ನನ್ನ "ಬಸವರಾಜಕಾರಣ" ಕೃತಿಯಲ್ಲಿ ಕೆಲವು ವಚನಗಳನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದೇನೆ ಎಂದು ಒಬ್ಬ ಓದುಗರು ದೂರಿದ್ದರು. ಕೆಲವು ಸಾಂಕೇತಿಕ ಮತ್ತು ಬೆಡಗಿನ ವಚನಗಳನ್ನು ಸಾಕಷ್ಟು ಜನರು ತಮ್ಮ ಗ್ರಹಿಕೆಗೆ ತಕ್ಕಂತೆ ವರ್ಣಿಸಿದ್ದಾರೆ. ಅದನ್ನು ನಮ್ಮ ಸಮಾಜ ಮಹಾಪ್ರಸಾದ ಎಂಬಂತೆ ಸ್ವೀಕರಿಸಿಬಿಟ್ಟಿದೆ. ಈ ಸಿದ್ಧ ವ್ಯಾಖ್ಯಾನಗಳಿಗೆ ಯಾವುದೇ ವ್ಯತಿರಿಕ್ತ ವ್ಯಾಖ್ಯಾನಗಳನ್ನು ಕೊಂಚವೂ ತರ್ಕಿಸದೆ ತಿರಸ್ಕರಿಸುವ ವಾತಾವರಣದ ಅರಿವು ನನಗಿದೆ.
ಅಣ್ಣನು ಹೇಳಿಹನೆಂದು ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವ, ಆಗಮದ ಮೂಗ ಕೊಯಿವೆ ಎಂದರೆ ಅದು ಕೇವಲ ಮೌಢ್ಯ ಮಾತ್ರ. ಏಕೆಂದರೆ ವೇದವೆಂಬುದು ಒಂದು ಕಾಲದ ಸಂವಿಧಾನ, ಶಾಸ್ತ್ರವೆಂಬುದು ವಿಜ್ಞಾನ, ತರ್ಕವೆಂಬುದು ಈಗಲೂ ಇಂದಿನ ಮೊಬೈಲಿನಲ್ಲಿರುವ ತಂತ್ರಾಶ! ಇದೆಲ್ಲವೂ ಜಡವಲ್ಲದೆ ಬದಲಾಗುತ್ತಲೇ ಬದಲಾಗಲೇಬೇಕಾದ ಚಲನಶೀಲ ಅಂಶಗಳು. ಅದನ್ನೇ ಬಸವ ಬದಲಾಯಿಸಿದ್ದು, ಇಂದು ನಾವುಗಳು ಬದಲಾಯಿಸಬೇಕಾದ್ದು! ಇದೆಲ್ಲಕ್ಕೂ ತರ್ಕ ಮೂಲದ್ರವ್ಯ.
ಹಾಗಾಗಿ ಆ ವ್ಯಾಖ್ಯಾನಗಳನ್ನು ಕಟ್ಟಿಕೊಡದಿದ್ದರೆ ತಾರ್ಕಿಕ ಸಿದ್ಧಾಂತಗಳು ಹುಟ್ಟುವುದಾದರೂ ಎಂತು? ಅಂತಿಮವಾಗಿ ಈ ವಿವರಣೆಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನಲು ಮೂಲ ವಚನಕಾರನು ಮಾತ್ರ ಹಕ್ಕುದಾರ!
ತಾರ್ಕಿಕ ವಿಶ್ಲೇಷಣೆಗೆ ಸಾಂದರ್ಭಿಕ ಸಾಕ್ಷ್ಯ, ಸನ್ನಿವೇಶ, ಮತ್ತು ಇತಿಹಾಸ ನನಗೆ ಬಹು ಮುಖ್ಯ. ಅಂತಹ ಒಂದು ತಾರ್ಕಿಕ ವಿಶ್ಲೇಷಣೆ ಹೀಗಿದೆ. ಕೃತಿಯಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದನ್ನು ಇಲ್ಲಿ ಹೆಚ್ಚಿನ ವಿವರಣೆಯೊಂದಿಗೆ ಪರಿಷ್ಕರಿಸಿದ್ದೇನೆ. ಈ ವಿವರಗಳು ಬರಲಿರುವ "ಬಸವರಾಜಕಾರಣ" ಇ-ಪುಸ್ತಕದಲ್ಲಿರುತ್ತವೆ.
ಕೋಣನ ಕೊಂಬಿನ ತುದಿಯಲ್ಲಿ,
ಏಳುನೂರೆಪ್ಪತ್ತು ಸೇದೆಯ ಬಾವಿ.
ಬಾವಿಯೊಳಗೊಂದು ಬಗರಿಗೆ,
ಬಗರಿಗೆಯೊಳಗೊಬ್ಬ ಸೂಳೆ ನೋಡಯ್ಯಾ
ಆ ಸೂಳೆಯ ಕೊರಳಲ್ಲಿ ಏಳುನೂರೆಪ್ಪತ್ತು
ಆನೆ ನೇರಿತ್ತ ಕಂಡೆ ಗುಹೇಶ್ವರಾ.
'ಕೋಣನ ಕೊಂಬಿನ ತುದಿಯಲ್ಲಿ' ಎಂದರೆ ಬಸವಣ್ಣನ ಮಹತ್ವಾಕಾಂಕ್ಷೆಯ ಉತ್ತುಂಗದ ಕಲ್ಯಾಣ ಕ್ರಾಂತಿ. 'ಏಳುನೂರೆಪ್ಪತ್ತು ಸೇದೆಯ ಬಾವಿ' ಎಂದರೆ ಸಮಾಜಮುಖಿ ಏಳುನೂರೆಪ್ಪತ್ತು ಗಣಂಗಳು! ಸೇದೆಯ ಬಾವಿ ಎಂಬ ಉಪಮೆಯು ನೀರಿರುವ ಮತ್ತು ನಿತ್ಯ ಬಳಕೆಯಲ್ಲಿರುವ ಯಾ ಸೇದುತ್ತಿರುವ ಬಾವಿ. ಅಂದರೆ ಸಮಾಜಕ್ಕೆ ನೀರುಣ್ಣಿಸುತ್ತಿರುವ ಉಪಯೋಗಿ ಎಂಬರ್ಥದಲ್ಲಿ ಹೇಳಲಾಗಿದೆ. ಹಾಗಾಗಿ ಇದನ್ನು ಸಮಾಜಮುಖಿ ಏಳುನೂರೆಪ್ಪತ್ತು ಗಣಂಗಳು ಎನ್ನಬಹುದು.
ಈ ಏಳನೂರೆಪ್ಪತ್ತನ್ನು ನರನಾಡಿ, ಏಳನೂರೆಪ್ಪತ್ತು ಪಂಚೇಂದ್ರಿಯಗಳ ವಿಸ್ತೃತ ಭಾಗಗಳ ಸಂಖ್ಯೆ, ಏಳನೂರೆಪ್ಪತ್ತು ಅಳತೆ ಎಂದೆಲ್ಲಾ ಕೆಲವರು ಅರ್ಥೈಸಿದ್ದಾರೆ. ಅದು ತಾರ್ಕಿಕವಾಗಿ ಸಮಂಜಸವಲ್ಲ. ಏಕೆಂದರೆ ಮಾನವನಿಗೆ ಮಿಲಿಯನ್ನುಗಟ್ಟಲೆ ನರನಾಡಿಗಳಿವೆ. ಹಾಗೆಯೇ ಪಂಚೇಂದ್ರಿಯ ಮತ್ತದರ ವಿಸ್ತೃತ ಭಾಗ ಇತ್ಯಾದಿಗೆ ಹೋಲಿಸುವುದು ಸಹ ಕಾಲ್ಪನಿಕವೇ ಹೊರತು ಹಕೀಕತ್ತಲ್ಲ. ಹಾಗಾಗಿದ್ದರೆ ಅಲ್ಲಮ 'ಅಗಣಿತ' ಎಂಬ ಪದ ಅಥವಾ ಇತರೆ ಪರ್ಯಾಯ ಪದವನ್ನು ಬಳಸುತ್ತಿದ್ದ. ಇನ್ನು ಅಳತೆ ಮಾಪಕವಾಗಿದ್ದರೆ ಏಳನೂರೆಪ್ಪತ್ತು ಜಂಘೆಯ ಬಾವಿ ಎಂದಾಗುತ್ತಿತ್ತು.
ಇನ್ನು 'ಬಾವಿಯೊಳಗೊಂದು ಬಗರಿಗೆ' ಎಂದರೆ ನೀರಿನ ಒರತೆ. ಸಾಮಾನ್ಯವಾಗಿ ಒಣಗಿದ ಬಾವಿಯಲ್ಲಿ ನೀರಿನ ಒರತೆಗೆ ಬಗರಿಗೆ ತೋಡಿರುತ್ತಾರೆ. ಇಲ್ಲಿ ಬಗರಿಗೆ ಎಂದರೆ ಆದ್ಯರ ಶೈವಾಚಾರ. ಬಗರಿಗೆಯನ್ನು ಕೆಲವರು ಪ್ರಾಣ, ಚೈತನ್ಯ ಎಂದು ಸೃಜನಶೀಲವಾಗಿ ಅರ್ಥೈಸಿದ್ದಾರೆ.
'ಬಗರಿಗೆಯೊಳಗೊಬ್ಬ ಸೂಳೆ ನೋಡಯ್ಯಾ' ಎಂದರೆ ಅಂದು ಹುಟ್ಟಿನಿಂದ ಜಾತಿ, ಅಂತರ್ಜಾತಿ ವಿವಾಹ ನಿರ್ಬಂಧ, ಇತ್ಯಾದಿ ನವ ನೀತಿಗಳನ್ನು ಅಪ್ಪಿದ ಆದ್ಯರು. ಆದ್ಯರನ್ನು ಈ ನೀತಿಗಳಿಂದಾಗಿ ಸೂಳೆ ಎಂದು ತಮ್ಮ ವಚನಗಳಲ್ಲಿ ಸಾಕಷ್ಟು ವಚನಕಾರರು ಕರೆದಿದ್ದಾರೆ.
'ಆ ಸೂಳೆಯ ಕೊರಳಲ್ಲಿ ಏಳುನೂರೆಪ್ಪತ್ತು ಆನೆ ನೇರಿತ್ತ ಕಂಡೆ ಗುಹೇಶ್ವರಾ.' ಎಂದರೆ ಈ ಎಲ್ಲಾ ಸಮಾಜಮುಖಿ ಅಮರ ಗಣಂಗಳು ಕಲ್ಯಾಣ ಕ್ರಾಂತಿಯಲ್ಲಿ ಸೋತು ಸತ್ತು ಆದ್ಯರ ಕೊರಳ ಮಾಲೆಯಾದರು. ಅಲ್ಲಿಗೆ ಶೈವವು ಹುಟ್ಟಿನಿಂದ ಜಾತಿ ಮತ್ತಿತರೆ ನವ ನಿಯಮಗಳನ್ನು ಒಪ್ಪಿ ಅಪ್ಪಿಕೊಂಡಿತು. ಹೀಗೆ ಕಲ್ಯಾಣ ಕ್ರಾಂತಿಯಿಂದ ಭ್ರಮನಿರಸನಗೊಂಡ ಅಲ್ಲಮನು ಬಯಲಾಗುತ್ತಾನೆ. ಹಾಗಾಗಿಯೇ ಅಲ್ಲಮನು ಕಲ್ಯಾಣ ಕ್ರಾಂತಿಯ ನಂತರ ಏನಾದನೆಂದಾಗಲಿ ಅಥವಾ ಅವನ ವಚನಗಳಾಗಲಿ ಕಾಣಬರುವುದಿಲ್ಲ. ಮಿತ್ರನೊಬ್ಬನ ಮಹತ್ವಾಕಾಂಕ್ಷೆ ಈಡೇರದೆ ದೇಶಾಂತರ ಹೋದ ಇನ್ನೊಬ್ಬ ಮಿತ್ರನಂತೆ ಅಲ್ಲಮ ಬಯಲಾಗಿ ಹೋಗಿದ್ದಾನೆನಿಸುತ್ತದೆ ಎಂಬ ಅರ್ಥವನ್ನೂ ಈ ವಚನ ಕೊಡುತ್ತದೆ.
ಅಲ್ಲಮನು ಸಾಕಷ್ಟು ಬೆಡಗಿನ ವಚನಗಳನ್ನು ಬರೆದಿದ್ದಾನೆ ನಿಜ. ಆದರೆ ಅಷ್ಟೇ ವಾಸ್ತವದ ನೇರ, ಮತ್ತು ಸಾಂಕೇತಿಕ ವಚನಗಳನ್ನೂ ಬರೆದಿದ್ದಾನೆ ಎಂಬುದೂ ಅಷ್ಟೇ ಸತ್ಯ. ಅಂತಹ ಐತಿಹಾಸಿಕ ದಾಖಲೆಯ ಸಾಂಕೇತಿಕ ವಚನವೇ ಇದಾಗಿದೆ ಎಂಬುದು ನನ್ನ ಅರ್ಥೈಸುವಿಕೆ.
ಇನ್ನು ಅಲ್ಲಮನ ಕುರಿತು ಹೇಳಲೇಬೇಕಾದ ಇನ್ನೊಂದು ವಿಷಯವೆಂದರೆ ಅಲ್ಲಮನ ಅಂಕಿತ "ಗುಹೇಶ್ವರ"!
ಗುಹ್ಯ + ಈಶ್ವರ = ಗುಹೇಶ್ವರ. ಗುಹ್ಯ ಎಂದರೆ ಯೋನಿ, ವಾಂಛೆ, ಪಶು. ಈಶ್ವರ ಯೋನಿಯ ಪತಿಯಾಗಿ ಪಶು-ಪತಿ, ಯಾ ಶರಣಸತಿ-ಲಿಂಗಪತಿ ಎಂಬುದರ ಸಾಂಕೇತಿಕ ಪದವೇ ಅಲ್ಲಮನ ಅಂಕಿತವಾಗಿ ಪಾಶುಪತ-ಕಾಳಾಮುಖ-ವೀರಶೈವ ವಿಕಾಸದ ಸಂಕೇತವಾಗಿದೆ. ಇನ್ನು 'ಹ' ಕಾರಕ್ಕೆ 'ಗ' ಕಾರ ಉಪಯೋಗಿಸುವ ದಮಿಲ / ತಮಿಳ ಭಾಷೆಯಂತೆ ಗುಹೇಶ್ವರವು ಗೊಗ್ಗೇಶ್ವರ ಎಂದಾಗಿ ಸಹ ಕೆಲವು ವಚನಗಳಲ್ಲಿ ಬಳಕೆಯಾಗಿರಬಹುದು ಎಂಬುದು ನನ್ನ ಗ್ರಹಿಕೆ.
ಧನ್ಯವಾದಗಳು.
ರವಿ ಹಂಜ್
No comments:
Post a Comment