೨೦೧೯ ರಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಬರಗೂರು ರಾಮಚಂದ್ರಪ್ಪ ಹೀಗೆ ಹೇಳಿದ್ದರು ಎಂದು ನವೆಂಬರ್ ೧೭ ೨೦೧೯ ರ ಪ್ರಜಾವಾಣಿಯಲ್ಲಿ ವರದಿಯಾಗಿದೆ.
ಬಂಡಾಯ ಸಾಹಿತ್ಯ ಸಂಘಟನೆ - ದಾವಣಗೆರೆ ಸಮ್ಮೇಳನ
ದಲಿತ ಫ್ಯಾಸಿಸಂ
ಫೇಸ್ಬುಕ್ ಸ್ನೇಹಿತರೊಬ್ಬರು ಒಂದು ಪೋಸ್ಟ್ ಹಂಚಿಕೊಂಡು ದಲಿತ ಫ್ಯಾಸಿಸಂ ಯಾ ದಲಿತರೊಳಗಿನ ಬ್ರಾಹ್ಮಣ್ಯದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಆಗ ನೆನಪಿಸಿಕೊಂಡದ್ದು....
ಈ ದಲಿತ ಫ್ಯಾಸಿಸಂ/ಬ್ರಾಹ್ಮಣ್ಯ ಇಂದು ನೆನ್ನೆಯದಲ್ಲ. ಮೀಸಲಾತಿಯ ಪ್ರಸ್ತಾವನೆ ಮಾಡುವಾಗ ಅಂಬೇಡ್ಕರ್ (ಬಲಗೈ) ಅವರು ಮುಂಬೈ ಚರ್ಮೋದ್ಯಮದಲ್ಲಿರುವ ಆರ್ಥಿಕ ಸದೃಢ ಮಾದಿಗ (ಎಡಗೈ) ಜನಾಂಗದವರನ್ನು ತೋರಿ ಮಾದಿಗರಿಗೆ ಮೀಸಲಾತಿ ಬೇಡ ಎಂದಿದ್ದರಂತೆ. ಇಲ್ಲಿ "ಅಂತೆ" ಎಂದಿರುವುದಕ್ಕೆ ಕಾರಣ ಇದನ್ನು ನಾನು ಒಂದು ಲೈಬ್ರರಿ ಆರ್ಕೈವ್ ನಲ್ಲಿ ಓದಿದ್ದೆ. ಅದು ಯಾವ ಪತ್ರಿಕೆ ಎಂದು ಮರೆತಿರುವ ಕಾರಣವಷ್ಟೆ. ಇಲ್ಲದಿದ್ದರೆ ಆ ಐವತ್ತರ ದಶಕದ ಹಳೆಯ ಪತ್ರಿಕಾ ವರದಿಯನ್ನು ಪುರಾವೆಯಾಗಿ ಹಾಕುತ್ತಿದ್ದೆ. ಬಾಬು ಜಗಜೀವನರಾಂ ಈ ಕುರಿತು ಮಾತನಾಡಿದ್ದರು ಎಂದು ನನ್ನ ಆತ್ಮೀಯ ದಲಿತ ನಾಯಕರು ವಿಚಾರಿಸಿದಾಗ ತಿಳಿಸಿದ್ದರು.
ಈ ಎಡ-ಬಲ ಸಂಘರ್ಷ ಎಲ್ಲೆಲ್ಲಿ ಎಡ ಬಲ ಎಂಬ ವಿಂಗಡನೆ ಇದೆಯೋ ಅಲ್ಲೆಲ್ಲಾ ಇದೆ. ಈ ಬಗ್ಗೆ ಮಾಹಿತಿ ಇರುವವರು ಹಂಚಿಕೊಳ್ಳಬಹುದು.
Anyway, shit is shit and it stinks even if almighty shits.
ವಿಶೇಷ ಸೂಚನೆ: ಇಲ್ಲಿ almighty ಎಂದರೆ ದೇವರೇ ಹೊರತು ಯಾವುದೇ ಜೀವಿಸಿದ್ದ, ಜೀವಿಸಿರುವ ವ್ಯಕ್ತಿಯಲ್ಲ.
#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ
60*40
ಡಾಲರ್ ಎದುರು ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದು ಕೇವಲ ರೂಪಾಯಿ vs ಡಾಲರ್ ಎನ್ನದೆ ಡಾಲರ್ ವಿರುದ್ಧ ಯುರೋ ಸಹ ಸಾಕಷ್ಟು ಕುಸಿದಿದೆ. ಒಂದು ವರ್ಷದ ಹಿಂದೆ ಒಂದು ಯುರೋಗೆ ಒಂದೂಕಾಲು ಡಾಲರ್ ಇದ್ದದ್ದು ಈಗ ಸಮವಾಗಿದೆ.
ಇದಕ್ಕೆ ಕಾರಣ ಅಮೆರಿಕಾದ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಇತರೆ ರಾಷ್ಟ್ರಗಳಿಗಿಂತ ತ್ವರಿತಗತಿಯಲ್ಲಿ ಏರಿಸುತ್ತಿರುವುದು. ಇದರಿಂದ ಯು.ಎಸ್ ಟ್ರೆಜರಿ ಬಾಂಡುಗಳು ಜಾಗತಿಕ ಹೂಡಿಕೆದಾರರಿಗೆ ಆಕರ್ಷಕ ಎನ್ನಿಸಿ ಡಾಲರ್ ಬೇಡಿಕೆ ಹೆಚ್ಚುತ್ತಿದೆ. ಅಮೆರಿಕಾದ ಹಣದುಬ್ಬರ ನಿಯಂತ್ರಣ ಪಾಲಿಸಿಗಳು ಅಲ್ಲಿನ ಹಣದುಬ್ಬರವನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರುತ್ತದೆ ಮತ್ತು ಡಾಲರ್ ಹೆಚ್ಚು ಲಾಭ ತರುತ್ತದೆ ಎಂದು ಡಾಲರ್ ಹೂಡಿಕೆದಾರರು ನಂಬಿದ್ದಾರೆ.
ಅಲ್ಲದೆ ಈ ವರ್ಷ ಯುರೋ ಬಳಕೆಯ ಹತ್ತೊಂಬತ್ತು ರಾಷ್ಟ್ರಗಳು ತೀವ್ರ ರಿಸೆಷನ್ ಗೆ ಒಳಗಾಗುತ್ತಿವೆ. ಇವುಗಳ ಮೈ ಹಣ್ಣಾಗುವಂತೆ ಯುಕ್ರೇನ್ ಯುದ್ಧ ಇಂಧನ ತೈಲದ ಬೆಲೆಯಿಂದ ಪೆಟ್ಟುಕೊಟ್ಟಿದೆ. ಈ ಜಾಗತಿಕ ಜಗತ್ತಿನಲ್ಲಿ ಭಾರತ ಕೂಡ ಇದಕ್ಕೆ ಹೊರತೇನೂ ಅಲ್ಲ.
ಡಾಲರ್ ಆಕರ್ಷಕ ಎನ್ನಿಸಿದ್ದರಿಂದಲೇ ಭಾರತದಲ್ಲಿ ಹೂಡಿದ್ದ ಹೂಡಿಕೆಯನ್ನು ವಿದೇಶಿ ಬಂಡವಾಳಗಾರರು ವಾಪಸ್ ಪಡೆಯುತ್ತಿದ್ದಾರೆ. ಇನ್ನು ಮೋದಿ ಆಡಳಿತದ ಆರ್ಥಿಕ ಸುಧಾರಣೆಗಳು ಏನೂ ಫಲ ಕೊಡದೆ ಉಕ್ರೇನ್ ಯುದ್ಧ ಸೃಷ್ಟಿಸಿದ ತೈಲ ಬಿಕ್ಕಟ್ಟಿನ ಜೊತೆಗೆ "ಆಷಾಢದಲ್ಲಿ ಅಧಿಕ ಮಾಸ" ಎಂಬಂತೆ ಈಗಾಗಲೇ ಚಾಲ್ತಿ ಖಾತೆ ಕೊರತೆ, ಕುಸಿಯುತ್ತಿರುವ ಜಿಡಿಪಿ, ವಿದೇಶಿ ಸಾಲದ ಅವಲಂಬನೆಯನ್ನು ಹೆಚ್ಚಿಸಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಕುರಿತು ಯಾವ ಕ್ರಮ ಕೈಗೊಳ್ಳುತ್ತದೆಯೋ ಗೊತ್ತಿಲ್ಲ. ಆದರೆ ಭಾರತೀಯ ರಿಯಲ್ ಎಸ್ಟೇಟಿನ ಆಮ್ಲೀಯ ಉಬ್ಬರದಂತೆ ವಿದೇಶಿ ವಿನಿಮಯ ಸಹ ಅದಕ್ಕೆ ತಕ್ಕಂತೆ ಉಬ್ಬರಿಸಿ ಡಾಲರ್ ಒಂದಕ್ಕೆ ಎಂಟುನೂರು ರೂಪಾಯಿಗಳಾಗಿ ಎಲ್ಲಾ ಅನಿವಾಸಿಗಳೂ ತಮ್ಮ ತಮ್ಮ ಮೂಲ ಊರಿನಲ್ಲಿ ಒಂದೊಂದು ೬೦*೪೦ ಮನೆ ಮಾಡಿಕೊಳ್ಳುವಂತಾಗಲು ಮೋದಿ, ರಾಹುಲ್, ದೇವೇಗೌಡ, ಮಮತಾ, ಸ್ಟಾಲಿನ್, ಸಿದ್ದರಾಮಯ್ಯ, ಎಡ-ಬಲ ಚಿಂತಕರು ಸಹಕರಿಸಿ "ವೈವಿಧ್ಯತೆಯಲ್ಲಿ ಏಕತೆ"ಯನ್ನು ಅನಿವಾಸಿಗಳನ್ನೂ ಒಳಗೊಂಡ ಬಾಬಾ ಸಾಹೇಬರ ಸಮಸಮಾಜದ ಕನಸನ್ನು ನನಸಾಗಿಸಲು ಸಹಕರಿಸಲಿ.
ಏಕೆಂದರೆ ಒಂದಾನೊಂದು ಕಾಲದ ಅನಿವಾಸಿಗಳಾಗಿದ್ದ ಗಾಂಧಿ, ನೆಹರೂ, ಜಿನ್ನಾ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರೆ, ಅದೇ ಒಂದಾನೊಂದು ಕಾಲದ ಅನಿವಾಸಿಯಾಗಿದ್ದ ರಾಜೀವ್ ಗಾಂಧಿ / ಸ್ಯಾಮ್ ಪಿತ್ರೋಡ ದೂರಸಂಪರ್ಕ ತಂತ್ರಜ್ಞಾನದಲ್ಲಿ ಕ್ರಾಂತಿ ಮಾಡಿದರು. ಆ ದೂರಸಂಪರ್ಕ ತಳಹದಿಯ ಮೇಲೆ ನೀಲೇಕಣಿ, ನಾರಾಯಣಮೂರ್ತಿ ಅಂತಹವರು ಮಾಹಿತಿ ತಂತ್ರಜ್ಞಾನದ ಹೆದ್ದಾರಿ ನಿರ್ಮಿಸಿದರು. ಅದೇ ಒಂದಾನೊಂದು ಕಾಲದ ಅನಿವಾಸಿ ಎಸ್ಸೆಂ ಕೃಷ್ಣ, ಖೇಣಿ ಬೆಂಗಳೂರನ್ನು ಸಿಂಗಾಪುರ ಮಾಡಿ ರಿಯಲ್ ಎಸ್ಟೇಟ್ ಕ್ರಾಂತಿಗೆ ಬುನಾದಿ ಹಾಕಿದರು. ಇಂತಪ್ಪ ಅನಿವಾಸಿಗಳಿಗೆ ಒಂದು "ಭಾಗ್ಯ" ಬೇಡವೇ?!? ಪುಕ್ಕಟೆ ಬೇಡ, ಡಾಲರ್ ಎಂಟುನೂರು ರೂಪಾಯಿಯಾಗಿ ಅನಿವಾಸಿಗಳು ನಿವಾಸ ಕಂಡುಕೊಳ್ಳುವಂತಾಗಲಿ.
#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ
ಶಿವಣ್ಣನವರ ಖುಷಿ
#ಅಮೆರಿಕದ_ಶಿಕಾಗೊ ನಗರದಲ್ಲಿ 20 ವರ್ಷಗಳಿಂದ ವಾಸವಾಗಿರುವ ಮೇನೇಜ್ಮೆಂಟ್ ಕಂಪ್ಯೂಟರ್ ತಜ್ಞ, ಸಾಹಿತಿ ಶ್ರೀ ರವಿ ಹಂಜ್ ಅವರ ಮನೆಗೆ ಇತ್ತೀಚೆಗೆ ನಾನು ನನ್ನ ಹೆಂಡತಿ ಹೋಗಿಬಂದೆವು.
30.9.2018 ರಂದು ಬೆಂಗಳೂರು ಗಾಂಧಿ ಭವನದಲ್ಲಿ ಸಮಾಜಮುಖಿ ಪ್ರಕಾಶನದ ರವಿ ಹಂಜ್ ಅವರ ಮೊದಲ ಕೃತಿ "ಹುಯೆನ್ ತ್ಸಾಂಗನ ಮಹಾಪಯಣ" ಬಿಡುಗಡೆ ಸಮಾರಂಭದಲ್ಲಿ ಮೂರ್ನಾಲ್ಕು ನಿಮಿಷದ ಮೊದಲ ಭೇಟಿ. ನಂತರ ಫೇಸ್‌ಬುಕ್ ಬರಹಗಳ ಮೂಲಕ ಸ್ನೇಹ ಮುಂದುವರಿಕೆ.
ಎರಡನೇ ಭೇಟಿ: ಶಿಕಾಗೊಗೆ ನಾನು ಬರುವ ವಿಚಾರ ಅವರಿಗೆ ವೈಯಕ್ತಿಕವಾಗಿ ತಿಳಿಸಿರಲಿಲ್ಲ. ನಾನು ಅಮೆರಿಕಕ್ಕೆ ಬಂದಿರುವ ವಿಚಾರ ಫೇಸ್‌ಬುಕ್ ನಿಂದ ತಿಳಿದು ಅವರು ಮೆಸೇಜ್ ಮಾಡಿದರು. ಮಗಳು ಅಳಿಯ ಮೊಮ್ಮಕ್ಕಳ ಜೊತೆಗೆ ಮನೆಗೆ ಬರಲು ನಮ್ಮನ್ನು ಆಮಂತ್ರಿಸಿದರು. ಒಂದೇ ಕುಟುಂಬ ಇದ್ದಂತೆ, ಯಾವುದೇ ಸಂಕೋಚವಿಲ್ಲದೆ ಬರಬೇಕೆಂದರು. ಕಾರಣಾಂತರದಿಂದ ತಡವಾಯಿತು. ಮತ್ತೆ ಅವರದೇ ಮೆಸೇಜ್ "ನಮ್ಮ ಕಡೆ ಯಾವಾಗ ಪ್ರಯಾಣ?"
ಮನೆಯಲ್ಲಿ ಒಂದೂವರೆ ತಿಂಗಳ ನಮ್ಮ ಮೊಮ್ಮಗಳು ಇರುವುದರಿಂದ ನಮ್ಮ ಮಗಳು ಅಳಿಯ ಬರಲಿಲ್ಲ. ನಾನು ನನ್ನ ಪತ್ನಿ ಕ್ಯಾಬ್_ನಲ್ಲಿ ರವಿಯವರ ಮನೆಗೆ ಹೋದೆವು.
ರವಿ ಮತ್ತು ಅವರ ಪತ್ನಿ ಬಹಳ ಆತ್ಮೀಯತೆಯಿಂದ ನಮ್ಮನ್ನು ಬರಮಾಡಿಕೊಂಡರು. ಹಂಜ್ ದಂಪತಿಗೆ ಒಬ್ಬ ಮಗ. ವಿದ್ಯಾಭ್ಯಾಸ ಮುಗಿಸಿ ಈಗ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ.
ರವಿಯವರು ಮೂಲತಃ ದಾವಣಗೆರೆಯವರು. ಸುಮಾರು 25 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ರವಿ ಹಂಜ್ ದಂಪತಿಗೆ ಅಮೆರಿಕದ ಐಟಿ ಕಂಪನಿಯೊಂದರಲ್ಲಿ ಕೆಲಸ ಸಿಕ್ಕ ರೀತಿ, ಬೆಂಗಳೂರಿನಿಂದ ಅಮೆರಿಕಕ್ಕೆ ಪ್ರಯಾಣ ಮಾಡಿದ ಸಂದರ್ಭ ಬಹಳ ವಿಶೇಷವಾಗಿದೆ ಮತ್ತು ಸ್ವಾರಸ್ಯಕರವಾಗಿದೆ.
'ತೀರ್ಥ ಪ್ರಸಾದ'ದ ಜೊತೆಗೆ ಅಮೆರಿಕದ ಶಿಕ್ಷಣ ಪದ್ಧತಿ, ಆರೋಗ್ಯ ನೀತಿ, ಕೃಷಿರಂಗ, ರಾಜಕಾರಣ - ಚುನಾವಣೆಗಳು, ಆಡಳಿತ ವ್ಯವಸ್ಥೆ, ನ್ಯಾಯಾಂಗ, ತೆರಿಗೆ, ಗನ್ ವಯಲೆನ್ಸ್, ಇತ್ಯಾದಿ ಬಗ್ಗೆ ನನ್ನ ತಿಳುವಳಿಕೆ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಮಾತುಕತೆ ನಡೆಯಿತು. ಚರ್ಚೆಯಲ್ಲಿ ದಾವಣಗೆರೆಯ ಹಳೆಯ ನೆನಪುಗಳು ಸಹಾ ಬಂದವು (ನಾನು 6 ವರ್ಷ- 1974-76 & 2006-10 ರಲ್ಲಿ
ವಿದ್ಯಾಭ್ಯಾಸ ಮತ್ತು ಕಾರ್ಯನಿಮಿತ್ತ ದಾವಣಗೆರೆಯಲ್ಲಿದ್ದೆ- ಆಗ ರವಿಯವರ ಪರಿಚಯವಿರಲಿಲ್ಲ)
ನಂತರ ಊಟೋಪಚಾರ! ರವಿಯವರ ಪತ್ನಿ ಶುದ್ಧ ಸಸ್ಯಾಹಾರಿ.
ರವಿಯವರೇ ತಯಾರಿಸಿದ ಚಿಕನ್ ಮಸಾಲ ಬಹಳ ರುಚಿಯಾಗಿತ್ತು! ಅಮೆರಿಕದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಕೊಡಗಿನ ಅವರ ಸ್ನೇಹಿತರ ಮಗಳು ಬಂದಿದ್ದರು. ಅವರು ಕೊಡಗಿನ ಒಂದೆರಡು ರುಚಿಕಟ್ಟಾದ ಭಕ್ಷ್ಯಗಳನ್ನು ಉಣಬಡಿಸಿದರು. ಹಾಗೂ ಕೊಡಗಿನ ಜೀವನಶೈಲಿಯ ಕೆಲವು ವಿವರಗಳನ್ನು ಸ್ವಾರಸ್ಯಕರವಾಗಿ ಹಂಚಿಕೊಂಡರು.
ಹಾಗೆಯೇ ರವಿಯವರೊಂದಿಗೆ ಮಧ್ಯಾಹ್ನ ಹಸಿರು ಗಿಡಮರಗಳ ಮಧ್ಯೆ ಒಂದಷ್ಟು ದೂರ ವಿಹಾರ. ಹತ್ತಿರದ ಪ್ರಾಥಮಿಕ ಶಾಲೆಯ ದರ್ಶನ ಮಾಡಿಸಿದರು.
ರವಿ ಹಂಜ್ ಅವರು ಇದುವರೆಗೆ #ಐದು_ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ.
1.ಹುಯೇನ್ ತ್ಸಾಂಗನ ಮಹಾಪಯಣ 2.ಅಗಣಿತ ಅಲೆಮಾರಿ
3.ರ ಠ ಈ ಕ 4.ಭಾರತ ಮರುಶೋಧ 5.ಬಸವರಾಜಕಾರಣ
ಪ್ರೀತಿ ವಿಶ್ವಾಸದಿಂದ ಮೂರು ಪುಸ್ತಕಗಳನ್ನು ನನಗೆ ನೀಡಿದರು.
ಫೇಸ್‌ಬುಕ್ ನಲ್ಲಿ ರವಿಯವರ ಹೆಚ್ಚಿನ ಬರಹಗಳು ಭಾರತದ ಪ್ರಸಕ್ತ ವಿದ್ಯಮಾನಗಳ ಆಗುಹೋಗುಗಳ ಬಗ್ಗೆ ಅವರ ಅನಿಸಿಕೆಗಳು, ವಿಶ್ಲೇಷಣೆಗಳು. ಕಾಮೆಂಟ್_ಗಳಿಗೆ ಅವರ ಕ್ಷಿಪ್ರ ಪ್ರತಿಕ್ರಿಯೆಗಳು ನೇರ ನಿಷ್ಠುರ ವ್ಯಂಗ್ಯ ತುಂಟತನಗಳ ಸಮ್ಮಿಶ್ರಣ!
ಕೆಲವೊಮ್ಮೆ ಎಡದವರನ್ನು ಕೆಲವೊಮ್ಮೆ ಬಲದವರನ್ನು ಕೆಲವೊಮ್ಮೆ ಎಡಬಲ ಇಬ್ಬರನ್ನೂ ಸೇರಿಸಿ ಟೀಕೆ ಟಿಪ್ಪಣಿ ಮಾಡುತ್ತಾರೆ. ಅವರ ಫೇಸ್‌ಬುಕ್ ಟ್ಯಾಗ್ ಲೈನ್ ವಿಶೇಷವಾಗಿದೆ. ದಾವಣಗೆರೆಯ ವಿಶಿಷ್ಟ ಜವಾರಿ ಭಾಷೆಯನ್ನು ನಿಸ್ಸಂಕೋಚವಾಗಿ ಸರಾಗವಾಗಿ ಉಪಯೋಗಿಸುತ್ತಾರೆ.
ಫೇಸ್‌ಬುಕ್ ನಲ್ಲಿನ ಅವರ ಕೆಲವು ಬರಹ ಪ್ರತಿಕ್ರಿಯೆಗಳ ಧಾಟಿ ಬಲು ಬಿರುಸು! ಅವರು ತುಂಬಾ ಜೋರು ವ್ಯಕ್ತಿ ಎಂಬ ಭಾವನೆ ಬರುತ್ತದೆ. ಆದರೆ ಅವರನ್ನು ಭೇಟಿಯಾದ ನಂತರ ನನ್ನ ಅಭಿಪ್ರಾಯ ಬದಲಾಯಿತು. ರವಿಯವರು ಸ್ನೇಹಮಯಿ. ಮಾತು ನಿರರ್ಗಳ, ಆದರೆ ಸೌಮ್ಯ! ಎಷ್ಟೋ ವರ್ಷಗಳ ಆತ್ಮೀಯ ಸ್ನೇಹಿತರ ಒಡನಾಟದಂತಿತ್ತು ಅವರೊಂದಿಗಿನ ಚೇತೋಹಾರಿ ಮಾತುಕತೆ.
ಇನ್ನೂ ಮಾತುಕತೆ ಮುಂದುವರೆಸುವ ಇಚ್ಚೆಯಿತ್ತು. ಆದರೆ ಸಮಯವಿರಲಿಲ್ಲ. ರವಿ ಹಂಜ್ ಅವರು ತಮ್ಮ ಕಾರಿನಲ್ಲಿ ನಮ್ಮನ್ನು ಮನೆಯವರಿಗೆ ಬಂದು ಬಿಟ್ಟು ಹೋದರು. ಇದು ಅವರ ದೊಡ್ಡತನ. ರವಿ ಹಂಜ್ ದಂಪತಿಗಳ ಮನೆಗೆ ಭೇಟಿ, ಅವರೊಂದಿಗಿನ ಮಾತುಕತೆ, ಅವರ ಸೌಜನ್ಯ ಅತಿಥಿ ಸತ್ಕಾರ ಸದಾ ನಮ್ಮ ನೆನಪಿನಲ್ಲುಳಿಯುವ ಸಂಗತಿಗಳು. ಅವರಿಗೆ ಅನಂತ ಧನ್ಯವಾದಗಳು.
Sarcasm
ಒಂದು ವಿಷಯ ಯಾ ವ್ಯಕ್ತಿಯ ಮೂರ್ಖತನವನ್ನು ವಿಡಂಬನಾತ್ಮಕವಾಗಿ ಅಣಕವಾಡಿ ಅಥವಾ ಅವಹೇಳಿಸುವುದನ್ನು "ವ್ಯಂಗೋಕ್ತಿ" ಎನ್ನುತ್ತಾರೆ. ಇದು ಸಾಹಿತ್ಯದಲ್ಲಿ ಒಂದು ಪ್ರಮುಖ ಪ್ರಕಾರ. ಇಂಗ್ಲಿಷ್ ಸಾಹಿತ್ಯ ಅದರಲ್ಲೂ ಬ್ರಿಟಿಷ್ ಇಂಗ್ಲಿಷ್ ಸಾಹಿತ್ಯದಲ್ಲಿ ಈ ಪ್ರಕಾರವು ಹೆಚ್ಚು ಪ್ರಚಲಿತವಾಗಿದೆ. ಇದು ಕುಚೋದ್ಯದ ಹಾಸ್ಯ ಎನಿಸಿದರೂ ಈ ಪ್ರಕಾರವು ಸಂದೇಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಓದುಗರಿಗೆ ತಲುಪಿಸುತ್ತದೆ. ಇದು ಸಾಹಿತ್ಯದ ಒಂದು ತಂತ್ರ ಮಾಧ್ಯಮವಾಗಿ ಬರಹಗಾರನ ಕೋಪ, ಹತಾಶೆ, ಜುಗುಪ್ಸೆ, ಕುಚೋದ್ಯಗಳು ನವಿರು ಅಥವಾ ಗಾಢ ಹಾಸ್ಯದ ಲೇಪನದೊಂದಿಗೆ ಪ್ರಚಲಿತ ಸಾಮಾಜಿಕ, ರಾಜಕೀಯ ಅಥವಾ ಇನ್ಯಾವುದೇ ವಿದ್ಯಮಾನಗಳ ಕುರಿತಾದ ಕಟು ವಿಮರ್ಶೆಯನ್ನು ಒಳಗೊಂಡಿರುತ್ತದೆ. ಇಂಗ್ಲಿಷಿನಲ್ಲಿ ವ್ಯಂಗೋಕ್ತಿಯನ್ನು sarcasm ಎನ್ನುತ್ತಾರೆ. ಲ್ಯಾಟಿನ್ ಪದ sarcasmos ಮತ್ತು ಗ್ರೀಕ್ ಪದ sarkasmos ಎರಡರಿಂದಲೂ ಬಂದಿರುವ ಈ ಎರಡೂ ಭಾಷೆಗಳಲ್ಲಿ ಈ ಪದವು "ಚರ್ಮ ಸುಲಿಯುವುದು", "ರೋಷದಿಂದ ತುಟಿ ಕಚ್ಚುವುದು", "ಕುಹಕ ನಗೆ" ಎಂಬ ಅರ್ಥ ಹೊಂದಿದೆ. ಕ್ರಿ.ಶ. ೧೫೫೦ರಿಂದಲೂ ಈ ಪ್ರಕಾರವು ಪಾಶ್ಚಿಮಾತ್ಯ ಸಾಹಿತ್ಯದಲ್ಲಿ ಬಳಕೆಯಲ್ಲಿದೆ.
ನನ್ನ ಫೇಸ್ಬುಕ್ ಪೋಸ್ಟುಗಳು ಸಹ ಈ ರೀತಿಯ ಭಾರತದ ಸಾಮಾಜಿಕ, ರಾಜಕೀಯ ಮತ್ತಿತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ವಿಡಂಬನಾತ್ಮಕ ಬರಹಗಳು. ಸಾಕಷ್ಟು ಭಾರತೀಯ ಶ್ರೀಸಾಮಾನ್ಯರು ನನ್ನ ಬರಹಗಳನ್ನು ಇದೇ ಅರ್ಥದಲ್ಲಿ ಸ್ವೀಕರಿಸಿದರೂ ಅನೇಕ ಸಾಹಿತಿಗಳು, ಪತ್ರಕರ್ತರು, ಚಿಂತಕರು, ಸಾಕ್ಷಿಪ್ರಜ್ಞೆಗಳು, ಕನ್ನಡ ಸಂಶೋಧನ ಪಿಹೆಚ್ದಿ ಮತ್ತು ಸ್ನಾತಕೋತ್ತರ ಪದವೀಧರರು ಇವುಗಳನ್ನು ಗ್ರಹಿಸುವಲ್ಲಿ ಸೋತು ಅಥವಾ ಸೋತಂತೆ ನಟಿಸಿ ನನ್ನನ್ನು ಬಲವೆಂದು, ಎಡವೆಂದು, ನಡುವೆಂದು, ಮೋಜುಗಾರನೆಂದು, ವಿಲಾಸಿಯೆಂದು, ವಿದೇಶಿಯೆಂದು ಇತ್ಯಾದಿಯಾಗಿ ಬ್ರ್ಯಾಂಡ್ ಮಾಡುತ್ತಿದ್ದಾರೆ. ನಾನು ಈ ಮೇಲಿನ ಯಾವುದೋ ಕೇವಲ ಒಂದು ಮಾತ್ರವಲ್ಲದೆ ಎಲ್ಲವೂ ಆಗಿರುವ ಓರ್ವ ಶ್ರೀಸಾಮಾನ್ಯ ಮಾತ್ರ ಆಗಿರುತ್ತೇನೆ. ದಯಮಾಡಿ ನನ್ನನ್ನು ಹಳೇ ಮೈಸೂರು ಕಡೆ "ಪುಕ್ಸಟ್ಟೆ ತು... ಎಂದರೆ ಮೈತುಂಬಾ ತು..." ಎನ್ನುವಂತೆ ಮೈತುಂಬಾ ಇರುವವನೆಂದು ಗ್ರಹಿಸದೆ 'ಇರುವಲ್ಲಿ ಎಲ್ಲರಂತೆ ಒಂದೇ ಇರುವವ' ಎಂದು ಪರಿಗಣಿಸಬೇಕಾಗಿ ವಿನಂತಿಸುವೆ. ನಾನು ವಿಡಂಬನೆಯನ್ನು ಕೇವಲ ಜಾಗೃತಿ ಮೂಡಿಸುವ ಒಂದು ತಂತ್ರವಾಗಿ ನೋಡುತ್ತೇನೆಯೇ ಹೊರತು ಇನ್ನೇನಾಗಿಯೂ ಅಲ್ಲ.
ಬ್ರಿಟಿಷ್ ಹಾಸ್ಯಗಾರ ರಿಕಿ ಜೆರ್ವೈಸ್ ಹೇಳುವಂತೆ ನಾನು ಸಹ ಬ್ರಿಟಿಷರು ಈ ಸಾಹಿತ್ಯ ಪ್ರಕಾರವನ್ನು ಕತ್ತಿ ಮತ್ತು ಗುರಾಣಿಯಾಗಿ ಸದಾ ಬಳಸುವಂತೆ ಬಳಸುತ್ತೇನೆ. ನಮ್ಮ ಚಿಂತಕರು ಹೇಗೆ ಸಂವಿಧಾನ, ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಹಿಂದುತ್ವ, ಫ್ಯಾಸಿಸಂ, ಜಾತ್ಯಾತೀತ, ಅಸ್ಮಿತೆ, ಸೆಕ್ಯುಲರ್ ಇತ್ಯಾದಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪದಕೋಶವನ್ನು ಕತ್ತಿ, ಗುರಾಣಿಯಾಗಿ ಬಳಸುವರೋ ಹಾಗೆ!
#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ
ಸಂವಿಧಾನ VS ಸಂವಿಧಾನ
ಅತ್ಯಂತ ಹಳೆಯ (ಕ್ರಿ. ಶ. ೧೭೮೯) ಮತ್ತು ಚಿಕ್ಕದಾಗಿ ಸುಮಾರು ೪,೪೪೦ ಪದಗಳಲ್ಲಿ ಜೇಮ್ಸ್ ಮ್ಯಾಡಿಸನ್ ಬರೆದ ಸಂವಿಧಾನ, ಅಮೇರಿಕನ್ ಸಂವಿಧಾನ! ೨೭ ಬಾರಿ ತಿದ್ದುಪಡಿಗೊಂಡ ಈ ಸಂವಿಧಾನ ಅಮೇರಿಕಾವನ್ನು ಇತರೆ ದೇಶಗಳಿಂದ "ದೊಡ್ಡಣ್ಣ" ಎನ್ನಿಸಿದೆ.
ಸವಾಲೊಂದು ನಿನ್ನ ಮ್ಯಾಲ ಶಾಹೀರಕೆ...
ಸವಾಲೊಂದು ನಿನ್ನ ಮ್ಯಾಲ ಶಾಹೀರಕೆ...
ಆರ್.ಎಸ್.ಎಸ್ ಆಳ ಮತ್ತು ಅಗಲ
ನಾನು ಜಾಗತಿಕವಾಗಿ ಚಾಲನೆಯಲ್ಲಿರುವ ಉದಾರವಾದ ಚಿಂತನೆಯ ಕಟ್ಟಾ ಅಭಿಮಾನಿ. ಇದನ್ನು ಜಾಗತಿಕವಾಗಿ ಎಡ-ಚಿಂತನೆ ಎನ್ನುತ್ತಾರಾದರೂ ಅದು ಭಾರತೇತರದ ಎಡ-ಚಿಂತನೆ ಎಂದೇ ಸ್ಪಷ್ಟ ಪಡಿಸಬೇಕು! ಏಕೆಂದರೆ ಭಾರತದ ಎಡ-ಚಿಂತನೆ ಸದ್ಯಕ್ಕೆ ಅಲ್ಲಿನ ಬಲದಷ್ಟೇ ಉಗ್ರ, ನಿಕೃಷ್ಟ ಮತ್ತು ಯಕಶ್ಚಿತ! ಇಂತಹ ಉಗ್ರ ಮತ್ತು ನಿಕೃಷ್ಟ ಎಡ ಪಂಥವನ್ನು ಜಗತ್ತಿನ ಯಾವುದೇ ಉದಾರವಾದಿ ಒಪ್ಪುವುದಿಲ್ಲ.
ಪುಸ್ತಕ ಲೋಕದ ಕೆಜಿಎಫ್
ಪುಸ್ತಕ ಲೋಕದ ಕೆಜಿಎಫ್ ಎಂದೇ ಖ್ಯಾತವಾದ "ಅರ್ ಎಸ್ ಎಸ್: ಆಳ - ಅಗಲ" ಕೃತಿಯು ನನ್ನಂತಹ ಬೇವರ್ಸಿ ಬಿಕನಾಸಿ ಅನಿವಾಸಿಯನ್ನೂ ವಾಟ್ಸಾಪ್ ಮೂಲಕ ಪಿಡಿಎಫ್ ಆಗಿ ತಲುಪಿದೆ. ಇದು ಪೈರಸಿಯೋ ಅಥವಾ ಉದ್ದೇಶಪೂರ್ವಕವಾಗಿ ಹಂಚಿಕೆಯಾಗಿದೆಯೋ ಗೊತ್ತಿಲ್ಲ.