Darshan and Renukaswamy

 ಲೈಂಗಿಕ ಕಿರುಕುಳ ಒಂದು ಅಪರಾಧ. ಇದನ್ನು ಪ್ರತ್ಯಕ್ಷವಾಗಿ (reality), ಅಥವಾ ಕಾರ್ಯತಃ ದಿಟವಾಗಿ (virtual online) ಮಾಡಿದ್ದರೂ ಇದೊಂದು ಗುರುತರ ಅಪರಾಧ.

ಅದೇ ರೀತಿ ಕೊಲೆ ಸಹ ಒಂದು ಅಪರಾಧ. ಸದ್ಯಕ್ಕೆ ಇದನ್ನು ದಿಟವಾಗಿ ಮಾಡಬಹುದಷ್ಟೇ ಎಂದಾದರೂ, ಕಾರ್ಯತಃ ದಿಟವಾಗಿ ಕಿರುಕುಳ ಕೊಟ್ಟು ಓರ್ವ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ಮೂಲಕ ಸಹ "ಕೊಲೆ" ಮಾಡಬಹುದು.
ಸದ್ಯದ ಕರ್ನಾಟಕದ ಮಾಧ್ಯಮ-ಕೇಂದ್ರಿತ ಪ್ರಕರಣದಲ್ಲಿ ಲೈಂಗಿಕ ಕಿರುಕುಳಿಯೊಬ್ಬ ಕೊಲೆಯಾಗಿದ್ದಾನೆ. ಕೊಲೆಯ ಆರೋಪ ಹೊತ್ತವರು ಬಂಧನಕ್ಕೊಳಗಾಗಿ ವಿಚಾರಣೆಯಲ್ಲಿದ್ದಾರೆ. ಕೊಲೆಯ ಪ್ರಮುಖ ಆರೋಪಿ ಓರ್ವ ತಾರೆ ಎಂಬ ಕಾರಣಕ್ಕಾಗಿ ಈ ಪ್ರಕರಣ ಜಗಮಗಿಸುತ್ತಿದೆ. ಈ ಜಗಮಗ ಪ್ರಕರಣದ ಕುರಿತು ಮಾತ್ರವಾಗಿದ್ದರೆ ಸಾಕಿತ್ತು. ಆದರೆ ಕೊಲೆಯಾದ ಲೈಂಗಿಕ ಕಿರುಕುಳಿಯ ಎಲ್ಲಾ ಅಪರಾಧಗಳನ್ನು ಪೀಠಾಧಿಪತಿಗಳು ಪಾದೋದಕದಲ್ಲಿ ತೊಳೆದು ಮುಕ್ತಿ ಕೊಟ್ಟಿದ್ದಾರೆ. ರಾಜಕಾರಣಿಗಳು ಲಕ್ಷ ಲಕ್ಷ ಪರಿಹಾರ ಕೊಟ್ಟಿದ್ದಾರೆ. ಚಲನಚಿತ್ರಿಗರು ಕ್ಷಮೆ ಯಾಚಿಸಿದ್ದಾರೆ, ಜನ ಉಧೋ ಉಧೋ ಎನ್ನುತ್ತಾ ಕಿರುಕುಳಿಯ ಪತ್ನಿಗೆ ಸರ್ಕಾರಿ ಹುದ್ದೆ ಕೇಳುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಾಡಿನ ಮುಖ್ಯಮಂತ್ರಿ ಮೃತನ ತಂದೆತಾಯಿಯನ್ನು ಭೇಟಿ ಮಾಡಿ ಆ ಕುರಿತು ಭರವಸೆ ನೀಡಿದ್ದಾರೆ. ಧಾರ್ಮಿಕರೆನಿಸಿದ ಕಿರುಕುಳಿಯ ಪೋಷಕರು ತಮ್ಮ ಪುತ್ರನ ಕಾರ್ಯದ ಬಗ್ಗೆ ಯಾವ ನೈತಿಕತೆಯ ಅಳುಕಿಲ್ಲದೆ ಸೊಸೆಗೆ ಸರ್ಕಾರಿ ಉದ್ಯೋಗ ಕೇಳುತ್ತಿದ್ದಾರೆ. ಸದ್ಯದಲ್ಲೇ ಸ್ಮಾರಕವೊಂದನ್ನು ನಿರ್ಮಿಸಿದರೂ ಆಶ್ಚರ್ಯವಿಲ್ಲ! ಎಲ್ಲಾ ಲೈಂಗಿಕ ಕಿರುಕುಳಿಯ ಸ್ಥಳ ಮಹಿಮೆ. ಇತಿಹಾಸ ಪುನರಾವರ್ತಿತ!
ಇಷ್ಟೆಲ್ಲಾ ಏಕೆ?????? ಸಾಂವಿಧಾನಿಕ ನ್ಯಾಯಾಂಗವು ತನ್ನ ಕರ್ತವ್ಯವನ್ನು ಮಾಡುತ್ತಿಲ್ಲವೇ!
ಇಲ್ಲಿ ಕಿರುಕುಳಿಯ ಅಸಹಾಯಕ ಪತ್ನಿಯಂತೆಯೇ ರಾಜ್ಯದಲ್ಲಿ ಕೊಲೆಗೆ ಈಡಾದವರ ಕುಟುಂಬಗಳಿಗೂ ಇದೇ ರೀತಿಯ ಸ್ಪಂದನೆ ಸಿಕ್ಕಿದೆಯೇ?!? ಅಂತಹ ಯಾವುದೇ ಪರಿಹಾರಾತ್ಮಕ ಸ್ಪಂದನೆಯನ್ನು ಸಿವಿಲ್ ದಾವೆ ಮೂಲಕ ಕೊಲೆ ಮಾಡಿದವನ ಕಡೆಯಿಂದ ಹಕ್ಕಿನಿಂದ ವಸೂಲಿ ಮಾಡಿಸಿಕೊಡುವುದು ನ್ಯಾಯ ಎನಿಸುತ್ತದಲ್ಲವೇ?
ಒಟ್ಟಾರೆ, ಇದೆಲ್ಲವೂ ಸಮಾಜದ ನೈತಿಕತೆಯ ಪರಮೋಚ್ಚ ಅಧಃಪತನವಲ್ಲದೆ ಇನ್ನೇನೂ ಅಲ್ಲ.
ಯಾವ ದೇಶದಲ್ಲಿ ನೈತಿಕತೆ ಇಷ್ಟರ ಮಟ್ಟಿಗೆ ಕುಸಿದು ಅಲ್ಲಿನ ಜನ/ಜಾತಿ ಸಂಘಟನೆಗಳು, ಸ್ವಾಮಿಗಳು, ಪೀಠಾಧಿಪತಿಗಳು, ರಾಜಕಾರಣಿಗಳು, ಆಡಳಿತ ಪಕ್ಷ, ವಿರೋಧಪಕ್ಷಗಳ ಧುರೀಣರು ಒಟ್ಟಾಗಿ ಹೀಗೆ ಒಬ್ಬ ಲೈಂಗಿಕ ಕಿರುಕುಳಿಯ ಅಪರಾಧವನ್ನು ಮರೆಸಿ ಹುತಾತ್ಮನನ್ನಾಗಿಸಿ ಮಾನವೀಯತೆಯ ಹೆಸರಿನಲ್ಲಿ ಮೆರೆಸುವರೋ ಅಂತಹ ದೇಶದ ಭವಿಷ್ಯ, ಶೂನ್ಯ!
ಶೂನ್ಯವನ್ನು ಕಂಡುಹಿಡಿದ ಆಧ್ಯಾತ್ಮಿಕ ವಿಶ್ವಗುರುವಿನ ಸಾಮಾಜಿಕ ನೈತಿಕಮಾಪನ ಶೂನ್ಯವನ್ನು ದಾಟಿ ಋಣಾತ್ಮಕ ಪಾತಾಳದಲ್ಲಿದೆ. ನೈತಿಕತೆಯು ಸಮಗ್ರವಾಗಿ ಪಾತಾಳದಲ್ಲಿರುವಾಗ ನಾವು ಯಾವ ಆಧ್ಯಾತ್ಮದ ಬಗ್ಗೆ ಹೆಮ್ಮೆ ಪಡಬೇಕಿದೆ?!

No comments: