ಭಾವಿ ಪ್ರಧಾನಿಗಳ "ಸಂಪತ್ತು ಮರುಹಂಚಿಕೆ"

 ಈಗ ಕಾಂಗ್ರೆಸ್ಸಿನ ಭಾವಿ ಪ್ರಧಾನಿಗಳು "ಸಂಪತ್ತು ಮರುಹಂಚಿಕೆ" ಯಾನೆ Wealth Redistribution ಬಗ್ಗೆ ಫರ್ಮಾನು ಹೊರಡಿಸಿದ್ದಾರೆ. ಇದರ ಒಂದಂಶ ಪಿತ್ರಾರ್ಜಿತ ಆಸ್ತಿಯ ನಲವತ್ತು ಚಿಲ್ಲರೆ ಭಾಗ ಸರ್ಕಾರಕ್ಕೆ ಸಲ್ಲಬೇಕು ಎನ್ನುವುದು ಅತ್ಯಂತ ಸಮಂಜಸ ಸಾಮಾಜಿಕ ನ್ಯಾಯ ಸಿದ್ಧಾಂತವಾಗಿದೆ. ಈ ಅಂಶವನ್ನು ನನ್ನದೇ ನೆರೆಹೊರೆಯ ಸ್ಯಾಮ್ ಪಿತ್ರೋಡ ಅವರ ಮೂಲಕ ಹೇಳಿಸಿದ್ದಾರೆ. ಅಮೇರಿಕಾದಲ್ಲಿ ಯಾವುದೇ ಫೆಡರಲ್ ತೆರಿಗೆ ಇಲ್ಲದೆ ಸುಮಾರು ನೂರಹತ್ತು ಕೋಟಿ ರೂಪಾಯಿಯಷ್ಟು ಪಿತ್ರಾರ್ಜಿತ ಆಸ್ತಿಯನ್ನು ಹೊಂದಬಹುದು. ಅದಕ್ಕಿಂತ ಹೆಚ್ಚಾದರೆ ತೆರಿಗೆ ಕಟ್ಟದೆ ಪಡೆದುಕೊಳ್ಳಲು ಟ್ರಸ್ಟ್ ರೂಪದ ಹಲವು ಮಾರ್ಗೋಪಾಯಗಳಿವೆ. ಇರಲಿ, ಒಟ್ಟಾರೆ ಸಾಮಾಜಿಕ ನ್ಯಾಯಕ್ಕಾಗಿ ಪಿತ್ರಾರ್ಜಿತ ಆಸ್ತಿ ತೆರಿಗೆ ಅವಶ್ಯ ಎಂದು ಕಾಂಗ್ರೆಸ್ ಪಕ್ಷ ನಿರ್ಧರಿಸಿರುವುದು ಅತ್ಯಂತ ಸ್ವಾಗತಾರ್ಹ. ಆದರ್ಶ ಉದಾರವಾದಿಯಾದ ನಾನು ಇದನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.


ಇಂತಹ ಸಾಮಾಜಿಕ ನ್ಯಾಯವನ್ನು ಯಾವುದೇ ಅಧಿಕಾರವಿಲ್ಲದೆ ಕೇವಲ ಆದರ್ಶದ ಮೇಲೆ ಮಹಾತ್ಮ ಗಾಂಧಿ, ವಿನೋಬಾ ಭಾವೆ ಮುಂತಾದ ಸಾಮಾಜಿಕ ನಾಯಕರು ಜನರನ್ನು ಒಲಿಸಿ ಜನರ ಆಸ್ತಿಯನ್ನು ಸಮಾಜಕ್ಕೆ ಕೊಡಿಸಿದ ಇತಿಹಾಸವೇ ನಮ್ಮಲ್ಲಿದೆ. ಇವರ ಕರೆಗೆ ಓಗೊಟ್ಟು ಅನೇಕರು ತಮ್ಮ ಆಸ್ತಿಯನ್ನು ಸಮಾಜಕ್ಕೆ ಧಾರೆ ಎರೆದುದನ್ನು ನೀವೆಲ್ಲರೂ ಕೇಳಿದ್ದೀರಿ, ಓದಿದ್ದೀರಿ. ಭಾವೆಯವರ ಭೂದಾನ ಕರೆ ದೇಶವನ್ನೇ ಸಂಚಲಿಸಿದ್ದಿತು.


ಮಾನ್ಯ ರಾಹುಲ್ ಗಾಂಧಿಯವರು ಅಧಿಕಾರಕ್ಕೆ ಬರುತ್ತಾರೋ ಇಲ್ಲವೋ ಅದನ್ನು ಬದಿಗಿರಿಸಿ ಆ ಮಹನೀಯರುಗಳಂತೆ ಈ ಸಿದ್ಧಾಂತ ಮತ್ತು ಸಾಮಾಜಿಕ ನ್ಯಾಯವನ್ನು ಸ್ವಯಂ ಆಗಿ ಮತ್ತು ತಮ್ಮ ಪಕ್ಷದ ಮುಖಂಡರಲ್ಲಿ ಅಳವಡಿಸಲು ಅವರಿಗೆ ಯಾವುದೇ ಅಭ್ಯಂತರ ಇಲ್ಲ. ಅದಕ್ಕೆ ಯಾವ ಅಧಿಕಾರವೂ ಬೇಕಿಲ್ಲ.


ಹಾಗಾಗಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ತಮ್ಮ ಪಿತ್ರಾರ್ಜಿತ ಆಸ್ತಿಯ ನಲವತ್ತು ಚಿಲ್ಲರೆ ಪ್ರತಿಶತ ಭಾಗವನ್ನು ದೇಶಕ್ಕೆ ಸಮರ್ಪಿಸದಿದ್ದರೂ ಕನಿಷ್ಠ ಪಕ್ಷ ಕಾಂಗ್ರೆಸ್ ಪಕ್ಷದ ಚುನಾವಣಾ ಅಭ್ಯರ್ಥಿಗಳು ತಾವು ಘೋಷಿಸಿಕೊಂಡಿರುವ ತಮ್ಮ ಆಸ್ತಿಯ ನಲವತ್ತು ಚಿಲ್ಲರೆ ಭಾಗವನ್ನು ರಾಷ್ಟ್ರಕ್ಕೆ ಸಮರ್ಪಿಸಿ ಒಂದು ಮೇಲ್ಪಂಕ್ತಿ ಹಾಕಿದರೆ ಅವರ ಪಕ್ಷದ ಎಲ್ಲಾ ಅಭ್ಯರ್ಥಿಗಳೂ ಪ್ರಚಂಡ ಬಹುಮತದಿಂದ ಗೆಲ್ಲುತ್ತಾರೆ. ತಮ್ಮ ಹೆಸರಿನಲ್ಲಿರುವ ಗಾಂಧಿ ಮಹಾತ್ಮರಂತೆ ರಾಹುಲ್ ಮಹಾತ್ಮರೆನಿಸಿ ತಮ್ಮ ಪಕ್ಷದ ಅಭೂತಪೂರ್ವ ಗೆಲುವಿನ ರೂವಾರಿಯಾಗುತ್ತಾರಲ್ಲದೆ ಮೋದಿ ಎಂಬ ಮಾಯೆಯ ಅಣುರೇಣುತೃಣ ಛಾಯೆಯೂ ಇರದಂತೆ ಮೋಡಿಯನ್ನು ಮಾಯವಾಗಿಸಬಲ್ಲರು.


ಅವರ ಪಕ್ಷದವರು ಹೇಳುವ "ದೇಶಕ್ಕೆ ಅಂಟಿದ ಶನಿ"ಯನ್ನು ರಾಹುಲ್ ಬಾಬಾ ತಮ್ಮ ಸಿದ್ಧಾಂತ ಬದ್ಧತೆ ಮೆರೆದು, "ನುಡಿದಂತೆ ನಡೆದ ಸರ್ಕಾರ ನಮ್ಮದು" ಎನ್ನುವ ಉದ್ಘೋಷದ ಪಕ್ಷವನ್ನು ದೆಹಲಿಯಲ್ಲಿ ಪ್ರತಿಷ್ಠಾಪಿಸಿದರೆ.....ಆಹಾ!!! ನ ಭೂತೋ ನ ಭವಿಷ್ಯತೋ....ಭಾರತ ಭಾಗ್ಯ ವಿಧಾತ ಹ!!!!


ಬಾಬಾ ಸಂಚಲಿಸುವರೋ?! ಸ್ಖಲಿಸುವರೋ?!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: