ಬಸವರಾಜಕಾರಣ - Review by Mala Akkisetti

 ಆಹಾರ ದೇಹಕ್ಕೆ ಆಧ್ಯಾತ್ಮ ಮನಸ್ಸಿಗೆ ಎನ್ನುವ ರವಿ ಹಂಜ್ ಅವರಿಗೆ ಶರಣು ಶರಣಾರ್ಥಿಗಳು.

ಅನಿವಾಸಿ ಭಾರತೀಯರಾದ ರವಿ ಹಂಜ್ ಅವರು ತಮ್ಮ ವೃತ್ತಿಯನ್ನು ಮಾಡುತ್ತಲೇ ಸಾಹಿತ್ಯ ಮತ್ತು ಸಂಶೋಧನೆಯೆಡಗೆ ಮನವೊಲಿಸಿದ್ದಾರೆ. ಸತತ 6 ವರ್ಷಗಳ ಕಾಲ ವಚನ ಸಾಹಿತ್ಯ ಮತ್ತು ವೀರಶೈವ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು, ಆಕರಗಳನ್ನು ಓದಿದ್ದು ಅವರೊಂದಿಗೆ ಮಾತನಾಡಿದಾಗ ತಿಳಿಯಿತು. ಪುಸ್ತಕ ಒಟ್ಟು ಹದಿನೆಂಟು ಅಧ್ಯಾಯಗಳನ್ನು ಒಳಗೊಂಡಿದ್ದು, ಪ್ರತಿ ಅಧ್ಯಾಯದ ನಂತರ ಆಕರಗಳ ಪಟ್ಟಿಯನ್ನು ಕೊಡುತ್ತಾರೆ. ಅಷ್ಟೊಂದು ಓದಿಕೊಂಡಿದ್ದು ಮಾತ್ರ ಪ್ರಶಂಸನಾರ್ಹ.ರವಿ ಹಂಜ್ ಅವರ ಓದಿಗೆ ಮತ್ತು ಸಂಶೋಧನಾ ಪುಸ್ತಕಕ್ಕೆ ಅಭಿನಂದನೆಗಳು.
ಪುಸ್ತಕ: ಬಸವರಾಜಕಾರಣ
ಲೇಖಕರು: ರವಿ ಹಂಜ್
ಧರ್ಮಕ್ಕೆ ಸಂಬಂಧಿಸಿದ ಕೆಲವನ್ನು ಒಪ್ಪಿಕೊಂಡು, ಅದನ್ನು ಇನ್ನೂ ಅನುಸರಿಸುತ್ತಿರುವ ಕಾಲಘಟ್ಟದಲ್ಲಿದಾಗ ರವಿಯವರ ಕೆಲವು ಅಧ್ಯಾಯಗಳು, ಹೇಳಿಕೆಗಳು ದಿಗ್ಭ್ರಮೆಯನ್ನುಂಟು ಮಾಡುತ್ತವೆ. ಮೋಹೆಂಜದಾರೋ ಉತ್ಖನನದಲ್ಲಿ ಸಿಕ್ಕಿರುವ ಸಣ್ಣ ಲಿಂಗಾಕೃತಿಗಳು ವೀರಶೈವರೇ ಕೊರಳಿಗೆ ಕಟ್ಟಿಕೊಂಡಿರುವ ಕರಂಡಕದಲ್ಲಿ ಇಟ್ಟುಕೊಳ್ಳುವ ಲಿಂಗಗಳಷ್ಟು ಚಿಕ್ಕವಿವೆ ಎನ್ನುತ್ತಾರೆ. ಕಾನಿಷ್ಕನ ಕರಂಡಕವನ್ನು ಚಿತ್ರಸಹಿತ ಉದಾಹರಿಸಿದ್ದಾರೆ. ಆ ಕರಂಡಕದಲ್ಲಿಯೇ ಲಿಂಗವನ್ನು ಉಪಯೋಗಿಸುತ್ತಿದ್ದಾರಾ ಅನ್ನೋದು ಸ್ಪಷ್ಟವಿಲ್ಲ. ಕರಂಡಕ ಸಿಕ್ಕಿದೆ ಅಷ್ಟೇ."ಕಾಯಕವೇ ಕೈಲಾಸ" ಈ ಉದ್ಘೋಷ ಬಸವಣ್ಣದಲ್ಲ, ಆಯ್ದಕ್ಕಿ ಮಾರಯ್ಯನದು ಎನ್ನಲು ಕೆಲವು ವಚನಗಳನ್ನು ಕಲ್ಯಾಣಕ್ರಾಂತಿ ಅಧ್ಯಾಯದಲ್ಲಿ ಉದಾಹರಿಸುತ್ತಾರೆ.
