Poem - ನಾನೂ ಕುಡಿಯುತ್ತೇನೆ

 ಅಂತೂ ನಾನೊಬ್ಬ ಕುಡುಕನೆಂದು ಪ್ರಶ್ನೆ ಕೇಳುತ್ತಿರುವವರಿಗೆ......ಒಂದು ಸಮಜಾಯಿಷಿ.

ನಾನೂ ಕುಡಿಯುತ್ತೇನೆ
ವಿಕ್ಷಿಪ್ತವಾಗಲ್ಲ, ನಿಕ್ಷೇಪ ಬಯಸಿ
ಸಪ್ರೇಮಿಗಳೊಂದಿಗೆ.
ನಾನೂ ಕುಡಿಯುತ್ತೇನೆ
ಕುಡಿದು ಲೇಖನಿ ಎತ್ತುವುದಿಲ್ಲ,
ಲೇಖನಿಯೇ ಏಳುತ್ತದೆ.
ನಾನೂ ಕುಡಿಯುತ್ತೇನೆ
ಎದ್ದ ಲೇಖನಿ ಖಾಲಿ ಕಾಗದದ ಮೇಲೆ ಬಣ್ಣಬಣ್ಣದ
ನುಡಿಯ ಕೆತ್ತುವುದಿಲ್ಲ,
ಖಾಲಿ ಪ್ರೇಯಸಿಯ(ರ) ರಂಗುರಂಗಾಗಿಸುತ್ತದೆ.
ನಾನೂ ಕುಡಿಯುತ್ತೇನೆ
ಪ್ರೇಯಸಿಯ(ರ) ರಂಗು ಹುಸಿಯೂ ಇರಬಹುದು
ಕಸಿಯೂ ಆಗಿರಬಹುದು.
ನಾನೂ ಕುಡಿಯುತ್ತೇನೆ.
ಲೇಖನಿಯ ಕುದಾಯಿಗೆ ಸಿಕ್ಕಿದ್ದು ನಿಕ್ಷೇಪವೇ
ಬರೀ ಪ್ರಕ್ಷೇಪವೇ? ಹುಸಿಯೂ ಇರಬಹುದು
ಕಸಿಯೂ ಆಗಿರಬಹುದು.
ಒಟ್ಟಾರೆ,
ನಾನೂ ಕುಡಿಯುತ್ತೇನೆ.
ದಿನದ ಬಳಲಿಕೆಯಿಂದ
ಬಸವಳಿದ ನರನಾಡಿಗಳ
ಸೆಟೆಸಿ ಜೀವರಸ ತುಂಬಿ
ತುಂಬಿದುದ ಹರಿಸಿ
ಹಳಾರವಾಗಿಸಿ ನಿರಾಳವ ಕರುಣಿಸುವ....
ಮದ್ಯ(ಧ್ಯ)ವ,
ನಾನೂ ಕುಡಿಯುತ್ತೇನೆ
ವಿಕ್ಷಿಪ್ತವಾಗಲ್ಲ, ನಿಕ್ಷೇಪ ಬಯಸಿ
ಸಪ್ರೇಮಿಗಳೊಂದಿಗೆ ನಿರಾಳವಾಗಿ....
ಇತಿ ಕಾವ್ಯ, ಕುಡಿತ, ಕ್ರಿಯೆ, ಪ್ರಕ್ರಿಯೆ!

No comments: