ಎಲ್ಲಾ ತಲೆಮಾರು ದೂರುವುದು ಹಿಂದಿನ ತೇರು!

 ಇದು ಒಂದು ಖ್ಯಾತ ಸಾಫ್ಟ್ ರಾಕ್ ಹಾಡಿನ ಅನುವಾದ. ವಿದೇಶಿ ಸಂಗೀತಗಳಾದ ರಾಕ್ ಎಂದರೆ ಅಬ್ಬರ, ಪಾಪ್ ಎಂದರೆ ಪಾಪಿ ಸಂಗೀತ ಎನ್ನುವ ಸಾಮಾನ್ಯ ಪೂರ್ವಾಗ್ರಹವನ್ನು ಕಳೆಯಲು ಇದು ಸಹಕಾರಿಯಾಗಬಹುದು ಎಂದುಕೊಂಡಿದ್ದೇನೆ.ಮೂಲ ಯಾವುದೆಂದು ಹೇಳಿ ನೋಡೋಣ.


ಎಲ್ಲಾ ತಲೆಮಾರು

ದೂರುವುದು ಹಿಂದಿನಾ ತೇರು.

ಬರುವವು ಅವರೆಲ್ಲಾ ಹತಾಶೆಗಳು

ತಟ್ಟುತ್ತ ನಮ್ಮ ಡೋರು!


ಅಪ್ಪ ಕವುಚಿದ್ದ ಕೌದಿ

ನಾನದರೊಳಗೆ ಬಂಧಿ!

ಹೌದು ನಾನೇ ಅವನೆಲ್ಲ ನಿರೀಕ್ಷೆ, 

ಆತಂಕಗಳ ಖೈದಿ.

ಹೇಳಲಾಗಲಿಲ್ಲ ಹೀಗೆಂದು

ಬದುಕಿದ್ದಾಗ ಅವನಂದು!


ಎಲ್ಲಾ ತಲೆಮಾರು

ದೂರುವುದು ಹಿಂದಿನಾ ತೇರು.

ಬದುಕಿದ್ದ ವರ್ಷಗಳಲ್ಲೆಲ್ಲ

ಹೇಳಲಾಗಲಿಲ್ಲ ಹೇಳಬೇಕಾದುದನೆಲ್ಲ!


ಮುದುಡಿದ ಕಾಗದಗಳು

ಅದರೊಳಗಿನ ಅಸ್ಪಷ್ಟ ಅನಿಸಿಕೆಗಳು

ಮತ್ತು ಅರೆಬರೆ ಸಂಭಾಷಣೆಗಳು...

ಉಳಿದಿರುವುದಿಷ್ಟೇ ಇಂದಿನ ದಿನಗಳು!


ಅವನು ಹೇಳುತಿದ್ದ, ಅರಿಯಲಾರೆ ನೀನೆಂದೂ.

ನಾನು ಹೇಳುತ್ತಿದ್ದೆ, ಕೇಳಿಸಿಕೊಳ್ಳಲಾರೆ ನೀನೆಂದೂ.

ಮೂಡಲಿಲ್ಲ ಒಮ್ಮತ ನಮ್ಮಲ್ಲಿ ಎಂದೆಂದೂ!

ಅರಿಯಲಿಲ್ಲ ನಾವು ಅಭಿಮತ ಬೇರೆಂದೂ,

ತಲೆಮಾರುಗಳ ಭಾಷೆ ಇದೆಂದೂ!


ಎಲ್ಲಾ ತಲೆಮಾರು

ದೂರುವುದು ಹಿಂದಿನಾ ತೇರು.

ಬದುಕಿದ್ದ ವರ್ಷಗಳಲ್ಲೆಲ್ಲ

ಹೇಳಲಾಗಲಿಲ್ಲ ಹೇಳಬೇಕಾದುದನೆಲ್ಲ!


ಈಗ ಕಿವಿಗೊಟ್ಟು ಕೇಳುವೆನೆಂದರೂ

ಹೇಳಲಿಲ್ಲವನ ಪ್ರೇತ.

ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು

ವರ್ತಮಾನವಾಗಿಹುದು ಭೂತ!

ಭೂತ ವರ್ತಮಾನಗಳ ದ್ವಂದ್ವದಲಿ

ಬಲಿಯಾಯಿತು ಭವಿಷ್ಯ

ಆವರಿಸಿಕೊಂಡಿತು ವಿಷ!


ಬದುಕಿದ್ದ ವರ್ಷಗಳಲ್ಲೆಲ್ಲ

ಹೇಳಲಾಗಲಿಲ್ಲ ಹೇಳಬೇಕಾದುದನೆಲ್ಲ!


ಕೂಗಿ ಹೇಳು ಕೇಳಿಸುವುದು ಎಲ್ಲಾ,

ಸ್ಪಟಿಕ ಸದೃಶವಾಗಿ ಕೇಳುವೆನು ನಿನ್ನ ಮಾತೆಲ್ಲಾ!

ಸಮಯ ಮೀರಿಲ್ಲವಿನ್ನೂ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಎಲ್ಲಾ.

ಸಾವಿನ ಮೊದಲು ಮಿತಿಗಳಾ ಅರಿತು ಮಾತನಾಡೋಣವೆಲ್ಲಾ!


ಬದುಕಿದ್ದ ವರ್ಷಗಳಲ್ಲೆಲ್ಲ

ಹೇಳಲಾಗಲಿಲ್ಲ ಹೇಳಬೇಕಾದುದನೆಲ್ಲ!


ಅಂದು ಮುಂಜಾನೆ ಅಲ್ಲಿ ನಾನಿರಲಿಲ್ಲ

ನಮ್ಮಪ್ಪನ ಪ್ರಾಣವೂ ಅಲ್ಲಿರಲಿಲ್ಲ

ಕೊನೆಗೂ ಹೇಳಲಾಗಲಿಲ್ಲ ಹೇಳಬೇಕೆಂದುದೆಲ್ಲ!

ಆದರವನ ಆತ್ಮ ಪ್ರತಿಧ್ವನಿಸಿತು ಮರು ವರ್ಷದೆ

ಆಗಷ್ಟೇ ಹುಟ್ಟಿದ್ದ ಮಗನ ಕಣ್ಣೀರ ಹರ್ಷದೆ.

ಹೇಳಿದ್ದೆನೆಲ್ಲಾ ಹೇಳಬೇಕಾದುದನೆಲ್ಲ

ಆದರೂ ಅನಿಸಿತು ಹೇಳಬೇಕಿತ್ತು

ಅವನಿದ್ದಾಗಲೇ ಎಲ್ಲಾ!


ಹೇಳು ಹೇಳು ಗಟ್ಟಿಯಾಗಿ ಎಲ್ಲಾ

ಕಣ್ಣಲ್ಲಿ ಕಣ್ಣಿಟ್ಟು ಕೂಗಿ ಕೂಗಿ ಎಲ್ಲಾ 

ಹೇಳು ಹೇಳು ಈಗ ಕೇಳಿಸುವುದು ಎಲ್ಲಾ,

ಸಾವು ಕವಿಯುವ ಮುನ್ನ

ಇನ್ನು ಕಾಲ ಮಿಂಚಿಲ್ಲ

ಸ್ಪಟಿಕ ಸದೃಶವಾಗಿ...ನಿನ್ನ ಮಾತೆಲ್ಲ!

ಬದುಕಿದ್ದ ವರ್ಷಗಳಲ್ಲೆಲ್ಲ

ಹೇಳಲಾಗಲಿಲ್ಲ ಹೇಳಬೇಕಾದುದನೆಲ್ಲ!

ಅನುವಾದ: ರವಿ ಹಂಜ್

ಅಕ್ಯುಪಂಕ್ಚರ್ ಸೂಜಿಗಳು

 ಕಳೆದ ವಾರ ನನ್ನ ಕೈರೋಪ್ರಾಕ್ಟರ್ ರೇ ಬಳಿ ಹೋಗಿದ್ದೆ. ಏಕೋ ಗೊತ್ತಿಲ್ಲ ಕೆಲ ದಿನಗಳ ಹಿಂದೆ ಸೊಂಟ ಹಿಡಿದಿತ್ತು. ಏಳಲು, ಕೂರಲು, ನಿಲ್ಲಲು ಆಗದಷ್ಟು ಕೆಳಬೆನ್ನು ನೋಯುತ್ತಿತ್ತು. ಈ ಕೈರೋಪ್ರಾಕ್ಟರರು ಫಿಸಿಕಲ್ ಥೆರಪಿ ಮತ್ತು ಮಸಾಜುಗಳನ್ನು ಬಳಸಿ ಇಂತಹ ಸಮಸ್ಯೆ ಬಗೆಹರಿಸುತ್ತಾರೆ.

ಈ ರೇ ಸುಮಾರು ಎಪ್ಪತ್ತು ವರ್ಷದ ಚಿರಯೌವ್ವನಿಗ. ಚೀನಾದಲ್ಲಿ ಡಾಕ್ಟರ್ ಆಗಿದ್ದವನು ಅವಕಾಶ ಸಿಕ್ಕೊಡನೆ ಅಮೆರಿಕೆಗೆ ತನ್ನ 36ನೇ ವಯಸ್ಸಿನಲ್ಲಿ ಹಾರಿ ಬಂದಿದ್ದ. ಇಲ್ಲಿ ಹೆಚ್ಚುವರಿ ಓದಲು ಆರ್ಥಿಕ ಶಕ್ತಿ ಮತ್ತು ಸಮಯವಿಲ್ಲದ ಕಾರಣ ಡಾಕ್ಟರಿಗಿಂತ ಒಂದು ಮಟ್ಟ ಚಿಕ್ಕದೆನ್ನಬಹುದಾದ ಕೈರೋಪ್ರಾಕ್ಟರ್ ವೃತ್ತಿಗೆ ಸೀಮಿತಗೊಂಡಿದ್ದ. ನನ್ನ ಹೆಗಲು ಹಿಡಿದು ತಿರುವಿ ಲಟಲಟನೆ ಲಟಿಗೆ ತೆಗೆಯುತ್ತ ನನ್ನ ಸಮಸ್ಯೆಗೆ ಅಕ್ಯುಪಂಕ್ಚರ್ ಚಿಕಿತ್ಸೆ ಸರಿಯೆಂದು ನಿರ್ಧರಿಸಿದ.
ಅಕ್ಯುಪಂಕ್ಚರ್ ಸೂಜಿಗಳು ಕುಣಿದಂತೆ ಡಾ.ರೇ ಮಾತು ಸಾಗಿತ್ತು.
"ನಮ್ಮ ಚೈನಾದ ಇಂದಿನ ಅಧ್ಯಕ್ಷ ಶಿ ಭಾರಿ ಕ್ರೂರಿ. ಈಗ ಎರಡನೇ ಮಾವೋ ಆಗಬೇಕೆಂದು ಪಣ ತೊಟ್ಟಿದ್ದಾನೆ. ಜನರ ಜೀವನ ಕಷ್ಟವಾಗುತ್ತಿದೆ. ಏನು ಭಾರತದಲ್ಲಿ ಎಲ್ಲಾ ಬಣ್ಣದ ಫoಗಸ್ ಸುದ್ದಿ ಮಾಡುತ್ತಿದೆ?" ಎಂದು ಪ್ರಶ್ನಿಸುತ್ತ ತನ್ನ ಪ್ರಶ್ನೆಗೆ ತಾನೇ ಉತ್ತರಿಸಿದ.
"ವೈದ್ಯರು ರೋಗಿ ಮತ್ತು ರೋಗಗಳನ್ನು ಸರಿಯಾಗಿ ವಿಶ್ಲೇಷಿಸದೆ ಸ್ಟೆರಾಯ್ಡ್ ಕೊಡುವುದರಿಂದ ಇಂತಹ ಸಾಕಷ್ಟು ಅವಘಡಗಳು ಆಗುತ್ತವೆ. ನಮ್ಮ ಫೀಲ್ಡಿನ ಕೀಲು ಮೂಳೆ ತಜ್ಞರು ಸಹ ಇಂತಹ ಸಾಕಷ್ಟು ಅವಘಡಗಳನ್ನುಂಟು ಮಾಡಿದ್ದಾರೆ. ಇದರಿಂದ ಅನೇಕ ಜನ ಇಲ್ಲಿಯೂ ಆಸ್ಟಿಯೋಪೊರೋಸಿಸ್ ಅಂತಹ ಅಂಗ ಊನತೆಗೊಳಪಟ್ಟಿದ್ದಾರೆ" ಎಂದ.
ನಾನು "ಇರಲಿ ಡಾಕ್ಟರ್, ಚೈನಾ ಹೇಗೆ ಅಷ್ಟು ಕ್ಷಿಪ್ರವಾಗಿ ಕೋವಿಡ್ ಅನ್ನು ನಿಯಂತ್ರಿಸಿತು? ಚೈನಾ ಏನಾದರೂ ರೋಗಿಗಳ ಮತ್ತು ಸಾವಿನ 'ಸಂಖ್ಯೆ'ಯನ್ನು ನಿಯಂತ್ರಿಸಿತೇ?" ಎಂದು ಕೇಳಿದೆ.
ಅದಕ್ಕೆ ಅವನು "ಚೈನಾದಲ್ಲಿ ಜನರನ್ನು ನಿಯಂತ್ರಿಸುವುದು ಬಲು ಸುಲಭ. ಶಾಂಘಾಯಿನಂತಹ ಪಟ್ಟಣದಲ್ಲಿ 30 ಕೊರೋನಾ ಕೇಸುಗಳು ದಾಖಲಾದಾಗ 31ನೆ ಕೇಸ್ ಬಾರದಂತೆ ಪಟ್ಟಣವನ್ನು ಲಾಕ್ ಮಾಡಲಾಗಿತ್ತು. ಆ ಎಲ್ಲಾ ಕೇಸುಗಳು ಖುಲಾಸೆಯಾಗುವವರೆಗೆ ಶಾಂಘಾಯ್ ಲಾಕ್ ಆಗಿತ್ತು ಎಂದರೆ ಯೋಚಿಸು. ಚೈನಾದಲ್ಲಿ ಏಕೆ ಹೇಗೆ ಕೊರೋನಾ ಕ್ಷಿಪ್ರಗತಿಯಲ್ಲಿ ನಿಯಂತ್ರಣಕ್ಕೆ ಬಂದಿತೆಂದು! ಜನಗಳ ನಿಯಂತ್ರಣ ಚೈನಾಕ್ಕೆ ನೀರು ಕುಡಿದಂತೆ. ಅದು ಒಂದು ಸಮಸ್ಯೆಯೇ ಅಲ್ಲ" ಎಂದನು.
ಚೈನಾದಲ್ಲಿ ನಾನು ಸುತ್ತಿದ ಜಾಗಗಳ ಕುರಿತು ವಿಚಾರಿಸಿಕೊಂಡು ರೇ ತುಂಬಾ ಸಂತೋಷಿಸಿದ. ಅವನಿದ್ದ ಕಾಲದ ಚೈನಾದಲ್ಲಿ ಹೀಗೆ ತಿರುಗುವುದು ಸಾಧ್ಯವಿರಲಿಲ್ಲವೆಂದು ವರ್ಣಿಸುತ್ತ ಮತ್ತೊಮ್ಮೆ ನನ್ನ "ಅಗಣಿತ ಅಲೆಮಾರಿ"ಯಲ್ಲಿ ವರ್ಣಿಸಿದ ಮಾವೋ ಕಾಲದ ಕಥನವನ್ನು ನನಗೆ ಪುನರ್ ಊರ್ಜಿತಗೊಳಿಸಿದ. ನನ್ನ ಕಥನದಲ್ಲಿ ಲೀ ಇದ್ದರೆ, ಇಲ್ಲಿ ರೇ ನನ್ನೆದುರಿಗಿದ್ದ. ಕತೆ ಮಾತ್ರ ಯಥಾವತ್ತಾಗಿತ್ತು.
ಹೀಗೆ ಈ ಐವತ್ತು ಮತ್ತು ಅರವತ್ತರ ದಶಕದಲ್ಲಿ ಹುಟ್ಟಿ ಬೆಳೆದ ಚೀನಿಯರ ಬಾಲ್ಯ ಮತ್ತು ಯೌವ್ವನ ಚೀನಾ ನಿರ್ಮಿತ ಬೊಂಬೆಗಳಂತೆ ರೇ, ಲೀ, ವಾಂಗ್, ಈಲಿ, ಫುನೆಂಗ್, ಹ್ವಾ ಏನೇ ಹೆಸರಿರುವ ಎಲ್ಲರ ಜೀವನ ಏಕರೂಪವಾಗಿ ಏಕತಾನವಾಗಿರುತ್ತದೆ. ಅಷ್ಟರ ಮಟ್ಟಿಗೆ ಕಮ್ಯುನಿಸ್ಟ್ ಆಡಳಿತ ಆ ಕಾಲಘಟ್ಟದ ಜನಜೀವನವನ್ನು ತದ್ರೂಪುಗೊಳಿಸಿ ಸಮಾನತೆಯನ್ನು ಸಾಧಿಸಿತ್ತು! ಇಂತಹ "ಕಮ್ಯುನಿಸ್ಟ್ ಸಮಾನತೆ" ಆರೋಗ್ಯಕರ ಸಮಾಜವನ್ನು ಸೃಷ್ಟಿಸೀತೆ?!
ಆ ಪ್ರಶ್ನೆಗೆ ರೇ, ಲೀ, ವಾಂಗ್, ಈಲಿ, ಫುನೆಂಗ್, ಹ್ವಾ ಅಲ್ಲದೆ ಅವರ ಎಲ್ಲಾ ಸಮಕಾಲೀನರು ಏಕರೂಪವಾಗಿ "ಇಲ್ಲ ಇಲ್ಲ" ಎಂದು ಏಕತಾರಿ "ಟ್ಯೂಯ್ ಟ್ಯೂಯ್"ಗುಡುತ್ತಾರೆ.
ಆದರೆ ಭಾರತದ ಕಮ್ಯುನಿಸ್ಟರು ಮಾತ್ರ ಯಕ್ಷ ಗಂಧರ್ವರಂತೆ ನಾನಾ ವಿಧದ ಸಂಗೀತ ಸ್ವರಗಳನ್ನು ಹೊರಡಿಸುತ್ತಾರೆ!
ಇರಲಿ, ನಾನು "ರೇ, ನಿವೃತ್ತಿಯ ನಂತರ ಎಲ್ಲಿರಬೇಕೆಂದುಕೊಂಡಿರುವೆ?" ಎಂದೆ.
ಅದಕ್ಕೆ ರೇ, "ಮುಂದಿನ ವರ್ಷ ನಿವೃತ್ತಿಯಾಗಿ ಸ್ಯಾನ್ ಡಿಯಾಗೋದಲ್ಲಿ ಸೆಟ್ಲ್ ಆಗುವೆ. ಈಗಾಗಲೇ ಅಲ್ಲೊಂದು ಮನೆಯನ್ನು ಕೊಂಡಿರುವೆ. ನೀನು ನಿರೀಕ್ಷಿಸಿರುವಂತೆ ಚೈನಾದಲ್ಲಂತೂ ಅಲ್ಲ!" ಎಂದ.
ನಾನು "ಹೌದು, ಯಾವ ಚೀನೀ ಅಮೆರಿಕನ್ನನೂ ನಿವೃತ್ತಿಯ ನಂತರ ಚೀನಾಕ್ಕೆ ಹೋಗುತ್ತೇನೆ ಎನ್ನುವುದಿಲ್ಲವಲ್ಲ, ಏಕೆ?" ಎಂದೆನು.
ಆಗ ರೇ "ಚೀನಾದ ಗ್ರೀನ್ ಕಾರ್ಡ್ ಅತ್ಯಂತ ದುರ್ಲಭ. ಪ್ರವಾಸಿಗನಾಗಿ ನಾನು ಹೋಗಬಹುದೇ ಹೊರತು ಅಲ್ಲಿ ಸೆಟ್ಲ್ ಆಗಲು ಈ ಚೀನೀ ಗ್ರೀನ್ ಕಾರ್ಡ್ ಬೇಕು. ಒಂದು ವೇಳೆ ಅದು ನನಗೆ ಸಿಕ್ಕರೂ ಕೆಲವೊಂದು ಮೂಲ ಸೌಕರ್ಯಗಳು ದುಬಾರಿ. ನಾನು ಶಾಂಘಾಯಿನಿಂದ ಬಂದವನು. ಅಲ್ಲಿನ ವಸತಿ ಅತ್ಯಂತ ದುಬಾರಿ. ಅಲ್ಲಿ ಮನೆ ಕೊಳ್ಳುವ ಬೆಲೆಗೆ ನ್ಯೂಯಾರ್ಕ್ನಲ್ಲಿ ಎರಡು ಮನೆ ಬರುತ್ತವೆ. ಇನ್ನು ಹೆಲ್ತ್ ಕೇರ್ ಅತ್ಯಂತ ದುಬಾರಿ. ಇರಲಿ, ನನ್ನಂತಹವರು ಕೊಡುವ ಈ ಕಾರಣಗಳು ಕೇವಲ ನೆಪಗಳು ಮಾತ್ರ. ಅಸಲಿಗೆ ಇಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒಗ್ಗಿರುವ ನಮ್ಮಂತಹವರು ವಾಪಸ್ ಚೈನಾಕ್ಕೆ ಹೋಗಲು ಎಳ್ಳಷ್ಟೂ ಇಷ್ಟ ಪಡುವುದಿಲ್ಲ, ಚೈನಾ ಸರ್ಕಾರ ನಮಗಾಗಿ ಸ್ವರ್ಗವನ್ನೇ ಸೃಷ್ಟಿಸಿಕೊಟ್ಟರೂ ಸಹ!"
ಆಗ ನಾನು "ಹೆಲ್ತ್ ಕೇರ್ ಪುಕ್ಕಟೆಯಲ್ಲವೇ ಚೈನಾದಲ್ಲಿ! ಅದು ಹೇಗೆ ದುಬಾರಿ ಎನ್ನುತ್ತೀಯ" ಎಂದೆ.
ಅದಕ್ಕೆ ರೇ "ರಾವಿ, ಮೈ ಫ್ರೆಂಡ್! ನೆಗಡಿ, ಶೀತ, ಕೆಮ್ಮು, ಜ್ವರ, ನ್ಯುಮೋನಿಯಾ, ಮೂಳೆ ಮುರಿತ ಮುಂತಾದ ಸಾಮಾನ್ಯ ಪೀಡೆಗಳಿಗೆ ಉಚಿತ ಚಿಕಿತ್ಸೆ ಕೊಟ್ಟರೂ ಕ್ಯಾನ್ಸರ್, ಬೈಪಾಸ್ ಸರ್ಜರಿ, ಆರ್ಗನ್ ಟ್ರಾನ್ಸ್ಪ್ಲಾಂಟ್ ಅಂತಹ ಚಿಕಿತ್ಸೆಗಳು ಪುಕ್ಕಟೆಯಲ್ಲ! ಅವು ಅತ್ಯಂತ ದುಬಾರಿ ಚಿಕಿತ್ಸೆಗಳು ಮತ್ತು ಸರ್ಕಾರ ನಿಗದಿಗೊಳಿಸಿದ ಮೊತ್ತವನ್ನು ಕಟ್ಟಲೇಬೇಕು, ಚಿಕಿತ್ಸೆ ಪಡೆದುಕೊಳ್ಳಲು!
ಕೆಲವರು ಈ ಹೊರೆಯನ್ನು ಇಳಿಸಿಕೊಳ್ಳಲು ಭಾರತದಿಂದ ಕಡಿಮೆ ದರದಲ್ಲಿ ಔಷಧಿ ತರಿಸಿಕೊಂಡು ಸಿಕ್ಕಿ ಬಿದ್ದು, "ಸ್ಮಗ್ಲರ್" ಆಗಿ ಜೈಲಿನಲ್ಲಿದ್ದಾರೆ. ಕೆಲವೊಮ್ಮೆ ಹಾಗೆ ಔಷಧಿ ತರಿಸಿಕೊಳ್ಳಲು ಸರ್ಕಾರ ಪರವಾನಗಿ ಕೊಟ್ಟರೂ ಅದು ಒಂದೆರಡು ಡೋಸುಗಳಿಗೆ ಮಾತ್ರ. ಇಪ್ಪತ್ತು ಡೋಸು ಬೇಕಾದವನು ಒಂದೆರೆಡು ಡೋಸ್ ತರಿಸಿಕೊಳ್ಳಬಹುದಷ್ಟೇ! ಒಟ್ಟಿನಲ್ಲಿ ಸರ್ಕಾರ ಕೊಟ್ಟದ್ದನ್ನು ಮಾತ್ರ ಸ್ವೀಕರಿಸಬೇಕು, ಅವರು ಹೇಳಿದ ಬೆಲೆ ತೆತ್ತು!" ಎಂದು ರೇ ಶಿ ಯಾನೆ ಮಾವೋ II ಕಮ್ಯುನಿಸ್ಟ್ ಸರ್ಕಾರದ ಮುಫತ್ತು ಯೋಜನೆಗಳ ಮಫ್ತಿಯನ್ನು ಕಳಚುತ್ತ ನನ್ನ ಬೆನ್ನಿನ ಮೇಲೆ ನರ್ತಿಸುತ್ತಿದ್ದ ಅಕ್ಯುಪಂಚರ್ ಸೂಜಿಗಳನ್ನು ಕಳಚಿದ.
ನಂತರ ನನ್ನ ಬೆನ್ನ ಮೇಲೆ ಬೆಚ್ಚಗೆ ಮಾಡಿದ ನಾಲ್ಕು ಕಪ್ಪಿಂಗ್ ದಬಾ ಹಾಕಿ "ನಿಮ್ಮ ಮೋದಿ ಸಹ ಕೇಸು ದಾಖಲಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದ್ದಾರೆ ಎಂಬ ಸುದ್ದಿಗಳು ಬರುತ್ತಿವೆ, ನಿಜವೇ!" ಎಂದ.
"ಹೌದು, ಅಂತಹ ಪ್ರಕರಣಗಳು ಇವೆ. ಹಾಗೆಂದು ಹತ್ತಿಕ್ಕಲಾಗದು. ಅಬ್ಬಬ್ಬಾ ಎಂದರೆ ನೀನು ಕೇಳಿದಂತೆ ಕೇಸ್ ದಾಖಲಿಸಬಹುದು. ಮುಂದೆ ಅದು ಕೋರ್ಟಿನಲ್ಲಿ ಸಾಬೀತಾಗಿ....ದಬಾ ಹಾಕಿಕೊಳ್ಳಲೂಬಹುದು. ಅಷ್ಟರ ಮಟ್ಟಿಗೆ ಕೋರ್ಟುಗಳು ಸದ್ಯಕ್ಕೆ ಬಲವಾಗಿವೆ. ಮುಂದೇನೋ ಗೊತ್ತಿಲ್ಲ" ಎಂದೆ.
"ವೆಲ್, ವಿ ಆರ್ ಹಿಯರ್ ಇನ್ ಅಮೆರಿಕಾ! ಈ ವೀಕೆಂಡ್ ನಾನು ನನ್ನ ಲೇಕ್ ಹೌಸಿಗೆ ಹೋಗುತ್ತೇನೆ, ಮೀನು ಹಿಡಿಯಲು. ರಿಟೈರ್ ಆದ ಮೇಲೆ ಭರಪೂರ ಫಿಶಿಂಗ್ ಮಾಡಿಕೊಂಡು ಸ್ಯಾನ್ ಡಿಯಾಗೋನಲ್ಲಿ ಹಾಯಾಗಿರುತ್ತೇನೆ" ಎಂದ ರೇ.
"ವೆಲ್, ಐ ರಿಟೈರ್ ಅಂಡ್ ಗ್ರೋ ಕ್ಯಾಶ್ಯೂಸ್ ಅಂಡ್ ಕೋಕೋನಟ್ಸ್ ಇನ್ ಇಂಡಿಯಾ" ಎಂದೆ. "ಹೆಹೆ, ನೀನಿನ್ನು ಹುಡುಗ! ರಿಟೈರ್ಮೆಂಟ್ ಇನ್ನೂ ಬಹುದೂರ ಇದೆ. ನಿನ್ನ ಬೆನ್ನು ನಾಳೆಗೆಲ್ಲಾ ಸರಿಯಾಗುತ್ತದೆ. ಹೋಗು ಸರಿಯಾಗಿ ಹಣ ಮಾಡು, ರಿಟೈರ್ ಆಗಲು" ಎಂದ ರೇ!
ಹೀಗೆ ಒಬ್ಬ ಮಾಜಿ ಕಮ್ಯುನಿಸ್ಟ್ ದೇಸಿಗ ಮತ್ತು ಬಹುದೊಡ್ಡ ಪ್ರಜಾಪ್ರಭುತ್ವದ ಸಾಗರೋತ್ತರ ನಾಗರೀಕನ ಸಂಭಾಷಣೆ ದಬಾ ಹಾಕಿಕೊಂಡಿತು.

ಮೆಸೆಂಜರ್ ಮೆನೇಸ್

 ಮೆಸೆಂಜರಿನಲ್ಲಿ ಚರ್ಚೆಗೆ ಬರುವ, ಚಂದಾ ಕೇಳುವ, ನನ್ನ ಬ್ಯಾಲೆನ್ಸ್ ಶೀಟ್ ಬಯಸುವ, ಪ್ರೇಮ ನಿವೇದಿಸುವ ಎಲ್ಲಾ ರೀತಿಯ ಉಮೇದುವಾರರಿಗೆ:


ನಾನು ನನ್ನ ಔದ್ಯೋಗಿಕ ಕಾರ್ಯಗಳಲ್ಲಿ ಮುಳುಗಿರುವುದರಿಂದ ಯಾವುದೇ ಫೇಸ್ಬುಕ್ ಕರೆ, ಮೆಸೇಜುಗಳಿಗೆ ಸ್ಪಂದಿಸುವುದಿಲ್ಲ. ಕಾಯಕವೇ ಕೈಲಾಸವೆಂಬಂತೆ ಕೆಲಸದಲ್ಲಿ ಮುಳುಗಿರುವ ನನಗೆ ನಿಮ್ಮ ಕರೆಗಳಷ್ಟೇ ಅಲ್ಲದೆ ನನ್ನ ಆತ್ಮದ ಕರೆಗಳೂ ಕೇಳವು! 


ಹಾಗೆಂದೊಡನೆ ನಾನೊಬ್ಬ ತತ್ವನಿಷ್ಠಿ, ಬದ್ಧಪುರುಷ, ಕಾಯಕಯೋಗಿ ಎಂದಲ್ಲ. ಅಂತಹ ಯಾವುದೇ ಗುಣವಿಶೇಷಣಗಳಾಗಲಿ, ಆದರ್ಶಗಳಾಗಲಿ ನನ್ನಲ್ಲಿ ಇಲ್ಲ.  ಆದರೆ ನನಗೆ ನನ್ನದೇ ಆದ ಆರ್ಥಿಕ ಜವಾಬ್ದಾರಿಗಳಿವೆ. ಹಾಗಾಗಿ ನಾನಷ್ಟು ಕಟ್ಟುನಿಟ್ಟಿನಿಂದ ಕೆಲಸ ಮಾಡಲೇ ಬೇಕಾದ ಅನಿವಾರ್ಯತೆಯಿದೆ. ಉದ್ಯೋಗದ ಅವಲಂಬನೆಯಿಲ್ಲದೆ ಚರ್ಚೆ, ಸಾಹಿತ್ಯ, ಸಂಗೀತ, ಪ್ರೇಮ, ಕಾಮ ಇತ್ಯಾದಿ ಚರ್ಚೆಗಳಲ್ಲಿ ತೊಡಗಿಕೊಳ್ಳವಷ್ಟು ಮತ್ತು ಶುಭೋದಯ, ಶುಭರಾತ್ರಿ, ಊಟವಾಯಿತೇ ಇತ್ಯಾದಿ ನಜರು ಸ್ವೀಕರಿಸುವಷ್ಟು ರಾಜಪೋಷಣೆ ಯಾ ಸರ್ಕಾರಿ ಆದಾಯ, ಉಂಬಳಿ, ಪಿತ್ರಾರ್ಜಿತಗಳು ನನಗಿಲ್ಲ.


ಇಂತಹ ಆರ್ಥಿಕ ದಿಗ್ಬಂಧನದಲ್ಲಿರುವ ನನ್ನ ಸಂಕಷ್ಟವನ್ನು ಅರ್ಥ ಮಾಡಿಕೊಂಡು ನಿಮ್ಮ ಫೇಸ್ಬುಕ್ ಮೆಸೇಜ್, ಕರೆಗಳನ್ನು ಸ್ವೀಕರಿಸಲಾಗದ ಅನಿವಾರ್ಯತೆಯನ್ನು ಅರಿತುಕೊಂಡು ನನ್ನನ್ನು ಮನ್ನಿಸಿ. ಇದಕ್ಕೆ ಯಾವುದೇ ವಿಶೇಷಾರ್ಥವನ್ನು ನೀವು ಕಲ್ಪಿಸಿಕೊಂಡಲ್ಲಿ ಅಥವಾ ಹಾಗೆ ಕಲ್ಪಿಸಿಕೊಳ್ಳುವಂತೆ ನಾನು ಕಾರಣವಾಗಿದ್ದರೆ, ಕ್ಷಮೆ ಕೋರುವೆ.


ಇನ್ನು ನನಗೆ ಪ್ರೀತಿಪಾತ್ರರಾದ ಎಲ್ಲಾ ಪ್ರೇಮ ನಿವೇದಕಿ ಗೆಳತಿಯರಲ್ಲಿ ಒಬ್ಬರು ಹೆಚ್ಚು ಒಬ್ಬರು ಕಡಿಮೆ ಎನ್ನದೆ ಎಲ್ಲರನ್ನೂ ಅಷ್ಟೇ ಪ್ರೀತಿ ವಿಶ್ವಾಸ, ಹೃದಯಾಂತರಾಳದಿಂದ ನಿಷ್ಕಲ್ಮಶವಾಗಿ ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ. ಹಾಗೆ ಪ್ರೀತಿಸುವುದು ನನ್ನ ಅನುಷಂಗಿಕ ಚಿರಯೌವ್ವನಿಗ ಗುಣ. ಆ ಗುಣವನ್ನು ತಿದ್ದಿ ಒಬ್ಬರನ್ನು ಮಾತ್ರ ಪ್ರೀತಿಸುವೆ ಎಂದು ನಾನು ಯಾರಿಗೂ ಹೇಳುವುದಿಲ್ಲ. ಏಕೆಂದರೆ ನಾನು ಹುಟ್ಟು ಚಂಚಲಿ, ಜಂಗಮಚಿತ್ತ, ಉದಾರವಾದಿ! ಹಾಗೆಂದು ಆದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲವೇ?  ಆದರೆ ಸದ್ಯಕ್ಕೆ ನಿಮಗೂ ಉತ್ತರಿಸಲಾಗದು. 


ಹಾಗಾಗಿ ನನಗೆ ಯಾವುದಾದರೂ ರಾಜಪೋಷಣೆ ಯಾ ಸರ್ಕಾರಿ ಆದಾಯ, ಉಂಬಳಿ, ಪಿತ್ರಾರ್ಜಿತಗಳ ಬಳುವಳಿ ದಯಪಾಲಿಸಿ ದಯವಿಟ್ಟು ಮೆಸೆಂಜರಿನಲ್ಲಿ ಬನ್ನಿ, ಮಾತನಾಡೋಣ!


ವಿಶೇಷ ಸೂಚನೆ: ಭಾರತದ ಕಾಲಮಾನ ರಾತ್ರಿಯ ಹೊತ್ತು ಆನ್ಲೈನಿನಲ್ಲಿರುವವರೆಲ್ಲಾ ವಿರಹದ ಬೇಗೆಯಲ್ಲಿ ಬೇಯುತ್ತಿರುವ ಸಲಿಂಗಕಾಮಿಗಳೆಂದು ಬಗೆದು ನಮ್ಮಂತಹ ಬೇರೆ ದೇಶಗಳ ಕಾಲಮಾನಗಳಲ್ಲಿ ಎಚ್ಚರವಿರುವ ಮತ್ತು ಅನಿಯಮಿತ ಡೇಟಾ ಪ್ಲ್ಯಾನುಗಳ ಕಾರಣ 24/7 ಹಸಿರು ಚುಕ್ಕಿಯಿರುವವರನ್ನು ತಮ್ಮಂತೆಯೇ ಪರರು ಎಂದು ಪೀಡಿಸುವ ಸಲಿಂಗಕಾಮಿಗಳೇ, ನಿಮ್ಮವ ನಾನಲ್ಲ!

ಕೊರೋನಾ ಬರೋಣ

 ಭಾರತದ ವಿಮಾನ ಏರುವ ಎಪ್ಪತ್ತೆರಡು ಗಂಟೆ ಅವಧಿಯೊಳಗೆ ಪಿಸಿಆರ್ ಟೆಸ್ಟ್ ಮಾಡಿಸಿ, ಕೋವಿಡ್-ಶೂನ್ಯ ಫಲಿತಾಂಶ ಗಳಿಸಿ, ನನ್ನಂತೆಯೇ ಫಲಿತಾಂಶ ಗಳಿಸಿದವರೊಂದಿಗೆ ಸುಮಾರು ಹದಿಮೂರೂವರೆ ಗಂಟೆಗಳ ಶಿಕಾಗೋ-ದಿಲ್ಲಿ ಪಯಣ, ಮೂರೂವರೆ ಗಂಟೆಗಳ ದಿಲ್ಲಿ-ಬೆಂಗಳೂರು ಪಯಣ, ಮತ್ತೆ ಮೇಲೊಂದಿಷ್ಟು ಗಂಟೆಗಳ ಬೋನಸ್ ಮಾಸ್ಕ್ ಧರಿಸಿ ಏರ್ಪೋರ್ಟುಗಳಲ್ಲಿ ಕಳೆದು ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆಯಲ್ಲಿಗೆ ಮೊನ್ನೆ ಬಂದಿಳಿದೆನು.


ನಮ್ಮಂತಹ ಪ್ರಮಾಣಿತ ಕೋವಿಡ್-ಶೂನ್ಯ ಅಂತರರಾಷ್ಟ್ರೀಯ ಪ್ರಯಾಣಿಕರೊಂದಿಗೆ ಸ್ಥಳೀಯ ಪ್ರಯಾಣಿಕರನ್ನು ಬೆರೆಸಿ ಬೆಂಗಳೂರು ಫ್ಲೈಟಿನಲ್ಲಿ ಕೂರಿಸಿದರು. ನಮ್ಮಷ್ಟೇ ಕೋವಿಡ್-ಶೂನ್ಯರು ಅವರಾಗಿದ್ದರೋ ಇಲ್ಲವೋ ನಾನರಿಯೆ! ಆಗಿದ್ದಾರೆಂದುಕೊಂಡಿದ್ದೇನೆ. 


ಬೆಂಗಳೂರಿನಲ್ಲಿ ವಿಮಾನದಿಂದ ಹೊರಗೆ ಬಂದೊಡನೆ ಭಾರತದ ಟ್ರೇಡ್ ಮಾರ್ಕುಗಳಾದ ಜನಸಂಖ್ಯೆ, ಭ್ರಷ್ಟಾಚಾರ, ಮತ್ತು ಅವ್ಯವಸ್ಥೆಗಳನ್ನು ಮರೆತಿರಬಹುದೆಂದು ಮೋದಿ ವಿರೋಧಿಗಳು ನಮಗೆ ಕ್ರ್ಯಾಶ್ ಕೋರ್ಸ್ ಏರ್ಪಡಿಸಿದ್ದರು. ಕೋರ್ಸಿನ  ಪ್ರಪ್ರಥಮ ಹಂತವಾಗಿ ಥರ್ಮಲ್ ಸ್ಕ್ಯಾನಿಂಗ್! ಇಲ್ಲಿ ವಿದೇಶೀಯರು ಹೊಸ ಮಿಕಗಳಂತೆ ಸೋಷಿಯಲ್ ಡಿಸ್ಟನ್ಸ್ ಕಾಪಾಡಿಕೊಳ್ಳಲು ಹೆಣಗಿದರೂ ಆಗದಷ್ಟು ಉದ್ದನೆಯ ಕ್ಯೂ, ಮತ್ತು ಮಾಸ್ಕ್ ಅನ್ನು ಗಡ್ಡದಂತೆ ಧರಿಸಿದ್ದ ಬಹುಪಾಲು ಸಿಬ್ಬಂದಿ, "ತೋರಿಕೆ ಮೊದಲು, ಕಳಕಳಿ ನಂತರ" ಎಂಬ ರಾಷ್ಟ್ರೀಯ ನೀತಿಯನ್ನು ಪಾಲಿಸುತ್ತಿದ್ದರು.


ನಮ್ಮ ಕೋವಿಡ್-ಶೂನ್ಯ ಸರ್ಟಿಫಿಕೇಟ್, ಪಾಸ್ಪೋರ್ಟ್ ಇತ್ಯಾದಿ ದಾಖಲೆಗಳನ್ನು ಕಾಂಟ್ಯಾಕ್ಟ್-ಫ್ರೀ ಉದ್ದೇಶದ ಘನ ಭಾರತ ಸರ್ಕಾರದ ವೆಬ್ಸೈಟಿಗೆ ಲಗತ್ತಿಸಿ ಲೋಡಿಸಿದ್ದರೂ ಥರ್ಮಲ್ ಸ್ಕ್ಯಾನಿಂಗ್ ಸಿಬ್ಬಂದಿಗೆ ಬೋರ್ಡಿಂಗ್ ಪಾಸ್ ಅಲ್ಲದೆ ನಮ್ಮ ಸೆಲ್ ಫೋನಿನಲ್ಲಿ ಆ ದಾಖಲೆಗಳನ್ನು ಕೈಗವುಸು ಇರದ ಅವರ ಅಮೃತ ಹಸ್ತಕ್ಕೆ ಮುಟ್ಟಿಸಿ ತೋರಿಸಬೇಕಿತ್ತು. ಗಡ್ಡದಂತಹ ಮಾಸ್ಕಿನ ಆತನ ಬೆರಳುಗಳು ಎಲ್ಲೆಲ್ಲಿನ ಕಡಿತವನ್ನು ಶಮನಿಸಿದ್ದವೋ ಗೊತ್ತಿಲ್ಲ!  ಒಟ್ಟಾರೆ ಮುಟ್ಟಿ ಶಂಕಿತ ವೈರಸ್ ತಲುಪಿಸಿದನೋ ಇಲ್ಲವೋ, ಇಳಿದ ಶೂನ್ಯ ಕೊರೋನಿಗರಲ್ಲಿ ಶಂಕೆಯ ವೈರಸ್ ಮೂಡಿಸಿದ.


ನಾನು ಶಿಷ್ಟತೆಯನ್ನು ಮೆರೆಯಲು ಆತನಿಗೆ ಕಾಣದಂತೆ ಸ್ಯಾನಿಟೈಸರಿನಿಂದ ನನ್ನ ಕೈ, ಫೋನನ್ನು ಒರೆಸಿಕೊಂಡು ಸ್ಕ್ಯಾನ್ ಮುಗಿಸಿ ಲೈನ್ ದಾಟಿದೆ. ಮುಂದೆ ಎರಡನೇ ಕ್ಯೂ ಇತ್ತು. 