ಬಸವಪುರಾಣ ಅಧ್ಯಾಯದಲ್ಲಿ ಹರಿಹರ ತನ್ನ "ಬಸವರಾಜದೇವರ ರಗಳೆ"ಯಲ್ಲಿ ತನ್ನ ಆರಾಧ್ಯದೈವ ಬಸವಣ್ಣನನ್ನು ಅತ್ಯುತ್ತಮ ಕುಲದವನ್ನೆನ್ನಲು "ಬ್ರಾಹ್ಮಣ" ಎಂದಿರುವ ಆತ ನಿಜವಾಗಲೂ ಬಸವಣ್ಣ ಒಬ್ಬ ಜಂಗಮ ಎನ್ನುತ್ತಾರೆ. ಬಿಜ್ಜಳನನ್ನು ಕೊಂದಿದ್ದು ಮಡಿವಾಳ ಮಾಚಿದೇವ ಎನ್ನುವ ಲೇಖಕರು ಮಡಿವಾಳ ಮಾಚಿದೇವ ರಚಿಸಿದ ವಚನವೊಂದನ್ನು ಉದಾಹರಿಸುತ್ತಾರೆ. ಬಸವಣ್ಣನನ್ನು ಭೇಟಿಯಾಗುವ ಮೊದಲೇ ಅಲ್ಲಮನ ಎದೆಗೆ ಲಿಂಗವಿತ್ತು ಮತ್ತು ಅಕ್ಕಮಹಾದೇವಿ ಬಾಲ್ಯದಲ್ಲೇ ಲಿಂಗಧಾರಿ ಯಾಗಿದ್ದಳು ಹೊರತು ಬಸವಣ್ಣನ ಭೇಟಿ ನಂತರ ಲಿಂಗಧಾರಿಯಾಗಿರಲಿಲ್ಲ ಅನ್ನೋದು ಒಪ್ಪಿಕೊಳ್ಳುವ ವಿಷಯ.ಪುಸ್ತಕದಲ್ಲಿ ಬಸವಣ್ಣ ಜಂಗಮ ಮೂಲ ಎಂದು ಕಲ್ಯಾಣೋತ್ತರ ವೀರಶೈವ ಲಿಂಗಾಯತ ಅಧ್ಯಾಯದಲ್ಲಿ ಜಂಗಮ ಮೂಲದ ಅಲ್ಲಮನನ್ನು ತೊರೆದು ಬ್ರಾಹ್ಮಣ ಮೂಲದ ಬಸವಣ್ಣನನ್ನು ಲಿಂಗಾಯತ ಧರ್ಮದ ಸಂಸ್ಥಾಪಕ ಎಂದು ಅತಿ ಪ್ರಾಮುಖ್ಯತೆಯನ್ನು ಕೊಟ್ಟುದು ಈ ಪಂಥದ ದುರಂತ ಎನ್ನುತ್ತಾರೆ. ಲೇಖಕರುಬಸವಣ್ಣನನ್ನು ಬ್ರಾಹ್ಮಣ ಎನ್ನುತ್ತಾರೋ ಅಥವಾ ಜಂಗಮನೆನ್ನು ತ್ತಾರೋ?.... ಗೊಂದಲವಿದೆ.
