ಅನಿವಾಸಿಯ ಗ್ಲಾಡಿಯೋಡಸ್ ಹೂವಿನ ಹಾರ

 ದೇಶವಾಸಿ ಜನಸಾಮಾನ್ಯರಲ್ಲದೇ ಅನೇಕ ಬುದ್ಧಿಜೀವಿಗಳೂ ಸೇರಿ ಅನಿವಾಸಿಗಳ ಬಗ್ಗೆ ಇರುವ ಅಭಿಪ್ರಾಯವೇನೆಂದರೆ, "ಭಾರತ ಬಿಟ್ಟು ವಿದೇಶಕ್ಕೆ ತೆರಳಿದೊಡನೆಯೇ ಇವರನ್ನು ಆ ವಿದೇಶಗಳು, ದೇಶಶ್ರೇಷ್ಠ ಭಾರತದ ದಿವ್ಯ ತಲೆ ಮತ್ತು ಭವ್ಯ ಪಾದ ಹೊಂದಿದ ಪ್ರಜೆಗಳೆಂದು ಬಗೆದು ಗ್ಲಾಡಿಯೋಡಸ್ ಹೂವಿನ ಹಾರ ಹಾಕಿ ’ಇಗೋ ಇದು ನಿಮ್ಮ ಕಾರು, ಇಗೋ ನಿಮ್ಮ ಆರು ಬೆಡ್‌ರೂಮು, ಒಂದು ಸ್ವಿಮ್ಮಿಂಗ್‌ಪೂಲ್, ಜ಼ಕೂಜ಼ಿ ಮತ್ತು ಸುಸಜ್ಜಿತ ಪೀಠೋಪಕರಣಗಳಿಂದ ಅಲಂಕೃತ ಬಂಗಲೆಯ ಬೀಗ. ಇದು ನಿಮ್ಮ ಖರ್ಚಿಗೆ ಬೇಕಾದ ಹಣದ ತಿಜೋರಿ’ ಎಂದು ಸುಖಾಗಮನ ಬಯಸುತ್ತಾರೆ" ಎಂಬೆಲ್ಲಾ ಕಲ್ಪನೆಯಲ್ಲಿರುತ್ತಾರೆ. 


ಇಂತಹ ಕಲ್ಪನೆಯ ಕನ್ನಡ ಹೋರಾಟಗಾರರು / ಬುದ್ಧಿಜೀವಿ / ಸಮಾಜಜೀವಿಗಳೊಬ್ಬರು ನಾನೊಬ್ಬ ಎನ್ನಾರೈ ಕನ್ನಡ ಬರಹಗಾರ ಎಂದು ನನ್ನನ್ನು ಕಾಣಲು ಬಯಸಿದ್ದರು.  ಕನ್ನಡ ಶಾಲೆ ನಡೆಸುತ್ತಿದ್ದ ಅವರ ಸತ್ಕಾರ್ಯ ಕೇಳಿ, ಇಡೀ ಕರ್ನಾಟಕ ಸರ್ಕಾರಿ ಶಾಲೆಗಳು ಕನ್ನಡ ಮಾಧ್ಯಮದಲ್ಲೇ ನಡೆಯುತ್ತಿರುವಾಗ ಇದರಲ್ಲಿ ಏನು ವಿಶೇಷ ಎಂದು ಆಶ್ಚರ್ಯವಾದರೂ, ಬಾಲ್ಯದಲ್ಲಿ ಅವರ ಹೋರಾಟಗಳ ಬಗ್ಗೆ ಓದಿ ಪ್ರಭಾವಿತನಾಗಿದ್ದ ಕಾರಣ ನಾನೂ ಭೇಟಿಯಾಗಲು ಉತ್ಸುಕನಾಗಿ ಹೋಗಿದ್ದೆ. ಸರ್ಕಾರಿ ಕನ್ನಡ ಶಾಲೆಗಳಲ್ಲೇ ಓದಿದ್ದ ನನ್ನಿಂದ ಕೆಲವು ಸಲಹೆಗಳನ್ನೋ ಅಥವಾ ಅವರ ವಿದ್ಯಾರ್ಥಿಗಳಿಗೆ ನಾಲ್ಕು ಹಿತವಚನಗಳ ಸ್ಫೂರ್ತಿ ತುಂಬುವ ಕೆಲಸಕ್ಕೋ ನನ್ನನ್ನು ಕಾಣಬಯಸಿರಬಹುದು ಎಂದು ಊಹಿಸಿದ್ದೆ.


ಅವರು ತ್ವರಿತವಾಗಿ ಹತ್ತು ನಿಮಿಷದಲ್ಲಿ ತಮ್ಮ ಶಾಲೆಯನ್ನು ತೋರಿಸಿ ಅದರೊಟ್ಟಿಗೆ ಅಲ್ಲಿದ್ದ ಅತ್ಯಂತ ಸುಸಜ್ಜಿತ ಆಡಿಟೋರಿಯಮ್ಮನ್ನೂ ತೋರಿಸಿದರು. ಅವರ ಕಾರ್ಯವನ್ನು "ಜಾಗರೂಕತೆ"ಯಿಂದ ಶ್ಲಾಘಿಸಿ ವಂದಿಸಿದೆ. ನಂತರ ಅವರ ಕಾರ್ಯಾಲಯಕ್ಕೆ ನನ್ನನ್ನು ಕರೆದೊಯ್ದರು. ಅವರ ಸಿಬ್ಬಂದಿಯೊಬ್ಬರು ಮೂರು ಎಳನೀರನ್ನು ಎಂಟು ಲೋಟಾಗಳಲ್ಲಿ ಹಾಕಿ ನನ್ನನ್ನೂ ಸೇರಿಸಿ ಅಲ್ಲಿದ್ದ ಎಂಟು ಜನರ ಮುಂದಿಟ್ಟರು. ಆಗ ಆ ಹೋರಾಟಗಾರರು, "ನೋಡಿ, ನಮ್ಮ ಶಾಲೆಯ ಪೀಠೋಪಕರಣಗಳು ತುಂಬಾ ಹಳೆಯದಾಗಿವೆ. ಅವುಗಳನ್ನು ಬದಲಾಯಿಸಲು ಐದು ಲಕ್ಷ ರೂಪಾಯಿಗಳು ಬೇಕು. ಕನ್ನಡಪ್ರೇಮಿಯಾದ ನೀವು ಅದನ್ನು ಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ. ಹಾಂ, ಹಾಗೆಲ್ಲಾ ಎಲ್ಲರನ್ನೂ ನಾವು ಸಹಾಯ ಕೇಳುವುದಿಲ್ಲ. ನಮ್ಮ ಶಾಲೆಗೆ ತುಂಬಾ ಜನ ರಾಜಕಾರಣಿಗಳು, ಖದೀಮರು ಹಣ ಕೊಡುತ್ತೇವೆ ಎಂದು ಬರುತ್ತಾರೆ. ಅವರಿಂದೆಲ್ಲಾ ನಾನು ಒಂದು ಪೈಸೆಯನ್ನೂ ತೆಗೆದುಕೊಳ್ಳದೇ ಓಡಿಸಿಬಿಡುತ್ತೇನೆ. ಕೇವಲ ಪ್ರಾಮಾಣಿಕರಿಂದ ಮಾತ್ರ ತೆಗೆದುಕೊಳ್ಳುತ್ತೇನೆ. ಅಂದ ಹಾಗೆ ನೀವು ಇನ್ನೆಷ್ಟು ದಿನದಲ್ಲಿ ಸಹಾಯ ಮಾಡಬಹುದು?" ಎಂದರು.


ತಕ್ಷಣಕ್ಕೇ ನನ್ನೆದುರಿದ್ದ ಎಳನೀರು "ಎಂಟನೇ ಲೂಯಿ ಕೋನ್ಯಾಕ್" ರೀತಿ ಕಾಣತೊಡಗಿತು!


ಅವರು ಶಾಲೆಯನ್ನು ತೋರಿದ ರೀತಿ ಮತ್ತು ಆಡಿಟೋರಿಯಮ್ಮನ್ನು ಕಟ್ಟಿಸಿಕೊಟ್ಟವರು ಬೀಡಿ ಕಿಂಗ್ ದಾನಿಗಳು ಎಂದು ಗೊತ್ತಾದ ಕೂಡಲೇ ಕೊಂಚ ವ್ಯವಹಾರಿಕ "ಜಾಗರೂಕತೆ" ನನ್ನಲ್ಲಿ ಮೂಡಿತ್ತು. ಹಾಗಾಗಿ ತಕ್ಷಣವೇ, "ನೋಡಿ, ಮೋದಿ ಕಪ್ಪು ಹಣ ತರುತ್ತೇನೆ ಎಂದು ಹೊರಟು ನಾವೀಗ ನಮ್ಮ ಭಾರತೀಯ ಖಾತೆಯ ಎಲ್ಲಾ ಲೆಕ್ಕವನ್ನು ನಾವಿರುವ ದೇಶಕ್ಕೆ ಕೊಡಬೇಕಾಗಿದೆ. ಇದರಿಂದ ಅನವಶ್ಯಕ ಲೆಕ್ಕ ಇಡುವ ತಲೆನೋವಾಗಿದೆ. ಇನ್ನು ಇತರರ ಖಾತೆಗೆ ಹಣ ಕಳಿಸುವುದು ತುಂಬಾ ಕಷ್ಟದ ಕೆಲಸ. ನಿಮ್ಮ ಸಂಸ್ಥೆ ಅಮೇರಿಕಾದಲ್ಲಿ ತೆರಿಗೆ ವಿನಾಯಿತಿ ಸಂಸ್ಥೆಯಾಗಿ ನೋಂದಣಿ ಮಾಡಿಸಿದ್ದರೆ ನಾನಷ್ಟೇ ಅಲ್ಲದೆ ಸಕಲ ಅಮೇರಿಕನ್ನಡಿಗರೂ ಧನಸಹಾಯ ಮಾಡುತ್ತಾರೆ. ನಿಮ್ಮ ಸಂಸ್ಥೆಯ ವಿವರಗಳನ್ನು ನನಗೆ ಕಳುಹಿಸಿ. ನಾನೇ ಖುದ್ದಾಗಿ ನೋಂದಣಿ ಮಾಡಿಸಿಕೊಡುತ್ತೇನೆ" ಎಂದು ರಂಗೋಲಿ ಕೆಳಗೆ ನುಸುಳಿ ಪಾರಾಗಿದ್ದೆ.


ಏಕೆಂದರೆ ಅಂತಹ ಸಹಾಯದ ಅನಿವಾರ್ಯ ನನ್ನ ಬಂಧುಮಿತ್ರರ ಬಳಗದಲ್ಲಿಯೇ ಬೆಟ್ಟದಷ್ಟಿರುವಾಗ ನಾನು ಅಂತಹ ದೊಡ್ಡ ಮೊತ್ತವನ್ನು ನನ್ನದಲ್ಲದ ಊರಿನ ಶಾಲೆಗೆ, ಅಪರಿಚಿತರಿಗೆ ಹೇಗೆ ತಾನೇ ಕೊಡಬಲ್ಲೆ?!?


ಬೆಂಗಳೂರಿನಲ್ಲಿ ಒಂದು ಚದರಡಿ ಸೈಟಿಗೆ ಮುನ್ನೂರು ರೂಪಾಯಿ ಇದ್ದಾಗ ಅಮೇರಿಕಾದ ಇಂಜಿನಿಯರನ ಸಂಬಳ ಎಷ್ಟಿತ್ತೋ ಅದು ಬೆಂಗಳೂರಿನಲ್ಲಿ ಚದರಡಿಗೆ ಹದಿನೈದು ಸಾವಿರವಾದಾಗ ಕೇವಲ ಮೂರುಪಟ್ಟು ಹೆಚ್ಚಾಗಿದೆಯೇ ಹೊರತು ನೂರುಪಟ್ಟಲ್ಲ ಎಂಬ ಜಾಗತಿಕ ವಿದ್ಯಮಾನದ ಅರಿವು ಮಾಹಿತಿ ತಂತ್ರಜ್ಞಾನದ ತವರಿನ ನಿವಾಸಿಗಳಿಗೆ ಏಕೆ ತಿಳಿಯುತ್ತಿಲ್ಲ!?


ಯೌವ್ವನದ ಕಿಚ್ಚಿನಲ್ಲಿ ಯಾವುದೇ ಮುಲಾಜಿಗೆ ಸಿಲುಕದ ಸಮಾಜವಾದದ ಹೋರಾಟಗಾರರು ಹೀಗೇಕೆ ಪ್ರಬುದ್ಧತೆಯ ವಯಸ್ಕರಾದೊಡನೆ ಬಂಡವಾಳಶಾಹಿಗಳಾಗುತ್ತಾರೆ? ರಾಜಕಾರಣಿ, ಖದೀಮರಿಂದ ಸಹಾಯ ನಿರಾಕರಿಸಿ, ತಂಬಾಕಿನ ಚಟ ಹತ್ತಿಸುವ ಬೀಡಿ ವರ್ತಕರಿಂದ ಮಕ್ಕಳ ಶಾಲೆಗೆ ಸಹಾಯ ಪಡೆದದ್ದು ಹೇಗೆ ನೈತಿಕತೆ ಎನಿಸುತ್ತದೆ!?! ಎಂಬ ಹಲವಾರು ಪ್ರಶ್ನೆಗಳು ಅಂದು ನನ್ನನ್ನು ಕಾಡಿದವು.  ಅವೆಲ್ಲವೂ ಇಂದೇಕೋ ಅತಿಯಾಗಿ ಕಾಡುತ್ತಿವೆ.


ಎನ್ನಾರೈ ಎಂದರೆ ಕನ್ನಡದ ಕಿಚ್ಚ, ಡಚ್ಚ, ಅಣ್ತಮ್ಮ, ಹ್ಯಾಟ್ರಿಕ್ಕು ಅಲ್ಲ, ಬರೀ ಗೋಳು ಬರೀ ಗೋಳು ಬರೀ ಗೋಳು. ಏಕೆಂದರೆ ಭಾರತದ ಆರ್ಥಿಕತೆ, ಸಾಮಾಜಿಕತೆ, ನೈತಿಕತೆ, ಆಕತೆ, ಈಕತೆ ಎಲ್ಲಾ ಬರೀ ಓಳು ಬರೀ ಓಳು ಬರೀ ಓಳು.


ಕಂಡೆನೆಂಬುದು ಕಂಗಳ ಮರವೆ,

ಕಾಣೆನೆಂಬುದು ಮನದ ಮರವೆ,

ಕೂಡಿದೆನೆಂಬುದು ಅರುಹಿನ ಮರವೆ,

ಅಗಲಿದೆನೆಂಬುದು ಮರಹಿನ ಮರವೆ.

ಇಂತು ಕಂಡೆ_ಕಾಣೆ_ಕೂಡಿದೆ_ಅಗಲಿದೆ ಎಂಬ,

ಭ್ರಾಂತಿಸೂತಕವಳಿದು ನೋಡಲು

ಗುಹೇಶ್ವರಲಿಂಗವನಗಲಲೆಡೆಯಿಲ್ಲ ಕೇಳಾ, ಎಲೆ ತಾ(ಮಾ)ಯೆ!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ


No comments: