ಕುಡುತಿನಿಯ ಬೂದಿಗುಂಟ


ಕ್ರಿ. ಶ. ೧೮೦೨ ರಲ್ಲಿ ಬ್ರಿಟಿಷ್ ಭಾರತದ ಸರ್ವೇಕ್ಷಣ ಇಲಾಖೆಯ ಮಹಾನಿರ್ದೇಶಕರಾಗಿದ್ದ ಕಾಲಿನ್ ಮೆಕೆಂಜ಼ಿಯವರು ಪ್ರಪ್ರಥಮವಾಗಿ ಈ ಬೂದಿಗುಂಟವನ್ನು ಪತ್ತೆಹಚ್ಚಿದ್ದರು. ೧೮೩೦ರಲ್ಲಿ ಕರ್ನೂಲ್ ಜಿಲ್ಲೆಯ ಅಸಿಸ್ಟಂಟ್ ಕಮೀಷನರ್ ಆಗಿದ್ದ ಟಿ.ಜೆ. ನ್ಯೂಬೋಲ್ಟ್ ಅವರು ಇಲ್ಲಿಗೆ ಭೇಟಿ ಕೊಟ್ಟು ಬೂದಿಗುಂಟವನ್ನು ಪರಿಶೀಲಿಸಿದ್ದರು. ಈ ಗುಡ್ಡೆಯಿಂದ ಪ್ರೇರಿತಗೊಂಡ ನ್ಯೂಬೋಲ್ಟ್ ಅವರು ಸಂಗನಕಲ್ಲು ಸಮೀಪದ ಕಪ್ಪಗಲ್ಲು ಬಳಿ ಮತ್ತೆರಡು ಇಂತಹ ಕಿಟ್ಟದ ಗುಡ್ಡೆಗಳನ್ನು ಪತ್ತೆಹಚ್ಚಿದ್ದರು. ನಂತರದ ಮುಂದಿನ ಇನ್ನೂರು ವರ್ಷಗಳ ಅವಧಿಯಲ್ಲಿ ಒಟ್ಟು ಇನ್ನೂರಕ್ಕೂ ಹೆಚ್ಚು ಇಂತಹ ಕಿಟ್ಟದಗುಡ್ಡೆಗಳನ್ನು ಬಯಲುಸೀಮೆಯ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಪ್ರದೇಶಗಳಲ್ಲಿ ಪತ್ತೆ ಹಚ್ಚಲಾಗಿದೆ. ಕ್ರಿ. ಶ. ೧೮೭೦ ರಲ್ಲಿ ರಾಬರ್ಟ್ ಬ್ರೂಸ್ ಫುಟ್ ಅವರು ಈ ಗುಡ್ಡೆಗಳು ಐದು ಸಾವಿರ ವರ್ಷಗಳ ಹಿಂದಿನ ನಿಯೋಲಿಥಿಕ್ ಜನರು ಸಗಣಿಯನ್ನು ಪೇರಿಸಿ ಸುಟ್ಟ ಗುಡ್ಡೆಗಳು ಎಂದು ಸಂಶೋಧಿಸಿದರು. ಆಧುನಿಕ ನಾಗರೀಕತೆಯ ಅಭಿವೃದ್ಧಿ ಪಥದಲ್ಲಿ ಕೃಷಿ ಮತ್ತಿತರೆ ಕಾಮಗಾರಿಗಳಲ್ಲಿ ಅನೇಕ ಗುಡ್ಡೆಗಳು ನಶಿಸಿ ಈಗ ಎರಡು ಗುಡ್ಡೆಗಳು ಮಾತ್ರ ಉಳಿದುಕೊಂಡಿವೆ. ಅವುಗಳಲ್ಲಿ ಅತ್ಯಂತ ಹಳೆಯದಾದ ಬೂದಿಗುಂಟ ದಿಬ್ಬವು ಇಂದು ರಸ್ತೆ ಅಗಲೀಕರಣಕ್ಕೆ ಬಲಿಯಾಗುವ ಆತಂಕಕ್ಕೆ ಒಳಗಾಗಿತ್ತು. ಆದರೆ ಅದೃಷ್ಟವಶಾತ್, ನಮ್ಮಂತಹ ಸಹೃದಯ ಪರಂಪರೆ ಪ್ರಿಯರ ಕೋರಿಕೆಯನ್ನು ಮನ್ನಿಸಿ ಬಳ್ಳಾರಿ ಜಿಲ್ಲಾಧಿಕಾರಿಗಳು ಬೂದಿಗುಂಟ ಗುಡ್ಡೆಯನ್ನು ರಕ್ಷಿಸಲು ಮಧ್ಯ ಪ್ರವೇಶಿಸಿದ್ದಲ್ಲದೆ ಕರ್ನಾಟಕ ಶಕ್ತಿ ನಿಗಮದಿಂದ ಸಂರಕ್ಷಣೆಗೆ ಕೊಡುಗೆಯನ್ನೂ ಕೊಡಿಸಿದ್ದಾರೆ. ಹಾಗಾಗಿ ಬೂದಿಗುಂಟ ಕಿಟ್ಟದ ಗುಡ್ಡೆಯು ಪೂರ್ವೈತಿಹಾಸದ ಭವ್ಯ ನಿದರ್ಶನವಾಗಿ ಇಂದು ಉಳಿದಿದೆ.


ಪ್ರಮುಖವಾಗಿ ಈ ಗುಡ್ಡೆಗಳನ್ನು ಕಿಟ್ಟದ ಗುಡ್ಡೆ ಅಥವಾ ಬೂದಿಗುಡ್ಡೆಗಳೆಂದು ಕರೆಯಲು ಕಾರಣವೇನೆಂದರೆ, ಪೂರ್ವೈತಿಹಾಸಿಕ ಆದಿ ರೈತಾಪಿ ಜನಾಂಗವು ಕಾಲಕಾಲಕ್ಕೆ ಸಗಣಿಯನ್ನು ದಿಬ್ಬವಾಗಿ ಒಟ್ಟುತ್ತ ಬಂದು ಆ ದಿಬ್ಬಗಳನ್ನು ಮಕರ ಸಂಕ್ರಾಂತಿ, ದನಗಳ ಜಾತ್ರೆ ಮುಂತಾದ ಹಬ್ಬದ ದಿನಗಳಂದು ಬೆಂಕಿ ಹಚ್ಚಿ ಸುಟ್ಟು ಹಬ್ಬವನ್ನಾಚರಿಸುತ್ತಿದ್ದರು. ನಿಯಮಿತವಾಗಿ ಕಾಲಕಾಲಕ್ಕೆ ಆಚರಿಸುತ್ತಿದ್ದ ಇಂತಹ ಆಚರಣೆಯಿಂದ ಈ ದಿಬ್ಬಗಳು ಗುಡ್ಡೆಗಳಾಗಿ ರೂಪುಗೊಂಡಿವೆ. ಈ ಕಿಟ್ಟದ ಗುಡ್ಡೆಗಳನ್ನು ಪಶುಪಾಲಕರ ದಿಬ್ಬಗಳೆಂದೂ ಕರೆಯುತ್ತಾರೆ. ಈಜಿಪ್ಟಿನಲ್ಲಿ ಪಿರಮಿಡ್ ಕಟ್ಟುತ್ತಿದ್ದ ಕಾಲದಲ್ಲಿಯೇ ಇಲ್ಲಿ ಇಂತಹ ದಿಬ್ಬಗಳನ್ನು ನಿರ್ಮಿಸಲಾಗಿದೆ. ಹೀಗೆ ಗುಡ್ಡೆ, ಪಿರಮಿಡ್ ಮುಂತಾದ ಸ್ಮಾರಕಗಳ ನಿರ್ಮಾಣವು ಮಾನವ ವಿಕಾಸದ ಉದ್ದಕ್ಕೂ ಪ್ರಪಂಚದಾದ್ಯಂತ ಅಲ್ಲಲ್ಲಿನ ನಾಗರೀಕತೆಯ ಸಂಸ್ಕೃತಿ ವಿಕಾಸಕ್ಕನುಗುಣವಾಗಿ ನಿರ್ಮಾಣಗೊಂಡಿವೆ. ಈ ಗುಡ್ಡೆಗಳ ಉತ್ಖನನದಲ್ಲಿ ಕಲ್ಲಿನ ಕೊಡಲಿ, ಅರೆಯುವ, ಕುಟ್ಟುವ ಮತ್ತು ಬೀಸುವ ಕಲ್ಲುಗಳಲ್ಲದೆ ದನ, ಕುರಿ, ಮೇಕೆಗಳ ಮೂಳೆಗಳು ಸಹ ಸಿಕ್ಕಿವೆ. ಈ ಜನಾಂಗವು ದನದ ಮಾಂಸವನ್ನು ತಿನ್ನದೆ ಕುರಿ, ಮೇಕೆಯ ಮಾಂಸವನ್ನು ತಿನ್ನುತ್ತಿದ್ದರಲ್ಲದೆ, ದನದ ಸಗಣಿಯನ್ನು ಸಹ ಗೊಬ್ಬರವಾಗಿ ಬಳಸುತ್ತಿರಲಿಲ್ಲ ಎಂದು ಸಂಶೋಧನೆಗಳು ತಿಳಿಸಿವೆ. ಈ ಜನಾಂಗವು ನವಣೆಯಂತಹ ಸಿರಿಧಾನ್ಯಗಳಲ್ಲದೆ ಹುರುಳಿ ಮತ್ತು ಹೆಸರು ಕಾಳುಗಳನ್ನು ಸಹ ಬೆಳೆಯುತ್ತಿದ್ದರೆಂದು ತಿಳಿದುಬರುತ್ತದೆ.

ಮೂಲ: ರವಿ ಕೋರಿಶೆಟ್ಟರ್
ಅನುವಾದ: ರವಿ ಹಂಜ್ 

No comments: