ಹಿಂದೂ ಒಂದು ಧರ್ಮವೇ?
ಆರ್ಯ, ದ್ರಾವಿಡ ಜನಾಂಗದ ವಿಭಜನೆ ಸತ್ಯವೇ?
ಜಾತಿ, ಪಂಥಗಳು ಹುಟ್ಟಿನಿಂದ ಯಾವಾಗ ಜಾರಿಗೊಂಡವು?
ಅಸ್ಪೃಶ್ಯತೆ ಹೇಗೆ, ಯಾವಾಗ ಆಚರಣೆಗೆ ಬಂದಿತು?
ಚರಕ, ಆರ್ಯಭಟರಂತಹ ತಜ್ಞರ ಶಾಸ್ತ್ರ, ಸೂತ್ರಗಳ ಭಾರತ ಹೇಗೆ ಅಂಧಕಾರದಲ್ಲಿ ಮುಳುಗಿತು?
ಭಾರತದ ಬೀದಿಗಳಲ್ಲಿ ಮುತ್ತುರತ್ನಗಳನ್ನು ಮಾರುತ್ತಿದ್ದಷ್ಟು ದೇಶ ಶ್ರೀಮಂತವಾಗಿದ್ದಿತೇ?
ಹಾಗಿದ್ದ ಶ್ರೀಮಂತ ದೇಶ ಹೀಗೇಕೆ ಬಡವಾಯಿತು? ಇತ್ಯಾದಿ ಇತ್ಯಾದಿಯಾಗಿ ಇತಿಹಾಸದ ಕುರಿತಾಗಿ ನನ್ನಲ್ಲಿ ಮೂಡಿದ್ದ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿಕೊಂಡು ಸಾಗಿದಾಗ ಕಂಡುಕೊಂಡದ್ದು ಹೀಗೆ ಪುಸ್ತಕವಾಗಿದೆ.
ಆದರೆ ನಾನೊಬ್ಬ ವೃತ್ತಿನಿರತ ಸಂಶೋಧಕನಲ್ಲ, ಅದರಲ್ಲಿ ಶೈಕ್ಷಣಿಕ ಪರಿಣಿತಿಯೂ ಇಲ್ಲ. ಹಾಗೆಯೇ ನಾನೊಬ್ಬ ಸಾಹಿತಿ, ಚಿಂತಕ, ಇನ್ಯಾವುದೇ ವೃತ್ತಿ ಯಾ ಪ್ರವೃತ್ತಿ ವಿಶೇಷಣಗಳನ್ನು ಹೊಂದಿದವನೂ ಅಲ್ಲ. ನಾನೊಬ್ಬ ಕೇವಲ ಮಾಹಿತಿ ವಿಶ್ಲೇಷಕ ಮತ್ತು ಸತ್ಯದ ಅನ್ವೇಷಕ ಮಾತ್ರ. ಕೇವಲ ಒಬ್ಬ ಕುತೂಹಲಿಯಾಗಿ ನಾನು ನನ್ನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡಿದ್ದೇನೆ! ನನಗಿದ್ದ ವೃತ್ತಿಪರ ವಿಶ್ಲೇಷಣಾ ಅನುಭವ, ಮತ್ತು ಸತ್ಯ ಪ್ರತಿಪಾದನೆಯ ನಿಷ್ಠೆ ನನಗೆ ಈ ಸಂಶೋಧನೆಯಲ್ಲಿ ನೆರವಾಗಿದ್ದುದು ಮಾತ್ರ ಸತ್ಯ. ಹೀಗೆ ನನ್ನಂತೆಯೇ ಇದೇ ಪ್ರಶ್ನೆಗಳಿರಬಹುದಾದ ಹಲವರಿಗೆ ನಾನು ಕಂಡುಕೊಂಡದ್ದು ಕಿಂಚಿತ್ತಾದರೂ ತೋರುಗಂಬವಾಗಬಹುದೆಂಬ ಅನಿಸಿಕೆಯಿಂದ ಇದನ್ನು ಒಂದು ಪುಸ್ತಕವಾಗಿಸಿದ್ದೇನೆ. ಹಾಗಾಗಿ ಇದು ನನ್ನ ಪುಸ್ತಕವಲ್ಲ. ಇದು ನಮ್ಮಂತಹ ಎಲ್ಲಾ ಇತಿಹಾಸ ಕುತೂಹಲಿಗಳ ಪುಸ್ತಕ, ನಿಮ್ಮ ಪುಸ್ತಕ.
ಒಬ್ಬ ಅನಿವಾಸಿ ಕನ್ನಡ ಬರಹಗಾರನಿಗೆ ಬರೆಯುವ ಆಸಕ್ತಿ ಛಲವಿದ್ದರೂ, ಅದನ್ನು ಓದಿ ಸಲಹೆ ಕೊಡಬಲ್ಲ ಆಸಕ್ತ ವಲಯದ ಕೊರತೆ ಅಪಾರ. ಬರೆಯುವ ಓಘದಲ್ಲಿ ಆಗುವ ಕಾಗುಣಿತದ ತಪ್ಪುಗಳು, ತಲೆಯಿಂದ ಬರುವ ಸಿಗ್ನಲ್ಲುಗಳನ್ನು ಬೆರಳುಗಳು ಒಮ್ಮೊಮ್ಮೆ ಸರಿಯಾಗಿ ನಿರ್ವಹಿಸದೇ ಆಗುವ ಅಭಾಸಗಳನ್ನು ಸರಿಪಡಿಸಲು ಬರಹಗಾರ ಎಷ್ಟೇ ಗಮನ ಕೊಟ್ಟಿದ್ದರೂ ಆತನಿಗೆ ಎರಡನೇ ದೃಷ್ಟಿ ಅತ್ಯಗತ್ಯ. ಆ ಎರಡನೇ ದೃಷ್ಟಿಯ ಅಭಾವ ಅನಿವಾಸಿ ಬರಹಗಾರನಿಗೆ ಸದಾ ಅಲಭ್ಯ. ಅದರಲ್ಲೂ ಬರಹದ ವಸ್ತು ಕಾಲ್ಪನಿಕವಲ್ಲದೆ ಸಂಶೋಧನಾ ವಿಷಯವಾಗಿದ್ದರೆ ಆತ ಗೋಬಿ ಮರಳುಗಾಡಿನಲ್ಲಿ ಕಳೆದುಹೋದ ಹುಯೆನ್ ತ್ಸಾಂಗನೇ ಸರಿ.
ಆ ಎಲ್ಲಾ ಸಂಕಷ್ಟಗಳನ್ನು ಎದುರಿಸಿ, ವಿಚಲಿತಗೊಂಡು, ಹತ್ತು ಹಲವಾರು ಬಾರಿ ತಿದ್ದಿ ಸರಿಪಡಿಸಿ ಈ ಕೃತಿಯನ್ನು ರಚಿಸಿದ್ದೇನೆ. ಆದರೂ ಒಂದು ತಪ್ಪು ಇದರಲ್ಲಿ ಉಳಿದುಬಿಟ್ಟಿದೆ. ಇದು ಕನ್ನಂಬಾಡಿ ಕಟ್ಟೆಯ ಕುರಿತಾದ ಎರಡು ವಾಕ್ಯಗಳಲ್ಲಿ ಒಂದು ವಾಕ್ಯ ಬಿಟ್ಟುಹೋಗಿ ಅರ್ಥ ಅಭಾಸವನ್ನು ಕೊಟ್ಟಿದೆ. ಅದಕ್ಕಾಗಿ ಕ್ಷಮೆಯಿರಲಿ.
ಇನ್ನು ಇಪ್ಪತ್ತೈದು ಸಾವಿರ ಪುಸ್ತಕಗಳನ್ನು ನೂರು ರೂಪಾಯಿಗೊಂದರಂತೆ ಮಾರಿ, ಹತ್ತು ಪರ್ಸೆಂಟ್ ರಾಯಧನ ಗಳಿಸಿದರೆ ಸಿಗುವುದು ಎರಡೂವರೆ ಲಕ್ಷ! ಯಾವುದೇ ಒಂದು ಸಂಶೋಧನೆಗೆ ಸಂಪನ್ಮೂಲಗಳನ್ನು ಒಟ್ಟುಗೂಡಿಸಲು ತಿರುಗಾಡಿ ವ್ಯಯಿಸುವ ಹಣ, ರಾಯಲ್ಟಿಯ ದ್ವಿಗುಣ/ತ್ರಿಗುಣದಷ್ಟು.
ಸರ್ಕಾರಿ ಅನುದಾನಗಳಿಲ್ಲದೆ ಈ ರೀತಿಯ ಪುಸ್ತಕ ಕಷ್ಟ. ಆದರೆ ಇದು ನನ್ನ ಅರಿವಿನ ಪರಿಧಿಯ ವಿಸ್ತರಿಸಿಕೊಳ್ಳುವ ವೈಯಕ್ತಿಕ ಮೂಲೋದ್ದೇಶದ ಕಾರಣ ಇಲ್ಲಿ ಹಣ ಗೌಣ. ಇದೇ ಮನೋಭಾವನೆಯ ಪ್ರಕಾಶಕರಾದ ಲೋಕಪ್ಪನವರು ಸಿಕ್ಕಿದ್ದು ನನ್ನ ಸುಯೋಗ!
ಈ ಸಂಶೋಧನಾತ್ಮಕ ವಿಶ್ಲೇಷಣಾ ಕೃತಿಗಳು ಒಂದೆಡೆ ಅಧಿಕ ಖರ್ಚು ಎನಿಸಿದರೆ ಮತ್ತೊಂದೆಡೆ ಓದುಗರ ಅವಗಣನೆಗೆ ಒಳಗಾಗಿ ಲೈಬ್ರರಿಗಳಲ್ಲಿ ಧೂಳು ಹಿಡಿದು ಕೂರುತ್ತಿವೆ. ಮೂಲತಃ ಈ ರೀತಿಯ ಸಂಶೋಧನೆಗಳಿಗೆ ಗ್ರ್ಯಾಂಟ್ ಇರುವುದರಿಂದ ಸಂಶೋಧಕರೂ ಅಷ್ಟಾಗಿ ಮಾರುಕಟ್ಟೆ ಬಗ್ಗೆ ಚಿಂತಿಸುವುದಿಲ್ಲ. ಅದಲ್ಲದೆ, ಫಿಕ್ಷನ್ ಸಾಹಿತ್ಯಕ್ಕೆ ಸಾಕಷ್ಟು ಒತ್ತು ಕೊಟ್ಟು ಚರ್ಚೆ, ವಿಮರ್ಶೆಗೊಳಪಡಿಸುವ ನಾವು ನಾನ್-ಫಿಕ್ಷನ್ ಸಂಶೋಧನೆ, ವಿಶ್ಲೇಷಣೆಗಳಿಗೆ ಅಷ್ಟೊಂದು ಒತ್ತು ಕೂಡಾ ಕೊಡುವುದಿಲ್ಲ.
ಹಾಗಾಗಿ ಗ್ರ್ಯಾಂಟ್ ಇಲ್ಲದೆ ಈ ರೀತಿಯ ಸಾಹಸಗಳಿಗೆ ಕೈಹಾಕುವವರಿಗೆ ಎಂದಿಗಿಂತಲೂ ಹೆಚ್ಚಿನ ಮಹತ್ವ ಕೊಟ್ಟು ಓದುಗರು ಪ್ರೋತ್ಸಾಹಿಸಬೇಕಾಗಿದೆ. ಹಾಗೆಯೇ ಸಂಶೋಧಕರು ಕೂಡ ತಮ್ಮ ಸಂಶೋಧನಾತ್ಮಕ ಕೃತಿಗಳನ್ನು ಸಿದ್ಧ ಮಾದರಿಯ ಬೋರು ಹೊಡೆಸುವ ಶೈಕ್ಷಣಿಕ ಪಿಹೆಚ್ಡಿ ಶೈಲಿಯಲ್ಲಿ ರಚಿಸುವುದು ಕೂಡಾ ಓದುಗರ ಅವಗಣನೆಗೆ ಒಂದು ಪ್ರಮುಖ ಕಾರಣವೆನಿಸುತ್ತದೆ. ತಮ್ಮ ಪಿಹೆಚ್ಡಿ ಮುಗಿದ ನಂತರ ಸಂಶೋಧಕರು ಆ ಥೀಸಿಸ್ ಅನ್ನು ಕಥನ ಶೈಲಿಯಲ್ಲಿ ಸಾಮಾನ್ಯ ಓದುಗರಿಗಾಗಿ ಬರೆದರೆ ಸಂಶೋಧನೆಗಳು ಹೆಚ್ಚು ಜನರನ್ನು ತಲುಪಬಹುದು.
ಹಾಗಾಗಿ ಫಿಕ್ಷನ್ ಓದುಗರ ಪ್ರೋತ್ಸಾಹವನ್ನು ಬಯಸಿಯೇ ನಾನು ಈ ಕೃತಿಯನ್ನು ಕಥನ ಶೈಲಿಯಲ್ಲಿ ಬರೆದಿದ್ದೇನೆ.
ಶಿಕಾಗೋದ ನನ್ನಂಥಹ ಒಬ್ಬ ಶೈಕ್ಷಣಿಕೇತರ ಗಮಾರ, ಹವ್ಯಾಸಿ ಕುತೂಹಲಿಯ ಹುಡುಕಾಟದ ತಡವರಿಸುವಿಕೆಯನ್ನು, ಉತ್ಖನನ ಮತ್ತು ಪ್ರಾಚೀನ ಚರಿತ್ರೆಯ ಶೈಕ್ಷಣಿಕ ರಂಗದ, ವೃತ್ತಿಪರ ಸಂಶೋಧನೆಯ ಮೇರುಶಿಖರವೆನಿಸಿದ ಡಾ. A.V. ನರಸಿಂಹಮೂರ್ತಿಯವರು ಮೈದಡವಿ ಅಪ್ಪಿ ಮುನ್ನುಡಿ ಬರೆದುಕೊಟ್ಟು ಪ್ರೋತ್ಸಾಹಿಸಿದ್ದಾರೆ. ಅದೇ ರೀತಿ ಖ್ಯಾತ ಸಾಹಿತ್ಯ ವಿಮರ್ಶಕರಾದ ಡಾ. ನಂದೀಶ್ ಹಂಚೆಯವರು ಕೃತಿಯನ್ನು ಮೆಚ್ಚಿ, ಬೆನ್ನು ತಟ್ಟಿ ಬೆನ್ನುಡಿಯನ್ನು ಬರೆದಿದ್ದಾರೆ. ವಸ್ತುನಿಷ್ಠ ಸತ್ಯತೆಯನ್ನು ಸದಾ ಪ್ರೋತ್ಸಾಹಿಸುವ ಗುರುಗಳಾದ ಶ್ರೀ ಸುತ್ತೂರು ಸ್ವಾಮೀಜಿಯವರು ಆಶೀರ್ವದಿಸಿದ್ದಾರೆ.
ಬರೆಯುವುದನ್ನು ಮರೆತೇಬಿಟ್ಟಿದ್ದ ನನ್ನನ್ನು ಮತ್ತೆ ಬರೆಯಲು ಪ್ರೇರೇಪಿಸಿ, ನನ್ನ ಲೇಖನಗಳನ್ನು ಪ್ರಕಟಿಸಿ, ಪುಸ್ತಕಗಳನ್ನೂ ಬರೆಸಿದ ಸಮಾಜಮುಖಿ ಸಂಪಾದಕರಾದ ಚಂದ್ರಕಾಂತ ವಡ್ಡು, ಮತ್ತು ಉದಯಕಾಲ ದಿನಪತ್ರಿಕೆಯ ಬಳಗದ ಪುಟ್ಟಲಿಂಗಯ್ಯ ಮತ್ತು ದೇವರಾಜ್ ಹಿರೇಹಳ್ಳಿ ಅವರಿಗೆ ನಾನು ಚಿರಋಣಿ.
ರೂ.180/- ಮುಖಬೆಲೆಯ ''ಭಾರತ ಒಂದು ಮರುಶೋಧನೆ'' ಕೃತಿಯನ್ನು ರಿಯಾಯಿತಿ ದರದಲ್ಲಿ ಮುಂಗಡ ಕಾಯ್ದಿರಿಸುವ ಅವಕಾಶವಿದೆ. ಕೆಳಗಿನ ಬ್ಯಾಂಕ್ ಖಾತೆಗೆ ರೂ.150/- ಪಾವತಿಸಿ ನಿಮ್ಮ ಅಂಚೆ ವಿಳಾಸವನ್ನು ಮೊಬೈಲಿಗೆ ಕಳುಹಿಸಿದರೆ ಸಾಕು. ಪುಸ್ತಕವನ್ನು ಬಿಡುಗಡೆಗೊಂಡ ಮರುದಿನ ಅಂದರೆ ಆಗಸ್ಟ್ 26ಕ್ಕೆ ನಿಮ್ಮ ಮನೆಬಾಗಿಲಿಗೆ ತಲುಪಿಸುವ ಹೊಣೆ ನಮ್ಮದು.
ಡಿ.ಎನ್. ಲೋಕಪ್ಪ,
ಶ್ರೀ ರಾಜೇಂದ್ರ ಮುದ್ರಕರು ಮತ್ತು ಪ್ರಕಾಶಕರು,
ಯುಕೋ ಬ್ಯಾಂಕ್,
ದೇವರಾಜ ಅರಸ್ ರಸ್ತೆ ಶಾಖೆ, ಮೈಸೂರು.
ಚಾಲ್ತಿ ಖಾತೆ ಸಂಖ್ಯೆ:00540500004256
Ifsc: UCBA 0000054
ಮೊಬೈಲ್: 9902639593