ಹೀಗೆ ಇನ್ನೂ ಅನೇಕ ವಿಚಾರಗಳನ್ನು ಪುಸ್ತಕದುದ್ದಕ್ಕೂ ರವಿ ಹಂಜಿ ಅವರು ಹೇಳುತ್ತಾ ಹೋಗುತ್ತಾರೆ. ಕೆಲವು ವಚನಗಳನ್ನು ಸಂದರ್ಭಕ್ಕೆ ತಕ್ಕಂತೆ( ತಮಗೆ ಬೇಕಾದಂತೆ) ಅರ್ಥೈಸಿಕೊಂಡಿದ್ದಾರೆ ಎನಿಸುತ್ತದೆ.(ಸ್ಪಷ್ಟನೆಗೆ ಆ ವಚನದ ಅರ್ಥವನ್ನು ಮೂಲ ವಚನಕಾರರೇ ಹೇಳಬೇಕಾಗುತ್ತದೆ.ಅದು ಅಸಾಧ್ಯ) ಸಾಮಾನ್ಯ ಕವಿಯ ಕವಿತೆಯನ್ನು ನಾನಾರ್ಥದಲ್ಲಿ ಅರ್ಥೈಸುವಾಗ, ವಚನಗಳನ್ನ ಹೀಗೆಯೇ ಅರ್ಥೈಸಲಾಗಿದೆ. ಅವರ ವಿಚಾರಗಳಿಗೆ ಅವರು ಆಕರಗಳನ್ನು ಕೊಟ್ಟಾಗ, ವಿರೋಧಿಸುವವರೂ ಆಕರಗಳನ್ನು ಕೊಡಬೇಕಾಗುತ್ತದೆ. ತಪ್ಪೆಂದು ಸಾಧಿಸಲು ಅವರು ಓದಿದ್ದನ್ನು ಓದಿ, ನಮ್ಮದು ಸರಿ ಎನ್ನಲು ಬೇರೆ ಆಕರಗಳನ್ನು ಓದಿ ಸಾಧಿಸಬೇಕು. ಇದು ಹೆಚ್ಚುಕಡಿಮೆ ಅವರಂತೆಯೇ ಅವರ ವಿರುದ್ಧವಾಗಿ ಮತ್ತೊಂದು ಪುಸ್ತಕವನ್ನು ರಚಿಸಿದಂತಾಗುತ್ತದೆ. ಇಂಗ್ಲಿಷ್ ಸಾಹಿತ್ಯದಲ್ಲಿ Pamela...a virtue rewarded ಎನ್ನುವ ಕೃತಿಯನ್ನು female character ಗೆ ಪ್ರಾಮುಖ್ಯತೆ ಕೊಟ್ಟು Samuel Richardson ಬರೆದಾಗ,ಅದರ counter ಆಗಿ male character ನ್ನು ಪ್ರತಿಬಿಂಬಿಸಲು Joseph Andrews ಕೃತಿಯನ್ನು Henry Fielding ಬರೆದ. ಈ ವಿಷಯದಲ್ಲೂ ಹಾಗೆಯೇ ಆಗುತ್ತದೆ. ವಿರೋಧಿಸಲು ಸರಿಯಾದ ಆಕರಗಳು ಅನಿವಾರ್ಯ.ಕೆಲವು ವಚನಗಳನ್ನು ಪ್ರಕ್ಷೇಪ ವಚನಗಳು ಎಂದಾಗ, ಅವುಗಳಾಧಾರಿತ ವಿಷಯವನ್ನು ನಂಬುವುದು ಕಷ್ಟ.
ಭಗತ್ ಸಿಂಗನನ್ನು( Bhagat Singh's last letter to the Second LCC convicts. Letter 2... 22 March 1931) ಗಲ್ಲಿಗೇರಿಸುವಾಗ ಭಗತನಿಗೆ ಆ ಒಂದು ಕ್ಷಣಕ್ಕೆ ತಾನೂ ಬದುಕುಳಿದು, ಇತರರಂತೆ ಸಾಮಾನ್ಯ ಜೀವನ ನಡೆಸಬಹುದಿತ್ತು, ಪ್ರಾಣ ಉಳಿಸಿಕೊಳ್ಳಬಹುದಿತ್ತು ಎಂದು ಅನಿಸುತ್ತದಂತೆ. ಮರುಕ್ಷಣವೇ ಆತ ತನ್ನನ್ನು ಗಲ್ಲಿಗೇರಿಸುತ್ತಿರುವುದು ತಾನು ಮಾಡಿದ ಸಾಧನೆಗಾಗಿ... ಅದು ವಿಶಿಷ್ಟವಾಗಿದೆ ಎಂದು ಸಾಯಲು ಅಣಿಯಾಗುತ್ತಾನೆ. ಆ ಕ್ಷಣದ ವಿಚಾರವನ್ನು ಗಾಳಿಗೆ ತೂರುತ್ತಾನೆ. ಹಾಗೆಯೇ ನನಗೆ ಒಂದು ಕ್ಷಣಕ್ಕೆ ಕೆಲವು ವಿಚಾರಗಳು ಸರಿ ಇವೆಯೇನೋ ಎಂದು ಅನಿಸಿದರೆ, ಮೊದಲೇ ಒಪ್ಪಿಕೊಂಡ ವಿಚಾರಗಳನ್ನು ದೂರಾಗಿಸಲು ಸಾಧ್ಯವಿಲ್ಲವಾಗಿದೆ. ಇದು ಪ್ರತಿ ಓದುಗನ ಅಭಿಪ್ರಾಯವೂ ಆಗಬಹುದು.
ಸಂಶೋಧನೆಯೆಂದರೆ ಒಬ್ಬ ಒಂದು, ಇನ್ನೊಬ್ಬ ಇನ್ನೊಂದು, ಮತ್ತೊಬ್ಬ ಮಗದೊಂದು ಕಾಲಕ್ಕೆ ತಕ್ಕಂತೆ ಸಿಕ್ಕ ಆಕರಗಳಂತೆ ಹೇಳುತ್ತಾನೆ ಹೋಗುತ್ತಾರೆ. ಇದು ಕಂಟಿನಿಯಸ್ ವರ್ಕ್. ಯಾವುದು ಸರಿ? ಯಾವುದು ತಪ್ಪು? ಮನ ಗೊಂದಲಕ್ಕೀಡಾಗುತ್ತದೆ. ಆಯಾ ರಾಜನ/ ವ್ಯಕ್ತಿಯ ಓಲೈಕೆಗಾಗಿ ಬರೆದ ಕೃತಿಗಳನ್ನು ನಂಬುವುದೆಷ್ಟು? ಕೆಲವು ಸಲ ಆಕರಗಳು ಸುಳ್ಳಾಗಿ, ಪೌರಾಣಿಕ ಕಥೆಗಳು, ಬಾಯಿ ಮಾತಿನ ಕಥೆಗಳು ಸತ್ಯವಾಗಿರಲೂಬಹುದು.History is mystery ಎನ್ನುವಂತೆ ಸಂಶೋಧನೆಯು ಒಂದು ತರಹದ mystery.
ಕವಿತೆ, ಲೇಖನ, ಲಲಿತ ಪ್ರಬಂಧಗಳನ್ನು ಬರೆದು ಹಾಯಾಗಿರುವ ನಾನು, ಪುಸ್ತಕ ಕಳಿಸಿಕೊಟ್ಟಿದ್ದಕ್ಕೆ ರವಿ ಹಂಜ್ ಯವರಿಗೆ ಆಭಾರಿಯಾಗಿದ್ದೇನೆ.
ಧನ್ಯವಾದಗಳು,
ಮಾಲಾ. ಮ. ಅಕ್ಕಿಶೆಟ್ಟಿ.
ಬೆಳಗಾವಿ.

No comments: