಳರು, ತೆಲುಗು ಹತ್ತಿ ಬಣಜಿಗರು ವೈಷ್ಣವ ಧರ್ಮಕ್ಕೆ ಹೋದರು. ಕಟ್ಟಿಗಿಹಳ್ಳಿ ಸಿದ್ಧವೀರಸ್ವಾಮಿಗಳವರ ತರ್ಕವಾದಕ್ಕೆ ಮೆಚ್ಚಿದ ಮೈಸೂರು ಅರಸರು ೭೨ ಬಿರುದುಗಳನ್ನು ಕೊಟ್ಟು ಗೌರವಿಸಿದರು. ಬಹಿಷ್ಕೃತ ಚರಮೂರ್ತಿ ಸಿದ್ದವೀರಪ್ಪಗಳು ಹಾಗಲವಾಡಿ ಸಂಸ್ಥಾನದ ದೊರೆಯನ್ನು ಭಕ್ತನನ್ನಾಗಿ ಮಾಡಿಕೊಂಡು ಮಠ ಕಟ್ಟಿಕೊಂಡರು. ಸಿದ್ಧವೀರಪ್ಪನವರ ಬೆಂಬಲಕ್ಕೆ ಮೂಲ ಸಂಪಾದನೆ ಬುಡಕಟ್ಟಿನ ಹತ್ತು ಚರಮೂರ್ತಿಗಳಲ್ಲಿ ಐವರು ಚರಮೂರ್ತಿಗಳು ಸಹ ಹೋದರು" ಎಂದಿದೆ.


ಈ ತಾತ್ವಿಕಭೇದವೇ ಶೂನ್ಯಪೀಠದ ಮೊದಲ ಭೇದ! ಈ ಭೇದವನ್ನು "ಸಂಪಾದನೆಯ ಸಮಯ" ಎನ್ನುತ್ತಾರೆ. ಇಲ್ಲಿ ಸಮಯ ಎಂದರೆ ತಾತ್ವಿಕ/ಆಚಾರ ಭೇದ ಎಂದರ್ಥ. ಮೇಲ್ನೋಟಕ್ಕೆ ಇದು ವೈಯಕ್ತಿಕ ಪ್ರತಿಷ್ಠೆಯ ಭೇದ ಎನಿಸಿದರೂ ಇಲ್ಲಿ ಗುರು ಮತ್ತು ಚರಮೂರ್ತಿಗಳ ನಡುವಿನ ಸಾಧನೆಯ ಕುರಿತಾದ ತಾತ್ವಿಕ ಭಿನ್ನಾಭಿಪ್ರಾಯ ಈ ಸಮಯಕ್ಕೆ ಕಾರಣವಾಯಿತು ಎನ್ನಬಹುದು. 


ಏಕೆಂದರೆ ಈ ಭೇದವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸಿದ್ಧವೀರಪ್ಪಗಳು ಸಾಧನೆಗೆ ಲಿಂಗವು ಅವಶ್ಯವೇ, ಅರುಹಿಗಿಂತ ಕುರುಹು ಮುಖ್ಯವೇ ಎಂಬ ನಿಲುವು ಹೊಂದಿದ್ದರೆನಿಸುತ್ತದೆ. ಕಟ್ಟಿಗೆಹಳ್ಳಿ ಸಿದ್ಧವೀರಸ್ವಾಮಿಗಳ ನಿಲುವು ಸಹ ಇದೇ ಆಗಿದ್ದರೂ ತಮ್ಮ ಚರಮೂರ್ತಿ ಶಿಷ್ಯನು ಅಷ್ಟಾವರಣದಲ್ಲಿ ದೃಢತೆ ಪಡೆದು ನಂತರ ಮುಂದಿನ ಸಾಧನೆಗೆ ಅನುವಾಗಲಿ. ಯಾವುದೇ ಬಳಸುಮಾರ್ಗ ಸರಿಯಲ್ಲ ಎಂಬ ಅಭಿಪ್ರಾಯವನ್ನು ಹೊಂದಿದ್ದರು ಎನಿಸುತ್ತದೆ. ಹಂತಹಂತವಾಗಿ ಸಾಧನೆಗೈಯದ ಶಿಷ್ಯನನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕಿದ ಗುರು ಮತ್ತು ಸಾಧನೆಯ ಸಂಪ್ರದಾಯದ ಒಂದು ಹಂತವು ಅನಾವಶ್ಯಕ ಎನ್ನುವ ದೃಢ ನಿರ್ಧಾರದ ಶಿಷ್ಯನ ನಡುವಿನ ಈ ಪ್ರಸಂಗವು ಅಂದಿನ ತರ್ಕದ ಮಹತ್ವವನ್ನು ತೋರುತ್ತದೆ. ಅಲ್ಲದೆ ತನ್ನ ನಿಲುವು ಸರಿಯಿದ್ದರೆ ಅದಕ್ಕೆ ಬದ್ಧನಾಗಿ ಗುರುವನ್ನು ಸಹ ಸವಾಲಿಗೀಡುಮಾಡುತ್ತಿದ್ದ ಶಿಷ್ಯಪರಂಪರೆಯ ಬಗ್ಗೆ ಸಹ ಒಂದು ಒಳನೋಟವನ್ನು ನೀಡುತ್ತದೆ.


"ಈ ಕಟ್ಟಿಗಿಹಳ್ಳಿ ಸಿದ್ಧವೀರಸ್ವಾಮಿಗಳಿಗೆ ಇಬ್ಬರು ಮರಿಗಳಿದ್ದರು. ಅವರೇ ಮುರುಘರಾಜೇಂದ್ರ ಶಾಂತವೀರ ಸ್ವಾಮಿಗಳು ಮತ್ತು ನೋಟದ (ನೋಡ)ಸಿದ್ಧಲಿಂಗ ದೇಶಿಕೇಂದ್ರ ಸ್ವಾಮಿಗಳು. ತ್ರಾಟಕ ಯೋಗದಲ್ಲಿ ಅಪ್ರತಿಮ ಸಾಧನೆ ಮಾಡಿದ್ದ ಕಾರಣ ಇವರಿಗೆ ನೋಟದ ಅಥವಾ ನೋಡ ಎಂಬ ಉಪಸರ್ಗ ಅವರ ಹೆಸರಿಗೆ ಸೇರಿದ್ದಿತು. ದಿಲ್ಲಿಯ ಮಲ್ಲೂಖಾನನಿಂದ ಶಿಖಾಶೈಲವನ್ನು ಪಡೆದ ಸಿದ್ದವೀರಸ್ವಾಮಿಗಳು ಶಿಖಾಶೈಲ ಪಟ್ಟಕ್ಕೆ ಮುರುಘರಾಜೇಂದ್ರರನ್ನೂ, ಶಿವಾನುಭವ ಚರಂತಿಗೆ ಪಟ್ಟಕ್ಕೆ ನೋಡಸಿದ್ಧಲಿಂಗದೇಶಿಕೇಂದ್ರರನ್ನೂ ನೇಮಿಸಿದ್ದರು. ಈ ಈರ್ವರೂ ಪರಸ್ಪರ ಹೊಂದಿಕೊಂಡು ಅಧಿಕಾರ ನಡೆಸುತ್ತಿದ್ದರು. ಹೀಗಿರುವಾಗ ನೋಡಸಿದ್ಧಲಿಂಗ ಸ್ವಾಮಿಗಳು ಲಿಂಗೈಕ್ಯರಾದ ಕಾರಣ ಅವರ ಸ್ಥಾನಕ್ಕೆ ಮುರುಘಾಶಾಂತವೀರ ಸ್ವಾಮಿಗಳು ನೋಡಸಿದ್ಧಲಿಂಗಸ್ವಾಮಿಗಳ ಮರಿಯಾಗಿದ್ದ ಕುಮಾರಸ್ವಾಮಿಗಳಿಗೆ ಪಟ್ಟ ಕಟ್ಟಿದರು" ಎನ್ನಲಾಗಿದೆ.


ಹಾಗೆಯೇ ಮುಂದುವರಿಯುತ್ತ, "ಒಂದು ಮಹಾನವಮಿ ಸಭೆಯಲ್ಲಿ ಶಿಖಾಪಟ್ಟದ ಮುರುಘರಾಜೇಂದ್ರ ಸ್ವಾಮಿಗಳು ತಮ್ಮ ಸಹವರ್ತಿ ಶಿವಾನುಭವ ಚರಂತಿಕೆಯ ಕುಮಾರಸ್ವಾಮಿಗಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಮಾನ ಗೌರವ ನೀಡಿದ್ದುದು ಏಳುನೂರೆಪ್ಪತ್ತು ಬುಡಕಟ್ಟಿನ ವಿರಕ್ತ ಚರಮೂರ್ತಿಗಳಲ್ಲಿನ ಮೂಲ ಸಂಪಾದನೆ ಬುಡಕಟ್ಟಿನ ಐದು ಚರಮೂರ್ತಿಗಳಿಗೆ ಈರ್ಷ್ಯೆಯನ್ನುಂಟು ಮಾಡುತ್ತದೆ. ಆಗ ಅವರು ಕುಮಾರಸ್ವಾಮಿಗಳಿಗೆ ನೀಡಿದ ಅಂತಹುದೇ ಸಮಾನ ಸಾಷ್ಟಾಂಗ ಗೌರವವನ್ನು ನಮಗೂ ನೀಡಬೇಕು ಅಥವಾ ಕುಮಾರಸ್ವಾಮಿಗಳನ್ನು ನಮ್ಮೊಟ್ಟಿಗೆ ಕೆಳಹಂತದ ಆಸನದಲ್ಲಿ ಕೂರಿಸಬೇಕು ಎಂದು ಬೇಡಿಕೆಯನ್ನಿಡುತ್ತಾರೆ. ಆಗ ಉಳಿದ ಏಳುನೂರು ಎಪ್ಪತ್ತು ಬುಡಕಟ್ಟುಗಳ ಎಲ್ಲಾ ಚರಮೂರ್ತಿಗಳೂ ಒಕ್ಕೊರಲಿನಿಂದ, 'ಶಿವಾನುಭವ ಚರಂತಿಕೆಯ ಪಟ್ಟ ಇರುವುದು ಒಂದೇ ಒಂದು. ಅದು ಶಿಖಾಪಟ್ಟದಷ್ಟೇ ಸಮಾನ ಸ್ಥಾನ. ಅವರು ಸಾಮಾನ್ಯ ಚರಂತಿಕೆ ಪಟ್ಟಕ್ಕಿಂತ ಹೆಚ್ಚಿನ ಸ್ಥಾನದವರು. ಹಾಗಾಗಿ ಈ ಗೌರವಕ್ಕೆ ಅವರು ಅರ್ಹರು' ಎಂದು ಕುಮಾರಸ್ವಾಮಿಗಳ ಸ್ಥಾನಮಾನವನ್ನು ಬೆಂಬಲಿಸುತ್ತಾರೆ. ಆದರೂ ಒಪ್ಪದ ದುರಹಂಕಾರದ ಮಾತಿನ ಆ ಐವರನ್ನೂ ಹೊರಹಾಕಿ ಬಿಚ್ಚುಗತ್ತಿ ಭರಮಣ್ಣನಿಂದ ಗಡಿಪಾರು ಸಹ ಮಾಡಿಸಲಾಗುತ್ತದೆ. ಮುಂದೆ ಆ ಐವರಲ್ಲಿಯೂ 'ನಾನು ಹೆಚ್ಚು ನೀನು ಕಡಿಮೆ' ಎಂಬ ಅಹಂವುಂಟಾಗಿ ಐದೂ ಚರಂತಿಕೆಗಳು ಬೇರೆ ಬೇರೆ ಸಮಯಗಳಾಗಿ ಸ್ವತಂತ್ರವಾಗುತ್ತವೆ. ಇತ್ತ ಶೂನ್ಯಪೀಠದಡಿ ಇದ್ದ ಇನ್ನೂ ಕೆಲವು ಮಠಗಳಲ್ಲಿ ಇದೇ ರೀತಿಯ ಸ್ವಪ್ರತಿಷ್ಠೆಯ ಅಹಂ ಹೆಡೆಯೆತ್ತಿ ಮತ್ತಷ್ಟು ಸಮಯಭೇದಗಳಾಗುತ್ತವೆ. ಮುಂದೆ ಈ ಎಲ್ಲಾ ಸಮಯಗಳೂ ಸಂಘಟನೆಗೊಂಡು ಸಂಪಾದನಾ ಸಮಯ, ಮುರುಘಾ ಸಮಯ, ಕುಮಾರ ಸಮಯ, ಕೆಂಪಿನ ಸಮಯ, ಮತ್ತು ಚೀಲಾಳ ಸಮಯ ಎಂಬ ಐದು ಪ್ರಮುಖ ಸಮಯಗಳಾಗುತ್ತವೆ. ಮುಂದೆ ಇವುಗಳಲ್ಲಿ ಸಂಪಾದನಾ ಸಮಯ ಮತ್ತು ಕೆಂಪಿನ ಸಮಯಗಳು ಚೀಲಾಳ ಸಮಯದಲ್ಲಿ ವಿಲೀನವಾಗುತ್ತವೆ. ಮುರುಘಾ ಸಮಯದ ಮೂಲ ಚಿತ್ರದುರ್ಗದ ಮಠ. ಕುಮಾರ ಸಮಯದ ಮೂಲ ಜಡೇದ (ಸೋದೆ) ಮಠ ಮತ್ತು ಚೀಲಾಳ ಸಮಯದ ಮೂಲ ಡಂಬಳ ಮಠ! ಗದುಗಿನ ತೋಂಟದಾರ್ಯ ಮಠವು ತಮ್ಮಲ್ಲಿದ್ದ ಚೀಲಾಳ ತೋಟಪ್ಪಸ್ವಾಮಿಗಳ ದೆಸೆಯಿಂದ ತೋಂಟದಾರ್ಯ ಮಠ ಎಂದು ಹೆಸರಾಗಿದೆಯೇ ಹೊರತು ಎಡೆಯೂರು (ತೋಂಟದ) ಸಿದ್ಧಲಿಂಗೇಶ್ವರ ಸ್ವಾಮಿಗಳಿಂದಲ್ಲ ಎಂಬುದು ಗಮನಾರ್ಹ ಸಂಗತಿ. ಈ ಎಲ್ಲಾ ಸಮಯಗಳ ಮಠಗಳು ತಮ್ಮದೇ ಆದ ಚರಂತಿಕೆಯ ಶಾಖಾ ಮಠಗಳನ್ನು ಹೊಂದಿವೆ. ಮುರುಘಾ ಸಮಯ ಮತ್ತು ಕುಮಾರ ಸಮಯಗಳೆರಡೂ ಒಂದೇ ಎನಿಸಿದರೂ ಅವು ಭಿನ್ನವಾಗಿದ್ದವು ಎಂಬುದಕ್ಕೆ ಜಡೇದ ಮಠದಲ್ಲಿನ ಎರಡು ಬೇರೆ ಬೇರೆ ಗದ್ದುಗೆಗಳೇ ಸಾಕ್ಷಿ" ಎಂದು ವಿವರಿಸಲಾಗಿದೆ.


ಇಲ್ಲಿ ಸ್ಪಷ್ಟವಾಗಿ ಗಮನಿಸಿದರೆ ಮೊದಲ ಸಂಪಾದನೆ ಸಮಯದ ಭೇದದ ನಂತರ ಈ ಎಲ್ಲಾ ಉಳಿದ ಭೇದಗಳಲ್ಲಿ ಯಾವುದೇ ತಾತ್ವಿಕ ಭೇದ ಇರದೆ ಕೇವಲ ಮಠಾಧೀಶರ ವೈಯಕ್ತಿಕ ಸ್ವಪ್ರತಿಷ್ಠೆಯ ಕಾರಣ ಭೇದವುಂಟಾಗಿದ್ದರೂ ಇವುಗಳನ್ನು ಲೇಖಕ ಗೌರವಪೂರ್ವಕವಾಗಿ "ಸಮಯ" ಎಂದಿದ್ದಾನೆ. ಏಕೆಂದರೆ ಸ್ವಪ್ರತಿಷ್ಠೆಯ ವಿನಃ ಇವರೆಲ್ಲರೂ ಮಹಾನ್ ಸಾಧಕರೇ ಆಗಿದ್ದರು.


ಈ ಇಡೀ ಗ್ರಂಥದಲ್ಲಿ ಎಲ್ಲಿಯೂ ಲಿಂಗಾಯತ ಪ್ರತ್ಯೇಕವಾದಿಗಳು ಮಂಡಿಸುವ ಸಂಕಥನಗಳ ಒಂದೇ ಒಂದು ವಿಚಾರದ ಪ್ರಸ್ತಾಪವಿಲ್ಲ. ವಚನಗಳು ಧರ್ಮಗ್ರಂಥ ಎಂಬ ಉಲ್ಲೇಖವಿಲ್ಲ. ತರ್ಕ, ವೇದ, ವ್ಯಾಕರಣ, ಶಾಸ್ತ್ರಾಗಮ, ಪುರಾಣೋಪನಿಷತ್ತು, ನ್ಯಾಯ, ವೈಶೇಷಿಕವಲ್ಲದೇ ಮಂತ್ರಪಠಣದಲ್ಲಿನ ಪೂರಕ, ಕುಂಭಕ, ರೇಚಕ ಯೋಗದ ಉಲ್ಲೇಖಗಳಿವೆ. ಅಸಲಿಗೆ ವಚನಗಳ ಆಧಾರದ ಯಾವ ಧಾರ್ಮಿಕ ತಾತ್ಪರ್ಯವನ್ನೂ ಉಲ್ಲೇಖಿಸಿಲ್ಲ. ಶೂನ್ಯಪೀಠಕ್ಕೂ ಮುಂಚಿನ ವೀರಶೈವ ಪೀಠಗಳ ಕುರಿತು ಯಾವುದೇ ದ್ವೇಷವಾಗಲಿ, ವೈರತ್ವವಾಗಲಿ ಎಲ್ಲಿಯೂ ದಾಖಲಾಗಿಲ್ಲ. ಹಳೇಬೀಡಿನ ಮಠವೊಂದರ ವ್ಯಾಜ್ಯದ ಕುರಿತ ಪ್ರಸ್ತಾಪದಲ್ಲಿಯೂ, "ಶ್ರೀ ರಂಭಾಪುರಿ ವೀರಸಿಂಹಾಸನಕ್ಕೆ ಕಾರಣಕರ್ತರಾದ ಎಂಟುಜಡೆಯ ಸೋಮಶೇಖರ ಸ್ವಾಮಿಗಳವರು ಶ್ರೀಮತ್ ಪರಮೇಶ್ವರನ ಅರ್ಧಾಂಗಿಯಾದ ಉಮಾದೇವಿಯವರ ಮೇಲುದಿನ ಪರಮೇಶ್ವರನು ಸಕಲ ದೇವತೆಗಳೊಡನೆ ಮೂರ್ತವ ಮಾಡಿದ ಸಭಾ ಮಧ್ಯದಿ ಭೃಂಗೀಶ್ವರನ ವಾದದಿಂ ಸಂಚಲತ್ವದಿ ನೊಗೆದ ಚಂದ್ರದ್ರೋಣ ಪರ್ವತದ ಸಮೀಸದಿ ಇರ್ದ ಗಾಳಿಪೂಜೆಯ ಗಿರಿಯ ಸಿದ್ಧಕುಲ ಶಿಖಾಮಣಿಗಳಾದ ಷಟುಸ್ಥಲ ಪ್ರಭು ವಂಶೋದ್ಭವರಾದ ಮುಳ್ಳಕಟ್ಟಿಗೆಯ ಮೇಲೆ ತಪಸ್ಸುಗೈದ ನಿಮಿತ್ಯದಿಂ ಪೆಸರು ಪಡೆದ ಮುಳ್ಳಕಟ್ಟಿಗೆಯ ಸ್ವಾಮಿಗಳವರ ಗದ್ದುಗೆಗೆ ಕಾರಣ ಕರ್ತರಾದ ಹೊಲಿಕೆರೆ ರಾ|| ಕೆಂಪಿನ ಸಿದ್ಧಬಸವ..." ಬರೆದ ಪತ್ರ ಎಂದೇ ದಾಖಲಿಸಲಾಗಿದೆ. ಅಂದರೆ ಎಲ್ಲಾ ಗುರು-ವಿರಕ್ತ ಪರಂಪರೆಯ ಸ್ವಾಮಿಗಳು ಸೌಹಾರ್ದದಿಂದಲೇ ಇದ್ದರು ಮತ್ತು ಪಂಚಪೀಠಗಳ ಬಗ್ಗೆ ಉನ್ನತವಾದ ಗೌರವಾದರಗಳನ್ನು ಹೊಂದಿದ್ದರು ಎಂಬುದಕ್ಕೆ ಈ ವಿವರಣೆ ಸಾಕ್ಷಿಯಾಗಿದೆ.


ಅಲ್ಲದೆ, "...ಶಿವಾನುಭಾವ ಚರಂತಿಗೆ ಪಟ್ಟವೆಂತಲೂ ಶಿಖಾಪಟ್ಟವೆಂತಲೂ ಎರಡು ಪಟ್ಟವಾಗಿ ಸ್ವಾಮಿಗಳಾದ ಉಭಯತರೂ ಕಟ್ಟಿಗೆಹಳ್ಳಿ ಸ್ವಾಮಿಗಳವರ ತರುವಾಯ ದಲ್ಲಿ ಏಳುನೂರ ಎಪ್ಪತ್ತು ಬುಡಕಟ್ಟಿನ ಚರಮೂರ್ತಿಗಳೂ, ಮೂರು ಸಾವಿರ ವಿರಕ್ತರು ಮತ್ತು ಇವರ ಸೂತ್ರಿಕರಾದ ಪಂಚಾಚಾರ್ಯರು ಸಕಲ ದೇವಭಕ್ತರು ನೋಡಸಿದ್ದಲಿಂಗಸ್ವಾಮಿಗಳ ತರುವಾಯ ಚರಂತಿಕೆ ಪಟ್ಟಕ್ಕೆ ಕುಮಾರಸ್ವಾಮಿಗಳೂ ಶಿಖಾಪಟ್ಟಕ್ಕೆ ಮುರುಘಾ ಸ್ವಾಮಿಗಳೂ ಮಾಡಿದ ಕಾರಣ ಮುರುಘಾಸ್ವಾಮಿಗಳು ಸಮ ಮರ್ಯಾದೆ ಕೊಟ್ಟದ್ದು ವಾಸ್ತವವಿದೆ" ಎಂದು ಪಂಚಪೀಠ ಮತ್ತು ವಿರಕ್ತ ಪೀಠದ ಸಮನ್ವಯವನ್ನು ತೋರಿದೆ.


ಹೀಗೆ ಸಮಗ್ರವಾಗಿ ಯಾವುದೇ ಸಿದ್ಧಾಂತ ಭೇದವಿಲ್ಲದೆ ಕೇವಲ ಮಠಾಧೀಶರ ವೈಯಕ್ತಿಕ ಪ್ರತಿಷ್ಠೆಯ ಜಗಳಗಳ ಕಾರಣ ಈ ಸಮಯ ಭೇದಗಳುಂಟಾಗಿದ್ದವು ಎಂಬುದು ಗಮನಾರ್ಹ. ಈ ಎಲ್ಲಾ ಭೇದಗಳ ನಡುವೆಯೂ ಯಾವುದೇ ಮಠಾಧಿಪತಿಗಳು ಭಕ್ತರನ್ನು ವಿಭಜಿಸಿರಲಿಲ್ಲ. ವಿವಿಧ ಆಕಾರ, ಲೋಹ, ಮಣ್ಣಿನ ಹಣತೆಗಳಾಗಿಯೂ ಜ್ಯೋತಿಯೊಂದೇ ಎನ್ನುವಂತೆ ಎಲ್ಲರೂ ಸಮಗ್ರವಾಗಿ ಶ್ರೀಮದ್ವೀರಶೈವವನ್ನೇ ಪ್ರತಿಪಾದಿಸುತ್ತಿದ್ದರು. ಶಕ್ತಿವಿಶಿಷ್ಟಾದ್ವೈತ, ಸಿದ್ಧಾಂತ ಶಿಖಾಮಣಿ, ಕರಣಹಸಿಗೆ, ಮಂತ್ರಗೋಪ್ಯ, ಮಿಶ್ರಾರ್ಪಣ, ಸೃಷ್ಟಿವಚನ, ಮತ್ತು ವಚನಸಾಹಿತ್ಯ ಎಲ್ಲವನ್ನೂ ಶಿವಾನುಭವವೆಂದು ಬೋಧಿಸುತ್ತಿದ್ದರು. ಭಕ್ತರು ಸಹ ಗುರುವಿರಕ್ತರ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಬೆಂಬಲಿಸಿ ಪಾಲ್ಗೊಳ್ಳುತ್ತಿದ್ದರು. ಮುಂದಿನ ಕಾಲಘಟ್ಟದಲ್ಲಿ ಸಾಧು-ವೀರಶೈವರು ತಮ್ಮದೇ ಜಾತಿಪೀಠವನ್ನು ಸ್ಥಾಪಿಸಿಕೊಂಡದ್ದನ್ನು ಸಹ "ಸಮಯ" ಭೇದದ ಮುಂದುವರಿಕೆಯೇ ಆಗಿದೆ ಎನ್ನಬಹುದು. ಹಾಗಿದ್ದಾಗಲೂ ವೀರಶೈವದ ವಿಭಜನೆಗೆ ಯಾರೂ ಕೈಹಾಕಿರಲಿಲ್ಲ. ಈಗ ಈ ಸಾಧುಪೀಠದಲ್ಲಿಯೂ "ಸಮಯ" ಭೇದ ಉಂಟಾಗಿ ಮೂಲಮಠ ವೀರಶೈವ ಎಂದರೆ, ಶಾಖಾಮಠವೊಂದು ಲಿಂಗಾಯತ ಎನ್ನುತ್ತಿದೆ. ಈ ಸಾಧು-ವೀರಶೈವದ ಜಾತಿ ಸಮಯಭೇದವನ್ನೇ ಮಾದರಿಯಾಗಿ ಅನುಸರಿಸಿ ಸ್ಥಾಪನೆಗೊಂಡ ಪಂಚಮಸಾಲಿ ಜಾತಿಪೀಠವು ಸ್ಥಾಪನೆಯಂದೇ ಕೆಲವು ಪ್ರತಿಷ್ಠಿತ ವ್ಯಕ್ತಿಗಳ ಪ್ರತಿಷ್ಠೆಯ ಕಾರಣವಾಗಿ ಎರಡಾಗಿ ಭೇದಗೊಂಡಿದೆ. ಈಗ ಈ ಪೀಠವನ್ನು ಮತ್ತಷ್ಟು ಪ್ರಭಾವಿಗಳು ಐದಾಗಿ ಭೇದಿಸುವ ಹವಣಿಕೆ ನಡೆಸಿದ್ದಾರೆ. ಈ ಎಲ್ಲಾ ಕಾರಣಗಳಿಗಾಗಿಯೇ ಈ ಜಾತಿಪೀಠಿಗಳಿಗೆ ಧಾರ್ಮಿಕತತ್ವಕ್ಕಿಂತ ಪ್ರಜಾಪ್ರಭುತ್ವದ ಮತ (ಓಟು) ರಾಜಕೀಯವಷ್ಟೇ ಏಕೈಕ ಉದ್ದೇಶವಾಗಿದೆ. ಅಂದರೆ ಸ್ಪಷ್ಟವಾಗಿ ವೀರಶೈವದ ಈ ಸಮಯಭೇದವು ಮತಧರ್ಮಕಾರಣದಿಂದ ಮತದಾರರಾಜಕಾರಣಕ್ಕೆ ರೂಪಾಂತರಗೊಂಡ ಮಾರ್ಪು ಯಾನೆ Paradigm Shift of philosophy into politics! ಹಾಗಾಗಿಯೇ ಬಹುಪಾಲು ಜಾತಿಪೀಠಿಗಳಿಗೆ ಗೊತ್ತಿರುವುದು ಕೇವಲ ಕೆಲವು ಸರಳ ವಚನಗಳು ಮಾತ್ರವೇ ಹೊರತು ವೀರಶೈವ ಆಧ್ಯಾತ್ಮಿಕ ತತ್ವದ ಲವಲೇಶವಲ್ಲ. ಇದು ಈ ಪೀಠಾಧಿಪತಿಗಳ ತಪ್ಪಲ್ಲ, ಅವರ ಜಾತಿಭಕ್ತರು ಅದನ್ನೇ ಬಯಸಿ ಇವರಿಗೆ ಪಟ್ಟ ಕಟ್ಟಿದ ಕಾರಣ ಅವರು ಅದಕ್ಕೆ ಬದ್ಧರಾಗಿರಲೇಬೇಕಾದ್ದು ಅನಿವಾರ್ಯ. ಹಾಗಾಗಿಯೇ ಜಾತಿಪೀಠಗಳ ಪೀಠಾಧಿಪತಿಗಳು ಸ್ವಜಾತಿ ರಾಜಕಾರಣಿಗಳ ಮತ್ತು ಉದ್ಯಮಿಗಳ ಕೈವಶರಾಗಿದ್ದಾರೆ. ಒಬ್ಬರು "ಭಕ್ತದೇವರು"ಗಳ ಅಣತಿಯಂತೆ ಮೀಸಲಾತಿಗೆ ಮುಷ್ಕರ ನಡೆಸುತ್ತಿದ್ದರೆ, ತಮ್ಮ ತಾಳಕ್ಕೆ ಕುಣಿಯದ ಇನ್ನೊಬ್ಬ ಯೋಗಿಕ, ತಾತ್ವಿಕ ಪೀಠಾಧಿಪತಿಗಳನ್ನು ಹರಿಹರದ ಮಾಜಿ "ಶಾಸಕದೇವರು" ಏಕವಚನದಲ್ಲಿಯೇ ತಮ್ಮ ಅಡಿಯಾಳನ್ನು ಝಾಡಿಸುವಂತೆ ಝಾಡಿಸಿರುವುದನ್ನು ಇಡೀ ರಾಜ್ಯವೇ ನೋಡಿದೆ. ಎಲ್ಲವೂ ಅಯೋಮಯ! ಸಾಮಾಜಿಕ ಮೀಸಲಾತಿಯನ್ನು ಬಯಸಿ ಸಾಮಾಜಿಕ ಜನರು ಹೋರಾಡುವುದು ಸಮ್ಮತವೇ ಹೊರತು ಆಧ್ಯಾತ್ಮಿಕ ಸ್ವಾಮಿಗಳಾದವರು ಹೋರಾಡುವುದು ಸಮ್ಮತವಲ್ಲವೇ ಅಲ್ಲ. ಇದು ಮೀಸಲಾತಿ ಬಯಸುವ ಬೇಡಜಂಗಮ, ಪಂಚಮಸಾಲಿ ಸೇರಿ ಎಲ್ಲಾ ಜನಾಂಗಕ್ಕೂ ಅನ್ವಯ. ಏಕೆಂದರೆ ಪರಮ ಸನ್ಯಾಸಿ ಸ್ವಾಮಿ ವಿವೇಕಾನಂದರು, "ಸನ್ಯಾಸಿ ಎಂದರೆ ಯಾರು ಖಾವಿ ತೊಟ್ಟು ಪ್ರಪಂಚ ಮತ್ತು ಪ್ರಾಪಂಚಿಕ ಬಂಧಗಳನ್ನು ತೊರೆದು ತಮ್ಮ ಜೀವನವನ್ನು ಕೇವಲ ಮತ್ತು ಕೇವಲ ಆಧ್ಯಾತ್ಮಿಕ ಚಿಂತನೆ, ಸತ್ಯಾನ್ವೇಷಣೆ, ಸ್ವಶಿಸ್ತು ಮತ್ತು ಮಾನವಧರ್ಮಕ್ಕಾಗಿ ಮುಡಿಪಾಗಿಡುವರೋ ಅವರು" ಎಂದಿದ್ದಾರೆ.


ಈ ಪ್ರಾಪಂಚಿಕ ಲೌಕಿಕ ಮಾರ್ಪಿಗೆ ಪ್ರಮುಖವಾಗಿ ಖಾದಿಗಿಂತ ಖಾವಿಯೇ ಸುಲಭ ಸೋಪಾನ ಎಂದು ಮತಧರ್ಮನಿರಪೇಕ್ಷದ ಸೆಕ್ಯುಲರ್ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಸಾಬೀತಾದ ಕಾರಣ ಇಂದು ಪ್ರತಿ ಜಾತಿಗೂ ಒಂದೊಂದು ಪೀಠಗಳಾಗುತ್ತಿರುವುದು ನಿರಂಜನವಂಶ ರತ್ನಾಕರದ ಆಧುನಿಕ ವಿಸ್ತರಣೆ ಎನ್ನಬಹುದಾದರೂ ಎನ್ನಲಾಗದು! ಏಕೆಂದರೆ ಇವರಿಗೆಲ್ಲ ಅಲ್ಲಮಪ್ರಭು ಮತ್ತು ಚೆನ್ನಬಸವಣ್ಣನು ರೂಪಿಸಿದ ಗುರುದೀಕ್ಷೆಯ ವಿಧಿವಿಧಾನಗಳ ಪ್ರಕಾರ ಯಾವ ಚರಂತಿಕೆ, ಹರಗುರುಚರನಿರಂಜನ ದೀಕ್ಷೆಯೂ ಆಗಿಲ್ಲ. ಹಾಗಾಗಿ ಇವರ್ಯಾರೂ ಲಿಂಗಾಯತ ಪದ್ಧತಿಯ ಪ್ರಕಾರ ಗುರುಗಳೇ ಅಲ್ಲ! ಏನಿದ್ದರೂ ಜಾತಿಗಾಗಿ ವೇಷಧರಿಸಿದ ವೇಷಧಾರಿಗಳು ಮಾತ್ರ! 


ಏಕೆಂದರೆ ಸ್ವಾಮಿಯಾಗಿ ಪಟ್ಟ ಕಟ್ಟುವ ಮೊದಲು ಓರ್ವ ಚರಮೂರ್ತಿಗಳಿಂದ ಉದ್ದೇಶಿತ ಭಾವಿ ಸ್ವಾಮಿಗೆ ಶಿವಪುರಾಣ, ಬಸವಪುರಾಣ, ಚೆನ್ನಬಸವಪುರಾಣ ಗ್ರಂಥಗಳನ್ನು ಕೊಡಿಸಿ 'ಪುರಾಣ ಚರಂತಿ' ಎಂದು ನೇಮಕಾತಿ ಮಾಡುತ್ತಾರೆ. ಈ ಪುರಾಣ ಚರಂತಿಯು ಮುಂದೆ ಕರಣಹಸಿಗೆ, ಮಂತ್ರಗೋಪ್ಯ, ಮಿಶ್ರಾರ್ಪಣ, ಮತ್ತು ಸೃಷ್ಟಿವಚನಗಳನ್ನು ಅಭ್ಯಾಸ ಮಾಡಿ ಸಾಧನೆ ಮಾಡಿದ ನಂತರ ಅವನಿಗೆ ಸಭಾಮಧ್ಯದಲ್ಲಿ ಓರ್ವ ಜಗದ್ಗುರುವಿನಿಂದ ಅಥವಾ ಓರ್ವ ಹಿರಿಯ ಶಾಖಾಮಠದ ಗುರುವಿನಿಂದ ಈ ಕೃತಿಗಳನ್ನು ಗೌರವಪ್ರಧಾನ ಮಾಡಿದಾಗ ಮಾತ್ರ ಆ ಚರಂತಿಯು ವಿರಕ್ತನಾಗಿ ಪಟ್ಟಾಧಿಕಾರಿಯಾಗುವನು. ಪುರಾಣ ಚರಂತಿ ಮತ್ತು ವಿರಕ್ತನಾಗುವ ನಡುವೆ ಅನೇಕ ಕಠಿಣ ಸಾಧನೆಗಳ ಪರೀಕ್ಷೆಗಳಿವೆ. ಇವುಗಳನ್ನು ಸಾಧಿಸದಿದ್ದರೆ ಆತ ಕೇವಲ ಪುರಾಣ ಚರಂತಿ ಮಾತ್ರವಾಗಿರುತ್ತಾನೆ. ಇಂತಹ ಯಾವುದೇ ನಿಯಮಬದ್ಧವಾಗಿ ಪಟ್ಟವಾಗದ ಇವರೆಲ್ಲರೂ ಸ್ಪಷ್ಟವಾಗಿ ನಿರಂಜನವಂಶ ರತ್ನಾಕರವಲ್ಲದೆ ಲಿಂಗಾಯತಕ್ಕೂ ಹೊರಗು.


ಒಟ್ಟಾರೆ, ಇದಿಷ್ಟು ಬಸವಸ್ಥಾಪಿತ ಅಲ್ಲಮಪ್ರಭುವಿನ ಶೂನ್ಯಪೀಠವು ವಿಭಜನೆಗೊಂಡ ಸಂಕ್ಷಿಪ್ತ ಇತಿಹಾಸ! ತಾತ್ವಿಕ ಭೇದಗಳು ಕ್ರಮೇಣವಾಗಿ ವೈಯಕ್ತಿಕ ಪ್ರತಿಷ್ಠೆಗಳಾಗಿ ಬದಲಾಗುತ್ತಾ ಹೇಗೆ ಒಂದು ಪೀಠವನ್ನು ಛಿದ್ರಿಸುತ್ತ ನಡೆದವು ಎಂಬುದರ ಸ್ಪಷ್ಟ ಚಿತ್ರಣ! ಅಂದಹಾಗೆ ಬಸವಣ್ಣನು ಸ್ಥಾಪಿಸಿದ್ದುದು ಆಗಲೇ ಇದ್ದ ವೀರಶೈವ ಪಂಥದ ಒಂದು ಜಗದ್ಗುರು ಪೀಠವನ್ನೇ ಹೊರತು ಹೊಚ್ಚ ಹೊಸ ಧರ್ಮವನ್ನಲ್ಲ. ವಿಪರ್ಯಾಸವೆಂದರೆ 'ಅರಿವೇ ಗುರು' ಎಂದ ಬಸವಣ್ಣನು ತನ್ನರಿವಿಗೆ ಬಾರದಂತೆ "ಶೂನ್ಯ ಸಮಯಭೇದ"ವನ್ನು ಆರಂಭಿಸಿ "ಸಮಯಭೇದ ಸ್ಥಾಪಕ"ನಾದನು. ಹೀಗೆ ಶಿವನ ವೃಷಭನೆನ್ನುವ ಗಣನು ತನಗರಿವಿಲ್ಲದೆ ಷಣ್ಮುಖನಿಗೆ ಪ್ರಸಾದ ಕೊಡುವುದನ್ನು ಮರೆತ ಕಾರಣದಿಂದ ಶಾಪಗ್ರಸ್ತನಾಗಿ ಧರೆಗೆ ಬಸವನಾಗಿ ಬಂದು ಮತ್ತೊಮ್ಮೆ ತನಗರಿವಿಲ್ಲದಂತೆ ಸಮಯಭೇದ ಸೃಷ್ಟಿಸಿ ಶಾಪಗ್ರಸ್ತನಾದನೆನಿಸುತ್ತದೆ. ಇದು ಶಾಪಗ್ರಸ್ತ ವೃಷಭ ಗಣನ ಗಮ್ಯವೇ ಆಗಿತ್ತೋ ಆ ಕಾಲಜ್ಞಾನಿ ಚೆನ್ನಬಸವಣ್ಣನೇ ಬಲ್ಲ ಎಂಬಂತೆ ಬಸವನು ನಿಶ್ಶೂನ್ಯನಾಗಿಯೇ ಧರೆಯಿಂದ ಹಠಾತ್ ಆಗಿ ಯಾವ ಸುಳಿವನ್ನೂ ಬಿಡದೆ ನಿರ್ಗಮಿಸಿದ್ದಾನೆ!


ಇತಿಹಾಸದಲ್ಲಿ 'ಶೂನ್ಯಪೀಠ' ಸ್ಥಾಪನೆಯಾದ ನಂತರ 'ಶೂನ್ಯಸಂಪಾದನೆ' ಬಂದಂತೆ 'ಶೂನ್ಯ ಸಮಯಭೇದ'ದ ನಂತರ 'ಸಂಪಾದನಾ ಸಮಯ' ಬಂದಿದೆ, ಅಷ್ಟೇ! ಪಾಶುಪತ-ಕಾಳಾಮುಖ-ವೀರಶೈವ-ಲಿಂಗಾಯತ ಪಂಥದ ಸಮಗ್ರ ಸ್ವರೂಪವನ್ನು ಗ್ರಹಿಸಿದರೆ ಎಲ್ಲವೂ ಕಾಲಜ್ಞಾನದಂತೆ ಪೂರ್ವನಿರ್ಧರಿತ ಶ್ರೀಮನ್ನಿರಂಜನ ಪ್ರಣವ ಸ್ವರೂಪ ಜಂಗಮಚಕ್ರದಂತೆ ಉರುಳುತ್ತಿದೆಯಷ್ಟೇ. ಈ ಉರುಳುವಿಕೆ ಕೇವಲ ವೀರಶೈವಕ್ಕಷ್ಟೇ ಅಲ್ಲದೆ ಇಡೀ ಸಿಂಧೂ/ಹಿಂದೂ/ಸನಾತನ/ಭಾರತೀಯ/ಇಂಡಿಯತನಕ್ಕೆ ಅನ್ವಯ ಎಂಬುದು ಕಾಲಜ್ಞಾನ ಸಂಪುಟದ ಒಳಮರ್ಮ.


ಇರಲಿ, ಈ ಏಕಮೇವ ಶೂನ್ಯಪೀಠವು ಮುಂದೆ ನಾಲ್ಕು ಜಗದ್ಗುರುಗಳಾಗಿ ಭಿನ್ನವಾಗಿದೆ. ಸ್ಥಾವರಗೊಂಡ ಶೂನ್ಯಪೀಠದ ಚಿತ್ರದುರ್ಗದ ಮುರುಘಾಮಠ, ಹುಬ್ಬಳ್ಳಿಯ ಮೂರುಸಾವಿರಮಠ, ಗದುಗಿನ ತೋಂಟದಾರ್ಯಮಠದ ಸ್ವಾಮಿಗಳಲ್ಲದೆ ಮುಂಡರಗಿಯ ಅನ್ನದಾನಸ್ವಾಮಿಗಳನ್ನು ಅಂದಿನ ಬ್ರಿಟಿಷ್ ಸರ್ಕಾರದ ಮೂಲಕವೇ ಜಗದ್ಗುರು ಎಂದು "ತೀರ್ಮಾನಿಸ"ಲಾಗಿದೆ ಎಂದು ಈ ಗ್ರಂಥದ ಎರಡನೇ ಭಾಗದ "ಬುಡದ ಕೆಲವು ಮಾತುಗಳು" ಎಂಬ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ, "ತಮ್ಮ ತಮ್ಮ ಮಠಗಳಲ್ಲಿ ತಾವೇ ಜಗದ್ಗುರುಗಳೆಂದು ಬರೆದುಕೊಳ್ಳುವ, ಭಕ್ತರಿಂದ ಕರೆಸಿಕೊಳ್ಳುವ ಬಹಳಷ್ಟು ಸ್ವಾಮಿಗಳಿದ್ದಾರೆ" ಎಂದೂ ಹೇಳಲಾಗಿದೆ. ಅಂದ ಹಾಗೆ ಈ ಗ್ರಂಥವು ೧೯೩೩ ರಿಂದ ೧೯೩೭ ರವರೆಗೆ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ದಿವಂಗತ ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರ ಅಧ್ಯಕ್ಷೀಯ ಕಾಲದಲ್ಲಿಯೇ ಪ್ರಕಟವಾಗಿದೆ. ಈ ಬುಡದ ಮಾತುಗಳು ಇಂದು ಹೆಮ್ಮರವಾಗಿ ಬೆಳೆದು ವರ್ತಮಾನದ ಇಪ್ಪತ್ತೊಂದನೇ ಶತಮಾನದಲ್ಲಂತೂ ಆಸ್ಫೋಟಕರವಾಗಿ ಶಂಕರ, ಮಂಕರ ಮತ್ತು ಕಿಂಕರರೂ ಸಹ ಜಗದ್ಗುರುಗಳಾಗಿದ್ದಾರೆ ಎಂದು ಜಗತ್ತೇ ಬಲ್ಲದು. ಮೇಲೆ ತಿಳಿಸಿದಂತೆ ಕಾಲಜ್ಞಾನ ಸಂಪುಟದ ಒಳಮರ್ಮದ ಒಂದು ಸುಳಿಮಿಂಚಾಗಿ "ನಿರಂಜನವಂಶ ರತ್ನಾಕರ"ದ ಬುಡದ ಮಾತುಗಳು ಇಂದು ಪ್ರತಿಯೊಬ್ಬ 'ಪಾಶುಪತ-ಕಾಳಾಮುಖ-ವೀರಶೈವ-ಲಿಂಗಾಯತ' ಅನುಯಾಯಿಯ ಆತ್ಮಲಿಂಗಕ್ಕೆ ದಿವ್ಯ ಬೆಳಕಿನ ಕಂಥೆಯಾಗಿ ಆವರಿಸಬೇಕಾದ್ದು ಪ್ರತ್ಯೇಕ ಧರ್ಮ, ಮಿಸಲಾತಿಯಂತಹ ಆಮಿಷಗಳ ಕಗ್ಗತ್ತಲಲ್ಲಿ ಅಂತೆಕಂತೆಯಾಗಿದೆ.


ಕೇವಲ "ಆಸನದ ಅಂತಸ್ತು"ಗಳ ಕಾರಣ ಕೆಲವು ಭೇದಗಳಾಗಿದ್ದವು ಎಂಬುದು ಇತಿಹಾಸ. ಈ ಆಸನ ಅಂತಸ್ತಿನ ಕಾರಣವನ್ನು ಹಿಡಿದು ಕೆಲವು ಹಿತಾಸಕ್ತಿಗಳು ಪಂಚಪೀಠ-ವಿರಕ್ತರಲ್ಲಿ ಪರಮಭೇದವನ್ನು ಹುಟ್ಟುಹಾಕಿದರೂ ಅದನ್ನು ಸಮಾಜವು ಭೇದವಾಗಿ ಪರಿಗಣಿಸಿರಲಿಲ್ಲ. ಶೂನ್ಯಪೀಠದ ವಿರಕ್ತರಲ್ಲಾಗಲಿ ಪಂಚಪೀಠಗಳ ಗುರುವರ್ಗದಲ್ಲಾಗಲಿ ಏನೇ ವೈಮನಸ್ಯವುಂಟಾದರೂ ಅವರೆಲ್ಲರೂ ಅಖಂಡವಾಗಿ ಎಂದಿಗೂ ಧರ್ಮವನ್ನು ಕಾಪಾಡಿದ್ದರು. ಗುರುವಿರಕ್ತ ಜಂಗಮರು ಕಂತೆಭಿಕ್ಷೆಯನ್ನೂ ಮಾಡಿ ಮಠಗಳನ್ನು ಕಟ್ಟಿ ಪಾಠಶಾಲೆಗಳನ್ನು ನಡೆಸಿದ್ದರು. ಅನೇಕ ಗ್ರಂಥಸಂಪಾದನೆಗಳನ್ನು ಮಾಡಿ ಜ್ಞಾನದ ಭಂಡಾರವನ್ನು ಸಮಾಜಕ್ಕೆ ಅರ್ಪಿಸಿದ್ದರು. ತಮ್ಮ ಧರ್ಮಕ್ಕೆ ಯಾವುದೇ ರೀತಿಯ ಧಕ್ಕೆಯುಂಟಾದಾಗ ಉಗ್ರರಾಗಿ ಕಾಳಾಮುಖ ಕೆಚ್ಚಿನಿಂದ ಹೋರಾಡಿದ್ದರು ಕೂಡ. ಹಾಗಾಗಿಯೇ ಮೈಸೂರಿನ ಚಿಕ್ಕದೇವರಾಜ ಒಡೆಯರನ ತೆರಿಗೆಯನ್ನು ತೀವ್ರವಾಗಿ ವಿರೋಧಿಸಿ ನಾಲ್ಕುನೂರಕ್ಕೂ ಅಧಿಕ ಜಂಗಮರು ಪ್ರಾಣಾರ್ಪಣೆ ಮಾಡಿದ್ದಾರೆ. ಇವರನ್ನು ನೇರವಾಗಿ ಎದುರಿಸಲಾಗದೆ ಚಿಕ್ಕದೇವರಾಜ ಒಡೆಯರನು ಮೋಸದಿಂದ ಕೊಂದದ್ದು ಕಾಳಾಮುಖ ವೀರಶೈವ ಕೆಚ್ಚಿನ ಸಂಕೇತದ ಐತಿಹಾಸಿಕ ಸಾಕ್ಷಿಯಾಗಿದೆ. ಚೆನ್ನಬಸವಣ್ಣನಿಂದ ಜಗದ್ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳವರೆಗೆ ಆಗಿ ಹೋದ ಎಲ್ಲಾ ಶೂನ್ಯಪೀಠಾಧ್ಯಕ್ಷರು ಜೈನ, ವೈಷ್ಣವ ಮತ್ತಿತರೆ ಧರ್ಮೀಯರು ಆಕ್ರಮಿಸಿದ ಶೈವ ದೇವಾಲಯಗಳನ್ನು ವಶಪಡಿಸಿಕೊಂಡು ಅಲ್ಲಿ ಶೈವಾರಾಧನೆಯನ್ನು ಮರುಸ್ಥಾಪಿಸಿದ್ದರು ಎಂದು ನಿರಂಜನ ವಂಶ ರತ್ನಾಕರ ಗ್ರಂಥವು ದಾಖಲಿಸಿದೆ. ಎಲ್ಲಿಯೂ ಸ್ಥಾವರಗಳನ್ನು ನಿರಾಕರಿಸಿದ ಉದಾಹರಣೆಯಿಲ್ಲ. ಇಂತಹ ಪರಂಪರೆಯ ವೀರಶೈವದಲ್ಲಿ ಜಾತಿ ಸಮಯಭೇಧದ ತರುವಾಯ ಜಂಗಮ ದ್ವೇಷದ ವೀರಶೈವ ಬೇರೆ ಲಿಂಗಾಯತ ಬೇರೆ ಎನ್ನುವ "ಘಾತುಕ ಸಮಯ" ಉಂಟಾಗಲು ಕಾರಣವೇನು?!?


ಅದಕ್ಕೆ ಕಾರಣ, ನಾವೀನ್ಯ ಲಿಂಗಾಂಗ ಸಾಮರಸ್ಯ!


ಆರಂಭದಲ್ಲಿ ಯಾವುದೇ ಭೇದವನ್ನೆಣಿಸದೆ ಶ್ರೀಮದ್ವೀರಶೈವವನ್ನೇ ಬೋಧಿಸುತ್ತಿದ್ದ ಪ್ರಾಕಾಂಡ ಪ್ರವಚನಕಾರರಾದ ಲಿಂಗಾನಂದ ಸ್ವಾಮಿಗಳು "ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ" ಎಂಬಂತೆ ವರ್ತಮಾನದ ಶೂನ್ಯಪೀಠವಿರುವ ಚಿತ್ರಕಲ್ಲು ದುರ್ಗದಲ್ಲಿ ಒಂದು ಮಹಾಮಾಯೆಗೆ ಒಳಗಾದದ್ದೇ ಇದಕ್ಕೆ ಮೂಲ ಎನ್ನಬಹುದು. ಅದು ಲಿಂಗಾನಂದರ ತಪ್ಪಲ್ಲ, ಚಿತ್ರಕಲ್ ದುರ್ಗದ ಗಾಳಿಯೇ ಹಾಗೆ! "ಅರಿತರೆ ಆರು ಪಟ್ಟ, ಮರೆತರೆ ಮೂರು ಪಟ್ಟ" ಎಂಬ ದುರ್ಗದ ಜಾತಕ ಫಲ, ತನ್ನಲ್ಲಿ ಕಾಲಿಟ್ಟ ಪಂಡಿತರನ್ನು ಕಾಡದೇ ಬಿಟ್ಟೀತೆ? ಅವರ ಮನಸ್ಸನ್ನು ಚಂಚಲಗೊಳಿಸಿ ಚೆಲ್ಲಾಪಿಲ್ಲಿ ಮಾಡಿಯೇಬಿಟ್ಟಿತು. ಲಿಂಗಾನಂದರ ಮತ್ತು ಮಹಾದೇವಿಯವರ ಪ್ರವಚನಗಳಿಗೆ ಗುರುವಿರಕ್ತ ಜಂಗಮರೂ ಸೇರಿದಂತೆ ಇಡೀ ವೀರಶೈವ ಸಮಾಜ ಒಕ್ಕೊರಲಿನ ಪ್ರೋತ್ಸಾಹ, ಬೆಂಬಲ ನೀಡಿತ್ತು. ಯಾವಾಗ ಅವರ ಮಾರ್ಗ ಧರ್ಮವನ್ನು ಬಿಟ್ಟಿತೋ ಆಗ ಎಲ್ಲರೂ ವಿರೋಧಿಸತೊಡಗಿದರು.


