ಕೊಳ್ಳೆಯಾಳ್ವಿಕೆ ಸಾಂವಿಧಾನಿಕ-ಪ್ರಜಾಪ್ರಭುತ್ವ

 ಯಾವ ಕೊಳ್ಳೆಯಾಳ್ವಿಕೆ (ರಾಜಪ್ರಭುತ್ವ)ಯನ್ನು ವಿರೋಧಿಸಿ ಪ್ರಜಾಪ್ರಭುತ್ವ ಸ್ಥಾಪನೆವಾಯಿತೋ ಅಂತಹ "ಸಾಂವಿಧಾನಿಕ" ಪ್ರಜಾಪ್ರಭುತ್ವವು ಕೊಳ್ಳೆಯಾಳ್ವಿಕೆ ವ್ಯಕ್ತಿಗಳ ಜಯಂತಿಯನ್ನು ಸರ್ಕಾರಿ ವೆಚ್ಚದಲ್ಲಿ ಆಚರಿಸುವುದು ಅಸಂವಿಧಾನಿಕವಾಗಬೇಕು. ಆದರೆ "ಓಟಿಗಾಗಿ ಓಲೈಕೆ" ಹಿಡಿದಿರುವ ಸಂವಿಧಾನ ಶಿಶುಗಳು ಸಂಖ್ಯಾಜಾತಿಬಲ ಇರುವ ಯಕಶ್ಚಿತ್ ಕೊಳ್ಳೆಯಾಳ್ವಿಕೆ ವ್ಯಕ್ತಿಗಳ ಜಯಂತಿ ಆಚರಿಸಿ ಆಯಾಯ ಜಾತಿಪೀಠಿಗಳ ಆದರಿಸಿ ಆಹ್ವಾನಿಸಿ ಓಲೈಸಿ ಮೆರೆಸಿದಾಗ ಸಾಮಂತನು ಚಕ್ರವರ್ತಿಯಾಗಲೇಬೇಕು.

ಮತ್ತೊಮ್ಮೆ, "ತಲೆಗಿಂತ ತ₹$ ದಪ್ಪ" ಎಂಬುದು ಸಾಂವಿಧಾನಿಕ-ಪ್ರಜಾಪ್ರಭುತ್ವ-ಸ್ಥಾಪಿತ ಘನ ಸರ್ಕಾರದ ಸಕಲ ಸರ್ಕಾರಿ ಮಾರ್ಯಾದೆಗಳೊಂದಿಗೆ ಸಾಬೀತಾಯಿತು.
ವಿ. ಸೂ.: ಕೊಳ್ಳೆಯಾಳ್ವಿಕೆ - ಎಲ್ಲರ ಕನ್ನಡ, ರಾಜಪ್ರಭುತ್ವ - ಸಾಂಸ್ಕೃತಿಕ ಕನ್ನಡ

Darshan and Renukaswamy

 ಲೈಂಗಿಕ ಕಿರುಕುಳ ಒಂದು ಅಪರಾಧ. ಇದನ್ನು ಪ್ರತ್ಯಕ್ಷವಾಗಿ (reality), ಅಥವಾ ಕಾರ್ಯತಃ ದಿಟವಾಗಿ (virtual online) ಮಾಡಿದ್ದರೂ ಇದೊಂದು ಗುರುತರ ಅಪರಾಧ.

ಅದೇ ರೀತಿ ಕೊಲೆ ಸಹ ಒಂದು ಅಪರಾಧ. ಸದ್ಯಕ್ಕೆ ಇದನ್ನು ದಿಟವಾಗಿ ಮಾಡಬಹುದಷ್ಟೇ ಎಂದಾದರೂ, ಕಾರ್ಯತಃ ದಿಟವಾಗಿ ಕಿರುಕುಳ ಕೊಟ್ಟು ಓರ್ವ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ಮೂಲಕ ಸಹ "ಕೊಲೆ" ಮಾಡಬಹುದು.
ಸದ್ಯದ ಕರ್ನಾಟಕದ ಮಾಧ್ಯಮ-ಕೇಂದ್ರಿತ ಪ್ರಕರಣದಲ್ಲಿ ಲೈಂಗಿಕ ಕಿರುಕುಳಿಯೊಬ್ಬ ಕೊಲೆಯಾಗಿದ್ದಾನೆ. ಕೊಲೆಯ ಆರೋಪ ಹೊತ್ತವರು ಬಂಧನಕ್ಕೊಳಗಾಗಿ ವಿಚಾರಣೆಯಲ್ಲಿದ್ದಾರೆ. ಕೊಲೆಯ ಪ್ರಮುಖ ಆರೋಪಿ ಓರ್ವ ತಾರೆ ಎಂಬ ಕಾರಣಕ್ಕಾಗಿ ಈ ಪ್ರಕರಣ ಜಗಮಗಿಸುತ್ತಿದೆ. ಈ ಜಗಮಗ ಪ್ರಕರಣದ ಕುರಿತು ಮಾತ್ರವಾಗಿದ್ದರೆ ಸಾಕಿತ್ತು. ಆದರೆ ಕೊಲೆಯಾದ ಲೈಂಗಿಕ ಕಿರುಕುಳಿಯ ಎಲ್ಲಾ ಅಪರಾಧಗಳನ್ನು ಪೀಠಾಧಿಪತಿಗಳು ಪಾದೋದಕದಲ್ಲಿ ತೊಳೆದು ಮುಕ್ತಿ ಕೊಟ್ಟಿದ್ದಾರೆ. ರಾಜಕಾರಣಿಗಳು ಲಕ್ಷ ಲಕ್ಷ ಪರಿಹಾರ ಕೊಟ್ಟಿದ್ದಾರೆ. ಚಲನಚಿತ್ರಿಗರು ಕ್ಷಮೆ ಯಾಚಿಸಿದ್ದಾರೆ, ಜನ ಉಧೋ ಉಧೋ ಎನ್ನುತ್ತಾ ಕಿರುಕುಳಿಯ ಪತ್ನಿಗೆ ಸರ್ಕಾರಿ ಹುದ್ದೆ ಕೇಳುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಾಡಿನ ಮುಖ್ಯಮಂತ್ರಿ ಮೃತನ ತಂದೆತಾಯಿಯನ್ನು ಭೇಟಿ ಮಾಡಿ ಆ ಕುರಿತು ಭರವಸೆ ನೀಡಿದ್ದಾರೆ. ಧಾರ್ಮಿಕರೆನಿಸಿದ ಕಿರುಕುಳಿಯ ಪೋಷಕರು ತಮ್ಮ ಪುತ್ರನ ಕಾರ್ಯದ ಬಗ್ಗೆ ಯಾವ ನೈತಿಕತೆಯ ಅಳುಕಿಲ್ಲದೆ ಸೊಸೆಗೆ ಸರ್ಕಾರಿ ಉದ್ಯೋಗ ಕೇಳುತ್ತಿದ್ದಾರೆ. ಸದ್ಯದಲ್ಲೇ ಸ್ಮಾರಕವೊಂದನ್ನು ನಿರ್ಮಿಸಿದರೂ ಆಶ್ಚರ್ಯವಿಲ್ಲ! ಎಲ್ಲಾ ಲೈಂಗಿಕ ಕಿರುಕುಳಿಯ ಸ್ಥಳ ಮಹಿಮೆ. ಇತಿಹಾಸ ಪುನರಾವರ್ತಿತ!
ಇಷ್ಟೆಲ್ಲಾ ಏಕೆ?????? ಸಾಂವಿಧಾನಿಕ ನ್ಯಾಯಾಂಗವು ತನ್ನ ಕರ್ತವ್ಯವನ್ನು ಮಾಡುತ್ತಿಲ್ಲವೇ!
ಇಲ್ಲಿ ಕಿರುಕುಳಿಯ ಅಸಹಾಯಕ ಪತ್ನಿಯಂತೆಯೇ ರಾಜ್ಯದಲ್ಲಿ ಕೊಲೆಗೆ ಈಡಾದವರ ಕುಟುಂಬಗಳಿಗೂ ಇದೇ ರೀತಿಯ ಸ್ಪಂದನೆ ಸಿಕ್ಕಿದೆಯೇ?!? ಅಂತಹ ಯಾವುದೇ ಪರಿಹಾರಾತ್ಮಕ ಸ್ಪಂದನೆಯನ್ನು ಸಿವಿಲ್ ದಾವೆ ಮೂಲಕ ಕೊಲೆ ಮಾಡಿದವನ ಕಡೆಯಿಂದ ಹಕ್ಕಿನಿಂದ ವಸೂಲಿ ಮಾಡಿಸಿಕೊಡುವುದು ನ್ಯಾಯ ಎನಿಸುತ್ತದಲ್ಲವೇ?
ಒಟ್ಟಾರೆ, ಇದೆಲ್ಲವೂ ಸಮಾಜದ ನೈತಿಕತೆಯ ಪರಮೋಚ್ಚ ಅಧಃಪತನವಲ್ಲದೆ ಇನ್ನೇನೂ ಅಲ್ಲ.
ಯಾವ ದೇಶದಲ್ಲಿ ನೈತಿಕತೆ ಇಷ್ಟರ ಮಟ್ಟಿಗೆ ಕುಸಿದು ಅಲ್ಲಿನ ಜನ/ಜಾತಿ ಸಂಘಟನೆಗಳು, ಸ್ವಾಮಿಗಳು, ಪೀಠಾಧಿಪತಿಗಳು, ರಾಜಕಾರಣಿಗಳು, ಆಡಳಿತ ಪಕ್ಷ, ವಿರೋಧಪಕ್ಷಗಳ ಧುರೀಣರು ಒಟ್ಟಾಗಿ ಹೀಗೆ ಒಬ್ಬ ಲೈಂಗಿಕ ಕಿರುಕುಳಿಯ ಅಪರಾಧವನ್ನು ಮರೆಸಿ ಹುತಾತ್ಮನನ್ನಾಗಿಸಿ ಮಾನವೀಯತೆಯ ಹೆಸರಿನಲ್ಲಿ ಮೆರೆಸುವರೋ ಅಂತಹ ದೇಶದ ಭವಿಷ್ಯ, ಶೂನ್ಯ!
ಶೂನ್ಯವನ್ನು ಕಂಡುಹಿಡಿದ ಆಧ್ಯಾತ್ಮಿಕ ವಿಶ್ವಗುರುವಿನ ಸಾಮಾಜಿಕ ನೈತಿಕಮಾಪನ ಶೂನ್ಯವನ್ನು ದಾಟಿ ಋಣಾತ್ಮಕ ಪಾತಾಳದಲ್ಲಿದೆ. ನೈತಿಕತೆಯು ಸಮಗ್ರವಾಗಿ ಪಾತಾಳದಲ್ಲಿರುವಾಗ ನಾವು ಯಾವ ಆಧ್ಯಾತ್ಮದ ಬಗ್ಗೆ ಹೆಮ್ಮೆ ಪಡಬೇಕಿದೆ?!

Postmortem - GST

 ರಾಜ್ಯದಲ್ಲಿ ಸಂಗ್ರಹಿಸುವ GST ಯ ೫೦% ರಾಜ್ಯದ್ದಾದರೆ, ೫೦% ಕೇಂದ್ರದ್ದು. ಕೇಂದ್ರದ ಭಾಗದ ೪೨% ಭಾಗ ಎಲ್ಲಾ ರಾಜ್ಯಗಳ ಅಭಿವೃದ್ಧಿಗೆ ಹಣಕಾಸು ಆಯೋಗದ ನಿರ್ದೇಶನದಂತೆ ಒಂದು ಸಾಮೂಹಿಕ ಖಾತೆಗೆ ಹೋಗುತ್ತದೆ. ಇದನ್ನು ಹೇಗೆ ವ್ಯಯಿಸಬೇಕು ಎಂಬುದನ್ನು ನಿರ್ಧರಿಸುವುದು ಸಹ ಅದೇ ಹಣಕಾಸು ಆಯೋಗ ಯಾನೆ वित्त आयोग ಯಾನೆ Finance Commission. ಇದು ಒಂದು ಸಾಂವಿಧಾನಿಕ ಸಂಸ್ಥೆ.

ಅಂಬೇಡ್ಕರ್ ಹೇಗೆ ಹಿಂದುಳಿದವರಿಗೆ ಮೀಸಲಾತಿ ಕೊಟ್ಟು ಸಮಾನತೆ ತಂದರೋ, ಸಿದ್ಧರಾಮಯ್ಯ ಹೇಗೆ ಅಹಿಂದದವರಿಗೆ ಸೌಭಾಗ್ಯಗಳನ್ನು ಕೊಟ್ಟರೋ ಅದೇ ರೀತಿ ಹಣಕಾಸು ಆಯೋಗ ರಾಜ್ಯಗಳಿಗೆ ತನ್ನ "ಹಿಂದುಳಿದ/ಮುಂದುವರಿದ" ಸೂತ್ರದ ಅನ್ವಯ ಹಣ ಕೊಡಿಸುತ್ತದೆ. ಇದನ್ನು ಸಿದ್ದರಾಮಯ್ಯ ಅಂಡ್ ಕಂಪೆನಿ ಮತ್ತು ಅವರ ಪಕ್ಷದ ಭಾವಿ ಪ್ರಧಾನಿ ಎನ್ನುವ ರಾಹುಲ್ ಹೇಗೆ ರಾಜ್ಯದ ನೂರು ರುಪಾಯಿ ತೆರಿಗೆಯಲ್ಲಿ ಕೇವಲ ೧೩ ರುಪಾಯಿ ಅಷ್ಟೇ ವಾಪಸ್ ಬರುತ್ತಿದೆ ಎನ್ನುತ್ತಿದ್ದಾರೆ?!?!
ಅಂದರೆ "ಹಿಂದುಳಿದ/ಮುಂದುವರಿದ" ಎಂದು ನೋಡದೆ ಹಣಕಾಸು ಆಯೋಗ ಎಲ್ಲಾ ರಾಜ್ಯಗಳಿಗೂ ಸಮಾನವಾಗಿ ಹಂಚಬೇಕು ಎನ್ನುವುದು ಇವರ ವಾದವಾದರೆ, ಅದು ಅಂಬೇಡ್ಕರ್ ಅವರ ಸಾಂವಿಧಾನಿಕ ಮೀಸಲಾತಿ ಮತ್ತು ಇವರದೇ ಪಕ್ಷದ ಸಿದ್ಧಾಂತಗಳಿಗೆ ತದ್ವಿರುದ್ಧ.
ಈ ವಾಸ್ತವಿಕ ಅಂಶದ ಮೂಲಕ ನೋಡಿದರೆ, ಯಾರು ಸಂವಿಧಾನ ವಿರೋಧಿಗಳು? ಯಾರು ಮೀಸಲಾತಿ ವಿರೋಧಿಗಳು? ಯಾರು ಅಹಿಂದ ವಿರೋಧಿಗಳು?
ಹೀಗೆ ರಾಜಾರೋಷವಾಗಿ ಸುಳ್ಳನ್ನು ನೂರು ಬಾರಿ ಸತ್ಯವೆಂದು ಹೇಳುವ, ಬುದ್ಧಿಜೀವಿಗಳು ಹೀಯಾಳಿಸುವ "ಗೋಬೆಲ್ಸ್" ತಂತ್ರವನ್ನು ಅವರ ಆರಾಧ್ಯ ದೈವವೇ ಬಳಸಿ ಇತರರ ಮೇಲೆ ಗೂಬೆ ಕೂರಿಸುತ್ತಿರುವಾಗ, ಇದನ್ನೆಲ್ಲಾ ವಿವರಿಸುವ ಜಾಣತನ ಬಿಜೆಪಿಗರಲ್ಲಿ ಇದೆಯೇ?!?!
ಖಂಡಿತವಾಗಿ ಇಲ್ಲ. ಏಕೆಂದರೆ ರಾಜ್ಯದ ಕಾಂಗ್ರೆಸ್ಸಿಗರು ಬಿಜೆಪಿಗರು ಎಲ್ಲರೂ ಕೇವಲ ಪಂಚಾಯಿತಿ ಸದಸ್ಯರಾಗಬಲ್ಲ ಅರ್ಹತೆ ಉಳ್ಳವರು. ಇಂಥವರು ರಾಜ್ಯದ ಮುಖ್ಯಮಂತ್ರಿ, ಮಂತ್ರಿ ಎಲ್ಲಾ ಆದರೆ ಏನಾಗುವುದೋ ಅದೇ ರಾಜ್ಯದಲ್ಲಿ ಕಳೆದ ಐವತ್ತು ವರ್ಷದಿಂದ ಆಗುತ್ತಿರುವುದು. ಇನ್ನು ಬುದ್ದಿಜೀವಿಗಳ ಗೋಬೆಲ್ಸ್, ನೆರೂಡ, ಕಾಫ್ಕಾ ಉಲ್ಲೇಖ..... ವಾಡ್ಕಾ (ವೋಡ್ಕಾ - ಅವಾರ್ಡು) ಅಂಡ್ ಸಿಲೋಡ್ಕಾ(ಮೀನು - ಪ್ರಾಧಿಕಾರ)!
ಏಕೆಂದರೆ,
ಶಿವನಿಗೈದು ಮುಖ, ಭಕ್ತನಿಗೈದು ಮುಖ.
ಆವುವಾವುವೆಂದರೆ:
ಗುರುವೊಂದು ಮುಖ, ಲಿಂಗವೊಂದು ಮುಖ, ಜಂಗಮವೊಂದು ಮುಖ,
ಪಾದೋದಕವೊಂದು ಮುಖ, ಪ್ರಸಾದವೊಂದು ಮುಖ.
ಇಂತೀ ಪಂಚಮುಖವನರಿಯದ
ವೇಶಿ, ದಾಸಿ, ಸುಂಕಿಗ, ಮಣಿಹಗಾರ, ವಿದ್ಯಾವಂತ
ಇಂತೀ ಐವರಿಗೆ ಲಿಂಗವ ಕಟ್ಟಿದಡೆ
ಗುಡಿಯ ಮುಂದಣ ಶೃಂಗಾರದ ಗಂಟೆ, ಎಮ್ಮೆಯ ಕೊರಳಗಂಟೆ
ಕೊಟ್ಟಿಯ ಮೆಳೆಯೊಳಗೆ ಇಟ್ಟು ಸಿಕ್ಕಿದ ಕಲ್ಲು !
ಲಿಂಗ ವಿಭೂತಿ ರುದ್ರಾಕ್ಷಿ ಇವ ಮಾರಾಟಕ್ಕೆ ಹೇರಿಕೊಂಡು ತಿರುಗುವ
ಎತ್ತು ಕತ್ತೆಗೆ ಮುಕ್ತಿಯುಂಟೆ ? ಕೂಡಲಚೆನ್ನಸಂಗಮದೇವಾ
--- ಚನ್ನಬಸವಣ್ಣ
ಇಷ್ಟೇ, ಇಷ್ಟೇ, ಇಷ್ಟೇ, ಭಾರತೀಯ ಪ್ರಜಾಪ್ರಭುತ್ವ!

ಗೋಮುಖವ್ಯಾಘ್ರ ಊಳಿಗಮಾನ ಪ್ರಜಾಪ್ರಭುತ್ವದ Prajwal

 ಒಬ್ಬ ಸಾಮಾನ್ಯ ರೈತನ ಮಗನನ್ನು ಪ್ರಧಾನಿ ಮಾಡಿದ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಅಂಬೇಡ್ಕರ್ ವಿರಚಿತ ಸಾಂವಿಧಾನಿಕ ಗಣತಂತ್ರವು ಆತನ ಮೊಮ್ಮಗನ ಲೈಂಗಿಕ ದೌರ್ಜನ್ಯಗಳಿಗೆ ತನ್ನ ನ್ಯಾಯಾಂಗದಡಿ "ವಿಚಾರಿಸಿ" ಶಿಕ್ಷೆ ವಿಧಿಸಬಲ್ಲುದೆ?!?

ಮೇಟಿ, ಜಾರಕಿಹೊಳಿ, ಬ್ಲೂಬಾಯ್ಸ್ ಇತ್ಯಾದಿ ಏನಾದರೆಂದು ಇಲ್ಲಿ ಪರಾಂಭರಿಸಬಹುದು.
ಭಾರತೀಯ ಸಾಂವಿಧಾನಿಕ ವ್ಯವಸ್ಥೆಯು ಯಾವ ಊಳಿಗಮಾನ ವ್ಯವಸ್ಥೆಯನ್ನು ವಿರೋಧಿಸಿ ಪ್ರಜಾಪ್ರಭುತ್ವವನ್ನು ಅಳವಡಿಸಿದ್ದೇನೆನ್ನುತ್ತದೋ ಅದೇ "ಊಳಿಗಮಾನ ವ್ಯವಸ್ಥೆ"ಯು ಪ್ರಜಾಪ್ರಭುತ್ವವನ್ನು ಕಾಸಿಗಾಗಿ ಓಟು, ವಂಶಪಾಪಂಪರಿಕ ಟಿಕೆಟ್ ಹಂಚಿಕೆ ಇತ್ಯಾದಿಯಿಂದ ತನ್ನ ಶೃಂಗಾರಾಭರಣವಾಗಿಸಿ ಈಗಾಗಲೇ ಸಾಂವಿಧಾನಿಕ ಆಶಯವನ್ನು ಅಣಕವಾಗಿಸಿದೆ.
ಈ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆಯನ್ನು ವಿಧಿಸಿದರೂ / ವಿಧಿಸದಿದ್ದರೂ ಈ ಘಟನೆಯು ಊಳಿಗಮಾನ ಭಾರತೀಯ ಪ್ರಜಾಪ್ರಭುತ್ವದ ಮುಕುಟಕ್ಕೆ ಕೋಹಿನೂರ್ ವಜ್ರವಾಗಲಿದೆ. ಏಕೆಂದರೆ ಈಗಾಗಲೇ ಸಾಕಷ್ಟು ಅಸಂವಿಧಾನಿಕ ಬಹುಪತ್ನಿತ್ವ, ಲೈಂಗಿಕ ದೌರ್ಜನ್ಯ/ಕಿರುಕುಳ, ಕುರ್ಚಿಗಾಗಿ ಕಾಮ, ಉದ್ಯೋಗಕ್ಕಾಗಿ ಸಂಭೋಗ, ಪದೋನ್ನತಿಗಾಗಿ ರತಿದಾಸ್ಯದ ಪಕ್ಷಾತೀತ ಮಣಿಗಳು ಆಗಲೇ ಈ ಮುಕುಟಮಣಿಯನ್ನು ಅಲಂಕರಿಸಿವೆ. ಈಗ ಒಂದೊಮ್ಮೆ ಪ್ರಜಾಪ್ರಭುತ್ವದ ಅತ್ಯುನ್ನತ ಸ್ಥಾನವಾದ ಪ್ರಧಾನಿ ಹುದ್ದೆಯನ್ನು ಹೊಂದಿದ ವ್ಯಕ್ತಿಯ ಮೊಮ್ಮಗನ ಪ್ರಕರಣ "Icing on the Cake" ಎನ್ನುವಂತಾಗಲಿದೆ.
ಈ ಪ್ರಕರಣದ ಆರೋಪಿಯ ಹೆಸರಲ್ಲೇ ಊಳಿಗಮಾನ ಪದವಾದ "ಗೌಡ" ಎಂದಿರುವುದು ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿನ ಗೋಮುಖವ್ಯಾಘ್ರ ಊಳಿಗಮಾನ ಪ್ರಜಾಪ್ರಭುತ್ವದ ಗಮ್ಯದ ಹೊಳಹಾಗಿದೆ. ಇದು ಹಾಸನದ ಹಾರನಹಳ್ಳಿ ಕೋಡಿಮಠದ ಹೊತ್ತುಗೆಯಲ್ಲಿಯೂ ಇದೆ. ಚೆನ್ನಬಸವಣ್ಣನ ಕಾಲಜ್ಞಾನ ವಚಗಳಲ್ಲೂ ಇದೆ.
ಓದಿ ಅರ್ಥೈಸುವ ಕಾಲಜ್ಞಾನಿ ಮಾತ್ರ ಅಲ್ಲಿಲ್ಲ, ಇಲ್ಲಿದ್ದಾನೆ!

"ಲುಕ್ಔಟ್ ನೋಟಿಸ್"

 ಭೂಪಾಲ್ ಅನಿಲ ದುರಂತದ ಆರೋಪಿ ವಾರೆನ್ ಆಂಡರ್ಸನ್ "ಲುಕ್ಔಟ್ ನೋಟಿಸ್" ಮೀರಿ ದೇಶ ಬಿಟ್ಟು ಪರಾರಿಯಾದದ್ದು ಕಾಂಗ್ರೆಸ್ ಆಡಳಿತದ ಕಾಲದಲ್ಲಿ.

ಬೋಫೋರ್ಸ್ ಹಗರಣದ ಆರೋಪಿ ಒತ್ತಾವಿಯೋ ಕ್ವತ್ರಾಚಿ "ಲುಕ್ಔಟ್ ನೋಟಿಸ್" ಮೀರಿ ದೇಶ ಬಿಟ್ಟು ಪರಾರಿಯಾದದ್ದು ಕಾಂಗ್ರೆಸ್ ಆಡಳಿತದ ಕಾಲದಲ್ಲಿ.
ಇವೆರಡೂ ಅತ್ಯಂತ ಗುರುತರ ಕ್ರಿಮಿನಲ್ ಕೇಸುಗಳು.
ಈಗ ಪ್ರಜ್ವಲ್ ರೇವಣ್ಣ ಚುನಾವಣೆ ಆದ ಮರುದಿನ ದೇಶ ಬಿಟ್ಟು ಹೋಗಿದ್ದಾನೆ.
ಆತ ದೇಶ ಬಿಟ್ಟು ಹೋಗುವಾಗ ಆತನನ್ನು ತಡೆಯಲು ಅವನ ಮೇಲೆ ಯಾವುದೇ ಕೇಸು ದಾಖಲಾಗಿರಲಿಲ್ಲ. ಅವನನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ತಡೆಯಲು ಬೇಕಾದ ಪೊಲೀಸರ "ಲುಕ್ಔಟ್ ನೋಟಿಸ್" ಸಹ ಜಾರಿಯಾದದ್ದು ಇಂದು ಮೇ ಎರಡರಂದು, ಆತ ಹೋಗಿ ಒಂದು ವಾರದ ನಂತರ.
ಹೀಗಿದ್ದಾಗ ಕೇವಲ ಟಿವಿ ನೋಡಿ, ಸುದ್ದಿ ಕೇಳಿ ಮೋದಿ, ಶಾಗಳು ಜೇಮ್ಸ್ ಬಾಂಡ್ ರೀತಿ ಬೆನ್ನತ್ತಿ ಓಡಿಹೋಗಿ ಪ್ರಜ್ವಲನನ್ನು ಬಂಧಿಸಬೇಕಿತ್ತೆ?!?
ಇಂತಹ ಊಹಾಪೋಹದ ಸಂಕಥನವನ್ನು ಪೋಣಿಸುವ ರಾಜ್ಯದ ಮುಮ, ಉಮುಮ, ಗೃಹ, ಎಕ್ಸೆಟ್ರಾ, ಎಕ್ಸೆಟ್ರಾ,
ಎಕ್ಸೆಟ್ರಾಗಳು, "ಕುಣಿಯಲಾರದವಳು ನೆಲ ಡೊಂಕು ಅಂದಳಂತೆ" ಎಂದಂತೆ ಎನ್ನುತ್ತಿರುವುದು ಏಕೆ?!? ಇವರಿಗೆ ತಕ್ಕ ಹಿಮ್ಮೇಳ, ಕರುಣಾಜನಕ ಸಂಕಥನದ ಬುದ್ಧಿಜೀವಿಗಳು ಊಳಿಡುತ್ತಿರುವುದು ಏಕೆ?!
ಏಕೆಂದರೆ ಕೇವಲ ಪಂಚಾಯಿತಿ ಸದಸ್ಯರಾಗಬಲ್ಲ ಅರ್ಹತೆ ಉಳ್ಳ ಇಂಥವರು ರಾಜ್ಯದ ಮುಖ್ಯಮಂತ್ರಿ, ಮಂತ್ರಿ ಎಲ್ಲಾ ಆದರೆ ಏನಾಗುವುದೋ ಅದೇ ರಾಜ್ಯದಲ್ಲಿ ಆಗುತ್ತಿರುವುದು. ಹಾಗೆಯೇ, ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಎಲ್ಲಾ ವಿಷಯದಲ್ಲೂ ಪರಿಣಿತಿ ಪಡೆದಿರುವ ರೆಡಿ ರಾಮ್ ಮ್ಯಾನ್ ಕೃಪಾಪೋಷಿತ ಚಿಂತಕರು!!!
ಇಷ್ಟೇ ಇಷ್ಟೇ ಇಷ್ಟೇ.
ಇದೆಲ್ಲವನ್ನೂ ಮೀರಿ ಆರೋಪಗಳು ಸಾಬೀತಾಗಿ ನ್ಯಾಯ ದೊರಕಲಿ ಎಂಬುದು ಒಂದು ಮರೀಚಿಕೆ.

ಕೋವಿಡ್ ವ್ಯಾಕ್ಸಿನ್ನುಗಳ "ಉಪ"ದ್ರವಗಳು

 ಅಮೇರಿಕಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ಪ್ರಕಾರ ಈವರೆಗಿನ ಎಲ್ಲಾ ಕಂಪೆನಿಗಳ ಕೋವಿಡ್ ವ್ಯಾಕ್ಸಿನ್ನುಗಳ "ಉಪ"ದ್ರವಗಳು ಹೀಗಿವೆ:

ಅನಾಫಿಲ್ಯಾಕ್ಸಿಸ್: ಉರಿಯೂತ ಅಲರ್ಜಿ. ಇದು ಕೇವಲ ಕೋವಿಡ್ ಅಲ್ಲದೆ ಎಲ್ಲಾ ರೀತಿಯ ವ್ಯಾಕ್ಸಿನ್ನುಗಳಿಗೂ ಅನ್ವಯ.
ಗಿಲಿಯನ್ ಬಾರ್ ಕುರುಹು : ಸ್ನಾಯು ಸೆಳೆತ, ಪಾರ್ಶ್ವವಾಯು. ಸಾಮಾನ್ಯವಾಗಿ ಐವತ್ತಕ್ಕಿಂತ ಹೆಚ್ಚಿನ ವಯೋಮಾನದವರಲ್ಲಿ ಕಂಡಿದೆ. ಇದು ಫೈಝರ್ ಅಥವಾ ಮೋಡರ್ನಾ ವ್ಯಾಕ್ಸಿನ್ ಹಾಕಿಸಿಕೊಂಡವರಲ್ಲಿ ಕಂಡಿದೆ.
ಮೈಯೋಕಾರ್ಡೈಟಿಸ್ ಮತ್ತು ಪೆರಿಕಾರ್ಡೈಟಿಸ್ ಕುರುಹು: ಹೃದಯದ ತೊಂದರೆ. ಹದಿನೆಂಟರಿಂದ ಮೂವತ್ತು ವಯಸ್ಸಿನ ಒಳಗಿನವರಲ್ಲಿ ಕಂಡಿದೆ. ಇದು ಮೋಡರ್ನಾ ವ್ಯಾಕ್ಸಿನ್ ಹಾಕಿಸಿಕೊಂಡವರಲ್ಲಿ ಕಂಡಿದೆ.
ತ್ರಾಂಬಾಸಿಸ್ ತ್ರಾಂಬೋಸೈಟೋಪೆನಿಯಾ ಕುರುಹು: ದೊಡ್ಡ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ,
ಪ್ಲೇಟ್ಲೆಟ್ಸ್ ಕ್ಷೀಣವಾಗುವುದು. ಇದು ಜೆ ಅಂಡ್ ಜೆ ವ್ಯಾಕ್ಸಿನ್ ಹಾಕಿಸಿಕೊಂಡವರಲ್ಲಿ ಕಂಡಿದೆ.
ಈಗ ಈ ತ್ರಾಂಬಾಸಿಸ್ ಕುರುಹೇ ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡವರಲ್ಲಿ ಕಂಡಿರುವುದು ಮತ್ತು ಅದನ್ನು ಆಸ್ಟ್ರಾಜೆನಿಕಾ ಒಪ್ಪಿಕೊಂಡಿರುವುದು. ಮಾನ್ಯತೆ ಸಿಕ್ಕ ಮೊದಲ ವರ್ಷ ಎರಡು ಶತಕೋಟಿ ವ್ಯಾಕ್ಸಿನ್ನುಗಳನ್ನು ಆಸ್ಟ್ರಾಜೆನಿಕಾ ಹಂಚಿದೆ. ಈಗ ಸದ್ಯಕ್ಕೆ ಐವತ್ತೊಂದು ಜನರು ದಾವೆ ಹೂಡಿದ್ದಾರೆ.
ಇನ್ನು ಈ ಎಲ್ಲಾ ಕುರುಹುಗಳೂ ವ್ಯಾಕ್ಸಿನ್ ಹಾಕಿಸಿಕೊಂಡ ಹತ್ತು ಲಕ್ಷ ಜನರಲ್ಲಿ ಐದರಿಂದ ಹತ್ತರಷ್ಟು ಜನರಿಗೆ ಅಡ್ಡ ಪರಿಣಾಮವಾಗಿ ಕಾಣಿಸಿಕೊಂಡಿವೆ ಮತ್ತು ವ್ಯಾಕ್ಸಿನ್ ಹಾಕಿಸಿಕೊಂಡ ಕೆಲ ವಾರಗಳಲ್ಲೇ ಅಂಥವರಲ್ಲಿ ಕಾಣಿಸಿಕೊಂಡಿವೆ. ನಿಮಗೆ ಇಂತಹ ಲಕ್ಷಣಗಳು ಕಂಡಿಲ್ಲ ಎಂದರೆ ನೀವು ಭಯಪಡುವ ಅಗತ್ಯವಿಲ್ಲ.
ಹೀಗಿದ್ದರೂ ಭಯಪಡದೆ ಇವೆಲ್ಲವನ್ನೂ ಮೀರಿ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಅಮೇರಿಕಾದ ಸಿಡಿಸಿ ಕರೆ ಕೊಟ್ಟಿದೆ. ಹೀಗೆಯೇ ಪ್ರಪಂಚದ ಬಹುಪಾಲು ದೇಶಗಳು ವ್ಯಾಕ್ಸಿನ್ ಅನ್ನು ಅಲಿಖಿತವಾಗಿ ಕಡ್ಡಾಯಗೊಳಿಸಿವೆ. ಅದನ್ನೇ ಭಾರತ (ಮೋದಿ ಅಲ್ಲದೆ ಖರ್ಗೆ ಇದ್ದರೂ) ಸಹ ಮಾಡಿದೆ.
ನನ್ನ ವೈಯಕ್ತಿಕ ಆರೋಗ್ಯ ಮತ್ತು ನನ್ನ ಸಾಮಾಜಿಕ ಚಟುವಟಿಕೆಗಳಾದ ಪ್ರಯಾಣ, ಪಾರ್ಟಿ, ಮದುವೆ, ಮನರಂಜನೆಯಂತಹ ಕಾರ್ಯಕ್ರಮಗಳಲ್ಲಿ ಸಮಾಜಜೀವಿಯಾಗಿ ವ್ಯಾಕ್ಸಿನ್ ಕಾರ್ಡು ತೋರಿಸಿ ಸಮಾಜದಲ್ಲಿ ಬೆರೆಯಲೇಬೇಕಾದ ದರ್ದು ಇದ್ದ ನಾನು ಯಾವುದೇ ಹೆಚ್ಚಿನ ಪ್ರಯೋಗವಿರದೆ ಮಾರುಕಟ್ಟೆಗೆ ಬಂದ ಫೈಝರ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದೇನೆ. ಅಡ್ಡ ಪರಿಣಾಮವಾಗಿದ್ದರೆ ನನ್ನ ದೇಶದ ಕಾನೂನಿನ ಅನ್ವಯ ದಾವೆ ಹೂಡಿ ಪರಿಹಾರ ಪಡೆಯುತ್ತಿದ್ದೆ.
ವಿರಳಾತಿ ವಿರಳವನ್ನು ಅತಿ ಸಾಮಾನ್ಯ ಎಂದುಕೊಂಡು ತಲೆಗಿಂತ ತರಡನ್ನು ದಪ್ಪ ಮಾಡಿಕೊಂಡು ಕೈಯಲ್ಲಿ ಹಿಡಿದು ಚಿಂತಾಕ್ರಾಂತನಾಗಲಾರೆ.
ಏಕೆಂದರೆ ವ್ಯಾಕ್ಸಿನ್ ಅಡ್ಡ ಪರಿಣಾಮಕ್ಕಿಂತ ಕರೋನಾ ಬಂದು ಹೋದ ನಂತರ ಅದರ ಅಡ್ಡ ಪರಿಣಾಮದಿಂದ ಹೆಚ್ಚು ಜನರಲ್ಲಿ ಹೃದಯಾಘಾತ, ಪಾರ್ಶ್ವವಾಯು, ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿಸುವಿಕೆ ಕಂಡುಬಂದಿದೆ.
ಉಳಿದಂತೆ ನಿಮ್ಮ ನಿಮ್ಮ ವಿವೇಚನೆ.

Postmortem - ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ

 ಮುನಿಯಬೇಡ:

ಗಂಡನೆಂಜಲಿಗೆ ಹೇಸುವಳು ಮಿಂಡನ ತಂಬುಲ ತಿಂಬ ತೆರನಂತೆ,
ಗುರುವಿನಲ್ಲಿ ಉಪದೇಶ ಪಡೆದು ಪ್ರಸಾದಕ್ಕೆ ಸೂತಕವ ಮಾಡುವ
ಪಂಚಮಹಾಪಾತಕರು ನೀವು ಕೇಳಿ ಭೋ.
ಅಂಡದೊಳಗೆ ಹುಟ್ಟಿದ ಉತ್ಪತ್ತಿಯೆಲ್ಲವೂ ಗುರುವಿಂದಾಯಿತ್ತು.
ಮತ್ತೆ ಮಿಂಡ ಮೈಲಾರ ಬೀರ ಭೈರವ ಯಕ್ಕನಾತಿ
ಕುಕ್ಕನೂರ ಬಸದಿ ಕೇತಧೂಳನೆಂಬ ಕಾಳುದೈವಕ್ಕೆರಗಿ,
ಶಿವಭಕ್ತನೆನಿಸಿಕೊಂಬ ಚಂಡಿನಾಯಿಗಳ ಕಂಡು,
ಎನ್ನ ಮನ ಹೇಸಿತ್ತು ಕಾಣಾ, ಕಲಿದೇವರದೇವಾ.
- ಮಡಿವಾಳ ಮಾಚಿದೇವ
ಇದಿರ ಹಳಿಯಲು ಬೇಡ:
ವಿಷ್ಣುವ ಪೂಜಿಸಿ ಮುಡುಹ ಸುಡಿಸಿಕೊಂಬುದ ಕಂಡೆ,
ಜಿನನ ಪೂಜಿಸಿ ಬತ್ತಲೆಯಿಪ್ಪುದ ಕಂಡೆ,
ಮೈಲಾರನ ಪೂಜಿಸಿ ನಾಯಾಗಿ ಬಗಳುವುದ ಕಂಡೆ,
ನಮ್ಮ ಕೂಡಲಸಂಗನ ಪೂಜಿಸಿ ದೇವಾ,
ಭಕ್ತರೆನಿಸಿಕೂಂಬುದ ಕಂಡೆ.
- ಬಸವಣ್ಣ
ಅನ್ಯರಿಗೆ ಅಸಹ್ಯಪಡಬೇಡ:
ಲಿಂಗಾರ್ಪಿತವಿಲ್ಲದೆ ಬೋನ ಪದಾರ್ಥವ ಕೊಂಡಡೆ,
ಮಕ್ಕಳಡಗು ನರಮಾಂಸವಯ್ಯಾ.
ಲಿಂಗಾರ್ಪಿತವಿಲ್ಲದೆ ಉದಕವ ಮುಕ್ಕುಳಿಸಿದಡೆ
ನಾಯ ಮೂತ್ರವ ಮುಕ್ಕಳಿಸಿದುದಯ್ಯಾ.
ಲಿಂಗಾರ್ಪಿತವಿಲ್ಲದೆ ಹಲುಕಡ್ಡಿಯನಿರಿದಡೆ
ನಾಯ ಎಲುಬಿದ್ದ ಮಲಕ್ಕೆ ಬಾಯಿದೆರೆದು.
ನಿಮಗೆತ್ತಿದ ಕರವ ಅನ್ಯರಿಗೆ ಮುಗಿದಡೆ ಅಘೋರ ನರಕವಯ್ಯಾ.
ಈ ಭಾಷೆಗೆ ತಪ್ಪಿದಡೆ ತಲೆದಂಡ ತಲೆದಂಡ, ಅಳವರಿಯದೆ ನುಡಿದೆನು, ಕಡೆಮುಟ್ಟಿ ನಡಸಯ್ಯಾ. ಪ್ರಭುವೆ ಕೂಡಲಸಂಗಮದೇವಾ.
- ಬಸವಣ್ಣ
ತನ್ನ ಬಣ್ಣಿಸಬೇಡ:
ಬಸವ ಹರಿಯಿತ್ತು, ಬಸವ ಹರಿಯಿತ್ತು, ಬಸವ ಹರಿಯಿತ್ತು ಕಾಣಿಭೋ.
ತೊತ್ತಳದುಳಿಯಿತ್ತು, ತೊತ್ತಳದುಳಿಯಿತ್ತು.
ಮೀಮಾಂಸಕರ ಮಿತ್ತುವ ಮಿರಿಯಿತ್ತು,
ಬೌದ್ಧ ಜೈನರ ಕೋಡಿನಲ್ಲಿರಿಯಿತ್ತು,
ಕೊಳಗಿನಲ್ಲರೆಯಿತ್ತು ನೋಡಾ, ಸೊಡ್ಡಳಾ
ಸಂಗನಬಸವ.
-ಸೊಡ್ಡಳ ಬಾಚರಸ
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ!?!
(ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ)

Poem - ನಾನೂ ಕುಡಿಯುತ್ತೇನೆ

 ಅಂತೂ ನಾನೊಬ್ಬ ಕುಡುಕನೆಂದು ಪ್ರಶ್ನೆ ಕೇಳುತ್ತಿರುವವರಿಗೆ......ಒಂದು ಸಮಜಾಯಿಷಿ.

ನಾನೂ ಕುಡಿಯುತ್ತೇನೆ
ವಿಕ್ಷಿಪ್ತವಾಗಲ್ಲ, ನಿಕ್ಷೇಪ ಬಯಸಿ
ಸಪ್ರೇಮಿಗಳೊಂದಿಗೆ.
ನಾನೂ ಕುಡಿಯುತ್ತೇನೆ
ಕುಡಿದು ಲೇಖನಿ ಎತ್ತುವುದಿಲ್ಲ,
ಲೇಖನಿಯೇ ಏಳುತ್ತದೆ.
ನಾನೂ ಕುಡಿಯುತ್ತೇನೆ
ಎದ್ದ ಲೇಖನಿ ಖಾಲಿ ಕಾಗದದ ಮೇಲೆ ಬಣ್ಣಬಣ್ಣದ
ನುಡಿಯ ಕೆತ್ತುವುದಿಲ್ಲ,
ಖಾಲಿ ಪ್ರೇಯಸಿಯ(ರ) ರಂಗುರಂಗಾಗಿಸುತ್ತದೆ.
ನಾನೂ ಕುಡಿಯುತ್ತೇನೆ
ಪ್ರೇಯಸಿಯ(ರ) ರಂಗು ಹುಸಿಯೂ ಇರಬಹುದು
ಕಸಿಯೂ ಆಗಿರಬಹುದು.
ನಾನೂ ಕುಡಿಯುತ್ತೇನೆ.
ಲೇಖನಿಯ ಕುದಾಯಿಗೆ ಸಿಕ್ಕಿದ್ದು ನಿಕ್ಷೇಪವೇ
ಬರೀ ಪ್ರಕ್ಷೇಪವೇ? ಹುಸಿಯೂ ಇರಬಹುದು
ಕಸಿಯೂ ಆಗಿರಬಹುದು.
ಒಟ್ಟಾರೆ,
ನಾನೂ ಕುಡಿಯುತ್ತೇನೆ.
ದಿನದ ಬಳಲಿಕೆಯಿಂದ
ಬಸವಳಿದ ನರನಾಡಿಗಳ
ಸೆಟೆಸಿ ಜೀವರಸ ತುಂಬಿ
ತುಂಬಿದುದ ಹರಿಸಿ
ಹಳಾರವಾಗಿಸಿ ನಿರಾಳವ ಕರುಣಿಸುವ....
ಮದ್ಯ(ಧ್ಯ)ವ,
ನಾನೂ ಕುಡಿಯುತ್ತೇನೆ
ವಿಕ್ಷಿಪ್ತವಾಗಲ್ಲ, ನಿಕ್ಷೇಪ ಬಯಸಿ
ಸಪ್ರೇಮಿಗಳೊಂದಿಗೆ ನಿರಾಳವಾಗಿ....
ಇತಿ ಕಾವ್ಯ, ಕುಡಿತ, ಕ್ರಿಯೆ, ಪ್ರಕ್ರಿಯೆ!

ರಂಜಾನ್ ದರ್ಗಾ ಶಿಕಾಗೋ

 ಒಂದೊಮ್ಮೆ ನಾನೂ ಸಹ ವಯೋಸಹಜ ಮುಗ್ಧತೆಯೋ ಅಥವಾ ವಿಳಂಬಿತ ತೋಡಿ ರಾಗದ ಹದಿಹರೆಯದ ಕಾರಣವೋ ಬುದ್ದಿಜೀವಿಗಳ ವಿಧೇಯ ವಿನಮ್ರ ಓದುಗನಾಗಿದ್ದೆ. ಅವರ ಬರಹಗಳು ಕ್ರಾಂತಿಕಾರಕ ಎಂದು ಬಗೆದು ಮುಂದೊಮ್ಮೆ ಅವರು ಕೊಡಬಹುದಾದ ಕ್ರಾಂತಿಯ ಭಾಗವಾಗಲು ಉತ್ಸುಕನಾಗಿ ಕಾಯುತ್ತಿದ್ದೆ.......ಅಮೆರಿಕೆಗೆ ಬಂದು ದಶಕ ಕಳೆದಿದ್ದರೂ!

ಇಂತಿಪ್ಪ ಸನ್ನಿವೇಶದಲ್ಲಿ VSNA (ವೀರಶೈವ ಸಮಾಜ ಆಫ್ ನಾರ್ತ್ ಅಮೆರಿಕ) ಸಂಸ್ಥೆಯು ರಂಜಾನ್ ದರ್ಗಾ ಮತ್ತು ರವಿಕೃಷ್ಣಾರೆಡ್ಡಿ ಅವರನ್ನು ತಮ್ಮ ಸಮಾಜದ ಅಧಿವೇಶನಕ್ಕೆ ಮುಖ್ಯ ಅತಿಥಿಗಳಾಗಿ ಆಹ್ವಾನಿಸಿದ ಸುದ್ದಿ ಓದಿದೆ. ಇವರ ಹೆಸರಿನ ಕಾರಣ ವೀರಶೈವರಲ್ಲ ಎನಿಸಿದವರನ್ನು ಸಹ ಒಂದು ಜಾತಿ ಸಂಸ್ಥೆ ತನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಅಂದು ಮಹಾನ್ ಪ್ರಗತಿಪರ ಎನಿಸಿತು. ಈ ಕುರಿತು ರವಿಕೃಷ್ಣಾರೆಡ್ಡಿ ಅವರಿಗೆ ಕಾಮೆಂಟ್ ಸಹ ಹಾಕಿದ್ದು ನೆನಪಿದೆ. ನಂತರ ರಂಜಾನ್ ದರ್ಗಾ ಶಿಕಾಗೋ ಸಮೀಪದ ಮಿಲುವಾಕಿಗೆ ಬಂದಿದ್ದು ಅವರ ಸಂಪರ್ಕದ ನಂಬರ್ ಒಂದು ಸಿಕ್ಕಿತು. ಪ್ರಗತಿಪರ ಚಿಂತಕರಾದ ದರ್ಗಾ ಅವರನ್ನು ಭೇಟಿ ಮಾಡಿ ಚರ್ಚಿಸುವುದು ನನ್ನ ಪೂರ್ವಜನ್ಮದ ಸುಯೋಗ ಎಂದೇ ಬಗೆದು ಅವರನ್ನು ಭೇಟಿ ಮಾಡಲು ಫೋನ್ ಮಾಡಿದೆ. ಆಗ ಅವರು ಉಳಿದುಕೊಂಡಿದ್ದ ಮನೆಯ ಒಡೆಯರು, ಬರುವ ವೀಕೆಂಡ್ ಶಿಕಾಗೋ VSNA ಸಭೆಯೊಂದರಲ್ಲಿ ಅವರು ಭಾಗವಹಿಸುವರೆಂದೂ, ಅಲ್ಲಿ ಅವರನ್ನು ಭೇಟಿ ಮಾಡಬಹುದೆಂದೂ ತಿಳಿಸಿದರು. ಅದರಂತೆ ನಾನು ಆಗ ಆ ಸಭೆಗೆ ಹೋಗಿದ್ದೆ.
ಇಂದಿನ ಬಹುಪಾಲು ಮಠಾಧೀಶರು ಅರಿತಿರುವಷ್ಟೇ ತೇಲ್ಮೇಲು ವಚನ ಸಾಹಿತ್ಯವಷ್ಟನ್ನೇ ನಾನೂ ಸಹ ಅಂದು ಓದಿದ್ದು, ಅರಿತಿದ್ದು. ಹಾಗಾಗಿ ರಂಜಾನ್ ದರ್ಗಾ ಎಂದರೆ
ಇವರೆಲ್ಲರಿಗಿಂತ ಹೆಚ್ಚಿನ ಓದಿನ ಮತ್ತು ಮೇಲಾಗಿ ಎಡಪಂಥೀಯ ಪ್ರಖರ ಚಿಂತಕ(????????????) ಎನಿಸಿ ನನಗೆ ಆದರ್ಶ ಎನಿಸಿದ್ದರು. ಹಾಗಾಗಿಯೇ ನನ್ನೆಲ್ಲಾ ಅಂದಿನ ನಿರೀಕ್ಷೆ ಮತ್ತು ಭೇಟಿ ಮಾಡುವ ತವಕ.
ಈ ಎಲ್ಲಾ ಕ್ರಾಂತಿಕಾರಕ ನಿರೀಕ್ಷೆ, ತವಕಗಳ ನಡುವೆ ನಾನು ಅಂದು ಆ VSNA ಸಭೆಗೆ ಹಾಜರಾದೆ. ಲಿಂಗಪೂಜೆ ಮತ್ತಿತರೆ ಧಾರ್ಮಿಕ ಕಾರ್ಯಕ್ರಮಗಳು ಮುಗಿದ ನಂತರ ಭಾಷಣಕಾರರಾದ ದರ್ಗಾ ಮತ್ತು ಬೀದರ್ "ಲಿಂಗಾಯತ" ಶರಣೆ ಅನ್ನಪೂರ್ಣ ಎನ್ನುವವರು ಭಾಷಣ ಮಾಡಿದರು. ಕ್ರಾಂತಿಕಾರಕ ಭಾಷಣವನ್ನು ಎದುರು ನೋಡುತ್ತಿದ್ದ ನನಗೆ ಅವರೀರ್ವರೂ ಈ ಸಂಘದ ಹೆಸರು "ವೀರಶೈವ" ಎಂದೇಕಿದೆ? ಅದನ್ನು ಶೀಘ್ರವೇ "ಲಿಂಗಾಯತ" ಎಂದು ಬದಲಾಯಿಸಲು ಕ್ರಮ ಕೈಗೊಳ್ಳಿ ಎಂದು ಕರೆ ನೀಡಿ ಬಸವಭಜನೆ ಮಾಡಿ ಕೈಮುಗಿದದ್ದು ನನ್ನನ್ನು ಅತೀವ ಭ್ರಮನಿರಸನಗೊಳಿಸಿತು. ಹನ್ನೆರಡನೇ ಶತಮಾನದಲ್ಲಿ ಧರ್ಮ ಒಂದು ನೆಪವಾಗಿ ಸಾಮಾಜಿಕ ಕ್ರಾಂತಿ ಪ್ರಮುಖವಾಗಿ ವಚನಕಾರ ಕ್ರಾಂತಿಕಾರಿಗಳು ಮಾಡಿದ ಸಾಮಾಜಿಕ ಕ್ರಾಂತಿಯ ಬಗ್ಗೆ ಅಷ್ಟೇನೂ ಹೇಳದೆ, ಕಾರ್ಲ್ ಮಾರ್ಕ್ಸ್ ಧರ್ಮ ಎಂಬುದು ಹೇಗೆ ಬಡಜನರ ಒಂದು ಯುಟೋಪಿಯಾ ಆಗಿತ್ತು ಎಂಬ ವಿಶ್ಲೇಷಣೆಯನ್ನೂ ಕೊಡದೆ ಅವರನ್ನು ಅವರೇ ಸೀಮಿತಗೊಳಿಸಿಕೊಂಡರು.
ಅಂದಾದ ನನ್ನೆಲ್ಲಾ ಭ್ರಮನಿರಸನ ಮುಂದೆ ನನ್ನನ್ನು ವೀರಶೈವ, ಲಿಂಗಾಯತ, ಬಸವ, ಕಲ್ಯಾಣಕ್ರಾಂತಿ, ವಚನ ಸಾಹಿತ್ಯವನ್ನು ಓದಿ ಸತ್ಯದ ಸಂಶೋಧನೆಗೆ ಪ್ರೇರೇಪಿಸಿತು. ಅದರ ಪ್ರತಿಫಲವೇ ನನ್ನ, "ಬಸವರಾಜಕಾರಣ." Eliminating the hype from reality! ಅಂದರೆ, "ತೋಪು ತೆಗೆದು ನಿಕಾಲ್ ಮಾಡು" ಎಂದರ್ಥ!
ಇಂತಿಪ್ಪ ಕ್ರಾಂತಿಕಾರಕ ಸತ್ಯವಾನರು ಕೂಡಲಸಂಗಮದೇವ ತೆಗೆದು ಲಿಂಗಾನಂದವನ್ನು ಯಾನೆ ಜನಪದ ಶೈಲಿಯಲ್ಲಿ "ತಲೆಗಿಂತ ತರಡು ದಪ್ಪ" ಎಂದದ್ದು ಕೆಲವರಿಗೆ ರೋಮಾಂಚಕಾರಿ ಆಪ್ಯಾಯಮಾನ ವಿಷಯ! ಪ್ರಾಯಶಃ ರೋಮಾಂಚನದ ಕಾರಣ ರೋಮವೇ ಲಿಂಗ ಎಂದೆನಿಸಿರಲೂಬಹುದು. ಹಾಗಾಗಿಯೇ ಲಿಂಗಾನಂದದ ಮಹಾದೇವಿಯನ್ನು ಮೂದೇವಿ ಎಂದ ಲಂಕೇಶರ ಮಗಳೇ ಮೂದೇವಿಯನ್ನು ಮಹಾದೇವಿ ಎಂದುದು! ಕಿಂಡರ್ ಗಾರ್ಟನ್ನಿಗೆ ಲಕ್ಷ ಲಕ್ಷ ರೂಪಾಯಿ ಕಕ್ಕಿ ಓದಿದ ಚಾಕೋಲೆಟ್ ಬೇಬಿಗಳ ಭಾರತೀಯ ಪರಿವರ್ತನೆಗೆ ಒಂದು ಉತ್ಕೃಷ್ಟ ಮಾದರಿ!
ಇದೆಲ್ಲ ಅಂದು ಶಿಕಾಗೋದಲ್ಲಿ ವೀರಶೈವ ತೆಗೆದು ಲಿಂಗಾಯತ ಮಾಡಿ ಯಾನೆ ತಲೆಗಿಂತ.......ದಪ್ಪ ಮಾಡಿ ಎಂದು ಕರೆ ನೀಡಿದ ಅನ್ನಪೂರ್ಣ ಎನ್ನುವವರು ಮೊನ್ನೆ ನಿಧನರಾದ ಸುದ್ದಿ ಕೇಳಿ ನೆನಪಾದದ್ದು ಮತ್ತು ಇಷ್ಟೆಲ್ಲಾ ಬರೆಯಬೇಕಾದದ್ದು.
ಉಳಿದಂತೆ.....ನೀವು ಕಾಣಿರೇ, ಛಾಂಗು ಭಲರೇ.

Poem - ನಾನು ಜಲವೇ

 ನಾನು ಜಲವೇ,

ಶೌಚಕ್ಕಾದರೂ, ನೀರಡಿಕೆಗಾದರೂ.
ನಾನು ವಾಯುವೇ,
ಪ್ರಾಣವಾಯುವಿಗಾದರೂ, ಅಪಾನವಾಯುವ ಬೆರೆಸಿದರೂ,
ನಾನು ಅಗ್ನಿಯೇ,
ಜೀವರಸವ ಕುದಿಸಲಾದರೂ, ಹೆಣವ ಬೇಯಿಸಲಾದರೂ.
ನಾನು ಪೃಥ್ವಿಯೇ,
ಹೂಳಿದರೂ, ಜೀವಜಾಲವ ಬಿತ್ತಿ ಬೆಳೆದರೂ.
ನಾನು ಶೂನ್ಯವೇ,
ಘನದ ಹಿಂದಿಟ್ಟರೂ, ಮುಂದಿಟ್ಟರೂ.
ನಾನು ನಾನೇ,
ಹೌದೆಂದರೂ, ಅಲ್ಲವೆಂದರೂ.
ಮೂರ್ತವೆಂದರೂ, ಅಮೂರ್ತವೆಂದರೂ.
ನಾನಾರೆಂಬುದು ನಾನಲ್ಲ, ಈ ಮಾನುಷ ಜನ್ಮವು ನಾನಲ್ಲ ಎಂದರೆ ಅದು ಮೂರ್ಖತನ!
ಏಕೆಂದರೆ ನಾನು ನಾನೇ ವಿನಃ, ನಾನಲ್ಲ ಎಂಬುದು ಧೂರ್ತತನ.
ನಾನೇ ಮಾರ್ಗ, ನಾನೇ ದೇವರು!
ಇದೇ ಪರಮಸತ್ಯ, ಧರ್ಮಿಯ ಅಧರ್ಮಿಯ ನಿತ್ಯ ಸಾಕ್ಷಾತ್ಕಾರ.

ಶ್ರೀಮತ್ಪರಮಪಾವನ ಚಾರುತರಚರಿತ್ರ ಮದನಮರ್ದನ

 ಶ್ರೀಮತ್ಪರಮಪಾವನ ಚಾರುತರಚರಿತ್ರ ಮದನಮರ್ದನ ಮಾಯಾಕೋಲಾಹಲ ನಿತ್ಯನಿರಂಜನ ನಿಗಮಗೋಚರ ಸಚ್ಚಿದಾನಂದ ನಿತ್ಯಪರಿಪೂರ್ಣಹೃದಯ ಜಗದ್ವಿಸ್ತಾರ ಮೂಲಸ್ತಂಭಾಯಮಾನ ಶ್ರೀಮತ್ಪರಶಿವಸ್ವರೂಪ ಶ್ರೀಮದಲ್ಲಮಪ್ರಭು ಸ್ವಾಮನ್ವಯ ಸಂಜನಿತಾನಾಂ ಶ್ರೀಮದ್ವೀರಶೈವ ಸಕಲ ಸಿಂಹಾಸನಾಧಿಪ ಷಟ್ಸ್ಥಲ ಸಿದ್ಧಾಂತ ಸ್ಥಾಪನಾಚಾರ್ಯವರ್ಯ ಶ್ರೀಮಚ್ಚಿನ್ಮೂಲಾದ್ರಿ ಬ್ರಹನ್ಮಠಾಂತರಾಳ ಪರಿಶೋಭಿತ ಸತ್ಪ್ರಭುಮಂಡಿತೋರ್ಧ ಹೃದಯಾತ್ಮಕ ದ್ವಾರಾವತೀ ಶೂನ್ಯಸಿಂಹಾಸನಾಧೀಶ ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು............. ಮಹಾಸ್ವಾಮಿನಾಂ..!

ಎಂದು "ಆರಾಗಿ" ಫರ್ಮಾನು ಹೊರಡಿಸಬೇಕಾದ್ದು ನೆನ್ನೆ ದುರ್ಗದ ಕೋರ್ಟಿನಲ್ಲಿ, "ಶಿವಮೂರ್ತಿsss...,ಮುರುಗಾsss...., ಶರಣಾsss..." ಎಂದು "ಮೂರಾಗಿ"ಸಿ ಕೂಗಿ ಕಟಕಟೆಗೆ ಕರೆಯುವಲ್ಲಿಗೆ ಬಂದು ನಿಂತು ನನ್ನ "ಅರಿದಡೆ ಆರದು ಮರೆದೊಡೆ ಮೂರದು" ಕೃತಿಯನ್ನು ಪರೋಕ್ಷವಾಗಿ ಅನುರಣಿಸಿತು ಎಂದು ಬಹಳಷ್ಟು ಜನ ಕರೆ ಮಾಡಿ ತಿಳಿಸಿದರು.
"ಅರಿದಡೆ ಆರದು ಮರೆದೊಡೆ ಮೂರದು"