೨೦೧೯ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂದಿನ ಸಮ್ಮೇಳನಾಧ್ಯಕ್ಷರಾದ ಕಂಬಾರರನ್ನು ಪೂರ್ಣಕುಂಭ ಸ್ವಾಗತ ನೀಡಿ ಸ್ವಾಗತಿಸಿದ್ದನ್ನು ಖಂಡಿಸಲಾಗಿತ್ತು. ಈ ಖಂಡನೆಯ ಹಿಂದೆ ನಿಜ ಕಳಕಳಿಗಿಂತ ಕಂಬಾರ-ದ್ವೇಷ ಕಾರಣವಾಗಿತ್ತು ಎಂಬುದು ಒಳ ಹೂರಣ ಎಂಬುದು ಬೇರೆಯ ಮಾತು.
ಆದರೆ ಇದೊಂದು ಸ್ತ್ರೀಶೋಷಣೆಯ ವಿಷಯ ಎಂದು ಸಾಕಷ್ಟು ಪ್ರಗತಿಪರ ಮಹಿಳೆಯರಿಗೆ ಎನಿಸಿದ್ದು ಸಹ ಅಷ್ಟೇ ಸಹಜವಾಗಿತ್ತು. ಅಲ್ಲಿನ ಕವಿಗೋಷ್ಠಿಗೆ ಆಹ್ವಾನವಿದ್ದ ಕವಯತ್ರಿಯೊಬ್ಬರು (ದಾಕ್ಷಾಯಿಣಿ ಹುಡೇದ) ಅಲ್ಲಿಯೇ ಕಾವ್ಯ ಹೊಸೆದು ತಮ್ಮ ಕವನದ ಮೂಲಕ ಪೂರ್ಣಕುಂಭವನ್ನು ಎತ್ತಿ ಬಿಸುಟಿದ್ದರು. ಅದು ಆ ಕವಯತ್ರಿಯ ಹೃದಯಾಂತರಾಳದಿಂದ ಬಂದ ಕ್ರಾಂತಿಯ ಸಹಜ ಕಿಡಿಯಾಗಿತ್ತು. ಯಾವುದೇ ಉದ್ದೇಶವಿಲ್ಲದೆ ಸಿಡಿದಿದ್ದ ಈ ಕಿಡಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿ ಪ್ರಮುಖ ಪತ್ರಿಕೆಗಳಲ್ಲಿ ವೈರಲ್ ಸುದ್ದಿಯಾಯಿತು.
ಇಂದಿನ ಹಾವೇರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳಿಗೆ ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಕೆಲವು ಸಾಹಿತಿಗಳು ಭಾರೀ ಪ್ರತಿರೋಧ ವ್ಯಕ್ತಪಡಿಸಿ ಬೆಂಗಳೂರಿನಲ್ಲಿ ಪರ್ಯಾಯ ಸಮ್ಮೇಳನ ಏರ್ಪಡಿಸಿದ್ದಾರೆ. ಆದರೆ ೨೦೧೯ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ಣಕುಂಭ ಪ್ರಕರಣ ಮತ್ತದರ ಪ್ರತಿರೋಧ, ಪ್ರತಿರೋಧಕ್ಕೆ ಸಿಕ್ಕ ಬೆಂಬಲದ ನಿದರ್ಶನವಿದ್ದೂ ಕೂಡ ೨೦೨೩ರ ಹಾವೇರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪಕ್ಷಪಾತ ನಡೆಗೆ ಏಕೆ ಅಂತಹ ಪ್ರತಿರೋಧಕ್ಕೆ ಪ್ರತಿಭಟನಕಾರರು ಮುಂದಾಗಲಿಲ್ಲ?!
ಈ ಸಮ್ಮೇಳನದಲ್ಲಿ ಪ್ರತಿರೋಧಿ ಬಣದ ಸಾಕಷ್ಟು ಕವಿ ಕವಯತ್ರಿಯರು ಹಾಜರಿದ್ದರೂ ಯಾರೊಬ್ಬರೂ ಅಂತಹ ಒಂದು ಕ್ರಿಯಾಶೀಲ ಪ್ರತಿರೋಧದ ದನಿ ಎತ್ತಲಿಲ್ಲ! ಹೋಗಲಿ, ಕಾವ್ಯದ ಮೂಲಕವಲ್ಲದಿದ್ದರೂ ಮುಸ್ಲಿಂ ಸಾಹಿತಿಗಳಿಗೆ ಅವಕಾಶ ನೀಡಲಿಲ್ಲ ಎಂದು ತಮ್ಮ ವಸ್ತ್ರ ಸಂಹಿತೆ ಮೂಲಕವಾದರೂ ಏಕೆ ಪ್ರತಿಭಟನೆ ತೋರಲಿಲ್ಲ?
ಏಕೆಂದರೆ ಚುನಾವಣೆ ಬರಲಿದೆ!
ಇಲ್ಲಿ ಕಾವ್ಯದ ಮೂಲಕ ಪ್ರತಿರೋಧ ತೋರಿದರೆ ಅದೊಂದು ಸುದ್ದಿಯಾಗುತ್ತದೆಯೇ ಹೊರತು ಜನ ಸಂಘಟನೆ ಆಗದು. ಮೇಲಾಗಿ ಕಾವ್ಯದ ಮೂಲಕ ಪ್ರತಿರೋಧ ತೋರಲಾಗದಷ್ಟು ವಾಕ್ ಸ್ವಾತಂತ್ರ್ಯವನ್ನು ಈ ಡಬ್ಬಲ್ ಇಂಜಿನ್ ಸರ್ಕಾರದಲ್ಲಿ ಹತ್ತಿಕ್ಕಲಾಗಿದೆ ಎಂದು ಬಿಂಬಿಸಲೂ ಆಗದು. ಹಾಗಾಗಿ ಇದೇ ಸುವರ್ಣ ಅವಕಾಶವನ್ನು ಬಳಸಿ ಮತ್ತೊಮ್ಮೆ ವಾಕ್ ಸ್ವಾತಂತ್ರ್ಯ, ಬ್ರಾಹ್ಮಣ್ಯ ಹೇರಿಕೆ, ಅಲ್ಪ ಸಂಖ್ಯಾತರ ಶೋಷಣೆ ಎಕ್ಸೆಟ್ರಾ ಎಕ್ಸೆಟ್ರಾ ಎಕ್ಸೆಟ್ರಾ ಮಾಡಿ ಜನಸಂಘಟನೆಯ ಪ್ರಯತ್ನ ಮಾಡೋಣ ಎಂಬ ದೂರಾಲೋಚನೆ.
ಅದಕ್ಕೆ ಪೂರಕವಾಗಿ ಪರಿಷತ್ತಿನ ಅಧ್ಯಕ್ಷರ ಕೆಲವು ಐಲಾಟದ ನಡೆಗಳು, ಬೇಡಿಕೆಗಳು (ರಾಜತಾಂತ್ರಿಕ ಪಾಸ್ಪೋರ್ಟ್, ರಸ್ತೆ ಹೆಸರು ಬದಲಾವಣೆ, ಬೈಲಾ ತಿದ್ದುಪಡಿ) ಮುತಾದವು ವಿರೋಧಿಗಳಿಗೆ ಟ್ರೋಲ್ ಮಾಡಲು ಅವಕಾಶ ಕೊಟ್ಟವು. ಸಮ್ಮೇಳನದ ವಿಷಯವಾಗಿ "ವಿಗ್ ಮಹೇಶ, ಪೆಂಡಾಲ್ ಪುರುಷೋತ್ತಮ" ಎಂಬ ಸಿನೆಮಾ ಟೈಟಲ್ ಮಾದರಿ ಜೋಕುಗಳು ಎಲ್ಲೆಲ್ಲೂ "ಕುರಿಗಳು ಸಾರ್ ನಾವು ಕುರಿಗಳು" ಎಂದು "ಮುಸ್ಲಿಂ" ಸಾಹಿತಿಗಳಿಗೆ ಪ್ರಾಧಾನ್ಯತೆ ನೀಡದಿದ್ದರೂ ಕವಿವಾಣಿಯ ಭಾವಾರ್ಥವನ್ನು ಕರ್ನಾಟಕವಲ್ಲದೆ ವಿಶ್ವದಾದ್ಯಂತ ಅನುರಣಿಸಿದವು.
ಇನ್ನು ಹಾವೇರಿ ಸಮ್ಮೇಳನಕ್ಕೆ ಬಂದ ಸುಧಾ ನರಸಿಂಹರಾಜು ಅವರ ದಿಗ್ಬಂಧನ, ನಾ. ಡಿಸೋಜಾ ಅವರು ಪ್ರವೇಶ ಸಿಗದೆ ವಾಪಸ್ ಹೋದದ್ದು, ನೆಟ್ವರ್ಕ್ ಜಾಮ್, ಕವಿಯೊಬ್ಬ ಜೋಳಿಗೆಯಲ್ಲಿ ಬಾಟಲಿ ಎಂದು ಕ್ವಾರ್ಟರ್ ಬಾಟಲಿಯನ್ನು ಸರಜೂ ಕಾಟ್ಕರ್ ಅವರಿಗೆ ಕೊಟ್ಟದ್ದು, ಮಧ್ಯದಲ್ಲಿ ಅಧ್ಯಕ್ಷ ಜೋಶಿ ಬಂದು, 'ಇದೆಲ್ಲಾ ಮಾಡಬಾರದು' ಎಂದು ಕೈಯಾಡಿಸಿದ್ದು, ಎಕ್ಸೆಟ್ರಾ ಎಕ್ಸೆಟ್ರಾ ಎಕ್ಸೆಟ್ರಾ ಘಟನೆಗಳು "ಕನ್ನಡ ಸಾಹಿತ್ಯವೆಂದರೆ ಟ್ರೋಲ್" ಎಂಬ ಸಾಮಾಜಿಕ ಮಾಧ್ಯಮ ಸಿದ್ಧ ಸೂತ್ರವನ್ನು ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಯಶಸ್ವಿಯಾಗಿ ಸ್ಥಾಪಿಸಿದವು. ಒಟ್ಟಾರೆ ಈ ಸಮ್ಮೇಳನವು ಚುನಾವಣಾ-ಪೂರ್ವ ಆಡಳಿತ ಪಕ್ಷದ ಜನ ಸಂಘಟನೆ ಕಾರ್ಯಕ್ರಮದಂತೆ ಬಿಂಬಿತವಾಯಿತು.
ಸಾಹಿತ್ಯ ಸಮ್ಮೇಳನವು ಆಡಳಿತ ಪಕ್ಷದ ಜನ ಸಂಘಟನೆ ಎಂದ ಮೇಲೆ ಪ್ರಮುಖ ವಿರೋಧ ಪಕ್ಷದ ವಂಧಿಮಾಗಧ ಚಿಂತಕ ವರ್ಗವು ರಂಗಕ್ಕಿಳಿಯಲೇಬೇಕಲ್ಲವೇ!
ಹಾಗಾಗಿ, 'ಚುನಾವಣೆ ಹಿತದೃಷ್ಟಿಯಿಂದ ಜನಸಾಹಿತ್ಯ ಸಮಾವೇಶ ಮಾಡಿ ಪ್ರಚ್ಛನ್ನ ಕಾಂಗ್ರೆಸ್ಸಿಗರಾದ ನಾವೂ ಸಂಘಟನೆ ಮಾಡೋಣ' ಎಂಬ ಆಲೋಚನೆ ಸಮ್ಮಿಶ್ರ ಸಾಕ್ಷಿಪ್ರಜ್ಞೆ ವರ್ಗದ ಸಾಹಿತಿಗಳದ್ದು! ಈ ಚಿಂತನೆ ಮಾಜಿ ಮುಖ್ಯಮಂತ್ರಿಗಳ ಕರಾವಳಿ ಆಪ್ತರಿಗೆ ಬಂದದ್ದೇ ತಡ ದಿಲ್ಲಿಯಲ್ಲಿರುವ ತಮ್ಮ ಬಣದ ಮುಖವಾಣಿಯಿಂದ "ಬಾಯ್ಸ್ ಅಂಡ್ ಗ್ಯಾಲ್ಸ್ ಅಂಡ್ ನ್ಯೂಟ್ರಲ್ಸ್, ಗೆಟ್ ರೆಡಿ ಫಾರ್ ದ ಶೋ!" ಎಂದು ಫರ್ಮಾನು ಹೊರಟು ಪರ್ಯಾಯ ದನಿ ಎದ್ದು ಅದು ಬಾಯ್ಸ್ ಅಂಡ್ ಗ್ಯಾಲ್ಸ್ ಅಂಡ್ ನ್ಯೂಟ್ರಲ್ಸ್ ಗಳಲ್ಲಿ ಅನುರಣಿಸಿ ಪೆಂಡಾಲ್ ಸಿದ್ಧವಾಯಿತು.
ಹೊಸ ಶೋ ಸಿದ್ಧವಾದರೂ ಅಲ್ಲಿ ಅದೇ ಹಳಸಲು "ರಾಜಪ್ರಭುತ್ವದ ಟಿಪ್ಪು ಮತ್ತು ರಾಜಪ್ರಭುತ್ವದ ವೈರುಧ್ಯದ ಸಂವಿಧಾನ", "ಧರ್ಮನಿರಪೇಕ್ಷತೆಗೆ ಜಯಕಾರ ಮತ್ತದರ ವೈರುಧ್ಯದ ಜಾತೀಯತೆಯ ಅಪ್ಪುಗೆ", "ಅಲ್ಲಿ ಪುಳ್ಚಾರು, ಇಲ್ಲಿ ಮೀನುಳಿ" ಎಕ್ಸೆಟ್ರಾ, ಎಕ್ಸೆಟ್ರಾ, ಎಕ್ಸೆಟ್ರಾ,.... ಹೀಗೆ ದ್ವಂದ್ವಗಳ ಮೆರವಣಿಗೆ! ಅಲ್ಲಿಯೂ ಕ್ರಿಯಾಶೀಲತೆ ಹಾರಿಹೋಗಿ ಟ್ರೋಲ್ ಎಂದೋ ಪ್ರತಿಷ್ಠಾಪನೆಗೊಂಡಿದೆ. ಈ ಟ್ರೋಲ್ ಸಾಹಿತ್ಯ ಸೃಷ್ಟಿಗೆ ಈ ಗುಂಪಿನಷ್ಟು ಕೊಡುಗೆ ಮತ್ಯಾರೂ ನೀಡಿಲ್ಲ ಎಂಬುದು ಪ್ರಾಮಾಣಿತವಾಗಿ ಟ್ರೋಲ್ ಇಲ್ಲಿ ಡೋಲಿನೊಂದಿಗೆ ವಿಜೃಂಭಿಸುತ್ತದೆ. ಮುಂದೆ ಈ ಟ್ರೋಲ್ ಮತ್ತು ಡೋಲನ್ನು ಜಿಲ್ಲಾ, ತಾಲ್ಲೂಕು, ಬೂತ್ ಮಟ್ಟಕ್ಕೆ ವಿಸ್ತರಿಸುವ ಘೋಷಣೆಯಾಗಿದೆ. ಒಟ್ಟಿನಲ್ಲಿ ಸಾಹಿತ್ಯ ಎಂಬುದು ಹಾವೇರಿ ಸಮ್ಮೇಳನದಲ್ಲಿಯೂ ಇಲ್ಲ, ಬೆಂಗಳೂರು ಸಮಾವೇಶದಲ್ಲಿಯೂ ಇರಲಿಲ್ಲ . ಸಾಹಿತ್ಯವಿರುವುದು ಕೇವಲ ಪುಸ್ತಕಗಳಲ್ಲಿ ಮಾತ್ರ. ಆಸಕ್ತರು ಕೊಂಡು ಓದಿ.
"ಧಾರವಾಡ ಸಮ್ಮೇಳನದಲ್ಲಿ ಸಹಜವಾಗಿ ಸಿಡಿದಿದ್ದ ಓರ್ವ ಪ್ರಾಥಮಿಕ ಶಾಲೆಯ ಸಹಶಿಕ್ಷಕಿಯ ಹೃದಯಾಂತರಾಳದ ಕಿಚ್ಚು, ವಿಶ್ವವಿದ್ಯಾಲಯಗಳ ಅಧ್ಯಯನ ವಿಭಾಗಗಳ ಮುಖ್ಯಸ್ಥರು, ಪ್ರೊಫೆಸರರು, ಕುಲಪತಿಗಳು, ಪತ್ರಕರ್ತರು, ಚಿಂತಕರು, ಸಾಕ್ಷಿಪ್ರಜ್ಞೆಗಳು, ಲಿಂಗಾತೀತರು ಎಕ್ಷೆಟ್ರಾ ಎಕ್ಷೆಟ್ರಾ ಎಕ್ಷೆಟ್ರಾಗಳಿಗೆ ಏಕಿಲ್ಲ?!?!" ಎಂಬ ಪ್ರಶ್ನೆ ಮಾತ್ರ ಜನಸಾಮಾನ್ಯರ ಮನದಲ್ಲಿ ಮೂಡುವುದೋ ಇಲ್ಲವೋ ಅದು ಸಾಮಾನ್ಯಪ್ರಜ್ಞೆಗೆ ಬಿಟ್ಟ ವಿಷಯ.
"ಉದ್ದೇಶರಹಿತವಾಗಿ ಶೋಷಿತರ ಮೈದಡವುವುದು ಅಪಾಯಕಾರಿ. ಉದ್ದೇಶಪೂರ್ವಕವಾಗಿ ಮೈದಡವುವುದು ಫಲಕಾರಿ. ಏಕೆಂದರೆ ಉದ್ದೇಶ ಇಟ್ಟುಕೊಂಡು ಮೈದಡವುವನ ಉದ್ದೇಶ ಏನೆಂದು ಗೊತ್ತಾಗುತ್ತದೆ. ಆದರೆ ಉದ್ದೇಶರಹಿತನ ನಡೆ ಗೊತ್ತಾಗದು" ಎಂಬರ್ಥದ ಬಂಡಾಯ ಸಾಹಿತಿಯೊಬ್ಬರ ಲೇಖನವನ್ನು ನಾನು ಎಂಬತ್ತರ ದಶಕದಲ್ಲಿ ಪಠ್ಯವಾಗಿ ಓದಿ, "ಅಂದರೆ ಸ್ನೇಹ, ಪ್ರೀತಿ, ಮಮತೆ, ಕಕ್ಕುಲಾತಿಯಿಂದ ಯಾರ ಮೈಯನ್ನೂ ತಟ್ಟಬಾರದೆ!?!" ಎಂದು ಬಾಲ ಸಹಜ ಮುಗ್ಧತೆಯಿಂದ ನಾನೂ ನನ್ನ ಸಹಪಾಠಿಗಳು ಆಶ್ಚರ್ಯಗೊಂಡಿದ್ದು ಏಕೋ ಇಂದು ಜನಸಾಹಿತ್ಯ ಸಂಘಟನೆಯು ನೆನಪಿಸಿತು!
#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ
No comments:
Post a Comment