ರ ಠ ಈ ಕ - ದೀಪಾ ದೇವಕತೆ ವಿಮರ್ಶೆ

 ಆತ್ಮಕಥನ: ರ ಠ ಈ ಕ

ಲೇಖಕರು: ರವಿ ಹಂಜ್ 

ಪ್ರಕಾಶನ: ಸಂವಹನ 


"ಶಿಕ್ಷಣವೆಂಬುದು ಮಗುವು ಬೆಳೆಯುವ ಪ್ರಕ್ರಿಯೆಯ ಮಾನಸಿಕ ತುಮುಲ, ಸಂಕೀರ್ಣತೆ, ವಿಕಾಸದ ಮಜಲುಗಳನ್ನು ಮಕ್ಕಳ ಮನಶ್ಶಾಸ್ತ್ರಜ್ಞರ ಅನುಜ್ಞೆಯಂತೆ ಅನುಸರಿಸಿ ಬಾಲಬಾಲೆಯರನ್ನು ಪರಿಪೂರ್ಣ ಮನುಷ್ಯರನ್ನಾಗಿಸಿ ರೂಪಿಸುವ ವ್ಯವಸ್ಥೆಯಾಗಬೇಕು." 

              ~ರವಿ ಹಂಜ್

              

      ಇತ್ತೀಚೆಗೆ ಬಿಡುಗಡೆಗೊಂಡ ರವಿ ಹಂಜ್ ಅವರ ಆತ್ಮಕಥನ 'ರ ಠ ಈ ಕ', ಸಿಗ್ಮಂಡ್ ಫ್ರಾಯ್ಡ್ ರವರ Id, Ego, Super Ego ಆಧಾರಿತ ಕಥೆಯೂ, ಮನೋವೈಜ್ಞಾನಿಕ ಕಾದಂಬರಿಯೂ, ಆತ್ಮಕಥನವೂ, ವಿಡಂಬನ ಸಾಹಿತ್ಯವೂ ಎನ್ನಿಸುವ ಹೊಸ ಸಾಹಿತ್ಯಕ ಪುಸ್ತಕದ ಕುರಿತು ಪರಿಚಯ.       

     

ಅನನ್ಯ ಸಾಹಿತ್ಯ:

*************


ಲೇಖಕ ತನ್ನ ನೆನಪುಗಳನ್ನು ಓದುಗರದೇ ನೆನಪುಗಳಂತೆ ಕಾಲಾಂತರಕ್ಕೆ ಕೊಂಡೊಯ್ಯುವ ಬರವಣಿಗೆ ಸುಲಭದ್ದಲ್ಲ! ನಾನು ಕಂಡಂತಹ ನನ್ನ ಬಾಲ್ಯದ ಬಿಜಾಪುರದ ನೆನಪಿನೆಡೆಗೆ ನನ್ನನ್ನು ಕೊಂಡೊಯ್ದ ಸ್ಮರಣಿಕೆಯ ಪ್ರತಿಬಿಂಬದ ವಿಶಿಷ್ಟ ರೂಪದ ಮನೋಭೂಮಿಕೆಯ ಸಾಹಿತ್ಯ ಈ ಕೃತಿ. 


ಈ ಕಥನವನ್ನು ಓದುವಾಗ ಆದಿಲ್ ಶಾಹಿ ಕಾಲದ ನಾಲ್ಕು ದಿಕ್ಕಿಗಿರುವ ಕೋಟೆಯನ್ನು ಸುತ್ತುವರಿದ ನಗರವು ಮುಳ್ಳಗಸಿ, ಮನಗೂಳಿ...ಅಗಸಿಗಳನ್ನು ಮೀರಿ ಬೆಳೆದ ನನ್ನ ಬಾಲ್ಯದ ಬಿಜಾಪುರ ನೆನಪಾಯ್ತು. ಇಲ್ಲಿನ ಹಗೆಗಳ ವಿವರಣೆಯು ನನಗೆ ನೀರಿದ್ದೂ ಪಾಳುಬಿದ್ದ ನನ್ನ ಬಿಜಾಪುರದ ಬಾವಡಿಗಳು, ತಾಲಾಬುಗಳನ್ನು ನೆನಪು ತಂದಿತು. ನೀರಿಗಾಗಿ ಹಾಹಾಕಾರ ಉಂಟಾದರೂ ಬಾವಡಿಗಳ ನೀರನ್ನು ಕಲುಷಿತವಾಗಿರಿಸಿದ ವ್ಯವಸ್ಥೆಯ ಮೂರ್ಖತನದ ಅವಿವೇಕದ ಸಮಾಜಮುಖಿಯ ಪ್ರಜ್ಞೆ ಮೂಡಿಸುತ್ತಿತ್ತು. ಲೇಖಕರ ಕುತೂಹಲದ ಪತ್ತೆದಾರಿಗಳು, ನಾವು ಹೈಸ್ಕೂಲ್-ಕಾಲೇಜು ದಿನಗಳಲ್ಲಿ "ಚಪ್ಪನ್ ಸೌ ಚಾವಡಿ ಬಾವನ್ ಸೌ ಬಾವಡಿ" ಎಂಬಂತೆ ಅವುಗಳನ್ನು ಹುಡುಕಿಕೊಂಡು ಕುತೂಹಲದಿಂದ ಅಲೆದಲೆದು ಕ್ಲಿಕ್ಕಿಸಿದ ಫೋಟೋಸ್, ಉತ್ಖನನ ರೂಪದ ಅಲೆದಾಟಗಳು ನೆನಪಾದವು.


ಕೃತಿಕಾರರ ಮಗುವಿನ ಮನಸ್ಸು ಕುತೂಹಲದೊಂದಿಗೆ ವಿಶ್ವಜಂಗಮ ಗುಣವು, ಅನುಭವಗಳೊಂದಿಗೆ ಸ್ಥಾವರಗೊಳಿಸುವ ಅನುಭಾವದ ಆನಂದದಂತಿದೆ. ಬರೆಯಲು ಹಚ್ಚುವ ಪುಸ್ತಕಗಳೇ ಶ್ರೇಷ್ಠ ಪುಸ್ತಕಗಳು. ಒಂದು ರಚನೆಯೊಂದಿಗೆ ಅದರ ಉತ್ಪತ್ತಿ ಇದ್ದರೆ ಅದು ಸೃಷ್ಟಿ...ಜೀವಜಗತ್ತು! (ಸಾಹಿತ್ಯವನ್ನು ಜೀವಂತವಾಗಿರಿಸುವ ಬರಹ!) ನನ್ನನ್ನು ಬರೆಯಲು ಹಚ್ಚಿದ ಕೃತಿ ಇದಾಗಿದೆ ಎನ್ನಲು ನನಗೆ ಖುಷಿಯಾಗುತ್ತದೆ.


 •ವಿಡಂಬನೆ(Satire) ಒಂದು ಸಾಹಿತ್ಯದ ಪ್ರಕಾರ. ಹಾಗೆಯೇ ಲೇಖಕರು ತಾವು ಕಂಡ ಸಂಗತಿಗಳನ್ನು ವಿಡಂಬನೆಯ ಮೂಲಕ ವಿಮರ್ಶಿಸುತ್ತ ಬರೆಯುತ್ತಾರೆ. ತಮ್ಮ ಬಾಲ್ಯದ ಸಾಮಾಜಿಕ ವ್ಯವಸ್ಥೆಯನ್ನು ವಿಡಂಬನಾತ್ಮಕವಾಗಿ ವಿಮರ್ಶಿಸುತ್ತ ಒಂದು ಸಾರ್ವಕಾಲಿಕ ಸತ್ಯ ಅಥವ ಎಲ್ಲರೂ ಒಪ್ಪಲೇಬೇಕಾದ ಅಂಕುಡೊಂಕುಗಳನ್ನು ಮುಕ್ತವಾಗಿ ಬರೆಯುವ, ಪ್ರಾಮಾಣಿಕ ಬರಹ ಲೇಖಕರನ್ನು ಅಪ್ಯಾಯಮಾನವೆನಿಸುವಂತೆ ಮಾಡುತ್ತದೆ. ಹೇಗೆ ಅಲೆಕ್ಸಾಂಡರ್ ಪೋಪ್ ತನ್ನ contemporary ಸಮಾಜವನ್ನು ನೋಡಿ ವಿಡಂಬನಾತ್ಮಕ ಸಾಹಿತ್ಯವನ್ನು 'The Rape of the Lock"ನಂತೆ ರಾಜಕುಮಾರಿಯ ಮುಂಗುರುಳನ್ನು ಕತ್ತರಿಸುವಿಕೆಯು ಆ ಕಾಲಘಟ್ಟದ ಸಮಾಜದ ವರ್ಗಗಳ ಅಸಮಾನತೆ, ಅವಳ ವೈಭೋಗದ ಜೀವನವನ್ನು Satirise ಮಾಡಿದಂತೆ; Jonathan Swift ನ 'Gulliver's travels'  ( a masterpiece satire) ಹೇಗೆ ನಾಲ್ಕು ರಿಮೋಟ್ ದೇಶಗಳ ಜನರ 'ಮಾನವನ ಸ್ವಭಾವ'ದ ಕುರಿತು ವಿಡಂಬನೆ ಮಾಡುತ್ತದೆ; ಹಾಗೆ ದಾವಣಗೆರೆಯು ರಾವಣಗೆರೆಯಾದ ಪರಿಯನ್ನು ಸಮಾಜಮುಖಿಯಾಗಿ ಸ್ಥಿತಪ್ರಜ್ಞತೆಯ ಮನೋಭಾವದಿಂದ ರವಿ ಹಂಜ್ ಬರೆಯುತ್ತಾರೆ. ಅವರ ಸ್ಥಿತಪ್ರಜ್ಞತೆ ಕುರಿತು ಹೇಳುವುದಾದರೆ, ಅಂತರಿಕ್ಷದಲ್ಲಿ ನಿಂತು ಯಾವ ಭೌಗೋಳಿಕ ಮಿತಿಗೂ ಸೀಮಿತವಾಗಿರದೆ ಸತ್ಯವನ್ನು ನಿಷ್ಠುರವಾಗಿ ಹೇಳುವಂತೆ ಅನ್ನಿಸಿದ್ದನ್ನು ಖಡಾಖಂಡಿತವಾಗಿಯೂ ಬರೆದಿದ್ದಾರೆ.  

ಲೇಖಕರ 'ಅಗಣಿತ ಅಲೆಮಾರಿ' ಕೃತಿಯಲ್ಲಿಯೂ ಈ ತರಹದ ವಿಡಂಬನಾತ್ಮಕ ಸಾಹಿತ್ಯವನ್ನು ನಾನು ಕಂಡಿದ್ದೆ.


•ಮುಗ್ಧ-ಹಾಸ್ಯಭರಿತ ಸನ್ನಿವೇಶಗಳು ಒಂದೆರಡು ಕ್ಷಣ ನಕ್ಕು ಸುಧಾರಿಸಿಕೊಂಡು ಮತ್ತೆ ಓದನ್ನು ಮುಂದುವರೆಸುವ humouristic reminiscenceನಂತೆ ಕಥನದುದ್ದಕ್ಕೂ ಓದುಗರನ್ನು ಉಲ್ಲಸಿತಗೊಳಿಸುತ್ತವೆ. ಅವು ಸಹಜ ಮತ್ತು ವಾಸ್ತವಿಕ ಅಭಿವ್ಯಕ್ತಿಯಂತಿರುವ ಲೇಖಕರ ಗಾಢವಾದ ಸ್ಮರಣಶಕ್ತಿಗೆ ಹಿಡಿದ ಕನ್ನಡಿಯಂತಿವೆ. ಒಂದೊಂದು ಘಟನೆಗಳೂ ಸಂಭಾಷಣೆಯುಕ್ತವಾಗಿದ್ದು ದಾವಣಗೆರೆಯ ಸೊಗಡಿನ ಭಾಷೆಯನ್ನು ಮಿಂಚಿಸುತ್ತವೆ.


ಮನೋವೈಜ್ಞಾನಿಕ ಆಧಾರಿತ ಆತ್ಮಕಥನ:

*********************************


 ಮುಗ್ಧತೆಯ ಅಂತರ್ಮುಖಿತ್ವದ ಮಿತಭಾಷೆ, ವ್ಯವಧಾನದೊಂದಿಗೆ ಸಮಾಜದೊಂದಿಗೆ ಬೆರೆಯುವ ಸಮಾಜಮುಖಿ ಗುಣವು ಮಗುವನ್ನು ಉತ್ತಮಿಕೆಗಳೊಂದಿಗೆ ನಿಧಾನವಾಗಿ ಅಭಿವ್ಯಕ್ತಗೊಳಿಸುತ್ತ ಹೋಗುತ್ತದೆ. ಅದಕ್ಕೆ ಸೂಕ್ತ ಅವಕಾಶಗಳನ್ನು ಮನೆ-ಶಾಲೆ-ಪರಿಸರಗಳು ಒದಗಿಸಿ, ತೊಡಗಿಸುವಿಕೆಗೆ ಒಳಪಡಿಸಿದಾಗ ಮಗುವು ಮನೋ ವಿಕಾಸ ಹೊಂದುತ್ತ ನೋಡುತ್ತ, ಕೇಳುತ್ತ, ಮುಟ್ಟುತ್ತ, ಕಲಿಯುತ್ತ ಸಾಗುತ್ತದೆ. ಲೇಖಕರು ತಾವು ಎಳವೆಯಲ್ಲಿ ಕಂಡ ಸೈಕಲ್ ಪಯಣದ ಅನುಭವವನ್ನು, ಜೀವನ ಸಾಕ್ಷಾತ್ಕಾರಕ್ಕೆ ಹೋಲಿಸುವ ತರ್ಕದ ಪರಿಪಕ್ವತೆ ಗಮ್ಯವೆನಿಸುತ್ತದೆ.

 

•ಈ ಆತ್ಮಕಥೆಯ 'ಮಾತು-ಅಭಿವ್ಯಕ್ತಿ' ಹೇಗೆ ಸಂಜ್ಞೆಗಳ ಮೂಲಕ ಸಾಗುತ್ತಿತ್ತೋ ಹಾಗೆ ನನ್ನ ಬಾಲ್ಯದ ದಿನಗಳನ್ನು (ನನ್ನ ಚಿಕ್ಕಮ್ಮಂದಿರು ನೆನಪಿಸಿದಾಗ) ಸ್ಮೃತಿಗೆ ಕೊಂಡೊಯ್ಯುತ್ತವೆ. ನಾನು ಟಿವಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ನೋಡಿದಾಗಲೆಲ್ಲ ತೊದಲು ನುಡಿಗಳಿಂದ 'ಗಾಜೀವ್ ಗಾಂಧಿ, ಗಾಜೀವ್ ಗಾಂಧಿ' ಎಂದು ಕುಣಿದು ಕುಪ್ಪಳಿಸುತ್ತಿದ್ದೆನಂತೆ. ಆ ತೊದಲು ನುಡಿಗಳು, ಸಂಜ್ಞೆಗಳ ಹೊರತಾಗಿಯೂ, ಅಭಿವ್ಯಕ್ತಿಯೆಂಬುದು ಸಹಜತೆಗೆ ಅವಕಾಶ ದೊರೆತಾಗ ಹೊರಹೊಮ್ಮುವ ಬಹಿರ್ಮುಖಿತ್ವದ ಭಾವವಾಗಿದೆ. ಮಗುವು ಬಾಲ್ಯಾವಸ್ಥೆಯಲ್ಲಿ ಸಮಾಜದೊಂದಿಗೆ ಬೆರೆಯುವುದು/ಸಂವಹನ ಮಾಡುವುದು ಸುಲಭದ್ದಲ್ಲ. ಉದಾಹರಣೆಗೆ: ೧ನೇ ತರಗತಿಗೆ ದಾಖಲಾದ ಕೆಲವು ಮಕ್ಕಳು ಶಿಕ್ಷಕರೊಂದಿಗೆ, ಸಮವಯಸ್ಕರೊಂದಿಗೆ ಸಂವಹಿಸುವುದು ಮಂದಗತಿಯಲ್ಲಿ ಸಾಗುತ್ತದೆ. ಕೆಲವು ಸಲ ಅವರು ತಮ್ಮ ತಾಯಿಯೊಂದಿಗೆ/ಸಂಬಂಧಿಗಳೊಂದಿಗೆ ಸಂಭಾಷಿಸುವಂತೆ ಶಿಕ್ಷಕರು/ಸ್ನೇಹಿತರೊಂದಿಗೆ ಸಂಕೋಚ-ತಾದಾತ್ಮ್ಯದೊಂದಿಗೆ ಮಾತನಾಡುತ್ತಾರೆ. 


•ದಾವಣಗೆರೆಯ ಗಟ್ಟಿತನ ಮತ್ತು ಶಿವಮೊಗ್ಗದ ಪಸಿರಿನ ನವಿರಾದ ಅನುಭವಗಳ ಕಟ್ಟೋಣಗಳು ಲೇಖಕರನ್ನು ಸಮ್ಮಿಶ್ರದ ಸಮ್ಮಿಳಿತದೊಂದಿಗೆ ಗಮ್ಯ ವ್ಯಕ್ತಿತ್ವದ ವಿಕಾಸಕ್ಕೆ ಹಿಡಿದ ಕನ್ನಡಿಯಂತಿವೆ. ಎಲ್ಲರೂ ಹಾಗೇ ಅಲ್ಲವೇ! ತಂದೆ-ತಾಯಿಗಳಿಬ್ಬರ ಗುಣಗಳು ಮತ್ತು ಅವಲೋಕಿಸಿದ ಪರಿಸರದ ಸಮ್ಮಿಳಿತದೊಂದಿಗೆ ವ್ಯಕ್ತಿಯಾಗಿ ಸಮಷ್ಠಿಯೊಂದಿಗೆ, ಸಮಾಜಮುಖಿಯಾಗಿ ಬೆಳೆದಿರುತ್ತೇವೆ. 


•ಮುಗ್ಧತೆಯ ಮುಂಗೋಪವು ಅಸಹಾಯಕತೆಯ ವಯಸ್ಸು ಮಗುವನ್ನು ಮಗುವಾಗಿರಲು ಬಿಡದೆ ದೊಡ್ಡವರಂತಿರಲೂ ಬಿಡದಂತಹ ಸಂಕ್ರಮಣ ಕಾಲದಂತಿರುವ ಕಿಶೋರಾವಸ್ಥೆ ಓದುಗನೂ ಅನುಭವಿಸಿದ ಸಾಮಾನ್ಯ ಸಂಗತಿ. ಈ ಅವಸ್ಥೆಯಲ್ಲಿ ಉಂಟಾಗುವ ಜೈವಿಕ ಬದಲಾವಣೆಗಳನ್ನು ದಮನಕ್ಕೊಳಪಡಿಸಿ, ಬೆಳೆದು ನಿಂತ ಮೇಲೆ ಅಹಮಿಕೆಯೊಂದಿಗೆ ಕಾರ್ಯರೂಪಕ್ಕೆ ತರುವ ಹಂಬಲ ನಮ್ಮನ್ನು ಆಂತರಿಕವಾಗಿ ಆವರಿಸಿಕೊಂಡು ಬಿಟ್ಟಿರುತ್ತದೆ.  ದೊಡ್ಡವರು ಯಾವುದನ್ನು ಮಾಡಬೇಡವೆಂದು ನಿರ್ಬಂಧ ಹೇರುತ್ತಾರೋ ಅದರೆಡೆಗೆ ಆಸಕ್ತಿ ಬೆಳೆಯುತ್ತದೆ. ಇವೆಲ್ಲವೂ ಓದುಗನನ್ನು ತಮ್ಮ ಬಾಲ್ಯಕ್ಕೆ ಕೊಂಡೊಯ್ಯುವ ಬಿಂಬಗಳಾಗಿವೆ. ಏಕೆಂದರೆ 'ದಮನ'(Repression-ಸುಪ್ತ-Id) ಕೇವಲ ಒಂದು ರಕ್ಷಣಾ ತಂತ್ರ; ಸಹಜವಾದ ಸಮಾಯೋಜನೆಯ ತಂತ್ರ. ನಾವು ಬಾಲ್ಯದಲ್ಲಿ ಸಮಾಜ, ಪರಿಸರದೊಂದಿಗೆ ಹೊಂದಿಕೊಳ್ಳಲು ಇವನ್ನು ಒಮ್ಮೆಯಾದರೂ ಬಳಸಿಯೇ ಇರುತ್ತೇವೆ. ಆದರೆ ಅವುಗಳ ವೈಪರೀತ್ಯಗಳು ಮನಸ್ಸಿಗೆ ಘಾಸಿಯನ್ನುಂಟುಮಾಡುವ ಮನಸ್ಸಿನ ಡಿಸಾರ್ಡರ್ ಆಗಿ ಪರಿಣಮಿಸುವುದನ್ನು ಲೇಖಕರು ತಮ್ಮ ಸುತ್ತಮುತ್ತಲ ಜನರಲ್ಲಿ ಸೂಕ್ಷ್ಮವಾಗಿ ಅವಲೋಕಿಸಿ ವಿಮರ್ಶಿಸಿದ್ದಾರೆ.  ಎಲ್ಲರೂ ಇವುಗಳೊಂದಿಗೆ "ಮೇಲೆಕ್ಕೇರಿರುವುದೆಲ್ಲ ಕೆಳಗಿಳಿಯಲೇಬೇಕು" ಎಂಬಂತೆ ನಮ್ಮ ಬಾಲ್ಯದ ಕ್ಷಣಗಳನ್ನು ಅನುಭವಿಸುತ್ತಲೇ ಪ್ರಬುದ್ಧರಾಗಿರುತ್ತೇವೆ.


•ಮನೋವಿಜ್ಞಾನ ಅಧ್ಯಯನದ ವಿಕಾಸವು ಹೇಗೆ ಆತ್ಮ-ಮನಸ್ಸು-ವರ್ತನೆಯ ದಿಶೆಯಲ್ಲಿ ಅರ್ಥವನ್ನು ಕಂಡುಕೊಂಡಿತೊ, ಹಾಗೆ ಮಗುವು ತನ್ನ ಸುಪ್ತ-ಅಹಂ- ವಿಪರೀತ ಅಹಂ ನೊಂದಿಗೆ ಎಳವೆಯಲ್ಲಿ ವ್ಯಕ್ತಿತ್ವದ ನಡವಳಿಕೆಗಳನ್ನು ಪ್ರಯತ್ನ-ಪ್ರಮಾದಗಳೊಂದಿಗೆ ಕಲಿಯುತ್ತ ವಿಕಾಸ ಹೊಂದುತ್ತದೆ. ಹಾಗೆ ನೋಡಿದರೆ ಇಲ್ಲಿ ಪ್ರಮಾದಗಳೇ ಇಲ್ಲದ ಯಶಸ್ವಿ ಪ್ರಯತ್ನಗಳೊಂದಿನ ಕಲಿಕೆಯು ಸಂಕೀರ್ಣತೆಗಳಿಂದ ಸರಳತೆಯೆಡೆಗೆ ಸಾಗುವ ಸಮಸ್ಯೆ ಪರಿಹಾರದ ತಂತ್ರದ ಅನುಭವಗಳು ವ್ಯಕ್ತಿಯನ್ನು ರೂಪಿಸುತ್ತವೆ ಎಂಬುದನ್ನು ಮನೋವೈಜ್ಞಾನಿಕ ಕಥೆಯಂತಿರುವ ಆತ್ಮಕಥೆಯು ತಿಳಿಯಪಡಿಸುತ್ತದೆ. ಸುತ್ತಮುತ್ತಲಿನ ವ್ಯಕ್ತಿಗಳು ಮತ್ತು ಪರಿಸರದಲ್ಲಿ ಕಂಡಂತಹ ನಿರ್ಬಂಧಗಳ ವೈಪರೀತ್ಯದ ತೊಳಲಾಟ, ಹೊಯ್ದಾಟಗಳು ಪಾತ್ರಗಳ ಮೂಲಕ ಎಳೆ ಎಳೆಯಾಗಿ ವಿಶ್ಲೇಷಿಸಲಾಗಿದೆ. ಕುತೂಹಲದ ತಣಿಯುವಿಕೆಯ ಮಾನವ ಸಹಜ ಗುಣವನ್ನು ಆತ್ಮಕಥನವು ಪ್ರಯೋಗಶಿಲ ಮನೋಭಾವದ ಮೂಲಕ ತಿಳಿಯುತ್ತಾ ತಿಳಿಸುತ್ತಾ ಹೋಗುತ್ತದೆ(ಕೆಲವು ಸಂದರ್ಭಗಳಲ್ಲಿ ಮಾತ್ರ). ಸುಪ್ತವಾಗಿ ದಮನಗೊಳಿಸಿದ ತನ್ನ ಹಸಿವನ್ನು/ದಾಹವನ್ನು/ಬೇಡಿಕೆಯನ್ನು ಈಡೇರಿಸಿಕೊಳ್ಳುವುದು ವ್ಯಕ್ತಿತ್ವ ಬೆಳವಣಿಗೆಗೆ ಅಥವ ಮನೋವಿಕಾಸಕ್ಕೆ ಎಷ್ಟು ಅವಶ್ಯಕವೆಂಬುದನ್ನು ಶಿಶು ಮನೋವಿಜ್ಞಾನದ ಹಿನ್ನೆಲೆಯಲ್ಲಿ ಲೇಖಕರು ತಮ್ಮ ಬಾಲ್ಯವನ್ನು ಮುಕ್ತವಾಗಿ ಬರೆಯುತ್ತಾ ನಿದರ್ಶಿಸುತ್ತಾರೆ. 


 

•ಮಸ್ತಿ ಕಿ ಪಾಠ್ ಶಾಲಾ ಬೆಸ್ಟ್: 

 ***********************

      ಒಂದು ಹೆಮ್ಮೆಯ ಮತ್ತು ಸಾಮಾನ್ಯ ಅಂಶವೆಂದರೆ,  ಕನ್ನಡ ಮಾಧ್ಯಮದ ಪ್ರಾಥಮಿಕ ಶಿಕ್ಷಣವು, ಒಬ್ಬ ಓದುಗಳಾಗಿ ಆತ್ಮಕಥನದೊಡನೆ ನನ್ನ ಬಾಲ್ಯದ ಶಾಲಾ ನೆನಪುಗಳನ್ನು ನೆನಪಿಸುತ್ತದೆ. ನನ್ನ ಪ್ರಾಥಮಿಕ ಶಾಲೆ ಬಿಜಾಪುರದ ಸ.ಕ.ಹಿ.ಪ್ರಾ.ಶಾಲೆ ನಂ ೧ ರ ಶಾಲಾದಿನಗಳನ್ನು ನೆನಪಿಸಿ, ನಾವು ಕಲಿತ ರ ಠ ಈ ಕ, ಲೆಕ್ಕಗಳು, ಸಹಪಠ್ಯ ಚಟುವಟಿಕೆಗಳು ಲೇಖಕರ ಮಾಂತ್ರಿಕ ಬರಹದೊಂದಿಗೆ ದೃಶ್ಯೀಕರಣಗೊಳ್ಳುತ್ತಾ ಕಣ್ಣೆದುರು ಕಂಗೊಳಿಸುತ್ತವೆ. ನಿರ್ಬಂಧಗಳ ನಡುವೆಯೂ ಮಗುವು ಕಂಡುಕೊಳ್ಳುವ ಸ್ವಚ್ಛಂದತೆ ಆತ್ಮಕಥನದಲ್ಲಿ ಸುಂದರವಾಗಿ ಮೂಡಿಬಂದಿದೆ. "ಬೆಳೆಯುವ ಸಿರಿ ಮೊಳಕೆಯಲ್ಲಿ.." ಎನ್ನುವ ಉಕ್ತಿಯಂತೆ ಮನೋವಿಜ್ಞಾನದ ಆಧಾರಿತ ಹಿನ್ನಲೆಯಲ್ಲಿ ಆತ್ಮಕಥನವು ವ್ಯಕ್ತಿತ್ವವನ್ನು ಚಿತ್ರಿಸುತ್ತದೆ. 

ಲೇಖಕರ ಪ್ರಾಥಮಿಕ ಶಿಕ್ಷಣವು ಅಂಕಗಣಿತದಿಂದ ಹಿಡಿದು ಬೀಜಗಣಿತದ ಸಮೀಕರಣಗಳೊಂದಿಗೆ ಪ್ರಕೃತಿಯನ್ನು, ನದಿಗಳನ್ನು, ಸಮಾನತೆ, ವಿಭಿನ್ನತೆಗಳನ್ನು ಸಮೀಕರಿಸುವ ವಿಶ್ಲೇಷಣೆ ವಿಶಿಷ್ಟವೆನಿಸುತ್ತದೆ. 


•ಮನೆಪಾಠವು ಅಂದರೆ ಶಿಕೋಣಿಯ (ನನ್ನ ಮುತ್ತಜ್ಜಿ ಕರೆಯುವಂತೆ) co-educationನ ದಿನಗಳನ್ನು ನೆನಪಿಸಿತು. ಹೆಣ್ಣುಮಕ್ಕಳ ಶಾಲೆಯಲ್ಲಿನ ಸ್ಪರ್ಧಾತ್ಮಕ ಮನೋಭಾವಕ್ಕೂ ಮನೆಪಾಠದ ಸ್ಪರ್ಧೆಗಳಲ್ಲಿ ವ್ಯತ್ಯಾಸ ಇರುತ್ತಿತ್ತು. ಯಾವಾಗಲೂ ಮೊದಲ ಸ್ಥಾನಕ್ಕೆ ಪೈಪೋಟಿ ಮನೆಪಾಠದಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು. 


•"ಶಿಕ್ಷಣವು ಕೇವಲ ಮಾಹಿತಿಯ ರವಾನೆ ಆಗಬಾರದು, ಬದಲಾಗಿ ಮಗುವಿನ ಸಾಮಾಜಿಕ, ಪರಿಸರ, ಜೀವಜಗತ್ತು, ಸೌಂದರ್ಯೋಪಾಸನೆ, ಹೊರಜಗತ್ತಿನೊಂದಿಗಿನ ಒಡನಾಟ, ಇನ್ನೂ ಹಲವು ಆಯಾಮಗಳೊಂದಿಗೆ ನಿಸರ್ಗದೊಡಳಾಲದಲ್ಲಿ ಕಲಿಕೆಯುಂಟಾದಲ್ಲಿ ಓರ್ವ ಸಾಮಾಜಿಕ, ಸಂವೇದನಶೀಲ, ಪರಿಪೂರ್ಣ ಮಾನವನನ್ನು ಸದೃಢ ಸಮಾಜಕ್ಕೆ ಬದ್ಧನನ್ನಾಗಿಸುತ್ತದೆ." ಎನ್ನುವ ಸಾಮಾಜಿಕ ಕಳಕಳಿಯ ಆಶಯ ಆತ್ಮಕಥನ ಹೊಂದಿದೆ. ಮಗುವು ಪುಸ್ತಕದ ಹುಳುವಾಗದೇ psychomotor skillನ್ನು ಒಳಗೊಂಡ, ಕಲೆಯೊಂದಿಗೆ, ತನ್ನ ಆಸಕ್ತಿಯ ಆಯ್ಕೆಯೊಂದಿಗೆ ಸಮಾಜಮುಖಿಯಾಗಿ ವ್ಯಕ್ತಿತ್ವ ರೂಪಿಸಿಕೊಳ್ಳುವ ತಳಹದಿ ಪ್ರಾಥಮಿಕ ಶಿಕ್ಷಣದಲ್ಲಿ ದೊರೆಯಬೇಕೆಂಬುದು ಕಥನದ ಆಶಯವೆನಿಸುತ್ತದೆ. 


•ಲೇಖಕರು ತಮ್ಮ ಸುತ್ತಲಿನ ವಯಸ್ಕರನ್ನು, ಸ್ನೇಹಿತರ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿ, ಮನೋವೈಜ್ಞಾನಿಕ ವಿಶ್ಲೇಷಣೆಯೊಂದಿಗೆ ಮನುಷ್ಯ ತನ್ನ ಕೊರತೆಗಳನ್ನು ನೀಗಿಸಿಕೊಂಡು ಸದೃಢ ವ್ಯಕ್ತಿ-ಸಮಾಜದ ನಿರ್ಮಾಣಕ್ಕೆ ತಾನು ಗಮನವಹಿಸಲೇಬೇಕಾದ ಸಾಮಾಜಿಕ ಜವಾಬ್ದಾರಿಯನ್ನು ಕಕ್ಕುಲಾತಿಯಿಂದ ಅರಹುತ್ತಾರೆ. ವ್ಯಕ್ತಿ ಕೇವಲ ಮೂಲಭೂತ ಹಕ್ಕುಗಳನ್ನು ಮಾತ್ರ ಅಪೇಕ್ಷಿಸದೆ, ಸಾಮಾಜಿಕ ಕರ್ತವ್ಯಗಳನ್ನು ತಮ್ಮ ಸ್ವಸ್ಥ ಸ್ಥಿತಪ್ರಜ್ಞತೆಯ ಮನೋಭಾವದೊಂದಿಗೆ ಸದೃಢ ಸಮಾಜವನ್ನು ಕಟ್ಟುವ ಆಶಾದಾಯಕ ಆಶಯವನ್ನು ತಿಳಿಸುತ್ತಾರೆ. 


✍🏻ದೀಪಾ.ದೇವಕತೆ, ೨೧-೦೪-೨೦೨೧.

No comments: