ಸಂವಿಧಾನ structure

 ಭಾರತ ಇಂದು ಎಡ ಬಲ ನಡುವೆ ಇಬ್ಭಾಗವಾಗಿರುವಾಗ

ಭಾರತೀಯ ಎಡ ಬಲ ಚಿಂತಕರು, ರಾಜಕಾರಣಿಗಳು, ನಾಗರೀಕರು ಅಸಲಿಗೆ ನೈಜ ಕಾಳಜಿಯಿದ್ದರೆ ಚಿಂತಿಸಬೇಕಾದ್ದು ದೇಶ -> ಉದ್ಘೋಷ -> ಸಂವಿಧಾನ -> ಕಾನೂನು -> ಆಡಳಿತ.


ಒಂದು ಕಂಪೆನಿ ಹೇಗೆ ಒಂದು ಮಿಷನ್ ಸ್ಟೇಟ್ಮೆಂಟ್ ಹೊಂದಿ ಅದಕ್ಕೆ ತಕ್ಕಂತೆ KPI ಗಳನ್ನು ಹಾಕಿಕೊಂಡು ಅದರ ಅನುಷ್ಠಾನಕ್ಕೆ ನಿಯಮಗಳನ್ನು, ಗುರಿಗಳನ್ನು ಹೊಂದಿರುತ್ತದೋ ಅದೇ ರೀತಿಯಲ್ಲಿ ಒಂದು ದೇಶ ಸಹ. ಹಾಗೆ ನೋಡಿದಾಗ ನಮ್ಮದು:


ದೇಶ - ಭಾರತ (Entity)

ಉದ್ಘೋಷ - ಸತ್ಯಮೇವ ಜಯತೆ (Mission)

ಸಂವಿಧಾನ - ಭಾರತೀಯ ಸಂವಿಧಾನ (KPI)

ಕಾಯ್ದೆ - ಇಂಡಿಯನ್ ಪೀನಲ್ ಕೋಡ್ ಯಾನೆ ಐಪಿಸಿ, ಆಸ್ತಿ ಕಾಯ್ದೆ, ಕಾಂಟ್ರಾಕ್ಟ್ ಕಾಯ್ದೆ, ಟ್ರಸ್ಟ್ ಕಾಯ್ದೆ, ಕೌಟುಂಬಿಕ ಕಾಯ್ದೆ, ಕಾರ್ಮಿಕ ಕಾಯ್ದೆ ಇತ್ಯಾದಿ (Goals, Regulations, Tool, Governance and Plans aligned to KPIs)

ಆಡಳಿತ - ಸಾಂವಿಧಾನಿಕ ಪ್ರಜಾಪ್ರಭುತ್ವ (Execution)


ಹೀಗೆ ಯಾವುದೇ ದೇಶದ ಸಂವಿಧಾನವು ಆ ದೇಶದ ಮೂಲಭೂತ ಕಾನೂನು ಆಗಿರುತ್ತದೆ. ಅದು ತನ್ನ ನಾಗರಿಕ ಸಂಹಿತೆಯನ್ನು ಪ್ರತಿನಿಧಿಸುತ್ತದೆ. ಅಲ್ಲದೆ ಆ ದೇಶದ ಆಡಳಿತವು ಜಾರಿಗೊಳಿಸುವ ಪ್ರತಿಯೊಂದು ಕಾನೂನುಗಳು ತನ್ನ ಸಂವಿಧಾನದ ಸಂಹಿತೆಯ ಪರಿಮಿತಿಗನುಗುಣವಾಗಿರಬೇಕು ಎಂದು ನಿರ್ದೇಶಿಸುತ್ತದೆ. ದೇಶದ ಎಲ್ಲಾ ಕಾನೂನುಗಳು ಸಂವಿಧಾನದ ಪರಿಮಿತಿಯೊಳಗಿರುವಂತೆ ನೋಡಿಕೊಳ್ಳುವುದು ಕೇಂದ್ರ ನ್ಯಾಯಾಂಗ ಸಮಿತಿಯ ಆದ್ಯ ಕರ್ತವ್ಯ. 


ಜಾಗತಿಕವಾಗಿ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಇಂತಹ ಸಾಂವಿಧಾನಿಕ ವ್ಯವಸ್ಥೆ ಇರುವಾಗ, ಪ್ರಪಂಚದ ಎಲ್ಲಾ ಸಂವಿಧಾನಗಳನ್ನೂ ಪರಾಮರ್ಶಿಸಿ ರಚಿಸಿರುವ ಭಾರತೀಯ ಸಂವಿಧಾನವನ್ನು ಭಾರತ ಹೇಗೆ ಅನುಷ್ಠಾನಗೊಳಿಸಿದೆ?


"ಸತ್ಯಮೇವಜಯತೆ" ಎಂಬ ಉದ್ಘೋಷ ಹೊತ್ತ ಭಾರತದ ಸಂವಿಧಾನ ಜನವರಿ ೨೬, ೧೯೫೦ ರಲ್ಲಿ ಅನುಷ್ಠಾನಕ್ಕೆ ಬಂದಿತು. ಜಗತ್ತಿನಲ್ಲೇ ಅತ್ಯಂತ ಉದ್ದದ ಸಂವಿಧಾನ ಎನಿಸಿರುವ ಭಾರತೀಯ ಸಂವಿಧಾನದ ಬಹುಪಾಲು ಆಡಳಿತಾತ್ಮಕ ಅಧ್ಯಾಯಗಳು "Government of India Act 1935" ನಿಂದ ನಕಲುಗೊಂಡಿದ್ದರೆ ಉಳಿದ ವಿಷಯಗಳನ್ನು ಪ್ರಪಂಚದ ಇತರೆ ಸಂವಿಧಾನಗಳಿಂದ ಪಡೆದುಕೊಳ್ಳಲಾಗಿದೆ. 


ಆದರೆ ಸಂವಿಧಾನಕ್ಕೆ ಮುಂಚೆಯೇ ಉರ್ಜಿತವಾಗಿದ್ದು ಮತ್ತು ಯಥಾವತ್ತಾಗಿ ಜಾರಿಯಿದ್ದ ಕಾಯ್ದೆಗಳು ಎಷ್ಟರ ಮಟ್ಟಿಗೆ ವಿಶ್ಲೇಷಣೆಗೊಂಡು ಸಂವಿಧಾನಕ್ಕೆ ಅದರ ರಚನೆಯಲ್ಲಿ ಸಂಯೋಜಿಸಲ್ಪಟ್ಟವು? ಅಥವಾ ನೂತನ ಸಂವಿಧಾನದ ಪರಿಮಿತಿಯೊಳಗೆ ಈ ಕಾಯ್ದೆಗಳು ಇರುವವು ಎಂದು ಹೇಗೆ ದೃಢೀಕರಿಸಲಾಯಿತು? 


ಹಾಗೆ ಜಾರಿಯಲ್ಲಿದ್ದ ಕ್ರಿಮಿನಲ್ ಕಾಯ್ದೆಗಳು ಬ್ರಿಟಿಷ್ ಭಾರತದಲ್ಲಿ ೧೮೬೨ ರಿಂದ ಐಪಿಸಿ ಕಾಯ್ದೆಗಳಾಗಿ ಜಾರಿಯಿದ್ದರೆ ಕಾಂಟ್ರಾಕ್ಟ್ ಕಾಯ್ದೆ ೧೮೭೨, ಆಸ್ತಿ ಕಾಯ್ದೆ ೧೮೮೨, ಟ್ರಸ್ಟ್ ಕಾಯ್ದೆ ೧೮೮೨, ಕೌಟುಂಬಿಕ ಕಾಯ್ದೆಯು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಎಂದು ೧೭೭೨ ರಿಂದಲೂ ಜಾರಿಯಲ್ಲಿವೆ. ಇನ್ನು ಕಾರ್ಮಿಕ ಕಾಯ್ದೆ, ತೆರಿಗೆ ಕಾಯ್ದೆ, ಕಂಪೆನಿ ಕಾಯ್ದೆಗಳು ಕಾಲಕ್ಕೆ ತಕ್ಕಂತೆ ಸ್ವತಂತ್ರ ಭಾರತದಲ್ಲಿ ರಚನೆಯಾಗಿವೆ.  


೨೦೧೯ರವರೆಗೆ ೭೮ ಬಾರಿ ವಿವಿಧ ಐಪಿಸಿ ಕಾಯ್ದೆಗಳು ತಿದ್ದುಪಡಿಗೊಂಡಿರುವಂತೆ ಸ್ವಾತಂತ್ರ್ಯಪೂರ್ವದ ಇತರೆ ಕಾನೂನುಗಳು ಸಹ ಕಾಲಕ್ಕೆ ತಕ್ಕಂತೆ ತಿದ್ದುಪಡಿಗಳನ್ನು ಹೊಂದಿದ್ದರೂ ಸಾಕಷ್ಟು ಮೂಲ ಸ್ವರೂಪಗಳು ಈ ಎಲ್ಲಾ ಕಾಯ್ದೆಗಳಲ್ಲಿ ಹಾಗೆಯೇ ಉಳಿದಿವೆ. ಆದರೆ ಮೂಲಭೂತವಾಗಿ ಈ ಎಲ್ಲಾ  ಸ್ವಾತಂತ್ರ್ಯಾಪೂರ್ವ ಮತ್ತು ಸ್ವಾತಂತ್ರೋತ್ತರ ಕಾನೂನುಗಳು ಸಂವಿಧಾನಕ್ಕನುಗುಣವಾಗಿ ಇರುವವೋ ಇಲ್ಲವೋ ಎಂದು ಯಾವುದಾದರೂ ಸಮಿತಿಗಳು ವರದಿ ಕೊಟ್ಟು ಪುರಸ್ಕರಿಸಿವೆಯೇ? 


ಸಂವಿಧಾನ ರಚನೆಯ ಕಾಲದಲ್ಲಿ ಪಿತ್ರಾರ್ಜಿತವಾಗಿ ಬಂದ ಈ ಬ್ರಿಟಿಷ್ ವಸಾಹತು ಕಾನೂನುಗಳು ಹೊಚ್ಚ ಹೊಸ ಪ್ರಜಾಪ್ರಭುತ್ವ ಭಾರತದ ಆಶಯಕ್ಕೆ ಮತ್ತು ಸಂವಿಧಾನಕ್ಕೆ ಹೊಂದುತ್ತವೆಯೇ ಎಂದು ಸಂವಿಧಾನ ರಚನೆಯ ತಂಡ, ಶಿಲ್ಪಿ, ಆಡಳಿತ ಕಂಡುಕೊಂಡಿತ್ತೆ??? ಗೊತ್ತಿಲ್ಲ. ಈವರೆಗಿನ ನನ್ನ ಶೋಧನೆಗೆ ಅಂತಹ ಸಂಗತಿ, ಮಾಹಿತಿ ಕಣ್ಣಿಗೆ ಬಿದ್ದಿಲ್ಲ. ನಾನಾಭಾಯ್ ಪಾಲ್ಕಿವಾಲಾರ we the people, we the nation ಪುಸ್ತಕಗಳು ಕೊಂಚ ಮಾಹಿತಿ ನೀಡಿದರೂ ಎಲ್ಲಾ ಕಾಯ್ದೆಗಳು ಪರಾಮರ್ಶನಗೊಂಡಿವೆ ಎಂದು ಖಚಿತಪಡಿಸವು.


ಒಂದು ವೇಳೆ ಸಮಿತಿಯೊಂದು ವರದಿ ಕೊಟ್ಟಿದ್ದರೂ ಅದು ಎಲ್ಲವನ್ನೂ ಪರಿಶೀಲಿಸಿತ್ತೆ? ಹಾಗೆ ಪರಿಶೀಲಿಸಿದ್ದರೆ ಮೋದಿ ಸರ್ಕಾರ ಇಂತಹ ಹತ್ತು ಹಲವಾರು ಕಾಯ್ದೆಗಳನ್ನು ಇತ್ತೀಚೆಗೆ ರದ್ದುಗೊಳಿಸುವ ಪ್ರಮೇಯಯೇ ಬರುತ್ತಿರಲಿಲ್ಲವಲ್ಲವೇ?! 


ಇವು ಓರ್ವ ಸಾಗರೋತ್ತರ  ಕುತೂಹಲಿ ನಾಗರಿಕನ ಪ್ರಶ್ನೆಗಳು.


ಆದರೆ ಅಂತಹ ಪ್ರಯತ್ನ ಆಗಿಯೇ ಇಲ್ಲವೇನೋ ಎನ್ನುವ ಸಂಶಯ ಸಾಕಷ್ಟು ಬಲವಾಗಿದೆ. ಏಕೆಂದರೆ ಸಂವಿಧಾನದ ಆಶಯಕ್ಕೂ ಮತ್ತು ಜಾರಿಯಲ್ಲಿರುವ ಕಾನೂನುಗಳ ನ್ಯಾಯ ನಿಯಮಕ್ಕೂ ಸಾಕಷ್ಟು ಅಭಾಸಗಳಿವೆ.


ಅಂತಹ ಒಂದು ಸಾಮಾನ್ಯ ಅಭಾಸದ ಉದಾಹರಣೆ ಹೀಗಿದೆ:


"ಸತ್ಯಮೇವ ಜಯತೆ" ಎಂಬ ಉದ್ಘೋಷ ಹೊತ್ತ ರಾಷ್ಟ್ರದ ಒಬ್ಬ ಘನವೆತ್ತ "ಜನ"ಪ್ರತಿನಿಧಿ ತನ್ನ ಸಂವಿಧಾನಕ್ಕೆ ವಿರುದ್ಧವಾಗಿ ಬಹುಪತ್ನಿತ್ವವನ್ನು ಪಾಲಿಸುತ್ತಿದ್ದರೆ ಅದನ್ನು ಆತನ ಪತ್ನಿಯರು ಮಾತ್ರ ಪ್ರಶ್ನಿಸಬೇಕೇ ಹೊರತು ಜನರು ಪ್ರಶ್ನಿಸುವಂತಿಲ್ಲ. ಇದು ಕೌಟುಂಬಿಕ ಕಾಯ್ದೆಯ ಒಂದು ನಿಯಮ. ಆ ಜನಪ್ರತಿನಿಧಿ ಜನರಿಂದಲೇ ಚುನಾಯಿತನಾಗಿದ್ದು, ಅಸಂವಿಧಾನಿಕ ನಡೆ ಹೊಂದಿದ್ದರೂ ಅದನ್ನು "ಜನ" ಪ್ರಶ್ನಿಸಲಾಗದಂತೆ ಈ ನಿಯಮ ಸಂವಿಧಾನಬಾಹಿರವಾಗಿದೆ. 


ಇಲ್ಲಿ ದೇಶದ ಮಿಷನ್ ಸ್ಟೇಟ್ಮೆಂಟ್ ಮತ್ತು ಸಂವಿಧಾನ ಎರಡನ್ನೂ ಈ ಕೌಟುಂಬಿಕ ಕಾಯ್ದೆ ಹೇಗೆ ಬಾಯಿ ಮುಚ್ಚಿಸಿದೆ ಎಂದು ಕಂಡುಕೊಳ್ಳಬಹುದು. ಇಂತಹ ಸಾವಿರಾರು ಅಭಾಸಗಳು ದೇಶ -> ಉದ್ಘೋಷ -> ಸಂವಿಧಾನ -> ಕಾನೂನು -> ಆಡಳಿತದಲ್ಲಿವೆ.


ಹೀಗಿದ್ದಾಗ ಸಂವಿಧಾನ ರಚನೆಯಲ್ಲಿ ಈ ಕಾಯ್ದೆಗಳನ್ನು ಗಮನದಲ್ಲಿಟ್ಟಕೊಳ್ಳಬೇಕಿತ್ತೋ ಅಥವಾ ಇದ್ದ ಕಾಯ್ದೆಗಳಿಗೆ ತಕ್ಕಂತೆ ಸಂವಿಧಾನ ರಚಿಸಬೇಕಿತ್ತೋ?!? ಐಪಿಸಿ ಸೇರಿ ಎಲ್ಲಾ ಸಮಗ್ರ ಕಾಯ್ದೆಗಳು ಸಮಗ್ರವಾಗಿ ತಿದ್ದುಪಡಿಯಾಗಬೇಕೊ ಅಥವಾ ಸಂವಿಧಾನ ಸಮಗ್ರವಾಗಿ ತಿದ್ದುಪಡಿಯಾಗಬೇಕೊ? ಇಂದು ಸಂವಿಧಾನ ಧರ್ಮಗ್ರಂಥವಾಗಿರುವಾಗ ಇಂತಹ ಆಮೂಲಾಗ್ರ ತಿದ್ದುಪಡಿ ಸಾಧ್ಯವೇ?!?


ಇತಿ ಸಂವಿಧಾನ ಸಂಪ್ರತಿ ಹೀ!!!!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: