ಬಸವರಾಜಕಾರಣ - ಅಜಕ್ಕಳ ಗಿರೀಶ ಭಟ್

 “ಸಂಶೋಧನೆಯಲ್ಲಿ ತೊಡಗಿಕೊಂಡವರಲ್ಲಿ ಮೌಲ್ಯಗಳಾಗಿ ಸತ್ಯ ಹಾಗೂ ಪ್ರಾಮಾಣಿಕತೆ ಮತ್ತು ಒಂದು ಕೌಶಲವಾಗಿ ತರ್ಕ ಇರಬೇಕಾದುದು ಅನಿವಾರ್ಯ. ಅವೆರಡೂ ಇಲ್ಲದ ಸಂಶೋಧನೆಗಳು ಅಂತಹ ಸಂಶೋಧಕರಿಗಿAತ ಕಡಿಮೆ ಸತ್ಯ ಪಕ್ಷಪಾತಿಗಳು ಮತ್ತು ಕಡಿಮೆ ತರ್ಕದವರಿರುವಲ್ಲಿ ತಕ್ಷಣಕ್ಕೆ ಹೆಸರನ್ನು ತರಬಹುದಾದರೂ ಕಾಲದ ಪರೀಕ್ಷೆಯಲ್ಲಿ ಮತ್ತು ವಿಜ್ಞಾನ, ತಂತ್ರಜ್ಞಾನಗಳ ಜಗನ್ನಾಥರಥದ ಅಡಿಯಲ್ಲಿ ಬಿದ್ದು ಅಪ್ಪಚ್ಚಿಯಾಗಿ ಹೋಗುವುದು ನಿಶ್ಚಿತ.”- .. 


ಈ ಮೇಲಿನ ಕ್ವೊಟೇಶನನ್ನು ಈಗಾಗಲೇ ಯಾರಾದರೂ ಹಿರಿಯ ಅಥವಾ ಕಿರಿಯ ಅಥವಾ ಕಿರಿಕಿರಿಯ ಸಂಶೋಧಕರು ಹೇಳದಿದ್ದರೂ ಇದು ಸತ್ಯವೇ. ಉದಾಹರಣೆಗೆ, ಯಾರೋ ತರ್ಕವನ್ನೇ ಆಧರಿಸಿ ರೂಪಿಸಿದ ಕೃತಕ ಬುದ್ಧಿಮತ್ತೆಯ ಪ್ರೋಗ್ರಾಮುಗಳು, ( Chat GPT ಯಂಥವು) ಸಾಮಾನ್ಯ ಬರಹಗಾರರು/ ಅಂಕಣಕೋರರು ಬರೆಯುವುದಕ್ಕಿಂತಲೂ ಉತ್ತಮ ಲೇಖನವನ್ನು ಬರೆಯುವುದನ್ನು ಮುಂದೆ ಕಾಣಲಿದ್ದೇವೆ. 

ಈ ಹಿನ್ನೆಲೆಯಲ್ಲಿಯೂ ಈ ಕೆಳಗಿನ ಲೇಖನ ಪ್ರಸ್ತುತವಾದೀತು..

 ಸ್ವಲ್ಪ ಉದ್ದವಿದೆ. 

ಆದರೂ 

ದಯವಿಟ್ಟು ಓದಿ. 

ಯುನಿಕೋಡ್ ಗೆ ಬದಲಾಯಿಸುವಾಗ ಆಗಿರುವ ಅಕ್ಷರದೋಷಗಳನ್ನು ಅವಸರದಲ್ಲಿ ಸರಿಮಾಡಲಾಗಲಿಲ್ಲ. ಕ್ಷಮೆಯಿರಲಿ.


ಬಸವರಾಜಕಾರಣ


ಕನ್ನಡ ಸಂಶೋಧಕರಿಗೆ ಸವಾಲೊಡ್ಡುವ ಬಸವರಾಜಕಾರಣ

ಅಜಕ್ಕಳ ಗಿರೀಶ ಭಟ್


    ಸಾಹಿತ್ಯ ಹಾಗೂ ಸಮಾಜವಿಜ್ಞಾನ ವಿಷಯಗಳಿಗೆ ಸಂಬಂದಿಸಿದಂತೆ ಕನ್ನಡ ಭಾಷೆಯಲ್ಲಿ ನಡೆಯುತ್ತಿರುವ ಸಂಶೋಧನೆಯ ಸ್ವರೂಪದ ಬಗ್ಗೆ ಈಚೆಗೆ ವಿಮರ್ಶೆ ನಡೆಯುತ್ತಿದೆ. ಸುಮರು ಂದು ವರ್ಷದ ಹಿಂದೆ ಬಂದ ನಿತ್ಯಾನಂದ ಶೆಟ್ಟಿಯವರ ‘ಮಾರ್ಗಾನ್ವೇಷಣ’ ಎಂಬ ಕೃತಿ ಸಾಹಿತ್ಯ ವಿಭಾಗಗಳಲ್ಲಿ ನಡೆಯುವ ಸಂಶೋಧನೆಯ ಬಗ್ಗೆ ಸಾಕಷ್ಟು ಕಟುವಾದ ಟೀಕೆಯನ್ನು ಒಳಗೊಂಡಿದೆ. ಇತ್ತೀಚೆಗೆ ಪ್ರವೀಣ ಟಿ.ಎಲ್. ಮತ್ತು ಜೆ.ಎಸ್. ಸದಾನಂದ ಅವರ ಸಾಹಿತ್ಯ ಕಥನ ವರ್ಸಸ್ ಸಮಾಜ ವಿಜ್ಞಾನ ಎಂಬ ಕೃತಿಯಲ್ಲಿ ಕನ್ನಡದ ಸಮಾಜ ವಿಜ್ಞಾನವು ಹೇಗೆ ಸಾಹಿತಿಗಳ ಕಾಲ್ಪನಿಕ ಬರಹಗಳನ್ನು (ಫಿಕ್ಷನ್) ಅವಲಂಬಿಸಿದೆ ಎಂಬುದನ್ನು ತೋರಿಸುತ್ತದೆ; ಆ ಮೂಲಕ, ಕನ್ನಡ ಸಮಜವಿಜ್ಞಾನ ಕ್ಷೇತ್ರವು ಸಂಶೋಧನೆಗೆ ಗಮನಾರ್ಹ ಕೊಡುಗೆಯನ್ನು ನೀಡಲು ಯಾಕೆ ಸಾಧ್ಯವಾಗಿಲ್ಲ ಎಂಬುದನ್ನು ಕೂಡ ತೋರಿಸುತ್ತದೆ. 

   ಸಮಾಜದ ಕುರಿತ ಕನ್ನಡ ಬೌದ್ಧಿಕ ವಲಯದ ಚಿಂತನೆಯಲ್ಲಿರುವ ಸಮಸ್ಯೆಯು ಸಾಹಿತ್ಯದ ವಿಮರ್ಶೆ ಮತ್ತು ಸಾಹಿತ್ಯದ ಸಂಶೋಧನೆಗಳಲ್ಲೂ ಪ್ರತಿಫಲಿತವಾಗಿದೆ. ಸಂಶೋಧನ ಕೌಶಲದಲ್ಲಿ ಕೊರತೆಯಿರುವಂತೆಯೇ ಆಕರಗಳನ್ನು ಪ್ರಾಮಾಣಿಕವಾಗಿ ಪರಿಗಣಿಸುವ ಮತ್ತು ಪರಿಶೀಲಿಸುವ ಧೋರಣೆಯಲ್ಲೂ ಕೊರತೆಯಿರುವುದನ್ನು ಈಚಿನ ಕೆಲವು ಬರಹಗಳು ತೋರಿಸಿಕೊಟ್ಟಿವೆ. 

   ವರ್ತಮಾನದ ರಾಜಕಾರಣದ ಅಗತ್ಯಕ್ಕೆ ತಕ್ಕಂತೆ ಪ್ರಾಚೀನ ಸಾಹಿತ್ಯವನ್ನು ಅಪಾರ್ಥ ಮಾಡಿಕೊಂಡು ಓದಿದ್ದಕ್ಕೆ ಹಲವು ದೃಷ್ಟಾಂತಗಳನ್ನು ನೀಡಬಹುದು. ಉದಾಹರಣೆಗೆ ಮನುಷ್ಯ ಜಾತಿ ತಾನೊಂದೆವಲA ಎಂದು ಹೇಳಿದ ಪಂಪನ ಮಾತನ್ನು ಪಂಪ ಬಳಸಿದುದಕ್ಕಿಂತ ಬೇರೆಯೇ ಅರ್ಥದಲ್ಲಿ ಅಥವಾ ಹೆಚ್ಚುಕಡಿಮೆ ವಿರುದ್ಧವಾದ ಅರ್ಥದಲ್ಲಿ ಬಳಸುತ್ತಿರುವ ಕ್ರಮವು ಲಾಗಾಯ್ತಿನಿಂದ ಕನ್ನಡ ವಿದ್ವತ್ ಲೋಕದಲ್ಲಿದೆ! ಹಾಗೆ ನೋಡಿದರೆ ಪಂಪನು ಆದಿಪುರಾಣದಲ್ಲಿ ಜಾತಿ ಸಮನತೆಯನ್ನು ಪ್ರತಿಪಾದಿಸಲೇ ಇಲ್ಲ! ಅಷ್ಟೇ ಅಲ್ಲ; ಇದು ಪಂಪನದೇ ಸ್ವಂತ ಮಾತು ಕೂಡ ಅಲ್ಲ. ಪೂರ್ವಪುರಾಣದಲ್ಲಿರುವುದೇ ಆಗಿದೆ. ಹೀಗಿದ್ದರೂ ಪಂಪನ ಈ ಸಾಲು ಧ್ಯೇಯವಾಕ್ಯವಾಗಿ ಕನ್ನಡದಲ್ಲಿ ಬಳಕೆಯಾಗುತ್ತಿದೆ. ಕನ್ನಡದ ಎಲ್ಲಾ ವಿಚಾರಸಂಕಿರಣಗಳಲ್ಲೂ ಉಲ್ಲೇಖವಾಗುತ್ತಲಿದೆ. ಈ ಬಗ್ಗೆ ಒಂದೆರಡು ಲೇಖನಗಳು ಕನ್ನಡದಲ್ಲಿ ಬಂದಿವೆಯಾದರೂ ಮುಂಚೂಣಿ ವಿಮರ್ಶಕರು ಅವುಗಳನ್ನು ಕಣ್ಣೆತ್ತಿಯೂ ನೋಡಿದಂತಿಲ್ಲ. ಪುಣ್ಯಕೋಟಿಯ ಕಥೆಯು ಹೇಳುವ ಮೌಲ್ಯ ಅಥವಾ ನೀತಿಯನ್ನು ತಪ್ಪಾಗಿ ಅರ್ಥೈಸಿಕೊಂಡು ಆ ಕಥೆಯು ಪರಿಸರ ಸಮತೋಲನಕ್ಕೆ ವಿರುದ್ಧ, ಹುಲಿಯ ವಿರುದ್ಧ, ದಮನಿತರ ವಿರುದ್ಧ ಎಂಬೆಲ್ಲ ರೀತಿಗಳಲ್ಲಿ ವ್ಯಾಖ್ಯಾನಿಸಿದ ವಿದ್ವಾಂಸರೂ ಕನ್ನಡದಲ್ಲಿ ಇದ್ದಾರೆ.

  ನಮ್ಮ ವಿಶ್ವವಿದ್ಯಾಲಯಗಳಲ್ಲಿ ವೈಜ್ಞಾನಿಕ ದೃಷ್ಟಿಯಿಂದ, ತರ್ಕವನ್ನು ಆಧರಿಸಿ ಸಂಶೋಧನೆಗಳು ನಡೆಯುತ್ತಿಲ್ಲ ಎನ್ನುವುದನ್ನು ತೋರಿಸುವ ಈಚಿನ ಒಂದು ಪ್ರಮುಖ ಕೃತಿ ರವಿ ಹಂಜ್ ಅವರ ‘ಬಸವರಾಜಕಾರಣ’. ಇದಕ್ಕೆ ಮುನ್ನುಡಿ ಬರೆದ ಶೈಲಜ ಹಿರೇಮಠ ಅವರು ಹೀಗೆ ಹೇಳುತ್ತಾರೆ. “ಜಾತಿಗಳು ಹಾಗೂ ಧರ್ಮಗಳು ಸಾಮಾಜಿಕ ನೆಲೆಯಲ್ಲಿ ಶಕ್ತಿಪ್ರದರ್ಶನದ ಅಸ್ತçವಾಗಿ ಹಾಗೂ ರಾಜಕೀಯ ನೆಲೆಯಲ್ಲಿ ದಾಳವಾಗಿ ಪರಿವರ್ತನೆಗೊಂಡವು. ಇದಕ್ಕೆ ಭದ್ರವಾದ ಬುನಾದಿ ಸೃಷ್ಟಿಯಾಗಿದ್ದೇ ವಿಶ್ವವಿದ್ಯಾನಿಲಯಗಳಲ್ಲಿ ನಡೆಯುವ ಪಿಎಚ್.ಡಿ. ಸಂಶೊಧನಾ ಅಧ್ಯಯನಗಳ ಮೂಲಕ”. ಮುಂದೆ ಅವರೇ ಹೇಳುವಂತೆ, “ವಚನ ಚಳುವಳಿ, ಜಾತಿ ನಿರ್ದಿಷ್ಟವಾಗಿ, ಧರ್ಮನಿರ್ದಿಷ್ಟವಾಗಿ ಬೆಳೆದ ಬೆಳವಣಿಗೆಯಲ್ಲಿ ಸಂಭವಿಸಿದ ಪ್ರಕ್ರಿಯೆಗಳು ಸೃಷ್ಟಿಸಿದ ರಾಜಕಾರಣವನ್ನು ರವಿ ಹಂಜ್ ಅವರ ‘ಬಸವರಾಜಕಾರಣ’ ಕೃತಿಯು ಅನಾವರಣಗೊಳಿಸುತ್ತದೆ.” ಬಸವಣ್ಣನವರ ಕಾಲದ ರಾಜಕಾರಣವನ್ನು ಅನಾವರಣಗೊಳಿಸುತ್ತಲೇ ನಮ್ಮ ಸಂಶೋಧನ ಕ್ಷೇತ್ರದ ರಾಜಕಾರಣವನ್ನೂ, ರಾಜಕೀಯ ಸರಿತನದ ದೃಷ್ಟಿಯನ್ನೂ ಅನಾವರಣಗೊಳಿಸಿದ್ದಾರೆ. ಆ ಮೂಲಕ ಸಂಶೋಧನ ಬರವಣಿಗೆಗಳು ಸತ್ಯ ಶೋಧನೆಗೆ ಮತ್ತು ಸತ್ಯ ಪ್ರತಿಪಾದನೆಗೆ ವಿಮುಖವಾಗುವುದನ್ನೂ ರವಿ ಹಂಜ್ ಈ ಕೃತಿಯಲ್ಲಿ ತೋರಿಸಿದ್ದಾರೆ. 

   ‘ಬಸವರಾಜಕಾರಣ’ ಪ್ರಕಟವಾಗಿ ಸಾಕಷ್ಟು ಸಮಯವಾಗಿದ್ದರೂ ಅವರ ಸವಾಲನ್ನು ಕನ್ನಡದ ಪ್ರಮುಖ ಸಂಸೋಧಕರು/ಲೇಖಕರು/ಚಿAತಕರು ಸ್ವೀಕರಿಸಿದಂತೆ ಕಾಣುವುದಿಲ್ಲ. ಅಲಕ್ಷö್ಯ ಮಾಡಿದಂತೆಯೇ ತೋರುತ್ತದೆ. ರವಿ ಹಂಜ್ ಅವರ ಕೆಲವು ತೀರ್ಮಾನಗಳು ಚರ್ಚಾರ್ಹವೇ ಇರಬಹುದು; ಕೆಲವು ತೀರ್ಮನಗಳಿಗೆ ಬರುವ ಮೊದಲು ಅವರು ಇನ್ನಷ್ಟು ಆಕರಗಳನ್ನು ಪರಿಶೀಲಿಸಬೇಕಿತ್ತು ಎಂದು ವಾದಿಸಲು ಅವಕಶವಿದೆ; ಅದೇನೇ ಇದ್ದರೂ ಅಲಕ್ಷö್ಯ ಮಾಡಬೇಕಾದ ಕೃತಿ ಇದಲ್ಲ. 

********

   ‘ಬಸವರಾಜಕಾರಣ’ ವನ್ನು ಲೇಖಕರು ಭಾರತೀಯ ತತ್ತ÷್ವಶಾಸ್ತç ಮತ್ತು ತರ್ಕಶಾಸ್ತçದ ಹಿನ್ನೆಲೆಯನ್ನು ಹೇಳುವುದರೊಂದಿಗೆ ಆರಂಭಿಸುತ್ತಾರೆ. “ಹಿಂದೂ, ಪಾಶುಪತ, ಜೈನ, ಬೌದ್ಧ ಧರ್ಮಗಳು ಧರ್ಮಗಳಾಗಿ ವಿಕಾಸಗೊಳ್ಳುವ ಮೊದಲು ತರ್ಕಸಾಸ್ತçದ ತಾತ್ತಿ÷್ವಕ ಶಾಲೆಗಳಾಗಿದ್ದವು. ಹಿಂದೂ ಸಂಸ್ಕೃತಿಯ ಉಳಿದೆಲ್ಲಾ ಪಂಥಗಳು ಸಹ ಭಾರತೀಯ ತರ್ಕಶಾಸ್ತçದ ಕವಲುಗಳೇ ಆಗಿವೆ. ಹಾಗಾಗಿಯೇ ಆ ಪಂಥಗಳು ಇತಿಹಾಸದುದ್ದಕ್ಕೂ ತಾರ್ಕಿಕ ಸಂವಾದಗಳಲ್ಲಿ ತೊಡಗಿ ನಂತರ ಪಂಥಶ್ರೇಷ್ಠತೆಯ ವ್ಯಸನಕ್ಕೊಳಗಾಗಿ ಅತಾರ್ಕಿಕ ಗಟ್ಟವೇರಿ ಇಂದಿನ ವಿರಾಟ್ ಜಾತಿ ಸ್ವರೂಪ ಪಡೆದುಕೊಂಡಿರುವುವು.” (ಪು. ೫). ಕುರುಡಾಗಿ ‘ನಂಬುವುದರ’ ಬದಲಾಗಿ ಜ್ಞಾನ, ತರ್ಕಗಳನ್ನು ಅವಲಂಬಿಸಿದ ಅಧ್ಯಾತ್ಮವು ಪ್ರಾಚೀನ ಭಾರತೀಯ ಪರಂಪರೆಯ ವೈಶಿಷ್ಟö್ಯ. ಹೀಗೆ ಭಾರತೀಯ ಪರಂಪರೆಯಲ್ಲಿ ಆಧ್ಯಾತ್ಮಿಕ ಜಿಜ್ಞಾಸೆಯು ತತ್ತ÷್ವಶಾಸ್ತç ಮತ್ತು ತರ್ಕವನ್ನು ಅವಲಂಬಿಸಿದ್ದನ್ನೇ ಇಲ್ಲಿ ಲೇಖಕರು ಸರಿಯಾಗಿಯೇ ಗುರುತಿಸಿದ್ದಾರೆ. ತತ್ತ÷್ವ ಜಿಜ್ಞಾಸೆಯು ಯಾವುದೋ ಹಂತದಲ್ಲಿ ಶ್ರೇಷ್ಠತೆಯ ವ್ಯಸನಕ್ಕೆ ತಿರುಗಿ ಜಿಜ್ಞಾಸೆಯು ಸ್ಥಗಿತವಾದುದರಿಂದಲೇ ತರ್ಕವು ಹಿಂದೆ ಬಿತ್ತು ಎನ್ನುವುದು ಬಹುಶಃ ಲೇಖಕರ ಸೂಚನೆ. 

   ಇದು ಹಿಂದಿನ ಕಾಲದ ಕತೆಯಾಯಿತು. ಆದರೆ ಆಧುನಿಕ ವೈಚಾರಿಕ, ವೈಜ್ಞಾನಿಕ ಮತ್ತು ಮತನಿರಪೇಕ್ಷ ದೃಷ್ಟಿಕೋನದವರು ಎನಿಸಿಕೊಂಡವರಾದರೂ ಮಾಡಿದುದೇನು? ಪ್ರಾಚೀನ ಕಾಲದ ಸಂವಾದ, ತತ್ತ÷್ವಜಿಜ್ಞಾಸೆ, ತರ್ಕಕ್ಕೆ ಪರ್ಯಾಯವಾಗಿ ಇಂದು ನಾವು ಪರಿಗಣಿಸಬೇಕಾಗಿರುವ ಈ ಕಾಲದ ಸಂಶೋಧನೆಗಳಾದರೂ ಹೇಗಿವೆ?  ಸಂಶೋಧಕರ ಸತ್ಯನಿಷ್ಠೆ ಮತ್ತು ಬದ್ಧತೆ ಯಾವ ಬಗೆಯದು? ಇವೆಲ್ಲ ಕೇಳಿಕೊಳ್ಳಬೇಕಾದ ಪ್ರಶ್ನೆಗಳು. 

   “ಅಂದು ನಮ್ಮ ಶಿಕ್ಷಕರು ತರ್ಕವೆಂದರೆ ವಾದ, ಸಂವಾದ, ಚರ್ಚಾಸ್ಪರ್ಧೆಗಳೆಂಬರ್ಥವನ್ನು ಕೊಡುತ್ತಿದ್ದರು ಅಥವಾ ಹಾಗೆಂದು ತಿಳಿದಿದ್ದರು. ತರ್ಕವೆಂಬುದು ಗಣಿತದ ಯಾ ವಿಜ್ಞಾನದ ಬುನಾದಿ ಎಂದು ಅವರು ತಿಳಿದಿರಲಿಲ್ಲ. ಇಂದಿನ ಭಾರತೀಯ ವಿಶ್ವವಿದ್ಯಾನಿಲಯಗಳ ಸಾಕಷ್ಟು ಉಪನ್ಯಾಸಕವರ್ಗವೂ ಬಗೆದಿಲ್ಲ!.... ವರ್ತಮಾನದಲ್ಲಿನ ಭಾಷಾ ಮತ್ತು ಸಾಮಾಜಿಕ ಉಪನ್ಯಾಸಕ ಹುದ್ದೆಯ ಅನೇಕ ಬುದ್ಧಿಜೀವಿಗಳ ತರ್ಕವೆಂದರೆ ವಾದ ಎಂಬ ಸಕುಚಿತಕ್ಕೆ ತರ್ಕವನ್ನು ಸೀಮಿತ ದಿಕ್ಸೂಚಿಗೊಳಪಡಿಸಿರುವುದು ತತ್ತ÷್ವಮೀಮಾಂಸೆಯ ದುರಂತ.” (ಪು. ೧೦). ಕಲ್ಪನಾ ಸಾಹಿತ್ಯ ಸೃಷ್ಟಿಗೆ, ಅಂದರೆ ಕಥೆ, ಕಾದಂಬರಿ, ನಾಟಕ, ಕಾವ್ಯಗಳಿಗೆ ಹೆಚ್ಚು ತರ್ಕ ಬೇಡ; ಸಂಶೋಧನೆಗೆ ತರ್ಕ ಬೇಕು. ವಿಮರ್ಶೆಗೂ ಬೇಕು. ಆದರೆ ಇಂದು ಸಂಶೋಧನೆ ಅಥವಾ ವೈಚಾರಿಕ ನಿರೂಪಣೆಗಳಿಗೂ ತರ್ಕ ಅಗತ್ಯವಿಲ್ಲ ಎಂಬAತಾಗಿದೆ. ನಿಮ್ಮ ಕಥನವನ್ನು ಯಾರಾದರೂ ತರ್ಕದ ನೆಲೆಯಿಂದ ಪ್ರಶ್ನಿಸಿದರೆ ದಿವ್ಯ ನಿರ್ಲಕ್ಷö್ಯ ತೋರಿಸಿದರಾಯಿತು; ಅಥವಾ ವರ್ತಮಾನದ ಸಾಮಾಜಿಕ, ರಾಜಕೀಯ ಪರಿಸ್ಥಿತಿಯಲ್ಲಿ ತರ್ಕ ಮತ್ತು ಸತ್ಯಕ್ಕಿಂತ ‘ರಾಜಕೀಯ ಸರಿತನ’ವೇ ಮುಖ್ಯ ಎಂದರಾಯಿತು; ಅಥವಾ ಮತ್ತಷ್ಟು ಒತ್ತಡ ಬಂದರೆ, ‘ಸತ್ಯಕ್ಕೆ ಹಲವು ಮುಖಗಳಿರುತ್ತವೆ’ ಎಂದು ಹೇಳಿ ಮುಖ ತಿರುಗಿಸಿದರಾಯಿತು. 

   ರವಿ ಹಂಜ್ ಹೇಳುವಂತೆ “ಸ್ವಾತಂತ್ರೊö್ಯÃತ್ತರದ ಸಂಶೋಧಕರು ಆ ಸಾಸ್ತಿçÃಯ ವೈಧಾನಿಕತೆಗಳನ್ನು ನಿರ್ಲಕ್ಷಿಸಿ ಭಾವನಾತ್ಮಕವಾಗಿ ಕ್ರಿಯಾಶೀಲರಾಗಿದ್ದಾರೆ” (ಪು. ೧೯). ಭಾರತೀಯ ಸಮಾಜದಲ್ಲಿ ಜನಜನಿತವಾಗಿರುವ ಕೆಲವೇ ಕೆಲವು ಸಿದ್ಧಾಂತಗಳನ್ನು ಪರಿಗಣಿಸಿ ಆ ಸಿದ್ಧಾಂತಗಳು ಹೇಗೆ ಸಾಮಾನ್ಯಜ್ಞಾನದ ವಿಶ್ಲೇಷಣೆಗೆ, ತರ್ಕಕ್ಕೆ ಮತ್ತು ಸಾಕ್ಷಿಗಳಿಗೆ ವಿರುದ್ಧವಾಗಿವೆ ಎಂದು ಪರಿಶೀಲಿಸುವುದು ಲೇಖಕರ ಉದ್ದೇಶವಾಗಿದೆ. (ಪು.೨೦). 

     ‘ಬಸವರಾಜಕಾರಣ’ವು ಮುಖ್ಯವಾಗಿ ವೀರಶೈವ-ಲಿಂಗಾಯತರ ಚಳವಳಿಯ ಕುರಿತು ಬಂದ ಸಂಶೋಧನಬರೆಹಗಳನ್ನು ವಿಮರ್ಶೆಗೊಳಪಡಿಸುತ್ತದೆ. ವಚನಗಳನ್ನೇ ಲೇಖಕರು ಆಕರಗಳನ್ನಾಗಿ ಬಳಸುತ್ತಾರೆ. ಅವರು ಹೆಚ್ಚು ಕಡಿಮೆ ವಚನಗಳನ್ನು ಮಾತ್ರವೇ ಬಳಸಿಕೊಳ್ಳುವುದು. ಒಟಾರೆಯಾಗಿ ಬರತೀಯ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಗಳ ಸ್ವರೂಪವನ್ನು ಲೇಖಕರು ಗಮನದಲ್ಲಿ ಇಟ್ಟುಕೊಳ್ಳುತ್ತಾರಾದರೂ ನಿರ್ದಿಷ್ಟವಾಗಿ ವಚನಗಳ ಕುರಿತ ಸಂಶೋಧನೆಯನ್ನು ವಿವೇಚಿಸುತ್ತ ತಮ್ಮ ವಿಮರ್ಶೆಯನ್ನು ಹರಿತಗೊಳಿಸಿ ಕೇಂದ್ರೀಕರಿಸಿದ್ದಾರೆ. ವಚನಗಳು ಮತ್ತು ವೀರಶೈವ- ಲಿಂಗಾಯತವನ್ನು ಆಯ್ದುಕೊಳ್ಳಲು ಕಾರಣವನ್ನು ಹೀಗೆ ಹೇಳಿದ್ದಾರೆ: “ಈ ವಿಷಯಗಳನ್ನು ನಾನು ಆಯ್ದುಕೊಳ್ಳಲು ಪ್ರಮುಖವಾಗಿ ಅವುಗಳ ಸಾಮಾಜಿಕ ಸಿದ್ಧ ಸಿದ್ಧಾಂತ, ಮನ್ನಣೆ ಮತ್ತು ಸತ್ಯಾಸತ್ಯತೆಯಲ್ಲಿನ ವ್ಯತ್ಯಾಸಗಳು ಕಾರಣವಾಗಿವೆ... ಈ ಆಯ್ಕೆಯ ಕೆಲವು ವಿಷಯಗಳ ಕುರಿತಾಗಿ ಯಾವುದೇ ಭಿನ್ನಾಭಿಪ್ರಾಯ ಮಂಡನೆಯನ್ನು ಭಾರತೀಯ ಪ್ರಜಾಪ್ರಭುತ್ವದ ಸಂಖ್ಯಾಸೂತ್ರದನ್ವಯ ಸಮಾಜದ್ರೋಹದಂತೆ ಪರಿಗಣಿಸಲಾಗುತ್ತದೆ. ಆದರೆ ಸತ್ಯವನ್ನು ಒಂದು ತಾರ್ಕಿಕ ನೆಲೆಯಲ್ಲಿ ಕಂಡುಕೊಳ್ಳಬೇಕಾದ ಅಗತ್ಯ ಎಲ್ಲಾ ಸಾಸ್ತçಸೂತ್ರಗಳನ್ನು ಮೀರಿ ಈಗ ಅತ್ಯಂತ ಹೆಚ್ಚಾಗಿದೆ.... ಈ ವಿಷಯಗಳನ್ನು ತರ್ಕ, ಸಾಮಾನ್ಯಜ್ಞಾನ, ಖಚಿತ ಪುರಾವೆ ಮತ್ತು ವಿಶ್ಲೇಷಣೆಗೊಳಪಡಿಸಿದಾಗ ದೊರೆತ ಫಲಿತಾಂಶವು ಅವುಗಳ ಇಲ್ಲಿಯವರೆಗಿನ ನಿರೂಪಿ ಸಿದ್ಧಸಿದ್ಧಾಂತಗಳಿಗೆ ವ್ಯತಿರಿಕ್ತವಾಗಿದೆ. ಸಾಮಾಜಿಕವಾಗಿ ರಾಜಕೀಯವಾಗಿ ಅತ್ಯಂತ ಪ್ರಭಾವಶಾಲಿ ಎನಿಸಿದ ಸಂಗತಿಗಳೇ ಇಷ್ಟೊಂದು ವ್ಯತಿರಿಕ್ತವಾಗಿರುವಾಗ ‘ಶೋಧ್ ಗಂಗಾ’ ದಲ್ಲಿರುವ ಲಕ್ಷಾಂತರ ಸಂಶೋಧನೆಗಳು ಎಷ್ಟರಮಟ್ಟಿಗೆ ವ್ಯತಿರಿಕ್ತವಾಗಿರಬಹುದು?” (ಪು. ೨೧). 

  ಭಾರತದಲ್ಲಿ ಜಾತಿತಾರತಮ್ಮದ ಕಥನದ ಚರಿತ್ರೆಯನ್ನು ರವಿ ಹಂಜ್ ರವಿ ಹಂಜ್ ಮೊದಲಿಗೆ ಪರಿಶೀಲಿಸುತ್ತಾರೆ. ಸಮಾಜದಲ್ಲಿ ವೃತ್ತಿಯಾಧಾರಿತ ವಿಭಾಗಗಳು ತೊಲಗಿ ಹುಟ್ಟಿನಿಂದ ಜಾತಿ ಎನ್ನುವ ನೀತಿಯು ಪ್ರಧಾನವಾಗಲಾರಂಭಿಸಿದಾಗ ಅದನ್ನು ಪ್ರಶ್ನಿಸುತ್ತ ವಚನಗಳ ಚಳವಳಿ ಹುಟ್ಟಿ ಬೆಳೆಯಿತು ಎಂಬುದು ರವಿ ಹಂಜ್ ಅವರ ಮುಖ್ಯ ಪ್ರತಿಪಾದನೆ. ಹೀಗಾಗಿ ಅಸ್ಪೃಶ್ಯತೆ ಮತ್ತು ಹುಟ್ಟಿನಿಂದಲೇ ನಿರ್ಧಾರವಾಗುವ ಜಾತಿ ಪದ್ಧತಿಯು ಯಾವಾಗ ಆರಂಭವಾಯಿತು ಎಂಬ ಚರ್ಚೆಯನ್ನು ಅವರು ಕೈಗೆತ್ತಿಕೊಳ್ಳುತ್ತಾರೆ. 

  ತಮ್ಮ ವಾದದಲ್ಲಿ ಮೊದಲನೆಯದಾಗಿ, “ಅಸ್ಪೃಶ್ಯತೆಯು ಭರತಖಂಡದಾದ್ಯAತ ಶತಶತಮಾನಗಳಿಂದ ಜಾರಿಯಲ್ಲಿದೆಯೆಂದು, ಅಸ್ಪೃಶ್ಯರನ್ನು ಶತಶತಮಾನಗಳಿಂದ ಶೋಷಣೆಗೊಳಪಡಿಸಿ ತುಳಿಯಲಾಗಿದೆಯೆಂದು, ಇದಕ್ಕೆಲ್ಲಾ ಕಾರಣ ಸನಾತನವಾಗಿ ಕ್ರಿಸ್ತಪೂರ್ವದಿಂದಲೂ ಇರುವ ‘ಹುಟ್ಟಿನಿಂದಲೇ ನಿಧಾರವಾಗುವ’ ಜಾತಿಪದ್ಧತಿ” ಎಂಬ ಕಥನದ ಬಗ್ಗೆ ಪ್ರಶ್ನೆಯನ್ನು ಎತ್ತುತ್ತಾರೆ. ಈ ಕಥನವನ್ನು ಅಲ್ಲಗಳೆಯಲು ಆಧಾರಗಳನ್ನು ನೀಡಲು ಯತ್ನಿಸುತ್ತಾರೆ. 

  ಯುರೋಪಿಯನ್ನರು ರಿಲಿಜಿಯಸ್ ಪುಸ್ತಕದ ಆಧಾರದಲ್ಲಿ ಮೌಲ್ಯಗಳನ್ನು ನ್ಯಾಯವನ್ನು ನಿರ್ಣಯಿಸುವ ಪರಂಪರೆಯವರು. ಸರಿಯಾದ ಒಂದು ಆಧಾರಗ್ರಂಥವಿಲ್ಲದ ಪೇಗನ್‌ಗಳ ನಡೆನುಡಿಯ ಸರಿತಪ್ಪುಗಳನ್ನು ನಿರ್ಣಯಿಸುವುದು ಹೇಗೆ? ಅದೇ ಹಿನ್ನೆಲೆಯಿಂದ ಅವರು ಬಾರತದ ಸಂಪ್ರದಾಯಗಳನ್ನು ಅರ್ಥ ಮಾಡಿಕೊಂಡು ಭಾರತೀಯರ ರಿಲಿಜಿಯಸ್ ಗ್ರಂಥಗಳ ಹುಡುಕಾಟದಲ್ಲಿ ತೊಡಗಿದ್ದು ಇವೆಲ್ಲ ಸಂಗತಿಗಳ ಈಚೆಗೆ ಸಾಕಷ್ಟು ಚರ್ಚೆಗಳಾಗಿವೆ. ಆಗುತ್ತಿವೆ. ರವಿ ಹಂಜ್ ಅವರು ಕೂಡ ಸರಿಯಾಗಿಯೇ “ಮನುಸ್ಮೃತಿಗೆ ಪ್ರಾಮುಖ್ಯವನ್ನು ಕೊಟ್ಟದ್ದೇ ಬ್ರಿಟಿಷರು” ಎಂದು ಹೇಳುತ್ತಾರೆ. (ಪು. ೧೬). “ಮೊಟ್ಟ ಮೊದಲ ಬಾರಿಗೆ ಬ್ರಿಟಿಷ್ ಸರಕಾರಕ್ಕೆ ಭಾರತೀಯರನ್ನು ಆರ್ಯ, ದ್ರಾವಿಡ, ಅರಬ(ಮುಸ್ಲಿಂ)ರೆAದು ಜನಾಂಗೀಯವಾಗಿ ಗುರುತಿಸ(ವಿಭಜಿಸ)ಬೇಕೆಂಬ ಮಂಡನೆಯನ್ನಿರಿಸಿದವನೇ ಇವನು (ಸರ್ ವಿಲಿಯಂ ಜೋನ್ಸ್)... ಮುಂದೆ ಕ್ರಿ.ಶ. ೧೭೯೪ರಲ್ಲಿ ಸರ್ ವಿಲಿಯಂ ಜೋನ್ಸ್, ಬ್ರಿಟಿಷ್ ಸರಕಾರದ ಅಣತಿಯಂತೆ ಹಿಂದೂ ಕಾನೂನಾಗಿಸಲೆಂದೇ ಮನುಸ್ಮೃತಿಯನ್ನು ಇಂಗ್ಲಿಷಿಗೆ ಭಾಷಾಂತರಿಸಿದನು.” (ಪು. ೧೭). 

   ೫ನೇ ಶತಮಾನದಲ್ಲಿ ಭಾರತಕ್ಕೆ ಭೇಟಿ ಕೊಟ್ಟಿದ್ದ ಫಾಹಿಯಾನ್ ಮತ್ತು ೭ನೇ ಶತಮಾನದ ಚೀನೀ ಪ್ರವಾಸಿ ಹುಯೆನ್ ತ್ಸಾಂಗ್ ಮತ್ತು ಹನ್ನೊಂದನೇ ಶತಮಾನದಲ್ಲಿ ಭಾರತಕ್ಕೆ ಬಂದ ಅಲ್ ಬೆರೂನಿ- ಈ ಪ್ರವಾಸಿಗಳ ಅವಲೋಕನಗಳನ್ನು ಆಧರಿಸಿ ಆ ಅಸ್ಪೃಶ್ಯತೆ ಮತ್ತು ಜಾತಿಯ ಪ್ರಶ್ನೆಗಳನ್ನು ಲೇಖಕರು ವಿವೇಚಿಸುತ್ತಾರೆ. ಫಾಹಿಯಾನನ ಮಾತುಗಳನ್ನು ಲೇಖಕರು ಹೀಗೆ ಉಲ್ಲೇಖಿಸುತ್ತಾರೆ: “ಚಾಂಡಾಲರು ತಮ್ಮ ಕಟುಕ ವೃತ್ತಿಯನ್ನು ಬಿಟ್ಟು ಪರಿವರ್ತನೆಗೊಂಡಲ್ಲಿ(ವೃತ್ತಾö್ಯAತರಗೊAಡಲ್ಲಿ) ಪುರೋಹಿತರಾಗುವ ವ್ಯವಸ್ಥೆ ಕೂಡಾ ಇದೆ.” (ಪು. ೩೬). ಫಾಹಿಯಾನ್ ದಾಖಲಿಸಿರುವುದು ಒಂದು ‘ಸಾಮಾಜಿಕ ವ್ಯವಸ್ಥೆ’ಯ ಶ್ರೇಣೀಕೃತ ವಾಣಿಜ್ಯಸಂಕರ ಎನ್ನಬೇಕಾಗುತ್ತದೆಯೇ ಹೊರತು ‘ಧರ್ಮಾಧಾರಿತ’ ವರ್ಣಸಂಕರವಲ್ಲ ಎನ್ನುವ ರವಿ ಹಂಜ್ ಮುಂದುವರಿದು ಹೀಗೆ ಹೇಳುತ್ತಾರೆ.: “ಫಾಹಿಯಾನ್ ಎಲ್ಲಿಯೂ ಚಾಂಡಾಲರು ಮುಟ್ಟಲು ಯಾ ಮುಟ್ಟಿಸಿಕೊಳ್ಳಲು ಅನರ್ಹರೆಂದು ಹೇಳಿಲ್ಲ. ಅದನ್ನು ಹೇಳುವ ಅವಶ್ಯಕತೆಯೇ ಅವನಿಗಿರಲಿಲ್ಲ! ಏಕೆಂದರೆ ಜನ ಅವರ ಕೈಯಿಂದ ಮಾಂಸವನ್ನು ಕೊಳ್ಳುತ್ತಿದ್ದರು ಮತ್ತು ಪರಿವರ್ತಿತರಾದರೆ ಅವರನ್ನು ಒಳಗೊಳ್ಳುತ್ತಿದ್ದರು ಮತ್ತು ಬ್ರಾಹ್ಮಣರಾದರೆ ಅವರನ್ನು ಆರಾಧಿಸುತ್ತಿದ್ದರು ಸಹ. ಒಟ್ಟಾರೆ ಫಾಹಿಯಾನನ ಪ್ರಕಾರ ಹುಟ್ಟಿನಿಂದ ವರ್ಣಗಳು ನಿರ್ಧಾರವಾಗುತ್ತಿರಲಿಲ್ಲ ಮತ್ತು ಅಸ್ಪೃಶ್ಯತೆಯಂತೂ ಇರಲೇ ಇಲ್ಲ.” (ಪು. ೩೭). 

   ಹುಯೆನ್ ತ್ಸಾಂಗ್ ಕೂಡ ಅಸ್ಪೃಶ್ಯತೆಯ ಬಗ್ಗೆ ಯಾವುದೇ ಮಾಹಿತಿಯನ್ನು ದಾಖಲಿಸಿಲ್ಲವೆಂಬುದು ಗಮನಾರ್ಹ ಸಂಗತಿ ಎಂದು ಲೇಖಕರು ಗುರುತಿಸುತ್ತಾರೆ. ಬ್ರಾಹ್ಮಣರ ಕೇರಿ, ಕುರುಬರ ಕೇರಿ, ಕುಂಬಾರರ ಕೇರಿ ಇತ್ಯಾದಿ ಕೇರಿಗಳು ಔದ್ಯೋಗಿಕ ಕಾರಣಗಳಿಂದಾದ ವರ್ಗೀಕರಣ ಎಂದು ರವಿ ಹಂಜ್ ಹೇಳುತ್ತಾರೆ. ಅವರ ಪ್ರಕಾರ ಆಗಿನ ವರ್ಣಗಳು ಈಗಿನ ಅಧುನಿಕ ಸಮಾಜದ ಬಿಳಿಯ ಕಾಲರಿನ ಮತ್ತು ನೀಲಿ ಕಾಲರ್ ವ್ಯತ್ಯಾಸವಿದ್ದಂತೆ.... ವೃತ್ತಿಯ ಸ್ಥಳ ವ್ಯತ್ಯಾಸವಿದ್ದಂತೆಯೇ ಹೊರತು ಹುಟ್ಟಿನಿಂದಾದ ಜಾತಿ, ಧರ್ಮದಿಂದಾದ ವ್ಯತ್ಯಾಸವಲ್ಲ. (ಪು. ೪೦).

  ಶಂಕರಾಚಾರ್ಯರು ಮತ್ತು ಚಾಂಡಾಲನೋರ್ವನ ನಡುವೆ ನಡೆಯಿತೆನ್ನಲಾದ ಸಂವಾದದ ಬಗ್ಗೆ ಬರೆಯುತ್ತಾ ಹಂಜ್ ಹೀಗೆ ಹೇಳುತ್ತಾರೆ: “ಇವರೀರ್ವರ ನಡುವೆ ನಡೆದ ಸಂಭಾಷಣೆಯ ವಿವರಗಳು ಕೂಡಾ ಅಂತರAಗ/ಬಹಿರAಗ ಶುದ್ಧಿಯ ಕುರಿತಾಗಿವೆಯೇ ಹೊರತು ಅಸ್ಪೃಶ್ಯತೆಯ ಕುರಿತಲ್ಲ... ಈ ದೃಷ್ಟಾಂತದಲ್ಲಿ ಶುದ್ಧಿ ಪದವು ಮಡಿಯೆನಿಸಿ ಮೈಲಿಗೆ ಪದವು ಅಸ್ಪೃಶ್ಯತೆ ಪದದ ತತ್ಸಮಾನ ಪದವೆನಿಸುವುದರಿಂದ ಹೆಚ್ಚು ವಿಶ್ಲೇಷಣೆಯಿಲ್ಲದೆ ಸಂಸೋಧನೆಗಳು ‘ಆಹಾ, ಇದೋ ಅಸ್ಪೃಶ್ಯತೆ’ ಎಂದAತಿದೆಯೆನಿಸುತ್ತದೆ.” (ಪು. ೪೧- ೪೨).

   ಇರಾನಿ ಯಾತ್ರಿಕ ಅಲ್ ಬರೂನಿ ಕೂಡ ಅಂತ್ಯಜರು ಮೋಕ್ಷಕ್ಕೆ ಅರ್ಹರಲ್ಲವೆಂಬ ಅಭಿಪ್ರಾಯವನ್ನು ಬಿಟ್ಟರೆ ಅಸ್ಪೃಶ್ಯತೆಯ ಬಗ್ಗೆ ಏನನ್ನೂ ಹೇಳಿಲ್ಲ ಎಂದು ಲೇಖಕರು ಹೇಳುತ್ತಾರೆ. “ಅಲ್ ಬರೂನಿಯ ಹಿಂದೂಸ್ತಾನದ ದಸ್ತಾವೇಜಿನಲ್ಲಿ ಅತ್ಯಂತ ಪ್ರಮುಖವಾಗಿ ಗಮನಿಸಬೇಕಾದುದು ‘ಅಂತ್ಯಜ’ ವರ್ಗ. ಇದು ಚಾತುರ್ವರ್ಣದ ಹೊರಗೆ ಆಗಷ್ಟೇ ಸೃಷ್ಟಿಯಾದ ವರ್ಗ! ಏಕೆಂದರೆ ಇಸ್ಲಾಂ ದಾಳಿಯ ನಂತರ ಹುಟ್ಟಿನಿಂದ ಜಾತಿಯನ್ನು ಸೃಷ್ಟಿಸಿಕೊಂಡ ಹಿಂದೂ ಧರ್ಮ, ಅದನ್ನು ಒಮದು ಕಟ್ಟುನಿಟ್ಟಿನ ನಿಯಮವನ್ನಾಗಿಸಲು  ಯಾರಾದರೂ ತಮ್ಮ ವರ್ಗಗಳ ಹೊರಗೆ ವಿವಾಹಸಂಬAಧಗಳನ್ನೋ, ವಿವಾಹೇತರ ಸಂಬAಧಗಳನ್ನೋ ಹೊಂದಿ ಮಕ್ಕಳನ್ನು ಪಡೆದರೆ ಆ ಮಕ್ಕಳನ್ನು ಅಂತ್ಯಜರೆನ್ನುವ, ವರ್ಣಗಳ ಹೊರಗಿನವರೆಂದು ವರ್ಗೀಕರಿಸಿ ಅಂತಹವರು ಮೋಕ್ಷಕ್ಕೆ ಅರ್ಹರಲ್ಲವೆನ್ನುತ್ತಿದ್ದರು...” (ಪು. ೪೭). 

    “ಹುಟ್ಟಿನಿಂದ ಜಾತಿಗಳನ್ನು ನಿರ್ಧರಿಸುವ ಪದ್ಧತಿ ಇಸ್ಲಾಂ ಬಂಡುಕೋರ ದಾಳಿಯ ನಂತರ ಜಾರಿಗೆ ಬಂದಿತು ಎಂದು ಐತಿಹಾಸಿಕ ದಾಖಲೆಗಳು ಹೇಳುತ್ತವೆ.” ಎಂದು ರವಿ ಹಂಜ್ ಪ್ರತಿಪಾದಿಸುತ್ತಾರೆ. (ಪು. ೪೨). “ಭಾರತದಲ್ಲಿ ನೆಲೆ ನಿಲ್ಲದ ಮುಸ್ಲಿಂ ದಾಳಿ ‘ಹುಟ್ಟಿನಿಂದ ಜಾತಿ’ಯ ಸೃಷ್ಟಿಗೆ ಕಾರಣವಾಗಿ ‘ಧಾರ್ಮಿಕ ಅಸಮಾನತೆ’ಯನ್ನು ಸೃಷ್ಟಿಸಿದರೆ, ಇಲ್ಲಿಯೇ ನೆಲೆನಿಂತ (ಮೊಘಲ್) ಮುಸ್ಲಿಂ ಆಡಳಿತ ‘ಸಾಮಾಜಿಕ ಅಸಮಾನತೆ’ಯನ್ನು ಸೃಷ್ಟಿಸಿತು. ಹಾಗೆಂದು ಸಾಮಾಜಿಕ ಅಸಮಾನತೆ ಮುಸ್ಲಿಂ ಆಡಳಿತಗಾರರಿಗಿಂತ ಮುಂಚಿತವಾಗಿ ಭಾರತದಲ್ಲಿ ಇರಲೇ ಇಲ್ಲವೆಂದಲ್ಲ. ಅದು ಪ್ರಭುತ್ವ ಪಂಥಗಳ ಉನ್ನತ ವರ್ಗಗಳ ಓಲೈಕೆಯ ಮಟ್ಟಿಗಿದ್ದಿತೇ ಹೊರತು ಸಾಮಾನ್ಯ ವರ್ಗಗಳ ಮಟ್ಟಿಗೆ ಅದರ ಬಿಸಿ ತಟ್ಟಿರಲಿಲ್ಲ.” (ಪು. ೫೦). 

    ಭಾರತದಲ್ಲಿ ಸುಮಾರು ಹತ್ತನೇ ಶತಮಾನದ ಬಳಿಕ ಭಕ್ತಿಪಂಥಗಳ ಹುಟ್ಟಿ ಬೆಳೆದುದರ ಕಾರಣವನ್ನು ರವಿ ಹಂಜ್ ಹೀಗೆ ಗುರುತಿಸುತ್ತಾರೆ: “...ಧಾರ್ಮಿಕ ಅಸಮಾನತೆ ಮತ್ತು ಸಾಮಾಜಿಕ ಅಸಮಾನತೆಯೆಂಬ ಎರಡು ಅನಿಷ್ಟಗಳನ್ನು ವಿರೋಧಿಸಿ ಸಾಕಷ್ಟು ನವಪ್ರಭುತ್ವಗಳು, ಭಕ್ತಿಪಂಥಗಳು ಉದಯವಾದವು. ಶೂದ್ರ ಭಕ್ತಿಪಂಥಗಳ ಪ್ರಮುಖ ಉದ್ದೇಶ ‘ಸಾಮಾಜಿಕ ನ್ಯಾಯ’ ಮತ್ತು ‘ಧಾರ್ಮಿಕ ಸಮಾನತೆ’ಯಾಗಿದ್ದವು. ‘ಹುಟ್ಟಿನಿಂದ ಜಾತಿ’, ಮತ್ತು ಸಾಮಾಜಿಕ ಅಸಮಾನತೆಗಳು ಕ್ರಮೇಣವಾಗಿ ವಿವಿಧ ಪ್ರಾಂತ್ಯಗಳಿಗೆ ಮುಸ್ಲಿಂ ಆಕ್ರಮಣ ವಿಸ್ತಾರಗೊಂಡAತೆ ವಿಸ್ತರಿಸುತ್ತಾ ಸಾಗಿದವು. ಅದಕ್ಕನುಗುಣವಾಗಿ ಶೂದ್ರ ಭಕ್ತಿಪಂಥ ಸಹ ವಿಸ್ತಾರಗೊಳ್ಳುತ್ತಾ ಸಾಗಿತು. ಹಾಗಾಗಿಯೇ ಶೂದ್ರ ಭಕ್ತಿಪಂಥ ಹತ್ತನೇ ಶತಮಾನದಿಂದ ಹದಿನಾರನೇ ಶತಮಾನದವರೆಗೆ ಮುಸ್ಲಿಂ ಪ್ರಭುತ್ವಗಳು ವಿಸ್ತಾರಗೊಂಡAತೆ ವಿಸ್ತರಿಸುತ್ತ ಸಾಗಿಬಂದಿದೆ.” (ಪು. ೫೨).

   ಫಾಹಿಯಾನ್, ಹುಯೆನ್ ತ್ಸಾಂಗ್‌ರAಥವರ ಪ್ರವಾಸದ ಕಾಲದಲ್ಲಿ ಇತ್ತೇ ಅಥವಾ ಇರಲಿಲ್ಲವೇ ಎಂದು ಲೇಖಕರು ಪರಿಶೀಲಿಸುವ ಪದ್ಧತಿಯನ್ನು ‘ಹುಟ್ಟಿನಿಂದ ಜಾತಿ’ ಎಂದು ಕರೆದಿರುವುದು ಸ್ವಲ್ಪ ಗೊಂದಲಕ್ಕೆ ಕಾರಣವಾಗುತ್ತದೆ. ಜಾತಿ ಎನ್ನುವ ಪದವೇ ಹುಟ್ಟು, ಜನ್ಮ ಎಂಬರ್ಥದ್ದು. ಹೀಗಿರುವಾಗ ‘ಹುಟ್ಟಿನಿಂದ ಜಾತಿ’ ಎನ್ನುವುದು ಇರಲಿಲ್ಲ ಎಂದರೆ ವೈರುಧ್ಯದಂತೆ ತೋರುತ್ತದೆ. ಬಹುಶಃ ಸುಮಾರಾಗಿ ಹತ್ತನೇ ಶತಮಾನದ ಪೂರ್ವದಲ್ಲಿ ಹುಟ್ಟಿನಿಂದ ವರ್ಣ ಅಥವಾ ವೃತ್ತಿಯ ನಿರ್ಧಾರವಾಗುತ್ತಿರಲಿಲ್ಲ ಎಂಬುದು ಲೇಖಕರ ಪ್ರತಿಪಾದನೆಯಿರಬೇಕು ಎನಿಸುತ್ತದೆ. ಹೆಚ್ಚಿನೆಲ್ಲಾ ಕಡೆಗಳಲ್ಲಿ ಲೇಖಕರು ‘ಹುಟ್ಟಿನಿಂದ ಜಾತಿ ಎನ್ನುವ ಪದ್ಧತಿ ಇರಲಿಲ್ಲ’ ಎಂದೇ ಪದಪುಂಜವನ್ನು ಬಳಸಿ ಗೊಂದಲ ಉಂಟುಮಾಡುತ್ತಾರಾದರೂ ಒಂದೆರಡು ಕಡೆಗಳಲ್ಲಿ ಸರಿಯಾಗಿ ಅರ್ಥವಾಗುವಂತೆ ‘ಹುಟ್ಟಿನಿಂದ ವರ್ಣ ನಿಧಾರವಾಗುತ್ತಿರಲಿಲ್ಲ’ ಎಂದೇ ಪದಗಳನ್ನು ಬಳಸಿರುವುದರಿಂದ (ಪು. ೩೭) ಅವರು ಒಟ್ಟಾರೆಯಾಗಿ ಹೇಳುವುದೇನು ಎನ್ನುವುದು ಗೊತ್ತಾಗುತ್ತದೆ. ‘ಹುಟ್ಟನ್ನು’ ಆಧರಿಸದೆ ವರ್ಣ ಅಥವಾ ವೃತ್ತಿ ಇರಬಹುದಾಗಿತ್ತು ಎನ್ನುವಲ್ಲಿಯೂ ‘ಹುಟ್ಟು’ ಎಂದು ಕರೆಯುವುದು ಯಾವುದನ್ನು? ಜಾತಿಯನ್ನೇ! ಆಧರಿಸದೆ ಇರುವುದು ಯಾವುದನ್ನು? ಹುಟ್ಟನ್ನು. ಅಂದರೆ ಜಾತಿಯನ್ನು. ಅಂದರೆ ಜಾತಿ ಇತ್ತು ಎಂದೇ ಅರ್ಥವಾಗುತ್ತದೆ.  

  ಒಟ್ಟಿನಲ್ಲಿ ೧೦ನೇ ಶತಮಾನಕ್ಕೂ ಮುಂಚೆ ‘ಹುಟ್ಟನ್ನು’ ಅವಲಂಬಿಸದ ಅಥವಾ ‘ಜಾತಿಯನ್ನು’ ಅವಲಂಬಿಸದ ವರ್ಣ ಅಥವಾ ವೃತ್ತಿ ವ್ಯವಸ್ಥೆ ಇತ್ತು ಎನ್ನುವುದು ಎಂದು ರವಿ ಹಂಜ್ ವಾದಿಸುತ್ತಿದ್ದಾರೆಂದು ನಾನು ಅರ್ಥ ಮಾಡಿಕೊಂಡದ್ದು. ಅಂದರೆ ವರ್ಣಗಳ ನಡುವೆ ಚಲನೆ ಸಾಧ್ಯವಿತ್ತು. ಲೇಖಕರು ಬಹಳ ನಿರ್ಣಾಯಕವಾಗಿ ಈ ಮಾತುಗಳನ್ನು ಹೇಳುತ್ತಾರಾದರೂ ನಮಗೆ ಪೂರ್ತಿ ಮನವರಿಕೆಯಾಗುವುದಿಲ್ಲ. ಅದರಲ್ಲೂ ಅವರು ಸುಮಾರು ಹತ್ತನೇ ಶತಮಾನದವರೆಗೂ ಹುಟ್ಟಿನಿಂದ ವರ್ಣ/ವೃತ್ತಿಗಳು ಇರಲಿಲ್ಲ ಎಂದಾಗ ಒಪ್ಪಲು ಕಷ್ಟವಾಗುತ್ತದೆ. ಅವರು ಅವಲಂಬಿಸುವ ಆಕರಗಳು ಸೀಮಿತವಾದುದೇ ಇದಕ್ಕೆ ಕಾರಣವಿರಬಹುದು. ವೇದಗಳ ಕಾಲವನ್ನು ಬಿಡೋಣ. ಪುರಾಣಗಳ ಕಾಲಕ್ಕೆ ಬಂದರೆ, ನಮ್ಮ ಪುರಾಣಗಳಲ್ಲಿ ಹುಟ್ಟನ್ನು/ಜಾತಿಯನ್ನು ಆಧರಿಸದೆ ವಿವಿಧ ಜಾತಿಗಳಲ್ಲಿ ‘ಹುಟ್ಟಿದ’ ಸಣ್ಣ ದೊಡ್ಡ ಅರಸರು ಆಳ್ವಿಕೆ ನಡೆಸಿದ್ದರ ಉಲ್ಲೇಖ ಕಾಣುತ್ತದೆ. ಇತಿಹಾಸದಲ್ಲಂತೂ ಬಸವಣ್ಣನವರ ಕಾಲದ ಬಿಜ್ಜಳರಾಜನೇ ಇದ್ದ. ಆದರೆ ಹತ್ತಿರ ಹತ್ತಿರ ವಚನಗಳ ಆರಂಭದ ಕಾಲದವರೆಗೂ ಯಾವ ಜಾತಿಯಲ್ಲಿ ಹುಟ್ಟಿದರೂ ಯಾವುದೇ ವರ್ಣ ಅಥವಾ ವೃತ್ತಿಯನ್ನು ಮಾಡಲು ಸಾಧ್ಯವಿತ್ತು ಎನ್ನುವುದು ತೀರಾ ಸಹಜ ಮತ್ತು ಸಾಮಾನ್ಯವೆಂಬAತೆ ಅಥವಾ ‘ಜನರಲ್ ರೂಲ್’ನಂತೆ ಇತ್ತೇ ಎನ್ನುವ ಪ್ರಶ್ನೆ ನನ್ನ ಮಟ್ಟಿಗೆ ಉಳಿದೇ ಇದೆ.   

  ಕನಿಷ್ಠ ಹತ್ತನೇ ಶತಮಾನದವರೆಗೂ ವರ್ಣಗಳ ನಿರ್ಧಾರಕ್ಕೆ ಹುಟ್ಟು ಪ್ರಮುಖ ಮಾನದಂಡವಾಗಿರಲಿಲ್ಲ ಮತ್ತು ವರ್ಣಗಳ/ವೃತ್ತಿಗಳ ನಡುವೆ ಸಹಜವಾದ, ಸುಲಭವಾದ ಚಲನೆ ಸಾಧ್ಯವಿತ್ತು ಎನ್ನುವುದು ಸಾಧಿತವಾಗದಿದ್ದರೆ ವಚನ ಚಳವಳಿಯ ಕುರಿತಾದ, ರವಿ ಹಂಜ್ ಅವರ ಅತಿ ಮುಖ್ಯವಾದ ಪ್ರತಿಪಾದನೆಯ ತಳಪಾಯ ಗಟ್ಟಿಯಾಗುವುದಿಲ್ಲ. ಯಾಕೆಂದರೆ, ‘ಹುಟ್ಟಿನಿಂದ ಜಾತಿ’ (ಅಂದರೆ, ನಾನು ಅರ್ಥ ಮಾಡಿಕೊಂಡAತೆ ‘ಹುಟ್ಟು/ಜಾತಿಯನ್ನು ಆಧರಿಸಿ ವರ್ಣ/ವೃತ್ತಿ’) ಎಂಬ ತತ್ತ÷್ವವನ್ನು ವಿರೋಧಿಸಿದವರು ಬಸವಾದಿ ಶರಣರು ಎಂಬುದು ರವಿ ಹಂಜ್ ಅವರ ವಾದವಾಗಿದೆ. ಈ ವಿರೋಧವೇ ಬಸವಾದಿಗಳ ವಚನ ಚಳವಳಿಯ ತಾತ್ತಿ÷್ವಕ ಬುನಾದಿ ಎನ್ನುವುದು ಅವರ ತೀರ್ಮಾನ. ಅವರ ಪ್ರಕಾರ ಕಾಯಕ/ವೃತ್ತಿ ಮತ್ತು ಅರಿವಿನ ಮಟ್ಟದ ಮೇಲೆ ನಿರ್ಧರಿತವಾಗಿತ್ತಿದ್ದ ಜಾತಿಯನ್ನು ಬಸವಣ್ಣಾದಿಗಳು ಬೆಂಬಲಿಸಿದರು. ಹುಟ್ಟಿನಿಂದ ಜಾತಿ ಎಂಬ ನೂತನ ಬದಲಾವಣೆಯನ್ನು ವಿರೋಧಿಸಿದರು. ‘ಜಾತಿಯಿಂದ ವೃತ್ತಿ’ ಬದಲಿಗೆ ‘ವೃತ್ತಿಯಿಂದ ಜಾತಿ’ ಎಂಬ ತತ್ತ÷್ವವನ್ನು ಶರಣರು ಪ್ರತಿಪಾದಿಸಿದರು. ಇದಕ್ಕೆ ಹಂಜ್ ಅವರು ಮುಂದಿಡುವ ಒಂದು ತರ್ಕ ಹೀಗಿದೆ: “ಕ್ಷಿಪ್ರ ಕ್ರಾಂತಿಗಳಿಗೆ ಕ್ಷಿಪ್ರವಾಗಿ ತರಲಾಗುವ ಬದಲಾವಣೆಗಳು ಪ್ರಮುಖ ಕಾರಣವಾಗಿರುತ್ತವೆಯೇ ಹೊರತು ಶತಮಾನಗಳಿಂದ ಆಚರಣೆಯಲ್ಲಿರುವ ಆಚರಣೆಗಳಲ್ಲ. ಹಾಗಾಗಿ ಕಲ್ಯಾಣ ಕ್ರಾಂತಿ ಎಂಬ ಕ್ಷಿಪ್ರ ಕ್ರಾಂತಿ ಉಂಟಾಗಿದ್ದು ‘ಹುಟ್ಟಿನಿಂದ ಜಾತಿ’ ಎಂಬ ಕ್ಷಿಪ್ರ ಬದಲಾವಣೆಯ ವಿರುದ್ದ!”  (ಪು. ೧೧೫). ‘ವೃತ್ತಿಯಿಂದ ಜಾತಿ’ಯ ನಿಯಮವೇ ಬೇಕೆಂದು ‘ಕಾಯಕವೇ ಕೈಲಾಸ’ವೆಂಬ ಉದ್ಘೋಷದೊಂದಿಗೆ ಉಗ್ರವಾಗಿ ಹೋರಾಡಿದಷ್ಟು ಇನ್ಯಾವ ಚಳವಳಿಯೂ ಭಾರತದ ಇತಿಹಾಸದಲ್ಲಿಯೇ ಹೋರಾಡಿಲ್ಲ ಎನ್ನುತ್ತಾರೆ ರವಿ ಹಂಜ್. (ಪು. ೧೧೬). 

   ಬಸವಣ್ಣನವರು ‘ವೃತ್ತಿಯಿಂದ ಜಾತಿ ಎಂದಾಗÀಬೇಕು’ ಎಂದು ಹೋರಾಟ ಮಾಡಿದುದೋ ಅಥವಾ ‘ಭಕ್ತಿಯಿಂದ ಅಥವಾ ಆರಾಧನೆ/ಉಪಾಸನೆಯಿಂದ ಜಾತಿ ಎಂದಾಗಬೇಕು’ ಎಂದು ಹೋರಾಟ ಮಾಡಿದುದೋ? ನನಗೇಕೋ ಎರಡನೆಯದೇ ಸರಿ ಎನಿಸುತ್ತದೆ. ವಚನಗಳ ಬಹುಮುಖ್ಯ ತಾತ್ತಿ÷್ವಕತೆಗಳು ಎನ್ನಬಹುದಾದ ಶರಣರೊಳಗೆ ಸಮಾನತೆ, ಶರಣರಲ್ಲದವರು ಯಾವ ವೃತ್ತಿಯನ್ನೇ ಮಾಡಿದರೂ ಶರಣರಿಗೆ ಸಮಾನರಲ್ಲವೆಂಬ ತತ್ತ÷್ವ, ಅನ್ಯದೈವಗಳಿಗೆ ಎರಗಬಾರದು ಎನ್ನುವುದು- ಇವೆಲ್ಲ ತೋರಿಸುವಂತೆ ಇಲ್ಲಿರುವುದು ಒಂದೇ ವೃತ್ತಿ ಮಾಡುವವರು ಸಮಾನರೆಂಬ ತತ್ತ÷್ವ ಅಲ್ಲ! ಬದಲಾಗಿ ಒಂದೇ ದೇವರನ್ನು ಒಂದೇ ರೀತಿಯಲ್ಲಿ ಆರಾಧಿಸುವವರು, ಉಪಾಸಿಸುವವರು, ಅವರು ಯಾವುದೇ ಪ್ರತ್ಯೇಕ ವೃತ್ತಿಯನ್ನು ಮಾಡಲಿ, ಸಮಾನರು ಎಂಬ ತತ್ತ÷್ವ. ಬಸವಣ್ಣನವರು ಒಂದು ವಚನದಲ್ಲಿ ಹೇಳುವಂತೆ, “ವರ್ಣಾನಾಂ ಬ್ರಾಹ್ಮಣೋ ಗುರುಃ ಎಂಬುದು ಹುಸಿ, `ವರ್ಣಾನಾಂ ಗುರುಃ' ನಮ್ಮ ಕೂಡಲಸಂಗನ ಶರಣರು.” ಹಾಗೆಯೇ, ಇನ್ನೊಂದು ವಚನದಲ್ಲಿ ಬಸವಣ್ಣ ಹೇಳಳುತ್ತಾರೆ: “ಜಾತಿಯಲ್ಲದ ಜಾತಿಯ ಕೂಡಿ ಅದರ ಪರಿಯಂತೆ, ಸಂಗವಲ್ಲದ ಸಂಗವ ಮಾಡಿದಡೆ ಭಂಗತಪ್ಪದು, ಕೂಡಲಸಂಗಮದೇವಾ.” ಇಲ್ಲಿಯೂ ಲಿಂಗಭಕ್ತರಲ್ಲದವರ ಸಂಗವನ್ನು ಮಾಡಬಾರದು ಎಂದೇ ಬಸವಣ್ಣ ಹೇಳುತ್ತಿರುವುದು.

   ಒಟ್ಟಿನಲ್ಲಿ ಇಲ್ಲಿ ವೃತ್ತಿಗಳ ಮೂಲಕ ಒಂದುತನ ಸಾಧಿತವಾಗುವುದಲ್ಲ; ಬದಲಾಗಿ ಭಕ್ತಿಯಿಂದ ಸಾಧಿತವಾಗುವುದು. ‘ಕಾಯಕವೇ ಕೈಲಾಸ’ ಎಂಬ ಉದ್ಘೋಷವು ಶರಣರು ಮಾಡುವ ಎಲ್ಲ ವೃತ್ತಿಗಳಿಗೂ ಘನತೆ ತರುತ್ತದೆ ಹೊರತು ಶಿವಭಕ್ತರಲ್ಲದವರು ಮಾಡುವ ವೃತ್ತಿಗೆ ಘನತೆ ತರುವುದಿಲ್ಲ!

   ಕ್ಷಿಪ್ರ ಬದಲಾವಣೆಗಳೇ ಕ್ಷಿಪ್ರಕ್ರಾಂತಿಗೆ ಕಾರಣ ಎನ್ನುವುದನ್ನು ಒಂದು ತರ್ಕವಾಗಿ ಸ್ವೀಕರಿಸಬಹುದು. ಅದರೆ ಕ್ಷಿಪ್ರ ಎಂದರೆ ಎಷ್ಟು ಕ್ಷಿಪ್ರ ಎನ್ನುವ ಪ್ರಶ್ನೆ ಉಳಿದೇ ಉಳಿಯುತ್ತದೆ. ಯಾಕೆಂದರೆ ‘ಜಾತಿಯಿಂದಲೇ/ಹುಟ್ಟಿನಿAದಲೇ ವೃತ್ತಿ’ ಎನ್ನುವ ಪದ್ಧತಿ ಅಷ್ಟೊಂದು ಕ್ಷಿಪ್ರವಾಗಿ ಬಂದುದು ಎಂದು ಹೇಳಲು ಅಧಾರಗಳು ಸಾಲವು ಎನಿಸುತ್ತದೆ. ಅಲ್ಲದೆ ಆಗ ಕೇವಲ ಜಾತಿಗಳು ಮಾತ್ರ ಇದ್ದುದಲ್ಲ. ಜೈನರು ಸಾಕಷ್ಟು ಪ್ರಭಾವಶಾಲಿಗಳಾಗಿಯೇ ಇದ್ದರು. 

   ಹಾಗೆಂದು ವಚನ ಚಳವಳಿಯನ್ನು ಕೇವಲ ಸಾಮಾಜಿಕ ಚಳವಳಿ ಎಂದು ಲೇಖಕರು ಪರಿಗಣಿಸುವುದಿಲ್ಲ. ಈಗಾಗಲೇ ಸೂಚಿಸಿದಂತೆ ವಚನಗಳನ್ನು ಭಕ್ತಿಪಂಥದ ಭಾಗವಾಗಿಯೇ ಲೇಖಕರು ಪರಿಗಣಿಸುವುದರಿಂದ ಸಾಮಾಜಿಕ ಸಮಾನತೆಗಾಗಿ ನಡೆಸುವ ಚಳವಳಿಯ ಅಂತಿಮ ಉದ್ದೇಶ ಧಾರ್ಮಿಕ/ಆಧ್ಯಾತ್ಮಿಕ ಸಮಾನತೆಯೇ. ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ ಆಧ್ಯಾತ್ಮಿಕ ಸಾಧನೆಗೆ ತೊಡಕನ್ನು ಉಂಟುಮಾಡುವ ಸಾಮಾಜಿಕ ಸಂಗತಿಗಳನ್ನು ತೊಡೆದು ಹಾಕಲು ವಚನಚಳವಳಿ ಯತ್ನಿಸಿತು. 

   ಧಾರ್ಮಿಕ ಪಂಥವೊAದು ಸಾಮಾಜಿಕ ಪಂಥವಾಗಿ ರೂಪುಗೊಂಡುದು ವಚನಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ ಎಂದು ರವಿ ಹಂಜ್ ಹೇಳುತ್ತಾರೆ. (ಪು. ೧೧೬).

                   ***********

   ಹತ್ತನೆಯ ಶತಮಾನದ ಮೊದಲು ಅಸ್ಪೃಶ್ಯತೆ ಇರಲಿಲ್ಲ ಎನ್ನುವ ಮಾತನ್ನು ಒಪ್ಪದವರಿಗೆ ಪಂಪನಲ್ಲಿ ಒಂದು ಅಧಾರ ಸಿಗುತ್ತದೆ. ಹತ್ತನೇ ಶತಮಾನದ ಮೊದಲರ್ಧದಲ್ಲಿ ಪಂಪನು ರಚಿಸಿದ ಆದಿಪುರಾಣದಲ್ಲಿ ಸ್ಪೃಶ್ಯಾಸ್ಪೃಶ್ಯರ ಉಲ್ಲೇಖ ಬರುತ್ತದೆ. ಇದು ಆದಿಪುರಾಣದಲ್ಲಷ್ಟೇ ಅಲ್ಲ; ಪಂಪನಿಗೆ ಮೂಲವಾದ ಜಿನಸೇನರ ಪೂರ್ವಪುರಾಣದಲ್ಲೇ ಇರುವ ಸಾಲು. ಆದಿಪುರಾಣದಲ್ಲಿ ವೃಷನು ವರ್ಣಗಳನ್ನು ಸೃಷ್ಟಿ ಮಾಡಿದ ಸಂದರ್ಭವನ್ನು ಹೇಳುವಲ್ಲಿ ಈ ಮುಂದಿನ ಸಾಲುಗಳಿವೆ. “ತನ್ನ ಪಡೆದ ಸಕಲ ಕ್ಷತ್ರಿಯ ವಣಿಕ್ ಶೂದ್ರರೆಂಬ ಮೂರುಂ ವರ್ಣಗಳೊಳಂ ಕ್ಷತತ್ರಾಣಾದಿ ಗುಣೋಪಮೇತಮಪ್ಪ ನಿಖಿಳ ಕ್ಷತ್ರಿಯ ಸಮೂಹಕ್ಕೆ ಶಸ್ತçಕರ್ಮಮುಮಂ, ವಣಿಗ್ವಂಶಕ್ಕೆ ಪಾಶುಪಾಲ್ಯ ಕೃಷಿ -ಪಣ್ಯಕರ್ಮಂಗಳುಮA ಸ್ಪೃಶ್ಯಾಸ್ಪೃಶ್ಯಕಾರುಗಳುಮಂದರ‍್ತೆರದ ಶೂದ್ರ ಸಂತತಿಗೆ ಶುಶ್ರೂಷಾನಿಯೋಗಂಗಳುಮA ಯಥಾಯೋಗ್ಯಂ ಉಪದೇಶಂಗೆಯ್ದು, ವರ್ಣಸಂಕರಮಾಗಲೀಯದೆ ತಮ್ಮ ತಮ್ಮ ಜಾತಿಗಳೊಳ್ ನಣ್ಪುಮಂ ಕೊಳ್ ಕೊಡೆಯುಮಂ ನಿಯೋಜಿಸಿ..” (ಆದಿಪುರಾಣಂ, ೮-೬೪ರ ನಂತರದ ವಚನ). ಈಗಾಗಲೇ ಹೇಳಿದಂತೆ ಇದು ಪಂಪನ ಸ್ವಂತದ್ದಲ್ಲ; ಒಂಬತ್ತನೇ ಶತÀಮಾನದ ಪೂರ್ವಾರ್ಧದಲ್ಲಿ ರಚಿತವಾದ ಪೂರ್ವಪುರಾಣದಲ್ಲಿ ಇರುವುದೇ ಆಗಿದ್ದು ಅಲ್ಲಿ ಈ ಕೆಳಗಿನ ಸಾಲುಗಳಿವೆ. 

ಕ್ಷತ್ರಿಯಾ ವಣಿಜ ಶೂದ್ರಾಃ ಕ್ಷತ ತ್ರಾಣಾದಿಭಿರ್ಗುಣೈಃ

ಕ್ಷತ್ರಿಯಾ ಶಸ್ತçಜೀವಿತ್ವಮನುಭೂಯ ತದಾಭವನ್

ವೈಶ್ಯಾಶ್ಚ ಕೃಷಿವಾಣಿಜ್ಯ ಪಾಶುಪಾಲ್ಯೋಪಜೀವಿನಃ

ತೇಷಾಂ ಶುಶ್ರೂಷಣಾಚ್ಛೂದ್ರಾಸ್ತೇ ದ್ವಿಧಾ ಕಾರ್ವಕಾರವಃ

ಕಾರವೋ ರಜಕಾದ್ಯಾಃ ಸ್ಯುಸ್ತತೋನ್ಯೇ ಸ್ಯುರಕಾರವಃ

ಕಾರವೋಪಿ ಮತಾದ್ವೇಧಾ ಸ್ಪೃಶ್ಯಾಸ್ಪೃಶ್ಯ ವಿಕಲ್ಪತಃ

ತತ್ರಾಸ್ಪೃಶ್ಯಾB ಪ್ರಜಾಬಾಹ್ಯಾಃ ಸ್ಪೃಶ್ಯಾಃ ಸ್ಯುಃ ಕರ್ತಕಾದಯಃ

ಯಾಸ್ವಂ ಸ್ವೋಚಿತಂ ಕರ್ಮ ಪ್ರಜಾ ದಧುರಸಂಕರA

ವಿವಾಹಜಾತಿಸAಬAಧ ವ್ಯವಹಾರಶ್ಚ ತನ್ಮತಂ

ಯಾವತೀ ಜಗತೋವೃತ್ತಿರಪಾಪೋಪಹತಾ ಚಯಾ

ಸಾ ಸರ್ವಾಸ್ಯ ಮತೇನಾಸೀತ್ ಸ ಹಿ ಧಾತಾ ಸನಾತನಃ (ಪೂ.ಪುರಾಣ, ಸರ್ಗ ೧೬)

    ವರ್ಣಸಂಕರವಾಗದAತೆ ತಮ್ಮದೇ ಹುಟ್ಟಿನ ಜಾತಿಯೊಳಗೆ ವಿವಾಹಸಂಬAಧಗಳಾಗಬೇಕೆAದು ವೃಷಭನು ವಿಧಿಸಿದ್ದನು ಎನ್ನುವುದು ಪಂಪನ ಮಾತು. ಅಲ್ಲದೆ, ವರ್ಣವು ‘ಸಂಕರಗೊಳ್ಳುವುದು’ ಎನ್ನುವ ಪರಿಕಲ್ಪನೆಯೇ ಹುಟ್ಟನ್ನು ಅವಗಣಿಸಿದ ಸಂಬAಧ, ವಿವಾಹಗಳೆಲ್ಲ ಅಷ್ಟೇನೂ ಸಾಮಾನ್ಯವಾಗಿರಲಿಲ್ಲ ಎನ್ನುವುದನ್ನೂ ಸೂಚಿಸುತ್ತದೆ. ಹುಟ್ಟಿನ ಜಾತಿಗಳ ಒಳಗೆಯೇ ವಿವಾಹವಾಗುತ್ತಿದ್ದರೆ ವರ್ಣಗಳ ನಡುವೆ ಚಲನೆಯಿತ್ತು ಎಂಬುದರಿAದ ಹೆಚ್ಚೇನೂ ಉಪಯೋಗವಿಲ್ಲ! ಅಂದರೆ ಹೊಸತೊಂದು ವೃತ್ತಿಯಿಂದಾಗಿ ಜಾತಿ ಬದಲಾಗುವ ಪ್ರಶ್ನೆ ಅಲ್ಲಿ ಬರುವುದಿಲ್ಲ. ವೃತ್ತಿಯಿಂದ ಜಾತಿ ಬದಲಾಗದಿದ್ದರೆ ವೃತ್ತಿಯಿಂದ ಜಾತಿ ಎನ್ನುವ ತತ್ತ÷್ವ ಪಾಲನೆಯಾದಂತಾಗದು. 

   ಆದರೆ ಒಂದು ಗೊಂದಲ ಉಂಟು. ವರ್ಣಗಳ ಸೃಷ್ಟಿ ಮತ್ತು ವರ್ಣಸಂಕರವಾಗದAತೆ ನೋಡಿಕೊಳ್ಳವ ಬಗ್ಗೆ ಪೂರ್ವಪುರಾಣ ಮತ್ತು ಆದಿಪುರಾಣಗಳಲ್ಲಿ ಬರುವ ಅಂಶಗಳು ಜೈನಮತೀಯರೊಳಗಿನ ವಿವಿಧ ವರ್ಣಗಳು ಮತ್ತು ಸ್ಪೃಶ್ಯಾಸ್ಪೃಶ್ಯರೇ ಆಗಿರಬೇಕಲ್ಲ. ಜೈನಮತದ ಹೊರಗಿನವರನ್ನು ವೃಷಭನು ಸೃಷ್ಟಿಸಿರುವ ಸಾಧ್ಯತೆ ಇಲ್ಲ. ಅಥವಾ ಇಲ್ಲಿ ಅಸ್ಪೃಶ್ಯರು ಜೈನಮತದೊಳಗೆ ಬರುವುದಿಲ್ಲವೇ? ಜಾತಿಭೇದವನ್ನು ಉಳಿಸಿಕೊಂಡಿತ್ತು; ಹೀಗಾಗಿ ಜೈನಮತದಿಂದ ಹೊರಗೆ ಇಡಲ್ಪಟ್ಟಿದ್ದ ಒಕ್ಕಲುಗಳು ಇದ್ದರು ಎಂದು ಕಲ್ಬುರ್ಗಿಯವರು ಹೇಳುತ್ತಾರೆ. ಒಟ್ಟಿನಲ್ಲಿ ಜೈನರೊಳಗೆಯೇ ಆಗಲಿ ಹೊರಗೆಯೇ ಆಗಲಿ, ಸಮಾಜದಲ್ಲಿ ಸ್ಪೃಶ್ಯಾಸ್ಪೃಶ್ಯರ ಕಲ್ಪನೆಯಂತೂ ಒಂಬತ್ತನೇ ಶತಮಾನದಲ್ಲಿಯಾದರೂ ಇದ್ದಿತ್ತು ಎಂದೇ ಹೇಳಬಹುದು.

   ಬಸವಣ್ಣನವರು ಶಿವಭಕ್ತ ವಿಪ್ರನ ಮಗನಾಗಿ ಹುಟ್ಟಿದವರು ಎಂಬ ಹೇಳಿಕೆಯನ್ನು ರವಿ ಹಂಜ್ ಒಪ್ಪುವುದಿಲ್ಲ. ಅವರ ಪ್ರಕಾರ ಬಸವಣ್ಣ ನಿಸ್ಸಂಶಯವಾಗಿ ಕಾಳಾಮುಖ ಪರಂಪರೆಯ ಜಂಗಮ. (ಪು. ೧೨೩). “ಹೆಚ್ಚು ಪ್ರಬಲವೆನಿಸುವ ಸಾಕ್ಷö್ಯಗಳು ಬಸವಣ್ಣನನ್ನು ಜಂಗಮ ಎಂದಿರುವಾಗ ಕೇವಲ ಪೌರಾಣಿಕ ರಗಳೆಯ ಆಧಾರದ ಮೇಲೆ ಬಸವಣ್ಣನನ್ನು ಬ್ರಾಹ್ಮಣ ಎನ್ನಲಾಗದು” (ಪು. ೧೨೪). ಸುರೇಂದ್ರನಾಥ ದಾಸಗುಪ್ತರು ಕೂಡ ತಮ್ಮ ಭಾರತೀಯ ತತ್ತ÷್ವಶಾಸ್ತçದ ಇತಿಹಾಸ ಸಂಪುಟದಲ್ಲಿ ವಚನಗಳು ಪಾಶುಪತ ತತ್ತ÷್ವಕ್ಕೆ ಹತ್ತಿರ ಎನ್ನುತ್ತಾರೆ ಎನ್ನುವುದನ್ನು ನೆನಪಿಸಿಕೊಳ್ಳಬಹುದು. ಏನಿದ್ದರೂ ‘ಬಸವಣ್ಣನವರು ವಿಪ್ರನ ಮಗನಲ್ಲ; ಅವರು ಕಾಳಾಮುಖ ಜಂಗಮ ಎಂದಾಗ ಅವರು ಕಾಳಾಮುಖ ಜಂಗಮರ ಮಗನಾಗಿ ಹುಟ್ಟಿದರು ಎಂದೇ ಗ್ರಹಿಸಬೇಕಾಗುತ್ತದೆ. ಹಾಗಿದ್ದರೆ ಆ ಕಾಲದಲ್ಲಿ ‘ಹುಟ್ಟಿನಿಂದ ಜಾತಿ’ ಎಂಬುದಿನ್ನೂ ಸರಿಯಾಗಿ ಸ್ಥಾಪಿತವಾಗದೆ ಇದ್ದಾಗ ಕಾಳಾಮುಖ ಜಂಗಮ ಎನ್ನುವುದೊಂದು ಪ್ರತ್ಯೇಕ ‘ಜಾತಿ’ಯೇ ಆಗಿತ್ತೇ? ಅಥವಾ ಯಾವ ‘ಜಾತಿ’ಯಲ್ಲಿ ಹುಟ್ಟಿದವರೂ ಕಾಳಾಮುಖ ಜಂಗಮರಾಗಬಹುದಿತ್ತೇ ಈಗಿನ ಅಯ್ಯಪ್ಪಸ್ವಾಮಿ ವ್ರತಧಾರಿಗಳ ಹಾಗೆ? ಶಿವಭಕ್ತ ವಪ್ರನೊಬ್ಬ ಕಾಳಾಮುಖ ಜಂಗಮನಾಗುವ ಸಾಧ್ಯತೆ ಇರಲಿಲ್ಲವೆ? ಯಾವ ಜಾತಿಯಲ್ಲಿ ಹುಟ್ಟಿದವರೂ ಜಂಗಮರಾಗಬಹುದಿತ್ತು ಎಂದಾದರೆ ಬಸವಣ್ಣನವರ ತಂದೆತಾಯಿಗಳಿಗೂ ಒಂದು ಜಾತಿ ಇದ್ದಿರಬೇಕಲ್ಲ. ಅದು ಯಾವ ಜಾತಿ ಎಂಬ ಪ್ರಶ್ನೆ ಉಳಿಯುತ್ತದೆ. 

   ಬಸವಣ್ಣನವರು ತಮ್ಮನ್ನು ಹಾರುವ ಎಂದು ಕರೆದುಕೊಂಡಿರುವ ಎರಡು ವಚನಗಳನ್ನು ರವಿ ಹಂಜ್ ಅವಲೋಕಿಸುತ್ತಾರೆ.

ಹೊನ್ನು ಹೆಣ್ಣು ಮಣ್ಣೆಂಬ ಕರ್ಮದ ಬಲೆಯಲ್ಲಿ ಸಿಲುಕಿ,

ವೃಥಾಯ ಬರುದೊರೆ ಹೋಹ ಕೆಡುಕ ಹಾರುವ ನಾನಲ್ಲ.

ಹಾರುವೆನಯ್ಯಾ ಭಕ್ತರ ಬರವ ಗುಡಿಗಟ್ಟಿ, 

ಹಾರುವೆನಯ್ಯಾ ಶರಣರ ಬರವ ಗುಡಿಗಟ್ಟಿ,

ಕೂಡಲಸಂಗಮದೇವನು ವಿಪ್ರಕರ್ಮವ ಬಿಡಿಸಿ, 

ಅಶುದ್ಧನ ಶುದ್ಧನ ಮಾಡಿದನಾಗಿ.

     ಇನ್ನೊಂದು ವಚನ ‘ಸೆಟ್ಟಿಯೆಂಬೆನೆ ಸಿರಿಯಾಳನ, ಮಡಿವಾಳನೆಂಬೆನೆ ಮಾಚಯ್ಯನ ಎಂದು ಆರಂಭವಾಗಿ ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯಾ’ ಎಂದು ಕೊನೆಯಾಗುವ ವಚನ. ಬ್ರಾಹ್ಮಣರನ್ನು ಉದ್ದೇಶಿಸಿ ಬಸವಣ್ಣನು ನೀವು ಹಾಗೆ ನುಡಿಯದೆ ಹೀಗೆ ಬ್ರಾಹ್ಮಣರಾಗಿದ್ದೇವೆ ಎಂದು ನುಡಿಯಿರಿ ಎಂದು ಸೂಚ್ಯವಾಗಿ ಹೇಳಿರುವ ಸಾಧ್ಯತೆಯೂ ಇದೆ ಎಂದು ಮುಂತಾಗಿ ಹೇಳಿ ಈ ಎರಡೂ ವಚನಗಳಲ್ಲಿ ಬಸವಣ್ಣನು ತನ್ನನ್ನೇ ಉದ್ದೇಶಿಸಿ ಹೇಳಿಕೊಂಡಿದ್ದಾನೆ ಎಂದು ಹೇಳಲಾಗದು ಎಂದು ಲೇಖಕರು ಪ್ರತಿಪಾದಿಸುತ್ತಾರೆ. (ಪು. ೧೨೭). ಆದರೆ ತನ್ನನ್ನೇ ಉದ್ದೇಶಿಸಿ ಬಸವಣ್ಣ ಹೇಳಿದ್ದಲ್ಲ ಎನ್ನಲು ಲೇಖಕರು ನೀಡುವ ಈ ಕಾರಣಗಳು ತೃಪ್ತಿಕರ ಎನಿಸುವುದಿಲ್ಲ. ಮುಂದುವರಿದು ರವಿ ಹಂಜ್ ಹೀಗೆ ಹೇಳುತ್ತಾರೆ: “...ಬಸವನು ಜಂಗಮ, ಬ್ರಾಹ್ಮಣ, ಮಾದಾರ ಅಲ್ಲದೆ ಈ ಶಾಸನದಲ್ಲಿ ಹಾಲುಬಸವಿದೇವನೆಂದಿದೆಯೆAದು ಅವನು ಹಾಲುಮತದವನೆಂದೋ ದಂಣಾಯಕ ಪದವಿದೆಯೆಂದು ಬೇಡರ ನಾಯಕ ಪಡೆಯವನೆಂದೋ ಮತ್ತೊಂದೆAದೋ ಜಾತಿಯವನೆನ್ನುವುದು ಅರ್ಥಹೀನ. ಏಕೆಂದರೆ ಅವನು ಹುಟ್ಟಿದ ಕಾಲಘಟ್ಟದಲ್ಲಿ ಜಾತಿಯು ಹುಟ್ಟಿನಿಂದ ನಿರ್ಧಾರವಾಗುತ್ತಲೇ ಇರಲಿಲ್ಲ!” (ಪು. ೧೨೮). ಬಸವಣ್ಣರÀಂಥವರನ್ನು ಜಾತಿಗೆ ಅಂಟಿಸುವುದು ಸರಿಯಲ್ಲವೆನ್ನುವ ಲೇಖಕರ ಮಾತು ಒಪ್ಪಬೇಕಾದದ್ದೆ. ಆದರೆ ಯಾವ ಜಾತಿಯಲ್ಲಿ ಹುಟ್ಟಿದ ಎಂದು ಸಂಶೋಧನೆ ಮಾಡಬಾರದು ಎಂದೇನಿಲ್ಲ.

   ಮೇಲೆ ಉದ್ಧರಿಸಿದ ವಚನದಲ್ಲಿ ಬಸವಣ್ಣನವರು ತಮ್ಮ ಸಮಕಾಲೀನ ಹಾರುವರಿಗೇ ಹೇಳುತ್ತಿದ್ದಾರೆ ಎಂದಾದರೂ ಕೂಡ, ಕೂಡಲಸಂಗಮದೇವನು ಶರಣನಲ್ಲದ ಅಶುದ್ಧನಾದ ವಿಪ್ರಕರ್ಮವನ್ನು ಮಾಡುವವನನ್ನು ಶುದ್ಧನನ್ನಾಗಿ ಮಾಡುತ್ತಾನೆ ಎಂದಾಗುತ್ತದೆ. ಅಂದ ಬಳಿಕ ಅಶುದ್ಧರಾಗಿರುವ ವಿಪ್ರರು ಬಸವಣ್ಣನವರು ಹುಟ್ಟಿದ ಕಾಲಘಟ್ಟದಲ್ಲಿ ಕೂಡ ಇದ್ದರು ಅಂತಲೇ ಆಗುತ್ತದೆ. ಅಂತಹ ಅಶುದ್ಧ ವಿಪ್ರರು ಹುಟ್ಟಿನಿಂದ ವಿಪ್ರರಾಗಿರದೆ ಕರ್ಮದಿಂದ ಮಾತ್ರ ವಿಪ್ರರಾಗಿದ್ದವರು ಎನ್ನಲು ಲೇಖಕರು ನೀಡುವ ಸಾಕ್ಷö್ಯ ಸಾಕಾಗುವುದಿಲ್ಲ. ಅಷ್ಟೇ ಅಲ್ಲ; ಹುಟ್ಟಿನಿಂದಲ್ಲದೆ ಕರ್ಮದಿಂದ ವಿಪ್ರರಾದವರನ್ನು ಬಸವಣ್ಣನವರು ಬೈಯುವ ಸಾಧ್ಯತೆಯೂ ತಾತ್ತಿ÷್ವಕವಾಗಿ ನೋಡಿದರೆ ಕಡಿಮೆಯೇ. ಯಾಕೆಂದರೆ ಆ ವಿಪ್ರರು ಆಗ ‘ಹುಟ್ಟಿನಿಂದ ಜಾತಿ’ ಎಂಬ ನೆಲೆಯಿಂದÀ ವಿಪ್ರರಾದವರು ಅಲ್ಲ್ಲ; ಬದಲಾಗಿ ವೃತ್ತಿಯಿಂದ ಜಾತಿ ಎಂಬ ಬಸವಣ್ಣನವರ ತತ್ತ÷್ವದಂತೆ ಆಗಿದ್ದವರು ತಾನೆ?! ಹೀಗಾಗಿ ಒಟ್ಟಿನಲ್ಲಿ ‘ಹುಟ್ಟಿನಿಂದ ಜಾತಿ ನಿರ್ಧಾರವಾಗುತ್ತಿರಲಿಲ್ಲ’ ಎನ್ನುವ ಹೇಳಿಕೆ ಮತ್ತೊಮ್ಮೆ ನಮ್ಮನ್ನು ಗೊಂದಲಕ್ಕೆ ದೂಡುತ್ತದೆ. 

   ಬಸವಣ್ಣನವರು ತಮ್ಮ ಹುಟ್ಟಿನ ಜಾತಿಯನ್ನು ‘ಸೂಚಿಸಿದÀ’ ಬೇರೆ ವಚನಗಳೂ ಇವೆ. ಅಂತಹ ಕೆಲವನ್ನು ಗಮನಿಸಬಹುದು. 

“ಕಷ್ಟÀ್ಟಜಾತಿ ಜನ್ಮದಲಿ ಜನಿಯಿಸಿದೆೆ ಎನ್ನ,

ಎನಗಿದು ವಿಧಿಯೆ ಕೂಡಲಸಂಗಮದೇವಾ”

“ಉತ್ತಮಕುಲದಲ್ಲಿ ಹುಟ್ಟಿದೆನೆಂಬ

ಕಷ್ಟ್ಟತನದ ಹೊರೆಯ ಹೊರಿಸದಿರಯ್ಯಾ,

ಕಕ್ಕಯ್ಯನೊಕ್ಕುದನಿಕ್ಕ ನೋಡಯ್ಯಾ,

ದಾಸಯ್ಯಾ ಶಿವದಾನವನೆರೆಯ ನೋಡಯ್ಯಾ,

ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ.

ಉನ್ನತ ಮಹಿಮ,

ಕೂಡಲಸಂಗಮದೇವಾ, ಶಿವಧೋ ಶಿವಧೋ”

“ಅಂದೇಕೆ ಬಾರರು

ನೀರಿಂಗೆ ನೇಣಿಂಗೆ ಹೊರಗಾದಂದು, ಸಮಯಾಚಾರಕ್ಕೆ ಒಳಗಾದಂದು.

ಪರುಷÀ ಮುಟ್ಟಲು ಕಬ್ಬುನ ಸುವರ್ಣವಾಯಿತ್ತು.

ಬಳಿಕ ಬಂಧುಗಳುAಟೆ, ಕೂಡಲಸಂಗಮದೇವಾ”

“ಹಾರುವ ಹಾರುವನಪ್ಪೆ ನಾನು, ಸದ್ಭಕ್ತರೆನ್ನವರೆನ್ನವರೆಂದು

ಹಾರು[ವೆ] ಹಾರು[ವೆ]ನವ್ವಾ ನಾನು, ಶರಣರು ಎನ್ನವರೆನ್ನವರೆನ್ನವರೆಂದು,

ಕೂಡಲಸAಗನ ಶರಣರು ಒಕ್ಕುದನಿಕ್ಕಿ ಸಲಹುವರೆಂದು.”

“ಕದ್ದ ಕಳ್ಳನ ಬಿಟ್ಟಮಂಡೆಯ ಹಿಡಿದು,

ಹುಡುಕು ನೀರೊಳಗದ್ದುವಂತೆ ಮುಳುಗಲಾರೆನು, ಹಿಂಡಲಾರೆನು.

ಹಿAಗಿದೆನಯ್ಯಾ ಎಲ್ಲ ಹಾರುವ ಕುಲವನು,

ಮುಳುಗುವನ ಕೈಯ ಹಿಡಿದೆತ್ತಿದ

ನಮ್ಮ ನಮ್ಮ ಕೂಡಲಸಂಗಮದೇವ.”

   ಇವಲ್ಲದೆ, ಇನ್ನೊಂದು ವಚನ ಕೂಡ ಮುಖ್ಯವಾಗಿದೆ. ಅದು ಹೀಗಿದೆ:

“ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ.

ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ.

ಕೂಡಲಸAಗಮದೇವಾ

ನಿಮ್ಮ ಮನೆಯ ಮಗನೆಂದೆನಿಸಯ್ಯಾ.”

   ಈ ಮೇಲಿನ ವಚನವು ಬಹುಶಃ “ಇವನು ಹಾರವ, ಇವನು ಹಾರವ ಎಂದೆನಿಸದಿರಯ್ಯಾ” ಎಂದಿದ್ದಿರಬೇಕು. ಬರಹರೂಪದಲ್ಲಿ ದಾಖಲಾಗುವಾಗ ಅದು ‘ಇವನಾರವ’ ಅಂತಾಗಿದೆ. ಬಸವಣ್ಣನವರು ವಚನಗಳಲ್ಲಿ ಬ್ರಾಹ್ಮಣ ಎಂಬರ್ಥದಲ್ಲಿ ಹೆಚ್ಚಾಗಿ ಉಪಯೋಗಿಸುವುದು ಹಾರುವ/ಹಾರವ ಎನ್ನುವ ಪದವನ್ನು. ‘ಇವನು ಯಾರು’ ಎಂಬರ್ಥದಲ್ಲಿ ಬಸವಣ್ಣವನರು ಈ ವಚನವನ್ನು ಹೇಳಿದ್ದಾರೆಂದೇ ಇದನ್ನು ಅರ್ಥೈಸಲಾಗುತ್ತದೆ. ಆದರೆ, ಯಾರು ಎಂಬುದಕ್ಕೆ ‘ಆರವ’ ಎಂಬ ಪ್ರಯೋಗ ವಚನಗಳಲ್ಲಾಗಲೀ ವಚನಗಳ ಕಾಲದ ಇತರ ರಚನೆಗಳಲ್ಲಾಗಲೀ ಬಹುಶಃ ಕಾಣುವುದಿಲ್ಲ. ಯಾರು ಎನ್ನುವ ಅರ್ಥದಲ್ಲಿ ‘ಆರ್ಗೆ’ ಎಂಬ ಪ್ರಯೋಗವಾದರೆ ಹಿಂದೆ ಇತ್ತು. ಅಲ್ಲದೆ ಇಡೀ ವಚನದ ಅರ್ಥವನ್ನು ಗ್ರಹಿಸಿದರೆ, ಬ್ರಾಹ್ಮಣ ಎಂದು ತನ್ನನ್ನು ದೂರ ಮಾಡದಂತೆ ಮಾಡು ಎಂದೇ ಬಸವಣ್ಣ ಕೂಡಲಸಂಗಮದೇವನನ್ನು ಇಲ್ಲಿ ಬೇಡುತ್ತಿರುವುದೆಂದು ತೋರುತ್ತದೆ. ಅಲ್ಲದೆ ಬಸವಣ್ಣನವರ ವಚನಗಳನ್ನು ನೋಡಿದರೆ ಅವರನ್ನು ಇತರರು ದೂರ ಮಾಡುತ್ತಿದ್ದುದು ಅವರ ಕಷ್ಟ ಜಾತಿಯ ಕಾರಣದಿಂದ. ಬ್ರಾಹ್ಮಣನೆಂಬ ಉತ್ತಮ ಕುಲದ ಕಾರಣದಿಂದಲೇ ಕಕ್ಕಯ್ಯನು ಒಕ್ಕುದನಿಕ್ಕದಿರುವುದು! ಹೀಗಾಗಿಯೇ ಚೆನ್ನಯ್ಯ ಕಕ್ಕಯ್ಯರಂಥವರ ಜೊತೆಗೆ ತಾನು ಗುರುತಿಸಿಕೊಳ್ಳುವಂತಾಗಲು ಮತ್ತು ಶರಣರೆಲ್ಲ ಒಂದೇ ಜಾತಿ ಅಂತಾಗಲು “ಚೆನ್ನಯ್ಯನ ಮನೆಯ ದಾಸನ ಮಗನು ಮತ್ತು ಕಕ್ಕಯ್ಯನ ಮನೆಯ ದಾಸಿಯ ಮಗಳು ಇವರಿಬ್ಬರು ಹೊಲದಲ್ಲಿ ಹೋಗಿ ಸಂಗವ ಮಾಡಿದರು; ಇವರಿಬ್ಬರಿಗೆ ಹುಟ್ಟಿದ ಮಗ ನಾನು ಕೂಡಲಸಂಗಮದೇವನ ಸಾಕ್ಷಿಯಾಗಿ” ಎಂದು ಬಸವಣ್ಣ ಹೇಳಿಕೊಂಡಿರುವುದು.

    ಒಟ್ಟಿನಲ್ಲಿ ಬಸವಣ್ಣನವರು ಹುಟ್ಟಿದ ಕಾಲಘಟ್ಟದಲ್ಲಿ ಹುಟ್ಟಿನಿಂದ ಜಾತಿ ನಿರ್ಧಾರವಾಗುತ್ತಿರಲಿಲ್ಲ ಎನ್ನುವ ಹೇಳಿಕೆಯೇ ಸಂದೇಹಾಸ್ಪದವಾದ್ದರಿAದ ಬಸವಣ್ಣರು ಹುಟ್ಟಿದ ಜಾತಿಯ ಕುರಿತ ತೀರ್ಮಾನವೂ ಚರ್ಚಾರ್ಹವೇ ಆಗಿದೆ. 

                  ********

   ವರ್ತಮಾನ ಕಾಲದಲ್ಲಿ ಬಸವರಾಜಕಾರಣವು ಹೇಗೆ ನಡೆಯುತ್ತಿದೆ ಎಂಬುದನ್ನು ಹೇಳಲು ನ್ಯಾ. ನಾಗಮೋಹನದಾಸ್ ನೇತೃತ್ವದ ಸಮಿತಿಯು ಹೇಳಿದ ಅಂಶಗಳನ್ನು ರವಿ ಹಂಜ್ ಅವಲೋಕಿಸುತ್ತಾರೆ. ಈ ಭಾಗದಲ್ಲಿ ಮುಖ್ಯವಾಗಿ ವರ್ತಮಾನಕಾದ ಕನ್ನಡ ಸಂಶೋಧನ ಕ್ಷೇತ್ರದ ದುಸ್ಥಿತಿಯನ್ನು ಲೇಖಕರು ಅನಾವರಣ ಮಾಡುತ್ತಾರೆ. 

   ಲಿಂಗಾಯತವೆನ್ನುವುದು ಬೇರೆಯೆ ಧರ್ಮ ಎಂದು ತೀರ್ಮಾನಿಸಿದ ನ್ಯಾ. ನಾಗಮೋಹನ ದಾಸ್ ಸಮಿತಿಯ ನಿರ್ಣಯವನ್ನು ಲೇಖಕರು ಸಾಧಾರವಾಗಿ ಕಾರಣಸಹಿತ ಪ್ರಶ್ನೆ ಮಾಡುತ್ತಾರೆ. “ಇಷ್ಟಲಿಂಗ ಕಟ್ಟುವ ಸಂಪ್ರದಾಯವನ್ನು ಬಸವಣ್ಣನವರು ಹುಟ್ಟುಹಾಕಿದ್ದರೆ, ಬಸವಣ್ಣನವರನ್ನು ಭೇಟಿ ಮಡುವ ಮೊದಲೇ ಲಿಂಗವು ಅಲ್ಲಮನ ಎಎಗೆ ಹೇಗೆ ಏರಿತ್ತು? ಕಾಳಾಮುಖ ಯಾ ವೀರಶೈವ ಪರಂಪರೆ ಮೊದಲಿನಿಂದಲೂ ಕೊರಳಿಗೆ ಇಷ್ಟಲಿಂಗ ಕಟ್ಟುವ ಸಂಪ್ರದಾಯವನ್ನು ಪಾಲಿಸುತ್ತಿದ್ದಾಗ ಬಸವಣ್ಣನವರೇ ಇಷ್ಟಲಿಂಗ ಕಟ್ಟುವ ಸಂಪ್ರದಾಯವನ್ನು ಕಂಡುಹಿಡಿದರು ಎಂದು ಹೇಗೆ ಹೇಳಲಾಗುತ್ತದೆ?” ಎಂದು ಹಂಜ್ ಕೇಳುತ್ತಾರೆ. (ಪು. ೨೦೬). 

    ಕನ್ನಡದ ಬಹು ಮಾನ್ಯರಾದ ಸಂಶೋಧಕರು ಮತ್ತು ವಚನಗಳ ಮಟ್ಟಿಗೆ ಅತಿದೊಡ್ಡ ತಜ್ಞರು ಎನಿಸಿಕೊಂಡ ಎಂ.ಎA. ಕಲ್ಬುರ್ಗಿಯವರು ಭ್ರಮಾತ್ಮಕ ತೀರ್ಮಾನಗಳಿಗೆ ಬಂದ ಬಗ್ಗೆ ರವಿ ಹಂಜ್ ಉಲ್ಲೇಖಿಸುತ್ತಾರೆ. (ಪು. ೨೧೬). ಅದೇರೀತಿ, ಶರಣ ಜಂಗಮರದು ಅದ್ವೆöÊತವಾದರೆ, ಆಚರ‍್ಯ ಜಂಗಮರದು ದ್ವೆöÊತವಾಗಿದೆ ಎನ್ನು ಕಲ್ಬುರ್ಗಿಯವರ ಹೇಳಿಕೆಯನ್ನು ಆಧಾರಸಹಿತವಾಗಿಯೇ ಪ್ರಶ್ನಿಸುತ್ತಾರೆ. (ಪು. ೨೧೭). 

  ವೀರಶೈವ ಪದವನ್ನು ವಚನಗಳಲ್ಲಿ ನಂತರದ ಕಾಲದಲ್ಲಿ ತುರುಕಲಾಗಿದೆ ಎಂಬ ವಾದದ ಬಗ್ಗೆ ಲೇಖಕರು ಹೀಗೆ ಹೇಳುತ್ತಾರೆ: “ಪ್ರೊ. ಕಲ್ಬುರ್ಗಿಯವರು ವೇರಶೈವ ಎಂಬ ಪದ ಬಳಕೆಯಾಗಿರುವ ಬಸವ, ಅಲ್ಲಮ, ಅಕ್ಕನ ವಚನಗಳನ್ನು ಪ್ರಕ್ಷೇಪ ವಚನಗಳೆಂದು ತಿರಸ್ಕರಿಸುತ್ತಾರೆ. ಆದರೆ ಅವು ಏಕೆ ಪ್ರಕ್ಷೇಪ ಎನ್ನಲು ಸಮರ್ಥ ಕಾರಣಗಳನ್ನು ಕೊಡುವುದಿಲ್ಲ. ಅದಲ್ಲದೆ ಲಿಂಗಾಯತ ಎಂಬ ಪದಬಳಕೆಉ ವಚನಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವುದಕ್ಕೆ ಸಹ ಅವರು ಯಾವುದೇ ಸಮಜಾಯಿಷಿ ಕೊಟ್ಟಿಲ್ಲ. ಆದರೆ ಹೀಗಿದ್ದೂ ವೀರಶೈವ ಎಂದಿರುವ ಎಲ್ಲ ಪ್ರಕ್ಷಿಪ್ತ ವಚನಗಳನ್ನು ಇವರ ಸಂಪಾದಕತ್ವದಲ್ಲೆ ಅಧಿಕೃತವಾಗಿ ಪ್ರಕಟಿಸಲಾಗಿದೆ.” (ಪು. ೨೧೧). ಪ್ರೊ. ಕಲ್ಬುರ್ಗಿಯವರು ತಮಗೆ ಬೇಕಾದಂತೆ ಆಯ್ದ ಆಕರಗಳ ಮೂಲಕ ತೀರ್ಮಾನಕ್ಕೆ ಬರುತ್ತಾರೆ ಎಂಬ ಅಂಶವನ್ನು ರವಿ ಹಂಜ್ ಮುಖ್ಯವಾಗಿ ಓದುಗರ ಗಮನಕ್ಕೆ ತರುತ್ತಾರೆ. (ಪು. ೨೧೨-೨೧೬). 

  ತಾವೊಬ್ಬ ಹವ್ಯಾಸಿ ಕುತೂಹಲಿ ಎಂದು ಕರೆದುಕೊಳ್ಳುವ ರವಿ ಹಂಜ್ ಅವರು ಪ್ರೊ. ಕಲ್ಬುರ್ಗಿಯವರೂ ಸೇರಿದಂತೆ ಕನ್ನಡದ ಕೆಲವು ಸಂಶೋಧಕರ ಸಂಶೋಧನೆಗಳನ್ನು ಮಾತ್ರ ಪ್ರಶ್ನಿಸುತ್ತಿಲ್ಲ; ಬದಲಾಗಿ ಸಂಶೋಧನೆಯ ಬಗೆಗಿನ ಅಥವಾ ಸತ್ಯಶೋಧನೆಯ ಕಡೆಗಿನ ಬದ್ಧತೆ ಅಥವಾ ನಿಷ್ಠೆಯನ್ನೇ ತಮ್ಮ ಆಧಾರಗಳ ಮೂಲಕ ಪ್ರಶ್ನಿಸುತ್ತಿದ್ದಾರೆ. ಒಟ್ಟಾರೆಯಾಗಿ ಕನ್ನಡದ ಸಂಶೋಧನ ಕ್ಷೇತ್ರದ ಬಗ್ಗೆ ರವಿ ಹಂಜ್ ಬರೆಯುವ ಷರಾ ಹೀಗಿದೆ. ಇದನ್ನು ಸ್ವಲ್ಪ ದೀರ್ಘವಾಗಿಯೇ ಉಲ್ಲೇಖಿಸಬೇಕು.

  “ಹೀಗೆ ಒಂದು ಖಚಿತ ತಾರ್ಕಿಕ ನಿಲುವನ್ನು ತೋರದೆ, ಒಂದೊಮ್ಮೆ ಪ್ರಕ್ಷೇಪವೆಂದು ಮತ್ತೊಮ್ಮೆ ಅಪೇಕ್ಷೆ ಪಟ್ಟು ನಿಕ್ಷೇಪವಾಗಿಸುವ ಗೊಂದಲದ ಸಂಶೋಧನೆಯ ಹಲವಾರು ಸಂಶೋಧಕರನ್ನು ಅತ್ಯಂತ ಗೌರವಾನ್ವಿತ ಸಂಶೋಧಕರೆAದು ಶೈಕ್ಷಣಿಕ ವಲಯ, ಸಮಾಜ ಮತ್ತು ಸರ್ಕಾರಗಳು ಮಾನ್ಯ ಮಾಡಿರುವ ಸಾಕಷ್ಟು ನಿದರ್ಶನವಿರುವಾಗ ಅಂತಹ ಪ್ರಕ್ಷೇಪಾಕ್ಷೇಪನಿಕ್ಷೇಪ ಸಂಶೋಧನ ಶಿಸ್ತನ್ನು ಅಳವಡಿಸಿಕೊಂಡಿರುವ ಗಣನೀಯ ಸಂಖ್ಯೆಯಲ್ಲಿರುವ ಶಿಷ್ಯಗಣ ಸಂಶೋಧಕರ ಒಂದು ಇಡೀ ತಲೆಮಾರನ್ನು ನಂಬುವುದೆAತು? ಎಂಬ ಪ್ರಶ್ನೆ ಯಾವುದೇ ತಾರ್ಕಿಕ ಸಿದ್ಧಾಂತದ ಸಂಶೋಧಕನನ್ನು ಬಿಡಿ, ನನ್ನಂತಹ ಹವ್ಯಾಸಿ ಕುತೂಹಲಿಗೆ ಸಹ ತೀವ್ರವಾಗಿ ಕಾಡಲಾರಂಭಿಸುತ್ತದೆ. ಹಾಗಾಗಿ ಒಬ್ಬ ಸಂಶೋಧಕನು ಉತ್ಪೆçÃಕ್ಷೆಗಳ ತೆಗೆದು ಯಥಾರ್ಥವನ್ನು ಮಂಡಿಸಿ ಕೃತಾರ್ಥನಾಗುವ ತುರ್ತು ಇಂದು ಭಾರತದಲ್ಲಿ ಅತ್ಯಂತ ಅವಶ್ಯವಾಗಿದೆ. 

  ಇನ್ನು ಇಂತಹ ಅಪೇಕ್ಷಿತ ಆಕರಗಳನ್ನಷ್ಟೇ ಪರಿಗಣಿಸಿದ ಮುಖ್ಯಮಂತ್ರಿಗಳ ಲಿಂಗಾಯತ ಪ್ರತ್ಯೇಕ ಧರ್ಮ ಸಮಿತಿಯ ಸದಸ್ಯರುಗಳ ವೃತ್ತಿಪರತೆಯಲ್ಲಿರಬೇಕಿದ್ದ ತರ್ಕ, ನ್ಯಾಯಸೂತ್ರ, ಅನ್ವೇಷಣಾ ತಂತ್ರ, ನಿರಪೇಕ್ಷ ಮನೋಭಾವ, ವಿಶ್ಲೇಷಣಸೂತ್ರಗಳು ಶೂನ್ಯವಾಗಿ ಸಮಿತಿಯು ಪೀಠವನ್ನು ಅಲಂಕರಿಸಿ ಶೂನ್ಯವನ್ನು ಸಂಪಾದಿಸಿದೆ.  

   ಈ ಸಂಶೋಧನೆಗೆ ವಚನಗಳೇ ಬಹುಪಾಲು ಆಧಾರವಾಗಿರುವಾಗ ಇಂತಹ ಅಧಿಕೃತ ಕನಿಷ್ಠ ಅಂಕಿ ಅಂಶಗಳನ್ನೇ ಕೆದಕದ ಈ ಸಮಿತಿಯಲ್ಲಿದ್ದ ಖ್ಯಾತ ನಿವೃತ್ತ ನ್ಯಾಯಾಧೀಶರು, ಸಂಶೋಧನ ಹಿನ್ನೆಲೆಯ ಪ್ರಾಧ್ಯಾಪಕರು, ತನಿಖಾ ವಿಶ್ಲೇಷಣಾ ವರದಿಗಾರ ತಜ್ಞ ಪತ್ರಕರ್ತರು ಅವರವರ ವೃತ್ತಿಗಳಲ್ಲಿ ಈವರೆಗೆ ಕೈಗೊಂಡ ನ್ಯಾಯನಿರ್ಣಯ, ಸಂಶೋಧನೆಗಳು ಮತ್ತು ತನಿಖ ವರದಿಗಳು ಎಷ್ಟರಮಟ್ಟಿಗೆ ಸತ್ಯನಿಷ್ಠೆಯಿಂದ ಕೂಡಿದ್ದವು ಎಂಬ ಧನಾ(ಋಣಾ)ತ್ಮಕ ಸಂಶಯವನ್ನು ಸಹಜವಾಗಿ ಮೂಡಿಸುತ್ತವೆ!...” (ಪು. ೨೨೩). 

   ಸಂಶೋಧನೆಯ ಘನ ಗಂಭೀರ ಭಾಷೆಯ ಬದಲಿಗೆ ತುಸುವೇ ವಿಡಂಬನೆಯೊAದಿಗೆ ಪದಗಳನ್ನು ಎಗ್ಗಿಲ್ಲದೆ ಹಂಜ್ ಬಳಸುತ್ತಾರೆ. ಮೇಲಿನ ಉದ್ಧರಣೆಯಲ್ಲೂ ಅದು ಕಂಡೀತು. ಅವರ ಈ ಶೈಲಿ ಕೇವಲ ಕುತೂಹಲಿಯಾಗಿ ಸಾಮಾನ್ಯಜ್ಞಾನ ಮತ್ತು ತರ್ಕವನ್ನು ಅವಲಂಬಿಸಿದ್ದೇನೆ ಎಂದು ಹೇಳಿಕೊಳ್ಳುವ ಅವರ ವಾದಕ್ರಮಕ್ಕೆ ಸೂಕ್ತವೇ ಆಗಿದೆ!  

   ಕನ್ನಡ ಭಾಷೆಯಲ್ಲಿ ಸಂಶೋಧನ ಲೇಖನಗಳನ್ನು ಬರೆಯುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ನಾವೆಲ್ಲ ಮುಟ್ಟಿ ನೋಡಿಕೊಳ್ಳುವಂತೆ ಬರೆದಿರುವ ಈ ಮೇಲಿನ ಸಾಲುಗಳಿಂದ ಪ್ರಚೋದನೆಗೊಳಗಾಗಿ ಇನ್ನಾದರೂ ‘ಬಸವರಾಜಕಾರಣ’ ಕೃತಿಯ ನೆಪದಲ್ಲಿ ಮತ್ತು ಅದರ ಹಿನ್ನೆಲೆಯಲ್ಲಿ, ವಚನಗಳಿಗಷ್ಟೇ ಅಲ್ಲ; ಇನ್ನಿತರ ವಿಚಾರಗಳಿಗೆ ಸಂಬAಧಿಸಿದAತೆ ಕೂಡ ಕನ್ನಡ ಸಾಂಸ್ಕೃತಿಕ ಜಗತ್ತಿನ ಇದುವರೆಗಿನ ಎಷ್ಟೋ ತೀರ್ಮಾನಗಳನ್ನು ಮತ್ತೊಮ್ಮೆ ಯಾರಾದರೂ ಒರೆಗೆ ಹಚ್ಚುತ್ತಾರೆಯೇ ಎಂದು ಕಾಯಬೇಕಿದೆ. ಹಾಗೆ ಒರೆಗೆ ಹಚ್ಚುವ ಮೂಲಕ ರವಿ ಹಂಜ್ ಎಂಬ ಸಂಶೋಧಕನಲ್ಲದ ಕೇವಲ ಕುತೂಹಲಿ ತೆಗೆಯುತ್ತಿರುವ ಕನ್ನಡ ಸಂಶೋಧನೆಯ ಮರ್ಯಾದೆಯನ್ನು ನಾವು ಉಳಿಸಿಕೊಳ್ಳುತ್ತೇವೋ ಎಂದು ನೋಡಬೇಕಿದೆ!

                         #####

ಅನಿವಾಸಿಯ ಗ್ಲಾಡಿಯೋಡಸ್ ಹೂವಿನ ಹಾರ

 ದೇಶವಾಸಿ ಜನಸಾಮಾನ್ಯರಲ್ಲದೇ ಅನೇಕ ಬುದ್ಧಿಜೀವಿಗಳೂ ಸೇರಿ ಅನಿವಾಸಿಗಳ ಬಗ್ಗೆ ಇರುವ ಅಭಿಪ್ರಾಯವೇನೆಂದರೆ, "ಭಾರತ ಬಿಟ್ಟು ವಿದೇಶಕ್ಕೆ ತೆರಳಿದೊಡನೆಯೇ ಇವರನ್ನು ಆ ವಿದೇಶಗಳು, ದೇಶಶ್ರೇಷ್ಠ ಭಾರತದ ದಿವ್ಯ ತಲೆ ಮತ್ತು ಭವ್ಯ ಪಾದ ಹೊಂದಿದ ಪ್ರಜೆಗಳೆಂದು ಬಗೆದು ಗ್ಲಾಡಿಯೋಡಸ್ ಹೂವಿನ ಹಾರ ಹಾಕಿ ’ಇಗೋ ಇದು ನಿಮ್ಮ ಕಾರು, ಇಗೋ ನಿಮ್ಮ ಆರು ಬೆಡ್‌ರೂಮು, ಒಂದು ಸ್ವಿಮ್ಮಿಂಗ್‌ಪೂಲ್, ಜ಼ಕೂಜ಼ಿ ಮತ್ತು ಸುಸಜ್ಜಿತ ಪೀಠೋಪಕರಣಗಳಿಂದ ಅಲಂಕೃತ ಬಂಗಲೆಯ ಬೀಗ. ಇದು ನಿಮ್ಮ ಖರ್ಚಿಗೆ ಬೇಕಾದ ಹಣದ ತಿಜೋರಿ’ ಎಂದು ಸುಖಾಗಮನ ಬಯಸುತ್ತಾರೆ" ಎಂಬೆಲ್ಲಾ ಕಲ್ಪನೆಯಲ್ಲಿರುತ್ತಾರೆ. 


ಇಂತಹ ಕಲ್ಪನೆಯ ಕನ್ನಡ ಹೋರಾಟಗಾರರು / ಬುದ್ಧಿಜೀವಿ / ಸಮಾಜಜೀವಿಗಳೊಬ್ಬರು ನಾನೊಬ್ಬ ಎನ್ನಾರೈ ಕನ್ನಡ ಬರಹಗಾರ ಎಂದು ನನ್ನನ್ನು ಕಾಣಲು ಬಯಸಿದ್ದರು.  ಕನ್ನಡ ಶಾಲೆ ನಡೆಸುತ್ತಿದ್ದ ಅವರ ಸತ್ಕಾರ್ಯ ಕೇಳಿ, ಇಡೀ ಕರ್ನಾಟಕ ಸರ್ಕಾರಿ ಶಾಲೆಗಳು ಕನ್ನಡ ಮಾಧ್ಯಮದಲ್ಲೇ ನಡೆಯುತ್ತಿರುವಾಗ ಇದರಲ್ಲಿ ಏನು ವಿಶೇಷ ಎಂದು ಆಶ್ಚರ್ಯವಾದರೂ, ಬಾಲ್ಯದಲ್ಲಿ ಅವರ ಹೋರಾಟಗಳ ಬಗ್ಗೆ ಓದಿ ಪ್ರಭಾವಿತನಾಗಿದ್ದ ಕಾರಣ ನಾನೂ ಭೇಟಿಯಾಗಲು ಉತ್ಸುಕನಾಗಿ ಹೋಗಿದ್ದೆ. ಸರ್ಕಾರಿ ಕನ್ನಡ ಶಾಲೆಗಳಲ್ಲೇ ಓದಿದ್ದ ನನ್ನಿಂದ ಕೆಲವು ಸಲಹೆಗಳನ್ನೋ ಅಥವಾ ಅವರ ವಿದ್ಯಾರ್ಥಿಗಳಿಗೆ ನಾಲ್ಕು ಹಿತವಚನಗಳ ಸ್ಫೂರ್ತಿ ತುಂಬುವ ಕೆಲಸಕ್ಕೋ ನನ್ನನ್ನು ಕಾಣಬಯಸಿರಬಹುದು ಎಂದು ಊಹಿಸಿದ್ದೆ.


ಅವರು ತ್ವರಿತವಾಗಿ ಹತ್ತು ನಿಮಿಷದಲ್ಲಿ ತಮ್ಮ ಶಾಲೆಯನ್ನು ತೋರಿಸಿ ಅದರೊಟ್ಟಿಗೆ ಅಲ್ಲಿದ್ದ ಅತ್ಯಂತ ಸುಸಜ್ಜಿತ ಆಡಿಟೋರಿಯಮ್ಮನ್ನೂ ತೋರಿಸಿದರು. ಅವರ ಕಾರ್ಯವನ್ನು "ಜಾಗರೂಕತೆ"ಯಿಂದ ಶ್ಲಾಘಿಸಿ ವಂದಿಸಿದೆ. ನಂತರ ಅವರ ಕಾರ್ಯಾಲಯಕ್ಕೆ ನನ್ನನ್ನು ಕರೆದೊಯ್ದರು. ಅವರ ಸಿಬ್ಬಂದಿಯೊಬ್ಬರು ಮೂರು ಎಳನೀರನ್ನು ಎಂಟು ಲೋಟಾಗಳಲ್ಲಿ ಹಾಕಿ ನನ್ನನ್ನೂ ಸೇರಿಸಿ ಅಲ್ಲಿದ್ದ ಎಂಟು ಜನರ ಮುಂದಿಟ್ಟರು. ಆಗ ಆ ಹೋರಾಟಗಾರರು, "ನೋಡಿ, ನಮ್ಮ ಶಾಲೆಯ ಪೀಠೋಪಕರಣಗಳು ತುಂಬಾ ಹಳೆಯದಾಗಿವೆ. ಅವುಗಳನ್ನು ಬದಲಾಯಿಸಲು ಐದು ಲಕ್ಷ ರೂಪಾಯಿಗಳು ಬೇಕು. ಕನ್ನಡಪ್ರೇಮಿಯಾದ ನೀವು ಅದನ್ನು ಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ. ಹಾಂ, ಹಾಗೆಲ್ಲಾ ಎಲ್ಲರನ್ನೂ ನಾವು ಸಹಾಯ ಕೇಳುವುದಿಲ್ಲ. ನಮ್ಮ ಶಾಲೆಗೆ ತುಂಬಾ ಜನ ರಾಜಕಾರಣಿಗಳು, ಖದೀಮರು ಹಣ ಕೊಡುತ್ತೇವೆ ಎಂದು ಬರುತ್ತಾರೆ. ಅವರಿಂದೆಲ್ಲಾ ನಾನು ಒಂದು ಪೈಸೆಯನ್ನೂ ತೆಗೆದುಕೊಳ್ಳದೇ ಓಡಿಸಿಬಿಡುತ್ತೇನೆ. ಕೇವಲ ಪ್ರಾಮಾಣಿಕರಿಂದ ಮಾತ್ರ ತೆಗೆದುಕೊಳ್ಳುತ್ತೇನೆ. ಅಂದ ಹಾಗೆ ನೀವು ಇನ್ನೆಷ್ಟು ದಿನದಲ್ಲಿ ಸಹಾಯ ಮಾಡಬಹುದು?" ಎಂದರು.


ತಕ್ಷಣಕ್ಕೇ ನನ್ನೆದುರಿದ್ದ ಎಳನೀರು "ಎಂಟನೇ ಲೂಯಿ ಕೋನ್ಯಾಕ್" ರೀತಿ ಕಾಣತೊಡಗಿತು!


ಅವರು ಶಾಲೆಯನ್ನು ತೋರಿದ ರೀತಿ ಮತ್ತು ಆಡಿಟೋರಿಯಮ್ಮನ್ನು ಕಟ್ಟಿಸಿಕೊಟ್ಟವರು ಬೀಡಿ ಕಿಂಗ್ ದಾನಿಗಳು ಎಂದು ಗೊತ್ತಾದ ಕೂಡಲೇ ಕೊಂಚ ವ್ಯವಹಾರಿಕ "ಜಾಗರೂಕತೆ" ನನ್ನಲ್ಲಿ ಮೂಡಿತ್ತು. ಹಾಗಾಗಿ ತಕ್ಷಣವೇ, "ನೋಡಿ, ಮೋದಿ ಕಪ್ಪು ಹಣ ತರುತ್ತೇನೆ ಎಂದು ಹೊರಟು ನಾವೀಗ ನಮ್ಮ ಭಾರತೀಯ ಖಾತೆಯ ಎಲ್ಲಾ ಲೆಕ್ಕವನ್ನು ನಾವಿರುವ ದೇಶಕ್ಕೆ ಕೊಡಬೇಕಾಗಿದೆ. ಇದರಿಂದ ಅನವಶ್ಯಕ ಲೆಕ್ಕ ಇಡುವ ತಲೆನೋವಾಗಿದೆ. ಇನ್ನು ಇತರರ ಖಾತೆಗೆ ಹಣ ಕಳಿಸುವುದು ತುಂಬಾ ಕಷ್ಟದ ಕೆಲಸ. ನಿಮ್ಮ ಸಂಸ್ಥೆ ಅಮೇರಿಕಾದಲ್ಲಿ ತೆರಿಗೆ ವಿನಾಯಿತಿ ಸಂಸ್ಥೆಯಾಗಿ ನೋಂದಣಿ ಮಾಡಿಸಿದ್ದರೆ ನಾನಷ್ಟೇ ಅಲ್ಲದೆ ಸಕಲ ಅಮೇರಿಕನ್ನಡಿಗರೂ ಧನಸಹಾಯ ಮಾಡುತ್ತಾರೆ. ನಿಮ್ಮ ಸಂಸ್ಥೆಯ ವಿವರಗಳನ್ನು ನನಗೆ ಕಳುಹಿಸಿ. ನಾನೇ ಖುದ್ದಾಗಿ ನೋಂದಣಿ ಮಾಡಿಸಿಕೊಡುತ್ತೇನೆ" ಎಂದು ರಂಗೋಲಿ ಕೆಳಗೆ ನುಸುಳಿ ಪಾರಾಗಿದ್ದೆ.


ಏಕೆಂದರೆ ಅಂತಹ ಸಹಾಯದ ಅನಿವಾರ್ಯ ನನ್ನ ಬಂಧುಮಿತ್ರರ ಬಳಗದಲ್ಲಿಯೇ ಬೆಟ್ಟದಷ್ಟಿರುವಾಗ ನಾನು ಅಂತಹ ದೊಡ್ಡ ಮೊತ್ತವನ್ನು ನನ್ನದಲ್ಲದ ಊರಿನ ಶಾಲೆಗೆ, ಅಪರಿಚಿತರಿಗೆ ಹೇಗೆ ತಾನೇ ಕೊಡಬಲ್ಲೆ?!?


ಬೆಂಗಳೂರಿನಲ್ಲಿ ಒಂದು ಚದರಡಿ ಸೈಟಿಗೆ ಮುನ್ನೂರು ರೂಪಾಯಿ ಇದ್ದಾಗ ಅಮೇರಿಕಾದ ಇಂಜಿನಿಯರನ ಸಂಬಳ ಎಷ್ಟಿತ್ತೋ ಅದು ಬೆಂಗಳೂರಿನಲ್ಲಿ ಚದರಡಿಗೆ ಹದಿನೈದು ಸಾವಿರವಾದಾಗ ಕೇವಲ ಮೂರುಪಟ್ಟು ಹೆಚ್ಚಾಗಿದೆಯೇ ಹೊರತು ನೂರುಪಟ್ಟಲ್ಲ ಎಂಬ ಜಾಗತಿಕ ವಿದ್ಯಮಾನದ ಅರಿವು ಮಾಹಿತಿ ತಂತ್ರಜ್ಞಾನದ ತವರಿನ ನಿವಾಸಿಗಳಿಗೆ ಏಕೆ ತಿಳಿಯುತ್ತಿಲ್ಲ!?


ಯೌವ್ವನದ ಕಿಚ್ಚಿನಲ್ಲಿ ಯಾವುದೇ ಮುಲಾಜಿಗೆ ಸಿಲುಕದ ಸಮಾಜವಾದದ ಹೋರಾಟಗಾರರು ಹೀಗೇಕೆ ಪ್ರಬುದ್ಧತೆಯ ವಯಸ್ಕರಾದೊಡನೆ ಬಂಡವಾಳಶಾಹಿಗಳಾಗುತ್ತಾರೆ? ರಾಜಕಾರಣಿ, ಖದೀಮರಿಂದ ಸಹಾಯ ನಿರಾಕರಿಸಿ, ತಂಬಾಕಿನ ಚಟ ಹತ್ತಿಸುವ ಬೀಡಿ ವರ್ತಕರಿಂದ ಮಕ್ಕಳ ಶಾಲೆಗೆ ಸಹಾಯ ಪಡೆದದ್ದು ಹೇಗೆ ನೈತಿಕತೆ ಎನಿಸುತ್ತದೆ!?! ಎಂಬ ಹಲವಾರು ಪ್ರಶ್ನೆಗಳು ಅಂದು ನನ್ನನ್ನು ಕಾಡಿದವು.  ಅವೆಲ್ಲವೂ ಇಂದೇಕೋ ಅತಿಯಾಗಿ ಕಾಡುತ್ತಿವೆ.


ಎನ್ನಾರೈ ಎಂದರೆ ಕನ್ನಡದ ಕಿಚ್ಚ, ಡಚ್ಚ, ಅಣ್ತಮ್ಮ, ಹ್ಯಾಟ್ರಿಕ್ಕು ಅಲ್ಲ, ಬರೀ ಗೋಳು ಬರೀ ಗೋಳು ಬರೀ ಗೋಳು. ಏಕೆಂದರೆ ಭಾರತದ ಆರ್ಥಿಕತೆ, ಸಾಮಾಜಿಕತೆ, ನೈತಿಕತೆ, ಆಕತೆ, ಈಕತೆ ಎಲ್ಲಾ ಬರೀ ಓಳು ಬರೀ ಓಳು ಬರೀ ಓಳು.


ಕಂಡೆನೆಂಬುದು ಕಂಗಳ ಮರವೆ,

ಕಾಣೆನೆಂಬುದು ಮನದ ಮರವೆ,

ಕೂಡಿದೆನೆಂಬುದು ಅರುಹಿನ ಮರವೆ,

ಅಗಲಿದೆನೆಂಬುದು ಮರಹಿನ ಮರವೆ.

ಇಂತು ಕಂಡೆ_ಕಾಣೆ_ಕೂಡಿದೆ_ಅಗಲಿದೆ ಎಂಬ,

ಭ್ರಾಂತಿಸೂತಕವಳಿದು ನೋಡಲು

ಗುಹೇಶ್ವರಲಿಂಗವನಗಲಲೆಡೆಯಿಲ್ಲ ಕೇಳಾ, ಎಲೆ ತಾ(ಮಾ)ಯೆ!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ


ರ ಠ ಈ ಕ - ದೀಪಾ ದೇವಕತೆ ವಿಮರ್ಶೆ

 ಆತ್ಮಕಥನ: ರ ಠ ಈ ಕ

ಲೇಖಕರು: ರವಿ ಹಂಜ್ 

ಪ್ರಕಾಶನ: ಸಂವಹನ 


"ಶಿಕ್ಷಣವೆಂಬುದು ಮಗುವು ಬೆಳೆಯುವ ಪ್ರಕ್ರಿಯೆಯ ಮಾನಸಿಕ ತುಮುಲ, ಸಂಕೀರ್ಣತೆ, ವಿಕಾಸದ ಮಜಲುಗಳನ್ನು ಮಕ್ಕಳ ಮನಶ್ಶಾಸ್ತ್ರಜ್ಞರ ಅನುಜ್ಞೆಯಂತೆ ಅನುಸರಿಸಿ ಬಾಲಬಾಲೆಯರನ್ನು ಪರಿಪೂರ್ಣ ಮನುಷ್ಯರನ್ನಾಗಿಸಿ ರೂಪಿಸುವ ವ್ಯವಸ್ಥೆಯಾಗಬೇಕು." 

              ~ರವಿ ಹಂಜ್

              

      ಇತ್ತೀಚೆಗೆ ಬಿಡುಗಡೆಗೊಂಡ ರವಿ ಹಂಜ್ ಅವರ ಆತ್ಮಕಥನ 'ರ ಠ ಈ ಕ', ಸಿಗ್ಮಂಡ್ ಫ್ರಾಯ್ಡ್ ರವರ Id, Ego, Super Ego ಆಧಾರಿತ ಕಥೆಯೂ, ಮನೋವೈಜ್ಞಾನಿಕ ಕಾದಂಬರಿಯೂ, ಆತ್ಮಕಥನವೂ, ವಿಡಂಬನ ಸಾಹಿತ್ಯವೂ ಎನ್ನಿಸುವ ಹೊಸ ಸಾಹಿತ್ಯಕ ಪುಸ್ತಕದ ಕುರಿತು ಪರಿಚಯ.       

     

ಅನನ್ಯ ಸಾಹಿತ್ಯ:

*************


ಲೇಖಕ ತನ್ನ ನೆನಪುಗಳನ್ನು ಓದುಗರದೇ ನೆನಪುಗಳಂತೆ ಕಾಲಾಂತರಕ್ಕೆ ಕೊಂಡೊಯ್ಯುವ ಬರವಣಿಗೆ ಸುಲಭದ್ದಲ್ಲ! ನಾನು ಕಂಡಂತಹ ನನ್ನ ಬಾಲ್ಯದ ಬಿಜಾಪುರದ ನೆನಪಿನೆಡೆಗೆ ನನ್ನನ್ನು ಕೊಂಡೊಯ್ದ ಸ್ಮರಣಿಕೆಯ ಪ್ರತಿಬಿಂಬದ ವಿಶಿಷ್ಟ ರೂಪದ ಮನೋಭೂಮಿಕೆಯ ಸಾಹಿತ್ಯ ಈ ಕೃತಿ. 


ಈ ಕಥನವನ್ನು ಓದುವಾಗ ಆದಿಲ್ ಶಾಹಿ ಕಾಲದ ನಾಲ್ಕು ದಿಕ್ಕಿಗಿರುವ ಕೋಟೆಯನ್ನು ಸುತ್ತುವರಿದ ನಗರವು ಮುಳ್ಳಗಸಿ, ಮನಗೂಳಿ...ಅಗಸಿಗಳನ್ನು ಮೀರಿ ಬೆಳೆದ ನನ್ನ ಬಾಲ್ಯದ ಬಿಜಾಪುರ ನೆನಪಾಯ್ತು. ಇಲ್ಲಿನ ಹಗೆಗಳ ವಿವರಣೆಯು ನನಗೆ ನೀರಿದ್ದೂ ಪಾಳುಬಿದ್ದ ನನ್ನ ಬಿಜಾಪುರದ ಬಾವಡಿಗಳು, ತಾಲಾಬುಗಳನ್ನು ನೆನಪು ತಂದಿತು. ನೀರಿಗಾಗಿ ಹಾಹಾಕಾರ ಉಂಟಾದರೂ ಬಾವಡಿಗಳ ನೀರನ್ನು ಕಲುಷಿತವಾಗಿರಿಸಿದ ವ್ಯವಸ್ಥೆಯ ಮೂರ್ಖತನದ ಅವಿವೇಕದ ಸಮಾಜಮುಖಿಯ ಪ್ರಜ್ಞೆ ಮೂಡಿಸುತ್ತಿತ್ತು. ಲೇಖಕರ ಕುತೂಹಲದ ಪತ್ತೆದಾರಿಗಳು, ನಾವು ಹೈಸ್ಕೂಲ್-ಕಾಲೇಜು ದಿನಗಳಲ್ಲಿ "ಚಪ್ಪನ್ ಸೌ ಚಾವಡಿ ಬಾವನ್ ಸೌ ಬಾವಡಿ" ಎಂಬಂತೆ ಅವುಗಳನ್ನು ಹುಡುಕಿಕೊಂಡು ಕುತೂಹಲದಿಂದ ಅಲೆದಲೆದು ಕ್ಲಿಕ್ಕಿಸಿದ ಫೋಟೋಸ್, ಉತ್ಖನನ ರೂಪದ ಅಲೆದಾಟಗಳು ನೆನಪಾದವು.


ಕೃತಿಕಾರರ ಮಗುವಿನ ಮನಸ್ಸು ಕುತೂಹಲದೊಂದಿಗೆ ವಿಶ್ವಜಂಗಮ ಗುಣವು, ಅನುಭವಗಳೊಂದಿಗೆ ಸ್ಥಾವರಗೊಳಿಸುವ ಅನುಭಾವದ ಆನಂದದಂತಿದೆ. ಬರೆಯಲು ಹಚ್ಚುವ ಪುಸ್ತಕಗಳೇ ಶ್ರೇಷ್ಠ ಪುಸ್ತಕಗಳು. ಒಂದು ರಚನೆಯೊಂದಿಗೆ ಅದರ ಉತ್ಪತ್ತಿ ಇದ್ದರೆ ಅದು ಸೃಷ್ಟಿ...ಜೀವಜಗತ್ತು! (ಸಾಹಿತ್ಯವನ್ನು ಜೀವಂತವಾಗಿರಿಸುವ ಬರಹ!) ನನ್ನನ್ನು ಬರೆಯಲು ಹಚ್ಚಿದ ಕೃತಿ ಇದಾಗಿದೆ ಎನ್ನಲು ನನಗೆ ಖುಷಿಯಾಗುತ್ತದೆ.


 •ವಿಡಂಬನೆ(Satire) ಒಂದು ಸಾಹಿತ್ಯದ ಪ್ರಕಾರ. ಹಾಗೆಯೇ ಲೇಖಕರು ತಾವು ಕಂಡ ಸಂಗತಿಗಳನ್ನು ವಿಡಂಬನೆಯ ಮೂಲಕ ವಿಮರ್ಶಿಸುತ್ತ ಬರೆಯುತ್ತಾರೆ. ತಮ್ಮ ಬಾಲ್ಯದ ಸಾಮಾಜಿಕ ವ್ಯವಸ್ಥೆಯನ್ನು ವಿಡಂಬನಾತ್ಮಕವಾಗಿ ವಿಮರ್ಶಿಸುತ್ತ ಒಂದು ಸಾರ್ವಕಾಲಿಕ ಸತ್ಯ ಅಥವ ಎಲ್ಲರೂ ಒಪ್ಪಲೇಬೇಕಾದ ಅಂಕುಡೊಂಕುಗಳನ್ನು ಮುಕ್ತವಾಗಿ ಬರೆಯುವ, ಪ್ರಾಮಾಣಿಕ ಬರಹ ಲೇಖಕರನ್ನು ಅಪ್ಯಾಯಮಾನವೆನಿಸುವಂತೆ ಮಾಡುತ್ತದೆ. ಹೇಗೆ ಅಲೆಕ್ಸಾಂಡರ್ ಪೋಪ್ ತನ್ನ contemporary ಸಮಾಜವನ್ನು ನೋಡಿ ವಿಡಂಬನಾತ್ಮಕ ಸಾಹಿತ್ಯವನ್ನು 'The Rape of the Lock"ನಂತೆ ರಾಜಕುಮಾರಿಯ ಮುಂಗುರುಳನ್ನು ಕತ್ತರಿಸುವಿಕೆಯು ಆ ಕಾಲಘಟ್ಟದ ಸಮಾಜದ ವರ್ಗಗಳ ಅಸಮಾನತೆ, ಅವಳ ವೈಭೋಗದ ಜೀವನವನ್ನು Satirise ಮಾಡಿದಂತೆ; Jonathan Swift ನ 'Gulliver's travels'  ( a masterpiece satire) ಹೇಗೆ ನಾಲ್ಕು ರಿಮೋಟ್ ದೇಶಗಳ ಜನರ 'ಮಾನವನ ಸ್ವಭಾವ'ದ ಕುರಿತು ವಿಡಂಬನೆ ಮಾಡುತ್ತದೆ; ಹಾಗೆ ದಾವಣಗೆರೆಯು ರಾವಣಗೆರೆಯಾದ ಪರಿಯನ್ನು ಸಮಾಜಮುಖಿಯಾಗಿ ಸ್ಥಿತಪ್ರಜ್ಞತೆಯ ಮನೋಭಾವದಿಂದ ರವಿ ಹಂಜ್ ಬರೆಯುತ್ತಾರೆ. ಅವರ ಸ್ಥಿತಪ್ರಜ್ಞತೆ ಕುರಿತು ಹೇಳುವುದಾದರೆ, ಅಂತರಿಕ್ಷದಲ್ಲಿ ನಿಂತು ಯಾವ ಭೌಗೋಳಿಕ ಮಿತಿಗೂ ಸೀಮಿತವಾಗಿರದೆ ಸತ್ಯವನ್ನು ನಿಷ್ಠುರವಾಗಿ ಹೇಳುವಂತೆ ಅನ್ನಿಸಿದ್ದನ್ನು ಖಡಾಖಂಡಿತವಾಗಿಯೂ ಬರೆದಿದ್ದಾರೆ.  

ಲೇಖಕರ 'ಅಗಣಿತ ಅಲೆಮಾರಿ' ಕೃತಿಯಲ್ಲಿಯೂ ಈ ತರಹದ ವಿಡಂಬನಾತ್ಮಕ ಸಾಹಿತ್ಯವನ್ನು ನಾನು ಕಂಡಿದ್ದೆ.


•ಮುಗ್ಧ-ಹಾಸ್ಯಭರಿತ ಸನ್ನಿವೇಶಗಳು ಒಂದೆರಡು ಕ್ಷಣ ನಕ್ಕು ಸುಧಾರಿಸಿಕೊಂಡು ಮತ್ತೆ ಓದನ್ನು ಮುಂದುವರೆಸುವ humouristic reminiscenceನಂತೆ ಕಥನದುದ್ದಕ್ಕೂ ಓದುಗರನ್ನು ಉಲ್ಲಸಿತಗೊಳಿಸುತ್ತವೆ. ಅವು ಸಹಜ ಮತ್ತು ವಾಸ್ತವಿಕ ಅಭಿವ್ಯಕ್ತಿಯಂತಿರುವ ಲೇಖಕರ ಗಾಢವಾದ ಸ್ಮರಣಶಕ್ತಿಗೆ ಹಿಡಿದ ಕನ್ನಡಿಯಂತಿವೆ. ಒಂದೊಂದು ಘಟನೆಗಳೂ ಸಂಭಾಷಣೆಯುಕ್ತವಾಗಿದ್ದು ದಾವಣಗೆರೆಯ ಸೊಗಡಿನ ಭಾಷೆಯನ್ನು ಮಿಂಚಿಸುತ್ತವೆ.


ಮನೋವೈಜ್ಞಾನಿಕ ಆಧಾರಿತ ಆತ್ಮಕಥನ:

*********************************


 ಮುಗ್ಧತೆಯ ಅಂತರ್ಮುಖಿತ್ವದ ಮಿತಭಾಷೆ, ವ್ಯವಧಾನದೊಂದಿಗೆ ಸಮಾಜದೊಂದಿಗೆ ಬೆರೆಯುವ ಸಮಾಜಮುಖಿ ಗುಣವು ಮಗುವನ್ನು ಉತ್ತಮಿಕೆಗಳೊಂದಿಗೆ ನಿಧಾನವಾಗಿ ಅಭಿವ್ಯಕ್ತಗೊಳಿಸುತ್ತ ಹೋಗುತ್ತದೆ. ಅದಕ್ಕೆ ಸೂಕ್ತ ಅವಕಾಶಗಳನ್ನು ಮನೆ-ಶಾಲೆ-ಪರಿಸರಗಳು ಒದಗಿಸಿ, ತೊಡಗಿಸುವಿಕೆಗೆ ಒಳಪಡಿಸಿದಾಗ ಮಗುವು ಮನೋ ವಿಕಾಸ ಹೊಂದುತ್ತ ನೋಡುತ್ತ, ಕೇಳುತ್ತ, ಮುಟ್ಟುತ್ತ, ಕಲಿಯುತ್ತ ಸಾಗುತ್ತದೆ. ಲೇಖಕರು ತಾವು ಎಳವೆಯಲ್ಲಿ ಕಂಡ ಸೈಕಲ್ ಪಯಣದ ಅನುಭವವನ್ನು, ಜೀವನ ಸಾಕ್ಷಾತ್ಕಾರಕ್ಕೆ ಹೋಲಿಸುವ ತರ್ಕದ ಪರಿಪಕ್ವತೆ ಗಮ್ಯವೆನಿಸುತ್ತದೆ.

 

•ಈ ಆತ್ಮಕಥೆಯ 'ಮಾತು-ಅಭಿವ್ಯಕ್ತಿ' ಹೇಗೆ ಸಂಜ್ಞೆಗಳ ಮೂಲಕ ಸಾಗುತ್ತಿತ್ತೋ ಹಾಗೆ ನನ್ನ ಬಾಲ್ಯದ ದಿನಗಳನ್ನು (ನನ್ನ ಚಿಕ್ಕಮ್ಮಂದಿರು ನೆನಪಿಸಿದಾಗ) ಸ್ಮೃತಿಗೆ ಕೊಂಡೊಯ್ಯುತ್ತವೆ. ನಾನು ಟಿವಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ನೋಡಿದಾಗಲೆಲ್ಲ ತೊದಲು ನುಡಿಗಳಿಂದ 'ಗಾಜೀವ್ ಗಾಂಧಿ, ಗಾಜೀವ್ ಗಾಂಧಿ' ಎಂದು ಕುಣಿದು ಕುಪ್ಪಳಿಸುತ್ತಿದ್ದೆನಂತೆ. ಆ ತೊದಲು ನುಡಿಗಳು, ಸಂಜ್ಞೆಗಳ ಹೊರತಾಗಿಯೂ, ಅಭಿವ್ಯಕ್ತಿಯೆಂಬುದು ಸಹಜತೆಗೆ ಅವಕಾಶ ದೊರೆತಾಗ ಹೊರಹೊಮ್ಮುವ ಬಹಿರ್ಮುಖಿತ್ವದ ಭಾವವಾಗಿದೆ. ಮಗುವು ಬಾಲ್ಯಾವಸ್ಥೆಯಲ್ಲಿ ಸಮಾಜದೊಂದಿಗೆ ಬೆರೆಯುವುದು/ಸಂವಹನ ಮಾಡುವುದು ಸುಲಭದ್ದಲ್ಲ. ಉದಾಹರಣೆಗೆ: ೧ನೇ ತರಗತಿಗೆ ದಾಖಲಾದ ಕೆಲವು ಮಕ್ಕಳು ಶಿಕ್ಷಕರೊಂದಿಗೆ, ಸಮವಯಸ್ಕರೊಂದಿಗೆ ಸಂವಹಿಸುವುದು ಮಂದಗತಿಯಲ್ಲಿ ಸಾಗುತ್ತದೆ. ಕೆಲವು ಸಲ ಅವರು ತಮ್ಮ ತಾಯಿಯೊಂದಿಗೆ/ಸಂಬಂಧಿಗಳೊಂದಿಗೆ ಸಂಭಾಷಿಸುವಂತೆ ಶಿಕ್ಷಕರು/ಸ್ನೇಹಿತರೊಂದಿಗೆ ಸಂಕೋಚ-ತಾದಾತ್ಮ್ಯದೊಂದಿಗೆ ಮಾತನಾಡುತ್ತಾರೆ. 


•ದಾವಣಗೆರೆಯ ಗಟ್ಟಿತನ ಮತ್ತು ಶಿವಮೊಗ್ಗದ ಪಸಿರಿನ ನವಿರಾದ ಅನುಭವಗಳ ಕಟ್ಟೋಣಗಳು ಲೇಖಕರನ್ನು ಸಮ್ಮಿಶ್ರದ ಸಮ್ಮಿಳಿತದೊಂದಿಗೆ ಗಮ್ಯ ವ್ಯಕ್ತಿತ್ವದ ವಿಕಾಸಕ್ಕೆ ಹಿಡಿದ ಕನ್ನಡಿಯಂತಿವೆ. ಎಲ್ಲರೂ ಹಾಗೇ ಅಲ್ಲವೇ! ತಂದೆ-ತಾಯಿಗಳಿಬ್ಬರ ಗುಣಗಳು ಮತ್ತು ಅವಲೋಕಿಸಿದ ಪರಿಸರದ ಸಮ್ಮಿಳಿತದೊಂದಿಗೆ ವ್ಯಕ್ತಿಯಾಗಿ ಸಮಷ್ಠಿಯೊಂದಿಗೆ, ಸಮಾಜಮುಖಿಯಾಗಿ ಬೆಳೆದಿರುತ್ತೇವೆ. 


•ಮುಗ್ಧತೆಯ ಮುಂಗೋಪವು ಅಸಹಾಯಕತೆಯ ವಯಸ್ಸು ಮಗುವನ್ನು ಮಗುವಾಗಿರಲು ಬಿಡದೆ ದೊಡ್ಡವರಂತಿರಲೂ ಬಿಡದಂತಹ ಸಂಕ್ರಮಣ ಕಾಲದಂತಿರುವ ಕಿಶೋರಾವಸ್ಥೆ ಓದುಗನೂ ಅನುಭವಿಸಿದ ಸಾಮಾನ್ಯ ಸಂಗತಿ. ಈ ಅವಸ್ಥೆಯಲ್ಲಿ ಉಂಟಾಗುವ ಜೈವಿಕ ಬದಲಾವಣೆಗಳನ್ನು ದಮನಕ್ಕೊಳಪಡಿಸಿ, ಬೆಳೆದು ನಿಂತ ಮೇಲೆ ಅಹಮಿಕೆಯೊಂದಿಗೆ ಕಾರ್ಯರೂಪಕ್ಕೆ ತರುವ ಹಂಬಲ ನಮ್ಮನ್ನು ಆಂತರಿಕವಾಗಿ ಆವರಿಸಿಕೊಂಡು ಬಿಟ್ಟಿರುತ್ತದೆ.  ದೊಡ್ಡವರು ಯಾವುದನ್ನು ಮಾಡಬೇಡವೆಂದು ನಿರ್ಬಂಧ ಹೇರುತ್ತಾರೋ ಅದರೆಡೆಗೆ ಆಸಕ್ತಿ ಬೆಳೆಯುತ್ತದೆ. ಇವೆಲ್ಲವೂ ಓದುಗನನ್ನು ತಮ್ಮ ಬಾಲ್ಯಕ್ಕೆ ಕೊಂಡೊಯ್ಯುವ ಬಿಂಬಗಳಾಗಿವೆ. ಏಕೆಂದರೆ 'ದಮನ'(Repression-ಸುಪ್ತ-Id) ಕೇವಲ ಒಂದು ರಕ್ಷಣಾ ತಂತ್ರ; ಸಹಜವಾದ ಸಮಾಯೋಜನೆಯ ತಂತ್ರ. ನಾವು ಬಾಲ್ಯದಲ್ಲಿ ಸಮಾಜ, ಪರಿಸರದೊಂದಿಗೆ ಹೊಂದಿಕೊಳ್ಳಲು ಇವನ್ನು ಒಮ್ಮೆಯಾದರೂ ಬಳಸಿಯೇ ಇರುತ್ತೇವೆ. ಆದರೆ ಅವುಗಳ ವೈಪರೀತ್ಯಗಳು ಮನಸ್ಸಿಗೆ ಘಾಸಿಯನ್ನುಂಟುಮಾಡುವ ಮನಸ್ಸಿನ ಡಿಸಾರ್ಡರ್ ಆಗಿ ಪರಿಣಮಿಸುವುದನ್ನು ಲೇಖಕರು ತಮ್ಮ ಸುತ್ತಮುತ್ತಲ ಜನರಲ್ಲಿ ಸೂಕ್ಷ್ಮವಾಗಿ ಅವಲೋಕಿಸಿ ವಿಮರ್ಶಿಸಿದ್ದಾರೆ.  ಎಲ್ಲರೂ ಇವುಗಳೊಂದಿಗೆ "ಮೇಲೆಕ್ಕೇರಿರುವುದೆಲ್ಲ ಕೆಳಗಿಳಿಯಲೇಬೇಕು" ಎಂಬಂತೆ ನಮ್ಮ ಬಾಲ್ಯದ ಕ್ಷಣಗಳನ್ನು ಅನುಭವಿಸುತ್ತಲೇ ಪ್ರಬುದ್ಧರಾಗಿರುತ್ತೇವೆ.


•ಮನೋವಿಜ್ಞಾನ ಅಧ್ಯಯನದ ವಿಕಾಸವು ಹೇಗೆ ಆತ್ಮ-ಮನಸ್ಸು-ವರ್ತನೆಯ ದಿಶೆಯಲ್ಲಿ ಅರ್ಥವನ್ನು ಕಂಡುಕೊಂಡಿತೊ, ಹಾಗೆ ಮಗುವು ತನ್ನ ಸುಪ್ತ-ಅಹಂ- ವಿಪರೀತ ಅಹಂ ನೊಂದಿಗೆ ಎಳವೆಯಲ್ಲಿ ವ್ಯಕ್ತಿತ್ವದ ನಡವಳಿಕೆಗಳನ್ನು ಪ್ರಯತ್ನ-ಪ್ರಮಾದಗಳೊಂದಿಗೆ ಕಲಿಯುತ್ತ ವಿಕಾಸ ಹೊಂದುತ್ತದೆ. ಹಾಗೆ ನೋಡಿದರೆ ಇಲ್ಲಿ ಪ್ರಮಾದಗಳೇ ಇಲ್ಲದ ಯಶಸ್ವಿ ಪ್ರಯತ್ನಗಳೊಂದಿನ ಕಲಿಕೆಯು ಸಂಕೀರ್ಣತೆಗಳಿಂದ ಸರಳತೆಯೆಡೆಗೆ ಸಾಗುವ ಸಮಸ್ಯೆ ಪರಿಹಾರದ ತಂತ್ರದ ಅನುಭವಗಳು ವ್ಯಕ್ತಿಯನ್ನು ರೂಪಿಸುತ್ತವೆ ಎಂಬುದನ್ನು ಮನೋವೈಜ್ಞಾನಿಕ ಕಥೆಯಂತಿರುವ ಆತ್ಮಕಥೆಯು ತಿಳಿಯಪಡಿಸುತ್ತದೆ. ಸುತ್ತಮುತ್ತಲಿನ ವ್ಯಕ್ತಿಗಳು ಮತ್ತು ಪರಿಸರದಲ್ಲಿ ಕಂಡಂತಹ ನಿರ್ಬಂಧಗಳ ವೈಪರೀತ್ಯದ ತೊಳಲಾಟ, ಹೊಯ್ದಾಟಗಳು ಪಾತ್ರಗಳ ಮೂಲಕ ಎಳೆ ಎಳೆಯಾಗಿ ವಿಶ್ಲೇಷಿಸಲಾಗಿದೆ. ಕುತೂಹಲದ ತಣಿಯುವಿಕೆಯ ಮಾನವ ಸಹಜ ಗುಣವನ್ನು ಆತ್ಮಕಥನವು ಪ್ರಯೋಗಶಿಲ ಮನೋಭಾವದ ಮೂಲಕ ತಿಳಿಯುತ್ತಾ ತಿಳಿಸುತ್ತಾ ಹೋಗುತ್ತದೆ(ಕೆಲವು ಸಂದರ್ಭಗಳಲ್ಲಿ ಮಾತ್ರ). ಸುಪ್ತವಾಗಿ ದಮನಗೊಳಿಸಿದ ತನ್ನ ಹಸಿವನ್ನು/ದಾಹವನ್ನು/ಬೇಡಿಕೆಯನ್ನು ಈಡೇರಿಸಿಕೊಳ್ಳುವುದು ವ್ಯಕ್ತಿತ್ವ ಬೆಳವಣಿಗೆಗೆ ಅಥವ ಮನೋವಿಕಾಸಕ್ಕೆ ಎಷ್ಟು ಅವಶ್ಯಕವೆಂಬುದನ್ನು ಶಿಶು ಮನೋವಿಜ್ಞಾನದ ಹಿನ್ನೆಲೆಯಲ್ಲಿ ಲೇಖಕರು ತಮ್ಮ ಬಾಲ್ಯವನ್ನು ಮುಕ್ತವಾಗಿ ಬರೆಯುತ್ತಾ ನಿದರ್ಶಿಸುತ್ತಾರೆ. 


 

•ಮಸ್ತಿ ಕಿ ಪಾಠ್ ಶಾಲಾ ಬೆಸ್ಟ್: 

 ***********************

      ಒಂದು ಹೆಮ್ಮೆಯ ಮತ್ತು ಸಾಮಾನ್ಯ ಅಂಶವೆಂದರೆ,  ಕನ್ನಡ ಮಾಧ್ಯಮದ ಪ್ರಾಥಮಿಕ ಶಿಕ್ಷಣವು, ಒಬ್ಬ ಓದುಗಳಾಗಿ ಆತ್ಮಕಥನದೊಡನೆ ನನ್ನ ಬಾಲ್ಯದ ಶಾಲಾ ನೆನಪುಗಳನ್ನು ನೆನಪಿಸುತ್ತದೆ. ನನ್ನ ಪ್ರಾಥಮಿಕ ಶಾಲೆ ಬಿಜಾಪುರದ ಸ.ಕ.ಹಿ.ಪ್ರಾ.ಶಾಲೆ ನಂ ೧ ರ ಶಾಲಾದಿನಗಳನ್ನು ನೆನಪಿಸಿ, ನಾವು ಕಲಿತ ರ ಠ ಈ ಕ, ಲೆಕ್ಕಗಳು, ಸಹಪಠ್ಯ ಚಟುವಟಿಕೆಗಳು ಲೇಖಕರ ಮಾಂತ್ರಿಕ ಬರಹದೊಂದಿಗೆ ದೃಶ್ಯೀಕರಣಗೊಳ್ಳುತ್ತಾ ಕಣ್ಣೆದುರು ಕಂಗೊಳಿಸುತ್ತವೆ. ನಿರ್ಬಂಧಗಳ ನಡುವೆಯೂ ಮಗುವು ಕಂಡುಕೊಳ್ಳುವ ಸ್ವಚ್ಛಂದತೆ ಆತ್ಮಕಥನದಲ್ಲಿ ಸುಂದರವಾಗಿ ಮೂಡಿಬಂದಿದೆ. "ಬೆಳೆಯುವ ಸಿರಿ ಮೊಳಕೆಯಲ್ಲಿ.." ಎನ್ನುವ ಉಕ್ತಿಯಂತೆ ಮನೋವಿಜ್ಞಾನದ ಆಧಾರಿತ ಹಿನ್ನಲೆಯಲ್ಲಿ ಆತ್ಮಕಥನವು ವ್ಯಕ್ತಿತ್ವವನ್ನು ಚಿತ್ರಿಸುತ್ತದೆ. 

ಲೇಖಕರ ಪ್ರಾಥಮಿಕ ಶಿಕ್ಷಣವು ಅಂಕಗಣಿತದಿಂದ ಹಿಡಿದು ಬೀಜಗಣಿತದ ಸಮೀಕರಣಗಳೊಂದಿಗೆ ಪ್ರಕೃತಿಯನ್ನು, ನದಿಗಳನ್ನು, ಸಮಾನತೆ, ವಿಭಿನ್ನತೆಗಳನ್ನು ಸಮೀಕರಿಸುವ ವಿಶ್ಲೇಷಣೆ ವಿಶಿಷ್ಟವೆನಿಸುತ್ತದೆ. 


•ಮನೆಪಾಠವು ಅಂದರೆ ಶಿಕೋಣಿಯ (ನನ್ನ ಮುತ್ತಜ್ಜಿ ಕರೆಯುವಂತೆ) co-educationನ ದಿನಗಳನ್ನು ನೆನಪಿಸಿತು. ಹೆಣ್ಣುಮಕ್ಕಳ ಶಾಲೆಯಲ್ಲಿನ ಸ್ಪರ್ಧಾತ್ಮಕ ಮನೋಭಾವಕ್ಕೂ ಮನೆಪಾಠದ ಸ್ಪರ್ಧೆಗಳಲ್ಲಿ ವ್ಯತ್ಯಾಸ ಇರುತ್ತಿತ್ತು. ಯಾವಾಗಲೂ ಮೊದಲ ಸ್ಥಾನಕ್ಕೆ ಪೈಪೋಟಿ ಮನೆಪಾಠದಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು. 


•"ಶಿಕ್ಷಣವು ಕೇವಲ ಮಾಹಿತಿಯ ರವಾನೆ ಆಗಬಾರದು, ಬದಲಾಗಿ ಮಗುವಿನ ಸಾಮಾಜಿಕ, ಪರಿಸರ, ಜೀವಜಗತ್ತು, ಸೌಂದರ್ಯೋಪಾಸನೆ, ಹೊರಜಗತ್ತಿನೊಂದಿಗಿನ ಒಡನಾಟ, ಇನ್ನೂ ಹಲವು ಆಯಾಮಗಳೊಂದಿಗೆ ನಿಸರ್ಗದೊಡಳಾಲದಲ್ಲಿ ಕಲಿಕೆಯುಂಟಾದಲ್ಲಿ ಓರ್ವ ಸಾಮಾಜಿಕ, ಸಂವೇದನಶೀಲ, ಪರಿಪೂರ್ಣ ಮಾನವನನ್ನು ಸದೃಢ ಸಮಾಜಕ್ಕೆ ಬದ್ಧನನ್ನಾಗಿಸುತ್ತದೆ." ಎನ್ನುವ ಸಾಮಾಜಿಕ ಕಳಕಳಿಯ ಆಶಯ ಆತ್ಮಕಥನ ಹೊಂದಿದೆ. ಮಗುವು ಪುಸ್ತಕದ ಹುಳುವಾಗದೇ psychomotor skillನ್ನು ಒಳಗೊಂಡ, ಕಲೆಯೊಂದಿಗೆ, ತನ್ನ ಆಸಕ್ತಿಯ ಆಯ್ಕೆಯೊಂದಿಗೆ ಸಮಾಜಮುಖಿಯಾಗಿ ವ್ಯಕ್ತಿತ್ವ ರೂಪಿಸಿಕೊಳ್ಳುವ ತಳಹದಿ ಪ್ರಾಥಮಿಕ ಶಿಕ್ಷಣದಲ್ಲಿ ದೊರೆಯಬೇಕೆಂಬುದು ಕಥನದ ಆಶಯವೆನಿಸುತ್ತದೆ. 


•ಲೇಖಕರು ತಮ್ಮ ಸುತ್ತಲಿನ ವಯಸ್ಕರನ್ನು, ಸ್ನೇಹಿತರ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿ, ಮನೋವೈಜ್ಞಾನಿಕ ವಿಶ್ಲೇಷಣೆಯೊಂದಿಗೆ ಮನುಷ್ಯ ತನ್ನ ಕೊರತೆಗಳನ್ನು ನೀಗಿಸಿಕೊಂಡು ಸದೃಢ ವ್ಯಕ್ತಿ-ಸಮಾಜದ ನಿರ್ಮಾಣಕ್ಕೆ ತಾನು ಗಮನವಹಿಸಲೇಬೇಕಾದ ಸಾಮಾಜಿಕ ಜವಾಬ್ದಾರಿಯನ್ನು ಕಕ್ಕುಲಾತಿಯಿಂದ ಅರಹುತ್ತಾರೆ. ವ್ಯಕ್ತಿ ಕೇವಲ ಮೂಲಭೂತ ಹಕ್ಕುಗಳನ್ನು ಮಾತ್ರ ಅಪೇಕ್ಷಿಸದೆ, ಸಾಮಾಜಿಕ ಕರ್ತವ್ಯಗಳನ್ನು ತಮ್ಮ ಸ್ವಸ್ಥ ಸ್ಥಿತಪ್ರಜ್ಞತೆಯ ಮನೋಭಾವದೊಂದಿಗೆ ಸದೃಢ ಸಮಾಜವನ್ನು ಕಟ್ಟುವ ಆಶಾದಾಯಕ ಆಶಯವನ್ನು ತಿಳಿಸುತ್ತಾರೆ. 


✍🏻ದೀಪಾ.ದೇವಕತೆ, ೨೧-೦೪-೨೦೨೧.

ಸ್ವಮೂತ್ರಪಾನ

 ಮಾಂಸಭಕ್ಷಕ ಕ್ರೂರಮೃಗಗಳಿಂದ ಸಸ್ಯಾಹಾರಿ ಸೌಮ್ಯ ಪ್ರಾಣಿಗಳವರೆಗಿನ ಬಹುಪಾಲು ಪ್ರಾಣಿಗಳು ಪರಸ್ಪರರ ಹಿಂಬದಿ ಮೂಸಿ ಕೆಲವೊಮ್ಮೆ ಉತ್ತೇಜಿಸಿ ಮೂತ್ರಿಸುವಂತೆ ಮಾಡಿ ಆ ತಾಜಾ ಮೂತ್ರವನ್ನು ಕುಡಿಯುತ್ತವೆ. ಅದರಲ್ಲೂ ಕಾಮಕ್ರೀಡೆಯ ಸಮಯದಲ್ಲಂತೂ ಬಾಯಿಯನ್ನು ಕೀಲಿಸಿ ಹಲ್ಲುಗಳನ್ನು ತೋರುತ್ತಾ ಮೂತ್ರವನ್ನು ಸೇವಿಸುವುದನ್ನು ನೀವು ನೋಡಿರಬಹುದು. ಕೆಲವು ಪ್ರಾಣಿಗಳಂತೂ ಕಷ್ಟಪಟ್ಟು ತಮ್ಮ ದೇಹವನ್ನು ಮಣಿಸಿ ಸ್ವಮೂತ್ರಪಾನವನ್ನೇ ಮಾಡುತ್ತವೆ.


ಸುನಾಮಿ, ಭೂಕಂಪದಂತಹ ಅವಘಡಗಳನ್ನು ಮುಂದಾಗಿಯೇ ಗ್ರಹಿಸುವ ಪ್ರಾಣಿಗಳ ಹುಟ್ಟುಗುಣ ಯಾನೆ instinct ಬಗ್ಗೆ ಸಾಕಷ್ಟು ಸಂಶೋಧಕರು ಪರೀಕ್ಷಿಸಿ ಪ್ರಮಾಣಿಸಿದ್ದಾರೆ. ಹಾಗಾಗಿ ಪ್ರಾಣಿಗಳ ಮೂತ್ರಪಾನವನ್ನು ಚಕಿತರಾಗಿ ಕಂಡ ಆದಿಮರು ಸಂಶೋಧಿಸಿ ಆ ಪ್ರಾಣಿಗಳು ರೋಗಗ್ರಸ್ಥವಾಗಿದ್ದಾಗ ಔಷಧಿಯಾಗಿ ಮತ್ತು ಕಾಮೋತ್ತೇಜಕವಾಗಿ ತಾವೂ ಈ ಪದ್ಧತಿಯನ್ನು ಅಳವಡಿಸಿಕೊಂಡು ಆರೋಗ್ಯವನ್ನು ಮತ್ತು ಸೃಷ್ಟಿಜನಕ ಫಲವತ್ತತೆಯನ್ನು ಕಂಡುಕೊಂಡರು.


ಹೀಗೆ ಈ ಅನುಪಮ ಆರೋಗ್ಯದ ಚಿಲುಮೆಯ ಬಗ್ಗೆ ಸಂಗ್ರಹಕಾರ ಮತ್ತು ಪಶುಪಾಲಕ ಮೂಲಮಾನವ ಜನಾಂಗವು ಅರಿತುಕೊಂಡು ಅಂದಿನಿಂದ ಇಂದಿನ ವರ್ತಮಾನದವರೆಗೆ ಶಿಶುಗಳ ಅಪೌಷ್ಠಿಕತೆಯಿಂದ ಮುಪ್ಪಿನ ಜಡಮೂಳೆಗಳಿಗೆ ಸಂಚೇತನ ಮೂಡಿಸುವ ದಿವ್ಯ ಔಷಧವಾಗಿ ಬಳಸುತ್ತ ಬಂದಿದೆ. 


ಇದು ಭಾರತೀಯ ವೈದ್ಯಪದ್ದತಿಯಲ್ಲಿ ಬಳಕೆಯಾದದ್ದು ಅತ್ಯಂತ ಕಡಿಮೆ. ಆದರೆ ಜಾಗತಿಕವಾಗಿ ಯುರೋಪ್, ರಷ್ಯಾ, ಆಫ್ರಿಕಾ, ಚೈನಾ ದೇಶಗಳಲ್ಲಿ ಹೆಚ್ಚು ಪ್ರಚಲಿತವಿದ್ದ/ವಿರುವ ವೈದ್ಯಪದ್ಧತಿ!  ಅದರಲ್ಲೂ ಈ ಪದ್ಧತಿಯನ್ನು ಹೆಚ್ಚು ಅಳವಡಿಸಿಕೊಂಡವರು ರಷ್ಯನ್ ಕಾಮ್ಯುನಿಸ್ಟರು ಮತ್ತು ಆದಿಮ ಸಂಸ್ಕೃತಿಯ ಆಫ್ರಿಕನ್ ದೇಶಗಳು! ಕಮ್ಯುನಿಸ್ಟ್ ಸೈನಿಕರಂತೂ ಸ್ವಮೂತ್ರಪಾನ ಮಾಡಿ ಕಾಮೋತ್ತೇಜನಗೊಂಡು ಬೂಟುಗಳನ್ನು ಬಿಚ್ಚದೆ ಪ್ಯಾಂಟನ್ನು ಹಾಗೆಯೇ ಕೆಳಗೆ ಮಾಡಿ ರತಿಕ್ರೀಡೆಯಲ್ಲಿ ತೊಡಗಿಬಿಡುತ್ತಿದ್ದರು ಎಂದು ಸಾಕಷ್ಟು ಭೂಗತ ಕತೆಗಳು ಹೇಳುತ್ತವೆ. ಆದಿಮ ಪದ್ಧತಿಯ ಆಫ್ರಿಕಾದಲ್ಲಂತೂ ಆರೋಗ್ಯವಂತರ ಪರಮೂತ್ರವನ್ನೂ ಸೇವಿಸುತ್ತಾರೆ. ಯುರೋಪಿನಲ್ಲಿ ಮೂತ್ರಪಾನ ಕ್ಲಬ್ಬುಗಳಿವೆ.


ಹೀಗಿದ್ದಾಗ ವಿಶ್ವಗುರು ಎಂದಾದ ಭಾರತ ಇಂತಹ ಚೈತನ್ಯದ ಚಿಲುಮೆಯನ್ನು ಕಂಡುಕೊಳ್ಳಲೇಬೇಕು ತಾನೇ!?!


ಆದರೆ ವಿಚಿತ್ರವೆಂಬಂತೆ ಈ ಪದ್ಧತಿಯನ್ನು ಭಾರತೀಯ ಎಡರಂಗ, ದ್ರಾವಿಡ/ನೆಲಮೂಲ/ಆದಿಮವೆನ್ನುವ ಬುದ್ಧಿಜೀವಿಗಳು ತಮ್ಮದೇ ನೆಲಮೂಲ/ಆದಿಮ/ಕಮ್ಯುನಿಸ್ಟ್ ಮೂಲದ ವೈದ್ಯಪದ್ಧತಿಗೆ ಏಕೆ ಆರ್ಯಕೃತ್ರಿಮವೆಂದು ವಿರೋಧಿಸುತ್ತಿದೆ?!?


ಇಲ್ಲಿಯವರೆಗೆ ಇದು ತಮಾಷೆಯ ಲೇಖನ ಎಂದು ನೀವು ಓದುತ್ತಿದ್ದರೆ, ಅದು ತಪ್ಪು! ಇದು ನಗುವ ವಿಷಯ ಖಂಡಿತ ಅಲ್ಲ, ಸೀರಿಯಸ್ ಮ್ಯಾಟರ್! ಕೇವಲ ವಿಕಿಪೀಡಿಯಾದಲ್ಲಿ  ನೋಡಿ, ಹೀಗಿದೆ.


https://en.m.wikipedia.org/wiki/Urine_therapy


ಇನ್ನು ಈ ವಿಷಯದ ಬಗ್ಗೆ ಐವತ್ತು ಪಿಹೆಚ್ಡಿ ಮಾಡುವಷ್ಟು ರಷ್ಯಾ, ಇಟಲಿ, ಆಫ್ರಿಕಾ, ಸ್ವೀಡನ್ ವಿಶ್ವವಿದ್ಯಾಲಯಗಳ ಶ್ವೇತಪತ್ರಗಳು ನನ್ನ ಬಳಿ ಇವೆ.


ಏಕೆಂದರೆ  ಭರತಖಂಡದ ಕರುನಾಡಿನ ಕನ್ನಡ ವಿಶ್ವವಿದ್ಯಾಲಯದ ಸ್ನಾತಕೋತ್ತರ, ಪಿಹೆಚ್ಡಿ, ಪೋಸ್ಟ್ ಡಾಕ್ಟೋರಲ್ ಜನ ಕನ್ನಡ ಬಿಟ್ಟು ಸೂರ್ಯಮಂಡಲದಲ್ಲಿರುವ ಎಲ್ಲಾ ವಿಷಯಗಳಲ್ಲೂ ಪರಿಣಿತರಾಗಿದ್ದು ತಾವೇ ಅಥಾರಿಟಿ ಎಂದು ಎಲ್ಲದಕ್ಕೂ ಅರ್ಜಿ, ಪರೀಕ್ಷೆ, ಪುರಾವೆ ಕೇಳಿ ಕೊಟ್ಟ ಮೇಲೆಯೂ ಅನುತ್ತೀರ್ಣಿಸುತ್ತಾರೆ. ಹಾಗಾಗಿ ಪುರಾವೆ ಬೇಕಾದವರು ನೂರು ಡಾಲರ್ ಫೀಸು ಕಟ್ಟಿದರೆ ಮಾತ್ರ ಕೊಡಲಾಗುವುದು.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಕವಲೇದುರ್ಗ ನಾಯಿ ಪ್ರೀತಿ

 ಒಂಬತ್ತು ತಿಂಗಳ ಹಿಂದೆ ತೀರ್ಥಹಳ್ಳಿ ಸಮೀಪದ ಮುಡುಬದಲ್ಲಿರುವ ನೆಂಟರ ನೋಡಲು ಹೋಗಿದ್ದೆ. ನಾನು ಪ್ರತಿಸಲ ಹೋದಾಗಲೂ ಹೇಗೋ ಏನೋ ಅಲ್ಲಿಗೆ ಹತ್ತಿರದ ಪ್ರೇಕ್ಷಣೀಯ ಸ್ಥಳವಾದ ಕವಲೇದುರ್ಗವನ್ನು ನೋಡಲು ಆಗಿರಲಿಲ್ಲ. ಏನೇನೋ ಕಾಡುಮೇಡು ಅಲೆದಿದ್ದರೂ ಇದೊಂದು ತಪ್ಪಿಬಿಡುತ್ತಿತ್ತು. ನಾನೂ ನನ್ನ ತೀರ್ಥಹಳ್ಳಿ ಸ್ನೇಹಿ_ ಬೆಳಿಗ್ಗೆ ಹತ್ತೂವರೆಗೆಲ್ಲ ಬುಡ ತಲುಪಿ ಕಾರು ನಿಲ್ಲಿಸಿ ಬೆಟ್ಟ ಏರಲು ಶುರುವಿಟ್ಟುಕೊಂಡೆವು. 


ನಮ್ಮ ಬೆನ್ನ ಹಿಂದೆ ಎರಡು ನಾಯಿಗಳು ಬರತೊಡಗಿದವು. ಬಹುಶಃ ಕೋಟೆ ಏರುವ ಜನರು ಊಟೋಪಹಾರಗಳನ್ನು ಕಟ್ಟಿಕೊಂಡು ಮೇಲೆ ತೆರಳಿ ಉಂಡು ತಿಂದು ಉಳಿದದ್ದನ್ನು ನಾಯಿಗಳಿಗೆ ಹಾಕುವ ಪರಿಪಾಠ ಇತ್ತೆನಿಸುತ್ತದೆ. ಹಾಗಾಗಿ ಈ ನಾಯಿಗಳು ತಿಂಡಿಯ ಆಸೆಯಿಂದ ನಮ್ಮ ಹಿಂದೆ ಬರುತ್ತಿವೆ ಎಂದುಕೊಂಡೆವು. ಆದರೆ ನಮ್ಮದೇನೂ ಅಲ್ಲಿ ಉಂಡು ತಿಂದು ಹೊತ್ತು ಕಳೆದು ಬರುವ ಯೋಚನೆ ಇರದೆ ಕೇವಲ ಮೇಲೆ ಹತ್ತಿ ಕೋಟೆ ನೋಡಿಕೊಂಡು ಕೆಳಗಿಳಿದು ಊಟಕ್ಕೆ ಸ್ನೇಹಿ_ ಮನೆಗೆ ಹೋಗುವ ಇರಾದೆ ಇದ್ದುದರಿಂದ ನೀರನ್ನು ಬಿಟ್ಟು ಏನನ್ನೂ ತೆಗೆದುಕೊಂಡು ಹೋಗಿರಲಿಲ್ಲ. ನಮ್ಮನ್ನು ವಿನಮ್ರವಾಗಿ ಹಿಂಬಾಲಿಸುತ್ತಿದ್ದ ನಾಯಿಗಳನ್ನು ನೋಡಿ, "ಛೇ, ಅವುಗಳಿಗಾಗಿಯಾದರೂ ಒಂದು ಬಿಸ್ಕತ್ ಪೊಟ್ಟಣ ಇಟ್ಟುಕೊಳ್ಳಬೇಕಿತ್ತು" ಎನಿಸಿತು. 


ಕಡಿದಾದ ದಾರಿಯನ್ನು ಏರುತ್ತಾ ಮಧ್ಯದಲ್ಲಿ ಒಂದು ಕಡೆ ಕುಳಿತಾಗ ಆ ನಾಯಿಗಳು ಸಹ ವಿನಮ್ರವಾಗಿ ಕುಳಿತುಕೊಂಡೆವು. ಅವುಗಳ ವಿನೀತ ಭಾವ ಒಂದು ಬಿಸ್ಕತ್ತನ್ನೂ ತಾರದ ನಮ್ಮಲ್ಲಿ ಅಪರಾಧಿ ಪ್ರಜ್ಞೆಯನ್ನು ಮೂಡಿಸುತ್ತಿತ್ತು. ಅದಕ್ಕಾಗಿ ನಮ್ಮನ್ನು ನಾವು ಹಳಿದುಕೊಳ್ಳುತ್ತ ಕೋಟೆ ಏರತೊಡಗಿದೆವು. ನಾಯಿಗಳೂ ನಮ್ಮ ಹಿಂದೆ ಹಿಂದೆ ಬರುತ್ತಿದ್ದವು. ಅಂತೂ ಕಡಿದಾದ ಮಾರ್ಗದಲ್ಲಿ ಕೋಟೆಯನ್ನು ಏರಿ ಕಡೆಗೆ ಗಮ್ಯವನ್ನು ತಲುಪಿದೆವು. ನಾಯಿಗಳೂ ನಮ್ಮ ಹಿಂದೆಯೇ ಗಮ್ಯವನ್ನು ತಲುಪಿದವು.


ಗಮ್ಯವನ್ನು ತಲುಪಿದ ನಂತರ ನಾವು ಎಣಿಸಿದಂತೆ ತಿಂಡಿಯ ಆಸೆಗಾಗಿ ಅವು ನಮ್ಮನ್ನು ಹಿಂಬಾಲಿಸುತ್ತವೆ ಎಂಬ ನಮ್ಮ ನಿರೀಕ್ಷೆಗೆ ವ್ಯತಿರಿಕ್ತವಾಗಿ ನಮ್ಮನ್ನು ದಾಟಿ ಮುಂದೆ ಸಾಗಿ ನಮ್ಮನ್ನು ಕಿಂಕರ್ತವ್ಯಮೂಢರಾಗಿಸಿ ಅವು ಕರ್ತವ್ಯದಲ್ಲಿ ತೊಡಗಿದವು. ಶ್ವಾನಜನ್ಯ ವಂಶವಾಹಿ ಗುಣಗಳಾದ ಬೊಗಳುವಿಕೆ, ಕಿರುಚಾಟ, ಕಚ್ಚಾಟವಿಲ್ಲದೆ ಏಕಾಂತ ಬಯಸಿ ಅಲ್ಲಿಗೆ ಬರುವ ಅಮರ ಮಧುರ ಪ್ರೇಮಿಗಳಂತೆಯೇ ಆ ಅವಿಸ್ಮರಣೀಯ ಪ್ರಕೃತಿ ಸೌಂದರ್ಯವನ್ನು ಆಹ್ಲಾದಿಸುತ್ತ ರತಿಮನ್ಮಥರಂತೆ ಪ್ರಾಕೃತಿಕ ಕ್ರೀಡೆಯಲ್ಲಿ ತೊಡಗಿದವು. ಅಂತಹ ಪ್ರಕೃತಿ ಸೌಂದರ್ಯ, ಏಕಾಂತ, ರಮಣೀಯ ದೃಶ್ಯವನ್ನು ಆಹ್ಲಾದಿಸುವ ಭಾರತೀಯ ಸನಾತನಿ ಮತ್ತು ವಿನೂತನಿ ಅಮೆರಿಕನ್ ನಾನಾದರೂ ನನ್ನ ಸ್ನೇಹಿ_ ಅಷ್ಟೊಂದು ಪ್ರಕೃತಿ ಪ್ರೇಮಿ ಆಗಿರಲಿಲ್ಲ ಎಂದು ಹೇಳುತ್ತಾ ಈ ಕವಲಾದ ಕತೆಯ ಕವಲೇದುರ್ಗ ಸಂಗತಿ ಇತಿ ಸಮಾಪ್ತಹಃ! 


ಎಲ್ಲದಕ್ಕೂ ಸಾಕ್ಷಿ ಕೇಳುವ ನ್ಯಾಯಾಂಗವನ್ನು ಆವಾಹಿಸಿಕೊಂಡಿರುವವರಿಗಾಗಿ ಈ XXX ಸಾಕ್ಷಿ ಚಿತ್ರ.

ಜಕಣಾಚಾರಿ

 ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಎಂಬ ಚಿದಾನಂದಮೂರ್ತಿಯವರಷ್ಟೇ ಅಲ್ಲದೆ ಎಲ್. ಬಸವರಾಜುರವರ ಸಂಶೋಧನೆಯನ್ನು ಓಲೈಕಿಗಳು ಯಶಸ್ವಿಯಾಗಿ ಹಳ್ಳ ಸೇರಿಸಿಯಾಯಿತು.  


ಈಗ ಒಂದು ಜಾತಿ ಸಮಾಜವನ್ನು ಓಲೈಸಲು ಜಯಂತಿವೀರ ಮುಖ್ಯಮಂತ್ರಿ ಶ್ರೀ ಎಡೆಯೂರಪ್ಪನವರು ಜಕಣಾಚಾರಿ ಎಂಬ ಕಾಲ್ಪನಿಕ ವ್ಯಕ್ತಿಯ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಘೋಷಿಸಲು ಒಪ್ಪಿಗೆ ನೀಡಿದ್ದಾರೆ. 


ದಕ್ಷಿಣಾಚಾರ ಎಂಬ ಶಿಲ್ಪಕಲಾ ಪ್ರಾಕಾರವು ಕಾಲಾಂತರದಲ್ಲಿ ದಖನಾಚಾರ, ಜಕಣಾಚಾರ, ಜಕಣಾಚಾರಿ ಎಂದು ಅಪಭ್ರಂಶಗೊಂಡಿತೆಂಬುದನ್ನು ಇತಿಹಾಸತಜ್ಞರಾದ ವಸುಂಧರಾ ಫಿಲಿಯೋಜಾ ಮುಂತಾದ ತಜ್ಞರು ಎಪ್ಪತ್ತರ ದಶಕದಲ್ಲೇ ಸಾಬೀತುಪಡಿಸಿದ್ದಾರೆ. ಸತ್ಯ ಹೀಗಿದ್ದರೂ ಕಟ್ಟುಕತೆಗಳು, ಓಲೈಕೆಗಳು, ಓಟು/ನೋಟಿನ ರಾಜಕೀಯಗಳು ಇತಿಹಾಸವನ್ನು ತಿರುಚುತ್ತಿರುವುದಕ್ಕೆ ದಾಸಿಮಯ್ಯರುಗಳ ನಂತರ ಜಕಣಾಚಾರಿ ಜಯಂತಿ ಒಂದು ಅತ್ಯುತ್ತಮ ಉದಾಹರಣೆ.


ಇಂತಹ ಓಲೈಕೆಗೆ ತಕ್ಕನಾಗಿ  ಶ್ವಾಸ ಗುರು ತಮ್ಮ ಶ್ವಾಸವನ್ನು ಮೂಲಸ್ಥಾನ/ಪೀಠಸ್ಥಾನದಿಂದ ಪಸರಿಸಿದ್ದಾರೆ. ಮೈಕೈ ಬಗ್ಗಿಸಿ ಏದುಸಿರು ಬಿಟ್ಟರೆ ಯೋಗವಲ್ಲ ಅದು ಸರ್ಕಸ್ ಎಂಬ ಪರಿಜ್ಞಾನವಿಲ್ಲದ ಭಕ್ತರು, ಅದಕ್ಕೆ ತಕ್ಕ ಪೀಠಿಗಳು, ರಾಜಕಾರಣಿಗಳು, ಮಾಧ್ಯಮಗಳು.......ಭಾರತಮಾತೆಯ ಯೋಗಾಯೋಗ!!!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

 ಕುಡುತಿನಿಯ ಬೂದಿಗುಂಟ


ಕ್ರಿ. ಶ. ೧೮೦೨ ರಲ್ಲಿ ಬ್ರಿಟಿಷ್ ಭಾರತದ ಸರ್ವೇಕ್ಷಣ ಇಲಾಖೆಯ ಮಹಾನಿರ್ದೇಶಕರಾಗಿದ್ದ ಕಾಲಿನ್ ಮೆಕೆಂಜ಼ಿಯವರು ಪ್ರಪ್ರಥಮವಾಗಿ ಈ ಬೂದಿಗುಂಟವನ್ನು ಪತ್ತೆಹಚ್ಚಿದ್ದರು. ೧೮೩೦ರಲ್ಲಿ ಕರ್ನೂಲ್ ಜಿಲ್ಲೆಯ ಅಸಿಸ್ಟಂಟ್ ಕಮೀಷನರ್ ಆಗಿದ್ದ ಟಿ.ಜೆ. ನ್ಯೂಬೋಲ್ಟ್ ಅವರು ಇಲ್ಲಿಗೆ ಭೇಟಿ ಕೊಟ್ಟು ಬೂದಿಗುಂಟವನ್ನು ಪರಿಶೀಲಿಸಿದ್ದರು. ಈ ಗುಡ್ಡೆಯಿಂದ ಪ್ರೇರಿತಗೊಂಡ ನ್ಯೂಬೋಲ್ಟ್ ಅವರು ಸಂಗನಕಲ್ಲು ಸಮೀಪದ ಕಪ್ಪಗಲ್ಲು ಬಳಿ ಮತ್ತೆರಡು ಇಂತಹ ಕಿಟ್ಟದ ಗುಡ್ಡೆಗಳನ್ನು ಪತ್ತೆಹಚ್ಚಿದ್ದರು. ನಂತರದ ಮುಂದಿನ ಇನ್ನೂರು ವರ್ಷಗಳ ಅವಧಿಯಲ್ಲಿ ಒಟ್ಟು ಇನ್ನೂರಕ್ಕೂ ಹೆಚ್ಚು ಇಂತಹ ಕಿಟ್ಟದಗುಡ್ಡೆಗಳನ್ನು ಬಯಲುಸೀಮೆಯ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಪ್ರದೇಶಗಳಲ್ಲಿ ಪತ್ತೆ ಹಚ್ಚಲಾಗಿದೆ. ಕ್ರಿ. ಶ. ೧೮೭೦ ರಲ್ಲಿ ರಾಬರ್ಟ್ ಬ್ರೂಸ್ ಫುಟ್ ಅವರು ಈ ಗುಡ್ಡೆಗಳು ಐದು ಸಾವಿರ ವರ್ಷಗಳ ಹಿಂದಿನ ನಿಯೋಲಿಥಿಕ್ ಜನರು ಸಗಣಿಯನ್ನು ಪೇರಿಸಿ ಸುಟ್ಟ ಗುಡ್ಡೆಗಳು ಎಂದು ಸಂಶೋಧಿಸಿದರು. ಆಧುನಿಕ ನಾಗರೀಕತೆಯ ಅಭಿವೃದ್ಧಿ ಪಥದಲ್ಲಿ ಕೃಷಿ ಮತ್ತಿತರೆ ಕಾಮಗಾರಿಗಳಲ್ಲಿ ಅನೇಕ ಗುಡ್ಡೆಗಳು ನಶಿಸಿ ಈಗ ಎರಡು ಗುಡ್ಡೆಗಳು ಮಾತ್ರ ಉಳಿದುಕೊಂಡಿವೆ. ಅವುಗಳಲ್ಲಿ ಅತ್ಯಂತ ಹಳೆಯದಾದ ಬೂದಿಗುಂಟ ದಿಬ್ಬವು ಇಂದು ರಸ್ತೆ ಅಗಲೀಕರಣಕ್ಕೆ ಬಲಿಯಾಗುವ ಆತಂಕಕ್ಕೆ ಒಳಗಾಗಿತ್ತು. ಆದರೆ ಅದೃಷ್ಟವಶಾತ್, ನಮ್ಮಂತಹ ಸಹೃದಯ ಪರಂಪರೆ ಪ್ರಿಯರ ಕೋರಿಕೆಯನ್ನು ಮನ್ನಿಸಿ ಬಳ್ಳಾರಿ ಜಿಲ್ಲಾಧಿಕಾರಿಗಳು ಬೂದಿಗುಂಟ ಗುಡ್ಡೆಯನ್ನು ರಕ್ಷಿಸಲು ಮಧ್ಯ ಪ್ರವೇಶಿಸಿದ್ದಲ್ಲದೆ ಕರ್ನಾಟಕ ಶಕ್ತಿ ನಿಗಮದಿಂದ ಸಂರಕ್ಷಣೆಗೆ ಕೊಡುಗೆಯನ್ನೂ ಕೊಡಿಸಿದ್ದಾರೆ. ಹಾಗಾಗಿ ಬೂದಿಗುಂಟ ಕಿಟ್ಟದ ಗುಡ್ಡೆಯು ಪೂರ್ವೈತಿಹಾಸದ ಭವ್ಯ ನಿದರ್ಶನವಾಗಿ ಇಂದು ಉಳಿದಿದೆ.


ಪ್ರಮುಖವಾಗಿ ಈ ಗುಡ್ಡೆಗಳನ್ನು ಕಿಟ್ಟದ ಗುಡ್ಡೆ ಅಥವಾ ಬೂದಿಗುಡ್ಡೆಗಳೆಂದು ಕರೆಯಲು ಕಾರಣವೇನೆಂದರೆ, ಪೂರ್ವೈತಿಹಾಸಿಕ ಆದಿ ರೈತಾಪಿ ಜನಾಂಗವು ಕಾಲಕಾಲಕ್ಕೆ ಸಗಣಿಯನ್ನು ದಿಬ್ಬವಾಗಿ ಒಟ್ಟುತ್ತ ಬಂದು ಆ ದಿಬ್ಬಗಳನ್ನು ಮಕರ ಸಂಕ್ರಾಂತಿ, ದನಗಳ ಜಾತ್ರೆ ಮುಂತಾದ ಹಬ್ಬದ ದಿನಗಳಂದು ಬೆಂಕಿ ಹಚ್ಚಿ ಸುಟ್ಟು ಹಬ್ಬವನ್ನಾಚರಿಸುತ್ತಿದ್ದರು. ನಿಯಮಿತವಾಗಿ ಕಾಲಕಾಲಕ್ಕೆ ಆಚರಿಸುತ್ತಿದ್ದ ಇಂತಹ ಆಚರಣೆಯಿಂದ ಈ ದಿಬ್ಬಗಳು ಗುಡ್ಡೆಗಳಾಗಿ ರೂಪುಗೊಂಡಿವೆ. ಈ ಕಿಟ್ಟದ ಗುಡ್ಡೆಗಳನ್ನು ಪಶುಪಾಲಕರ ದಿಬ್ಬಗಳೆಂದೂ ಕರೆಯುತ್ತಾರೆ. ಈಜಿಪ್ಟಿನಲ್ಲಿ ಪಿರಮಿಡ್ ಕಟ್ಟುತ್ತಿದ್ದ ಕಾಲದಲ್ಲಿಯೇ ಇಲ್ಲಿ ಇಂತಹ ದಿಬ್ಬಗಳನ್ನು ನಿರ್ಮಿಸಲಾಗಿದೆ. ಹೀಗೆ ಗುಡ್ಡೆ, ಪಿರಮಿಡ್ ಮುಂತಾದ ಸ್ಮಾರಕಗಳ ನಿರ್ಮಾಣವು ಮಾನವ ವಿಕಾಸದ ಉದ್ದಕ್ಕೂ ಪ್ರಪಂಚದಾದ್ಯಂತ ಅಲ್ಲಲ್ಲಿನ ನಾಗರೀಕತೆಯ ಸಂಸ್ಕೃತಿ ವಿಕಾಸಕ್ಕನುಗುಣವಾಗಿ ನಿರ್ಮಾಣಗೊಂಡಿವೆ. ಈ ಗುಡ್ಡೆಗಳ ಉತ್ಖನನದಲ್ಲಿ ಕಲ್ಲಿನ ಕೊಡಲಿ, ಅರೆಯುವ, ಕುಟ್ಟುವ ಮತ್ತು ಬೀಸುವ ಕಲ್ಲುಗಳಲ್ಲದೆ ದನ, ಕುರಿ, ಮೇಕೆಗಳ ಮೂಳೆಗಳು ಸಹ ಸಿಕ್ಕಿವೆ. ಈ ಜನಾಂಗವು ದನದ ಮಾಂಸವನ್ನು ತಿನ್ನದೆ ಕುರಿ, ಮೇಕೆಯ ಮಾಂಸವನ್ನು ತಿನ್ನುತ್ತಿದ್ದರಲ್ಲದೆ, ದನದ ಸಗಣಿಯನ್ನು ಸಹ ಗೊಬ್ಬರವಾಗಿ ಬಳಸುತ್ತಿರಲಿಲ್ಲ ಎಂದು ಸಂಶೋಧನೆಗಳು ತಿಳಿಸಿವೆ. ಈ ಜನಾಂಗವು ನವಣೆಯಂತಹ ಸಿರಿಧಾನ್ಯಗಳಲ್ಲದೆ ಹುರುಳಿ ಮತ್ತು ಹೆಸರು ಕಾಳುಗಳನ್ನು ಸಹ ಬೆಳೆಯುತ್ತಿದ್ದರೆಂದು ತಿಳಿದುಬರುತ್ತದೆ.

ಮೂಲ: ರವಿ ಕೋರಿಶೆಟ್ಟರ್
ಅನುವಾದ: ರವಿ ಹಂಜ್ 

ಅನಿವಾಸಿ ಬೇವರ್ಸಿ

 ೨೦೨೧-೨೨ ರಲ್ಲಿ ಅನಿವಾಸಿ ಭಾರತೀಯರು ಒಟ್ಟು ೮೯ ಬಿಲಿಯನ್ ವಿದೇಶಿ ವಿನಿಮಯವನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ. ಈ ಎಲ್ಲಾ ವಿದೇಶಿ ವಿನಿಮಯವು ಅನಿವಾಸಿಯ ಕುಟುಂಬ ನಿರ್ವಹಣೆಯಲ್ಲದೆ ಹಲವಾರು ಭಾರತೀಯ ಉದ್ಯಮಗಳಿಗೆ ಗ್ರಾಹಕರಾಗಿಯೂ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದಿರುತ್ತದೆ. ಸಾಕಷ್ಟು ಕುಟುಂಬಸ್ಥರ ವ್ಯವಹಾರ ಉದ್ಯಮಗಳಿಗೆ ಮೂಲಧನವೂ ಆಗಿರುತ್ತದೆ. 


೩೫೦ ಲಕ್ಷ ಅನಿವಾಸಿಗಳು ತರುವ ಈ ವಿದೇಶಿ ವಿನಿಮಯವು ಭಾರತಕ್ಕೆ ಕೊಡುವ ನೇರ ನೆರವಾದರೆ, ಅವರು ಭಾರತವನ್ನು ತೊರೆದು ಅವರ ಸ್ಥಾನದಲ್ಲಿ ನಿವಾಸಿ-ಭಾರತೀಯರಿಗೆ ಸೃಷ್ಟಿಯಾದ ಉದ್ಯೋಗಗಳಿಂದ ಹಿಡಿದು ಅವರ ನಿರ್ಗಮನದ ಕಾರಣ ಕಡಿಮೆಯಾದ ಭಾರತದ ಜನಸಂಖ್ಯೆ, ಆರ್ಥಿಕ ಉನ್ನತಿ, ಕಾರ್ಬನ್ ಫುಟ್ ಪ್ರಿಂಟ್ ಇತ್ಯಾದಿಗಳ ನಡುವಿರುವ ಅನೇಕ ಆಯಾಮಗಳ ಪರೋಕ್ಷ ನೆರವನ್ನು ಇನ್ನೂ ಯಾವ ಸರ್ಕಾರಗಳಾಗಲಿ, ಆಯೋಗಗಳಾಗಲಿ ಲೆಕ್ಕ ಹಾಕಿಲ್ಲ!


ಇಂತಹ ಅನಿವಾಸಿಗಳಿಗೆ ಸರ್ಕಾರ ಕೊಟ್ಟಿರುವುದು ಕೇವಲ ಮರೀಚಿಕೆಯ ಭರವಸೆ. ಈ ಮರೀಚಿಕೆಯು ಅನಿವಾಸಿ ಭಾರತೀಯ ಎಂದು ಗುರುತಿಸಲ್ಪಡುವ ನಾಗರಿಕ ಯಾ ಸಾಗರೋತ್ತರ ಭಾರತೀಯ ಎಂದು ಗುರುತಿಸಲ್ಪಡುವ ನಾಗರಿಕ ಇಬ್ಬರಿಗೂ ಅನ್ವಯಿಸುತ್ತದೆ. ಇದರ ಬಗ್ಗೆ ನನ್ನ ಒಂದು ಹಳೆಯ ಲಿಂಕ್ ಕೆಳಗಿದೆ.


ಇನ್ನು ಇಂತಹ ಮರೀಚಿಕೆಯ ನಡುವೆಯೂ "ಸಾಗರೋತ್ತರ ಭಾರತೀಯ ನಾಗರಿಕ" ಚೇತನ್ ಅಹಿಂಸಾ ಹೋರಾಟ, ನೈಜ ಕಳಕಳಿಯು ಬದುಕಿರುವ ಯಾವುದೇ "ನಿವಾಸಿ ಭಾರತೀಯ ನಾಗರಿಕ" ಹೋರಾಟಗಾರರಿಗಿಂತ ಗುಲಗಂಜಿ ತೂಕ ಹೆಚ್ಚೇ ಇದೆ.  ಈ ದುರಿತ ಕಾಲದಲ್ಲಿ ಗುಂಪಿನಿಂದ ಎದ್ದು ಕಾಣುವ ಒಂಟಿ ಸಲಗದಂತೆ ಎದ್ದು ಕಾಣುವ ನಿಜ ದೇಶಭಕ್ತ ಎಂದರೆ ಅದು ಅಹಿಂಸಾ ಚೇತನ್.


ಆತ ತನ್ನ ಭಾಷಣದಲ್ಲಿ ಮಾತು ಮಾತಿಗೆ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಪೆರಿಯಾರ್, ಕುವೆಂಪು, ಫುಲೆ ಮುಂತಾದ ವ್ಯಕ್ತಿ ಭಜನೆ ಬಿಟ್ಟು ವೈಜ್ಞಾನಿಕವಾಗಿ ಅವನು ನಂಬಿದ ಸಿದ್ಧಾಂತ ಹೇಗೆ ಸಮಾನತೆಯನ್ನು ಸಾಧಿಸಬಹುದು ಎಂಬ ಒಂದು ಸೈದ್ಧಾಂತಿಕ ನೀಲನಕ್ಷೆಯನ್ನು ಮುಂದಿರಿಸಿ ಮಾತನಾಡುವ ಸ್ಪಷ್ಟತೆ ನಿಧಾನವಾಗಿಯಾದರೂ ಮುಂದೊಂದು ದಿನ ಮೂಡಿಯೇಮೂಡುತ್ತದೆ ಎನಿಸುತ್ತಿದೆ. ಎಂದೋ ಆಗಿಹೋದ ಇತಿಹಾಸದಲ್ಲಿ ನಡೆದ ಅಸಮಾನತೆಗೆ ತಮ್ಮ ಹುಟ್ಟಿನ ಜಾತಿಯ ಕಾರಣ ವರ್ತಮಾನದ ಪ್ರಜಾಪ್ರಭುತ್ವದ ಒಂದು ಜನಾಂಗಕ್ಕೆ ಉಡುಗೊರೆ ಇನ್ನೊಂದಕ್ಕೆ ಬರೆ ಎಳೆಯುವುದು ಎಷ್ಟು ಸಮರ್ಥನೀಯ ಎನ್ನುವುದನ್ನು, ಮತ್ತು ಮೀಸಲಾತಿಯನ್ನು ಹೇಗೆ ಜಾತ್ಯಾತೀತವಾಗಿ ಇಂದಿನ ಶತಮಾನಕ್ಕೆ ತಕ್ಕಂತೆ ವೈಜ್ಞಾನಿಕವಾಗಿ ಅಳವಡಿಸಬಹುದೆಂಬ ನೀತಿಯನ್ನು ಆತ ಅಮೇರಿಕೆಯಿಂದಲೇ ಸಾಕಷ್ಟು ಅರಿಯಬಹುದಾಗಿದೆ. 


ಆದರೆ ಇಲ್ಲಿ ಆತನ ಪೌರತ್ವವನ್ನು ಪದೇ ಪದೇ ಪ್ರಶ್ನಿಸುವ ನಿವಾಸಿ ಪೌರರು ಬಹುಮುಖ್ಯವಾಗಿ ಅರಿಯಬೇಕಾದ್ದು ಅವನು ಭಾರತ ದೇಶದ ಪೌರನೇ ಆಗಿದ್ದಾನೆ ಎನ್ನುವುದು. ಇದನ್ನು ಘನ ಭಾರತ ಸರ್ಕಾರವೇ ಒಪ್ಪಿ ಸಾಗರೋತ್ತರ ಭಾರತೀಯ/ಪೌರ ಎಂಬ ಕಾರ್ಡ್ ಕೊಟ್ಟಿದೆ. ಹಾಗಾಗಿ ನಿವಾಸಿ ನಾಗರಿಕರು ಅವನ ಹೋರಾಟವನ್ನು ಪ್ರಶ್ನಿಸುವ ನೆಪದಲ್ಲಿ ಅವನ ಪೌರತ್ವದ ಕುರಿತಾದ ಇಂತಹ ಅನಾಗರಿಕ ಪ್ರಶ್ನೆಯನ್ನು ಕೇಳುವುದು ಅಸಹ್ಯಕರ. ಮೇಲಾಗಿ ಘನ ಸರ್ಕಾರವೇ ತಾನು ಕೊಟ್ಟ ಸಾಗರೋತ್ತರ ನಾಗರಿಕರ ನಾಗರಿಕ ಹಕ್ಕುಗಳನ್ನು ಸಾಂವಿಧಾನಿಕವಾಗಿ ಉಲ್ಲಂಘಿಸಿದೆ. ಹೀಗಾಗಿ ಒಬ್ಬ ದಲಿತ ಸಾಗರೋತ್ತರ ನಾಗರಿಕ ಸಹ ತನ್ನ ಹಕ್ಕಿನ ಯಾವುದೇ ಮೀಸಲಾತಿಗೆ ಅನರ್ಹನಾಗಿದ್ದಾನೆ. ಕೇವಲ ಹುಟ್ಟಿನ ಕಾರಣ ಅವನು ಸಾಗರೋತ್ತರ ನಾಗರಿಕನಾಗಿ ಇಡೀ ಶಿಕ್ಷಣವನ್ನು ಭಾರತದಲ್ಲೇ ಪಡೆದಿದ್ದರೂ ಅವನ ಉನ್ನತ ಶಿಕ್ಷಣದ ಯಾವುದೇ ಸ್ಥಾನವನ್ನು ಅನಿವಾಸಿ ಕೋಟಾದಲ್ಲಿಯೇ ಪಡೆಯಬೇಕೇ ಹೊರತು ಹಕ್ಕಿನ ಮೀಸಲಾತಿಯಿಂದಲ್ಲ! ಅವನು ಸಾಮಾನ್ಯ ಕೋಟಾದಲ್ಲಿ ಸಹ ಅರ್ಜಿ ಹಾಕುವಂತಿಲ್ಲ. ಇಂತಹ ಹಕ್ಕುಚ್ಯುತಿಯನ್ನು ಪ್ರಶ್ನಿಸಿ ಈಗಾಗಲೇ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಲಾಗಿದೆ ಎಂದರೆ ಅನಿವಾಸಿಗಳು ಎಂತಹ ನ್ಯಾಯಾಂಗ ಬದ್ಧರು, ಸಂವಿಧಾನಬದ್ಧರು ಎಂದು ನಿವಾಸಿ ಪೌರರು ಅರಿತು ಅವರನ್ನು ಒಳಗೊಳ್ಳಬೇಕು. ಈ ಬಗ್ಗೆ ಯಾವ ಮಾಧ್ಯಮ, ರಾಜಕಾರಣಿ ದನಿಯೆತ್ತಿರುವ ನಿದರ್ಶನವಿದೆ?


https://kannadathinktank.blogspot.com/2018/09/blog-post.html?m=0


Indian media mania ಅಮೇರಿಕಾದಲ್ಲಿ ಘೋರ ಹಿಮಪಾತ! ಚಳಿಗೆ ತತ್ತರಿಸಿ ಸತ್ತ ಅಮೇರಿಕನ್ನರು!

 ಅಮೇರಿಕಾದಲ್ಲಿ ಘೋರ ಹಿಮಪಾತ! ಚಳಿಗೆ ತತ್ತರಿಸಿ ಸತ್ತ ಅಮೇರಿಕನ್ನರು! ಅಮೇರಿಕಾದಲ್ಲಿ ನೀರಿಲ್ಲ, ಕರೆಂಟಿಲ್ಲ! ಇತ್ಯಾದಿ ಸುದ್ದಿಗಳನ್ನು ಭಾರತೀಯ ದೂರವಾಹಿನಿಗಳಲ್ಲಿ ಕಂಡ ನನ್ನ ಸ್ನೇಹಿತರು ಬಂಧುಗಳು ಕರೆಮಾಡಿ, ಮೆಸೇಜ್ ಮಾಡಿ ನನ್ನ ಕ್ಷೇಮ ಕುಶಲೋಪರಿಯನ್ನು ಕಳೆದೆರಡು ದಿನಗಳಿಂದ ವಿಚಾರಿಸತೊಡಗಿದ್ದಾರೆ. ಅವರ ವಿಡಿಯೋ ಕರೆಗೆ ನಾನು ಇಲ್ಲಿ ಕರೆಂಟ್ ಇರುವುದನ್ನು, ನೀರು ಬರುವುದನ್ನು ತೋರಿಸಿ, ಹೊರಗಡೆ ಹಿಮವಿದ್ದರೂ ರಸ್ತೆಯಲ್ಲಿ ಕಾರುಗಳು ಓಡಾಡುವುದನ್ನು ತೋರಿಸಿದಾಗ ಅವರ ರೋಚಕತೆಗೆ ಐಸ್ ಕೋಲ್ಡ್ ನೀರೆರಚಿದಂತಾಯಿತು.


ಅಂದರೆ ಭಾರತೀಯ ದೂರವಾಹಿನಿಗಳಲ್ಲಿ ತೋರಿಸಿದಷ್ಟು ಅಮೇರಿಕಾದಲ್ಲಿ ಚಳಿ, ಹಿಮಪಾತ, ಸಾವುಗಳು, ನೀರಿಲ್ಲದ್ದು ಕರೆಂಟಿಲ್ಲದ್ದು ಸುಳ್ಳೇ?!?


ಐವತ್ತು ರಾಜ್ಯಗಳ ಅಮೇರಿಕಾದ ಅರ್ಧಕ್ಕೂ ಹೆಚ್ಚು ರಾಜ್ಯಗಳಲ್ಲಿ ಹಿಮಪಾತ ಇರುತ್ತದೆ. ಕೆಲವು ರಾಜ್ಯಗಳಲ್ಲಿ ಹಿಮಪಾತವು ಗರಿಷ್ಠವಿದ್ದರೆ ಕೆಲವು ರಾಜ್ಯಗಳಲ್ಲಿ ಕನಿಷ್ಟವಿರುತ್ತದೆ. ಕನಿಷ್ಟ ಹಿಮಪಾತದ ರಾಜ್ಯಗಳಲ್ಲಿ ಬಿದ್ದ ಹಿಮವು ಒಂದೆರಡು ದಿನದಲ್ಲಿ ಕರಗಿ ಹೋದರೆ, ಅಧಿಕ ಹಿಮಪಾತದ ರಾಜ್ಯಗಳಲ್ಲಿ ಉಷ್ಣಾಂಶದ ಆಧಾರಿತವಾಗಿ ವಾರ, ತಿಂಗಳುಗಟ್ಟಲೆ ಎಲ್ಲೆಡೆ ನೆಲದ ಮೇಲೆ ಹಾಸಿರುತ್ತದೆ. ಆದರೆ ಇಂತಹ ರಾಜ್ಯಗಳು ಹಿಮವನ್ನು ರಸ್ತೆ, ಪಾದಚಾರಿ ರಸ್ತೆ ಮುಂತಾದ ಸಾರ್ವಜನಿಕ ಸ್ಥಳಗಳನ್ನು ಅತಿ ಶೀಘ್ರವಾಗಿ ಗುಡಿಸಿ ಮುಕ್ತವಾಗಿರಿಸುತ್ತವೆ. ಅಂತಹ ಪ್ರಮುಖ ನಗರಗಳು ಶಿಕಾಗೋ, ಬಾಸ್ಟನ್, ನ್ಯೂಯಾರ್ಕ್, ಮಿನಿಯಾಪೊಲಿಸ್ ಇತ್ಯಾದಿ. ಇಂತಹ ರಾಜ್ಯಗಳಲ್ಲಿ ಉಷ್ಣಾಂಶ ಚಳಿಗಾಲದ ಕೆಲವು ದಿನಗಳಲ್ಲಿ ಮೈನಸ್ ಹತ್ತರಿಂದ ಮೈನಸ್ ಇಪ್ಪತ್ತೈದು ಒಮ್ಮೊಮ್ಮೆ ಮೈನಸ್ ನಲವತ್ತು ಡಿಗ್ರಿ ಸೆಲ್ಸಿಯಸ್ಸಿಗೆ ಇಳಿಯುವುದು ಸರ್ವೇಸಾಮಾನ್ಯ. ಅದರಲ್ಲೂ ಹಿಮಪಾತ ಮತ್ತು ಕುಸಿದ ಉಷ್ಣಾಂಶ ಡಿಸೆಂಬರ್ ಕೊನೆಯಿಂದ ಫೆಬ್ರುವರಿ ಕೊನೆಯವರೆಗೆ ಇದ್ದೇ ಇರುತ್ತದೆ. ಇದರಲ್ಲಿ ಅಂತಹ ವಿಶೇಷವೇನೂ ಇಲ್ಲ.


ಹಾಗಿದ್ದರೆ ಅಮೇರಿಕಾದಲ್ಲಿ ಸಾಮಾನ್ಯ ಎನಿಸುವ ಇಂತಹ ಚಳಿಗಾಲದ ಸಂಗತಿ ಈಗ ಇಷ್ಟೊಂದು ಸುದ್ದಿಯಾದದ್ದು ಏಕೆ?


ಈ ಸುದ್ದಿಯ ಕೇಂದ್ರಬಿಂದು ವಿಶ್ವವಿಖ್ಯಾತ ನಯಾಗರಾ ಜಲಪಾತವಿರುವ ಬಫಲೋ ಪ್ರದೇಶ. ಈ ಪ್ರದೇಶದಲ್ಲಿ ತೀವ್ರ ಚಳಿ ಮತ್ತು ಅತಿ ಹಿಮಪಾತ ಸರ್ವೇಸಾಮಾನ್ಯವಾದರೂ ಈ ಬಾರಿ ಎಡೆಬಿಡದೆ ಸತತ ಮೂವತ್ತೇಳು ಗಂಟೆಗಳ ಕಾಲ ಹಿಮಪಾತವಾದದ್ದು ಪ್ರಮುಖ ಕಾರಣ. ಅಲ್ಲದೆ ಅದಕ್ಕೂ ಮುಂಚೆ ಲಘುವಾಗಿ ಮಳೆ ಬಂದು, ಉಷ್ಣಾಂಶ ಕುಸಿದು ಆ ಮಳೆನೀರು ರಸ್ತೆಗಳನ್ನು ಲ್ಯಾಮಿನೇಟ್ ಮಾಡಿದಂತೆ ತೆಳ್ಳನೆಯ ಐಸಿನಿಂದ ಆವರಿಸಿಕೊಂಡಿತ್ತು. ಇದನ್ನು ಬ್ಲ್ಯಾಕ್ ಐಸ್ ಎನ್ನುತ್ತಾರೆ. ಏಕೆಂದರೆ ಮಳೆನೀರು ಪಾರದರ್ಶಕ ಐಸ್ ಆಗಿ ರಸ್ತೆಯನ್ನು ಆವರಿಸಿಕೊಂಡಾಗ ಅದು ರಸ್ತೆಯ ಡಾಂಬರ್ ಬಣ್ಣವನ್ನೇ ಪ್ರತಿಫಲಿಸಿ ಕಪ್ಪಾಗಿ ಕಾಣುವುದರಿಂದ ಬ್ಲ್ಯಾಕ್ ಐಸ್ ಎನ್ನುತ್ತಾರೆ. ಇದು ಕಣ್ಣಿಗೆ ಕಾಣದೆ ವಾಹನ ಚಾಲಕರು ನಿಯಂತ್ರಣ ತಪ್ಪಿ ಸಾಕಷ್ಟು ಅಪಘಾತಗಳು ಸಂಭವಿಸುತ್ತವೆ. ಈ ಕಪ್ಪು ಮಂಜನ್ನು ನಿಭಾಯಿಸುವಲ್ಲಿ ನಗರಾಡಳಿತವು ನಿರತವಾಗಿದ್ದಾಗ ಗಾಯದ ಮೇಲೆ ಉಪ್ಪು ಸುರಿವಂತೆ ಅತಿ ಹಿಮಪಾತ ಆರಂಭವಾಗಿತ್ತು.


ಮೇಲಾಗಿ ಅಲ್ಲಿನ ಕೆಲವು ನಿವಾಸಿಗಳು ಸಹಜವಾಗಿ ’ಇದು ಪ್ರತಿವರ್ಷವೂ ನೋಡುತ್ತೇವಲ್ಲ, ಅದೇ ರೀತಿ’ ಎಂದು ಉದಾಸೀನ ತೋರಿ ತಮ್ಮ ಎಂದಿನ ಚಟುವಟಿಕೆಗಳನ್ನು ಮುಂದುವರಿಸಿದರು. ಕ್ರಿಸ್ಮಸ್ ಹಬ್ಬದ ಭರಾಟೆ, ಜನಜಂಗುಳಿಗಳೆಲ್ಲಾ ಸೇರಿ ಕೆಲವರು ಈ ಹಿಮದಲ್ಲಿ ಸಿಲುಕುವಂತಾಯಿತು. ಹೀಗೆ ಸಿಲುಕಿದವರಲ್ಲಿ ಕೆಲವರು ಸಾವಿಗೀಡಾದರು. ಒಟ್ಟಾರೆ ಈ ಹಿಮಪಾತದಲ್ಲಿ ಸತ್ತವರ ಸಂಖ್ಯೆ ೩೪ಕ್ಕೆ ಬಂದು ನಿಂತಿದೆ.


ಅತ್ಯಂತ ಕ್ಷಿಪ್ರವಾಗಿ ಮತ್ತು ಸತತವಾಗಿ ನಾಲ್ಕು ಅಡಿಗಳಷ್ಟು ಬಿದ್ದ ಹಿಮವನ್ನು ಅದು ಬಿದ್ದಷ್ಟೇ ತ್ವರಿತವಾಗಿ ತೆರವು ಮಾಡಲು ಅಲ್ಲಿನ ಆಡಳಿತಕ್ಕೆ ಸಾಧ್ಯವಾಗದೆ ಸಮಸ್ಯೆಗಳು ತಲೆ ಎತ್ತಿದವು. ಕೆಲವೆಡೆ ಗುಡಿಸಿದ್ದಕ್ಕಿಂತಲೂ ವೇಗವಾಗಿ ಹಿಮ ಬಿದ್ದು ಗುಡಿಸಿದ್ದು ವ್ಯರ್ಥವಾಯಿತು. ಕುಸಿದ ತಾಪಮಾನದ ಕಾರಣ ಹತ್ತಿಯಂತಿದ್ದ ಹಿಮವು ಬೇಗ ಕಲ್ಲಾಗತೊಡಗಿತ್ತು. ಹೆಚ್ಚಿನ ಸಹಾಯಕ್ಕೆ ಬೇರೆಡೆಯಿಂದ ತರಿಸಿದ ಹಿಮ ಗುಡಿಸುವ ವಾಹನಗಳು ಸಕಾಲದಲ್ಲಿ ಬಫಲೋ ಪ್ರದೇಶವನ್ನು ತಲುಪಲಾಗದೆ ಹಿಮದ ಗುಡ್ಡಗಳು ನಿರ್ಮಾಣವಾದವು. ಈ ಗುಡ್ಡಗಳನ್ನು ಗುಡಿಸದೆ ಕೆಲವು ತುರ್ತುಕರೆಗಳಿಗೆ ಸಕಾಲಕ್ಕೆ ಸ್ಪಂದಿಸಲು ಪೊಲೀಸರಿಗೆ, ಆಂಬುಲೆನ್ಸ್ ಸೇವೆಗೆ ಆಗಲಿಲ್ಲ. 


ಇನ್ನು ಇದರ ಮೇಲೆ ಗಂಟೆಗೆ ಎಪ್ಪತ್ತು ಮೈಲಿ ವೇಗದಲ್ಲಿ ಬೀಸುತ್ತಿದ್ದ ಕುಳಿರ್ಗಾಳಿಯು ಹಿಮದಲ್ಲಿ ಸಿಲುಕಿದವರ ತುರ್ತುಸ್ಥಿತಿಗೆ ಹೆಲಿಕಾಪ್ಟರ್ ಬಳಕೆಯಾಗದಂತೆ ತಡೆಯೊಡ್ಡಿತು. ಇದೇ ಗಾಳಿಯು ಕೆಲವೆಡೆ ವಿದ್ಯುತ್ ಕಂಬಗಳನ್ನು ಉರುಳಿಸಿ ಸರಬರಾಜಿನಲ್ಲಿ ತೊಂದರೆಯುಂಟಾಗಿ ಅಲ್ಲಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಅದರಂತೆಯೇ ಕೆಲವೆಡೆ ನೀರಿನ ಪೈಪುಗಳು ಸರಿಯಾದ ಉಷ್ಣಾಂಶ ಸಿಗದೆ ಪೈಪಿನೊಳಗಿನ ನೀರು ಮಂಜುಗಡ್ಡೆಯಾಗಿ ಒಡೆದುಕೊಂಡವು. ಮುಂದೆ ನಡೆದದ್ದನ್ನು ನೀವು ಮಾಧ್ಯಮದಲ್ಲಿ ಕಂಡಿದ್ದೀರಿ. 


ಆದರೆ ಇದೆಲ್ಲವೂ ಇಡೀ ಅಮೇರಿಕಾದಲ್ಲಿ ನಡೆದಿದ್ದಲ್ಲ, ಬಫಲೋ ಪ್ರದೇಶದ ಸುತ್ತಮುತ್ತ ಮಾತ್ರ! ಶಿಕಾಗೋ, ಬಾಸ್ಟನ್, ಮಿನಿಯಾಪೊಲಿಸ್, ನ್ಯೂಯಾರ್ಕ್ ಮುಂತಾದ ಕಡೆ ಹಿಮಪಾತ, ಕುಳಿರ್ಗಾಳಿ, ಕುಸಿದ ಉಷ್ಣಾಂಶವಿದ್ದರೂ ಬಫ಼ಲೋ ಪ್ರದೇಶದಷ್ಟು ತೀವ್ರವಾಗಿರದೆ ಮತ್ತೊಂದು ಚಳಿಗಾಲದ ವಾತಾವರಣದಂತೆಯೇ ಇತ್ತು, ಇದೆ. ಬಫಲೋ ಸಹ ಹೀಗೆಯೇ ಇರುತ್ತಿತ್ತು. ಆದರೆ ಕ್ರಿಸ್ಮಸ್ ರಜೆಯ ಕಾರಣ ಜನರು ಸುತ್ತಾಟಕ್ಕೆ ತೆರಳಿಯೋ, ಪರ ಊರುಗಳಿಂದ ಬಫಲೋಗೆ ಬರುವ ಅಥವಾ ಹಾದು ಹೋಗುವ ಮಾರ್ಗಮಧ್ಯೆ ಈ ಹಿಮಪಾತದಲ್ಲಿ ಸಿಲುಕಿ ಈ ಅವಘಡಕ್ಕೆ ಬಲಿಯಾಗಿದ್ದಾರೆ.


ಇನ್ನು ಹವಾಮಾನ ವೈಪರೀತ್ಯದಿಂದ ವಿಮಾನಗಳು ರದ್ದಾಗುವುದು, ಸಂಚಾರದಲ್ಲಿ ವ್ಯತ್ಯಯ ಉಂಟಾಗುವುದು ಹಿಮಪಾತದ ದಿನಗಳಲ್ಲಿ ಸರ್ವೇಸಾಮಾನ್ಯ. ಅದರಲ್ಲೂ ಕುಸಿದ ತಾಪಮಾನವಿದ್ದಾಗ ವಿಮಾನದ ಮೇಲೆ ಬೀಳುವ ಮಂಜು ಗಡ್ಡೆಗಟ್ಟುವುದು, ಅದನ್ನು ಕೆರೆಯುವುದು, ಕೆರೆಯುವುದು ಮುಗಿಯಿತೆಂದುಕೊಳ್ಳುವಾಗ ಮತ್ತೆ ಮತ್ತೆ ಗಡ್ಡೆಗಟ್ಟುವುದು ಇದೆಲ್ಲವೂ ಚಳಿಗಾಲದ ವಿಮಾನಯಾನ ಸಮಸ್ಯೆಗಳೇ ಆಗಿವೆ. ಅದರಲ್ಲೂ ಕ್ರಿಸ್ಮಸ್ ವರ್ಷಾಂತ್ಯದ ರಜೆಗಳ ಪ್ರಯಾಣದ ಭರಾಟೆಯಲ್ಲಿ ಹೀಗಾಗುವುದು ಸಹಜವಾಗಿ ಹೆಚ್ಚು ಸುದ್ದಿಯಾಗುತ್ತದೆ.


ಅಂದ ಹಾಗೆ ಬಫಲೋ ನ್ಯೂಯಾರ್ಕ್ ರಾಜ್ಯದಲ್ಲಿದೆ. ನ್ಯೂಯಾರ್ಕ್ ನಗರ ಮತ್ತು ಬಫಲೋ ನಗರಗಳು ಒಂದೇ ರಾಜ್ಯದಲ್ಲಿದ್ದರೂ ಅವೆರಡರ ನಡುವಿನ ಹಿಮಪಾತದ ಅನುಪಾತದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಅದೇ ರೀತಿ ವಾಸ್ತವಕ್ಕೂ ಮತ್ತು ದೂರವಾಹಿನಿ ಸುದ್ದಿಗಳಿಗೂ ಅಜಗಜಾಂತರ ವ್ಯತ್ಯಾಸವಿದೆ.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಜನಸಾಹಿತ್ಯ ಚಿಕನ್ ಕಬಾಬ್, ಮಲ್ಪೈ ಮೀನ್ಹುಳಿ!

 ತಮಿಳ್ನಾಡಿನ ರಾಜ್ಯ ಲಾಂಛನವು ಅಶೋಕ ಸ್ತಂಭ, ಶ್ರೀವಲ್ಲಿಪುತ್ತೂರು ದೇವಸ್ಥಾನದ ಗೋಪುರದ ಚಿತ್ರಗಳೊಡನೆ "ವಾಯ್ಮೆಯೇ ವೆಲ್ಲಂ" ಯಾನೆ ಸತ್ಯಕ್ಕೇ ಗೆಲುವು ಎಂಬ ವಾಕ್ಯವನ್ನು ಹೊಂದಿದೆ. ಇಲ್ಲಿ ಸ್ತಂಭ, ಗೋಪುರ ಎರಡೂ ಮೂರ್ತಿಪೂಜೆಯ ಹಿಂದೂ ಸಂಸ್ಕೃತಿಯ ಸಂಕೇತಗಳು. 


ಅದೇ ರೀತಿ ಕೇರಳ ರಾಜ್ಯ ಲಾಂಛನವು ಸೊಂಡಿಲೆತ್ತಿದ ಎರಡು ಆನೆಗಳ ನಡುವೆ ಅಶೋಕ ಸ್ತಂಭ ಮತ್ತು ಪದ್ಮನಾಭ ಸ್ವಾಮಿಯ ಶಂಖವನ್ನು ಲಾಂಛನವಾಗಿ ಸತ್ಯಮೇವ ಜಯತೆ ಎಂದು ಒಮ್ಮೊಮ್ಮೆ ತಮಸೋಮಾ ಜ್ಯೋತಿರ್ಗಮಯ ಎಂಬ ಹಿಂದೂ ಸಂಸ್ಕೃತಿಯ ಶ್ಲೋಕಗಳನ್ನು ಹೊಂದಿದೆ. ಇವೂ ಸಹ ಹಿಂದೂ ಸಂಸ್ಕೃತಿಯ ಸಂಕೇತಗಳು. 


ಆದರೆ ಹಿಂದೂ ಸಂಸ್ಕೃತಿಯ ಲಾಂಛನಗಳನ್ನು ಹೊಂದಿರುವ ಈ ರಾಜ್ಯಗಳಲ್ಲಿ ಮುಸ್ಲಿಮರು ಹೇರಿಕೆ ಎಂದಾಗಲೀ, ಹೊರಗಿಟ್ಟವರು ಎಂದಾಗಲೀ ಪರಿಗಣಿಸದೆ ತಾವಿರುವ ರಾಜ್ಯದ ಭಾಷೆ, ನಾಡನ್ನು ಅಪ್ಪಿಕೊಂಡು ಅಲ್ಲಿನ ಸಾಹಿತ್ಯ ಕ್ಷೇತ್ರದಲ್ಲಿ ಪ್ರಚಂಡ ಪ್ರಗತಿ ಸಾಧಿಸಿದ್ದಾರೆ. ಮೇಲಾಗಿ ಬಹುಪಾಲು ಅವರೆಲ್ಲರೂ ಮನೆಯಲ್ಲಿ ತಮಿಳು, ಮಲಯಾಳಿ ಭಾಷೆಯನ್ನೇ ಮಾತನಾಡುತ್ತಾರೆ. ಕೇವಲ ಸಾಹಿತ್ಯವಲ್ಲದೇ ಸಾಕಷ್ಟು ಸಾಂಸ್ಕೃತಿಕ ಲಲಿತಕಲೆಗಳಲ್ಲಿ ಪ್ರಗತಿ ಸಾಧಿಸಿದ್ದಾರೆ. ಮಲಯಾಳಂ ಭಾಷೆಯಲ್ಲದೆ ಭಾರತೀಯ ಚಿತ್ರರಂಗದಲ್ಲಿಯೇ ಮಮ್ಮೂಟಿ ಸೂಪರ್ ಸ್ಟಾರ್ ಆಗಿದ್ದಾರೆ. AR ರೆಹಮಾನ್ ತಮಿಳು ಚಿತ್ರರಂಗದಿಂದ ಹಾಲಿವುಡ್ ವರೆಗೆ ಬೆಳೆದಿದ್ದಾರೆ. ಅದೇ ರೀತಿ ಮುಸ್ಲಿಮರು ಮಲಯಾಳಂ ಭಾಷೆಯ ಸಾಹಿತ್ಯದ ಮೇರು ಶಿಖರವನ್ನೇರಿದ್ದಾರೆ ಎನ್ನುವುದು ಪದ್ಮನಾಭನ ಶಂಖದಿಂದ ಹೊರಡುವ ನಾದದಷ್ಟೆ ದೃಢವಾಗಿದೆ. 


ಕರ್ನಾಟಕದಲ್ಲಿ?!?


ಕರ್ನಾಟಕದ ರಾಜ್ಯ ಲಾಂಛನವು ಎರಡು ಗಜಕೇಸರಿಗಳು ಗಂಡಭೇರುಂಡದ ಫಲಕ ಮತ್ತು ಅಶೋಕಸ್ತಂಭವನ್ನು ಹಿಡಿದು ನಿಂತಿರುವ ಮತ್ತು ಸತ್ಯಮೇವ ಜಯತೇ ಎಂಬ ಉದ್ಘೋಷವನ್ನು ಹೊಂದಿದೆ. ಇದ್ದುದರಲ್ಲಿ ಈ ಲಾಂಛನವು ತಮಿಳುನಾಡು, ಕೇರಳಗಳಂತೆ ಮೂರ್ತಿಪೂಜೆಯ ಗೋಪುರವನ್ನಾಗಲಿ, ಶಂಖವನ್ನಾಗಲಿ ಹೊಂದಿಲ್ಲ.


ಆದರೆ ಅದನ್ನು ಸರಿತೂಗಿಸುವಂತೆ ಕರ್ನಾಟಕ ರಾಜ್ಯಕ್ಕೆ ಮೂರ್ತಿರೂಪ ನೀಡಿ ಭುವನೇಶ್ವರಿ ಎನ್ನಲಾಗುತ್ತದೆ.


ಈ ಮೂರೂ ರಾಜ್ಯಗಳಿಗೆ ಯಾವುದೇ ಅಧಿಕೃತ ಪ್ರತ್ಯೇಕ ಬಾವುಟಗಳಿಲ್ಲ. ಆದರೆ ಅನಧಿಕೃತವಾಗಿ ತಮಿಳುನಾಡಿನಲ್ಲಿ ಭಾರತ ರಾಷ್ಟ್ರಧ್ವಜ ಮತ್ತು ಶ್ರೀವಲ್ಲಿಪುತ್ತೂರು ಗೋಪುರವನ್ನೊಳಗೊಂಡಂತೆ ಬೂದು ಬಣ್ಣದ ಬಾವುಟವನ್ನು ಬಳಸುವಂತೆ ನಾಸ್ತಿಕ ಕರುಣಾನಿಧಿಯವರೇ ಸಲಹೆ ನೀಡಿದ್ದರು. ಅದೇ ರೀತಿ ಕೇರಳದ ಭಾಷಾಭಿಮಾನಿಗಳೂ ಸಹ ಪದ್ಮನಾಭನ ಶಂಖವುಳ್ಳ ಕೆಂಪು ಬಣ್ಣದ ಬಾವುಟವನ್ನು ಆಗಾಗ್ಗೆ ಪ್ರದರ್ಶಿಸುತ್ತಾರೆ. ಇನ್ನು ಕರ್ನಾಟಕದಲ್ಲಿ ಕೆಂಪು ಮತ್ತು ಹಳದಿಯ ಬಾವುಟವನ್ನು ನೀವೆಲ್ಲರೂ ನೋಡಿರುತ್ತೀರಿ.


ಈ ಮೂರೂ ರಾಜ್ಯಗಳಲ್ಲದೆ ಇಡೀ ಭಾರತದೇಶ ಮತ್ತದರ ರಾಜ್ಯಗಳೂ ಸೇರಿದಂತೆ ತಮ್ಮ ತಾಯ್ನಾಡನ್ನು ತಾಯಿ, ದೇವಿ ಎಂಬ ಮೂರ್ತರೂಪ ಕೊಟ್ಟು ಆರಾಧಿಸುವ ಸಂಸ್ಕೃತಿ ಎಂದಿನಿಂದಲೋ ಇದ್ದು ಇದಕ್ಕೆ ಯಾವುದೇ ಧರ್ಮದ ಲೇಪನವಿಲ್ಲದೆ ಕೇವಲ ಸಂಸ್ಕೃತಿಯ ಛಾಯೆ ಮಾತ್ರವಿದೆ. ಇದಕ್ಕೆ ಕುವೆಂಪು ಅವರ "ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ"ಯಿಂದ "ವಂದೇ ಮಾತರಂ"ವರೆಗೆ ಒಂದು ಪ್ರದೇಶದ ಮೂರ್ತರೂಪವನ್ನು ಆರಾಧಿಸುವ ಭಾವನಾತ್ಮಕ ಬೆಸುಗೆ ಇದೆ. ಇದು ಕೇವಲ ಭಾರತಕ್ಕಷ್ಟೇ ಸೀಮಿತವಲ್ಲದೆ ಜಾಗತಿಕವಾಗಿಯೂ ಜನಮಾನಸದಲ್ಲಿ ತಮ್ಮ ತಮ್ಮ ದೇಶವನ್ನು ಸ್ತ್ರೀರೂಪಿ (ತಾಯಿ) ಎಂದೇ ಪರಿಗಣಿಸಲಾಗಿದೆ.


ಹೀಗಿದ್ದಾಗ ಅಂತಹ ಸ್ತ್ರೀರೂಪಿಯೇ ಆದ ಚಿಂತಕಿ ಭಾನು ಮುಷ್ತಾಕ್ ಅವರು ಮೊನ್ನೆ ನಡೆದ ಜನಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡುತ್ತ, "ನಮ್ಮನ್ನು (ಮುಸ್ಲಿಮರನ್ನು) ಹೊರಗಿಡುತ್ತಿರುವುದು ಈಗಿನಿಂದಲ್ಲ, ಎಂದಿನಿಂದಲೋ ಹೊರಗಿಡಲಾಗಿದೆ. ಯಾವಾಗ ಕನ್ನಡದ ಬಾವುಟವನ್ನು ಕುಂಕುಮ, ಅರಿಷಿಣದ ಬಣ್ಣದಲ್ಲಿ ರಚಿಸಿ, ಕರ್ನಾಟಕವನ್ನು ಭುವನೇಶ್ವರಿ ಎಂಬ ಮೂರ್ತರೂಪ ಕೊಟ್ಟರೋ ಅಂದಿನಿಂದಲೇ ಹೊರಗಿಟ್ಟಿದ್ದಾರೆ" ಎಂದು ಕರೆ ಕೊಟ್ಟರು. ಅಂದರೆ ಇಸ್ಲಾಂ ಧರ್ಮಕ್ಕೆ ವಿರುದ್ಧವಾದ ಮೂರ್ತಿಪೂಜೆ, ಕುಂಕುಮ ಅರಿಷಿಣ ಧರಿಸುವುದನ್ನು ಹೇರಿ ಮುಸ್ಲಿಮರನ್ನು ಕನ್ನಡದಿಂದ ಹೊರಗಿಡಲಾಯಿತು ಎಂದರ್ಥ.


ಅವರ ತಾರ್ಕಿಕ ಚಿಂತನೆಗೆ ಅನುಗುಣವಾಗಿ ಶೈವ ಪರಂಪರೆಯ ತಮಿಳುನಾಡು ವಿಭೂತಿಯ ಬೂದು ಬಣ್ಣ ಮತ್ತು ಮೂರ್ತಿಪೂಜೆಯ ಗುಡಿಗೋಪುರವನ್ನು, ಕೇರಳವು ಕುಂಕುಮದ ಕೆಂಪು ಬಣ್ಣ ಮತ್ತು ಮೂರ್ತಿಪೂಜೆಯ ಪದ್ಮನಾಭಮೂರ್ತಿಯ ಶಂಖವನ್ನು ಹೇರಿ ಅಲ್ಲಿನ ಮುಸ್ಲಿಮರನ್ನು ಹೊರಗಿಟ್ಟಿದ್ದವು ಎನ್ನಬಹುದು. ಹಾಗಿದ್ದಾಗ ಅಲ್ಲಿನ ಮುಸ್ಲಿಮರು ಅವರನ್ನು ಹೇಗೆಯೇ ಹೊರಗಿಟ್ಟರೂ ಸಾಹಿತ್ಯದಲ್ಲಿ ಎಷ್ಟೆಲ್ಲಾ ಸಾಧನೆಗೈದು ಹೇಗೆ ಹೆಸರು ಪಡೆದರು? ಕರ್ನಾಟಕದಲ್ಲಿ ಏಕೆ ಹೊರಗುಳಿದರು?


ಧರ್ಮದ ಆಧಾರದ ಮೇಲೆಯೇ ಸ್ವತಂತ್ರವಾಗಿ ರಚಿತವಾದ ಒಂದು ದೇಶವನ್ನು "ಸೆಕ್ಯುಲರ್" ಎಂದು ಎಲ್ಲಾ ಧರ್ಮದವರೂ ಇಲ್ಲಿನ ಸಂಸ್ಕೃತಿಯನ್ನು ಒಪ್ಪಿ ಈವರೆಗೆ ನಡೆದು ಬಂದಿರುವಾಗ ಓರ್ವ ಚಿಂತಕಿ, ಧರ್ಮಾತೀತ, ಪ್ರಗತಿಪರ ಎನ್ನುವ ಸಾಹಿತಿಯ ಮಾತುಗಳನ್ನು ಗಂಭೀರವಾಗಿಯೇ ಪರಿಗಣಿಸಿಬೇಕಲ್ಲವೇ? ಹಾಗಾಗಿ ಇದೇ ಜನಸಾಹಿತ್ಯ ಸಮ್ಮೇಳನದಲ್ಲಿ ಘೋಷಿತವಾದ ದ್ರಾವಿಡ ರಾಷ್ಟ್ರ ಎಂಬ ಹಿನ್ನೆಲೆಯಲ್ಲಿ ತಮಿಳುನಾಡು, ಕೇರಳಗಳನ್ನು ಪರಿಗಣಿಸಿ ನೋಡಿದಾಗ ಈ ಎರಡೂ ರಾಜ್ಯಗಳಲ್ಲಿ ಮುಸ್ಲಿಮರು ಧಾರ್ಮಿಕ ಹೇರಿಕೆಯ ಲಾಂಛನಗಳನ್ನು ಹೊಂದಿಯೂ ಪ್ರಗತಿ ಸಾಧಿಸಿದರೆ, ಕರ್ನಾಟಕದ ಮುಸ್ಲಿಮರು ಏಕೆ ತಮ್ಮನ್ನು ಹೊರಗಿಡಲಾಯಿತು ಎಂದು ಯೋಚಿಸಿದರು? 


ಅದರಲ್ಲೂ  ಇದೇ ಜನಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಚಿಂತಕರ ಚಾವಡಿ ಸದಸ್ಯರೆಂದೇ ಗುರುತಿಸಿಕೊಂಡಿರುವ ಬಹುತ್ವ ಚಿಂತಕ ಸಂಶೋಧಕ ಪ್ರೊ. ರಹಮತ್ ತರೀಕೆರೆಯವರು ಬಹುತ್ವದ ಬಗ್ಗೆ ಅನೇಕ ಪುರಾವೆಗಳನ್ನು ಕೊಟ್ಟು ಕರ್ನಾಟಕವು ಭಾರತದಲ್ಲೇ ಹೆಚ್ಚು ಕೋಮು ಸೌಹಾರ್ದತೆಗೆ ಆದರ್ಶವಾದ ಪುಣ್ಯಭೂಮಿ ಎಂದರು. ಅಂದರೆ ಅವರಿಗೆ ಕುಂಕುಮ ಅರಿಶಿಣದ ಬಾವುಟವಾಗಲಿ, ಭುವನೇಶ್ವರಿ ಮೂರ್ತಿಯಾಗಲಿ ಬಿಡಿ, ಇಲ್ಲಿನ ನೆಲಮೂಲದ ಚೌಡವ್ವ, ದಾನವ್ವ, ಮಾಸ್ತಮ್ಮ, ಶಿಶ್ನರೂಪಿ ಜೋಕುಮಾರಸ್ವಾಮಿ, ಫಲವಂತಿಕೆಯ ದೇವಿದೇವರುಗಳು ಎಂದೂ ಬಾಧಿಸದೆ, ಇದೆಲ್ಲವನ್ನೂ ಒಪ್ಪಿದ ರಹಮತರನ್ನು ನಮ್ಮ ಆಲಿದೇವರು ಸಹ ಧರ್ಮಬಾಹಿರ ಕಾಫಿರರೆನ್ನದೆ ಫಕೀರರೆಂದು ಅವರ ಸಂಶೋಧನೆಗೆ ಸಹಕಾರಿಯಾಗಿ ಉನ್ನತ ಸ್ಥಾನಮಾನಗಳನ್ನು ಗಳಿಸಿಕೊಟ್ಟನು.


ಸಂಕ್ಷಿಪ್ತವಾಗಿ, ಬಹುತ್ವವನ್ನು ಅಪ್ಪಿಕೊಂಡ ರಹಮತರಂತಹ ಸೆಕ್ಯುಲರ್ ಮುಸಲ್ಮಾನರು ಬೆಳೆದರು. ಧರ್ಮದ ಸಂಕೋಲೆಗೆ ಸಿಲುಕಿ ಕುಂಕುಮ, ಅರಿಷಿಣ, ಭುವನೇಶ್ವರಿ ಹರಾಮ್ ಎಂದು ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎನ್ನುವುದು ಇಸ್ಲಾಂ ವಿರೋಧಿ ಎಂಬ ಚಿಂತನೆ ಮುಸ್ಲಿಮರನ್ನು ಹೊರಗುಳಿಸಿತು ಎಂದಲ್ಲವೇ?!?! 


ಇದೆಲ್ಲಕ್ಕಿಂತ ಮೇಲಾಗಿ ಕುಂಕುಮ, ಅರಿಷಿಣ, ಭುವನೇಶ್ವರಿ, ಕರ್ನಾಟಕ ಮಾತೆ ಪರೋಕ್ಷವಾಗಿ ಹರಾಮ್ ಎಂದ ಭಾನು ಮುಷ್ತಾಕ್ ನಾನ್-ಸೆಕ್ಯುಲರ್ ಧಾರ್ಮಿಕ ವ್ಯಕ್ತಿ ಎಂದಲ್ಲವೇ?!?!


ಅಂದ ಹಾಗೆ ಸಾಹಿತಿ, ಚಿಂತಕಿ ಭಾನು ಮುಷ್ತಾಕ್ ಅವರು ವಕೀಲರು ಸಹ! ಹಾಗಾಗಿ ನನ್ನ ಚಿಂತನೆಯನ್ನು ಅವರದೇ ಆದ ವಕೀಲಿಕೆಯ ಧಾಟಿಯಲ್ಲಿ ಮಂಡಿಸಿದ್ದೇನೆ. ಇದಕ್ಕೆ ಮಾನ್ಯ ವಕೀಲೆಯ ಪ್ರತಿವಾದ ಏನೆನ್ನುವುದೋ?


ಈಗ ರಹಮತ್ ತರೀಕೆರೆ ಅವರ ವೈಯಕ್ತಿಕ ಪ್ರಗತಿಯ ನೆಲೆಗಟ್ಟಿನಲ್ಲಿಯೇ ಸಾಬೀತಾದ "ಒಳಗೊಂಡ ಮನಸ್ಸಿನ ಸೆಕ್ಯುಲರ್ ಮುಸ್ಲಿಮ"ನ ಪ್ರಾಮಾಣಿತ ಪ್ರಗತಿಯ ಪ್ರಾಮಾಣಿತ ಚಿಂತನೆಯನ್ನು ಮುಸ್ಲಿಂ ಚಿಂತಕರ ಚಾವಡಿ ಎಂಬ ಸಂಘಟನೆಯ ಸದಸ್ಯರಾದ ಇದೇ ಪ್ರೊ. ರಹಮತ್ ತರೀಕೆರೆ ಮತ್ತು ಭಾನು ಮುಷ್ತಾಕ್ ತಮ್ಮ ಧಾರ್ಮಿಕ ವೇದಿಕೆಗಳಲ್ಲಿ ಏಕೆ ತಿಳಿವಳಿಕೆ ನೀಡುತ್ತಿಲ್ಲ?! ಏಕೆಂದರೆ ಇಬ್ಬರ ಚಿಂತನೆಯೇ ಮೇಲಿನಂತೆ ವೈರುಧ್ಯ ದಿಕ್ಕಿನಲ್ಲಿದೆ!


ಆದರೂ ವೈಚಿತ್ರ್ಯವೆಂಬಂತೆ ಧರ್ಮನಿರಪೇಕ್ಷ ಬಹುತ್ವದ ಜನಸಾಹಿತ್ಯದ ಒಂದೇ ವೇದಿಕೆಯಲ್ಲಿ ತಮ್ಮತಮ್ಮಲ್ಲೇ ಸ್ಪಷ್ಟತೆಯಿರದ ಸೆಕ್ಯುಲರ್ ರಹಮತರು ಮತ್ತು ನಾನ್ ಸೆಕ್ಯುಲರ್/ಧಾರ್ಮಿಕ ಕಟ್ಟಾಳು ಭಾನು ಮುಷ್ತಾಕ್ ಅವರು ದ್ವಂದ್ವದ ಸಂದೇಶಗಳನ್ನು ಸಮಾಜಕ್ಕೆ ಕೊಟ್ಟರು. ಯಾವುದೋ ಹುಂಬರ ಸಭೆ ಇದಾಗಿದ್ದರೆ ಹುಲಿಗ್ಯೋ ಹುಲಿಗ್ಯೋ ಎನ್ನಬಹುದಿತ್ತು. ಆದರೆ ಇವರು ಕರೆ ಕೊಟ್ಟ ಸಭೆಯಲ್ಲಿ ನಾಡಿನ ಚಿಂತಕರು, ಧರ್ಮ ನಿರಪೇಕ್ಷಿಗಳು, ಪ್ರಗತಿಪರರು, ಕವಿ/ಕವಯತ್ರಿಯರು, ಸಂಶೋಧಕರು, ಆಹಾರ ತಜ್ಞರು, ಉದಾರವಾದಿಗಳು, ಸಮಸಮಾನತೆಯ ಹೋರಾಟಗಾರರು, ನವ ದ್ರಾವಿಡರಾಷ್ಟ್ರ ಸಂಸ್ಥಾಪಕರು, ಕಲಾವಿದರು, ಎಕ್ಸೆಟ್ರಾ, ಎಕ್ಸೆಟ್ರಾ, ಎಕ್ಸೆಟ್ರಾಗಳು ತುಂಬಿ ತುಳುಕುತ್ತಿದ್ದರು. ಆದರೆ ಈ ಇಬ್ಬರು ಮುಸ್ಲಿಂ ಚಿಂತಕರ ಚಾವಡಿಯ ದ್ವಂದ್ವಿಗಳ ಅತಿ ಸಾಮಾನ್ಯ ಮಾತನ್ನು ಈ ಇಲೈಟ್ ವರ್ಗ ಗ್ರಹಿಸದೆ ಇದ್ದದ್ದು ಏನನ್ನು ಹೇಳುತ್ತದೆ? ನನ್ನ ವಿಡಂಬನೆಯ ಹ್ಯಾಷ್ಟ್ಯಾಗುಗಳನ್ನು ನಿಜವಾಗಿಸಲೇಬೇಕೆಂದು ಈ ಮಹನೀಯರು ಪಣತೊಟ್ಟು ಹೋರಾಡುತ್ತಿರುವುದಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸೋಣ ಎಂದು ಆನಂದಭಾಷ್ಪ ತುಂಬಿಕೊಂಡಿದ್ದೆ. ಆದರೆ ಪಾಟಿ ಹಿಡಿದಿರುವ ನನ್ನ ನವ್ಯಶಿಷ್ಯ, "ಗುರುವರ್ಯ, ಅಲ್ಲಿ ಮುಗಲೈ ಚಿಕನ್ ಕಬಾಬ್, ಮಲ್ಪೈ ಮೀನ್ಹುಳಿ ಭೋಜನದ ಸುವಾಸನೆಯ ಪರಿಮಳವು ಘಮಘಮಿಸಿ ಅವರಿಗೆಲ್ಲಾ ಚಿತ್ತಚಾಂಚಲ್ಯವನ್ನುಂಟು ಮಾಡಿದ್ದುದು ಕಾರಣವೆ ಹೊರತು ಇನ್ಯಾವುದೂ ಇಲ್ಲೈ" ಎಂದ.


ಅಂದ ಹಾಗೆ ೨೦೦೧ ಮಿಲೇನಿಯಂ ಗಣತಿಯ ಪ್ರಕಾರ ತಮಿಳ್ನಾಡು, ಕೇರಳ, ಕರ್ನಾಟಕವಲ್ಲದೆ ಆಂಧ್ರ, ಗುಜರಾತ್, ಛತ್ತೀಸ್ ಗಡ, ಜಾರ್ಖಂಡ್, ಮಹಾರಾಷ್ಟ್ರ, ಒರಿಸ್ಸಾ, ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಹಿಂದೂ ಮಹಿಳೆಯರಿಗಿಂತ ಮುಸ್ಲಿಂ ಮಹಿಳೆಯರು ಹೆಚ್ಚು ಸುಶಿಕ್ಷಿತರಿದ್ದಾರೆ. ಈ ರಾಜ್ಯಗಳಲ್ಲಿ ಮುಸ್ಲಿಂ ಪುರುಷರು ಸಹ ಹಿಂದೂ ಪುರುಷರ ಸಮಬಲದಷ್ಟು ಅಕ್ಷರಸ್ಥರಿದ್ದಾರೆ. ಈ ವರದಿ ತಯಾರಿಸಿದವರು JNU ಪ್ರೊಫೆಸರ್ ಮಹೇಂದ್ರ ಕೆ ಪ್ರೇಮಿ ಅವರು. 


ಕಂಡೆನೆಂಬುದು ಕಂಗಳ ಮರವೆ,

ಕಾಣೆನೆಂಬುದು ಮನದ ಮರವೆ,

ಕೂಡಿದೆನೆಂಬುದು ಅರುಹಿನ ಮರವೆ,

ಅಗಲಿದೆನೆಂಬುದು ಮರಹಿನ ಮರವೆ.

ಇಂತು ಕಂಡೆ_ಕಾಣೆ_ಕೂಡಿದೆ_ಅಗಲಿದೆ ಎಂಬ,

ಭ್ರಾಂತಿಸೂತಕವಳಿದು ನೋಡಲು

ಗುಹೇಶ್ವರಲಿಂಗವನಗಲಲೆಡೆಯಿಲ್ಲ ಕೇಳಾ, ಎಲೆ ತಾ(ಮಾ)ಯೆ!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಉದಯಕಾಲ ಪತ್ರಿಕೆಯಲ್ಲಿ: ಹಾವೇರಿ ಬಿರಂಜಿ VS. ಬೆಂಗಳೂರು ಮೀನ್ಹುಳಿ!

 ೨೦೧೯ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂದಿನ ಸಮ್ಮೇಳನಾಧ್ಯಕ್ಷರಾದ ಕಂಬಾರರನ್ನು ಪೂರ್ಣಕುಂಭ ಸ್ವಾಗತ ನೀಡಿ ಸ್ವಾಗತಿಸಿದ್ದನ್ನು ಖಂಡಿಸಲಾಗಿತ್ತು. ಈ ಖಂಡನೆಯ ಹಿಂದೆ ನಿಜ ಕಳಕಳಿಗಿಂತ ಕಂಬಾರ-ದ್ವೇಷ ಕಾರಣವಾಗಿತ್ತು ಎಂಬುದು ಒಳ ಹೂರಣ ಎಂಬುದು ಬೇರೆಯ ಮಾತು.

ಆದರೆ ಇದೊಂದು ಸ್ತ್ರೀಶೋಷಣೆಯ ವಿಷಯ ಎಂದು ಸಾಕಷ್ಟು ಪ್ರಗತಿಪರ ಮಹಿಳೆಯರಿಗೆ ಎನಿಸಿದ್ದು ಸಹ ಅಷ್ಟೇ ಸಹಜವಾಗಿತ್ತು. ಅಲ್ಲಿನ ಕವಿಗೋಷ್ಠಿಗೆ ಆಹ್ವಾನವಿದ್ದ ಕವಯತ್ರಿಯೊಬ್ಬರು (ದಾಕ್ಷಾಯಿಣಿ ಹುಡೇದ) ಅಲ್ಲಿಯೇ ಕಾವ್ಯ ಹೊಸೆದು ತಮ್ಮ ಕವನದ ಮೂಲಕ ಪೂರ್ಣಕುಂಭವನ್ನು ಎತ್ತಿ ಬಿಸುಟಿದ್ದರು. ಅದು ಆ ಕವಯತ್ರಿಯ ಹೃದಯಾಂತರಾಳದಿಂದ ಬಂದ ಕ್ರಾಂತಿಯ ಸಹಜ ಕಿಡಿಯಾಗಿತ್ತು. ಯಾವುದೇ ಉದ್ದೇಶವಿಲ್ಲದೆ ಸಿಡಿದಿದ್ದ ಈ ಕಿಡಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿ ಪ್ರಮುಖ ಪತ್ರಿಕೆಗಳಲ್ಲಿ ವೈರಲ್ ಸುದ್ದಿಯಾಯಿತು.

ಇಂದಿನ ಹಾವೇರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳಿಗೆ ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ  ಕೆಲವು ಸಾಹಿತಿಗಳು ಭಾರೀ ಪ್ರತಿರೋಧ ವ್ಯಕ್ತಪಡಿಸಿ ಬೆಂಗಳೂರಿನಲ್ಲಿ ಪರ್ಯಾಯ ಸಮ್ಮೇಳನ ಏರ್ಪಡಿಸಿದ್ದಾರೆ. ಆದರೆ ೨೦೧೯ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ಣಕುಂಭ ಪ್ರಕರಣ ಮತ್ತದರ ಪ್ರತಿರೋಧ, ಪ್ರತಿರೋಧಕ್ಕೆ ಸಿಕ್ಕ ಬೆಂಬಲದ ನಿದರ್ಶನವಿದ್ದೂ ಕೂಡ ೨೦೨೩ರ ಹಾವೇರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪಕ್ಷಪಾತ ನಡೆಗೆ ಏಕೆ ಅಂತಹ ಪ್ರತಿರೋಧಕ್ಕೆ ಪ್ರತಿಭಟನಕಾರರು ಮುಂದಾಗಲಿಲ್ಲ?!

ಈ ಸಮ್ಮೇಳನದಲ್ಲಿ ಪ್ರತಿರೋಧಿ ಬಣದ ಸಾಕಷ್ಟು ಕವಿ ಕವಯತ್ರಿಯರು ಹಾಜರಿದ್ದರೂ ಯಾರೊಬ್ಬರೂ ಅಂತಹ ಒಂದು ಕ್ರಿಯಾಶೀಲ ಪ್ರತಿರೋಧದ ದನಿ ಎತ್ತಲಿಲ್ಲ! ಹೋಗಲಿ, ಕಾವ್ಯದ ಮೂಲಕವಲ್ಲದಿದ್ದರೂ ಮುಸ್ಲಿಂ ಸಾಹಿತಿಗಳಿಗೆ ಅವಕಾಶ ನೀಡಲಿಲ್ಲ ಎಂದು ತಮ್ಮ ವಸ್ತ್ರ ಸಂಹಿತೆ ಮೂಲಕವಾದರೂ ಏಕೆ ಪ್ರತಿಭಟನೆ ತೋರಲಿಲ್ಲ?

ಏಕೆಂದರೆ ಚುನಾವಣೆ ಬರಲಿದೆ!

ಇಲ್ಲಿ ಕಾವ್ಯದ ಮೂಲಕ ಪ್ರತಿರೋಧ ತೋರಿದರೆ ಅದೊಂದು ಸುದ್ದಿಯಾಗುತ್ತದೆಯೇ ಹೊರತು ಜನ ಸಂಘಟನೆ ಆಗದು. ಮೇಲಾಗಿ ಕಾವ್ಯದ ಮೂಲಕ ಪ್ರತಿರೋಧ ತೋರಲಾಗದಷ್ಟು ವಾಕ್ ಸ್ವಾತಂತ್ರ್ಯವನ್ನು ಈ ಡಬ್ಬಲ್ ಇಂಜಿನ್ ಸರ್ಕಾರದಲ್ಲಿ ಹತ್ತಿಕ್ಕಲಾಗಿದೆ ಎಂದು ಬಿಂಬಿಸಲೂ ಆಗದು. ಹಾಗಾಗಿ ಇದೇ ಸುವರ್ಣ ಅವಕಾಶವನ್ನು ಬಳಸಿ ಮತ್ತೊಮ್ಮೆ ವಾಕ್ ಸ್ವಾತಂತ್ರ್ಯ, ಬ್ರಾಹ್ಮಣ್ಯ ಹೇರಿಕೆ, ಅಲ್ಪ ಸಂಖ್ಯಾತರ ಶೋಷಣೆ ಎಕ್ಸೆಟ್ರಾ ಎಕ್ಸೆಟ್ರಾ ಎಕ್ಸೆಟ್ರಾ ಮಾಡಿ ಜನಸಂಘಟನೆಯ ಪ್ರಯತ್ನ ಮಾಡೋಣ ಎಂಬ ದೂರಾಲೋಚನೆ.

ಅದಕ್ಕೆ ಪೂರಕವಾಗಿ ಪರಿಷತ್ತಿನ ಅಧ್ಯಕ್ಷರ ಕೆಲವು ಐಲಾಟದ ನಡೆಗಳು, ಬೇಡಿಕೆಗಳು (ರಾಜತಾಂತ್ರಿಕ ಪಾಸ್ಪೋರ್ಟ್, ರಸ್ತೆ ಹೆಸರು ಬದಲಾವಣೆ, ಬೈಲಾ ತಿದ್ದುಪಡಿ) ಮುತಾದವು ವಿರೋಧಿಗಳಿಗೆ ಟ್ರೋಲ್ ಮಾಡಲು ಅವಕಾಶ ಕೊಟ್ಟವು. ಸಮ್ಮೇಳನದ ವಿಷಯವಾಗಿ "ವಿಗ್ ಮಹೇಶ, ಪೆಂಡಾಲ್ ಪುರುಷೋತ್ತಮ" ಎಂಬ ಸಿನೆಮಾ ಟೈಟಲ್ ಮಾದರಿ ಜೋಕುಗಳು ಎಲ್ಲೆಲ್ಲೂ "ಕುರಿಗಳು ಸಾರ್ ನಾವು ಕುರಿಗಳು" ಎಂದು "ಮುಸ್ಲಿಂ" ಸಾಹಿತಿಗಳಿಗೆ ಪ್ರಾಧಾನ್ಯತೆ ನೀಡದಿದ್ದರೂ ಕವಿವಾಣಿಯ ಭಾವಾರ್ಥವನ್ನು ಕರ್ನಾಟಕವಲ್ಲದೆ ವಿಶ್ವದಾದ್ಯಂತ ಅನುರಣಿಸಿದವು.

ಇನ್ನು ಹಾವೇರಿ ಸಮ್ಮೇಳನಕ್ಕೆ ಬಂದ ಸುಧಾ ನರಸಿಂಹರಾಜು ಅವರ ದಿಗ್ಬಂಧನ, ನಾ. ಡಿಸೋಜಾ ಅವರು ಪ್ರವೇಶ ಸಿಗದೆ ವಾಪಸ್ ಹೋದದ್ದು, ನೆಟ್ವರ್ಕ್ ಜಾಮ್, ಕವಿಯೊಬ್ಬ ಜೋಳಿಗೆಯಲ್ಲಿ ಬಾಟಲಿ ಎಂದು ಕ್ವಾರ್ಟರ್ ಬಾಟಲಿಯನ್ನು ಸರಜೂ ಕಾಟ್ಕರ್ ಅವರಿಗೆ ಕೊಟ್ಟದ್ದು, ಮಧ್ಯದಲ್ಲಿ ಅಧ್ಯಕ್ಷ ಜೋಶಿ ಬಂದು, 'ಇದೆಲ್ಲಾ ಮಾಡಬಾರದು' ಎಂದು ಕೈಯಾಡಿಸಿದ್ದು, ಎಕ್ಸೆಟ್ರಾ ಎಕ್ಸೆಟ್ರಾ ಎಕ್ಸೆಟ್ರಾ ಘಟನೆಗಳು "ಕನ್ನಡ ಸಾಹಿತ್ಯವೆಂದರೆ ಟ್ರೋಲ್" ಎಂಬ ಸಾಮಾಜಿಕ ಮಾಧ್ಯಮ ಸಿದ್ಧ ಸೂತ್ರವನ್ನು ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಯಶಸ್ವಿಯಾಗಿ ಸ್ಥಾಪಿಸಿದವು. ಒಟ್ಟಾರೆ ಈ ಸಮ್ಮೇಳನವು ಚುನಾವಣಾ-ಪೂರ್ವ ಆಡಳಿತ ಪಕ್ಷದ ಜನ ಸಂಘಟನೆ ಕಾರ್ಯಕ್ರಮದಂತೆ ಬಿಂಬಿತವಾಯಿತು.

ಸಾಹಿತ್ಯ ಸಮ್ಮೇಳನವು ಆಡಳಿತ ಪಕ್ಷದ ಜನ ಸಂಘಟನೆ ಎಂದ ಮೇಲೆ ಪ್ರಮುಖ ವಿರೋಧ ಪಕ್ಷದ ವಂಧಿಮಾಗಧ ಚಿಂತಕ ವರ್ಗವು ರಂಗಕ್ಕಿಳಿಯಲೇಬೇಕಲ್ಲವೇ!

ಹಾಗಾಗಿ, 'ಚುನಾವಣೆ ಹಿತದೃಷ್ಟಿಯಿಂದ ಜನಸಾಹಿತ್ಯ ಸಮಾವೇಶ ಮಾಡಿ ಪ್ರಚ್ಛನ್ನ ಕಾಂಗ್ರೆಸ್ಸಿಗರಾದ ನಾವೂ ಸಂಘಟನೆ ಮಾಡೋಣ' ಎಂಬ ಆಲೋಚನೆ ಸಮ್ಮಿಶ್ರ ಸಾಕ್ಷಿಪ್ರಜ್ಞೆ ವರ್ಗದ ಸಾಹಿತಿಗಳದ್ದು! ಈ ಚಿಂತನೆ ಮಾಜಿ ಮುಖ್ಯಮಂತ್ರಿಗಳ ಕರಾವಳಿ ಆಪ್ತರಿಗೆ ಬಂದದ್ದೇ ತಡ ದಿಲ್ಲಿಯಲ್ಲಿರುವ ತಮ್ಮ ಬಣದ ಮುಖವಾಣಿಯಿಂದ "ಬಾಯ್ಸ್ ಅಂಡ್ ಗ್ಯಾಲ್ಸ್ ಅಂಡ್ ನ್ಯೂಟ್ರಲ್ಸ್, ಗೆಟ್ ರೆಡಿ ಫಾರ್ ದ ಶೋ!" ಎಂದು ಫರ್ಮಾನು ಹೊರಟು ಪರ್ಯಾಯ ದನಿ ಎದ್ದು ಅದು ಬಾಯ್ಸ್ ಅಂಡ್ ಗ್ಯಾಲ್ಸ್ ಅಂಡ್ ನ್ಯೂಟ್ರಲ್ಸ್ ಗಳಲ್ಲಿ ಅನುರಣಿಸಿ ಪೆಂಡಾಲ್ ಸಿದ್ಧವಾಯಿತು. 

ಹೊಸ ಶೋ ಸಿದ್ಧವಾದರೂ ಅಲ್ಲಿ ಅದೇ ಹಳಸಲು "ರಾಜಪ್ರಭುತ್ವದ ಟಿಪ್ಪು ಮತ್ತು ರಾಜಪ್ರಭುತ್ವದ ವೈರುಧ್ಯದ ಸಂವಿಧಾನ", "ಧರ್ಮನಿರಪೇಕ್ಷತೆಗೆ ಜಯಕಾರ ಮತ್ತದರ ವೈರುಧ್ಯದ ಜಾತೀಯತೆಯ ಅಪ್ಪುಗೆ", "ಅಲ್ಲಿ ಪುಳ್ಚಾರು, ಇಲ್ಲಿ ಮೀನುಳಿ" ಎಕ್ಸೆಟ್ರಾ, ಎಕ್ಸೆಟ್ರಾ, ಎಕ್ಸೆಟ್ರಾ,.... ಹೀಗೆ ದ್ವಂದ್ವಗಳ ಮೆರವಣಿಗೆ! ಅಲ್ಲಿಯೂ ಕ್ರಿಯಾಶೀಲತೆ ಹಾರಿಹೋಗಿ ಟ್ರೋಲ್ ಎಂದೋ ಪ್ರತಿಷ್ಠಾಪನೆಗೊಂಡಿದೆ. ಈ ಟ್ರೋಲ್ ಸಾಹಿತ್ಯ ಸೃಷ್ಟಿಗೆ ಈ ಗುಂಪಿನಷ್ಟು ಕೊಡುಗೆ ಮತ್ಯಾರೂ ನೀಡಿಲ್ಲ ಎಂಬುದು ಪ್ರಾಮಾಣಿತವಾಗಿ ಟ್ರೋಲ್ ಇಲ್ಲಿ ಡೋಲಿನೊಂದಿಗೆ ವಿಜೃಂಭಿಸುತ್ತದೆ. ಮುಂದೆ ಈ ಟ್ರೋಲ್ ಮತ್ತು ಡೋಲನ್ನು ಜಿಲ್ಲಾ, ತಾಲ್ಲೂಕು, ಬೂತ್ ಮಟ್ಟಕ್ಕೆ ವಿಸ್ತರಿಸುವ ಘೋಷಣೆಯಾಗಿದೆ. ಒಟ್ಟಿನಲ್ಲಿ ಸಾಹಿತ್ಯ ಎಂಬುದು ಹಾವೇರಿ ಸಮ್ಮೇಳನದಲ್ಲಿಯೂ ಇಲ್ಲ, ಬೆಂಗಳೂರು ಸಮಾವೇಶದಲ್ಲಿಯೂ ಇರಲಿಲ್ಲ . ಸಾಹಿತ್ಯವಿರುವುದು ಕೇವಲ ಪುಸ್ತಕಗಳಲ್ಲಿ ಮಾತ್ರ. ಆಸಕ್ತರು ಕೊಂಡು ಓದಿ.

"ಧಾರವಾಡ ಸಮ್ಮೇಳನದಲ್ಲಿ ಸಹಜವಾಗಿ ಸಿಡಿದಿದ್ದ ಓರ್ವ ಪ್ರಾಥಮಿಕ ಶಾಲೆಯ ಸಹಶಿಕ್ಷಕಿಯ ಹೃದಯಾಂತರಾಳದ ಕಿಚ್ಚು, ವಿಶ್ವವಿದ್ಯಾಲಯಗಳ ಅಧ್ಯಯನ ವಿಭಾಗಗಳ ಮುಖ್ಯಸ್ಥರು, ಪ್ರೊಫೆಸರರು, ಕುಲಪತಿಗಳು, ಪತ್ರಕರ್ತರು, ಚಿಂತಕರು, ಸಾಕ್ಷಿಪ್ರಜ್ಞೆಗಳು, ಲಿಂಗಾತೀತರು ಎಕ್ಷೆಟ್ರಾ ಎಕ್ಷೆಟ್ರಾ ಎಕ್ಷೆಟ್ರಾಗಳಿಗೆ ಏಕಿಲ್ಲ?!?!" ಎಂಬ ಪ್ರಶ್ನೆ ಮಾತ್ರ ಜನಸಾಮಾನ್ಯರ ಮನದಲ್ಲಿ ಮೂಡುವುದೋ ಇಲ್ಲವೋ ಅದು ಸಾಮಾನ್ಯಪ್ರಜ್ಞೆಗೆ ಬಿಟ್ಟ ವಿಷಯ.

"ಉದ್ದೇಶರಹಿತವಾಗಿ ಶೋಷಿತರ ಮೈದಡವುವುದು ಅಪಾಯಕಾರಿ. ಉದ್ದೇಶಪೂರ್ವಕವಾಗಿ ಮೈದಡವುವುದು ಫಲಕಾರಿ. ಏಕೆಂದರೆ ಉದ್ದೇಶ ಇಟ್ಟುಕೊಂಡು ಮೈದಡವುವನ ಉದ್ದೇಶ ಏನೆಂದು ಗೊತ್ತಾಗುತ್ತದೆ. ಆದರೆ ಉದ್ದೇಶರಹಿತನ ನಡೆ ಗೊತ್ತಾಗದು" ಎಂಬರ್ಥದ ಬಂಡಾಯ ಸಾಹಿತಿಯೊಬ್ಬರ ಲೇಖನವನ್ನು ನಾನು ಎಂಬತ್ತರ ದಶಕದಲ್ಲಿ ಪಠ್ಯವಾಗಿ ಓದಿ, "ಅಂದರೆ ಸ್ನೇಹ, ಪ್ರೀತಿ, ಮಮತೆ, ಕಕ್ಕುಲಾತಿಯಿಂದ ಯಾರ ಮೈಯನ್ನೂ ತಟ್ಟಬಾರದೆ!?!" ಎಂದು ಬಾಲ ಸಹಜ ಮುಗ್ಧತೆಯಿಂದ ನಾನೂ ನನ್ನ ಸಹಪಾಠಿಗಳು ಆಶ್ಚರ್ಯಗೊಂಡಿದ್ದು ಏಕೋ ಇಂದು ಜನಸಾಹಿತ್ಯ ಸಂಘಟನೆಯು ನೆನಪಿಸಿತು!

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