ಅಮೇರಿಕಾದಲ್ಲಿ ಘೋರ ಹಿಮಪಾತ! ಚಳಿಗೆ ತತ್ತರಿಸಿ ಸತ್ತ ಅಮೇರಿಕನ್ನರು! ಅಮೇರಿಕಾದಲ್ಲಿ ನೀರಿಲ್ಲ, ಕರೆಂಟಿಲ್ಲ! ಇತ್ಯಾದಿ ಸುದ್ದಿಗಳನ್ನು ಭಾರತೀಯ ದೂರವಾಹಿನಿಗಳಲ್ಲಿ ಕಂಡ ನನ್ನ ಸ್ನೇಹಿತರು ಬಂಧುಗಳು ಕರೆಮಾಡಿ, ಮೆಸೇಜ್ ಮಾಡಿ ನನ್ನ ಕ್ಷೇಮ ಕುಶಲೋಪರಿಯನ್ನು ಕಳೆದೆರಡು ದಿನಗಳಿಂದ ವಿಚಾರಿಸತೊಡಗಿದ್ದಾರೆ. ಅವರ ವಿಡಿಯೋ ಕರೆಗೆ ನಾನು ಇಲ್ಲಿ ಕರೆಂಟ್ ಇರುವುದನ್ನು, ನೀರು ಬರುವುದನ್ನು ತೋರಿಸಿ, ಹೊರಗಡೆ ಹಿಮವಿದ್ದರೂ ರಸ್ತೆಯಲ್ಲಿ ಕಾರುಗಳು ಓಡಾಡುವುದನ್ನು ತೋರಿಸಿದಾಗ ಅವರ ರೋಚಕತೆಗೆ ಐಸ್ ಕೋಲ್ಡ್ ನೀರೆರಚಿದಂತಾಯಿತು.
ಅಂದರೆ ಭಾರತೀಯ ದೂರವಾಹಿನಿಗಳಲ್ಲಿ ತೋರಿಸಿದಷ್ಟು ಅಮೇರಿಕಾದಲ್ಲಿ ಚಳಿ, ಹಿಮಪಾತ, ಸಾವುಗಳು, ನೀರಿಲ್ಲದ್ದು ಕರೆಂಟಿಲ್ಲದ್ದು ಸುಳ್ಳೇ?!?
ಐವತ್ತು ರಾಜ್ಯಗಳ ಅಮೇರಿಕಾದ ಅರ್ಧಕ್ಕೂ ಹೆಚ್ಚು ರಾಜ್ಯಗಳಲ್ಲಿ ಹಿಮಪಾತ ಇರುತ್ತದೆ. ಕೆಲವು ರಾಜ್ಯಗಳಲ್ಲಿ ಹಿಮಪಾತವು ಗರಿಷ್ಠವಿದ್ದರೆ ಕೆಲವು ರಾಜ್ಯಗಳಲ್ಲಿ ಕನಿಷ್ಟವಿರುತ್ತದೆ. ಕನಿಷ್ಟ ಹಿಮಪಾತದ ರಾಜ್ಯಗಳಲ್ಲಿ ಬಿದ್ದ ಹಿಮವು ಒಂದೆರಡು ದಿನದಲ್ಲಿ ಕರಗಿ ಹೋದರೆ, ಅಧಿಕ ಹಿಮಪಾತದ ರಾಜ್ಯಗಳಲ್ಲಿ ಉಷ್ಣಾಂಶದ ಆಧಾರಿತವಾಗಿ ವಾರ, ತಿಂಗಳುಗಟ್ಟಲೆ ಎಲ್ಲೆಡೆ ನೆಲದ ಮೇಲೆ ಹಾಸಿರುತ್ತದೆ. ಆದರೆ ಇಂತಹ ರಾಜ್ಯಗಳು ಹಿಮವನ್ನು ರಸ್ತೆ, ಪಾದಚಾರಿ ರಸ್ತೆ ಮುಂತಾದ ಸಾರ್ವಜನಿಕ ಸ್ಥಳಗಳನ್ನು ಅತಿ ಶೀಘ್ರವಾಗಿ ಗುಡಿಸಿ ಮುಕ್ತವಾಗಿರಿಸುತ್ತವೆ. ಅಂತಹ ಪ್ರಮುಖ ನಗರಗಳು ಶಿಕಾಗೋ, ಬಾಸ್ಟನ್, ನ್ಯೂಯಾರ್ಕ್, ಮಿನಿಯಾಪೊಲಿಸ್ ಇತ್ಯಾದಿ. ಇಂತಹ ರಾಜ್ಯಗಳಲ್ಲಿ ಉಷ್ಣಾಂಶ ಚಳಿಗಾಲದ ಕೆಲವು ದಿನಗಳಲ್ಲಿ ಮೈನಸ್ ಹತ್ತರಿಂದ ಮೈನಸ್ ಇಪ್ಪತ್ತೈದು ಒಮ್ಮೊಮ್ಮೆ ಮೈನಸ್ ನಲವತ್ತು ಡಿಗ್ರಿ ಸೆಲ್ಸಿಯಸ್ಸಿಗೆ ಇಳಿಯುವುದು ಸರ್ವೇಸಾಮಾನ್ಯ. ಅದರಲ್ಲೂ ಹಿಮಪಾತ ಮತ್ತು ಕುಸಿದ ಉಷ್ಣಾಂಶ ಡಿಸೆಂಬರ್ ಕೊನೆಯಿಂದ ಫೆಬ್ರುವರಿ ಕೊನೆಯವರೆಗೆ ಇದ್ದೇ ಇರುತ್ತದೆ. ಇದರಲ್ಲಿ ಅಂತಹ ವಿಶೇಷವೇನೂ ಇಲ್ಲ.
ಹಾಗಿದ್ದರೆ ಅಮೇರಿಕಾದಲ್ಲಿ ಸಾಮಾನ್ಯ ಎನಿಸುವ ಇಂತಹ ಚಳಿಗಾಲದ ಸಂಗತಿ ಈಗ ಇಷ್ಟೊಂದು ಸುದ್ದಿಯಾದದ್ದು ಏಕೆ?
ಈ ಸುದ್ದಿಯ ಕೇಂದ್ರಬಿಂದು ವಿಶ್ವವಿಖ್ಯಾತ ನಯಾಗರಾ ಜಲಪಾತವಿರುವ ಬಫಲೋ ಪ್ರದೇಶ. ಈ ಪ್ರದೇಶದಲ್ಲಿ ತೀವ್ರ ಚಳಿ ಮತ್ತು ಅತಿ ಹಿಮಪಾತ ಸರ್ವೇಸಾಮಾನ್ಯವಾದರೂ ಈ ಬಾರಿ ಎಡೆಬಿಡದೆ ಸತತ ಮೂವತ್ತೇಳು ಗಂಟೆಗಳ ಕಾಲ ಹಿಮಪಾತವಾದದ್ದು ಪ್ರಮುಖ ಕಾರಣ. ಅಲ್ಲದೆ ಅದಕ್ಕೂ ಮುಂಚೆ ಲಘುವಾಗಿ ಮಳೆ ಬಂದು, ಉಷ್ಣಾಂಶ ಕುಸಿದು ಆ ಮಳೆನೀರು ರಸ್ತೆಗಳನ್ನು ಲ್ಯಾಮಿನೇಟ್ ಮಾಡಿದಂತೆ ತೆಳ್ಳನೆಯ ಐಸಿನಿಂದ ಆವರಿಸಿಕೊಂಡಿತ್ತು. ಇದನ್ನು ಬ್ಲ್ಯಾಕ್ ಐಸ್ ಎನ್ನುತ್ತಾರೆ. ಏಕೆಂದರೆ ಮಳೆನೀರು ಪಾರದರ್ಶಕ ಐಸ್ ಆಗಿ ರಸ್ತೆಯನ್ನು ಆವರಿಸಿಕೊಂಡಾಗ ಅದು ರಸ್ತೆಯ ಡಾಂಬರ್ ಬಣ್ಣವನ್ನೇ ಪ್ರತಿಫಲಿಸಿ ಕಪ್ಪಾಗಿ ಕಾಣುವುದರಿಂದ ಬ್ಲ್ಯಾಕ್ ಐಸ್ ಎನ್ನುತ್ತಾರೆ. ಇದು ಕಣ್ಣಿಗೆ ಕಾಣದೆ ವಾಹನ ಚಾಲಕರು ನಿಯಂತ್ರಣ ತಪ್ಪಿ ಸಾಕಷ್ಟು ಅಪಘಾತಗಳು ಸಂಭವಿಸುತ್ತವೆ. ಈ ಕಪ್ಪು ಮಂಜನ್ನು ನಿಭಾಯಿಸುವಲ್ಲಿ ನಗರಾಡಳಿತವು ನಿರತವಾಗಿದ್ದಾಗ ಗಾಯದ ಮೇಲೆ ಉಪ್ಪು ಸುರಿವಂತೆ ಅತಿ ಹಿಮಪಾತ ಆರಂಭವಾಗಿತ್ತು.
ಮೇಲಾಗಿ ಅಲ್ಲಿನ ಕೆಲವು ನಿವಾಸಿಗಳು ಸಹಜವಾಗಿ ’ಇದು ಪ್ರತಿವರ್ಷವೂ ನೋಡುತ್ತೇವಲ್ಲ, ಅದೇ ರೀತಿ’ ಎಂದು ಉದಾಸೀನ ತೋರಿ ತಮ್ಮ ಎಂದಿನ ಚಟುವಟಿಕೆಗಳನ್ನು ಮುಂದುವರಿಸಿದರು. ಕ್ರಿಸ್ಮಸ್ ಹಬ್ಬದ ಭರಾಟೆ, ಜನಜಂಗುಳಿಗಳೆಲ್ಲಾ ಸೇರಿ ಕೆಲವರು ಈ ಹಿಮದಲ್ಲಿ ಸಿಲುಕುವಂತಾಯಿತು. ಹೀಗೆ ಸಿಲುಕಿದವರಲ್ಲಿ ಕೆಲವರು ಸಾವಿಗೀಡಾದರು. ಒಟ್ಟಾರೆ ಈ ಹಿಮಪಾತದಲ್ಲಿ ಸತ್ತವರ ಸಂಖ್ಯೆ ೩೪ಕ್ಕೆ ಬಂದು ನಿಂತಿದೆ.
ಅತ್ಯಂತ ಕ್ಷಿಪ್ರವಾಗಿ ಮತ್ತು ಸತತವಾಗಿ ನಾಲ್ಕು ಅಡಿಗಳಷ್ಟು ಬಿದ್ದ ಹಿಮವನ್ನು ಅದು ಬಿದ್ದಷ್ಟೇ ತ್ವರಿತವಾಗಿ ತೆರವು ಮಾಡಲು ಅಲ್ಲಿನ ಆಡಳಿತಕ್ಕೆ ಸಾಧ್ಯವಾಗದೆ ಸಮಸ್ಯೆಗಳು ತಲೆ ಎತ್ತಿದವು. ಕೆಲವೆಡೆ ಗುಡಿಸಿದ್ದಕ್ಕಿಂತಲೂ ವೇಗವಾಗಿ ಹಿಮ ಬಿದ್ದು ಗುಡಿಸಿದ್ದು ವ್ಯರ್ಥವಾಯಿತು. ಕುಸಿದ ತಾಪಮಾನದ ಕಾರಣ ಹತ್ತಿಯಂತಿದ್ದ ಹಿಮವು ಬೇಗ ಕಲ್ಲಾಗತೊಡಗಿತ್ತು. ಹೆಚ್ಚಿನ ಸಹಾಯಕ್ಕೆ ಬೇರೆಡೆಯಿಂದ ತರಿಸಿದ ಹಿಮ ಗುಡಿಸುವ ವಾಹನಗಳು ಸಕಾಲದಲ್ಲಿ ಬಫಲೋ ಪ್ರದೇಶವನ್ನು ತಲುಪಲಾಗದೆ ಹಿಮದ ಗುಡ್ಡಗಳು ನಿರ್ಮಾಣವಾದವು. ಈ ಗುಡ್ಡಗಳನ್ನು ಗುಡಿಸದೆ ಕೆಲವು ತುರ್ತುಕರೆಗಳಿಗೆ ಸಕಾಲಕ್ಕೆ ಸ್ಪಂದಿಸಲು ಪೊಲೀಸರಿಗೆ, ಆಂಬುಲೆನ್ಸ್ ಸೇವೆಗೆ ಆಗಲಿಲ್ಲ.
ಇನ್ನು ಇದರ ಮೇಲೆ ಗಂಟೆಗೆ ಎಪ್ಪತ್ತು ಮೈಲಿ ವೇಗದಲ್ಲಿ ಬೀಸುತ್ತಿದ್ದ ಕುಳಿರ್ಗಾಳಿಯು ಹಿಮದಲ್ಲಿ ಸಿಲುಕಿದವರ ತುರ್ತುಸ್ಥಿತಿಗೆ ಹೆಲಿಕಾಪ್ಟರ್ ಬಳಕೆಯಾಗದಂತೆ ತಡೆಯೊಡ್ಡಿತು. ಇದೇ ಗಾಳಿಯು ಕೆಲವೆಡೆ ವಿದ್ಯುತ್ ಕಂಬಗಳನ್ನು ಉರುಳಿಸಿ ಸರಬರಾಜಿನಲ್ಲಿ ತೊಂದರೆಯುಂಟಾಗಿ ಅಲ್ಲಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಅದರಂತೆಯೇ ಕೆಲವೆಡೆ ನೀರಿನ ಪೈಪುಗಳು ಸರಿಯಾದ ಉಷ್ಣಾಂಶ ಸಿಗದೆ ಪೈಪಿನೊಳಗಿನ ನೀರು ಮಂಜುಗಡ್ಡೆಯಾಗಿ ಒಡೆದುಕೊಂಡವು. ಮುಂದೆ ನಡೆದದ್ದನ್ನು ನೀವು ಮಾಧ್ಯಮದಲ್ಲಿ ಕಂಡಿದ್ದೀರಿ.
ಆದರೆ ಇದೆಲ್ಲವೂ ಇಡೀ ಅಮೇರಿಕಾದಲ್ಲಿ ನಡೆದಿದ್ದಲ್ಲ, ಬಫಲೋ ಪ್ರದೇಶದ ಸುತ್ತಮುತ್ತ ಮಾತ್ರ! ಶಿಕಾಗೋ, ಬಾಸ್ಟನ್, ಮಿನಿಯಾಪೊಲಿಸ್, ನ್ಯೂಯಾರ್ಕ್ ಮುಂತಾದ ಕಡೆ ಹಿಮಪಾತ, ಕುಳಿರ್ಗಾಳಿ, ಕುಸಿದ ಉಷ್ಣಾಂಶವಿದ್ದರೂ ಬಫ಼ಲೋ ಪ್ರದೇಶದಷ್ಟು ತೀವ್ರವಾಗಿರದೆ ಮತ್ತೊಂದು ಚಳಿಗಾಲದ ವಾತಾವರಣದಂತೆಯೇ ಇತ್ತು, ಇದೆ. ಬಫಲೋ ಸಹ ಹೀಗೆಯೇ ಇರುತ್ತಿತ್ತು. ಆದರೆ ಕ್ರಿಸ್ಮಸ್ ರಜೆಯ ಕಾರಣ ಜನರು ಸುತ್ತಾಟಕ್ಕೆ ತೆರಳಿಯೋ, ಪರ ಊರುಗಳಿಂದ ಬಫಲೋಗೆ ಬರುವ ಅಥವಾ ಹಾದು ಹೋಗುವ ಮಾರ್ಗಮಧ್ಯೆ ಈ ಹಿಮಪಾತದಲ್ಲಿ ಸಿಲುಕಿ ಈ ಅವಘಡಕ್ಕೆ ಬಲಿಯಾಗಿದ್ದಾರೆ.
ಇನ್ನು ಹವಾಮಾನ ವೈಪರೀತ್ಯದಿಂದ ವಿಮಾನಗಳು ರದ್ದಾಗುವುದು, ಸಂಚಾರದಲ್ಲಿ ವ್ಯತ್ಯಯ ಉಂಟಾಗುವುದು ಹಿಮಪಾತದ ದಿನಗಳಲ್ಲಿ ಸರ್ವೇಸಾಮಾನ್ಯ. ಅದರಲ್ಲೂ ಕುಸಿದ ತಾಪಮಾನವಿದ್ದಾಗ ವಿಮಾನದ ಮೇಲೆ ಬೀಳುವ ಮಂಜು ಗಡ್ಡೆಗಟ್ಟುವುದು, ಅದನ್ನು ಕೆರೆಯುವುದು, ಕೆರೆಯುವುದು ಮುಗಿಯಿತೆಂದುಕೊಳ್ಳುವಾಗ ಮತ್ತೆ ಮತ್ತೆ ಗಡ್ಡೆಗಟ್ಟುವುದು ಇದೆಲ್ಲವೂ ಚಳಿಗಾಲದ ವಿಮಾನಯಾನ ಸಮಸ್ಯೆಗಳೇ ಆಗಿವೆ. ಅದರಲ್ಲೂ ಕ್ರಿಸ್ಮಸ್ ವರ್ಷಾಂತ್ಯದ ರಜೆಗಳ ಪ್ರಯಾಣದ ಭರಾಟೆಯಲ್ಲಿ ಹೀಗಾಗುವುದು ಸಹಜವಾಗಿ ಹೆಚ್ಚು ಸುದ್ದಿಯಾಗುತ್ತದೆ.
ಅಂದ ಹಾಗೆ ಬಫಲೋ ನ್ಯೂಯಾರ್ಕ್ ರಾಜ್ಯದಲ್ಲಿದೆ. ನ್ಯೂಯಾರ್ಕ್ ನಗರ ಮತ್ತು ಬಫಲೋ ನಗರಗಳು ಒಂದೇ ರಾಜ್ಯದಲ್ಲಿದ್ದರೂ ಅವೆರಡರ ನಡುವಿನ ಹಿಮಪಾತದ ಅನುಪಾತದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಅದೇ ರೀತಿ ವಾಸ್ತವಕ್ಕೂ ಮತ್ತು ದೂರವಾಹಿನಿ ಸುದ್ದಿಗಳಿಗೂ ಅಜಗಜಾಂತರ ವ್ಯತ್ಯಾಸವಿದೆ.
#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ
No comments:
Post a Comment