ಜಾಗತಿಕ ಲಿಂಗಾಯತ ಮಹಾಸಭಾದ ಅಭಿಪ್ರಾಯಗಳನ್ನು ವಿಶ್ಲೇಷಿಸದೆ ವೀರಶೈವ ಲಿಂಗಾಯತದ ಕುರಿತು ಅಭಿಪ್ರಾಯ ನೀಡುವುದು ಪ್ರಜಾಪ್ರಭುತ್ವದಲ್ಲಿ ಏಕಮುಖ ಅಭಿಪ್ರಾಯ ಎನಿಸಿಬಿಡುತ್ತದೆ. ಅದು ಸಲ್ಲದು ಕೂಡ. ಜಾಗತಿಕ ಲಿಂಗಾಯತ ಮಹಾಸಭಾದ ಶರಣ ಜಾಮದಾರರು, ಶರಣ ರಂಜಾನ್ ದರ್ಗಾರವರು ಮತ್ತು ಪ್ರತ್ಯೇಕ ಲಿಂಗಾಯತದ ಸಮಸ್ತ ಶರಣರೆಲ್ಲರೂ ತಮ್ಮ ಯಾವುದೇ ಸಂಶೋಧನಾ ಪರಾಮರ್ಶೆಗೆ ಪ್ರೊ. ಕಲ್ಬುರ್ಗಿಯವರನ್ನು ಉಲ್ಲೇಖಿಸುತ್ತಾರೆ. ನನ್ನ ಹಿಂದಿನ ಲೇಖನಗಳಲ್ಲಿ ಕಲ್ಬುರ್ಗಿಯವರ ಶೂನ್ಯ ಸಂಶೋಧನೆಗಳ ಬಗ್ಗೆ ವಿಶ್ಲೇಷಿಸಿದ್ದರೂ ಈಗ ಮತ್ತಷ್ಟು ಆಳವಾಗಿ ಅವರ ಸಂಶೋಧನೆಗಳ ಸತ್ಯಾಸತ್ಯತೆ ಕುರಿತು ಕಂಡುಕೊಳ್ಳೋಣ. ನನ್ನ ಅತಿ ಸಾಮಾನ್ಯ ತಿಳಿವಳಿಕೆಯ ಓದಿಗೆ ಇವರ ಸಂಶೋಧನೆಗಳು ಪುಟದಿಂದ ಪುಟಕ್ಕೆ ರದ್ದಾಗುತ್ತಾ ಶೂನ್ಯವಾಗುವ ಕಾರಣ ಇವನ್ನು ಶೂನ್ಯ ಸಂಶೋಧನೆಗಳು ಎಂದಿದ್ದೇನೆ ಎಂಬುದು ಒಂದು ತಾರ್ಕಿಕ ಸ್ಪಷ್ಟನೆ.
ಮೊದಲಿಗೆ ಲಿಂಗಾಯತ ಮಹಾಸಭಾದ ವೀರಶೈವ ಪದವನ್ನು ವಚನಗಳಲ್ಲಿ ತುರುಕಲಾಗಿದೆ ಎನ್ನುವ ಆರೋಪಕ್ಕೆ ಪ್ರೊ. ಕಲ್ಬುರ್ಗಿಯವರು ಸಹ ವೀರಶೈವ ಎಂಬ ಪದಬಳಕೆಯಾಗಿರುವ ಬಸವ, ಅಲ್ಲಮ, ಅಕ್ಕನ ವಚನಗಳನ್ನು ಪ್ರಕ್ಷೇಪ ವಚನಗಳೆಂದು ತಿರಸ್ಕರಿಸುತ್ತಾರೆ (ಅವರ ಪೂರ್ವೋಕ್ತ ಕೃತಿ, ಪುಟ ೧೪). ಆದರೆ ಅವು ಏಕೆ ಪ್ರಕ್ಷೇಪ ಎನ್ನಲು ಸಮರ್ಥ ಕಾರಣಗಳನ್ನು ಕೊಡುವುದಿಲ್ಲ. ಮೇಲಾಗಿ ಲಿಂಗಾಯತ ಎಂಬ ಪದ ಬಳಕೆಯ ವಚನಗಳು ಸಹ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವುದಕ್ಕೆ ಅವರು ಯಾವುದೇ ಸಮಜಾಯಿಷಿ ಕೊಟ್ಟಿಲ್ಲ. ಆದರೆ ಹೀಗಿದ್ದೂ ವೀರಶೈವ ಎಂದಿರುವ ಎಲ್ಲಾ ಪ್ರಕ್ಷಿಪ್ತ ವಚನಗಳನ್ನು ಇವರ ಸಂಪಾದಕತ್ವದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗಿದೆ. ಅದನ್ನು ಸಂಖ್ಯಾತ್ಮಕವಾಗಿ ಸಮಗ್ರವಾಗಿ ಇಲ್ಲಿ ವಿಶ್ಲೇಷಿಸೋಣ ಏಕೆಂದರೆ ನಾನೊಬ್ಬ ಲೋಕಮಾನ್ಯ ಸಂಶೋಧಕ, ಬುದ್ಧಿಜೀವಿ, ಸಂಸ್ಕೃತಿ ಚಿಂತಕನಲ್ಲ. ಅದಲ್ಲದೆ ಸಾಕ್ಷ್ಯಾಧಾರಗಳಿಲ್ಲದೆ ಯಾರು ಏನನ್ನೇ ಹೇಳಿದರೂ ಅದು ಒಪ್ಪಿತವಲ್ಲ ಸಹ.
ವೀರಶೈವ ಎಂಬ ಪದವನ್ನು ೧೪೨ ವಚನಗಳಲ್ಲಿ ಒಟ್ಟು ೨೨೧ ಕಡೆ ೩೦ಕ್ಕೂ ಹೆಚ್ಚು ವಚನಕಾರರು ಬಳಸಿದ್ದಾರೆ. ಆ ವಚನಕಾರರು ಅಕ್ಕಮಹಾದೇವಿ, ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಸಿದ್ದರಾಮೇಶ್ವರ, ಮೋಳಿಗೆ ಮಾರಯ್ಯ, ಅಮುಗೆ ರಾಯಮ್ಮ, ಅರಿವಿನ ಮಾರಿತಂದೆ, ಆದಯ್ಯ, ಕಾಡಸಿದ್ದೇಶ್ವರ, ಇಮ್ಮಡಿ ಮುರಿಘಾಗುರುಸಿದ್ದಸ್ವಾಮಿ, ಕುಷ್ಟಗಿ ಕರಿಬಸವೇಶ್ವರ, ಕೂಡಲಸಂಗಮೇಶ್ವರ, ಕೋಲ ಶಾಂತಯ್ಯ, ಗುರುಸಿದ್ಧದೇವರು, ಘಟ್ಟಿವಾಳಯ್ಯ, ಚಂದಿಮರಸ, ಜಕ್ಕಣ್ಣಯ್ಯ, ದೇಶೀಕೇಂದ್ರ ಸಂಗನಬಸವಯ್ಯ, ಶಾಂತವೀರೇಶ್ವರ, ತೋಂಟದ ಸಿದ್ದಲಿಂಗ ಶಿವಯೋಗಿಗಳು, ಪ್ರಸಾದಿ ಭೋಗಣ್ಣ, ಬಹುರೂಪಿ ಚೌಡಯ್ಯ, ಮುಮ್ಮಡಿ ಕಾರ್ಯೇಂದ್ರ, ಹೇಮಗಲ್ಲ ಹಂಪ, ಸ್ವತಂತ್ರ ಸಿದ್ದಲಿಂಗ, ಷಣ್ಮುಖಸ್ವಾಮಿ ಮುಂತಾದವರು.
ಲಿಂಗಾಯತ ಎಂಬ ಪದವನ್ನು ಒಟ್ಟು ೧೦ ವಚನಗಳಲ್ಲಿ ೧೨ ಕಡೆ ೮ ವಚನಕಾರರು ಬಳಸಿದ್ದಾರೆ. ಆ ವಚನಕಾರರು ದೇಶೀಕೇಂದ್ರ ಸಂಗನಬಸವಯ್ಯ, ಶಾಂತವೀರೇಶ್ವರ, ಉರಿಲಿಂಗಪೆದ್ದಿ, ಏಲೇಶ್ವರ ಕೇತಯ್ಯ, ಸಿದ್ದರಾಮೇಶ್ವರ, ಅಕ್ಕಮ್ಮ, ಚೆನ್ನಬಸವಣ್ಣ, ಮತ್ತು ಗುರುಸಿದ್ಧದೇವರು.
ಸಮಗ್ರ ವಚನ ಸಾಹಿತ್ಯದ ಎಲ್ಲಾ ಅಧಿಕೃತ ವಚನಗಳನ್ನು ಪರಿಗಣಿಸಿ ನಾನು ಈ ಸಂಖ್ಯೆಯನ್ನು ಕಂಡುಕೊಂಡಿದ್ದೇನೆ. ಇದಕ್ಕೆ ಸಂಖ್ಯಾಶಾಸ್ತ್ರದ + ಅಥವಾ - ಐದು ಪ್ರತಿಶತ ತಪ್ಪು ಲೆಕ್ಕಾಚಾರದ ಸೂತ್ರವನ್ನು ಅಳವಡಿಸಿಕೊಂಡರೂ ಸಹ ಒಟ್ಟು ಸಂಖ್ಯೆಯಲ್ಲಿ ಹೆಚ್ಚು ವ್ಯತ್ಯಾಸವಾಗುವುದಿಲ್ಲ.
ಲಿಂಗಾಯತ ಎಂಬುದು ಬೇರೆ ಆಗಿದ್ದರೆ ಮತ್ತು ಬಸವಾದಿ ಶರಣರು ಲಿಂಗಾಯತಧರ್ಮ ಪರಿಪಾಲಕರಾದರೆ ಅವರೇಕೆ ವೀರಶೈವ ಪದವನ್ನು ಇನ್ನೂರ ಇಪ್ಪತ್ತೊಂದು ಕಡೆ ಬಳಸಿ ಲಿಂಗಾಯತ ಪದವನ್ನು ಕೇವಲ ಹನ್ನೆರಡು ಕಡೆ ಬಳಸಿದ್ದಾರೆ?
ಪ್ರೊ. ಕಲ್ಬುರ್ಗಿಯವರ ವಾದವನ್ನು ಪುಷ್ಠಿಕರಿಸಲು ವಿತಂಡವಾದವಾಗಿಯೂ ಮತ್ತು ತಾರ್ಕಿಕವಾಗಿಯೂ ಲಿಂಗವಂತ ಪದವನ್ನು ಸಹ ಈ ಸಂಖ್ಯಾಸೂತ್ರಕ್ಕೆ ಒಡ್ಡಿ ನೋಡೋಣ. ಏಕೆಂದರೆ ಲಿಂಗವಂತ ಪದ ಲಿಂಗಾಯತ ಪದದ ತತ್ಸಮ ಎಂದು ಸಂಶೋಧಕ ತಜ್ಞರು, ನ್ಯಾಯಮೂರ್ತಿಗಳು, ತನಿಖಾ ಪತ್ರಕರ್ತರಲ್ಲದೆ ನನ್ನಂತಹ ಕುತೂಹಲಿಗಳು ಸಹ ವಾದಿಸುವ ಸಾಧ್ಯತೆ ದಟ್ಟವಾಗಿರುತ್ತದೆ. ಅದಲ್ಲದೆ "ಅಪ್ಪನು ನಮ್ಮ ಮಾದರ ಚೆನ್ನಯ್ಯ" ಎಂಬ ವಚನದ ಸಾಲನ್ನು ಹಿಡಿದು ಬಸವಣ್ಣ ಮಾದರ ಜಾತಿಯವನಾಗಿದ್ದನು ಎನ್ನುವ ಗ್ರಂಥವೇ ಇಂತಹ ಸಂಶೋಧಕ ವರ್ಗದಿಂದ ಬಂದಿರುವ ಹಿನ್ನೆಲೆಯಲ್ಲಿ ಯಾವುದೇ ಸಂಶೋಧನ ಸಾಧ್ಯತೆಯನ್ನು ಹಾಗೆಲ್ಲಾ ಹಗುರವಾಗಿ ತಳ್ಳಿಹಾಕುವಂತಿಲ್ಲವಲ್ಲವೇ!
ಲಿಂಗವಂತ ಪದವನ್ನು ಒಟ್ಟು ೧೦೬ ವಚನಗಳಲ್ಲಿ ೧೭೩ ಕಡೆ ೨೩ ವಚನಕಾರರು ಬಳಸಿದ್ದಾರೆ. ಪುನಃ ಸಂಖ್ಯಾಶಾಸ್ತ್ರದ + ಅಥವಾ - ಐದು ಪ್ರತಿಶತ ತಪ್ಪು ಲೆಕ್ಕಾಚಾರದ ಸೂತ್ರವನ್ನು ಅಳವಡಿಸಿಕೊಂಡರೂ ಒಟ್ಟು ಸಂಖ್ಯೆಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಆದರೆ ಲಿಂಗವಂತ ಪದ ಬಳಸಿದ ವಚನಗಳಲ್ಲಿ ವೀರಶೈವ ಪದವೂ ಸಹ ಅಲ್ಲಲ್ಲಿ ಜೊತೆಜೊತೆಯಾಗಿ ಸಾಕಷ್ಟು ಕಡೆ ಬಳಕೆಯಾಗಿಬಿಟ್ಟಿದೆ. ಹಾಗಾಗಿ ಲಿಂಗವಂತ ಎಂಬುದು ಲಿಂಗಾಯತ ಪದಕ್ಕೆ ತತ್ಸಮವಲ್ಲ. ಅದು ಲಿಂಗವನ್ನು ಪಡೆದುಕೊಂಡ ಎಂಬರ್ಥದಲ್ಲಿ ಕೆಳಗಿನ ವಚದಲ್ಲಿರುವಂತೆ ಬಳಕೆಯಾಗಿದೆ.
ಅಂಗಲಿಂಗಸಂಗಸುಖಸಾರಾಯದನುಭಾವ
"ಲಿಂಗವಂತಂ"ಗಲ್ಲದೆ ಸಾಧ್ಯವಾಗದು ನೋಡಾ.
ಏಕಲಿಂಗಪರಿಗ್ರಾಹಕನಾದ ಬಳಿಕ,
ಆ ಲಿಂಗನಿಷ್ಠೆ ಗಟ್ಟಿಗೊಂಡು,
ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದಭೋಗಿಯಾಗಿ,
"ವೀರಶೈವ"ಸಂಪನ್ನನೆನಿಸಿ ಲಿಂಗವಂತನಾದ ಬಳಿಕ
ತನ್ನಂಗಲಿಂಗಸಂಬಂಧಕ್ಕನ್ಯವಾದ ಜಡಭೌತಿಕ ಪ್ರತಿಷ್ಠೆಯನುಳ್ಳ
ಭವಿಶೈವದೈವಕ್ಷೇತ್ರತೀರ್ಥಂಗಳಾದಿಯಾದ ಹಲವು ಲಿಂಗಾರ್ಚನೆಯ
ಮನದಲ್ಲಿ ನೆನೆ[ಯ]ಲಿಲ್ಲ, ಮಾಡಲೆಂತೂ ಬಾರದು.
ಇಷ್ಟೂ ಗುಣವಳವಟ್ಟಿತ್ತಾದಡೆ ಆತನೀಗ ಏಕಲಿಂಗನಿಷ್ಠಾಚಾರಯುಕ್ತನಾದ ವೀರಮಾಹೇಶ್ವರನು.
ಇವರೊಳಗೆ ಅನುಸರಿಸಿಕೊಂಡು ನಡೆದನಾದಡೆ
ಗುರುಲಿಂಗಜಂಗಮಪಾದೋದಕಪ್ರಸಾದ ಸದ್ಭಕ್ತಿಯುಕ್ತವಾದ ವೀರಶೈವ ಷಡುಸ್ಥಲಕ್ಕೆ ಹೊರಗಾಗಿ ನರಕಕ್ಕಿಳಿವನು ಕಾಣಾ, ಕೂಡಲಸಂಗಮದೇವಾ.
ಲಿಂಗವಂತ, ಲಿಂಗನಿಷ್ಠೆ, ಲಿಂಗಾರ್ಚನೆ, ಲಿಂಗಾರ್ಪಿತ ಮುಂತಾದ ಪದಗಳೂ ಸೇರಿದಂತೆ ಲಿಂಗಾಯತ ಕೇವಲ ಲಿಂಗ ಸಂಬಂಧೀ ಪದವೇ ಹೊರತು ಪಂಥವನ್ನು ಹೆಸರಿಸುವ ನಾಮಪದವಲ್ಲ. ಪಂಥವು ಸದಾ ವೀರಶೈವ ಎಂಬ ನಾಮಪದದಿಂದಲೇ ಗುರುತಿಸಿಕೊಂಡಿತ್ತು ಎಂದು ಸಮಗ್ರ ವಚನಾಧಾರಿತ ಈ ಸಂಖ್ಯಾಸೂತ್ರಗಳು ಅನುಮೋದಿಸುತ್ತವೆ.
ಪ್ರಮುಖ ವಚನಕಾರರಾದ ಬಸವಣ್ಣ, ಅಲ್ಲಮ, ಮತ್ತು ಅಕ್ಕ ಮಹಾದೇವಿಯರು ತಮ್ಮ ವಚನಗಳಲ್ಲಿ ಲಿಂಗಾಯತ ಪದ ಬಳಸದೇ ಕೇವಲ ವೀರಶೈವ ಪದ ಬಳಸಿದ್ದಾರೆ ಎಂದ ಮೇಲೆ ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಹೇಗೆ? ವೀರಶೈವಿಗ ಆರಾಧ್ಯ ಜಂಗಮ ಬಸವಣ್ಣನನ್ನು ಲಿಂಗಾಯತ ಧರ್ಮ ಸಂಸ್ಥಾಪಕ ಎಂದು ಹೇಗೆ ತಾನೇ ಕರೆಯಲು ಸಾಧ್ಯ? ಎಂಬ ತಾರ್ಕಿಕ ಬೈನರಿ ನಿರ್ಧಾರಕ್ಕೆ ಈ ವಿಶ್ಲೇಷಣೆ ಬಂದು ನಿಲ್ಲುತ್ತದೆ. ಈ ವಾದಕ್ಕೆ ಎಂಟನೇ ಶತಮಾನದ ಶಂಕರಾಚಾರ್ಯರ ಬ್ರಹ್ಮಸೂತ್ರ ಭಾಷ್ಯವು ಮಹತ್ತರವಾದ ಬ್ರಹ್ಮಸಾಕ್ಷಿಯನ್ನೊದಗಿಸುತ್ತದೆ! ಬ್ರಹ್ಮಸೂತ್ರ ಭಾಷ್ಯದ ಪತ್ಯಾಧಿಕರಣದಲ್ಲಿ (ಎರಡನೇ ಅಧ್ಯಾಯದ ಎರಡನೇ ಪಾದ) ಶಂಕರರು "ಪಶುಪತಿ ಮತದವರೆಲ್ಲರೂ ಮಾಹೇಶ್ವರರು" ಎಂದಿದ್ದಾರೆ.
ಈ "ಮಾಹೇಶ್ವರ" ಪದವನ್ನು ಒಟ್ಟು ೩೫೫ ವಚನಗಳಲ್ಲಿ ೫೨೫ ಕಡೆ ೬೩ ವಚನಕಾರರು ಬಳಸಿದ್ದಾರೆ. ಸಂಖ್ಯಾಶಾಸ್ತ್ರದ + ಅಥವಾ - ಐದು ಪ್ರತಿಶತ ತಪ್ಪು ಲೆಕ್ಕಾಚಾರದ ಸೂತ್ರವನ್ನು ಅಳವಡಿಸಿಕೊಂಡರೂ ಒಟ್ಟು ಸಂಖ್ಯೆಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಅಂದರೆ ಮಾಹೇಶ್ವರರು ಶಂಕರಾಚಾರ್ಯರ ಎಂಟನೇ ಶತಮಾನದಿಂದ ಹಿಡಿದು ಮೇಲಿನ ಎಲ್ಲಾ ಆಚಾರ್ಯ ಪಂಡಿತರುಗಳ ಕಾಲದಲ್ಲಿಯೂ ಪಾಶುಪತಪಾಲಕರೇ ಆಗಿದ್ದರು ಮತ್ತವರು ವಚನಕಾರರ ಮಾಹೇಶ್ವರರೂ ವೀರಶೈವರೂ ಸಹ ಆಗಿದ್ದರು. ಹೀಗೆ ಈ ಎಲ್ಲಾ ಐತಿಹಾಸಿಕ ಆಕರಸೂಚಿಗಳು ಮಾಹೇಶ್ವರರೇ ಪಾಶುಪತವೆನ್ನುವುದನ್ನೇ "ಮಾಹೇಶ್ವರ" ಪದವನ್ನು ವೀರಶೈವ-ಲಿಂಗಾಯತ ವಚನಕಾರರು ಪ್ರಜ್ಞಾಪೂರ್ವಕವಾಗಿಯೇ ಬಳಸಿ ದೃಢೀಕರಿಸಿದ್ದಾರೆ.
***
ಪ್ರೊ. ಕಲ್ಬುರ್ಗಿಯವರ ಕೃತಿ "ಲಿಂಗಾಯತ ಸ್ವತಂತ್ರ ಧರ್ಮ"ದಲ್ಲಿನ ಕೆಲವು ಅಧ್ಯಾಯಗಳನ್ನು ಈಗ ಸತ್ಯದ ಒರೆಗೆ ಹಚ್ಚಿ ನೋಡೋಣ. ’ವೀರಶೈವ ಇತಿಹಾಸ ಮತ್ತು ಭೂಗೋಲ’ ಎಂಬ ಅಧ್ಯಾಯದಲ್ಲಿ "ಹದಿಮೂರನೇ ಶತಮಾನದ ಪಾಲ್ಕುರಿಕೆ ಸೋಮನಾಥನ ತೆಲುಗು ಭಾಷೆಯಲ್ಲಿರುವ ’ಬಸವಪುರಾಣ’ದಲ್ಲಿ ಲಿಂಗವಂತ, ವೀರಮಾಹೇಶ್ವರ ಪದಗಳಿವೆಯಾದರೂ ವೀರಶೈವ ಪದ ಕಂಡುಬರುವುದಿಲ್ಲ" ಎನ್ನುತ್ತಾ "ಬಸವಪುರಾಣವನ್ನು ಕನ್ನಡಕ್ಕೆ ಅನುವಾದಿಸಿದ ಭೀಮಕವಿಯು (ಕ್ರಿ. ಶ. ೧೩೬೮) ಕೆಲವೊಮ್ಮೆ ಅಲ್ಲಿಯ ವೀರಮಾಹೇಶ್ವರ ಪದಕ್ಕೆ ಬದಲು ಇಲ್ಲಿ ವೀರಶೈವ ಪದವನ್ನು ಬಳಸಿದ್ದಾನೆ. ಕನ್ನಡದಲ್ಲಿ ವೀರಶೈವ ಪದ ಕಂಡುಬರುವುದು ಇದೇ ಮೊದಲು. ಹಾಗಾಗಿ ವೀರಶೈವ ಪದ ಪಾಲ್ಕುರಿಕೆ ಸೋಮೇಶನ ತೆಲುಗು ಬಸವಪುರಾಣಮು ಮತ್ತು ಭೀಮಕವಿಯ ಕನ್ನಡ ಬಸವಪುರಾಣದ ಮಧ್ಯದ ಕಾಲಾವದಿಯಲ್ಲಿ ಹುಟ್ಟಿದೆಯೆಂದು ಸ್ಪಷ್ಟವಾಗಿ ಹೇಳಬಹುದು" ಎನ್ನುತ್ತಾರೆಯೇ ಹೊರತು ಇದರಲ್ಲಿ ಲಿಂಗಾಯತ ಪದವೂ ಇಲ್ಲದ್ದನ್ನು ಮಾತ್ರ ಅವರು ಹೇಳುವುದಿಲ್ಲ. ಹಾಗೆಯೇ ಮುಂದುವರಿಯುತ್ತ ಪ್ರೊ. ಕಲ್ಬುರ್ಗಿಯವರು "ಈ ಸಂದರ್ಭದಲ್ಲಿ ’ಆಂಧ್ರಪ್ರದೇಶದ ವೀರಶೈವ’ ವಿಷಯವನ್ನು ಕುರಿತ ಪಿಹೆಚ್ಡಿ ಪ್ರಬಂಧದಲ್ಲಿ ಹೇಳಲಾಗಿರುವ ’ Palakuriki Somanatha was the earliest to use word Virashaiva in Andhra. In his Chaturveda Saram, Somanatha describes lord Hari as Virashaiva, because the latter performed certain heroic deeds, such as offering his own eyes to Shiva, as a token of deep devotion. In Basava Puranam however, he appears to have give deeper meaning to Virashaiva, though the word was not actually used. (Virashaiva in Andhra, K. Lalitamba p 2)' ಅಭಿಪ್ರಾಯವನ್ನು ಅವಶ್ಯ ಗಮನಿಸಬೇಕು" ಎನ್ನುತ್ತಾರೆ.
ಆದರೆ ಈ ಮೇಲಿನ ಪಿಹೆಚ್ಡಿ ಉದಾರಹಣೆಯಲ್ಲೇ "ಪಾಲ್ಕುರಿಕಿ ಸೋಮನಾಥನು ತನ್ನ ’ಚಾತುರ್ವೇದ ಸಾರಂ’ ಕೃತಿಯಲ್ಲಿ ವೀರಶೈವ ಪದವನ್ನು ಆಂಧ್ರದಲ್ಲಿ ಪ್ರಪ್ರಥಮವಾಗಿ ಬಳಸಿದ್ದಾನೆ. ಪ್ರೊ. ಕಲ್ಬುರ್ಗಿಯವರ ಈ ಸರಳ ಉದಾಹರಣೆಯನ್ನು ಇಂಗ್ಲೀಷಿನಲ್ಲೇ ಹೆಚ್ಚು ಬರೆಯುವ ಡಾ. ಎಸ್. ಎಂ. ಜಾಮದಾರರು ತಮ್ಮ ಲೇಖನದಲ್ಲಿ ಉಲ್ಲೇಖಿಸಿರುವ ಕಾರಣ ಅವರೂ ಈ ಇಂಗ್ಲಿಷ್ ಪ್ಯಾರಾವನ್ನು ಓದಿರಲಿಲ್ಲವೇ ಎನ್ನುವಲ್ಲಿಗೆ ಲಿಂಗಾಯತ ಲಿಂಗಾಹತವಾಗುತ್ತದೆ! ಈ ಸಂಶೋಧನೆಯನ್ನು ಜಗದದ್ಭುತ ಸಂಶೋಧನೆಯಂತೆ ಬಿಂಬಿಸಿರುವ ಕಾರಣ ಇದನ್ನು ಈ ಹಿಂದೆ ಬರೆದಿದ್ದರೂ ಮತ್ತೆ ಮತ್ತೆ ಬರೆಯಬೇಕಾದ ಅನಿವಾರ್ಯತೆ ನನ್ನದು.
ಮೇಲಾಗಿ ಈ ಹಿಂದೆ ತಿಳಿಸಿದಂತೆ ಎಂಟನೇ ಶತಮಾನದ ಸ್ಕಂದ ಪುರಾಣವನ್ನು ಪುರಾಣವೆಂದು ಹೀಯಾಳಿಸಿ ಬದಿಗಿಟ್ಟರೂ ಶಾಸನಗಳಲ್ಲಿ ವೀರಶೈವ ಪದವು ಕ್ರಿ.ಶ. ೧೨೬೧ನೆಯ ಇಸವಿಯ ಮಲ್ಕಾಪುರ ಶಾಸನದಲ್ಲಿ ಕಂಡುಬಂದಿದೆ. ಇದರಲ್ಲಿ ಚೋಳಮಾಳವರಾಜರ ಗುರುವೂ, ವೀರಶೈವ ಕಾಕತೀಯರಾಜ “ಗಣಪರಿಕ್ಷ್ಮಾಪಾಲ ದೀಕ್ಷಾ ಗುರು'ವೂ “ಕಳಚುರಿಕ್ಷ್ಮಾಪಾಲದೀಕ್ಷಾಗುರು'ವೂ ಆದ ವಿಶ್ವೇಶ್ವರ ಶಿವಾಚಾರ್ಯನು “ಮಹೀಸುರ'ನೆಂದೂ ವೀರಶೈವಾಚಾರ್ಯನೆಂದೂ ಉಲ್ಲೇಖನಾಗಿದ್ದಾನೆ.
ಪ್ರೊ. ಕಲ್ಬುರ್ಗಿಯವರು ಈ ಕೃತಿಯಲ್ಲಿ, 'ತಮ್ಮ ಲಿಂಗಾಯತ ಸಿದ್ಧಾಂತಕ್ಕೆ ವಿರುದ್ಧವಾಗಿ ಪ್ರಜಾವಾಣಿಯಲ್ಲಿ ಲೇಖನ ಬರೆದವರೆಲ್ಲರೂ ಜಂಗಮರೇ ಆಗಿದ್ದಾರೆ' ಎಂದಿದ್ದಾರೆ. ಹಾಗಾಗಿ ಪ್ರೊ.ಚಿದಾನಂದಮೂರ್ತಿಯವರನ್ನು ಬಿಟ್ಟು ವಚನಗಳನ್ನು ಸಮಗ್ರವಾಗಿ ಸಂಪಾದಿಸಿರುವ ಸಂಶೋಧಕ ಎಲ್. ಬಸವರಾಜುರವರ ಕೃತಿಗಳಲ್ಲಿನ ಅಭಿಪ್ರಾಯವನ್ನು ಗಮನಿಸೋಣ. ಎಲ್. ಬಸವರಾಜುರವರು ತಮ್ಮ "ಅಲ್ಲಮನ ವಚನ ಚಂದ್ರಿಕೆ" ಕೃತಿಯಲ್ಲಿ (ಪುಟ ೪೨,೪೩,೪೪,೪೫) ಅಲ್ಲಮನು ವೀರಶೈವದ ಯೋಗಾಚಾರ್ಯಗಣದವನೆನ್ನುತ್ತ ಭಕ್ತನಾದ ಬಸವನೂ, ಜಂಗಮನಾದ ಪ್ರಭುವೂ ಜೊತೆಜೊತೆಯಾಗಿ ಜನ್ಮವೆತ್ತಿರುವರೆಂಬ ಶಿವತತ್ವ ಚಿಂತಾಮಣಿಯ ಉಲ್ಲೇಖ ಮಾಡುತ್ತಾರೆ. ಬಸವೇಶ್ವರನು ತನ್ನ ಪ್ರಭಾವಕ್ಕೊಳಗಾದ ಜನರಲ್ಲಿ ಭಕ್ತಿಯನ್ನು ಅರಳಿಸುವ ಜ್ಯೋತಿಸ್ವರೂಪದ ಮೂಲ ವಿಗ್ರಹವಾದರೆ, ಅಲ್ಲಮಪ್ರಭುದೇವನು ಆ ಭಕ್ತಿಗೆ ಪೂರಕವಾದ "ಜ್ಞಾನ"ದ ಜಂಗಮಸ್ವರೂಪಿ ಉತ್ಸವಮೂರ್ತಿಯಾಗಿದ್ದನು. ಅವನು ಸಾಧಿಸಿದ ಸಿದ್ಧಿ ಮತ್ತು ಉಪದೇಶಿಸಿದ ಪರಮಾರ್ಥವು ನಿರ್ವಾಣ ಅಥವಾ ಬಯಲು. ಅದನ್ನು ಸಾಕ್ಷ್ಯಾತ್ಕಾರ ಮಾಡಿಕೊಳ್ಳಲು ಹೇಳಿದ ಮಾರ್ಗ "ಯೋಗ."
ಇಲ್ಲಿ ಜ್ಞಾನ ಎಂದರೆ ಪಾಶುಪತವ್ರತ ಎಂದು ಎಲ್. ಬಸವರಾಜು (ಪುಟ ೪೨) ವಿವರಿಸಿದ್ದಾರೆ. ಹೀಗೆ ಲಿಂಗಾಯತದ ಬಸವಗುರು ಅಲ್ಲಮನ ತತ್ವಗಳು ಮೂಲವಾಗಿ ಪಾಶುಪತವೃತವೇ ಆಗಿರುವಾಗ ಪ್ರೊ. ಎಂ.ಎಂ. ಕಲ್ಬುರ್ಗಿಯವರು ಅಲ್ಲಮನನ್ನು ನೇರವಾಗಿ ಏಕೆ ನಿರಾಕರಿಸಲಿಲ್ಲ? ಇಂತಹ ಸಾಕಷ್ಟು ತಾರ್ಕಿಕ ಸಂಶೋಧನೆಗಳು ಕಲ್ಬುರ್ಗಿಯವರ ವಾದವನ್ನು ಮೇಲ್ಪದರದಲ್ಲೇ ಛಿದ್ರಿಸಿಬಿಡುತ್ತವೆ. ಪ್ರೊ. ಕಲ್ಬುರ್ಗಿಯವರ ಸಂಕಥನಗಳ ಕೃತಿಗಳನ್ನು ಓದಿದಾಗ ಅವರು ಭಿನ್ನಾಭಿಪ್ರಾಯದ ಅಂಶಗಳಿಗೆ ಪೂರಕ ಸಂಶೋಧನಾತ್ಮಕ ಪರಿಭಾಷೆಯಲ್ಲಿ ಉತ್ತರಿಸಲಾಗದೆ ಉಡಾಫೆಯ ಸಂಕಥನಗಳ ಮೊರೆಹೋಗಿದ್ದರೆನಿಸುತ್ತದೆ. ಲಿಂಗಾಯತ ಸ್ವತಂತ್ರ ಧರ್ಮವಾಗಿದ್ದು ಪಾಶುಪತ ಕಾಳಾಮುಖ, ರೇಣುಕರ ತತ್ವ, ಆಚರಣೆಗಳಿಗೆ ಎಳ್ಳಷ್ಟೂ ಸಾಮ್ಯವಿಲ್ಲ ಎನ್ನುವ ಪ್ರೊ. ಕಲ್ಬುರ್ಗಿಯವರು ಅರಿಯಬೇಕಾದುದು ಪಾಶುಪತ/ಕಾಳಾಮುಖದ ತತ್ವಗಳಾದ ಕಾರ್ಯ, ಕಾರಣ, ಯೋಗ, ವಿಧಿ, ದುಃಖಾಂತರಗಳೇ ಕಾಯಕ, ಕಾರಣ್ಯ, ಶಿವಯೋಗ, ಆಚಾರ/ದಾಸೋಹ, ಲಿಂಗೈಕ್ಯ ಎಂದು ರೂಪಾಂತರಗೊಂಡು ಸರಳೀಕರಿಸಿದ ಅಲ್ಲಮನ ಜ್ಞಾನ ಬಸವನ ಭಕ್ತಿಯಾಗಿತ್ತು ಎಂಬಲ್ಲಿಗೆ ತಾತ್ವಿಕವಾಗಿ ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ವಾದ ರದ್ದಾಗುತ್ತದೆ. ***
ಪ್ರೊ. ಕಲಬುರ್ಗಿಯವರ ಇನ್ನೊಂದು ಅಧ್ಯಾಯ, "ಜಗದಾಚಾರ್ಯರದು ಜಾತಿಭೇದ ಸಿದ್ದಾಂತ ಪಂಚಾಚಾರ್ಯರ ನಿಜಸ್ವರೂಪ"ದಲ್ಲಿ "'ಕುಲವನರಸುವರೆ ಶರಣರಲ್ಲಿ, ಜಾತಿ ಸಂಕರವಾದ ಬಳಿಕ?' ಎಂಬ ಶರಣ ಸಿದ್ಧಾಂತಕ್ಕೆ ವಿರುದ್ಧವಾದುದಾಗಿದೆ, ಜಗದಾಚಾರ್ಯ ಸಿದ್ಧಾಂತ. ಇವರು ಆಗಮಿಕ ಪರಂಪರೆಯವರಾಗಿದ್ದರೂ ಬ್ರಾಹ್ಮಣರೇ ಆಗಿರುವದರಿಂದ ಇವರಲ್ಲಿ ವರ್ಣಭೇದ ವ್ಯವಸ್ಥೆ ಸಹಜವಾಗಿದೆ. ಈ ಬ್ರಾಹ್ಮಣರ ಜಾತಿಭೇದ ಆಚರಣೆಗೆ ಲಿಂಗಸಗೂರು ತಾಲೂಕಿನ ಕರಡಿಕಲ್ಲು ಗ್ರಾಮದ ಎರಡು ಶಾಸನಗಳು (ರಾಯಚೂರು ಜಿಲ್ಲೆ ಶಾಸನಗಳು- ಲಿಂಗಸೂಗೂರು ೪ ಮತ್ತು ೬) ಸಾಕ್ಷಿಯಾಗಿವೆ. ಇವು ಹನ್ನೊಂದನೇ ಶತಮಾನದ ಉತ್ತರಾರ್ಧದ ಅಂದರೆ ಬಸವಣ್ಣನಿಗೆ ಕೆಲವೇ ವರ್ಷ ಪೂರ್ವದ ಶಾಸನಗಳಾಗಿವೆ. ಇಲ್ಲಿಯ ತತ್ಪುರುಷಶಿವ, ಸೂಕ್ಷ್ಮಶಿವ, ಮೈಮಶಿವ ಹೆಸರುಗಳ ಮುಂದೆ 'ಶಿವ ಅಂದರೆ ಶಿವಾಚಾರ್ಯ ಪ್ರತ್ಯಯವಿರುವುದರಿಂದ ಇವರು ಇಂದಿನ ಪಂಚಾಚಾರ್ಯ ಪರಂಪರೆಯ ಪೂರ್ವಜರೆಂದು ಸ್ಪಷ್ಟವಾಗುತ್ತದೆ. ಈ ಶಾಸನದಲ್ಲಿ ಸೂಕ್ಷ್ಮಶಿವ (ಸೂಕ್ಷ್ಮಶಿವಾಚಾರ್ಯ)ನು ಅಂತ್ಯಜಾತಿ ಯಾರಾದೊಡವಂಗಡಿ ಬೀದಿಯೊಳಗೆ ಮದುವೆಯಲು ಬಂಡಿಯನೇರಿ ಬರಸಲ್ಲದು. ಬಂದನಪ್ಪಡೆ ಪನ್ನೆರಡು ಗದ್ಯಾಣ ಪೊನ್ನಂ ದಂಡವಂ ತಿ(ತೆ)ರುವರಂತಪ್ಪುದಕೆ ಶ್ರೀ ಬಲ್ಲವರಸರಾಣೆ, ಶ್ರೀಮದ್ರಾಜಗುರುದೇವರಾಣೆ' ಎಂದು ಆಜ್ಞೆ ಹೊರಡಿಸಿರುವನು. ಅಸ್ಪೃಶ್ಯರು ಮದುವೆ ಮೆರವಣಿಗೆ ಬಂಡಿಯನ್ನು ಗ್ರಾಮದ ಅಂಗಡಿ ಬೀದಿಯಲ್ಲಿ ತರಕೂಡದು. ತಂದರೆ ಹನ್ನೆರಡು ಗದ್ಯಾಣ ದಂಡ ನೀಡಬೇಕೆಂಬುದು ಇಲ್ಲಿಯ ಅಭಿಪ್ರಾಯ. ಇದನ್ನು ನೋಡಿದರೆ ಈ ಶಿವಾಚಾರ್ಯರದು (ಇದರ ಮುಂದುವರಿದ ರೂಪವಾಗಿರುವ ಇಂದಿನ ಪಂಚಾಚಾರ್ಯರದು) ಅಂದರೆ ಇಂದಿನ ವೀರಶೈವಜಂಗಮರದು ಮೂಲತಃ ಜಾತಿಬೇಧ ಪಾಲಿಸುವ ಬ್ರಾಹ್ಮಣಧರ್ಮವೆಂದು ಸ್ಪಷ್ಟವಾಗುತ್ತದೆ" ಎನ್ನುತ್ತಾರೆ. ಇಲ್ಲಿ ಪಂಚಾಚಾರ್ಯರನ್ನು ವರ್ಣಭೇದಿಗರು ಎಂದು ಆರೋಪಿಸುವ ಭರದಲ್ಲಿ ಬಸವಪೂರ್ವದಲ್ಲಿ ಇವರಿರಲೇ ಇಲ್ಲ ಎಂಬ ತಮ್ಮ ವಾದವನ್ನು ತಾವೇ "ಬಸವಪೂರ್ವದ ಲಿಂಗಸೂಗೂರು ತಾಲೂಕಿನ ಕರಡಿಕಲ್ಲು ಗ್ರಾಮದ ಎರಡು ಶಾಸನ"ಗಳು ಪಂಚಾಚಾರ್ಯರು ಬಸವಪೂರ್ವದಲ್ಲಿ ಇದ್ದರೆಂದು ಆಧಾರ ಕೊಟ್ಟು ಸುಳ್ಳು ಮಾಡಿಬಿಟ್ಟಿದ್ದಾರೆ.
ಅಂದ ಹಾಗೆ ಇವರು ಉಲ್ಲೇಖಿಸಿದ "ಕುಲನರಸುವರೆ ಶರಣರಲ್ಲಿ ಜಾತಿಸಂಕರವಾದ ಬಳಿಕ" ವಚನದ ಸಿದ್ಧಾಂತ ಶಿಖಾಮಣಿಯ ಮೂಲ ಶ್ಲೋಕ ಹೀಗಿದೆ, "ಬ್ರಾಹ್ಮಣಃ ಕ್ಷತ್ರಿಯೋ ವಾಪಿ ವೈಶ್ಯೋ ವಾ ಶೂದ್ರ ಏವ ವಾ
ಅಂತ್ಯಜೋ ವಾ ಶಿವಭಕ್ತಃ ಶಿವವನ್ಮಾನ್ಮ ಏವ ಸಃ।
ಶಿವಭಕ್ತಿ ಸಮಾವೇಶೇ ಕ್ವಜಾತಿ ಪರಿಕಲ್ಪನಾ
ಇಂಧನೇಶ್ವಗ್ನಿ ದಗ್ಧೇಷು ಕೋ ವಾ ಭೇದಃ ಪ್ರಕೀರ್ತ್ಯತೇ॥"
ವಚನದ ಪೂರ್ಣಪಾಠ: "ಆವ ಕುಲದವನಾದರೇನು? ಶಿವಲಿಂಗವಿದ್ದವನೆ ಕುಲಜನು;
ಕುಲನರಸುವರೆ ಶರಣರಲ್ಲಿ ಜಾತಿಸಂಕರವಾದ ಬಳಿಕ?
ಶಿವಜಾತ ಕುಲೇ ಧರ್ಮಃ ಪೂರ್ವಜನ್ಮ ವಿವರ್ಜಿತಃ
ಉಮಾ ಮಾತಾ ಪಿತಾ ರುದ್ರೋ ಈಶ್ವರಃ ಕುಲಮೇವಚ
ಎಂದುದಾಗಿ ಒಕ್ಕುದ ಕೊಂಬೆನವರಲ್ಲಿ, ಕೂಸ ಕೊಡುವೆ
ಕೂಡಲಸಂಗಮದೇವಾ, ನಂಬುವೆ ನಿಮ್ಮ ಶರಣರನ್ನು."
ಚಿದಾನಂದ ಮೂರ್ತಿ ಆಯ್ಯ, ಆರ್.ಸಿ. ಹಿರೇಮಠ ಜಂಗಮ, ಶಂಬಾ ಜೋಶಿ ಬ್ರಾಹ್ಮಣ ಹಾಗಾಗಿ ಅವರ ಸಂಶೋಧನೆ ಹೀಗೆ ಎಂದು 'ಕುಲವನರಸುವ' ಇವರ ಪರಿಯಂತೂ ಇವರ ಶಿಷ್ಯಗಣಕ್ಕೆ ಮೇಲ್ಪಂಕ್ತಿಯಾಗಿದೆ ಎಂಬುದು ಮತ್ತೊಂದು ತೌಲನಿಕ ಅಧ್ಯಯನದ ವಿಷಯ ಎಂಬಲ್ಲಿಗೆ ಲಿಂಗಿಜಂಗಮ ಲಿಂಗಾಯತದಿಂದ ಹೊರಗು ಎನ್ನುವ ವಾದ ರದ್ದಾಗುತ್ತದೆ.
***
ಅಧ್ಯಾಯ 'ಜಗದ್ಗುರು-ಜಗದಾಚಾರ್ಯ'ದಲ್ಲಿ "ನಮ್ಮಲ್ಲಿ 'ಗುರು' ಮತ್ತು 'ಆಚಾರ್ಯ'ವೆಂಬ ಎರಡು ವಿಭಿನ್ನ ತಾತ್ವಿಕ ಪರಂಪರೆಗಳು ಬೆಳೆದು ಬಂದಿವೆ. ಇವುಗಳಲ್ಲಿ ಒಂದು 'ಅನುಭಾವ'ದ ನಿರ್ದೇಶನದಲ್ಲಿ, ಇನ್ನೊಂದು 'ಶಾಸ್ತ್ರ'ದ ನಿಯಂತ್ರಣದಲ್ಲಿ ಮುನ್ನಡೆಯುತ್ತವೆ. ಹೀಗಿದ್ದೂ ಇಂದು ಈ ಎರಡೂ ಪರಂಪರೆಗಳಿಗೆ 'ಜಗದ್ಗುರು' ಎಂಬ ಒಂದೇ ಪದವನ್ನು ಬಳಸುತ್ತಲಿರುವುದು ಎಷ್ಟರ ಮಟ್ಟಿಗೆ ಸರಿ? ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಗುರು ಪರಂಪರೆಯವರ 'ಗುರು' ಶಬ್ದವನ್ನು ಆಚಾರ್ಯ ಪರಂಪರೆಯವರು ಸೆಳೆದುಕೊಂಡು, ಅವರಿಗೆ 'ವಿರಕ್ತವೆಂಬ ಹೊಸ ಶಬ್ದವನ್ನು ಪ್ರಚುರಗೊಳಿಸಿದ್ದಾರೆ. ಇದರಿಂದಾಗಿ, ಆಚಾರ್ಯ ಪರಂಪರೆಯವರಿಗೆ ಇಂದು ಬಳಸಲಾಗುತ್ತಿರುವ 'ಜಗದ್ಗುರು ಪಂಚಾಚಾರ್ಯ' ಎಂಬ ಪ್ರಯೋಗದಲ್ಲಿ ಭಕ್ತಿಮಾರ್ಗ ಸೂಚಿಸುವ ಗುರು ಮತ್ತು ಕರ್ಮಮಾರ್ಗ ಸೂಚಿಸುವ ಆಚಾರ್ಯವೆಂಬ ಎರಡು ಭಿನ್ನತತ್ವಗಳು ಸೇರಿಕೊಂಡ ವೈರುಧ್ಯದೋಷ ಘಟಿಸಿದೆ. ಹುಬ್ಬಳ್ಳಿಯಲ್ಲಿ ಜರುಗಿದ ಕೋರ್ಟ ವ್ಯಾಜ್ಯವೊಂದರಲ್ಲಿ ಸುಪ್ರಸಿದ್ಧ ವಕೀಲರಾಗಿದ್ದ ಶ್ರೀ ಸಿದ್ಧರಾಮಪ್ಪ ಪಾವಟೆಯವರು ಪಂಚಾಚಾರ್ಯರಿಗೆ ಜಗದ್ಗುರು ವಿಶೇಷಣ ಬಳಸಬಾರದೆಂದು ವಾದಿಸಿದುದನ್ನು ಇಲ್ಲಿ ಸ್ಮರಿಸಬಹುದು" ಎನ್ನುತ್ತಾರೆ.
ಮೊದಲನೆಯದಾಗಿ ಗುರು ಮತ್ತು ಆಚಾರ್ಯ ಎರಡೂ ಸಂಸ್ಕೃತ ಮೂಲದ ಪದಗಳು. ಒಂದು ಗ್ರಾಂಥಿಕ ಎನಿಸಿದರೆ ಇನ್ನೊಂದು ಮೌಖಿಕ ಪದ. ವೀರಶೈವರು ಜ್ಞಾನಯಜ್ಞ ಮತ್ತು ಕರ್ಮಯಜ್ಞನಿರತರು. ಇಲ್ಲಿ ಕರ್ಮ ಎಂದರೆ ಕಾಯಕ, ಕರ್ಮಸಿದ್ಧಾಂತವಲ್ಲ. ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಬಂಗಾರದ ಪದಕ ಪಡೆದ ಪಂಡಿತರು ಭಾಷಾವಿಕಾಸವನ್ನು ಏಕೆ ಮರೆತರು? ಕರ್ಮ ಎಂಬುದನ್ನು ಕಾಯಕ ಎಂದು ಪರಿಗಣಿಸದೆ ಕರ್ಮಸಿದ್ಧಾಂತ ಎಂದು ಎಲ್ಲೆಲ್ಲಿಗೋ ತಮ್ಮ "ನಾಥ ಸಿದ್ದಾಂತ" ಸಂಶೋಧನೆಯನ್ನು ಏಕೆ ಕೊಂಡೊಯ್ದರು? ಒಂದೊಮ್ಮೆ ಬೆಂಗಳೂರಿನಲ್ಲಿ 'ಏನಲೋ ಬಾರಲೋ' ಎನ್ನುತ್ತಿದ್ದ ಜನರು ನಂತರ ಫ್ಯಾಶನ್ನಿಗೆ ತಕ್ಕಂತೆ 'ಏನಮ್ಮಾ ಬಾರಮ್ಮಾ' ಎನ್ನುವುದನ್ನು 'ಬೆಂಗಳೂರಿಗರು ಸಾಮೂಹಿಕ ಲಿಂಗಪರಿವರ್ತನೆಗೆ ಒಳಗಾಗಿದ್ದರು' ಎನ್ನುವ ಸಂಶೋಧನೆ ಮಂಡಿಸುವುದು ಎಷ್ಟು ಮೂರ್ಖತನವೋ ಅಷ್ಟೇ ಬಾಲಿಶ ಇವರ ಲಿಂಗಾಯತ ಪ್ರತ್ಯೇಕ ಧರ್ಮ ಎನ್ನುವ ಸಂಶೋಧನೆಗಳು!!! ಇನ್ನು ಹುಬ್ಬಳ್ಳಿ ಕೋರ್ಟ್ ವ್ಯಾಜ್ಯದಲ್ಲಿ ಸಿದ್ದರಾಮಪ್ಪ ಪಾವಟೆ ಏನೇ ವಾದಿಸಿದ್ದರೂ ಅದು ಸೋತುಹೋದ ಕಾರಣ ಜಗದ್ಗುರು ವಿಶೇಷಣ ಇಂದಿನ ವರ್ತಮಾನದಲ್ಲಿ ಜಾರಿ ಇದೆ ಎನ್ನುವುದಷ್ಟೇ ಸತ್ಯ.
ತಮ್ಮ ವಾದವನ್ನು ಮುಂದುವರಿಸುತ್ತಾ ಕಲಬುರ್ಗಿಯವರು, "ಪ್ರಾಚೀನ ಕಾಲದಲ್ಲಿ ಪಂಚಾಚಾರ್ಯರಿಗೆ ಮೊದಮೊದಲು 'ಜಗದಾರಾಧ್ಯ 'ಜಗದಾಚಾರ್ಯ' ಪದಗಳನ್ನು ಬಳಸುತ್ತಲಿದ್ದ ಉದಾಹರಣೆಗಳು ಪಂ. ಕಾಶೀನಾಥಶಾಸ್ತ್ರಿಗಳ 'ಪಂಚಾಚಾರ್ಯಪ್ರಭಾ' ಪತ್ರಿಕೆ ಮತ್ತು ಅವರ ಪುಸ್ತಕಗಳಲ್ಲಿ ಸಿಗುತ್ತವೆ, ಆದರೆ ಯಾವುದೋ ಕಾಲಘಟ್ಟದಲ್ಲಿ ಇವರಿಗೆ 'ಜಗದ್ಗುರು ವಿಶೇಷಣವನ್ನು ಬಳಸತೊಡಗಿದರು. ಆದುದರಿಂದ, ಇನ್ನು ಮೇಲೆ ತಾತ್ವಿಕ ದೃಷ್ಟಿಯಿಂದ ವಿರಕ್ತರಿಗೆ ಜಗದ್ಗುರು'ಗಳೆಂದೂ ಆಚಾರ್ಯರಿಗೆ 'ಜಗದಾಚಾರ್ಯ'ರೆಂದೂ ಕಟ್ಟುನಿಟ್ಟಾಗಿ ಬಳಸುವುದು ಅವಶ್ಯವಿದೆ" ಎಂದು ಆಜ್ಞೆ ಮಾಡಿರುವ ಇವರ ಆಜ್ಞೆಯನ್ನು ಯಾರು ಪಾಲಿಸಬೇಕು? ಅಂದ ಹಾಗೆ ಅಲ್ಲಮ ತನ್ನ ಒಂದೆರಡು ವಚನಗಳಲ್ಲಿ ಜಗದಾರಾಧ್ಯ ಎಂದು ಬಳಸಿದ್ದಾನೆ. ಅವು ಹೀಗಿವೆ:
ಹಸಿವಿಲ್ಲದೆ ಉಣಬಲ್ಲಡೆ, ಉಪಾಧಿಯಿಲ್ಲದೆ ಬೇಡಬಲ್ಲಡೆ,
ಅದು ವರ್ಮ, ಅದು ಸಂಬಂಧ.
ಗಮನವಿಲ್ಲದೆ ಸುಳಿಯಬಲ್ಲಡೆ, ನಿರ್ಗಮನಿಯಾಗಿ ನಿಲಬಲ್ಲಡೆ
ಅದು ವರ್ಮ, ಅದು ಸಂಬಂಧ.
ಅವರ ನಡೆ ಪಾವನ, ಅವರ ನುಡಿ ತತ್ವ,
ಅವರು(ರ?) "ಜಗದಾರಾಧ್ಯ"ರೆಂಬೆ ಗುಹೇಶ್ವರಾ.
ಸುಳಿಯ ಬಲ್ಲಡೆ ಸುಳುಹೆ ಲೇಸಯ್ಯಾ.
ಗಮನವಿಲ್ಲದೆ ಸುಳಿಯ ಬಲ್ಲಡೆ, ನಿರ್ಗಮನಿಯಾಗಿ ನಿಲ್ಲಬಲ್ಲಡೆ,
ಅದಕ್ಕದೆ ಪರಿಣಾಮ ಅದಕ್ಕದೆ ಸಂತೋಷ.
ಗುಹೇಶ್ವರಲಿಂಗದಲ್ಲಿ ಅವರ "ಜಗದಾರಾಧ್ಯ"ರೆಂಬೆ.
ಮಾನ್ಯ ಕಲ್ಬುರ್ಗಿಯವರು ಜಗದಾರಾಧ್ಯ ಎಂಬುದು ಪಂಚಾಚಾರ್ಯರ ಕುರಿತು ಎಂದು ಆಜ್ಞೆ ಹೊರಡಿಸಿದ ಕಾರಣ ಪಂಚಾಚಾರ್ಯರು ಅಲ್ಲಮನ ಕಾಲದಲ್ಲಿಯೂ ಇದ್ದರು ಎಂದಾಯಿತಲ್ಲವೇ?!? ಇದು ಪ್ರೊಫೆಸರರ ದ್ವಂದ್ವ, ಗೊಂದಲ, ಕಲಸುಮೇಲೋಗರ, ಜನಾಂಗೀಯ ದ್ವೇಷ! ತಟಸ್ಥ ನಿಲುವಿರದ ಸಂಶೋಧಕನಲ್ಲಿ ದ್ವೇಷ, ಅಹಂ ತುಂಬಿಕೊಂಡಾಗ ಸಂಶೋಧನೆಗಳು ಹೇಗೆ ತಾಳ ತಪ್ಪಿ ಅವರ ಹಿಂದಿನ ಪುಟವು ಮುಂದಿನ ಪುಟದಲ್ಲೇ ತಪ್ಪೆಂದು ರದ್ದಾಗುತ್ತದೆ ಎನ್ನುವುದಕ್ಕೆ ಇವರ ಕೃತಿಗಳು ಸಾಕ್ಷಿಭೂತವಾಗಿವೆ ಎಂಬಲ್ಲಿಗೆ ಪಂಚಾಚಾರ್ಯ ಬೇರೆ ಎಂಬ ವಾದ ರದ್ದಾಗುತ್ತದೆ.
***
ಇದೇ ರೀತಿ ಕಲ್ಬುರ್ಗಿಯವರು ಚೆನ್ನಬಸವಣ್ಣನ ಹುಟ್ಟಿನ ಕುರಿತಾದ ತಮ್ಮ ಸಂಕಥನಕ್ಕೆ ಡೋಹರ ಕಕ್ಕಯ್ಯನಿಗೆ ಮಲ್ಲಿದೇವಿ ಎಂಬ ಮಡದಿಯಿದ್ದಳು ಎಂಬುದು ತಾಳೆಯಾಗದ ಕಾರಣ ಮಲ್ಲಿದೇವಿ ಎನ್ನುವ "ಸುಧಾರಿಸಿದ" ಹೆಸರನ್ನು ನಂಬುವುದು ಕಷ್ಟ ಎಂದು ವಾದಿಸಿದ್ದರು. ಮಲ್ಲಿನಾಥ, ಮಲ್ಲಿಕಾರ್ಜುನ, ಮಲ್ಲಯ್ಯ, ದೇವಿ ಎಂಬ ಮಾಯಿದೇವಿ ಹೆಸರುಗಳನ್ನು ವಚನಕಾರರೇ ಬಳಸಿರುವಾಗ ಮತ್ತು 'ಮಲ್ಲಿನಾಥ ಪುರಾಣ'ವನ್ನು ಸ್ವತಃ ತಾವೇ ಸಂಪಾದಿಸಿರುವಾಗ ಮಲ್ಲಿದೇವಿ ಎಂಬುದು ಹೇಗೆ ಸುಧಾರಿತ ಎನಿಸುತ್ತದೆ ಎಂಬ ವಿವರಣೆಯನ್ನು ಎಲ್ಲಿಯೂ ಕೊಟ್ಟಿಲ್ಲ. ಈ ಕುರಿತಾಗಿ 'ಕಲಬುರ್ಗಿಯವರಿಗೆ ತಿಳಿಹೇಳಿದ ಮೇಲೂ ತಿದ್ದಿಕೊಳ್ಳದಿರುವುದು ಅಪರಾಧವಾಗುವುದು' ಎಂದು ಎಲ್. ಬಸವರಾಜುರವರು ಹೇಳಿದ್ದಾರೆ ಎಂಬಲ್ಲಿಗೆ ಕನ್ನಡ ನಾಮೋತ್ಪತ್ತಿ ವಾದ ರದ್ದಾಗುತ್ತದೆ.
ಇನ್ನು ಸಂಶೋಧನಾ ನೆಲೆಯಲ್ಲಿ ಏನೇ ತಿಪ್ಪರಲಾಗ ಹಾಕಿದರೂ ಹನ್ನೆರಡನೇ ಶತಮಾನದ ಶರಣರ ಚರ್ಚೆಯ ದಾಖಲೆಯ ಯಾವುದೇ ವಚನಗಳ ದಾಖಲಾತಿಯ ಒಂದೇ ಒಂದು ಮೂಲ ಓಲೆಗರಿ ಈವರೆಗೆ ಸಿಕ್ಕಿಲ್ಲ. ಸಿಕ್ಕಿರುವ ವಚನಗಳ ಓಲೆಗರಿಯ ಪ್ರತಿಗಳೆಲ್ಲವೂ ಹದಿನೈದನೇ ಶತಮಾನದ ಅಂತ್ಯ (ಕ್ರಿಸ್ತಶಕ ೧೪೮೦) ದಿಂದೀಚಿಗೆ ಬರೆದವುಗಳೇ ಹೊರತು ಅದಕ್ಕಿಂತ ಹಳೆಯವಲ್ಲ. ಕೇವಲ ಪೌರಾಣಿಕ, ಸೃಜನಶೀಲ ಸಂಕಥನಗಳ ಆಧಾರದ ಮೇಲೆ ಇಂತಹ ವ್ಯಕ್ತಿಗಳಿದ್ದರು ಎಂದುಕೊಂಡರೂ ಅವರ ಚರ್ಚೆಯ ವಾಚ್ಯ ಸೂಚಕಗಳನ್ನು ವಚನಗಳೆಂದು ಕರೆದ ದಾಖಲೆ ಹದಿನೈದನೇ ಶತಮಾನಕ್ಕೂ ಮುನ್ನ ಇಲ್ಲ. ಇರುವ ದಾಖಲೆಗಳೆಲ್ಲವೂ ಕಾಳಾಮುಖ ವೀರಶೈವ ಮಾತ್ರ. ಹಾಗಾಗಿ ಸಂಶೋಧನಾ ಪಿತಾಮಹರು ಏನೇ ತಿರುತಿರುಚಿ ವಾದ ಮಂಡಿಸಿದರೂ ಲಿಂಗಾಯತ ಪ್ರತ್ಯೇಕಧರ್ಮ ಎಂಬುದು ಮರುಮರುಗಿ ರದ್ದಾಗುತ್ತದೆ.
ಅಂದ ಹಾಗೆ "ಸಂಶೋಧನೆ ಎನ್ನುವುದು ಸತ್ಯವನ್ನು ಶೋಧಿಸಲು ಮಾಡಿಕೊಂಡ ಪ್ರತಿಜ್ಞೆ" ಎನ್ನುವುದು ಪ್ರೊ. ಎಂ ಎಂ ಕಲ್ಬುರ್ಗಿಯವರ ಉದ್ಘೋಷ! ಅದನ್ನು ನಾನು ಮಾತ್ರ ನಿಷ್ಠವಾಗಿ ಪಾಲಿಸುತ್ತಿರುವೆನೆಂದು 'ಲಿಂಗಾಂಗಸಾಮರಸ್ಯಾರೂಢ'ನಾಗಿ ಪ್ರಾಮಾಣಿಸುತ್ತೇನೆ.
***
ಥಾಯ್ಲೆಂಡಿನಲ್ಲಿ ಬಸವಣ್ಣ!
ಲಿಂಗಾಯತ ಧರ್ಮದ ಅಧಿಕೃತ ಅಂತರ್ಜಾಲ ತಾಣದಲ್ಲಿ ಮೊದಲ ಸಾಲಿನ ಸಂಸ್ಕೃತಿ ಚಿಂತಕರಾದ ಪ್ರೊ. ಕಲ್ಬುರ್ಗಿ, ಡಾ. ಎಸ್. ಎಂ. ಜಮಾದಾರ, ರಂಜಾನ್ ದರ್ಗಾ ನಂತರದ ಸಾಲಿನ ಶರಣ ಜಿ.ಬಿ. ಪಾಟೀಲ್ (ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ) ಎನ್ನುವವರ ಅನುಭಾವದ ಸಂಕಥನವೊಂದನ್ನು ಹೀಗೆ ಪ್ರಕಟಿಸಲಾಗಿದೆ. "ಸಂಗಮವರಿ (Marble) ಕಲ್ಲಿನಲ್ಲಿ ಕೆತ್ತಿದ ಅಷ್ಟೇನೂ ಆಕರ್ಷಣೆ ಇಲ್ಲದ ಎರಡು ಮೂರ್ತಿಗಳನ್ನು ಒಂದು ಚಿಕ್ಕ ದೇವಸ್ಥಾನದಲ್ಲಿ ಕಂಡೆ. ಒಂದು ಮೂರ್ತಿಯು ಅಂಗೈಯಲ್ಲಿ ಲಿಂಗ ಹಿಡಿದು ಪೂಜಿಸುವದು ಎರಡನೇಯ ಮೂರ್ತಿಯ ಎದುರಿನಲ್ಲಿ ಸ್ಥಾವರಲಿಂಗ. ವೀರಭದ್ರನ ಮೂರ್ತಿಯ ಆಕಾರದ ಚಿಕ್ಕ ಚಿಕ್ಕ ಮೂರ್ತಿಗಳು. ನಾನು ಒಂದು ಕ್ಷಣ ದಂಗಾದೆ. ತಲೆಯಲ್ಲಿ ಸಾವಿರ ಬಲ್ಬ ಒಮ್ಮೆಲೆ ಹತ್ತಿಕೊಂಡಂತೆ. ನಾನು ನೋಡುತ್ತಿರುವದು ಇಷ್ಟಲಿಂಗ ಪೂಜಾಧಾರಿಯ ಶರಣನದು. ಅದು ಬಸವಣ್ಣನವರದೂ ಆಗಿರಬಹುದು ಅಥವಾ ಯಾವದೋ ಶರಣರದಿರಬಹುದು. ಇಂದಿನವರೆಗೂ ನಾವು ಬಸವಣ್ಣನವರ ವ್ಯಾಪ್ತಿಯು (ಪ್ರಚಾರವು) ಅಫಘಾನಿಸ್ಥಾನದವರೆಗೆ ಹರಡಿತ್ತೆಂದು ಕೊಂಡಿದ್ದೆವು. ದೂರದ ಕಾಶ್ಮೀರ ದೊರೆಯು ವಚನಕಾರನಾಗಿದ್ದನ್ನು ಕಂಡಿದ್ದೇವೆ, ಆದರೆ ದೂರದ ಥೈಲ್ಯಾಂಡಿನಲ್ಲಿ ಬಸವಣ್ಣ !!!.ಅದ್ಬುತ!!, ಅಚ್ಚರಿ!. ನಡೆಯುವವನಿಗೆ ನಿಧಿಯನ್ನು ಎಡವಿದಂತೆ. ಕೈಲಿರುವ ಮೊಬೈಲನಲ್ಲಿ ಫೊಟೊ ತೆಗೆದೆ. ಸುತ್ತಲು ಕಣ್ಣಾಡಿಸಿದೆ. ಹೆಚ್ಚಿನ ಕುರುಹುಗಳನ್ನು ಸುತ್ತಲೂ ಹುಡುಕಲು ಪ್ರಾರಂಭಿಸಿದೆ. ನನ್ನ ದೃಷ್ಟಿ ರಸ್ತೆಯ ಅಚೆ ಬದಿಯಲ್ಲಿ ಹರಿಯಿತು ಅಲ್ಲೊಂದು ರಿಸಾರ್ಟ. ಅದರ ಹೆಸರು ಬಸಯಾ ಬಸವನ ವಿರೂಪಗೊಂಡ ಹೆಸರು, ಮತ್ತೊಂದು ನಿಧಿ!!! ಥಾಯಲ್ಯಾಂಡಿನಲ್ಲಿ ಬಸವ..." ಹೀಗೆ ಪಾಟೀಲರ ಉದ್ವೇಗದ ಲೇಖನ ಸಾಗುತ್ತದೆ.
ಇರಲಿ, ಪದ್ಮಾಸನ ಹಾಕಿ ಬುದ್ಧನ ಧ್ಯಾನಸ್ಥ ರೂಪದಂತೆ ಬಲಹಸ್ತದ ಮೇಲೆ ಎಡಹಸ್ತವನ್ನು ಇಟ್ಟುಕೊಂಡ ಮೂರ್ತಿಯೊಂದರ ಸೊಂಟದಪಟ್ಟಿಯ ಕಟ್ಟು (Buckle) ಕೈಮೇಲಿನ ಲಿಂಗದಂತೆ ಗೋಚರಿಸುತ್ತಿರುವುದನ್ನು ಕಂಡ ಪಾಟೀಲರು 'ಥಾಯ್ಲೆಂಡಿನಲ್ಲಿ ಬಸವ' ಎಂದು ಆನಂದದ ಭಾವೋದ್ವೇಗದ ಕಡಲಲ್ಲಿ ತೇಲಾಡಿ ಸಂಶೋಧನಾ ಲೇಖನವನ್ನು ಬರೆದಿದ್ದಾರೆ. ಅಲ್ಲಿನ ಬಸಾಯಾ (Basaya) ಎನ್ನುವ ರಿಸಾರ್ಟಿನ ಬೋರ್ಡು ನೋಡಿ ಇದು ಜಗತ್ತಿನ ಎಂಟನೇ ಅದ್ಬುತದ ಥಾಯ್ ಬಸವಭಕ್ತ ಮಾಲೀಕತ್ವದ ರಿಸಾರ್ಟ್ ಇರಲೇಬೇಕು ಎಂದುಕೊಂಡು ತಮ್ಮ ಅಪಧಮನಿಗಳಲ್ಲಿ ಉಕ್ಕಿದ ಬಸಾಯಭಕ್ತಿಯ ರಕ್ತವನ್ನು ನಿಯಂತ್ರಿಸಿಕೊಂಡು ತ್ವರಿತವಾಗಿ ಲೇಖನವೊಂದನ್ನು ಬರೆದುಕೊಂಡು ಸಮಯಾಭಾವದ ಕಾರಣ ಸ್ವದೇಶಕ್ಕೆ ವಾಪಸ್ಸಾಗಿದ್ದಾರೆ. ಅಂದ ಹಾಗೆ ಬಸಾಯಾ ಎಂದರೆ ವಾಸ್ತವ್ಯ. ಬಸಾಯಾ ಎಂಬುದು ಸಂಸ್ಕೃತ ಪದ ಮತ್ತು ಥೈಲ್ಯಾಂಡ್ ಹಿಂದೂ ದೇಶ! ಬಸಾಯಾ ಎಂದರೆ ವಿಜಯ, ಗಿಡಮೂಲಿಕೆಯ ಔಷಧಿ ಕೊಡುವ ಬೌದ್ಧ ಸನ್ಯಾಸಿ ಎಂಬೆಲ್ಲಾ ಅರ್ಥವಿದ್ದರೂ ಈ ರಿಸಾರ್ಟಿಗೆ ವಾಸ್ತವದಲ್ಲಿ ವಾಸ್ತವ್ಯ ಎಂಬರ್ಥವೇ ಸೂಕ್ತ ಎಂದಿಡಲಾಗಿದೆ. ಅಂದ ಹಾಗೆ ಅವರು ಹಾಕಿರುವ ಚಿತ್ರದಲ್ಲಿರುವ ಗಡ್ಡಧಾರಿ ಸನ್ಯಾಸಿಯ ಹೆಸರು ಜೀವಕ. ಥಾಯ್ ಜನರು ಇವನು ಬುದ್ಧನ ಖಾಸಗಿ ವೈದ್ಯ ಎನ್ನುವುದಲ್ಲದೆ (ಥಾಯ್) ಮಸಾಜನ್ನು ಕಂಡುಹಿಡಿದ ಪಿತಾಮಹ ಎನ್ನುತ್ತಾರೆ.
ಫೋಟೊ ಕೃಪೆ: ಜಿ. ಬಿ. ಪಾಟೀಲ್, ಲಿಂಗಾಯತ ಧರ್ಮದ ಅಂತರ್ಜಾಲ ತಾಣ.
ಈ ರಿಸಾರ್ಟ್ ಜಗತ್ತಿನ ಎಂಟನೇ ಅದ್ಭುತ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ ಖಂಡಿತವಾಗಿ ಲಿಂಗಾಯತ ಪ್ರತ್ಯೇಕ ಧರ್ಮ ಕೂಗಿಗರ ಎಂಟನೇ ಅದ್ಭುತ! ಹೀಗೆ ಅದ್ಭುತ ಸಂಕಥನಗಳನ್ನು ಕಟ್ಟಿ ಜನರನ್ನು ಹುಚ್ಚೆಬ್ಬಿಸಿ ಭಕ್ತಿಪಥಕ್ಕೆ ಹಚ್ಚುವುದು ಇಂದಿನ ಅನೇಕ ಚರ್ಚುಗಳ ತಂತ್ರ. ಅವತಾರ, ಪವಾಡ ಒಂದಾನೊಂದು ಕಾಲದ ತಂತ್ರ! ಆಲೇಲೂಯ, ಬಸಾಯ!
ಮುಖ್ಯವಾಗಿ ಚೆನ್ನಬಸವ ಪುರಾಣದ ಕವಿಯು ಸಂಬೋಧಿಸಿರುವ ಗೌರವಾನ್ವಿತ ದೇವ, ದೇವರು, ದೇವರಾಜ, ನಾಥ ಎಂಬ ಸುಸ್ಪಷ್ಟ ಗೌರವಸೂಚಕಗಳಲ್ಲಿ ನಾಥ ಎಂದು ಬಳಸಿರುವುದನ್ನು ಹಿಡಿದು ಪ್ರೊ. ಕಲಬುರ್ಗಿಯವರು "ನಾಥಪಂಥದ ಕೇಂದ್ರವಾಗಿ ಸುಮುಕ್ತಿನಾಥರು ಇದರ ಪ್ರವರ್ಥಕರೆಂದು ಚೆನ್ನಬಸವ ಪುರಾಣವು ಹೇಳುತ್ತದೆ" ಎಂದು "ಷರಾ" ಬರೆದ ಸಂಶೋಧನಾ ಚಾತುರ್ಯದ ಮಟ್ಟವನ್ನು ಪಾಟೀಲರು ಈ ಬಸಾಯಾ ಚಿಂತನೆಯ ಮಟ್ಟಿಗೆ ಉನ್ನತೀಕರಿಸಿದ್ದಾರೆ.
ಅಂದಹಾಗೆ ಈ ಶರಣರು ಥಾಯ್ಲೆಂಡಿಗೆ ಏಕೆ ಹೋಗಿರಬಹುದು ಎಂಬ ಆಲೋಚನೆ ನಿಮ್ಮಲ್ಲಿ ಒಂದು ಲಂಪಟನಗೆಯನ್ನು ಉಕ್ಕಿಸಿದರೆ ಅದು ನಿಮ್ಮ ಮನದ ಮುಂದಣ ಆಶೆ ಮಾತ್ರ!
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ" ಎನ್ನುವಂತಹ ಅಗಾಧ ಪರಂಪರೆಯ ವೀರಶೈವದ ನಿರಾಕಾರ ನಿರಾಮಯ ಶೂನ್ಯ ಸಿದ್ಧಾಂತವನ್ನು ಅತ್ಯಂತ ಶಿಥಿಲ ನಗೆಪಾಟಲ ಲೌಕಿಕ "ಶಕ್ತಿ" ಸ್ಥಾವರವಾಗಿ ಪರಿವರ್ತನೆಗೊಳಿಸಿ ಅನಾತ್ಮಲಿಂಗವ ಕರಸ್ಥಲದಲ್ಲಿ ಸಂಕುಚಿತವಾಗಿ ಹಿಡಿದಿಟ್ಟುಕೊಂಡು ರಾಜಕೀಯ ಶಕ್ತಿಕೇಂದ್ರವಾಗುವತ್ತತ್ತಲತ್ತ...ಬಸವಶೋಷಣೆಯ ಬಸವರಾಜಕಾರಣದ ಜಾಗತಿಕ "ಲಿಂಗಾಹತ"ದ ಜಾಗತಿಕ ಸತ್ಯ!
- ರವಿ ಹಂಜ್
No comments:
Post a Comment