ಕಲ್ಲಡ್ಕ ಭಟ್

 ಯಾವುದೋ ಒಬ್ಬ ತಲೆತಿರುಕ "ಭಟ್ಟ" ಒಂದು ಧರ್ಮದ ಹೆಂಗಸರಿಗೆ ದಿನಕ್ಕೊಬ್ಬ ಗಂಡ ಇರುತ್ತಿದ್ದ ಎಂದು ಮಾತನಾಡಿದರೆ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ ಎಂಬ ಭಯ ಆ ದೇಶದ ಬುದ್ಧಿಜೀವಿಗಳಿಗೆ ಮೂಡುತ್ತಿರುವುದು ಆ ದೇಶದ ಬಹುದೊಡ್ಡ ಬೌದ್ಧಿಕ ದುರಂತ. ಅದರಲ್ಲೂ ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ, ಶ್ರೇಷ್ಠ ಸಂವಿಧಾನ ಎನ್ನುವ ಹಮ್ಮು ಬಿಮ್ಮುಗಳ ದೇಶದ ಶತಮಾನೀಯ ದುರಂತ. ಕಾಕತಾಳೀಯವಾಗಿ ಸ್ವಾತಂತ್ರ್ಯದ ಬಾಪು, ಸಂವಿಧಾನದ ಪೋಪುಗಳ ನಡುವೆ ಶ್ರೇಷ್ಠತೆಯನ್ನು ಅವರವರ ಚೇಲಾಗಳು ಒರೆಗೆ ಒಡ್ಡಿರುವ ದುರಂತ ಸಮಯ!!!!

ಇವೆಲ್ಲಕ್ಕಿಂತ ದೊಡ್ಡ ದುರಂತ ಕೃಷ್ಣನ ಬಹುಪತ್ನಿತ್ವ, ದ್ರೌಪದಿಯ ಬಹುಪತಿತ್ವ, ಶ್ರೀರಾಮನ ಏಕಪತ್ನಿತ್ವ, ಅಖಂಡ ಸನ್ಯಾಸಿಗಳ ಬ್ರಹ್ಮಚರ್ಯದ ಸನಾತನತ್ವ, ವೀರ್ಯದಿಂದ ವೀರಭದ್ರ, ಋತುಚಕ್ರದ ತ್ಯಾಜ್ಯದಿಂದ ಗಣಪತಿಯನ್ನು ಅನ್ಯಲಿಂಗದ ಸಹಾಯವಿಲ್ಲದೆ ಸೃಷ್ಟಿಸಿದ ಕೃತಕ ಬುದ್ಧಿಮತ್ತೆಯ ಆದಿಜ್ಞಾನ ಮೂಲದ ದೇಶವು ನನ್ನ ಹ್ಯಾಷ್ಟ್ಯಾಗ್ ಅನ್ನು ಶತಮಾನೀಯ ಭವಿಷ್ಯವಾಣಿ ಮಾಡುತ್ತಿರುವುದು.....ದಾರುಣ, ಕಾರುಣ, ಕಾರಣ, ಮಾರಣ ದುರಂತ!

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಸಂವಿಧಾನ ದಿನ!

 ಒಂದು ದೇಶದ ಸಂವಿಧಾನ ಎಂದರೆ ಅದನ್ನು ಕೇವಲ "ಛೂ ಮಂತರ್ ಕಾಳಿ" ಎಂದು ಓರ್ವ ವ್ಯಕ್ತಿ ಗಾಳಿಯಲ್ಲಿ ಕೈಯಾಡಿಸಿ ಸೃಷ್ಟಿಸಲಾಗದು. ಅದಕ್ಕೆ ಆಕರಸೂಚಿ, ಪರಾಮರ್ಶನ ಸಿಬ್ಬಂದಿ, ವಿಮರ್ಶನ ಸಲಹೆಗಾರರು, ತಿದ್ದುಪಡಿ ಸಹಾಯಕರು, ಇತ್ಯಾದಿಯಾಗಿ ಒಂದು ಕಚೇರಿಯೇ ಇರುತ್ತದೆ. ಅದರ ಮುಖ್ಯಸ್ಥ ಓರ್ವ ವ್ಯಕ್ತಿಯೇ ಆಗಿದ್ದರೂ ನಿರ್ಣಾಯಕ ನಿರ್ಧಾರ ಆ ಪ್ರಜಾತಂತ್ರ ಸಂಸ್ಥೆಯ ಸಮೂಹದ್ದಾಗಿರುತ್ತದೆ.

ಹಾಗಾಗಿಯೇ ಜಗತ್ತಿನ ಎಲ್ಲಾ ದೇಶಗಳ ಸಂವಿಧಾನ ಸಮಿತಿಯ ಮುಖ್ಯಸ್ಥರ ಹೆಸರು ಪ್ರಮುಖ ಎನಿಸಿದರೂ ಅದು ಆದಷ್ಟು ಗೌಣವಾಗಿರುತ್ತದೆ. ಫ್ರಾನ್ಸಿನ ಚಾರ್ಲ್ಸ್ ಡಿ ಗಾಲಿ ಮತ್ತು ಮಿಕೆಲ್ ಡಿಬ್ರೆ ಇರಬಹುದು, ಅಮೆರಿಕಾದ ಜೇಮ್ಸ್ ಮ್ಯಾಡಿಸನ್ ಆಗಬಹುದು ಅಥವಾ ಬರೆಯದೆಲೇ ಜಾರಿಯಲ್ಲಿರುವ ಇಂಗ್ಲೆಂಡಿನ ಸಂವಿಧಾನ ಇರಬಹುದು. ಇಲ್ಲೆಲ್ಲ ಕರ್ತೃಗಿಂತ ಕೃತಿ ಮುಖ್ಯ. ಆದರೆ ಅಂತಹ ಒಂದು ಸುಧಾರಿತ ಸಂವಿಧಾನದ ಜಾತ್ಯಾತೀತ ಚೌಕಟ್ಟಿನ ಅಡಿಯಲ್ಲಿಯೇ ಜಾತಿ ಪದ್ದತಿಯು ಆ ದೇಶದ ಸಂವಿಧಾನ ಸಮಿತಿಯ ಮುಖ್ಯಸ್ಥರ ಜಾತಿಯನ್ನೇ ಓಲೈಸಲು ಪ್ರಮುಖವಾಗಿಸಿ ಅವರ ಜಾತಿಯನ್ನು, ಕೇವಲ ಒಂದು ಜಾತಿಯ ಕಾರಣಕ್ಕಾಗಿ ಮೆರೆಸುತ್ತದೆ ಎಂದರೆ ಅದು ಅವರು ಬರೆದ ಸಂವಿಧಾನಿಕ ದೇಶದ ನಿರ್ಣಾಯಕ ಸೋಲು ಎನ್ನಲು ಯಾವುದೇ ಹಿಂಜರಿಕೆ ಆಗದು.

ಈ ಹಿನ್ನೆಲೆಯಲ್ಲಿ ಆ ಸಂವಿಧಾನಕಾರರ ಜಾತಿಯನ್ನು ಮೆರೆಸುವುದು ಜಾತ್ಯಾತೀತ ಎನಿಸುವುದಾದರೆ ಆ ವೈಭವೀಕರಣವನ್ನು ಪ್ರಶ್ನಿಸುವುದು ಸಾಂವಿಧಾನಿಕವಾಗಿ ಹೆಚ್ಚು ಜಾತ್ಯಾತೀತ ಎನಿಸುತ್ತದೆ. ಈಗಾಗಲೇ ಜಾತಿ ಆಧಾರಿತ ಅಭ್ಯರ್ಥಿಕೆ, ಆಯಕಟ್ಟಿನ ಪದವಿ, ಅಧಿಕಾರಿ ವರ್ಗಾವಣೆಗಳು "ಸಾಮಾಜಿಕ ನ್ಯಾಯದ ವಿಷಮ ದಂಧೆ" ಆಗಿರುವಾಗ ಜಾತಿ ಆಧಾರಿತ ಜನಗಣತಿಯನ್ನು ನಡೆಸುವುದು ಹೇಗೆ ದೇಶದ ಮಿಷನ್, "ವೈವಿಧ್ಯತೆಯಲ್ಲಿ ಏಕತೆ"ಯನ್ನು ಸಾಧಿಸುವುದು? ಒಂದೆಡೆ ಸಂವಿಧಾನ ಓದುತ್ತಾ ಇನ್ನೊಂದೆಡೆ ಜಾತಿನಾಶಕ್ಕೆ ಕರೆ ಕೊಡುವ ಪ್ರಜ್ಞಾವಂತ ಬುದ್ದಿಜೀವಿಗಳ ಜಾತಿ ನಿರ್ಮೂಲನ ಆಂದೋಲನಕ್ಕೆ ಹೇಗೆ ನೀರೆರೆಯುವುದು? ಎಲ್ಲಕ್ಕಿಂತ ಪ್ರಮುಖವಾಗಿ ಇಪ್ಪತ್ತೊಂದನೇ ಶತಮಾನಕ್ಕೆ ದೇಶವನ್ನು ಹೇಗೆ ಅಣಿಗೊಳಿಸುವುದು? 

ಅಂದಹಾಗೆ ಇಪ್ಪತ್ತೊಂದನೇ ಶತಮಾನದ ಕಾಲು (ಶತಮಾನ) ಮುರಿದೇಹೋಗಿದೆ.

ಇನ್ನು ಈ ಪ್ರಶ್ನಿಸುವ ಪ್ರಕ್ರಿಯೆಗೆ ಪ್ರತಿಕ್ರಿಯೆಯಾಗಿ ಯಾವುದೇ ರೀತಿಯ ಶೋಷಿತ, ಪೋಷಿತ ಇತ್ಯಾದಿ ಗಿಲೀಟಿನ ಕ್ರಿಯಾಶೀಲತೆಯನ್ನು ಸೇರಿಸುವುದು ಕ್ರೀಂ ಕ್ರೀಂ ಹ್ರೀಂ ಹ್ರೀಂ ಬ್ರೂಮ್ ಬೂಮ್ ಬಂಚಕಬೂಮ್! 

ಏಕ್ ದೂಸರೆ ಸೇ ಕರತೇ ಹೈ ಪ್ಯಾರ್ "ಹಮ್", ಏಕ್ ದೂಸರೆ ಕೆ ಲಿಯೇ ಬೇಕರಾರ್ "ಹಮ್!!!"

ಭಾಯಿಯೋs ಬೆಹೆನೋs.....

ಮೇರೆ ಪ್ಯಾರೇ ದೇಶ್ ವಾಸಿಯೋs.... "ಕಮಲ್" ಪಕಡೋ ಕಮಾಲ್ ದೇಖೋs...

ಪ್ಯಾರ್ ಕಿ ದುಖಾನ್ ಸೇ "ಹಮ್" ಪ್ಯಾರ್ "ಬೇಚೆಂಗೆ" ಅಪನಿ ಜಾತ್ ಕೇ ಆಧಾರ್ ಪರ್, ಮುಫ್ತ್ ನಹೀಂ! ಗಸ್ ಕೇ "ಹಾತ್" ಪಕಡೋ ಔರ್ ಆಗೇ ಬಡಾವೋs...

ಹೇ ಡ್ಯೂಡ್, ವಾಟ್ ದ ಹೆಕ್ ಈಸ್ ಹಾಟ್ ಕ ಕಮಾಲ್.... ವೀಸ್ವಗೂರುsss!?! ಪ್ಯಾಸ್ ಮಿ ದೋಸ್ ಸ್ಪೈಸಿ ಡೋನಟ್ಸ್ ಪ್ಲೀಸ್!

Happy Thanksgiving!

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

"ಕಡಲಾಚೆಯ ಕನ್ನಡಿಗ" ಬಿರುದಾವಳಿ

 ಕೆಲವು ವರ್ಷಗಳ ಹಿಂದೆ ಮೈಸೂರಿನ ಜಿಲ್ಲಾ ಸಾಹಿತ್ಯ ಭವನದಲ್ಲಿ ಒಂದು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ನನ್ನ ಪ್ರಕಾಶಕರೊಂದಿಗೆ ಹೋಗಿದ್ದೆ. ಅಂದು ಅತಿಥಿಯಾಗಿ ಬರಬೇಕಿದ್ದ ಶಾಸಕರೊಬ್ಬರು ಕೈ ಕೊಟ್ಟ ಕಾರಣ ನನ್ನನ್ನೇ ಅತಿಥಿಯಾಗಿ ಕೂರಿಸಿದರು. ಇತಿಹಾಸ ಕುರಿತಾದ ಪುಸ್ತಕ ಅದಾದ್ದರಿಂದ ಕೊಂಚ ಉತ್ಸಾಹದಿಂದಲೇ ಮಾತನಾಡಿದೆ. 


ಸಮಾರಂಭ ಮುಗಿದ ನಂತರ ಸಭಿಕರೊಂದಿಗೆ ಮಾತನಾಡುತ್ತಿರುವಾಗ ನೀಲಿ ಶಾಲು ಹೊದ್ದ ಒಬ್ಬರು ನನ್ನ ಬಳಿಗೆ ಬಂದರು. ಅವರ ಕೈಯಲ್ಲಿ ನನ್ನ "ಭಾರತ ಒಂದು ಮರುಶೋಧನೆ" ಪುಸ್ತಕವಿತ್ತು. "ಇದನ್ನು ಚೆನ್ನಾಗಿ ಬರೆದಿದ್ದೀರಿ. ನಿಮಗೆ "ಕಡಲಾಚೆಯ ಕನ್ನಡಿಗ" ಎಂಬ ಬಿರುದು ಕೊಟ್ಟು ಸನ್ಮಾನ ಮಾಡುತ್ತೇವೆ. ಇನ್ನು ಎಷ್ಟು ದಿನ ಮೈಸೂರಿನಲ್ಲಿರುವಿರಿ?" ಎಂದರು.


ಅದಕ್ಕೆ ನಾನು, "ಅಯ್ಯೋ ಅದೆಲ್ಲಾ ಏನೂ ಬೇಡ ಇವರೇ. ನಾನೊಬ್ಬ ಸಾಮಾನ್ಯ ಅಷ್ಟೇ. ನಾನು ಇನ್ನೊಂದು ವಾರ ಅಷ್ಟೇ ಇರುವುದು. ನಾನು ಮೈಸೂರಿನಲ್ಲಿ ಇರುವುದಿಲ್ಲ" ಎಂದೆ.


ಆಗ ಅವರು, "ಇಲ್ಲಿಲ್ಲ, ಅಷ್ಟರೊಳಗೆ ಸಮಾರಂಭ ಏರ್ಪಡಿಸುತ್ತೇವೆ. ನಿಮ್ಮ ನಂಬರ್ ಕೊಡಿ" ಎಂದು ನನ್ನ ನಂಬರ್ ತೆಗೆದುಕೊಂಡರು.


ನಾನು, "ಅರೆ, ಇವರು ಪರವಾಗಿಲ್ಲ. ಒಳ್ಳೆಯ ಉದಾರವಾದಿಗಳು. ನೆನ್ನೆ ಸಂಜೆ ನನ್ನ ಮರುಶೋಧನೆಯನ್ನು ಜೀರ್ಣಿಸಿಕೊಳ್ಳದೆ ಹಣಿಯಲು ನೋಡಿ ಸೋತಿದ್ದ ಕೃತ್ರಿಮ ಉದಾರವಾದಿಗಳ ನಡುವೆ ನಿಜದ ಉದಾರವಾದಿಗಳು ಮರುದಿನವೇ ಸಿಕ್ಕರಲ್ಲ" ಎಂದು ಖುಷಿಪಟ್ಟಿದ್ದೆ. 


ನಾನು ವಿಮಾನ ಹತ್ತುವ ಎರಡು ದಿನದ ಮುಂಚೆ ಆ ನೈಜ ಉದಾರವಾದಿ ನೀಲಿ ಶಾಲಿಗರು ಫೋನ್ ಮಾಡಿದರು, "ಸರ್, ನಮಗೆ "ಅಂಬೇಡ್ಕರ್ ಪುರಸ್ಕಾರ" ಸಿಕ್ಕಿದೆ. ಅದಕ್ಕೆ ನಮ್ಮ ಸಂಘದ ವತಿಯಿಂದ ಹತ್ತು ಜನ ದೆಹಲಿಗೆ ಹೋಗಬೇಕು. ನಿಮಗೆ ಸನ್ಮಾನ ಇಟ್ಟುಕೊಳ್ಳುತ್ತೇವೆ ಎಂದಿದ್ದೆನಲ್ಲ. ಪ್ರತಿಯಾಗಿ ನೀವು ನಾವು ಹತ್ತು ಜನಕ್ಕೆ ಬೆಂಗಳೂರಿನಿಂದ ದೆಹಲಿಗೆ ಒನ್ ವೇ ವಿಮಾನದ ವೆಚ್ಚ ಕೊಡಿ. ಬರುವಾಗ ರೈಲಿನಲ್ಲಿ ಬರುತ್ತೇವೆ. ನಮ್ಮ ಟ್ರಾವೆಲ್ ಏಜೆಂಟನ ಅಕೌಂಟ್ ನಂಬರ್ ಕಳಿಸುತ್ತೇನೆ" ಎಂದರು.


ಹೀಗೆ ಉದಾರ ಉದರವಾಯಿತು!


ನಾನು, "ನೋಡಿ, ಭಾರತದ ಯಾವುದೇ ಬ್ಯಾಂಕಿನಲ್ಲಿ ನನ್ನ ಖಾತೆ ಇಲ್ಲ. ಅದಕ್ಕೆ ನಾನು ಕಡಲಾಚೆ ಹೋಗಿಯೇ ಹಾಕಬೇಕು. ಮೇಲಾಗಿ ಘನ ಸಂವಿಧಾನವೆತ್ತ ಪ್ರಜಾಪ್ರಭುತ್ವ ಭಾರತ ಒಕ್ಕೂಟವೇ ನನಗೆ "ಸಾಗರೋತ್ತರ ಭಾರತೀಯ" ಎಂಬ ಬಿರುದು ಬಿನ್ನಾವಳಿಯನ್ನು ಕೊಟ್ಟಿದೆ. ಹಾಗಾಗಿ ಕಡಲಾಚೆಗೆ ಬೇರೆ ಕನ್ನಡಿಗರನ್ನು ವಿಚಾರಿಸಿ" ಎಂದು ಫೋನ್ ಇಟ್ಟೆ.


ಈಗ ಮೊನ್ನೆಯಷ್ಟೇ ಅರ್ಜಿ ಹಾಕಿ ಮರ್ಜಿ ಹಿಡಿದು ಪ್ರಶಸ್ತಿಗೆ ಗೋಗರೆಯುವ ತೆವಲಿನ ಲೇಖಕ/ಕಿ/?/ಯರ ಕುರಿತು ಪೋಸ್ಟ್ ಬರೆದಿದ್ದೆನಷ್ಟೆ. ಇಂದು ಅದೇ ಮರ್ಜಿ ಹಿಡಿಯುವ ಚಾಳಿ ಎಲ್ಲೆಲ್ಲಿಗೆ ತೇಲಿ ಹೋಗುತ್ತದೆ ಎಂದು ಪತ್ರಿಕೆಯೊಂದರ ಗಾಳಿಸುದ್ದಿಯ ಮೂಲಕ ಗೊತ್ತಾಯಿತು.


ಘೋಸ್ಟ್/ಹೋಸ್ಟ್/ಟೋಸ್ಟ್ ಬರಹಗಾರರು ಅಧಿಕಾರಸ್ಥರ ಹೆಂಡಂದಿರಿಗೆ ಕವನ ಸಂಕಲನ ಬರೆದುಕೊಡುವ ಬಗ್ಗೆ, ರಾಜಕಾರಣಿಗಳಿಗೆ ಆತ್ಮಕಥೆ, ದರ್ಶನ, ಇತ್ಯಾದಿ ಬರೆದುಕೊಡುವ ಬಗ್ಗೆ, ಪಿಹೆಚ್ದಿ ಶೋಷಣೆಗಳ ಬಗ್ಗೆ, ಹಾಸಿಗೆ ರಿವಾರ್ಡುಗಳ ಬಗ್ಗೆ ನನ್ನ ಅತ್ಯಂತ ಆತ್ಮೀಯ ಉದಾರವಾದಿ ಆಪ್ತರಲ್ಲೇ ಕೇಳಿದ್ದೆ. ಅದರ ಸತ್ಯಾಸತ್ಯತೆಯನ್ನೂ ತಿಳಿದುಕೊಂಡಿದ್ದೆ. ಅವರುಗಳು ಹೇಳಿದ್ದೆಲ್ಲವೂ ಸತ್ಯವಾದರೂ ಇಂದು ಕೇಳಿದ್ದನ್ನು ಮಾತ್ರ ನಂಬಲಾಗದು, ನಂಬೆನು.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಬಿಟ್ಟಿ ಮತ್ತು ಗಟ್ಟಿ ಭಾಗ್ಯಗಳು

 ಯಾವ ಭಾಗ್ಯವು ಒಂದು ನಿರ್ದಿಷ್ಟ ಗುರಿಯಿಲ್ಲದೆ ದುರ್ಬಲರನ್ನು ದುರ್ಬಲವಾಗಿಯೇ ಇರಲು ಬಿಟ್ಟು ಅನಿರ್ದಿಷ್ಟ ಕಾಲಾವಧಿಯವರೆಗೆ ಅಥವಾ ಹಣ ಖರ್ಚಾಗುವವರೆಗೆ ಇರುವುದೋ ಅದು ಬಿಟ್ಟಿ ಭಾಗ್ಯ. ಯಾವ ಭಾಗ್ಯವು ಒಂದು ನಿರ್ದಿಷ್ಟ ಗುರಿಯೊಂದಿಗೆ ಗುರಿ ಸಾಧಿಸಿದ ನಂತರ ಇಲ್ಲವಾಗುವುದೋ ಅದು ಗಟ್ಟಿ ಭಾಗ್ಯ.


ಬಡತನದ ರೇಖೆಯ ಕೆಳಗಿರುವ ಒಂದು ಕುಟುಂಬಕ್ಕೆ ಉಚಿತ ಆಹಾರಧಾನ್ಯಗಳನ್ನು ಸರ್ಕಾರವು ಒಂದು ನಿರ್ದಿಷ್ಟ ಅವಧಿಗೆ ಒದಗಿಸಿ ಆ ಕುಟುಂಬವನ್ನು ಅದೇ ನಿರ್ದಿಷ್ಟ ಅವಧಿಯ ಒಳಗೆ ಬಡತನದ ರೇಖೆಯಿಂದ ಮೇಲೆತ್ತುವ ಯೋಜನೆಯನ್ನು ಹಾಕಿರಬೇಕು. ಉದಾಹರಣೆಗೆ ಆರು ತಿಂಗಳ ಕಾಲ ಒಂದು ಕುಟುಂಬಕ್ಕೆ ಉಚಿತ ಆಹಾರಧಾನ್ಯ ಒದಗಿಸಿ ಆ ಕುಟುಂಬದ ವಯಸ್ಕ ಸದಸ್ಯರಿಗೆ ಉದ್ಯೋಗ ತರಬೇತಿ, ಕೌಶಲ್ಯ ಅಭಿವೃದ್ಧಿ ತರಬೇತಿ, ಮತ್ತು ತಮ್ಮದೇ ಘನ ಸರ್ಕಾರದ ಉದ್ಯೋಗ ವಿನಿಮಯ ಕೇಂದ್ರದ ಮೂಲಕ ಉದ್ಯೋಗ ಒದಗಿಸುವ ಎಲ್ಲಾ ಪ್ರಾಮಾಣಿಕ ಪ್ರಯತ್ನವನ್ನು ಮಾಡುವ ಯೋಜನೆಗಳನ್ನು ತಳುಕುಹಾಕಿ ಆ ಕುಟುಂಬವು ತಮ್ಮ ಅನ್ನವನ್ನು ತಾವೇ ಆ ನಿರ್ದಿಷ್ಟ ಅವಧಿಯ ಒಳಗೆ ಗಳಿಸಿಕೊಳ್ಳಲು ಉತ್ತೇಜಿಸಬೇಕು. ಆರು ತಿಂಗಳ ಕಾಲ ಆ ಕುಟುಂಬದ ವಯಸ್ಕ ವ್ಯಕ್ತಿಗಳು ಯಾವ ಉದ್ಯೋಗಕ್ಕೆ ಅರ್ಜಿ ಹಾಕಿದ್ದರು, ಅಥವಾ ಪ್ರಯತ್ನಿಸಿದ್ದರು ಎಂಬ ಸರಳ ದಾಖಲಾತಿಯನ್ನು ಉದ್ಯೋಗ ವಿನಿಮಯ ಕೇಂದ್ರಗಳ ಮೂಲಕ ದಾಖಲಿಸಬೇಕು. ಈ ಪ್ರಕ್ರಿಯೆಯಿಂದ ಆ ಕುಟುಂಬದ ಸದಸ್ಯರಿಗೆ ಒಂದು ನೈತಿಕ ಜವಾಬ್ದಾರಿಯನ್ನು ಹೇರಿದಂತಲೂ ಆಗುತ್ತದೆ. ಒಂದು ವೇಳೆ ಆ ನಿರ್ಧರಿತ ಆರು ತಿಂಗಳಲ್ಲಿ ಗುರಿ ತಲುಪದಿದ್ದರೆ ಮತ್ತೊಂದು ಅವಧಿಗೆ ವಿಸ್ತರಿಸಿ ಕಡೆಗೆ ಒಂದೆರಡು ಅವಧಿಗೆ ನಿಲ್ಲಿಸಬೇಕು. ಹಾಗೆ ಮಾಡಿದಾಗ ಸೋಮಾರಿಗಳು ಎಚ್ಚೆತ್ತುಕೊಂಡು ತಮ್ಮ ಅನ್ನ ಗಳಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಾರೆ.


ಒಟ್ಟಾರೆ ಆದಷ್ಟು ಬೇಗ ಆ ಕುಟುಂಬವು ಬಡತನದ ರೇಖೆಯಿಂದ ಮೇಲಕ್ಕೇರಿಸುವ ಸಮಗ್ರ ಯೋಜನೆಯನ್ನು ಹಾಕಿಕೊಂಡಾಗ ಅದು ಸದೃಢ ನಾಗರಿಕ ಮತ್ತು ದೇಶವನ್ನು ಅಭಿವೃದ್ಧಿಶೀಲತೆಯ ಕಡೆ ನಡೆಸಿ ಗಟ್ಟಿ ಭಾಗ್ಯ ಎನಿಸುವುದಲ್ಲದೆ ಸರ್ಕಾರ ತನ್ನ ಜನರ ಆರ್ಥಿಕ ಅಭಿವೃದ್ದಿಯೊಂದಿಗೆ ದೇಶದ ಆರ್ಥಿಕ ಉನ್ನತಿಗೆ ಶ್ರಮಿಸಿದ ಹಾಗಾಗುತ್ತದೆ. ಹಾಗೆಯೇ ಆ ಯೋಜನೆಯ ಪರಿಣಾಮವನ್ನು ಸಮರ್ಥವಾಗಿ ಅಳೆಯಲು ಅಳತೆಗೋಲು, ಮಾಪನಾಂಶ, ಯಶಸ್ಸಿನ ಸೂತ್ರ ಒಂದು ವೈಜ್ಞಾನಿಕ ತಳಹದಿಯಲ್ಲಿ ರೂಪುಗೊಳ್ಳುತ್ತವೆ, ಸಹ.


ಆದರೆ ಇಂತಹ ದೂರಾಲೋಚನೆ ಮತ್ತು ಸಮಗ್ರ ಚಿಂತನೆ ಇರದ ಕಾರಣ ಸದ್ಯದ ಭಾಗ್ಯಗಳು ಬಿಟ್ಟಿ ಭಾಗ್ಯ ಎನಿಸಿಬಿಡುತ್ತವೆ. ಇಂತಹ ಚಿಂತನೆ ಹತ್ತು ವರ್ಷಗಳ ಹಿಂದೆ ಭಾಗ್ಯಗಳನ್ನು ಘೋಷಿಸುವಾಗಲೂ ಇರಲಿಲ್ಲ, ಈಗಲೂ ಇಲ್ಲ. ನಡುವೆ ಬಂದುಹೋದ ಸಮ್ಮಿಶ್ರ, ಪಕ್ಷಾಂತರಿ, ಕುಲಾಂತರಿ ಧಾರ್ಮಿಕ ಸರ್ಕಾರಕ್ಕೂ ಇರಲಿಲ್ಲ.  


ಇಂತಹದ್ದನ್ನು ತಿಳಿಸಬೇಕಾದ ಆರ್ಥಿಕ ತಜ್ಞರು, ಸುಶಿಕ್ಷಿತರು, ಬುದ್ಧಿಜೀವಿಗಳು, ಚಿಂತಕರು, ಪತ್ರಕರ್ತರು, ಟಾಮ್, ಡಿಕ್ ಮತ್ತು ಹ್ಯಾರಿ ಮತ್ತು ಮೇರಿಗಳು ತಮ್ಮ ತಮ್ಮ ಪಂಥೀಯ ಸಿದ್ಧಾಂತದ ಅನುಕೂಲಕ್ಕೆ ತಕ್ಕಂತೆ, "ಆಹಾ, ಇದು ಹಸಿದವರ ಸಂತೈಸುವ ಅನನ್ಯ ಯೋಜನೆ" ಎಂದು ಭಾವುಕ ಭ್ರಾಮಕ ಕತೆಯನ್ನು ಕನ್ನಡ ಧಾರಾವಾಹಿಗಳ ರೀತಿ ಧರಾಶಾಹಿಯಾಗಿ ಕಣ್ಣೀರು ಹರಿಸುತ್ತಾರೆ. ಆಚೆಯ ಬದಿಯವರು ಇದು ಸೋಮಾರಿಗಳನ್ನು ಸೃಷ್ಟಿಸುವ ಯೋಜನೆ, ನನ್ನ ತೆರಿಗೆ ಹಣ ಇದಕ್ಕೆ ಪೋಲಾಗಬಾರದು ಎಂದು ಉಗ್ರ ಪ್ರತಾಪ ತೋರುತ್ತಾರೆ.


ಮಧ್ಯೆ ಏನಾದರೂ ಇಂತಹ ಕಳಕಳಿಯ ಸಲಹೆ ನೀಡಿದ ನಮ್ಮಂತಹವರನ್ನು ಅವರರರ ಪಂಥಕೂಪದ ನಿಯಮದಂತೆ......... ಹರಹರಾ ಶ್ರೀ ಚೆನ್ನಸೋಮೇಶ್ವರ!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಅರಿದಡೆ ಆರದು, ಮರೆದೊಡೆ ಮೂರದು - ಮುನ್ನುಡಿ

 ರವಿ ಹಂಜ್ ಅವರು ಈಗಾಗಲೇ ಸಾಹಿತ್ಯವಲಯದಲ್ಲಿ ಭದ್ರವಾದ ಹೆಜ್ಜೆಗಳನ್ನು ಇರಿಸಿದವರು. ಅವರು ಅನಿವಾಸಿ ಭಾರತೀಯರಾಗಿರುವ ಕಾರಣ ಅವರ ಕೃತಿಗಳು ಹೆಚ್ಚು ಚರ್ಚೆಯಾಗಿಲ್ಲ. ಇದು ಎಲ್ಲಾ ಅನಿವಾಸಿ ಭಾರತೀಯ ಸಾಹಿತಿಗಳಿಗೂ ಅನ್ವಯಿಸುತ್ತದೆ. "ಭಾರತ ಒಂದು ಮರುಶೋಧನೆ" ಕೃತಿಯಲ್ಲಿ ಶ್ರೀಯುತರು ಚರಿತ್ರೆ, ಧರ್ಮ, ರಾಜಕಾರಣ, ಸಾಹಿತ್ಯವನ್ನು ಹೇಗೆ ಗ್ರಹಿಸಬೇಕೆಂಬ ಮಾದರಿಯನ್ನೇ ಸೃಜಿಸಿದ್ದಾರೆ. ಹಾಗೆಯೇ ಅವರ "ಅಗಣಿತ ಅಲೆಮಾರಿ"ಯಲ್ಲಿ ಭಾರತ ಮತ್ತು ಚೈನಾ ವ್ಯವಸ್ಥೆಗಳನ್ನು ತೌಲನಿಕವಾಗಿ ವಿಶ್ಲೇಷಿಸಿ ಹೊಸ ಬೆಳಕಿಂಡಿಯನ್ನು ತೆರೆದಿದ್ದಾರೆ. "ಹುಯೆನ್ ತ್ಸಾಂಗ್ ನ ಮಹಾಪಯಣ" ಮತ್ತು "ಬಸವರಾಜಕಾರಣ" ಸಂಶೋಧನೆಯ ನೆಲೆಯಲ್ಲಿ ಬೆಲೆ ಕಟ್ಟಿದ್ದರೆ, "ರ ಠ ಈ ಕ" ಕೇವಲ ಆತ್ಮಚರಿತ್ರೆಯಾಗಿ ದಾಖಲಾಗದೆ ಸಾಂಸ್ಕೃತಿಕ ಪಠ್ಯವಾಗಿ ಗಮನ ಸೆಳೆಯುತ್ತದೆ. ನನಗೆ ತಿಳಿದಂತೆ ಭಾರತದ ಕರ್ನಾಟಕದ ಸಾಂಸ್ಕೃತಿಕ ಸಂಗತಿಗಳಿಗೆ ಬರಹಗಳ ಮೂಲಕ ಸದಾ ಸ್ಪಂದಿಸುವ ಏಕೈಕ ಅನಿವಾಸಿ ಬರಹಗಾರರಾಗಿ ರವಿ ಹಂಜ್ ಕಾಣುತ್ತಾರೆ.


ಅವರ ಇಂತಹ ಸ್ಪಂದನೆಯ ಮನಸ್ಥಿತಿಯೇ ಅವರಿಂದ ಅವರ ನೂತನ ಕಾದಂಬರಿ "ಅರಿದಡೆ ಆರದು, ಮರೆದೊಡೆ ಮೂರದು"ಯನ್ನು ಬರೆಸಿದೆ. ಈ ಕೃತಿಯು ತನ್ನ ಹೆಸರಿನಿಂದಲೇ ಗಮನ ಸೆಳೆಯುತ್ತದೆ.  ’ನೂರನೋದಿ ನೂರ ಕೇಳಿದಡೇನು! ಆಸೆ ಬಿಡದು ರೋಷ ಹರಿಯದು’ ಎಂಬ ಬಸವಣ್ಣನವರ ವಚನವನ್ನು ಈ ಕೃತಿ ಸ್ಫಟಿಕ ಸದೃಶದಂತೆ ಅನಾವರಣಗೊಳಿಸುತ್ತದೆ. 


ಸುತ್ತಣ ಜಗತ್ತಿನಲ್ಲಿ ಇಂದ್ರಿಯ-ವಿಜೇತರನ್ನು ಗೌರವಿಸುವ, ಪೂಜಿಸುವ, ದೇವರೆಂದೇ ಬಗೆಯುವ ಪರಂಪರೆಯೊಂದು ಮನುಷ್ಯ ಲೋಕದಲ್ಲಿ ಪ್ರಾರಂಭಗೊಂಡಾಗಿನಿಂದ ಮಠ, ಸ್ವಾಮೀಜಿಗಳ ಪರಂಪರೆ ಆರಂಭವಾಯಿತು. ಅಂತಹ ಮಠಗಳು ಹೇಗೆ ಎಲ್ಲಾ ಇಂದ್ರಿಯ ವಾಂಛೆಗಳನ್ನು ಆವಾಹಿಸಿಕೊಳ್ಳುತ್ತಾ ಬಂದವು ಎಂಬುದನ್ನು ಸೃಜನಶೀಲತೆಯಿಂದ ರವಿ ಹಂಜ್ ಕಥೆ ಕಟ್ಟುತ್ತಾ ಸಾಗುತ್ತಾರೆ. ಶಕ್ತಿ ಕವಿ ರನ್ನ ತನ್ನ ’ಸಾಹಸಭೀಮ ವಿಜಯಂ’ ಕಾವ್ಯದಲ್ಲಿ ಕಾವ್ಯಶಕ್ತಿಯನ್ನು ವಿಮರ್ಶಿಸುವವರಿಗೆ ಎಂಟೆದೆ ಇರಬೇಕೆನ್ನುತ್ತಾನೆ. ಅಂತಹ ಎಂಟೆದೆ ಇದ್ದವರೇ ಅದನ್ನು ವಿಮರ್ಶಿಸಿದರು ಎನ್ನುವ ಮಾತು ಬೇರೆ. ಇಲ್ಲಿ ರವಿ ಹಂಜ್ ಮಠೀಯ ವ್ಯವಸ್ಥೆಯ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡು ಅಂತಹ ಎಂಟೆದೆಯವರಾಗಿದ್ದಾರೆ. ಈ ಕೃತಿಯ ಪ್ರಕಾಶಕರಾದ  ಲೋಕಪ್ಪನವರೂ ಅಂತಹ ಧೀಮಂತರೇ. 


ಸಾಹಿತ್ಯ ಸಾಮಾಜಿಕ ಅಸ್ತ್ರವಾಗಬೇಕು, ಸಮಾಜದ ಆರೋಗ್ಯ ಕಾಪಿಡಬೇಕು ಎನ್ನುವ ಷೆಲ್ಲಿಯು ಕವಿಗಳನ್ನು ಶಾಸನಕಾರರು ಎಂದು ಕರೆದಿದ್ದಾನೆ. ಆ ಹಿನ್ನೆಲೆಯಲ್ಲಿಯೇ ವಚನಕಾರರು ಸಮಾಜ ತಿದ್ದಲು ಸಾಹಿತ್ಯವನ್ನು ಮಾಧ್ಯಮವಾಗಿಸಿಕೊಂಡರು. ’ಶೂದ್ರತಪಸ್ವಿ’ ಮೂಲಕ ಕುವೆಂಪುರವರು ಸಾಹಿತ್ಯವನ್ನು ಅಸ್ತ್ರವಾಗಿಸಿದರು. ರವಿ ಹಂಜ್ ಅವರು ಕನ್ನಡದ ಈ ಪರಂಪರೆಯ ವಾರಸುದಾರರಂತೆ ಈ ಕೃತಿಯ ಮೂಲಕ ಕಾಣುತ್ತಿದ್ದಾರೆ.


ಇಪ್ಪತ್ತೊಂಬತ್ತು ಅಧ್ಯಾಯಗಳ ಕಥಾನಕವು "ಅರಿದಡೆ ಆರದು, ಮರೆದೊಡೆ ಮೂರದು" ಕೃತಿಯಾಗಿದೆ. ಈ ಕಥಾವಸ್ತುವನ್ನು ಆಯ್ದುಕೊಳ್ಳುವುದು ಸುಲಭ; ಆದರೆ ಅದನ್ನು ನಿರ್ವಹಿಸುವುದು ಕಷ್ಟಸಾಧ್ಯ.  ರವಿಯವರು ವಸ್ತುವನ್ನು ಚೆನ್ನಾಗಿ ದುಡಿಸಿಕೊಂಡಿರುವುದು ಅವರ ಸೃಜನಶೀಲತೆಯನ್ನು ತೋರಿಸುತ್ತದೆ. ಕೃತಿಯಾದ್ಯಂತ ಬಳಸಿರುವ ವಚನಗಳು ಕೀಲಿಕೈಯಂತಿವೆ. ದಖ್ಖನ್ ಪ್ರಸ್ತಭೂಮಿಯ ವರ್ಣನೆಯೊಂದಿಗೆ ಕೃತಿ ಆರಂಭವಾಗಿ ಸಂಚಾರಿ ಜಂಗಮ ಯೋಗಿಗಳು ಪಾಳೆಯಗಾರರ ಬಿಂಬಗಲ್ಲಿನಲ್ಲಿ ನೆಲೆನಿಲ್ಲುವುದರೊಂದಿಗೆ ಕೃತಿಯ ಆವರಣ ಅನಾವರಣವಾಗುತ್ತದೆ. ಕೃತಿಯಲ್ಲಿ ರಾಜಕೀಯ, ಸಾಮಾಜಿಕ, ರಾಜತಾಂತ್ರಿಕ ಆಯಾಮಗಳಲ್ಲದೆ ವೀರಶೈವ-ಶೈವ-ಲಿಂಗಾಯತ ಪಂಥ ಮತ್ತು ವಚನಗಳ ಕುರಿತ ಆರೋಗ್ಯಕರ ಚರ್ಚೆಗಳಿವೆ.


ವಿಶೇಷ ಕಥಾಹಂದರ, ಪಾತ್ರ ನಿರ್ವಹಣೆ, ವಿಡಂಬನೆ, ಆಯಾಯ ಕಾಲಘಟ್ಟದ ಸನ್ನಿವೇಶಗಳ ಸೃಷ್ಟಿಯೊಂದಿಗೆ ಕೃತಿಕಾರನಿಗಿರಬೇಕಾದ ಸ್ಥಿತಪ್ರಜ್ಞತೆ ಓದುಗರನ್ನು ಒಂದು ಮಾಯಾಲೋಕಕ್ಕೆ ಕರೆದೊಯ್ಯುತ್ತದೆ.


ಈ ಕಾದಂಬರಿಯನ್ನು ಓದುತ್ತ ಜಿ.ಎಸ್. ಶಿವರುದ್ರಪ್ಪನವರ ’ವಿಚಾರಣೆ’ ಕವಿತೆಯ ಕೆಲವು ಪಂಕ್ತಿಗಳು ನನಗೆ ನೆನಪಾದವು. ಅವು ಹೀಗಿವೆ:


"ಬಾ, ಪಾಪೀ ಬಾ; ಕೈ ಕಟ್ಟಿ ನಿಂತುಕೋ

ಈ ಕಟಕಟೆಯೊಳಗೆ-

ಬೊಗಳು, ಇದುವರೆಗೂ ಮಾಡಿದ್ದೆಲ್ಲವನು ಬಾಯ್ಬಿಟ್ಟು;

----------

ಎದುರಿಗಿದೆ ವೇದ - ಪುರಾಣಭಗವದ್ಗೀತೆ - ಬೈಬಲ್ಲು 

ಯಾವುದರ ಮೇಲಾದರೂ ಸರಿ, ಆಣೆಯಿಡು, ಹೇಳು,

ಶೋಧಿಸು, ನರನರದ ಒಳಪದರದಲ್ಲೂ ಹುದುಗಿ -

ದಿತಿಹಾಸಗಳ ಹಳೆಯ ಸರಕ.

ನೆನಪಿಲ್ಲವೇ ನಿನಗೆ? ಬರೆದಿಟ್ಟಿದ್ದಾನೆ

ಎಲ್ಲವನ ಈ ಗೂಢಾಚಾರ.

ಬೇರಿಂದ ತುದಿಯೆಲೆತನಕ ಗೊತ್ತಿದೆ ನಮಗೆ

ನಿನ್ನ ಅವತಾರ."


ಸಾಹಿತ್ಯ ಕಲೆಯೂ ಹೌದು; ಜೀವನವೂ ಹೌದು. ಸಮಾಜವನ್ನು ಹಸನುಗೊಳಿಸುವ ಸಾಧನವೂ ಹೌದು ಎಂಬುದನ್ನು ಈ ಕೃತಿ ತೋರಿಸಿದೆ. ಡೋಂಗಿ ಸ್ವಾಮಿಗಳ ಬಗ್ಗೆ ಬರೆಯಲು ತುಂಬಾ ಧೈರ್ಯ ಬೇಕಾಗುತ್ತದೆ. ಕಪಟ ಸನ್ಯಾಸಿಗಳ ಒಳಾವರಣ ಬದುಕು ಎಷ್ಟು ಹೊಲಸಾಗಿದೆ ಎಂಬುದನ್ನು ಈ ಕೃತಿ ಸಾಧ್ಯಂತ ಚರ್ಚಿಸಿದೆ. ಕನ್ನಡದ ಮಟ್ಟಿಗೆ ಈ ಕೃತಿ ಸಂಚಲನ ಉಂಟುಮಾಡುವಂತಿದೆ. 


’ನನ್ನ ಬರವಣಿಗೆ ನಿಂತಾಗ ನನ್ನ ಉಸಿರೂ ನಿಲ್ಲುತ್ತದೆ’ ಎಂದಿದ್ದ ಬಸವರಾಜ ಕಟ್ಟೀಮನಿಯವರ ’ಮೋಹದ ಬಲೆ’, ’ಜರತಾರಿ ಜಗದ್ಗುರು’ ಕಾದಂಬರಿಗಳು ದೊಡ್ಡ ಸಂಚಲನ ಸೃಷ್ಟಿಸಿ ಸಾಹಿತ್ಯಿಕ ಚರ್ಚೆ ಹುಟ್ಟು ಹಾಕಿದ್ದು ಈಗ ಚರಿತ್ರೆಯಾಗಿದೆ. ಮೆಚ್ಚುಗೆ, ವಿರೋಧ ಎರಡನ್ನೂ ಇಂತಹ ಕೃತಿಗಳು ದೊರಕಿಸಿಕೊಡುವಂಥವು. ೧೯೫೨ರಷ್ಟು ಹಿಂದೆಯೇ ಸಾಹಿತ್ಯವನ್ನು ಸಾಮಾಜಿಕ ಅಸ್ತ್ರವನ್ನಾಗಿ ಪಳಗಿಸಿ, ಝಳಪಿಸಿದವರು ಕಟ್ಟೀಮನಿಯವರು! ಅದೇ ಜಾಡನ್ನು ರವಿ ಹಂಜ್ ಹಿಡಿದು ಸಾಗಿದ್ದಾರೆ. ಈ ಕೃತಿಯ ಉದ್ದಕ್ಕೂ ನಿರ್ಭಯ, ನಿರ್ದಾಕ್ಷಿಣ್ಯ, ಸತ್ಯನಿಷ್ಠೆ, ನ್ಯಾಯಪರತೆಗಳು ಕೆಲಸ ಮಾಡಿವೆ. ಕಣ್ಣು ಮುಚ್ಚಿರುವ ಸಮಾಜವನ್ನು ಈ ಕೃತಿಯು ಎಚ್ಚರಿಸುವಂತಿದೆ. ಸಂಸ್ಕೃತಿಯ ಹೆಸರಿನಲ್ಲಿ ಮೆರೆಯುತ್ತಿರುವ ಅನಿಷ್ಟ, ಅನೈತಿಕ, ಅರಾಜಕತೆಗಳನ್ನು ಈ ಕೃತಿ ಪ್ರಕಟಿಸಿ ತನ್ನ ಎದೆಗಾರಿಕೆಯನ್ನು ತೋರಿಸಿದೆ.  ಸಮಚಿತ್ತ, ಸಂಯಮದಿಂದ ವಸ್ತುವನ್ನು ನಿರ್ವಹಿಸಲಾಗಿದೆ. ಎಲ್ಲಿಯೂ ಭಾವೋದ್ರೇಕಗಳಿಲ್ಲ; ಅದರ ಅಗತ್ಯವೂ ಬೇಕಿಲ್ಲ. ವೈಚಾರಿಕತೆ, ಸೂಕ್ಷ್ಮಸಂವೇದನಾಶಕ್ತಿ, ವಾಸ್ತವಗಳ ಮೂಲಕ ರವಿ ಹಂಜ್ ಅವರು ಸದಭಿರುಚಿಯ ಲೇಖಕರೆಂದು ತೋರುತ್ತ ತಮ್ಮ ವಿಡಂಬನಾ ಶೈಲಿಯನ್ನು ಅಷ್ಟೇ ತಣ್ಣಗೆ ನಿರ್ವಹಿಸಿದ್ದಾರೆ. ಪಾತ್ರನಿರ್ವಹಣೆ, ಸಂಭಾಷಣೆಯ ಕೌಶಲ್ಯ, ಭಾಷಾಪ್ರಯೋಗ, ಜೀವನಸತ್ಯಗಳು ಮೇಲ್ತರಗತಿಯಲ್ಲಿವೆ. ಇಂದು ಏನಾದರೂ ಸಾಧಿಸಲು ಹೊರಟವರಿಗೆ ಪಲಾಯನ ಮಾಡಿಸಲು ದುರ್ವ್ಯವಸ್ಥೆ ಬೇರುಬಿಟ್ಟು ಕಾದು ಕುಳಿತಿದೆ. ಇಂತಹ ಚಕ್ರವ್ಯೂಹದಲ್ಲಿಯೂ ಇಂತಹ ಕಥಾವಸ್ತುವನ್ನಿಟ್ಟುಕೊಂಡು ಕೃತಿ ರಚಿಸಿದ ರವಿ ಹಂಜ್ ಅವರನ್ನು ನಾನು ಕನ್ನಡದ ಪರವಾಗಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.  ಕರ್ಮ, ಧರ್ಮ, ಮೋಕ್ಷ, ಸ್ವರ್ಗ, ನರಕ, ಪಾಪಪುಣ್ಯಗಳಲ್ಲಿ ಮಿಂದೇಳುವ ಮನುಷ್ಯನ ತಳಮಳವನ್ನು ಕಾದಂಬರಿಯ ಅಂತ್ಯ ಚೆನ್ನಾಗಿ ದುಡಿಸಿಕೊಂಡಿದೆ. ಆತ್ಮವನ್ನು ಉದ್ಧಾರಕ್ಕಾಗಿ ಚೆನ್ನಾಗಿ ಬಳಸಿಕೊಂಡ ಅನಂತರ ಬುದ್ಧಿಯ ವ್ಯವಹಾರದಲ್ಲಿ ಸಿಲುಕಿ ನಲುಗುವಂತಾಗುವ ಸ್ಥಿತಿಯದು. ತುಂಬಾ ಸಂಕೀರ್ಣವೂ ಮೂಲಭೂತವೂ ಆದ ನಮ್ಮ ದೇಶದ ಇತ್ತೀಚಿನ ವಿಶಿಷ್ಟ ವಸ್ತುವೊಂದರ ನಿರೂಪಣೆ ಈ ಕೃತಿಯಲ್ಲಿರುವುದು ವಿಶೇಷ.


ಪೂರ್ಣಚಂದ್ರ ತೇಜಸ್ವಿಯವರ 'ಚಿದಂಬರ ರಹಸ್ಯ', 'ಕರ್ವಾಲೋ', 'ಜುಗಾರಿ ಕ್ರಾಸ್', ಮತ್ತು 'ಮಾಯಾಲೋಕ' ಕೃತಿಗಳು ಹೇಗೆ ಓದುಗರಲ್ಲಿ ಇವುಗಳ ಮುಂದುವರಿದ ಭಾಗಗಳು ಬರಬಹುದು ಎಂಬ ನಿರೀಕ್ಷೆಯನ್ನು ಹುಟ್ಟುಹಾಕುತ್ತವೆಯೋ ಅಂತಹುದೇ ಅಂತ್ಯದ ತಂತ್ರಗಳನ್ನು ಶ್ರೀಯುತ ಹಂಜ್ ಅವರ 'ಅಗಣಿತ ಅಲೆಮಾರಿ',  'ರ ಠ ಈ ಕ' ಕೃತಿಗಳಲ್ಲದೇ ಈ ನೂತನ ಕೃತಿಯಲ್ಲಿಯೂ ಕಾಣಬಹುದಾಗಿದೆ. 


ಲೇಖಕನೊಬ್ಬ ನಿಜವಾಗಿ ನೀಡಬೇಕಾದ ಕೊಡುಗೆಯಾಗಿ ಈ ಕೃತಿಯಿದೆ. ಸಮಾಜದ ಅನೀತಿಯನ್ನು ನೋಡಿದಾಗ ಬರೆಯಬೇಕೆನಿಸುತ್ತದೆ. ಆದರೆ ಕೆಲವರಿಗೆ ಬರೆಯಲು ಕೈ, ಹೃದಯ ದುರ್ಬಲವಾಗಿಬಿಡುತ್ತವೆ. ಆದರೆ ರವಿಯವರು ಇದನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.


ಈ ಎಲ್ಲಾ ಹಿನ್ನೆಲೆಯಲ್ಲಿ ಏಕೋ ಏನೋ ಜಿ.ಎಸ್. ಶಿವರುದ್ರಪ್ಪನವರೇ ಮತ್ತೆ ನೆನಪಾಗುತ್ತಿದ್ದಾರೆ:


"ಕಾವಿಯೊಳಗೇ ಕೋವಿಯೆದ್ದು

ತನ್ನನ್ನು ತಾನೇ ಕೊಂದುಕೊಂಡದ್ದ ಕಂಡೆ.

ದೊಡ್ಡ ಪೀಠಗಳ ಮೇಲೆ ಸಣ್ಣಜನ

ಇಲಿ ಹೆಗ್ಗಣಗಳಾಗಿ ಹರಿದಾಡಿದ್ದ ಕಂಡೆ"


- ಡಾ. ಮಹೇಂದ್ರಮೂರ್ತಿ ದೇವನೂರು.

ವಿಮರ್ಶಕರು, ಮೈಸೂರು.

ಸುಧಾಮೂರ್ತಿ ಸೌಟು, ಸಲೀಮನ ಚಾಟು.

 ಹೀಗೆಯೇ ಹಲವು ವರ್ಷಗಳ ಹಿಂದೆ ಶಾರ್ಲೆಟ್ ನಗರದ ಕ್ಲೈಂಟ್ ಕಂಪೆನಿಗೆ ಪ್ರತಿ ವಾರ ಭೇಟಿ ಕೊಡುತ್ತಿದ್ದೆ. ಅಲ್ಲಿ ಹೈದರಾಬಾದ್ ಹಿನ್ನೆಲೆಯ ಸಲೀಮನಿಗೆ ಅದೇನೋ ಸಹಾಯ ಬೇಕಿತ್ತು, ಕೊಟ್ಟಿದ್ದೆ. ಅದಕ್ಕೆ ಆತ, "ನಿನಗೆ ಒಂದು ಲಂಚ್ ಕೊಡಿಸುವೆ" ಎಂದು ಒತ್ತಾಯಿಸುತ್ತಿದ್ದ. ಕಡೆಗೆ ಆಗಲಿ ಎಂದು ಒಪ್ಪಿದೆ. ಅದಕ್ಕೆ ಅವನು, "ನಾನು ಫ್ಯಾನ್ಸಿ ಗಿನ್ಸಿ ಎಲ್ಲಾ ಕೊಡಿಸಲು ಆಗಲ್ಲ. ಸಿಂಪಲ್ಲಾಗಿ ಸಬ್ವೇ ಸ್ಯಾಂಡ್ವಿಚ್ ಕೊಡಿಸುವೆ" ಎಂದ. "ಅದಕ್ಕೇನು! ನೀನು ಏನು ಕೊಡಿಸಿದರೂ ಸರಿ, ಮಾರಾಯ" ಎಂದಿದ್ದೆ. 


ಸಬ್ವೇಗೆ ಕರೆದುಕೊಂಡು ಹೋದ ಅವನು, ಹನ್ನೆರಡು ಇಂಚಿನ ಒಂದು ವೆಜ್ಜೀ ಸ್ಯಾಂಡ್ವಿಚ್ ಆರ್ಡರ್ ಮಾಡಿ ನನ್ನೆಡೆಗೆ ತಿರುಗಿ, "ರವಿ ಭಾಯ್, ಇದನ್ನೇ ಬೈಟು ಮಾಡಿದರೆ ಸಾಕಲ್ಲವೇ!" ಎಂದು ಕೇಳಿದ. ನಾನು ಸರಿ ಎಂದೆ. ಹೊಟ್ಟೆ ಬಟ್ಟೆ ಕಟ್ಟಿ ಕಾಸು ಉಳಿಸುವ ಅನೇಕರನ್ನು ಕಂಡಿದ್ದ ನನಗೆ ಇದೇನೂ ಹೊಸತಲ್ಲ. ಹಾಗಾಗಿ ಓಕೆ ಎಂದೆ.


ಆರ್ಡರ್ ತೆಗೆದುಕೊಂಡ ಹುಡುಗಿಗೆ ಸಲೀಂ, "ಕೆನ್ ಯೂ ಪುಟ್ ಆನ್ ನ್ಯೂ ಗ್ಲೌಸಸ್" ಎಂದು ಆಕೆಗೆ ಹೊಸ ಗ್ಲೌಸ್ ತೊಟ್ಟು ತನ್ನ ಸ್ಯಾಂಡ್ವಿಚ್ ಮಾಡಲು ಹೇಳಿದ. ಆಕೆ ಹೊಸ ಗ್ಲೌಸ್ ತೊಟ್ಟು ಸ್ಯಾಂಡ್ವಿಚ್ ತಯಾರಿಸಿ ಅದನ್ನು ಎರಡು ಹೋಳು ಮಾಡಲು ಚಾಕು ಎತ್ತಿಕೊಂಡಳು. ತಕ್ಷಣವೇ ಸಲೀಂ, "ಕೆನ್ ಯೂ ಯೂಸ್ ಫ್ರೆಶ್ ನೈಫ್ ಟು ಕಟ್ ಇಟ್?" ಎಂದು ಆಕೆಗೆ ಬೇರೆ ಚಾಕು ತೆಗೆದುಕೊಂಡು ಸ್ಯಾಂಡ್ವಿಚ್ ಹೋಳು ಮಾಡಲು ಕೇಳಿದ. ಆಕೆ ವಿನಮ್ರವಾಗಿ ಬೇರೆ ಚಾಕು ತಂದು ಹನ್ನೆರಡು ಇಂಚಿನ ಸ್ಯಾಂಡ್ವಿಚ್ಚನ್ನು ಕತ್ತರಿಸಿ ಆರು ಇಂಚಿನ ಎರಡು ಸ್ಯಾಂಡ್ವಿಚ್ ಮಾಡಿಕೊಟ್ಟಳು.


ಕಟ್ಟಾ ಧಾರ್ಮಿಕ ಶ್ರದ್ಧಾಳುವಾದ ಸಲೀಮನ ಸಮಸ್ಯೆ ಆತ ಹಲಾಲ್ ಆಲ್ಲದ ಪದಾರ್ಥಗಳನ್ನು ತಿನ್ನದೇ ಇರುವುದಷ್ಟೇ ಅಲ್ಲ ಅದನ್ನು ಮುಟ್ಟುವುದು ಸಹ ಹರಾಮ್ ಎಂದುಕೊಂಡದ್ದು. ಹಾಗಾಗಿ ವೆಜ್ಜೀ ಸ್ಯಾಂಡ್ವಿಚ್ ಆರ್ಡರ್ ಮಾಡಿದ್ದ.


ಹಲಾಲ್ ಅಲ್ಲದ ಪದಾರ್ಥಗಳನ್ನು ಮುಟ್ಟಿದ್ದ ಆಕೆಗೆ ಹೊಸ ಗ್ಲೌಸ್ ತೊಡಲು ಮತ್ತು ಹಲಾಲ್ ಅಲ್ಲದ ಆಹಾರವನ್ನು ಕತ್ತರಿಸಿದ್ದ ಚಾಕು ಬದಲಿಸಿ ಫ್ರೆಶ್ ಚಾಕು ಬಳಸಲು ಕೇಳಿದ್ದು ಸಹ ಇದೇ ಕಾರಣಕ್ಕಾಗಿ. ಆತ ಹಾಗೆ ಕೇಳಿದ್ದಕ್ಕೆ ಕೊಂಚವೂ ಬೇಸರಿಸಿಕೊಳ್ಳದೆ ಆಕೆ ಸೇವೆಯನ್ನು ಕೊಟ್ಟದ್ದು ಸಲೀಮನ ವೈಯಕ್ತಿಕ ಧಾರ್ಮಿಕ ಶ್ರದ್ಧೆಯನ್ನು ಗೌರವಿಸಿಯಷ್ಟೇ.


ಹಲಾಲ್ ಪದಾರ್ಥವನ್ನು ಮಾತ್ರ ತಿನ್ನುವ ಸಲೀಂ ನನ್ನನ್ನು ಯಾವುದಾದರೂ ಕಬಾಬ್ ಜಾಯಿಂಟಿಗೆ ಕರೆದೊಯ್ಯದೆ ಧರ್ಮಭ್ರಷ್ಟವಾಗಿಸಬಲ್ಲ ಸಬ್ವೇಗೆ ಕರೆದಾಗ ಕೊಂಚ ಆಶ್ಚರ್ಯಗೊಂಡಿದ್ದ ನನಗೆ ಆತ ಏಕೆ ನನ್ನನ್ನು ಅಲ್ಲಿಗೇ ಕರೆದೊಯ್ದದ್ದು ಎಂದು ಆತ ಬಿಲ್ ಕೊಡುವವರೆಗೆ ಅರ್ಥವಾಗಿರಲಿಲ್ಲ! 


ಚೆಕ್ ಔಟ್ ಹುಡುಗಿ, "ಇಟ್ಸ್ $6.99" ಎಂದಾಗ ಸಲೀಂ ತನ್ನ ಜೇಬಿನಿಂದ ಒಂದು ಪುಕ್ಕಟೆ ಸ್ಯಾಂಡ್ವಿಚ್ ಕೂಪನ್ ಕೊಟ್ಟು, "ಥ್ಯಾಂಕ್ ಯು" ಎಂದಾಗ ಆತನ ಊಟದ ಒತ್ತಾಯ, ಧಾರ್ಮಿಕ ಶ್ರದ್ಧೆ, ಸ್ಯಾಂಡ್ವಿಚ್ ಹುಡುಗಿಯ ಸೇವಾ ಮನೋಭಾವ, ಅಮೆರಿಕನ್ ಮಾರುಕಟ್ಟೆಯ ಚಾಪೆಯ ತಂತ್ರದ ಕೂಪನ್, ಧರ್ಮವನ್ನು ಪಂಥಕ್ಕೊಡ್ಡಿಯಾದರೂ ಸರಿಯೇ ರಂಗೋಲಿ ಕೆಳಗೆ ನುಸುಳಬೇಕು ಎನ್ನುವ ಸಲೀಮನ ಪ್ರತಿತಂತ್ರ ಎಲ್ಲವೂ ತಲೆಯಲ್ಲಿ ಗಿರ್ರನೆ ಗಿರಕಿ ಹೊಡೆಯತೊಡಗಿತು.


"ಫ್ರೆಂಚ್ ಫ್ರೈ ಕರಿಯಲು ಬಳಸಿದ ಪ್ರಾಣಿಜನ್ಯ ಎಣ್ಣೆ ನನ್ನನ್ನು ಧರ್ಮಭ್ರಷ್ಟನಾಗಿಸಿತು" ಎಂದು ಮೆಕ್ಡಾನಾಲ್ಡ್ ಇಂದ ಕಾಸು ಬಿಚ್ಚಿಸಿದ್ದ ಭಾರತೀಯರ, ಮತ್ತು ಸುಧಾ ಮೂರ್ತಿಯವರ "ಮಾಂಸದ ಸಾರಿನಲ್ಲಿ ಅದ್ದಿದ ಸೌಟನ್ನು ಸಾಂಬಾರಿನಲ್ಲಿ ಅದ್ದಿ ಬಡಿಸಿದರೆ... ಎಂದು ಭಯವಾಗುತ್ತದೆ" ಎಂಬರ್ಥದ ಮಾತನ್ನು ಅರ್ಥಹೀನರಾಗಿ ಬಳಸಿದ "ಉದಾರ ಚಿಂತಕ"ರೆಲ್ಲರ ಮೂಲವು ಗಿರಕಿ ಹೊಡೆಯುತ್ತಿದ್ದ ನನ್ನ ತಲೆಯಲ್ಲಿ ಕಡೆಕಡೆದು ಬೆಣ್ಣೆಯಂತೆ ಸುಜ್ಞಾನವಾಗಿ ಸುಸ್ಪಷ್ಟವಾಗಿ ತೇಲಿಬಂದಿತು.


ಅದು ಏನಪ್ಪಾ ಎಂದರೆ........


ಎನ್ಫೀಲ್ಡ್ ಕೋವಿಗೆ ತುಂಬಲು ಕೊಟ್ಟ ಕೊಬ್ಬು ಸವರಿದ ತೋಟಾಗಳಿಗೆ ಉದ್ದೇಶಪೂರ್ವಕವಾಗಿ ಧರ್ಮಭ್ರಷ್ಟರಾಗಿಸಲು ಹಂದಿ, ದನದ ಕೊಬ್ಬು ಸವರಿದ್ದು ಎಂದು "ಕಿಡಿ" ಹಚ್ಚಿ ಸ್ವಾತಂತ್ರ್ಯ ಪಡೆದ ದೇಶದಲ್ಲಿ ಇನ್ನೆಂತಹ ಪ್ರಜೆಗಳು ಇರಲು ಸಾಧ್ಯ!


ಕ್ಯಾಮೆರಾ ಇಡಿ, ಸೌಟು ಬಿಡಿ, "ಫನ್"ಗಾಗಿ ಫಕ್ ಮಾಡಿ. ಎಲ್ಲಾ ಮಕ್ಕಳಾಟ ಆಡಿ ಮಕ್ಕಳು ಮಾಡಿ.


ಹಮೇ ತೋ ಲೂಟ್ ಲಿಯಾ ಮಿಲ್ಕೇ ಹುಸ್ನ್ ವಾಲೋನೇ ಗೋರೆ ಗೋರೆ ಗಾಲೋನೇ ಕಾಲೇ ಕಾಲೇ ಬಾಲೋನೇ....


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಕ್ರೇಜಿ ಫಿಲೋಸಾಫರ್ ಅವರ "ಅರಿದಡೆ ಆರದು ಮರೆದೊಡೆ ಮೂರದು" ವಿಶ್ಲೇಷಣೆ

 ಓದಿದ ಪುಸ್ತಕ


ಅರಿದಡೆ ಆರದು ಮರೆದೊಡೆ ಮೂರದು

ಲೇಖಕರು #ರವಿಹಂಜ್

#ಇದು ಕಥೆಯಲ್ಲ ಕಾದಂಬರಿಯೂ ಅಲ್ಲ 

ಇದು ನಮ್ಮೂರಿನ ನಿಮ್ಮೂರಿನ  ನಿಜ ಇತಿಹಾಸ


#ಇತ್ತೀಚಿಗೆ ಓದಿದ ಪುಸ್ತಕ

ರವಿ ಹಂಜ್ ರವರ ಮಹಾಪಯಣ ಪುಸ್ತಕವನ್ನು ಓದಿ  ಕ್ರಿಸ್ತ ಶಕ ಆರನೇ ಶತಮಾನವನ್ನು ಹೊಕ್ಕು ಬಂದಿದ್ದೆ 

ಈಗ ಅವರ ಮತ್ತೊಂದು ಪುಸ್ತಕ ಓದಿ    ಹನ್ನೆರನೇ ಶತಮಾನದಿಂದ ಹದಿನೆಂಟನೇ ಶತಮಾನದ ವರೆವಿಗೂ  (ಹಾಗೂ ಪ್ರಸ್ತತ ದಿನದ ವರೆವಿಗೂ) ಕರುನಾಡಿನ ಉತ್ತರ ತುದಿಯಿಂದ ದಕ್ಷಿಣದ ತುದಿಯ ವರೆವಿಗೂ ಕರುನಾಡಿನಲ್ಲಿ ಸಂಭವಿಸಿದ ರೋಚಕ ಇತಿಹಾಸವನ್ನು ಓದಿದಾಗ ಅಂತಹ ಕ್ರೌರ್ಯಗಳಿಂದ ಜನ ಸಾಮಾನ್ಯರನ್ನು ಕಾಪಾಡಿರುವ ನಮ್ಮ ಸಂವಿಧಾನ .ಕಾನೂನು ಕಟ್ಟಲೆಗಳ‌ಬಗ್ಗೆ ಗೌರವವು ಹೆಚ್ಚಾಯ್ತು  ಹಾಗೂ 

ರವಿ ಹಂಜ್  ರವರ ಜ್ಞಾನ ಬಂಡಾರದಲ್ಲಡಗಿರುವ ಅಧ್ಬುತ ಕನ್ನಡ ಪದ ಪುಂಜಗಳನ್ನು ಓದಿ ಕನ್ನಡದಲ್ಲೇ ಓದಿ ಬರೆದರೂ ಸಹಾ ಆ ಪದಗಳ ಹಾಗೂ ಅಂತಹ ವಾಖ್ಯಗಳ ಅಸ್ತತ್ವವನ್ನೇ ಅರಿಯದಿದ್ದ ನನ್ನ ಬಗ್ಗೆ ನನಗೇ ಬೇಸರವಾಯ್ತು..

#ಅರಿದಡೆ ಆರದು ಮರೆದೊಡೆ ಮೂರದು 

ಒಂದು ಅಧ್ಬುತ ಹಾಗು ಕರುನಾಡಿನ. ಓದುಗನಿಗೆ ಅವನ ಯಾವ ಊರಿನವನೇ ಆಗಿದರು ಅವನೂರಿನ ಇತಿಹಾಸವನ್ನು ಓದಿದ ಅನುಭವವಾಗುವುದು .

ಹೆಚ್ ಎಸ್ ಶಿವಪ್ರಕಾಶ್ ರವರ ಮಹಾಚೈತ್ರ ಕೃತಿಯಂತೆಯೇ ಕಲ್ಯಾಣ ನಗರದೊಳಗೆ ನೆಡೆಯು ನಾಟಕದ ದೃಷ್ಯದಿಂದ ಆರಂಭವಾಗುವ ಕಥೆ ಹಾಗು ಕಥೆಯ ವಿಷಯ ನಾಟಕದ ಪಾತ್ರದಾರಿಗಳನ್ನು ಪ್ರೇಕ್ಷಕರನ್ನು .ಸಾರ್ವಜನಿಕರನ್ನೂ ಹಾಗೂ ಓದುಗನನ್ನು ಸೇರಿಸಿಕೊಂಡ ಪುಟಗಳು ಮುಂದುವರೆಯುತ್ತವೆ..

ಬಳ್ಳಾರಿ ಕಾಲೇಜೊಂದರಲ್ಲಿ  ಪ್ರಾದ್ಯಾಪಕನಾಗಿರುವ ಸ್ನೇಹಿತನೊಬ್ಬ ಹೇಳುತ್ತಿದ್ದ 

ನಮ್ಮ ನಾಡು ಅದರಲ್ಲೂ ಹಳೆ ಮೈಸೂರು ಪ್ರಾಂತ್ಯವು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಅಕ್ಕ ಪಕ್ಕದ ಮೂರ್ನಾಲ್ಕು ರಾಜ್ಯಗಳಿಗಿಂತಲೂ ಮುಂದುವರೆದಿದೆ ಇದಕ್ಕೆ ಕಾರಣ ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲಿದ್ದ ಜನಪರ ಹಾಗೂ ಪ್ರಗತಿಪರ ಕಾರ್ಯಗಳು ಎಂದು ನಾನು ಅವನ ಮಾತನ್ನು  ಸಮ್ಮತಿಸಿಕೊಂಡಿದ್ದೆ ಹಾಗೂ ಸಮ್ಮತಿಸುತ್ತೇನೆ ..

ಈ ಪುಸ್ತಕ ಓದಿದ ನಂತರ ಕರುನಾಡಿನ ಕೆಳ ವರ್ಗದ ಜಾತಿಯ ಜನರ ಶೈಕ್ಷಣಿಕ ಹಾಗೂ ಭೌದ್ದಿಕ ವಿಕಾಸದಲ್ಲಿ  ಹಾಗು ಕೃಷಿಕ್ರಾಂತಿಯಲ್ಲಿ ವೀರಶೈವ ಮಠಗಳ ಕೊಡುಗೆಯ ಬಗ್ಗೆ ತಿಳಿದು ಆಶ್ಚರ್ಯವಾಯ್ತು 

ಇಷ್ಟಕ್ಕೂ ಈ ಪುಸ್ತಕವು ಖಂಡಿತಾ ಒಂದು ಕಲ್ಪಿತ ಕಥೆಯಲ್ಲ ಕಾದಂಬರಿಯಲ್ಲ  ನಿಜ ಇತಿಹಾಸವನ್ನು ತಿಳಿಸುವ ಒಂದು ಸಂಶೋಧನಾ ಕೃತಿ. 

ವೀರಶೈವ ಮಠಗಳಲ್ಲಿ ನೆಡೆಯತ್ತಿದ್ದ ಅಕ್ಷರ ದಾಸೋಹ ಅನ್ನದಾಸೋಹದ ಚಿಂತನೆಗಳನ್ನು ನಾಡಿನ ಉದ್ದಗಲಕ್ಕೂ ಹರಡಿ ಕಾರ್ಯರೂಪಗೊಳಿಸಿದರ ಫಲವಾಗಿ  ಇಂದು ಕರುನಾಡು ಹಲವು ರಾಜ್ಯಗಳಿಗಿಂತಲೂ ಶೈಕ್ಷಣಿಕ ಆರ್ಥಿಕ ಹಾಗೂ ಬೌದ್ದಿಕ ಪ್ರಗತಿ ಸಾಧಿಸಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. 

ಜಾತಿ ವ್ಯವಸ್ತೆ .ಕ್ರೌರ್ಯ.ಕ್ರಾಂತಿಕಾರಿಗಳು .ಶರಣರು.ಸಾದು ಸಜ್ಜನರು ಮಠಾದೀಶರು.   ಸನ್ಯಾಸಿ  ಸನ್ಯಾಸತ್ವ .ವ್ಯಾಪಾರಿ ಉದ್ಯೋಗಿ ‌ಅವರುಗಳ ಹಲವು ಮುಖಗಳ ಅನಾವರಣ .

ಶರಣರ ಉದಯ ಯಾವ ಶರಣ ಯಾವ ವಚನವನ್ನು ಯಾವ ಸಂದರ್ಭದಲ್ಲಿ ಏಕೆ ಹೇಳಿದ .ಇವೆಲ್ಲವನ್ನೂ ನಾವು ಕಥೆಯಂತೆ ಓದುತ್ತಿದ್ದರೂ ನಮಗೆ ಇತಿಹಾಸವು ಅರ್ಥವಾಗುತ್ತಿರುತ್ತದೆ .

ಈ ಪುಸ್ತಕವು ಒಂದು ಇತಿಹಾಸವನ್ನು ನಾಟಕದಂತೆ .ತೊಗಲುಗೊಂಬೆಯ ಆಟದಂತೆ ಕಥೆಯಂತೆ.ವಚನಗಳಂತೆ ಹೇಳುವ ಒಂದು ಪ್ರಯೋಗದಂತಿದೆ .

ಓದುಗನಿಗೂ ಸಹಾ ಇಂತಹ ಪ್ರಯೋಗಾತ್ಮಕ ಪುಸ್ತಕ ಓದುವುದು ಒಂದು ಹೊಸ ಅನುಭವವೂ ಹೊಸ ಸಂವೇದನೆಯೂ ಉಂಟಾಗುವುದು .


#ನಮ್ಮೂರು

ನಮ್ಮೂರಿನಲ್ಲಿ ತೆಂಗಿನ ಮರಗಳೇ ಪ್ರಮುಖ ಬೆಳೆ ಆದುದರಿಂದ ನಮ್ಮ ಊರನ್ನು   ಕಲ್ಪತರು ನಾಡೆನ್ನುವರು ನಮ್ಮೂರಿಗೆ ತೆಂಗು ಬಂದ ಇತಿಹಾಸ ತಿಳಿದಿರಲಿಲ್ಲ .

ಇಲ್ಲಿ ಮೊಟ್ಟ ಮೊದಲು ತೆಂಗು ಬೆಳೆಸಿದ ಹಾಗು ತೋಟಗಳನ್ನು ನಿರ್ಮಿಸಿದ ತೋಂಟದ ಸಿದ್ದಸಿದ್ದಲಿಂಗ ಶರಣರಿಗೊಂದು ನಮೋ ನಮಃ .

ಒಂದು ವಿಶೇಷ ಕೃತಿಯನ್ನು ರಚಿಸಿ ಓದಿರೆಂದು ಪ್ರೀತಿಯಿಂದ ಕಳುಹಿಸಿದ ರವಿಹಂಜ್ ಸರ್  ನಿಮಗೆ ಪ್ರೀತಿಯ ಪ್ರಣಾಮಗಳು

ಅಟ್ರಾಸಿಟಿ ಅಟ್ರಾಸಿಟಿ

 ಮೂವತ್ತು ವರ್ಷಗಳ ಹಿಂದೆ ನಮ್ಮ ಬಂಧುಗಳ ಹಳ್ಳಿಯ ಕ್ಷೌರಿಕನ ಮೇಲೆ ಒಂದು ಅಟ್ರಾಸಿಟಿ ಕೇಸು ಬಿದ್ದಿತ್ತು. ಮಂಗಳವಾರ ರಜಾ ಮಾಡಿದ್ದ ಕ್ಷೌರಿಕನ ಮನೆಗೆ ಹೋದ ಆ ಊರಿನ ದಲಿತ ಮುಖಂಡ ಮುಖಕ್ಷೌರ ಮಾಡಲು ಆಗ್ರಹಿಸಿದ. ಈ ದಿನ ರಜಾ ಎಂದ ಕ್ಷೌರಿಕನ ಮೇಲೆ ಅಟ್ರಾಸಿಟಿ ಕೇಸು ಹಾಕಿ ಆ ಕ್ಷೌರಿಕ ಮುಂದೆಂದೂ ಕ್ಷೌರಿಕ ವೃತ್ತಿ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟು ಆ ಕೇಸು ರಾಜಿ ಆಯಿತು.


ನನ್ನ ಬಂಧುವೊಬ್ಬರು ನಿತ್ಯ ಮಧ್ಯರಾತ್ರಿ ಕೋವಿಯನ್ನು ಬಗಲಿಗೆ ಏರಿಸಿಕೊಂಡು ತಮ್ಮ ತೆಂಗಿನತೋಟದ ಒಂದು ಭಾಗಕ್ಕೆ ತೆರಳಿ ಆಕಾಶಕ್ಕೆ ಗುಂಡು ಹಾರಿಸಿ ಮನೆಗೆ ತೆರಳಿ ಮಲಗುತ್ತಿದ್ದರು. ಹೀಗೆಯೇ ಒಮ್ಮೆ ಅವರು ಆಕಾಶಕ್ಕೆ ಹಾರಿಸಿದ ಗುಂಡು ಕಾಯಿ ಕದಿಯಲು ಮರವೇರಿದ್ದ ಕಳ್ಳನಿಗೆ ಗಾಬರಿ ಉಂಟು ಮಾಡಿ ಆತ ದೊಪ್ಪೆಂದು ಮರದಿಂದ ಉರುಳಿ ಸತ್ತಿದ್ದ. ಅವರ ದುರಾದೃಷ್ಟಕ್ಕೆ ಆ ಕಳ್ಳ ದಲಿತನಾಗಿದ್ದ. ಮತ್ತದೇ ಅಟ್ರಾಸಿಟಿ, ಕೊಲೆ, ಇತ್ಯಾದಿ "ಮೀಸಲಾತಿ" ಮೊಕದ್ದಮೆ, ಶಿಕ್ಷೆ......ತಮ್ಮ ತೋಟವನ್ನು ಕಳ್ಳರಿಂದ, ಕಾಡುಪ್ರಾಣಿಗಳಿಂದ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ ಪರವಾನಗಿ ಹೊಂದಿದ ಕೋವಿದಾರ ರೈತನಿಗೆ.


ಇಂತಹ ಅಟ್ರಾಸಿಟಿ ಕೇಸುಗಳು ಪ್ರತಿ ಹಳ್ಳಿಯಲ್ಲಿ ಹತ್ತಾರು ಆ ಕಾಲದಲ್ಲೇ ಇದ್ದವು. ಈಗ ಅವು ಮಿತಿ ಮೀರಿವೆ. ಈ ಬಗ್ಗೆ ಯಾವಾಗ  ಮಣಿಪುರದ ಮಾದರಿ ಸಾಮಾಜಿಕ ಸಂಘರ್ಷ ಆಸ್ಫೋಟಗೊಳ್ಳುವುದೋ ಬಲ್ಲವರು ಯಾರು?!? 


ಇನ್ನು ಇದೇ ಮೀಸಲಾತಿ ಏಳ್ಗೆಯ ದಲಿತ ಸಾಹಿತ್ಯ ಪರಿಷತ್ತಿನ ಮುಂದಿನ ವಾರದ ಬಿಜಾಪುರ ಸಾಹಿತ್ಯ ಸಮ್ಮೇಳನದಲ್ಲಿ ಎಂಬತ್ತು ಭಾಗ ಬಲಿತ (ಬಲಗೈ) ದಲಿತರದೇ ಮೇಜುವಾನಿ. ಅಲ್ಲಿ ಎಡಗೈ ತೊಳೆಯಲು ಮಾತ್ರ ಎಂಬಂತಿದೆ. ಪ್ರಾತಿನಿಧಿತ್ವ ಸರಿಯಿಲ್ಲ ಎಂದು ಹಾವೇರಿಯ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯ ಮಾಡಿದ್ದ ಚಿಂತಕರು ಇದಕ್ಕೆ ಎಡಗೈ ಪರ್ಯಾಯ ಮಾಡುವರೇ?!? 


ಇದು ಅಸಮತೋಲಿತ ಮೀಸಲಾತಿಯ ವಾಸ್ತವ. ಯಾರು ಏನೇ ಹೇ"ಲಿ"ದರೂ ಇದು ವಾಸ್ತವ. ಇದು ಹೇ"ಲಿ"ಕೆ ಎಂದು ಹತ್ತು ಸಾವಿರ ಮೈಲಿ ದೂರದ ಏಸಿ ರೂಮಿನಲ್ಲಿ ಕುಳಿತ ನನ್ನಂತಹ ವಿದೇಶಿ ಏಜೆಂಟನಿಗೆ ಕಾಣುವುದು ಭಾರತದ ಬೆವರಿನ ವಾಸನೆಯ ಮಣ್ಣಿನ ಕಣಕಣ ಅಂಟಿಸಿಕೊಂಡ ಭಾರತ ಮಾತೆಯ ಸತ್ಪುತ್ರ/ತ್ರಿ/Q/? ಸಂವಿಧಾನ ಊದುವ Non Disclosure Agreement (NDA) INDIAನ್ ಮಕ್ಕಳಿಗೆ ಏಕೆ ಕಾಣುತ್ತಿಲ್ಲ?! 


ಜಾತಿಗಳ ಬಗ್ಗೆ ಏನೂ ಗೊತ್ತಿರದ ನಾನು ಕನ್ನಡ ಸಾಹಿತ್ಯ ಲೋಕ ಪ್ರವೇಶಿಸಿದ ಕ್ಷಣಕ್ಕೆ ಭಾರತದ ಜಾತಿ ವ್ಯವಸ್ಥೆಯನ್ನು ಅರಿಯದಿದ್ದರೆ ನನಗೆ ಈ ಕ್ಷೇತ್ರದಲ್ಲಿ ಸಂವಹಿಸುವುದು ಸಾಧ್ಯವೇ ಇಲ್ಲ ಎಂದು ನನ್ನ ಸಾಹಿತ್ಯಿಕ ಮಿತ್ರ/ತ್ರೆಯರು ಮನವರಿಕೆ ಮಾಡಿಕೊಟ್ಟರು. ಅದರ ಫಲಶ್ರುತಿಯೇ ನಾನು ಕೇವಲ ದ.ಸಾ.ಪ. ಆಮಂತ್ರಣ ಪತ್ರಿಕೆ ನೋಡಿ ಯಾರು ಬಲಗೈ ಯಾರು ಎಡಗೈ ಎಂದು ಹೇಳುವಷ್ಟು ಪರಿಣಿತಿ ಗಳಿಸಿರುವೆ. ಏಕೆಂದರೆ ಅರಿವೇ ಗುರು. ಮನಸ್ಸಿದ್ದರೆ ಮಾರ್ಗ, ಜಾತಿ ಅರಿಯಲು, ಅಳಿಸಲು!

 

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ


ಅಂಬೇಡ್ಕರ್ ವಾದಿಗಳ ಗುರಾಣಿ

 ನಾನೊಬ್ಬ ನಾಸ್ತಿಕ. ನನ್ನನ್ನು ಬಿಟ್ಟರೆ ಅನ್ಯ ದೇವರು ಇಲ್ಲ ಎಂಬುದೇ ನನ್ನ ತತ್ವ. ಆದರೆ ನಾನೊಬ್ಬ ಸಹಮಾನವ, ಸಾಮಾಜಿಕ ಜೀವಿ. ಹಾಗಾಗಿ ನನ್ನ ಸಹಜೀವಿಗಳ ನಂಬಿಕೆಯನ್ನು ಗೌರವಿಸುತ್ತೇನೆ. ಹಾಗೆಯೇ ಮೌಢ್ಯವನ್ನು ಖಂಡಿಸುತ್ತೇನೆ. ಯಾರಾದರೂ ಒಂದು ಕಲ್ಲನ್ನು ಪೂಜಿಸುತ್ತಿದ್ದರೆ ಅದನ್ನು ಗೌರವಿಸುತ್ತೇನೆ. ಹಾಗೆಯೇ ಯಾರಾದರೂ ಒಂದು ಕಲ್ಲನ್ನು ತಂದು 'ನಾಸ್ತಿಕ ಎನ್ನುವಿಯಲ್ಲ ಇದರ ಮೇಲೆ ಮೂತ್ರ ಮಾಡು ನೋಡೋಣ' ಎಂದು ಸವಾಲು ಹಾಕಿದರೆ, ಸವಾಲು ಗೆಲ್ಲುತ್ತೇನೆ. 


ಇದು ನನ್ನ ವೈಜ್ಞಾನಿಕ, ಮಾನವಿಕ, ಸಾಮಾಜಿಕ ನಿಲುವು.


ಈಗ ನನ್ನಂತಹದೇ ನಿಲುವಲ್ಲದಿದ್ದರೂ ಅದಕ್ಕೂ ಮೀರಿದ ನಿಲುವು ಕನ್ನಡ ನಾಡಿನ ಉದಾರವಾದಿ, ಧರ್ಮನಿರಪೇಕ್ಷ, ಸಂವಿಧಾನಬದ್ಧ, ವೈಜ್ಞಾನಿಕ, ಸಮಸಮಾಜದ ಕಳಕಳಿಯ ಚಿಂತಕರದ್ದು! ಅದು ಇತ್ತೀಚಿನ ಚಂದ್ರಯಾನ ಉಡಾವಣೆ ಸಮಯದಲ್ಲಿ ಕುಂಭದ್ರೋಣ ವರ್ಷಧಾರೆಯಂತೆ ಧರಾ"ಶಾಯಿ"ಯಾಗಿ ಹರಿದಿದೆ. ಆದರೆ ಇದು ನನಗೆ ಅವರ ಮಾನಸಿಕ ದ್ವಂದ್ವವಾಗಿ ಕಾಣುತ್ತಿದ್ದೆ. ಏಕೆಂದರೆ ಮನೋವೈಜ್ಞಾನಿಕ ವಿಶ್ಲೇಷಣೆ ನನ್ನ ಆಸಕ್ತಿ. ನಾನು ಗುರುತಿಸಿದ ಅವರ ದ್ವಂದ್ವಗಳು ಸಾಕಷ್ಟಿದ್ದರೂ ಈ ಎರಡು ಇಂದಿಗೆ ಸಾಕು:


* ವಿಜ್ಞಾನಿಗಳು ವೈಜ್ಞಾನಿಕವಾಗಿ ಇರಬೇಕು. "ಬಾಬಾ ಸಾಹೇಬ"ರ ಸಂವಿಧಾನದ ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಪೂಜೆ ಪುನಸ್ಕಾರ ಸಲ್ಲದು.


ಹೌದು, ವಿಜ್ಞಾನಿಗಳು ವೈಜ್ಞಾನಿಕವಾಗಿ ಇರಬೇಕು. ಅವರು ಧಾರ್ಮಿಕ ಮೌಢ್ಯ ಹೊಂದಿರಬಾರದು. ಆದರೆ ಆ ವಿಜ್ಞಾನಿಗಳು ಪೂಜೆಯನ್ನು ಸರ್ಕಾರದ ಭಾಗವಾಗಿ ಮಾಡದೆ ಮನೆಯಲ್ಲಿ ಮಾಡಿಕೊಳ್ಳಲಿ ಎಂಬ ಉದಾರ ಮಾಫಿ ಏಕೆ? ವಿಜ್ಞಾನಿ ವೈಜ್ಞಾನಿಕವಾಗಿ ಇರಬೇಕು ಎಂದ ಮೇಲೆ ಈ ದ್ವಂದ್ವ ನಿಲುವು ಏಕೆ?


"ಬಾಬಾ ಸಾಹೇಬ"ರ ಸಂವಿಧಾನಬದ್ಧ ಸರ್ಕಾರವೇ ವೈಜ್ಞಾನಿಕ ಇಸ್ರೋ ಸಂಸ್ಥೆ, ಧಾರ್ಮಿಕ ಮುಜರಾಯಿ, ವಕ್ಫ್, ಇತ್ಯಾದಿ ಏಕೆ ನಡೆಸುತ್ತಿದೆ? ಇದು ಸರ್ಕಾರದ ದ್ವಂದ್ವವಲ್ಲವೇ!? ಸರ್ಕಾರ ಈ ತಪ್ಪನ್ನು ಸರಿಪಡಿಸಿಕೊಂಡರೆ ಜನರು ತಾವಾಗೇ ಸರಿಯಾಗುತ್ತಾರಲ್ಲವೇ!


*  "ಬಾಬಾ ಸಾಹೇಬ"ರ ಸಾಂವಿಧಾನಿಕ ಬಹುತ್ವ ಭಾರತದಲ್ಲಿ ಹೇರಿಕೆ ಸಲ್ಲ.


ಉದಾರವಾದಿ ಚಿಂತಕರ ಈವರೆಗಿನ ಚಿಂತನೆಯ ಮಹಾಮಜಲೇ ಹೇರಿಕೆ. ಅವರ ಪ್ರತಿಯೊಂದು ಚಿಂತನೆ ಹೇರಿಕೆಯೇ ಆಗಿದೆ ಎಂದು ನಿತ್ಯ ದೃಢವಾಗಿ ಕಂಗೊಳಿಸುತ್ತಿದೆ. ಮುಖ್ಯಮಂತ್ರಿ ಯಾರ ಕೈ ಕುಲುಕಬೇಕು, ಯಾರನ್ನು ಅಪ್ಪಬೇಕು ಎಂದು ಸಾರ್ವತ್ರಿಕವಾಗಿ ಹೇರುವ ಇವರು ಖಾಸಗಿಯಾಗಿ ಏನೇನು ಬಹು ಬಹುತ್ವಗಳನ್ನು  ಮುಮ ಅವರ ಮೈಮೇಲೆ ಹೇರುವರೋ....!


ಚಂದ್ರಯಾನಕ್ಕೆ ತಿರುಪತಿ ನಾಮ ಎಂದ ಉಪನ್ಯಾಸಕರ ಕಾಲೇಜಿನಲ್ಲಿ ಫೋಟೋ ಎಷ್ಟಿವೆ, ಊದುಬತ್ತಿ ಹಚ್ಚುತ್ತಾರೆಯೇ, ಪೂಜೆಗಳು ಆಗುತ್ತವೆಯೇ ಎಂಬುದನ್ನೇ ಖಂಡಿಸದ ಆ ಉಪನ್ಯಾಸಕರು ಲೋಕಕ್ಕೆ ನಾಮ ಹಾಕುತ್ತಿಲ್ಲವೆ ಎಂಬ ಖಾತ್ರಿಯೇ ಇಲ್ಲ! ಆದರೆ ಇಸ್ರೋ ವಿಜ್ಞಾನಿಗಳು ಭತ್ಯೆ ಪಡೆದು ಪೂಜೆ ಮಾಡಿಸಿದರೆ ಎಂಬ ಖಾತ್ರಿ ಇರುವಂತೆ ಲೋಕಕ್ಕೆ ನಾಮ ಹಾಕಲು ಹೊರಟಿದ್ದರು. "ಎತ್ತು ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು" ಎಂಬಂತೆ!


ಇನ್ನೂ ಮಜಾ ಎಂದರೆ "ಮುಸ್ಲಿಂ ಚಿಂತಕರ ಚಾವಡಿ" ಎಂಬ ಧಾರ್ಮಿಕ ಜೋಡಣೆ ಇರುವ ಉದಾರವಾದಿ, ವೈಜ್ಞಾನಿಕ, ಸಾಮಾಜಿಕ, "ಧರ್ಮನಿರಪೇಕ್ಷ" ವ್ಯಕ್ತಿಗಳು ಈ ಚಂದ್ರಯಾನ ಪೂಜೆ ಖಂಡಿಸುವಲ್ಲಿ ಮುಂಚೂಣಿಯಲ್ಲಿರುವುದು. ಮೊದಲು ಅವರು ತಾವು ಅಲ್ಲಾಹ್ ಸಮೇತ ಯಾವ ದೇವರನ್ನೂ ನಂಬುವುದಿಲ್ಲ. ಕಾಬಾ ಎಂಬುದು ಕೇವಲ ಕಲ್ಲು ಎಂದು ತಮ್ಮ ವೈಜ್ಞಾನಿಕ ನಿಲುವನ್ನು ಸ್ಪಷ್ಟಪಡಿಸಿ ಈ ಹೋರಾಟ ಕೈಗೊಳ್ಳಲಿ. ಇಲ್ಲದಿದ್ದರೆ ಜನತೆಯ ಕ್ಷಮೆ ಕೋರಿ "ಮುಸ್ಲಿಂ ಚಿಂತಕರ ಚಾವಡಿ" ಬರಖಾಸ್ತುಗೊಳಿಸಲಿ. ಅಲ್ಲಿಯವರೆಗೆ ಅವರಿಗೆ ಚಂದ್ರಯಾನವಲ್ಲದೆ ಯಾವ ಧಾರ್ಮಿಕ ವಿಷಯವಿರಲಿ, ಮೌಢ್ಯವನ್ನು ಸಹ ಖಂಡಿಸುವ ನೈತಿಕತೆ ಇಲ್ಲ.


ಇಲ್ಲಿ "ಬಾಬಾ ಸಾಹೇಬ"ರ ಎಂಬುದನ್ನು ""ನಲ್ಲಿ ಏಕೆ ಹಾಕಿದ್ದೇನೆಂದರೆ ಬಾಬಾ ಸಾಹೇಬರನ್ನು ಇವರು ಗುರಾಣಿಯಾಗಿ ಬಳಸುತ್ತಿದ್ದಾರೆ. ತಮ್ಮ ಪೊಳ್ಳುವಾದದ ರಕ್ಷಣೆಗೆ ಅಂಬೇಡ್ಕರ್ ಅವರನ್ನು ಗುರಾಣಿಯಾಗಿಟ್ಟುಕೊಂಡಿರುವ ಇವರಿಂದ ಸಮಾಜ ಎಚ್ಚರದಿಂದ ಇರಬೇಕು. ಏಕೆಂದರೆ ನಾಮ ಹಾಕಿದ ಉಪನ್ಯಾಸಕ ಸಹ ತನ್ನ ವಾದಕ್ಕೆ "ಬಾಬಾ ಸಾಹೇಬ"ರ ಗುರಾಣಿಯನ್ನೇ ಬಳಸಿದ್ದು.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ವ್ಯಂಗೋಕ್ತಿ

 ಒಂದು ವಿಷಯ ಯಾ ವ್ಯಕ್ತಿಯ ಮೂರ್ಖತನವನ್ನು ವಿಡಂಬನಾತ್ಮಕವಾಗಿ ಅಣಕವಾಡಿ ಅಥವಾ ಅವಹೇಳಿಸುವುದನ್ನು "ವ್ಯಂಗೋಕ್ತಿ" ಎನ್ನುತ್ತಾರೆ. ಇದು ಸಾಹಿತ್ಯದಲ್ಲಿ ಒಂದು ಪ್ರಮುಖ ಪ್ರಾಕಾರ. ಇಂಗ್ಲಿಷ್ ಸಾಹಿತ್ಯ ಅದರಲ್ಲೂ ಬ್ರಿಟಿಷ್ ಇಂಗ್ಲಿಷ್ ಸಾಹಿತ್ಯದಲ್ಲಿ ಈ ಪ್ರಾಕಾರವು ಹೆಚ್ಚು ಪ್ರಚಲಿತವಾಗಿದೆ. ಇದು ಕುಚೋದ್ಯದ ಹಾಸ್ಯ ಎನಿಸಿದರೂ ಈ ಪ್ರಾಕಾರವು ಸಂದೇಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಓದುಗರಿಗೆ ತಲುಪಿಸುತ್ತದೆ. ಇದು ಸಾಹಿತ್ಯದ ಒಂದು ತಂತ್ರ ಮಾಧ್ಯಮವಾಗಿ ಬರಹಗಾರನ ಕೋಪ, ಹತಾಶೆ, ಜುಗುಪ್ಸೆ, ಕುಚೋದ್ಯಗಳು ನವಿರು ಅಥವಾ ಗಾಢ ಹಾಸ್ಯದ ಲೇಪನದೊಂದಿಗೆ ಪ್ರಚಲಿತ ಸಾಮಾಜಿಕ, ರಾಜಕೀಯ ಅಥವಾ ಇನ್ಯಾವುದೇ ವಿದ್ಯಮಾನಗಳ ಕುರಿತಾದ ಕಟು ವಿಮರ್ಶೆಯನ್ನು ಒಳಗೊಂಡಿರುತ್ತದೆ. ಇಂಗ್ಲಿಷಿನಲ್ಲಿ ವ್ಯಂಗೋಕ್ತಿಯನ್ನು sarcasm ಎನ್ನುತ್ತಾರೆ. ಲ್ಯಾಟಿನ್ ಪದ sarcasmos ಮತ್ತು ಗ್ರೀಕ್ ಪದ sarkasmos ಎರಡರಿಂದಲೂ ಬಂದಿರುವ ಈ ಎರಡೂ ಭಾಷೆಗಳಲ್ಲಿ ಈ ಪದವು "ಚರ್ಮ ಸುಲಿಯುವುದು", "ರೋಷದಿಂದ ತುಟಿ ಕಚ್ಚುವುದು", "ಕುಹಕ ನಗೆ" ಎಂಬ ಅರ್ಥ ಹೊಂದಿದೆ. ಕ್ರಿ.ಶ. ೧೫೫೦ರಿಂದಲೂ ಈ ಪ್ರಕಾರವು ಪಾಶ್ಚಿಮಾತ್ಯ ಸಾಹಿತ್ಯದಲ್ಲಿ ಬಳಕೆಯಲ್ಲಿದೆ.


ನನ್ನ ಫೇಸ್ಬುಕ್ ಪೋಸ್ಟುಗಳು ಸಹ ಈ ರೀತಿಯ ಭಾರತದ ಸಾಮಾಜಿಕ, ರಾಜಕೀಯ ಮತ್ತಿತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ವಿಡಂಬನಾತ್ಮಕ ಬರಹಗಳು. ಸಾಕಷ್ಟು ಭಾರತೀಯ ಶ್ರೀಸಾಮಾನ್ಯರು ನನ್ನ ಬರಹಗಳನ್ನು ಇದೇ ಅರ್ಥದಲ್ಲಿ ಸ್ವೀಕರಿಸಿದರೂ ಅನೇಕ ಸಾಹಿತಿಗಳು, ಪತ್ರಕರ್ತರು, ಚಿಂತಕರು, ಸಾಕ್ಷಿಪ್ರಜ್ಞೆಗಳು, ಕನ್ನಡ ಸಂಶೋಧನ ಪಿಹೆಚ್ದಿ ಮತ್ತು ಸ್ನಾತಕೋತ್ತರ ಪದವೀಧರರು ಇವುಗಳನ್ನು ಗ್ರಹಿಸುವಲ್ಲಿ ಸೋತು ಅಥವಾ ಸೋತಂತೆ ನಟಿಸಿ ನನ್ನನ್ನು ಬಲವೆಂದು, ಎಡವೆಂದು, ನಡುವೆಂದು, ಮೋಜುಗಾರನೆಂದು, ವಿಲಾಸಿಯೆಂದು, ವಿದೇಶಿಯೆಂದು ಇತ್ಯಾದಿಯಾಗಿ ಬ್ರ್ಯಾಂಡ್ ಮಾಡುತ್ತಿದ್ದಾರೆ. ನಾನು ಈ ಮೇಲಿನ ಯಾವುದೋ ಕೇವಲ ಒಂದು ಮಾತ್ರವಲ್ಲದೆ ಎಲ್ಲವೂ ಆಗಿರುವ ಓರ್ವ ಶ್ರೀಸಾಮಾನ್ಯ ಮಾತ್ರ ಆಗಿರುತ್ತೇನೆ. ದಯಮಾಡಿ ನನ್ನನ್ನು ಹಳೇ ಮೈಸೂರು ಕಡೆ "ಪುಕ್ಸಟ್ಟೆ ತು... ಎಂದರೆ ಮೈತುಂಬಾ ತು..." ಎನ್ನುವಂತೆ ಮೈತುಂಬಾ ಇರುವವನೆಂದು ಗ್ರಹಿಸದೆ 'ಇರುವಲ್ಲಿ ಎಲ್ಲರಂತೆ ಒಂದೇ ಇರುವವ' ಎಂದು ಪರಿಗಣಿಸಬೇಕಾಗಿ ವಿನಂತಿಸುವೆ. ನಾನು ವಿಡಂಬನೆಯನ್ನು ಕೇವಲ ಜಾಗೃತಿ ಮೂಡಿಸುವ ಒಂದು ತಂತ್ರವಾಗಿ ನೋಡುತ್ತೇನೆಯೇ ಹೊರತು ಇನ್ನೇನಾಗಿಯೂ ಅಲ್ಲ. 


ಬ್ರಿಟಿಷ್ ಹಾಸ್ಯಗಾರ ರಿಕಿ ಜೆರ್ವೈಸ್ ಹೇಳುವಂತೆ ನಾನು ಸಹ ಬ್ರಿಟಿಷರು ಈ ಸಾಹಿತ್ಯ ಪ್ರಕಾರವನ್ನು ಕತ್ತಿ ಮತ್ತು ಗುರಾಣಿಯಾಗಿ ಸದಾ ಬಳಸುವಂತೆ ಬಳಸುತ್ತೇನೆ.  ನಮ್ಮ  ಚಿಂತಕರು ಹೇಗೆ ಸಂವಿಧಾನ, ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಹಿಂದುತ್ವ, ಫ್ಯಾಸಿಸಂ, ಜಾತ್ಯಾತೀತ, ಅಸ್ಮಿತೆ, ಸೆಕ್ಯುಲರ್ ಇತ್ಯಾದಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪದಕೋಶವನ್ನು ಕತ್ತಿ, ಗುರಾಣಿಯಾಗಿ ಬಳಸುವರೋ ಹಾಗೆ! 


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಕೊಳಲ ಕೈ ಹಿಡಿದು! ಕೃತಿಯ ಮುನ್ನುಡಿ

 The first step towards getting somewhere is to decide that you are not going to stay where you are. – JP Morgan 


ಎಲ್ಲಿಗೋ ಸಾಗಲು ಹಾಕುವ ಪ್ರಥಮ ಹೆಜ್ಜೆ, ಎಲ್ಲಿರುವೆನೋ ಅಲ್ಲಿರಲಾರೆ ಎಂದರಿಯುವುದು - ಜಾನ್ ಪಿಯರ್ಪಾಂಟ್ (ಜೆಪಿ) ಮೋರ್ಗನ್.


ನಾಡಿನ ಖ್ಯಾತ ಚಿಂತಕರಾದ ಅರವಿಂದ ಚೊಕ್ಕಾಡಿಯವರು ಬರೆದ ನಮ್ಮ ನಡುವಿನ ಅಪೂರ್ವ ರಾಜತಾಂತ್ರಿಕರಾದ ಅಣ್ಣಾ ವಿನಯಚಂದ್ರ ಅವರ ವ್ಯಕ್ತಿ ಚಿತ್ರಣ "ಕೊಳಲ ಕೈ ಹಿಡಿದು" ಕೃತಿಗೆ ಬರೆದ ನನ್ನ ಮುನ್ನುಡಿ. ಭಾರತಕ್ಕೆ ಇಂದು ಬೇಕಿರುವುದು ಇಂತಹ ರಾಜತಾಂತ್ರಿಕರೇ ಹೊರತು ರಾಜಕಾರಣಿಗಳಲ್ಲ.


ಮುನ್ನುಡಿ:

ವಲಸೆ ಮಾನವನ ಮೂಲ ಗುಣ. ಮೊದಲಿಗೆ ಆಹಾರವನ್ನು ಹುಡುಕುತ್ತಾ ಸಾಗಿದ ಮಾನವ ನಾಗರೀಕತೆ ಬೆಳೆದಂತೆ ತನ್ನ ಮೂಲಭೂತ ವಲಸೆಯ ಗುಣಕ್ಕೆ ಆರ್ಥಿಕ, ಭೌಗೋಳಿಕ, ಹವಾಮಾನದಂತಹ ಭೌತಿಕಾರ್ಥ ಕಾರಣಗಳನ್ನು ಕಂಡುಕೊಳ್ಳುತ್ತ ಮುಂದೆ ಬೌದ್ಧಿಕ, ಧಾರ್ಮಿಕ ಮತ್ತು ಮಾನವಿಕದಂತಹ ಆಧ್ಯಾತ್ಮಿಕ ಕಾರಣಗಳಿಗಾಗಿ ವಲಸೆಯ ಪರಿಹಾರವನ್ನು ಕಂಡುಕೊಂಡ. ಇಂತಹ ಒಂದು ಧಾರ್ಮಿಕ ಪಲ್ಲಟದ ಸಂಕಟದ ವಲಸೆಯ ಇತಿಹಾಸ ನನ್ನದೂ ಸಹ. ಬಿಜಾಪುರದ ಸುಲ್ತಾನ ಆದಿಲ್ ಶಾಹಿ ಕಾಲದಲ್ಲಿ ಬಿಜಾಪುರದ ಇಂದಿನ ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮದಿಂದ ದಾವಣಗೆರೆ ಸಮೀಪದ ಎಳೆಹೊಳೆ ಗ್ರಾಮಕ್ಕೆ ವಲಸೆ ಬಂದ ನನ್ನ ಕುಟುಂಬವು ಅಂತಿಮವಾಗಿ ದಾವಣಗೆರೆಯಲ್ಲಿ ನೆಲೆಗೊಂಡಿತು.


ನನ್ನ ಪೂರ್ವಜರ ರೀತಿಯೇ ಒಂದು ಧಾರ್ಮಿಕ ಪಲ್ಲಟದ ಸಂಕಟ ಸಮಯದಲ್ಲಿ ಹೇರಿಕೆಯನ್ನು ತಿರಸ್ಕರಿಸಿ ಗೋವೆಯ ಕುಟುಂಬವೊಂದು ಕೇರಳಕ್ಕೆ ವಲಸೆ ಬಂದು ಕ್ರಮೇಣವಾಗಿ ದಕ್ಷಿಣ ಕನ್ನಡದಲ್ಲಿ ನೆಲೆಗೊಂಡಿತು. ಈ ಕುಟುಂಬದ ಕುಡಿ ಶಂಕರ ನಾಯಕ್ ರು ಮಹಾತ್ಮ ಗಾಂಧಿಯವರ ಪ್ರಭಾವ ಮತ್ತು ವಂಶವಾಹಿನಿಯಾಗಿ ತಮ್ಮಲ್ಲಿ ಬಂದಿದ್ದ ಪ್ರತಿರೋಧದ ಗುಣದಿಂದಾಗಿ ತಮ್ಮ ಸರ್ನೇಮ್ ಆಗಿ ಅಂಟಿಕೊಂಡಿದ್ದ ಜಾತಿಸೂಚಕ ಪದ "ನಾಯಕ್" ಅನ್ನು ಪ್ರತಿರೋಧಿಸಿ ತೆಗೆದು "ರಾವ್" ಎಂದು ಸೇರಿಸಿಕೊಂಡು ಶಂಕರ ರಾವ್ ಆಗಿ ಸಾಮಾಜಿಕ ಚಿಂತನೆ ಮತ್ತು ಸೇವೆಯನ್ನು ತಮ್ಮ ಧ್ಯೇಯವಾಗಿಸಿಕೊಳ್ಳುತ್ತಾರೆ. ಹೀಗೆ ನವಚೈತನ್ಯವನ್ನು ರೂಢಿಸಿಕೊಂಡ ತಂದೆಯ ಪ್ರತಿರೋಧದ ಗುಣವು ನವೀಕೃತಗೊಂಡು "ರಾವ್" ಎಂಬುದು ಸಹ ಮೇಲರಿಮೆಯ ಪದವೆನಿಸಿ ಅವರ ಪುತ್ರರಾದ ಕ್ರಿಯಾಶೀಲ ವಿನಯಚಂದ್ರರು "ರಾವ್" ಸರ್ನೇಮಿಗೂ ತಿಲಾಂಜಲಿ ಇಡುತ್ತಾರೆ. ಇಂತಹ ಒಂದು ಪ್ರತಿರೋಧ, ಸಾಮಾಜಿಕ ಚಿಂತನೆ, ಜೀವಪರ ಕಾಳಜಿ, ಹೊಸತನಕ್ಕೆ ತೆರೆದುಕೊಳ್ಳುವಿಕೆಯ ಎಲ್ಲಾ ಮಾನವಿಕ ಗುಣಗಳಿಗೂ ಮಾನವ ಸಹಜ ಮೂಲಭೂತ ಗುಣವಾದ ವಲಸೆಯೇ ಕಾರಣ. ಅದಕ್ಕಾಗಿಯೇ ಇರುವ ಗಾದೆ ಮಾತು, "ದೇಶ ಸುತ್ತು, ಕೋಶ ಓದು!" ದೇಶ ಸುತ್ತುವ ಗುಣ, ಕೋಶವನ್ನು ಓದಿಸಿಯೇ ಓದಿಸುತ್ತದೆ. ಓದಿಸುವ ತನಕ ಓಡಿಸುತ್ತಲೇ ಇರುತ್ತದೆ.


ವಿನಯಚಂದ್ರರಂತೆಯೇ ನಾನೂ ಸಹ ನನ್ನ ಜಾತಿಸೂಚಕ "ಹಂಜಗಿಮಠ" ಹೆಸರನ್ನು "ಹಂಜ್" ಆಗಿಸಿಕೊಂಡದ್ದು ಈ ಕೃತಿ ನನ್ನೊಂದಿಗೆ ಮತ್ತಷ್ಟು ಆಪ್ತವಾಗಿ ಬೆಸೆದುಕೊಳ್ಳಲು ಕಾರಣ. ಹೀಗೆ ಜಾತಿಸೂಚಕ ಹೆಸರುಗಳನ್ನು ಕಿತ್ತೆಸೆಯುವ ಪ್ರಗತಿಪರತೆ ಕಳೆದ ಎರಡು ತಲೆಮಾರುಗಳಲ್ಲಿ ಕ್ರಾಂತಿಯೋಪಾದಿಯಲ್ಲಿ ಮೂರ್ತಗೊಂಡಿತ್ತು. ವಿಪರ್ಯಾಸವೆಂಬಂತೆ ಇಂದು ಯಾವ ವರ್ಗ ತಮ್ಮನ್ನು ತಾವು ಉದಾರಿಗಳು, ಪ್ರಗತಿಪರರು ಎಂದು ಕರೆದುಕೊಳ್ಳುವರೋ ಅವರಿಂದಲೇ ಜಾತಿವಾದವು ಅಸ್ಮಿತೆಯ ರೂಪ ಪಡೆದುಕೊಂಡು ಕರ್ನಾಟಕದ ಆಟೋರಿಕ್ಷಾ, ಕಾರು, ಬೈಕುಗಳ ಮೇಲೆಲ್ಲಾ ಅವುಗಳ ಒಡೆಯರ ಜಾತಿ ರಾರಾಜಿಸುತ್ತಿದೆ. ಅದು ಭಾರತದ ಉದಾರವಾದದ ಅಧೋಮುಖ ಪ್ರಗತಿಯ ಸಂಕೇತ.


ಇರಲಿ, ವಿನಯಚಂದ್ರರ ಪೂರ್ವಿಕರ ಮತ್ತು ನನ್ನ ಪೂರ್ವಿಕರ ವಲಸೆಯ ಹಿಂದೆ ಧಾರ್ಮಿಕ ಹಕ್ಕು ಪ್ರಮುಖ ಕಾರಣವಾಗಿತ್ತು. ಇಲ್ಲಿ ಧಾರ್ಮಿಕ ಸ್ವಾತಂತ್ರ್ಯ ಬೇರೆ ಮತ್ತು ಧಾರ್ಮಿಕ ಹೇರಿಕೆ ಬೇರೆ. ಇಂತಹ ಸ್ವಾತಂತ್ರ್ಯವನ್ನು ಬಯಸಿ ಮತ್ತು ಹೇರಿಕೆಯನ್ನು ವಿರೋಧಿಸಿಯೇ ಯುರೋಪ್ ಕ್ರಾಂತಿಯಲ್ಲದೆ ಸಾಗರೋಪಾದಿಯಲ್ಲಿ ಯುರೋಪಿಯನ್ನರು ಅಮೆರಿಕೆಗೆ ವಲಸೆ ಬಂದದ್ದು, ಅಮೇರಿಕಾದ ಸಂವಿಧಾನವಲ್ಲದೆ ಅಂಬೇಡ್ಕರರೂ ಸಹ ಧಾರ್ಮಿಕ ಹಕ್ಕನ್ನು ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕನ್ನಾಗಿಸಿದ್ದುದು!


ಹಾಗಾಗಿ ತನ್ನ, "ಕೊಳಲ ಕೈ ಹಿಡಿದು" ಶೀರ್ಷಿಕೆಗೆ ತಕ್ಕಂತೆ ಅಣ್ಣಾ ವಿನಯಚಂದ್ರರ ಜೀವನಗಾಥೆಯ ಒಂದು ಮಾರ್ಗಸೂಚಿಯಂತಿರುವ ಈ ಕೃತಿ ತಕ್ಷಣಕ್ಕೆ ನನ್ನೊಂದಿಗೆ ಬೆಸೆದುಕೊಂಡಿತು. ಯಾವ ಕೃತಿ ತನ್ನ ಓದುಗನೊಂದಿಗೆ ಬೆಸೆದುಕೊಂಡು, "ಅರೆ, ಇದು ನನ್ನದೇ ಕತೆಯಂತಿದೆಯಲ್ಲ!" ಎನಿಸಿ ಓದುಗನೊಂದಿಗೆ ಒಂದು ಅವಿನಾಭಾವ ಸಂಬಂಧವನ್ನು ಬೆಸೆಯುವುದೋ ಆಗಲೇ ಆ ಕೃತಿಗೆ ಸಾರ್ಥಕತೆ ಬಂದುಬಿಡುತ್ತದೆ. ಇಂತಹ "ಕಥನ-ಓದುಗ" ಸಂಯೋಗದ ಸಂಬಂಧ ಕೇವಲ ನನ್ನೊಟ್ಟಿಗಲ್ಲದೆ ಎಲ್ಲಾ ಓದುಗರಿಗೂ ಈ ಕೃತಿಯು ಒಂದಲ್ಲಾ ಒಂದು ಕಾರಣದಿಂದ ಬೆಸೆಯುತ್ತದೆ. ಇದಕ್ಕೆ ಪ್ರಮುಖ ಕಾರಣ ವಲಸೆಯಲ್ಲದೆ ಕೃತಿಯಲ್ಲಿ ಬಿಂಬಿತವಾಗಿರುವ ಮಾನವನ ಇತರೆ ಮೂಲಭೂತ ಗುಣಗಳಾದ ಸಾಮಾಜಿಕ, ಮಾನವೀಯ, ಸಹಜೀವನ, ಸಂಘಟನೆಗಳಲ್ಲದೆ ಬೌದ್ಧಿಕ ಚಿಂತನೆಯ ನೈತಿಕತೆ, ಧಾರ್ಮಿಕತೆ, ಬದ್ಧತೆಯಂತಹ ಗುಣಗಳ ವ್ಯಕ್ತಿ ಚಿತ್ರಣವು ಯಾವುದೇ ಸಹಮಾನವ ಓದುಗನಿಗೆ ಸ್ವಾಭಾವಿಕವಾಗಿ ಅತ್ಯಂತ ಆಪ್ಯಾಯಮಾನ ಎನಿಸುವುದೇ ಆಗಿದೆ.


ಅಂತಹ ಅವಿನಾಭಾವ ಸಾರ್ಥಕತೆಯ ಕೃತಿ, "ಕೊಳಲ ಕೈ ಹಿಡಿದು!"


ಈ ಕೃತಿಯನ್ನು ಲೇಖಕರಾದ ಅರವಿಂದ ಚೊಕ್ಕಾಡಿಯವರು ಅಣ್ಣಾ ವಿನಯಚಂದ್ರರಾಗಿ ಪರಕಾಯಪ್ರವೇಶ ಮಾಡದೆ, ಅನತಿ ದೂರದಲ್ಲಿ ನಿಂತು ಸ್ಥಿತಪ್ರಜ್ಞ ಭಾವದಿಂದ ಅಣ್ಣಾ ವಿನಯಚಂದ್ರರ ಸ್ಥಿತಪ್ರಜ್ಞ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ. ವಿನಯಚಂದ್ರರಂತಹ ಸಾಧಕರ ಜೀವನ ಚಿತ್ರಣವನ್ನು ಕಟ್ಟಿಕೊಡುವಾಗ ಪರಕಾಯ ಪ್ರವೇಶ ಸಾಕಷ್ಟು ಬಾರಿ ಭಾವಾವೇಶಗಳಿಗೆ ಎಡೆಮಾಡಿ ಕೃತಿಯನ್ನು ಬೇರೆಯದೇ ಆಯಾಮಕ್ಕೆ ಕೊಂಡೊಯ್ಯುತ್ತದೆ. ಹಾಗಾದಾಗ ಹೊರಬರುವ ಸಾಧ್ಯತೆಗಳು ಎರಡಿವೆ. ಒಂದು, ಅಮೋಘ ಜೀವನ ಚರಿತ್ರೆ, ಮತ್ತೊಂದು ವಿನೀತಭಾವದ ಜಯಜಯ ಘೋಷ! ಇಲ್ಲಿ ಅರವಿಂದ ಚೊಕ್ಕಾಡಿಯವರು ಸಾವಧಾನದ ಸ್ಥಿತಪ್ರಜ್ಞರಾಗಿ ವಾಸ್ತವಿಕ ವ್ಯಕ್ತಿತ್ವ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ವಾಸ್ತವ ಹಿನ್ನೆಲೆಯ ಸ್ಥಿತಪ್ರಜ್ಞ ವೈಚಾರಿಕ ಬರಹಗಳಿಗೆ ನಾಡಿನಾದ್ಯಂತ ಹೆಸರುವಾಸಿಯಾದ ಅರವಿಂದ ಚೊಕ್ಕಾಡಿಯವರು ಇಲ್ಲಿಯೂ ತಮ್ಮ ಛಾಪನ್ನು ಕಾಪಿಟ್ಟುಕೊಂಡಿದ್ದಾರೆ. ಅದಕ್ಕಾಗಿ ಅರವಿಂದ ಚೊಕ್ಕಾಡಿಯವರು ಅಭಿನಂದನಾರ್ಹರು.


ವ್ಯಕ್ತಿ ಚಿತ್ರಣದಲ್ಲಿ ಆ ವ್ಯಕ್ತಿಯ ಸುತ್ತಲಿನ ಪರಿಸರದ ಚಿತ್ರಣ ಸಹ ಅತ್ಯಂತ ಅನಿವಾರ್ಯ. ಹಾಗಾಗಿ ಅದಕ್ಕೆ ಪೂರಕವಾಗಿ,


- ಕರಾವಳಿಯ ಭೌಗೋಳಿಕ ಚಿತ್ರಣವಲ್ಲದೆ ನೇಜಿ ಮಾಡುವಾಗ ಹಾಡುವ ಹಾಡುಗಳು ಮತ್ತು ಆ ಹಾಡುಗಳಲ್ಲಿರುವ ಸಾಮಾಜಿಕ ಚಿಂತನೆಗಳ ಚಿತ್ರಣವಿದೆ. ಘಟ್ಟಕ್ಕೆ ಕೆಲಸಕ್ಕೆ ಹೋಗಬೇಕಾದ ಆರ್ಥಿಕ ಸಂಕಷ್ಟ, ಘಟ್ಟದ ಮೇಲಿನ ಚಳಿ, ದುಡಿಯುವ ಅನಿವಾರ್ಯವಿದ್ದರೂ ಕಂಬಳಿ ಇಲ್ಲದ ಕಾರಣಕ್ಕೆ ಘಟ್ಟದ ಮೇಲೆ ಹೋಗಲಾಗದ ತೊಳಲಾಟಗಳ ಸೂಕ್ಷ್ಮ ಪರಿಚಯವಿದೆ. 


- ಸಾಮಾಜಿಕವಾಗಿ ಬಾಲ್ಯವನ್ನು ಪ್ರಮುಖವಾಗಿ ಪ್ರಭಾವಿಸುವ ಶಾಲೆ ಮತ್ತು ಶಿಕ್ಷಕರ ಸ್ಮರಣೆ ಇದೆ. ವಿನಯಚಂದ್ರರ ಶಿಕ್ಷಕರಾದ ಸಕರಾಮರಾವ್ ಅವರು ಹೇಳಿದ್ದ ಸಾಹಸಮಯ ಕತೆಗಳು, ಶೇಷಾಚಲಂ ಹೂಡೆ ಅವರ ಎನ್ ಸಿ ಸಿ ತರಬೇತಿ, ಶಾಲೆಯಲ್ಲಿ ಆಡಿದ ಕ್ರಿಕೆಟ್ ಆಟೋಟ, ಪಾಠೋಕ್ತಿ ಇವೆಲ್ಲವೂ ವಿನಯಚಂದ್ರರ ಮೇಲೆ ಪರಿಣಾಮಕಾರಿ ಪ್ರಭಾವ ಬೀರಿ ಅವರ ಜೀವನವನ್ನು ರೂಪಿಸಿದ ಉಲ್ಲೇಖಗಳಿವೆ.


- ಸಮಾಜೋಧಾರ್ಮಿಕ ಉತ್ಸವವಾಗಿ ಆರಂಭಗೊಂಡ ಬೆಳ್ಳಾರೆಯ ಗಣೇಶೋತ್ಸವ, ಮುಂದೆ ಗಣೇಶೋತ್ಸವವು ಟಿಸಿಲೊಡೆದು ಶಾರದೋತ್ಸವ, ಸಾಯಿಬಾಬಾ ಮತ್ತು ಸುಬ್ರಹ್ಮಣ್ಯ ಭಜನಾ ಮಂಡಳಿಗಳಾದರೂ ಅವೆಲ್ಲವೂ ಒಂದಾಗಿ ಬಾಲ ವಿನಯಚಂದ್ರರ ಸಂಗೀತ ಆಸಕ್ತಿಗೆ ಪೋಷಣೆ ನೀಡಿದ ಹೊಳಹಿದೆ.


- ಬೆಳ್ಳಾರೆಯ ಗಣೇಶೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಮಿಳರು ಬರುತ್ತಿದ್ದರು ಎನ್ನುವ ಕೃತಿಯಲ್ಲಿನ ಮಾತು ಕೆಲವರಿಗೆ ಕರಾವಳಿಯಲ್ಲಿ ತಮಿಳರು ಹೇಗೆ ಬಂದರು ಎಂಬ ಪ್ರಶ್ನೆಯನ್ನು ಮೂಡಿಸಬಹುದು. ಅದಕ್ಕೆ ಉತ್ತರವಾಗಿ ತಮಿಳರು ಕರಾವಳಿಗೆ ಶ್ರೀಲಂಕಾದಿಂದ ನಿರ್ವಸತಿಗರಾಗಿ ವಲಸೆ ಬಂದಿದ್ದರು ಎಂಬ ಮತ್ತೊಂದು ಕುತೂಹಲಕರ ವಲಸೆಯ ಕತೆಯು ಕೃತಿಯಾಚೆಗಿನ ಓದುಗರ ಹುಡುಕಾಟಕ್ಕೆ ಸಿಗುವುದು.


ಒಟ್ಟಾರೆ ಹೀಗೆ ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಸಂಘಜೀವಿಯಾಗುತ್ತ ಬೆಳೆದ ವಿನಯಚಂದ್ರರನ್ನು ಸ್ವಾಭಾವಿಕವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಆಕರ್ಷಿಸಿರಬಹುದು. ಆ ಆಕರ್ಷಣೆ ಕೊಳಲ ರೂಪವಾಗಿ ಸಾಂಕೇತಿಕ ರೂಪಕವಾಗಿರುವುದು ಕೃತಿಯ ಶೀರ್ಷಿಕೆಯ ವಿಶೇಷ. 


ಅವರ ಹಾಸ್ಟೆಲ್ ಜೀವನ ಮತ್ತದರ ಉಸ್ತುವಾರಿಯಲ್ಲಿ ಉತ್ತಮ ದಿನಸಿಗಳನ್ನು ಆಯುವ ಬಗೆಯನ್ನು ಕಲಿತಿದ್ದ ವಿನಯಚಂದ್ರರಿಗೆ ಜೀವನೋಪಾಯಕ್ಕೆ ಸಹಜವಾಗಿ ದಿನಸಿ ವ್ಯಾಪಾರ ಸೂಕ್ತ ಎನಿಸಿರಬಹುದು. ಹಾಗಾಗಿ ಅದರಲ್ಲಿ ತೊಡಗಿದಾಗಲೂ ಗುಣಮಟ್ಟದೊಂದಿಗೆ ರಾಜೀ ಆಗದೆ ತಮ್ಮ ವ್ಯಾಪಾರದಲ್ಲಿ ಸೂಕ್ತ ಬದಲಾವಣೆ ತಂದು ಯಶಸ್ವಿಯಾದರು. ಆದರೆ ಅವರ "ವ್ಯಾಪಾರವೂ ಜನಸೇವೆ" ಎಂಬ ನಿಲುವು ಕ್ರಮೇಣ ಅವರ "No profit no loss" ಸೂತ್ರದಿಂದ ವ್ಯಾಪಾರವನ್ನು ನಷ್ಟಕ್ಕೆ ತಿರುಗಿಸಿತು. ಮುಂದೆ ಅಪಘಾತವಾಗಿ ಸುಧಾರಿಸಿಕೊಂಡು ಬಂದು ತಮ್ಮ "ಭಾರತ್ ಟ್ರೇಡರ್ಸ್" ಛಾಪನ್ನು ಸುಳ್ಯದ ಉತ್ತಮ ಗುಣಮಟ್ಟದ ವಸ್ತುಗಳನ್ನು ನ್ಯಾಯಬೆಲೆಗೆ ಒದಗಿಸುವ ಮತ್ತು ನೈತಿಕ ವ್ಯಾಪಾರಕ್ಕೆ ಹೆಸರುವಾಸಿಯಾಗುವಂತೆ ಜನಸ್ನೇಹಿ ಆಗಿಸಿದರು. ಇವರ ಈ ಕಟ್ಟುವಿಕೆ ಸುಳ್ಯದ ದಿನಸಿ ವ್ಯಾಪಾರಸ್ಥರಲ್ಲಿ ಒಂದು ಬದ್ಧತೆಯನ್ನು ಹುಟ್ಟುಹಾಕಿ ಜನರಿಗೆ ಗುಣಮಟ್ಟದ ವಸ್ತುಗಳು ಸೂಕ್ತ ಬೆಲೆಗೆ ಸಿಗುವಂತೆ ಆಗಲು ಅವರ ಸಂಘ ಜೀವನ, ಬದ್ಧತೆ, ಸಾಮಾಜಿಕ ಕಳಕಳಿ, ಮತ್ತು ನಿಷ್ಠೆಯೇ ಕಾರಣವಾಗಿವೆ.  


ಸುಳ್ಯದ ವ್ಯಾಪಾರೀ ನೀತಿಗಳು, ಮತ್ತು ಅದನ್ನು ಬದಲಿಸಲು ಅಣ್ಣಾ ವಿನಯಚಂದ್ರರು ಮಾಡಿದ ಪ್ರಯತ್ನಗಳು ನನ್ನನ್ನು ಶಿವಮೊಗ್ಗದ ಶಿವಪ್ಪನಾಯಕ ಮಾರುಕಟ್ಟೆಯ ನಮ್ಮಜ್ಜನ ದಿನಸಿ ಅಂಗಡಿಯಲ್ಲಿ ಕುಳಿತು ನಾನು ವ್ಯಾಪಾರ ಮಾಡುತ್ತಿದ್ದ ದಿನಗಳನ್ನು ಕಣ್ಮುಂದೆ ತಂದವು. ಮಾರುಕಟ್ಟೆಯಲ್ಲಿನ ವ್ಯಾಪಾರೀ ಉದ್ದೇಶದ ಬಣಗಳು ಅವುಗಳಲ್ಲಿನ ಪರಸ್ಪರ ಒಳಒಪ್ಪಂದ, ಒಪ್ಪಂದಗಳನ್ನು ಮೀರಿದಾಗ ತಂದೊಡ್ಡಬಲ್ಲ ಲುಕ್ಸಾನು ಎಲ್ಲವೂ ನೆನಪಾದವು. ಈ ವ್ಯಾಪಾರೀ ಬಣಗಳು ಒಂದು ರೀತಿಯ ಮಾಫಿಯಾ ಬಣಗಳಂತೆಯೇ ಇದ್ದವು. ಮಾಫಿಯಾ ಎಂದರೆ ಅದು ನಿಷೇಧಿತ, ಹಾಗಾಗಿಯೇ ಈಗ ಆ ಬಣಗಳು ನೋಂದಾಯಿತ ಸಂಘಗಳಾಗಿ ಒಪ್ಪಿತವಾಗಿವೆ! ಒಟ್ಟಾರೆ ಇಂತಹ ಸಂಘಟಿತ ಬಣಗಳನ್ನು ಛಲ ಬಿಡದೆ ವಿನಯಚಂದ್ರರು ಬದಲಾಯಿಸಿದ್ದು ಸಾಹಸವೇ ಸರಿ. ಜೀವನ ಸಂಘರ್ಷದ ಅನುಭವದ ಹಿನ್ನೆಲೆಯ ಯಾವುದೇ ವ್ಯಕ್ತಿಗೂ ಹೀಗೆ ಕೃತಿಯು ಆಪ್ತವಾಗುತ್ತ ಸಾಗುತ್ತದೆ. ಅನುಭವವಿರದವರಿಗೆ ಜೀವನವು ಹೀಗೂ ಇರುತ್ತದೆ ಎಂಬ ಅರಿವನ್ನು ಮೂಡಿಸಿ ಆಪ್ತವಾಗುತ್ತದೆ. ಸುಳ್ಯದ ವ್ಯಾಪಾರೀ ವಲಯದಲ್ಲಿ ವಿನಯಚಂದ್ರರು ತಂದ ಇಂತಹ ಬದಲಾವಣೆ ಸುಲಭದ್ದಲ್ಲ, ಅದು ಅತ್ಯಂತ ಸಂಘರ್ಷಣೀಯ ಬದಲಾವಣೆ ಎನ್ನುವುದು ವ್ಯಾಪಾರೀ ಹಿನ್ನೆಲೆಯವರಿಗೆ ಮಾತ್ರ ಅರಿವಾಗುವ ಅಂಶ.


ಯಾವ ಧಾರ್ಮಿಕ ಹೇರಿಕೆಯ ಸರ್ವಾಧಿಕಾರಿ ಧೋರಣೆಯನ್ನು ಧಿಕ್ಕರಿಸಿ ವಲಸೆ ಬಂದಿದ್ದರೋ ಅದೇ ಧಿಕ್ಕಾರ ಮತ್ತು ಸರ್ವಾಧಿಕಾರ ಮುಖಾಮುಖಿಯಾಗಿ ವಿನಯಚಂದ್ರರನ್ನು ಸಂಸ್ಥಾ ಕಾಂಗ್ರೆಸ್ಸಿನಿಂದ ಇಂದಿರಾ ಕಾಂಗ್ರೆಸ್ಸಿಗೆ ಬದಲಾಗಿ ಜನಸಂಘಕ್ಕೆ ವಲಸೆ ತರುತ್ತದೆ. ಪಕ್ಷ ಬದಲಾದರೂ ಧೋರಣೆ ಅದೇ ಬಂಡಾಯದ್ದಾಗಿರುತ್ತದೆ. ಚುನಾವಣಾ ಅಕ್ರಮ, ಸರಕಾರಿ ಯಂತ್ರಗಳ ದುರ್ಬಳಕೆಯಿಂದ ಗೆದ್ದಿದ್ದ ಇಂದಿರಾ ಗಾಂಧಿಯವರ ಸದಸ್ಯತ್ವ ಅನೂರ್ಜಿತವಾಗಿ ತಪ್ಪಿತಸ್ಥರೆಂದು ಘೋಷಣೆಯಾದರೂ ಪ್ರಧಾನಮಂತ್ರಿಯಾಗಿ ಮುಂದುವರಿಯಲು ಅವಕಾಶ ಸಿಕ್ಕಿ ತುರ್ತುಪರಿಸ್ಥಿತಿ ಜಾರಿಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ತಮ್ಮ ನಿಲುವು, ಸಾಮಾಜಿಕ ಕಳಕಳಿ ಮತ್ತು ಬದ್ಧತೆಯನ್ನು ವಿನಯಚಂದ್ರರು ಹೇಗೆ ನಿಭಾಯಿಸಿದರು ಎಂಬ ನಿರೂಪಣೆ ಇಂದಿನ ಯುವಕರಿಗೆ ಮಾದರಿಯಾಗಿದೆ.


ಕರಾವಳಿಯ ಅತ್ಯಂತ ನೈತಿಕ, ಸಾಮಾಜಿಕ ಕಳಕಳಿಯ ಹೋರಾಟಗಾರರು ಹೇಗೆ ಸಂಸ್ಥಾ ಕಾಂಗ್ರೆಸ್, ಜನಸಂಘ, ಜನತಾ ಪಕ್ಷ ನಂತರ ಭಾರತೀಯ ಜನತಾ ಪಕ್ಷವಾಗಿ ಎಲ್ಲಾ ಧರ್ಮದ ಜನರನ್ನೂ ಒಳಗೊಂಡು ವಿಕಾಸ ಹೊಂದುತ್ತಾ ಇದ್ದುದು ಡಾ. ಚಿತ್ತರಂಜನ್ ಅವರ ಕೊಲೆಯ ನಂತರ ಹೇಗೆ ಇಂದಿನ ಕರಾವಳಿಯಾಗಿ ವಿಕಾಸ ಹೊಂದಿತು ಎಂಬ ಪರೋಕ್ಷ ನೈಜ ಚಿತ್ರಣದ ಕುರುಹಿದೆ. ಎಲ್ಲಿಯೂ ಉತ್ಪ್ರೇಕ್ಷೆ ಇಲ್ಲದೆ ಅತ್ಯಂತ ಸಹಜವಾಗಿ ಹೇಗೆ ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರಗಳು ಕರಾವಳಿಯನ್ನು ಪಲ್ಲಟಿಸಿದವು ಎಂಬ ಸೂಕ್ಷ್ಮ ದಿಕ್ಸೂಚಿ ಚಿತ್ರಣವಿದೆ. ಕರಾವಳಿಯ ರಾಜಕೀಯ ಮತ್ತು ಸಾಮಾಜಿಕ ಪಲ್ಲಟದ ಕುರಿತಾಗಿ ಸಂಶೋಧನೆಗೆ ತೊಡಗುವವರಿಗೆ ಈ ಕೃತಿಯು ಒಂದು ಮಾರ್ಗದರ್ಶಿ ಕೈಪಿಡಿಯಾಗಬಲ್ಲದು. ಈ ಪಲ್ಲಟವು ಕೇವಲ ಕರಾವಳಿಯಲ್ಲದೇ ಇಡೀ ದೇಶಕ್ಕೆ ದೇಶವೇ ಹೇಗೆ "ರಘುಪತಿ ರಾಘವ ರಾಜಾರಾಂ" ಎಂಬ ಆಧ್ಯಾತ್ಮಿಕ ಸಾತ್ವಿಕತೆಯಿಂದ "ಜೈ ಶ್ರೀರಾಮ್" ಎಂಬ ಭೌತಿಕ ತಾತ್ವಿಕತೆಗೆ ಪಲ್ಲಟಗೊಂಡಿತು ಎಂಬ ಒಂದು ಅತ್ಯಂತ ಸೂಕ್ಷ್ಮ ಹೊಳಹನ್ನು ಇಲ್ಲಿ ಕಾಣಬಹುದು. 


ಏಕೆಂದರೆ ಇಂದು ಓಲೈಕೆಯ ಮಹಾಪೂರದಲ್ಲಿ ಕೊಚ್ಚಿಹೋಗಿರುವ ಭಾರತೀಯ ಎಡಪಂಥೀಯರು ಪದೇ ಪದೇ "ಬುದ್ದಿವಂತ"ರ ಕರಾವಳಿಯು ಹಿಂದುತ್ವದ ಕುಲುಮೆಯಾಗಿದೆ ಎಂದು ಕರಾವಳಿಗೆ ಕರಾಳತೆಯ ಬಣ್ಣ ಬಳಿಯುತ್ತಲೇ ಇದ್ದಾರೆ. ಕರಾವಳಿಯಲ್ಲಿ ಜನಸಂಘ ಎಂದಿನಿಂದಲೂ ಇದ್ದಾಗ ಅಂದಿರದ ಈ ಪರಿಸ್ಥಿತಿ ಇಂದೇಕೆ ಇದೆ?


ಭಟ್ಕಳದಂತಹ ಕ್ಷೇತ್ರದಲ್ಲಿ ಕೋಮು ಸಾಮರಸ್ಯ, ಮಾನವೀಯ ನೆಲೆಯ ಜನಸ್ನೇಹಿ ವೈದ್ಯರಾದ ಬಿಜೆಪಿಯ ಚಿತ್ತರಂಜನ್ ಅವರು ಗೆದ್ದಿರಲಿಲ್ಲವೇ! ಅವರ ಕೊಲೆಯಿಂದ ಉದ್ಭವವಾದ ವಿದೇಶಿ ಪ್ರೇರಿತ ಕರಾವಳಿಯ ಮೂಲಭೂತವಾದವನ್ನು, ಉಗ್ರವಾದವನ್ನು ನಿಷ್ಠುರವಾಗಿ ಖಂಡಿಸದ ಇದೇ ಓಲೈಕೆಯ ಬಳಗ ಮತ್ತು ಸರ್ಕಾರಗಳ ತುಷ್ಟೀಕರಣ ನೀತಿಗಳು ಇಂದಿನ ಕರಾವಳಿಗೆ ಕಾರಣವಾಗಿದೆ. ಇದು ಕೇವಲ ಕರಾವಳಿಯಲ್ಲದೆ ರಾಜ್ಯ, ದೇಶಾದ್ಯಂತ ಪಸರಿಸಿದೆ. ಆದರೂ ಈ ಓಲೈಕೆಯ ಚಿಂತಕವರ್ಗ ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆಯನ್ನು ಆರಂಭಿಸದೆ ಇಂದಿಗೂ ಬೌದ್ಧಿಕ ಅಸ್ಪೃಶ್ಯತೆಯನ್ನು ಪಾಲಿಸುತ್ತಿದೆ. ಇವರ ಕರ್ಮಠ ವಾದಗಳು ಇಂದು ದೇಶವನ್ನು ನಿಧಾನವಾಗಿ ಚುನಾಯಿತ "ಸರ್ವಾಧಿಕಾರ"ದತ್ತ ಕರೆದೊಯ್ಯುತ್ತಿವೆ. ಹಾಗಾಗಿಯೇ ಕರಾವಳಿಯ ಇಂದಿನ ಸ್ಥಿತಿಗತಿಯ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡುವವರಿಗೆ ಈ ಕೃತಿಯಲ್ಲಿರುವ ಸೂಕ್ಷ್ಮ ಹೊಳಹು ಮಾರ್ಗದರ್ಶಿಯಾಗಬಲ್ಲದು ಎಂದದ್ದು.


ಇನ್ನು ರಾಜನೀತಿಯ ದೃಷ್ಟಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಅಣ್ಣಾ ವಿನಯಚಂದ್ರರು ನಡೆಸಿದ ಚರ್ಚೆಯ ಭಾಗದ ಪ್ರಮುಖ ಅಂಶಗಳ ದಾಖಲೆ ಅತ್ಯಂತ ಗಮನಾರ್ಹ. ಓರ್ವ ಸಂಸದೀಯ ಪಟು ತನ್ನ ಚರ್ಚೆಯನ್ನು ಮಂಡಿಸುವಾಗ ಆತನಿಗಿರಬೇಕಾದ ಚರ್ಚೆಯ ವಿಷಯದ ಆಳ ಅರಿವು, ವಿಶ್ಲೇಷಣೆ, ಒಳಿತು-ಕೆಡುಕುಗಳ ಪರಾಮರ್ಶೆ, ಕೆಡುಕುಗಳನ್ನು ಸರಿಪಡಿಸುವ ಚಿಂತನೆಯ ಮಾರ್ಗೋಪಾಯಗಳ ವಿವರಗಳು ರಾಜ್ಯಶಾಸ್ತ್ರ ಅಧ್ಯಯನಕ್ಕೆ ಮಾರ್ಗದರ್ಶನ ನೀಡುವಂತಿವೆ. ಏಕೆಂದರೆ ಕಾರ್ಪೊರೇಟ್ ಕಂಪೆನಿಗಳ ತಜ್ಞ ಆಡಳಿತಗಾರರು ಒಂದು ಯೋಜನೆಯ ಸಾಧಕ ಬಾಧಕಗಳನ್ನು ಹೇಗೆ ನಿರೂಪಿಸಿ ಚರ್ಚಿಸಿ ಒಂದು ದೂರಗಾಮಿ ದೃಢ ಯೋಜನೆಯನ್ನು ರಚಿಸುತ್ತಾರೆ ಎಂಬುದನ್ನು ಅವರುಗಳ ಸಲಹೆಗಾರನಾಗಿ ಹತ್ತಿರದಿಂದ ಕಂಡಿರುವ ಮತ್ತು ಅಮೆರಿಕನ್, ಯುರೋಪ್ ರಾಜನೀತಿಜ್ಞರು ನಡೆಸುವ ಇಂತಹುದೇ ಚರ್ಚೆಗಳನ್ನು ನೋಡಿರುವ ನನಗೆ ಅಂತಹ ವಿಷಯ ಮಂಡನೆ, ಚರ್ಚೆಗಳು ನಮ್ಮ ವಿಧಾನಸಭೆಯ ಕಲಾಪಗಳಲ್ಲಿ ಯಾವುದೇ ದೃಶ್ಯ ಅಥವಾ ಮುದ್ರಿತ ಮಾಧ್ಯಮದ ಸುದ್ದಿಗಳಲ್ಲಿ ಕಂಡುಬಂದಿಲ್ಲ. ಹಾಗಾಗಿ ಅಣ್ಣಾ ವಿನಯಚಂದ್ರರ ಪರಿಷತ್ ಕಲಾಪದ ಚರ್ಚೆಯ ದಾಖಲೆ ನನ್ನನ್ನು ವಿಶೇಷವಾಗಿ ಚಕಿತಗೊಳಿಸಿತು. ಇಂತಹ ಚರ್ಚೆ, ವಾದವನ್ನು ಮಂಡಿಸಬಲ್ಲ ಓರ್ವ ಸಮರ್ಥ ರಾಜನೀತಿಜ್ಞರು ಇವರೆಂದು ಅವರ ಮೇಲಿನ ಗೌರವ ಹೆಚ್ಚಿತು. ಇಂತಹ ದಾಖಲೆಗಳು ಶೈಕ್ಷಣಿಕ ವಲಯದ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಷಯಗಳ ಬಗ್ಗೆ ಹೆಚ್ಚಿನ ಸಂಶೋಧನೆಗೆ ಉತ್ತಮ ಆಕರವಾಗುತ್ತದೆ.


ಇನ್ನು ಇಂತಹ ಗಹನವಾದ ಚರ್ಚೆಗಳು ಇಲ್ಲವೇ ಇಲ್ಲ ಎನ್ನುವ ಈ ಕಾಲದಲ್ಲಿ ಸಚಿವರಾಗಿದ್ದ ಮಾಧುಸ್ವಾಮಿ ಅವರ ವಿಷಯ ಮಂಡನೆ ನೆನಪಾಗುವುದು ಬಿಟ್ಟರೆ ಇನ್ಯಾರೂ ನೆನಪಿಗೆ ಬಾರದಷ್ಟು ಸಂಸದೀಯ ಪಟುಗಳು ಪಟಾಕಿ-ಚಟಾಕಿ ಚರ್ಚಿಗರಾಗಿದ್ದಾರೆ. ಅವರೆಲ್ಲರೂ ಈ ಕೃತಿಯನ್ನು ಓದುವುದು ಸಹ ಅವಶ್ಯ.


ಸಮಗ್ರವಾಗಿ ಹೀಗೆ ಬೇರುಮಟ್ಟದ ಸಾಮಾಜಿಕ ಕಾರ್ಯಕರ್ತರಾಗಿ, ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ, ಸಹಕಾರ ಭಾರತಿ, ಭಾರತೀಯ ಕಿಸಾನ್ ಸಂಘವಲ್ಲದೆ ತಮಿಳುನಾಡು, ಕೇರಳದಲ್ಲಿ ಪಕ್ಷದ ನಾಯಕತ್ವ ವಹಿಸಿಕೊಂಡು ವಿಧಾನ ಪರಿಷತ್ ಸದಸ್ಯರಾಗಿ ಸಾಮಾಜಿಕ ಬದಲಾವಣೆಗೆ ಬದ್ಧರಾಗಿ ಎಲ್ಲಾ ಆಯಾಮಗಳಿಂದಲೂ ಕಾರ್ಯ ನಿರ್ವಹಿಸಿದ ಅಣ್ಣಾ ವಿನಯಚಂದ್ರರ ಸುದೀರ್ಘ ಪಯಣದ ಒಂದು ಝಲಕ್ ಈ ಕೃತಿಯಲ್ಲಿದೆ. "ಗುಜರಾತ್ ಮಾದರಿ" ಎಂದರೆ ಅದು ಅಲ್ಲಿನ ಸರ್ಕಾರವು ಭಾರತೀಯ ಕಿಸಾನ್ ಸಂಘದ ಜೊತೆಗೂಡಿ ಸಾಧಿಸಿದ "ಶಾಸಕ-ಕೃಷಿಕ", "ಸರ್ಕಾರ-ಸಹಕಾರ" ಸಂಯೋಗದ ಪ್ರಗತಿ ಎಂಬ ಅಣ್ಣಾ ವಿನಯಚಂದ್ರರು ಸಾಬೀತು ಮಾಡಿ ತೋರಿಸಿದ್ದ ನಿರೂಪಣಾತ್ಮಕ ವಿಷಯವನ್ನು ಇತ್ತೀಚಿನ ಬಿಜೆಪಿಗರು ಮರೆತು ಕೇವಲ "ಗುಜರಾತ್ ಮಾದರಿ" ಎಂಬ ಉದ್ಘೋಷವನ್ನು ಜಪಿಸುವುದು ವಿಷಾದನೀಯವಲ್ಲದೆ ವಿರೋಧಿಗಳ ಟೀಕೆಗೂ ಅಸ್ತ್ರವಾಗಿದೆ. ಈ ಬಗ್ಗೆ ಸಾಕಷ್ಟು ಮುಜುಗರದ ಟೀಕೆಗಳಿದ್ದು ಪಕ್ಷವನ್ನು ನಗೆಪಾಟಲಿಗೆ ಗುರಿ ಮಾಡಿವೆ. ಈ ಮಾದರಿಯಲ್ಲಿ ಪ್ರಾಮಾಣಿತ ಸಾಧನೆಯಿದ್ದರೂ ತೋರಿಸಲಾಗದ ಅಸಹಾಯಕ ನಾಯಕತ್ವದ ಸ್ಥಿತಿಗೆ ಪಕ್ಷವು ಆತ್ಮಶೋಧನೆ ಮಾಡಿಕೊಳ್ಳಬೇಕು ಎನಿಸುತ್ತದೆ.


ಒಟ್ಟಾರೆಯಾಗಿ ಮೂಲತಃ ಬಂಡಾಯ ಪ್ರವೃತ್ತಿಯ ಆದರೆ ವಾಸ್ತವವನ್ನು ಅರಿತ ಸ್ಥಿತಪ್ರಜ್ಞ ಫಲಾಪೇಕ್ಷೆರಹಿತ ಕರ್ಮಚಾರಿ ಅಣ್ಣಾ ವಿನಯಚಂದ್ರರ ವ್ಯಕ್ತಿತ್ವವು ವಲಸೆಯ ರೂಪಕವಾಗಿ "ಎಲ್ಲಿಯೂ ನಿಲ್ಲದಿರು, ಕೊನೆಯನೆಂದು ಮುಟ್ಟದಿರು....ನೀ ಅನಂತವಾಗಿರು" ಎಂಬ ಕವಿ ಆಶಯದಂತೆ "ಕೊಳಲ ಕೈ ಹಿಡಿದು" ಸಾಗಿ ಬಂದು ಕೊನೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನೂ ನಿರ್ಭಾವುಕ ಸ್ಥಿತಪ್ರಜ್ಞರಾಗಿ ತೊರೆದು ಜೆಪಿ ಮೋರ್ಗನ್ ಉಕ್ತಿಯಂತೆ ".....ಎಲ್ಲಿರುವೆನೋ ಅಲ್ಲಿರಲಾರೆ" ಎಂದು ಜಂಗಮಸ್ಥರಾಗುತ್ತಾರೆ.


ಹೀಗೆ ನನಗೆ ಚಲನಶೀಲ ವಲಸೆಯ ರೂಪಕವಾಗಿ ತೆರೆದುಕೊಂಡ "ಕೊಳಲ ಕೈ ಹಿಡಿದು" ಕೃತಿಯು ಓದುಗರಿಗೆ ಅವರದೇ ಆದ ಮಾನವಿಕ ಆಯಾಮಗಳಲ್ಲಿ ತೆರೆದುಕೊಂಡು ಆಪ್ಯಾಯಮಾನವಾಗುತ್ತದೆ ಎಂದು ದೃಢವಾಗಿ ಹೇಳಬಲ್ಲೆ. ಇಲ್ಲಿ ಯಾವುದೇ ಅತಿಮಾನವನಾಗದೇ ನಮ್ಮ ನಿಮ್ಮೆಲ್ಲರಂತೆ ಸಹಜಮಾನವನಾಗಿಯೂ ತಮ್ಮದೇ ಆದ ವೈಶಿಷ್ಟ್ಯದ ಛಾಪನ್ನು ಮೂಡಿಸಿ "ಚಲನೆ ಪ್ರಕೃತಿಯ ನಿಯಮ" ಎಂದು ನಿರೂಪಿಸುವ ವ್ಯಕ್ತಿ ಚಿತ್ರಣ ಮಾತ್ರವಿದೆ. ಅಣ್ಣಾ ವಿನಯಚಂದ್ರರ ಗಟ್ಟಿ ನಂಬಿಕೆಯ, "Experts are not always correct" ಎಂಬ ನುಡಿಗೆ ಕೃತಿಯು, "But experienced are" ಎಂದು ಇಂಬು ಕೊಡುವಂತಿದೆ.


ರವಿ ಹಂಜ್,

ಶಿಕಾಗೋ, ಯು.ಎಸ್. ಎ.

Galib to Hanj

 ಗಾಲಿಬ್ (1797-1869): 

ಮಸೀದಿಯಲಿ ಕುಳಿತು ಮದ್ಯ ಹೀರಲೇಕೆ ನಿರ್ಬಂಧ,

ಜಗದ ಕಣಕಣದಲ್ಲೂ ಇರಲು ದೇವನ ಅನುಬಂಧ!


ಅಲ್ಲಮ ಇಕ್ಬಾಲ್ (1877-1938): 

ಮಸೀದಿಯಲ್ಲ ಕುಡುಕರ ವಿಳಾಸ, ಅದು ದೇವರ ನಿವಾಸ.

ಕುಡಿಯಲು ಹೊಕ್ಕುಬಿಡು ದೇವನಿಲ್ಲದ ಕಾಫಿರನ ಮನಸ!


ಅಹ್ಮದ್ ಫರಾಜ್ (1931-2008): 

ಬಂದಿಹೆನು ನಾನು ಕಾಫಿರನ ಮನವ ಕಂಡು,

ದೇವನಿದ್ಧಾನೆ ಅಲ್ಲಿಯೂ ನಿಗೂಢಗೊಂಡು!


ವಾಸಿ ಶಾ (1973 - ): 

ಜಗದ ಕಣಕಣದಲ್ಲೂ ಇರಲು ದೇವನ ಅನುಬಂಧ,

ಸ್ವರ್ಗಕ್ಕೆ ಹೋಗು ಕುಡಿಯಲು ಅಲ್ಲಿ ಇಲ್ಲ ನಿರ್ಬಂಧ!


ಸಾಕಿ ಫರೂಕಿ (1936-2018): 

ಕುಡಿಯುವುದು ನಾನು ಜಗದ ದುಃಖವ ಮರೆಯಲು.

ಮಜವೇನಿದೆ ದುಃಖವೇ ಇಲ್ಲದ ಸ್ವರ್ಗದಲಿ ಕುಡಿಯಲು!


ರವಿ ಹಂಜ್ (ವರ್ತಮಾನ): ಅನಂತ ಕನ್ಯಾಸೆರೆಯ ದುಃಖ ಮಡುಗಟ್ಟಿದೆ ಅಲ್ಲಿಯೂ,

ಕಾತರಿಸುತಿಹರು ಹೂರಿಯರು ದುಃಖದೆ ಕೂಡಿ ಕುಡಿಯಲು!


ಶತಮಾನಗಳಿಂದ ಮೊನ್ನೆ ಮೊನ್ನೆಯತನಕ ಹೀಗೆ ಮದಿರೆ-ಮಸೀಹ, ರಸಿಕ-ರಹೀಮ ವ್ಯಾಖ್ಯಾನವನ್ನು ಮಾಡಿಕೊಂಡು ಬಂದಿದ್ದ ಸಾಹಿತ್ಯ ಪರಂಪರೆಯನ್ನು ಇಂದಿನ ದುರಿತ ಕಾಲದಲ್ಲಿ ಕಾಪಿಡುವುದು ಅತ್ಯಂತ ಅವಶ್ಯವಾಗಿದೆ. ಒಂದೆಡೆ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ ಎಂಬ ಹತಾಶೆಯ ಮಾತು ಕೇಳಿಬಂದರೆ, ಇನ್ನೊಂದೆಡೆ ಎಗ್ಗಿಲ್ಲದ ಹೀಯಾಳಿಕೆ ಇದೆ. ಇವೆರಡರ ನಡುವೆ ಚುನಾವಣೆ ಮುಗಿದಿದೆ, ಚಿತಾವಣೆ ಬರಲಿದೆ. ನಡುವೆ ನಡೆಯಲಿ ಈ ಮದಿರೆಯ ಸಮಾರಾಧನೆ!


ಚಿಯರ್ಸ್, ಸ್ಕೋಲ್, ಸಾಲ್ಯೂತ್.

"ಅರಿದಡೆ ಆರದು, ಮರೆದೊಡೆ ಮೂರದು" ಕುರಿತು ಮಹೇಂದ್ರ ಮೂರ್ತಿ ಅವರ ಅಭಿಪ್ರಾಯ.

 ರವಿ ಹಂಜ್ ಅವರು ಈಗಾಗಲೇ ಸಾಹಿತ್ಯವಲಯದಲ್ಲಿ ಭದ್ರವಾದ ಹೆಜ್ಜೆಗಳನ್ನು ಇರಿಸಿದವರು. ಅವರು ಅನಿವಾಸಿ ಭಾರತೀಯರಾಗಿರುವ ಕಾರಣ ಅವರ ಕೃತಿಗಳು ಹೆಚ್ಚು ಚರ್ಚೆಯಾಗಿಲ್ಲ. ಇದು ಎಲ್ಲಾ ಅನಿವಾಸಿ ಭಾರತೀಯ ಸಾಹಿತಿಗಳಿಗೂ ಅನ್ವಯಿಸುತ್ತದೆ. "ಭಾರತ ಒಂದು ಮರುಶೋಧನೆ" ಕೃತಿಯಲ್ಲಿ ಶ್ರೀಯುತರು ಚರಿತ್ರೆ, ಧರ್ಮ, ರಾಜಕಾರಣ, ಸಾಹಿತ್ಯವನ್ನು ಹೇಗೆ ಗ್ರಹಿಸಬೇಕೆಂಬ ಮಾದರಿಯನ್ನೇ ಸೃಜಿಸಿದ್ದಾರೆ. ಹಾಗೆಯೇ ಅವರ "ಅಗಣಿತ ಅಲೆಮಾರಿ"ಯಲ್ಲಿ ಭಾರತ ಮತ್ತು ಚೈನಾ ವ್ಯವಸ್ಥೆಗಳನ್ನು ತೌಲನಿಕವಾಗಿ ವಿಶ್ಲೇಷಿಸಿ ಹೊಸ ಬೆಳಕಿಂಡಿಯನ್ನು ತೆರೆದಿದ್ದಾರೆ. "ಹುಯೆನ್ ತ್ಸಾಂಗ್ ನ ಮಹಾಪಯಣ" ಮತ್ತು "ಬಸವರಾಜಕಾರಣ" ಸಂಶೋಧನೆಯ ನೆಲೆಯಲ್ಲಿ ಬೆಲೆ ಕಟ್ಟಿದ್ದರೆ, "ರ ಠ ಈ ಕ" ಕೇವಲ ಆತ್ಮಚರಿತ್ರೆಯಾಗಿ ದಾಖಲಾಗದೆ ಸಾಂಸ್ಕೃತಿಕ ಪಠ್ಯವಾಗಿ ಗಮನ ಸೆಳೆಯುತ್ತದೆ. ನನಗೆ ತಿಳಿದಂತೆ ಭಾರತದ ಕರ್ನಾಟಕದ ಸಾಂಸ್ಕೃತಿಕ ಸಂಗತಿಗಳಿಗೆ ಬರಹಗಳ ಮೂಲಕ ಸದಾ ಸ್ಪಂದಿಸುವ ಏಕೈಕ ಅನಿವಾಸಿ ಬರಹಗಾರರಾಗಿ ರವಿ ಹಂಜ್ ಕಾಣುತ್ತಾರೆ.

ಅವರ ಇಂತಹ ಸ್ಪಂದನೆಯ ಮನಸ್ಥಿತಿಯೇ ಅವರಿಂದ ಅವರ ನೂತನ ಕಾದಂಬರಿ "ಅರಿದಡೆ ಆರದು, ಮರೆದೊಡೆ ಮೂರದು"ಯನ್ನು ಬರೆಸಿದೆ. ಈ ಕೃತಿಯು ತನ್ನ ಹೆಸರಿನಿಂದಲೇ ಗಮನ ಸೆಳೆಯುತ್ತದೆ. ’ನೂರನೋದಿ ನೂರ ಕೇಳಿದಡೇನು! ಆಸೆ ಬಿಡದು ರೋಷ ಹರಿಯದು’ ಎಂಬ ಬಸವಣ್ಣನವರ ವಚನವನ್ನು ಈ ಕೃತಿ ಸ್ಫಟಿಕ ಸದೃಶದಂತೆ ಅನಾವರಣಗೊಳಿಸುತ್ತದೆ. 

ಸುತ್ತಣ ಜಗತ್ತಿನಲ್ಲಿ ಇಂದ್ರಿಯ-ವಿಜೇತರನ್ನು ಗೌರವಿಸುವ, ಪೂಜಿಸುವ, ದೇವರೆಂದೇ ಬಗೆಯುವ ಪರಂಪರೆಯೊಂದು ಮನುಷ್ಯ ಲೋಕದಲ್ಲಿ ಪ್ರಾರಂಭಗೊಂಡಾಗಿನಿಂದ ಮಠ, ಸ್ವಾಮೀಜಿಗಳ ಪರಂಪರೆ ಆರಂಭವಾಯಿತು. ಅಂತಹ ಮಠಗಳು ಹೇಗೆ ಎಲ್ಲಾ ಇಂದ್ರಿಯ ವಾಂಛೆಗಳನ್ನು ಆವಾಹಿಸಿಕೊಳ್ಳುತ್ತಾ ಬಂದವು ಎಂಬುದನ್ನು ಸೃಜನಶೀಲತೆಯಿಂದ ರವಿ ಹಂಜ್ ಕಥೆ ಕಟ್ಟುತ್ತಾ ಸಾಗುತ್ತಾರೆ. ಶಕ್ತಿ ಕವಿ ರನ್ನ ತನ್ನ ’ಸಾಹಸಭೀಮ ವಿಜಯಂ’ ಕಾವ್ಯದಲ್ಲಿ ಕಾವ್ಯಶಕ್ತಿಯನ್ನು ವಿಮರ್ಶಿಸುವವರಿಗೆ ಎಂಟೆದೆ ಇರಬೇಕೆನ್ನುತ್ತಾನೆ. ಅಂತಹ ಎಂಟೆದೆ ಇದ್ದವರೇ ಅದನ್ನು ವಿಮರ್ಶಿಸಿದರು ಎನ್ನುವ ಮಾತು ಬೇರೆ. ಇಲ್ಲಿ ರವಿ ಹಂಜ್ ಮಠೀಯ ವ್ಯವಸ್ಥೆಯ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡು ಅಂತಹ ಎಂಟೆದೆಯವರಾಗಿದ್ದಾರೆ. ಈ ಕೃತಿಯ ಪ್ರಕಾಶಕರಾದ ಲೋಕಪ್ಪನವರೂ ಅಂತಹ ಧೀಮಂತರೇ. 

ಸಾಹಿತ್ಯ ಸಾಮಾಜಿಕ ಅಸ್ತ್ರವಾಗಬೇಕು, ಸಮಾಜದ ಆರೋಗ್ಯ ಕಾಪಿಡಬೇಕು ಎನ್ನುವ ಷೆಲ್ಲಿಯು ಕವಿಗಳನ್ನು ಶಾಸನಕಾರರು ಎಂದು ಕರೆದಿದ್ದಾನೆ. ಆ ಹಿನ್ನೆಲೆಯಲ್ಲಿಯೇ ವಚನಕಾರರು ಸಮಾಜ ತಿದ್ದಲು ಸಾಹಿತ್ಯವನ್ನು ಮಾಧ್ಯಮವಾಗಿಸಿಕೊಂಡರು. ’ಶೂದ್ರತಪಸ್ವಿ’ ಮೂಲಕ ಕುವೆಂಪುರವರು ಸಾಹಿತ್ಯವನ್ನು ಅಸ್ತ್ರವಾಗಿಸಿದರು. ರವಿ ಹಂಜ್ ಅವರು ಕನ್ನಡದ ಈ ಪರಂಪರೆಯ ವಾರಸುದಾರರಂತೆ ಈ ಕೃತಿಯ ಮೂಲಕ ಕಾಣುತ್ತಿದ್ದಾರೆ.

ಇಪ್ಪತ್ತೊಂಬತ್ತು ಅಧ್ಯಾಯಗಳ ಕಥಾನಕವು "ಅರಿದಡೆ ಆರದು, ಮರೆದೊಡೆ ಮೂರದು" ಕೃತಿಯಾಗಿದೆ. ಈ ಕಥಾವಸ್ತುವನ್ನು ಆಯ್ದುಕೊಳ್ಳುವುದು ಸುಲಭ; ಆದರೆ ಅದನ್ನು ನಿರ್ವಹಿಸುವುದು ಕಷ್ಟಸಾಧ್ಯ. ರವಿಯವರು ವಸ್ತುವನ್ನು ಚೆನ್ನಾಗಿ ದುಡಿಸಿಕೊಂಡಿರುವುದು ಅವರ ಸೃಜನಶೀಲತೆಯನ್ನು ತೋರಿಸುತ್ತದೆ. ಕೃತಿಯಾದ್ಯಂತ ಬಳಸಿರುವ ವಚನಗಳು ಕೀಲಿಕೈಯಂತಿವೆ. ದಖ್ಖನ್ ಪ್ರಸ್ತಭೂಮಿಯ ವರ್ಣನೆಯೊಂದಿಗೆ ಕೃತಿ ಆರಂಭವಾಗಿ ಸಂಚಾರಿ ಜಂಗಮ ಯೋಗಿಗಳು ಪಾಳೆಯಗಾರರ ಬಿಂಬಗಲ್ಲಿನಲ್ಲಿ ನೆಲೆನಿಲ್ಲುವುದರೊಂದಿಗೆ ಕೃತಿಯ ಆವರಣ ಅನಾವರಣವಾಗುತ್ತದೆ. ಕೃತಿಯಲ್ಲಿ ರಾಜಕೀಯ, ಸಾಮಾಜಿಕ, ರಾಜತಾಂತ್ರಿಕ ಆಯಾಮಗಳಲ್ಲದೆ ವೀರಶೈವ-ಶೈವ-ಲಿಂಗಾಯತ ಪಂಥ ಮತ್ತು ವಚನಗಳ ಕುರಿತ ಆರೋಗ್ಯಕರ ಚರ್ಚೆಗಳಿವೆ.

ವಿಶೇಷ ಕಥಾಹಂದರ, ಪಾತ್ರ ನಿರ್ವಹಣೆ, ವಿಡಂಬನೆ, ಆಯಾಯ ಕಾಲಘಟ್ಟದ ಸನ್ನಿವೇಶಗಳ ಸೃಷ್ಟಿಯೊಂದಿಗೆ ಕೃತಿಕಾರನಿಗಿರಬೇಕಾದ ಸ್ಥಿತಪ್ರಜ್ಞತೆ ಓದುಗರನ್ನು ಒಂದು ಮಾಯಾಲೋಕಕ್ಕೆ ಕರೆದೊಯ್ಯುತ್ತದೆ.

ಈ ಕಾದಂಬರಿಯನ್ನು ಓದುತ್ತ ಜಿ.ಎಸ್. ಶಿವರುದ್ರಪ್ಪನವರ ’ವಿಚಾರಣೆ’ ಕವಿತೆಯ ಕೆಲವು ಪಂಕ್ತಿಗಳು ನನಗೆ ನೆನಪಾದವು. ಅವು ಹೀಗಿವೆ:

"ಬಾ, ಪಾಪೀ ಬಾ; ಕೈ ಕಟ್ಟಿ ನಿಂತುಕೋ

ಈ ಕಟಕಟೆಯೊಳಗೆ-

ಬೊಗಳು, ಇದುವರೆಗೂ ಮಾಡಿದ್ದೆಲ್ಲವನು ಬಾಯ್ಬಿಟ್ಟು;

----------

ಎದುರಿಗಿದೆ ವೇದ - ಪುರಾಣಭಗವದ್ಗೀತೆ - ಬೈಬಲ್ಲು 

ಯಾವುದರ ಮೇಲಾದರೂ ಸರಿ, ಆಣೆಯಿಡು, ಹೇಳು,

ಶೋಧಿಸು, ನರನರದ ಒಳಪದರದಲ್ಲೂ ಹುದುಗಿ -

ದಿತಿಹಾಸಗಳ ಹಳೆಯ ಸರಕ.

ನೆನಪಿಲ್ಲವೇ ನಿನಗೆ? ಬರೆದಿಟ್ಟಿದ್ದಾನೆ

ಎಲ್ಲವನ ಈ ಗೂಢಾಚಾರ.

ಬೇರಿಂದ ತುದಿಯೆಲೆತನಕ ಗೊತ್ತಿದೆ ನಮಗೆ

ನಿನ್ನ ಅವತಾರ."

ಸಾಹಿತ್ಯ ಕಲೆಯೂ ಹೌದು; ಜೀವನವೂ ಹೌದು. ಸಮಾಜವನ್ನು ಹಸನುಗೊಳಿಸುವ ಸಾಧನವೂ ಹೌದು ಎಂಬುದನ್ನು ಈ ಕೃತಿ ತೋರಿಸಿದೆ. ಡೋಂಗಿ ಸ್ವಾಮಿಗಳ ಬಗ್ಗೆ ಬರೆಯಲು ತುಂಬಾ ಧೈರ್ಯ ಬೇಕಾಗುತ್ತದೆ. ಕಪಟ ಸನ್ಯಾಸಿಗಳ ಒಳಾವರಣ ಬದುಕು ಎಷ್ಟು ಹೊಲಸಾಗಿದೆ ಎಂಬುದನ್ನು ಈ ಕೃತಿ ಸಾಧ್ಯಂತ ಚರ್ಚಿಸಿದೆ. ಕನ್ನಡದ ಮಟ್ಟಿಗೆ ಈ ಕೃತಿ ಸಂಚಲನ ಉಂಟುಮಾಡುವಂತಿದೆ. 

’ನನ್ನ ಬರವಣಿಗೆ ನಿಂತಾಗ ನನ್ನ ಉಸಿರೂ ನಿಲ್ಲುತ್ತದೆ’ ಎಂದಿದ್ದ ಬಸವರಾಜ ಕಟ್ಟೀಮನಿಯವರ ’ಮೋಹದ ಬಲೆ’, ’ಜರತಾರಿ ಜಗದ್ಗುರು’ ಕಾದಂಬರಿಗಳು ದೊಡ್ಡ ಸಂಚಲನ ಸೃಷ್ಟಿಸಿ ಸಾಹಿತ್ಯಿಕ ಚರ್ಚೆ ಹುಟ್ಟು ಹಾಕಿದ್ದು ಈಗ ಚರಿತ್ರೆಯಾಗಿದೆ. ಮೆಚ್ಚುಗೆ, ವಿರೋಧ ಎರಡನ್ನೂ ಇಂತಹ ಕೃತಿಗಳು ದೊರಕಿಸಿಕೊಡುವಂಥವು. ೧೯೫೨ರಷ್ಟು ಹಿಂದೆಯೇ ಸಾಹಿತ್ಯವನ್ನು ಸಾಮಾಜಿಕ ಅಸ್ತ್ರವನ್ನಾಗಿ ಪಳಗಿಸಿ, ಝಳಪಿಸಿದವರು ಕಟ್ಟೀಮನಿಯವರು! ಅದೇ ಜಾಡನ್ನು ರವಿ ಹಂಜ್ ಹಿಡಿದು ಸಾಗಿದ್ದಾರೆ. ಈ ಕೃತಿಯ ಉದ್ದಕ್ಕೂ ನಿರ್ಭಯ, ನಿರ್ದಾಕ್ಷಿಣ್ಯ, ಸತ್ಯನಿಷ್ಠೆ, ನ್ಯಾಯಪರತೆಗಳು ಕೆಲಸ ಮಾಡಿವೆ. ಕಣ್ಣು ಮುಚ್ಚಿರುವ ಸಮಾಜವನ್ನು ಈ ಕೃತಿಯು ಎಚ್ಚರಿಸುವಂತಿದೆ. ಸಂಸ್ಕೃತಿಯ ಹೆಸರಿನಲ್ಲಿ ಮೆರೆಯುತ್ತಿರುವ ಅನಿಷ್ಟ, ಅನೈತಿಕ, ಅರಾಜಕತೆಗಳನ್ನು ಈ ಕೃತಿ ಪ್ರಕಟಿಸಿ ತನ್ನ ಎದೆಗಾರಿಕೆಯನ್ನು ತೋರಿಸಿದೆ. ಸಮಚಿತ್ತ, ಸಂಯಮದಿಂದ ವಸ್ತುವನ್ನು ನಿರ್ವಹಿಸಲಾಗಿದೆ. ಎಲ್ಲಿಯೂ ಭಾವೋದ್ರೇಕಗಳಿಲ್ಲ; ಅದರ ಅಗತ್ಯವೂ ಬೇಕಿಲ್ಲ. ವೈಚಾರಿಕತೆ, ಸೂಕ್ಷ್ಮಸಂವೇದನಾಶಕ್ತಿ, ವಾಸ್ತವಗಳ ಮೂಲಕ ರವಿ ಹಂಜ್ ಅವರು ಸದಭಿರುಚಿಯ ಲೇಖಕರೆಂದು ತೋರುತ್ತ ತಮ್ಮ ವಿಡಂಬನಾ ಶೈಲಿಯನ್ನು ಅಷ್ಟೇ ತಣ್ಣಗೆ ನಿರ್ವಹಿಸಿದ್ದಾರೆ. ಪಾತ್ರನಿರ್ವಹಣೆ, ಸಂಭಾಷಣೆಯ ಕೌಶಲ್ಯ, ಭಾಷಾಪ್ರಯೋಗ, ಜೀವನಸತ್ಯಗಳು ಮೇಲ್ತರಗತಿಯಲ್ಲಿವೆ. ಇಂದು ಏನಾದರೂ ಸಾಧಿಸಲು ಹೊರಟವರಿಗೆ ಪಲಾಯನ ಮಾಡಿಸಲು ದುರ್ವ್ಯವಸ್ಥೆ ಬೇರುಬಿಟ್ಟು ಕಾದು ಕುಳಿತಿದೆ. ಇಂತಹ ಚಕ್ರವ್ಯೂಹದಲ್ಲಿಯೂ ಇಂತಹ ಕಥಾವಸ್ತುವನ್ನಿಟ್ಟುಕೊಂಡು ಕೃತಿ ರಚಿಸಿದ ರವಿ ಹಂಜ್ ಅವರನ್ನು ನಾನು ಕನ್ನಡದ ಪರವಾಗಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಕರ್ಮ, ಧರ್ಮ, ಮೋಕ್ಷ, ಸ್ವರ್ಗ, ನರಕ, ಪಾಪಪುಣ್ಯಗಳಲ್ಲಿ ಮಿಂದೇಳುವ ಮನುಷ್ಯನ ತಳಮಳವನ್ನು ಕಾದಂಬರಿಯ ಅಂತ್ಯ ಚೆನ್ನಾಗಿ ದುಡಿಸಿಕೊಂಡಿದೆ. ಆತ್ಮವನ್ನು ಉದ್ಧಾರಕ್ಕಾಗಿ ಚೆನ್ನಾಗಿ ಬಳಸಿಕೊಂಡ ಅನಂತರ ಬುದ್ಧಿಯ ವ್ಯವಹಾರದಲ್ಲಿ ಸಿಲುಕಿ ನಲುಗುವಂತಾಗುವ ಸ್ಥಿತಿಯದು. ತುಂಬಾ ಸಂಕೀರ್ಣವೂ ಮೂಲಭೂತವೂ ಆದ ನಮ್ಮ ದೇಶದ ಇತ್ತೀಚಿನ ವಿಶಿಷ್ಟ ವಸ್ತುವೊಂದರ ನಿರೂಪಣೆ ಈ ಕೃತಿಯಲ್ಲಿರುವುದು ವಿಶೇಷ.

ಪೂರ್ಣಚಂದ್ರ ತೇಜಸ್ವಿಯವರ 'ಚಿದಂಬರ ರಹಸ್ಯ', 'ಕರ್ವಾಲೋ', 'ಜುಗಾರಿ ಕ್ರಾಸ್', ಮತ್ತು 'ಮಾಯಾಲೋಕ' ಕೃತಿಗಳು ಹೇಗೆ ಓದುಗರಲ್ಲಿ ಇವುಗಳ ಮುಂದುವರಿದ ಭಾಗಗಳು ಬರಬಹುದು ಎಂಬ ನಿರೀಕ್ಷೆಯನ್ನು ಹುಟ್ಟುಹಾಕುತ್ತವೆಯೋ ಅಂತಹುದೇ ಅಂತ್ಯದ ತಂತ್ರಗಳನ್ನು ಶ್ರೀಯುತ ಹಂಜ್ ಅವರ 'ಅಗಣಿತ ಅಲೆಮಾರಿ', 'ರ ಠ ಈ ಕ' ಕೃತಿಗಳಲ್ಲದೇ ಈ ನೂತನ ಕೃತಿಯಲ್ಲಿಯೂ ಕಾಣಬಹುದಾಗಿದೆ. 

ಲೇಖಕನೊಬ್ಬ ನಿಜವಾಗಿ ನೀಡಬೇಕಾದ ಕೊಡುಗೆಯಾಗಿ ಈ ಕೃತಿಯಿದೆ. ಸಮಾಜದ ಅನೀತಿಯನ್ನು ನೋಡಿದಾಗ ಬರೆಯಬೇಕೆನಿಸುತ್ತದೆ. ಆದರೆ ಕೆಲವರಿಗೆ ಬರೆಯಲು ಕೈ, ಹೃದಯ ದುರ್ಬಲವಾಗಿಬಿಡುತ್ತವೆ. ಆದರೆ ರವಿಯವರು ಇದನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಏಕೋ ಏನೋ ಜಿ.ಎಸ್. ಶಿವರುದ್ರಪ್ಪನವರೇ ಮತ್ತೆ ನೆನಪಾಗುತ್ತಿದ್ದಾರೆ:

"ಕಾವಿಯೊಳಗೇ ಕೋವಿಯೆದ್ದು

ತನ್ನನ್ನು ತಾನೇ ಕೊಂದುಕೊಂಡದ್ದ ಕಂಡೆ.

ದೊಡ್ಡ ಪೀಠಗಳ ಮೇಲೆ ಸಣ್ಣಜನ

ಇಲಿ ಹೆಗ್ಗಣಗಳಾಗಿ ಹರಿದಾಡಿದ್ದ ಕಂಡೆ"

- ಡಾ. ಮಹೇಂದ್ರಮೂರ್ತಿ ದೇವನೂರು.

ವಿಮರ್ಶಕರು, ಮೈಸೂರು.

'ಅರಿದಡೆ ಆರದು ಮರೆದಡೆ ಮೂರದು' ಕುರಿತು Aravinda Chokkadi ಅವರ ಅಭಿಪ್ರಾಯ

 'ಅರಿದಡೆ ಆರದು ಮರೆದೊಡೆ ಮೂರದು' ರವಿ ಹಂಜ್ ಅವರು ಬರೆದಿರುವ ಕಾದಂಬರಿ. ಕಾದಂಬರಿ ಎಂದ ಮೇಲೆ ಕೃತಿಕಾರನ ಸೃಜನ ಕಲ್ಪನೆಯೇ ಮಹತ್ವದ್ದಾಗುತ್ತದೆ.

ಮಠೀಯ ವ್ಯವಸ್ಥೆಯ ಹಲವು ಬಗೆಯ ಅನೈತಿಕತೆಗಳು; ಮುಖ್ಯವಾಗಿ ಲೈಂಗಿಕ ಅನೈತಿಕ ಚಟುವಟಿಕೆಗಳು ಇಲ್ಲಿನ ಕಥಾ ವಸ್ತುವಾಗಿದೆ.‌
ಈ ಕಥಾ ವಸ್ತು ಎರಡು ದೃಷ್ಟಿಕೋನದಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಸಂಗತಿಯಾಗಿದೆ. ಮೊದಲನೆಯದು ನಿಸರ್ಗದ ಸಹಜ‌ ಜೀವಿಯಾಗಿ ಮನುಷ್ಯರ ವರ್ತನೆಗಳು ಎಂಬ ಪರಿಕಲ್ಪನೆಯಲ್ಲಿ ಕೃತಿಯನ್ನು ನೋಡಿದಾಗ ಲೈಂಗಿಕತೆಯೇ ಇಲ್ಲಿ ನಿಜವಾದ ಹೀರೋ. ಏಕೆಂದರೆ ಅದು ಜೀವಿಯ ಸಹಜ ಪ್ರವೃತ್ತಿ.‌ ಅದನ್ನು‌ ನಿಯಂತ್ರಿಸಲು ಮನುಷ್ಯ ರೂಪಿಸಿದ ಕೃತಕ ನಾಗರಿಕತೆಯ ಪ್ರತಿನಿಧಿಗಳಾಗಿ ಕಾಣಿಸುವ ಧರ್ಮ, ಸನ್ಯಾಸ, ನೀತಿ ಬೋಧನೆ, ಧಾರ್ಮಿಕ ಆಡಳಿತ ಇವೆಲ್ಲವೂ ಇಲ್ಲಿ ವಿಲನ್ ಗಳಾಗಿವೆ. ಸಹಜ ಪ್ರವೃತ್ತಿಯನ್ನು ನಿಷೇಧಿಸುವ ಎಲ್ಲವೂ ವಿಲನ್‌ಗಳೇ. ಈ ದೃಷ್ಟಿಯಲ್ಲಿ‌ ನೋಡಿದಾಗ ರೂಪಿಸಲ್ಪಟ್ಟ ವ್ಯವಸ್ಥೆ ಎಷ್ಟು ಕೆಟ್ಟದಾಗಿದೆ ಮತ್ತು ಆ ವ್ಯವಸ್ಥೆಯಿಂದಾಗಿ ಸಹಜ ಮನುಷ್ಯ ಹೇಗೆ ಜೀವ ವಿರೋಧಿಯಾಗಿ ಪರಿವರ್ತನೆಯಾಗುತ್ತಾನೆ/ಳೆ ಎಂಬುದನ್ನು ಕೃತಿಯು ನಿರೂಪಿಸುತ್ತದೆ.
ಎರಡನೆಯದು ನಾಗರಿಕತೆಯ ಪ್ರತಿನಿಧಿಯಾಗಿ ಈ ಕೃತಿಯನ್ನು ನೋಡುವ ದೃಷ್ಟಿಕೋನ.‌ ಈ ದೃಷ್ಟಿಯಲ್ಲಿ ನೋಡಿದಾಗ ಕೃತಿಯನ್ನು ಬರೆದ ರವಿಯವರ ಮೇಲೆಯೇ," ಮಠದ ಬಗ್ಗೆ, ಸನ್ಯಾಸಿಗಳ ಬಗ್ಗೆಯೆಲ್ಲ ಹೀಗೆ ಬರೆಯುವುದಾ?" ಎಂದು ಸಿಟ್ಟು ಬರಬಹುದು. ಅಥವಾ ಸನ್ಯಾಸಿ ಹೀಗೂ ಮಾಡುವುದಾ? ಎಂದು ಸನ್ಯಾಸಿ ಮತ್ತು‌ ಮಠೀಯ ವ್ಯವಸ್ಥೆಯ ಮೇಲೆ ಸಿಟ್ಟು ಬರಲೂ ಬಹುದು. ಆದರೆ ಈ ದೃಷ್ಟಿಕೋನದ ಗ್ರಹಿಕೆ ಹೆಚ್ಚು ಸಂಕೀರ್ಣ ಮತ್ತು ಉತ್ತರವಿಲ್ಲದ ಸಮಸ್ಯೆಗಳನ್ನು ಮುಂದಿಡುತ್ತಾ ಹೋಗುತ್ತದೆ.
ರವಿಯವರು ಕಥನವನ್ನು ಕಾಣುವ ಕ್ರಮದಲ್ಲಿ ಮಾನವ ಸಹಜತೆ ಇದೆ ಎನ್ನುವ ಕಾರಣಕ್ಕಾಗಿ ಈ ಕೃತಿಗೆ ಮಹತ್ವ ಇದೆ. ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮ- ಮುಂತಾದ ಐತಿಹಾಸಿಕ ವ್ಯಕ್ತಿತ್ವಗಳನ್ನು ಅವರೆಲ್ಲರಿಗೆ ತೊಡಿಸಲಾಗಿರುವ ಮುಖವಾಡವನ್ನು ತೆರೆದು ಸಹಜ ಮನುಷ್ಯರಾಗಿ ರವಿಯವರು ನೋಡುತ್ತಾರೆ. ತನಗೆ ಅನ್ಯಾಯ ಆದಾಗಲೂ ಉದಾತ್ತವಾಗಿ, ತ್ಯಾಗಿಯಾಗಿ ನಡೆದುಕೊಂಡರು ಎನ್ನುವುದು ವರ್ತಮಾನವು ಇತಿಹಾಸಕ್ಕೆ ತೊಡಿಸಿರುವ ಮುಖವಾಡ. ತನಗೆ ಅನ್ಯಾಯ ಆದಾಗ ಪ್ರತಿದಾಳಿಗೆ ಸಿದ್ಧರಿದ್ದರು ಎನ್ನುವುದು ಮಾನವ ಸಹಜ ಸತ್ಯ.‌ ಈ ಸತ್ಯದ ನೆಲೆಯಲ್ಲಿ ರವಿಯವರು ಐತಿಹಾಸಿಕ ವ್ಯಕ್ತಿತ್ವಗಳನ್ನು ಗ್ರಹಿಸಿದ್ದಾರೆ ಎನ್ನುವುದು ಸಾಹಿತ್ಯಕವಾಗಿ ಕೃತಿಯ ಯಶಸ್ಸಿನ ಮೂಲವಾಗಿದೆ. ಈ ಗ್ರಹಿಕೆಯ ಕ್ರಮವೇ ಆ ನಂತರ ಆಧುನಿಕ ಕಲ್ಲಿನಾಥ ಜಗದ್ಗುರುಗಳ ಸುತ್ತಲಿನ ಸನ್ನಿವೇಶದಲ್ಲೂ ಇದೆ. ಇಂದು ನಮ್ಮೆದುರಿನ ಸನ್ಯಾಸಿಗಳಿಗೆ ನಾವೇ ಆರೋಪಿಸಿರುವ ಉದಾತ್ತ ಗುಣಗಳ ಮುಖವಾಡಗಳನ್ನು ತೆಗೆದೇ ರವಿಯವರು ಗ್ರಹಿಸಿದ್ದಾರೆ.
ಅವೈದಿಕ ಧಾರ್ಮಿಕ ಕಂದಾಚಾರಗಳು ಮತ್ತು ಮತಾಂಧತೆಗಳೆಲ್ಲವೂ ಪ್ರಗತಿಪರ ಎನ್ನುವ ಕರ್ನಾಟಕದ ಆತ್ಮಸಾಕ್ಷಿ ರಹಿತ ಜಾತಿವಾದಿ ಪ್ರಗತಿಪರರ ಮೇಲಿನ ತಮ್ಮ‌ ಟೀಕೆಯನ್ನು ರವಿಯವರು ಈ ಕೃತಿಯಲ್ಲೂ ಮುಂದುವರಿಸಿದ್ದಾರೆ. ಆದರೆ ಎಂದಿನಂತೆ ಕಟುವಾಗಿ ಅಲ್ಲ; ಸಾಕಷ್ಟು ಸೌಮ್ಯವಾಗಿ ಟೀಕಿಸಿದ್ದಾರೆ. ಉದಾಹರಣೆಗೆ ಈ ಸಾಲುಗಳನ್ನು ಗಮನಿಸಿ: " ...ಇತ್ತೀಚೆಗೆ ಮಠದ ವಿದ್ಯಾವಂತ ಪ್ರಗತಿಪರ ಕುಲೀನ ಭಕ್ತೆಯರನ್ನು ಸಾಹಿತ್ಯ, ಸಮಾಜ ಸೇವೆ, ಸ್ತ್ರೀ ಸಬಲತೆ, ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸಿ ಅಕ್ಕಮಹಾದೇವಿ ಮಹಿಳಾ ಸಮಾಜವನ್ನು ಮಠದಡಿಯಲ್ಲಿ ರಚಿಸಿ ಶಾಖಾ ಮಠಗಳಲ್ಲಿ ಸಹ ಮಹಿಳಾ ಸಮಾಜ ಶಾಖೆಗಳನ್ನು ತೆರೆದರು...ಇವರಲ್ಲಿ ಅನೇಕರು ಕ್ರಮೇಣವಾಗಿ ಗುರುಗಳ ಆಪ್ತೆಯರಾಗುತ್ತಾ ಕಲ್ಲಿನಾಥರೊಂದಿಗೆ ಏಕಾಂತದಲ್ಲಿ ಸಾಹಿತ್ಯಿಕ ಚರ್ಚೆಯಲ್ಲಿ ಭಾಗವಹಿಸುತ್ತಿದ್ದರು".
ರವಿಯವರ ಭಾಷಾ ಬಳಕೆ ಬಹಳ‌ ಪವರ್ಫುಲ್. ಆಯಾ ಸನ್ನಿವೇಶವನ್ನು ಹೇಳಲು ಬಳಸುವ ಭಾಷೆಯೇ ಒಬ್ಬ ಲೇಖಕನ ಒರಿಜಿನಲ್ ಪ್ರತಿಭೆಯ ಒಂದಂಶವೂ ಆಗಿರುತ್ತದೆ.‌ ಉದಾಹರಣೆಗೆ ಮಠದ ಆಡಳಿತಾಧಿಕಾರಿ ಬಸವ ಭಾಗ್ಯಳನ್ನು ಕಂಡಾಗ ಕಾಮೇಶ್‌ಗೆ ಇವಳಿಗೆ ನನ್ನನ್ನು ಪರಿಚಯ ಮಾಡಿಸು ಎಂದು ಕೇಳುತ್ತಾನೆ.‌ ಆ ಸನ್ನಿವೇಶವನ್ನು ರವಿ ಹೀಗೆ ನಿರೂಪಿಸಿದ್ದಾರೆ:" ....ಬಸವನು ಕಾಮೇಶನ ಕಿವಿಯಲ್ಲಿ ಉಸುರಿದ್ದನ್ನು ಕಿರುಗಿವಿಯಲ್ಲೆ ಕೇಳಿದ್ದ ಅವಳು ತನ್ನ ಮುಂದಿನ ಏಳು ಜನ್ಮದ ನೀಲಿನಕಾಶೆಯನ್ನೆ ತಕ್ಷಣಕ್ಕೆ ಮನದಲ್ಲಿ ಹಾಕಿಕೊಂಡುಬಿಟ್ಟಳು". ಲಿಂಗಮೂರ್ತಿ ಸ್ವಾಮಿಗಳು ವಾರಿಜಾಳಿಂದ ಸಂಗೀತ ಕಲಿಕೆಯ ನೆಪದಲ್ಲಿ ಏಕಾಂತ ಸೇವೆಗೆ ಕರೆದರೂ ನಿಜವಾದ ಅಪೇಕ್ಷೆಯ ಕಡೆಗೆ ಮುಂದುವರಿಯುವ ಧೈರ್ಯವಿಲ್ಲದೆ ಇದ್ದಾಗ ವಾರಿಜಾ ಲಿಂಗಮೂರ್ತಿಯೇ ಮುಂದುವರಿಯಲಿ ಎಂದು ತೀರ್ಮಾನಿಸುತ್ತಾಳೆ. ಲಿಂಗಮೂರ್ತಿ ಸ್ವಲ್ಪ ಧೈರ್ಯದಿಂದ ಸೂಚ್ಯವಾಗಿ," ಬರೇ ಸ್ವರ ನುಡಿಸುವುದು ಬೇಡ, ಹಾಡು ಹೇಳಿಕೊಡ್ರಿ" ಎಂದಾಗ ," ಹಂಗ ಬಾ ಮಗನೇ' ಎಂದು ಮನದಲ್ಲೆ ಅಂದುಕೊಳ್ಳುತ್ತಾ,' ಬುದ್ಧಿ ಇವತ್ತಿಂದ ಚಕೋರಂಗೆ ಚಂದ್ರಮನಾ ಬೆಳಗೀನ ಚಿಂತೆ ನುಡ್ಸೋದು ಹೇಳಿಕೊಡ್ತೀನಿ...ಬಿಡ್ರಿ ಎನ್ನುತ್ತಾ" ಎನ್ನುವ ವಾಕ್ಯ ರಚನೆ ಅದ್ಭುತ ಪ್ರಯೋಗವಾಗಿದೆ. ಕಾಮಿ ಗಂಡಿನ ಕುರಿತ ಅಂತರಂಗದ ತಿರಸ್ಕಾರ ಮತ್ತು ಬಹಿರಂಗದ ಗೌರವ ಎರಡನ್ನೂ ಒಟ್ಟಿಗೇ ಹಿಡಿದಿಡಬಲ್ಲ ಭಾಷಾ ಪ್ರಯೋಗದ ತೀವ್ರತೆ ಸಾಹಿತ್ಯಕವಾಗಿ ರವಿಯವರನ್ನು ತುಂಬ ಎತ್ತರಕ್ಕೆ ಕೊಂಡೊಯ್ಯುತ್ತದೆ.
ಕಾಮ ನಿಷೇಧಕ್ಕೆ ಒಳಗಾದಲ್ಲಿ ಆಚರಣೆಗೆ ತರಬೇಕಾದರೆ ಅದಕ್ಕೆ ಅಗತ್ಯವಾಗುವ ಆರ್ಥಿಕ ಮತ್ತು ಆಡಳಿತಾತ್ಮಕ ಭ್ರಷ್ಠಾಚಾರ, ಕುಂಯುಕ್ತಿ, ಕೊಲೆ, ಗೂಂಡಾಗಿರಿ ಎಲ್ಲವೂ ಒಳಗೊಂಡೂ ಧರ್ಮದ ಪೋಷಾಕಿನಲ್ಲಿ ಹೇಗೆ ಧರ್ಮವನ್ನೂ ಸಮಾಜವನ್ನೂ ಅಸಹಾಯಕಗೊಳಿಸುತ್ತಾ ಹೋಗುತ್ತದೆ ಎಂಬುದನ್ನು ಕಾದಂಬರಿಯು ಹೇಳುತ್ತದೆ.

OCI Et al

 "ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ", "ಕನ್ನಡ ಎನೆ ಕುಣಿದಾಡುವುದೆನ್ನೆದೆ", "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂಬ ಸಾಲುಗಳು ಹೇಗೆ ನಮ್ಮಲ್ಲಿ ಒಂದು ಮಿಂಚು ಮೂಡಿಸಿ ಪ್ರಾಣವನ್ನೇ ಕೊಟ್ಟೇವು ಎನ್ನುವಷ್ಟು ಭ್ರಾಮಕ ಭಾವನೆಯನ್ನು ಮೂಡಿಸುವವೋ ಅದಕ್ಕೆ ನೂರ್ಪಟ್ಟು ಭಾವನೆಯನ್ನು ಅನಿವಾಸಿಗಳಲ್ಲಿ "ಸಾಗರೋತ್ತರ ಭಾರತೀಯ ಪ್ರಜೆ" ಎಂಬ ಸಾಲು ಮತ್ತದನ್ನು ದೃಢೀಕರಿಸುವ ಸರ್ಕಾರಿ ಪತ್ರವು ಮೂಡಿಸುವುದು. ಅಂತೆಯೇ ಒಂದು ಆಂತರಿಕ ಅನಿವಾಸಿತನಕ್ಕೆ ಸಿಲುಕಿ ಅಂತರಿಕ್ಷಕ್ಕೆ ಹಾರಿದ್ದ ರವೀಶ್ ಮಲ್ಹೋತ್ರಾ ಸಹ ಅಂದು ಪ್ರಧಾನಿ ಇಂದಿರಗಾಂಧಿಯವರು "ಅಂತರಿಕ್ಷದಿಂದ ಭಾರತ ಹೇಗೆ ಕಾಣಿಸುತ್ತದೆ?" ಎಂದಾಗ "ಸಾರೇ ಜಹಾನ್ ಸೆ ಅಚ್ಚಾ" ಎಂದು ಹೇಳಿ ಕೋಟ್ಯಾಂತರ ಭಾರತೀಯರಲ್ಲಿ ಪುಳಕವನ್ನುಂಟುಮಾಡಿದ್ದರು. ಇದು ಭಾವನೆಗಳನ್ನು ಮೀಟುವ ಕಲೆ!

ಅಟಲ್ ಬಿಹಾರಿ ವಾಜಪೇಯಿಯವರು ಅನಿವಾಸಿ ಭಾರತೀಯರಿಗೆ ದ್ವಿಪೌರತ್ವ ಕೊಡುವ ಯೋಜನೆಯ ಆರಂಭಿಕ ಹಂತವಾಗಿ "Person of Indian Origin (PIO) ಯಾನೆ ಭಾರತೀಯ ಮೂಲದ ವ್ಯಕ್ತಿ" ಎಂಬ ಕಾರ್ಡನ್ನು ಜಾರಿಗೊಳಿಸಿ ಅನಿವಾಸಿಗಳಲ್ಲಿ ಪುಳಕವನ್ನುಂಟು ಮಾಡಿ ಭಾವನೆಗಳನ್ನು ಮೀಟಿದ್ದರು. ಇಲ್ಲಿ ದಯಮಾಡಿ ಪಂಕಜ್ ಉದಾಸನ "ಚಿಟ್ಟಿ ಆಯಿ ಹೈ ವತನ್ ಸೇ ಚಿಟ್ಟಿ..." ಹಾಡು ಮತ್ತದರ ಸಿನೆಮಾ ಚಿತ್ರಣದ ದೃಶ್ಯವನ್ನು ಜ್ಞಾಪಿಸಿಕೊಳ್ಳಬೇಕಾಗಿ ವಿನಂತಿ.  ೨೦೦೫ ರಲ್ಲಿ ಕಾಂಗ್ರೆಸ್ ಸರ್ಕಾರ ದ್ವಿಪೌರತ್ವದ ಮುಂದಿನ ಹಂತವಾಗಿ OCI ಎಂದು ಇನ್ನಷ್ಟು ಮೀಟಿ ಅನಿವಾಸಿಗಳಲ್ಲಿ ದೇಶಭಕ್ತಿಯ ಹುಚ್ಚು ಹೊಳೆ ಹರಿಯುವಂತೆ ಮಾಡಿತು.  ಮತ್ತದೇ ಪಂಕಜ್ ಉದಾಸನ "ಚಿಟ್ಟಿ ಆಯಿ ಹೈ ವತನ್ ಸೇ ಚಿಟ್ಟಿ..." ಹಾಡು ಮತ್ತದರ ಸಿನೆಮಾ ಚಿತ್ರಣದ ದೃಶ್ಯವನ್ನು ಜ್ಞಾಪಿಸಿಕೊಳ್ಳಬೇಕಾಗಿ ವಿನಂತಿ.

ಕೇವಲ ಓಟು, ಸರ್ಕಾರಿ ನೌಕರಿ, ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಬಿಟ್ಟರೆ ಇನ್ನೆಲ್ಲಾ ಸಮಾನ ನಾಗರಿಕ ಹಕ್ಕುಗಳು ನಿಮ್ಮವು ಎಂಬ ಭಾರತ ಸರ್ಕಾರದ ಕರೆಗೆ ಓಗೊಟ್ಟು, ೨೦೦೫ ರಿಂದ ಸಾಕಷ್ಟು ಅನಿವಾಸಿಗಳು ಹಿಂದೆ ಮುಂದೆ ನೋಡದೆ ಭಾವುಕರಾಗಿ ತಾವಿದ್ದ ದೇಶಕ್ಕಿಂತ ಭಾರತದಲ್ಲಿ ಮನೆ ಮಠ ಮಾಡುವುದರೊಂದಿಗೆ ಭಾಷೆ, ತಾಯ್ನಾಡಿನ ಪ್ರತಿರೂಪವೇ ಆದ ಪಿತ್ರಾರ್ಜಿತ ಕೃಷಿ ಭೂಮಿಗೆ ಹಣ ಸುರಿಸುರಿದು ಹಾಕಿದರು. OCI ಎಂಬ ಚಿಟ್ಟಿ ಹಿಡಿದು ಭಾರತ್ ಕಿ ಮಿಟ್ಟಿಯನ್ನು ಹಣೆಗೆ ಪೂಸಿಕೊಂಡರು. ಅಂತಹ ಮಿಂಚಿನ ಸಂಚಾರವನ್ನು "ಸಾಗರೋತ್ತರ ಭಾರತೀಯ ಪ್ರಜೆ" ಸೃಷ್ಟಿಸಿತು. ವೈಭವೀಕರಣದ ಉದ್ಘೋಷದ ಆಮಿಷಕ್ಕೆ ಬಿದ್ದ ಅನಿವಾಸಿಗಳು ಭಾರತೀಯ ದೂತಾವಾಸದ ವೀಸಾ ಜಂಜಾಟದಿಂದ ಮುಕ್ತಿ ಸಿಕ್ಕಿತೆಂದು ಈ "ಸಾಗರೋತ್ತರ ಭಾರತೀಯ ಪ್ರಜೆ"ಗಳಾಗಿ OCI ಯೋಜನೆಯನ್ನು ಅಭೂತಪೂರ್ವಗೊಳಿಸಿದರು.

ಭಾರತೀಯ ಪೌರತ್ವ ಕಾಯ್ದೆ ೧೯೫೫ ಸೆಕ್ಷನ್ ೮ ರ ಪ್ರಕಾರ ಇತರೆ ದೇಶದ ಪೌರತ್ವ ಪಡೆದ ವಯಸ್ಕ ಸ್ಥಿಮಿತ ಬುದ್ದಿಯ "ಹುಟ್ಟು" ಭಾರತೀಯ ಪ್ರಜೆಯು "ಸ್ವಇಚ್ಛೆ"ಯಿಂದ ತನ್ನ ಭಾರತೀಯ ಪೌರತ್ವವನ್ನು ಕೇಂದ್ರ ಸರ್ಕಾರಿ ನಿಯೋಜಿತ ಕ್ರಮದ ಪ್ರಕಾರ ತ್ಯಜಿಸಿದರೆ ಆಗ ಅವನ/ಳ ಭಾರತೀಯ ಪೌರತ್ವ ಅಂತ್ಯವಾಗುತ್ತದೆ. ಒಂದು ವೇಳೆ ಆತನ/ಆಕೆಯ ಭಾರತೀಯ ಪೌರತ್ವವು "ವಲಸೆ ಮೂಲಕ" ಪಡೆದಿದ್ದುದಾಗಿ ಮತ್ತು ಆತನು/ಆಕೆಯು ಇನ್ನೊಂದು ದೇಶದ ಪೌರತ್ವ ಪಡೆದರೆ ಆಗ ಆತನ/ಅವಳ ಭಾರತೀಯ ಪೌರತ್ವವು ತಕ್ಷಣಕ್ಕೆ ರದ್ದಾಗುತ್ತದೆ.

ಅಂದರೆ ಹುಟ್ಟಿನಿಂದ (ಜನವರಿ ೨೬, ೧೯೫೦ ರಂದು ಯಾ ನಂತರ ಭಾರತದಲ್ಲಿ ಜನಿಸಿದವರು ಹುಟ್ಟಿನಿಂದ ಭಾರತೀಯರು) ಅಥವಾ ಪಿತ್ರಾರ್ಜಿತವಾಗಿ ಭಾರತೀಯ ಪೌರತ್ವ ಪಡೆದ ವ್ಯಕ್ತಿಯು (ಜನವರಿ ೨೬, ೧೯೫೦ ರಂದು ಯಾ ನಂತರ ಭಾರತದಲ್ಲಿ ಜನಿಸಿದ ಭಾರತೀಯನ ಮಗ(ಳು)) ತನ್ನ ಪೌರತ್ವವನ್ನು ಕೇಂದ್ರ ಸರ್ಕಾರ ನಿಯೋಜಿಸಿದ ನಿಯಮದ ಪ್ರಕಾರ ಕಡ್ಡಾಯವಾಗಿ ಪರಿತ್ಯಾಗ ಮಾಡಿದಾಗ ಮಾತ್ರ ಆತನ/ಆಕೆಯ ಪೌರತ್ವ ರದ್ದಾಗುತ್ತದೆ. ಅದು ಆತನ ಭಾರತೀಯ ಸಂಜಾತ ಸಂವಿಧಾನಿಕ ಹಕ್ಕು.

"ಹುಟ್ಟಿದ ಮಗುವಿನ ಹೊಕ್ಕಳ ಬಳ್ಳಿಯನ್ನು ಕತ್ತರಿಸಿ ಯಾವ ಭೂಮಿಯಲ್ಲಿ ಹುಗಿಯುತ್ತಾರೋ ಅದೇ ಆ ಮಗುವಿನ ಮಾತೃಭೂಮಿ" ಎಂಬ ಅನ್ನು ಕಪೂರ್ ಉದ್ಘೋಷವನ್ನು ಇಲ್ಲಿ ನೆನಪಿಸಿಕೊಳ್ಳುವುದು ಕಡ್ಡಾಯ.

ಮೊದಲೆಲ್ಲ  ಈ "ಸಾಗರೋತ್ತರ ಭಾರತೀಯ ಪ್ರಜೆ"ಯಾಗಲು ಈ ಭಾರತೀಯ "ಪೌರತ್ವ ಪರಿತ್ಯಾಗ" (Renounciation of Indian Citizenship) ಅವಶ್ಯ ಇರಲಿಲ್ಲ.  ಕ್ರಮೇಣವಾಗಿ ಕೇಂದ್ರ ಸರ್ಕಾರ ಮೇಲಿನ ಪೌರತ್ವ ಕಾಯ್ದೆ ೧೯೫೫ ರ ಸೆಕ್ಷನ್ ೮ ರ ಪೌರತ್ವ ಪರಿತ್ಯಾಗವನ್ನು OCI ಪಡೆಯಲು ಅದ್ಯಾವ ಕಾರಣಕ್ಕೋ ಕಡ್ಡಾಯಗೊಳಿಸಿತು. ಅನಿವಾಸಿಗಳು ಸಾಗರೋತ್ತರ ಪೌರರಾಗಲು ಈ ಒಳನಾಡು ಪೌರತ್ವ ಪರಿತ್ಯಾಗ ಅವಶ್ಯಕ ಎಂದು ವಯಸ್ಕ/ಸ್ಥಿಮಿತ ಬುದ್ದಿಯ ಅನಿವಾಸಿಗಳಿಗೆ ನಿರ್ದೇಶಿಸಿತು. ಅಲ್ಲಿಗೆ ಯಾವ ಅನಿವಾಸಿಯೂ ಇದನ್ನು "ಸ್ವಇಚ್ಛೆಯಿಂದ ಪರಿತ್ಯಾಗ" ಮಾಡಿದ್ದಲ್ಲ, ಕಡ್ಡಾಯವಾಗಿ ಸರ್ಕಾರಿ ನಿರ್ದೇಶನದಿಂದ ಮಾಡಿದ್ದು ಎಂಬುದು ಗಮನಾರ್ಹ. ಇದು ಹುಟ್ಟಿನಿಂದ ಅಥವಾ ಪಿತ್ರಾರ್ಜಿತವಾಗಿ ಭಾರತೀಯ ಪೌರತ್ವ ಪಡೆದುಕೊಂಡವನ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ! 

ಇದರ ಅನುಷ್ಠಾನ ಆದದ್ದು ಕಾಂಗ್ರೆಸ್ ಸರ್ಕಾರದಲ್ಲಿ.

ಇಂತಹ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯ ಮೇಲೆ ಮಾರಣಾಂತಿಕ ಉಲ್ಲಂಘನೆಯನ್ನು ಮೋದಿ ಸರ್ಕಾರದ ಪೌರತ್ವ ಕಾಯ್ದೆ ತಿದ್ದುಪಡಿ ೨೦೧೯ ತಂದಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾ ದೇಶಗಳಲ್ಲಿನ ಹಿಂದೂ, ಬೌದ್ಧ, ಜೈನ, ಪಾರ್ಸಿ, ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡುವುದು ಈ ತಿದ್ದುಪಡಿಯ ಉದ್ದೇಶವಾಗಿತ್ತು. ಆದರೆ ಈ ಅಬ್ಬರದ ತಿದ್ದುಪಡಿಯ ನಡುವೆ ನಿಶ್ಶಬ್ದವಾಗಿ, "ಸಾಗರೋತ್ತರ ಭಾರತೀಯ ಪ್ರಜೆಯು ಕೊಲೆಯಂತಹ ಘೋರ ಅಪರಾಧದಿಂದ ಹಿಡಿದು ಯಾವುದೇ ಅತಿ ಸಣ್ಣ ಕಾನೂನು ಉಲ್ಲಂಘನೆ ಮಾಡಿದರೂ ಅವನ/ಅವಳ ಸಾಗರೋತ್ತರ ಪೌರತ್ವವನ್ನು ಸರ್ಕಾರ ರದ್ದು ಮಾಡಬಹುದು" ಎಂಬ ತಿದ್ದುಪಡಿಯನ್ನೂ ಸೇರಿಸಿಬಿಟ್ಟಿದೆ. ಅಂದರೆ ಯಾವುದೇ ಒಂದು ಸಣ್ಣ ಟ್ರಾಫಿಕ್ ತಪ್ಪು ಸಾಗರೋತ್ತರ ಪ್ರಜೆಯನ್ನು ಹದಿನೈದು ದಿನದಲ್ಲಿ ಸಾಗರೋತ್ತರಕ್ಕೆ ಗಡಿಪಾರು ಮಾಡಬಹುದು. ಅಂತಹ ಪ್ರಯೋಗವನ್ನು ಕೃಷಿ ಕಾಯ್ದೆ ವಿರೋಧಿಸಿ ಚಳುವಳಿ ಮಾಡಿದವರನ್ನು ಬೆಂಬಲಿಸಿದ OCIಗಳ ಮೇಲೆ ಮಾಡಲಾಗಿದೆ ಎಂಬ ಕೂಗಿದೆ. ಇತ್ತೀಚೆಗೆ ಅಹಿಂಸಾ ಚೇತನ್ ಮೇಲೆ ಸಹ ಈ ಪ್ರಯತ್ನ ನಡೆದಿದೆಯೆಂದರೆ, ಈ ತಿದ್ದುಪಡಿಯ ಹಿಂದಿನ ಉದ್ದೇಶ ಸ್ಪಷ್ಟ. ಅಲ್ಲಿಗೆ OCI ಚಿಟ್ಟಿ ಕೊಟ್ಟು ಅನಿವಾಸಿಗಳನ್ನು ಮಿಟ್ಟಿಯಲ್ಲಿ ಸರಿಯಾಗಿ ಮಿಲಾಯಿಸಲಾಯಿತು.

ಇರಲಿ, ಇದು ಸ್ಪಷ್ಟವಾಗಿ ಸಂವಿಧಾನದ ಸಮಾನ ನ್ಯಾಯ ಮತ್ತು ಸ್ವಾತಂತ್ಯದ ಹಕ್ಕುಗಳ ಉಲ್ಲಂಘನೆ.

ಯಾವ ದೇಶದಲ್ಲಿಯೂ ಇಂತಹ ಸರ್ವಾಧಿಕಾರಿ ಧೋರಣೆಯ ವೀಸಾ ರದ್ದತಿ ನಿಯಮಗಳು ಇಲ್ಲ! ಸೌದಿಯಲ್ಲಿ ಸಹ ಆಯಾಯ ತಪ್ಪಿಗೆ ಇಂತಿಷ್ಟು ಛಡಿಯೇಟಿನ ಶಿಕ್ಷೆ ಇದೆಯೇ ಹೊರತು ವೀಸಾ ರದ್ದತಿಯಂತಹ ಶಿಕ್ಷೆ ನನಗೆ ತಿಳಿದಂತೆ ಇಲ್ಲ. ಸೌದಿ ಬಿಡಿ, ಯಾವ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿಯೂ ಇಂತಹ ಅಸಂವಿಧಾನಿಕ ನಡೆ ಇಲ್ಲ.

ಯಾವ ಒಂದೊಮ್ಮೆಯ ಅನಿವಾಸಿಗಳಾಗಿದ್ದ ಗಾಂಧಿ, ನೆಹರೂ, ಜಿನ್ನಾ, ಅಂಬೇಡ್ಕರ್ ಭಾರತದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಅನುಷ್ಠಾನಕ್ಕೆ ಸಂಘರ್ಷಿಸಿದ್ದರೋ ಅಂತಹ ಅನಿವಾಸಿಗಳನ್ನು ಇಂದಿನ ಪ್ರಜಾಪ್ರಭುತ್ವ ಸರ್ಕಾರಗಳಲ್ಲಿ ಪರದೇಸಿಗಳನ್ನಾಗಿ ಮಾಡಲಾಗುತ್ತಿದೆ. ಯಾವ ಕಾರಣಕ್ಕೆ ಎಂದು ಗೊತ್ತಿಲ್ಲ!

"ಅಬ್ ಕಿ ಬಾರ್ ಟ್ರಂಪ್ ಸರ್ಕಾರ್" ಎಂದು ಟೆಕ್ಸಾಸಿನಲ್ಲಿ ಚಪ್ಪಾಳೆ ಹೊಡೆದು ಕೇಕೆ ಹಾಕಿದ್ದ ಅಸಂಖ್ಯಾತ ಅನಿವಾಸಿ ಸಾಗರೋತ್ತರ ಭಾರತೀಯ ಪ್ರಜೆಗಳಿಗೆ ಈ ವಿಷಯ ಗೊತ್ತಿದೆಯೋ ಅಥವಾ ಒಳನಾಡು ಭಾರತೀಯರಂತೆಯೇ ಅವರೂ ಭಕ್ತಿ ಪರವಶತೆಯ ಸ್ಟಾಕ್ಹೋಮ್ ಸಿಂಡ್ರೋಮಿಗೆ ಒಳಗಾಗಿ ಭಾವುಕತೆಯ ಮೀಟಿಸಿಕೊಂಡು "ಘರ್ ಘರ್, ಬಾರ್ ಬಾರ್" ಎನ್ನುತ್ತಿದ್ದಾರೋ ಗೊತ್ತಿಲ್ಲ. ಒಟ್ಟಾರೆ, "ಮೇರಾ ಭಾರತ್ ಮಹಾನ್", "ಮೇಕ್ ಇನ್ ಇಂಡಿಯಾ", "ನಾವೆಲ್ಲಾ ಒಂದು" ಮುಂತಾದ ಭಾವುಕ ಭ್ರಾಮಕ ಉದ್ಘೋಷಗಳಂತೆಯೇ ಈ "ಸಾಗರೋತ್ತರ ಭಾರತೀಯ ಪ್ರಜೆ" ಎಂಬ ಉದ್ಘೋಷಿತ ವೈಭವೀಕೃತ ಚಿಟ್ಟಿ ಮಿಟ್ಟಿಯಲ್ಲಿ ಹಾಕಿ ಮುಚ್ಚುವ ಒಂದು ವೀಸಾ ಮಾತ್ರ!

ಇಂತಹ ಉದ್ಘೋಷಿತ ವೀಸಾ ನಂಬಿ ನಮ್ಮ ಹಕ್ಕನ್ನು ನಾವೇ ಮೊಟಕಿಸಿಕೊಂಡು ಇರುವುದನ್ನೆಲ್ಲಾ ಭಾರತಕ್ಕೆ ಧಾರೆಯೆರೆದು ಲೆಂಕರಾಗಿರುವ ನಮ್ಮಂತಹ ಭಾವುಕ ಭ್ರಾಮಕ ಸಾಗರೋತ್ತರ ಭಾರತೀಯ ದೇಶಭಕ್ತರು ಎಲ್ಲಿಯಾದರೂ ಸಿಗುವುದುಂಟೆ?!? ಕೇವಲ ತಾಯ್ನಾಡು ಎಂಬ ಭಾವುಕತೆಯಲ್ಲಿ ದುಡಿದದ್ದೆಲ್ಲವನ್ನು ತಂದು ಸುರಿದವನನ್ನು ಒಂದು ಯಕಶ್ಚಿತ್ ಒಮ್ಮುಖ ರಸ್ತೆ ಪ್ರವೇಶಿಸಿದ್ದಕ್ಕೆ ಬಲಿಮಾಡಿ ಗಡಿಪಾರು ಮಾಡುವ ನಡೆ ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವದ ನಡೆಯೆನಿಸುವುದೆ?! ಇನ್ನು ಈ ಅನಿವಾಸಿ ಯಾವ ಜಾತಿಯವನಾಗಿದ್ದರೂ ಮೀಸಲಾತಿ ಪಡೆಯಬಾರದು, ಪತ್ರಿಕೋದ್ಯಮದಲ್ಲಿ ಪರವಾನಗಿ ಇಲ್ಲದೇ ತೊಡಗಬಾರದು, ಪರ್ವತಾರೋಹಣ ಮಾಡಬಾರದು ಎನ್ನುವ freedom of speech, freedom of movement, freedom of availing social justice ಎನ್ನುವ ಮೂಲಭೂತ ಹಕ್ಕುಗಳ ಉಲ್ಲಂಘನೆ ಬಗ್ಗೆ ಕೇಳುವವರು ಯಾರು?

ಹೋಬಳಿಯಂತಹ ಚಿಕ್ಕ ಚಿಕ್ಕ ಊರುಗಳಲ್ಲಿಯೂ "ಡಾಲರ್ ಕಾಲೋನಿ"ಗಳಿವೆಯೇ ಹೊರತು ಈ ಡಾಲರ್ ತರುವ ಸಹನಾಗರಿಕರನ್ನು ಪ್ರತಿನಿಧಿಸುವ ಯಾವ ಸಂಸದ, ಶಾಸಕನೂ ಇಲ್ಲ! ಏಕೆಂದರೆ ಈ ಅನಿವಾಸಿ ಬೇವರ್ಸಿಗಳಿಂದ ಒಂದು ಓಟು ಸಹ ಬೀಳುವುದಿಲ್ಲ.

ಹಾಗಾಗಿ ಈ ಅಸಂಖ್ಯಾತ ಸಾಗರೋತ್ತರ ಭಾರತೀಯ ಲೆಂಕ ದೇಶಭಕ್ತರಲ್ಲಿ ಕೆಲವರು ಈ OCI ಸಂಬಂಧಿತ ತಿದ್ದುಪಡಿಗಳು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ. ಅವರಿಗೆ ಗೆಲುವಾಗಿ ಸಾಗರೋತ್ತರ ಭಾರತೀಯ ಪ್ರಜೆಗಳನ್ನು ಒಳಗೊಳ್ಳುವ ಪ್ರಕ್ರಿಯೆಗೆ ನ್ಯಾಯಾಂಗವು ಮುನ್ನುಡಿ ಬರೆದು, ಪ್ರಜಾಪ್ರಭುತ್ವವನ್ನೂ ಎತ್ತಿ ಹಿಡಿಯಲಿ ಎಂದು ಹಾರೈಸೋಣ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

'ಅರಿದಡೆ ಆರದು ಮರೆದಡೆ ಮೂರದು' ಕುರಿತು ನೀಲಾ ಅವರ ಅಭಿಪ್ರಾಯ

ಸಾಮಾಜಿಕ ಕಳಕಳಿಯ ಹೊತ್ತಗೆ 'ಅರಿದಡೆ ಆರದು ಮರೆದಡೆ ಮೂರದು' 


ನಾವೀನ್ಯಯುತ ಸಾಹಿತ್ಯಕ ಪ್ರಯೋಗವುಳ್ಳ ರವಿ ಹಂಜ್ ಅವರ 'ಅರಿದಡೆ ಆರದು ಮರೆದಡೆ ಮೂರದು' ಕಾದಂಬರಿಯು ಮಠೀಯ ವ್ಯವಸ್ಥೆಯನ್ನು ಅರಹುವ ಕೃತಿಯಾಗಿದೆ. ಸಂಶೋಧಕನಾತ್ಮಕ, ವಿಮರ್ಶಾತ್ಮಕ ಕೃತಿಗಳಿಗೆ ಹೆಸರಾಗಿರುವ ಲೇಖಕರ ಪ್ರಸ್ತುತ ಕೃತಿಯು ಇತಿಹಾಸ ಆಧಾರಿತ ಕಥನವು ಹೇಗೆ ಸಮಕಾಲೀನ ಜಗತ್ತಿನಲ್ಲೂ ಪುನರಾವರ್ತಿತವಾಗಿ ಮರುಕಳಿಸುತ್ತಲೇ ಇರುತ್ತದೆ ಎಂಬುದನ್ನು ಸಾಬೀತುಪಡಿಸುತ್ತದೆ. ಅಂತಹ ಸಾರ್ವತ್ರಿಕ ಶೀರ್ಷಿಕೆಯನ್ನು ಹೊಂದಿರುವ ಕಾದಂಬರಿಯು 'ವ್ಯಕ್ತಿಯೋರ್ವನು ತನ್ನ ಜೀವನದ ಪ್ರತಿಯೊಂದು ತಿರುವುಗಳಲ್ಲೂ ಅರಿತು ನಡೆದರೆ ಮಾತ್ರ ಸದ್ಗತಿಯನ್ನು ಹೊಂದಲು ಸಾಧ್ಯವೇ ವಿನಃ ತನ್ನ ಅಸ್ತಿತ್ವವನ್ನು, ಘನತೆಯನ್ನು ಮರೆತು ನಡೆದರೆ ದುಸ್ಥಿತಿಯು ಎದುರಾಗದೇ ಇರದು' ಎಂಬ ಸಾಮಾಜಿಕ ಕಳಕಳಿಯ ಸಂದೇಶವನ್ನು ಅರಹುತ್ತದೆ. ಲೇಖಕರ ಈವರೆಗಿನ ಕೃತಿಗಳನ್ನು ಗಮನಿಸಲಾಗಿ, ಸಂಶೋಧಕರು ಕಥೆಗಾರರಾದುದು ಯಾವಾಗ ಎಂದು ಬೆರಗು ಮೂಡಿಸುವ ಅವರ ಯಶಸ್ವಿ ಕಾದಂಬರಿ ಪ್ರಯೋಗವಾಗಿದೆ. ಕೃತಿಯ ಆರಂಭಿಕ ಅಧ್ಯಾಯ 'ಬಿಂಬಗಲ್ಲಿನ ಮೃಗವಧ ಸಂಸ್ಥಾನ'- ಕಥನದಿಂದ ಕೊನೆಯ ಅಧ್ಯಾಯ ಬಿಂಬಮಾಯೆಯ ವರೆಗೂ ಇದರ ಶೀರ್ಷಿಕೆಯ/ಮೌಲ್ಯದ ಸಮಂಜಸತೆಗೆ ಪಾತ್ರಗಳನ್ನು ಒರೆಗೆ ಹಚ್ಚುವ ಮೂಲಕ ನಿರಂತರವಾಗಿ ಅವರನ್ನು ಎಚ್ಚರಿಸುತ್ತಲೇ ಬರುತ್ತದೆ. ಆದಾಗ್ಯೂ 'ಮೇಲೇರಿದ್ದು ಕೆಳಗಿಳಿಯಲೇಬೇಕು' ಎಂಬ (ಲೇಖಕರ) ಸಾರ್ವತ್ರಿಕ ಉಕ್ತಿಯಂತೆ ಕಾಲನ ಕೈಯಲ್ಲಿ ಎಲ್ಲರೂ ಆಟಿಕೆಗಳೇ ಎನ್ನುವ ವಾಸ್ತವವನ್ನು ತೆರೆದಿಡುವ ಕಹಿ-ಸತ್ಯವನ್ನು ಇಲ್ಲಿ ತೋರ್ಪಡಿಸಲಾಗಿದೆ. 

 

*ಸಮಾಜದಲ್ಲಿ ಕಟ್ಟಳೆಗಳಿಲ್ಲದಿದ್ದರೆ ಮನುಷ್ಯನು ಅನ್ಯ ಮಾರ್ಗಗಳನ್ನು ತುಳಿಯುತ್ತಲೇ ಇರಲಿಲ್ಲ. ಸಮಾಜವು ಒಡ್ಡುವ ಅತಿರೇಕದ ಕಟ್ಟಳೆಗಳಿಂದಲೇ ಬಹುಶಃ ಮನುಷ್ಯನ ಮರ್ಕಟ ಮನಸ್ಸು ಅವುಗಳಿಗೆಲ್ಲ ಪ್ರತಿರೋಧವೊಡ್ಡಿ, ದಾರಿತಪ್ಪಿ ಅನಾಹುತಗಳಿಗೆ ಈಡಾಗುತ್ತದೆ..  


*ಲೇಖಕರ ಪ್ರಸ್ತುತ ಕಾದಂಬರಿಯನ್ನೂ ಒಳಗೊಂಡಂತೆ ಇತರೆ ಕೃತಿಗಳನ್ನು ಸಮೀಕ್ಷಿಸಲಾಗಿ, ಅವರು ಕೇವಲ ಪಾತ್ರಗಳನ್ನಷ್ಟೇ ಸೃಷ್ಟಿಸುವುದಿಲ್ಲ, ಆ ಪಾತ್ರಗಳ ವರ್ತನೆಗಳಿಗೆ ಸೂಕ್ತ ಮನೋವೈಜ್ಞಾನಿಕ ಕಾರಣಗಳನ್ನೂ ಕೊಡುತ್ತ ಕಥೆಯನ್ನು ಸಮರ್ಪಕವಾಗಿ/ವೈಜ್ಞಾನಿಕವಾಗಿ/ವಸ್ತುನಿಷ್ಠವಾಗಿ ಕಟ್ಟಿಕೊಡುತ್ತಾರೆ. ಪಾತ್ರವೊಂದರ ಪೂರ್ವಗ್ರಹಗಳು, ಅಸಹಾಯಕತೆ, ಉಪಶಮನಗಳಂತಹ ಭಾವನೆಗಳೇ ಅವುಗಳ ಸದಾಚಾರ ಮತ್ತು ದುರಾಚಾರದ ನಡೆಗೆ ಕಾರಣವೆಂಬುದನ್ನು ಸಹ ಸ್ಪಷ್ಟಪಡಿಸುತ್ತಾರೆ. 


*ವೀರಶೈವ, ಸನ್ಯಾಸತ್ವ, ಪಂಚಾಚಾರ ಮುಂತಾದ ಪರಿಕಲ್ಪನೆಗಳ ಬಗ್ಗೆ ಲೇಖಕರು ಪಾತ್ರವೊಂದರ ಮುಖೇನ ಸ್ಥೂಲವಾಗಿ ಅರ್ಥೈಸಿರುತ್ತಾರೆ. ಇಂತಹ ಮಾದರಿ ವ್ಯವಸ್ಥೆಗೆ ಒಗ್ಗಿಕೊಳ್ಳದ ಸಮಾಜದ ಮಹತ್ತರವಾದ ಸ್ಥಾನದಲ್ಲಿರುವ ಮಠದ ಪೀಠಾಧಿಪತಿ ಮತ್ತು ಅಂಥವರು ಎಸಗುವ ಅಪಚಾರವನ್ನು ಖಂಡಿಸುವ/ವಿಡಂಬನೆ ಮಾಡುವ ಮೂಲಕ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೊಟ್ಟಿರುತ್ತಾರೆ. ಅಂತೆಯೇ ಇಂತಹ ಸತ್ಯವನ್ನು ಎತ್ತಿ ಹಿಡಿಯುವ ಸಾತ್ವಿಕ ಧೈರ್ಯವನ್ನು ತೋರುತ್ತಾರೆ.  


*ಮನುಷ್ಯನಿಗೆ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುವಲ್ಲಿ ಕೊರತೆ ಅನುಭವಿಸಿದಾಗಲೇ ಅದನ್ನು ಬೆಂಬತ್ತುವ ಮೂಲಕ ಅನ್ಯ ಮಾರ್ಗವನ್ನು ಆಯ್ದುಕೊಳ್ಳುತ್ತಾನೆ. ಸರಿ ತಪ್ಪುಗಳ ಗೊಡವೆಗೆ ಹೋಗದೇ ತಕ್ಷಣದ ಸುಖ, ಸಂತೃಪ್ತಿ, ನೆಮ್ಮದಿಗೋಸ್ಕರ ಹಪಹಪಿಸುತ್ತಾನೆ. ಸಮಾಜವು ಓರ್ವ ವ್ಯಕ್ತಿಯನ್ನು ಅವನ ವೃತ್ತಿಗೆ ಪೂರಕವಿರುವ ಸಂಹಿತೆಗಳಿಗನುಗುಣವಾಗಿ ನಡೆಯುವಂತೆ ಕಟ್ಟಳೆಗಳನ್ನು ವಿಧಿಸಿದರೂ ಸಹ ಅವನ ಮನಸ್ಸು/ಪ್ರವೃತ್ತಿಯು ಯಾರಿಗೂ/ಯಾವುದಕ್ಕೂ/ಯಾವ ವ್ಯವಸ್ಥೆಗೂ ಬಂಧಿಯಲ್ಲವಲ್ಲ? ಅವನೊಬ್ಬ ಕಟ್ಟಳೆಗಳನ್ನು ಮೀರುವ, ಬಂಧ-ಮುಕ್ತನಾಗುವ, ಮುಕ್ತತೆಯನ್ನು ಬಯಸುವ, ಮನಸೋ ಇಚ್ಛೆ ಜೀವಿಸಲು ಬಯಸುವ ಜೀವಿ ಎಂದಷ್ಟೇ ತೀರ್ಮಾನಿಸಬಹುದೇ ವಿನಃ ಅವನಿಗೆ ಕಣ್ತಡೆಪಟ್ಟಿಗಳನ್ನು ಹಾಕಿ ನೇರವಾದ ಮಾರ್ಗದಲ್ಲಿ ನಡೆ ಎಂದು ಪ್ರತಿಬಂಧಿಸಲು ಸಾಧ್ಯವಾದೀತೇ? ಪ್ರತಿಯೊಬ್ಬ ವ್ಯಕ್ತಿ ವಿಭಿನ್ನವಾಗಿದ್ದರೂ ಸಹ ನಮ್ಮ ಸಂಹಿತೆ/ನೀತಿಗಳು ಮಾತ್ರ ಎಲ್ಲರಿಗೂ ಸಮಾನ! 

 

*ಹೇಳಬೇಕಾದ್ದನ್ನು ಮುಕ್ತವಾಗಿ ಹೇಳಿದಾಗಲೇ ಅದು ವಸ್ತುನಿಷ್ಠ ಸಾಹಿತ್ಯ ಎಂದು ಕರೆಸಿಕೊಳ್ಳುತ್ತದೆ.  ಸಿನೆಮಾದ ತರಹ ಸೆನ್ಸಾರ್ ಸಿಸರ್ ಪ್ರಯೋಗಿಸಿದರೆ ಅಂತಹ ಸಾಹಿತ್ಯ ರುಚಿಸದು. ಇಂತಹ ಸಮಕಾಲೀನ ರಸಿಕತೆಯ ಸಾಮರಸ್ಯವನ್ನು ಲೇಖಕರು ತಮ್ಮ ಕೃತಿಯಲ್ಲಿ ಯಶಸ್ವಿಯಾಗಿ ಸಾಧಿಸಿರುತ್ತಾರೆ. ಅನಿವಾಸಿಯಾಗಿದ್ದರೂ ಸಹ ನೆಲದ ಭಾಷಾ ಸೊಗಡು ಪ್ರಾದೇಶಿಕರಲ್ಲಿ ಆಶ್ಚರ್ಯವನ್ನು ಉಂಟುಮಾಡುವಂತದ್ದು! ಕೃತಿಯಲ್ಲಿನ ಕೆಲವು ನಾಟಿ ಪದಗಳ ಬಳಕೆಯು ಬಹುಶಃ ನಮ್ಮ ತಲೆಮಾರಿನವರಿಗೆ ಮಾತ್ರ ಅರ್ಥವಾಗಬಲ್ಲದು. ನಮ್ಮ ನಂತರದ ತಲೆಮಾರಿನವರಿಗಾಗಿ ಗ್ಲೋಸರಿಯ ಅಗತ್ಯ ಉಂಟಾಗಬಹುದೆಂದು ಖಾಸಗಿಯಾದ ಅಭಿಪ್ರಾಯ. ಇದರ ಹೊರತು ಕೃತಿಯು ಅತ್ಯಂತ ಆಪ್ತವೆನಿಸುವ ಗಟ್ಟಿ ಭಾಷೆಯನ್ನು ಒಳಗೊಂಡಿದೆ. 

ಒಟ್ಟಾರೆಯಾಗಿ, ಕಾದಂಬರಿಯಲ್ಲಿನ ಪಾತ್ರಗಳ ಸೃಷ್ಟಿಯಂತೂ ಅದ್ಭುತವಾದುದು! ಬಿಂಬಗಲ್ಲಿನಿಂದ ಡ್ಯಾಲಸ್ ವರೆಗಿನ ಪಾತ್ರವೊಂದರ ಪ್ರಯಾಣವು ರೋಚಕವಾಗಿದೆ. ಕೃತಿಯ ಸಂದೇಶವು ವ್ಯವಸ್ಥೆಯೊಂದರ ಬದಲಾವಣೆಗೆ ನಾಂದಿಯಾಗುವಂತಹುದು. ಹಾಗಾಗಿ ಕೃತಿಯು ಸಂಪೂರ್ಣವಾಗಿ ಲೇಖಕನೋರ್ವನಿಗೆ ಇರಲೇಬೇಕಾದ ಸಾಮಾಜಿಕ ಕರ್ತವ್ಯವನ್ನು, ಸಾಹಿತ್ಯಕ ಹೊಣೆಯನ್ನು ನಿಭಾಯಿಸುವ ಕ್ರಮ ಹೇಗೆಂಬುದಕ್ಕೆ ಮಾದರಿಯಾಗಿದೆ. 


-ನೀಲಾ. ಆರ್. ಎಮ್ 


ಪ್ರತಿಗಳಿಗೆ ಸಂಪರ್ಕಿಸಿ:

ಸಂವಹನ ಪ್ರಕಾಶನ, ಮೈಸೂರು

ದರ: ₹೨೫೦.

rajendraprinters@gmail.com

Ph: +919902639593

ರೂಪಾ ಮತ್ತಿಕೆರೆ

+919945010606

'ಅರಿದೆಡೆ ಆರದು, ಮರೆದೊಡೆ ಮೂರದು' ಕುರಿತು ಓದುಗರಾದ ಪ್ರಸ್ತು ಅವರ ಇಮೇಲ್ ಅಭಿಪ್ರಾಯ:

ಐತಿಹಾಸಿಕ ಸಂಶೋಧನಾತ್ಮಕ ಕೃತಿಗಳಿಗೆ ಹೆಸರಾಗಿರುವ ಲೇಖಕರಾದ ರವಿ ಹಂಜ್ ಅವರ ಪ್ರಸ್ತುತ ಕಾದಂಬರಿಯಾದ 'ಅರಿದೆಡೆ ಆರದು, ಮರೆದೊಡೆ ಮೂರದು' ಕೃತಿಯು ಅವರ ಹೊಸ ಬಗೆಯ ಸಾಹಿತ್ಯ ಶೈಲಿಯ ಪ್ರಯೋಗವಾಗಿದೆ. ಹಲವು ಅಧ್ಯಾಯಗಳಲ್ಲಿ ಬರೆಯಲಾದ ಕಾದಂಬರಿಯು ಗತಕಾಲದ ಇತಿಹಾಸವನ್ನಾಧರಿಸಿದ ಐತಿಹಾಸಿಕ ಕಾದಂಬರಿಯಾಗಿದ್ದು, ಮಠೀಯ ವ್ಯವಸ್ಥೆಯನ್ನು ಸೂಕ್ಷ್ಮ ಸಂವೇದನಾಶೀಲತೆಯೊಂದಿಗೆ ಅನಾವರಣಗೊಳಿಸುತ್ತದೆ. ಇದರ ಪ್ರತಿಯೊಂದು ಅಧ್ಯಾಯದ ಆರಂಭದಲ್ಲಿ ಸನ್ನಿವೇಶಕ್ಕೆ ಸಮಂಜಸವೆನಿಸುವ ಪೂರಕವಾದ ವಚನವನ್ನು ಅವುಗಳ ಪೀಠಿಕೆಯಾಗಿ ಉಲ್ಲೇಖಿಸಲಾಗಿದೆ.

ಕೃತಿಯ ಶೀರ್ಷಿಕೆಯ ಮರ್ಮದಂತೆ ಮನುಷ್ಯನು ತನ್ನ ಮನುಜಧರ್ಮವನ್ನು ಅರಿತು ಬದುಕಿದಾಗಲೇ ಉತ್ತಮನೆನಿಸಿಕೊಳ್ಳಬಲ್ಲನೇ ವಿನಃ ತನ್ನ ಸದ್ಗುಣಶೀಲತೆಯನ್ನು ಮರೆತು ಬದುಕಿದಾಗ ಅಧಮನೆನಿಸಿಕೊಳ್ಳಲು ಕ್ಷಣಕಾಲವೂ ತಗಲುವುದಿಲ್ಲ ಎಂಬುದನ್ನು ಕಾದಂಬರಿಕಾರರು ಅರ್ಥಪೂರ್ಣವಾಗಿ ಅರುಹಿದ್ದಾರೆ. 12ನೇ ಶತಮಾನದಿಂದ ಪ್ರಸ್ತುತ ಕಾಲಮಾನದ ವರೆಗೂ ಕಥಾವಸ್ತುವಿನ ವಿಸ್ತಾರತೆ ಚಾಚಿಕೊಂಡಿದ್ದರಿಂದ ಗತಕಾಲದ ಸದ್ಗುಣಶೀಲತೆಯಿಂದ ವರ್ತಮಾನದ ದುರಾಚಾರವು ವ್ಯವಸ್ಥೆಯೊಂದನ್ನು ಹೇಗೆ ದುರವಸ್ಥೆಗೆ ಕೊಂಡೊಯ್ಯಬಲ್ಲದು? ಎಂಬುದನ್ನು ಲೇಖಕರು ದೃಷ್ಟಾಂತೀಕರಿಸುತ್ತಾರೆ. ಮಠದ ಪೀಠಾಧಿಪತಿಗಳ ಸರಣಿ-ಕಥನವು ಒಳಗೊಂಡಿರುವ ಪಾತ್ರಗಳು ತಮ್ಮ ಮುಗ್ಧತೆಯಿಂದ ಹೇಗೆ ಅನುಭವದ ಪ್ರಬುದ್ಧತೆಯತ್ತ ವಿಕಸನ ಹೊಂದುತ್ತವೆ ಎಂಬುದನ್ನು ಮನೋವೈಜ್ಞಾನಿಕ ತಳಹದಿಯ ಮೇಲೆ ಸಂರಚಿಸಿರುತ್ತಾರೆ. ಪ್ರಸ್ತುತ ಕಾದಂಬರಿಯಲ್ಲಿ ಬಹುತೇಕ ಪಾತ್ರಧಾರಿಗಳ ಮೂಲಕ ಅರಹುವ ಅಣಕ-ಸಾಹಿತ್ಯವನ್ನು ಅವರ ಇದೊಂದೇ ಕೃತಿಯಲ್ಲದೆ ಬಹುತೇಕ ಕೃತಿಗಳಲ್ಲಿಯೂ ಕಾಣಬಹುದಾಗಿದೆ. ಹೀಗೆ ಸಮಾಜವನ್ನು ತಿದ್ದುವ, ಮಾದರಿ ವ್ಯವಸ್ಥೆಯನ್ನು ರೂಪುಗೊಳಿಸುವ ಆಶಯವನ್ನು ಹೊಂದಿರುವ ಇವರ ಕೃತಿಗಳು ಇಂದಿನ ದಿನಗಳಲ್ಲಿ ಹೆಚ್ಚು ಪ್ರಸ್ತುತವೆನಿಸುತ್ತವೆ. 

ಕೃತಿಯಲ್ಲಿ, ಸಂಸಾರಿಗಳನ್ನು ಮೀರಿಸುವಂತಹ ಸುಖವನ್ನೆಲ್ಲಾ ಸಂತರು ಸುಖಿಸಿದ್ದು ಅವರ ಸ್ವಚ್ಛಂದ ಬದುಕಿನ ಸಹಜತೆಯನ್ನು ತೋರುತ್ತದೆ. ಆದಾಗ್ಯೂ ಅವರೆಲ್ಲರೂ ಸ್ವಯಂಶಿಸ್ತನ್ನು, ಆಚಾರಗಳು, ನಡಾವಳಿಗಳನ್ನು ಮರೆತು ಪ್ರಾಪಂಚಿಕ ಆಕರ್ಷಣೆಗಳಿಗೆ ದಾಸರಾಗುವುದರ ಅಡ್ಡಪರಿಣಾಮಗಳನ್ನು ಕಾದಂಬರಿಕಾರರು ಪರಿಶೀಲನೆಗೆ ಒಡ್ಡುತ್ತಾರೆ. ಯಾವುದೇ ಬಂಧನಗಳಿಗೆ ಒಳಪಡದೆ, ನಿಬಂಧನೆಗಳಿಲ್ಲದೆ ಹೀಗೆ ಸ್ವೇಚ್ಛೆಯಿಂದ ಬದುಕಲು ಸನ್ಯಾಸವನ್ನು ಲೌಕಿಕತೆಯೆಡೆಗೆ ಕರೆದೊಯ್ಯುವ ಬಳಸುದಾರಿಯಾಗಿ ಬಳಸಿಕೊಂಡಿರುವುದನ್ನು ಲೇಖಕರು ಪರೋಕ್ಷವಾಗಿ ಖಂಡಿಸುತ್ತಾರೆ! ಹೀಗೆಲ್ಲ ಅವಧೂತರಾಗಿ ಬದುಕುವ ಈ ಸಂತರ ಕುರಿತು ಓದುವಾಗಲೆಲ್ಲ ಕುಮಾರ ಜೀವ ತಟ್ಟನೆ ಭಾಸವಾಗುತ್ತಾನೆ. ಕುಮಾರ ಜೀವನಂತೆ ಇಲ್ಲಿಯೂ ಕೂಡ ಸಂತರಾದವರು ಅಗಣಿತ ಸಂತಾನ ಪ್ರಸರಣದಲ್ಲಿ ಕಾರ್ಯೋನ್ಮುಖರಾಗಿರುವುದು ವಿಡಂಬನೆಗಿಂತಲೂ ಹೆಚ್ಚಾಗಿ ಕಳವಳಕಾರಿ ಸಂಗತಿಯಾಗಿದೆ. 

ಇಡೀ ಜಗತ್ತನ್ನೇ ಮಠದ ನಾಲ್ಕು ಗೋಡೆಗಳಲ್ಲಿ ತರುವ, ಅತಿ ಸಾಮಾನ್ಯನನ್ನೂ ಎಲೈಟ್ ದರ್ಜೆಗೇರಿಸುವ ಕಾಲ್ಪನಿಕ ಕಥಾಹಂದರವು ತುಂಬಾ ಹಾಸ್ಯಮಯವಾಗಿಯೂ, ರಸವೊತ್ತಾಗಿಯೂ ಮೂಡಿಬಂದಿರುತ್ತದೆ. ಹಾಗಾಗಿ ಕಾದಂಬರಿಯ ಶೀರ್ಷಿಕೆಯು ಸಂಕಥನದ ಉದ್ದಕ್ಕೂ ತನ್ನ ಬಿಂಬದೊಂದಿಗೆ ಸಮರ್ಪಕತೆಯನ್ನು ತೋರುತ್ತದೆ. 

ಒಟ್ಟಾರೆ, ಹಾಸ್ಯ ಮತ್ತು ವಿಡಂಬನೆ ಎರಡೂ ಸಮಾನಾಂತರವಾಗಿ ಕ್ರಮಿಸಿ ಮನುಷ್ಯನ ನಿಜರೂಪವನ್ನು ಅನಾವರಣಗೊಳಿಸುವ ಅರಿವಿನ ಕಾದಂಬರಿ ಇದಾಗಿರುತ್ತದೆ.

- ಪ್ರಸ್ತು

ಅರಿದಡೆ ಆರದು, ಮರೆದೊಡೆ ಮೂರದು - ಬಿಡುಗಡೆ ಭಾಷಣ

 ಅರಿದಡೆ ಆರದು, ಮರೆದೊಡೆ ಮೂರದು.


ವೇದಿಕೆಯ ಮೇಲಿರುವ ಎಲ್ಲಾ ಗಣ್ಯರಿಗೆ ಮತ್ತು ಈ ಸಮಾರಂಭಕ್ಕೆ ಆಗಮಿಸಿರುವ ಎಲ್ಲಾ ಮಿತ್ರರಿಗೂ ನನ್ನ ಅನಿವಾಸಿ ಅಪ್ರಮೇಯ ಸಪ್ರೇಮ ವಂದನೆಗಳು. 


ಅನಿವಾಸಿ ಎಂದು ಏಕೆ ಹೇಳುತ್ತಿದ್ದೇನೆ ಎಂದರೆ...


ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಒಂದೊಮ್ಮೆಯ ಅನಿವಾಸಿಗಳಾಗಿದ್ದ ಗಾಂಧಿ, ನೆಹರೂ ಅವರ ಮಹತ್ವದ ಕೃತಿಗಳು ಅವರನ್ನು ಸಮಾಜದಿಂದ ಬೇರ್ಪಡಿಸಿ ಜೈಲಿನಲ್ಲಿ ದೂರವಿರಿಸಿದಾಗಲೇ ರಚಿತಗೊಂಡಿವೆ. ಅವರ ಹೋರಾಟಗಳ ಮೇಲೆ ಅವರ ಅನಿವಾಸಿತನ ಗಾಢ ಪ್ರಭಾವ ಬೀರಿದೆ. ವಿದೇಶಗಳಲ್ಲಿ ಅವರು ಕಂಡ ರಾಜಕೀಯ, ಸಾಮಾಜಿಕ ವ್ಯವಸ್ಥೆಗಳು ಭಾರತದಲ್ಲಿಯೂ ಇರಬೇಕು ಎಂಬ ಅವರ ಬಯಕೆಯನ್ನು ಪೋಷಿಸಿದೆ. ಇದಕ್ಕೆ ಸಾವರ್ಕರ್, ಜಿನ್ನಾ ಸಹ ಹೊರತಲ್ಲ. ಒಟ್ಟಾರೆ ಭಾರತದ ಸ್ವಾತಂತ್ರ್ಯ ಚಳುವಳಿ ಮೇಲೇರಲು ಅನಿವಾಸಿಗಳೇ ಕಾರಣ.


ಹೀಗೆ ಸಮಾಜವನ್ನು, ರಾಷ್ಟ್ರವನ್ನು, ಆಗುಹೋಗುಗಳನ್ನು ಅನಿವಾಸಿತನದಿಂದ, ದೂರದಿಂದ ನೋಡಿದಾಗ ಅದು ಕೊಡುವ ಹೊಳಹು ವಿಭಿನ್ನ. ಹಾಗಾಗಿ ಭಾರತಕ್ಕೆ ಕೇವಲ ಸ್ವಾತಂತ್ರ್ಯವಲ್ಲದೆ ಗಮನಾರ್ಹ ಚಿಂತನೆ, ಕೃತಿ, ಕಾರ್ಯಗಳಿಗೆ ಅನಿವಾಸಿತನದ ಕೊಡುಗೆ ಅತ್ಯಂತ ಮಹತ್ವದ್ದು. ಕೇವಲ ಭಾರತವಲ್ಲದೆ ಜಾಗತಿಕವಾಗಿ ಸಹ ಪಾಬ್ಲೋ ನೆರೂಡಾ ಅನಿವಾಸಿಯಾಗಿ ಶ್ರೀಲಂಕಾದಲ್ಲೇ ತಮ್ಮ ಕಾವ್ಯದ ನೆಲೆಯನ್ನು, ಹೆಮಿಂಗ್ವೇ ಪ್ಯಾರಿಸ್, ಹವಾನಾದಲ್ಲಿ ಅನಿವಾಸಿಯಾಗಿದ್ದಾಗಲೇ ಮಹತ್ವದ ಕೃತಿಗಳನ್ನು ರಚಿಸಿದ್ದರು ಎಂಬುದು ಗಮನಾರ್ಹ.


ರಾಜೀವ್ ಗಾಂಧಿ, ಸ್ಯಾಮ್ ಪಿತ್ರೋಡ ಅಲ್ಲದೆ ಇಂದಿನ ವರ್ತಮಾನದಲ್ಲಿ ಸಹ ಖೇಣಿ, ನೀಲೇಕಣಿ, ಎಸ್ಸಾರ್ ಹಿರೇಮಠ, ರವಿಕೃಷ್ಣಾರೆಡ್ಡಿ ಮುಂತಾದವರ ಹೋರಾಟ ಮತ್ತು ಸಾಮಾಜಿಕ ಕಳಕಳಿಗೆ ಇದೇ ಅನಿವಾಸಿತನ ಕಾರಣವಾಗಿದೆ. ಆದರೆ ಅದನ್ನು ಸ್ವೀಕರಿಸುವ ಮನಃಸ್ಥಿತಿ ವರ್ತಮಾನದ ಭಾರತದಲ್ಲಿ ನಂದಿದೆ. ಅನಿವಾಸಿ ಸಾಹಿತ್ಯ ಸ್ವೀಕಾರವೂ ಸೇರಿ.


ಈಗ ಅನಿವಾಸಿ ಎಂದರೇನೇ ಬೇವರ್ಸಿ ಎಂಬ ಒಂದು ಸಿದ್ಧ ತಿರಸ್ಕಾರ ಜನರಲ್ಲಿ ಬೇರೂರಿದೆ. ಇಲ್ಲಿನ ಆಗುಹೋಗುಗಳಿಗೆ ಓರ್ವ ಅನಿವಾಸಿ ಸ್ಪಂದಿಸಿದರೆ, "ಅವನೇ(ಳೇ)ನು ಕಂಡಿದ್ದಾನೆ(ಳೆ), ಏಸಿ ರೂಮಿನಲ್ಲಿ ಕುಳಿತವನು(ಳು)" ಎಂಬ ಮೂದಲಿಕೆಯೇ ಮೆರೆದು ಉಳಿದದ್ದೆಲ್ಲಾ ಗೌಣವಾಗಿಬಿಡುತ್ತದೆ. ಏಕೆಂದರೆ ರೋಚಕತೆಯನ್ನು ಬಯಸುವ ಭಾರತೀಯನಿಗೆ ಇಂತಹ ಮೂದಲಿಕೆ ಒಂದು ಥ್ರಿಲ್ ಕೊಡುತ್ತದೆ. ಹಾಗಾಗಿಯೇ ಇಂದಿನ ಎಲ್ಲಾ ಆಯಾಮಗಳಲ್ಲೂ ರೋಚಕತೆ ಎಲ್ಲೆಲ್ಲೂ ಮೆರೆಯುತ್ತಿದೆ. ಅದು ತಪ್ಪಲ್ಲ.


ಆದರೆ ಇಂತಹ ಮೂದಲಿಕೆ, ತಿರಸ್ಕಾರಗಳ ಆಚೆ ಮೌಲಿಕ ಟೀಕೆಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಜಾಗರೂಕತೆಯಿಂದ ಗಂಭೀರವಾಗಿ ಆಳವಾದ ಅಭ್ಯಾಸ, ವಿಷಯ ಮಂಡನೆ, ದೂರಗಾಮಿ ಚಿಂತನೆ, ವಿಶ್ಲೇಷಣೆ ಕೆಲವು ಅನಿವಾಸಿಗಳ ಬರಹದಲ್ಲಿ ಇರುತ್ತದೆ. ಏಕೆಂದರೆ ಅನಿವಾಸಿ ಬರೆದಿದ್ದಾನೆ ಎಂದಾಕ್ಷಣ ಯಾವುದೇ ಮೀಸಲಾತಿ ಕಕ್ಕುಲಾತಿ ಇಲ್ಲದೆ ಅದರಲ್ಲಿ ಏನಾದರೂ ಹುಳುಕುಗಳಿವೆಯೇ ಎಂದು ಭೂತಗಾಜು, ಮೈಕ್ರೋಸ್ಕೋಪು, ಟೆಲಿಸ್ಕೋಪು, ಇಲ್ಲದ ಸ್ಕೋಪು ಹಿಡಿದು ನೋಡಿ ಏನಾದರೂ ಕಂಡರೆ ನಿಕೃಷ್ಟವಾಗಿ ಝಾಡಿಸಲಾಗುತ್ತದೆ. ಏನೂ ಕಾಣದಿದ್ದರೆ ಅದರಲ್ಲಿನ ಹೊಳಹುಗಳ ಬಗ್ಗೆ ದಿವ್ಯಮೌನ ವಹಿಸಲಾಗುತ್ತದೆ. 


ಒಟ್ಟಿನಲ್ಲಿ ಅನಿವಾಸಿಗಳು ತಾಯ್ನಾಡಿನ ತಿರಸ್ಕಾರಕ್ಕೆ ಗುರಿಯಾಗಿದ್ದಾರೆ. ಆದರೆ ಅದೇ ಅನಿವಾಸಿ ಅವನಿರುವ ದೇಶದ ಸಂಸ್ಕೃತಿ, ಸಮಾಜ, ವ್ಯವಸ್ಥೆಯನ್ನು ಸಾರಾಸಗಟಾಗಿ ತಿರಸ್ಕರಿಸಿ ಮೂದಲಿಸಿ ಬರೆದು ಭಾರತೀಯ ಸಂಸ್ಕೃತಿ, ಸಾಹಿತ್ಯ, ವ್ಯವಸ್ಥೆಯನ್ನು ಕುರುಡಾಗಿ ಹಾಡಿ ಹೊಗಳಿ ಬರೆದಾಗ "ಅಬ್ಬಬ್ಬಾ" ಅದರ ಆದರವೇ ಬೇರೆ! 


ಇದು ನನ್ನ ಅನಿವಾಸಿ ಪ್ರಲಾಪ! 


ಇನ್ನು ವರ್ತಮಾನದ ಇಂದಿನ ಸೈದ್ಧಾಂತಿಕ ಅಮಲಿನಲ್ಲಿ ಭಾರತದ ತುಂಬೆಲ್ಲಾ ಪಂಥೀಯ ಸಿದ್ಧಾಂತಿಗಳು ತಮ್ಮ ತಮ್ಮವೇ ದ್ವೀಪೀಯ ಸಮಾಜಗಳನ್ನು ಸೃಷ್ಟಿಸುತ್ತಾ ಬರುತ್ತಿದ್ದಾರೆ. ಇದು ದೇಶ ವಿಭಜಕ ಕೃತ್ಯವೆನಿಸಿ ಮುಂದೆ ಆತಂಕಕಾರಿ ಸನ್ನಿವೇಶವನ್ನಷ್ಟೇ ಅಲ್ಲದೆ ಆತಂಕವಾದಿಗಳ ಮಹಾಪೂರವನ್ನೇ ಸೃಷ್ಟಿಸಲಿದೆ. ಈ ಎಲ್ಲಾ ವೇದಿಕೆಗಳಲ್ಲಿಯೂ ಮಠಾಧೀಶರು, ಮೌಲ್ವಿಗಳು, ಪಾದ್ರಿಗಳು ಸಮಾನವಾಗಿ ಕಂಗೊಳಿಸುತ್ತಿದ್ದಾರೆ. ಮೌಲ್ವಿಗಳ, ಪಾದ್ರಿಗಳ, ಬ್ರಹ್ಮಚಾರಿಗಳ ಕರ್ಮಕಾಂಡಗಳು ಸುದ್ದಿ ಮಾಡಿದ್ದರೂ ಅವರ ಕಂಗೊಳಿಸುವಿಕೆ ಮಾತ್ರ ಅಭಾದಿತವಾಗಿ ಮುಂದುವರಿದಿದೆ. ಹಾಗಾಗಿಯೇ ನನ್ನ ಈ ಕೃತಿ, "ಅರಿದಡೆ ಆರದು, ಮರೆದೊಡೆ ಮೂರದು" ಇಂದು ಪೀಠಾರೋಹಣವಾಗುತ್ತಿದೆ. ಇದನ್ನು ನಾನು ಬ್ರಿಟಿಷ್ sattire ಸಾಹಿತ್ಯ ಯಾನೆ ವಿಡಂಬನಾತ್ಮಕ ಶೈಲಿಯನ್ನು ಮುಖ್ಯವಾಗಿರಿಸಿಕೊಂಡು ರೋಚಕತೆಯನ್ನು ಬಹುವಾಗಿ ಮೆಚ್ಚುವ ಭಾರತೀಯ ಓದುಗರ ರುಚಿಗೆ ತಕ್ಕಂತೆ ಮಠೀ(ತೀ)ಯ ವ್ಯವಸ್ಥೆಯ ಕಥೆಯನ್ನು ಸಾದರಪಡಿಸಿದ್ದೇನೆ.


ಇದನ್ನು ಪುಸ್ತಕವಾಗಿ ಪ್ರಕಟಿಸುವ ಮುನ್ನ ಒಂದು ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದರೆ ಹೆಚ್ಚು ಜನ ಓದಿ ಜಾಗರೂಕರಾಗಬಹುದು ಎಂದು ನಾನು ಆರಂಭದಲ್ಲಿ ಆಲೋಚಿಸಿದ್ದೆ. ಹಾಗಾಗಿ ನನ್ನಿಂದ ಸತತವಾಗಿ ಅಂಕಣ ಬರೆಸಿಕೊಂಡಿದ್ದ ದಿನಪತ್ರಿಕೆಯ ಸಂಪಾದಕರನ್ನು ಸಂಪರ್ಕಿಸಿದಾಗ ಅವರು, "ಜಾಹೀರಾತು ಲೆಕ್ಕದಲ್ಲಿ ಪ್ರಕಟಿಸುತ್ತೇನೆ" ಎಂದು ನನ್ನ "ಅನಿವಾಸಿತನ"ವನ್ನು ಗಣಿಗಾರಿಕೆ ನಡೆಸುವ ಆಲೋಚನೆ ಮುಂದಿಟ್ಟರು! ಅಲ್ಲಿಗೆ ಗಣಿಗಾರಿಕೆ ಕೇವಲ ಬಳ್ಳಾರಿಗೆ ಸೀಮಿತವಾಗಿಲ್ಲ ಎಂದು ನನಗರಿವಾಯಿತು. ಬಳ್ಳಾರಿ, ಮಾಧ್ಯಮವಲ್ಲದೆ ಇನ್ನೆಲ್ಲೆಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂಬುದನ್ನು ನಿಮ್ಮ ಊಹೆಗೆ ಬಿಡುತ್ತೇನೆ. ಎಷ್ಟೇ ಆಗಲಿ ನಾನು ಏಸಿ ರೂಮಿಗ, ನಾನೇನು ಬಲ್ಲೆ?!


ಇನ್ನುಳಿದಂತೆ ಓದುಗರು ಈ ಕೃತಿಯನ್ನು ಸ್ವೀಕರಿಸಿ ಕಿಂಚಿತ್ ನೈತಿಕತೆಯನ್ನು ರೂಢಿಸಿಕೊಂಡರೆ ನಾನು ಏಸಿ ರೂಮಿನಲ್ಲಿ ಬೆವರಿದ್ದು, ಮೆಮರಿ ಫೋಮ್ ಬೆಡ್ಡಿನಲ್ಲಿ ಬೆಚ್ಚಿದ್ದು, ಮತ್ತು ಭಾರತೀಯ ತತ್ವಜ್ಞಾನದ ಆರು ಮೂರು ಒಂಬತ್ತು, ಒಂಬತ್ತು ತೂತಿನ ಕೊಡನಾಗಿದ್ದು ಸಾರ್ಥಕ ಎನಿಸುತ್ತದೆ.


ಧನ್ಯವಾದಗಳು!

ರವಿ ಹಂಜ್ 

----

ಮುರಳಿ ಕೃಷ್ಣ ಮದ್ದಿಕೇರಿ ಭೇಟಿ

 ಧನ್ಯವಾದ Ravi Hanj 

ಅಭಿನಂದನೆಗಳು 💐💐


ಇಂದು ಚಿತ್ರದುರ್ಗದಲ್ಲಿ ನಿಮ್ಮನ್ನು ಭೇಟಿ ಆಗ್ತೀನಿ ಅಂತ ನಿರೀಕ್ಷಿಸಿರಲಿಲ್ಲ. ನೂತನ ಸಂವತ್ಸರದ ಪ್ರಥಮ ಅಚ್ಚರಿ ಇಂದು ನಿಮ್ಮೊಂದಿಗೆ ನಾನು ಕಳೆದ ಕೆಲವು ಗಂಟೆಗಳ ಕಾಲಾವಧಿ.‌ 

+ಇತ್ತೀಚೆಗೆ ಮೈಸೂರಿನಲ್ಲಿ ಲೋಕಾರ್ಪಣೆಯಾದ ನಿಮ್ಮ ನೂತನ ಕಾದಂಬರಿ 'ಅರಿದೊಡೆ ಆರದು ಮರೆದೊಡೆ ಮೂರದು' ನನ್ನ ಕೈ ಸೇರಿದ್ದು. 


ದಾವಣಗೆರೆಯ ಸ್ನೇಹಿತರಾದ ರವಿಶಂಕರ ಹಂಜಗಿಮಠ ಅನಿವಾಸಿ ಭಾರತೀಯ. ‌ಶಿಕ್ಯಾಗೋ ಮಹಾನಗರ ನಿವಾಸಿ.‌


ನಾನು ಅತ್ಯಂತ ಇಷ್ಟಪಡುವ ವ್ಯಕ್ತಿಗಳಲ್ಲಿ ಒಬ್ಬರು. 


ರವಿ ಅವರ ಪರಿಚಯ ಫೇಸ್‌ಬುಕ್‌ ಮೂಲಕವೇ. ಯಾವುದೇ ಪಂಥದೊಡನೆ ಗುರುತಿಸಿಕೊಳ್ಳದ ರಸಿಕ ಮಿತ್ರ ರವಿಯವರು ಮಹಾ ಧೈರ್ಯಶಾಲಿ. ಅವರು ಯಾವಾಗ ಯಾರನ್ನು ಹೊಗಳುತ್ತಾರೋ, ಟೀಕಿಸುತ್ತಾರೋ ನಿರೀಕ್ಷಿಸಲಾಗದು. ಕ್ಷಣಕ್ಕೊಂದು ಅಚ್ಚರಿ ನೀಡಬಲ್ಲ ವಿಶೇಷ ವ್ಯಕ್ತಿ. 


ರವಿಯವರ ಪರಿಚಯ ಅವರ ಪ್ರಥಮ ಕೃತಿ, ಚೀನಾದ ಬೌದ್ಧ ಯಾತ್ರಿಕ ಹ್ಯುಯೆನ್ ತ್ಸಾಂಗ್ ಜೀವನಾಧರಿತ 'ಮಹಾ ಪಯಣ' ಕೃತಿಯಿಂದ‌. ಆ ಕೃತಿ ಸಮಸ್ತ ಭಾರತೀಯ ಭಾಷೆಗಳಲ್ಲಿ ಹ್ಯುಯೆನ್ ತ್ಸಾಂಗ್ ಕುರಿತು ಪ್ರಕಟವಾಗದ ಮಾಹಿತಿಗಳ ರೋಚಕ ಕಥಾನಕವೇ ಆಗಿತ್ತು. 


ಆ ಸಂದರ್ಭದಲ್ಲಿ ಪರಸ್ಪರ ಹಂಪಿಯಲ್ಲಿ ಭೇಟಿಯಾದೆವು. ಇಬ್ಬರದೂ ಅಲೆದಾಟದ ಅನ್ವೇಷಕ ಮನಸ್ಸು. ಸಮಾನ ಮನಸ್ಕರೊಡನೆ ಸ್ನೇಹ ದಿನದಿಂದ ದಿನಕ್ಕೆ ಗಾಢವಾಗುತ್ತಾ ಸಾಗುತ್ತದೆ. ಪರಿಚಯ ನಮ್ಮಿಬ್ಬರನ್ನು ಆತ್ಮೀಯ ಮಿತ್ರರನ್ನಾಗಿಸಿದೆ.‌ 


ಕೋವಿಡ್‌ಗಿಂತ ಮುಂಚೆ ರವಿ ಭಾರತಕ್ಕೆ ಬಂದಾಗಲೆಲ್ಲಾ ಕರ್ನಾಟಕದ ವಿವಿಧೆಡೆ‌ ಅಲೆದೆವು. ಕರ್ನಾಟಕದ ವಿವಿಧೆಡೆ ಅವರ ಮಿತ್ರರ ದೊಡ್ಡ ದಂಡೇ ಇದೆ. ಹೋದಲ್ಲೆಲ್ಲಾ ಹೊಸ ಸ್ನೇಹಿತರ ಪರಿಚಯ, ಹರಟೆ, ಮಾತುಕತೆ.. ಹೋದಲ್ಲೆಲ್ಲಾ ಸಂಭ್ರಮ. ಸಂಜೆಯ ಪಾನಗೋಷ್ಠಿಗಳಂತೂ ವರ್ಣ ರಂಜಿತ. ಪಾನ ಗೋಷ್ಠಿಗಳಲ್ಲಿ ಅನೇಕ ರೀತಿಯ ವಿಷಯಗಳ ಚರ್ಚೆ. ಅವುಗಳಲ್ಲಿ ರೋಚಕತೆ, ರಸಿಕತೆ, ಮನುಷ್ಯನ ಸದ್ಗುಣ, ನೀಚತನಗಳು, ರಾಜಕೀಯ, ಸಾಹಿತ್ಯ ಇವುಗಳ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿತ್ತು. 


ರವಿ ಇದುವರೆಗೆ ಕನ್ನಡದಲ್ಲಿ ಐದು ಕೃತಿಗಳನ್ನು, ಇಂಗ್ಲೀಷ್‌ನಲ್ಲಿ ಎರಡು ಕೃತಿಗಳನ್ನು ರಚಿಸಿದ್ದಾರೆ. ಪ್ರತಿ ಬಾರಿ ಭಾರತ ಭೇಟಿಗೆ ಬರುವಾಗ ಒಂದು ಹೊಸ ಪುಸ್ತಕದೊಡನೆ ಬರುತ್ತಾರೆ. ನನ್ನಂಥ ಮಿತ್ರರ ಸಂಭ್ರಮ‌ ಹೆಚ್ಚಿಸುತ್ತಾರೆ. 


ಕೋವಿಡ್ ಪೂರ್ವದಲ್ಲಿ ನಾವು ಪರಸ್ಪರ ಭೇಟಿಯಾಗಿದ್ದು ಇದು ಎರಡನೇ ಸಲ. ಅವರ ನೂತನ ಕೃತಿ ವಿವಾದಾಸ್ಪದ ವಿಷಯವನ್ನು ಒಳಗೊಂಡಿದ್ದು ಸಾಕಷ್ಟು ಕುತೂಹಲ‌ ಕೆರಳಿಸುವ ವಿಷಯ ವಸ್ತು ಹೊಂದಿದೆ. 


ರವಿ ಫೇಸ್‌ಬುಕ್‌ ಸಾಮಾಜಿಕ ಜಾಲತಾಣದಲ್ಲಿ #ಭಾರತವೆಂಬೋ_ಹುಚ್ಚಾಸ್ಪತ್ರೆಯಲ್ಲಿ #ಕರ್ನಾಟಕವೆಂಬೋ_ಕಮಂಗಿಪುರದಲ್ಲಿ ಟ್ಯಾಗ್ ಲೈನ್‌ನಲ್ಲಿ ವರ್ತಮಾನದ ಬೆಳವಣಿಗೆಗಳಿಗೆ ಮುಖಾಮುಖಿ ಆಗ್ತಾರೆ. ಸಾಗರದಾಚೆಯ ನಾಡಿನಿಂದ ತಾಯ್ನೆಲದ ವಿಷಯ, ಬೆಲಕವಣಿಗೆಗಳಿಗೆ ಸ್ಪಂದಿಸುತ್ತಾರೆ. 


ಕಳೆದೆರಡು ದಶಕಗಳಿಂದ ಅಮೆರಿಕಾ ದೇಶದ ನಾಗರಿಕರಾಗಿದ್ದರೂ ದಾವಣಗೆರೆಯ ನೆಲದ ಸೊಗಡು ಅವರನ್ನು ಬಿಟ್ಟಿಲ್ಲ. ರವಿ ಯಾವುದೇ ಹಮ್ಮು ಬಿಮ್ಮುಗಳಿಲ್ಲದೇ ರಸ್ತೆ ಪಕ್ಕದ ಹೋಟೆಲ್‌ನಲ್ಲಿ ಮಂಡಕ್ಕಿ, ಮಿರ್ಚಿ ಸವಿಯಬಲ್ಲರು. ಜನ ಸಾಮಾನ್ಯರೊಡನೆ ಬೆರೆಯಬಲ್ಲರು. ಅದೇ ವೇಳೆ ಅವರ ವ್ಯಕ್ತಿತ್ವದ ಪಂಚತಾರಾ ಆಯಾಮವನ್ನು ನೋಡಬಹುದು. 


ಅವರ ಸ್ನೇಹ ವಲಯದಲ್ಲಿ ರಾಜಕಾರಣಿಗಳು, ಶಾಸಕರು, ಸಚಿವರು, ಉನ್ನತಾಧಿಕಾರಿಗಳು, ವಕೀಲರು, ವೈದ್ಯರು, ವಿವಿಧ ಕ್ಷೇತ್ರಗಳ ಸಾಧಕರು, ಸಾಹಿತಿಗಳು, ಸಂಶೋಧಕರು, ಉಪನ್ಯಾಸಕರು ಹೀಗೆ ತರಹಾವರಿ ಜನರಿದ್ದಾರೆ. ಇದು ಅವರ ಸ್ನೇಹಮಯಿ ವ್ಯಕ್ತಿತ್ವವನ್ನು ತೋರಿಸುತ್ತದೆ. 


ಈ ವರ್ಷ ಅನಿವಾರ್ಯ ಕಾರಣಗಳಿಂದಾಗಿ ರವಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಾಗೂ ಅವರೊಡನೆ ಸುತ್ತಾಟ ಮಿಸ್ ಮಾಡಿಕೊಂಡಿದ್ದೆ. ಆ ಕೊರತೆಯನ್ನು ಇಂದಿನ ಭೇಟಿ ತುಂಬಿತು. ಚಿತ್ರದುರ್ಗದಲ್ಲಿ ಅವರ ಸ್ನೇಹಿತರ ಬಳಗದೊಂದಿಗೆ ಒಂದಿಷ್ಟು ಕಾಲ ಹರಟಿ ನನ್ನ ಸಹೋದರಿಯ ಮನೆಯಲ್ಲಿ ಭೋಜನ ಮಾಡಿ ಪರಸ್ಪರ ಬೀಳ್ಕೊಂಡೆವು. 


ಮುಂದಿನ ವಾರ ರವಿ ತಮ್ಮ ಸ್ವಸ್ಥಾನಕ್ಕೆ ಮರಳಲಿದ್ದಾರೆ.‌ ಆದರೆ, ಫೋನ್, ಫೇಸ್‌ಬುಕ್‌, ವಾಟ್ಸ್‌ಆ್ಯಪ್, ಮೆಸೆಂಜರ್ ಮೂಲಕ ನಿರಂತರ ಸಂಪರ್ಕ ಇದ್ದರೂ ವೈಯಕ್ತಿಕ ಭೇಟಿಯಷ್ಟು ಸೊಗಸು ಈ ಯಾಂತ್ರಿಕ ಸಂಪರ್ಕಗಳಲ್ಲಿ ಇರೋದಿಲ್ಲ. 


ಸದಾ ಹೊಸತನ್ನು ಹುಡುಕುವ ಅನ್ವೇಷಕ ಮನಸ್ಸಿನ ರವಿಯವರಿಗೆ ಶುಭವಾಗಲಿ. ಆದಷ್ಟು ಬೇಗ ಒಂದು ಸುದೀರ್ಘ ಕಾಲದ ಬಿಡುವಿನೊಡನೆ ಭಾರತಕ್ಕೆ ಭೇಟಿ ನೀಡಲಿ ಎಂದು ಹಾರೈಸುವೆ. 


#ಅಲೆಮಾರಿಯ_ಪ್ರವಾಸ_ಕಥನಗಳು

ಅರವಿಂದ ಚೊಕ್ಕಾಡಿಯರೊಂದಿಗೆ ಭೇಟಿ

 ಚಿಕಾಗೋದಿಂದ ಅಲ್ಪ ಕಾಲೀನ ರಜೆಯಲ್ಲಿ ಊರಿಗೆ ಬಂದಿದ್ದ ಮಿತ್ರ ರವಿ ಹಂಜ್ ಅವರು ಇವತ್ತು ಅವರ ಭಾರತೀಯ ವ್ಯವಸ್ಥಾಪನೆಯನ್ನು ನೋಡಿಕೊಳ್ಳುತ್ತಿರುವ ಸವಿತಾ ಅವರೊಂದಿಗೆ ಮನೆಗೆ ಬಂದಿದ್ದರು. ಅವರ ಇತ್ತೀಚಿನ ಪುಸ್ತಕಗಳನ್ನು ಕೊಟ್ಟರು.


ಮೊದಲನೆಯದಾಗಿ ಫೇಸ್ ಬುಕ್‌ನಲ್ಲಿ ಎಷ್ಟೇ ಮಿತ್ರತ್ವ ಇದ್ದರೂ ಅಲ್ಪ ಕಾಲಕ್ಕೆ ಭಾರತಕ್ಕೆ ಬಂದವರು ಹೊಸದುರ್ಗದಿಂದ ಮೂಡುಬಿದಿರೆಗೆ ಕೇವಲ ಭೇಟಿಯಾಗಲಿಕ್ಕಾಗಿಯೇ ಬರುತ್ತಾರೆ ಎಂದು ನಾನು ಊಹಿಸಿರಲಿಲ್ಲ.


ಹಲವು ಮಿತ್ರರ ಪ್ರಕಾರ ರವಿ ಹಂಜ್ ಬಲಪಂಥೀಯರು( ಹಾಗೇ ನನ್ನ ಬಗ್ಗೆ ಬೇರೆಯವರು ಅವರ ಮಿತ್ರರ ಬಳಿ ಅವರ ವಿರೋಧಿ ಪಾಳಯದವನೆಂದು ಹೇಳಿಯೇ ಇರುತ್ತಾರೆ ಬಿಡಿ). ಬಲಪಂಥೀಯರಾಗಿದ್ದರೆ ತಪ್ಪೇನೂ ಇಲ್ಲ. ನನ್ನ ಸ್ನೇಹದಲ್ಲಿ ವ್ಯತ್ಯಾಸವೂ ಆಗುವುದಿಲ್ಲ. ಸಂಬಂಧಗಳು ಮನುಷ್ಯರ ನಡುವೆ ಬೆಳೆಯುವುದು; ಸಿದ್ಧಾಂತಗಳ ನಡುವೆ ಅಲ್ಲ. ಆದರೆ ರವಿ ಹಂಜ್ ಬಲಪಂಥೀಯರು ಎಂದು ನನಗನಿಸಲಿಲ್ಲ. ಎಡಪಂಥೀಯರ ಬಳಿ," ನೀವು ಅಬ್ರಾಹ್ಮಣರ ಜಾತಿವಾದಕ್ಕೂ, ಹಿಂದೂಗಳಲ್ಲದವರ ಕೋಮುವಾದಕ್ಕೂ ಯಾಕೆ ಸರೆಂಡರ್ ಆಗಿದ್ದೀರಿ?" ಎಂದು ಕೇಳಿದರೆ ಅದು ಎಡಪಂಥೀಯರಿಗೆ ಕೇಳಿದ ಪ್ರಶ್ನೆಯೇ ಹೊರತು ಅವರ ನಿರಾಕರಣೆಯಲ್ಲ.‌ ಸೃಜನಶೀಲನಾದವನು ಪ್ರಶ್ನೆ ಮಾಡದೆ ಇರುವುದಿಲ್ಲ. ಉತ್ತರಿಸುವ ಶಕ್ತಿ ಇದ್ದವರು ಉತ್ತರಿಸುತ್ತಾರೆ. ಉತ್ತರಿಸುವ ಶಕ್ತಿ ಇಲ್ಲದವರು, ತಾವು ಪ್ರಶ್ನಾತೀತರು ಎಂದು ನಂಬಿಕೊಂಡವರು ಪ್ರಶ್ನೆ ಕೇಳಿದವನು ತನ್ನ ಸೈದ್ಧಾಂತಿಕ ವಿರೋಧಿ ಎಂದು ಬ್ರಾಂಡ್ ಮಾಡುತ್ತಾರೆ ಅಷ್ಟೆ. ರವಿ ಹಂಜ್ ಅವರು ವಿಚಾರ ಸಾಹಿತ್ಯದಲ್ಲಿ ಆವಿಷ್ಕೃತ ಐಡಿಯಾಗಳನ್ನು ಹುಟ್ಟು ಹಾಕುತ್ತಿದ್ದಾರೆ. ಅದೇ ಒಂದು ಆಲೋಚನಾ ಕ್ರಮವಾಗಿ ಹಲವರಿಂದ ಬೆಳೆದಾಗ ಎಡಬಲವಲ್ಲದ ಸಾಧ್ಯತೆಗಳು ಸಿಗುತ್ತವೆ.‌ ರವಿಯವರು ಎಲ್ಲೂ ಬಲಪಂಥೀಯರ ಹಾಗೆ ಕಥೆ ಹೇಳಿದ್ದು ನಾನು ನೋಡಿಲ್ಲ. ಅವರ ವಿಚಾರವನ್ನು ಹೇಳಲು ಅವರು ಕೊಡುವ ದಾಖಲೆಗಳು ' ಪಕ್ಕಾ' ಇರುತ್ತವೆ. ಆದ್ದರಿಂದ ನನ್ನ ಇಷ್ಟದ ಲೇಖಕರಲ್ಲಿ ಅವರೂ ಒಬ್ಬರು.


ಬಹಳ ದೀರ್ಘವಾದ ಮಾತುಕತೆಯಲ್ಲಿ ಅವರ ಕಂಪನಿ, ಅಮೆರಿಕದಲ್ಲಿನ ಜೀವನ ವ್ಯವಸ್ಥೆ ಇತ್ಯಾದಿಗಳ ಚರ್ಚೆಯಾಯಿತು. ರವಿಯವರ ಸಹಜತೆಯ ಒಡನಾಟ, ವಿನಯ, ನಿಷ್ಠುರತೆಗಳು ಹಿತಾನುಭವವನ್ನು ನೀಡಿದವು.

ಸಮಾಜಮುಖಿ ಫೆಬ್ರುವರಿ ೨೦೨೩ ಲೇಖನ - ಚಿಂತಕರ ಓಲಾಟ

ತಾರ್ಕಿಕ ಹಾಗೂ ವೈಚಾರಿಕ ಆಲೋಚನೆಗಳ ಮುಖಾಂತರ ಸರ್ಕಾರಗಳನ್ನು ಶೂಲಕ್ಕೆ ಏರಿಸುವ ಸಾಮರ್ಥ್ಯ ಹೊಂದಿದ್ದ ನಮ್ಮ ಬುದ್ಧಿಜೀವಿಗಳ ವಿಚಾರ ತೀಕ್ಷ್ಣತೆ ಇನ್ನೂ ಉಳಿದಿದೆಯೇ..?

ಹದಿನೆಂಟನೇ ಶತಮಾನದ ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಬಹುಪಾಲು ಬುದ್ಧಿಜೀವಿಗಳು ತಟಸ್ಥರಾಗಿದ್ದರೂ ಬ್ಯಾರನ್ ಮಾಂಟೆಸ್ಕ್ಯೂ, ವಾಲ್ಟೇರ್, ಜೀನ್ ರೋಸ್ಯು ಅಂತಹ ತತ್ವಜ್ಞಾನಿ ಸಾಹಿತಿಗಳು ಫ್ರೆಂಚ್ ಜಾಗೃತಿಗೆ ಕಾರಣರಾಗಿದ್ದರು. ಹಿಟ್ಲರ್ ಕಾಲದ ಜರ್ಮನಿಯಲ್ಲಿ ಯಹೂದಿಗಳ ರಕ್ಷಣೆಗೆ ಮುಂದಾಗಿದ್ದ ಸಾಹಿತಿಗಳಾದ ಮಾರ್ಥಾ ವೇಟ್ಸ್ಟಿಲ್ ಶಾರ್ಪ್ ದಂಪತಿ, ವೇರಿಯನ್ ಫ್ರೈ, ಜೀನೋ ಬರ್ತಾಲಿ, ಜಾನ್ ಸ್ವಾರ್ಟರ್ನ್ಜಿಕ್, ಜಾನ್ ಕರಾಸ್ಕಿ ಮುಂತಾದವರ ಬರಹ ಮತ್ತು ವರದಿಗಳಲ್ಲದೆ ಅವರು ಖುದ್ದು ಅಪಾಯಕ್ಕೀಡಾಗುವ ಸನ್ನಿವೇಶವಿದ್ದರೂ ಯಹೂದಿಗಳನ್ನು ರಕ್ಷಿಸಿದ್ದರು. ಇನ್ನು ರಷ್ಯನ್ ಕ್ರಾಂತಿಯ ಉದಾರವಾದಿಗಳೆಂದು ಗುರುತಿಸಿಕೊಂಡಿದ್ದ ಪ್ರಗತಿಪರ ಸಾಹಿತಿಗಳಾದ  Intelligentsia ಗುಂಪಿನ ಆಂಟಾನ್ ಚೆಕೋವ್, ವಾಸಿಲಿ ಜುಕೊವ್ಸ್ಕಿ, ಅಲೆಕ್ಸಾಂಡರ್ ರಾಡಿಷ್ಚೆವ್, ಆಂಡ್ರೆ ಸಕರೋವರಂತಹ ಬುದ್ದಿಜೀವಿಗಳಲ್ಲದೆ ಲಿಯೋ ಟಾಲ್ಸ್ಟಾಯ್ ಅಂತಹ ಸಾಹಿತಿಗಳು ಸಹ ಕ್ರಾಂತಿಯ ಮೇಲೆ ಗಾಢ ಪ್ರಭಾವ ಬೀರಿದ್ದರು. ಅದೇ ರೀತಿ ಭಾರತೀಯ ವಿದ್ಯಾವಂತರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾಕಷ್ಟು ಪ್ರಭಾವ ಬೀರಿದ್ದರು. ಇವರೆಲ್ಲರ ಪ್ರಭಾವ ಸ್ವಾತಂತ್ರೋತ್ತರ ಭಾರತೀಯ ಬುದ್ದಿಜೀವಿಗಳ ಮೇಲೆಯೂ ಸಾಕಷ್ಟು ಪ್ರಭಾವ ಬೀರಿದೆ.

ಹಾಗಾಗಿ ೧೯೭೪ ರಲ್ಲಿ ಬಿಹಾರಿನ ವಿದ್ಯಾರ್ಥಿ ಸಂಘಟನೆಯು ಜಯಪ್ರಕಾಶ್ ನಾರಾಯಣ್ ಅವರ ನಾಯಕತ್ವದಡಿಯಲ್ಲಿ "ಸಂಪೂರ್ಣ ಕ್ರಾಂತಿ" ಎಂಬ ಚಳುವಳಿಯನ್ನು ದೊಡ್ಡ ಪ್ರಮಾಣದಲ್ಲಿ ಆರಂಭಿಸಿತು. ಮುಂದೆ ಈ ಕ್ರಾಂತಿಯು ದೇಶದ ತುಂಬೆಲ್ಲಾ ಕಾಳ್ಗಿಚ್ಚಿನಂತೆ ವ್ಯಾಪಕವಾಗಿ ಹಬ್ಬಿತು. ಇದರ ಆರಂಭವು ೧೯೭೩ರಲ್ಲಿಯೇ ಗುಜರಾತಿನಲ್ಲಿ "ನವ ನಿರ್ಮಾಣ" ಎಂಬ ಹೆಸರಿನ ಚಳುವಳಿಯಾಗಿ ಅಲ್ಲಿನ ವಿದ್ಯಾರ್ಥಿ ಸಂಘಗಳಿಂದ ಆರಂಭವಾಗಿತ್ತು. ಅದೇ ರೀತಿ ಮಧ್ಯಪ್ರದೇಶದ ಭೂಪಾಲದಲ್ಲೂ ವಿದ್ಯಾರ್ಥಿ ಸಂಘಟನೆಗಳು ಸರ್ಕಾರದ ವಿರುದ್ಧ ದಂಗೆದ್ದು ಎಂಟು ವಿದ್ಯಾರ್ಥಿಗಳು ಪೊಲೀಸ್ ಗೋಲಿಬಾರಿನಲ್ಲಿ ಮೃತಪಟ್ಟಿದ್ದರು. ಇದರಿಂದ ಉದ್ರಿಕ್ತ  ಅಲ್ಲಿನ ವಿದ್ಯಾರ್ಥಿಗಳು ತಾವು ಜೆಪಿ ಚಳುವಳಿಯಲ್ಲಿ ಭಾಗವಹಿಸಿ ಚಳುವಳಿಯನ್ನು ವ್ಯಾಪಕವಾಗಿ ದೇಶಾದ್ಯಂತ ಹಬ್ಬಿಸಲು ಪಣ ತೊಟ್ಟರು. ಈ ಚಳುವಳಿಯ ಹಿಂದೆ ಸಾಮಾಜಿಕ ಚಿಂತನೆಯ ಅಧ್ಯಾಪಕ ವರ್ಗವೇ ವಿದ್ಯಾರ್ಥಿಗಳನ್ನು ಹೊಸ ಕ್ರಾಂತಿಗೆ ತಯಾರು ಮಾಡಿದ್ದರು.

ಹೀಗೆ ಗುಜರಾತಿನ ಒಂದು ಹಾಸ್ಟೆಲ್ಲಿನ ಊಟದ ವಿಷಯವಾಗಿ ಆರಂಭವಾದ ಒಂದು ಚಳುವಳಿಯು ಜೆಪಿ ಚಳುವಳಿಯಾಗಿ ಮುಂದೆ ದೇಶದಲ್ಲಿ ತುರ್ತುಪರಿಸ್ಥಿತಿ ಹೇರುವಷ್ಟರ ಮಟ್ಟಿಗೆ ಪ್ರಭಾವಶಾಲಿಯಾಗಿ ಬೆಳಿಯಿತು. ಇದಕ್ಕೆ ಭಾರತದ ಬಹುಪಾಲು ಚಿಂತಕರು, ಸಾಹಿತಿಗಳು, ಪ್ರಗತಿಪರರು ಬೆಂಬಲ ಸೂಚಿಸಿ ಭ್ರಷ್ಟ ಸರ್ಕಾರದ ವಿರುದ್ಧ ಜನರನ್ನು ವ್ಯಾಪಕವಾಗಿ ಸಂಘಟಿಸಿದ್ದರು.

ಮುಂದೆ ತುರ್ತುಪರಿಸ್ಥಿತಿಯಿಂದ ಮತ್ತಷ್ಟು ಸಂಘಟಿತರಾದ ಚಿಂತಕ ಪ್ರಗತಿಪರರು ಸರ್ಕಾರಕ್ಕೆ ಸರಿಯಾದ ಎಚ್ಚರಿಕೆಯನ್ನು ಕೊಟ್ಟದ್ದಲ್ಲದೇ ಸರ್ಕಾರವುರುಳಿ ಹೊಸ ಸರ್ಕಾರಕ್ಕೆ ನಾಂದಿ ಹಾಡಿದರು. ಇದರಿಂದ ಸರ್ಕಾರಕ್ಕೆ ಬುದ್ದಿಜೀವಿಗಳ ವಿಚಾರ ತೀಕ್ಷ್ಣತೆಯ ಶಕ್ತಿಯ ಅರಿವಾಯಿತು.

೧೯೮೦ ರಲ್ಲಿ ಕರ್ನಾಟಕದಲ್ಲಿ ಗುಂಡೂರಾವ್ ಸರ್ಕಾರ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಿನ ಲೆವಿಯಾಗಿ ಎಕರೆಗೆ ರೂ. ೧೫೦೦ ಹೇರಿತು. ಈ ಅಚ್ಚುಕಟ್ಟು ಪ್ರದೇಶದ ಎಲ್ಲಾ ಭೂಮಿಯ ಮೇಲೆ ರೈತರು ತಮ್ಮ ಭೂಮಿ ನೀರಾವರಿಗೆ ಒಳಗಾಗಿರಲಿ ಇಲ್ಲದಿರಲಿ ಲೆವಿ ಕಟ್ಟಲೇಬೇಕಿತ್ತು. ಇದನ್ನು ವಿರೋಧಿಸಿ ನಡೆದ ಚಳುವಳಿ ಗುಂಡೂರಾವ್ ಸರ್ಕಾರವನ್ನು ಉರುಳಿಸಿದ್ದಲ್ಲದೇ ಕರ್ನಾಟಕ ರಾಜ್ಯ ರೈತ ಸಂಘದ ಉದಯಕ್ಕೆ ಕಾರಣವಾಯಿತು. ಈ ಚಳುವಳಿಗೆ

ಅದಾಗಲೇ ರಾಷ್ಟ್ರೀಯ ಮಟ್ಟದ ಜೆಪಿ ಚಳುವಳಿಯಲ್ಲಿ ಭಾಗವಹಿಸಿದ್ದ ಕನ್ನಡ ನಾಡಿನ ಚಿಂತಕರು, ಸಾಹಿತಿಗಳು, ಪ್ರಗತಿಪರರು ವ್ಯಾಪಕ ಬೆಂಬಲ ಕೊಟ್ಟಿದ್ದರು. ಮುಂದೆ ಈ ರೈತ ಸಂಘದ ಚಳುವಳಿಯಲ್ಲಿ ಪ್ರಗತಿಪರ ಚಿಂತಕರಾದ ಸಾಹಿತಿಗಳು, ಪತ್ರಕರ್ತರು, ಸಮಾಜವಾದಿ ಚಿಂತನೆಯ ಪ್ರಮುಖರೆಲ್ಲರೂ ಪಾಲ್ಗೊಂಡರು. ಇವರಲ್ಲಿ ಪ್ರಮುಖರಾದ ಲಂಕೇಶ್, ನಂಜುಂಡಸ್ವಾಮಿ, ಸುಂದರೇಶ್, ಪೂರ್ಣಚಂದ್ರ ತೇಜಸ್ವಿ, ಕಡಿದಾಳ್ ಶಾಮಣ್ಣ ಮುಂತಾದವರು ಭಾಗವಹಿಸಿ ಕರ್ನಾಟಕದ ತುಂಬೆಲ್ಲಾ ಸಮಾಜವಾದದ ಕಂಪನ್ನು ಹರಡಿದ್ದಲ್ಲದೆ ಆಳುವ ಸರ್ಕಾರಕ್ಕೆ ಮಾರ್ಗದರ್ಶಕ ಎಚ್ಚರಿಕೆಗಳನ್ನು ಕೊಡುತ್ತಿದ್ದರು. ಆಳುವ ಸರ್ಕಾರಗಳೂ ಇವರೆಲ್ಲರನ್ನು ಗಂಭೀರವಾಗಿ ಪರಿಗಣಿಸಿದ್ದವು. ಅದೆಲ್ಲಕ್ಕಿಂತ ಹೆಚ್ಚಾಗಿ ಯುವಜನತೆ ಇವರನ್ನು ಅಷ್ಟೇ ಗಂಭೀರವಾಗಿ ಪರಿಗಣಿಸಿ ತಮ್ಮ ರೋಲ್ ಮಾಡೆಲ್ ಆಗಿ ಸ್ವೀಕರಿಸಿದ್ದರು. ಯುವಜನತೆಯಂತೂ ಇವರನ್ನೇ ಆದರ್ಶವ್ಯಕ್ತಿಗಳಾಗಿ ಆದರಿಸುತ್ತಿದ್ದರು. ಇದಕ್ಕೆ ಕಾರಣ, ಇವರ ಸಾಮಾಜಿಕ ಕಳಕಳಿ, ನಿಷ್ಠೆ, ಮತ್ತು ಅರಿವು ಅವರ ಲೇಖನಗಳಲ್ಲಿ ಪ್ರಶ್ನಾತೀತವಾಗಿ ಪ್ರಭಾವಶಾಲಿಯಾಗಿ ಮೂಡಿಬರುತ್ತಿದ್ದವು. ಸರ್ಕಾರಗಳು ದಾರಿ ತಪ್ಪಿದಾಗ ಬೆಚ್ಚಿ ಬೀಳುವಂತಹ ಪ್ರತಿಕ್ರಿಯೆ ಕೊಟ್ಟು ಸರ್ಕಾರಗಳ ಕಿವಿ ಹಿಂಡುತ್ತಿದ್ದರು. ಇವರಿವರಲ್ಲೇ ಕೆಲವು ಭಿನ್ನಾಭಿಪ್ರಾಯ, ಈರ್ಷ್ಯೆಗಳಿದ್ದರೂ ವೈಯಕ್ತಿಕವಾಗಿ ಇವರ ಚಿಂತನೆ ಸಮಾಜೋದ್ಧಾರದ ಏಕಮಾತ್ರ ಗುರಿಯನ್ನು ಹೊಂದಿದ್ದವು.

ಕಾಲಕ್ರಮೇಣವಾಗಿ ಇವರಲ್ಲಿ ಕೆಲವರ ಸಮಾಜೋದ್ದಾರದ ಆಸಕ್ತಿಯು ವಯೋಮಾನ, ಸಾಂಸಾರಿಕ ಜವಾಬ್ದಾರಿಯಲ್ಲಿ ಕುಂದಿದರೆ ಕೆಲವರಲ್ಲಿ ರಾಜಕೀಯ ಮಹತ್ವಾಕಾಂಕ್ಷೆ, ಉನ್ನತ ಅಧಿಕಾರದ ಲಾಲಸೆಗೆ ಸಿಕ್ಕು ಬೇರೆಯೇ ಆದ ರೂಪವನ್ನು ಪಡೆದುಕೊಂಡಿತು. ಕೆಲವರಂತೂ ಎಕ್ಸ್ಪೈರಿ ಆದ ಸಿದ್ಧಾಂತಗಳಿಗೆ ಜೋತು ಬಿದ್ದುದನ್ನು ಅಣಕಿಸುವಂತೆ ಪೂರ್ಣಚಂದ್ರ ತೇಜಸ್ವಿಯವರು ತಮ್ಮ 'ಜುಗಾರಿ ಕ್ರಾಸ್' ಕಾದಂಬರಿಯಲ್ಲಿ 'ಪ್ರೊ. ಗಂಗೂಲಿ' ಎಂಬ ಒಂದು ಪಾತ್ರವನ್ನೇ ಸೃಷ್ಟಿಸಿದ್ದರು.

ಜನರೂ ಸಹ ತಮ್ಮ ತಮ್ಮ ಸಾಂಸಾರಿಕ ಜವಾಬ್ದಾರಿ, ವೈಯಕ್ತಿಕ ಆಸಕ್ತಿಗಳ ಕಡೆ ಗಮನ ಹರಿಸಿದರು. ಹೊಸ ಶತಮಾನದ ಹೊರಳಿನ ತಲೆಮಾರಿನ ಯುವಜನತೆ ಮಾರ್ಗದರ್ಶನಕ್ಕಾಗಿ ಅತ್ತಿತ್ತ ನೋಡಿದಾಗ ಕಂಡದ್ದು, ಎಲ್ಲಾ ಧರ್ಮಗಳ "ಧರ್ಮೋ ರಕ್ಷತಿ ರಕ್ಷಿತಃ!"  

ಇದಕ್ಕೆ ಆಯಾಯ ಸಿದ್ಧಾಂತದ ರಾಜಕಾರಣಿಗಳು ತಮ್ಮ ಪ್ರಚಂಡ ಮಾತುಗಾರಿಕೆಯಿಂದ ಓಲೈಸಿ ಸ್ಪಂದಿಸಿ ಚಿಂತಕರ ಸ್ಥಾನವನ್ನು ತುಂಬಿ ಮಾರ್ಗದರ್ಶನ ನೀಡಿದರು. ಆದರೆ ಇದೆಲ್ಲವೂ ಒಂದೇ ಸಾರಿಯೇ ಆದ ಬದಲಾವಣೆಯಲ್ಲ!

ದೇಶದ ಈ ಸ್ಥಿತ್ಯಂತರ ಘಟ್ಟವನ್ನು ಕರಾರುವಾಕ್ಕಾಗಿ ಗುರುತಿಸಬಹುದು. ಅಂದು ಸಲ್ಮಾನ್ ರಶ್ದಿ ಅವರು ತಮ್ಮ ಕೃತಿ "ಸಟಾನಿಕ್ ವರ್ಸಸ್"ನಿಂದಾಗಿ ಫತ್ವಾಕ್ಕೊಳಗಾದಾಗ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒಕ್ಕೊರಲಿನಿಂದ ಬೆಂಬಲಿಸಿದ್ದ ಭಾರತೀಯ ಪ್ರಗತಿಪರ ಸಾಹಿತ್ಯ ವಲಯವು ಮುಂದೆ ಚಾರ್ಲಿ ಹೆಬ್ಡೋ ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಕಾಲಕ್ಕಾಗಲೇ ಓಲೈಕೆಯ ಜಾಣ ಪ್ರಭಾವಕ್ಕೊಳಗಾಗಿ ಮೌನವಾಗಿತ್ತು. ರಶ್ದಿ ಫತ್ವಾ ವಿರೋಧಿಸಿದ್ದ ಸಾಹಿತಿಗಳೇ ಹೆಬ್ಡೋ ಫತ್ವಾಕ್ಕೆ ಮೌನ ವಹಿಸಿದ್ದರು ಎಂಬುದು ಗಮನಾರ್ಹ. ಏಕೆಂದರೆ ಅದಾಗಲೇ ಭಾರತೀಯ ಚಿಂತನೆಯು ಆತ್ಮರತಿ, ಓಲೈಕೆ, ಸ್ವಜನ ಪಕ್ಷಪಾತ

ಮತ್ತು ಜಾತಿ/ಪಂಥ ಆಧಿನಾಯಕತ್ವಕ್ಕೆ ಹೊರಳಿತ್ತು. ಅಂದು ಒಗ್ಗಟ್ಟಾಗಿ ಕ್ರಿಯಾಶೀಲವಾಗಿದ್ದ ಪ್ರಗತಿಪರ ಚಿಂತಕರು ಮುಂದೆ ಎಡ, ಬಲ ಎಂದು ಭಿನ್ನಗೊಂಡರು. ಆದರೂ ಬಲದ ಕಡೆ ವಾಲಿದವರು ಅತ್ಯಂತ ಕಡಿಮೆಯೇ.

ಈ ಮಧ್ಯೆ ಬಂದ ತಸ್ಲೀಮಾ ನಸ್ರೀನ್ ಅವರಿಗೆ ಭಾರತೀಯ ಜನ ಸಾಮಾನ್ಯರ ಒಕ್ಕೊರಲಿನ ಬೆಂಬಲ ಸಿಕ್ಕರೂ ಭಾರತೀಯ ಸಾಹಿತಿಗಳ ಬೆಂಬಲ ರಶ್ದಿ ಕಾಲಕ್ಕಿಂತ ಇಲ್ಲವೇ ಇಲ್ಲ ಎನ್ನುವಷ್ಟು ಇಳಿಮುಖಗೊಂಡಿತ್ತು ಎಂಬುದೂ ಗಮನಾರ್ಹ! ಮಾತನಾಡಲೇಬೇಕಾದಾಗ ಇವರೆಲ್ಲಾ ಜಾಣಮೌನಕ್ಕೆ ಜಾರಿದ್ದರು. ಆದರೆ ಜನಸಾಮಾನ್ಯರು ಇನ್ನೂ ಇವರಷ್ಟು ಭಿನ್ನಗೊಂಡಿರಲಿಲ್ಲ. ಅದನ್ನು ರಾಮಜನ್ಮಭೂಮಿ ಘಟನೆ ಸಮರ್ಥವಾಗಿ ನೆರವೇರಿಸಿತು.  ಆದರೆ ಆ ಕ್ರಿಯೆಗೆ ಪ್ರತಿಕ್ರಿಯೆಯಾಗಿ ರಶ್ದಿ ಕಾಲದಲ್ಲಿ ಧರ್ಮಾತೀತವಾಗಿದ್ದ ಪ್ರಗತಿಪರ ಚಿಂತನೆಯು ಹೆಬ್ಡೋ ಕಾಲಕ್ಕೆ ಎಡಬಲದ ಧರ್ಮಾಧೀನವಾಗಿ ಓಲೈಕೆಯನ್ನು ಅಪ್ಪಿಬಿಟ್ಟಿತು.

ಮುಂದೆ ಸಾಮಾಜಿಕ/ಸಂವಹನ ಮಾಧ್ಯಮ ತಂತ್ರಜ್ಞಾನದ ಆಸ್ಫೋಟವು ಚಿಂತಕರಿಗೆ ಸಾಕಷ್ಟು ಪ್ರಚಾರ ನೀಡಿ ಮುಂದೆ ಅವರ ಮುಳುವಾಗಲು ಕಾರಣವಾಯಿತು. ಏಕೆಂದರೆ ಈ ವರ್ಗವು ಒಂದೊಮ್ಮೆ ಯಾವ ಸಮಾಜವಾದಿ ಚಿಂತನೆಯಡಿಯಲ್ಲಿ ಒಂದು ಪಕ್ಷವನ್ನು ವಿರೋಧಿಸಿತ್ತೋ ಅದೇ ಪಕ್ಷದ ರಾಜಕಾರಣಿಗಳ ಹುನ್ನಾರಕ್ಕೆ ತಾಳ ಹಾಕುತ್ತಾ ತಾವೇ ಪ್ರತಿಪಾದಿಸುತ್ತಿದ್ದ "ವೈವಿಧ್ಯತೆಯಲ್ಲಿ ಏಕತೆ, ಸರ್ವಜನಾಂಗದ ಶಾಂತಿಯ ತೋಟ" ಎಂಬೆಲ್ಲ ಉದಾತ್ತ ಚಿಂತನೆಯ ಭಾರತೀಯತೆಯನ್ನು ದ್ವಂದ್ವ, ಓಲೈಕೆ, ಜನಾಂಗೀಯ ದ್ವೇಷ, ವೈಯಕ್ತಿಕ ಅವಹೇಳನ, ಸೋಶಿಯಲ್ ಮೀಡಿಯಾ ಬುಲ್ಲಿಯಿಂಗ್, ಜಾತೀಯತೆಯ ಭಾವನೆಗಳನ್ನು ಸಂಶೋಧನೆ, ಬಹುತ್ವ, ಅಸ್ಮಿತೆ, ಸನಾತನ, ಸಂಸ್ಕೃತಿ, ಒಳಗೊಳ್ಳುವಿಕೆಗಳೆಂಬ ಸುಂದರ ಭಾವುಕ ಪದಗಳಿಂದ ಆಯಾಯ ಪಂಥೀಯರು ಅಲಂಕರಿಸತೊಡಗಿದರು. ಹೀಗೆ ಆರಂಭವಾದ ಭಾರತೀಯ ಚಿಂತಕರ ವಿಭಜನೆ ಎರಡು ಪ್ರಮುಖ ಪಕ್ಷಗಳ ಭಜನೆಯಲ್ಲಿ ಲೀನವಾಯಿತು. ಈ ಮಧ್ಯೆ ಸಾಕಷ್ಟು ಹೋರಾಟಗಳನ್ನು ಬುದ್ಧಿಜೀವಿಗಳು ರೂಪಿಸಿದರೂ ಮೇಲ್ನೋಟಕ್ಕೆ ಆ ಹೋರಾಟಗಳೆಲ್ಲವೂ ಯಾವ ಪಕ್ಷದ ಮತ್ತು ಮುಖಂಡನ ಪ್ರಭಾವದಲ್ಲಿವೆ ಎಂದು ಜನ ಸುಲಭವಾಗಿ ಗ್ರಹಿಸುವಂತಿದ್ದವು. ಎಲ್ಲಾ ಚಿಂತಕರ ವೈಚಾರಿಕತೆಯು ಎಡ ಬಲ ಸಿದ್ಧಾಂತಕ್ಕೆ ಬದ್ಧವಾಗಿ ಚಿಂತಕರ ಪ್ರಗತಿಪರತೆಯು ರಾಜಾರೋಷವಾಗಿ ಪಕ್ಷಪರತೆಯಾಯಿತು. ಹಾಗಾಗಿ ಅವರ ಎಲ್ಲಾ ಹೋರಾಟಗಳೂ ಆಯಾಯ ಪಂಥನಿಷ್ಠರ ಮನ್ನಣೆ ಗಳಿಸದವೇ ಹೊರತು ಜನಮನ್ನಣೆಯನ್ನಲ್ಲ. 

೨೦೧೪ ರಿಂದ ಕೇಂದ್ರ ಮತ್ತು ರಾಜ್ಯದ ಆಡಳಿತ ಸರ್ಕಾರಗಳು ಸಾಕಷ್ಟು ಕಿವಿ ಹಿಂಡುವ ಅವಕಾಶಗಳನ್ನು ಕೊಟ್ಟರೂ ಈ ವರ್ಗದ ವಿಚಾರ ತೀಕ್ಷ್ಣತೆ ಯಕಶ್ಚಿತ್ ಟ್ರೋಲಿಗೆ ಸೀಮಿತವಾಯಿತು. ಯಾವುದೇ ತಾರ್ಕಿಕ ಮತ್ತು ನೈತಿಕ ಪ್ರಶ್ನಾರ್ಥಿಗಳನ್ನು ಪ್ರಶ್ನೆಯ ಆಧಾರದ ಮೇಲೆ ಎಡ ಬಲ ಎಂದು ಹಣೆಪಟ್ಟಿ ಹಚ್ಚಿ ತುಚ್ಚೀಕರಿಸಲಾಯಿತು. ಕೇಂದ್ರದ ಅಮಾನ್ಯೀಕರಣ, ಸ್ಮಾರ್ಟ್ ಸಿಟಿ, jಪುಲ್ವಾಮಾ, RCEP, CAA, NRC, GST, ಕಾಶ್ಮೀರ ಸ್ವಾಯತ್ತತೆ, ಕೋವಿಡ್ ನಿರ್ವಹಣೆ ಮುಂತಾದ ಸರಣಿ ಅವಕಾಶಗಳನ್ನು ಕೇಂದ್ರ ಸರ್ಕಾರವು ಬುದ್ದಿಜೀವಿಗಳ ಟೀಕೆಗೆ ಅವಕಾಶ ಮಾಡಿಕೊಟ್ಟಿತು. ಆದರೆ ಇಲ್ಲಿ  ಸಮರ್ಥ ಸಂಶೋಧನಾತ್ಮಕ, ತಾರ್ಕಿಕ ತೀಕ್ಷ್ಣ ವಾದವನ್ನು ಮಂಡಿಸಿ ಜನಜಾಗೃತಿಗೊಳಿಸದೆ ಬುದ್ಧಿಜೀವಿಗಳು ಕೇವಲ ಕರುಣಾಜನಕ ಸೃಜನಶೀಲ ಕತೆಗಳನ್ನು ಹೆಣೆದು, ಅತಾರ್ಕಿಕ ಟ್ರೋಲ್ ಮಾಡಿ ಖುದ್ದು ಟ್ರೋಲಿಗೆ ಒಳಗಾದರು. ಅತ್ತ ಟ್ರೋಲ್ ಆಗುತ್ತಾ/ಮಾಡುತ್ತಾ ಹಿಂದಿನ ರಾಜ್ಯ ಸರ್ಕಾರದ ಲಿಂಗಾಯತ ಪ್ರತ್ಯೇಕ ಧರ್ಮ ಸಮಿತಿಯ ಭಾಗವಾಗಿ ಎಲ್ಲಾ ಸಂಶೋಧನೆಗಳನ್ನು ತೂರಿ ಜೈಕಾರ ಹಾಕಿ ಸರ್ಕಾರದ ನಿರ್ಣಯ ಬೆಂಬಲಿಸಿದರು. ಬಹಳಷ್ಟು ಎಡದ ಬುದ್ದಿಜೀವಿಗಳು ಇದೇ ಸರ್ಕಾರದ ಕೆಲವು ಸ್ಥಾನಮಾನಗಳನ್ನು ಪಡೆದುಕೊಂಡರು. ಹಾಗೆ ಸ್ಥಾನಮಾನ ಪಡೆದುಕೊಂಡವರ ಪ್ರತಿರೋಧ, ಹೋರಾಟ, ಬೆಂಬಲಗಳೆಲ್ಲವೂ ಸಹಜವಾಗಿ "ಆಯ್ದ" ವಿಷಯಗಳಾದವು. ಅವರ ನೈತಿಕತೆ, ಬದ್ಧತೆ ಪ್ರಶ್ನಾರ್ಹವಾಯಿತು. ತಟ್ಟೆ ಕಾಸು, ಗಂಜಿ ಗಿರಾಕಿ ಮುಂತಾದ ಹೊಸ ಪರಿಭಾಷೆಗಳು ಸಾಹಿತ್ಯ ವಲಯಕ್ಕೆ ಕಾಲಿಟ್ಟವು. ಬದಲಾದ ರಾಜ್ಯ ಸರ್ಕಾರದಲ್ಲಿ ಬಲದ ಬುದ್ದಿಜೀವಿಗಳು ಸ್ಥಾನಮಾನ ಪಡೆದುಕೊಂಡರು. ಗೋಹತ್ಯೆ ನಿಷೇಧ, ಪಠ್ಯ ಪುಸ್ತಕ ಪರಿಷ್ಕರಣೆಯಂತಹ "ಆಯ್ದ" ವಿಷಯ ಅವರದಾಗಿತ್ತು. ಎಡ ಬಲರ ಚಿತ್ರ ವಿಚಿತ್ರ ಸಂಶೋಧನೆಗಳು ಯಾವುದೇ ಪುರಾವೆಗಳಿಲ್ಲದೆ ಅಥವಾ ಸೃಷ್ಟಿಸಿದ ಪುರಾವೆಗಳೊಂದಿಗೆ ವಿಶ್ವವಿದ್ಯಾಲಯಗಳ ಮಟ್ಟದಲ್ಲೇ ಸೃಷ್ಟಿಯಾದವು. ತಮ್ಮ ತಮ್ಮ ಪಂಥಕ್ಕೆ ಸೇರಿದ್ದ ಇವೆಲ್ಲ ಅಪಸವ್ಯಗಳನ್ನು ಎಡ ಬಲ ಬುದ್ಧಿಜೀವಿಗಳು ಬೆಂಬಲಿಸಿದರಲ್ಲದೆ ಪ್ರಮಾಣಪತ್ರಗಳನ್ನೂ ನೀಡಿ ಅಧಿಕೃತಗೊಳಿಸಿದರು.

ಹೀಗೆ ಎಡ ಬಲ ಪ್ರಗತಿಪರರ ಕ್ರಿಯೆ-ಪ್ರಕ್ರಿಯೆಗಳ ಆಯ್ದ ಹೋರಾಟಗಳ ಅತೀವ ಓಲೈಕೆಯ ಫಲವೇ ಇಂದು ಸಮಾಜದಲ್ಲಿ ಗೋಹತ್ಯೆ ನಿಷೇಧ, ಹಿಜಾಬ್-ಕೇಸರಿಶಾಲು, ಹಲಾಲ್-ಜಟ್ಕಾ, ಜಾತ್ರೆ-ಉರ್ಸ್ ಕ್ರಿಯೆ-ಪ್ರಕ್ರಿಯೆಗಳ ವ್ಯಾಪಾರದ ಜಂಜಾಟಕ್ಕೆ ಸ್ಫೂರ್ತಿ ಕೊಟ್ಟಿವೆ! ಸಾಂಸ್ಕೃತಿಕವಾಗಿ ರಿಕ್ಷಾ, ಟ್ಯಾಕ್ಸಿ, ಕಾರು, ಲಾರಿಗಳ ಮೇಲೆಲ್ಲಾ ಜಾತಿ ಪ್ರೌಢಿಮೆ ಮೆರೆಯುತ್ತಿದೆ.

ಇನ್ನು ಆಡಳಿತ ವಿರೋಧಿ ಎಡಬಣದ "ತೋಳ ಬಂತು ತೋಳ" ಕತೆಯಂತಹ ಅಕಾರಣ ಕೂಗನ್ನು ಕೇಳಿ ಕೇಳಿ ಬೇಸತ್ತಿದ್ದ ಜನ ಇವರನ್ನು ಅತ್ಯಂತ ತೀವ್ರ ಅನುಮಾನದಿಂದ ನೋಡತೊಡಗಿದರು. ಆ ಅನುಮಾನವನ್ನು ಹೆಚ್ಚಿಸುವಂತೆ ಆ ಬಣದ ಚಿಂತಕರು ಮತ್ತಷ್ಟು ಟ್ರೋಲೆಂಬ ಸುಳಿಯಲ್ಲಿ ಸಿಲುಕಿ ಹೊರಬರದಾದರು.

ಇಂತಹ ಸುಳಿಯಲ್ಲಿ ಸಿಕ್ಕವರು ಮೊನ್ನೆ ಮೊನ್ನೆ ಸಹ ಕನ್ನಡ ಸಾಹಿತ್ಯ ಸಮ್ಮೇಳನದ ಸಮತೋಲಿತ ಅಲ್ಪಸಂಖ್ಯಾತ ಪ್ರತಿನಿಧಿತ್ವವನ್ನು ಇವರು ಸಮರ್ಥವಾಗಿ ವಿರೋಧಿಸದಾದರು. ಪರ್ಯಾಯ ಎಂದು ಸಮ್ಮೇಳನ ಮಾಡಿದರೂ ಅಲ್ಲಿ ಓಲೈಕೆಯನ್ನೇ ಮೆರೆದರು. ಬೌದ್ಧ ತತ್ವದ ಚಿಂತಕ ಎನಿಸಿದವರು, ಬುದ್ಧನ ತತ್ವ ಹರಡಿ ಸ್ತೂಪಗಳನ್ನು ಕಟ್ಟಿದ ವೈಶ್ಯರನ್ನು ಮೂದಲಿಸಿ ಕವಿ ಸಾಹಿತಿಗಳೇ ದೇಶ ಕಟ್ಟುವವರು ಎಂದು ಜನಾಂಗೀಯ ದ್ವೇಷದ ಕರೆ ನೀಡಿದರು. ಮೂರ್ತರೂಪದ ವಂದೇ ಮಾತರಂ ವಿರೋಧಿಸುತ್ತ ಅದೇ ಮೂರ್ತರೂಪದ ಜಯಹೇ ಕರ್ನಾಟಕ ಮಾತೆ ನಾಡಗೀತೆಯನ್ನು ಎಲ್ಲರೂ ಹಾಡಿದರು. ಓಲೈಕೆಯ ಭರದಲ್ಲಿ ಟಿಪ್ಪು ಕರ್ನಾಟ(ಕ) ಎಂಬ ಹೆಸರನ್ನು ಮೊಟ್ಟ ಮೊದಲು ಬಳಸಿದ ವ್ಯಕ್ತಿ ಎಂದು ನಿವೃತ್ತ ಸಂಶೋಧಕರು ಅಮೋಘವರ್ಷ, ಕರ್ನಾಟಕ (ವಿಜಯನಗರ) ಸಾಮ್ರಾಜ್ಯ, ನಾಗಚಂದ್ರ ಕವಿಗಳು ಬಳಸಿದ್ದ ಈ ಪದದ ಈವರೆಗಿನ ಎಲ್ಲಾ ಸಂಶೋಧನೆಗಳನ್ನು ಗಾಳಿಗೆ ತೂರಿ ಕೋಮು ಓಲೈಕೆಯ ಕರೆ ನೀಡಿದರು. ಕೆಂಪು ಹಳದಿ ಬಣ್ಣದ ಕನ್ನಡ ಬಾವುಟವನ್ನು ಧ್ವಜಾರೋಹಣ ಮಾಡಿ ಜಯಹೇ ಕರ್ನಾಟಕ ಮಾತೆ ಎಂದು ಮೂರ್ತರೂಪವನ್ನು ಹಾಡಿದ ಸೆಕ್ಯುಲರ್ ಉದಾರವಾದಿ ಅಧ್ಯಕ್ಷರು ಭಾಷಣದಲ್ಲಿ ಕನ್ನಡ ಧ್ವಜವನ್ನು ಕುಂಕುಮ ಅರಿಶಿಣದ ಬಣ್ಣದ್ದು ಮಾಡಿ, ಕರ್ನಾಟಕ ಮಾತೆಗೆ ಭುವನೇಶ್ವರಿ ರೂಪ ಕೊಟ್ಟು ನಮ್ಮನ್ನು ಹೊರಗಿಡಲಾಗಿದೆ ಎಂದು ತಮ್ಮ ಧಾರ್ಮಿಕ ಸಂಕುಚಿತ ನಿಲುವು ತೋರಿದರು. ಆಯೋಜಕ ಪತ್ರಕರ್ತರು ಇಲ್ಲಿ ಸಾಹಿತ್ಯವಿಲ್ಲ, ನಮ್ಮದು ಪ್ರತಿರೋಧ ಅಷ್ಟೇ ಎಂದರು. ಆಹಾರತಜ್ಞೆಯೊಬ್ಬರು, 'ದಿನಕ್ಕೆ ಒಂದೂವರೆ ಸಾವಿರ ರೂಪಾಯಿ ದುಡಿಯುವ ವ್ಯಕ್ತಿಗೆ ಕುಟುಂಬಕ್ಕೆ ನಿತ್ಯ ತರಕಾರಿ ಕೊಳ್ಳುವ ಆರ್ಥಿಕ ಶಕ್ತಿ ಇರದು. ಆದರೆ ಮಾಂಸವನ್ನು ಕೊಂಡರೆ ಅದನ್ನು ಎರಡು ದಿನ ಊಟ ಮಾಡಬಹುದು' ಎಂದು ಸಸ್ಯಾಹಾರವನ್ನು ಖರ್ಚಿನ ಬಾಬ್ತು ಮಾಡಿದರು. ಬೀಫ್ ಬ್ಯಾನ್ ಹೇರಿಕೆಯಿಂದಾಗುವ ರಾಷ್ಟ್ರೀಯ ವಿಪತ್ತನ್ನು ವಿಶ್ಲೇಷಿಸದೆ ಕೇವಲ "ಸಸ್ಯಾಹಾರ ಮೇಲು, ಮಾಂಸಾಹಾರ ಕೀಳು" ಎಂಬ ಸತ್ತ ಪುರಾತನ ಭಾವುಕ ಹೆಣಕ್ಕೇ CPR ಕೊಟ್ಟರು. ಹೀಗೆ ಅತಾರ್ಕಿಕ ಅವಾಸ್ತವಿಕ, ಮೂರ್ಖ ಸಂಕಥನಗಳನ್ನು ಸೃಷ್ಟಿಸಿದರೆ, ಪುನರುಚ್ಚರಿಸಿದರೆ ಇಪ್ಪತ್ತೊಂದನೇ ಶತಮಾನದ ಯುಗದಲ್ಲಿ ಅದನ್ನು ಜನರು ಕೇಳಿಯಾರೆ!?

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಸಾಪ ಅಧ್ಯಕ್ಷರ ಪಕ್ಷಪಾತ, ಅದಕ್ಷತೆ, ಓಲೈಕೆ, ಆತ್ಮರತಿಗಳನ್ನು ಸಮರ್ಥವಾಗಿ ಅದೇ ವೇದಿಕೆಯಲ್ಲಿ ಪ್ರತಿಭಟಿಸುವ ತೀಕ್ಷ್ಣ ವೈಚಾರಿಕ ಪ್ರಯತ್ನವೇ ಆಗದೆ ಖುದ್ದು ಪರ್ಯಾಯ ಟ್ರೋಲ್ ಆದರು. ಒಟ್ಟಾರೆ ಇಂತಹ ಒಂದು ಅತಿ ಸಾಮಾನ್ಯ ವಿಷಯದ ಪ್ರತಿರೋಧದಲ್ಲಿಯೇ ದಾರುಣವಾಗಿ ಎಡವಿದ್ದಾರೆ.  ಒಂದೊಮ್ಮೆ ಪ್ರಖರ ಸಂಶೋಧನೆ, ತಾರ್ಕಿಕ ವಾದ ಮಂಡನೆ, ತೀಕ್ಷ್ಣ ವೈಚಾರಿಕತೆ, ವಿಷಯ ಸ್ಪಷ್ಟತೆ, ಆದರ್ಶತತ್ವಗಳ ಪರಿಚಾರಕರಾಗಿದ್ದ ಈ ವರ್ಗಕ್ಕೆ ಇಷ್ಟೊಂದು ವೈಚಾರಿಕ ದಾರಿದ್ರ್ಯತೆ ಏಕೆ ಬಂದಿತು ಎಂಬುದೇ ಇಂದಿನ ದುರಿತ ಕಾಲದ ರಾಷ್ಟ್ರೀಯ ದುರಂತ. 

ಸಾಮಾನ್ಯ ತಿಳಿವಳಿಕೆಯ ಓರ್ವ ನಾಗರಿಕನನ್ನೇ ಪ್ರಭಾವಿಸಲಾಗದೆ ಖುದ್ದು ಸ್ವಾಮಿಭಕ್ತಿಯಲ್ಲಿ ಲೆಂಕರಾಗಿರುವ ಈ ವರ್ಗವು ಸರ್ಕಾರವನ್ನು ಹೇಗೆ ಶೂಲಕ್ಕೇರಿಸಬಲ್ಲದು?!?

#

"ನುಡಿ ಸೂತಕ" - Blurb

 "ನುಡಿ ಸೂತಕ" ಕೃತಿಯು ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ನೂತನ ವಿಮರ್ಶಾ ಪ್ರಯೋಗವನ್ನು ಮಾಡಿದೆ. ’ಕೃತಿ’ ಮತ್ತು ’ಸಂಸ್ಕೃತಿ’ ಎಂಬ ಎರಡು ಭಾಗಗಳಲ್ಲಿ ಈ ವಿಮರ್ಶಾ ಕೃತಿಯನ್ನು ರಚಿಸಲಾಗಿದೆ. ಮಾನವಶಾಸ್ತ್ರದ ನೆಲೆಯಲ್ಲಿಯೇ ಜನಾಂಗೀಯ ಶೋಷಣೆಯನ್ನು ಮೆಟ್ಟಿ ನಿಂತ ಸಾಧಕರ ಜೀವನಗಾಥೆಗಳ ಪರಿಚಯಾತ್ಮಕ ವಿಮರ್ಶೆಯ ಆಯಾಮ ’ಕೃತಿ’ ಭಾಗದಲ್ಲಿಯೂ ಮತ್ತು ಬುಡಕಟ್ಟು ಸಂಸ್ಕೃತಿಗಳ ಪೂರ್ವಾಗ್ರಹಿತ ಸಂಶೋಧನೆಗಳ ಸಶಕ್ತ ಅನಾವರಣ ’ಸಂಸ್ಕೃತಿ’ ಭಾಗದಲ್ಲಿಯೂ ಇದೆ.


ಬ್ಯಾಪಾರಿ ಮನೋರಂಜನ್, ಫ್ರೆಡ್ ಡಗ್ಲಾಸ್, ವಾರಿಸ್ ಡಿರಿ ಅವರ ಸಂಘರ್ಷಗಾಥೆಯ ಜೊತೆಗೆ ಹಳಗನ್ನಡದಲ್ಲಿ ಗುಲಾಮಗಿರಿಯ ಪ್ರಸ್ತಾಪ ಮತ್ತು ಸ್ವರೂಪ, ಕರ್ನಾಟಕದ ಕೊರಚರು: ಒಂದು ಸಬಾಲ್ಟರ್ನ್ ನೋಟ, ಕೊರಮರ ಶೋಷಣೆ, ಮತ್ತು ನೀಹ ಅವರ ಲೇಖನ ಸಾಹಿತ್ಯದ ವಿಮರ್ಶೆಗಳು ಎಂತಹ ಅಪಾಯಕಾರಿ ಸನ್ನಿವೇಶಗಳನ್ನು ಆ ಸಾಧಕರು ಎದುರಿಸಿರಬಹುದು ಎಂಬ ಮಾನವಶಾಸ್ತ್ರದ ಹಿನ್ನೆಲೆಯನ್ನು "ಕೃತಿ" ಭಾಗವು ತೆರೆದಿಡುತ್ತದೆ.

"ಕೃತಿ"ಯು ಒಂದೆಡೆ ಶ್ರೀಸಾಮಾನ್ಯನನ್ನು ಪ್ರಚೋದಿಸಿ ಚೈತನ್ಯಿಸಿ ಧನಾತ್ಮಕವಾಗಿ ಸ್ಫೂರ್ತಿ ತುಂಬಿದರೆ, ಇನ್ನೊಂದೆಡೆ ಎಂತಹ ಸವಾಲುಗಳನ್ನು ಎದುರಿಸಿ ಸಾಧನೆಗೆ ಅಣಿಯಾಗಬೇಕಾಗುತ್ತದೆ ಎಂಬ ವಾಸ್ತವ ಚಿತ್ರಣವನ್ನು ತೋರಿಸುತ್ತದೆ.

ಮಾನವಶಾಸ್ತ್ರದ ನೆಲೆಯ ಮಹತ್ತರವಾದ ಭಾರತೀಯ ಕೃತಿಗಳಲ್ಲದೆ ಜಾಗತಿಕ ಕೃತಿಗಳೂ ಸೇರಿದಂತೆ ಮತ್ತು ಮಲಬಾರ್ ಅಡಿಯನ್ನರ ಕಥನದ ’ಕಾಲಾ’ ಸಿನಿಮಾವನ್ನೂ ವಿಮರ್ಶೆಯ ತೆಕ್ಕೆಗೆ ತೆಗೆದುಕೊಂಡು ವಿಶ್ಲೇಷಣಾತ್ಮಕವಾಗಿ ಕೃತಿಗಳ ವಿಮರ್ಶೆಯನ್ನು ’ಕೃತಿ’ ಭಾಗದಲ್ಲಿ ಕಟ್ಟಿಕೊಡುತ್ತ ಹೇಗೆ ಆ ಸಾಧಕರು ಎಲ್ಲಾ ಶೋಷಣೆಯನ್ನೂ ಮತ್ತು ಸಿದ್ಧಸೂತ್ರದ ನೆಪಗಳನ್ನು ಮೆಟ್ಟಿ ನಿಂತರು ಎಂಬ ಧನಾತ್ಮಕ ಚಿಂತನೆಯನ್ನು ಹರಿಸಲಾಗಿದೆ. ಶೋಷಣೆಯೇ ಸಾಧನೆಗೆ ಅಡ್ಡಿ ಎಂಬ ನೆಪಗಳನ್ನೊಡ್ಡಿ ಕಾಲಹರಣ ಮಾಡುವ ಎಲ್ಲರಿಗೂ ಈ ಕೃತಿಗಳು ಮತ್ತು ಮಲ್ಲಯ್ಯನವರ ಪರಿಚಯಾತ್ಮಕ ವಿಮರ್ಶೆ ದಾರಿದೀಪವಾಗಿದೆ. ಹಾಗೆಯೇ "ಸಂಸ್ಕೃತಿ"ಯಲ್ಲಿ ಋಣಾತ್ಮಕ ಸಂಶೋಧನೆಗಳನ್ನು ಖಂಡಿಸಿ ವಾಸ್ತವಿಕ ಸತ್ಯದ ಹಾದಿಯ ವಿಮರ್ಶೆಯ ಚಿಂತನೆಯ ಪ್ರಚೋದನೆಯನ್ನು ತೋರುತ್ತ ಕರ್ನಾಟಕ ಬುಡಕಟ್ಟು ಸಂಸ್ಕೃತಿಗಳಾದ ಮ್ಯಾಸಬೇಡ, ಗೊಲ್ಲರ ಮೇಲಿನ ಸಂಶೋಧನೆಗಳಲ್ಲಿನ ಸಂಕಥನವನ್ನು ಕಟು ವಾಸ್ತವದ ಹಿನ್ನೆಲೆ ಮತ್ತು ಆಕರಗಳ ನೆಲೆಯಲ್ಲಿ ತೀಕ್ಷ್ಣ ವಿಮರ್ಶೆಯಾಗಿಸಿ ಸಕಾರಣವಾಗಿ ಪ್ರಶ್ನಿಸಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಈ ಕೃತಿ ನೂತನ ಪ್ರಯೋಗ ಎನಿಸಿದೆ.

ಮುಖ್ಯವಾಗಿ ಮಾನವನ ಮೂಲವೃತ್ತಿಯ ಸಂಗ್ರಹಣೆ, ಬೇಟೆ, ಪಶುಪಾಲನೆ, ಬೇಸಾಯದ ಹಿನ್ನೆಲೆಯಲ್ಲಿ ರೂಪುಗೊಂಡ ಮಾನವ ಜನಾಂಗದ ಮೂಲ ಸಂಸ್ಕೃತಿಗಳು ಇಲ್ಲಿನ ’ಸಂಸ್ಕೃತಿ’ ಭಾಗದ ವಿಮರ್ಶೆಯ ಹೃದ್ಯಭಾಗವಾಗಿವೆ. ಇದು ಮೇಲ್ನೋಟಕ್ಕೆ ಕರ್ನಾಟಕ ಬುಡಕಟ್ಟು ಸಂಸ್ಕೃತಿಗಳ ಕುರಿತಾದ ವಿಷಯವೆನಿಸಿದರೂ ಈ ಸಂಸ್ಕೃತಿಯ ಪದ್ಧತಿಗಳು, ಆಚರಣೆಗಳು ವಿಶ್ವದೆಲ್ಲೆಡೆಯ ನೆಲಮೂಲ ಸಂಸ್ಕೃತಿಗಳ ಜೊತೆ ಅಗಾಧ ಸಾಮ್ಯತೆಯನ್ನು ಹೊಂದಿವೆ. ಉದಾಹರಣೆಗೆ ಈ ಭಾಗದ "ಮಾನವ ಚರಿತ್ರೆಯಲ್ಲಿ ಬಂಡವಾಳವಾದ ಹಸಿವು ಎಂಬ ಜಾತಿಗೆಟ್ಟ ಪ್ರತಿಮೆ" ಅಧ್ಯಾಯದಲ್ಲಿ ಬರುವ ಕನ್ನಯ್ಯನ ಬೇಟೆ ನೀತಿಯು ಜಾಗತಿಕವಾಗಿ ಬಹುಪಾಲು ಬುಡಕಟ್ಟು ಜನಾಂಗಗಳ ಬೇಟೆಯ ನೀತಿಯೇ ಆಗಿತ್ತು. ಅದೇ ರೀತಿ "ಮ್ಯಾಸಬೇಡರನ್ನು ಕುರಿತ ಸಂಶೋಧನೆ: ಮಿತಿ ಮೀರಬೇಕಾದ ಸ್ಥಿತಿ" ಅಧ್ಯಾಯದಲ್ಲಿ ವಿವರಿಸಿದ ಮ್ಯಾಸಬೇಡ ಸಂಸ್ಕೃತಿಯ ಪೋತರಾಜು ಆದವರಿಗೆ ಜೀವಂತ ಹೋತಗಳ ರಕ್ತ ಕುಡಿಸುವ ಪದ್ಧತಿಯು ಆಫ್ರಿಕಾದ ಮಸಾಯಿ ಬುಡಕಟ್ಟಿನೊಂದಿಗೆ ಸಾಮ್ಯತೆ ಹೊಂದಿದೆ. ಈಗಿನ ಆಧುನಿಕ ಮಾಸಾಯಿಗಳು ಬಾಯಿಯಿಂದ ಕಚ್ಚದೆ ಹಸು, ಹೋತಗಳ ರಕ್ತನಾಳಗಳಿಗೆ ಬಾಣದಿಂದ ಚುಚ್ಚಿ ಬೆಚ್ಚನೆಯ ರಕ್ತ ಹೀರುತ್ತಾರೆ.

ಇಂತಹ ಪ್ರಮುಖ ಸಾಮ್ಯತೆಗೆ ಇರುವ ಕಾರಣ, ಈ ಎಲ್ಲಾ ಸಂಸ್ಕೃತಿಗಳೂ ಮಾನವನ ವಿಕಾಸದ ಜೊತೆಜೊತೆಗೆ ಪ್ರಾಕೃತಿಕ ಧರ್ಮವಾಗಿ ರೂಪುಗೊಂಡು ವಿಕಾಸ ಹೊಂದಿದ "ಜಾಗತಿಕ ಪ್ರಾಕೃತಿಕ ಸಂಸ್ಕೃತಿ"ಗಳಾಗಿವೆ. ಹಾಗಾಗಿಯೇ ಆದಿಮಾನವರು (ನಿಯಾಂಡ್ರಥಲ್ ನಿಂದ ನಿಯೋಲಿಥಿಕ್ ವರೆಗೆ) ರಚಿಸಿದ ಗುಹಾ ರೇಖಾಚಿತ್ರಗಳು ಬಳ್ಳಾರಿಯ ಸಂಗನಕಲ್ಲು, ಆರಿಜೋನಾದ ಕ್ಯಾನ್ಯನ್ ಡಿ ಚೆಲ್ಲಿ, ಇಂಡೋನೇಷಿಯಾದ ಸುಲಾವೇಶಿ ಟಿಡಾಂಗ್ನೇ, ಸ್ಪೇನಿನ ಮಾಲ್ಟ್ರಾವಿಸೋ ಮತ್ತು ಆರ್ದೆಲ್ಸ್, ಜಗತ್ತಿನಲ್ಲಿಯೇ ಅತ್ಯಂತ ಹಳೆಯದು ಎನ್ನಲಾಗುವ ನಮೀಬಿಯಾದ ಅಪೋಲೋ ೧೧ರವರೆಗೆ ಸಾಮ್ಯತೆ ಹೊಂದಿವೆ ಮತ್ತವು ಕೂಡುಕಟ್ಟು ಸಂಸ್ಕೃತಿಯನ್ನೇ ಪ್ರತಿಪಾದಿಸಿವೆ. ಹಾಗಾಗಿ ಕೇವಲ ಬೇಟೆಯಂತಹ ಆಹಾರ ಸಂಗ್ರಹಣೆ ನಿಯಮವಲ್ಲದೆ ಕೂಡುಕಟ್ಟು ಸಂಸ್ಕೃತಿಯ ಫಲವಂತಿಕೆ, ಜೀವಸೃಷ್ಟಿ, ಆರಾಧನೆ, ಮತ್ತು ಅಂತಿಮ ಸಂಸ್ಕಾರಗಳವರೆಗಿನ ಎಲ್ಲಾ ಆಯಾಮಗಳೂ ಜಾಗತಿಕವಾಗಿ ಅಗಾಧ ಸಾಮ್ಯತೆಯನ್ನು ಹೊಂದಿವೆ. ಇದಕ್ಕೆ ಸಾಕ್ಷಿಯಾಗಿ ಜಗತ್ತಿನಾದ್ಯಂತ ನೋಡಲು ಸಿಗುವ ಟೋಟೆಮ್ ಚಿಹ್ನೆಗಳು, ಲಿಂಗಾರಾಧನೆ, ಯೋನಿಪೂಜೆಯಂತಹ ಫಲವಂತಿಕೆಯ ಶಿಲ್ಪಗಳು, ಬಳ್ಳಾರಿ ಜಿಲ್ಲೆಯ ಕುಡುತಿನಿಯ ಬೂದಿಗುಂಪಾಗಳ ರೀತಿಯಲ್ಲಿಯೇ ತಮಿಳುನಾಡಲ್ಲದೆ ಅಮೇರಿಕಾದ ಅರ್ಕನ್ಸಾಸಿನವರೆಗೆ ಹಬ್ಬಿರುವ ಶವಸಂಸ್ಕಾರ ತಿಟ್ಟಗಳು ಹಬ್ಬಿವೆ. ಶಿಲೆ, ಬೆರಣಿ, ಮಣ್ಣು, ಚಿಪ್ಪುಗಳಂತಹ ವಸ್ತುಗಳನ್ನು ಶವದ ಸುತ್ತ ಪೇರಿಸಿ ಸುಡುವಂತಹ ನಿಯೋಲಿಥಿಕ್ ಕಾಲದ ಜನರ ಈ ತಿಟ್ಟಗಳನ್ನು ಕಟ್ಟಿ ಶವಸಂಸ್ಕಾರ ಮಾಡುವ ಪದ್ಧತಿಯು ಪ್ರಪಂಚದಾದ್ಯಂತ ಬಳಕೆಯಲ್ಲಿತ್ತು. ಹೀಗೆ ಬೂದಿಗುಂಪಾಗಳನ್ನು ಸೃಷ್ಟಿಸಿ ಶವಸಂಸ್ಕಾರ ಮಾಡುವ ಪದ್ಧತಿಯಂತೆಯೇ ಅವರದೇ ಆದ ಶವಸಂಸ್ಕಾರ ಪದ್ಧತಿ ನಿಯಾಂಡ್ರಥಲ್ ಜನರದ್ದೂ ಜಾಗತಿಕವಾಗಿ ಒಂದೇ ರೀತಿಯದಾಗಿತ್ತು. ಒಟ್ಟಿನಲ್ಲಿ ಮಾನವ ಜನಾಂಗ ಮತ್ತು ಮಾನವ ಸಂಸ್ಕೃತಿಗಳು ಆರಂಭದಿಂದಲೂ ಜಾಗತಿಕವಾಗಿದ್ದವು.

ಹಾಗಾಗಿಯೇ ಮನಶ್ಯಾಸ್ತ್ರಜ್ಞರು, "ಮೇಲ್ನೋಟಕ್ಕೆ ಸಂಸ್ಕೃತಿಗಳು ಬೇರೆ ಬೇರೆ ಎನಿಸಿದರೂ ಆಳದಲ್ಲಿ ಒಂದೇ ಆಗಿವೆ. ಸಂಸ್ಕೃತಿ ಮತ್ತು ಸಾಮಾಜಿಕತೆಗಳು ಮಾನವನ ನಡವಳಿಕೆಯ ಮೇಲೆ ತಕ್ಕ ಮಟ್ಟಿಗೆ ಪರಿಣಾಮ ಹೊಂದಿದ್ದರೂ ಅದು ಆಳದಲ್ಲಿ ಪರಿಣಾಮ ಹೊಂದಿರದು. ಮಾನವನ ನಡವಳಿಕೆಯ ಮೇಲೆ ಸಂಸ್ಕೃತಿಯ ಪರಿಣಾಮ ಬೀರಿ ಹೇಗೆ ಬೇಕೋ ಹಾಗೆ ಮಾನವ ನಡವಳಿಕೆಯನ್ನು ಬದಲಾಯಿಸಬಹುದೆಂದು ಸಾಕಷ್ಟು ಸಮಾಜಶಾಸ್ತ್ರಜ್ಞರು ತಪ್ಪು ತಿಳಿದಿದ್ದಾರೆ. ಮೇಲ್ನೋಟಕ್ಕೆ ಸಂಸ್ಕೃತಿಗಳು ಬೇರೆ ಬೇರೆ ಎಂದು ಕಂಡರೂ ಆಳದಲ್ಲಿ ಹೇಗೆ ಒಂದೇ ಆಗಿರುವವೋ ಅದೇ ರೀತಿ ಮಾನವನ ನಡವಳಿಕೆಗಳು ಮೇಲ್ನೋಟಕ್ಕೆ ಭಿನ್ನವೆನಿಸಿದರೂ ಆಳದಲ್ಲಿ ಒಂದೇ ಆಗಿವೆ ಎಂದು ಖ್ಯಾತ ಮನಶಾಸ್ತ್ರಜ್ಞರಾದ ಲಿಡಾ ಕಾಸ್ಮೈಸ್ ಮತ್ತು ಜಾನ್ ಟೂಬಿ ತಮ್ಮ ಪ್ರಯೋಗಗಳ ಮೂಲಕ ಸಾಬೀತು ಪಡಿಸಿದ್ದಾರೆ. ಇದೇ ಅಭಿಪ್ರಾಯವನ್ನು ಖ್ಯಾತ ಮಾನವಶಾಸ್ತ್ರಜ್ಞರಾದ ಮಾರ್ವಿನ್ ಹ್ಯಾರಿಸ್ ತಮ್ಮ ಮಾತುಗಳಲ್ಲಿ ಹೀಗೆ ಹೇಳುತ್ತಾರೆ, "ಒಂದು ಸಂಸ್ಕೃತಿಯ ಜನರು ದನವನ್ನು ತಿಂದು ಹಂದಿಯನ್ನು ಪೂಜಿಸಿದರೆ, ಇನ್ನೊಂದು ಸಂಸ್ಕೃತಿಯ ಜನರು ದನವನ್ನು ಪೂಜಿಸಿ ಹಂದಿಯನ್ನು ತಿನ್ನುತ್ತಾರೆ. ಇದು ಎರಡು ಸಂಸ್ಕೃತಿಗಳ ಮೇಲ್ನೋಟದ ಸ್ಪಷ್ಟ ಭಿನ್ನತೆ! ಆದರೆ ದನ ಮತ್ತು ಹಂದಿಗಳು ಕೋತಿ, ನಾಯಿ, ತಿಮಿಂಗಿಲಗಳಂತೆಯೇ ಮಾನವನಿಗೆ ಪ್ರಾಣಿಜನ್ಯ ಪ್ರೋಟೀನ್ ಆಹಾರ ಪದಾರ್ಥಗಳಾಗಿವೆ ಮತ್ತು ಮಾನವನಿಂದ ತಿನ್ನಲ್ಪಡುತ್ತವೆ. ಆದಲ್ಲದೇ ಇದೇ ದನ ಮತ್ತು ಹಂದಿಗಳು ಬುದ್ಧ, ಅಲ್ಲಾಹ್, ಜೀಸಸ್ ಅವರಂತೆಯೇ ಮಾನವನಿಗೆ ಜೀವಚೈತನ್ಯ ತುಂಬುವ ಪೂಜ್ಯಾರ್ಹ ವಸ್ತುಗಳೂ ಆಗಿವೆ. ಹಾಗಾಗಿ ಎಲ್ಲಾ ಸಂಸ್ಕೃತಿಯ ತಳಹದಿಯಲ್ಲಿ ಪ್ರಾಣಿಜನ್ಯ ಪ್ರೋಟೀನ್ ಸೇವನೆ, ಪ್ರಾಣಿಗಳೆಡೆಗಿರುವ ಪೂಜ್ಯ ಅಥವಾ ಅಪೂಜ್ಯ ಭಾವನೆ ಮಾನವ ಸಹಜವಾಗಿ ಒಂದೇ ಆಗಿದೆ.

ಹ್ಯಾರಿಸ್ ಅವರ ಉದಾಹರಣೆಯ ಹಿನ್ನೆಲೆಯಲ್ಲಿ ಮಾನವ ಸಂವಹನದ ಭಾಷೆಗಳನ್ನು ಗಮನಿಸಿದಾಗ, ಭಾಷೆಗಳೂ ಸಹ ಮೇಲ್ನೋಟಕ್ಕೆ ಬೇರೆ ಬೇರೆ ಎನಿಸಿದರೂ ಅವುಗಳಲ್ಲಿನ ಭಾವಾರ್ಥ ಒಂದೇ ಆಗಿದೆ. ಇದಕ್ಕೆ ಉದಾಹರಣೆಯಾಗಿ ನಮ್ಮದೇ ಕನ್ನಡ ಭಾಷೆಯ ಕೆಲವು ನುಡಿಗಟ್ಟುಗಳನ್ನು ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಗಳ ನುಡಿಗಟ್ಟುಗಳಿಗೆ ಹೋಲಿಸಿ ನೋಡಿದಾಗ ಅವೆಲ್ಲವೂ ಒಂದೇ ಆಗಿವೆ, ಅಕ್ಷರಶಃ! ಅಂತಹ ಕೆಲವು ನುಡಿಗಟ್ಟುಗಳು ಹೀಗಿವೆ:

೧. ಸ್ಪ್ಯಾನಿಷ್ ಗಾದೆ: Donde hay gana, hay maña!
ಇಂಗ್ಲಿಷ್ ಗಾದೆ: Where there is a will, there is a way!
ಕನ್ನಡ ಗಾದೆ: ಮನಸ್ಸಿದ್ದರೆ ಮಾರ್ಗ!

೨. ಸ್ಪ್ಯಾನಿಷ್ ಗಾದೆ: Donde hay humo, hay calor!
ಇಂಗ್ಲಿಷ್ ಗಾದೆ: There is no smoke without fire!
ಕನ್ನಡ ಗಾದೆ: ಬೆಂಕಿಯಿಲ್ಲದೆ ಹೊಗೆ ಏಳುವುದಿಲ್ಲ!

೩. ಸ್ಪ್ಯಾನಿಷ್ ಗಾದೆ: Con paciencia y saliva, un elefante se tiro a una hormiga!
ಇಂಗ್ಲಿಷ್ ಗಾದೆ: Little strokes fell great oaks!
ಕನ್ನಡ ಗಾದೆ: ಹನಿಹನಿಗೂಡಿದರೆ ಹಳ್ಳ!

೪. ಸ್ಪ್ಯಾನಿಷ್ ಗಾದೆ: Con su pan se lo coma!
ಇಂಗ್ಲಿಷ್ ಗಾದೆ: Reap what you sow!
ಕನ್ನಡ ಗಾದೆ: ಮಾಡಿದ್ದುಣ್ಣೋ ಮಹಾರಾಯ!

೫. ಸ್ಪ್ಯಾನಿಷ್ ಗಾದೆ: Mucho ruido y pocas nueces!
ಇಂಗ್ಲಿಷ್ ಗಾದೆ: Empty vessels make much noise!
ಕನ್ನಡ ಗಾದೆ: ತುಂಬಿದ ಕೊಡ ತುಳುಕುವುದಿಲ್ಲ!

ಮೂರು ಬೇರೆ ಬೇರೆ ಭಾಷೆಗಳ ಬೇರೆ ಬೇರೆ ಸಂಸ್ಕೃತಿಯ ಗಾದೆಗಳು ಮೂಲದಲ್ಲಿ ಸಮಾನಾರ್ಥ ಹೊಂದಿವೆ. ಹೀಗೆ ಆಳವಾಗಿ ನೋಡಿದಾಗ ಮಾನವನ ಮೂಲ ಸ್ವರೂಪಿ ಸಾಂಸ್ಕೃತಿಕ ಸಾಮ್ಯತೆ ಜಗತ್ತಿನ ಎಲ್ಲಾ ಸಂಸ್ಕೃತಿಗಳಲ್ಲಿಯೂ ಸಮಾನವಾಗಿ ಕಾಣುತ್ತದೆ. ಇಂತಹ ಮನೋವೈಜ್ಞಾನಿಕ ಮಾನವಶಾಸ್ತ್ರದ ನೆಲೆಯಿಂದ ಸಮಾಜಶಾಸ್ತ್ರವನ್ನು ಅವಲೋಕಿಸುವ ಸಂಶೋಧನೆಗಳು ಈಗೀಗ ಹೆಚ್ಚಾಗಿ ನಡೆಯುತ್ತಿವೆ.

ಹೀಗೆ ಅಗಾಧವಾಗಿ ಸಾಮ್ಯತೆಯಿಂದಿದ್ದ "ಜಾಗತಿಕ ಪ್ರಾಕೃತಿಕ ಸಂಸ್ಕೃತಿ"ಗಳು ಕಾಲಾಂತರದಲ್ಲಿ ಹೇಗೆ ಕೃತ್ರಿಮ ಅಪ್ರಾಕೃತಿಕ ಸಂಸ್ಕೃತಿಗಳ ಪ್ರಭಾವಕ್ಕೆ ಒಳಗಾದವು?

ಎಂಬ ಮೂಲಭೂತ ಪ್ರಶ್ನೆಯ ಹಿನ್ನೆಲೆಯಲ್ಲಿ ಲೇಖಕರಾದ ಆರಡಿ ಮಲ್ಲಯ್ಯ ಕಟ್ಟೇರ ಅವರು ಕರ್ನಾಟಕದ ಬುಡಕಟ್ಟು ಸಂಸ್ಕೃತಿಗಳ ಕುರಿತಾದ ಸಂಶೋಧನೆಗಳನ್ನು ತಾರ್ಕಿಕವಾಗಿ ಪ್ರಶ್ನಿಸುತ್ತಾ ಈ ಸಂಶೋಧನೆಗಳು ಮೂಲತಃ ಹೇಗೆ ದಾರಿ ತಪ್ಪಿವೆ ಎಂಬುದನ್ನು ಮೇಲ್ನೋಟಕ್ಕೆ ಸಾಬೀತು ಪಡಿಸುತ್ತಾರೆ. ಈ ಪ್ರಶ್ನಿಸುವಿಕೆಯಲ್ಲಿ ಮಲ್ಲಯ್ಯನವರ ನೇರ ನಡೆ, ತಾತ್ವಿಕ ಸಿಟ್ಟು, ಅಲ್ಲಲ್ಲಿ ಇಣುಕುವ ವ್ಯಂಗ್ಯ ಹೆಚ್ಚು ಇಷ್ಟವಾಗುತ್ತದೆ. ಇದಕ್ಕೆ ಆಯಾಯ ಸಂಶೋಧಕರನ್ನು ಮತ್ತು ಅಂತಹ ಕೃತ್ರಿಮ ಅಪ್ರಾಕೃತಿಕ ಸಂಸ್ಕೃತಿಯ ಸಂಕಥನಕ್ಕೆ ಪೂರಕವಾಗಿ ದೃಷ್ಟಾಂತ ಕಥೆಗಳನ್ನು ಸೃಷ್ಟಿಸಿದ ಖ್ಯಾತನಾಮರನ್ನೂ ನೇರವಾಗಿ ಹೆಸರಿಸಿ ಪ್ರಾಕೃತಿಕ ಸಂಸ್ಕೃತಿಯ ಉದಾರತೆ, ಮಹಿಳಾ ಸಮಾನತೆ, ಮಾನವೀಯ ಕಳಕಳಿಯನ್ನು ಎತ್ತಿ ಹಿಡಿಯುತ್ತಾರೆ. ಇಂತಹ ಪ್ರಶ್ನಿಸುವಿಕೆಯು ಈ ಹಿಂದೆ ಮತ್ತು ಈಗಲೂ ಆಗುತ್ತಿದೆ. ಆದರೆ ಆ ಬಹುಪಾಲು ಪ್ರಶ್ನಿಸುವಿಕೆಗಳು ಪೂರಕ ಆಕರಗಳೊಂದಿಗೆ ಅಂಕಿ‌ಅಂಶಗಳಿಲ್ಲದೆ ಕೇವಲ ಭಾವನಾತ್ಮಕ ನೆಲೆಯಿಂದ ಕೇಳಲ್ಪಟ್ಟು ಹಿನ್ನೆಲೆಗೆ ಸರಿದಿವೆ ಮತ್ತು ತಂತ್ರಜ್ಞಾನದ ಆಸ್ಫೋಟದೊಂದಿಗೆ ವರ್ತಮಾನದಲ್ಲಿ "ಟ್ರೋಲ್" ಆಗಿವೆ.

ಆದರೆ ಮಲ್ಲಯ್ಯನವರು ಸ್ಪಷ್ಟವಾಗಿ ಮತ್ತು ಸ್ಫುಟವಾಗಿ ಪ್ರಾಕೃತಿಕ ಐತಿಹ್ಯದ ಜನಪದ ವ್ಯಕ್ತಿಗಳಾದ ಬಂದಮ್ಮ ಭಾಗೀರತಿಯಾದುದು, ಅಜೀವಕ ತಿಪ್ಪಯ್ಯ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯಾದುದು, ಮದ್ದಾನಸ್ವಾಮಿಯ ಸಂಗಾತಿ ಬೇಡರ ಕನಕಮ್ಮನ ಕತೆಯನ್ನು ಮಠಸ್ಥರು ಮುಚ್ಚಿದುದನ್ನು ವಿವರಿಸುತ್ತಾರೆ. ಈ ಚಿಂತನೆಗಳು ಜನಪದದ ಪ್ರಾಕೃತಿಕ ಮುಂದಾಳುಗಳು ಹೇಗೆ ಅಪ್ರಾಕೃತಿಕ ಪೂಜಾವಸ್ತುಗಳಾದರು ಎಂಬ ಸಂಕಥನವನ್ನು ಪರಾಮರ್ಶಿತ ದಾಖಲೆಯೊಂದಿಗೆ ತೆರೆದು ಚಿಂತನೆಗೆ ಹಚ್ಚುತ್ತವೆ.

ಈ ಎಲ್ಲಾ ಕಾರಣಗಳಿಗಾಗಿ ಸಿದ್ಧ ಸಿದ್ಧಾಂತಗಳ ಹೇರಿಕೆಯ ಸಂಶೋಧನೆಗಳನ್ನು ತಾರ್ಕಿಕವಾಗಿ ಮತ್ತು ಪೂರಕ ಸಂಶೋಧನ ಆಕರಗಳೊಂದಿಗೆ ಪ್ರಶ್ನಿಸುವ ಮಾದರಿಗಳಲ್ಲಿರುವ ಕೆಲವೇ ಕೆಲವು ಕೃತಿಗಳಲ್ಲಿ "ನುಡಿ ಸೂತಕ" ಕೃತಿಯೂ ಒಂದಾಗಿದೆ. ಆದರೆ ಈ ಕೃತಿಯು ಮಾನವಶಾಸ್ತ್ರದ ಹಿನ್ನೆಲೆಯಲ್ಲಿದೆಯಷ್ಟೆ. ಇನ್ನುಳಿದ ಕ್ಷೇತ್ರಗಳಲ್ಲಿಯೂ ಇಂತಹ ಪ್ರಯತ್ನಗಳು ಆಗಬೇಕಿದೆ.

ಪ್ರಾದೇಶಿಕ ವೈಶಿಷ್ಟ್ಯವನ್ನು ಮೈಗೂಡಿಸಿಕೊಂಡು ವಿಶಿಷ್ಟವೆನಿಸಿದ ಜಾಗತಿಕ ಪಶುಪಾಲಕ, ಬೇಟೆಗಾರ, ವ್ಯವಸಾಯಿ ಸಂಸ್ಕೃತಿಗಳ ವಿಶಿಷ್ಟ ಆಚರಣೆಗಳನ್ನು ದಾಖಲಿಸಿ ಅವುಗಳನ್ನು ಮತ್ತೊಮ್ಮೆ ಜಾಗತಿಕ ಪ್ರಾಕೃತಿಕ ಸಂಸ್ಕೃತಿಗಳ ಜೊತೆ ಸಮೀಕರಿಸಿದಾಗ ಕೂಡುಕಟ್ಟು ಪದದ ವಿಶಾಲಾರ್ಥ ವಿಸ್ತರಿಸುತ್ತದೆ. ಅಂದಹಾಗೆ ಈ ಜಾಗತಿಕ ಪ್ರಾಕೃತಿಕ "ಕೂಡುಕಟ್ಟು" ಪದವೇ ಅಪ್ರಾಕೃತಿಕ ಸಂಸ್ಕೃತಿಯ "ವಸುದೈವ ಕುಟುಂಬಕಂ" ಎಂದಾಗಿದೆ. ಈ ನಿರ್ಧಾರಕ್ಕೆ ಬರಲು ಪ್ರಾದೇಶಿಕ ಪಶುಪಾಲಕ, ಬೇಟೆಗಾರ, ವ್ಯವಸಾಯಿ ಸಂಸ್ಕೃತಿಗಳ ವಿಶಿಷ್ಟತೆಯ ಸ್ಪಷ್ಟ ದಾಖಲಾತಿ ಅಗತ್ಯ. ಅಂತಹ ದಾಖಲಾತಿ ಹೇಗೆ ಪೂರ್ವಾಗ್ರಹ ಮತ್ತು ತಪ್ಪು ಗ್ರಹಿಕೆಗಳಿಂದ ದಾರಿ ತಪ್ಪಿದೆ ಎಂದು ಕರ್ನಾಟಕದ ಆದಿಮ, ಮ್ಯಾಸಬೇಡರ, ಗೊಲ್ಲರ ಆಚರಣೆ ಮತ್ತು ವಿಶಿಷ್ಟತೆಯನ್ನು ಸವಿಸ್ತಾರವಾಗಿ ವಿವರಿಸುತ್ತಾ ಮಲ್ಲಯ್ಯ ತಾತ್ವಿಕವಾಗಿ ಪ್ರಶ್ನಿಸುತ್ತಾರೆ. ಈ ದಾಖಲಾತಿ ಸರಿಯಾದರೆ ಮುಂದಿದನ್ನು ಜಾಗತಿಕ ಬೇಟೆಗಾರ ಆಚರಣೆಗಳೊಂದಿಗೆ ಸಮೀಕರಿಸಿ ಅವುಗಳಲ್ಲಿನ ವ್ಯತ್ಯಾಸಗಳು ಹೇಗೆ ಭೌಗೋಳಿಕ, ಹವಾಮಾನ, ಪರಿಸರ ಇತ್ಯಾದಿಗಳಿಂದ ಪ್ರಭಾವಿತಗೊಂಡವು ಮತ್ತು ಈ ಸಂಸ್ಕೃತಿಗಳ ಮೇಲೆ ನಿಯೋಲಿಥಿಕ್ ಕ್ರಾಂತಿ, ಜನಾಂಗೀಯ ವಲಸೆ, ಪುರೋಹಿತಶಾಹಿಯ ಪ್ರಭಾವಗಳನ್ನು ಸಹ ಸ್ಪಷ್ಟವಾಗಿ ನಿರೂಪಿಸಬಹುದು. ಆದರೆ ಆ ನಿಟ್ಟಿನಲ್ಲಿ ಸಾಗಲು ಇಲ್ಲಿನ ಪ್ರಾದೇಶಿಕ ಸಂಶೋಧನೆಗಳನ್ನು ಸರಿದಾರಿಗೆ ತರುವುದು ಅವಶ್ಯ ಎಂಬ ಚಿಂತನೆ ಮಲ್ಲಯ್ಯನವರದು ಎನಿಸುತ್ತದೆ.

ಈ ಕೃತಿಯ ಸಂಸ್ಕೃತಿ ಭಾಗದಲ್ಲಿ ಆಯಾಯ ಸಂಸ್ಕೃತಿಗಳ ವಿಕಾಸವನ್ನು ಜಾಗತಿಕ ಮಾನವೀಯ ಶಾಸ್ತ್ರದ ಹಿನ್ನೆಲೆಯಿಂದ ವಿಶ್ಲೇಷಿಸುವ ಪ್ರಯತ್ನವನ್ನು ಸೂಕ್ಷ್ಮವಾಗಿ ಕರ್ನಾಟಕದ ಮ್ಯಾಸಬೇಡ (ಬೇಟೆಗಾರ) ಸಂಸ್ಕೃತಿಯ ಹಿನ್ನೆಲೆಯವರೇ ಆದ ಉತ್ತರ ಭಾರತದ ಬಿಲ್ಲುಗಾರರೊಂದಿಗೆ ತೂಲಿಸುತ್ತ ಮುಂದೆ ಆಗಬೇಕಾದ ಜಾಗತಿಕ ಬೇಟೆಗಾರ ಸಮುದಾಯಗಳ ಸಂಸ್ಕೃತಿಯೊಂದಿಗೆ ತೂಲಿಸುವ ಸಾಧ್ಯತೆಯ ಸೂಚನೆಯನ್ನು ಮಲ್ಲಯ್ಯನವರು ಕೊಡುತ್ತಾರೆ. ಆ ನಿಟ್ಟಿನಲ್ಲಿ ಮಲ್ಲಯ್ಯನವರು ಯಶ ಸಿಗಲಿ.

ಇನ್ನುಳಿದಂತೆ ಮಾನವಶಾಸ್ತ್ರದ ಹಿನ್ನೆಲೆಯ ವಿಷಯಗಳೇ ಆದ ಲೋಕಾಯತ, ತಂತ್ರ ಪಂಥ, ಚಾರ್ವಾಕ ಸಂಸ್ಕೃತಿಗಳ ವಿಮರ್ಶೆಯೂ ಆಸಕ್ತಿದಾಯಕ ಮತ್ತು ಒಟ್ಟಾರೆ ಕೃತಿಯ ಆಶಯಕ್ಕೆ ಪೂರಕ.

ವಿಮರ್ಶೆ, ಸಂಶೋಧನೆಯ ನಿಲುವನ್ನು ಕೃತಿ ಮತ್ತು ಸಂಸ್ಕೃತಿಗಳ ಎರಡು ಭಾಗಗಳಲ್ಲಿರುವ ಬಿಡಿಬಿಡಿಯಾಗಿರುವ ಲೇಖನಗಳ ನಡುವೆ ಮುಖಾಮುಖಿಯಾಗಿಸಬಲ್ಲ, ಒಂದನ್ನೊಂದು ಬೆಸೆಯಬಲ್ಲ ಒಂದು ತಂತು ಬೇಕೆನಿಸುತ್ತದೆ. ಎಲ್ಲಾ ವಿಷಯಗಳೂ ಮಾನವಶಾಸ್ತ್ರದ ವಿಷಯಗಳೇ ಆದ್ದರಿಂದ ಆ ಬೆಸೆಯುವ ತಂತು ಸಾಧ್ಯವೆನಿಸುತ್ತದೆ. ಅಧ್ಯಾಯಗಳ ನಡುವೆ ಆ ತಂತುಗಳು ಅಲ್ಲಲ್ಲಿ ಕಂಡುಬಂದರೂ ಅದು ಆಯಾಯ ಅಧ್ಯಾಯದ ವಿಷಯಕ್ಕೆ ಮಾತ್ರ ಸೀಮಿತ ಎನಿಸುತ್ತದೆ. ಅಧ್ಯಾಯದಿಂದ ಅಧ್ಯಾಯಕ್ಕೆ ಖೋ ಕೊಡುವಂತಹ ಒಂದು ತಂತು ಯಾ ಥೀಮ್ ಓದನ್ನು ಆಪ್ತವಾಗಿಸಿ ಸೃಜನಶೀಲ ಓದುಗರಿಗೆ ರುಚಿಸಬಹುದು ಎಂಬ ಆಶಯ ನನ್ನದು. ಮಲ್ಲಯ್ಯನವರು ಆ ನಿಟ್ಟಿನಲ್ಲಿ ಕ್ರಿಯಾಶೀಲರಾಗಲಿ ಎಂದು ಆಶಿಸುವೆ.

ಒಟ್ಟಾರೆ ಇಂತಹ ವಿಶೇಷ ಪ್ರಯೋಗಗಳು ಇಂದಿನ ತುರ್ತು! ಅದಕ್ಕಾಗಿ ಆರಡಿ ಮಲ್ಲಯ್ಯ ಕಟ್ಟೇರ ಅವರು ಅಭಿನಂದನಾರ್ಹರು.

ರವಿ ಹಂಜ್
ಶಿಕಾಗೊ.