ಇಲ್ಲಿ ಮಾಸ್ಕ್ ಸರಿಯಾಗಿ ಧರಿಸಿದ ಯುವತಿಗೆ ನನ್ನ ಬೋರ್ಡಿಂಗ್ ಪಾಸ್ ಅಲ್ಲದೆ ಮತ್ತೊಮ್ಮೆ ನನ್ನ ಸೆಲ್ ಫೋನು ಮುಟ್ಟಿಸಿ ದಾಖಲೆಗಳನ್ನು ತೋರಿಸಬೇಕಿತ್ತು. ನಂತರ ಆಕೆ ತೋರಿಸಿದ ಟೆಂಪರೇಚರ್ ರೀಡರ್ ಒಳಗೆ ನನ್ನ ಬೆರಳು ತೂರಿಸಿದೆ. ಅದರಲ್ಲಿ ಅದೆಷ್ಟು ಸಹಸ್ರ ಜನ ಆಗಲೇ ಬೆರಳು ತೂರಿಸಿ ವೈರಾಣುಗಳನ್ನು ಬಿಟ್ಟಿದ್ದರೋ ಗೊತ್ತಿಲ್ಲ. ಅದನ್ನೇನೂ ಆಕೆ ಸ್ಯಾನಿಟೈಸ್ ಮಾಡುತ್ತಿರಲಿಲ್ಲ. ಹಾಗಾಗಿ ನಂತರ ಮತ್ತೆ ನನ್ನ ಬೆರಳನ್ನೂ ಸೆಲ್ ಫೋನನ್ನೂ ಸ್ಯಾನಿಟೈಸ್ ಮಾಡಿಕೊಂಡು ಆ ಕ್ಯೂ ಅನ್ನು ಗೆದ್ದು ಮುನ್ನಡೆದೆ. 


ನಂತರ ಮತ್ತೊಂದು ಕ್ಯೂ! ಇಲ್ಲಿ ಕೇವಲ ನಮ್ಮ ಘನ ಸರ್ಕಾರಕ್ಕೆ ಲೋಡಿಸಿದ್ದ ಪಿಡಿಎಫ್ ರಸೀದಿ, ಕೋವಿಡ್-ಶೂನ್ಯ ಪ್ರಮಾಣಪತ್ರ, ಬೋರ್ಡಿಂಗ್ ಪಾಸ್ ಅನ್ನು ಮತ್ತೊಮ್ಮೆ ಮುಟ್ಟಿಸಿ ತೋರಿಸಬೇಕಿತ್ತು. ಏಕೋ ನಾನರಿಯೆ!  ಅಲ್ಲಿಗೆ ಆನ್ಲೈನ್, ಕಾಂಟ್ಯಾಕ್ಟ್-ಫ್ರೀ, ಏರ್ ಸುವಿಧಾಗಳೆಲ್ಲವೂ ಒಂದು ತೋರಿಕೆಯ ವಿಧವೆಂದು ಪ್ರಾಮಾಣಿತಗೊಂಡಿತ್ತು. 


ಇದೆಲ್ಲವನ್ನು ಒಂದೇ ಕ್ಯೂನಲ್ಲಿ ಬಗೆಹರಿಸಬಹುದಿದ್ದರೂ ಉದ್ಯೋಗಾವಕಾಶಗಳ ಸೃಷ್ಟಿಗೆ, ಬೆಂಬಲಿಗ ಕಾಂಟ್ರ್ಯಾಕ್ಟದಾರರ ಋಣ ಸಂದಾಯ ಮಾಡಲು ಪ್ರಮುಖವಾಗಿ ಇಸ್ವಗುರು ಪ್ರೊಟೊಕಾಲ್ ಇಸಂ ಅನ್ನು ಮೆರೆಸಲು ಇವೆಲ್ಲವೂ ಬೇಕಲ್ಲವೇ! ಹಾಗೆಯೇ ಭಾರತೀಯ ಅಧಿಕಾರಶಾಹಿಯ ಇ-ಗವರ್ನೆನ್ಸ್ ತೋರಲು ಸಹ!


ಅಂದ ಹಾಗೆ ಇವರ್ಯಾರೂ ಕೈಗವುಸು ತೊಟ್ಟಿರಲಿಲ್ಲ.


ನಂತರ ಇಮಿಗ್ರೇಷನ್ ಕ್ಯೂ, ಕಸ್ಟಮ್ಸ್ ಸ್ಕ್ಯಾನಿಂಗ್ ಕ್ಯೂ, ಮತ್ತೊಮ್ಮೆ ಸ್ವಯಂ ಸ್ಯಾನಿಟೈಸ್ ಎಲ್ಲಾ ದಾಟಿ ಹೊರಬಂದರೆ ಬಹುಪಾಲು ಗಡ್ಡದ ಮಾಸ್ಕುಧಾರಿಗಳ ಜೊತೆ ಅಲ್ಲಲ್ಲಿ ಬಾಯಿಗೆ ಮಾತ್ರ ಮಾಸ್ಕು ಹಾಕಿದವರು ಮತ್ತು ನಮ್ಮನ್ನು ಸಮಾಧಾನಿಸುವಂತೆ ಅಲ್ಲಲ್ಲಿ ಪೂರ್ತಿ ಮಾಸ್ಕ್ ಧರಿಸಿದವರು ತುಂಬು ಸ್ವಾಗತ ಕೋರಿದರು.


ಅಲ್ಲಿಯವರೆಗೂ ಡಬಲ್ ಮಾಸ್ಕ್ ಧರಿಸಿದ್ದ ನಾನು ಒಂದು ಮಾಸ್ಕ್ ಕಳಚಿದೆ.


ಏರ್ಪೋರ್ಟಿನಿಂದ ರಾಜಾಜಿ ನಗರದ ಫೇರ್ ಫೀಲ್ಡ್ ಹೋಟೆಲಿಗೆ ಬಂದೆ. ಇಲ್ಲಿ ಮತ್ತೆ ಎಲ್ಲಾ ವಿದೇಶಗಳ ವ್ಯವಸ್ಥೆಯಂತೆ ಬದಲಿ ವ್ಯವಸ್ಥೆಯಿತ್ತು. ಆದರೆ ಅತಿಥಿಗಳು ಮಾತ್ರ ಮಾಸ್ಕಿನಿಂದ ನಿರಾಳರಾಗಿದ್ದರು! ಚಟ ತಡೆಯಲಾರದೆ ಮರುದಿನ ಹೊರಗೆ ಸ್ನೇಹಿತರೊಂದಿಗೆ ಕ್ಲಬ್ಬಿಗೆ ಹೋದೆ. ಅಲ್ಲಿನ ಸಿಬ್ಬಂದಿಗಳೆಲ್ಲರೂ ಗಡ್ಡ ಮಾಸ್ಕುಧಾರಿಗಳಾಗಿದ್ದರು. 


ಅಲ್ಲಿಂದ ವಾಪಸ್ ಫೇರ್ ಫೀಲ್ಡಿಗೆ ಬಂದಾಗ ನಾನು ಟೈಟೇನಿಯಮ್ ಇಲೈಟ್ ಗಿರಾಕಿ ಆಗಿರದೆ ಇತರೆ ಅತಿಥಿಗಳಂತೆ ನಿರಾಳನಾಗಿ, ಇವರನ್ನೆಲ್ಲಾ ಕಾಪಾಡುತ್ತಿರುವ ಕಾಣದ ಆ ಶಕ್ತಿಗೆ ನಮಿಸಿ, ಹರ್ಡ್ ಇಮ್ಯುನಿಟಿ ನನಗೂ ಸಿಕ್ಕಿತೆಂದು ಧನ್ಯನಾಗಿ ಚಪ್ಪಾಳೆ ತಟ್ಟಿ "ನಾನೇ ಹುಚ್ಚ, ನಾನೇ ಕಮಂಗಿ"ಯೆಂದು ನನ್ನ ಮಾಸ್ಕ್ ಕಳಚಿದೆ! "May I sit here!" ಎಂದು ನನ್ನ ಉತ್ತರಕ್ಕೂ ಕಾಯದೇ ನನ್ನೆದುರು ಕುಳಿತ ಸಹ ಅತಿಥಿಯೆಡೆ ಮುಗುಳ್ನಕ್ಕು "ಚಿಯರ್ಸ್" ಎಂದೆ. ಆತ ಸಾಂಬಾರನ್ನು ಸೊರ್ರನೆ ಹೀರಿ ಮಂತ್ರಾಕ್ಷತೆ ಪ್ರೋಕ್ಷಿಸಿದ! ಅಲ್ಲಿಗೆ ನನಗೆ ಹರ್ಡ್ ಇಮ್ಯುನಿಟಿ ಸಿಕ್ಕ ಶುಭ ಶಕುನವಾಯಿತೆಂದುಕೊಂಡು ಧನ್ಯನಾದೆ.


ಸಾಮಾಜಿಕ ಪರಿಸರ ಹೀಗಿದ್ದಾಗ ಈ ಸಾಮಾಜಿಕ ಅಂತರ, ಸರ್ಕಾರಿ ನಿಯಮಗಳು, ಅಂತರರಾಷ್ಟ್ರೀಯ ಪ್ರವಾಸಿಗರಿಗಾಗಿ ಏರ್ ಸುವಿಧಾ, ಥರ್ಮಲ್ ಸ್ಕ್ಯಾನ್, ಮಾಸ್ಕ್ ಇಲ್ಲದವರಿಗೆ ದಂಡ, ವ್ಯಾಕ್ಸಿನ್ನು, ಬ್ಲಾ ಬ್ಲಾ ಬ್ಲಾ...ನನ್ನ ಹಾಸನದ ಮಲೆನಾಡು ತಾಂತ್ರಿಕ ವಿದ್ಯಾಲಯದಲ್ಲಿನ ದಿನಗಳ ಪಡ್ಡೆಗಳ ಏಕೈಕ ಮಂತ್ರವಾಗಿದ್ದ "cover the face, fuck the base" ಕೊರೋನಾ ಕಾಲದಲ್ಲೂ ಅನ್ವಯಗೊಂಡಿರುವ ಏಕೈಕ ಮಂತ್ರವೆಂದು ನೆನಪಾಯಿತು!


ಅಂದ ಹಾಗೆ ಈ ಮಂತ್ರಕ್ಕೆ ಮೂಗು ಮುರಿಯುವ ಸುಸಂಸ್ಕೃತರಿಗೆ ಹೀಗೆ ಹೇಳಬಹುದೇನೋ, "ಭಾಯಿಯೋ ಔರ್ ಬೆಹೆನೋ! ತಾ(ಥಾಲಿ) ಬಜಾವೋ, ಅಪನೇ ನಂಬರ್ ಪೆ ವ್ಯಾಕ್ಸಿನ್ ಲೆಲೋ ಔರ್ ದೇಶ್ ಕೋ ಇಸ್ವ್ ಗುರು ಮಾನೋ! God's own country ಕೇರಲಾ ನಹೀ ಬಲ್ಕಿ ಸಾರಾ ಹಿಂದೂಸ್ತಾನ್ ಹೈ" 


ಸರ್ವೆಜನೌ ಸುಖಿನೌ ಭವಂತು!

ಏಕಪತ್ನೀವೃತ!

 ಅಮೆರಿಕಾದ 2008 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದ ಜಾನ್ ಎಡ್ವರ್ಡ್ ಮದುವೆಯಾಚೆಯ ಸಂಬಂಧದಲ್ಲಿ ಸಿಲುಕಿ ರಾಜಕೀಯ ರಂಗದಿಂದ ಮಾಯವಾಗಿ ಹೋದ.


ಬಿಲ್ ಕ್ಲಿಂಟನ್ ಇಂತಹುದೇ ಸಂಬಂಧದಲ್ಲಿ ಸಿಲುಕಿ impeachment ವರೆಗೆ ಬಂದಿದ್ದ.


ನ್ಯೂಯಾರ್ಕ್ ಗವರ್ನರ್ ಆಗಿದ್ದ ಈಲಿಯಟ್ ಸ್ಪಿಟ್ಝರ್ ವೇಶ್ಯೆಯೊಂದಿಗಿನ ಸಂಬಂಧದಲ್ಲಿ ಸಿಲುಕಿ ರಾಜಕೀಯ ರಂಗದಿಂದಲೇ ಕಣ್ಮರೆಯಾದ.


ಹೀಗೆ ಅಮೆರಿಕ ಅಲ್ಲದೆ ಯುರೋಪ್ ಮತ್ತಿತರೆ "ಮುಂದುವರಿದ" ದೇಶಗಳಲ್ಲಿನ ಸಾರ್ವಜನಿಕ ಸೇವೆಯಲ್ಲಿರುವ ಸಾಕಷ್ಟು ರಾಜಕಾರಣಿಗಳು ವಿವಾಹೇತರ ಸಂಬಂಧಗಳಲ್ಲಿ ಸಿಲುಕಿ ತಮ್ಮ ಹುದ್ದೆಗಳನ್ನು ಕಳೆದುಕೊಳ್ಳುವುದಿರಲಿ, ರಾಜಕೀಯದಿಂದಲೇ ಅಸ್ತಂಗತರರಾಗಿ ಹೋಗಿದ್ದಾರೆ.


ಇಲ್ಲಿ "ಮುಂದುವರಿದ" ಎಂದರೆ ಮುಕ್ತ-ಕಾಮ, ಸಂಸ್ಕೃತಿಯಿಲ್ಲದ, ನಾಸ್ತಿಕತೆಯ, ಉದಾರವಾದದ, ಅನೈತಿಕತೆಯ, ಆಲ್ಕೋಹಾಲ್/ಡ್ರಗ್ಸ್ ಚಟದ, ಮನುಷ್ಯರೇ ಅಲ್ಲದ ಬಿಳಿ, ಕರಿ, ಹಳದಿ, "ಭಾರತೀಯರಲ್ಲದ-ಕಂದು" ಜನಾಂಗದ ಜನ ಎಂಬ ಭಾರತೀಯ-ಬಿಂಬಿತ ವಿದೇಶೀಯರು ಎಂದೇ ಅರ್ಥೈಸಿಕೊಳ್ಳಿ, ಭಾರತೀಯ ಶುದ್ಧ ದೇಸೀ ತಳಿಯ ಗೋವುಗಳಂತೆ!


ಇಂತಹ ಮುಕ್ತ ವಾತಾವರಣದ ಪಾಪಿ ಜನ, ಒಂದು ಯಕಶ್ಚಿತ್ ವಿವಾಹೇತರ ಸಂಬಂಧದಲ್ಲಿ ಸಿಲುಕಿದ ತಮ್ಮ ಜನ ಪ್ರತಿನಿಧಿಗಳು ಕೆರಿಯರ್ ಕಳೆದುಕೊಳ್ಳುವಂತೆ ಮಾಡಿದ್ದಾರೆ ಏಕೆ?! 


ಏಕೆಂದರೆ, ಈ ಎಲ್ಲಾ "ಅನಿಷ್ಟ" ಸಂಸ್ಕೃತಿಯ ನಡುವೆಯೂ ನೈತಿಕತೆ, ಪ್ರಾಮಾಣಿಕತೆ, ಕಮಿಟ್ಮೆಂಟುಗಳನ್ನು  ಈ ಸಂಸ್ಕೃತಿಹೀನರು ಗೌರವಿಸುತ್ತಾರೆಂದಲ್ಲವೇ!?!?! ಅದಕ್ಕೆ ಪೂರಕವಾಗಿ ಮೇಲೆ ಹೇಳಿದ ಉದಾಹರಣೆಗಳಿದ್ದಾವಲ್ಲವೇ!?!


ಈಗ ಅದೇ ಉತ್ಕೃಷ್ಟ ಭಾರತೀಯ ಸಂಸ್ಕೃತಿ, ಏಕಪತ್ನಿವೃತಸ್ಥ ಶ್ರೀರಾಮಚಂದ್ರನ ಆದರ್ಶದ, ವಿಶ್ವಕ್ಕೇ ಸಂಸ್ಕೃತಿಯನ್ನು ದಯಪಾಲಿಸಿದ ಭಾರತವೆಂಬೋ ಭಾರತದಲ್ಲಿ ಏನಾಗುತ್ತಿದೆ?!?


ದಿಗ್ವಿಜಯ ಎಂಬೋ ಲಂಪಟನೊಬ್ಬ ಒಂದು ರಾಷ್ಟ್ರೀಯ ಪಕ್ಷದ ವಕ್ತಾರನಾಗಿದ್ದ.


ಕರುನಾಡಿನಲ್ಲೇ ಮತ್ತೊಬ್ಬ ಲಂಪಟ ಮುಖ್ಯಮಂತ್ರಿಯಾಗಿದ್ದ, ಮತ್ತು ಈಗಲೂ ಒಂದು ಪಕ್ಷದ ಪ್ರಮುಖನಾಗಿದ್ದಾನೆ.


ಸಂಸ್ಕೃತಿಯನ್ನೇ ಗುತ್ತಿಗೆ ಹಿಡಿದಿರುವ, ಬ್ರಹ್ಮಚರ್ಯವನ್ನು ಪರಿಪಾಲಿಸುವ, ವಿಶ್ವಗುರು ಎಂದು ಪ್ರಖ್ಯಾತರಾಗಿರುವ, ಏಕಪತ್ನೀವೃತಸ್ಥ ಶ್ರೀರಾಮಚಂದ್ರನ ಮಂದಿರ ಕಟ್ಟುತ್ತಿರುವ ಆಡಳಿತ ಪಕ್ಷದ ಮತ್ತೊಬ್ಬ ಲಂಪಟ ಈಗಷ್ಟೇ ಬಟಾಬಯಲಾಗಿದ್ದಾನೆ.


ಇಂತಹ ಸಂಬಂಧಗಳನ್ನು ಜನರೂ ಅಷ್ಟೇ ಸುಸಂಸ್ಕೃತರಾಗಿ ಅದು ಅವನ ವೈಯಕ್ತಿಕ ವಿಷಯ, ಒಪ್ಪಿತ ಕಾಮ, ಅದಕ್ಕೆಲ್ಲಾ ನಾವು ತಲೆ ಕೆಡಿಸಿಕೊಳ್ಳಬಾರದು ಇತ್ಯಾದಿಯಾಗಿ ಸಂಸ್ಕೃತಿಯ ಅಣಿಮುತ್ತುಗಳನ್ನು ಉದುರಿಸುತ್ತಿದ್ದಾರೆ. ಯಾವುದು ಸಂಸ್ಕೃತಿ? ಯಾವುದು ವಿಸ್ಮೃತಿ?


ಅದೇ ವಿಸ್ಮೃತಿಯ ದೇಶಗಳ ಜನ, ಮುಕ್ತಕಾಮವನ್ನು ಆಚರಿಸಿ ಒಬ್ಬಳನ್ನು ತನ್ನ ಜೀವನದ "ಜೀವನ ಸಂಗಾತಿ"ಯೆಂದು ಆಯ್ದುಕೊಂಡು ಆಕೆಗೆ ಬದ್ಧನಾಗಿರದ ವ್ಯಕ್ತಿಯೋರ್ವನಿಂದ ಜನಸೇವೆಯಲ್ಲಿ ನೈತಿಕತೆ ಇರಬಲ್ಲುದೆ ಎಂದು ಆತನನ್ನು ಶೂನ್ಯರಾಗಿಸುತ್ತಿದ್ದಾರೆ! 


ಈಗ ಹೇಳಿ ಸಂಸ್ಕೃತಿ, ನೈತಿಕತೆ, ಬದ್ಧತೆ, ಸತ್ಯ, ಪ್ರಾಮಾಣಿಕತೆ, ಪ್ರೀತಿ, ಪ್ರೇಮ, ತ್ಯಾಗ, ಆದರ್ಶ ಇತ್ಯಾದಿಗಳು ಎಲ್ಲಿವೆ?


ದನ ತಿನ್ನುವ ಗೋಹತ್ಯಾ ಪಾಪದ, ಹಂದಿ ತಿನ್ನುವ ಧರ್ಮ ಭ್ರಷ್ಟರ ನಡುವೆಯೇ ಸತ್ಯ, ನೈತಿಕತೆ, ಪ್ರಾಮಾಣಿಕತೆ, ಬದ್ಧತೆ, ತ್ಯಾಗ, ಆದರ್ಶ, ಪ್ರೇಮಗಳು ಹೆಚ್ಚು ಕ್ರಿಯಾಶೀಲವಾಗಿವೆ.


ಸದ್ಧರ್ಮ, ಸಚ್ಛಾರಿತ್ರ್ಯ, ಅನುಪಮ ಬ್ರಹ್ಮಚರ್ಯದ ಮೋಡಿಯ ವಿಶ್ವಗುರುಗಳೇ - ಮೊದಲು ನಿಮ್ಮ ಪಕ್ಷದ ಮನೆ ಎಂಬೋ ಮನೆಯನ್ನು ಗುಡಿಸಿ, ಸಾರಿಸಿ, ರಂಗವಲ್ಲಿ ಇಟ್ಟು, ಶ್ರೀರಾಮನ ಆದರ್ಶವನ್ನು ಎತ್ತಿ ಹಿಡಿಯಿರಿ. ನಂತರ ಇಸ್ವಗುರುವಾಗಿ! 


ಮನೆ ಗೆದ್ದು, ಮಾರು ಗೆಲ್ಲು ಎಂಬುದು ಸಹ ಭಾರತೀಯ ಸಂಸ್ಕೃತಿ.


ವಿಪರ್ಯಾಸವೆಂದರೆ, ಈ ಬಗ್ಗೆ ವಿದೇಶದಲ್ಲೇ ವಾಸವಿದ್ದು ಬಂದ, ಇನ್ನೂ ವಾಸವಿರುವ ಅನೇಕ ಅಂಕಣಕಾರರು ಸಹ ಕೂಪಮಂಡೂಕಗಳಂತೆ ಅವೇ ಹಳಸಲು ಭಾರತೀಯ ಪರಂಪರೆ, ಸಂಸ್ಕೃತಿ, A2 ಹಾಲು, ಗೋವು ಎಂಬ ಲಾಲಿ ಪಾಪ್ ಚೀಪುವುದು, ಚೀಪಿಸುವುದು ನಗು ತರಿಸುತ್ತದೆ. ಅಯ್ಯಾ, ಕಾಮಶಾಸ್ತ್ರದ ನಾಡಿನ ವಟುಗಳೇ, ಶಾಸ್ತ್ರಕ್ಕನುಗುಣವಾಗಿ ಈಗಲಾದರೂ ಚೀಪಿ/ಚೀಪಿಸಿ, ಮುಕ್ತಿ ಹೊಂದಿ!


ತುಡುಗುಣಿಗಳಾಚಾರಕ್ಕಗಣಿತ ನೋಡಾ ನಮ್ಮ ವೀರಮಾಹೇಶ್ವರನು.

ಮನದಿಚ್ಫೆಗನುವಾದ ತನುಸುಖಪದಾರ್ಥವನು

ದಿನದಿನಕ್ಕೆ ವ್ರತವೆಂದು ತಿನಬಂದ ಶುನಕನಲ್ಲ ನೋಡಾ ನಮ್ಮ

ವೀರಮಾಹೇಶ್ವರನು.

ಮುಟ್ಟುತಟ್ಟುಗಳಿಂದೆ ಕೆಟ್ಟೆನಲ್ಲಾಯೆಂದು

ಕಟ್ಟುಕಾವಲಿಗೊಂಡು ಕೆಟ್ಟಸಿಟ್ಟುಗಳಿಂದೆ ಬಟ್ಟೆಯನು ಹಿಡಿವ

ಪಟ್ಟುಗುಡುವನಂತಲ್ಲ ನೋಡಾ ನಮ್ಮ ವೀರಮಾಹೇಶ್ವರನು.

ಮತ್ತೆಂತೆಂದೊಡೆ :

ಪರಧನ ಪರಸತಿ ಪರಹಿಂಸೆ ಪರನಿಂದೆ ಪರದೈವ

ಪರಸಮಯಾದಿ ದುರಾಸೆವಿಡಿದು

ನಡೆಯದಿಹುದೇ ಶೀಲ ನೋಡಾ ನಮ್ಮ ವೀರಮಾಹೇಶ್ವರಂಗೆ.

ತನು ಮನ ಪ್ರಾಣಾದಿ ಸಕಲ ಕರಣಾದಿ ಗುಣವಳಿದು

ಗುರುನಿರಂಜನ ಚನ್ನಬಸವಲಿಂಗನ ನೆನಹು ಬಿಡದಿಹುದೇ ವ್ರತ ನೋಡಾ

ನಮ್ಮ ವೀರಮಾಹೇಶ್ವರಂಗೆ.

- ದೇಶೀಕೇಂದ್ರ ಸಂಗನಬಸವಯ್ಯ


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಹಾಟ್ ಮಿರ್ಚಿ!

 "ಹೇ ಬೆಂಗ್ಳುರು, ಬಂದ್ಲು...ಸ್ಮಿತ್ತಾ ಸ್ಮಿತ್ತಾ, ಹೇಲ್ತಾಲೆ, ಹೇಲ್ತಾಲೆ ಸುತ್ತಾ ಮುತ್ತ.. ಬೆಳಿಗ್ಗೆ ಏಳು ಗಂಟೆಗೆ ಸುತ್ತಾ ಮುತ್ತಾ...ರೇಡಿಯೋ ಮಿರ್ಚಿ!" ಎಂದು ಯಾವನೋ ಹಾಡುತ್ತಿದ್ದ. ಆಗ "ಇದು ಸಖತ್ ಹಾಟ್ ಮಗ" ಎಂದು ಮಿರ್ಚಿ ತಿಂದ ಹೆಣ್ಣೊಂದು ಉಲಿಯಿತು.


ಹಾಟ್ ಮಿರ್ಚಿ ತಿಂದವಳು ಮತ್ತೆ ಹೇಲದೆ ಇನ್ನೇನು ಮಾಡಿಯಾಳು ಎಂದುಕೊಂಡು ನಕ್ಕೆ.


ಆದರೆ ಮತ್ತೊಮ್ಮೆ ಗಮನ ಕೊಟ್ಟು ಕೇಳಿದಾಗ ಆ ಡಿಜೆಯ ಬೆಂಗಳೂರು ರ್ಯಾಪ್ ಸ್ಟೈಲ್ ಕನ್ನಡದಲ್ಲಿ "ಹೇಳ್ತಾಳೆ ಹೇಳ್ತಾಳೆ" ಎನ್ನುವುದು  "ಹೇಲ್ತಾಲೆ, ಹೇಲ್ತಾಲೆ" ಎಂದು ಕೇಳಿಬರುತ್ತಿತ್ತು! ಆಗ ಆ ಸ್ಮಿತ್ತಾ ಬಂದು ನೀರು ಉಳಿಸಿ ಎಂದು ಆಕಾಶವಾಣಿಯಲ್ಲಿ ಒಂದು ಸಂದೇಶ ಕೊಟ್ಟಳು. ಮತ್ತೆ ನಾನು ನೀರಿಗೂ ಮತ್ತು ಶೌಚಕ್ಕೂ ಇರುವ ಕನೆಕ್ಷನ್ ಯೋಚಿಸಿ ಆ ಡಿಜೆ ಹೇಳಿದ್ದು "ಹೇಳ್ತಾಳೆ ಹೇಳ್ತಾಳೆ"ಯೋ, "ಹೇಲ್ತಾಲೆ, ಹೇಲ್ತಾಲೆ"ಯೋ ಎಂದು ಅನುಮಾನಗೊಂಡೆ.


ಆಗ "ಹೇ ಬಾಸು ನಮ್ ಬಾಸು ರಿಪಿ ರಿಪ್ಪಿ ರಿಫ್ಪೀಟು, ಸಿಕ್ಕಿದ್ದೆಲ್ಲಾ ಬುಟ್ಕೋಬೇಡಿ....ರಾಜ ರಾಣಿ ರೋರರ್ ರಾಕೆಟ್ಟು" ಅಂತ ಇನ್ನೇನೋ ಹಾಡು ಬಂತು. ಆಗ ಕಾಕತಾಳೀಯವೆಂಬಂತೆ ಕನ್ನಡ ಉಚ್ಚಾರದ ಅಥಾರಿಟಿ ರಾಜಕುಮಾರರ ಮನೆ ಮುಂದೇ ಪಾರ್ಕ್ ಮಾಡಿಕೊಂಡು ನಿಂತಿದ್ದೆ. ಸಧ್ಯ, ಅಲ್ಲಿ ಅವರಿರಲಿಲ್ಲ, ಅವರ ಸುಪುತ್ರನನ್ನು ಹಾಡಿ ಹೊಗಳುವ ಈ ರಿಪ್ಪಿ ರಿಪ್ಪಿ ರಿಪ್ಪಿದ ಕನ್ನಡ ಹಾಡು ಕೇಳಲು, ಮತ್ತು ತಮ್ಮ ಸುಪುತ್ರನ ಕನ್ನಡ ಉಚ್ಛಾರ ಕೇಳಲು!


ನನ್ನೊಟ್ಟಿಗಿದ್ದ ನನ್ನ ಆಫೀಸಿನ ಸರ್ವವೂ ಆದ ಸಿಕಂದರನನ್ನು "ಏನಪ್ಪಾ ಹಾಡುಗಳು ಹಿಂಗ್ ಆಗಿದಾವೆ" ಅಂದೆ! ಅದಕ್ಕೆ ಸಿಕಂದರ್ ನಗುತ್ತ "ಸುಮ್ನಿರಣ್ಣಾ, ನಿನಿಗೆ ವಯಸ್ಸಾಯ್ತು" ಎಂದ!


"ಲೇಯ್, ಊರಲಿ ನಡಿಯೋ ವಿಸ್ಯಾ, ತಿಳ್ಕೊ ಸಿಸ್ಯಾ ಸಿಸ್ಯಾ! ನನ್ಗೆ ವಯಸ್ಸಾಯ್ತು ಅಂತಾ ಆ ನಿನ್ ಹೇಲೋ ಫಿಗರ್ ಸ್ಮಿತ್ತಾ ಸ್ಮಿತ್ತಾ ಹೇಳ್ಬೇಕು. ಆಕೆ ಸಖತ್ ಹಾಟ್ ಮಗ ಅಂತಿರೋದು ನಂಗೆ ಕಣಲೇ! ಇರ್ಲಿ, ಈಗ ಈ ಸಿಂಧುಗೆ ಮಿರ್ಚಿ ತಿನ್ನಿಸ್ತಾ ಟೈಮ್ ಪಾಸ್ ಮಾಡ್ಬೇಕು, ನಡಿ" ಎಂದು ಕಣ್ಣು ಹೊಡೆದು "ಅಧ್ಯಕ್ಸ ಅಧ್ಯಕ್ಸ ಅಧ್ಯಕ್ಸ,

ಕೈಗೊಂದು ಮೈಕ್ ಕೊಟ್ರೆ ಅಲ್ಲೆನೆ ಭಾಸಣ, ಸೆಂಟ್ರಲ್ಲಿ ಸೀಟ್ ಕೊಟ್ರೆ ಅದುಕ್ಕೊಂದು ಭೂಸಣ" ಎಂದು ಸಿಕಂದರ್ ಬಾಯಿ ಬಿಡುವಂತೆ ಇನ್ಸ್ಟಂಟ್ ಕನ್ನಡ ಉಚ್ಚಾರದ ಒಂದು ಅಪ್ಡೇಟ್ ದೌನ್ಲೋಡ್ ಮಾಡಿಕೊಂಡು ಮಿಂಡ್ರಿಗುಟ್ಟಿದ್ ಮಿರ್ಚಿ ಕಂ ಬೆಣ್ಣೆದೋಸೆ ಪುರಪ್ರವೇಶಕ್ಕೆ ಸಿದ್ಧನಾದೆ!


ಬೆಂಗಳೂರಿನ ಪ್ರಪ್ರಥಮ ಟೋಲಿನಲ್ಲೇ ಇದ್ದ fast tag ಸೇವಾ ಕೇಂದ್ರದಲ್ಲಿ ರೂ.550 +ರೂ.2000 ಕೊಟ್ಟು tag ತೆಗೆದುಕೊಂಡೆ. ಸೇವಾ ಕೇಂದ್ರದ ವ್ಯಕ್ತಿ ಯಾವ ಮಾಸ್ಕ್ ಇಲ್ಲದೆ ನನ್ನ ಸೆಲ್ ಫೋನ್ ಪಡೆದು ತಿಕ್ಕಿ, ತೀಡಿ, ಹಿಂದೆ ಮುಂದೆ ಆಡಿಸಿ ಆಪ್ ಹಾಕಿಕೊಟ್ಟು ಡಿಪಾಸಿಟ್ ಬಿಟ್ಟು ರೂ. 2150 ನಿಮ್ಮ ಟ್ಯಾಗ್ ಬ್ಯಾಲೆನ್ಸ್ ಇದೆ ಎಂದ.


ಚಿತ್ರದುರ್ಗ ಟೋಲಿಗೆ ಬರುತ್ತಿದ್ದಂತೆಯೇ ಟ್ಯಾಗ್ low balance ಎಂದಿತು. ಟೋಲಿನವನಿಗೆ ICICI ಬ್ಯಾಂಕಿನಿಂದ ಬಂದ ಬ್ಯಾಲೆನ್ಸ್ ಮೆಸೇಜ್ ತೋರಿಸಿದೆ. ಆತ ಇದಕ್ಕೂ ನಮಗೂ ಸಂಬಂಧವಿಲ್ಲ ಟೋಲ್ ಫ್ರೀ ನಂಬರಿಗೆ ಫೋನ್ ಮಾಡಿ ವಿಚಾರಿಸಿಕೊಳ್ಳಿ. ಈಗ ಡಬ್ಬಲ್ ಟೋಲ್ ಕಟ್ಟಿ ಎಂದ. "ಅರೆ, ನಿಮ್ಮದೇ ಟೋಲ್ ಸಿಬ್ಬಂದಿಯ ಬಳಿ ಕಳೆದ ಎರಡು ಗಂಟೆಗಳ ಹಿಂದೆ ಕೊಂಡ ಟ್ಯಾಗ್ ಇದು. ಹಣ ಕಟ್ಟಿದ ಮೆಸೇಜ್ ಇಲ್ಲಿದೆ. ಹೀಗಿದ್ದಾಗ ಸಮಸ್ಯೆ ನಿಮ್ಮದೇ, ನನ್ನದೇ?" ಎಂದೆ. 


ಆತ ಟೈಮ್ ವೇಸ್ಟ್ ಮಾಡಬೇಡಿ ಡಬ್ಬಲ್ ಕಟ್ಟಿ ನಡೀತಾ ಇರಿ ಎಂದ. ನಾನು ಆಗಲ್ಲ ಎಂದೆ. ಅಷ್ಟರಲ್ಲಿ ಹಿಂದಿನವನು "ಸರ್, ಇರ್ಲಿ ಟೋಲ್ ಕಟ್ಟಿ ಸೈಡಿಗೆ ಹಾಕಿ ವಿಚಾರಿಸಿಕೊಳ್ಳಿ, ನಾವು ಹೋಗಬೇಕು" ಎಂದ. ಅಷ್ಟರಲ್ಲಿ ಟೋಲಿನವ ತೋಳೇರಿಸಿಕೊಂಡು ಬಂದ. ನಾನೂ ತೊಳೇರಿಸಿದೆ.  ಆಗ ನನ್ನ ಅಪ್ಪಟ ಕನ್ನಡ ಉಚ್ಚಾರ ಕೇಳಿ ಬೆದರಿದ ತೋಳಿನವ "ಸರ್ಕಾರ ಕೇಳಿ, ನಮ್ಮನ್ನೇನು ಕೇಳ್ತೀರಾ" ಎಂದ. "ನಿನಗೆ ಇಲ್ಲಿ ಕೂರಿಸಿ ಸಂಬಳ ಕೊಡೋದು ನಾನಾ ಸರ್ಕಾರನ. ನೀನೇ ಕಣಪ್ಪ ಸರ್ಕಾರ" ಎಂದೆ. ಅಷ್ಟರಲ್ಲಿ ಹಿಂದಿನವ "ನಾನು ಟೋಲ್ ಕಟ್ಟುತ್ತೇನೆ ಅವರದು, ಬಿಡು" ಎಂದು ಜೇಬೇರಿಸಿದ! ಎಲಾ ಇವನ ವ್ಯವಸ್ಥೆ ಸರಿಯಿರದೆ, ತಂತ್ರಜ್ಞಾನವನ್ನು ಪರೀಕ್ಷಿಸದೆ ಡಿಜಿಟಲ್ ಡಿಜಿಟಲ್ ಎಂದು ಬೊಮ್ಮಡಿ ಹೊಡೆಯುವ ಗಿಲೀಟು ವ್ಯವಸ್ಥೆಯನ್ನು ವಿರೋಧಿಸುವ ವೀರ್ಯವೇ ಇಲ್ಲದ ಜನ ಎಷ್ಟೊಂದು ನಿರ್ವೀರ್ಯರಾಗಿದ್ದಾರೆನಿಸಿತು. ಆಗ ಆತನಿಗೆ "ನೋಡ್ರೀ, ದುಡ್ಡು ನನ್ನ ಹತ್ರಾನೂ ಸಾಕಷ್ಟಿದೆ. ಅದೆಲ್ಲವೂ ಕ್ಯಾಶ್ ಲೆಸ್ ರೂಪದಲ್ಲಿದೆ. ಪ್ರಧಾನಿ ಹೇಳಿದ ರೂಪದಲ್ಲಿರುವ ನನ್ನ ಹಣಕಾಸನ್ನು ಇವನ ರೀಡರ್ ಇಲ್ಲ ಎಂದೊಡನೆ ಒಪ್ಪಬೇಕೆ? ನೀವು ನನ್ನ ಜೊತೆ ಬಂದು ಹೋರಾಟ ಮಾಡಬೇಕೆ ಹೊರತು ಹೀಗೆ ಜೇಬು ತೋರಿಸುವುದಲ್ಲ" ಎಂದೆ. ಅಷ್ಟರಲ್ಲಾಗಲೇ ಪೊಂಯ್ ಪೊಂಯ್ ಪೀ ಪೀ ಎಂದು ನನ್ನ ಹಿಂದೆ ದೊಡ್ಡ ಕ್ಯೂ ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋದೀತೆಂದು "ತೋಳಿನವ" ಗೇಟ್ ತೆಗೆದು ಹೋಗಿ ಹೋಗಿ ಎಂದ. ಆಗ ನಾನು "ನಿನ್ನ ಭಿಕ್ಷೆ ಯಾವನಿಗೆ ಬೇಕಿದೆ. ಟೋಲ್ ಮುರಿದುಕೊಂಡು ನನ್ನ ಬ್ಯಾಲೆನ್ಸ್ ತೋರಿಸಿ ಕಳಿಸು. ಇಲ್ಲಾ ಅವನ್ಯಾವನು ನಿನ್ನ ಬಾಸು, ಅವನನ್ನು ಇಲ್ಲಿ ಕರೆ" ಎಂದು ಬಗ್ಗಿದವನ ಜುಟ್ಟು ಹಿಡಿದೆ. ಕಡೆಗೆ ನನ್ನ ಕಾರಿನ ಹಿಂದಿದ್ದವರೆಲ್ಲಾ ಇರ್ಲಿ ಬಿಡಿ, ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ ಎಂದು ಗೋಗರೆದಾಗ ಹಾಳಾಗಿ ಹೋಗಿ ಎಂದು ಹೊರಟೆ.


ಇದು ಒಂದು ಧೀರ್ಘಾಲೋಚನೆಯಿಲ್ಲದೆ, ದಿಢೀರ್ ಎಂದು ತರುವ ಬದಲಾವಣೆಗಳ ಎಡವಟ್ಟು! 


ಕೇವಲ ಒಂದು ಏರ್ಪೋರ್ಟಿನಲ್ಲಿಳಿದು, ಇರುವ ಏಕೈಕ ರಸ್ತೆಯಲ್ಲಿ ನನ್ನೂರಿಗೆ ಹೋಗುವಾಗ ಇಷ್ಟೊಂದು ಅವ್ಯವ್ಯಸ್ಥೆಗಳ ಆಗರ ನನ್ನಂತಹ ಪರದೇಸಿ ಬೇವರ್ಸಿಯ ಕಣ್ಣಿಗೆ ಬೀಳುತ್ತಿದ್ದರೆ,  ದೇಶೋದ್ಧಾರ ಮಾಡಲೆಂದೇ ರಾಜಕೀಯ, ಸಮಾಜ ಶೇವೆ, ಸಾರ್ವಜನಿಕ ಶೇವೆ, ಮಾಧ್ಯಮ ಶೇವೆ, ಪಂಥ ಶೇವೆ, ನ್ಯಾಯ ಶೇವೆ, ಪಕ್ಷ ಶೇವೆ ಮುಂತಾದ ಶೇವೆಗಳಲ್ಲಿರುವ ಕಾಂಗ್ರೆಸ್, ಕಮ್ಯುನಿಸ್ಟ್, ಎಡಪಂಥ, ಸುಡುಗಾಡು ಟ್ರೋಲಿನಲ್ಲಿ ಕಳೆದು ಹೋಗಿ ದೃಷ್ಟಿಯನ್ನೇ ಕಳೆದುಕೊಂಡಿರುವ ಹೆಡ್ಡರ ಬಿಡಿ, freedom of movement ಎಂಬ ಹಕ್ಕಲ್ಲ, ಮಾನವ ಸಹಜ  instinct ಅನ್ನೇ ಕತ್ತರಿಸಿಕೊಂಡಿರುವ ಆದರೆ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದು ತನ್ನ "ಕತ್ತರಿಸಿಕೊಂಡು ಇದೆಯೋ ಇಲ್ಲವೋ ಎಂಬಂತಿರುವುದನ್ನೇ ಬಹುದೊಡ್ಡ" ಎಂದು 56 ಇಂಚು ಅಗಲಿಸಿ ಬೀಗುವ ಪ್ರಜೆಯ ಕಂಡು ಓಡಿ ಹೋಗೋಣವೆನಿಸುತ್ತಿದೆ. 


ಒಟ್ಟಿನಲ್ಲಿ ಒಳಗೆ ಹೇಗಿದ್ದರೇನು ಮೇಲೆ ಕೆಂಪು ಕೆಂಪಾಗಿ ಕಾಣಬೇಕು. ಅಂತಹ ನಿರೀಕ್ಷೆ ಇಟ್ಟುಕೊಂಡೇ ಅಲ್ಲವೇ ಪಕ್ಷ ಬದಲಿಸಿ ರಂಗುರಂಗಿನ ಪ್ರಧಾನ ಪಕ್ಷ ಸೇರಿದ ಜಾರಿದ ಹೊಳಿ ನಿರೀಕ್ಷಿಸುತ್ತಿರುವುದು!


ಜಾರಿಕಿ ಒಬ್ಬನೇ ಅಲ್ಲ ಬಣ್ಣ ಹಚ್ಚಿಕೊ ಎನ್ನುತ್ತಿರುವುದು ಪ್ರಧಾನ ಶೇವಕರ ಕಚೇರಿಯಿಂದ ಟೋಲ್ ಗೇಟಿನಲ್ಲಿ ನನ್ನ ಹಿಂದಿದ್ದ ಅಸಂಖ್ಯಾತ ಪ್ರಜಾಪ್ರಭುಗಳವರೆಗೆ ಎಲ್ಲರೂ "ಬಣ್ಣ ಹಚ್ಚಿಕೊ ಬಣ್ಣ ಹಚ್ಚಿಕೊ" ಎನ್ನುತ್ತಿದ್ದಾರೆನಿಸಿತು!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