ಈ ಮಹಾ"ದೇವಿ" ಮಾಯೆಯ ಕುರಿತು, ಇವರೀರ್ವರ ಲಿಂಗಾಂಗ ಸಾಮರಸ್ಯದ ಕುರಿತು ಎಲ್ಲಾ ಗುರುವಿರಕ್ತ ಸ್ವಾಮಿಗಳೂ, ವೀರಶೈವ ಸಮಾಜವೂ ಅಂದು ನಿಷ್ಠುರವಾಗಿ ಖಂಡಿಸಿತು. ಈ ಬಗ್ಗೆ ಆಸಕ್ತರು ಆ ಕಾಲಘಟ್ಟದ ಸಮಾಚಾರ ಮಾಧ್ಯಮವನ್ನು ಗಮನಿಸಬೇಕು. ಅದರಲ್ಲೂ "ಲಿಂಗಾಯತ ಪ್ರತ್ಯೇಕ ಧರ್ಮ" ಸತ್ಯಶೋಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಜಿಸಿದ್ದ ಸಮಿತಿಯ ಅರ್ಧಕ್ಕೂ ಹೆಚ್ಚು ಸದಸ್ಯರು ಪಳಗಿದ್ದ ಲಂಕೇಶ್ ಪತ್ರಿಕೆಯಲ್ಲಿಯೇ ಈ ಬಗ್ಗೆ ಸಾಕಷ್ಟು ವರದಿಗಳು ಬಂದಿದ್ದವು. ಲಂಕೇಶರ ಮಗಳೇ ಈ ಪ್ರತ್ಯೇಕ ಮಾಯೆಗೆ ಒಳಗಾದಾಗ ಸರ್ಕಾರಿ ಕೃಪಾಪೋಷಿತ ಈ ಸಮಿತಿಯು ಅದೆಲ್ಲವನ್ನೂ ಮರೆತು ಈ ಜೋಡಿ ಸೃಷ್ಟಿಸಿದ ಸಂಕಥನಕ್ಕೆ ಮತ್ತು ಕಲಬುರ್ಗಿಯ ಸುಳ್ಳಿನ ಸಂಶೋಧನೆಗಳಿಗೆ ತಕ್ಕಂತೆ ಆತ್ಮವಂಚನೆಯ ವರದಿ ನೀಡಿತ್ತು ಎನ್ನುವುದು ಇತಿಹಾಸ. ಒಟ್ಟಾರೆ ಬಹಿಷ್ಕಾರದ ಭಯವೋ ಅಥವಾ ಇವರ ಪ್ರವಚನಗಳನ್ನು ಮೆಚ್ಚಿ ಸೇರುತ್ತಿದ್ದ ಜನಸಮೂಹವನ್ನು ಕಂಡು ಇವರಲ್ಲುಂಟಾದ ಧಾರ್ಷ್ಟ್ಯದ ಮನೋವಿಕಾರವೋ, ಈರ್ವರೂ ಲಿಂಗಾಯತ ಬೇರೆ ಎಂದು ತಮ್ಮದೇ ಮಾರ್ಗವನ್ನು ಬಸವ ಕವಚದ ಶ್ರೀರಕ್ಷೆಯಲ್ಲಿ ಆರಂಭಿಸಿದರು. ಅದಕ್ಕೆ ಕೆಲವೇ ಕೆಲವು ವಿಘ್ನಸಂತೋಷಿಗಳ ಬೆಂಬಲ ಸಹ ಸಿಕ್ಕಿತು. ಈ ಬೆಂಬಲದ ನಶೆಯಲ್ಲಿ ಮಹಾಮಾಯೆಯು ಜಗತ್ತಿನ ಪ್ರಪ್ರಥಮ ಮಹಿಳಾ ಜಗದ್ಗುರು ಎಂಬ ಅಕ್ಷತ ಮೇರಿ ಮಾತೆಯಾಗಿ ತಮ್ಮ ಹೆಸರಿನ ಹಿಂದೆ ಜಗದ್ಗುರು ಎಂದು ಸೇರಿಸಿಕೊಂಡು ಇಲ್ಲದ ಶೂನ್ಯದಲ್ಲಿ ಪೀಠವನ್ನೇರಿಬಿಟ್ಟರು! ವಚನ ಚಳವಳಿಯ ಶರಣೆಯರೆಲ್ಲರೂ ಯಕಶ್ಚಿತ್ "ಅಕ್ಕ" ಎಂದು ಕರೆಸಿಕೊಂಡಿದ್ದರೆ ಇಪ್ಪತ್ತನೇ ಶತಮಾನದ ನಾನು ಅವರ "ಹ(ಅ)ಮ್ಮ"ನಂತೆ ಎನ್ನುವ ಅಹಂನಿಂದ "ಮಾತೆ" ಎಂಬ ಉಪಸರ್ಗವನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು. ಇನ್ನು ಸ್ಥಾವರಗೊಂಡಿರುವ ಮೂಲ ಶೂನ್ಯಪೀಠವಿರುವ ಮತ್ತು ಈ ಮಾತೆಯ ಮೂಲವೂ ಆದ ಚಿತ್ರದುರ್ಗ ಪಟ್ಟಣದ ಒಂದು ಪಟಾಲಂ ತನ್ನ ಸದಸ್ಯರ ಕಾರುಗಳ ಹಿಂದೆ ಇತ್ತೀಚಿನ ದಶಕದಲ್ಲಿ "ಜಗದ್ಗುರು" ಎಂದು ಬರೆಸಿಕೊಂಡಿತ್ತು ಎಂಬುವಲ್ಲಿಯವರೆಗೆ ಈ ಆಧುನಿಕ ಜಗದ್ಗುರು ಪಟ್ಟವಲ್ಲರಿ ವಿಸ್ತರಿಸಿಕೊಂಡು ಬಂದಿದೆ!


ಈ ಮಾತೆಯ ಸಂತತಿ ಬೆಳೆಸಲು ಶೈಕ್ಷಣಿಕವಾಗಿ ಸಾಧನೆ ಮಾಡಲಾಗದೆ ಬೆಳೆಸಿಕೊಂಡ ತಮ್ಮ ವೈಯಕ್ತಿಕ ಜಂಗಮದ್ವೇಷದಿಂದ ಮತ್ತು ಶೀಘ್ರಸ್ಖಲಿತ ಸಂಶೋಧನೆಗಳ ಕಾರಣ ಶೂನ್ಯಪೀಠದ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳಿಂದಲೇ ಅವಮಾನಿತರಾಗಿದ್ದ ಆದರೆ ನಾಡಿನ ಸಂಶೋಧಕಪ್ರಜ್ಞೆ ಎಂದೇ ಖ್ಯಾತರಾಗಿರುವ ಎಂ.ಎಂ.ಕಲಬುರ್ಗಿಯವರು ತಮ್ಮ ಉದ್ದಂಡ ವೃತ್ತಿಯನ್ನೇ ಮೀಸಲಿರಿಸಿದರು. ಈ ಸಂಶೋಧಕರ ಸಂಶೋಧನೆಗಳು ಎಷ್ಟೊಂದು ಪೊಳ್ಳಾಗಿದ್ದವು ಎಂದು ಹಿಂದಿನ ಲೇಖನಗಳಲ್ಲಿ ಪುರಾವೆ ಸಮೇತ ನಾನು ಸಾಬೀತುಪಡಿಸಿರುವುದು ಇಲ್ಲಿ ಉಲ್ಲೇಖಾರ್ಹ. ಇನ್ನು ಈ ಸಂಶೋಧಕರು ಮತ್ತು ಪ್ರತ್ಯೇಕವಾದಿಗಳು ಹೇಳುವ ಪಂಚಾಚಾರ್ಯರು ಈ ಧರ್ಮದಲ್ಲಿ ನುಸುಳಿದ್ದರು, ಆಂಧ್ರದ ಆರಾಧ್ಯರು ಬೇರೆ, ಲಿಂಗಾಯತ ಜಂಗಮರು ಬೇರೆ ಇತ್ಯಾದಿ ಯಾವ ಸಂಗತಿಗಳೂ ಈ ಗ್ರಂಥದಲ್ಲಷ್ಟೇ ಅಲ್ಲದೆ ಯಾವುದೇ ಇತಿಹಾಸಜ್ಞ ಮಾನ್ಯ ದಾಖಲೆಗಳಲ್ಲಿ ಉಲ್ಲೇಖವಾಗಿಲ್ಲ. ಈ ಗ್ರಂಥವು ಐತಿಹಾಸಿಕ ಸಂಶೋಧನೆಯ ಬಹುಮುಖ್ಯವಾದ ಗ್ರಂಥ ಎಂದು ಫ. ಗು. ಹಳಕಟ್ಟಿಯವರೇ ಪ್ರಸ್ತಾವನೆಯಲ್ಲಿ ನುಡಿದಿದ್ದಾರೆ. ಈ ಗ್ರಂಥದ ಗಂಧಗಾಳಿಯೂ ಗೊತ್ತಿರದೆ ದುರ್ಗಂಧ ಸೂಸಿದ ಸಂಶೋಧಕರ ಸಂಶೋಧನೆ ಎಂತಹ ಸುಳ್ಳು ಎಂದು ಈಗ ಜಗತ್ತೇ ಬಲ್ಲುದು. ಹೀಗಿದ್ದರೂ 'ಬಿದ್ದರೂ ಮೀಸೆ ಮಣ್ಣಾಗಲಿಲ್ಲ' ಎಂಬ ಮೀಸೆ ತಿರುವಿಕೆ ಕುತ್ಸಿತ ಕೂಪಮಂಡೂಕ ವಾದ ಪ್ರತ್ಯೇಕವಾದಿಗಳದ್ದು! ಒಟ್ಟಿನಲ್ಲಿ ಇವರ ವಾದವು, ಎಲ್ಲಿಗೆ ಬಂತು ಸಂಗಯ್ಯ? ಇಲ್ಲಿಗೆ ಬಂತು ಸಂಗಯ್ಯವಾಗಿದೆ! ಇಂತಹ ಬಾಲಿಶ ಸಂಶೋಧನೆಗಳಾಧರಿತವಾಗಿ ಓರ್ವ ಘನ ಸರ್ಕಾರದ ಮುಖ್ಯಮಂತ್ರಿ ಪ್ರತ್ಯೇಕ ಧರ್ಮ ಮಾಡಲು ಹೊರಟಿದ್ದರು ಎಂದರೆ ಸಂಶೋಧನಾ ನೆಲೆಯಲ್ಲಿ ರಾಜ್ಯದ ಮರ್ಯಾದೆಯು ಅಂತರರಾಷ್ಟ್ರೀಯವಾಗಿ ಎಂತಹ ನಗೆಪಾಟಲಿಗೆ ಒಳಗಾಗಿರಬಹುದು ಮತ್ತು ಹೀಗೆಯೇ ಮುಂದುವರಿದರೆ ಶಾಶ್ವತವಾಗಿ ಒಳಗಾಗಬಹುದು ಎಂಬುದು ಕನ್ನಡಮ್ಮನ ಕಂದಗಳಿಗೆ ಬಿಟ್ಟ ವಿಷಯ. ಅಂದ ಹಾಗೆ ಈ ಸುಳ್ಳಿನ ಸರದಾರರು ಈಗಲೂ ಸತ್ಯವಾಗಿ ಮುಖ್ಯಮಂತ್ರಿಗಳ ಆಸ್ಥಾನಪಂಡಿತರಾಗಿಯೇ ಇದ್ದಾರೆ.


ಇರಲಿ, ಹೀಗೆ ಅಲ್ಲಿಂದ ಬೆಳೆದ ಈ ಧರ್ಮ"ಘಾತುಕ ಸಮಯ"ವು ಅನೇಕ ಆಸೆ ಆಮಿಷಗಳಿಗೆ ಕೆಲವು ವಿರಕ್ತರನ್ನು ಒಳಗಾಗಿಸುತ್ತ, ನವ್ಯದ ವಿದೇಶಿ ಕಮ್ಯೂನಿಸ್ಟ್ ಸಿದ್ಧಾಂತದ ಮಾಯೆಗೆ ಸಿಲುಕಿಸುತ್ತ, ಮುಗ್ಧ ಭಕ್ತರಲ್ಲಿ ಇಲ್ಲದ ಪುರೋಹಿತಶಾಹಿ ಸಂಕಥನವನ್ನು ಹೇಳುತ್ತ ಜಂಗಮದ್ವೇಷವನ್ನು ತುಂಬಿ ಪ್ರತ್ಯೇಕ ಧರ್ಮವನ್ನು ಶೂನ್ಯದಿಂದ ಸೃಷ್ಟಿಸತೊಡಗಿದರು. ಶೂನ್ಯದಿಂದಲೇ ಪ್ರಪ್ರಥಮ ಮಹಿಳಾ ಜಗದ್ಗುರು, ಮಾತೆ ಇತ್ಯಾದಿ ಉಪಸರ್ಗಗಳನ್ನು ಸೃಷ್ಟಿಸಿಕೊಂಡವರಿಗೆ ಅದೇ ಶೂನ್ಯದಿಂದ ಒಂದು ನಿಶ್ಶೂನ್ಯ ಧರ್ಮವನ್ನು ಸೃಷ್ಟಿಸುವುದು ಕಷ್ಟವೇ?! ಅದರಲ್ಲೂ ಓಟಿಗೆ ನೋಟು ಎನ್ನುವ ಚೌಕಾಸಿ ಪ್ರಭುಗಳು, ನೋಟಿಗಾಗಿ ಓಟು ಎನ್ನುವ ದೈನೇಸಿ ಪ್ರಜೆಗಳ ಊಳಿಗಮಾನ ಸ್ವೇಚ್ಛಾಚಾರದ ಪ್ರಜಾಪ್ರಭುತ್ವದಲ್ಲಿ ಮತ್ತು ಮೀಸಲಾತಿ ಎನ್ನುವ ಚೀಪುಕಡ್ಡಿಮಿಠಾಯಿಯ ಮಧುಮೇಹದ ವ್ಯವಸ್ಥೆಯಲ್ಲಿ!!! ಹಾಗಾಗಿ ಗುರುವೂ ಇಲ್ಲದೆ, ಜಂಗಮವೂ ಇಲ್ಲದೆ ಲಿಂಗವನ್ನೂ ಲಿಂಗಾರ್ಪಿತ ಲಿಂಗಾರ್ಪಿತ ಲಿಂಗಾರ್ಪಿತ ಮಾಡಿ ಕೇವಲ ಆಯತ ಆಯತ ಆಯತದ ಆಯಕಟ್ಟಿಗಾಗಿ ತನುಮನವನ್ನು ಪ್ರತ್ಯೇಕ ಧರ್ಮಿಗಳು ಬಳಲಿಸುತ್ತಿದ್ದಾರೆ. ಆಯತ ಎಂದರೆ ನೆಲೆ, ಉಚಿತ, ಕ್ರಮ, ಲಾಭ, ಒಳಹರಿವು ಎಂಬೆಲ್ಲ ಅರ್ಥವಿದೆ ಎಂಬುದು ಕನ್ನಡ ಪದ ವಿಶೇಷ. ಉಳಿದಂತೆ,


ಎನ್ನ ಆಯತ ಅವಧಾನಗೆಟ್ಟಿತ್ತಯ್ಯಾ.

ಎನ್ನ ಸ್ವಾಯತ ಸಂದಳಿಯಿತ್ತಯ್ಯಾ.

ಎನ್ನ ಸಮಾಧಾನ ತರಹವಾಯಿತ್ತಯ್ಯಾ.

ಎನ್ನ ಅರಿವು ನಿಜದಲ್ಲಿ ನಿಃಪತಿಯಾಯಿತ್ತಯ್ಯಾ.

ಕಲಿದೇವರದೇವಾ, ನಿಮ್ಮಲ್ಲಿ ಶಬ್ದಮುಗ್ಧವಾದೆನು.


ಬಸವ ಸ್ಥಾಪಿತ ಶೂನ್ಯಪೀಠದ ನಿರಂಜನ ವಂಶ ರತ್ನಾಕರದ ನಿಯಮಾವಳಿಗಳ ಪ್ರಕಾರವಾಗಿ ದೀಕ್ಷೆ ಪಡೆಯದೆ ಲಿಂಗಾಯತದ ಹೊರಗುಳಿದ ಇಂತಪ್ಪ ಸ್ವಘೋಷಿತ ಜಗದ್ಗುರುಗಳು ಲಿಂಗಾಯತ ಪ್ರತ್ಯೇಕ ಧರ್ಮ ಎನ್ನುವುದು ಬಾಲವೇ ಆನೆಯನ್ನು ಅಲ್ಲಾಡಿಸಿದಂತೆ! 


ದೇಶದ ಇತಿಹಾಸವನ್ನು ಸಮಗ್ರವಾಗಿ ಗ್ರಹಿಸಿದಾಗ ಮನುಸ್ಮೃತಿಯಲ್ಲಿ ಇಲ್ಲದ್ದು ಇದೆಯೆಂದು ಹೇಗೆ ಸಮಗ್ರವಾಗಿ ರಾಷ್ಟ್ರೀಯವಾಗಿ ಸಂವಿಧಾನದಲ್ಲಿ ಸಾದರಪಡಿಸಲಾಗಿದೆಯೋ ಅದೇ ಮಾದರಿಯನ್ನು ಸಂಕ್ಷಿಪ್ತವಾಗಿ ಪ್ರಾದೇಶಿಕವಾಗಿ ಈ ಧರ್ಮಕಾರಣದಲ್ಲಿ ಪ್ರಯೋಗಿಸಲಾಗುತ್ತಿದೆ. ವಿದೇಶಿ ಬ್ರಿಟಿಷರ 'ವಿಭಜಿಸಿ ಆಳು' ನೀತಿ ಬ್ರಿಟಿಷರಿಗೆ ಅನಿವಾರ್ಯವಾಗಿತ್ತು, ಮಾಡಿದರು. ಆದರೆ ಸ್ವದೇಶಿ ಚಳುವಳಿ ಮಾಡಿಯೇ ಪಡೆದ ಸ್ವತಂತ್ರ ಭಾರತದಲ್ಲಿ ಮಾಡಿದ ಸಾಂವಿಧಾನಿಕ ಜಾತಿನೀತಿಯ ವಿಭಜನೆ ಯಾರಿಗೆ ಬೇಕಿತ್ತು ಎಂಬುದು ಸ್ಪಟಿಕದ ಶಲಾಕೆಯಷ್ಟೇ ಸುಸ್ಪಷ್ಟ. ಹಾಗೆಯೇ ಅಂಬೇಡ್ಕರರ ನಿಲುವೂ ಮಾಣಿಕ್ಯದ ದೀಪ್ತಿಯಷ್ಟೇ ಉಜ್ವಲ.


ಸತ್ಯಮೇವ ಜಯತೆ ಎಂಬ ಉದ್ಘೋಷದ ರಾಷ್ಟ್ರದಲ್ಲಿ ಅಸತ್ಯವೇ ಏಕಮೇವ ಜಯಶಾಲಿಯಾಗಿದೆ!


- ರವಿ ಹಂಜ್


ಹಗೆದಿಬ್ಬೇಶ್ವರನ ಕಾಲಜ್ಞಾನ ವಚನ.

 ಮುಂದಣ ಕಲಿಯುಗದ ಮಹಾತ್ಮೆಯನು ಮರ್ತ್ಯಲೋಕದ ಮಹಾಗಣಂಗಳು ಕೇಳಿ ಕೃತಾರ್ಥರಾಗಿರಯ್ಯ! ನಾನು ಹೇಳುವನಲ್ಲ. ಇದು ಹಗೆದಿಬ್ಬೇಶ್ವರನು ಕೊಟ್ಟ ನಿರೂಪವು ಕಾಣಿ.

ಪಂಚಾಶತ್‌ ಕೋಟಿ ಭೂಮಂಡಲದ ಮಧ್ಯದಲ್ಲಿ ಪೃಥ್ವಿಗೆ ಕೈಲಾಸಮಪ್ಪ ಚಂದನವನದ ಮೂಡಲ ಬಾಗಿಲು ಮುಚ್ಚೀತು. ಮನುಷ್ಯರ ರಕ್ತ ಬೆಳ್ಳಗಾದೀತು. ಸುರೆಯ ಗಡಿಗೆ ಆಳೀತು. ವೇಶಿಯರ ಸೆರಗಲ್ಲಿ ಆಡಳಿತ ಕಟ್ಟೀತು. ಅಲ್ಲಿ ನಾನಾ ವಿಕಾರಂಗಳಾದಾವು. 

ಎಪ್ಪತ್ತೇಳು ಮಲೆಗಳು ಅಪವರ್ಗವಾದಾವು. ಲಿಂಗ ಕೆಟ್ಟು ಭಿನ್ನವಾದೀತು. ಮನ್ಮಥಕೊಂಡ ಉರಿದೀತು. ಯವನರ ಬಲವೆದ್ದೀತು. ಶಂಭುಲಿಂಗದೇವರ ಮುಂದಣ ಮೇಳದ ಮಂಟಪದಲ್ಲಿ ಕಪಿಲೆಯ ಬಾಣಸವ ಮಾಡ್ಕಾರು. ನಂದಿಕಂಭ ಮುರಿದಾರು. ಶಿಶ್ನಕಂಬವ ಕುಣಿಷ್ಯಾರು. ಛಪ್ಪನ್ನೈವತ್ತಾರು ನಾಯಕರು ಮಡಿದಾರು. 

ಪರಮತ ಬಲ ಆರಾದೀತು. ಆರು ಮೂರಾದೀತು. ಮೂರು ಎರಡಾದೀತು. ಎರಡು ಒಂದಾದೀತು. ಶಿವಸಮಯ ಕೆಟ್ಟೀತು. ಹಿರಿಯರ ಹಿರಿಯತನವಳಿದೀತು. ಷಡುದರ್ಶನ ಕೆಟ್ಟಾವು. ಏಕ ದರುಶನದಲ್ಲಿ ಅಡಗೀತು. ಮೂದೇವಿ ಬಂದಾಳು. ತೊಡೆಯ ತಟ್ಯಾಳು. ಸಂಗಮದೇವನ ಲಿಂಗಮದೇವ ಮಾಡ್ಯಾಳು. ಜಗದ್ಗುರು ನಾಲ್ಕಾದಾರು. ಅವರು ಮೂದೇವಿಗೆ ಶರಣೆಂದಾರು. ಭಕ್ತರು ಜಂಗಮದ ಕೈಸೇವೆಯ ಮಾಡಿಸಿಕೊಂಡಾರು. ನಿಜಭಕ್ತಿಯ ಮರೆತಾರು. ದಾಕ್ಷಿಣ್ಯ ಭಕ್ತಿಯ ಮಾಡ್ಯಾರು. ಕ್ರಿಯೆಗಳಂ ಬಿಟ್ಟಾರು. ಅನೇಕ ನೇಮಂಗಳಂ ಮಾಡ್ಯಾರು ಪ್ರಸಾದವಂ ಬಿಟ್ಟಾರು. ಮನೆಯ ಹಿರಿಯರಂ ಮರೆತಾರು. ಜಂಗಮರ ನಿಂದ್ಯವಂ ಮಾಡ್ಯಾರು. ಮತ್ತೆ ಜಂಗಮದ ಪ್ರಸಾದವಂ ಕೊಂಡಾರು. ಭಸಿತ ರುದ್ರಾಕ್ಷಿಯಂ ತೊಟ್ಟಾರು. ವಿಷಯಂಗಳೊಳಗೆ ಮುಳುಗಾಡ್ಯಾರು. ಹದಿನೆಂಟು ಜಾತಿ ಹರಕೊಂಡು ಉಂಡಾರು. ಕುಲಕ್ಕೆ ಹೋರಾಡ್ಯಾರು. 

ಅನರ್ಥವ ನುಡಿದಾರು. ಅನರ್ಥಕ್ಕೆ ಗುದ್ದಾಡ್ಯಾರು. ನಮ್ಮ ಶರಣರ ಹೆಸರೀಲೆ ಹಲವು ಸುಳ್ಳನಾಡ್ಯಾರು. ಅನಾಹುತವ ಮಾಡ್ಯಾರು. ಲಿಂಗಾಹತವ ನಡೆಸ್ಯಾರು. ಆದರೂ ಹೊಳ್ಳು ಜಳ್ಳಾಗಿ ಹೋದಾರು.  

ಜನಗಳು ದನಗಳಾದಾರು. ತರುಗಾಹಿ ರಾಜ್ಯವನಾಳ್ಯಾನು. ಪ್ರವಾದಿಯೇ ಪರಮವೆಂದಾನು. ಸನಾತನವ ಹಳಿದಾನು. ಅಕಾಲ ಮಳೆಯಾದೀತು. ಅನ್ನವ ಬೆಳೆವ ಭೂಮಿ ಸುಡುಗಾಡಾದೀತು. ಅಲ್ಲಿ ಜೀವಂತ ಶವಗಳು ಮನೆಯ ಕಟ್ಯಾವು. ಉಳ್ಳಿ ತೆಂಗಿನಾರಷ್ಟಾದೀತು. ಬಂಗಾರವು ಪ್ಲಾಟಿನದ ಮೂರರಷ್ಟಾದೀತು. ಅಕ್ಕಿ ಚೆಲ್ಲಾಡಿ ರಾಗಿ ಅಪರೂಪವಾದೀತು. ಎತ್ತು ಈದೀತು. ಕತ್ತೆ ಆಕಾಶದಲ್ಲಿ ಹಾರೀತು. ತಲೆಗಿಂತ ತರಡು ದಪ್ಪವಾದೀತು. ಕೇಯಕವೆ ಕಾಯಕವಾದೀತು. ಬೀಜವೊಂದೇ ಉಳಿದೀತು.

ನಮ್ಮ ಪುರಾತರ ಶರಣರು ಬೀಜಕ್ಕೊಬ್ಬರುಳಿದಾರು. ಮತ್ತೆ ಷಡುದರುಶನವೆದ್ದೀತು. ನಿರಂಜನ ಜಂಗಮವಂಶದಲ್ಲೊಬ್ಬ ವೀರ ಹುಟ್ಯಾನು. ಹುಂಜನಾಗಿ ಕೂಗಿ ಏಳಿಸಿಯಾನು. ಪೂರ್ವದಲಿ ಪುಟ್ಟಿ ಪಶ್ಚಿಮಕ್ಕೆ ಪೋದವ ಮತ್ತೆ ಪೂರ್ವಕೆ ಬಂದಾನು. ಹುಂಬನಾಗಿ ಕೂಗಿಯಾನು. ಸುಳ್ಳರ ಕಟಕಿಯಾಡ್ಯಾನು. ದುರ್ಗದಲ್ಲೊಬ್ಬ ಅವನ ಜೊತೆಯಾದಾನು. ಮಳ್ಳರ ಮಗ್ಗುಲು ಮುರಿದಾನು. ಜಗಕೆ ಶಂಕರಿಯ ಕುಡಿಸ್ಯಾನು. ಆನಂದವ ತಂದಾನು.

ಹುಚ್ಚು ಕಮಂಗಿಗಳಾ ಎಚ್ಚರಾದರೆ ಏಳಿ, ಇಲ್ಲವಾದರೆ ನೆಗೆದು ಬೀಳಿ. ಕಲಿಯುಗದ ಮಹಾತ್ಮೆಯನು ಮರ್ತ್ಯಲೋಕದ ಮಹಾಗಣಂಗಳೇ ಕೇಳಿ ಕೃತಾರ್ಥರಾಗಿ. ಏಳಿ ಎಚ್ಚರಗೊಳ್ಳಿ. ಇಲ್ಲಾ ನೆಗೆನೆಗೆದು ಬೀಳಿ. ಇದು ಹಗೆದಿಬ್ಬೇಶ್ವರನು ಕೊಟ್ಟ ನಿರೂಪವು ಕಾಣಿ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ 

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ವಿಶ್ವವಾಣಿ ಬಸವ ಮಂಟಪ - ಪುಟದಿಂದ ಪುಟಕ್ಕೆ ರದ್ದಾಗುವ ಶೂನ್ಯಸಂಶೋಧನೆಗಳು!

 ಜಾಗತಿಕ ಲಿಂಗಾಯತ ಮಹಾಸಭಾದ ಅಭಿಪ್ರಾಯಗಳನ್ನು ವಿಶ್ಲೇಷಿಸದೆ ವೀರಶೈವ ಲಿಂಗಾಯತದ ಕುರಿತು ಅಭಿಪ್ರಾಯ ನೀಡುವುದು ಪ್ರಜಾಪ್ರಭುತ್ವದಲ್ಲಿ ಏಕಮುಖ ಅಭಿಪ್ರಾಯ ಎನಿಸಿಬಿಡುತ್ತದೆ. ಅದು ಸಲ್ಲದು ಕೂಡ. ಜಾಗತಿಕ ಲಿಂಗಾಯತ ಮಹಾಸಭಾದ ಶರಣ ಜಾಮದಾರರು, ಶರಣ ರಂಜಾನ್ ದರ್ಗಾರವರು ಮತ್ತು ಪ್ರತ್ಯೇಕ ಲಿಂಗಾಯತದ ಸಮಸ್ತ ಶರಣರೆಲ್ಲರೂ ತಮ್ಮ ಯಾವುದೇ ಸಂಶೋಧನಾ ಪರಾಮರ್ಶೆಗೆ ಪ್ರೊ. ಕಲ್ಬುರ್ಗಿಯವರನ್ನು ಉಲ್ಲೇಖಿಸುತ್ತಾರೆ. ನನ್ನ ಹಿಂದಿನ ಲೇಖನಗಳಲ್ಲಿ ಕಲ್ಬುರ್ಗಿಯವರ ಶೂನ್ಯ ಸಂಶೋಧನೆಗಳ ಬಗ್ಗೆ ವಿಶ್ಲೇಷಿಸಿದ್ದರೂ ಈಗ ಮತ್ತಷ್ಟು ಆಳವಾಗಿ ಅವರ ಸಂಶೋಧನೆಗಳ ಸತ್ಯಾಸತ್ಯತೆ ಕುರಿತು ಕಂಡುಕೊಳ್ಳೋಣ. ನನ್ನ ಅತಿ ಸಾಮಾನ್ಯ ತಿಳಿವಳಿಕೆಯ ಓದಿಗೆ ಇವರ ಸಂಶೋಧನೆಗಳು ಪುಟದಿಂದ ಪುಟಕ್ಕೆ ರದ್ದಾಗುತ್ತಾ ಶೂನ್ಯವಾಗುವ ಕಾರಣ ಇವನ್ನು ಶೂನ್ಯ ಸಂಶೋಧನೆಗಳು ಎಂದಿದ್ದೇನೆ ಎಂಬುದು ಒಂದು ತಾರ್ಕಿಕ ಸ್ಪಷ್ಟನೆ.


ಮೊದಲಿಗೆ ಲಿಂಗಾಯತ ಮಹಾಸಭಾದ ವೀರಶೈವ ಪದವನ್ನು ವಚನಗಳಲ್ಲಿ ತುರುಕಲಾಗಿದೆ ಎನ್ನುವ ಆರೋಪಕ್ಕೆ ಪ್ರೊ. ಕಲ್ಬುರ್ಗಿಯವರು ಸಹ ವೀರಶೈವ ಎಂಬ ಪದಬಳಕೆಯಾಗಿರುವ ಬಸವ, ಅಲ್ಲಮ, ಅಕ್ಕನ ವಚನಗಳನ್ನು ಪ್ರಕ್ಷೇಪ ವಚನಗಳೆಂದು ತಿರಸ್ಕರಿಸುತ್ತಾರೆ (ಅವರ ಪೂರ್ವೋಕ್ತ ಕೃತಿ, ಪುಟ ೧೪). ಆದರೆ ಅವು ಏಕೆ ಪ್ರಕ್ಷೇಪ ಎನ್ನಲು ಸಮರ್ಥ ಕಾರಣಗಳನ್ನು ಕೊಡುವುದಿಲ್ಲ. ಮೇಲಾಗಿ ಲಿಂಗಾಯತ ಎಂಬ ಪದ ಬಳಕೆಯ ವಚನಗಳು ಸಹ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವುದಕ್ಕೆ ಅವರು ಯಾವುದೇ ಸಮಜಾಯಿಷಿ ಕೊಟ್ಟಿಲ್ಲ. ಆದರೆ ಹೀಗಿದ್ದೂ ವೀರಶೈವ ಎಂದಿರುವ ಎಲ್ಲಾ ಪ್ರಕ್ಷಿಪ್ತ ವಚನಗಳನ್ನು ಇವರ ಸಂಪಾದಕತ್ವದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗಿದೆ. ಅದನ್ನು ಸಂಖ್ಯಾತ್ಮಕವಾಗಿ ಸಮಗ್ರವಾಗಿ ಇಲ್ಲಿ ವಿಶ್ಲೇಷಿಸೋಣ ಏಕೆಂದರೆ ನಾನೊಬ್ಬ ಲೋಕಮಾನ್ಯ ಸಂಶೋಧಕ, ಬುದ್ಧಿಜೀವಿ, ಸಂಸ್ಕೃತಿ ಚಿಂತಕನಲ್ಲ. ಅದಲ್ಲದೆ ಸಾಕ್ಷ್ಯಾಧಾರಗಳಿಲ್ಲದೆ ಯಾರು ಏನನ್ನೇ ಹೇಳಿದರೂ ಅದು ಒಪ್ಪಿತವಲ್ಲ ಸಹ.

ವೀರಶೈವ ಎಂಬ ಪದವನ್ನು ೧೪೨ ವಚನಗಳಲ್ಲಿ ಒಟ್ಟು ೨೨೧ ಕಡೆ ೩೦ಕ್ಕೂ ಹೆಚ್ಚು ವಚನಕಾರರು ಬಳಸಿದ್ದಾರೆ. ಆ ವಚನಕಾರರು ಅಕ್ಕಮಹಾದೇವಿ, ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಸಿದ್ದರಾಮೇಶ್ವರ, ಮೋಳಿಗೆ ಮಾರಯ್ಯ, ಅಮುಗೆ ರಾಯಮ್ಮ, ಅರಿವಿನ ಮಾರಿತಂದೆ, ಆದಯ್ಯ, ಕಾಡಸಿದ್ದೇಶ್ವರ, ಇಮ್ಮಡಿ ಮುರಿಘಾಗುರುಸಿದ್ದಸ್ವಾಮಿ, ಕುಷ್ಟಗಿ ಕರಿಬಸವೇಶ್ವರ, ಕೂಡಲಸಂಗಮೇಶ್ವರ, ಕೋಲ ಶಾಂತಯ್ಯ, ಗುರುಸಿದ್ಧದೇವರು, ಘಟ್ಟಿವಾಳಯ್ಯ, ಚಂದಿಮರಸ, ಜಕ್ಕಣ್ಣಯ್ಯ, ದೇಶೀಕೇಂದ್ರ ಸಂಗನಬಸವಯ್ಯ, ಶಾಂತವೀರೇಶ್ವರ, ತೋಂಟದ ಸಿದ್ದಲಿಂಗ ಶಿವಯೋಗಿಗಳು, ಪ್ರಸಾದಿ ಭೋಗಣ್ಣ, ಬಹುರೂಪಿ ಚೌಡಯ್ಯ, ಮುಮ್ಮಡಿ ಕಾರ್ಯೇಂದ್ರ, ಹೇಮಗಲ್ಲ ಹಂಪ, ಸ್ವತಂತ್ರ ಸಿದ್ದಲಿಂಗ, ಷಣ್ಮುಖಸ್ವಾಮಿ ಮುಂತಾದವರು.

ಲಿಂಗಾಯತ ಎಂಬ ಪದವನ್ನು ಒಟ್ಟು ೧೦ ವಚನಗಳಲ್ಲಿ ೧೨ ಕಡೆ ೮ ವಚನಕಾರರು ಬಳಸಿದ್ದಾರೆ. ಆ ವಚನಕಾರರು ದೇಶೀಕೇಂದ್ರ ಸಂಗನಬಸವಯ್ಯ, ಶಾಂತವೀರೇಶ್ವರ, ಉರಿಲಿಂಗಪೆದ್ದಿ, ಏಲೇಶ್ವರ ಕೇತಯ್ಯ, ಸಿದ್ದರಾಮೇಶ್ವರ, ಅಕ್ಕಮ್ಮ, ಚೆನ್ನಬಸವಣ್ಣ, ಮತ್ತು ಗುರುಸಿದ್ಧದೇವರು.

ಸಮಗ್ರ ವಚನ ಸಾಹಿತ್ಯದ ಎಲ್ಲಾ ಅಧಿಕೃತ ವಚನಗಳನ್ನು ಪರಿಗಣಿಸಿ ನಾನು ಈ ಸಂಖ್ಯೆಯನ್ನು ಕಂಡುಕೊಂಡಿದ್ದೇನೆ. ಇದಕ್ಕೆ ಸಂಖ್ಯಾಶಾಸ್ತ್ರದ + ಅಥವಾ - ಐದು ಪ್ರತಿಶತ ತಪ್ಪು ಲೆಕ್ಕಾಚಾರದ ಸೂತ್ರವನ್ನು ಅಳವಡಿಸಿಕೊಂಡರೂ ಸಹ ಒಟ್ಟು ಸಂಖ್ಯೆಯಲ್ಲಿ ಹೆಚ್ಚು ವ್ಯತ್ಯಾಸವಾಗುವುದಿಲ್ಲ.

ಲಿಂಗಾಯತ ಎಂಬುದು ಬೇರೆ ಆಗಿದ್ದರೆ ಮತ್ತು ಬಸವಾದಿ ಶರಣರು ಲಿಂಗಾಯತಧರ್ಮ ಪರಿಪಾಲಕರಾದರೆ ಅವರೇಕೆ ವೀರಶೈವ ಪದವನ್ನು ಇನ್ನೂರ ಇಪ್ಪತ್ತೊಂದು ಕಡೆ ಬಳಸಿ ಲಿಂಗಾಯತ ಪದವನ್ನು ಕೇವಲ ಹನ್ನೆರಡು ಕಡೆ ಬಳಸಿದ್ದಾರೆ?

ಪ್ರೊ. ಕಲ್ಬುರ್ಗಿಯವರ ವಾದವನ್ನು ಪುಷ್ಠಿಕರಿಸಲು ವಿತಂಡವಾದವಾಗಿಯೂ ಮತ್ತು ತಾರ್ಕಿಕವಾಗಿಯೂ ಲಿಂಗವಂತ ಪದವನ್ನು ಸಹ ಈ ಸಂಖ್ಯಾಸೂತ್ರಕ್ಕೆ ಒಡ್ಡಿ ನೋಡೋಣ. ಏಕೆಂದರೆ ಲಿಂಗವಂತ ಪದ ಲಿಂಗಾಯತ ಪದದ ತತ್ಸಮ ಎಂದು ಸಂಶೋಧಕ ತಜ್ಞರು, ನ್ಯಾಯಮೂರ್ತಿಗಳು, ತನಿಖಾ ಪತ್ರಕರ್ತರಲ್ಲದೆ ನನ್ನಂತಹ ಕುತೂಹಲಿಗಳು ಸಹ ವಾದಿಸುವ ಸಾಧ್ಯತೆ ದಟ್ಟವಾಗಿರುತ್ತದೆ. ಅದಲ್ಲದೆ "ಅಪ್ಪನು ನಮ್ಮ ಮಾದರ ಚೆನ್ನಯ್ಯ" ಎಂಬ ವಚನದ ಸಾಲನ್ನು ಹಿಡಿದು ಬಸವಣ್ಣ ಮಾದರ ಜಾತಿಯವನಾಗಿದ್ದನು ಎನ್ನುವ ಗ್ರಂಥವೇ ಇಂತಹ ಸಂಶೋಧಕ ವರ್ಗದಿಂದ ಬಂದಿರುವ ಹಿನ್ನೆಲೆಯಲ್ಲಿ ಯಾವುದೇ ಸಂಶೋಧನ ಸಾಧ್ಯತೆಯನ್ನು ಹಾಗೆಲ್ಲಾ ಹಗುರವಾಗಿ ತಳ್ಳಿಹಾಕುವಂತಿಲ್ಲವಲ್ಲವೇ!

ಲಿಂಗವಂತ ಪದವನ್ನು ಒಟ್ಟು ೧೦೬ ವಚನಗಳಲ್ಲಿ ೧೭೩ ಕಡೆ ೨೩ ವಚನಕಾರರು ಬಳಸಿದ್ದಾರೆ. ಪುನಃ ಸಂಖ್ಯಾಶಾಸ್ತ್ರದ + ಅಥವಾ - ಐದು ಪ್ರತಿಶತ ತಪ್ಪು ಲೆಕ್ಕಾಚಾರದ ಸೂತ್ರವನ್ನು ಅಳವಡಿಸಿಕೊಂಡರೂ ಒಟ್ಟು ಸಂಖ್ಯೆಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಆದರೆ ಲಿಂಗವಂತ ಪದ ಬಳಸಿದ ವಚನಗಳಲ್ಲಿ ವೀರಶೈವ ಪದವೂ ಸಹ ಅಲ್ಲಲ್ಲಿ ಜೊತೆಜೊತೆಯಾಗಿ ಸಾಕಷ್ಟು ಕಡೆ ಬಳಕೆಯಾಗಿಬಿಟ್ಟಿದೆ. ಹಾಗಾಗಿ ಲಿಂಗವಂತ ಎಂಬುದು ಲಿಂಗಾಯತ ಪದಕ್ಕೆ ತತ್ಸಮವಲ್ಲ. ಅದು ಲಿಂಗವನ್ನು ಪಡೆದುಕೊಂಡ ಎಂಬರ್ಥದಲ್ಲಿ ಕೆಳಗಿನ ವಚದಲ್ಲಿರುವಂತೆ ಬಳಕೆಯಾಗಿದೆ.

ಅಂಗಲಿಂಗಸಂಗಸುಖಸಾರಾಯದನುಭಾವ
"ಲಿಂಗವಂತಂ"ಗಲ್ಲದೆ ಸಾಧ್ಯವಾಗದು ನೋಡಾ.
ಏಕಲಿಂಗಪರಿಗ್ರಾಹಕನಾದ ಬಳಿಕ,
ಆ ಲಿಂಗನಿಷ್ಠೆ ಗಟ್ಟಿಗೊಂಡು,
ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದಭೋಗಿಯಾಗಿ,
"ವೀರಶೈವ"ಸಂಪನ್ನನೆನಿಸಿ ಲಿಂಗವಂತನಾದ ಬಳಿಕ
ತನ್ನಂಗಲಿಂಗಸಂಬಂಧಕ್ಕನ್ಯವಾದ ಜಡಭೌತಿಕ ಪ್ರತಿಷ್ಠೆಯನುಳ್ಳ
ಭವಿಶೈವದೈವಕ್ಷೇತ್ರತೀರ್ಥಂಗಳಾದಿಯಾದ ಹಲವು ಲಿಂಗಾರ್ಚನೆಯ
ಮನದಲ್ಲಿ ನೆನೆ[ಯ]ಲಿಲ್ಲ, ಮಾಡಲೆಂತೂ ಬಾರದು.
ಇಷ್ಟೂ ಗುಣವಳವಟ್ಟಿತ್ತಾದಡೆ ಆತನೀಗ ಏಕಲಿಂಗನಿಷ್ಠಾಚಾರಯುಕ್ತನಾದ ವೀರಮಾಹೇಶ್ವರನು.
ಇವರೊಳಗೆ ಅನುಸರಿಸಿಕೊಂಡು ನಡೆದನಾದಡೆ
ಗುರುಲಿಂಗಜಂಗಮಪಾದೋದಕಪ್ರಸಾದ ಸದ್ಭಕ್ತಿಯುಕ್ತವಾದ ವೀರಶೈವ ಷಡುಸ್ಥಲಕ್ಕೆ ಹೊರಗಾಗಿ ನರಕಕ್ಕಿಳಿವನು ಕಾಣಾ, ಕೂಡಲಸಂಗಮದೇವಾ.

ಲಿಂಗವಂತ, ಲಿಂಗನಿಷ್ಠೆ, ಲಿಂಗಾರ್ಚನೆ, ಲಿಂಗಾರ್ಪಿತ ಮುಂತಾದ ಪದಗಳೂ ಸೇರಿದಂತೆ ಲಿಂಗಾಯತ ಕೇವಲ ಲಿಂಗ ಸಂಬಂಧೀ ಪದವೇ ಹೊರತು ಪಂಥವನ್ನು ಹೆಸರಿಸುವ ನಾಮಪದವಲ್ಲ. ಪಂಥವು ಸದಾ ವೀರಶೈವ ಎಂಬ ನಾಮಪದದಿಂದಲೇ ಗುರುತಿಸಿಕೊಂಡಿತ್ತು ಎಂದು ಸಮಗ್ರ ವಚನಾಧಾರಿತ ಈ ಸಂಖ್ಯಾಸೂತ್ರಗಳು ಅನುಮೋದಿಸುತ್ತವೆ.

ಪ್ರಮುಖ ವಚನಕಾರರಾದ ಬಸವಣ್ಣ, ಅಲ್ಲಮ, ಮತ್ತು ಅಕ್ಕ ಮಹಾದೇವಿಯರು ತಮ್ಮ ವಚನಗಳಲ್ಲಿ ಲಿಂಗಾಯತ ಪದ ಬಳಸದೇ ಕೇವಲ ವೀರಶೈವ ಪದ ಬಳಸಿದ್ದಾರೆ ಎಂದ ಮೇಲೆ ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಹೇಗೆ? ವೀರಶೈವಿಗ ಆರಾಧ್ಯ ಜಂಗಮ ಬಸವಣ್ಣನನ್ನು ಲಿಂಗಾಯತ ಧರ್ಮ ಸಂಸ್ಥಾಪಕ ಎಂದು ಹೇಗೆ ತಾನೇ ಕರೆಯಲು ಸಾಧ್ಯ? ಎಂಬ ತಾರ್ಕಿಕ ಬೈನರಿ ನಿರ್ಧಾರಕ್ಕೆ ಈ ವಿಶ್ಲೇಷಣೆ ಬಂದು ನಿಲ್ಲುತ್ತದೆ. ಈ ವಾದಕ್ಕೆ ಎಂಟನೇ ಶತಮಾನದ ಶಂಕರಾಚಾರ್ಯರ ಬ್ರಹ್ಮಸೂತ್ರ ಭಾಷ್ಯವು ಮಹತ್ತರವಾದ ಬ್ರಹ್ಮಸಾಕ್ಷಿಯನ್ನೊದಗಿಸುತ್ತದೆ! ಬ್ರಹ್ಮಸೂತ್ರ ಭಾಷ್ಯದ ಪತ್ಯಾಧಿಕರಣದಲ್ಲಿ (ಎರಡನೇ ಅಧ್ಯಾಯದ ಎರಡನೇ ಪಾದ) ಶಂಕರರು "ಪಶುಪತಿ ಮತದವರೆಲ್ಲರೂ ಮಾಹೇಶ್ವರರು" ಎಂದಿದ್ದಾರೆ.

ಈ "ಮಾಹೇಶ್ವರ" ಪದವನ್ನು ಒಟ್ಟು ೩೫೫ ವಚನಗಳಲ್ಲಿ ೫೨೫ ಕಡೆ ೬೩ ವಚನಕಾರರು ಬಳಸಿದ್ದಾರೆ. ಸಂಖ್ಯಾಶಾಸ್ತ್ರದ + ಅಥವಾ - ಐದು ಪ್ರತಿಶತ ತಪ್ಪು ಲೆಕ್ಕಾಚಾರದ ಸೂತ್ರವನ್ನು ಅಳವಡಿಸಿಕೊಂಡರೂ ಒಟ್ಟು ಸಂಖ್ಯೆಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಅಂದರೆ ಮಾಹೇಶ್ವರರು ಶಂಕರಾಚಾರ್ಯರ ಎಂಟನೇ ಶತಮಾನದಿಂದ ಹಿಡಿದು ಮೇಲಿನ ಎಲ್ಲಾ ಆಚಾರ್ಯ ಪಂಡಿತರುಗಳ ಕಾಲದಲ್ಲಿಯೂ ಪಾಶುಪತಪಾಲಕರೇ ಆಗಿದ್ದರು ಮತ್ತವರು ವಚನಕಾರರ ಮಾಹೇಶ್ವರರೂ ವೀರಶೈವರೂ ಸಹ ಆಗಿದ್ದರು. ಹೀಗೆ ಈ ಎಲ್ಲಾ ಐತಿಹಾಸಿಕ ಆಕರಸೂಚಿಗಳು ಮಾಹೇಶ್ವರರೇ ಪಾಶುಪತವೆನ್ನುವುದನ್ನೇ "ಮಾಹೇಶ್ವರ" ಪದವನ್ನು ವೀರಶೈವ-ಲಿಂಗಾಯತ ವಚನಕಾರರು ಪ್ರಜ್ಞಾಪೂರ್ವಕವಾಗಿಯೇ ಬಳಸಿ ದೃಢೀಕರಿಸಿದ್ದಾರೆ.
***
ಪ್ರೊ. ಕಲ್ಬುರ್ಗಿಯವರ ಕೃತಿ "ಲಿಂಗಾಯತ ಸ್ವತಂತ್ರ ಧರ್ಮ"ದಲ್ಲಿನ ಕೆಲವು ಅಧ್ಯಾಯಗಳನ್ನು ಈಗ ಸತ್ಯದ ಒರೆಗೆ ಹಚ್ಚಿ ನೋಡೋಣ. ’ವೀರಶೈವ ಇತಿಹಾಸ ಮತ್ತು ಭೂಗೋಲ’ ಎಂಬ ಅಧ್ಯಾಯದಲ್ಲಿ "ಹದಿಮೂರನೇ ಶತಮಾನದ ಪಾಲ್ಕುರಿಕೆ ಸೋಮನಾಥನ ತೆಲುಗು ಭಾಷೆಯಲ್ಲಿರುವ ’ಬಸವಪುರಾಣ’ದಲ್ಲಿ ಲಿಂಗವಂತ, ವೀರಮಾಹೇಶ್ವರ ಪದಗಳಿವೆಯಾದರೂ ವೀರಶೈವ ಪದ ಕಂಡುಬರುವುದಿಲ್ಲ" ಎನ್ನುತ್ತಾ "ಬಸವಪುರಾಣವನ್ನು ಕನ್ನಡಕ್ಕೆ ಅನುವಾದಿಸಿದ ಭೀಮಕವಿಯು (ಕ್ರಿ. ಶ. ೧೩೬೮) ಕೆಲವೊಮ್ಮೆ ಅಲ್ಲಿಯ ವೀರಮಾಹೇಶ್ವರ ಪದಕ್ಕೆ ಬದಲು ಇಲ್ಲಿ ವೀರಶೈವ ಪದವನ್ನು ಬಳಸಿದ್ದಾನೆ. ಕನ್ನಡದಲ್ಲಿ ವೀರಶೈವ ಪದ ಕಂಡುಬರುವುದು ಇದೇ ಮೊದಲು. ಹಾಗಾಗಿ ವೀರಶೈವ ಪದ ಪಾಲ್ಕುರಿಕೆ ಸೋಮೇಶನ ತೆಲುಗು ಬಸವಪುರಾಣಮು ಮತ್ತು ಭೀಮಕವಿಯ ಕನ್ನಡ ಬಸವಪುರಾಣದ ಮಧ್ಯದ ಕಾಲಾವದಿಯಲ್ಲಿ ಹುಟ್ಟಿದೆಯೆಂದು ಸ್ಪಷ್ಟವಾಗಿ ಹೇಳಬಹುದು" ಎನ್ನುತ್ತಾರೆಯೇ ಹೊರತು ಇದರಲ್ಲಿ ಲಿಂಗಾಯತ ಪದವೂ ಇಲ್ಲದ್ದನ್ನು ಮಾತ್ರ ಅವರು ಹೇಳುವುದಿಲ್ಲ. ಹಾಗೆಯೇ ಮುಂದುವರಿಯುತ್ತ ಪ್ರೊ. ಕಲ್ಬುರ್ಗಿಯವರು "ಈ ಸಂದರ್ಭದಲ್ಲಿ ’ಆಂಧ್ರಪ್ರದೇಶದ ವೀರಶೈವ’ ವಿಷಯವನ್ನು ಕುರಿತ ಪಿಹೆಚ್ಡಿ ಪ್ರಬಂಧದಲ್ಲಿ ಹೇಳಲಾಗಿರುವ ’ Palakuriki Somanatha was the earliest to use word Virashaiva in Andhra. In his Chaturveda Saram, Somanatha describes lord Hari as Virashaiva, because the latter performed certain heroic deeds, such as offering his own eyes to Shiva, as a token of deep devotion. In Basava Puranam however, he appears to have give deeper meaning to Virashaiva, though the word was not actually used. (Virashaiva in Andhra, K. Lalitamba p 2)' ಅಭಿಪ್ರಾಯವನ್ನು ಅವಶ್ಯ ಗಮನಿಸಬೇಕು" ಎನ್ನುತ್ತಾರೆ.

ಆದರೆ ಈ ಮೇಲಿನ ಪಿಹೆಚ್ಡಿ ಉದಾರಹಣೆಯಲ್ಲೇ "ಪಾಲ್ಕುರಿಕಿ ಸೋಮನಾಥನು ತನ್ನ ’ಚಾತುರ್ವೇದ ಸಾರಂ’ ಕೃತಿಯಲ್ಲಿ ವೀರಶೈವ ಪದವನ್ನು ಆಂಧ್ರದಲ್ಲಿ ಪ್ರಪ್ರಥಮವಾಗಿ ಬಳಸಿದ್ದಾನೆ. ಪ್ರೊ. ಕಲ್ಬುರ್ಗಿಯವರ ಈ ಸರಳ ಉದಾಹರಣೆಯನ್ನು ಇಂಗ್ಲೀಷಿನಲ್ಲೇ ಹೆಚ್ಚು ಬರೆಯುವ ಡಾ. ಎಸ್. ಎಂ. ಜಾಮದಾರರು ತಮ್ಮ ಲೇಖನದಲ್ಲಿ ಉಲ್ಲೇಖಿಸಿರುವ ಕಾರಣ ಅವರೂ ಈ ಇಂಗ್ಲಿಷ್ ಪ್ಯಾರಾವನ್ನು ಓದಿರಲಿಲ್ಲವೇ ಎನ್ನುವಲ್ಲಿಗೆ ಲಿಂಗಾಯತ ಲಿಂಗಾಹತವಾಗುತ್ತದೆ! ಈ ಸಂಶೋಧನೆಯನ್ನು ಜಗದದ್ಭುತ ಸಂಶೋಧನೆಯಂತೆ ಬಿಂಬಿಸಿರುವ ಕಾರಣ ಇದನ್ನು ಈ ಹಿಂದೆ ಬರೆದಿದ್ದರೂ ಮತ್ತೆ ಮತ್ತೆ ಬರೆಯಬೇಕಾದ ಅನಿವಾರ್ಯತೆ ನನ್ನದು.

ಮೇಲಾಗಿ ಈ ಹಿಂದೆ ತಿಳಿಸಿದಂತೆ ಎಂಟನೇ ಶತಮಾನದ ಸ್ಕಂದ ಪುರಾಣವನ್ನು ಪುರಾಣವೆಂದು ಹೀಯಾಳಿಸಿ ಬದಿಗಿಟ್ಟರೂ ಶಾಸನಗಳಲ್ಲಿ ವೀರಶೈವ ಪದವು ಕ್ರಿ.ಶ. ೧೨೬೧ನೆಯ ಇಸವಿಯ ಮಲ್ಕಾಪುರ ಶಾಸನದಲ್ಲಿ ಕಂಡುಬಂದಿದೆ. ಇದರಲ್ಲಿ ಚೋಳಮಾಳವರಾಜರ ಗುರುವೂ, ವೀರಶೈವ ಕಾಕತೀಯರಾಜ “ಗಣಪರಿಕ್ಷ್ಮಾಪಾಲ ದೀಕ್ಷಾ ಗುರು'ವೂ “ಕಳಚುರಿಕ್ಷ್ಮಾಪಾಲದೀಕ್ಷಾಗುರು'ವೂ ಆದ ವಿಶ್ವೇಶ್ವರ ಶಿವಾಚಾರ್ಯನು “ಮಹೀಸುರ'ನೆಂದೂ ವೀರಶೈವಾಚಾರ್ಯನೆಂದೂ ಉಲ್ಲೇಖನಾಗಿದ್ದಾನೆ.

ಪ್ರೊ. ಕಲ್ಬುರ್ಗಿಯವರು ಈ ಕೃತಿಯಲ್ಲಿ, 'ತಮ್ಮ ಲಿಂಗಾಯತ ಸಿದ್ಧಾಂತಕ್ಕೆ ವಿರುದ್ಧವಾಗಿ ಪ್ರಜಾವಾಣಿಯಲ್ಲಿ ಲೇಖನ ಬರೆದವರೆಲ್ಲರೂ ಜಂಗಮರೇ ಆಗಿದ್ದಾರೆ' ಎಂದಿದ್ದಾರೆ. ಹಾಗಾಗಿ ಪ್ರೊ.ಚಿದಾನಂದಮೂರ್ತಿಯವರನ್ನು ಬಿಟ್ಟು ವಚನಗಳನ್ನು ಸಮಗ್ರವಾಗಿ ಸಂಪಾದಿಸಿರುವ ಸಂಶೋಧಕ ಎಲ್. ಬಸವರಾಜುರವರ ಕೃತಿಗಳಲ್ಲಿನ ಅಭಿಪ್ರಾಯವನ್ನು ಗಮನಿಸೋಣ. ಎಲ್. ಬಸವರಾಜುರವರು ತಮ್ಮ "ಅಲ್ಲಮನ ವಚನ ಚಂದ್ರಿಕೆ" ಕೃತಿಯಲ್ಲಿ (ಪುಟ ೪೨,೪೩,೪೪,೪೫) ಅಲ್ಲಮನು ವೀರಶೈವದ ಯೋಗಾಚಾರ್ಯಗಣದವನೆನ್ನುತ್ತ ಭಕ್ತನಾದ ಬಸವನೂ, ಜಂಗಮನಾದ ಪ್ರಭುವೂ ಜೊತೆಜೊತೆಯಾಗಿ ಜನ್ಮವೆತ್ತಿರುವರೆಂಬ ಶಿವತತ್ವ ಚಿಂತಾಮಣಿಯ ಉಲ್ಲೇಖ ಮಾಡುತ್ತಾರೆ. ಬಸವೇಶ್ವರನು ತನ್ನ ಪ್ರಭಾವಕ್ಕೊಳಗಾದ ಜನರಲ್ಲಿ ಭಕ್ತಿಯನ್ನು ಅರಳಿಸುವ ಜ್ಯೋತಿಸ್ವರೂಪದ ಮೂಲ ವಿಗ್ರಹವಾದರೆ, ಅಲ್ಲಮಪ್ರಭುದೇವನು ಆ ಭಕ್ತಿಗೆ ಪೂರಕವಾದ "ಜ್ಞಾನ"ದ ಜಂಗಮಸ್ವರೂಪಿ ಉತ್ಸವಮೂರ್ತಿಯಾಗಿದ್ದನು. ಅವನು ಸಾಧಿಸಿದ ಸಿದ್ಧಿ ಮತ್ತು ಉಪದೇಶಿಸಿದ ಪರಮಾರ್ಥವು ನಿರ್ವಾಣ ಅಥವಾ ಬಯಲು. ಅದನ್ನು ಸಾಕ್ಷ್ಯಾತ್ಕಾರ ಮಾಡಿಕೊಳ್ಳಲು ಹೇಳಿದ ಮಾರ್ಗ "ಯೋಗ."

ಇಲ್ಲಿ ಜ್ಞಾನ ಎಂದರೆ ಪಾಶುಪತವ್ರತ ಎಂದು ಎಲ್. ಬಸವರಾಜು (ಪುಟ ೪೨) ವಿವರಿಸಿದ್ದಾರೆ. ಹೀಗೆ ಲಿಂಗಾಯತದ ಬಸವಗುರು ಅಲ್ಲಮನ ತತ್ವಗಳು ಮೂಲವಾಗಿ ಪಾಶುಪತವೃತವೇ ಆಗಿರುವಾಗ ಪ್ರೊ. ಎಂ.ಎಂ. ಕಲ್ಬುರ್ಗಿಯವರು ಅಲ್ಲಮನನ್ನು ನೇರವಾಗಿ ಏಕೆ ನಿರಾಕರಿಸಲಿಲ್ಲ? ಇಂತಹ ಸಾಕಷ್ಟು ತಾರ್ಕಿಕ ಸಂಶೋಧನೆಗಳು ಕಲ್ಬುರ್ಗಿಯವರ ವಾದವನ್ನು ಮೇಲ್ಪದರದಲ್ಲೇ ಛಿದ್ರಿಸಿಬಿಡುತ್ತವೆ. ಪ್ರೊ. ಕಲ್ಬುರ್ಗಿಯವರ ಸಂಕಥನಗಳ ಕೃತಿಗಳನ್ನು ಓದಿದಾಗ ಅವರು ಭಿನ್ನಾಭಿಪ್ರಾಯದ ಅಂಶಗಳಿಗೆ ಪೂರಕ ಸಂಶೋಧನಾತ್ಮಕ ಪರಿಭಾಷೆಯಲ್ಲಿ ಉತ್ತರಿಸಲಾಗದೆ ಉಡಾಫೆಯ ಸಂಕಥನಗಳ ಮೊರೆಹೋಗಿದ್ದರೆನಿಸುತ್ತದೆ. ಲಿಂಗಾಯತ ಸ್ವತಂತ್ರ ಧರ್ಮವಾಗಿದ್ದು ಪಾಶುಪತ ಕಾಳಾಮುಖ, ರೇಣುಕರ ತತ್ವ, ಆಚರಣೆಗಳಿಗೆ ಎಳ್ಳಷ್ಟೂ ಸಾಮ್ಯವಿಲ್ಲ ಎನ್ನುವ ಪ್ರೊ. ಕಲ್ಬುರ್ಗಿಯವರು ಅರಿಯಬೇಕಾದುದು ಪಾಶುಪತ/ಕಾಳಾಮುಖದ ತತ್ವಗಳಾದ ಕಾರ್ಯ, ಕಾರಣ, ಯೋಗ, ವಿಧಿ, ದುಃಖಾಂತರಗಳೇ ಕಾಯಕ, ಕಾರಣ್ಯ, ಶಿವಯೋಗ, ಆಚಾರ/ದಾಸೋಹ, ಲಿಂಗೈಕ್ಯ ಎಂದು ರೂಪಾಂತರಗೊಂಡು ಸರಳೀಕರಿಸಿದ ಅಲ್ಲಮನ ಜ್ಞಾನ ಬಸವನ ಭಕ್ತಿಯಾಗಿತ್ತು ಎಂಬಲ್ಲಿಗೆ ತಾತ್ವಿಕವಾಗಿ ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ವಾದ ರದ್ದಾಗುತ್ತದೆ. ***
ಪ್ರೊ. ಕಲಬುರ್ಗಿಯವರ ಇನ್ನೊಂದು ಅಧ್ಯಾಯ, "ಜಗದಾಚಾರ್ಯರದು ಜಾತಿಭೇದ ಸಿದ್ದಾಂತ ಪಂಚಾಚಾರ್ಯರ ನಿಜಸ್ವರೂಪ"ದಲ್ಲಿ "'ಕುಲವನರಸುವರೆ ಶರಣರಲ್ಲಿ, ಜಾತಿ ಸಂಕರವಾದ ಬಳಿಕ?' ಎಂಬ ಶರಣ ಸಿದ್ಧಾಂತಕ್ಕೆ ವಿರುದ್ಧವಾದುದಾಗಿದೆ, ಜಗದಾಚಾರ್ಯ ಸಿದ್ಧಾಂತ. ಇವರು ಆಗಮಿಕ ಪರಂಪರೆಯವರಾಗಿದ್ದರೂ ಬ್ರಾಹ್ಮಣರೇ ಆಗಿರುವದರಿಂದ ಇವರಲ್ಲಿ ವರ್ಣಭೇದ ವ್ಯವಸ್ಥೆ ಸಹಜವಾಗಿದೆ. ಈ ಬ್ರಾಹ್ಮಣರ ಜಾತಿಭೇದ ಆಚರಣೆಗೆ ಲಿಂಗಸಗೂರು ತಾಲೂಕಿನ ಕರಡಿಕಲ್ಲು ಗ್ರಾಮದ ಎರಡು ಶಾಸನಗಳು (ರಾಯಚೂರು ಜಿಲ್ಲೆ ಶಾಸನಗಳು- ಲಿಂಗಸೂಗೂರು ೪ ಮತ್ತು ೬) ಸಾಕ್ಷಿಯಾಗಿವೆ. ಇವು ಹನ್ನೊಂದನೇ ಶತಮಾನದ ಉತ್ತರಾರ್ಧದ ಅಂದರೆ ಬಸವಣ್ಣನಿಗೆ ಕೆಲವೇ ವರ್ಷ ಪೂರ್ವದ ಶಾಸನಗಳಾಗಿವೆ. ಇಲ್ಲಿಯ ತತ್ಪುರುಷಶಿವ, ಸೂಕ್ಷ್ಮಶಿವ, ಮೈಮಶಿವ ಹೆಸರುಗಳ ಮುಂದೆ 'ಶಿವ ಅಂದರೆ ಶಿವಾಚಾರ್ಯ ಪ್ರತ್ಯಯವಿರುವುದರಿಂದ ಇವರು ಇಂದಿನ ಪಂಚಾಚಾರ್ಯ ಪರಂಪರೆಯ ಪೂರ್ವಜರೆಂದು ಸ್ಪಷ್ಟವಾಗುತ್ತದೆ. ಈ ಶಾಸನದಲ್ಲಿ ಸೂಕ್ಷ್ಮಶಿವ (ಸೂಕ್ಷ್ಮಶಿವಾಚಾರ್ಯ)ನು ಅಂತ್ಯಜಾತಿ ಯಾರಾದೊಡವಂಗಡಿ ಬೀದಿಯೊಳಗೆ ಮದುವೆಯಲು ಬಂಡಿಯನೇರಿ ಬರಸಲ್ಲದು. ಬಂದನಪ್ಪಡೆ ಪನ್ನೆರಡು ಗದ್ಯಾಣ ಪೊನ್ನಂ ದಂಡವಂ ತಿ(ತೆ)ರುವರಂತಪ್ಪುದಕೆ ಶ್ರೀ ಬಲ್ಲವರಸರಾಣೆ, ಶ್ರೀಮದ್ರಾಜಗುರುದೇವರಾಣೆ' ಎಂದು ಆಜ್ಞೆ ಹೊರಡಿಸಿರುವನು. ಅಸ್ಪೃಶ್ಯರು ಮದುವೆ ಮೆರವಣಿಗೆ ಬಂಡಿಯನ್ನು ಗ್ರಾಮದ ಅಂಗಡಿ ಬೀದಿಯಲ್ಲಿ ತರಕೂಡದು. ತಂದರೆ ಹನ್ನೆರಡು ಗದ್ಯಾಣ ದಂಡ ನೀಡಬೇಕೆಂಬುದು ಇಲ್ಲಿಯ ಅಭಿಪ್ರಾಯ. ಇದನ್ನು ನೋಡಿದರೆ ಈ ಶಿವಾಚಾರ್ಯರದು (ಇದರ ಮುಂದುವರಿದ ರೂಪವಾಗಿರುವ ಇಂದಿನ ಪಂಚಾಚಾರ್ಯರದು) ಅಂದರೆ ಇಂದಿನ ವೀರಶೈವಜಂಗಮರದು ಮೂಲತಃ ಜಾತಿಬೇಧ ಪಾಲಿಸುವ ಬ್ರಾಹ್ಮಣಧರ್ಮವೆಂದು ಸ್ಪಷ್ಟವಾಗುತ್ತದೆ" ಎನ್ನುತ್ತಾರೆ. ಇಲ್ಲಿ ಪಂಚಾಚಾರ್ಯರನ್ನು ವರ್ಣಭೇದಿಗರು ಎಂದು ಆರೋಪಿಸುವ ಭರದಲ್ಲಿ ಬಸವಪೂರ್ವದಲ್ಲಿ ಇವರಿರಲೇ ಇಲ್ಲ ಎಂಬ ತಮ್ಮ ವಾದವನ್ನು ತಾವೇ "ಬಸವಪೂರ್ವದ ಲಿಂಗಸೂಗೂರು ತಾಲೂಕಿನ ಕರಡಿಕಲ್ಲು ಗ್ರಾಮದ ಎರಡು ಶಾಸನ"ಗಳು ಪಂಚಾಚಾರ್ಯರು ಬಸವಪೂರ್ವದಲ್ಲಿ ಇದ್ದರೆಂದು ಆಧಾರ ಕೊಟ್ಟು ಸುಳ್ಳು ಮಾಡಿಬಿಟ್ಟಿದ್ದಾರೆ.

ಅಂದ ಹಾಗೆ ಇವರು ಉಲ್ಲೇಖಿಸಿದ "ಕುಲನರಸುವರೆ ಶರಣರಲ್ಲಿ ಜಾತಿಸಂಕರವಾದ ಬಳಿಕ" ವಚನದ ಸಿದ್ಧಾಂತ ಶಿಖಾಮಣಿಯ ಮೂಲ ಶ್ಲೋಕ ಹೀಗಿದೆ, "ಬ್ರಾಹ್ಮಣಃ ಕ್ಷತ್ರಿಯೋ ವಾಪಿ ವೈಶ್ಯೋ ವಾ ಶೂದ್ರ ಏವ ವಾ
ಅಂತ್ಯಜೋ ವಾ ಶಿವಭಕ್ತಃ ಶಿವವನ್ಮಾನ್ಮ ಏವ ಸಃ।
ಶಿವಭಕ್ತಿ ಸಮಾವೇಶೇ ಕ್ವಜಾತಿ ಪರಿಕಲ್ಪನಾ
ಇಂಧನೇಶ್ವಗ್ನಿ ದಗ್ಧೇಷು ಕೋ ವಾ ಭೇದಃ ಪ್ರಕೀರ್ತ್ಯತೇ॥"

ವಚನದ ಪೂರ್ಣಪಾಠ: "ಆವ ಕುಲದವನಾದರೇನು? ಶಿವಲಿಂಗವಿದ್ದವನೆ ಕುಲಜನು;
ಕುಲನರಸುವರೆ ಶರಣರಲ್ಲಿ ಜಾತಿಸಂಕರವಾದ ಬಳಿಕ?
ಶಿವಜಾತ ಕುಲೇ ಧರ್ಮಃ ಪೂರ್ವಜನ್ಮ ವಿವರ್ಜಿತಃ
ಉಮಾ ಮಾತಾ ಪಿತಾ ರುದ್ರೋ ಈಶ್ವರಃ ಕುಲಮೇವಚ
ಎಂದುದಾಗಿ ಒಕ್ಕುದ ಕೊಂಬೆನವರಲ್ಲಿ, ಕೂಸ ಕೊಡುವೆ
ಕೂಡಲಸಂಗಮದೇವಾ, ನಂಬುವೆ ನಿಮ್ಮ ಶರಣರನ್ನು."

ಚಿದಾನಂದ ಮೂರ್ತಿ ಆಯ್ಯ, ಆರ್.ಸಿ. ಹಿರೇಮಠ ಜಂಗಮ, ಶಂಬಾ ಜೋಶಿ ಬ್ರಾಹ್ಮಣ ಹಾಗಾಗಿ ಅವರ ಸಂಶೋಧನೆ ಹೀಗೆ ಎಂದು 'ಕುಲವನರಸುವ' ಇವರ ಪರಿಯಂತೂ ಇವರ ಶಿಷ್ಯಗಣಕ್ಕೆ ಮೇಲ್ಪಂಕ್ತಿಯಾಗಿದೆ ಎಂಬುದು ಮತ್ತೊಂದು ತೌಲನಿಕ ಅಧ್ಯಯನದ ವಿಷಯ ಎಂಬಲ್ಲಿಗೆ ಲಿಂಗಿಜಂಗಮ ಲಿಂಗಾಯತದಿಂದ ಹೊರಗು ಎನ್ನುವ ವಾದ ರದ್ದಾಗುತ್ತದೆ.
***
ಅಧ್ಯಾಯ 'ಜಗದ್ಗುರು-ಜಗದಾಚಾರ್ಯ'ದಲ್ಲಿ "ನಮ್ಮಲ್ಲಿ 'ಗುರು' ಮತ್ತು 'ಆಚಾರ್ಯ'ವೆಂಬ ಎರಡು ವಿಭಿನ್ನ ತಾತ್ವಿಕ ಪರಂಪರೆಗಳು ಬೆಳೆದು ಬಂದಿವೆ. ಇವುಗಳಲ್ಲಿ ಒಂದು 'ಅನುಭಾವ'ದ ನಿರ್ದೇಶನದಲ್ಲಿ, ಇನ್ನೊಂದು 'ಶಾಸ್ತ್ರ'ದ ನಿಯಂತ್ರಣದಲ್ಲಿ ಮುನ್ನಡೆಯುತ್ತವೆ. ಹೀಗಿದ್ದೂ ಇಂದು ಈ ಎರಡೂ ಪರಂಪರೆಗಳಿಗೆ 'ಜಗದ್ಗುರು' ಎಂಬ ಒಂದೇ ಪದವನ್ನು ಬಳಸುತ್ತಲಿರುವುದು ಎಷ್ಟರ ಮಟ್ಟಿಗೆ ಸರಿ? ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಗುರು ಪರಂಪರೆಯವರ 'ಗುರು' ಶಬ್ದವನ್ನು ಆಚಾರ್ಯ ಪರಂಪರೆಯವರು ಸೆಳೆದುಕೊಂಡು, ಅವರಿಗೆ 'ವಿರಕ್ತವೆಂಬ ಹೊಸ ಶಬ್ದವನ್ನು ಪ್ರಚುರಗೊಳಿಸಿದ್ದಾರೆ. ಇದರಿಂದಾಗಿ, ಆಚಾರ್ಯ ಪರಂಪರೆಯವರಿಗೆ ಇಂದು ಬಳಸಲಾಗುತ್ತಿರುವ 'ಜಗದ್ಗುರು ಪಂಚಾಚಾರ್ಯ' ಎಂಬ ಪ್ರಯೋಗದಲ್ಲಿ ಭಕ್ತಿಮಾರ್ಗ ಸೂಚಿಸುವ ಗುರು ಮತ್ತು ಕರ್ಮಮಾರ್ಗ ಸೂಚಿಸುವ ಆಚಾರ್ಯವೆಂಬ ಎರಡು ಭಿನ್ನತತ್ವಗಳು ಸೇರಿಕೊಂಡ ವೈರುಧ್ಯದೋಷ ಘಟಿಸಿದೆ. ಹುಬ್ಬಳ್ಳಿಯಲ್ಲಿ ಜರುಗಿದ ಕೋರ್ಟ ವ್ಯಾಜ್ಯವೊಂದರಲ್ಲಿ ಸುಪ್ರಸಿದ್ಧ ವಕೀಲರಾಗಿದ್ದ ಶ್ರೀ ಸಿದ್ಧರಾಮಪ್ಪ ಪಾವಟೆಯವರು ಪಂಚಾಚಾರ್ಯರಿಗೆ ಜಗದ್ಗುರು ವಿಶೇಷಣ ಬಳಸಬಾರದೆಂದು ವಾದಿಸಿದುದನ್ನು ಇಲ್ಲಿ ಸ್ಮರಿಸಬಹುದು" ಎನ್ನುತ್ತಾರೆ.

ಮೊದಲನೆಯದಾಗಿ ಗುರು ಮತ್ತು ಆಚಾರ್ಯ ಎರಡೂ ಸಂಸ್ಕೃತ ಮೂಲದ ಪದಗಳು. ಒಂದು ಗ್ರಾಂಥಿಕ ಎನಿಸಿದರೆ ಇನ್ನೊಂದು ಮೌಖಿಕ ಪದ. ವೀರಶೈವರು ಜ್ಞಾನಯಜ್ಞ ಮತ್ತು ಕರ್ಮಯಜ್ಞನಿರತರು. ಇಲ್ಲಿ ಕರ್ಮ ಎಂದರೆ ಕಾಯಕ, ಕರ್ಮಸಿದ್ಧಾಂತವಲ್ಲ. ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಬಂಗಾರದ ಪದಕ ಪಡೆದ ಪಂಡಿತರು ಭಾಷಾವಿಕಾಸವನ್ನು ಏಕೆ ಮರೆತರು? ಕರ್ಮ ಎಂಬುದನ್ನು ಕಾಯಕ ಎಂದು ಪರಿಗಣಿಸದೆ ಕರ್ಮಸಿದ್ಧಾಂತ ಎಂದು ಎಲ್ಲೆಲ್ಲಿಗೋ ತಮ್ಮ "ನಾಥ ಸಿದ್ದಾಂತ" ಸಂಶೋಧನೆಯನ್ನು ಏಕೆ ಕೊಂಡೊಯ್ದರು? ಒಂದೊಮ್ಮೆ ಬೆಂಗಳೂರಿನಲ್ಲಿ 'ಏನಲೋ ಬಾರಲೋ' ಎನ್ನುತ್ತಿದ್ದ ಜನರು ನಂತರ ಫ್ಯಾಶನ್ನಿಗೆ ತಕ್ಕಂತೆ 'ಏನಮ್ಮಾ ಬಾರಮ್ಮಾ' ಎನ್ನುವುದನ್ನು 'ಬೆಂಗಳೂರಿಗರು ಸಾಮೂಹಿಕ ಲಿಂಗಪರಿವರ್ತನೆಗೆ ಒಳಗಾಗಿದ್ದರು' ಎನ್ನುವ ಸಂಶೋಧನೆ ಮಂಡಿಸುವುದು ಎಷ್ಟು ಮೂರ್ಖತನವೋ ಅಷ್ಟೇ ಬಾಲಿಶ ಇವರ ಲಿಂಗಾಯತ ಪ್ರತ್ಯೇಕ ಧರ್ಮ ಎನ್ನುವ ಸಂಶೋಧನೆಗಳು!!! ಇನ್ನು ಹುಬ್ಬಳ್ಳಿ ಕೋರ್ಟ್ ವ್ಯಾಜ್ಯದಲ್ಲಿ ಸಿದ್ದರಾಮಪ್ಪ ಪಾವಟೆ ಏನೇ ವಾದಿಸಿದ್ದರೂ ಅದು ಸೋತುಹೋದ ಕಾರಣ ಜಗದ್ಗುರು ವಿಶೇಷಣ ಇಂದಿನ ವರ್ತಮಾನದಲ್ಲಿ ಜಾರಿ ಇದೆ ಎನ್ನುವುದಷ್ಟೇ ಸತ್ಯ.

ತಮ್ಮ ವಾದವನ್ನು ಮುಂದುವರಿಸುತ್ತಾ ಕಲಬುರ್ಗಿಯವರು, "ಪ್ರಾಚೀನ ಕಾಲದಲ್ಲಿ ಪಂಚಾಚಾರ್ಯರಿಗೆ ಮೊದಮೊದಲು 'ಜಗದಾರಾಧ್ಯ 'ಜಗದಾಚಾರ್ಯ' ಪದಗಳನ್ನು ಬಳಸುತ್ತಲಿದ್ದ ಉದಾಹರಣೆಗಳು ಪಂ. ಕಾಶೀನಾಥಶಾಸ್ತ್ರಿಗಳ 'ಪಂಚಾಚಾರ್ಯಪ್ರಭಾ' ಪತ್ರಿಕೆ ಮತ್ತು ಅವರ ಪುಸ್ತಕಗಳಲ್ಲಿ ಸಿಗುತ್ತವೆ, ಆದರೆ ಯಾವುದೋ ಕಾಲಘಟ್ಟದಲ್ಲಿ ಇವರಿಗೆ 'ಜಗದ್ಗುರು ವಿಶೇಷಣವನ್ನು ಬಳಸತೊಡಗಿದರು. ಆದುದರಿಂದ, ಇನ್ನು ಮೇಲೆ ತಾತ್ವಿಕ ದೃಷ್ಟಿಯಿಂದ ವಿರಕ್ತರಿಗೆ ಜಗದ್ಗುರು'ಗಳೆಂದೂ ಆಚಾರ್ಯರಿಗೆ 'ಜಗದಾಚಾರ್ಯ'ರೆಂದೂ ಕಟ್ಟುನಿಟ್ಟಾಗಿ ಬಳಸುವುದು ಅವಶ್ಯವಿದೆ" ಎಂದು ಆಜ್ಞೆ ಮಾಡಿರುವ ಇವರ ಆಜ್ಞೆಯನ್ನು ಯಾರು ಪಾಲಿಸಬೇಕು? ಅಂದ ಹಾಗೆ ಅಲ್ಲಮ ತನ್ನ ಒಂದೆರಡು ವಚನಗಳಲ್ಲಿ ಜಗದಾರಾಧ್ಯ ಎಂದು ಬಳಸಿದ್ದಾನೆ. ಅವು ಹೀಗಿವೆ:

ಹಸಿವಿಲ್ಲದೆ ಉಣಬಲ್ಲಡೆ, ಉಪಾಧಿಯಿಲ್ಲದೆ ಬೇಡಬಲ್ಲಡೆ,
ಅದು ವರ್ಮ, ಅದು ಸಂಬಂಧ.
ಗಮನವಿಲ್ಲದೆ ಸುಳಿಯಬಲ್ಲಡೆ, ನಿರ್ಗಮನಿಯಾಗಿ ನಿಲಬಲ್ಲಡೆ
ಅದು ವರ್ಮ, ಅದು ಸಂಬಂಧ.
ಅವರ ನಡೆ ಪಾವನ, ಅವರ ನುಡಿ ತತ್ವ,
ಅವರು(ರ?) "ಜಗದಾರಾಧ್ಯ"ರೆಂಬೆ ಗುಹೇಶ್ವರಾ.

ಸುಳಿಯ ಬಲ್ಲಡೆ ಸುಳುಹೆ ಲೇಸಯ್ಯಾ.
ಗಮನವಿಲ್ಲದೆ ಸುಳಿಯ ಬಲ್ಲಡೆ, ನಿರ್ಗಮನಿಯಾಗಿ ನಿಲ್ಲಬಲ್ಲಡೆ,
ಅದಕ್ಕದೆ ಪರಿಣಾಮ ಅದಕ್ಕದೆ ಸಂತೋಷ.
ಗುಹೇಶ್ವರಲಿಂಗದಲ್ಲಿ ಅವರ "ಜಗದಾರಾಧ್ಯ"ರೆಂಬೆ.

ಮಾನ್ಯ ಕಲ್ಬುರ್ಗಿಯವರು ಜಗದಾರಾಧ್ಯ ಎಂಬುದು ಪಂಚಾಚಾರ್ಯರ ಕುರಿತು ಎಂದು ಆಜ್ಞೆ ಹೊರಡಿಸಿದ ಕಾರಣ ಪಂಚಾಚಾರ್ಯರು ಅಲ್ಲಮನ ಕಾಲದಲ್ಲಿಯೂ ಇದ್ದರು ಎಂದಾಯಿತಲ್ಲವೇ?!? ಇದು ಪ್ರೊಫೆಸರರ ದ್ವಂದ್ವ, ಗೊಂದಲ, ಕಲಸುಮೇಲೋಗರ, ಜನಾಂಗೀಯ ದ್ವೇಷ! ತಟಸ್ಥ ನಿಲುವಿರದ ಸಂಶೋಧಕನಲ್ಲಿ ದ್ವೇಷ, ಅಹಂ ತುಂಬಿಕೊಂಡಾಗ ಸಂಶೋಧನೆಗಳು ಹೇಗೆ ತಾಳ ತಪ್ಪಿ ಅವರ ಹಿಂದಿನ ಪುಟವು ಮುಂದಿನ ಪುಟದಲ್ಲೇ ತಪ್ಪೆಂದು ರದ್ದಾಗುತ್ತದೆ ಎನ್ನುವುದಕ್ಕೆ ಇವರ ಕೃತಿಗಳು ಸಾಕ್ಷಿಭೂತವಾಗಿವೆ ಎಂಬಲ್ಲಿಗೆ ಪಂಚಾಚಾರ್ಯ ಬೇರೆ ಎಂಬ ವಾದ ರದ್ದಾಗುತ್ತದೆ.
***
ಇದೇ ರೀತಿ ಕಲ್ಬುರ್ಗಿಯವರು ಚೆನ್ನಬಸವಣ್ಣನ ಹುಟ್ಟಿನ ಕುರಿತಾದ ತಮ್ಮ ಸಂಕಥನಕ್ಕೆ ಡೋಹರ ಕಕ್ಕಯ್ಯನಿಗೆ ಮಲ್ಲಿದೇವಿ ಎಂಬ ಮಡದಿಯಿದ್ದಳು ಎಂಬುದು ತಾಳೆಯಾಗದ ಕಾರಣ ಮಲ್ಲಿದೇವಿ ಎನ್ನುವ "ಸುಧಾರಿಸಿದ" ಹೆಸರನ್ನು ನಂಬುವುದು ಕಷ್ಟ ಎಂದು ವಾದಿಸಿದ್ದರು. ಮಲ್ಲಿನಾಥ, ಮಲ್ಲಿಕಾರ್ಜುನ, ಮಲ್ಲಯ್ಯ, ದೇವಿ ಎಂಬ ಮಾಯಿದೇವಿ ಹೆಸರುಗಳನ್ನು ವಚನಕಾರರೇ ಬಳಸಿರುವಾಗ ಮತ್ತು 'ಮಲ್ಲಿನಾಥ ಪುರಾಣ'ವನ್ನು ಸ್ವತಃ ತಾವೇ ಸಂಪಾದಿಸಿರುವಾಗ ಮಲ್ಲಿದೇವಿ ಎಂಬುದು ಹೇಗೆ ಸುಧಾರಿತ ಎನಿಸುತ್ತದೆ ಎಂಬ ವಿವರಣೆಯನ್ನು ಎಲ್ಲಿಯೂ ಕೊಟ್ಟಿಲ್ಲ. ಈ ಕುರಿತಾಗಿ 'ಕಲಬುರ್ಗಿಯವರಿಗೆ ತಿಳಿಹೇಳಿದ ಮೇಲೂ ತಿದ್ದಿಕೊಳ್ಳದಿರುವುದು ಅಪರಾಧವಾಗುವುದು' ಎಂದು ಎಲ್. ಬಸವರಾಜುರವರು ಹೇಳಿದ್ದಾರೆ ಎಂಬಲ್ಲಿಗೆ ಕನ್ನಡ ನಾಮೋತ್ಪತ್ತಿ ವಾದ ರದ್ದಾಗುತ್ತದೆ.

ಇನ್ನು ಸಂಶೋಧನಾ ನೆಲೆಯಲ್ಲಿ ಏನೇ ತಿಪ್ಪರಲಾಗ ಹಾಕಿದರೂ ಹನ್ನೆರಡನೇ ಶತಮಾನದ ಶರಣರ ಚರ್ಚೆಯ ದಾಖಲೆಯ ಯಾವುದೇ ವಚನಗಳ ದಾಖಲಾತಿಯ ಒಂದೇ ಒಂದು ಮೂಲ ಓಲೆಗರಿ ಈವರೆಗೆ ಸಿಕ್ಕಿಲ್ಲ. ಸಿಕ್ಕಿರುವ ವಚನಗಳ ಓಲೆಗರಿಯ ಪ್ರತಿಗಳೆಲ್ಲವೂ ಹದಿನೈದನೇ ಶತಮಾನದ ಅಂತ್ಯ (ಕ್ರಿಸ್ತಶಕ ೧೪೮೦) ದಿಂದೀಚಿಗೆ ಬರೆದವುಗಳೇ ಹೊರತು ಅದಕ್ಕಿಂತ ಹಳೆಯವಲ್ಲ. ಕೇವಲ ಪೌರಾಣಿಕ, ಸೃಜನಶೀಲ ಸಂಕಥನಗಳ ಆಧಾರದ ಮೇಲೆ ಇಂತಹ ವ್ಯಕ್ತಿಗಳಿದ್ದರು ಎಂದುಕೊಂಡರೂ ಅವರ ಚರ್ಚೆಯ ವಾಚ್ಯ ಸೂಚಕಗಳನ್ನು ವಚನಗಳೆಂದು ಕರೆದ ದಾಖಲೆ ಹದಿನೈದನೇ ಶತಮಾನಕ್ಕೂ ಮುನ್ನ ಇಲ್ಲ. ಇರುವ ದಾಖಲೆಗಳೆಲ್ಲವೂ ಕಾಳಾಮುಖ ವೀರಶೈವ ಮಾತ್ರ. ಹಾಗಾಗಿ ಸಂಶೋಧನಾ ಪಿತಾಮಹರು ಏನೇ ತಿರುತಿರುಚಿ ವಾದ ಮಂಡಿಸಿದರೂ ಲಿಂಗಾಯತ ಪ್ರತ್ಯೇಕಧರ್ಮ ಎಂಬುದು ಮರುಮರುಗಿ ರದ್ದಾಗುತ್ತದೆ.

ಅಂದ ಹಾಗೆ "ಸಂಶೋಧನೆ ಎನ್ನುವುದು ಸತ್ಯವನ್ನು ಶೋಧಿಸಲು ಮಾಡಿಕೊಂಡ ಪ್ರತಿಜ್ಞೆ" ಎನ್ನುವುದು ಪ್ರೊ. ಎಂ ಎಂ ಕಲ್ಬುರ್ಗಿಯವರ ಉದ್ಘೋಷ! ಅದನ್ನು ನಾನು ಮಾತ್ರ ನಿಷ್ಠವಾಗಿ ಪಾಲಿಸುತ್ತಿರುವೆನೆಂದು 'ಲಿಂಗಾಂಗಸಾಮರಸ್ಯಾರೂಢ'ನಾಗಿ ಪ್ರಾಮಾಣಿಸುತ್ತೇನೆ.
***

ಥಾಯ್ಲೆಂಡಿನಲ್ಲಿ ಬಸವಣ್ಣ!

ಲಿಂಗಾಯತ ಧರ್ಮದ ಅಧಿಕೃತ ಅಂತರ್ಜಾಲ ತಾಣದಲ್ಲಿ ಮೊದಲ ಸಾಲಿನ ಸಂಸ್ಕೃತಿ ಚಿಂತಕರಾದ ಪ್ರೊ. ಕಲ್ಬುರ್ಗಿ, ಡಾ. ಎಸ್. ಎಂ. ಜಮಾದಾರ, ರಂಜಾನ್ ದರ್ಗಾ ನಂತರದ ಸಾಲಿನ ಶರಣ ಜಿ.ಬಿ. ಪಾಟೀಲ್ (ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ) ಎನ್ನುವವರ ಅನುಭಾವದ ಸಂಕಥನವೊಂದನ್ನು ಹೀಗೆ ಪ್ರಕಟಿಸಲಾಗಿದೆ. "ಸಂಗಮವರಿ (Marble) ಕಲ್ಲಿನಲ್ಲಿ ಕೆತ್ತಿದ ಅಷ್ಟೇನೂ ಆಕರ್ಷಣೆ ಇಲ್ಲದ ಎರಡು ಮೂರ್ತಿಗಳನ್ನು ಒಂದು ಚಿಕ್ಕ ದೇವಸ್ಥಾನದಲ್ಲಿ ಕಂಡೆ. ಒಂದು ಮೂರ್ತಿಯು ಅಂಗೈಯಲ್ಲಿ ಲಿಂಗ ಹಿಡಿದು ಪೂಜಿಸುವದು ಎರಡನೇಯ ಮೂರ್ತಿಯ ಎದುರಿನಲ್ಲಿ ಸ್ಥಾವರಲಿಂಗ. ವೀರಭದ್ರನ ಮೂರ್ತಿಯ ಆಕಾರದ ಚಿಕ್ಕ ಚಿಕ್ಕ ಮೂರ್ತಿಗಳು. ನಾನು ಒಂದು ಕ್ಷಣ ದಂಗಾದೆ. ತಲೆಯಲ್ಲಿ ಸಾವಿರ ಬಲ್ಬ ಒಮ್ಮೆಲೆ ಹತ್ತಿಕೊಂಡಂತೆ. ನಾನು ನೋಡುತ್ತಿರುವದು ಇಷ್ಟಲಿಂಗ ಪೂಜಾಧಾರಿಯ ಶರಣನದು. ಅದು ಬಸವಣ್ಣನವರದೂ ಆಗಿರಬಹುದು ಅಥವಾ ಯಾವದೋ ಶರಣರದಿರಬಹುದು. ಇಂದಿನವರೆಗೂ ನಾವು ಬಸವಣ್ಣನವರ ವ್ಯಾಪ್ತಿಯು (ಪ್ರಚಾರವು) ಅಫಘಾನಿಸ್ಥಾನದವರೆಗೆ ಹರಡಿತ್ತೆಂದು ಕೊಂಡಿದ್ದೆವು. ದೂರದ ಕಾಶ್ಮೀರ ದೊರೆಯು ವಚನಕಾರನಾಗಿದ್ದನ್ನು ಕಂಡಿದ್ದೇವೆ, ಆದರೆ ದೂರದ ಥೈಲ್ಯಾಂಡಿನಲ್ಲಿ ಬಸವಣ್ಣ !!!.ಅದ್ಬುತ!!, ಅಚ್ಚರಿ!. ನಡೆಯುವವನಿಗೆ ನಿಧಿಯನ್ನು ಎಡವಿದಂತೆ. ಕೈಲಿರುವ ಮೊಬೈಲನಲ್ಲಿ ಫೊಟೊ ತೆಗೆದೆ. ಸುತ್ತಲು ಕಣ್ಣಾಡಿಸಿದೆ. ಹೆಚ್ಚಿನ ಕುರುಹುಗಳನ್ನು ಸುತ್ತಲೂ ಹುಡುಕಲು ಪ್ರಾರಂಭಿಸಿದೆ. ನನ್ನ ದೃಷ್ಟಿ ರಸ್ತೆಯ ಅಚೆ ಬದಿಯಲ್ಲಿ ಹರಿಯಿತು ಅಲ್ಲೊಂದು ರಿಸಾರ್ಟ. ಅದರ ಹೆಸರು ಬಸಯಾ ಬಸವನ ವಿರೂಪಗೊಂಡ ಹೆಸರು, ಮತ್ತೊಂದು ನಿಧಿ!!! ಥಾಯಲ್ಯಾಂಡಿನಲ್ಲಿ ಬಸವ..." ಹೀಗೆ ಪಾಟೀಲರ ಉದ್ವೇಗದ ಲೇಖನ ಸಾಗುತ್ತದೆ.

ಇರಲಿ, ಪದ್ಮಾಸನ ಹಾಕಿ ಬುದ್ಧನ ಧ್ಯಾನಸ್ಥ ರೂಪದಂತೆ ಬಲಹಸ್ತದ ಮೇಲೆ ಎಡಹಸ್ತವನ್ನು ಇಟ್ಟುಕೊಂಡ ಮೂರ್ತಿಯೊಂದರ ಸೊಂಟದಪಟ್ಟಿಯ ಕಟ್ಟು (Buckle) ಕೈಮೇಲಿನ ಲಿಂಗದಂತೆ ಗೋಚರಿಸುತ್ತಿರುವುದನ್ನು ಕಂಡ ಪಾಟೀಲರು 'ಥಾಯ್ಲೆಂಡಿನಲ್ಲಿ ಬಸವ' ಎಂದು ಆನಂದದ ಭಾವೋದ್ವೇಗದ ಕಡಲಲ್ಲಿ ತೇಲಾಡಿ ಸಂಶೋಧನಾ ಲೇಖನವನ್ನು ಬರೆದಿದ್ದಾರೆ. ಅಲ್ಲಿನ ಬಸಾಯಾ (Basaya) ಎನ್ನುವ ರಿಸಾರ್ಟಿನ ಬೋರ್ಡು ನೋಡಿ ಇದು ಜಗತ್ತಿನ ಎಂಟನೇ ಅದ್ಬುತದ ಥಾಯ್ ಬಸವಭಕ್ತ ಮಾಲೀಕತ್ವದ ರಿಸಾರ್ಟ್ ಇರಲೇಬೇಕು ಎಂದುಕೊಂಡು ತಮ್ಮ ಅಪಧಮನಿಗಳಲ್ಲಿ ಉಕ್ಕಿದ ಬಸಾಯಭಕ್ತಿಯ ರಕ್ತವನ್ನು ನಿಯಂತ್ರಿಸಿಕೊಂಡು ತ್ವರಿತವಾಗಿ ಲೇಖನವೊಂದನ್ನು ಬರೆದುಕೊಂಡು ಸಮಯಾಭಾವದ ಕಾರಣ ಸ್ವದೇಶಕ್ಕೆ ವಾಪಸ್ಸಾಗಿದ್ದಾರೆ. ಅಂದ ಹಾಗೆ ಬಸಾಯಾ ಎಂದರೆ ವಾಸ್ತವ್ಯ. ಬಸಾಯಾ ಎಂಬುದು ಸಂಸ್ಕೃತ ಪದ ಮತ್ತು ಥೈಲ್ಯಾಂಡ್ ಹಿಂದೂ ದೇಶ! ಬಸಾಯಾ ಎಂದರೆ ವಿಜಯ, ಗಿಡಮೂಲಿಕೆಯ ಔಷಧಿ ಕೊಡುವ ಬೌದ್ಧ ಸನ್ಯಾಸಿ ಎಂಬೆಲ್ಲಾ ಅರ್ಥವಿದ್ದರೂ ಈ ರಿಸಾರ್ಟಿಗೆ ವಾಸ್ತವದಲ್ಲಿ ವಾಸ್ತವ್ಯ ಎಂಬರ್ಥವೇ ಸೂಕ್ತ ಎಂದಿಡಲಾಗಿದೆ. ಅಂದ ಹಾಗೆ ಅವರು ಹಾಕಿರುವ ಚಿತ್ರದಲ್ಲಿರುವ ಗಡ್ಡಧಾರಿ ಸನ್ಯಾಸಿಯ ಹೆಸರು ಜೀವಕ. ಥಾಯ್ ಜನರು ಇವನು ಬುದ್ಧನ ಖಾಸಗಿ ವೈದ್ಯ ಎನ್ನುವುದಲ್ಲದೆ (ಥಾಯ್) ಮಸಾಜನ್ನು ಕಂಡುಹಿಡಿದ ಪಿತಾಮಹ ಎನ್ನುತ್ತಾರೆ.

ಫೋಟೊ ಕೃಪೆ: ಜಿ. ಬಿ. ಪಾಟೀಲ್, ಲಿಂಗಾಯತ ಧರ್ಮದ ಅಂತರ್ಜಾಲ ತಾಣ.

ಈ ರಿಸಾರ್ಟ್ ಜಗತ್ತಿನ ಎಂಟನೇ ಅದ್ಭುತ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ ಖಂಡಿತವಾಗಿ ಲಿಂಗಾಯತ ಪ್ರತ್ಯೇಕ ಧರ್ಮ ಕೂಗಿಗರ ಎಂಟನೇ ಅದ್ಭುತ! ಹೀಗೆ ಅದ್ಭುತ ಸಂಕಥನಗಳನ್ನು ಕಟ್ಟಿ ಜನರನ್ನು ಹುಚ್ಚೆಬ್ಬಿಸಿ ಭಕ್ತಿಪಥಕ್ಕೆ ಹಚ್ಚುವುದು ಇಂದಿನ ಅನೇಕ ಚರ್ಚುಗಳ ತಂತ್ರ. ಅವತಾರ, ಪವಾಡ ಒಂದಾನೊಂದು ಕಾಲದ ತಂತ್ರ! ಆಲೇಲೂಯ, ಬಸಾಯ!

ಮುಖ್ಯವಾಗಿ ಚೆನ್ನಬಸವ ಪುರಾಣದ ಕವಿಯು ಸಂಬೋಧಿಸಿರುವ ಗೌರವಾನ್ವಿತ ದೇವ, ದೇವರು, ದೇವರಾಜ, ನಾಥ ಎಂಬ ಸುಸ್ಪಷ್ಟ ಗೌರವಸೂಚಕಗಳಲ್ಲಿ ನಾಥ ಎಂದು ಬಳಸಿರುವುದನ್ನು ಹಿಡಿದು ಪ್ರೊ. ಕಲಬುರ್ಗಿಯವರು "ನಾಥಪಂಥದ ಕೇಂದ್ರವಾಗಿ ಸುಮುಕ್ತಿನಾಥರು ಇದರ ಪ್ರವರ್ಥಕರೆಂದು ಚೆನ್ನಬಸವ ಪುರಾಣವು ಹೇಳುತ್ತದೆ" ಎಂದು "ಷರಾ" ಬರೆದ ಸಂಶೋಧನಾ ಚಾತುರ್ಯದ ಮಟ್ಟವನ್ನು ಪಾಟೀಲರು ಈ ಬಸಾಯಾ ಚಿಂತನೆಯ ಮಟ್ಟಿಗೆ ಉನ್ನತೀಕರಿಸಿದ್ದಾರೆ.

ಅಂದಹಾಗೆ ಈ ಶರಣರು ಥಾಯ್ಲೆಂಡಿಗೆ ಏಕೆ ಹೋಗಿರಬಹುದು ಎಂಬ ಆಲೋಚನೆ ನಿಮ್ಮಲ್ಲಿ ಒಂದು ಲಂಪಟನಗೆಯನ್ನು ಉಕ್ಕಿಸಿದರೆ ಅದು ನಿಮ್ಮ ಮನದ ಮುಂದಣ ಆಶೆ ಮಾತ್ರ!

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ" ಎನ್ನುವಂತಹ ಅಗಾಧ ಪರಂಪರೆಯ ವೀರಶೈವದ ನಿರಾಕಾರ ನಿರಾಮಯ ಶೂನ್ಯ ಸಿದ್ಧಾಂತವನ್ನು ಅತ್ಯಂತ ಶಿಥಿಲ ನಗೆಪಾಟಲ ಲೌಕಿಕ "ಶಕ್ತಿ" ಸ್ಥಾವರವಾಗಿ ಪರಿವರ್ತನೆಗೊಳಿಸಿ ಅನಾತ್ಮಲಿಂಗವ ಕರಸ್ಥಲದಲ್ಲಿ ಸಂಕುಚಿತವಾಗಿ ಹಿಡಿದಿಟ್ಟುಕೊಂಡು ರಾಜಕೀಯ ಶಕ್ತಿಕೇಂದ್ರವಾಗುವತ್ತತ್ತಲತ್ತ...ಬಸವಶೋಷಣೆಯ ಬಸವರಾಜಕಾರಣದ ಜಾಗತಿಕ "ಲಿಂಗಾಹತ"ದ ಜಾಗತಿಕ ಸತ್ಯ!

- ರವಿ ಹಂಜ್

ವಿಶ್ವವಾಣಿ ಬಸವ ಮಂಟಪ - ಶರಣ ಚಳವಳಿಯಲ್ಲಿ ಮಹಿಳೆ, ಕಾಮ ಸಮಾನತೆ!

 ಮಹಿಳಾ ಶೋಷಣೆ ಸನಾತನವಾಗಿ ಭಾರತದಲ್ಲಿತ್ತು ಎನ್ನುವುದು ಹೇಗೆ ಸತ್ಯವಲ್ಲ ಎನ್ನುವುದನ್ನು ಹಿಂದೆ ಪುಣ್ಯಸ್ತ್ರಿ ಲೇಖನದಲ್ಲಿ ವಿಸ್ತೃತವಾಗಿ ಮನಗಂಡಿರುವಿರಿ. ಹಾಗಾಗಿ ಮಹಿಳಾ ಸಮಾನತೆಯನ್ನು ಭಕ್ತಿಪಂಥದ ಕಾಲಮಾನದಲ್ಲಿ ವಿಶೇಷವಾಗಿ ಅಳವಡಿಸಿಕೊಳ್ಳಬೇಕಾಗಿತ್ತು ಎನ್ನುವುದಕ್ಕಿಂತ ಸನಾತನವಾಗಿ ಸದಾ ಆಚರಣೆಯಲ್ಲಿದ್ದ ಮಹಿಳಾ ಸಮಾನತೆಯನ್ನು ವೀರಶೈವವೂ ಸೇರಿದಂತೆ ಎಲ್ಲಾ ಪಂಥಗಳೂ ಉಳಿಸಿಕೊಳ್ಳಬೇಕಿತ್ತು ಎನ್ನುವುದು ಹೆಚ್ಚು ಸೂಕ್ತ. ಏಕೆಂದರೆ ಇಸ್ಲಾಮಿನ ಪರ್ದಾ ಎಂಬುದು ಭಾರತಕ್ಕೆ ನವನವೀನ ಕಟ್ಟುಪಾಡಿನ ವ್ಯವಸ್ಥೆಯಾಗಿತ್ತು. ನಗರವಧು ಸಂಸ್ಕೃತಿಯ ಉನ್ನತ ಮಹಿಳಾ ಸ್ವಾತಂತ್ರ್ಯವನ್ನು ಪಾಲಿಸುತ್ತಿದ್ದ ಸಂಸ್ಕೃತಿಗೆ ಪರ್ದಾ ವ್ಯವಸ್ಥೆಯಾಗಿ ಗೌರವದ ಚೌಕಟ್ಟಿನಲ್ಲೇ ಧಕ್ಕೆ ತಂದಿತ್ತು. ಇಂತಹ ಸ್ಥಿತ್ಯಂತರಗಳಾದಾಗ ತಾನೇ ಮಹತ್ತರವಾದ ಕ್ರಾಂತಿಕಾರಕ ಬದಲಾವಣೆಗಳನ್ನು ಸಮಾಜ ಬಯಸುವುದು ಮತ್ತು ಬೆಂಬಲಿಸುವುದು! ಹಾಗಾಗಿ ವಿಶೇಷವಾದ ಈ ಪದ್ಧತಿ ವಿರುದ್ಧ ವಿಶೇಷ ಹೋರಾಟಗಳು ಮೊದಲ್ಗೊಂಡವು.


ಮೊಲೆ, ಮುಡಿ ಬಂದಡೆ ಹೆಣ್ಣೆಂಬರು
ಗಡ್ಡ ಮೀಸೆ ಬಂದಡೆ ಗಂಡೆಂಬರು
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ! ರಾಮನಾಥ
- ಜೇಡರ ದಾಸಿಮಯ್ಯ
(ಸಮಗ್ರ ವಚನ ಸಂಪುಟ: ೭ ವಚನದ ಸಂಖ್ಯೆ: ೮೪೫)
***
ಮಡದಿಯ ಪ್ರಾಣಕ್ಕೆ ಮೊಲೆ ಮುಡಿ ಇದ್ದೀತೆ?
ಒಡೆಯನ ಪ್ರಾಣಕ್ಕೆ ಇದ್ದೀತೆ ಯಜ್ಜೋಪವೀತ?
ಕಡೆಯಲ್ಲಿದ್ದ ಅಂತ್ಯಜನು ಹಿಡಿದಿದ್ದನೆ ಹಿಡಿಗೋಲ?
ನೀ ತೊಡಕ್ಕಿಕ್ಕಿದ ತೊಡಕ ನೀ ಲೋಕದ ಜನರೆತ್ತ ಬಲ್ಲರೈ ರಾಮನಾಥ.
(ಸಮಗ್ರ ವಚನ ಸಂಪುಟ: ೭)
***
ಆತ್ಮನಲ್ಲಿ ಹೆಣ್ಣು-ಗಂಡು ಎಂಬ ಬೇಧವಿಲ್ಲ ಎನ್ನುವ ಆದ್ಯ ವಚನಗಳೇ ಇರುವಾಗ ಮಹಿಳೆಯರನ್ನು ಎರಡನೇ ದರ್ಜೆಗಿಳಿಸುವ ನೀತಿಯನ್ನು ಹೇಗೆ ತಾನೇ ವೀರಶೈವ ಆದ್ಯರು ಹೇರಲು ಸಾಧ್ಯ? ಹಾಗಾಗಿ ಈ ನವನೀತಿಯ ವಿರುದ್ಧವೂ ಹನ್ನೆರಡನೇ ಶತಮಾನದ ನವ್ಯ ಶರಣರು ಸಿಡಿದೆದ್ದರು. ಈ ವಿರೋಧಕ್ಕೆ ಶರಣೆಯರು ಅದರಲ್ಲೂ ವಚನಕಾರರ ಪತ್ನಿಯರು ತಮ್ಮ ಗಂಡಂದಿರೊಂದಿಗೆ ಕೈಜೋಡಿಸಿದರು. ಈ ಬೆಂಬಲ ಅವರ ವಚನಗಳಲ್ಲಿ ಸಾಕಷ್ಟು ಕಾಣಸಿಗುತ್ತದೆ.

ಆದ್ಯ ವಚನಕಾರ ಜೇಡರ ದಾಸಿಮಯ್ಯನ ವಚನವನ್ನೇ ಆಧಾರವಾಗಿಟ್ಟುಕೊಂಡು ಅದನ್ನು ಪರಿಷ್ಕರಿಸುತ್ತ ತಮ್ಮದೇ ಹೊಳಹನ್ನು ಈ ವಚನಕಾರ್ತಿಯರು ಕಟ್ಟಿಕೊಟ್ಟರು. ಅಂತಹ ವಚನಗಳನ್ನು ಇಲ್ಲಿ ಗಮನಿಸೋಣ:

ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ.
ಕಾಸೆ ಮೀಸೆ ಕಠಾರವಿದ್ದುದೆ ಗಂಡೆಂದು ಪ್ರಮಾಣಿಸಲಿಲ್ಲ.
ಅದು ಜಗದ ಹಾಹೆ; ಬಲ್ಲವರ ನೀತಿಯಲ್ಲ.
ಏತರ ಹಣ್ಣಾದಡೂ ಮಧುರವೆ ಕಾರಣ,
ಅಂದವಿಲ್ಲದ ಕುಸುಮಕ್ಕೆ ವಾಸನೆಯೆ ಕಾರಣ. ಇದರಂದವ ನೀನೇ ಬಲ್ಲೆ
ಶಂಭುಜಕ್ಕೇಶ್ವರಾ.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೧೨೨೮)

ಎಂದು ವಚನಕಾರ್ತಿ ಸತ್ಯಕ್ಕ ಹೇಳಿದರೆ, ಗೊಗ್ಗವ್ವೆ ಹೀಗೆ ಹೇಳಿದ್ದಾಳೆ:

ಗಂಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎಂದು ಅರಿಯಬೇಕು.
ಹೆಣ್ಣು ಮೋಹಿಸಿ ಗಂಡ ಹಿಡಿದಡೆ
ಉತ್ತರವಾವುದೆಂದರಿಯಬೇಕು.
ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲಡೆ
ನಾಸ್ತಿನಾಥನು ಪರಿಪೂರ್ಣನೆಂಬೆ.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೭೭೬)

ಇನ್ನು ಅಕ್ಕ ಮಹಾದೇವಿಯು,

ಪುರುಷನ ಮುಂದೆ ಮಾಯೆ ಸ್ತ್ರೀಯೆಂಬ ಅಭಿಮಾನವಾಗಿ ಕಾಡಿತ್ತು.
ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡಿತ್ತು.
ಲೋಕವೆಂಬ ಮಾಯೆಗೆ ಶರಣರ ಚಾರಿತ್ರವು ಮರುಳಾಗಿ ತೋರುವುದು
ಚೆನ್ನಮಲ್ಲಿಕಾರ್ಜುನನೊಲಿದ ಶರಣರಿಗೆ ಮಾಯೆಯಿಲ್ಲ
ಮರಹಿಲ್ಲ ಅಭಿಮಾನವೂ ಇಲ್ಲ.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೨೮೨)

ಎಂದು ಲಿಂಗ ಸಮಾನತೆಯನ್ನು ವರ್ಣಿಸಿದ್ದಾಳೆ.

ಇನ್ನು ಆಯ್ದಕ್ಕಿ ಲಕ್ಕಮ್ಮ ಹೆಣ್ಣು ಮತ್ತು ಗಂಡು ಸಮಾನವಾಗಿ ಸೇರಿಯೇ ಸೃಷ್ಟಿ ಸಾಧ್ಯ ಎಂಬರ್ಥದಲ್ಲಿ ಹೀಗೆ ಹೇಳಿದ್ದಾಳೆ:

ಆವ ಬೀಜವು ಬೀಳುವಲ್ಲಿ ಮೊಳೆ ಮುಖ ಹಿಂಚು ಮುಂಚುಂಟೆ ?
ನೀ ಮರೆದಲ್ಲಿ ನಾನರಿದಲ್ಲಿ ಬೇರೊಂದೊಡಲುಂಟೆ ?
ಮೂಲ ನಷ್ಟವಾದಲ್ಲಿ ಅಂಕುರ ನಿಂದಿತ್ತು.
ಕೂಟಕ್ಕೆ ಸತಿಪತಿ ಎಂಬ ನಾಮವಲ್ಲದೆ
ಅರಿವಿಂಗೆ ಬೇರೊಂದೊಡಲುಂಟೆ ?
ಬೇರೊಂದಡಿಯಿಡದಿರು, ಮಾರಯ್ಯಪ್ರಿಯ ಅಮಲೇಶ್ವರಲಿಂಗವನರಿಯಬಲ್ಲಡೆ!
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೭೦೯)

ಇನ್ನು ಗಜೇಶ ಮಸಣಯ್ಯಪ್ರಿಯ ಪುಣ್ಯಸ್ತ್ರೀ ಮಸಣಮ್ಮ ಹೆಣ್ಣು ಹೊನ್ನು ಮಣ್ಣುಗಳನ್ನು ಲೌಕಿಕಾರ್ಥದಲ್ಲಿ ಇವು ಭಕ್ತಿಗೆ ಹೊರಗು ಎಂಬುದನ್ನು ಕೆಳಗಿನ ವಚನದಲ್ಲಿ ಪ್ರಶ್ನಿಸಿ ಲೌಕಿಕದಿಂದಲೇ ಅಲೌಕಿಕತೆಯನ್ನು ಪಡೆಯುವ ಮಾರ್ಗವನ್ನು ಕಂಡುಕೊಳ್ಳಬಯಸುತ್ತಾಳೆ. ಇಲ್ಲಿ ನಿಮಗೆ ರಜನೀಶರ ’ಸಂಭೋಗದಿಂದ ಸಮಾಧಿ’ ತತ್ವ ನೆನಪಾದರೆ ಅದು ಹೊಸತಲ್ಲ. ಕ್ರಿಸ್ತಪೂರ್ವ ಸನಾತನ ತತ್ವವಾದ ಅದನ್ನು ಹನ್ನೆರಡನೇ ಶತಮಾನದ ವಚನಕಾರ್ತಿ ಪುನರುಚ್ಚರಿಸಿದ್ದಾಳೆ ಎಂದಷ್ಟೇ ಮನಗಾಣಬೇಕು.

ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು,
ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ?
ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು,
ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ?
ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು,
ಮಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ?
ಅಂಗವ ಬಿಟ್ಟು ಲಿಂಗವನೊಲಿಸಬೇಕೆಂಬರು,
ಅಂಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ ?
ಇಂದ್ರಿಯಂಗಳ ಬಿಟ್ಟು ಲಿಂಗವನೊಲಿಸಬೇಕೆಂಬರು,
ಇಂದ್ರಿಯಂಗಳಿಗೆಯೂ ಲಿಂಗಕ್ಕೆಯೂ ವಿರುದ್ಧವೆ ?
ಜಗವ ಬಿಟ್ಟು ಲಿಂಗವನೊಲಿಸಬೇಕೆಂಬರು,
ಜಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ ?
ಇದು ಕಾರಣ, ಪರಂಜ್ಯೋತಿ ಪರಮಕರುಣಿ ಪರಮಶಾಂತನೆಂಬ ಲಿಂಗವು
ಕೋಪದ ಮುನಿಸನರಿದಡೆ ಕಾಣಬಹುದು, ಮರೆದಡೆ ಕಾಣಬಾರದು.
ಅರಿವಿಂದ ಕಂಡೊದಗಿದ ಸುಖವು ಮಸಣಯ್ಯಪ್ರಿಯ ಗಜೇಶ್ವರಾ!
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೭೭೧)

ಹಾಗೆಯೇ ಸೂಳೆ ಸಂಕವ್ವೆ ಸಹ ಪರೋಕ್ಷವಾಗಿ ಮಹಿಳೆಯು ಹೇಗೆ ಶೋಷಣೆಗೊಳಗಾಗುತ್ತಿದ್ದಳು ಎಂಬ ಚಿತ್ರಣವನ್ನು ತನ್ನ ಈ ವಚನದಲ್ಲಿ ತೋರುತ್ತಾಳೆ.

ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ.
ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯಾ.
ವ್ರತಹೀನನನರಿದು ಬೆರೆದಡೆ
ಕಾದ ಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ವರಯ್ಯಾ.
ಒಲ್ಲೆನೊಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ.
(ಸಮಗ್ರ ವಚನ ಸಂಪುಟ: ೫)

ಒಟ್ಟಿನಲ್ಲಿ ಮಹಿಳೆಯರನ್ನು ಮುನ್ನೆಲೆಗೆ ತರುವುದು ಸಹ ಶೂದ್ರ ಭಕ್ತಿಪಂಥಗಳ ಪ್ರಮುಖವಾದ ಅಂಶವಾಗಿತ್ತು. ವೀರಶೈವ ಪಂಥದಲ್ಲಿ ಹೇಗೆ ವಚನಕಾರ್ತಿಯರು ಮುನ್ನೆಲೆಗೆ ಬಂದರೋ ಅದೇ ರೀತಿ ಲಲ್ಲೇಶ್ವರಿ, ಮೀರಬಾಯಿಯಂತಹ ಮಹಿಳಾ ಕವಯತ್ರಿಯರು ಆಧ್ಯಾತ್ಮಿಕ ಧ್ಯೇಯ ಸಿದ್ಧಾಂತಗಳ ರೂವಾರಿಗಳೆನಿಸಿದ್ದರು. ಆದರೆ ವೀರಶೈವ ಪಂಥದ ವಚನಕಾರ್ತಿಯರಷ್ಟು ಸಾಮಾಜಿಕ ಕಳಕಳಿಯನ್ನು ಈ ಆಧ್ಯಾತ್ಮಿಕ ನಾಯಕಿಯರು ಅಷ್ಟಾಗಿ ತೋರಲಿಲ್ಲ.

ಹಾಗೆಯೇ ಬಸವಾದಿ ಪುರುಷ ವಚನಕಾರರು ಹೆಣ್ಣು ಮಾಯೆ ಎಂಬ ಪರಿಧಿಯನ್ನು ಅಷ್ಟಾಗಿ ದಾಟಲೂ ಇಲ್ಲ ಎಂಬುದು ಗಮನದಲ್ಲಿಟ್ಟುಕೊಳ್ಳಬೇಕಾದ ಸಂಗತಿ. ಅಂತಹ ಹೆಣ್ಣು ಮಾಯೆ ಎಂಬ ಒಂದು ವಚನ ಹೀಗಿದೆ:

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ,
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ,
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ,
ಇದಾವಾವ ಪರಿಯಲ್ಲಿ ಕಾಡಿಹಿತು ಮಾಯೆ.
ಈ ಮಾಯೆಯ ಕಳೆವಡೆ ಎನ್ನಳವಲ್ಲ,
ನೀವೆ ಬಲ್ಲಿರಿ ಕೂಡಲಸಂಗಮದೇವಾ!
( ಸಮಗ್ರ ವಚನ ಸಂಪುಟ: ೧ ವಚನದ ಸಂಖ್ಯೆ: ೧೫)

ಆದರೆ ಬಸವಣ್ಣನ ಪತ್ನಿ ನೀಲಮ್ಮ ಈ ಸಾಮಾಜಿಕ ಹೋರಾಟಕ್ಕೆ ಭಿನ್ನವಾಗಿ ತನ್ನ ಅಂತರಂಗವನ್ನು ತೆರೆದಿಡುತ್ತಾಳೆ. ಖ್ಯಾತ ಪ್ರಭಾವಶಾಲಿ ವ್ಯಕ್ತಿಯ ಹೆಂಡತಿಯೊಬ್ಬಳು ಅನುಭವಿಸುವ ಮಾನಸಿಕ ತುಮುಲಗಳನ್ನು, ಒಂಟಿತನವನ್ನು, ಅಸಹನೆಯನ್ನು, ದೂರನ್ನು ಸೂಕ್ಷ್ಮವಾಗಿ ಆದರೆ ಸ್ಪಷ್ಟವಾಗಿ ವಚನದ ನೆಲೆಯಲ್ಲೇ ಕಟ್ಟಿಕೊಡುತ್ತಾಳೆ. ’ಹೆಣ್ಣು ಮಾಯೆ’ ಎಂಬ ಪುರುಷಶಾಹಿತ್ವದ ಹಂಗಿನಲ್ಲೇ ಹೆಣ್ಣನ್ನು ಹಂಗಿಸುವ ಸ್ತ್ರೀಪುರುಷ ವಚನಕಾರರ ಪಡಿಯಚ್ಚಿನ ಏಕತಾನತೆಯ ಪರಿಧಿಯಾಚೆಗೆ ಹೆಣ್ಣಿನ ಅಸ್ತಿತ್ವ ಮತ್ತು ಮಾಯೆಯ ಮುಸುಕಿನಲ್ಲಿ ತಮ್ಮ ಸಾಂಸಾರಿಕ ಜವಾಬ್ದಾರಿ ವಿಮುಖತೆಗೆ ಶ್ರೀರಕ್ಷೆ ಪಡೆಯುವ ಗಂಡನ್ನು ಅನಾವರಣಗೊಳಿಸುತ್ತಾಳೆ. ತನ್ನ ಬಹುಪಾಲು ವಚನಗಳಲ್ಲಿ ಆಕೆಯ ನಿರೀಕ್ಷೆ, ಸಾಂಸಾರಿಕ ವಾಂಛೆ, ಅಸ್ತಿತ್ವದ ಅಹಂ, ಅತೃಪ್ತ ಆಕಾಂಕ್ಷೆಗಳನ್ನೆಲ್ಲಾ ವಚನಗಳಾಗಿಸಿರುವ ನೀಲಮ್ಮ ಬೇರೆಲ್ಲಾ ವಚನಕಾರ್ತಿಯರಿಗಿಂತ ಭಿನ್ನವಾಗಿ ನಿಲ್ಲುವುದಲ್ಲದೆ ಅದನ್ನು ಸಕಾರಣವಾಗಿ ಪ್ರಶ್ನಿಸುತ್ತಾಳೆ ಸಹ. ಹಾಗೆಯೇ ಪ್ರಸಿದ್ಧ ವ್ಯಕ್ತಿಯ ಛಾಯೆಯಾದ ಅವನ ಪತ್ನಿಯಾಗಿ ತನ್ನ ಸ್ವಂತಿಕೆಯ ಅಸ್ತಿತ್ವವೇನು ಎಂದೂ ಸಹ ಪ್ರಶ್ನಿಸುತ್ತಾಳೆ. ಈ ಎಲ್ಲಾ ಸಮಗ್ರ ಭಾವನೆಗಳನ್ನು ಹೊಮ್ಮಿಸುವ ಆಕೆಯ ವಚನಗಳು ಹೀಗಿವೆ:

ಎನಗೆ ಇಲ್ಲಿ ಏನು ಬಸವ ಬಸವಾ?
ಎನಗೆ ಅದರ ಕುರುಹೇನು ಬಸವಾ?
ಎನಗೆ ಬಸವ ನಡೆದ ಭಕ್ತಿಸ್ಥಲದಲ್ಲಿ ನಿಂದು,
ಭಕ್ತಿಸ್ಥಲ ಬಸವನಲ್ಲಿ ಕುರುಹಳಿದು,
ನಾನು ಬಸವನ ಶ್ರೀಪಾದದಲ್ಲಿ
ಉರಿಯುಂಡ ಕರ್ಪೂರದಂತಡಗಿದ ಬಳಿಕ ಸಂಗಯ್ಯಾ?
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೮೭೪)

ಮಡದಿ ಎನಲಾಗದು ಬಸವಂಗೆ ಎನ್ನನು.
ಪುರುಷನೆನಲಾಗದು ಬಸವನ ಎನಗೆ.
ಉಭಯದ ಕುಳವ ಹರಿದು ಬಸವಂಗೆ ಶಿಶುವಾನಾದೆನು,
ಬಸವನೆನ್ನ ಶಿಶುವಾದನು.
ಪ್ರಮಥರು ಪುರಾತರು ಸಾಕ್ಷಿಯಾಗಿ ಸಂಗಯ್ಯನಿಕ್ಕಿದ ದಿಬ್ಯವ ಮೀರದೆ
ಬಸವನೊಳಗಾನಡಗಿದೆ.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೧೦೨೪)

ಅಟ್ಟಡವಿಯಲ್ಲಿ ಬಿಟ್ಟುಹೋದಿರಿ ಬಸವಯ್ಯಾ.
ನಟ್ಟನಡುಗ್ರಾಮವ ಕೆಡಿಸಿಹೋದಿರಿ ಬಸವಯ್ಯಾ.
ಹುಟ್ಟಿಲ್ಲದ ಬಂಜೆಗೆ ಮಕ್ಕಳಕೊಟ್ಟಿರಿ ಬಸವಯ್ಯಾ.
ಆ ಮಕ್ಕಳ ಫಲವಿಲ್ಲದಂತೆ ಮಾಡಿದಿರಿ ಬಸವಯ್ಯಾ.
ಸಂಗಯ್ಯನಲ್ಲಿ ನೀನೆಂತಪ್ಪ ಮಹಿಮನಯ್ಯಾ ಬಸವಯ್ಯಾ ?
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೮೧೧)

ಅಲ್ಲದೆ ನೀಲಮ್ಮನು ಬೇರೆ ವಚನಕಾರ್ತಿಯರಿಗಿಂತ ಭಿನ್ನವಾಗಿ ಕಾಮದ ಕುರಿತು ವಚನಗಳನ್ನು ರಚಿಸಿದ್ದಾಳೆ. ಬೇರೆಲ್ಲಾ ವಚನಕಾರ್ತಿಯರು ಕಾಮವನ್ನು ಪಾಪದ ನೆಲೆಯಲ್ಲಿ ಅರಿಷಡ್ವರ್ಗಗಳ ನೆಲೆಯಲ್ಲಿ ಕಂಡಿದ್ದರೆ, ನೀಲಮ್ಮ ಕಾಮವನ್ನು ತನ್ನ ವಚನಗಳಲ್ಲಿ ಹೆಣ್ತನದ ನೆಲೆಯಲ್ಲಿ ಕಟ್ಟಿಕೊಡುತ್ತಾಳೆ. ಪತಿಯ ಮಿಲನಕ್ಕೆ ಕಾದು ಕಂಗೆಟ್ಟ ಪತ್ನಿಯ ವಿರಹವನ್ನು ಮತ್ತು ತನ್ನಿಚ್ಛೆಗೆ ಸ್ಪಂದಿಸದ ಪತಿಯನ್ನು ’ಪ್ರಾಣದ ಕುರುಹಿಲ್ಲದವ’ ಎನ್ನುತ್ತಾ ತಾನು ಮುಸುಕಿಟ್ಟು ಬಸವಳಿದೆ’ ಎಂದು ನಿಟ್ಟುಸಿರು ಬಿಡುತ್ತಾಳೆ:

ಕಾಮದ ಹಂಗಿಗನಲ್ಲ ಶರಣ
ಮೋಹದ ಇಚ್ಫೆಯವನಲ್ಲ ಶರಣ
ಉಭಯದ ಸಂಗದವನಲ್ಲ ಶರಣ
ಪ್ರಾಣದ ಕುರುಹಿಲ್ಲದ ಶರಣಂಗೆ ಪ್ರಸಾದದ ನೆಲೆಯಿಲ್ಲವಯ್ಯ.
ಎನಗೇನೂ ತಲೆದೋರದೆ ಮುಸುಕಿಟ್ಟು ಬಸವಳಿದೆನಯ್ಯಾ ಸಂಗಯ್ಯ ನಿಮ್ಮಲ್ಲಿ.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೯೩೯)

ಹಾಗೆಯೇ ಆಕೆಯ ಮುಂದಿನ ವಚನದಲ್ಲಿ ವೈವಾಹಿಕ ಸಂಬಂಧದಲ್ಲಿರಬೇಕಾದ ಕಾಮಿತವಿಲ್ಲದೆ ಸ್ವಯ-ಲಿಂಗ-ಸಂಬಂಧ ನನಗೇಕೆ? ಎಂದು ತನ್ನ ಸಾಂಸಾರಿಕ ನಿರೀಕ್ಷೆಗಳನ್ನು ಮುನ್ನಳ ದೋಷವೆಂದು ದೂರುತ್ತಾಳೆ:

ಮುನ್ನಳ ದೋಷವೆನ್ನ ಬೆನ್ನಬಿಡದಯ್ಯ,
ಮುನ್ನಳ ಪಾಪವೆನ್ನ ಹಿಂದುವಿಡಿದು ಮುಂದೆ ನಡೆಯಲೀಯದು.
ಕಾಮಿತ ನಿಃಕಾಮಿತವ ಕಂಡು
ಬಸವನನರಿಯದೆ ಕೆಟ್ಟ ಪಾಪಿಯಾನು.
ಶಬ್ಧದ ಹಂಗಿಗಳಲ್ಲಯ್ಯ ನಾನು ಸಂಗಯ್ಯನಲ್ಲಿ
ಸ್ವಯಲಿಂಗಸಂಬಂಧವೆನಗೆಂತಯ್ಯ ?
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೧೦೫೦)

ಕಡೆಗೆ ಈಡೇರದ ತನ್ನ ಬಯಕೆಗಳನ್ನು ಹೇಗೆ ಆಕೆ ಹತ್ತಿಕ್ಕಿಕೊಂಡು ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಳು ಎಂಬ ಚಿತ್ರಣವನ್ನು ಈ ವಚನದಲ್ಲಿ ತೋರುತ್ತಾಳೆ:

ಊಟಕ್ಕಿಕ್ಕದವರ ಕಂಡು ಎನಗೆ ತೃಪ್ತಿಯಾಯಿತ್ತು.
ಕೂಟವಿಲ್ಲದ ಪುರುಷನ ಕಂಡು ಕಾಮದ ಆತುರಹಿಂಗಿತ್ತೆನಗೆ.
ಏನೆಂದೆನ್ನದ ಮುನ್ನ ತಾನೆಯಾಯಿತ್ತು;
ಸಂಗಯ್ಯನಲ್ಲಿ ಶಬ್ಧಮುಗ್ಧವಾಯಿತ್ತು.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೮೫೯)

ಕಡೆಗೆ ಕಾಮವನ್ನು ಕಳೆದುಕೊಂಡು ಪ್ರಸನ್ನವದನೆಯಾದೆ ಎಂದು ಈ ವಚನದಲ್ಲಿ ನೀಲಮ್ಮ ತನ್ನ ಭಾವನೆಯನ್ನು ವ್ಯಕ್ತಪಡಿಸಿದ್ದಾಳೆ:

ಕರಣಂಗಳ ಹಂಗ ಹರಿದು
ಕಾಮದ ಸೀಮೆಯ ಹರಿದು
ಕಾಮದ ಪ್ರಪಂಚನ್ನಳಿದು ನಾನು ಪ್ರಸನ್ನವದನೆಯಾದೆನಯ್ಯ ಸಂಗಯ್ಯ.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೯೩೫)

ಪತಿಯಿರದಿದ್ದರೂ ಬಾಳುವ ಛಲ ನನ್ನಲ್ಲುಂಟು ಏಕೆಂದರೆ ಕಾಮವನ್ನು ಕಳೆದುಕೊಂಡವಳಾದುದರಿಂದ ಬಸವನ ಹಂಗು ನನಗಿಲ್ಲ ಎನ್ನುವ ಛಲವನ್ನು ನೀಲಮ್ಮ ತೋರುತ್ತಾಳೆ,

ಹಂದೆಯಲ್ಲ ನಾನು,
ಹರುಷದ ಧೈರ್ಯವುಳ್ಳ ಹೆಣ್ಣು ನಾನು.
ಕಾಮವನಳಿದವಳಾನಾದ ಕಾರಣ
ಬಸವನ ಹಂಗೆನಗಿಲ್ಲವಯ್ಯ.
ಭ್ರಮೆಯಡಗಿ ಕಲೆನಷ್ಟವಾಗಿ ಮುಖವರತು ಮನವಿಚಾರವ ಕಂಡೆನಯ್ಯ
ಸಂಗಯ್ಯ.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೧೦೮೦)

ಆದರೆ ತನ್ನ ಇನ್ನೊಂದು ವಚನದಲ್ಲಿ ಕೇವಲ ನಿಷ್ಠೆ ಎಂಬ ಒಂದು ಬದ್ಧತೆಯ ಕಾರಣವಾಗಿ ಎಲ್ಲಾ ವಾಂಛೆಗಳನ್ನು ಕಷ್ಟದಿಂದ ಕಳೆದುಕೊಳ್ಳುತ್ತಾ ಯಾವುದೇ ಸುಖವಿಲ್ಲದಿದ್ದರೂ ಕೇವಲ ಪ್ರಸಿದ್ಧ ಪುರುಷನ ಇರುವಿಕೆಯ ಏಕೈಕ ಕಾರಣದಿಂದ ಬದುಕಿದ್ದೆ. ಈಗವನು ಇಲ್ಲದ ಕಾರಣ ನನ್ನ ಕಾಯವನ್ನು ಅಳಿಯುವೆ ಎಂದು ತನ್ನ ವಿಕ್ಷಿಪ್ತ ಮನಸ್ಥಿತಿಯನ್ನೂ ತೋರಿದ್ದಾಳೆ. ಆ ವಚನ ಹೀಗಿದೆ:

ನಿಷ್ಠೆಯೆಂಬುದನೊಂದ ತೋರಿ
ಇಷ್ಟಪ್ರಾಣಭಾವದಲ್ಲಿ ಕಷ್ಟವನಳಿದೆನಯ್ಯ.
ಕಾಯದ ಸಂಗವಳಿದು ಕಾಮನಿಃಕಾಮವಾಗಿ ನಿಂದೆನಯ್ಯ.
ಅನುಭವಸುಖವಳಿದು ಅಪ್ರತಿಮ ಇರವ ಕಂಡು ಬದುಕಿದೆನಯ್ಯ,
ಸಂಗಯ್ಯ ಬಸವನಡಗಿದ ಕಾರಣ ಕಾಯವ ನಾನಳಿದೆನು.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೯೮೭)

ಹೀಗೆ ನೀಲಮ್ಮನ ವಚನಗಳು ಹೆಣ್ಣಿನ ಸೂಕ್ಷ್ಮಗಳನ್ನು, ಮಾನಸಿಕ ತುಮುಲಗಳನ್ನು, ಕಾಮನಿಗ್ರಹದ, ಕಾಮಾಸಕ್ತನಲ್ಲದ ಸಂಗಾತಿಯೊಂದಿಗಿನ ಒಡನಾಟವನ್ನು ಸೂಚ್ಯವಾಗಿ ತೆರೆದಿಡುತ್ತವೆ. ಸಾಮಾಜಿಕವಾಗಿ ಬಸವಣ್ಣನನ್ನು ಜಗಜ್ಯೋತಿ, ಸಮಾನತೆಯ ಹರಿಕಾರ ಎಂದೆಲ್ಲಾ ಗುರುತಿಸಿದ್ದರೂ, ನೀಲಮ್ಮನು ತನ್ನ ಪತಿಯಾದ ಬಸವಣ್ಣನನ್ನು ತೆರೆದಿಡುವ ಪರಿಯೇ ಬೇರೆ. ಇವಳ ವಚನದಲ್ಲಿ ಬಸವಣ್ಣ ಪುರುಷಶಾಹಿಯ ಅಧಿಪತಿಯೆನಿಸುತ್ತಾನೆ, ಅಧ್ಯಾತ್ಮದ ನೆಪದಲ್ಲಿ ಸಾಂಸಾರಿಕ ಬಯಕೆಗಳನ್ನು ಈಡೇರಿಸದ ಶರಣನಿದ್ದಾನೆ. ನಟ್ಟನಡುವೆ ಬಿಟ್ಟುಹೋದ ಪತಿಯಿದ್ದಾನೆ. ಕಟ್ಟಕಡೆಗೆ ನೀಲಮ್ಮನು ಗತ್ಯಂತರವಾಗಿ ಅಧ್ಯಾತ್ಮವನ್ನು ಹೇರಿಕೊಂಡು ನಾನು ಹಂದೆಯಲ್ಲ (ಅಂಜುಬುರುಕಿ) ಎನ್ನುತ್ತ ಬರುವ ಎಲ್ಲಾ ಸನ್ನಿವೇಶಗಳನ್ನೂ ಛಲದಿಂದ ಎದುರಿಸುತ್ತ ಪುರುಷನನ್ನು ಸಮಗಟ್ಟುವುದಲ್ಲದೆ ಆತನನ್ನು ಮೀರಿದ ಓರ್ವ ಸರ್ವಸ್ವತಂತ್ರ ದಿಟ್ಟ ಮಹಿಳೆಯಾಗಿ ಹೊಮ್ಮಿದ್ದಾಳೆ. ಆದರೆ ಮತ್ತೊಮ್ಮೆ ಬಸವನಿಲ್ಲದ ಮೇಲೆ ನನಗೇನು ಇಲ್ಲಿ ಹಾಗಾಗಿ ನಾನೂ ಅಳಿಯುವೆ ಎಂಬ ವಿಕ್ಷಿಪ್ತತೆಯನ್ನು ತೋರಿದ್ದಾಳೆ. ಇಂತಹ ವಿಕ್ಷಿಪ್ತತೆ ನೀಲಮ್ಮನಲ್ಲದೆ ಅನೇಕ ವಚನಕಾರರೂ ತಮ್ಮ ವಚನಗಳಾದ್ಯಂತ ತೋರಿದ್ದಾರೆ.

ನೀಲಮ್ಮನ ಎಲ್ಲಾ ದೂರು, ದುಮ್ಮಾನಗಳು ಸತ್ಯವೆಂಬಂತೆ ಬಸವಣ್ಣನ ಈ ವಚನ ಅನಾವರಣಗೊಳ್ಳುತ್ತದೆ:

.....ಕಾಮನೇಮವೆಂಬ ಸಿಂಧುಬಲ್ಲಾಳನ ವಧುವ ಸರ್ವಭುವನದೊಡೆಯ ಸಂಗಮದೇವರು ಬೇಡುವಂತಲ್ಲ. ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ, ಆಕೆಯನು ಸಂಗಮದೇವಾ, ನೀನು ಜಂಗಮರೂಪಾಗಿ ಬಂದು ಎನ್ನ ಮುಂದೆ ಸಂಗವ ಮಾಡುತ್ತಿರಲು ಎನ್ನೊಡನಿರ್ದ ಸತಿಯೆಂದು ಮಾಯಕ್ಕೆ ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ.... ಇಷ್ಟರೊಳಗೆ ತಪ್ಪುಳ್ಳಡೆ ಮೂದಲಿಸಿ ಮೂಗಕೊಯಿ, ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ೧ ವಚನದ ಸಂಖ್ಯೆ: ೧೧೧೧)

ಆಧ್ಯಾತ್ಮ, ಚಳವಳಿ, ಮೌಲ್ಯಗಳು ಮಾನವನನ್ನು ಗಾಢವಾಗಿ ಆವರಿಸಿಕೊಂಡಾಗ ಎಂತಹ ಒಂದು ಸಮಾಧಿ ಸ್ಥಿತಿಗೆ ಮನಸ್ಸು ಲೀನವಾಗಿರುತ್ತದೆ ಎನ್ನುವುದನ್ನೂ ಬಸವಣ್ಣನ ಈ ವಚನ ಅತ್ಯಂತ ಸೂಕ್ತವಾಗಿ ವ್ಯಕ್ತಪಡಿಸುತ್ತದೆ. ಯಾವುದೇ ಲೌಕಿಕ ವಿಚಾರಗಳು ನನ್ನ ಭಕ್ತಿಮಾರ್ಗಕ್ಕೆ ತಡೆಯೊಡ್ಡಲಾರವು ಎಂಬುದನ್ನು ನಿಷ್ಠುರವಾಗಿ ಆದರೆ ಭಕ್ತಿಲೋಲುಪ್ತನಾಗಿ ನುಡಿಯುವಾಗ ಬಸವಣ್ಣನು "ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ, ಆಕೆಯನು ಸಂಗಮದೇವಾ, ನೀನು ಜಂಗಮರೂಪಾಗಿ ಬಂದು ಎನ್ನ ಮುಂದೆ ಸಂಗವ ಮಾಡುತ್ತಿರಲು ಎನ್ನೊಡನಿರ್ದ ಸತಿಯೆಂದು ಮಾಯಕ್ಕೆ ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ" ಎನ್ನುತ್ತಾನೆ. ಅಂದರೆ ಸಂಸಾರದ ಬಗ್ಗೆ ಬಸವಣ್ಣನು ಎಂತಹ ದಿವ್ಯ ವಿರಕ್ತಿಯನ್ನು ಹೊಂದಿದ್ದನು ಎಂಬ ವಿಶಾಲಾರ್ಥದೊಂದಿಗೆ ಈ ವಚನವು ಆತನ ಸಂಸಾರದ ಸೂಕ್ಷ್ಮಗಳನ್ನೂ ತೋರುತ್ತದೆ.

ಕಾಮದ ಕುರಿತಾದ ನೀಲಮ್ಮನ ಮೇಲಿನ ಸರಣಿ ವಚನಗಳು ಮತ್ತು ತನ್ನ ಪತ್ನಿ ನೀಲಮ್ಮಳ ಕುರಿತಾದ ಬಸವಣ್ಣನ ವಚನದ ವಾಸ್ತವತೆಯು ಪೌರಾಣಿಕ ರೂಪವಾಗಿ ಮಾಯಿದೇವಿ ಎಂದೂ ಕರೆಯುವ ನೀಲಮ್ಮನ ಒಂದು ಪ್ರಸಂಗವಾಗಿ ಹರಿಹರನ ’ಬಸರಾಜದೇವರ ರಗಳೆ’ಯಲ್ಲಿ (ಸ್ಥಲ ೧೨, ಬಸವರಾಜದೇವರ ರಗಳೆ, ಸಂ. ಟಿ.ಎಸ್. ವೆಂಕಣ್ಣಯ್ಯ, ಪುಟ ೮೭, ೮೮) ಅನಾವರಣಗೊಂಡಿದೆ.

ಬಸವ-ಮಾಯಿದೇವಿ-ಜಂಗಮರಿರುವ ಈ ಪ್ರಸಂಗದಲ್ಲಿ
ಶಿವನು ಸುಖಿಜಂಗಮನ ವೇಷದಲ್ಲಿ ಬಂದಾಗ ಅವನನ್ನು ರಮಿಸಲು ಬಸವನು ತನ್ನ ಪ್ರೀತಿಯ ಪತ್ನಿ ಮಾಯಿದೇವಿ (ನೀಲಮ್ಮ)ಯನ್ನು ಕಳುಹಿಸುತ್ತಾನೆ. ಇದನ್ನು ಮೆಚ್ಚಿ ಶಿವನು ನೀಲಮ್ಮನಿಗೆ ತನ್ನ ನಿಜರೂಪ ತೋರಿದಾಗ ಆಕೆ "ನೋಡಲಮ್ಮದೆ ನಡನಡಂ ನಡುಗಿ, ಬಸವಾ ಬಸವಾ, ಜಂಗಮದೇವರು ಸಂಗಮದೇವರಾದ"ರೆನ್ನಲು ಬಸವಣ್ಣನವರು "ತಾಯೆ ತಾಯೆ, ಮುನ್ನಾವರೆಂದು ಕೊಟ್ಟೆನೆಂ" ಎಂದುತ್ತರಿಸುತ್ತಾನೆ.

ಈ ಕಾಲ್ಪನಿಕ ಪೌರಾಣಿಕ ಸ್ವರೂಪದ ಕಥನಕ್ಕೆ ನೀಲಮ್ಮ ತನ್ನ ವಚನಗಳ ಸರಣಿಯಲ್ಲಿ ಬಹುಸ್ಪಷ್ಟ ವಾಸ್ತವವನ್ನು ಕಟ್ಟಿಕೊಟ್ಟಿರುವುದು ಅಷ್ಟೇ ಸ್ಪಟಿಕಸ್ಪಷ್ಟ! ಇಂತಹ ಕೆಚ್ಚಿರುವುದರಿಂದಲೇ ಆಕೆ ಹಂದೆಯಲ್ಲ ಎಂದು ಹರಿಹರನೂ ತನ್ನ ರಗಳೆಯಲ್ಲಿ ಹೊಗಳಿದ್ದಾನೆ. ಹಾಗೆಯೇ ಅವಳೂ ತನ್ನನ್ನು ಹಂದೆಯಲ್ಲ ಎಂದು ಕರೆದುಕೊಂಡಿದ್ದಾಳೆ. ಇಂತಹ ಗಟ್ಟಿ ನಿಲುವಿನ ಮಹಿಳಾ ನೆಲೆಯನ್ನು ಯಾವ ವಚನಕಾರ್ತಿಯೂ ಕಟ್ಟಿಕೊಟ್ಟಿಲ್ಲ.

ಒಟ್ಟು ೧೯ ಕಡೆಗಳಲ್ಲಿ ನೀಲಮ್ಮನು ತನ್ನ ೧೨ ವಚನಗಳಲ್ಲಿ ’ಕಾಮ’ ಪದವನ್ನು ಸಾಂಸಾರಿಕ ಮಹಿಳೆಯಾಗಿ ಅದೊಂದು ಸಾಂಸಾರಿಕ ಅಗತ್ಯವೆಂಬಂತೆ ಬಳಸಿದ್ದರೆ, ಅಕ್ಕಮಹಾದೇವಿ ಒಟ್ಟು ೩೧ ಕಡೆಗಳಲ್ಲಿ , ವಚನಕಾರ ತನ್ನ ೨೫ ವಚನಗಳಲ್ಲಿ ’ಕಾಮ’ ಪದವನ್ನು ಸನ್ಯಾಸತ್ವದ ಹಿನ್ನೆಲೆಯಲ್ಲಿ ಪಾಪವೆಂಬಂತೆ ಬಳಸಿದ್ದಾಳೆ. ಅಕ್ಕಮಹಾದೇವಿ ಯೋಗಿಣಿ ಎನಿಸಿದರೆ, ನೀಲಮ್ಮ ತ್ಯಾಗಿಣಿ ಎನಿಸುತ್ತಾಳೆ.

ಆದರೆ ಬಸವಣ್ಣನ ವಚನವೊಂದು ಹೀಗಿದೆ:

ಅವಳ ವಚನ ಬೆಲ್ಲದಂತೆ: ಹೃದಯದಲ್ಲಿಪ್ಪುದು ನಂಜು ಕಂಡಯ್ಯಾ
ಕಂಗಳಲ್ಲೊಬ್ಬನ ಕರೆವಳು; ಮನದಲೊಬ್ಬನ ನೆನೆವಳು!
ವಚನದಲ್ಲೊಬ್ಬನ ನೆರೆವಳು!
ಕೂಡಲಸಂಗಮದೇವಾ,
ಇಂತಹವಳ ತನುವೊಂದೆಸೆ, ಮನವೊಂದೆಸೆ, ಮಾತೊಂದೆಸೆ
ಈ "ಮಾನಸಗಳ್ಳಿ"ಯ ನನ್ನವಳೆಂದು ನಂಬುವ
ಕುರಿನರರನೇನೆಂಬೆನಯ್ಯಾ?

(ಎನ್ನ ನಾ ಹಾಡಿಕೊಂಡೆ - ಸಂ. ಡಾ. ಎಸ್. ವಿದ್ಯಾಶಂಕರ. ಪ್ರಿಯದರ್ಶಿನಿ ಪ್ರಕಾಶನ. ವಚನ ಸಂಖ್ಯೆ ೧೧೦. ಪುಟ ೯೦)

ಮೇಲುನೋಟಕ್ಕೆ ಈ ವಚನವನ್ನು ಓದಿದವರು ಇದು ಚಂಚಲ ಮನಸ್ಸಿನ ಕುರಿತಾದ ಸೊಗಸಿನ ವಚನ ಎಂದು ಅರ್ಥೈಸಿಕೊಳ್ಳುತ್ತಾರೆ. ಆದರೆ ಬಸವಣ್ಣನ ಕೌಟುಂಬಿಕ ಜೀವನವನ್ನು ಸಮಗ್ರವಾಗಿ ಗ್ರಹಿಸಿದಾಗ ಈ ವಚನವು ಬೇರೆಯದೇ ಅರ್ಥವನ್ನು ಕೊಡುತ್ತದೆ. ಹಾಗಾಗಿ ಬಸವಣ್ಣನು ಸೂಚ್ಯವಾಗಿ ಮಹಿಳೆಯರ ಚಂಚಲತೆ ಕುರಿತು ಈ ವಚನವನ್ನು ಹೇಳಿದ್ದಾನೋ ಅಥವಾ ತನ್ನ ಪತ್ನಿಯರ ಕುರಿತು ಅವಹೇಳನ ಮಾಡಿದ್ದಾನೋ ಎಂಬುದು ಮನೋವಿಶ್ಲೇಷಣೆಯ ಸಂಗತಿ. ಏಕೆಂದರೆ ಈ ವಚನದ ಹಿನ್ನೆಲೆಯಲ್ಲಿ ಬಸವಣ್ಣನು ಮಹಿಳೆಯರ ಬಗ್ಗೆ ಹೊಂದಿದ್ದ ಅಭಿಪ್ರಾಯ ಅವನಿಗೆ ಭೂಷಣಪ್ರಾಯವಂತೂ ಅಲ್ಲ. ಒಟ್ಟಾರೆ ಖುದ್ದು ಬಸವಣ್ಣನಂತಹ ಸಮಾನತೆಯ ಹರಿಕಾರನೇ ಹೀಗೆ ಹೇಳಿರುವಾಗ ಸಮಾಜವು ಅಂದು ಮಹಿಳೆಯನ್ನು ಯಾವ ಸ್ಥಾನಕ್ಕಿಳಿಸಿ ನೋಡುತ್ತಿತ್ತು ಎಂಬುದರ ಹೊಳಹು ಸಿಗುತ್ತದೆ.

ಮಾನವ ಧರ್ಮದ ಹಿನ್ನೆಲೆಯಲ್ಲಿ ಮನಶಾಸ್ತ್ರದ ಮುನ್ನೆಲೆಯಿಂದ ವಚನಕಾರರ ಸಾಮಾಜಿಕ ಮತ್ತು ವೈಯಕ್ತಿಕ ಜೀವನವನ್ನು ಸಮಗ್ರವಾಗಿಟ್ಟುಕೊಂಡು ವಚನಗಳನ್ನು ವಿಶ್ಲೇಷಿಸಿದಾಗ ಕಾಣುವ ಸತ್ಯವೇ ಬೇರೆ. ಭಾರತದ ಇತಿಹಾಸವು ಹೀಗೆ ಕ್ರಿಸ್ತಪೂರ್ವ ಕಾಲದಿಂದ ಇಪ್ಪೊತ್ತೊಂದನೇ ಶತಮಾನದ ವರ್ತಮಾನದವರೆಗಿನ ತನ್ನೆಲ್ಲಾ ಸ್ಥಿತ್ಯಂತರಗಳನ್ನು ಸ್ಪಷ್ಟವಾಗಿ ಸಮಗ್ರ ರೂಪದಲ್ಲಿ ಕಟ್ಟಿಕೊಡುತ್ತದೆ. ಭಾರತದ ಈ "Paradigm Shift" ನಿಚ್ಚಳವಾಗಿ ನೋಡಬಲ್ಲ ಸಂಶೋಧಕರಿಗೆ ಸಮಗ್ರವಾಗಿ ತೆರೆದಿಟ್ಟು ಕಾಯುತ್ತಿದೆ. ಇದಕ್ಕೆ ವಚನಕಾರರು ಮತ್ತವರ ಜೀವನವು ಸಹ ಹೊರತಲ್ಲ.

ಇನ್ನು ಅಕ್ಕಮಹಾದೇವಿಯಂತೆಯೇ ಅಮುಗೆ ರಾಯಮ್ಮನ ವಚನಗಳು ಸಹ ಕಾಮವನ್ನು ಒಂದು ಪಾಪವೆಂಬಂತೆ ಚಿತ್ರಿಸಿವೆ. ಈ ಕೆಳಗಿನ ಅಂತಹ ವಚನವನ್ನು ಗಮನಿಸಿದರೆ ನೀಲಮ್ಮನ ಮೇಲಿನ ವಚನಗಳು ಹೇಗೆ ಭಿನ್ನ ಎಂದು ತಿಳಿದುಬರುತ್ತದೆ.

ಕಣ್ಣಿಗೆ ಬಂದಂತೆ ಅನ್ಯದೇಶಕ್ಕೆ ಹೋಗುವ ಕುನ್ನಿಗಳಿಗೆ
ಬಣ್ಣದ ಮಾತೇಕೊ ?
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳುಳ್ಳವಂಗೆ
ಮಹಾಜ್ಞಾನಿಗಳ ಮಾತೇಕೊ ?
ಕತ್ತಲೆಯ ಕಳೆದು ನಿಶ್ಚಿಂತನಾದವಂಗೆ
ನಚ್ಚುಮೆಚ್ಚಿನ ರಚ್ಚೆಯ ಮಾತೇಕೊ ? ಅಮುಗೇಶ್ವರಲಿಂಗವನರಿದವಂಗೆ ?
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೬೨೦)

ಒಟ್ಟಿನಲ್ಲಿ ವಚನ ಸಾಹಿತ್ಯವು ಅಂದಿನ ಮಹಿಳೆಯನ್ನು ಅಸಮಾನತೆಯ ನೆಲೆಯಿಂದಲ್ಲದೆ ಸಾಮಾಜಿಕ ನೆಲೆಯಿಂದಲ್ಲದೆ ಮಾನಸಿಕ ನೆಲೆಯಿಂದಲೂ ಕಟ್ಟಿಕೊಡುತ್ತವೆ.

ಅದೆಲ್ಲಕ್ಕಿಂತ ನೀಲಮ್ಮನಿಗೆ ತನ್ನ ಅನಿಸಿಕೆಗಳನ್ನು ಹೇಳಿಕೊಳ್ಳುವಂತಹ ಆತ್ಮಸ್ಥೈರ್ಯವನ್ನು ಲಿಂಗವೊದಗಿಸಿತ್ತು. ಇಡೀ ವಚನಚಳವಳಿಯಲ್ಲದೆ ಇಡೀ ಭರತಖಂಡದಲ್ಲಿಯೇ ಇಲ್ಲಿಯವರೆಗೂ ಯಾವುದೇ ಸತ್ಪುರುಷನ ಸಹ"ಧರ್ಮಿಣಿ"ಯು ತನ್ನ ಪತಿಯು ತೀರಿದ ಬಳಿಕ ಸುಖಿಯಾದೆನೆಂದು ನೀಲಮ್ಮನಂತೆ ಆತ್ಮಸ್ಥೈರ್ಯದಿಂದ ಖಚಿತವಾದ ನಿಷ್ಠುರ ನಿರಾಳವನ್ನು ವ್ಯಕ್ತಪಡಿಸಿಲ್ಲ. ಬಸವನಳಿದ ಬಳಿಕದ ಆಕೆಯ ಹಲವಾರು ಇಂತಹ ನಿರಾಳತೆಯ ವಚನಗಳನ್ನು ಗಮನಿಸಬಹುದು.

ಅಂತಹ ಒಂದು ವಚನ ಹೀಗಿದೆ:

ಆಡದ ಮುನ್ನವಚ್ಚನೆ ಛಂದವಾಯಿತ್ತೆನಗಯ್ಯ.
ಅಚ್ಚನೆಯಳಿದು ನಿರೂಢವಾಯಿತ್ತು ಪ್ರಸಂಗ.
ಸಂಗ ಸ್ವಯಕೂಟವನ್ನೈದಲು,
ಅಪ್ರತಿಮ ಮೂರ್ತಿಯ ಇರವನರಿದೆ ನಾನು.
ಇಪ್ಪತ್ತೈದು ತತ್ತ್ವವ ಸರಗೊಳಿಸಿ ಸುಖಿಯಾದೆನಯ್ಯ
ಸಂಗಯ್ಯ, ಬಸವನಳಿದು ನಿರಾಭಾರಿಯಾದ ಬಳಿಕ.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೮೩೯)

ಹಾಗೆಯೇ ಈ ಕೆಳಗಿನ ವಚನವು ಬಸವಣ್ಣನೊಂದಿಗಿನ ಆಕೆಯ ಸಂಬಂಧದ ಬಗ್ಗೆ ಮತ್ತಷ್ಟು ಹೊಳಹುಗಳನ್ನು ನೀಡುತ್ತದೆ. ಒಟ್ಟಿನಲ್ಲಿ ನೀಲಮ್ಮನು ಕೇವಲ ಬಸವಪತ್ನಿಯಾಗಿ, ವಚನಕಾರ್ತಿಯಾಗಿಯಲ್ಲದೆ ಜಾಗತಿಕವಾಗಿಯೂ ಮಹಿಳಾ ನೆಲೆಯಿಂದ ಅತಿ ವಿಶಿಷ್ಟ ವ್ಯಕ್ತಿಯೆನಿಸುತ್ತಾಳೆ. ಜಗತ್ತು ಕೇವಲ ಧಾರ್ಮಿಕ ನೆಲೆಯಲ್ಲಿ ವಚನಕಾರ್ತಿಯರನ್ನು ನೋಡಿರುವುದರಿಂದ ನೀಲಮ್ಮನನ್ನು ಗುರುತಿಸುವಲ್ಲಿ ಸೋತಿದೆ.

ಅಧಿಕ ತೇಜೋನ್ಮಯ ಬಸವಾ.
ಅನಾದಿತತ್ವಮೂರ್ತಿ ನೀನೆ ಅಯ್ಯಾ ಬಸವಾ.
ಎಲೆ ಅಯ್ಯಾ ಸಮರಸದಲ್ಲಿ ಹುಟ್ಟಿದ
ಪ್ರಣವಮೂರ್ತಿಯಯ್ಯಾ ಬಸವಯ್ಯನು.
ಆ ಬಸವನಡಗಿದ ಬಳಿಕ ಆನು ಬದುಕಿದೆನಯ್ಯಾ ಸಂಗಯ್ಯಾ.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೮೧೮)

ಅದೇ ಬಸವಣ್ಣನವರ ಇನ್ನೋರ್ವ ಪತ್ನಿ ನೀಲಾಂಬಿಕೆಯ ಸೋದರಿ ಗಂಗಾಂಬಿಕೆ ತನ್ನ ಸಂಸಾರದ ಮತ್ತೊಂದು ಕೋನವನ್ನು ತೋರುತ್ತಾಳೆ. ಆಕೆಯ ಈ ಕೆಳಗಿನ ವಚನಗಳು ಸವತಿ ಮತ್ಸರದ ದೂರಿನ ಭಾವನೆಗಳನ್ನು ಹೊಂದಿವೆ ಎನಿಸುತ್ತವೆ.

ಅವಳ ಕಂದ ಬಾಲಸಂಗ, ನಿನ್ನ ಕಂದ ಚೆನ್ನಲಿಂಗ
ಎಂದು ಹೇಳಿದರಮ್ಮಾ ಎನ್ನ ಒಡೆಯರು.
ಫಲವಿಲ್ಲದ ಕಂದನಿರ್ಪನವಳಿಗೆ,
ಎನಗೆ ಫಲವಿಲ್ಲ, ಕಂದನಿಲ್ಲ.
ಇದೇನೋ ದುಃಖದಂದುಗ
ಗಂಗಾಪ್ರಿಯ ಕೂಡಲಸಂಗಮದೇವಾ?
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೭೫೩)

ಪತಿಯಾಜ್ಞೆಯಲ್ಲಿ ಚರಿಪ ಸತಿಗ್ಯಾಕೆ ಪ್ರತಿಜ್ಞೆಯು?
ಪ್ರತಿಜ್ಞೆಯ ಪತಿಕರದಲ್ಲಿ ಪೋಪದಿರೆ ಯಾತನೆಯಲ್ಲವೆ?
ಇವಳ ಲಿಂಗನಿಷ್ಠೆ ಇವಳಿಗೆ,
ನಮ್ಮ ನಿಷ್ಠೆಪತಿಯಾಜ್ಞೆಯಲ್ಲಿ ಕಾಣಾ
ಗಂಗಾಪ್ರಿಯ ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೭೫೮)

ಹೀಗೆ ಬಸವಪತ್ನಿಯರೀರ್ವರೂ ತಮ್ಮ ಮಾನಸಿಕ ತುಮುಲಗಳನ್ನು, ಸಾಂಸಾರಿಕ ವೇದನೆಗಳನ್ನು ತಮ್ಮ ವಚನಗಳಲ್ಲಿ ಹರಿಯಬಿಟ್ಟಿದ್ದಾರೆ. ಬೇರೆಲ್ಲಾ ವಚನಕಾರ್ತಿಯರಿಗೆ ಬಸವತತ್ವದಿಂದ ಸಿಕ್ಕಿದ್ದ ಅನುಭಾವ ಬಸವ ಪತ್ನಿಯರಿಗೆ ಸತ್ವಹೀನವೆನಿಸಿದ್ದಿತೇನೋ ಎಂಬಂತೆ ಈ ವಚನಗಳು ಸಂಸಾರಸೂಕ್ಷ್ಮಗಳನ್ನು ತೆರೆದಿಡುತ್ತವೆ.

- ರವಿ ಹಂಜ್