ವಿಶ್ವವಾಣಿ ಬಸವ ಮಂಟಪ - ಶರಣ ಚಳವಳಿಯಲ್ಲಿ ಮಹಿಳೆ, ಕಾಮ ಸಮಾನತೆ!

 ಮಹಿಳಾ ಶೋಷಣೆ ಸನಾತನವಾಗಿ ಭಾರತದಲ್ಲಿತ್ತು ಎನ್ನುವುದು ಹೇಗೆ ಸತ್ಯವಲ್ಲ ಎನ್ನುವುದನ್ನು ಹಿಂದೆ ಪುಣ್ಯಸ್ತ್ರಿ ಲೇಖನದಲ್ಲಿ ವಿಸ್ತೃತವಾಗಿ ಮನಗಂಡಿರುವಿರಿ. ಹಾಗಾಗಿ ಮಹಿಳಾ ಸಮಾನತೆಯನ್ನು ಭಕ್ತಿಪಂಥದ ಕಾಲಮಾನದಲ್ಲಿ ವಿಶೇಷವಾಗಿ ಅಳವಡಿಸಿಕೊಳ್ಳಬೇಕಾಗಿತ್ತು ಎನ್ನುವುದಕ್ಕಿಂತ ಸನಾತನವಾಗಿ ಸದಾ ಆಚರಣೆಯಲ್ಲಿದ್ದ ಮಹಿಳಾ ಸಮಾನತೆಯನ್ನು ವೀರಶೈವವೂ ಸೇರಿದಂತೆ ಎಲ್ಲಾ ಪಂಥಗಳೂ ಉಳಿಸಿಕೊಳ್ಳಬೇಕಿತ್ತು ಎನ್ನುವುದು ಹೆಚ್ಚು ಸೂಕ್ತ. ಏಕೆಂದರೆ ಇಸ್ಲಾಮಿನ ಪರ್ದಾ ಎಂಬುದು ಭಾರತಕ್ಕೆ ನವನವೀನ ಕಟ್ಟುಪಾಡಿನ ವ್ಯವಸ್ಥೆಯಾಗಿತ್ತು. ನಗರವಧು ಸಂಸ್ಕೃತಿಯ ಉನ್ನತ ಮಹಿಳಾ ಸ್ವಾತಂತ್ರ್ಯವನ್ನು ಪಾಲಿಸುತ್ತಿದ್ದ ಸಂಸ್ಕೃತಿಗೆ ಪರ್ದಾ ವ್ಯವಸ್ಥೆಯಾಗಿ ಗೌರವದ ಚೌಕಟ್ಟಿನಲ್ಲೇ ಧಕ್ಕೆ ತಂದಿತ್ತು. ಇಂತಹ ಸ್ಥಿತ್ಯಂತರಗಳಾದಾಗ ತಾನೇ ಮಹತ್ತರವಾದ ಕ್ರಾಂತಿಕಾರಕ ಬದಲಾವಣೆಗಳನ್ನು ಸಮಾಜ ಬಯಸುವುದು ಮತ್ತು ಬೆಂಬಲಿಸುವುದು! ಹಾಗಾಗಿ ವಿಶೇಷವಾದ ಈ ಪದ್ಧತಿ ವಿರುದ್ಧ ವಿಶೇಷ ಹೋರಾಟಗಳು ಮೊದಲ್ಗೊಂಡವು.


ಮೊಲೆ, ಮುಡಿ ಬಂದಡೆ ಹೆಣ್ಣೆಂಬರು
ಗಡ್ಡ ಮೀಸೆ ಬಂದಡೆ ಗಂಡೆಂಬರು
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ! ರಾಮನಾಥ
- ಜೇಡರ ದಾಸಿಮಯ್ಯ
(ಸಮಗ್ರ ವಚನ ಸಂಪುಟ: ೭ ವಚನದ ಸಂಖ್ಯೆ: ೮೪೫)
***
ಮಡದಿಯ ಪ್ರಾಣಕ್ಕೆ ಮೊಲೆ ಮುಡಿ ಇದ್ದೀತೆ?
ಒಡೆಯನ ಪ್ರಾಣಕ್ಕೆ ಇದ್ದೀತೆ ಯಜ್ಜೋಪವೀತ?
ಕಡೆಯಲ್ಲಿದ್ದ ಅಂತ್ಯಜನು ಹಿಡಿದಿದ್ದನೆ ಹಿಡಿಗೋಲ?
ನೀ ತೊಡಕ್ಕಿಕ್ಕಿದ ತೊಡಕ ನೀ ಲೋಕದ ಜನರೆತ್ತ ಬಲ್ಲರೈ ರಾಮನಾಥ.
(ಸಮಗ್ರ ವಚನ ಸಂಪುಟ: ೭)
***
ಆತ್ಮನಲ್ಲಿ ಹೆಣ್ಣು-ಗಂಡು ಎಂಬ ಬೇಧವಿಲ್ಲ ಎನ್ನುವ ಆದ್ಯ ವಚನಗಳೇ ಇರುವಾಗ ಮಹಿಳೆಯರನ್ನು ಎರಡನೇ ದರ್ಜೆಗಿಳಿಸುವ ನೀತಿಯನ್ನು ಹೇಗೆ ತಾನೇ ವೀರಶೈವ ಆದ್ಯರು ಹೇರಲು ಸಾಧ್ಯ? ಹಾಗಾಗಿ ಈ ನವನೀತಿಯ ವಿರುದ್ಧವೂ ಹನ್ನೆರಡನೇ ಶತಮಾನದ ನವ್ಯ ಶರಣರು ಸಿಡಿದೆದ್ದರು. ಈ ವಿರೋಧಕ್ಕೆ ಶರಣೆಯರು ಅದರಲ್ಲೂ ವಚನಕಾರರ ಪತ್ನಿಯರು ತಮ್ಮ ಗಂಡಂದಿರೊಂದಿಗೆ ಕೈಜೋಡಿಸಿದರು. ಈ ಬೆಂಬಲ ಅವರ ವಚನಗಳಲ್ಲಿ ಸಾಕಷ್ಟು ಕಾಣಸಿಗುತ್ತದೆ.

ಆದ್ಯ ವಚನಕಾರ ಜೇಡರ ದಾಸಿಮಯ್ಯನ ವಚನವನ್ನೇ ಆಧಾರವಾಗಿಟ್ಟುಕೊಂಡು ಅದನ್ನು ಪರಿಷ್ಕರಿಸುತ್ತ ತಮ್ಮದೇ ಹೊಳಹನ್ನು ಈ ವಚನಕಾರ್ತಿಯರು ಕಟ್ಟಿಕೊಟ್ಟರು. ಅಂತಹ ವಚನಗಳನ್ನು ಇಲ್ಲಿ ಗಮನಿಸೋಣ:

ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ.
ಕಾಸೆ ಮೀಸೆ ಕಠಾರವಿದ್ದುದೆ ಗಂಡೆಂದು ಪ್ರಮಾಣಿಸಲಿಲ್ಲ.
ಅದು ಜಗದ ಹಾಹೆ; ಬಲ್ಲವರ ನೀತಿಯಲ್ಲ.
ಏತರ ಹಣ್ಣಾದಡೂ ಮಧುರವೆ ಕಾರಣ,
ಅಂದವಿಲ್ಲದ ಕುಸುಮಕ್ಕೆ ವಾಸನೆಯೆ ಕಾರಣ. ಇದರಂದವ ನೀನೇ ಬಲ್ಲೆ
ಶಂಭುಜಕ್ಕೇಶ್ವರಾ.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೧೨೨೮)

ಎಂದು ವಚನಕಾರ್ತಿ ಸತ್ಯಕ್ಕ ಹೇಳಿದರೆ, ಗೊಗ್ಗವ್ವೆ ಹೀಗೆ ಹೇಳಿದ್ದಾಳೆ:

ಗಂಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎಂದು ಅರಿಯಬೇಕು.
ಹೆಣ್ಣು ಮೋಹಿಸಿ ಗಂಡ ಹಿಡಿದಡೆ
ಉತ್ತರವಾವುದೆಂದರಿಯಬೇಕು.
ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲಡೆ
ನಾಸ್ತಿನಾಥನು ಪರಿಪೂರ್ಣನೆಂಬೆ.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೭೭೬)

ಇನ್ನು ಅಕ್ಕ ಮಹಾದೇವಿಯು,

ಪುರುಷನ ಮುಂದೆ ಮಾಯೆ ಸ್ತ್ರೀಯೆಂಬ ಅಭಿಮಾನವಾಗಿ ಕಾಡಿತ್ತು.
ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡಿತ್ತು.
ಲೋಕವೆಂಬ ಮಾಯೆಗೆ ಶರಣರ ಚಾರಿತ್ರವು ಮರುಳಾಗಿ ತೋರುವುದು
ಚೆನ್ನಮಲ್ಲಿಕಾರ್ಜುನನೊಲಿದ ಶರಣರಿಗೆ ಮಾಯೆಯಿಲ್ಲ
ಮರಹಿಲ್ಲ ಅಭಿಮಾನವೂ ಇಲ್ಲ.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೨೮೨)

ಎಂದು ಲಿಂಗ ಸಮಾನತೆಯನ್ನು ವರ್ಣಿಸಿದ್ದಾಳೆ.

ಇನ್ನು ಆಯ್ದಕ್ಕಿ ಲಕ್ಕಮ್ಮ ಹೆಣ್ಣು ಮತ್ತು ಗಂಡು ಸಮಾನವಾಗಿ ಸೇರಿಯೇ ಸೃಷ್ಟಿ ಸಾಧ್ಯ ಎಂಬರ್ಥದಲ್ಲಿ ಹೀಗೆ ಹೇಳಿದ್ದಾಳೆ:

ಆವ ಬೀಜವು ಬೀಳುವಲ್ಲಿ ಮೊಳೆ ಮುಖ ಹಿಂಚು ಮುಂಚುಂಟೆ ?
ನೀ ಮರೆದಲ್ಲಿ ನಾನರಿದಲ್ಲಿ ಬೇರೊಂದೊಡಲುಂಟೆ ?
ಮೂಲ ನಷ್ಟವಾದಲ್ಲಿ ಅಂಕುರ ನಿಂದಿತ್ತು.
ಕೂಟಕ್ಕೆ ಸತಿಪತಿ ಎಂಬ ನಾಮವಲ್ಲದೆ
ಅರಿವಿಂಗೆ ಬೇರೊಂದೊಡಲುಂಟೆ ?
ಬೇರೊಂದಡಿಯಿಡದಿರು, ಮಾರಯ್ಯಪ್ರಿಯ ಅಮಲೇಶ್ವರಲಿಂಗವನರಿಯಬಲ್ಲಡೆ!
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೭೦೯)

ಇನ್ನು ಗಜೇಶ ಮಸಣಯ್ಯಪ್ರಿಯ ಪುಣ್ಯಸ್ತ್ರೀ ಮಸಣಮ್ಮ ಹೆಣ್ಣು ಹೊನ್ನು ಮಣ್ಣುಗಳನ್ನು ಲೌಕಿಕಾರ್ಥದಲ್ಲಿ ಇವು ಭಕ್ತಿಗೆ ಹೊರಗು ಎಂಬುದನ್ನು ಕೆಳಗಿನ ವಚನದಲ್ಲಿ ಪ್ರಶ್ನಿಸಿ ಲೌಕಿಕದಿಂದಲೇ ಅಲೌಕಿಕತೆಯನ್ನು ಪಡೆಯುವ ಮಾರ್ಗವನ್ನು ಕಂಡುಕೊಳ್ಳಬಯಸುತ್ತಾಳೆ. ಇಲ್ಲಿ ನಿಮಗೆ ರಜನೀಶರ ’ಸಂಭೋಗದಿಂದ ಸಮಾಧಿ’ ತತ್ವ ನೆನಪಾದರೆ ಅದು ಹೊಸತಲ್ಲ. ಕ್ರಿಸ್ತಪೂರ್ವ ಸನಾತನ ತತ್ವವಾದ ಅದನ್ನು ಹನ್ನೆರಡನೇ ಶತಮಾನದ ವಚನಕಾರ್ತಿ ಪುನರುಚ್ಚರಿಸಿದ್ದಾಳೆ ಎಂದಷ್ಟೇ ಮನಗಾಣಬೇಕು.

ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು,
ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ?
ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು,
ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ?
ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು,
ಮಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ?
ಅಂಗವ ಬಿಟ್ಟು ಲಿಂಗವನೊಲಿಸಬೇಕೆಂಬರು,
ಅಂಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ ?
ಇಂದ್ರಿಯಂಗಳ ಬಿಟ್ಟು ಲಿಂಗವನೊಲಿಸಬೇಕೆಂಬರು,
ಇಂದ್ರಿಯಂಗಳಿಗೆಯೂ ಲಿಂಗಕ್ಕೆಯೂ ವಿರುದ್ಧವೆ ?
ಜಗವ ಬಿಟ್ಟು ಲಿಂಗವನೊಲಿಸಬೇಕೆಂಬರು,
ಜಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ ?
ಇದು ಕಾರಣ, ಪರಂಜ್ಯೋತಿ ಪರಮಕರುಣಿ ಪರಮಶಾಂತನೆಂಬ ಲಿಂಗವು
ಕೋಪದ ಮುನಿಸನರಿದಡೆ ಕಾಣಬಹುದು, ಮರೆದಡೆ ಕಾಣಬಾರದು.
ಅರಿವಿಂದ ಕಂಡೊದಗಿದ ಸುಖವು ಮಸಣಯ್ಯಪ್ರಿಯ ಗಜೇಶ್ವರಾ!
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೭೭೧)

ಹಾಗೆಯೇ ಸೂಳೆ ಸಂಕವ್ವೆ ಸಹ ಪರೋಕ್ಷವಾಗಿ ಮಹಿಳೆಯು ಹೇಗೆ ಶೋಷಣೆಗೊಳಗಾಗುತ್ತಿದ್ದಳು ಎಂಬ ಚಿತ್ರಣವನ್ನು ತನ್ನ ಈ ವಚನದಲ್ಲಿ ತೋರುತ್ತಾಳೆ.

ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ.
ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯಾ.
ವ್ರತಹೀನನನರಿದು ಬೆರೆದಡೆ
ಕಾದ ಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ವರಯ್ಯಾ.
ಒಲ್ಲೆನೊಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ.
(ಸಮಗ್ರ ವಚನ ಸಂಪುಟ: ೫)

ಒಟ್ಟಿನಲ್ಲಿ ಮಹಿಳೆಯರನ್ನು ಮುನ್ನೆಲೆಗೆ ತರುವುದು ಸಹ ಶೂದ್ರ ಭಕ್ತಿಪಂಥಗಳ ಪ್ರಮುಖವಾದ ಅಂಶವಾಗಿತ್ತು. ವೀರಶೈವ ಪಂಥದಲ್ಲಿ ಹೇಗೆ ವಚನಕಾರ್ತಿಯರು ಮುನ್ನೆಲೆಗೆ ಬಂದರೋ ಅದೇ ರೀತಿ ಲಲ್ಲೇಶ್ವರಿ, ಮೀರಬಾಯಿಯಂತಹ ಮಹಿಳಾ ಕವಯತ್ರಿಯರು ಆಧ್ಯಾತ್ಮಿಕ ಧ್ಯೇಯ ಸಿದ್ಧಾಂತಗಳ ರೂವಾರಿಗಳೆನಿಸಿದ್ದರು. ಆದರೆ ವೀರಶೈವ ಪಂಥದ ವಚನಕಾರ್ತಿಯರಷ್ಟು ಸಾಮಾಜಿಕ ಕಳಕಳಿಯನ್ನು ಈ ಆಧ್ಯಾತ್ಮಿಕ ನಾಯಕಿಯರು ಅಷ್ಟಾಗಿ ತೋರಲಿಲ್ಲ.

ಹಾಗೆಯೇ ಬಸವಾದಿ ಪುರುಷ ವಚನಕಾರರು ಹೆಣ್ಣು ಮಾಯೆ ಎಂಬ ಪರಿಧಿಯನ್ನು ಅಷ್ಟಾಗಿ ದಾಟಲೂ ಇಲ್ಲ ಎಂಬುದು ಗಮನದಲ್ಲಿಟ್ಟುಕೊಳ್ಳಬೇಕಾದ ಸಂಗತಿ. ಅಂತಹ ಹೆಣ್ಣು ಮಾಯೆ ಎಂಬ ಒಂದು ವಚನ ಹೀಗಿದೆ:

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ,
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ,
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ,
ಇದಾವಾವ ಪರಿಯಲ್ಲಿ ಕಾಡಿಹಿತು ಮಾಯೆ.
ಈ ಮಾಯೆಯ ಕಳೆವಡೆ ಎನ್ನಳವಲ್ಲ,
ನೀವೆ ಬಲ್ಲಿರಿ ಕೂಡಲಸಂಗಮದೇವಾ!
( ಸಮಗ್ರ ವಚನ ಸಂಪುಟ: ೧ ವಚನದ ಸಂಖ್ಯೆ: ೧೫)

ಆದರೆ ಬಸವಣ್ಣನ ಪತ್ನಿ ನೀಲಮ್ಮ ಈ ಸಾಮಾಜಿಕ ಹೋರಾಟಕ್ಕೆ ಭಿನ್ನವಾಗಿ ತನ್ನ ಅಂತರಂಗವನ್ನು ತೆರೆದಿಡುತ್ತಾಳೆ. ಖ್ಯಾತ ಪ್ರಭಾವಶಾಲಿ ವ್ಯಕ್ತಿಯ ಹೆಂಡತಿಯೊಬ್ಬಳು ಅನುಭವಿಸುವ ಮಾನಸಿಕ ತುಮುಲಗಳನ್ನು, ಒಂಟಿತನವನ್ನು, ಅಸಹನೆಯನ್ನು, ದೂರನ್ನು ಸೂಕ್ಷ್ಮವಾಗಿ ಆದರೆ ಸ್ಪಷ್ಟವಾಗಿ ವಚನದ ನೆಲೆಯಲ್ಲೇ ಕಟ್ಟಿಕೊಡುತ್ತಾಳೆ. ’ಹೆಣ್ಣು ಮಾಯೆ’ ಎಂಬ ಪುರುಷಶಾಹಿತ್ವದ ಹಂಗಿನಲ್ಲೇ ಹೆಣ್ಣನ್ನು ಹಂಗಿಸುವ ಸ್ತ್ರೀಪುರುಷ ವಚನಕಾರರ ಪಡಿಯಚ್ಚಿನ ಏಕತಾನತೆಯ ಪರಿಧಿಯಾಚೆಗೆ ಹೆಣ್ಣಿನ ಅಸ್ತಿತ್ವ ಮತ್ತು ಮಾಯೆಯ ಮುಸುಕಿನಲ್ಲಿ ತಮ್ಮ ಸಾಂಸಾರಿಕ ಜವಾಬ್ದಾರಿ ವಿಮುಖತೆಗೆ ಶ್ರೀರಕ್ಷೆ ಪಡೆಯುವ ಗಂಡನ್ನು ಅನಾವರಣಗೊಳಿಸುತ್ತಾಳೆ. ತನ್ನ ಬಹುಪಾಲು ವಚನಗಳಲ್ಲಿ ಆಕೆಯ ನಿರೀಕ್ಷೆ, ಸಾಂಸಾರಿಕ ವಾಂಛೆ, ಅಸ್ತಿತ್ವದ ಅಹಂ, ಅತೃಪ್ತ ಆಕಾಂಕ್ಷೆಗಳನ್ನೆಲ್ಲಾ ವಚನಗಳಾಗಿಸಿರುವ ನೀಲಮ್ಮ ಬೇರೆಲ್ಲಾ ವಚನಕಾರ್ತಿಯರಿಗಿಂತ ಭಿನ್ನವಾಗಿ ನಿಲ್ಲುವುದಲ್ಲದೆ ಅದನ್ನು ಸಕಾರಣವಾಗಿ ಪ್ರಶ್ನಿಸುತ್ತಾಳೆ ಸಹ. ಹಾಗೆಯೇ ಪ್ರಸಿದ್ಧ ವ್ಯಕ್ತಿಯ ಛಾಯೆಯಾದ ಅವನ ಪತ್ನಿಯಾಗಿ ತನ್ನ ಸ್ವಂತಿಕೆಯ ಅಸ್ತಿತ್ವವೇನು ಎಂದೂ ಸಹ ಪ್ರಶ್ನಿಸುತ್ತಾಳೆ. ಈ ಎಲ್ಲಾ ಸಮಗ್ರ ಭಾವನೆಗಳನ್ನು ಹೊಮ್ಮಿಸುವ ಆಕೆಯ ವಚನಗಳು ಹೀಗಿವೆ:

ಎನಗೆ ಇಲ್ಲಿ ಏನು ಬಸವ ಬಸವಾ?
ಎನಗೆ ಅದರ ಕುರುಹೇನು ಬಸವಾ?
ಎನಗೆ ಬಸವ ನಡೆದ ಭಕ್ತಿಸ್ಥಲದಲ್ಲಿ ನಿಂದು,
ಭಕ್ತಿಸ್ಥಲ ಬಸವನಲ್ಲಿ ಕುರುಹಳಿದು,
ನಾನು ಬಸವನ ಶ್ರೀಪಾದದಲ್ಲಿ
ಉರಿಯುಂಡ ಕರ್ಪೂರದಂತಡಗಿದ ಬಳಿಕ ಸಂಗಯ್ಯಾ?
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೮೭೪)

ಮಡದಿ ಎನಲಾಗದು ಬಸವಂಗೆ ಎನ್ನನು.
ಪುರುಷನೆನಲಾಗದು ಬಸವನ ಎನಗೆ.
ಉಭಯದ ಕುಳವ ಹರಿದು ಬಸವಂಗೆ ಶಿಶುವಾನಾದೆನು,
ಬಸವನೆನ್ನ ಶಿಶುವಾದನು.
ಪ್ರಮಥರು ಪುರಾತರು ಸಾಕ್ಷಿಯಾಗಿ ಸಂಗಯ್ಯನಿಕ್ಕಿದ ದಿಬ್ಯವ ಮೀರದೆ
ಬಸವನೊಳಗಾನಡಗಿದೆ.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೧೦೨೪)

ಅಟ್ಟಡವಿಯಲ್ಲಿ ಬಿಟ್ಟುಹೋದಿರಿ ಬಸವಯ್ಯಾ.
ನಟ್ಟನಡುಗ್ರಾಮವ ಕೆಡಿಸಿಹೋದಿರಿ ಬಸವಯ್ಯಾ.
ಹುಟ್ಟಿಲ್ಲದ ಬಂಜೆಗೆ ಮಕ್ಕಳಕೊಟ್ಟಿರಿ ಬಸವಯ್ಯಾ.
ಆ ಮಕ್ಕಳ ಫಲವಿಲ್ಲದಂತೆ ಮಾಡಿದಿರಿ ಬಸವಯ್ಯಾ.
ಸಂಗಯ್ಯನಲ್ಲಿ ನೀನೆಂತಪ್ಪ ಮಹಿಮನಯ್ಯಾ ಬಸವಯ್ಯಾ ?
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೮೧೧)

ಅಲ್ಲದೆ ನೀಲಮ್ಮನು ಬೇರೆ ವಚನಕಾರ್ತಿಯರಿಗಿಂತ ಭಿನ್ನವಾಗಿ ಕಾಮದ ಕುರಿತು ವಚನಗಳನ್ನು ರಚಿಸಿದ್ದಾಳೆ. ಬೇರೆಲ್ಲಾ ವಚನಕಾರ್ತಿಯರು ಕಾಮವನ್ನು ಪಾಪದ ನೆಲೆಯಲ್ಲಿ ಅರಿಷಡ್ವರ್ಗಗಳ ನೆಲೆಯಲ್ಲಿ ಕಂಡಿದ್ದರೆ, ನೀಲಮ್ಮ ಕಾಮವನ್ನು ತನ್ನ ವಚನಗಳಲ್ಲಿ ಹೆಣ್ತನದ ನೆಲೆಯಲ್ಲಿ ಕಟ್ಟಿಕೊಡುತ್ತಾಳೆ. ಪತಿಯ ಮಿಲನಕ್ಕೆ ಕಾದು ಕಂಗೆಟ್ಟ ಪತ್ನಿಯ ವಿರಹವನ್ನು ಮತ್ತು ತನ್ನಿಚ್ಛೆಗೆ ಸ್ಪಂದಿಸದ ಪತಿಯನ್ನು ’ಪ್ರಾಣದ ಕುರುಹಿಲ್ಲದವ’ ಎನ್ನುತ್ತಾ ತಾನು ಮುಸುಕಿಟ್ಟು ಬಸವಳಿದೆ’ ಎಂದು ನಿಟ್ಟುಸಿರು ಬಿಡುತ್ತಾಳೆ:

ಕಾಮದ ಹಂಗಿಗನಲ್ಲ ಶರಣ
ಮೋಹದ ಇಚ್ಫೆಯವನಲ್ಲ ಶರಣ
ಉಭಯದ ಸಂಗದವನಲ್ಲ ಶರಣ
ಪ್ರಾಣದ ಕುರುಹಿಲ್ಲದ ಶರಣಂಗೆ ಪ್ರಸಾದದ ನೆಲೆಯಿಲ್ಲವಯ್ಯ.
ಎನಗೇನೂ ತಲೆದೋರದೆ ಮುಸುಕಿಟ್ಟು ಬಸವಳಿದೆನಯ್ಯಾ ಸಂಗಯ್ಯ ನಿಮ್ಮಲ್ಲಿ.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೯೩೯)

ಹಾಗೆಯೇ ಆಕೆಯ ಮುಂದಿನ ವಚನದಲ್ಲಿ ವೈವಾಹಿಕ ಸಂಬಂಧದಲ್ಲಿರಬೇಕಾದ ಕಾಮಿತವಿಲ್ಲದೆ ಸ್ವಯ-ಲಿಂಗ-ಸಂಬಂಧ ನನಗೇಕೆ? ಎಂದು ತನ್ನ ಸಾಂಸಾರಿಕ ನಿರೀಕ್ಷೆಗಳನ್ನು ಮುನ್ನಳ ದೋಷವೆಂದು ದೂರುತ್ತಾಳೆ:

ಮುನ್ನಳ ದೋಷವೆನ್ನ ಬೆನ್ನಬಿಡದಯ್ಯ,
ಮುನ್ನಳ ಪಾಪವೆನ್ನ ಹಿಂದುವಿಡಿದು ಮುಂದೆ ನಡೆಯಲೀಯದು.
ಕಾಮಿತ ನಿಃಕಾಮಿತವ ಕಂಡು
ಬಸವನನರಿಯದೆ ಕೆಟ್ಟ ಪಾಪಿಯಾನು.
ಶಬ್ಧದ ಹಂಗಿಗಳಲ್ಲಯ್ಯ ನಾನು ಸಂಗಯ್ಯನಲ್ಲಿ
ಸ್ವಯಲಿಂಗಸಂಬಂಧವೆನಗೆಂತಯ್ಯ ?
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೧೦೫೦)

ಕಡೆಗೆ ಈಡೇರದ ತನ್ನ ಬಯಕೆಗಳನ್ನು ಹೇಗೆ ಆಕೆ ಹತ್ತಿಕ್ಕಿಕೊಂಡು ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಳು ಎಂಬ ಚಿತ್ರಣವನ್ನು ಈ ವಚನದಲ್ಲಿ ತೋರುತ್ತಾಳೆ:

ಊಟಕ್ಕಿಕ್ಕದವರ ಕಂಡು ಎನಗೆ ತೃಪ್ತಿಯಾಯಿತ್ತು.
ಕೂಟವಿಲ್ಲದ ಪುರುಷನ ಕಂಡು ಕಾಮದ ಆತುರಹಿಂಗಿತ್ತೆನಗೆ.
ಏನೆಂದೆನ್ನದ ಮುನ್ನ ತಾನೆಯಾಯಿತ್ತು;
ಸಂಗಯ್ಯನಲ್ಲಿ ಶಬ್ಧಮುಗ್ಧವಾಯಿತ್ತು.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೮೫೯)

ಕಡೆಗೆ ಕಾಮವನ್ನು ಕಳೆದುಕೊಂಡು ಪ್ರಸನ್ನವದನೆಯಾದೆ ಎಂದು ಈ ವಚನದಲ್ಲಿ ನೀಲಮ್ಮ ತನ್ನ ಭಾವನೆಯನ್ನು ವ್ಯಕ್ತಪಡಿಸಿದ್ದಾಳೆ:

ಕರಣಂಗಳ ಹಂಗ ಹರಿದು
ಕಾಮದ ಸೀಮೆಯ ಹರಿದು
ಕಾಮದ ಪ್ರಪಂಚನ್ನಳಿದು ನಾನು ಪ್ರಸನ್ನವದನೆಯಾದೆನಯ್ಯ ಸಂಗಯ್ಯ.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೯೩೫)

ಪತಿಯಿರದಿದ್ದರೂ ಬಾಳುವ ಛಲ ನನ್ನಲ್ಲುಂಟು ಏಕೆಂದರೆ ಕಾಮವನ್ನು ಕಳೆದುಕೊಂಡವಳಾದುದರಿಂದ ಬಸವನ ಹಂಗು ನನಗಿಲ್ಲ ಎನ್ನುವ ಛಲವನ್ನು ನೀಲಮ್ಮ ತೋರುತ್ತಾಳೆ,

ಹಂದೆಯಲ್ಲ ನಾನು,
ಹರುಷದ ಧೈರ್ಯವುಳ್ಳ ಹೆಣ್ಣು ನಾನು.
ಕಾಮವನಳಿದವಳಾನಾದ ಕಾರಣ
ಬಸವನ ಹಂಗೆನಗಿಲ್ಲವಯ್ಯ.
ಭ್ರಮೆಯಡಗಿ ಕಲೆನಷ್ಟವಾಗಿ ಮುಖವರತು ಮನವಿಚಾರವ ಕಂಡೆನಯ್ಯ
ಸಂಗಯ್ಯ.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೧೦೮೦)

ಆದರೆ ತನ್ನ ಇನ್ನೊಂದು ವಚನದಲ್ಲಿ ಕೇವಲ ನಿಷ್ಠೆ ಎಂಬ ಒಂದು ಬದ್ಧತೆಯ ಕಾರಣವಾಗಿ ಎಲ್ಲಾ ವಾಂಛೆಗಳನ್ನು ಕಷ್ಟದಿಂದ ಕಳೆದುಕೊಳ್ಳುತ್ತಾ ಯಾವುದೇ ಸುಖವಿಲ್ಲದಿದ್ದರೂ ಕೇವಲ ಪ್ರಸಿದ್ಧ ಪುರುಷನ ಇರುವಿಕೆಯ ಏಕೈಕ ಕಾರಣದಿಂದ ಬದುಕಿದ್ದೆ. ಈಗವನು ಇಲ್ಲದ ಕಾರಣ ನನ್ನ ಕಾಯವನ್ನು ಅಳಿಯುವೆ ಎಂದು ತನ್ನ ವಿಕ್ಷಿಪ್ತ ಮನಸ್ಥಿತಿಯನ್ನೂ ತೋರಿದ್ದಾಳೆ. ಆ ವಚನ ಹೀಗಿದೆ:

ನಿಷ್ಠೆಯೆಂಬುದನೊಂದ ತೋರಿ
ಇಷ್ಟಪ್ರಾಣಭಾವದಲ್ಲಿ ಕಷ್ಟವನಳಿದೆನಯ್ಯ.
ಕಾಯದ ಸಂಗವಳಿದು ಕಾಮನಿಃಕಾಮವಾಗಿ ನಿಂದೆನಯ್ಯ.
ಅನುಭವಸುಖವಳಿದು ಅಪ್ರತಿಮ ಇರವ ಕಂಡು ಬದುಕಿದೆನಯ್ಯ,
ಸಂಗಯ್ಯ ಬಸವನಡಗಿದ ಕಾರಣ ಕಾಯವ ನಾನಳಿದೆನು.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೯೮೭)

ಹೀಗೆ ನೀಲಮ್ಮನ ವಚನಗಳು ಹೆಣ್ಣಿನ ಸೂಕ್ಷ್ಮಗಳನ್ನು, ಮಾನಸಿಕ ತುಮುಲಗಳನ್ನು, ಕಾಮನಿಗ್ರಹದ, ಕಾಮಾಸಕ್ತನಲ್ಲದ ಸಂಗಾತಿಯೊಂದಿಗಿನ ಒಡನಾಟವನ್ನು ಸೂಚ್ಯವಾಗಿ ತೆರೆದಿಡುತ್ತವೆ. ಸಾಮಾಜಿಕವಾಗಿ ಬಸವಣ್ಣನನ್ನು ಜಗಜ್ಯೋತಿ, ಸಮಾನತೆಯ ಹರಿಕಾರ ಎಂದೆಲ್ಲಾ ಗುರುತಿಸಿದ್ದರೂ, ನೀಲಮ್ಮನು ತನ್ನ ಪತಿಯಾದ ಬಸವಣ್ಣನನ್ನು ತೆರೆದಿಡುವ ಪರಿಯೇ ಬೇರೆ. ಇವಳ ವಚನದಲ್ಲಿ ಬಸವಣ್ಣ ಪುರುಷಶಾಹಿಯ ಅಧಿಪತಿಯೆನಿಸುತ್ತಾನೆ, ಅಧ್ಯಾತ್ಮದ ನೆಪದಲ್ಲಿ ಸಾಂಸಾರಿಕ ಬಯಕೆಗಳನ್ನು ಈಡೇರಿಸದ ಶರಣನಿದ್ದಾನೆ. ನಟ್ಟನಡುವೆ ಬಿಟ್ಟುಹೋದ ಪತಿಯಿದ್ದಾನೆ. ಕಟ್ಟಕಡೆಗೆ ನೀಲಮ್ಮನು ಗತ್ಯಂತರವಾಗಿ ಅಧ್ಯಾತ್ಮವನ್ನು ಹೇರಿಕೊಂಡು ನಾನು ಹಂದೆಯಲ್ಲ (ಅಂಜುಬುರುಕಿ) ಎನ್ನುತ್ತ ಬರುವ ಎಲ್ಲಾ ಸನ್ನಿವೇಶಗಳನ್ನೂ ಛಲದಿಂದ ಎದುರಿಸುತ್ತ ಪುರುಷನನ್ನು ಸಮಗಟ್ಟುವುದಲ್ಲದೆ ಆತನನ್ನು ಮೀರಿದ ಓರ್ವ ಸರ್ವಸ್ವತಂತ್ರ ದಿಟ್ಟ ಮಹಿಳೆಯಾಗಿ ಹೊಮ್ಮಿದ್ದಾಳೆ. ಆದರೆ ಮತ್ತೊಮ್ಮೆ ಬಸವನಿಲ್ಲದ ಮೇಲೆ ನನಗೇನು ಇಲ್ಲಿ ಹಾಗಾಗಿ ನಾನೂ ಅಳಿಯುವೆ ಎಂಬ ವಿಕ್ಷಿಪ್ತತೆಯನ್ನು ತೋರಿದ್ದಾಳೆ. ಇಂತಹ ವಿಕ್ಷಿಪ್ತತೆ ನೀಲಮ್ಮನಲ್ಲದೆ ಅನೇಕ ವಚನಕಾರರೂ ತಮ್ಮ ವಚನಗಳಾದ್ಯಂತ ತೋರಿದ್ದಾರೆ.

ನೀಲಮ್ಮನ ಎಲ್ಲಾ ದೂರು, ದುಮ್ಮಾನಗಳು ಸತ್ಯವೆಂಬಂತೆ ಬಸವಣ್ಣನ ಈ ವಚನ ಅನಾವರಣಗೊಳ್ಳುತ್ತದೆ:

.....ಕಾಮನೇಮವೆಂಬ ಸಿಂಧುಬಲ್ಲಾಳನ ವಧುವ ಸರ್ವಭುವನದೊಡೆಯ ಸಂಗಮದೇವರು ಬೇಡುವಂತಲ್ಲ. ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ, ಆಕೆಯನು ಸಂಗಮದೇವಾ, ನೀನು ಜಂಗಮರೂಪಾಗಿ ಬಂದು ಎನ್ನ ಮುಂದೆ ಸಂಗವ ಮಾಡುತ್ತಿರಲು ಎನ್ನೊಡನಿರ್ದ ಸತಿಯೆಂದು ಮಾಯಕ್ಕೆ ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ.... ಇಷ್ಟರೊಳಗೆ ತಪ್ಪುಳ್ಳಡೆ ಮೂದಲಿಸಿ ಮೂಗಕೊಯಿ, ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ೧ ವಚನದ ಸಂಖ್ಯೆ: ೧೧೧೧)

ಆಧ್ಯಾತ್ಮ, ಚಳವಳಿ, ಮೌಲ್ಯಗಳು ಮಾನವನನ್ನು ಗಾಢವಾಗಿ ಆವರಿಸಿಕೊಂಡಾಗ ಎಂತಹ ಒಂದು ಸಮಾಧಿ ಸ್ಥಿತಿಗೆ ಮನಸ್ಸು ಲೀನವಾಗಿರುತ್ತದೆ ಎನ್ನುವುದನ್ನೂ ಬಸವಣ್ಣನ ಈ ವಚನ ಅತ್ಯಂತ ಸೂಕ್ತವಾಗಿ ವ್ಯಕ್ತಪಡಿಸುತ್ತದೆ. ಯಾವುದೇ ಲೌಕಿಕ ವಿಚಾರಗಳು ನನ್ನ ಭಕ್ತಿಮಾರ್ಗಕ್ಕೆ ತಡೆಯೊಡ್ಡಲಾರವು ಎಂಬುದನ್ನು ನಿಷ್ಠುರವಾಗಿ ಆದರೆ ಭಕ್ತಿಲೋಲುಪ್ತನಾಗಿ ನುಡಿಯುವಾಗ ಬಸವಣ್ಣನು "ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ, ಆಕೆಯನು ಸಂಗಮದೇವಾ, ನೀನು ಜಂಗಮರೂಪಾಗಿ ಬಂದು ಎನ್ನ ಮುಂದೆ ಸಂಗವ ಮಾಡುತ್ತಿರಲು ಎನ್ನೊಡನಿರ್ದ ಸತಿಯೆಂದು ಮಾಯಕ್ಕೆ ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ" ಎನ್ನುತ್ತಾನೆ. ಅಂದರೆ ಸಂಸಾರದ ಬಗ್ಗೆ ಬಸವಣ್ಣನು ಎಂತಹ ದಿವ್ಯ ವಿರಕ್ತಿಯನ್ನು ಹೊಂದಿದ್ದನು ಎಂಬ ವಿಶಾಲಾರ್ಥದೊಂದಿಗೆ ಈ ವಚನವು ಆತನ ಸಂಸಾರದ ಸೂಕ್ಷ್ಮಗಳನ್ನೂ ತೋರುತ್ತದೆ.

ಕಾಮದ ಕುರಿತಾದ ನೀಲಮ್ಮನ ಮೇಲಿನ ಸರಣಿ ವಚನಗಳು ಮತ್ತು ತನ್ನ ಪತ್ನಿ ನೀಲಮ್ಮಳ ಕುರಿತಾದ ಬಸವಣ್ಣನ ವಚನದ ವಾಸ್ತವತೆಯು ಪೌರಾಣಿಕ ರೂಪವಾಗಿ ಮಾಯಿದೇವಿ ಎಂದೂ ಕರೆಯುವ ನೀಲಮ್ಮನ ಒಂದು ಪ್ರಸಂಗವಾಗಿ ಹರಿಹರನ ’ಬಸರಾಜದೇವರ ರಗಳೆ’ಯಲ್ಲಿ (ಸ್ಥಲ ೧೨, ಬಸವರಾಜದೇವರ ರಗಳೆ, ಸಂ. ಟಿ.ಎಸ್. ವೆಂಕಣ್ಣಯ್ಯ, ಪುಟ ೮೭, ೮೮) ಅನಾವರಣಗೊಂಡಿದೆ.

ಬಸವ-ಮಾಯಿದೇವಿ-ಜಂಗಮರಿರುವ ಈ ಪ್ರಸಂಗದಲ್ಲಿ
ಶಿವನು ಸುಖಿಜಂಗಮನ ವೇಷದಲ್ಲಿ ಬಂದಾಗ ಅವನನ್ನು ರಮಿಸಲು ಬಸವನು ತನ್ನ ಪ್ರೀತಿಯ ಪತ್ನಿ ಮಾಯಿದೇವಿ (ನೀಲಮ್ಮ)ಯನ್ನು ಕಳುಹಿಸುತ್ತಾನೆ. ಇದನ್ನು ಮೆಚ್ಚಿ ಶಿವನು ನೀಲಮ್ಮನಿಗೆ ತನ್ನ ನಿಜರೂಪ ತೋರಿದಾಗ ಆಕೆ "ನೋಡಲಮ್ಮದೆ ನಡನಡಂ ನಡುಗಿ, ಬಸವಾ ಬಸವಾ, ಜಂಗಮದೇವರು ಸಂಗಮದೇವರಾದ"ರೆನ್ನಲು ಬಸವಣ್ಣನವರು "ತಾಯೆ ತಾಯೆ, ಮುನ್ನಾವರೆಂದು ಕೊಟ್ಟೆನೆಂ" ಎಂದುತ್ತರಿಸುತ್ತಾನೆ.

ಈ ಕಾಲ್ಪನಿಕ ಪೌರಾಣಿಕ ಸ್ವರೂಪದ ಕಥನಕ್ಕೆ ನೀಲಮ್ಮ ತನ್ನ ವಚನಗಳ ಸರಣಿಯಲ್ಲಿ ಬಹುಸ್ಪಷ್ಟ ವಾಸ್ತವವನ್ನು ಕಟ್ಟಿಕೊಟ್ಟಿರುವುದು ಅಷ್ಟೇ ಸ್ಪಟಿಕಸ್ಪಷ್ಟ! ಇಂತಹ ಕೆಚ್ಚಿರುವುದರಿಂದಲೇ ಆಕೆ ಹಂದೆಯಲ್ಲ ಎಂದು ಹರಿಹರನೂ ತನ್ನ ರಗಳೆಯಲ್ಲಿ ಹೊಗಳಿದ್ದಾನೆ. ಹಾಗೆಯೇ ಅವಳೂ ತನ್ನನ್ನು ಹಂದೆಯಲ್ಲ ಎಂದು ಕರೆದುಕೊಂಡಿದ್ದಾಳೆ. ಇಂತಹ ಗಟ್ಟಿ ನಿಲುವಿನ ಮಹಿಳಾ ನೆಲೆಯನ್ನು ಯಾವ ವಚನಕಾರ್ತಿಯೂ ಕಟ್ಟಿಕೊಟ್ಟಿಲ್ಲ.

ಒಟ್ಟು ೧೯ ಕಡೆಗಳಲ್ಲಿ ನೀಲಮ್ಮನು ತನ್ನ ೧೨ ವಚನಗಳಲ್ಲಿ ’ಕಾಮ’ ಪದವನ್ನು ಸಾಂಸಾರಿಕ ಮಹಿಳೆಯಾಗಿ ಅದೊಂದು ಸಾಂಸಾರಿಕ ಅಗತ್ಯವೆಂಬಂತೆ ಬಳಸಿದ್ದರೆ, ಅಕ್ಕಮಹಾದೇವಿ ಒಟ್ಟು ೩೧ ಕಡೆಗಳಲ್ಲಿ , ವಚನಕಾರ ತನ್ನ ೨೫ ವಚನಗಳಲ್ಲಿ ’ಕಾಮ’ ಪದವನ್ನು ಸನ್ಯಾಸತ್ವದ ಹಿನ್ನೆಲೆಯಲ್ಲಿ ಪಾಪವೆಂಬಂತೆ ಬಳಸಿದ್ದಾಳೆ. ಅಕ್ಕಮಹಾದೇವಿ ಯೋಗಿಣಿ ಎನಿಸಿದರೆ, ನೀಲಮ್ಮ ತ್ಯಾಗಿಣಿ ಎನಿಸುತ್ತಾಳೆ.

ಆದರೆ ಬಸವಣ್ಣನ ವಚನವೊಂದು ಹೀಗಿದೆ:

ಅವಳ ವಚನ ಬೆಲ್ಲದಂತೆ: ಹೃದಯದಲ್ಲಿಪ್ಪುದು ನಂಜು ಕಂಡಯ್ಯಾ
ಕಂಗಳಲ್ಲೊಬ್ಬನ ಕರೆವಳು; ಮನದಲೊಬ್ಬನ ನೆನೆವಳು!
ವಚನದಲ್ಲೊಬ್ಬನ ನೆರೆವಳು!
ಕೂಡಲಸಂಗಮದೇವಾ,
ಇಂತಹವಳ ತನುವೊಂದೆಸೆ, ಮನವೊಂದೆಸೆ, ಮಾತೊಂದೆಸೆ
ಈ "ಮಾನಸಗಳ್ಳಿ"ಯ ನನ್ನವಳೆಂದು ನಂಬುವ
ಕುರಿನರರನೇನೆಂಬೆನಯ್ಯಾ?

(ಎನ್ನ ನಾ ಹಾಡಿಕೊಂಡೆ - ಸಂ. ಡಾ. ಎಸ್. ವಿದ್ಯಾಶಂಕರ. ಪ್ರಿಯದರ್ಶಿನಿ ಪ್ರಕಾಶನ. ವಚನ ಸಂಖ್ಯೆ ೧೧೦. ಪುಟ ೯೦)

ಮೇಲುನೋಟಕ್ಕೆ ಈ ವಚನವನ್ನು ಓದಿದವರು ಇದು ಚಂಚಲ ಮನಸ್ಸಿನ ಕುರಿತಾದ ಸೊಗಸಿನ ವಚನ ಎಂದು ಅರ್ಥೈಸಿಕೊಳ್ಳುತ್ತಾರೆ. ಆದರೆ ಬಸವಣ್ಣನ ಕೌಟುಂಬಿಕ ಜೀವನವನ್ನು ಸಮಗ್ರವಾಗಿ ಗ್ರಹಿಸಿದಾಗ ಈ ವಚನವು ಬೇರೆಯದೇ ಅರ್ಥವನ್ನು ಕೊಡುತ್ತದೆ. ಹಾಗಾಗಿ ಬಸವಣ್ಣನು ಸೂಚ್ಯವಾಗಿ ಮಹಿಳೆಯರ ಚಂಚಲತೆ ಕುರಿತು ಈ ವಚನವನ್ನು ಹೇಳಿದ್ದಾನೋ ಅಥವಾ ತನ್ನ ಪತ್ನಿಯರ ಕುರಿತು ಅವಹೇಳನ ಮಾಡಿದ್ದಾನೋ ಎಂಬುದು ಮನೋವಿಶ್ಲೇಷಣೆಯ ಸಂಗತಿ. ಏಕೆಂದರೆ ಈ ವಚನದ ಹಿನ್ನೆಲೆಯಲ್ಲಿ ಬಸವಣ್ಣನು ಮಹಿಳೆಯರ ಬಗ್ಗೆ ಹೊಂದಿದ್ದ ಅಭಿಪ್ರಾಯ ಅವನಿಗೆ ಭೂಷಣಪ್ರಾಯವಂತೂ ಅಲ್ಲ. ಒಟ್ಟಾರೆ ಖುದ್ದು ಬಸವಣ್ಣನಂತಹ ಸಮಾನತೆಯ ಹರಿಕಾರನೇ ಹೀಗೆ ಹೇಳಿರುವಾಗ ಸಮಾಜವು ಅಂದು ಮಹಿಳೆಯನ್ನು ಯಾವ ಸ್ಥಾನಕ್ಕಿಳಿಸಿ ನೋಡುತ್ತಿತ್ತು ಎಂಬುದರ ಹೊಳಹು ಸಿಗುತ್ತದೆ.

ಮಾನವ ಧರ್ಮದ ಹಿನ್ನೆಲೆಯಲ್ಲಿ ಮನಶಾಸ್ತ್ರದ ಮುನ್ನೆಲೆಯಿಂದ ವಚನಕಾರರ ಸಾಮಾಜಿಕ ಮತ್ತು ವೈಯಕ್ತಿಕ ಜೀವನವನ್ನು ಸಮಗ್ರವಾಗಿಟ್ಟುಕೊಂಡು ವಚನಗಳನ್ನು ವಿಶ್ಲೇಷಿಸಿದಾಗ ಕಾಣುವ ಸತ್ಯವೇ ಬೇರೆ. ಭಾರತದ ಇತಿಹಾಸವು ಹೀಗೆ ಕ್ರಿಸ್ತಪೂರ್ವ ಕಾಲದಿಂದ ಇಪ್ಪೊತ್ತೊಂದನೇ ಶತಮಾನದ ವರ್ತಮಾನದವರೆಗಿನ ತನ್ನೆಲ್ಲಾ ಸ್ಥಿತ್ಯಂತರಗಳನ್ನು ಸ್ಪಷ್ಟವಾಗಿ ಸಮಗ್ರ ರೂಪದಲ್ಲಿ ಕಟ್ಟಿಕೊಡುತ್ತದೆ. ಭಾರತದ ಈ "Paradigm Shift" ನಿಚ್ಚಳವಾಗಿ ನೋಡಬಲ್ಲ ಸಂಶೋಧಕರಿಗೆ ಸಮಗ್ರವಾಗಿ ತೆರೆದಿಟ್ಟು ಕಾಯುತ್ತಿದೆ. ಇದಕ್ಕೆ ವಚನಕಾರರು ಮತ್ತವರ ಜೀವನವು ಸಹ ಹೊರತಲ್ಲ.

ಇನ್ನು ಅಕ್ಕಮಹಾದೇವಿಯಂತೆಯೇ ಅಮುಗೆ ರಾಯಮ್ಮನ ವಚನಗಳು ಸಹ ಕಾಮವನ್ನು ಒಂದು ಪಾಪವೆಂಬಂತೆ ಚಿತ್ರಿಸಿವೆ. ಈ ಕೆಳಗಿನ ಅಂತಹ ವಚನವನ್ನು ಗಮನಿಸಿದರೆ ನೀಲಮ್ಮನ ಮೇಲಿನ ವಚನಗಳು ಹೇಗೆ ಭಿನ್ನ ಎಂದು ತಿಳಿದುಬರುತ್ತದೆ.

ಕಣ್ಣಿಗೆ ಬಂದಂತೆ ಅನ್ಯದೇಶಕ್ಕೆ ಹೋಗುವ ಕುನ್ನಿಗಳಿಗೆ
ಬಣ್ಣದ ಮಾತೇಕೊ ?
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳುಳ್ಳವಂಗೆ
ಮಹಾಜ್ಞಾನಿಗಳ ಮಾತೇಕೊ ?
ಕತ್ತಲೆಯ ಕಳೆದು ನಿಶ್ಚಿಂತನಾದವಂಗೆ
ನಚ್ಚುಮೆಚ್ಚಿನ ರಚ್ಚೆಯ ಮಾತೇಕೊ ? ಅಮುಗೇಶ್ವರಲಿಂಗವನರಿದವಂಗೆ ?
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೬೨೦)

ಒಟ್ಟಿನಲ್ಲಿ ವಚನ ಸಾಹಿತ್ಯವು ಅಂದಿನ ಮಹಿಳೆಯನ್ನು ಅಸಮಾನತೆಯ ನೆಲೆಯಿಂದಲ್ಲದೆ ಸಾಮಾಜಿಕ ನೆಲೆಯಿಂದಲ್ಲದೆ ಮಾನಸಿಕ ನೆಲೆಯಿಂದಲೂ ಕಟ್ಟಿಕೊಡುತ್ತವೆ.

ಅದೆಲ್ಲಕ್ಕಿಂತ ನೀಲಮ್ಮನಿಗೆ ತನ್ನ ಅನಿಸಿಕೆಗಳನ್ನು ಹೇಳಿಕೊಳ್ಳುವಂತಹ ಆತ್ಮಸ್ಥೈರ್ಯವನ್ನು ಲಿಂಗವೊದಗಿಸಿತ್ತು. ಇಡೀ ವಚನಚಳವಳಿಯಲ್ಲದೆ ಇಡೀ ಭರತಖಂಡದಲ್ಲಿಯೇ ಇಲ್ಲಿಯವರೆಗೂ ಯಾವುದೇ ಸತ್ಪುರುಷನ ಸಹ"ಧರ್ಮಿಣಿ"ಯು ತನ್ನ ಪತಿಯು ತೀರಿದ ಬಳಿಕ ಸುಖಿಯಾದೆನೆಂದು ನೀಲಮ್ಮನಂತೆ ಆತ್ಮಸ್ಥೈರ್ಯದಿಂದ ಖಚಿತವಾದ ನಿಷ್ಠುರ ನಿರಾಳವನ್ನು ವ್ಯಕ್ತಪಡಿಸಿಲ್ಲ. ಬಸವನಳಿದ ಬಳಿಕದ ಆಕೆಯ ಹಲವಾರು ಇಂತಹ ನಿರಾಳತೆಯ ವಚನಗಳನ್ನು ಗಮನಿಸಬಹುದು.

ಅಂತಹ ಒಂದು ವಚನ ಹೀಗಿದೆ:

ಆಡದ ಮುನ್ನವಚ್ಚನೆ ಛಂದವಾಯಿತ್ತೆನಗಯ್ಯ.
ಅಚ್ಚನೆಯಳಿದು ನಿರೂಢವಾಯಿತ್ತು ಪ್ರಸಂಗ.
ಸಂಗ ಸ್ವಯಕೂಟವನ್ನೈದಲು,
ಅಪ್ರತಿಮ ಮೂರ್ತಿಯ ಇರವನರಿದೆ ನಾನು.
ಇಪ್ಪತ್ತೈದು ತತ್ತ್ವವ ಸರಗೊಳಿಸಿ ಸುಖಿಯಾದೆನಯ್ಯ
ಸಂಗಯ್ಯ, ಬಸವನಳಿದು ನಿರಾಭಾರಿಯಾದ ಬಳಿಕ.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೮೩೯)

ಹಾಗೆಯೇ ಈ ಕೆಳಗಿನ ವಚನವು ಬಸವಣ್ಣನೊಂದಿಗಿನ ಆಕೆಯ ಸಂಬಂಧದ ಬಗ್ಗೆ ಮತ್ತಷ್ಟು ಹೊಳಹುಗಳನ್ನು ನೀಡುತ್ತದೆ. ಒಟ್ಟಿನಲ್ಲಿ ನೀಲಮ್ಮನು ಕೇವಲ ಬಸವಪತ್ನಿಯಾಗಿ, ವಚನಕಾರ್ತಿಯಾಗಿಯಲ್ಲದೆ ಜಾಗತಿಕವಾಗಿಯೂ ಮಹಿಳಾ ನೆಲೆಯಿಂದ ಅತಿ ವಿಶಿಷ್ಟ ವ್ಯಕ್ತಿಯೆನಿಸುತ್ತಾಳೆ. ಜಗತ್ತು ಕೇವಲ ಧಾರ್ಮಿಕ ನೆಲೆಯಲ್ಲಿ ವಚನಕಾರ್ತಿಯರನ್ನು ನೋಡಿರುವುದರಿಂದ ನೀಲಮ್ಮನನ್ನು ಗುರುತಿಸುವಲ್ಲಿ ಸೋತಿದೆ.

ಅಧಿಕ ತೇಜೋನ್ಮಯ ಬಸವಾ.
ಅನಾದಿತತ್ವಮೂರ್ತಿ ನೀನೆ ಅಯ್ಯಾ ಬಸವಾ.
ಎಲೆ ಅಯ್ಯಾ ಸಮರಸದಲ್ಲಿ ಹುಟ್ಟಿದ
ಪ್ರಣವಮೂರ್ತಿಯಯ್ಯಾ ಬಸವಯ್ಯನು.
ಆ ಬಸವನಡಗಿದ ಬಳಿಕ ಆನು ಬದುಕಿದೆನಯ್ಯಾ ಸಂಗಯ್ಯಾ.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೮೧೮)

ಅದೇ ಬಸವಣ್ಣನವರ ಇನ್ನೋರ್ವ ಪತ್ನಿ ನೀಲಾಂಬಿಕೆಯ ಸೋದರಿ ಗಂಗಾಂಬಿಕೆ ತನ್ನ ಸಂಸಾರದ ಮತ್ತೊಂದು ಕೋನವನ್ನು ತೋರುತ್ತಾಳೆ. ಆಕೆಯ ಈ ಕೆಳಗಿನ ವಚನಗಳು ಸವತಿ ಮತ್ಸರದ ದೂರಿನ ಭಾವನೆಗಳನ್ನು ಹೊಂದಿವೆ ಎನಿಸುತ್ತವೆ.

ಅವಳ ಕಂದ ಬಾಲಸಂಗ, ನಿನ್ನ ಕಂದ ಚೆನ್ನಲಿಂಗ
ಎಂದು ಹೇಳಿದರಮ್ಮಾ ಎನ್ನ ಒಡೆಯರು.
ಫಲವಿಲ್ಲದ ಕಂದನಿರ್ಪನವಳಿಗೆ,
ಎನಗೆ ಫಲವಿಲ್ಲ, ಕಂದನಿಲ್ಲ.
ಇದೇನೋ ದುಃಖದಂದುಗ
ಗಂಗಾಪ್ರಿಯ ಕೂಡಲಸಂಗಮದೇವಾ?
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೭೫೩)

ಪತಿಯಾಜ್ಞೆಯಲ್ಲಿ ಚರಿಪ ಸತಿಗ್ಯಾಕೆ ಪ್ರತಿಜ್ಞೆಯು?
ಪ್ರತಿಜ್ಞೆಯ ಪತಿಕರದಲ್ಲಿ ಪೋಪದಿರೆ ಯಾತನೆಯಲ್ಲವೆ?
ಇವಳ ಲಿಂಗನಿಷ್ಠೆ ಇವಳಿಗೆ,
ನಮ್ಮ ನಿಷ್ಠೆಪತಿಯಾಜ್ಞೆಯಲ್ಲಿ ಕಾಣಾ
ಗಂಗಾಪ್ರಿಯ ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೭೫೮)

ಹೀಗೆ ಬಸವಪತ್ನಿಯರೀರ್ವರೂ ತಮ್ಮ ಮಾನಸಿಕ ತುಮುಲಗಳನ್ನು, ಸಾಂಸಾರಿಕ ವೇದನೆಗಳನ್ನು ತಮ್ಮ ವಚನಗಳಲ್ಲಿ ಹರಿಯಬಿಟ್ಟಿದ್ದಾರೆ. ಬೇರೆಲ್ಲಾ ವಚನಕಾರ್ತಿಯರಿಗೆ ಬಸವತತ್ವದಿಂದ ಸಿಕ್ಕಿದ್ದ ಅನುಭಾವ ಬಸವ ಪತ್ನಿಯರಿಗೆ ಸತ್ವಹೀನವೆನಿಸಿದ್ದಿತೇನೋ ಎಂಬಂತೆ ಈ ವಚನಗಳು ಸಂಸಾರಸೂಕ್ಷ್ಮಗಳನ್ನು ತೆರೆದಿಡುತ್ತವೆ.

- ರವಿ ಹಂಜ್

No comments: