ಉಕ್ರೇನ್ ಚಿಂತನೆ

 ಶಿಕಾಗೋ ಏರಿಯಾದಲ್ಲಿ ಚಳಿಗಾಲ ಮುಗಿದು ವಸಂತ ಕಾಲಿಡುತ್ತಿದೆ. ಈವರೆಗೆ ಒಳಾಂಗಣದಲ್ಲಿರುತ್ತಿದ್ದ ಜನರು ಸುದೀರ್ಘ ಚಳಿಗಾಲದ hybernation ಇಂದ ತೆಳ್ಳನೆ ಬಟ್ಟೆ ತೊಟ್ಟು ಮೆಲ್ಲನೆ ಹೊರಬಂದು ಗಿಡ ನೆಡುವ, ಸೈಕಲ್ ಹೊಡೆಯುವ, ವಾಕಿಂಗ್, ಜಾಗಿಂಗ್ ಮಾಡುವ ಅಥವಾ ಸುಮ್ಮನೆ ಬಿಕಿನಿ ತೊಟ್ಟು ಸನ್ ಲೋಷನ್ ಹಚ್ಚಿಕೊಂಡು ತಮ್ಮ ಡೆಕ್ಕಿನಲ್ಲಿ ಬಿಸಿಲಿಗೆ ಮೈ ಒಡ್ಡುವ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ನಾನೂ ಸಹ ನನ್ನ ಹೊರಾಂಗಣದ ಚಟುವಟಿಕೆಯಾಗಿ ತೆಳ್ಳನೆಯ ಶರ್ಟು ಮತ್ತು ಶಾರ್ಟ್ಸ್ ತೊಟ್ಟು ಮರೆಯದೆ ತಲೆಗೊಂದು ಹ್ಯಾಟು ಕಣ್ಣಿಗೊಂದು ತಂಪು ಕನ್ನಡಕ ತೊಟ್ಟು ವಾಕಿಂಗ್ ಮಾಡುತ್ತ ಕಣ್ಣಿಗೆ ರಾಚುವ ಇತರರ ಚಟುವಟಿಕೆಗಳನ್ನು ಗಮನಿಸುತ್ತಿರುತ್ತೇನೆ. 


ದಿನಕ್ಕೆ ಮೂರು ಬಾರಿ ತಿಂಡಿ ಊಟ ಮಾಡಿದ ನಂತರ ಅರ್ಧರ್ಧ ಗಂಟೆ ನಾನು ವಾಕಿಂಗ್ ಮಾಡುತ್ತೇನೆ. ಈ ರೀತಿ ಆಹಾರ ಸೇವಿಸಿದ ನಂತರ ವಾಕ್ ಮಾಡುವುದು ಎಂಬತ್ತೈದು ತೂಗುತ್ತಿದ್ದ ನನ್ನನ್ನು ಎಪ್ಪತ್ತಕ್ಕೆ ಮೂರು ತಿಂಗಳಲ್ಲಿ ಇಳಿಸಿ ಕಳೆದ ಎಂಟು ವರ್ಷಗಳಿಂದ ಎಪ್ಪತ್ತರಲ್ಲೇ ನೆಲೆ ನಿಲ್ಲಿಸಿದೆ. ಚಳಿಗಾಲದಲ್ಲಿ ಮನೆಯೊಳಗೇ ಗಣಪತಿ ತನ್ನ ಮಾತಾಪಿತರನ್ನು ಪ್ರದಕ್ಷಿಣೆ ಹಾಕಿದಂತೆ ಪ್ರದಕ್ಷಿಣೆ ಹಾಕಿದರೆ ವಸಂತದಿಂದ ಗ್ರೀಷ್ಮದವರೆಗೆ ಹೊರಾಂಗಣದಲ್ಲಿರುತ್ತೇನೆ. 


ಇರಲಿ ಕ್ಷಮಿಸಿ, ವಿಷಯ ಅದಲ್ಲ. ಇಂದು ವಾಕಿಂಗ್ ಮಾಡುವಾಗ ನನ್ನ ಮುಂದಿನ ಬೀದಿಯ ಲಾರೆನ್ಸ್ ಲೇನಿನ ಕೊನೆಯಲ್ಲಿರುವ ನ್ಯಾನ್ಸಿ 'hello neighbor' ಎಂದು ಕೂಗಿ ಕರೆದಳು. ಹಾಯ್ ಎನ್ನುತ್ತಾ ಆಕೆಯೆಡೆ ಸಾಗಿದೆ. 'ನನ್ನ ಮನೆಯ ಬಾವುಟ ಗಮನಿಸಿದೆಯಾ' ಎಂದು ಕೇಳಿದಳು. ಆಕೆ ತೂಗು ಹಾಕಿದ್ದ ಯುಕ್ರೇನ್ ಬಾವುಟ ನೋಡಿ 'ಹೌದು, ನಿನ್ನ ಬಂಧುಗಳು ಆಲ್ಲಿ ಹೇಗಿದ್ದಾರೆ' ಎಂದೆ.


'not good, ನನ್ನ ಸಂಬಂಧಿ ಐವತ್ತಕ್ಕೂ ಹೆಚ್ಚು ಕುಟುಂಬಗಳು ಅತ್ಯಂತ ಕಷ್ಟದಲ್ಲಿದ್ದಾರೆ.  ಬೈಡೆನ್ ಅವರನ್ನು ಅಮೆರಿಕೆಗೆ ಕರೆತರುತ್ತೇನೆ ಎಂದರೂ ಏನೂ ಮಾಡುತ್ತಿಲ್ಲ. ಪಾಸ್ಪೋರ್ಟ್, ವರ್ಕ್ ಪರ್ಮಿಟ್ ಇರಬೇಕು ಎನ್ನುತ್ತಾನೆ. ಯುದ್ಧಪೀಡಿತ ಪ್ರದೇಶದಲ್ಲಿ ಅವೆಲ್ಲವನ್ನೂ ನಾಶಗೊಂಡ ಮನೆಗಳಲ್ಲಿ ಹೇಗೆ ಹುಡುಕುವುದು!' ಎಂದಳು. ಅದಕ್ಕೆ ನಾನು 'ಅವೆಲ್ಲಾ ಇದ್ದರೆ ನೇರ ವಾರ್ಸಾ (ಪೋಲೆಂಡ್)ಗೆ ಹೋಗಿ ವಿಮಾನ ಹತ್ತಿಕೊಂಡೆ ಬರಬಹುದಲ್ಲ! ಅದಕ್ಕೆ ಬೈಡೆನ್ ಏಕೆ ಬೇಕು?' ಎಂದು ಸಹಮತ ತೋರಿದೆ.


ತನ್ನ ಕಷ್ಟಗಳನ್ನು ತಲೆಯೂರಿ ಹೇಳಿಕೊಳ್ಳಲು ಹೆಗಲೊಂದು ಬೇಕಿದ್ದ ನ್ಯಾನ್ಸಿಗೆ ನಾನು ಹೆಗಲಾದೆನು. ನ್ಯಾನ್ಸಿಯ ಎಪ್ಪತ್ತೈದು ವರ್ಷದ ಹಿರಿಯಕ್ಕ ಇಪ್ಪತ್ತನೇ ಅಂತಸ್ತಿನಲ್ಲಿದ್ದರೆ ಆಕೆಯ ಎಂಬತ್ತೈದರ ಚಿಕ್ಕಮ್ಮ ಹದಿನಾರನೇ ಮಹಡಿಯಲ್ಲಿದ್ದಾಳಂತೆ. ನೀರು, ವಿದ್ಯುತ್, ಅನಿಲ ಸರಬರಾಜಿಲ್ಲದೆ ಅಕ್ಷರಶಃ ಅವರ ಜೀವನ ನರಕಕ್ಕಿಂತಲೂ ಕಡೆಯಾಗಿದೆ. ಅನ್ನಾಹಾರಗಳಿಲ್ಲದಿರುವುದು ಒಂದು ಕಡೆಯಾದರೆ ಮನೆಯಲ್ಲಿನ ಶೌಚಗಳು ತುಂಬಿ ತುಳುಕುತ್ತಿದ್ದು ಅಪಾರ್ಟ್ಮೆಂಟಿನಿಂದ ಹೊರಬರಲಾಗದೆ ಜನರು ಸಾಯುತ್ತಿದ್ದಾರೆ. ಯುಕ್ರೇನಿ ಸೈನ್ಯ ಆಗಾಗ್ಗೆ ತಂದು ಕೊಡುವ ಆಹಾರ ಸಾಮಗ್ರಿಯಲ್ಲಿ ಜೀವ ಹಿಡಿದಿಟ್ಟುಕೊಂಡಿದ್ದರೂ ನೀರು, ಅನಿಲ, ವಿದ್ಯುತ್ ಸರಬರಾಜಿಲ್ಲದೆ ಜನರು ರೋಗಗ್ರಸ್ಥರಾಗುತ್ತಿದ್ದಾರಂತೆ.


ನ್ಯಾನ್ಸಿಯ ಅಕ್ಕಳೊಬ್ಬಳು ನಗರ ಪ್ರದೇಶದ ಹೊರಗಿರುವವಳು ಸ್ವಲ್ಪ ಉತ್ತಮ ಎನ್ನಬಹುದಾದ ಸನ್ನಿವೇಶದಲ್ಲಿದ್ದಾಳೆ. ಆದರೆ ಆಕೆಯ ಮಗಳು ಮತ್ತು ಮಗನ ಕುಟುಂಬಗಳು ನಗರ ಪ್ರದೇಶದಿಂದ ಬಂದು ಆಕೆಯ ಮನೆಯಲ್ಲೇ ಇದ್ದಾರಂತೆ. 'ಒಟ್ಟು ಇಪ್ಪತ್ತು ಮಂದಿ ಮೂರು ಬೆಡ್ ರೂಮಿನ ಮನೆಯಲ್ಲಿ ಕಟ್ಟಿದ ಶೌಚಾಲಯ, ನೀರು ವಿದ್ಯುತ್ ಅನಿಲ ಸರಬರಾಜಿಲ್ಲದೆ ಕಿಟಕಿ ಬಾಗಿಲುಗಳಿಗೆ ಪ್ಲೈವುಡ್ ಬಡಿದು ಮುಚ್ಚಿ ವಾಸಿಸುತ್ತಿರುವ ನರಕ ಇಪ್ಪತ್ತೊಂದನೇ ಶತಮಾನದ ಅತ್ಯಂತ ದೊಡ್ಡ ನರಕ. ಇದಕ್ಕೆ ಕಾರಣನಾದ ಬಂಕರ್ನಲ್ಲಿ ಅಡಗಿರುವ ನರಹಂತಕ ವಾರ್ ಕ್ರಿಮಿನಲ್ ಪುಟಿನ್ ಅನ್ನು ಜೈಲಿಗೆ ಹಾಕಬೇಕು. ಅವನನ್ನು ಕೊಲ್ಲಬಾರದು, ಜೈಲಿಗೆ ಹಾಕಬೇಕು' ಎಂದು ಹನಿಗಣ್ಣಾದಳು.


ನಾನು ಮುಗ್ಧನಂತೆ 'ಪುಟಿನ್ ಬಂಕರನಲ್ಲಿ ಅಡಗಿರುವನೇ! ಮತ್ತೆ ಟಿವಿಯಲ್ಲಿ ಬರುತ್ತಾನಲ್ಲ' ಎಂದೆ. ಅದಕ್ಕೆ ನ್ಯಾನ್ಸಿ 'ಅಯ್ಯೋ, ಟಿವಿಯಲ್ಲಿ ಕಾಣಿಸಿಕೊಳ್ಳುವವನು ಅವನ ಡಬಲ್! ಪುಟಿನ್ ಬಂಕರ್ ಬಿಟ್ಟು ಈವರೆಗೆ ಹೊರಗೆ ಬಂದೇ ಇಲ್ಲ' ಎಂದಳು. ಹಾಗೆಯೇ 'ಅಮೇರಿಕನ್ ಜನರು ಸಾಕಷ್ಟು ದಾನ ಕೊಟ್ಟು ನಮ್ಮ ಜನರನ್ನು ಕಾಪಾಡಿದ್ದಾರೆ. ನನ್ನ ಚರ್ಚಿನಲ್ಲೇ ಒಂದೂವರೆ ಲಕ್ಷ ಡಾಲರ್ ಹಣ ಅಲ್ಲದೇ ಸಾಕಷ್ಟು ಬಟ್ಟೆ, ಆಹಾರ ಸಾಮಗ್ರಿ, ಔಷಧಿ, ಮಕ್ಕಳ ಡೈಪರ್ ಇತ್ಯಾದಿ ವಸ್ತುಗಳನ್ನು ಸಂಗ್ರಹಿಸಿ ಯುಕ್ರೇನಿಗೆ ಕಳುಹಿಸಿದ್ದೇವೆ' ಎಂದಳು.


ಒಟ್ಟಾರೆ ನೀರು ವಿದ್ಯುತ್ ಅನಿಲವಿಲ್ಲದೆ ಕಟ್ಟಿದ ಶೌಚಾಲಯಗಳೊಡನೆ ಕಿಟಕಿ, ಬಾಗಿಲುಗಳನ್ನು ಮುಚ್ಚಿಕೊಂಡು ಸೇನೆಯು ಯಾವಾಗಲೋ ತಂದು ಕೊಡುವ ಒಣ ಬ್ರೆಡ್ ನಂಬಿಕೊಂಡು ಇಪ್ಪತ್ತೊಂದನೇ ಶತಮಾನದಲ್ಲಿ ತಿಂಗಳುಗಟ್ಟಲೆ ಇರುವುದಿದೆಯಲ್ಲ ಅದನ್ನು ಒಮ್ಮೆ ಊಹಿಸಿಕೊಳ್ಳಿ. ಇಂತಹ ಸನ್ನಿವೇಶ ಯಾವ ಶತ್ರುವಿಗೂ ಬೇಡ. 


ಈಗಷ್ಟೇ ಚಳಿಗಾಲ ಮುಗಿದು ಕಾಲಿಡುತ್ತಿರುವ ವಸಂತ ಋತುವಿನಂತೆಯೇ ಯುಕ್ರೇನಿಗೂ ಯುದ್ಧದ ಚಳಿಗಾಲ ಮುಗಿದು ವಸಂತ ಬಂದು ಜನರು ಮತ್ತೆ ಜೀವನವನ್ನು ಆರಂಭಿಸುವಂತಾಗಲಿ ಎಂದು ನ್ಯಾನ್ಸಿಗೆ ಸಮಾಧಾನದ ಮಾತುಗಳನ್ನು ಹೇಳಿ ಸಂತೈಸಿ ಮನೆಯ ಕಡೆ ನಡೆದೆ.


ಅಂದಹಾಗೆ ಭಾರತೀಯ ಕಾಮ್ರೇಡರು ಈ ಯುದ್ಧದ ಬಗ್ಗೆ, ಮಾನವೀಯ ಹಕ್ಕುಗಳ ಉಲ್ಲಂಘನೆಗೆ, ರಷ್ಯಾ ಸೈನಿಕರು ಯುಕ್ರೇನಿನ ಮಕ್ಕಳ ಮೇಲೆ ಅತ್ಯಾಚಾರವೆಸಗುತ್ತಿರುವುದರ ಬಗ್ಗೆ ಏನಾದರೂ ಹೇಳುತ್ತಿದ್ದಾರೆಯೇ!


ಲಾಲ್ ಸಲಾಂ ನಿಜಕ್ಕೂ ಲಾಲ್ ಆಗಿರುತ್ತದೆಯೇ ಹೊರತು ಅದೆಂದೂ ಶಾಂತಿಯ ಸಂಕೇತದ ಬಿಳಿಯಾಗಿಲ್ಲ, ಹಿಂದೆಯೂ ಮುಂದೂ! ಇದು ಕಮ್ಯುನಿಸ್ಟ್ ನ ಇತಿಹಾಸ ಮತ್ತು ಭವಿಷ್ಯ. ಇದು ನನ್ನ ಮಾತಲ್ಲ, ಕಾಮ್ರೇಡುಗಳ ಸಾಕಷ್ಟು ಡೌ ನೋಡಿರುವ ಅನುಭವಿಸಿರುವ ಜೀವಿಸಿರುವ ನ್ಯಾನ್ಸಿಯ ಮಾತು.


Peace be with you!

No comments: