ವಿಶ್ವವಾಣಿ ಬಸವ ಮಂಟಪ - ವೀರಶೈವ ಲಿಂಗಾಯತ ಪದೋತ್ಪತ್ತಿ ಪ್ರಸಾರೇಣಹ!

 ಗ್ರಂಥೇತಿಹಾಸದ ಪ್ರಕಾರವಾಗಿ ವೀರಶೈವ ಪದವು ವೇದವ್ಯಾಸರು ಬರೆದಿರುವರೆನ್ನುವ ಸ್ಕಂದ ಪುರಾಣದಲ್ಲಿ, "ಯೋ ಹಸ್ತಪೀಠೇ ನಿಜಮಿಷ್ಟಲಿಂಗಂ ವಿನ್ಯಸ್ಯ ತಲ್ಲೀನಮನಃ ಪ್ರಚಾರಃ ಬಾಹ್ಯಕ್ರಿಯಾಸಂಕುಲನಿಸ್ಠಹಾತ್ಮಾ| ಸಂಪೂಜಯತ್ತಂಗ ಸ ವೀರಶೈವಂ|"

ಎಂಬ ಶ್ಲೋಕದಲ್ಲಿ ಬರುತ್ತದೆ. ಈ ಶ್ಲೋಕದ ಅರ್ಥ, "ಯಾರು ತನ್ನ ಹಸ್ತಪೀಠದಲ್ಲಿ ಇಷ್ಟಲಿಂಗವನ್ನಿಟ್ಟು ತನ್ನ ಮನಸ್ಸನ್ನು ನೆಲೆಗೊಳಿಸಿ ಬಾಹ್ಯ ಕ್ರಿಯೆಗಳನ್ನು ದೂರಮಾಡಿ ಶ್ರದ್ಧೆಯಿಂದ ಪೂಜಿಸುವನೋ ಅವನೇ ವೀರಶೈವ" ಎಂದಾಗುತ್ತದೆ. ಸ್ಕಂದ ಪುರಾಣವನ್ನು ಬಹಳಷ್ಟು ಶತಮಾನಗಳ ಹಿಂದೆಯೇ ಬರೆದಿದೆ ಎನ್ನಲಾದರೂ ಇತಿಹಾಸತಜ್ಞರು ಲಭ್ಯ ಪುರಾವೆಗಳ ಪ್ರಕಾರ ಕ್ರಿ.ಶ. ಎಂಟನೇ ಶತಮಾನ ಎಂದು ಮಾನ್ಯ ಮಾಡಿದ್ದಾರೆ. ಹಾಗಾಗಿ ಗ್ರಂಥೇತಿಹಾಸಿಕವಾಗಿ ವೀರಶೈವ ಪದವು ಎಂಟನೇ ಶತಮಾನದಲ್ಲಿ ಇದ್ದಿತು ಎನ್ನಬಹುದು. ವಚನಕಾರ ಸಿದ್ಧವೀರ ದೇಶಿಕೇಂದ್ರನು ತನ್ನ ವಚನದಲ್ಲಿ ಸ್ಕಂದ ಪುರಾಣವನ್ನು ಹೀಗೆ ಉಲ್ಲೇಖಿಸಿದ್ದಾನೆ.

"ವ್ಯಾಸನುಸುರ್ದ ಸ್ಕಂದಪುರಾಣದಲ್ಲಿಯ
ಶ್ರೀಶೈಲಕಲ್ಪ ನೋಳ್ಪುದಯ್ಯಾ.
ಅಲ್ಲಿ ಸಿದ್ಧಸಾಧಕರ ಸನ್ನಿದ್ಥಿಯಿಂದರಿಯಬಹುದಯ್ಯಾ.
ಮಾಡಿದನೊಬ್ಬ ಪೂರ್ವದಲ್ಲಿ ಗೋರಕ್ಷ
ಮಾಡಿದನೊಬ್ಬ ಮತ್ಸ್ಯೀಂದ್ರನಾಥ,
ಮಾಡಿದರೆಮ್ಮ ವಂಶದ ಶ್ರೀಗುರುಶಾಂತದೇವರು.
ಇದು ಕಾರಣ,
ಯೋಗದ ಭೇದ ಯೋಗಿಗಳಂತರಂಗದಿಂದರಿತಡೆ
ಯೋಗಸಿದ್ಧಿ ಸತ್ಯ ಸತ್ಯ,
ಶ್ರೀಗುರು ತೋಂಟದಸಿದ್ಧಲಿಂಗೇಶ್ವರ."

ಸ್ಕಂದ ಪುರಾಣದಲ್ಲಿ "ಶಿವಾಶ್ರಿತೇಷು ತೇ ಶೈನಾ ಜ್ಞಾನಯಜ್ಞ ರತಾ ನರಾಃ | ಮಾಹೇಶ್ವರಾಃ ಸಮಾಖ್ಯಾ ತಾಃ ಕರ್ಮಯಜ್ಜ ರತಾ ಭುವಿ|" ಎಂಬ ಮತ್ತೊಂದು ಶ್ಲೋಕವಿದೆ. ಅರ್ಥಾತ್ ವೀರಶೈವ ಮಾಹೇಶ್ವರರು ಜ್ಞಾನಯಜ್ಞದಲ್ಲಿ, ಕರ್ಮಯಜ್ಞದಲ್ಲಿ ರತರಾಗಿರುವವರು ಎಂದು. ಇವೇ ಶ್ಲೋಕಗಳು ಸಿದ್ಧಾಂತ ಶಿಖಾಮಣಿಯಲ್ಲಿಯೂ ಇವೆ. ವೀರಶೈವ ಪದದ ನಿವೇಚನೆಯನ್ನು "ವಿ ಎಂದರೆ ವಿದ್ಯಾ, "ರ ಎಂದರೆ ರಮಿಸುವುದು; ವೀರಶೈವ ಎಂದರೆ ಶೈವನಿದ್ಯೆಯಲ್ಲಿ ರತನಾದವನು ಎಂದು ಪಂಡಿತರುಗಳು ನಿರ್ವಚಿಸಿದ್ದಾರೆ. ಶಾಸನಗಳಲ್ಲಿ ವೀರಶೈವ ಪದವು ಮೊದಲಬಾರಿಗೆ ಕಂಡುಬರುವುದು ಕ್ರಿಶ. ೧೨೬೧ನೆಯ ಇಸವಿಯ ಮಲ್ಕಾಪುರ ಶಾಸನದಲ್ಲಿ. ಇದರಲ್ಲಿ ಚೋಳಮಾಳವರಾಜರ ಗುರುವೂ, ವೀರಶೈವ ಕಾಕತೀಯರಾಜ “ಗಣಪರಿಕ್ಷ್ಮಾಪಾಲ ದೀಕ್ಷಾ ಗುರು'ವೂ “ಕಳಚುರಿಕ್ಷ್ಮಾಪಾಲದೀಕ್ಷಾಗುರು'ವೂ ಆದ ವಿಶ್ವೇಶ್ವರ ಶಿವಾಚಾರ್ಯನು “ಮಹೀಸುರ'ನೆಂದೂ ವೀರಶೈವಾಚಾರ್ಯನೆಂದೂ ಉಲ್ಲೇಖನಾಗಿದ್ದಾನೆ. ಮಲ್ಕಾಪುರ ಶಾಸವದಂತೆ ವಿಶ್ವೇಶ್ವರ ಶಿವಾಚಾರ್ಯನೇ ವೀರಶೈವ ಕಾಕತೀಯ ಚಕ್ರವರ್ತಿ ಗಣಪತಿಗೆ ದೀಕ್ಷಾ ಗುರುವಾಗಿರುವಂತೆ ಕಳಚುರಿಕ್ಷ್ಮಾಪಾಲನಿಗೂ ದೀಕ್ಷಾ ಗುರುವಾಗಿದ್ದನು. ಖ್ಯಾತ ಕಾಕತೀಯ ರಾಣಿ ರುದ್ರಮದೇವಿ ಇದೇ ಗಣಪತಿಯ ಮಗಳು ಎಂಬುದು ಉಲ್ಲೇಖಾರ್ಹ. ಪಾಲ್ಕುರಿಕಿ ಸೋಮನಾಥನು ಸಹ ತನ್ನ "ಚಾತುರ್ವೇದ ಸಾರಂ" ಗ್ರಂಥದಲ್ಲಿ ಹರಿಯು ಶಿವನಿಗೆ ಭಕ್ತಿ ಪರವಶನಾಗಿ ತನ್ನ ಕಣ್ಣುಗಳನ್ನು ಅರ್ಪಿಸಿದ ಎಂದು ವರ್ಣಿಸುತ್ತ ವೀರಶೈವ ಎಂಬ ಪದದಿಂದ ಶೈವರನ್ನು ಕರೆದಿದ್ದಾನೆ. ಕಾಳಾಮುಖರು ಯಾನೆ ಮಹೇಶ್ವರರು ಯಾನೆ ಜಂಗಮರು ಯಾನೆ ಶಕ್ತಿಗಳು ಯಾನೆ ವೀರರು ಅವರ ಪಂಥ ವಿರೋಧಿಗಳಿಗೆ ಒಡ್ಡುತ್ತಿದ್ದ ಕಠೋರ ಸವಾಲುಗಳ ವೀರತ್ವದ ಕಾರಣಗಳಿಂದಾಗಿ ವೀರಶೈವ ಪದ ಹೆಚ್ಚು ಪರಿಣಾಮಕಾರಿಯಾಗಿ ಬಳಕೆಗೆ ಬಂದಿದೆ ಎನಿಸುತ್ತದೆ.

ವೀರಶೈವ ಪದದ ಪ್ರಾಚೀನತೆಯನ್ನು ಶ್ರೀ ಶಂ.ಬಾ. ಜೋಷಿಯವರು ಸಹ ವೇದಗಳ ಕಾಲಕ್ಕೆ ಒಯ್ಯುವರು. "ಶಿವರಹಸ್ಯ'ವೆಂಬ ಅವರ ಕೃತಿಯಲ್ಲಿ, “ನನಗೆ ತಿಳಿದಮಟ್ಟಿಗೆ ವೀರಶೈವ ಶಬ್ದದ ಮೂಲವು ಋಗ್ವೇದದಲ್ಲಿದೆ. ರುದ್ರನು ವೃಷಭನು, ಎಂದರೆ ವೀರನು. ಆದುದರಿಂದ ಆತನ ಉಪಾಸಕರೂ ವೀರರು; ಅದರಿಂದ ಈ ಹೆಸರು. ಹೀಗೆ ಬರಿಯ ತರ್ಕದಿಂದ ಇದನ್ನು ಎಣಿಕೆ ಹಾಕಬೇಕಾದುದಿಲ್ಲ.

ಇಮಾ ರುದ್ರಾಯ ತವಸೇ ಕಪರ್ದಿನೇ ಕ್ಷಯದ್ದೀರಾಯ ಪ್ರಭರಾಮಹೇ ಮತಿಃ ।
ಯಥಾ ಶಮಸದ್ವಿಷದೇ ಚತುಸ್ಪದೇ ವಿಶ್ವಂ ಪುಷ್ಪಂ ಗ್ರಾಮೇ ಅಸ್ಮಿನ್ನನಾತುರಂ ॥

ಬಲಿಷ್ಟನೂ, ಜಟಾಧಾರಿಯೂ, ವೀರಪುತ್ರರನ್ನುಳ್ಳವನೂ ಆದ ರುದ್ರನನ್ನು ಕೊಂಡಾಡುವ; ಅದರಿಂದ ಈ ಊರಿನಲ್ಲಿ ಎರಡು ಕಾಲಿನವರ ಹಾಗೂ ನಾಲ್ಕು ಕಾಲಿನವರ ಕಲ್ಯಾಣವಾಗಿ ಎಲ್ಲರೂ ನಿರೋಗಿಗಳೂ ಪುಷ್ಠರೂ ಆಗುವರು. ಇದರ ಮುಂದಿನ ಮಂತ್ರದಲ್ಲಿಯೂ, ಬೇರೆ ಮಂಡಲಗಳಲ್ಲಿಯೂ ರುದ್ರಶಿವನು ವೀರರ ತಂದೆ, ವೀರರ ಒಡೆಯ ಎಂಬ ಮಾತುಗಳು ಅಲ್ಲಲ್ಲಿ ಬಂದಿವೆ. ಶಿವ (ರುದ್ರ) ನ ಪುತ್ರರು (ಶಿವಪುತ್ರರು) ಎಂದು ಗೌರವದಿಂದ ಹೇಳಿಕೊಳ್ಳುವ ಮತ್ತು ಆ ಬಗೆಯಾದ ದೃಢಶ್ರದ್ಧೆಯಿರುವ ಶಿವಭಕ್ತರಿಗೆ ಮಾತ್ರವಲ್ಲದೆ, ಬೇರೆ ಇನ್ನಾರಿಗೂ ವೀರ (ಶೈವ) ಎಂಬ ಹೆಸರು ಸಮರ್ಪಕವಾಗಲಾರದು. ಕರ್ನಾಟಕದಲ್ಲಿಯೇ ಈ ವೀರರು ರುದ್ರನ ಅನುಯಾಯಿಗಳಾದ ರುದ್ರೀಯರು ಇರುತ್ತಿರುವುದರಿಂದ ಈ ನಾಡಿನ ಜನಾಂಗಗಳ ವೇದಕಾಲದ ಐತಿಹ್ಯವನ್ನು ಅರಿತುಕೊಳ್ಳಲು ಈ ಶಬ್ದವು ಬಹಳ ಉಪಯುಕ್ತವಾಗಿದೆ. ವೀರ ಬಣಂಜುಗಳು, ವೀರ ಪಂಚಾಳರು ಎಲ್ಲರೂ ರುದ್ರೀಯರೇ" ಎಂದಿದ್ದಾರೆ.

ಜೋಷಿಯವರು ತಿಳಿಸಿರುವ ವೃಷಭನನ್ನೇ ಹರಿಹರನು ಶಾಪಗ್ರಸ್ತನನ್ನಾಗಿಸಿ ಧರೆಯಲ್ಲಿ ಬಸವಣ್ಣನಾಗಿ ತನ್ನ ರಗಳೆಯಲ್ಲಿ ಸೃಜಿಸಿರುವುದು ಮತ್ತು ಸೋಮನಾಥನು ತನ್ನ ಪುರಾಣದಲ್ಲಿ ವರ್ಣಿಸಿರುವುದು. ಬಸವಣ್ಣನೂ ತನ್ನ ಕೆಳಗಿನ ವಚನದಲ್ಲಿ ಅವತಾರಗಳನ್ನು ಹೀಗೆ ಖುದ್ದು ಅನುಮೋದಿಸಿದ್ದಾನೆ:

ಅಯ್ಯಾ, ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ !
ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ.
ಪ್ರಥಮಭವಾಂತರದಲ್ಲಿ
ಶಿಲಾದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಭೃತ್ಯನ ಮಾಡಿ ಎನನ್ನಿರಿಸಿಕೊಂಡಿರ್ದಿರಯ್ಯಾ.
ಎರಡನೆಯ ಭವಾಂತರದಲ್ಲಿ
ಸ್ಕಂದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಕಾರುಣ್ಯವ ಮಾಡಿರಿಸಿಕೊಂಡಿರ್ದಿರಯ್ಯಾ.
ಮೂರನೆಯ ಭವಾಂತರದಲ್ಲಿ
ನೀಲಲೋಹಿತನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಲೀಲಾವಿನೋದದಿಂದಿರಿಸಿಕೊಂಡಿರ್ದಿರಯ್ಯಾ.
ನಾಲ್ಕನೆಯ ಭವಾಂತರದಲ್ಲಿ
ಮನೋಹರನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಮನಃಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಐದನೆಯ ಭವಾಂತರದಲ್ಲಿ
ಕಾಲಲೋಚನನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ಸರ್ವಕಾಲಸಂಹಾರವ ಮಾಡಿಸುತ್ತಿರ್ದಿರಯ್ಯಾ.
ಆರನೆಯ ಭವಾಂತರದಲ್ಲಿ
ವೃಷಭನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಏಳನೆಯ ಭವಾಂತರದಲ್ಲಿ
ಬಸವದಣ್ಣಾಯಕನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಒಕ್ಕುದ ಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಇದು ಕಾರಣ ಕೂಡಲಸಂಗಮದೇವಾ,
ನೀವು ಬರಿಸಿದ ಭವಾಂತರದಲ್ಲಿ ನಾನು ಬರುತಿರ್ದೆನಯ್ಯಾ.

ಇನ್ನು ಶಂಬಾರವರು ಹೆಸರಿಸಿರುವ ವೀರಬಣಂಜುಗಳೇ ವೀರಶೈವ ಬಣಜಿಗರು ಮತ್ತು ವೀರಪಂಚಾಳರೇ ವೀರಶೈವ ಪಂಚಮಸಾಲಿಗಳು ಎನ್ನಬಹುದು. ವಿಕಾಸಪಥದ ಹಾದಿಯಲ್ಲಿ ಕೃಷಿಯಲ್ಲಿ ತೊಡಗಿದ್ದ ವೀರಪಂಚಾಳರಲ್ಲಿ ಸಾಕಷ್ಟು ಜನರು ಕುಶಲಕರ್ಮಿಗಳಾದರು. ಈ ಕುಶಲಕರ್ಮಿಗಳಾಗಿದ್ದ ವೀರಪಂಚಾಳರ ಕಾರಣವಾಗಿಯೇ ಕಾಳಾಮುಖರು ದಕ್ಷಿಣಾಚಾರ ಎಂಬ ಶಿಲ್ಪಕಲಾ ವಾಸ್ತುಶಾಸ್ತ್ರವನ್ನು ರಚಿಸಿದ್ದರು. ಈ ದಕ್ಷಿಣಾಚಾರ ಪದವೇ ದಕ್ಕನಾಚಾರ/ಜಕ್ಕನಾಚಾರ ಎಂದು ಅಪಭ್ರಂಶಗೊಂಡು ಸಂಕಥನಗಳ ಮೂಲಕ ವಾಸ್ತುಶಾಸ್ತ್ರವು ವ್ಯಕ್ತಿರೂಪದ ಜಕಣಾಚಾರಿ ಆಗಿದೆ. ನಮ್ಮ ಪ್ರಭೃತಿ ಪ್ರಭಾವಶಾಲಿ ಸಂಶೋಧಕರ ದೆಸೆಯಿಂದ ಸರ್ಕಾರ ಜಕಣಾಚಾರಿಯ ಹುಟ್ಟಿದ ದಿನವನ್ನು ಸೃಷ್ಟಿಸಿ ಜಯಂತಿ ಘೋಷಿಸಿದೆ. ಈ ಬಗ್ಗೆ ಆಸಕ್ತರು ಖ್ಯಾತ ಇತಿಹಾಸಜ್ಞರಾದ ವಸುಂಧರಾ ಫಿಲಿಯೋಜಾ ಅವರ ಕೃತಿಗಳನ್ನು ಗಮನಿಸಬಹುದು. "ಲಕ್ಕುಂಡಿಯಲ್ಲಿರುವ ದೇವಸ್ಥಾನಗಳ ಆವರಣಗಳು ಈ ಕಾಳಾಮುಖ ದಕ್ಷಿಣಾಚಾರದ ವಾಸ್ತುಶಿಲ್ಪದ ಶಾಲೆಗಳಾಗಿದ್ದವು. ಇಲ್ಲಿ ನಿರ್ಮಿಸಿದ ಸಣ್ಣ ಗಾತ್ರದ ಆಕೃತಿಗಳ ದೊಡ್ಡ ಪ್ರತಿಕೃತಿಗಳೇ ಹಳೇಬೀಡು, ಬೇಲೂರು ಮುಂತಾದ ಕಡೆ ಕೆತ್ತಲ್ಪಟ್ಟಿರುವುದು" ಎಂದು ಪುರಾತತ್ವ ಸ್ಮಾರಕಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಗದಗಿನ ಅಬ್ದುಲ್ ರಜಾಕ್ ದಸ್ತಗೀರ್ ಸಾಬ್ ಕಟ್ಟಿಮನಿ ಮಾಹಿತಿ ನೀಡಿದ್ದಾರೆ. ಡೇವಿಡ್ ಲೊರೆಂಜನ್ ಅಲ್ಲದೆ ಅನೇಕ ಸಂಶೋಧಕರ ಜೊತೆ ಕೆಲಸ ಮಾಡಿರುವ ಖ್ಯಾತಿ ಇವರದು.

ಇನ್ನು ವೀರಶೈವ, ಪೂರ್ವಕಾಲೀನ/ಹಿರಿಯಕಾಲೀನ ವಚನಕಾರರು, ಮತ್ತು ಬಸವಕಾಲೀನ ವಚನಕಾರರು ಹೆಚ್ಚಿನ ಪ್ರವರ್ಧಮಾನಕ್ಕೆ ಬಂದದ್ದು ಭಕ್ತಿಪಂಥದ ಕ್ರಾಂತಿಯ ಅಲೆಯಲ್ಲಿ! ಜೈನರ ಪ್ರಾಬಲ್ಯದ ವಿರುದ್ಧ ಹೋರಾಡಿ ಶೈವಪಂಥವನ್ನು ಹೇರಿದ್ದು ಈ ಎಲ್ಲಾ ವಚನಕಾರರ ಸಮಾನ ಸಿದ್ಧಾಂತ. ಭಕ್ತಿಪಂಥದ ಭಾಗವಾಗಿ ವೀರಶೈವರ ರೇಣುಕರು ಉದ್ಭವವಾದರು ಎನ್ನುವ ಕೊಲ್ಲಿಪಾಕಿ (ಇಂದಿನ ಕೊಳನುಪಾಕ) ಜೈನರ ಒಂದು ಪ್ರಮುಖ ಸ್ಥಳ. ಅಂದಿನ ವೀರಶೈವರು ಜೈನರೊಟ್ಟಿಗೆ ಹೋರಾಡಿ ಕೊಲ್ಲಿಪಾಕಿಯನ್ನು ತಮ್ಮ ಕೈವಶಮಾಡಿಕೊಂಡಿದ್ದರು. ಈ ರೇಣುಕರ ಸಮಕಾಲೀನರೆನ್ನಬಹುದಾದ ಪೂರ್ವಕಾಲೀನ ಶರಣರಾದ ಓಹಿಲ, ಉದ್ಭಟ, ಕೆಂಭಾವಿ ಭೋಗಯ್ಯ, ಕೊಂಡಗುಳಿ ಕೇಶಿರಾಜ, ಡೋಹರಕಕ್ಕಯ್ಯರನ್ನು ಜೇಡರ ದಾಸಿಮಯ್ಯ (ಕ್ರಿ.ಶ ೯೮೦-ಕ್ರಿ.ಶ. ೧೦೪೦) ತನ್ನ ವಚನಗಳಲ್ಲಿ ಕೊಂಡಾಡಿದ್ದಾನೆ. ಇದರಲ್ಲಿ ಓಹಿಲ ಮತ್ತು ಉದ್ಭಟರಿಬ್ಬರೂ ಸೌರಾಷ್ಟ್ರದವರೆನ್ನಲಾಗಿದೆ. ಈ ಸೌರಾಷ್ಟ್ರ ಮೂಲದ ಕೆಲ ಶೈವರು ಮುಂದೆ ವೀರಶೈವತ್ವದ ಕೆಲ ನವಸಂಪ್ರದಾಯಗಳನ್ನು ಪ್ರಮುಖವಾಗಿ ಸಸ್ಯಾಹಾರವನ್ನು ಒಪ್ಪದೇ ತಮ್ಮದೇ ಒಂದು ಭಾಗವಾಗಿ ಈಗಲೂ ತಮಿಳುನಾಡಿನ ಹಲವೆಡೆ ಸೌರಾಷ್ಟ್ರ ಪಾಶುಪತರಾಗಿ ಕಾಣಸಿಗುತ್ತಾರೆ. ಹಾಗಾಗಿಯೇ ಬಸವಣ್ಣನು ಮಾಂಸಾಹಾರಿ ಪಾಶುಪತರನ್ನು ಕಾಪಾಲಿಕರನ್ನು ಒಳಗೊಳ್ಳುವ ಈ ವಚನವನ್ನು ರಚಿಸಿದ್ದಾನೆ ಎನಿಸುತ್ತದೆ:

'ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ,
ಬಾಯಲಿ ಸುರೆಯ ಗಡಿಗೆ, ಕೊರಳಲಿ ದೇವರಿರಲು
ಅವರ ಲಿಂಗನೆಂಬೆ, ಸಂಗನೆಂಬೆ,
ಕೂಡಲಸಂಗಮದೇವಾ, ಅವರ ಮುಖಲಿಂಗಿಗಳೆಂಬೆನು.'

ಕೊಲ್ಲಿಪಾಕಿಯ ರೇಣುಕರ ಉದ್ಭವದ ಹಿನ್ನೆಲೆಯಲ್ಲಿ ರಸ್ತಾಪುರ ಭೀಮಕವಿಯ ’ಹಾಲುಮತೋತ್ತೇಜಕ ಪುರಾಣ’ದ ಎರಡನೇ ಸಂಧಿಯಲ್ಲಿ ರೇವಣಸಿದ್ದೇಶ್ವರ ಚರಿತ್ರೆಯ ಕುರಿತ ಮಾಹಿತಿ ಹೀಗಿದೆ. "ಕೊಲ್ಲಿಪಾಕಿಯ ಸೋಮಲಿಂಗದಿಂದ ಉದಯಿಸಿದ ರೇವಣಸಿದ್ಧರು ಭಕ್ತರನ್ನು ಉದ್ಧರಿಸಲು ಶಾಂತಮುತ್ತಯ್ಯ ಎಂಬುವವರಿಗೆ ಲಿಂಗದೀಕ್ಷೆಯನ್ನು ಕೊಡುತ್ತಾರೆ. ಇಲ್ಲಿ ರೇವಣಸಿದ್ಧರು ಲೀಲೆಗಳನ್ನು ತೋರುತ್ತಾ ಸರೂರು ಗ್ರಾಮಕ್ಕೆ ಬಂದು ಕುರುಬರ ಮನೆತನದಲ್ಲಿ ಜನಿಸಿದ ಶಾಂತಮುತ್ತಯ್ಯನಿಗೆ ‘ಸಿದ್ಧಿಸಲಿ ನೀನಂದ ನುಡಿಗಳು ಭೂಮಿಯಲ್ಲಿ’ ಎಂದು ಆರ್ಶೀವಾದ ಮಾಡಿ ಲಿಂಗದೀಕ್ಷೆಯನ್ನು ನೀಡಿ ಹಾಲುಮತಕ್ಕೆ ಅಧ್ಯಕ್ಷನನ್ನಾಗಿಸುವನು." ಇದು ಈ ಪುರಾಣದಲ್ಲಿರುವ ಅಂಶ. ಮೌಖಿಕ ಕಥಾನಕದ ಆಧಾರವಾಗಿ ಈ ಪುರಾಣವನ್ನು ಬರೆಯಲಾಗಿದೆ ಎಂದು ತಿಳಿದುಬಂದಿದೆ. (ಎಫ್.ಟಿ. ಹಳ್ಳಿಕೇರಿ (ಸಂ), ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ, ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ, ೨೦೦೮.)

ಈ ಪುರಾಣದ ಪ್ರಕಾರ ಕೊಲ್ಲಿಪಾಕಿಯಲ್ಲಿ ಸೋಮನಾಥಲಿಂಗದಿಂದ ಉದ್ಭವಗೊಂಡ ಅವತಾರ ಪುರುಷ ರೇವಣಸಿದ್ದೇಶ್ವರರು ಪಶುಪಾಲಕ ಹಾಲುಮತ (ಕುರುಬ) ಹಿನ್ನೆಲೆಯವರು. ಪೌರಾಣಿಕ ಕಥನದಲ್ಲಿ ಉದ್ಭವಿಸಿವವರು ಇಂತಹ ಕುಲದವರೇ ಎನ್ನುವುದು ಮತ್ತು ಪ್ರಶ್ನಿಸುವುದು ತಾರ್ಕಿಕವಲ್ಲ. ಹಾಗೆಯೇ ಇದರಲ್ಲಿನ ಕಾಲಮಾನಗಳು ಮತ್ತು ಪವಾಡದ ಕತೆಗಳನ್ನು ಐತಿಹಾಸಿಕ ದಾಖಲೆಯನ್ನಾಗಿ ಪರಿಗಣಿಸುವುದೂ ಅಲ್ಲ. ಈ ಪುರಾಣಕ್ಕೆ ಪೂರಕವಾದ ಐತಿಹಾಸಿಕ ಪುರಾವೆಗಳಿದ್ದರೆ ಆಗ ತಾಳೆಹಾಕಿ ವಿಶ್ಲೇಷಿಸಿ ಪವಾಡವಲ್ಲದ ಮಾಹಿತಿಯನ್ನು ಪರಿಗಣಿಸಬಹುದು. ಹಾಗಾಗಿ ಈ ಪೌರಾಣಿಕ ಕತೆಯಿಂದ ಗ್ರಹಿಸಬೇಕಾದ ಏಕಾಂಶವೆಂದರೆ ಪಶುಪಾಲಕರು (ಕುರುಬರು) ಸಹ ವೀರಶೈವ ಪಂಥದ ಕ್ರಾಂತಿಯ ಪ್ರಮುಖ ಭಾಗವಾಗಿದ್ದಲ್ಲದೆ ಮಹತ್ವದ ಗುರುಸ್ಥಾನವನ್ನು ಪಡೆದಿದ್ದರು ಎಂಬುದು! ಸಂಶೋಧನ ಹಿನ್ನೆಲೆಯಲ್ಲಿ ಪಾಶುಪತದ ಆಚರಣೆಯ ಪಶುಪಾಲಕ ಹಾಲುಮತಸ್ಥರಿಗೆ ವೀರಶೈವ ಪಂಥ ಸ್ವಾಭಾವಿಕವಾಗಿ ಬೇರೆಯದೆಂದು ಎನಿಸಿರಲೇ ಇಲ್ಲ. ಮುಂದೆ ಯಾವಾಗ ವೃತ್ತಿಗಳೇ ಜಾತಿಗಳಾದವೋ ಆಗ ಇವರು ಜಾತೀಯವಾಗಿ ಕುರುಬರೆನ್ನಿಸಿಕೊಂಡು ಗುರುತಿಸಿಕೊಂಡಿರಬಹುದು. ಅದೇ ರೀತಿ ’ಹುಟ್ಟಿನಿಂದ ಜಾತಿ’ ನೀತಿಯ ಕಾರಣ ಶಾಶ್ವತವಾಗಿ ಕುರುಬರೆಂಬ ಜಾತಿಗೆ ಸೀಮಿತಗೊಂಡು ವೀರಶೈವದಿಂದ ಹೊರಗುಳಿದಿರಬಹುದೆಂದು ಊಹಿಸಬಹುದು. ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಕುರುಬರು ಈಗಲೂ ಸಸ್ಯಾಹಾರಿಗಳು ಎಂಬುದು ಇಲ್ಲಿ ಗಮನಿಸಬೇಕಾದ ಪೂರಕ ಅಂಶ. ಅಂತೆಯೇ ತಮ್ಮ ಸನಾತನ ಶೈವ ಪರಂಪರೆಯ ಕುರುಹಾಗಿ ಒಡೆಯರ್ ಎಂಬ ಹಾಲುಮತ ಜಂಗಮರು ಇಂದಿಗೂ ಕರಡಿಗೆ ಧರಿಸಿ ಶಿವಪೂಜಾ ನಿರತರಾಗಿದ್ದಾರೆ. ದಾವಣಗೆರೆಯ ಸಂಸದರಾಗಿದ್ದ ದಿವಂಗತ ಚೆನ್ನಯ್ಯ ಒಡೆಯರ್ ಅಂತಹ ಹಾಲುಮತ ಜಂಗಮ ಪರಂಪರೆಯವರಾಗಿದ್ದರು. 'ಹುಟ್ಟಿನಿಂದ ಜಾತಿ' ನೀತಿಯ ಕಾರಣವಾಗಿಯೇ ಕುಶಲಕರ್ಮಿ ಪಂಚಾಳರು ಕುರುಬರಂತೆಯೇ ವಿಶ್ವಕರ್ಮಿಗಳಾಗಿ ವೀರಶೈವದ ಹೊರಗುಳಿದರೆ ಕೃಷಿಕ ಪಂಚಮಸಾಲಿಗಳು ವೀರಶೈವದ ಒಳಗುಳಿದರು. ಈ ಬಗ್ಗೆ ಖ್ಯಾತ ಸಾಗರದಾಳದ ಉತ್ಖನನಜ್ಞರು ಮತ್ತು ಶಿಲ್ಪಕಲಾ ತಜ್ಞರೂ ಆದ ಗುಡಿಗಾರ್ ಪುಟ್ಟಸ್ವಾಮಿಯವರು ಚರ್ಚೆಯೊಂದರಲ್ಲಿ ಬೆಳಕು ಚೆಲ್ಲಿದ್ದರು.

’ಹಾಲುಮತೋತ್ತೇಜಕ ಪುರಾಣ’ದ ಪೌರಾಣಿಕ ಕತೆಯಲ್ಲದೆ ಕಪಟರಾಳ ಕೃಷ್ಣರಾಯರ "ಕರ್ನಾಟಕ ಲಾಕುಳಶೈವ ಇತಿಹಾಸ"ದ ಪುಟ ೮೫ರಲ್ಲಿ ಲೇಖಕರು "ಮಾಧವಾಚಾರ್ಯನ ಸರ್ವದರ್ಶನ ಸಂಗ್ರಹದಲ್ಲಿ ಮಾಹೇಶ್ವರ ದರ್ಶನಗಳಲ್ಲೊಂದಾದ ಶೈವಮತವನ್ನು ಹೇಳಿದೆ. ಅದರಲ್ಲಿ ಪಶುಗಳಲ್ಲಿ ಮೂರು ಭೇದಗಳು, ೧. ವಿಜ್ಞಾನಕಲ, ೨.ಪ್ರಯಾಯಕಲ, ೩. ಸಕಲ. ವಿಜ್ಞಾನಕಲರು ಮಲಯುಕ್ತರು, ಪ್ರಯಾಯಕಲರು ಮಲಕರ್ಮಯುಕ್ತರು, ಮತ್ತು ಸಕಲರು ಮಲಮಾಯ ಕರ್ಮಯುಕ್ತರು. ಇವುಗಳಲ್ಲಿ ಮೊದಲನೇ ವರ್ಗದ ವಿಜ್ಞಾನಕಲದಲ್ಲಿ ಪುನಃ ಎರಡು ಬಗೆ - ಸಮಾಪ್ತಕಲುಷರು ಮತ್ತು ಅಸಮಾಪ್ತಕಲುಷರು. ಸಮಾಪ್ತಕಲುಷರೇ ಪರಮೇಶ್ವರನ ಕೃಪೆಯಿಂದ ವಿದ್ಯೇಶ್ವರ ಪದವಿಗೆ ಬರುವರು. ಅಸಮಾಪ್ತಕಲುಷರು ಮಂತ್ರಗಳಾಗುವರು. ಈ ಮಂತ್ರಗಳು ಏಳು ಕೋಟಿಗಳು. ಮಂತ್ರೇಶ್ವರರು ಏಳು ಕೋಟಿ ಕೋಟಿಗಳು. ಅಂತೆಯೇ ಈ ಮತಕ್ಕೆ ಎಕ್ಕೋಟಿಸಮಯವೆಂದು ಹೆಸರು. ಇಂದಿಗೂ ಕರ್ನಾಟಕದಲ್ಲಿ ಮೈಲಾರನ ಒಕ್ಕಲಿನವರು "ಏಳು ಕೋಟಿ ಏಳು ಕೋಟಿ ಉಘೇ ಚಾಂಗು ಭಲೇ" ಎಂದು ಶಿವನ ಜಯಘೋಷ ಮಾಡುತ್ತಾರೆ. ಇದುವೇ ಪೂರ್ವದ ಲಾಕುಳಸಿದ್ಧಾಂತವಿದ್ದಂತೆ ತೋರುವುದು. ಶಾಸನಗಳಲ್ಲಿ ಇದನ್ನು ಎಕ್ಕೋಟಿ ಸಮಯವೆಂದು ಕರೆಯಲಾಗಿದೆ. ಸರ್ವದರ್ಶನಕಾರನ ಮಾಹೇಶ್ವರರಲ್ಲಿಯ ಶೈವಸಿದ್ಧಾಂತವೂ ಇದೇ. ಈ ಸಿದ್ಧಾಂತವೇ ಮುಂದೆ ಶ್ರೀಕಂಠ ಶಿವಾಚಾರ್ಯನಿಂದ ನಿರೂಪಿಸಲ್ಪಟ್ಟ ಶಕ್ತಿವಿಶಿಷ್ಟಾದ್ವೈತದಲ್ಲಿ ಪರಿಣಾಮವಾಯಿತೆಂದು ಡಾ. ಭಂಡಾರ್ಕರರು ಅಭಿಪ್ರಾಯಪಟ್ಟಿದ್ದಾರೆ" ಎನ್ನುತ್ತಾರೆ.

ಕಾಳಾಮುಖ-ವೀರಶೈವರನ್ನು ಬೆಸೆಯುವ ವೀರ ಮಾಹೇಶ್ವರ, ಜಂಗಮ, ವೀರಬಣಂಜು, ವೀರಪಂಚಾಳ ಪದಗಳ ಜೊತೆಜೊತೆಗೆ ವೀರಶೈವ, ಲಿಂಗಿ, ಲಿಂಗಾಯತ ಮೊದಲಾದ ಹೆಸರುಗಳಿಂದ ಈ ಮತದವರನ್ನು ವ್ಯಾಸನ ಕಾಲದಿಂದಲೂ ಕರೆಯುತ್ತಿದ್ದರು. ವೀರಶೈವ, ವೀರಮಾಹೇಶ್ವರ, ಮಾಹೇಶ್ವರ, ವೀರಬಣಂಜು, ವೀರಪಂಚಾಳ ಎಂಬ ಹೆಸರುಗಳನ್ನು ಬಹುಮಟ್ಟಿಗೆ ಗ್ರಂಥಗಳಲ್ಲಿ ಉಪಯೋಗಿಸಲ್ಪಟ್ಟರೆ ಜಂಗಮ, ಲಿಂಗಿ, ಲಿಂಗಿ ಬ್ರಾಹ್ಮಣ, ಲಿಂಗವಂತ, ಲಿಂಗಾಯತವೆಂಬ ಪದಗಳು ಜನಸಾಮಾನ್ಯರಿಂದ ಉಪಯೋಗಿಸಲ್ಪಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠವು 'ಪಟ್ಟಣಗಳಲ್ಲಿ ವೀರಶೈವ ಎನ್ನುತ್ತಾರೆ, ಹಳ್ಳಿಗಳಲ್ಲಿ ಲಿಂಗಾಯತ ಎನ್ನುತ್ತಾರೆ. ಎರಡೂ ಒಂದೇ' ಎಂದು ಕೆಲವು ವರ್ಷಗಳ ಹಿಂದೆ ವೀರಶೈವ ಬೇರೆ ಲಿಂಗಾಯತ ಬೇರೆ ಎಂಬ ಅಭಿಪ್ರಾಯ ಭುಗಿಲೆದ್ದಾಗ ಹೇಳಿಕೆ ನೀಡಿದ್ದನ್ನು ಇಲ್ಲಿ ಸಾಂದರ್ಭಿಕವಾಗಿ ನೆನಪಿಸಿಕೊಳ್ಳಬಹುದು. ಶಿವಜ್ಞಾನಿ ವಿದ್ಯಾಪಾರಾಂಗತರಾದ ವೀರಶೈವಿಗರನ್ನು ಜನಸಾಮಾನ್ಯರು ಇವರೂ ಬ್ರಹ್ಮಜ್ಞಾನಿ ವಿದ್ಯಾಪಾರಾಂಗತರಾದ ಬ್ರಾಹ್ಮಣರೇ ಆಗಿದ್ದಾರೆ ಎಂದು ವರ್ಣಾಶ್ರಮದ ಪ್ರಕಾರ ಸಮೀಕರಿಸಿ ವೀರಶೈವರನ್ನು "ಲಿಂಗಿ ಬ್ರಾಹ್ಮಣ"ರು ಎನ್ನುತ್ತಿದ್ದರು. ಇಂತಹ ವರ್ಣಾಶ್ರಮ ಸಮೀಕರಣದಲ್ಲಿ ಬೌದ್ಧ ಸನ್ಯಾಸಿಗಳನ್ನೂ ಬ್ರಾಹ್ಮಣರೆಂದೇ ಸಾಮಾನ್ಯರು ಪರಿಗಣಿಸಿದ್ದರು. ಈ ಲಿಂಗಿ ಬ್ರಾಹ್ಮಣ ಎನ್ನುವುದೇ ಲಿಂಗಿಯತಿಯಾಗಿ ಲಿಂಗಾಯತಿ/ತವಾಯಿತು. ದೇಶದ ತುಂಬೆಲ್ಲಾ ನಾಮಪದಗಳು ಹೇಗೆ ನಿಷ್ಪತ್ತಿಗೊಂಡವೋ (ಅಪಭ್ರಂಶಗೊಂಡೋ ಆಡುಮಾತಿಗೆ ಸಿಲುಕಿಯೋ) ಹಾಗೆಯೇ "ಲಿಂಗಾಯತ" ಪದದ ವ್ಯುತ್ಪತ್ತಿ "ಲಿಂಗಿ ಬ್ರಾಹ್ಮಣ" ಪದದಿಂದಲೇ ಆಯಿತು ಎನ್ನಬಹುದು. ಆದರೆ ಇಂತಹ ಸಾಮಾನ್ಯ ಭಾಷಾ ಬೆಳವಣಿಗೆಯ ಪದೋತ್ಪತ್ತಿಯನ್ನು ಕನ್ನಡದಲ್ಲಿ ಸ್ನಾತಕೋತ್ತರ, ಪಿಹೆಚ್ಡಿ, ಪೋಸ್ಟ್ ಡಾಕ್ಟೋರಲ್ ಪದವಿ ಪಡೆದು ಸಂಶೋಧನೆ ಮಾಡಿರುವ ಪಂಡಿತರೇ ಪ್ರಭೃತಿ ಕಾಮಾಲೆಗೊಳಗಾಗಿ "ಕಲ್ಬುರ್ಗಿ ನಾಥ ಪ್ರಮೇಯ"ದನ್ವಯ ಲಿಂಗಿ ಬ್ರಾಹ್ಮಣ ಎಂದರೆ ಇಂದಿನ ವರ್ತಮಾನದ ಬ್ರಾಹ್ಮಣ ಜಾತಿಗೆ ಸಮೀಕರಿಸಿ "ಷರಾ" ಬರೆದು ಜನಸಾಮಾನ್ಯರನ್ನು ವಿಸ್ಮೃತಿಗೆ ನೂಕಿದ್ದಾರೆ. ವಿಪರ್ಯಾಸವೆಂದರೆ ಇವರ ಅಂತರಂಗವೇ ಅವಧೂತ ಸದೃಶವಾಗಿ ಇವರ ಒಂದು ಕೃತಿಯ ಹೆಸರನ್ನು "ಸಂಸ್ಕೃತಿ ವಿಕೃತಿ" ಎಂದಾಗಿಸಿದೆ.

ಈ “ಲಿಂಗಾಯತ” ಪದವನ್ನು ಪಂಡಿತರು ನಾನಾ ರೀತಿಯಲ್ಲಿ ನಿರ್ವಚಿಸುತ್ತಾರೆ. ಬಾಗಾಯತ, ಪಂಚಾಯತ ಮೊದಲಾದ ಪದಗಳಂತೆ ಇದೂ ಒಂದು ಪದ ಎನ್ನುತ್ತಾರೆ. ಆದರೆ ಆಯತ, ಸ್ವಾಯತ, ಸನ್ನಿಹಿತವೆಂಬ ಪದಗಳು ವಚನಕಾರರಲ್ಲಿ ವಿಶೇಷಾರ್ಥದಲ್ಲಿ ಉಪಯೋಗಿಸಲ್ಪಟ್ಟವೆ. ವ್ಯಾಸನ ಸ್ಕಂದಪುರಾಣದಲ್ಲಿ ತಿಳಿಸಿದ ವೀರಶೈವ ಇಷ್ಟಲಿಂಗಾರ್ಚನೆಯ ಕ್ರಮಕ್ಕನುಗುಣವಾಗಿ ಶಿಷ್ಯನ ಚಿತ್ಕಲೆಯನ್ನು ಲಿಂಗದಲ್ಲಿ ವಿಧ್ಯುಕ್ತಕ್ರಮದಿಂದ ಆಹ್ವಾನಿಸಿ ಗುರುವು ಶಿಷ್ಯನಿಗೆ ಆ ಲಿಂಗದ ಸಂಬಂಧವನ್ನುಂಟುಮಾಡಿದಾಗ ಆತನು ಲಿಂಗಾಯತನಾಗುವನು; ಇದು ಆಯತ. ಅವನು ಪ್ರಾಣಲಿಂಗಾನುಸಂಧಾನನನ್ನು ಮಾಡಬಲ್ಲವನಾಗಲು ಲಿಂಗವು ಸ್ವಾಯತವಾಗುವುದು; ಅವನು ಭಾವಲಿಂಗಾನುಸಂಧಾನವನ್ನು ಮಾಡಲು ಬಲ್ಲವನಾಗಲು ಲಿಂಗವು ಸನ್ನಿಹಿತವಾಗುವುದು.

ಹೀಗೆ ಎಲ್ಲಾ ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ಸಾಕ್ಷ್ಯಗಳು ಆಕರ ಗ್ರಂಥಗಳು ಪಾಶುಪತ-ಲಾಕುಳ-ಕಾಳಾಮುಖ-ವೀರಶೈವ-ಲಿಂಗಾಯತಗಳು ಒಂದೇ ಎಂದು ಪುರಾವೆ ಕೊಡುತ್ತಾ ಸಾಗಿಬಂದಿವೆ. ಪಶುಪತಿ ಅಂದರೆ ನಾನು ಪಶು (ಭಕ್ತ). ನನ್ನ ಪತಿ (ಒಡೆಯ) ಆ ಶಿವ ಎಂಬ ಪಾಶುಪತಾರ್ಥವೇ ವೀರಶೈವ ಶರಣ ಲಿಂಗಾಯತರ "ಶರಣಸತಿ-ಲಿಂಗಪತಿ"ಯಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಕ್ರಿಸ್ತಪೂರ್ವದ ಮೊಹೆಂಜೋ-ದಾರೋ ಕಾಲದಿಂದಲೂ ಶೈವಪಥ ಆಚರಣೆಯಲ್ಲಿದ್ದು ಮತ್ತು ಇತಿಹಾಸದುದ್ದಕ್ಕೂ ತಾನು ಸಾಗಿಬಂದ ಪಥದ ಗುರುತನ್ನು ಢಾಳಾಗಿ ತೋರುತ್ತ ಸಂಶೋಧನೆಗಳಿಗೆ ಸಾಕ್ಷ್ಯವನ್ನು ಕೊಟ್ಟಿದೆ. ಹಾಗಾಗಿ ರೇಣುಕರಾಗಲಿ ಬಸವಣ್ಣನಾಗಲಿ ಈ ಪಥದಲ್ಲಿ ಸಾಗಿದ ಸಹಸ್ರಾರು ಶಿವಪಥಿಗಳಂತೆ ಪಂಥ ಪರಿಚಾರಕರೇ ಹೊರತು ಸಂತ ಸಂಸ್ಥಾಪಕರಲ್ಲ!

ಕಾಳಾಮುಖಿ ಏಕಾಂತರಾಮಯ್ಯನನ್ನು, ಶಕ್ತಿವಿಶಿಷ್ಟಾದ್ವೈತಕ್ಕೆ ಭಾಷ್ಯ ಬರೆದ ಶ್ರೀಪತಿ ಪಂಡಿತಾರಾಧ್ಯರನ್ನು, ರೇಣುಕರನ್ನು, ರೇವಣಸಿದ್ಧರನ್ನಲ್ಲದೆ ಸಮಗ್ರವಾಗಿ ಕಾಳಾಮುಖ-ವೀರಶೈವ-ಲಿಂಗಾಯತದ ಎಲ್ಲಾ ಮಹಾಪುರುಷರನ್ನು ಒಕ್ಕೂಡಿಸಿಕೊಂಡು ಬರೆದ ಕೆಳಗಿನ ಈ ವಚನಗಳು ಈ ನಿಟ್ಟಿನಲ್ಲಿ ಇವೆಲ್ಲವೂ ಒಂದೇ ಒಂದೇ ಒಂದೇ ಎಂದು ಸಾರಿ ಸಾರಿ ಎತ್ತಿ ಹಿಡಿಯುತ್ತವೆ.

'ಬಸವಣ್ಣನೆನ್ನ ಅಂಗ, ಮಡಿವಾಳನೆನ್ನ ಮನ,
ಪ್ರಭುವೆನ್ನ ಪ್ರಾಣ, ಚನ್ನಬಸವನೆನ್ನ ಕರಸ್ಥಲದ ಲಿಂಗ,
ಘಟ್ಟಿವಾಳನೆನ್ನ ಭಾವ, ಸೊಡ್ಡಳಬಾಚರಸರೆನ್ನ ಅರಿವು,
ಮಹಾದೇವಿಯಕ್ಕನೆನ್ನ ಜ್ಞಾನ, ಮುಕ್ತಾಯಕ್ಕನೆನ್ನ ಅಕ್ಕರು,
ಸತ್ಯಕ್ಕನೆನ್ನ ಯುಕ್ತಿ, ನಿಂಬಿಯಕ್ಕನೆನ್ನ ನಿಶ್ಚಯ,
ಅಲ್ಲಾಳಿಯಕ್ಕನೆನ್ನ ಸಮತೆ, ಅನುಮಿಷನೆನ್ನ ನಿಶ್ಚಲ,
ನಿಜಗುಣನೆನ್ನ ಕ್ಷಮೆ, ರೇವಣಸಿದ್ಧಯ್ಯದೇವರೆನ್ನ ನೇತ್ರ,
ಸಿದ್ಧರಾಮತಂದೆಗಳೆನ್ನ ನೇತ್ರದ ದೃಕ್ಕು,
ಮರುಳುಸಿದ್ಧಯ್ಯದೇವರೆನ್ನ ಶ್ರೋತೃ,
ಪಂಡಿತಾರಾಧ್ಯರೆನ್ನ ಜಿಹ್ವೆ, ಏಕೋರಾಮಯ್ಯಗಳೆನ್ನ ನಾಸಿಕ,
ಅಸಂಖ್ಯಾತರೆನ್ನ ಅವಯವಂಗಳು, ಪುರಾತರೆನ್ನ ಪುಣ್ಯದ ಪುಂಜ,
ಏಳುನೂರೆಪ್ಪತ್ತು ಅಮರಗಣಂಗಳೆನ್ನ ಗತಿಮತಿ ಚೈತನ್ಯ,
ಸೌರಾಷ್ಟ್ರ ಸೋಮೇಶ್ವರಾ, ಆ ನಿಮ್ಮ ಶರಣರ ಪಡಿದೊತ್ತಯ್ಯಾ'
(ಸಮಗ್ರ ವಚನ ಸಂಪುಟ: ೬ ವಚನದ ಸಂಖ್ಯೆ: ೧೦೩೪)
***
'ಬಸವಣ್ಣನ ಭಕ್ತಿಸ್ಥಲ, ಮಡಿವಾಳ ಮಾಚಣ್ಣನ ಮಾಹೇಶ್ವರಸ್ಥಲ,
ಘಟ್ಟಿವಾಳ ಮುದ್ದಣ್ಣನ ಪ್ರಸಾದಿಸ್ಥಲ, ಚನ್ನಬಸವಣ್ಣನ ಪ್ರಾಣಲಿಂಗಿಸ್ಥಲ,
ಪ್ರಭುವಿನ ಶರಣಸ್ಥಲ, ಸೊಡ್ಡಳ ಬಾಚರಸರ ಐಕ್ಯಸ್ಥಲ,
ಅಜಗಣ್ಣನ ಆರೂಢ, ನಿಜಗುಣನ ಬೆರಗು,
ಅನುಮಿಷನ ನಿಶ್ಚಲ, ಮಹದೇವಿಯಕ್ಕನ ಜ್ಞಾನ,
ನಿಂಬಿಯಕ್ಕನ ನಿಶ್ಚಯ, ಮುಕ್ತಾಯಕ್ಕನ ಅಕ್ಕರು,
ಸತ್ಯಕ್ಕನ ಯುಕ್ತಿ, ಅಲ್ಲಾಳಿಯಕ್ಕನ ಸಮತೆ,
ರೇವಣಸಿದ್ಧಯ್ಯದೇವರ ನಿಷ್ಠೆ, ಸಿದ್ಧರಾಮತಂದೆಗಳ ಮಹಿಮೆ,
ಮರುಳಸಿದ್ಧಯ್ಯದೇವರ ಅದೃಷ್ಟ ಪ್ರಸಾದನಿಷ್ಠೆ,
ಏಕೋರಾಮಯ್ಯಗಳ ಆಚಾರನಿಷ್ಠೆ,
ಪಂಡಿತಾರಾಧ್ಯರ ಸ್ವಯಂಪಾಕ,
ಮುಗ್ಧಸಂಗಯ್ಯ, ಮೈದುನ ರಾಮಣ್ಣ, ಬೇಡರ ಕಣ್ಣಪ್ಪ,
ಕೋಳೂರ ಕೊಡಗೂಸು, ತಿರುನೀಲಕ್ಕರು,
ರುದ್ರಪಶುಪತಿಗಳು, ದೀಪದ ಕಲಿಯಾರ ಮುಗ್ಧಭಕ್ತಿ
ನಿಮ್ಮೊಳೆನಗೆಂದಪ್ಪುದೊ ಸೌರಾಷ್ಟ್ರ ಸೋಮೇಶ್ವರಾ'
(ಸಮಗ್ರ ವಚನ ಸಂಪುಟ: ೬ ವಚನದ ಸಂಖ್ಯೆ: ೧೦೩೩)
***
ನಂದೀಶ್ವರ, ಭೃಂಗೀಶ್ವರ, ವೀರಭದ್ರ,
ದಾರುಕ, ರೇಣುಕ, ಶಂಖುಕರ್ಣ, ಗೋಕರ್ಣ,
ಏಕಾಕ್ಷರ, ತ್ರಯಕ್ಷರ, ಪಂಚಾಕ್ಷರ, ಷಡಕ್ಷರ,
ಸದಾಶಿವ, ಈಶ್ವರ, ಮಹೇಶ್ವರ, ರುದ್ರ,
ಘಂಟಾಕರ್ಣ, ಗಜಕರ್ಣ,
ಏಕಮುಖ, ದ್ವಿಮುಖ, ತ್ರಿಮುಖ, ಚತುರ್ಮುಖ, ಪಂಚಮುಖ,
ಷಣ್ಮುಖ, ಶತಮುಖ, ಸಹಸ್ರಮುಖ ಮೊದಲಾದ
ಗಣಾಧೀಶ್ವರರು ಇವರು,
ನಿತ್ಯಪರಿಪೂರ್ಣವಹಂಥ ಪರಶಿವತತ್ವದಲ್ಲಿ
ಜ್ಯೋತಿಯಿಂದ ಜ್ಯೋತಿ ಉದಿಸಿದಂತೆ ಉದಯಿಸಿದ
ಶುದ್ಧ ಚಿದ್ರೂಪರಪ್ಪ ಪ್ರಮಥರು.
ಅನಾದಿಮುಕ್ತರಲ್ಲ, ಅವಾಂತರಮುಕ್ತರೆಂಬ ನಾಯ ನಾಲಗೆಯ
ಹದಿನೆಂಟು ಜಾತಿಯ ಕೆರಹಿನಟ್ಟಿಗೆ ಸರಿಯೆಂಬೆ.
ಆ ಶ್ವಾನಜ್ಞಾನಿಗಳಪ್ಪವರ ಶೈವಪಶುಮತವಂತಿರಲಿ,
ಅವರಾಗಮವಂತಿರಲಿ.
ನಿಮ್ಮ ಶರಣರಿಗೆ, ನಿಮಗೆ, ಬೇರೆ ಮಾಡಿ ಸಂಕಲ್ಪಿಸಿ ನುಡಿವ
ಅಜ್ಞಾನಿ ಹೊಲೆಯರ ಎನಗೊಮ್ಮೆ ತೋರದಿರಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ಸಮಗ್ರ ವಚನ ಸಂಪುಟ: 11 ವಚನದ ಸಂಖ್ಯೆ: 55

ವೀರಶೈವ-ಲಿಂಗಾಯತ ಒಂದೇ ಎನ್ನುವ ಅಭಿಪ್ರಾಯದ ಇಂತಹ ಎಲ್ಲಾ ವಚನಗಳು ಕಲಬುರ್ಗಿಯವರ ನಾಲಿಗೆಗೆ ರುಚಿಸದ ಕಾರಣ ಇವುಗಳನ್ನು "ಪ್ರಕ್ಷೇಪ" ಎಂದು ಕರೆದಿದ್ದಾರೆ ಎನ್ನುವುದು ಇಲ್ಲಿ ಮತ್ತೊಂದು ತೌಲನಿಕ ಅಧ್ಯಯನದ ಸಂಶೋಧನಾರ್ಹ ಸಂಗತಿ.

ಇನ್ನು ಅಲ್ಲಮ ತನ್ನ ವಚನದಲ್ಲಿ ಕೈ, ಕೊರಳು, ತಲೆಯಲ್ಲಿ ಲಿಂಗ ಕಟ್ಟುವವರೆಲ್ಲ ತನ್ನ ಆದ್ಯರೇ ಎಂದಿದ್ದಾನೆ,

ಕೈಯಲ್ಲಿ ಕಟ್ಟುವರು ಕೊರಳಲ್ಲಿ ಕಟ್ಟುವರು,
ಮೈಯಲ್ಲಿ ಕಟ್ಟುವರು ಮಂಡೆಯಲ್ಲಿ ಕಟ್ಟುವರು,
ಮನದಲ್ಲಿ ಲಿಂಗವ ಕಟ್ಟರಾಗಿ!
ಆದ್ಯರು ಹೋದರೆಂದು ವಾಯಕ್ಕೆ ಸಾವರು.
ಸಾವುದು ವಿಚಾರವೆ ಗುಹೇಶ್ವರಾ?
(ಸಮಗ್ರ ವಚನ ಸಂಪುಟ: 2 ವಚನದ ಸಂಖ್ಯೆ: 1140)

ಇದಿಷ್ಟು ಕಾಳಾಮುಖ-ವೀರಶೈವ-ಲಿಂಗಾಯತದ ಶತಶತಮಾನಗಳ ಅನುಸಂಧಾನಿ ರೂಪಾಂತರ. ಹಾಗಾಗಿಯೇ ಈಗ ಬಿಡುಗಡೆಯಾಗಬೇಕಿರುವ ಸಿದ್ದರಾಮಯ್ಯನವರ ಜಾತಿ ಜನಗಣತಿಯಲ್ಲಾಗಲಿ ಅಥವಾ ಹಿಂದಿನ ಯಾವುದೇ ಜನಗಣತಿಗಳಲ್ಲಾಗಲಿ ಒಬ್ಬನೇ ಒಬ್ಬ ವ್ಯಕ್ತಿ ತಾನು ಕಾಳಾಮುಖನೆಂದು ನೋಂದಾಯಿಸಿಕೊಂಡಿಲ್ಲ. ಇದಕ್ಕಿಂತ ಬಹುದೊಡ್ಡ ಪುರಾವೆಯನ್ನು ಇನ್ಯಾವುದೇ ಸಂಶೋಧಕ, ಸಂಸ್ಕೃತಿ ಚಿಂತಕ, ಮಾಜಿ ಹಾಲಿ ಸರ್ಕಾರಿ ಸೇವಕ, ಆಡಳಿತ ನಿಯಂತ್ರಕ, ನ್ಯಾಯ ನಿರ್ಣಾಯಕ, ಚೊಕ್ಕ ಪತ್ರಕರ್ತ, ಸಮಾಜವಾದಿ ನಾಯಕರ ಭೋಜನಶಾಲೆಯ ವಿದೂಷಕ ಅಥವಾ ಆ ಸಾಕ್ಷಾತ್ ಲಿಂಗರೂಪಿ ಪರಶಿವನೇ ಅಂಗರೂಪವೆತ್ತಿ ಬಂದರೂ ಕೊಡಲಾರ!

ಇದು ಸವಾಲುವಾದದ ಕಾಳಾಮುಖದ ಪಾರಂಪರಿಕ ಸವಾಲು.

- ರವಿ ಹಂಜ್

No comments: