"ಹುಟ್ಟಿನಿಂದ ಜಾತಿ" ಮತ್ತಿತರೆ ನವನೀತಿಗಳಿಂದುಂಟಾದ ಭಿನ್ನಮತ ಚಟುವಟಿಕೆಗಳು ತೀವ್ರಗೊಂಡಿದ್ದವು. ವೀರಶೈವವು ಎರಡಾಗಿತ್ತು. ಒಂದು ಸನಾತನ ಆದ್ಯರ "ಹುಟ್ಟಿನಿಂದ ಜಾತಿ" ಪರವಾದರೆ ಇನ್ನೊಂದು ನವಶರಣರ "ಹುಟ್ಟಿನಿಂದ ಜಾತಿ" ವಿರೋಧ ಬಣ. ಇಲ್ಲಿ ವಿರೋಧವು ಕೇವಲ ಈ ನಿಯಮದ ವಿರೋಧವಿತ್ತೇ ವಿನಃ ಪಂಥೀಯವಾಗಿ, ತಾತ್ವಿಕವಾಗಿ, ಸಾಂಸ್ಕೃತಿಕವಾಗಿ ಯಾವುದೇ ಭಿನ್ನಮತವಿರಲಿಲ್ಲ. ಹಾಗೆಂದು ವಚನಗಳೇ ಸಾಕ್ಷ್ಯ ನೀಡುತ್ತವೆ. ಅದಲ್ಲದೆ ಪಂಥೀಯವಾಗಿ, ತಾತ್ವಿಕವಾಗಿ, ಸಾಂಸ್ಕೃತಿಕವಾಗಿ ಭಿನ್ನಮತ ರೂಪಿಸಲು ಭಿನ್ನಮತೀಯ ಶರಣರಿಗೆ ಸಮಯವೂ ಇರಲಿಲ್ಲ. ಆದರೆ ಅದನ್ನು ವರ್ತಮಾನದ ಸಂಶೋಧಕರು, ಸಾಮಾಜಿಕ ಚಿಂತಕರು, ಸಂಸ್ಕೃತಿ ಚಿಂತಕರು, ಜಾತಿಪೀಠಿಗಳು, ಕಾಯಕಯೋಗಿಗಳು ’ಮತ್ತೆ ಕಲ್ಯಾಣ’ವೆಂದು ನಿತ್ಯಕಲ್ಯಾಣವೆಂದು ವಿಧವಿಧವಾಗಿ ರೂಪಿಸುತ್ತಿದ್ದಾರೆ!
ಇರಲಿ,"ಹುಟ್ಟಿನಿಂದ ಜಾತಿ" ನಿಯಮವು ಪ್ರಬಲ ವಿರೋಧದ ನಡುವೆಯೂ ಜನ ಬೆಂಬಲ ಗಳಿಸುತ್ತ ಕಲ್ಯಾಣ ಕ್ರಾಂತಿಯನ್ನು ಅಷ್ಟೇ ಕ್ಷಿಪ್ರವಾಗಿ ಪರ್ಯಾವಸಾನಗೊಳಿಸಿ ಆಡಳಿತದ ಬೆಂಬಲದೊಂದಿಗೆ ಅನುಷ್ಠಾನಗೊಂಡುಬಿಟ್ಟಿತು. ಹೀಗೆ "ಹುಟ್ಟಿನಿಂದ ಜಾತಿ"ಯಲ್ಲದೇ ಅಂತ್ಯಜ ವರ್ಗ, ಅಂತರ್ಜಾತೀಯ ವಿವಾಹ ನಿರ್ಬಂಧ, ಗೋಮಾಂಸ ನಿಷೇಧದಂತಹ ನವ ನೀತಿಗಳು ವೀರಶೈವ ಪಂಥದಲ್ಲೂ ಯಶಸ್ವಿಯಾಗಿ ಜಾರಿಗೊಂಡವು. ಕ್ರಮೇಣ ಈ ಎಲ್ಲಾ ನವನೀತಿಗಳು ಪಟ್ಟಭದ್ರಹಿತಾಸಕ್ತಿಗಳ ಹುಟ್ಟಿಗೆ ಕಾರಣವಾಯಿತು. ಪಟ್ಟಭದ್ರ ಹಿತಾಸಕ್ತಿ ಜೀತಕ್ಕೆ ಜನ್ಮ ನೀಡಿತು. ಪಟ್ಟಭದ್ರ ಹಿತಾಸಕ್ತಿ ಮತ್ತು ಜೀತಪದ್ಧತಿಯ ಶೋಷಣೆಗಳ ವಿರೋಧ ಕೂಡಾ ಮುಂದಿನ ಭಕ್ತಿಪಂಥಗಳ ಕಾರ್ಯಸೂಚಿಯನ್ನು ಸೇರಿದವು. ಹದಿನಾರನೇ ಶತಮಾನದವರೆಗೆ ದೇಶಾದ್ಯಂತ ಅಲ್ಲಲ್ಲಿ ಚಳವಳಿಗಳು, ಬಂಡಾಯ, ದಂಗೆಗಳು ಭಕ್ತಿಪಂಥದ ಮಾರ್ಗದಲ್ಲಿಯೇ ಸಾಗಿಬಂದವು. ಅದನ್ನೇ ಹದಿನಾರನೇ ಶತಮಾನದ ಸರ್ವಜ್ಞ ತನ್ನ "ಭೂತೇಶ ಶರಣೆಂಬ | ಜಾತಿ ಮಾದಿಗನಲ್ಲ ಜಾತಿಯಲಿ ಹುಟ್ಟಿ ಭೂತೇಶ - ಶರಣೆನ್ನದಾತ ಮಾದಿಗನು ಸರ್ವಜ್ಞ" ಎಂಬ ವಚನದಲ್ಲಿ ಹುಟ್ಟಿನಿಂದಾದ ಜಾತಿವ್ಯವಸ್ಥೆಯನ್ನು ಸ್ಮರಿಸಿದ್ದಾನೆ. ಇನ್ನು ಕಲ್ಯಾಣ ಕ್ರಾಂತಿಯ ವಚನಗಳಲ್ಲಿ ಅಸ್ಪೃಶ್ಯತೆಯನ್ನು ಬಿಂಬಿಸುವ ’ಮುಟ್ಟಬಾರದು’, ’ಮುಟ್ಟಿಸಿಕೊಳ್ಳಬಾರದು’ ಎಂಬ ಕ್ರೂರ ಸ್ವರೂಪದ ಉಲ್ಲೇಖಗಳಾಗಲೀ ನಿದರ್ಶನಗಳಾಗಲೀ ಇಲ್ಲ!
ಹರಿಹರನ ’ಭೋಗಣ್ಣ ರಗಳೆ’ಯಲ್ಲಿ ಕೆಂಭಾವಿಯ ಬ್ರಾಹ್ಮಣರು ಆ ಊರಿನ ಅರಸನಾದ ಚಂದಿಮರಸನಲ್ಲಿಗೆ ಹೋಗಿ ಭೋಗಣ್ಣನು ಶಿವಶರಣನೆಂದು ಒಬ್ಬ ಹೊಲೆಯನನ್ನು ಮನೆಯಲ್ಲಿ ಸೇರಿಸಿಕೊಂಡಿರುವನೆಂಬುದಾಗಿ ದೂರಲು ಚಂದಿಮರಸನು ಕರೆಸಿ ಕೇಳಿದಾಗ ಭೋಗಣ್ಣನು, "...ಹೊಲೆಯರಮ್ ಹೊಗಿಸಿತಿಲ್ಲ ಮನೆಯೊಳಗರಸ. ನಿನಗೆ ತಿಳಿವಿಲ್ಲ ತಿಳಿವಿಲ್ಲದಡೆ ಕೇಳರಸ. ನಾರಣಕ್ರಮಿತರಂ ಹೊಗಿಸಿದೆನೆ. ಸೂರಿಭಟ್ಟರನೊಯ್ದು ಪುಗಿಸಿದೆನೆ...ಶಿವನನರಿಯದ ಹೊಲೆಯರಂ ಹೊಗಿಸೆ ಕೇಳರಸ. ಶಿವಭಕ್ತನಂ ಹೊಗಿಸಿದೆಮ್ ತಪ್ಪೇ ಹೇಳರಸ" ಎಂದು ಉತ್ತರಿಸುತ್ತಾನೆ. ಇದೇ ರೀತಿಯ ಸಂಭಾಷಣೆ ಬಸವರಾಜದೇವರ ರಗಳೆಯಲ್ಲಿಯೂ ಬರುತ್ತದೆ. ಬಸವರಾಜದೇವರ ರಗಳೆಯಲ್ಲಿ ಬ್ರಾಹ್ಮಣರು ಬಿಜ್ಜಳನಲ್ಲಿ ಬಸವನು ಹೊಲೆಯರ ಮನೆಯಲ್ಲಿ ಉಂಡನು ಎಂದು ದೂರಿದಾಗ ಬಸವನು ಶಿವನನ್ನು ಅರಿತ ಹೊಲೆಯರ ಮನೆಯಲ್ಲಿ ಉಂಡಿಹೆನೆ ಹೊರತು ವೈಷ್ಣವ ಬ್ರಾಹ್ಮಣರೆಂಬೋ "ಹರನರಿಯದ ಹೊಲೆಯರ ಮನೆಯಂ ಹೊಕ್ಕುಂಡುದಿಲ್ಲ" ಎಂದುತ್ತರಿಸುತ್ತಾನೆ. ಆಗ ಬ್ರಾಹ್ಮಣರನ್ನು ಹೊಲೆಯರೆಂದು ಹೀಗಳೆದನೆಂದು ಬಿಜ್ಜಳನು "ಇಂತು ನುಡಿವರೆ ಭಂಡಾರಿಬಸವ? ವೇದಶಾಸ್ತ್ರಪುರಾಣಾಗಮ ಯಜ್ಞವಿಧಿಯಿಂ ನಡೆವ ವಿಪ್ರರಂ ಹೊಲೆಯರೆಂದು ಶಿವಭಕ್ತನಾದ ಹೊಲೆಯನಂ ಉತ್ತಮನೆಂಬುದಕ್ಕೆ ಪ್ರಮಾಣೇನು? ವಿಪ್ರರಂ ಮೈಯಂ ಕೊಯ್ಯೇ ನೆತ್ತರ್ ಸುರಿದು, ಭಕ್ತರ ಮೈಯೊಳು ಪಾಲ್ ಸುರಿದವುದೆ" ಎನ್ನುತ್ತಾನೆ. ಆಗ ಬಸವಣ್ಣನು ನಾಗಿದೇವನ ಪಾದವನ್ನು ಮೀಟಿ ಗಾಯಗೊಳಿಸಿ ಅಲ್ಲಿಂದ ಹಾಲು ಸುರಿಯುವಂತೆ ಪವಾಡ ಮೆರೆಯುತ್ತಾನೆ.
ಈ ಕಥೆಯನ್ನು ವಿಶ್ಲೇಷಿಸಿದಾಗ ಆಗಷ್ಟೇ ’ಹುಟ್ಟಿನಿಂದ ಜಾತಿ’ ಮತ್ತಿತರೆ ಕಟ್ಟಳೆಗಳು ಜಾರಿಯಾಗುತ್ತಿದ್ದವೆನಿಸುತ್ತದೆ. ವೀರಶೈವವು ಇನ್ನೂ ಆ ಕಟ್ಟಳೆಗಳನ್ನು ಅಳವಡಿಸಿಕೊಂಡಿರದೆ ಎಲ್ಲರನ್ನೂ ಒಳಗೊಳ್ಳುತ್ತಿದ್ದ ಪೂರ್ವಾರ್ಧ ಕಾಲದಲ್ಲಿ ಈ ಪ್ರಸಂಗ ನಡೆದಿದೆ. ಏಕೆಂದರೆ ಅಂತಹ ಕಟ್ಟಳೆಗಳನ್ನು ಅಳವಡಿಸಿಕೊಳ್ಳುವಲ್ಲಿ ವೈಷ್ಣವ ಪಂಥ ವೀರಶೈವಕ್ಕಿಂತ ಕೊಂಚ ಮುಂದಿತ್ತು. ಒಟ್ಟಿನಲ್ಲಿ ಇಲ್ಲಿ ಬಸವಣ್ಣನ ಶೈವವು ವೈಷ್ಣವಕ್ಕಿಂತ ಉನ್ನತವಾಗಿತ್ತು ಎಂದು ತೋರುವ ಹರಿಹರನ ಸ್ವಪಂಥನಿಷ್ಠೆ ಮತ್ತು ಪರಪಂಥದ್ವೇಷ ಕಾಣುತ್ತದೆ. ಇನ್ನು ಭೋಗಣ್ಣನ ಕತೆಯಲ್ಲಿ ’ಹುಟ್ಟಿನಿಂದ ಜಾತಿ’ ನೀತಿಯಂತೆ ಊರ ಹೊರಗಿರಬೇಕಾದವರನ್ನು ಮೊದಲಿನಂತೆ ಮನೆಯಲ್ಲಿ ಶಿವಭಕ್ತರಂತೆ ಸೇರಿಸಿದ್ದಾನೆ ಎಂಬ ದೂರಿದೆಯೇ ಹೊರತು ಮುಟ್ಟಬಾರದು ಮತ್ತು ಮುಟ್ಟಿಸಿಕೊಳ್ಳಬಾರದು ಎಂದು ಕಾಣುವುದಿಲ್ಲ.
ಅಷ್ಟೇ ಅಲ್ಲದೆ ಹದಿನೇಳನೇ ಶತಮಾನದವರೆಗೆ ಅಂತ್ಯಜರನ್ನು ಕೀಳಾಗಿ ಕಾಣುವ ಸ್ವರೂಪ ಭೀಕರವಾಗಿರಲಿಲ್ಲ. ಏಕೆಂದರೆ ಹದಿನೈದನೇ ಶತಮಾನದ ವಿಜಯನಗರ ಸಾಮ್ರಾಜ್ಯದಲ್ಲಿ ದಲಿತ ಸೈನಿಕರಿದ್ದರು. ಮುಟ್ಟಿತಟ್ಟಿಯೇ ಆಡಬೇಕಾದ ಅನಿವಾರ್ಯತೆಯ ದಲಿತ ಕುಸ್ತಿಪಟುಗಳಿದ್ದರು. ಅಂದರೆ ಆಗಲೂ ಅಸ್ಪೃಶ್ಯತೆ ಇರದೆ ಮಡಿ ಮೈಲಿಗೆ, ಗೋಮಾಂಸಭಕ್ಷಣೆ, ಮೋಕ್ಷಗಳ ಮಟ್ಟಿಗೆ ಮಾತ್ರ ಅಸಮಾನತೆ ಸೀಮಿತವಾಗಿದ್ದಿತು. ಆದರೆ ಯಾವಾಗ ಬ್ರಿಟಿಷರು ಭಾರತಕ್ಕೆ ಕಾಲಿಟ್ಟು ಪ್ರಚಾರಪಡಿಸಿದ ಮನುಸ್ಮೃತಿ, ಬ್ರಿಟಿಷರ ವರ್ಣಭೇದನೀತಿ (ಅಸ್ಪೃಶ್ಯತೆ) ಭಾರತವನ್ನು ಗಾಢವಾಗಿ ಆವರಿಸಿತೋ ಆಗ ಅಸ್ಪೃಶ್ಯತೆ ನಮ್ಮದೇ ಆಗಿಹೋಯಿತು. ಅಂದರೆ ಈ ಅಸ್ಪೃಶ್ಯತೆಯ ಮೂಲ ಬ್ರಿಟನ್ನಿನದೇ ಹೊರತು ಭಾರತದಲ್ಲ. ಈ ’ಮುಟ್ಟಬಾರದು’, ’ಮುಟ್ಟಿಸಿಕೊಳ್ಳಬಾರದು’ ಎಂಬ ಅಸ್ಪೃಶ್ಯತೆ ಬಂದದ್ದು ಬ್ರಿಟಿಷರು ಪಾಲಿಸುತ್ತಿದ್ದ ಮತ್ತು ಭಾರತಕ್ಕೆ ಪರಿಚಯಿಸಿದ ವರ್ಣಭೇದನೀತಿಯಿಂದ! ಅದನ್ನವರು ಅತ್ಯಂತ ತೀವ್ರವಾಗಿ ಪಾಲಿಸುತ್ತಿದ್ದರು.
ನೆಲೆಯೂರದ ಇಸ್ಲಾಂ ದಾಳಿ ಹುಟ್ಟಿನಿಂದ ವರ್ಣ/ಜಾತಿಗಳನ್ನು ಸೃಷ್ಟಿಸಿದರೆ, ನೆಲೆಯೂರಿದ ಇಸ್ಲಾಂ ಆಡಳಿತ ಸಾಮಾಜಿಕ ಅಸಮಾನತೆ, ಮತ್ತು ಗೌರವ ಸಂಕೇತದಂತಿದ್ದ ಹಿಂದೂ ಪರ್ದಾ ವ್ಯವಸ್ಥೆಯನ್ನು ತೀವ್ರಗೊಳಿಸಿ ಮಹಿಳಾ ಶೋಷಣೆಗಳಿಗೆ ಎಡೆಮಾಡಿಕೊಟ್ಟಿತು. ಮುಸ್ಲಿಂ ಆಳ್ವಿಕೆಯಲ್ಲಿ ಮೊದಲ ದರ್ಜೆ, ಎರಡನೇ ದರ್ಜೆ, ಮೂರನೇ ದರ್ಜೆ ಎಂಬ ಶೋಷಣೆಯನ್ನು ಕಲಿತಿದ್ದ ಭಾರತೀಯನಿಗೆ ಬ್ರಿಟಿಷರು ಪರಿಚಯಿಸಿದ ’ಅಸ್ಪೃಶ್ಯತೆ’, ಮೇಲರಿಮೆಯ ಕಿರೀಟ ಮತ್ತು ಶೋಷಣೆ ಎಂಬ ಮಂತ್ರದಂಡವನ್ನು ಕರುಣಿಸಿತು. ಕಿರೀಟ ಮತ್ತು ಮಂತ್ರದಂಡಗಳೆಂಬ ಅಲೌಕಿಕ ಶಕ್ತಿಪ್ರಿಯ ಭಾರತೀಯ ಅಸ್ಪೃಶ್ಯತೆಯನ್ನು ಮಾಂತ್ರಿಕವಾಗಿ ಆವರಸಿಕೊಂಡದ್ದಲ್ಲದೇ ಅಷ್ಟೇ ತೀವ್ರವಾಗಿ ಪಾಲಿಸತೊಡಗಿದನು. ವಿದೇಶಿ ಆಕ್ರಮಣಗಳು ಹೊಸ ಧರ್ಮಗಳನ್ನು ತಂದದ್ದಷ್ಟೇ ಅಲ್ಲದೇ ಹಿಂದೂ ಧರ್ಮದಲ್ಲಿ ವಿಸ್ಮೃತಿ, ವಿಕಾರಗಳನ್ನು ಸೃಷ್ಟಿಸಿದವು.
ಒಂದು ದೇಶದ ನೆಲಮೂಲ ಸಂಸ್ಕೃತಿಯು ವಿದೇಶಿಗರ ಪದ ನ್ಯೂನತೆಯಿಂದ ಹಿಂದೂ ಎಂದಾಗಿ ಆ ನಾಗರೀಕತೆಯಲ್ಲಿದ್ದ ಭಿನ್ನ ಪಂಥಗಳ ಜಟಾಪಟಿ ಶ್ರೇಷ್ಠತೆಯ ವ್ಯಸನವಾಗಿ ಒಂದೇ ಬಳ್ಳಿಯ ಹೂವುಗಳಂತಿದ್ದರೂ ಜೈನ, ಬೌದ್ಧ, ಹಿಂದೂ ಬೇರೆ ಬೇರೆ ಧರ್ಮಗಳೆನಿಸಿದ್ದು ಭಾರತದ ಜಾತಕ ಫಲ. ಇಂತಹ ಅನಿಸಿಕೆಯ ಜಾತಕ ಫಲ ತನ್ನಲ್ಲಿದ್ದರೂ, ವಿದೇಶಿಗರು ಇಟ್ಟ ಹೆಸರನ್ನೇ ಹೊತ್ತು, ವಿದೇಶಿಗ ಗ್ರೀಕ್, ಜೋರಾಷ್ಟ್ರಿಯನ್, ಹೂಣ, ಅಗ್ನಿಯಾರಾಧಕ ತುರುಕ ಸಂಸ್ಕೃತಿಯಿಂದಲೇ ತನ್ನ ಸಂಸ್ಕೃತಿಯನ್ನು ಕಟ್ಟಿಕೊಂಡು ಉನ್ನತವೆನಿಸಿ ತನ್ನ ಅನೇಕ ಜಾತಕ ಫಲಗಳನ್ನು ಪಡೆದಿದ್ದರೂ, ತನ್ನ ವಾಸ್ತವ ಚರಿತ್ರೆಯನ್ನು ಇದೇ ರೀತಿ ವಿದೇಶಿಗರು ಸಮೃದ್ಧವಾಗಿ ಕಟ್ಟಿಕೊಟ್ಟಿದ್ದರೂ ಭರತ ಮಾತೆ (ಸಿ)ಹಿಂದೂ ಸುತೆಯ ಸುಪುತ್ರತ್ರಿಯರು ತಮ್ಮ ತನುಜಾತೆಯ ಚರಿತ್ರೆಯನ್ನು ಈ ವಿದೇಶಿಗರ ದೃಷ್ಟಿಯಿಂದ ಗ್ರಹಿಸುವಲ್ಲಿ ನಿರ್ದುರ್ಬರ್ಬರವಾಗಿ ಸೋತಿದ್ದಾರೆ.
ಫಾಹಿಯಾನ್, ಯಿ ತ್ಸಿ, ಹುಯೆನ್ ತ್ಸಾಂಗ್, ಅಲ್ ಬರೂನಿ, ಮಾರ್ಕೊ ಪೋಲೋ, ಅಬ್ದುಲ್ ರಜಾಕ್, ನಿಕೊಲೊ ಕಾಂಟಿ, ಡೊಮಿಂಗೋ ಪಾಯಿಸ್, ಫ್ರಾನ್ಸಿಸ್ ಬುಕನನ್, ಸರ್ ಜಾನ್ ಮಾರ್ಷಲ್, ಬಿ.ಎಲ್. ರೈಸ್ ಮತ್ತಿತರರು ಕಟ್ಟಿಕೊಟ್ಟಿರುವ ವಾಸ್ತವ ಇತಿಹಾಸದ ಹೊಳಹುಗಳಿಗಿಂತ ವಿಭಜಿಸಿ ಆಳಲು ಬೆಳಕಿಗೆ ತಂದ ಏಕೈಕ ಬ್ರಿಟಿಷ್-ಪ್ರಣೀತ ಮನುಸ್ಮೃತಿ ಗ್ರಂಥವೇ ಇತಿಹಾಸವೆಂದು ಭಾರತೀಯನಿಗೆ ಅತ್ಯಂತ ಅಪ್ಯಾಯಮಾನವಾಗಿಬಿಟ್ಟಿತು. ಈ ಅಪ್ಯಾಯಮಾನತೆಯಲ್ಲಿ ಈಗಲೂ ಮುಳುಗಿಹೋಗಿರುವ ಭಾರತೀಯ ತನ್ನದೇ ಇತಿಹಾಸದ ಸ್ಪಷ್ಟ ಚಿತ್ರಣ ಕೊಡುವ ವಚನಸಾಹಿತ್ಯದಂತಹ ಗ್ರಂಥಗಳಲ್ಲಿನ ಮಹತ್ ಹೊಳಹುಗಳು ದೇದೀಪ್ಯಮಾನವಾಗಿ ಕಣ್ಣು ಕೋರೈಸುತ್ತಿದ್ದರೂ ಗ್ರಹಿಸದಷ್ಟು ದಿಙ್ಮೂಢನಾಗಿಬಿಟ್ಟಿದ್ದಾನೆ! ಇನ್ನು ತರ್ಕ, ವಿಶ್ಲೇಷಣೆ, ತಂತ್ರ, ಸೂತ್ರ, ಶಾಸ್ತ್ರಬದ್ಧ, ಸಮಗ್ರ ವೈಧಾನಿಕತೆಯ ಅನುಶಾಸಿತ ಅಧ್ಯಯನದ ಸಂಶೋಧನೆಗಳು ಸಾಧ್ಯವೇ ಎನ್ನುವಷ್ಟು ಇಲ್ಲಿಯವರೆಗಿನ ಸಂಶೋಧನ ಸಂಕಥನಗಳು ಮನಸ್ಸನ್ನು ಬಾಡಿಸುತ್ತವೆ.
ಯಾವುದೇ ಒಂದು ಅನ್ಯ ಧರ್ಮ, ಪಂಥ, ಸಿದ್ಧಾಂತ, ಸಂಸ್ಕೃತಿಯನ್ನು ಬಲವಂತವಾಗಿ ಹೇರಿದರೆ, ಆ ಹೇರಿಕೆ ಎಂತಹ ಸಾಮಾಜಿಕ ಪಲ್ಲಟಗಳನ್ನು ಸೃಷ್ಟಿಸಬಲ್ಲದು ಎಂಬುದಕ್ಕೆ ಭಾರತವೇ ಸಾಕ್ಷಿ. ಇಸ್ಲಾಮ್ ದಾಳಿ ಮತ್ತು ಹೇರಿಕೆ ಇಂತಹ ಪಲ್ಲಟ ಭಾರತವನ್ನು ಸೃಷ್ಟಿಸಿದರೆ, ಬ್ರಿಟಿಷ್ ಆಳ್ವಿಕೆ ಅದನ್ನು ಊರ್ಜಿತಗೊಳಿಸಿತು. ಸ್ವತಂತ್ರ ಭಾರತ ಅದನ್ನು ಅಪ್ಪಿ ಸಂವಿಧಾನಿಕಗೊಳಿಸಿತು.
ಬಹಳಷ್ಟು ವಚನಕಾರರು ಅದ್ಭುತ ಹೋರಾಟಗಾರರು, ಪಂಥನಿಷ್ಠರು, ಸಾಹಿತ್ಯಪದಸಂಯೋಜಕರಾಗಿದ್ದರಲ್ಲದೆ ಉಪಮೆ, ಪ್ರತಿಮೆ, ವಿಡಂಬನೆಗಳನ್ನು ಯಥೇಚ್ಛವಾಗಿ ಆಕರ್ಷಕ ರೀತಿಯಲ್ಲಿ ಬಳಸಿ ವಾಚ್ಯಸೂಚ್ಯವಾಗಿ ಹೇಳಬೇಕಾದುದನ್ನು ತಲುಪಿಸುವ ಕಲೆಯಲ್ಲಿ ನುರಿತಿದ್ದರು. ಆದರೆ ಅವರೆಲ್ಲಾ ದಾರ್ಶನಿಕ ದಿಗ್ದರ್ಶಕರಾಗಿರಲಿಲ್ಲ. ಅತ್ಯಂತ ಕ್ರಿಯಾಶೀಲ, ಸೃಜನಶೀಲ, ದಿಗ್ದರ್ಶಕ, ದಾರ್ಶನಿಕನೆಂದೇ ಖ್ಯಾತನಾದ ಅಲ್ಲಮ ಕೂಡ ರಾಗದ್ವೇಷಗಳ ಪಂಥಗೇಡಿತನದಿಂದ ಹೊರತಾಗಿರಲಿಲ್ಲ ಎಂಬುದನ್ನು ಅವನ ವಚನಗಳೇ ತೋರುತ್ತವೆ. ಆದರೆ ಅವನ ಕಾಳಾಮುಖ ಹಿನ್ನೆಲೆಯಲ್ಲಿ ಆತ ಕಾಳಾಮುಖರ ತರ್ಕ, ದರ್ಶನ, ತಂತ್ರ, ಯೋಗಾಚಾರಗಳನ್ನು ಪಾಲಿಸುತ್ತಿದ್ದುದು ಅವನ ಅನೇಕ ವಚನಗಳಲ್ಲಿ ಕಾಣಸಿಗುತ್ತದೆ. ಅಂತಹ ವಚನವೊಂದು ಹೀಗಿದೆ:
ಪ್ರಥಮದಲ್ಲಿ ವಸ್ತು ಅನಿರ್ವಾಚ್ಯವಾಗಿದ್ದಿತ್ತು.
ಆ ಅನಿರ್ವಾಚ್ಯವಾಗಿದ್ದ ಪರವಸ್ತು
ತನ್ನ ಲೀಲೆಯಿಂದ ತಾನೇ ಪರಬ್ರಹ್ಮವೆಂಬ ನಾಮವಾಯಿತ್ತು !
ಆ ನಾಮವನೆಯ್ದಿ ಕುಳವಾಯಿತ್ತು,
ಆ ಕುಳದಿಂದ ಆತ್ಮನೆಂಬ ಲಿಂಗಸ್ಥಲವಾಯಿತ್ತು.
ಆ ಸ್ಥಳ ಕುಳದೊಳಗೆಯ್ದಿ ಸ್ಥಳಕುಳವೆಂಬ ಎರಡಿಲ್ಲದೆ ನಿಂದಿತ್ತು.
ಅದೆಂತೆಂದಡೆ:
ವಾಙ್ಮನಕ್ಕಗೋಚರವಾದ ಪ್ರರಬ್ರಹ್ಮದಿಂದಾಯಿತ್ತು ಭಾವ,
ಭಾವದಿಂದಾಯಿತ್ತು ಜ್ಞಾನ, ಜ್ಞಾನದಿಂದಾಯಿತ್ತು ಮನ,
ಮನದಿಂದಾಯಿತ್ತು ಬುದ್ಧಿ, ಬುದ್ಧಿಯಿಂದಾಯಿತ್ತು ಚಿತ್ತ,
ಚಿತ್ತದಿಂದಾಯಿತ್ತು ಅಹಂಕಾರ.
ಇಂತು_ಅಹಂಕಾರ ಚಿತ್ತ ಬುದ್ಧಿ ಮನ ಜ್ಞಾನ ಭಾವ ಎಂದು ಆರಾದವು.
ಈ ಆರೂ ಕೆಟ್ಟಲ್ಲದೆ ವಾಙ್ಮನಕ್ಕಗೋಚರವಾದ ಪರಬ್ರಹ್ಮವಾಗಬಾರದು.
ಇದ ಕೆಡಿಸುವುದಕ್ಕೆ ಆರು ಸ್ಥಲವಾದವು.
ಅವಾವೆಂದಡೆ:
ಅಹಂಕಾರ ಅಡಗಿದಾಗ ಭಕ್ತಸ್ಥಲ,
ಚಿತ್ತದ ಗುಣ ಕೆಟ್ಟಾಗ ಮಾಹೇಶ್ವರಸ್ಥಲ
ಬುದ್ಧಿಯ ಗುಣ ಕೆಟ್ಟಾಗ ಪ್ರಸಾದಿಸ್ಥಲ,
ಮನೋಗುಣ ಅಳಿದಾಗ ಪ್ರಾಣಲಿಂಗಸ್ಥಲ,
ಜೀವನ ಗುಣ ಸಂದಾಗ ಶರಣ ಸ್ಥಲ
ಭಾವ ನಿರ್ಭಾವವಾದಾಗ ಐಕ್ಯಸ್ಥಲ.
ಇಂತು ಷಟ್ಸ್ಥಲವಾಗಿ ವಾಙ್ಮನಕ್ಕೆ ಅಗೋಚರವಾದ ಬ್ರಹ್ಮವೆ ಆತ್ಮನು.
ಆ ಆತ್ಮನಿಂದ ಆಕಾಶ ಹುಟ್ಟಿತ್ತು, ಆ ಆಕಾಶದಿಂದ ವಾಯು ಹುಟ್ಟಿತ್ತು.
ಆ ವಾಯುವಿನಿಂದ ಅಗ್ನಿ ಹುಟ್ಟಿತ್ತು,
ಆ ಅಗ್ನಿಯಿಂದ ಅಪ್ಪು ಹುಟ್ಟಿತ್ತು.
ಆ ಅಪ್ಪುವಿನಿಂದ ಪೃಥ್ವಿ ಹುಟ್ಟಿತ್ತು.
ಇಂತು_ಕುಳಸ್ಥಳವಾಗಿ ಸ್ಥಳಕುಳವಾದ ವಿವರವೆಂತೆಂದಡೆ:
ಪೃಥ್ವಿ ಅಪ್ಪುವಿನೊಳಡಗಿ, ಅಪ್ಪು ಅಗ್ನಿಯೊಳಡಗಿ,
ಅಗ್ನಿ ವಾಯುವಿನೊಳಡಗಿ, ವಾಯು ಆಕಾಶದೊಳಡಗಿ,
ಆಕಾಶ ಆತ್ಮನೊಳಡಗಿತ್ತು, ಆತ್ಮ ಪರಶಿವನಲ್ಲಿ ಅಡಗಿತ್ತು !
ಇಂತು_ಷಡಂಗವಡಗಿದ ಪರಿ ಎಂತೆಂದಡೆ:
ಪೃಥ್ವೀ ಭವೇತ್ ಜಲೇ, ಜಲೇ ಮಗ್ನಾಜಲಂ ಗ್ರಸ್ತಂ ಮಹಾಗ್ನಿನಾ
ವಾಯೋರಸ್ತಮಿತಂ ತೇಜೋ ವ್ಯೋಮ್ನಿ ವಾತೋ ವಿಲೀಯತೇ
ವ್ಯೋಮ್ಯೋತ್ಮನಿ ವಿಲೀನಂ ಸ್ಯಾತ್ ಆತ್ಮಾ ಪರಶಿವೇ ಪದೇ” _
ಎಂದುದಾಗಿ ಆತ್ಮನು ಪರಬ್ರಹ್ಮದೊಳಡಗಿ ನಿಂದಿತ್ತು ಗುಹೇಶ್ವರಾ.
- ಅಲ್ಲಮಪ್ರಭು
(ಸಮಗ್ರ ವಚನ ಸಂಪುಟ: ೨ ವಚನದ ಸಂಖ್ಯೆ: ೧೩೬೪)
ಕೇವಲ ಅಭಿಮಾನದ ಹುಚ್ಚುಹೊಳೆಯಲ್ಲಿ, ಹುಣ್ಣಿಮೆಯ ಭರತದ ಅಲೆಗಳಲ್ಲಿ ಕೊಚ್ಚಿಹೋಗದೆ ಅಲೆಗಳ ಮೇಲೆ ಸವಾರಿಸುತ್ತ ಅವುಗಳ ಉಬ್ಬರ, ಅಬ್ಬರಗಳ ಅರಿದು ಒರೆಗ್ಹಚ್ಚಿ ನೋಡುವ ಚಿಕಿತ್ಸಕ ಯಾನೆ ಸಂಶೋಧಕ ದೃಷ್ಟಿಯ ಕೊರತೆ ಈ ಎಲ್ಲಾ ಸಂಶೋಧನಾ ಅಬ್ಬರದ ಒರತೆಗಳ ಕೊರತೆಯಾಗಿದೆ. ಅಲ್ಲಮನನ್ನು ಇಲ್ಲಮನನ್ನಾಗಿ ನಶ್ವರ ಗುಹೇಶ್ವರನಾಗಿ ನೋಡುವ ತಟಸ್ಥ ದೃಷ್ಟಿಯ ಸಂಶೋಧನೆಗಳು ಇಂದು ಬೇಕಾಗಿವೆ. ಏಕೆಂದರೆ ಅಲ್ಲಮನು ಸಹ ಸಹಜಮಾನವನಾಗಿದ್ದನೇ ಹೊರತು ಅತಿಮಾನವನಲ್ಲ! ಏಕೆಂದರೆ ಮಾನವತೆಯನ್ನು ಮೀರುವುದೂ ಅಮಾನವೀಯವೇ!
ಆದರೆ ತಮ್ಮದೇ ಹಿತಾಸಕ್ತಿಗಳನ್ನು ಹೊಂದಿದ ಹಲವಾರು ಆಧುನಿಕ ಶರಣರು, ಪೀಠಪ್ರಣೀತರು, ವಿರಕ್ತಾನುರಕ್ತ ಛದ್ಮವೇಷಿ ಪ್ರಚ್ಛನ್ನ ಸಮಾಜೋದ್ಧಾರಕರು ಇಲ್ಲದ ಆಧುನಿಕ ಧರ್ಮದ ನಶೆಯಲ್ಲಿ ತೇಲುತ್ತಿದ್ದಾರೆನಿಸುತ್ತದೆ. ತನ್ನ ವಚನಗಳಲ್ಲಿ ಒಮ್ಮೆಯೂ ಲಿಂಗಾಯತ ಪದ ಬಳಸದ ಆದರೆ ಸಾಕಷ್ಟು ಬಾರಿ ವೀರಶೈವ ಪದ ಬಳಸಿರುವ ಬಸವಣ್ಣನನ್ನು ಲಿಂಗಾಯತ ಧರ್ಮದ ಸಂಸ್ಥಾಪಕನೆಂದಿದ್ದಾರೆ. ಯಾವ ’ಹುಟ್ಟಿನಿಂದ ಜಾತಿ’ಯನ್ನು ಶರಣರು ವಿರೋಧಿಸಿ ಕ್ರಾಂತಿಯನ್ನು ನಡೆಸಿದ್ದರೋ ಅದನ್ನೇ ಗಟ್ಟಿಯಾಗಿ ಅಪ್ಪಿಕೊಂಡಿರುವುದಲ್ಲದೆ ’ಜಾತಿಗೊಂದು ಪೀಠ’ ಮಾಡಿಕೊಂಡು ’ಜಾತಿ ನಮ್ಮ ಜನ್ಮಸಿದ್ಧ ಹಕ್ಕು’ ಎಂದು ಹಕ್ಕೊತ್ತಾಯ ಮಾಡುತ್ತಿದ್ದಾರೆ. ಇದೆಲ್ಲವೂ ವಿರಕ್ತಾನುರಕ್ತದ ಪ್ರಭಾವ!
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ!
-ಬಸವಣ್ಣ
(ಸಮಗ್ರ ವಚನ ಸಂಪುಟ: ೧ ವಚನದ ಸಂಖ್ಯೆ: ೨೩೫)
ಎಂದು ಖುದ್ದು ಹೇಳಿದ್ದರೂ ಬಸವಣ್ಣ ಮುನಿಯುವುದು, ಸ್ವಪಂಥ ಬಣ್ಣನೆ, ಪರಪಂಥ ಅವಹೇಳನಗಳನ್ನು ತನ್ನ ವಚನಗಳಲ್ಲೇ ಹಾಡಿ ತಾನು ಕೇವಲ ಮತ್ತು ಕೇವಲ ಸಹಜ ಸಹಮಾನವ ಎಂದು ತನ್ನಂತರಂಗವ ಬಹಿರಂಗಗೊಳಿಸಿದ್ದಾನೆ. ಏಕೆಂದರೆ ಅವನು ಒಬ್ಬ ಸಹಜ ಮಾನವನಾಗಿ ಅನ್ಯಾಯ ಕಂಡಾಗ ಮುನಿದಿದ್ದಾನೆ, ಪ್ರತಿಭಟಿಸಿದ್ದಾನೆ, ವೈರಿಗಳ ನಿರ್ನಾಮವನ್ನು ಬಯಸಿದ್ದಾನೆ, ತನ್ನನ್ನು ಬಣ್ಣಿಸಿದ್ದಾನೆ, ಪರರನ್ನು ನಿಂದಿಸುತ್ತಲೇ ಸಹಜ ಮಾನವತೆಯನ್ನು ಎತ್ತಿ ಹಿಡಿದಿದ್ದಾನೆ. ತನ್ನ ದೃಷ್ಟಿಯ ಸಮಾಜಕ್ಕಾಗಿ ರಾಜದ್ರೋಹದಂತಹ ಕೆಲಸಕ್ಕೂ ಕೈಹಾಕಿ ಆಡಳಿತವನ್ನು ವಹಿಸಿಕೊಳ್ಳಲು ಮುಂದಾಗಿದ್ದಾನೆ. ಪ್ರತಿಯೊಬ್ಬ ಮಾನವನೂ ಇಂತಹ ಸಾಮಾಜಿಕ ಜವಾಬ್ದಾರಿಯನ್ನು ಹೊರಲು ಮುಂದಾಗಲೇಬೇಕು. ಹಾಗಾಗಿ ಈ ಎಲ್ಲಾ ಕಾರಣಗಳಿಗೆ ಬಸವಣ್ಣ ಆದರ್ಶವೇ ಹೊರತು ಕೆಲವರು ಬಿಂಬಿಸುವಂತೆ ತಣ್ಣಗೆ ನೆಲದ ಮೇಲೆ ಕುಳಿತು ಓಲೆಗರಿ ಹಿಡಿದು ಪ್ರವಚನ ಮಾಡುತ್ತಿರುವ ಬಸವನಲ್ಲ. ಬಸವಣ್ಣ ದಂಡನಾಯಕನಾಗಿ ಕ್ರಾಂತಿಕಾರಿಯಾಗಿ ಕಿರೀಟ ತೊಟ್ಟು ಕತ್ತಿ ಹಿಡಿದು ಕುದುರೆಯ ಮೇಲೆ ಕುಳಿತಿರುವ ಗಟ್ಟಿ ವ್ಯಕ್ತಿತ್ವದ ಸಹಮಾನವ. ಅದೇ ರೀತಿ ಭಕ್ತರು ಕಟ್ಟಿಕೊಟ್ಟ ಪೊಳ್ಳು ವ್ಯಕ್ತಿತ್ವದ ಪರಮ ಪುಣ್ಯಗರ್ಭದಲ್ಲಿ ಮೂವತ್ತೆರಡು ಹಲ್ಲು ತೋರುತ್ತ "ಕಾಯಕವೇ ಕೈಲಾಸ" ಎನ್ನುತ್ತಾ ಸ್ವರ್ಗದಿಂದಿಳಿದು ಭೂಸ್ಪರ್ಶ ಮಾಡಿದ ಅತೀತ ವ್ಯಕ್ತಿಯಲ್ಲ!
ಇನ್ನು ಅಲ್ಲಮ ಎಂತಹ ಪ್ರತಿಭಾಶಾಲಿ, ದಾರ್ಶನಿಕ, ತತ್ವಜ್ಞಾನಿ ವಚನಕಾರನಾಗಿದ್ದರೂ ಮಾನವ ಸಹಜ ರಾಗದ್ವೇಷ ಗುಣಗಳು ಅವನಲ್ಲಿ ಸದಾ ಇದ್ದವು ಎಂಬುದು ಅವನ ವಚನಗಳಲ್ಲಿ ಮೇಲ್ನೋಟಕ್ಕೆ ಕಾಣುತ್ತವೆ. ಅನ್ಯಾಯವನ್ನು ಕಂಡರೂ ಪ್ರತಿಭಟಿಸದೆ ತಪಗೈಯುವ ಜಾಯಮಾನ ಅವನದಾಗಿರಲಿಲ್ಲ, ಆಗಿರಲೂಬಾರದು. ಅವನ ವಚನಗಳು ನಿಗೂಢವೂ, ಬೆಡಗುಪೂರ್ಣವೂ ಆಗಿ ವಿಶಾಲಾರ್ಥವನ್ನು ಹೊಂದಿದ್ದರೂ ಅವನ ಸಾಕಷ್ಟು ರಾಗದ್ವೇಷ ಪಂಥಗೇಡಿತನದ ವಚನಗಳು ನೇರ, ನಿಷ್ಠುರ, ಮತ್ತು ಅವಶ್ಯವಿದ್ದಲ್ಲಿ ಅವಹೇಳನಕಾರಿಯಾಗಿರುವವು. ಇಂತಹ ಕಠೋರ ನಿಷ್ಠುರತೆಯನ್ನು ತೆರೆದ ಮನಸ್ಸಿನಿಂದ ವ್ಯಕ್ತಪಡಿಸಿರುವ ಅಲ್ಲಮನನ್ನು ಅಷ್ಟೇ ಕಠೋರ ನಿಷ್ಠುರತೆಯಿಂದ ಓದಿ ಅವನನ್ನು ಸಮಾಜಕ್ಕೆ ಸಕಾರಣವಾಗಿ ಪರಿಚಯಿಸುವ ಅಗತ್ಯವಿದೆ. ಆದರೆ ಅವನ ರಾಗದ್ವೇಷ, ಕಠೋರ, ನಿಷ್ಠುರ, ಪಂಥದ್ವೇಷಗಳನ್ನು ಮುಚ್ಚಿಟ್ಟು ಇನ್ನೇನೋ ಮಹಾಮಹಿಮನಂತೆ ಬಣ್ಣಿಸುವುದು ಆ ಮಹಾ ಮಾನವನಿಗೆ ಮಾಡುವ ಅವಮಾನವೇ ಸರಿ. ಇನ್ನು ವರ್ತಮಾನದಲ್ಲಿ ವಿರಕ್ತಾನುರಕ್ತದ ಪ್ರಭಾವ ಮತ್ತು ಸಂವಿಧಾನಿಕ ಬಲದಿಂದಲೇ ಒಂದು ಕಮಿಟಿ ರಚಿಸಿ ಆ ಕಮಿಟಿಯಲ್ಲಿ ಪಟ್ಟಭದ್ರ ಹಿತಾಸಕ್ತಿಗಳನ್ನು ಕೂರಿಸಿ ಪಟ್ಟಾಗಿ ಭದ್ರವಾಗಿ ವರದಿಯೊಂದು ಸಿದ್ಧವಾಗಿ ಸಮಾಜದಲ್ಲಿ ಎಂದೆಂದಿಗೂ ಭಾರತ-ಪಾಕಿಸ್ತಾನದಂತಯೇ ಸದಾ ಹೊಗೆಯಾಡುತ್ತ ಉರಿಯುತ್ತಲೇ ಇರುವ ಸಮಸ್ಯೆಗೆ ನಾಂದಿ ಹಾಡಿತು.
ಇದು ಭಾರತಾದ್ಯಂತ ಹತ್ತನೇ ಶತಮಾನದಿಂದ ಇಸ್ಲಾಮ್ ದಾಳಿಗನುಗುಣವಾಗಿ ಬೆಳೆಯುತ್ತ ಬಂದ ಶೂದ್ರ ಭಕ್ತಿಪಂಥದ ಹನ್ನೆರಡನೇ ಶತಮಾನದ ಒಂದು ಪ್ರಾಂತೀಯ ಚಿತ್ರಣ, ಕುತೂಹಲಿಯೋರ್ವನು ಶಾಸ್ತ್ರ-ಸೂತ್ರ-ತರ್ಕಬದ್ಧ ವಿಶ್ಲೇಷಣೆಯಿಂದ ಕಂಡುಕೊಂಡ ಚಿತ್ರಣ! ಒಟ್ಟಿನಲ್ಲಿ ಹನ್ನೆರಡನೇ ಶತಮಾನದ ಭಾರತದ ಭಕ್ತಿಪಂಥದ ಆಂದೋಲನ ಒಂದು ತಾರ್ಕಿಕ ಘಟ್ಟವನ್ನು ತಲುಪಿತ್ತು. ಧರ್ಮ ಪಂಥಗಳ ನಡುವಿನ ತಾರ್ಕಿಕ ವೈಚಾರಿಕ ಚರ್ಚೆಗಳು ’ಹೊಡಿ ಬಡಿ ಕಡಿ’ ಎಂಬ ಜಯಾಪಜಯಗಳ ಪ್ರತಿಷ್ಠೆಯಾಗಿ ಕಡೆಗೆ ಸನಾತನ ಸೋತು ನವೀನ ನಿಯಮಗಳಾದ ಹುಟ್ಟಿನಿಂದ ಜಾತಿ, ಗೋಮಾಂಸ ನಿಷೇಧ, ಅಂತರ್ಜಾತಿ ವಿವಾಹ ನಿರ್ಬಂಧ, ಅಂತ್ಯಜ ವರ್ಗ ಸೃಷ್ಟಿಗಳು ಎಲ್ಲೆಡೆ ಖಾಯಂಗೊಂಡವು.
ಅಂದ ಹಾಗೆ ಈ ತಾರ್ಕಿಕತೆಯಿಂದ ಅತಾರ್ಕಿಕತೆಯ ವೈಚಾರಿಕ ಪಲ್ಲಟ ದಿಢೀರನೆ ಆದದ್ದಲ್ಲ. ಇದು ಶತಮಾನದಿಂದ ಶತಮಾನಗಳವರೆಗೆ ಊರ್ಜಿತಗೊಳ್ಳುತ್ತಲೇ ಸಾಗಿತ್ತು. ಇಂತಹ ಒಂದು ಬಿರುಸಿನ ಮಟ್ಟವು ಹರ್ಷನ ಆಸ್ಥಾನದಲ್ಲಿ ಇತ್ತೆಂದು ಚೀನೀ ಯಾತ್ರಿ ಹುಯೆನ್ ತ್ಸಾಂಗ್ ಸವಿಸ್ತಾರವಾಗಿ ಬರೆದಿದ್ದಾನೆ. ಕ್ರಿಸ್ತಶಕ ಏಳನೇ ಶತಮಾನದ ಆ ಹೊತ್ತಿನಲ್ಲಿ ಭಾರತೀಯ ತರ್ಕಶಾಸ್ತ್ರವು ತಾರ್ಕಿಕ ಹಂತದಿಂದ ವಿತಂಡವಾದದ ಅತಾರ್ಕಿಕ ಘಟ್ಟದ ಪರಿವರ್ತನಾ ಪರಿಧಿಯನ್ನು ಪ್ರವೇಶಿಸುತ್ತಿತ್ತು. ಇದಕ್ಕೆ ಪ್ರಮುಖವಾಗಿ ಧಾರ್ಮಿಕ ಪಂಥಗಳ ನಡುವಿದ್ದ ಮೇಲ್ಶ್ರೇಣಿಯ ಈರ್ಷ್ಯೆ ಕಾರಣವಾಗಿದ್ದಿತು. ಈ ಮೇಲ್ಶ್ರೇಣಿಯ ಚರ್ಚೆ ಯಾವ ಘಟ್ಟವನ್ನು ತಲುಪುತ್ತಿತ್ತೋ ಏನೋ ಆದರೆ ಅದರ ಗತಿಯನ್ನು ಮತ್ತೊಂದು ಕಂಡು ಕೇಳರಿಯದ ದಿಕ್ಕಿಗೆ ತಿಪ್ಪರಲಾಗ ಹಾಕಿಸಿದ್ದು ಇಸ್ಲಾಮ್ ಬಂಡುಕೋರರ ದಾಳಿ! ಹೀಗೆ ತರ್ಕವು ಶುದ್ಧ ಧಾರ್ಮಿಕ-ನ್ಯಾಯದ ಭಕ್ತಿಪಂಥದ ನೆಲೆಯಿಂದ ಇಸ್ಲಾಮ್ ದಾಳಿಯಿಂದುಂಟಾದ ಸಾಮಾಜಿಕ ಪಲ್ಲಟಗಳ ಕಾರಣವಾಗಿ ಸಾಮಾಜಿಕ-ನ್ಯಾಯದ ಭಕ್ತಿ ಪಂಥದ ಕವಲುಪಥಗಳಿಗೆ ತಿರುವು ಪಡೆದುಕೊಂಡಿತು.
ಯಾವ್ಯಾವಾಗ Law of the land ಪ್ರಶ್ನಾರ್ಹ ಎನಿಸುವುದೋ ಆಗ ಸಾಮಾಜಿಕ ಅಸಮಾನತೆಗಳು ಮೂಡಿ ಕ್ರಾಂತಿಗೆ ಮುನ್ನುಡಿ ಬರೆಯುತ್ತವೆ. ಈ ಹಿನ್ನೆಲೆಯಲ್ಲಿ ಭಾರತದಾದ್ಯಂತ ಇಸ್ಲಾಮ್ ದಾಳಿಯಿಂದುಂಟಾದ ಪಲ್ಲಟಗಳು ರಾಜಕೀಯ ಅಸ್ಥಿರತೆಯನ್ನಲ್ಲದೆ ಸಾಮಾಜಿಕ ಅಸ್ಥಿರತೆಯನ್ನೂ ಮೂಡಿಸಿದ್ದವು. ಹಾಗಾಗಿಯೇ ಅಲೌಕಿಕ ಶಕ್ತಿಯನ್ನು ನಂಬಿ ಸಾಮಾಜಿಕ ನ್ಯಾಯಕ್ಕಾಗಿ ಭಕ್ತಿಪಂಥಗಳು ಏಕಕಾಲಕ್ಕೆ ಶುರುವಾದವು. ಆ ಒಂದು ಹೋರಾಟ ಅಸ್ತಿತ್ವಗೊಂಡ ನಂತರ ಮೇಲ್ಶ್ರೇಣಿಯ ಛಲಕ್ಕೆ ಸಿಕ್ಕು ಹಾದಿ ತಪ್ಪಿತು. ಇದು ಕೇವಲ ಒಂದು ಪಂಥಕ್ಕಲ್ಲದೆ ಅಂದು ಉದಯಗೊಂಡ ಎಲ್ಲಾ ಭಕ್ತಿಪಂಥಗಳಿಗೂ ಅನ್ವಯ. ಇಂತಹ ಹಿನ್ನೆಲೆಯ ಶರಣ ಚಳವಳಿಯ ಕ್ರಾಂತಿಯ ಒಟ್ಟು ಸ್ವರೂಪವನ್ನು ಅಕ್ಕ ಮಹಾದೇವಿಯ ಕೆಳಗಿನ ಈ ವಚನದಲ್ಲಿ ಸಮಗ್ರವಾಗಿ ಕಾಣುತ್ತದೆ.
.
"ಅಯ್ಯಾ, ಸದಾಚಾರ ಸದ್ಭಕ್ತಿ ಸತ್ಕ್ರಿಯಾ ಸಮ್ಯಕ್‍ಜ್ಞಾನ ಸದ್ವರ್ತನೆ
ಸಗುಣ ನಿರ್ಗುಣ ನಿಜಗುಣ ಸಚ್ಚರಿತ್ರ ಸದ್ಭಾವ
ಅಕ್ರೋಧ ಸತ್ಯವಚನ ಶಮೆದಮೆ ಭವಿಭಕ್ತಭೇದ
ಸತ್ಪಾತ್ರದ್ರವ್ಯಾರ್ಪಣ ಗೌರವಬುದ್ಧಿ ಲಿಂಗಲೀಯ ಜಂಗಮಾನುಭಾವ
ದಶವಿಧಪಾದೋದಕ ಏಕಾದಶಪ್ರಸಾದ ಷೋಡಶಭಕ್ತಿನಿರ್ವಾಹ,
ತ್ರಿವಿಧ ಷಡ್ವಿಧ ನವವಿಧ ಲಿಂಗಾರ್ಚನೆ,
ತ್ರಿವಿಧ ಷಡ್ವಿಧ ನವವಿಧ ಜಪ,
ತ್ರಿವಿಧ ಷಡ್ವಿಧ ನವವಿಧ ಲಿಂಗಾರ್ಪಣ.
ಚಿದ್ವಿಭೂತಿ ಸ್ನಾನ ಧೂಳನ ಧಾರಣ, ಸರ್ವಾಂಗದಲ್ಲಿ ಚಿದ್ರುದ್ರಾಕ್ಷಿಧಾರಣ,
ತಾ ಮಾಡುವ ಸತ್ಯಕಾಯಕ,
ತಾ ಬೇಡುವ ಸದ್ಭಕ್ತಿಭಿಕ್ಷ, ತಾ ಕೊಟ್ಟು ಕೊಂಬ ಭೇದ,
ತಾನಾಚರಿಸುವ ಸತ್ಯ ನಡೆನುಡಿ, ತಾ ನಿಂದ ನಿರ್ವಾಣಪದ.
ಇಂತೀ ಬತ್ತೀಸ ನೆಲೆಕಲೆಗಳ ಸದ್ಗುರುಮುಖದಿಂದರಿದ
ಬಸವ ಮೊದಲಾದ ಸಮಸ್ತ ಗಣಂಗಳೆಲ್ಲಾ ಪ್ರಮಥ
ನಿರಾಭಾರಿ ವೀರಶೈವ ಸನ್ಮಾರ್ಗವಿಡಿದಾಚರಿಸಿದರು ನೋಡಾ.
ಇಂತು ಪ್ರಮಥಗಣವಾಚರಿಸಿದ
ಸತ್ಯ ಸನ್ಮಾರ್ಗವರಿಯದ ಮೂಢ ಅಧಮರನೆಂತು
ಶಿವಶಕ್ತಿ ಶಿವಭಕ್ತ ಶಿವಜಂಗಮವೆಂಬೆನಯ್ಯಾ ಚೆನ್ನಮಲ್ಲಿಕಾರ್ಜುನಾ?"
- ಅಕ್ಕಮಹಾದೇವಿ
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೩೭)
***
ವೀರಶೈವವು ಹತ್ತನೇ ಶತಮಾನದಿಂದ ಕೊಲ್ಲಿಪಾಕಿಯಲ್ಲಿ ಪ್ರವರ್ಧಮಾನಕ್ಕೆ ಬಂದು ಸಮಾನತೆಯ ಕ್ರಾಂತಿಯ ರೂಪ ಪಡೆದುಕೊಡು ಮುಂದಿನ ಮೂರು ಶತಮಾನಗಳಲ್ಲಿ ಕರ್ನಾಟಕದ ಪ್ರಮುಖ ಪಂಥವಾಗಿ ಬೆಳೆಯಿತೇ ಹೊರತು ತನ್ನ ಮೂಲೋದ್ಧೇಶದ ಸಮಾನತೆಯನ್ನು ತರಲಿಲ್ಲ. ಇದು ಕೇವಲ ವೀರಶೈವ-ಲಿಂಗಾಯತ ಪಂಥಕ್ಕೆ ಮಾತ್ರ ಸೀಮಿತವಲ್ಲ. ಈ ರೀತಿಯ ಸಾಮ್ಯತೆ ಶೂದ್ರಭಕ್ತಿಪಂಥದ ಎಲ್ಲಾ ಪಂಥಗಳಿಗೂ ಅನ್ವಯ. ಈ ಎಲ್ಲಾ ಜಾತಿಪಂಥಗಳಲ್ಲಿ ಹಿಂದೂ ವರ್ಣಗಳಂತೆಯೇ ಪುರೋಹಿತ, ರೈತ, ಕುಶಲಕರ್ಮಿ, ಕೂಲಿ ಕಾರ್ಮಿಕರ ವರ್ಗೀಕರಣವಿದೆ. ಹಾಗಾಗಿಯೇ ಶೋಷಣೆಯ ವಿರುದ್ಧ ಸಿಡಿದೆದ್ದ ಈ ಗುಂಪುಗಳು ಸಂಘಟನೆಗಳೆನಿಸುತ್ತವೇ ಹೊರತು ಧರ್ಮ/ಪಂಥಗಳಾಗಿ ಅಲ್ಲ. ಈ ಗುಂಪಿಗೆ ಹೇಗೋ ಸಿಖ್ ಪಂಥ ಹೊರತಾಗಿ ತಮ್ಮ ವೇಷಭೂಷಣಗಳ ಕಾರಣದಿಂದಲೋ ಏನೋ ಸಂವಿಧಾನದಲ್ಲಿ ಸ್ವತಂತ್ರ ಧರ್ಮ ಮಾನ್ಯತೆಯನ್ನು ಗಿಟ್ಟಿಸಿಕೊಂಡುಬಿಟ್ಟಿದೆ.
ಪಾಶುಪತ/ಕಾಳಾಮುಖರ ಕಾರ್ಯ, ಕಾರಣ, ಯೋಗ, ವಿಧಿ, ದುಃಖಾಂತರ ತತ್ವಗಳೇ ಕಾಯಕ, ಸ್ಥಾವರ, ಜಂಗಮ, ಶಿವಯೋಗವಾದವು! ಈ ತತ್ವಗಳು ಹಿಂದೂ ತರ್ಕ, ದರ್ಶನ ಸಿದ್ಧಾಂತಗಳ ಕವಲುಗಳೇ ಆಗಿವೆ. ಹೀಗೆ ಹಿಂದೂ ಸಂಸ್ಕೃತಿಯ ಭಾಗವಾಗಿ ಆದರೆ ಸದಾ ಪರ್ಯಾಯದಂತಿದ್ದ ಪಾಶುಪತದೆಲ್ಲಾ ಕವಲುಗಳನ್ನು ಸೇರಿಸಿಕೊಂಡು ಬೇರೆಯದೇ ಆದ ಧರ್ಮವೆನ್ನಬಹುದೇ ಹೊರತು ಸಮಗ್ರವನ್ನು ಸಂಕ್ಷಿಪ್ತಗೊಳಿಸಿ, ಸರಳೀಕರಿಸಿ, ಕನ್ನಡಕ್ಕೆ ಅನುವಾದಿಸಿದ ಒಂದು ವರ್ಗವನ್ನು ಹೇಗೆ ಧರ್ಮವೆನ್ನಲಾದೀತು!?!? ಈ ಎಲ್ಲ ಹಿನ್ನೆಲೆಯಲ್ಲಿ ವೀರಶೈವವು ಹಿಂದೂ ಸಂಸ್ಕೃತಿಯ ಒಂದು ಕವಲೇ ಹೊರತು ಬೇರೆಯದೇ ಆದ ಧರ್ಮವಲ್ಲ. ಹಾಗಾಗಿಯೇ ಭಕ್ತಿಪಂಥದ ಇತರೇ ಪಂಥಗಳು ತಮ್ಮನ್ನು ಒಂದು ಜಾತಿಯಾಗಿ ಗುರುತಿಸಿಕೊಂಡಿದ್ದಾವೆಯೇ ಹೊರತು ಸ್ವತಂತ್ರ ಧರ್ಮವಾಗಿಯಲ್ಲ.
- ರವಿ ಹಂಜ್
No comments:
Post a Comment